ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿಯ ಪತ್ರ

ಆಡಳಿತ ಮಂಡಲಿಯ ಪತ್ರ

ಪ್ರೀತಿಯ ಸಹೋದರ ಸಹೋದರಿಯರೇ,

ಯೆಹೋವನ ಆರಾಧಕರಾದ ನಮಗೆಲ್ಲರಿಗೂ ಆತನ ವಾಕ್ಯವಾದ ಬೈಬಲೆಂದರೆ ತುಂಬ ಇಷ್ಟ. ಇದು ನಮಗೆ ಇತಿಹಾಸದ ಬಗ್ಗೆ ನಿಷ್ಕೃಷ್ಟ ಮಾಹಿತಿಯನ್ನು ಮತ್ತು ಜೀವನಕ್ಕೆ ಬೇಕಾದ ಮಾರ್ಗದರ್ಶನವನ್ನು ಒದಗಿಸುತ್ತದೆ. ಅಲ್ಲದೇ, ಯೆಹೋವನಿಗೆ ಮಾನವರ ಮೇಲೆ ಅಪಾರ ಪ್ರೀತಿ ಇದೆ ಎಂಬುದಕ್ಕಿರುವ ಪುರಾವೆಯನ್ನು ಕೊಡುತ್ತದೆ. (ಕೀರ್ತನೆ 119:105; ಲೂಕ 1:3; 1 ಯೋಹಾನ 4:19) ದೇವರ ವಾಕ್ಯದಲ್ಲಿರುವ ಅಮೂಲ್ಯ ಸತ್ಯಗಳನ್ನು ಕಲಿತುಕೊಳ್ಳಲು ಇತರರಿಗೆ ಸಹಾಯ ಮಾಡುವುದು ನಮ್ಮ ಮನದಾಳದ ಬಯಕೆ. ಅದಕ್ಕಾಗಿ ಬೈಬಲ್‌ ನಮಗೆ ಕಲಿಸುವ ಪಾಠಗಳು ಎಂಬ ಈ ಪುಸಕ್ತವನ್ನು ಹೊರತರಲು ನಾವು ಸಂತೋಷಿಸುತ್ತೇವೆ. ಈ ಪುಸ್ತಕದ ಚುಟುಕಾದ ಪರಿಚಯ ಇಲ್ಲಿದೆ.

ಈ ಪುಸ್ತಕವನ್ನು ವಿಶೇಷವಾಗಿ ಮಕ್ಕಳಿಗಾಗಿ ತಯಾರಿಸಲಾಗಿದೆ. ಆದರೂ ಬೈಬಲಿನ ಬಗ್ಗೆ ತಿಳಿದುಕೊಳ್ಳಲು ಬಯಸುವಂಥ ದೊಡ್ಡವರಿಗೆ ಸಹಾಯ ಮಾಡಲು ಇದನ್ನು ಉಪಯೋಗಿಸಬಹುದು. ಬೈಬಲಿನಿಂದ ಪ್ರತಿಯೊಬ್ಬರಿಗೂ ಪ್ರಯೋಜನ ಇದೆ. ಹಾಗಾಗಿ ಈ ಪುಸ್ತಕದಲ್ಲಿರುವ ಪಾಠಗಳನ್ನು ಓದುವುದರಿಂದ ನಾವೆಲ್ಲರೂ ಪ್ರಯೋಜನ ಪಡೆದು ಸಂತೋಷವಾಗಿ ಇರಬಹುದು.

ಸೃಷ್ಟಿಯ ಆರಂಭದಿಂದ ಮಾನವ ಕುಟುಂಬದಲ್ಲಿ ಏನೆಲ್ಲಾ ಆಯಿತು ಎನ್ನುವುದರ ಬಗ್ಗೆ ಬೈಬಲಿನ ವೃತ್ತಾಂತಗಳನ್ನು ಬಳಸಿ ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಈ ವೃತ್ತಾಂತಗಳನ್ನು ಸ್ಪಷ್ಟವಾಗಿ, ಸರಳವಾಗಿ ಮತ್ತು ಅವು ಸಂಭವಿಸಿದಂಥ ಕ್ರಮದಲ್ಲಿ ತಿಳಿಸಲಾಗಿದೆ.

