ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 16

“ಹಣೆ ಮೇಲೆ ಒಂದು ಗುರುತು ಹಾಕು”

“ಹಣೆ ಮೇಲೆ ಒಂದು ಗುರುತು ಹಾಕು”

ಯೆಹೆಜ್ಕೇಲ 9:4

ಮುಖ್ಯ ವಿಷಯ: ಯೆಹೆಜ್ಕೇಲನ ಕಾಲದಲ್ಲಿ ನಂಬಿಗಸ್ತರ ಹಣೆಯ ಮೇಲೆ ಹೇಗೆ ಗುರುತನ್ನ ಹಾಕಲಾಯ್ತು ಮತ್ತು ಇವತ್ತು ಗುರುತು ಹಾಕೋದು ಏನನ್ನ ಸೂಚಿಸುತ್ತೆ

1-3. (ಎ) ಯೆಹೆಜ್ಕೇಲನಿಗೆ ಯಾಕೆ ತುಂಬ ದುಃಖ ಆಯ್ತು? (ಬಿ) ಯೆರೂಸಲೇಮಿನ ನಾಶನದ ಬಗ್ಗೆ ಅವನಿಗೆ ಏನು ಗೊತ್ತಾಯ್ತು? (ಸಿ) ನಾವು ಯಾವ ಪ್ರಶ್ನೆಗಳಿಗೆ ಉತ್ರ ತಿಳಿಯಲಿದ್ದೇವೆ?

 ಯೆಹೆಜ್ಕೇಲನಿಗೆ ತುಂಬ ದುಃಖವಾಯಿತು! ಈಗಷ್ಟೇ ಧರ್ಮಭ್ರಷ್ಟ ಯೆಹೂದ್ಯರು ಆಲಯವನ್ನ ಅಶುದ್ಧ ಮಾಡೋದನ್ನ ಅವನು ದರ್ಶನದಲ್ಲಿ ನೋಡಿದ್ದ. * ಶುದ್ಧ ಆರಾಧನೆಯ ಕೇಂದ್ರವಾಗಿದ್ದ ದೇವಾಲಯವನ್ನೇ ಅವರು ಹೊಲಸು ಮಾಡಿದ್ರು. ಆದ್ರೆ ಆಲಯ ಮಾತ್ರವಲ್ಲ, ಯೆಹೂದ ದೇಶ ಪೂರ್ತಿ ಕೆಟ್ಟತನ, ಕ್ರೂರತನದಿಂದ ತುಂಬಿ ತುಳುಕುತ್ತಿತ್ತು. ತಾನು ಆಯ್ಕೆ ಮಾಡಿದ ಜನ ತನಗೇ ದ್ರೋಹ ಮಾಡೋದನ್ನ ನೋಡಿ ರೋಷದಿಂದ ಯೆಹೋವ ದೇವರು ಹೀಗೆ ಹೇಳಿದನು: “ನಾನು ಅವ್ರಿಗೆ ನನ್ನ ಕೋಪ ತೋರಿಸ್ತೀನಿ.”—ಯೆಹೆ. 8:17, 18.

2 ಯೆರೂಸಲೇಮ್‌ ಮತ್ತು ಅದರ ಪವಿತ್ರ ದೇವಾಲಯ ಯೆಹೋವ ದೇವರ ಕೋಪದಿಂದ ನಾಶವಾಗುತ್ತೆ ಅಂತ ಗೊತ್ತಾದಾಗ ಯೆಹೆಜ್ಕೇಲನಿಗೆ ತುಂಬ ಬೇಜಾರಾಗಿರಬೇಕು. ಅವನ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಬಂದಿರಬೇಕು. ‘ಆ ಪಟ್ಟಣದಲ್ಲಿರುವ ನಂಬಿಗಸ್ತ ಜನರಿಗೆ ಏನಾಗುತ್ತೆ? ಯೆಹೋವನು ಅವರನ್ನ ಕಾಪಾಡ್ತಾನಾ? ಕಾಪಾಡೋದಾದ್ರೆ ಹೇಗೆ?’ ಈ ಎಲ್ಲ ಪ್ರಶ್ನೆಗಳ ಉತ್ತರಕ್ಕಾಗಿ ಯೆಹೆಜ್ಕೇಲ ತುಂಬ ಸಮಯ ಕಾಯಬೇಕಾಗಿರಲಿಲ್ಲ. ಯೆರೂಸಲೇಮಿಗೆ ಶಿಕ್ಷೆ ಸಿಗುತ್ತೆ ಅಂತ ಕೇಳಿದ ಸ್ವಲ್ಪ ಸಮಯದಲ್ಲೇ ಆ ಪಟ್ಟಣಕ್ಕೆ ಶಿಕ್ಷೆ ಕೊಡೋರನ್ನ ಬರೋಕೆ ಹೇಳುವ ಒಂದು ಜೋರಾಗಿರುವ ಕೂಗನ್ನ ಅವನು ಕೇಳಿಸಿಕೊಂಡ. (ಯೆಹೆ. 9:1) ನಂಬಿಕೆದ್ರೋಹ ಮಾಡಿರುವ ಕೆಟ್ಟ ವ್ಯಕ್ತಿಗಳು ಮಾತ್ರ ನಾಶವಾಗ್ತಾರೆ, ಒಳ್ಳೇ ಜನರಿಗೆ ರಕ್ಷಣೆ ಸಿಗುತ್ತೆ ಅಂತ ಅವನಿಗೆ ಈ ದರ್ಶನದಿಂದ ಗೊತ್ತಾಯ್ತು. ಇದನ್ನ ತಿಳಿದಾಗ ಅವನಿಗೆ ಎಷ್ಟು ಸಾಂತ್ವನ ಸಿಕ್ಕಿರಬೇಕಲ್ವಾ?

