ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 103

“ನಿನ್ನ ರಾಜ್ಯ ಬರಲಿ”

“ನಿನ್ನ ರಾಜ್ಯ ಬರಲಿ”

‘ಇನ್ನು ಮುಂದೆ ಕಣ್ಣೀರು, ದುಃಖ, ಕಾಯಿಲೆ ಮತ್ತು ಮರಣ ಯಾವುದೂ ಇರುವುದಿಲ್ಲ. ನಾನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವೆನು. ಮೊದಲಿದ್ದ ಕೆಟ್ಟ ವಿಷಯಗಳು ಇಲ್ಲದೆ ಹೋಗುವವು’ ಎಂದು ಯೆಹೋವನು ಮಾತುಕೊಟ್ಟಿದ್ದಾನೆ.

ಆದಾಮ ಹವ್ವ ಶಾಂತಿಯಿಂದ ಮತ್ತು ಸಂತೋಷದಿಂದ ಜೀವಿಸಬೇಕು ಎಂದು ಯೆಹೋವನು ಅವರನ್ನು ಏದೆನ್‌ ತೋಟದಲ್ಲಿ ಇಟ್ಟನು. ಅವರು ಸ್ವರ್ಗೀಯ ತಂದೆಯಾದ ಯೆಹೋವನನ್ನು ಆರಾಧಿಸಬೇಕಿತ್ತು, ಇಡೀ ಭೂಮಿಯನ್ನು ತಮ್ಮ ಮಕ್ಕಳಿಂದ ತುಂಬಿಸಬೇಕಿತ್ತು. ಬೇಜಾರಿನ ವಿಷಯ ಏನೆಂದರೆ ಆದಾಮ ಮತ್ತು ಹವ್ವ ಯೆಹೋವನಿಗೆ ಅವಿಧೇಯರಾದರು. ಆದರೆ ಯೆಹೋವನ ಉದ್ದೇಶ ಮಾತ್ರ ಬದಲಾಗಲಿಲ್ಲ. ಯೆಹೋವನು ಕೊಟ್ಟ ಪ್ರತಿಯೊಂದು ಮಾತು ನೆರವೇರಿತು ಎನ್ನುವುದನ್ನು ನಾವು ಈ ಪುಸ್ತಕದಿಂದ ಕಲಿತಿದ್ದೇವೆ. ಯೆಹೋವನು ಅಬ್ರಹಾಮನಿಗೆ ಮಾತುಕೊಟ್ಟಂತೆ ಆತನ ರಾಜ್ಯ ಈ ಭೂಮಿಗೆ ಅದ್ಭುತಕರವಾದ ಆಶೀರ್ವಾದಗಳನ್ನು ತರುವುದು.

ಬೇಗನೇ ಸೈತಾನ, ಅವನ ದೆವ್ವಗಳು ಮತ್ತು ಕೆಟ್ಟ ಜನರು ಸರ್ವನಾಶವಾಗುವರು. ಜೀವಂತವಾಗಿರುವ ಪ್ರತಿಯೊಬ್ಬರು ಯೆಹೋವನನ್ನು ಮಾತ್ರ ಆರಾಧಿಸುತ್ತಾರೆ. ಆಗ ನಮಗೆ ಕಾಯಿಲೆ, ಸಾವು-ನೋವು ಯಾವುದೂ ಇರುವುದಿಲ್ಲ. ಬದಲಿಗೆ, ನಾವು ಪ್ರತಿದಿನ ಬೆಳಿಗ್ಗೆ ಹುಮ್ಮಸ್ಸಿನಿಂದ ಎದ್ದೇಳುತ್ತೇವೆ ಮತ್ತು ಸಂತೋಷದಿಂದ ಜೀವಿಸುತ್ತೇವೆ. ಇಡೀ ಭೂಮಿ ಒಂದು ಸುಂದರ ತೋಟದಂತಾಗುತ್ತದೆ. ಅಲ್ಲಿ ಪ್ರತಿಯೊಬ್ಬರಿಗೆ ಒಳ್ಳೇ ಆಹಾರವಿರುತ್ತದೆ. ಎಲ್ಲರೂ ಸುರಕ್ಷಿತವಾಗಿರುತ್ತಾರೆ. ಕೆಟ್ಟವರು, ಕ್ರೂರಿಗಳು ಯಾರೂ ಇರುವುದಿಲ್ಲ. ಎಲ್ಲರೂ ದಯೆಯಿಂದ ನಡೆದುಕೊಳ್ಳುತ್ತಾರೆ. ಕ್ರೂರ ಪ್ರಾಣಿಗಳು ನಮಗೆ ಯಾವ ತೊಂದರೇನೂ ಮಾಡಲ್ಲ. ಹಾಗಾಗಿ ನಾವು ಅವುಗಳಿಗೆ ಭಯಪಡಬೇಕಾಗಿಲ್ಲ.

ಯೆಹೋವನು ಜನರನ್ನು ಪುನರುತ್ಥಾನ ಮಾಡುವ ಸಮಯವಂತೂ ಅತ್ಯದ್ಭುತ! ಆಗ ಯಾರೆಲ್ಲಾ ಪುನರುತ್ಥಾನ ಆಗುತ್ತಾರೆ ಗೊತ್ತಾ? ಹೇಬೆಲ, ನೋಹ, ಅಬ್ರಹಾಮ, ಸಾರ, ಮೋಶೆ, ರೂತ್‌, ಎಸ್ತೇರ್‌ ಮತ್ತು ದಾವೀದ. ಇವೆರಲ್ಲರನ್ನು ನಾವು ಖುಷಿ ಖುಷಿಯಾಗಿ ಸ್ವಾಗತಿಸಬಹುದು. ಈ ಭೂಮಿಯನ್ನು ಸುಂದರ ತೋಟವಾಗಿ ಮಾಡುವ ಕೆಲಸದಲ್ಲಿ ಅವರು ನಮ್ಮೊಂದಿಗೆ ಕೈಜೋಡಿಸುವರು. ಅಲ್ಲಿ ನಮಗೆ ಇಷ್ಟವಾಗುವ ಎಷ್ಟೋ ಕೆಲಸಗಳಿರುತ್ತವೆ.

ನೀವು ಕೂಡ ಅಲ್ಲಿ ಇರಬೇಕೆನ್ನುವುದು ಯೆಹೋವನ ಇಷ್ಟ. ನೀವು ಇದುವರೆಗೂ ತಿಳಿದಿರದ ವಿಧಗಳಲ್ಲಿ ಯೆಹೋವನ ಬಗ್ಗೆ ತಿಳಿಯುತ್ತೀರ. ಹಾಗಾಗಿ ಇಂದು, ಮುಂದು, ಎಂದೆಂದೂ ನಾವು ಯೆಹೋವನಿಗೆ ಹೆಚ್ಚೆಚ್ಚು ಆಪ್ತರಾಗೋಣ!

“ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ.”—ಪ್ರಕಟನೆ 4:11