ಈ ಪುಸ್ತಕದಲ್ಲಿ ಬರೀ ಬೈಬಲ್‌ ವೃತ್ತಾಂತಗಳನ್ನು ತಿಳಿಸಲಾಗಿಲ್ಲ. ಇದರಲ್ಲಿ ಮಾಹಿತಿ ಮತ್ತು ಚಿತ್ರಗಳ ಮೂಲಕ ಆ ವೃತ್ತಾಂತಗಳನ್ನು ಮತ್ತು ಅದರಲ್ಲಿರುವ ಪಾತ್ರಗಳ ಭಾವನೆಗಳನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿವರಿಸಲಾಗಿದೆ.

ಬೈಬಲ್‌ ನೈಜ ವ್ಯಕ್ತಿಗಳ ಬಗ್ಗೆ ತಿಳಿಸುವ ಗ್ರಂಥ ಎಂದು ತಿಳಿಯಲು ಈ ಪುಸ್ತಕ ಸಹಾಯ ಮಾಡುತ್ತದೆ. ಇದರಲ್ಲಿ ಯೆಹೋವನಿಗೆ ವಿಧೇಯರಾದ ಮತ್ತು ವಿಧೇಯರಾಗದ ಜನರ ಬಗ್ಗೆ ತಿಳಿಸಲಾಗಿದೆ. ಅಲ್ಲದೇ ಅವರ ಉದಾಹರಣೆಯಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು ಎಂದೂ ತಿಳಿಸಲಾಗಿದೆ. (ರೋಮನ್ನರಿಗೆ 15:4; 1 ಕೊರಿಂಥ 10:6) ಈ ಪುಸ್ತಕದಲ್ಲಿ 14 ಭಾಗಗಳಿವೆ. ಇವುಗಳ ಆರಂಭದಲ್ಲಿ ಮುಂದೆ ಕಲಿಯಲಿರುವ ಕೆಲವು ಪಾಠಗಳ ಬಗ್ಗೆ ಸಾರಾಂಶವನ್ನು ಚುಟುಕಾಗಿ ತಿಳಿಸಲಾಗಿದೆ.

ನೀವು ಹೆತ್ತವರಾಗಿದ್ದರೆ ಪಾಠಗಳನ್ನು ಓದಿ ಅದರಲ್ಲಿರುವ ಚಿತ್ರಗಳ ಬಗ್ಗೆ ನಿಮ್ಮ ಮಕ್ಕಳೊಟ್ಟಿಗೆ ಚರ್ಚಿಸಿ. ಆಮೇಲೆ ಆ ಪಾಠ ಯಾವ ಬೈಬಲ್‌ ವೃತ್ತಾಂತದ ಮೇಲೆ ಆಧಾರಿತವಾಗಿದೆಯೋ ಅದನ್ನು ಬೈಬಲಿನಿಂದ ಜೊತೆಯಾಗಿ ಓದಿ. ಹೀಗೆ ಓದುವಾಗ ಚರ್ಚಿಸಿದ ಪಾಠ ಇದಕ್ಕೆ ಹೇಗೆ ಸಂಬಂಧಿಸಿದೆ ಎನ್ನುವುದನ್ನು ತಿಳಿಯಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿ. ಬೈಬಲನ್ನು ಪರಿಚಯ ಮಾಡಿಕೊಳ್ಳಲು ಬಯಸುವ ದೊಡ್ಡವರಿಗೆ ಸಹಾಯ ಮಾಡುವಾಗಲೂ ಇದೇ ವಿಧಾನವನ್ನು ಅನುಸರಿಸಬಹುದು.

ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲಾ ಪ್ರಾಮಾಣಿಕ ಜನರು ದೇವರ ವಾಕ್ಯವನ್ನು ಕಲಿತು ಅದನ್ನು ಅನ್ವಯಿಸಿಕೊಳ್ಳಲು ಈ ಪುಸ್ತಕ ಸಹಾಯ ಮಾಡುವುದು ಎಂದು ನಾವು ನೆನೆಸುತ್ತೇವೆ. ಇದರಿಂದ ಅವರು ಕೂಡ ದೇವರನ್ನು ಆರಾಧಿಸುತ್ತಾ ಆತನ ಪ್ರೀತಿಯ ಕುಟುಂಬದ ಭಾಗವಾಗಬಹುದು.

ನಿಮ್ಮ ಸಹೋದರರು,

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