3 ನಾವು ಸಹ ಈ ದುಷ್ಟಲೋಕ ನಾಶವಾಗೋ ಸಮಯದಲ್ಲಿ ಜೀವಿಸ್ತಿರೋದ್ರಿಂದ ಯಾರು ನಾಶ ಆಗ್ತಾರೆ, ಯಾರು ಪಾರಾಗ್ತಾರೆ ಅಂತ ಯೋಚಿಸಬಹುದು. ಹಾಗಾಗಿ ಈ ಪ್ರಶ್ನೆಗಳ ಬಗ್ಗೆ ತಿಳಿದುಕೊಳ್ಳೋಣ: (1) ಯೆಹೆಜ್ಕೇಲ ದರ್ಶನದಲ್ಲಿ ಮುಂದೆ ಏನನ್ನ ನೋಡಿದನು? (2) ಈ ದರ್ಶನ ಅವನ ಕಾಲದಲ್ಲಿ ಹೇಗೆ ನೆರವೇರಿತು? (3) ಈ ದರ್ಶನ ನಮ್ಮ ಕಾಲದಲ್ಲೂ ನೆರವೇರುತ್ತಾ?

“ಶಿಕ್ಷೆ ಕೊಡುವವ್ರನ್ನ ಬರೋಕೆ ಹೇಳಿ”

4. ಯೆಹೆಜ್ಕೇಲ ದರ್ಶನದಲ್ಲಿ ಏನನ್ನ ನೋಡಿದ ಮತ್ತು ಕೇಳಿಸಿಕೊಂಡ? ವಿವರಿಸಿ.

4 ಯೆಹೆಜ್ಕೇಲ ಮುಂದೆ ಅಲ್ಲಿ ಏನನ್ನ ನೋಡಿದ ಮತ್ತು ಕೇಳಿಸಿಕೊಂಡ? (ಯೆಹೆಜ್ಕೇಲ 9:1-11 ಓದಿ.) ಏಳು ಗಂಡಸರು “ಉತ್ತರದ ಕಡೆಗಿರೋ ಒಳಗಿನ ಬಾಗಿಲ ಹತ್ರ” ಬರೋದನ್ನ ನೋಡ್ದ. ಬಹುಶಃ ಅವರು ಸಿಟ್ಟು ಬರಿಸೋ ಮೂರ್ತಿಯ ಹತ್ರ ಅಥ್ವಾ ತಮ್ಮೂಜ್‌ ದೇವನಿಗಾಗಿ ಸ್ತ್ರೀಯರು ಅಳುತ್ತಿರುವ ಜಾಗದ ಹತ್ರ ಬಂದಿರಬೇಕು. (ಯೆಹೆ. 8:3, 14) ಏಳು ಗಂಡಸರು ದೇವಾಲಯದ ಒಳಗಿರೋ ತಾಮ್ರದ ಯಜ್ಞವೇದಿಯ ಹತ್ರ ಬಂದು ನಿಂತಿದ್ರು. ಅವರು ಬಲಿಯನ್ನ ಅರ್ಪಿಸೋಕೆ ಬಂದಿರಲಿಲ್ಲ. ಯಾಕಂದ್ರೆ ಯೆಹೋವ ದೇವರು ಆ ಸಮಯದಲ್ಲಿ ಬಲಿಗಳನ್ನ ಸ್ವೀಕರಿಸ್ತಿರಲಿಲ್ಲ. ಆರು ಗಂಡಸರ “ಕೈಯಲ್ಲಿ ಜಜ್ಜಿಹಾಕೋ ಆಯುಧ ಇತ್ತು.” ಏಳನೇ ವ್ಯಕ್ತಿ ಉಳಿದ ಗಂಡಸರ ತರ ಇರಲಿಲ್ಲ. ಅವನು ನಾರು ಬಟ್ಟೆ ಹಾಕಿಕೊಂಡಿದ್ದ. ಅವನ ಕೈಯಲ್ಲಿ ಯಾವುದೇ ಆಯುಧ ಇರಲಿಲ್ಲ. ಬದ್ಲಿಗೆ, “ಕಾರ್ಯದರ್ಶಿಯ ಒಂದು ಶಾಯಿಕೊಂಬು” ಅಂದ್ರೆ ಪಾದಟಿಪ್ಪಣಿಯಲ್ಲಿ ಹೇಳೋ ಹಾಗೆ “ಬರಹಗಾರನ ಲೇಖನಿ ಮತ್ತು ಶಾಯಿ ಇಡೋ ಡಬ್ಬಿ” ಇತ್ತು.

5, 6. ಯಾವ ರೀತಿಯ ಜನರ ಹಣೆಯ ಮೇಲೆ ಗುರುತು ಹಾಕಲಾಯ್ತು ಮತ್ತು ಅವ್ರಿಗೆ ಏನಾಗಲಿತ್ತು? (ಆರಂಭದ ಚಿತ್ರ ನೋಡಿ.)

5 ಶಾಯಿಕೊಂಬು ಹಿಡಿದಿರುವ ವ್ಯಕ್ತಿ ಏನು ಮಾಡಬೇಕಿತ್ತು? ಯೆಹೋವ ದೇವರಿಂದ ಒಂದು ಪ್ರಾಮುಖ್ಯ ಜವಾಬ್ದಾರಿ ಅವನಿಗೆ ಸಿಕ್ತು. ಯೆಹೋವನು ಅವನಿಗೆ, “ನೀನು ಯೆರೂಸಲೇಮ್‌ ಪಟ್ಟಣದಲ್ಲಿ ಎಲ್ಲ ಕಡೆ ಹೋಗು. ಪಟ್ಟಣದಲ್ಲಿ ನಡಿತಿರೋ ಎಲ್ಲ ಅಸಹ್ಯ ಕೆಲಸಗಳನ್ನ ನೋಡಿ ದುಃಖದ ನಿಟ್ಟುಸಿರು ಬಿಡ್ತಾ ನರಳಾಡ್ತಿರೋ ಜನ್ರ ಹಣೆ ಮೇಲೆ ಒಂದು ಗುರುತು ಹಾಕು” ಅಂತ ಹೇಳಿದನು. ಇದನ್ನ ಕೇಳಿದಾಗ ಯೆಹೆಜ್ಕೇಲನಿಗೆ, ಹಿಂದೆ ಇಸ್ರಾಯೇಲ್ಯರು ಈಜಿಪ್ಟಿನಲ್ಲಿದ್ದಾಗ ಅವರ ಮನೆಬಾಗಿಲಿನ ಚೌಕಟ್ಟಿಗೆ ರಕ್ತವನ್ನ ಹಚ್ಚಿದ ಘಟನೆ ನೆನಪಿಗೆ ಬಂದಿರಬೇಕು. ಹೀಗೆ ಮಾಡೋ ಮೂಲಕ ಪ್ರತಿ ಮನೆಯಲ್ಲಿರೋ ಹಿರಿಯ ಮಗನ ಪ್ರಾಣವನ್ನ ಕಾಪಾಡಬಹುದಿತ್ತು. (ವಿಮೋ. 12:7, 22, 23) ಶಾಯಿಕೊಂಬು ಹಿಡಿದಿರೋ ವ್ಯಕ್ತಿ ಜನರ ಹಣೆಯ ಮೇಲೆ ಹಾಕೋ ಗುರುತು ಕೂಡ ಜನರ ಪ್ರಾಣವನ್ನ ಉಳಿಸೋದನ್ನ ಸೂಚಿಸ್ತಿತ್ತಾ?

6 ಈ ಪ್ರಶ್ನೆಗೆ ಉತ್ರ ತಿಳ್ಕೊಬೇಕಂದ್ರೆ ಎಂಥಾ ಜನ್ರ ಮೇಲೆ ಗುರುತನ್ನ ಹಾಕಲಾಯ್ತು ಅಂತ ನೊಡೋಣ. “ಪಟ್ಟಣದಲ್ಲಿ ನಡಿತಿರೋ ಎಲ್ಲ ಅಸಹ್ಯ ಕೆಲಸಗಳನ್ನ ನೋಡಿ ದುಃಖದ ನಿಟ್ಟುಸಿರು ಬಿಡ್ತಾ ನರಳಾಡ್ತಿರೋ ಜನ್ರ” ಹಣೆಗಳ ಮೇಲೆ ಈ ಗುರುತನ್ನ ಹಾಕಲಾಯ್ತು. ಇದ್ರಿಂದ ಆ ಜನ್ರ ಬಗ್ಗೆ ನಮ್ಗೆ ಏನು ಗೊತ್ತಾಗುತ್ತೆ? ದೇವಾಲಯದಲ್ಲಿ ಮೂರ್ತಿಪೂಜೆ ಮಾಡ್ತಿರೋದನ್ನ ಮತ್ತು ಯೆರೂಸಲೇಮಿನಲ್ಲಿ ಹಿಂಸೆ, ಅನೈತಿಕತೆ, ಭ್ರಷ್ಟಾಚಾರ ತುಂಬಿರೋದನ್ನ ನೋಡಿ ಅವ್ರಿಗೆ ತುಂಬ ನೋವಾಗಿತ್ತು ಅಂತ ಗೊತ್ತಾಗುತ್ತೆ. (ಯೆಹೆ. 22:9-12) ಅಷ್ಟೇ ಅಲ್ಲ ಅವರು ತಮಗಾದ ನೋವನ್ನ ಬಚ್ಚಿಡಲಿಲ್ಲ. ಪಟ್ಟಣದಲ್ಲಿ ನಡಿತಿರೋ ವಿಷ್ಯಗಳನ್ನ ನೋಡಿ ತಮಗೆ ಎಷ್ಟು ಅಸಹ್ಯ ಅನಿಸ್ತಿದೆ ಮತ್ತು ಶುದ್ಧ ಆರಾಧನೆ ಬಗ್ಗೆ ಎಷ್ಟು ಭಯಭಕ್ತಿ ಇದೆ ಅನ್ನೋದನ್ನ ಅವ್ರು ತಮ್ಮ ಮಾತು ಮತ್ತು ನಡತೆಯ ಮೂಲಕ ತೋರಿಸಿಕೊಟ್ಟಿದ್ರು. ಅದಕ್ಕೇ ಯೆಹೋವನು ಅವರಿಗೆ ಕರುಣೆ ತೋರಿಸಿ ಅವರನ್ನ ಕಾಪಾಡಲಿದ್ದನು.

7, 8. ಜಜ್ಜಿ ಹಾಕೋ ಆಯುಧಗಳನ್ನ ಹಿಡ್ಕೊಂಡವ್ರು ಏನು ಮಾಡಿದ್ರು? ಕೊನೆಗೆ ಏನಾಯ್ತು?

7 ಜಜ್ಜಿ ಹಾಕುವ ಆಯುಧ ಹಿಡಿದಿದ್ದ ಆರು ಗಂಡಸರು ಏನು ಮಾಡಬೇಕಿತ್ತು? ಯೆಹೋವನು ಅವರಿಗೆ ನಿರ್ದೇಶನ ಕೊಡ್ತಿರೋದನ್ನ ಯೆಹೆಜ್ಕೇಲ ಕೇಳಿಸ್ಕೊಂಡ. ಆತನು ಅವ್ರಿಗೆ, ಶಾಯಿಕೊಂಬು ಹಿಡಿದವನ ಹಿಂದೆ ಹೋಗೋಕೆ ಹೇಳಿದನು. ಅಷ್ಟೇ ಅಲ್ಲ ಅವನು ಯಾರ ಮೇಲೆ ಗುರುತು ಹಾಕಿದ್ದಾನೋ ಅವ್ರನ್ನ ಬಿಟ್ಟು ಉಳಿದವ್ರನ್ನ ಸಾಯಿಸೋಕೆ ಹೇಳಿದನು. “ಈ ಕೆಲಸವನ್ನ ನೀವು ನನ್ನ ಆಲಯದಿಂದಾನೇ ಶುರುಮಾಡಬೇಕು” ಅಂದನು. (ಯೆಹೆ. 9:6) ಆ ಗಂಡಸರು ತಮ್ಮ ಕೆಲಸವನ್ನ ಯೆರೂಸಲೇಮಿನ ದೇವಾಲಯದಿಂದ ಶುರುಮಾಡಬೇಕಿತ್ತು. ಯಾಕಂದ್ರೆ ಈಗ ಆ ಸ್ಥಳ ಯೆಹೋವನಿಗೆ ಪವಿತ್ರವಾಗಿರಲಿಲ್ಲ. ಅವರು ಮೊದಲು “ಆಲಯದ ಮುಂದಿದ್ದ ಹಿರಿಯರನ್ನ” ಕೊಂದು ಹಾಕಬೇಕಿತ್ತು. ಯಾಕಂದ್ರೆ ಇಸ್ರಾಯೇಲ್ಯರ 70 ಹಿರಿಯರು ತಮ್ಮ ಕೈಯಲ್ಲಿ ಧೂಪ ಪಾತ್ರೆಯನ್ನ ಹಿಡಿದುಕೊಂಡು ಮೂರ್ತಿಗಳಿಗೆ ಧೂಪ ಅರ್ಪಿಸ್ತಿದ್ರು.—ಯೆಹೆ. 8:11, 12; 9:6.

8 ಕೊನೆಗೆ ಏನಾಯ್ತು? ಶಾಯಿಕೊಂಬು ಹಿಡಿದಿರೋ ವ್ಯಕ್ತಿ ಬಂದು ಯೆಹೋವ ದೇವರಿಗೆ ಹೀಗೆ ಹೇಳೋದನ್ನ ಯೆಹೆಜ್ಕೇಲ ನೋಡಿದ: “ನೀನು ಆಜ್ಞೆ ಕೊಟ್ಟ ಹಾಗೇ ನಾನು ಮಾಡಿದ್ದೀನಿ.” (ಯೆಹೆ. 9:11) ಇದನ್ನ ಓದುವಾಗ ನಮ್ಮ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಬರಬಹುದು. ಯೆರೂಸಲೇಮಿನ ಜನ್ರಿಗೆ ಏನಾಯ್ತು? ಯೆರೂಸಲೇಮಿನಲ್ಲಿ ನಂಬಿಗಸ್ತ ಜನ್ರು ಇದ್ರಾ? ಇದ್ರೆ ಅವರು ಪಾರಾದ್ರಾ?

ಈ ದರ್ಶನ ಯೆಹೆಜ್ಕೇಲನ ಸಮಯದಲ್ಲಿ ಹೇಗೆ ನೆರವೇರಿತು?

9, 10. ಯೆರೂಸಲೇಮಿನ ನಾಶನವನ್ನ ಪಾರಾದವ್ರಲ್ಲಿ ಕೆಲವ್ರು ಯಾರು? ಅವ್ರು ಯಾಕೆ ಪಾರಾದ್ರು?

9 2 ಪೂರ್ವಕಾಲವೃತ್ತಾಂತ 36:17-20 ಓದಿ. ಕ್ರಿ.ಪೂ. 607 ರಲ್ಲಿ ಬಾಬೆಲಿನ ಸೈನ್ಯ ಯೆರೂಸಲೇಮನ್ನ ಮತ್ತು ಅದರ ದೇವಾಲಯವನ್ನ ನಾಶಮಾಡಿದಾಗ ಯೆಹೆಜ್ಕೇಲನು ಹೇಳಿದ ಭವಿಷ್ಯವಾಣಿ ನೆರವೇರಿತು. ಬಾಬೆಲಿನವರು, “ಯೆಹೋವನ ಕೈಯಲ್ಲಿ . . . ಲೋಟದ ತರ” ಇದ್ರು. ಯೆಹೋವನು ಅವರನ್ನ ಉಪಯೋಗಿಸಿ ಅಪನಂಬಿಗಸ್ತ ಯೆರೂಸಲೇಮಿನ ಮೇಲೆ ಶಿಕ್ಷೆ ಅನ್ನೋ ಮದ್ಯವನ್ನ ಸುರಿದನು. (ಯೆರೆ. 51:7) ಆಗ ಎಲ್ರೂ ನಾಶ ಆದ್ರಾ? ಇಲ್ಲ. ಕೆಲವರು ಬದುಕಿ ಉಳಿಯುತ್ತಾರೆ ಅಂತ ಯೆಹೆಜ್ಕೇಲನ ದರ್ಶನದಲ್ಲಿ ತಿಳಿಸಲಾಗಿತ್ತು.—ಆದಿ. 18:22-33; 2 ಪೇತ್ರ 2:9.

10 ಸುಮಾರು ನಂಬಿಗಸ್ತ ಜನರು ಬದುಕಿ ಉಳಿದ್ರು. ಅವರಲ್ಲಿ ರೇಕಾಬ್ಯರು, ಇಥಿಯೋಪ್ಯದ ಎಬೆದ್ಮೆಲೆಕ, ಪ್ರವಾದಿ ಯೆರೆಮೀಯ ಮತ್ತು ಅವನ ಕಾರ್ಯದರ್ಶಿ ಬಾರೂಕ ಇದ್ರು. (ಯೆರೆ. 35:1-19; 39:15-18; 45:1-5) ಇವ್ರೆಲ್ಲರೂ ಯೆರೂಸಲೇಮ್‌ “ಪಟ್ಟಣದಲ್ಲಿ ನಡಿತಿರೋ ಎಲ್ಲ ಅಸಹ್ಯ ಕೆಲಸಗಳನ್ನ ನೋಡಿ ದುಃಖದ ನಿಟ್ಟುಸಿರು ಬಿಡ್ತಾ ನರಳಾಡ್ತಾ” ಇದ್ರು. (ಯೆಹೆ. 9:4) ಕೆಟ್ಟತನವನ್ನ ತಾವೆಷ್ಟು ದ್ವೇಷಿಸ್ತೇವೆ ಮತ್ತು ಶುದ್ಧ ಆರಾಧನೆ ಮೇಲೆ ತಮಗೆಷ್ಟು ಭಕ್ತಿ ಇದೆ ಅನ್ನೋದನ್ನ ಯೆರೂಸಲೇಮ್‌ ಪಟ್ಟಣದ ನಾಶನಕ್ಕೆ ಮುಂಚೆನೇ ಅವರು ತೋರಿಸಿ ಕೊಟ್ಟಿದ್ರು. ಅದಕ್ಕೇ ಯೆಹೋವನು ಅವರನ್ನ ಕಾಪಾಡಿದನು.

11. ಕಾರ್ಯದರ್ಶಿಯ ಶಾಯಿಕೊಂಬನ್ನ ಹಿಡಿದಿರೋ ವ್ಯಕ್ತಿ ಮತ್ತು ಜಜ್ಜಿ ಹಾಕೋ ಆಯುಧಗಳನ್ನ ಹಿಡ್ಕೊಂಡ ಗಂಡಸ್ರು ಯಾರನ್ನ ಸೂಚಿಸ್ತಿದ್ರು?

11 ನಂಬಿಗಸ್ತ ಜನ್ರ ಮೇಲೆ ನಿಜವಾಗ್ಲೂ ಗುರುತನ್ನ ಹಾಕಲಾಯಿತಾ? ಯೆಹೆಜ್ಕೇಲನಾಗಲಿ ಬೇರೆ ಯಾವ ಪ್ರವಾದಿಯಾಗಲಿ ಯೆರೂಸಲೇಮಿನ ಎಲ್ಲಾ ಕಡೆ ಹೋಗಿ ನಂಬಿಗಸ್ತ ಜನ್ರ ಹಣೆ ಮೇಲೆ ಗುರುತನ್ನ ಹಾಕಿದ್ರು ಅನ್ನೋದಕ್ಕೆ ಯಾವುದೇ ದಾಖಲೆ ಇಲ್ಲ. ಇದ್ರಿಂದ ಯೆಹೆಜ್ಕೇಲನು ನೋಡಿದ್ದು ಸ್ವರ್ಗದಲ್ಲಿ ನಡೆಯುತ್ತಿದ್ದ ಘಟನೆಗಳನ್ನ ಅಂತ ನಮ್ಗೆ ಗೊತ್ತಾಗುತ್ತೆ. ಹಾಗಾಗಿ ಈ ರೀತಿಯಲ್ಲಿ ಗುರುತು ಹಾಕೋದು ಮನುಷ್ಯನ ಕಣ್ಣಿಗೆ ಕಾಣಲಿಲ್ಲ. ಕಾರ್ಯದರ್ಶಿಯ ಶಾಯಿಕೊಂಬನ್ನ ಹಿಡಿದಿರೋ ವ್ಯಕ್ತಿ ಮತ್ತು ಜಜ್ಜಿ ಹಾಕುವ ಆಯುಧ ಹಿಡಿದಿದ್ದ ಆರು ಗಂಡಸ್ರು ಯೆಹೋವನ ನಂಬಿಗಸ್ತ ಅದೃಶ್ಯ ಜೀವಿಗಳನ್ನ ಸೂಚಿಸ್ತಿದ್ರು. ಅವ್ರು ಯಾವಾಗಲೂ ಯೆಹೋವನ ಕೆಲಸ ಮಾಡೋಕೆ ಸಿದ್ಧರಾಗಿರುತ್ತಿದ್ರು. (ಕೀರ್ತ. 103:20, 21) ಯೆರೂಸಲೇಮಿನಲ್ಲಿರೋ ದುಷ್ಟ ಜನ್ರಿಗೆ ಶಿಕ್ಷೆಯನ್ನ ಕೊಡೋಕೆ ಯೆಹೋವನು ದೇವದೂತರನ್ನ ಉಪಯೋಗಿಸಿರ್ತಾನೆ ಅನ್ನೋದ್ರಲ್ಲಿ ಯಾವುದೇ ಸಂಶಯ ಇಲ್ಲ. ಹಣೆಯ ಮೇಲೆ ಗುರುತು ಹಾಕೋದು ಸಾಂಕೇತಿಕ ಅರ್ಥದಲ್ಲಿದೆ. ಇದು ನಂಬಿಗಸ್ತರಾದ ಜನ್ರನ್ನ ಮಾತ್ರ ನಾಶನದಿಂದ ಪಾರುಮಾಡಲಾಗುತ್ತೆ, ಉಳಿದವರನ್ನ ನಾಶಮಾಡಲಾಗುತ್ತೆ ಅನ್ನೋದನ್ನ ಸೂಚಿಸುತ್ತೆ.

ಈ ದರ್ಶನ ನಮ್ಮ ಕಾಲದಲ್ಲೂ ನೆರವೇರುತ್ತಾ?

12, 13. (ಎ) ಯೆಹೋವನು ಯೆರೂಸಲೇಮನ್ನ ಯಾಕೆ ನಾಶ ಮಾಡಿದನು? (ಬಿ) ನಮ್ಮ ಕಾಲದಲ್ಲೂ ಯೆಹೋವನು ಯಾಕೆ ಆ ರೀತಿ ಮಾಡಲಿದ್ದಾನೆ? (ಸಿ) ಯೆರೂಸಲೇಮ್‌ ಸುಳ್ಳು ಕ್ರೈಸ್ತರನ್ನ ಸೂಚಿಸುತ್ತಾ? ವಿವರಿಸಿ. (“ಅಪನಂಬಿಗಸ್ತ ಯೆರೂಸಲೇಮ್‌ ಸುಳ್ಳು ಕ್ರೈಸ್ತ ಧರ್ಮಗಳನ್ನ ಸೂಚಿಸುತ್ತಾ?” ಚೌಕ ನೋಡಿ.)

12 ನಾವು ಕೂಡ ಒಂದು ನ್ಯಾಯತೀರ್ಪಿನ ಸಮಯದಲ್ಲಿ ಜೀವಿಸ್ತಾ ಇದ್ದೀವಿ. ಹಿಂದೆಂದೂ ಅನುಭವಿಸಿರದ ಕಷ್ಟಗಳು ಬರಲಿವೆ. “ಆಗ ಮಹಾ ಸಂಕಟ ಇರುತ್ತೆ. ಲೋಕ ಆರಂಭ ಆದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದಿಲ್ಲ. ಇನ್ನು ಮುಂದೆನೂ ಬರಲ್ಲ.” (ಮತ್ತಾ. 24:21) ಆ ಮಹತ್ವಪೂರ್ಣ ಘಟನೆಗಳಿಗಾಗಿ ಕಾಯುತ್ತಿರುವಾಗ ನಮ್ಮ ಮನಸ್ಸಲ್ಲಿ ಕೆಲವು ಪ್ರಶ್ನೆಗಳು ಬರಬಹುದು. ಈ ನಾಶನದ ಸಮಯದಲ್ಲಿ ಯಾರಾದ್ರೂ ಉಳಿಯುತ್ತಾರಾ? ಯೆಹೋವ ದೇವರ ನಂಬಿಗಸ್ತ ಆರಾಧಕರ ಮೇಲೆ ಗುರುತನ್ನ ಹಾಕಲಾಗುತ್ತಾ? ಇನ್ನೊಂದು ಮಾತಲ್ಲಿ ಹೇಳೋದಾದ್ರೆ ಯೆಹೆಜ್ಕೇಲ ನೋಡಿದ ಈ ದರ್ಶನ ನಮ್ಮ ಕಾಲದಲ್ಲೂ ನೆರವೇರುತ್ತಾ? ಈ ಮೂರೂ ಪ್ರಶ್ನೆಗಳ ಉತ್ತರ ‘ಹೌದು’ ಅಂತಾಗಿದೆ. ನಾವು ಯಾಕೆ ಹಾಗೆ ಹೇಳಬಹುದು? ಇದಕ್ಕೆ ಏನು ಆಧಾರ ಇದೆ ಅಂತ ತಿಳ್ಕೊಳ್ಳೋಕೆ ಯೆಹೆಜ್ಕೇಲನ ದರ್ಶನವನ್ನ ಮತ್ತೆ ನೊಡೋಣ.

13 ಹಿಂದಿನ ಕಾಲದ ಯೆರೂಸಲೇಮನ್ನ ಯೆಹೋವನು ಯಾಕೆ ನಾಶ ಮಾಡಿದನು ಅನ್ನೋದು ನಿಮ್ಗೆ ನೆನಪಿದ್ಯಾ? ಯೆಹೆಜ್ಕೇಲ 9:8, 9ನ್ನ ಪುನಃ ನೋಡಿ. (ಓದಿ.) ಯೆಹೋವನು, “ಇಸ್ರಾಯೇಲಿನಲ್ಲಿ ಉಳಿದಿರೋ ಎಲ್ರನ್ನೂ” ನಾಶ ಮಾಡ್ತಾನೇನೋ ಅಂತ ಯೆಹೆಜ್ಕೇಲನಿಗೆ ಭಯ ಆಯ್ತು. ಆಗ ಯೆಹೋವನು, ಯಾಕೆ ಈ ನಾಶನವನ್ನ ತರ್ತಿದ್ದೀನಿ ಅಂತ ನಾಲ್ಕು ಕಾರಣಗಳನ್ನ ಅವನಿಗೆ ತಿಳಿಸಿದನು. (1) ‘ಯೆಹೂದದ ಜನ್ರ ಪಾಪಗಳಿಗೆ ಲೆಕ್ಕನೇ ಇರ್ಲಿಲ್ಲ.’ * (2) ಯೆಹೂದ ‘ರಕ್ತಪಾತದಿಂದ’ ತುಂಬಿತ್ತು. (3) ಯೆಹೂದದ ರಾಜಧಾನಿಯಾಗಿದ್ದ ಯೆರೂಸಲೇಮ್‌ನಲ್ಲಿ ‘ಭ್ರಷ್ಟಾಚಾರ ತುಂಬಿ ತುಳುಕ್ತಿತ್ತು.’ (4) ತಾವು ಕೆಟ್ಟಕೆಲಸ ಮಾಡಿದ್ರೂ ಪರವಾಗಿಲ್ಲ ಯೆಹೋವ “ಏನೂ ನೋಡ್ತಿಲ್ಲ” ಅಂತ ಜನರು ನೆನಸಿದ್ರು. ಆಗಿನ ಕಾಲದ ತರಾನೇ ಇವತ್ತೂ ಲೋಕ ಅನೈತಿಕತೆ, ಹಿಂಸೆ, ಭ್ರಷ್ಟಾಚಾರ, ಅಪನಂಬಿಕೆಯಿಂದ ತುಂಬಿ ತುಳುಕ್ತಾ ಇದೆ ಅಲ್ವಾ? ಹಾಗಾಗಿ ಯೆಹೋವನು ಹಿಂದೆ ಮಾಡಿದ ತರ ನಮ್ಮ ದಿನಗಳಲ್ಲೂ ಮಾಡಲಿದ್ದಾನೆ. ಯಾಕಂದ್ರೆ “ಆತನು ಬದಲಾಗ್ತಾ ಇರಲ್ಲ.” (ಯಾಕೋ. 1:17; ಮಲಾ. 3:6) ಹಾಗಾದ್ರೆ ಶಾಯಿಕೊಂಬನ್ನ ಹಿಡಿದಿರೋ ವ್ಯಕ್ತಿ ಮತ್ತು ಜಜ್ಜಿ ಹಾಕುವ ಆಯುಧ ಹಿಡಿದಿರೋ ಆರು ಗಂಡಸ್ರು ನಮ್ಮ ಕಾಲದಲ್ಲೂ ಕೆಲಸಮಾಡಲಿದ್ದಾರೆ ಅಂತ ಇದ್ರಿಂದ ನಮ್ಗೆ ಗೊತ್ತಾಗುತ್ತೆ.

ಜಜ್ಜಿ ಹಾಕೋ ಆಯುಧಗಳನ್ನ ಹಿಡ್ಕೊಂಡಿರೋ ಆರು ಗಂಡಸರು ಬಲು ಬೇಗನೆ ಕೆಲ್ಸ ಮಾಡಲಿದ್ದಾರೆ (ಪ್ಯಾರ 12, 13 ನೋಡಿ)

14, 15. ನಾಶನ ಬರೋಕೂ ಮುಂಚೆ ಯೆಹೋವನು ತನ್ನ ಜನರಿಗೆ ಎಚ್ಚರಿಕೆ ಕೊಡ್ತಾನೆ ಅಂತ ಹೇಗೆ ಹೇಳಬಹುದು?

14 ಈ ದರ್ಶನ ನಮ್ಮ ಕಾಲದಲ್ಲಿ ಹೇಗೆ ನೆರವೇರುತ್ತೆ? ಈ ದರ್ಶನ ಹಿಂದಿನ ಕಾಲದಲ್ಲಿ ಯಾವ ರೀತಿ ನೆರವೇರಿತು ಅನ್ನೋದನ್ನ ನೆನಪಿಸಿಕೊಂಡ್ರೆ, ನಮ್ಮ ಕಾಲದಲ್ಲಿ ಏನು ನಡಿತಾ ಇದೆ ಮತ್ತು ಮುಂದೆ ಏನು ನಡೆಯುತ್ತೆ ಅನ್ನೋದನ್ನ ಅರ್ಥಮಾಡ್ಕೊಬಹುದು. ಯೆಹೆಜ್ಕೇಲನ ಭವಿಷ್ಯವಾಣಿ ನಮ್ಮ ಕಾಲದಲ್ಲಿ ಹೇಗೆ ನೆರವೇರುತ್ತಿದೆ ಮತ್ತು ಮುಂದೆ ಹೇಗೆ ನೆರವೇರುತ್ತೆ?

15 ತಾನು ತರಲಿರುವ ನಾಶನದ ಬಗ್ಗೆ ಯೆಹೋವನು ಯಾವಾಗಲೂ ಜನರಿಗೆ ಮುಂಚೆನೇ ಎಚ್ಚರಿಕೆ ಕೊಡ್ತಾನೆ. ಈ ಪುಸ್ತಕದ 11 ನೇ ಅಧ್ಯಾಯದಲ್ಲಿ ನಾವು ನೋಡಿದ ಹಾಗೆ ಯೆಹೋವ ದೇವರು ಯೆಹೆಜ್ಕೇಲನನ್ನ ‘ಇಸ್ರಾಯೇಲ್ಯರಿಗೆ ಕಾವಲುಗಾರನಾಗಿ ಇಟ್ಟಿದ್ದನು.’ (ಯೆಹೆ. 3:17-19) ಇಸ್ರಾಯೇಲ್ಯರಿಗೆ ನಾಶನ ಬರುತ್ತಾ ಇದೆ ಅಂತ ಅವನು ಕ್ರಿ.ಪೂ. 613 ರಿಂದ ಎಚ್ಚರಿಸ್ತಾ ಇದ್ದ. ಯೆಶಾಯ ಮತ್ತು ಯೆರೆಮೀಯನಂಥ ಬೇರೆ ಪ್ರವಾದಿಗಳು ಸಹ ಯೆರೂಸಲೇಮಿನ ನಾಶನ ಹತ್ತಿರ ಇದೆ ಅಂತ ಎಚ್ಚರಿಸ್ತಾ ಬಂದ್ರು. (ಯೆಶಾ. 39:6, 7; ಯೆರೆ. 25:8, 9, 11) ನಮ್ಮ ಕಾಲದಲ್ಲಿ ಕೂಡ ಯೆಹೋವ ದೇವರು ಅಭಿಷಿಕ್ತರ ಒಂದು ಚಿಕ್ಕ ಗುಂಪನ್ನ ಕಾವಲುಗಾರನಾಗಿ ನೇಮಿಸಿದ್ದಾನೆ. ಇವರು ಯೇಸು ಕ್ರಿಸ್ತನ ಮಾರ್ಗದರ್ಶನದ ಕೆಳಗೆ ಯೆಹೋವನ ಮನೆಯವರಿಗೆ ಅಂದ್ರೆ ಶುದ್ಧ ಆರಾಧಕರಿಗೆ ತಕ್ಕ ಸಮಯಕ್ಕೆ ಆಧ್ಯಾತ್ಮಿಕ ಆಹಾರವನ್ನ ಕೊಡ್ತಿದ್ದಾರೆ. ಬರಲಿರುವ ಮಹಾಸಂಕಟದ ಬಗ್ಗೆ ಜನ್ರಿಗೆ ಎಚ್ಚರಿಸ್ತಾ ಇದ್ದಾರೆ.—ಮತ್ತಾ. 24:45.

16. ನಾಶನವನ್ನ ಪಾರಾಗೋವ್ರು ಯಾರು ಅಂತ ನಾವು ಗುರುತು ಹಾಕ್ತೇವಾ? ವಿವರಿಸಿ.

16 ನಾಶನದಿಂದ ಪಾರಾಗುವವರು ಯಾರು ಅಂತ ಯೆಹೋವನ ಜನರು ಗುರುತು ಹಾಕಲ್ಲ. ಹಿಂದಿನ ಕಾಲದಲ್ಲೂ ಪಾರಾಗೋವ್ರಿಗೆ ಗುರುತು ಹಾಕೋಕೆ ಯೆಹೆಜ್ಕೇಲನಿಗೆ ತಿಳಿಸಿರಲಿಲ್ಲ ಅನ್ನೋದನ್ನ ನೆನಪು ಮಾಡಿಕೊಳ್ಳಿ. ಅದೇ ತರ ಇವತ್ತು ಸಹ ಪಾರಾಗೋವ್ರಿಗೆ ಗುರುತು ಹಾಕೋ ಕೆಲಸವನ್ನ ಯೆಹೋವನ ಜನರಿಗೆ ಕೊಡಲಾಗಿಲ್ಲ. ಬದ್ಲಿಗೆ ನಮಗೆ ಸಾರುವ ಕೆಲಸವನ್ನ ಕೊಡಲಾಗಿದೆ. ನಾವು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಹುರುಪಿನಿಂದ ಸಾರುತ್ತೇವೆ. ಈ ಲೋಕದ ಅಂತ್ಯ ತುಂಬ ಹತ್ತಿರ ಇದೆ ಅನ್ನೋ ಎಚ್ಚರಿಕೆಯ ಸಂದೇಶವನ್ನ ಬಿಡದೆ ತಿಳಿಸ್ತಾ ಇದ್ದೇವೆ. ಹೀಗೆ ನಮಗೆ ಕೊಟ್ಟಿರೋ ಸಾರೋ ಕೆಲಸವನ್ನ ತುಂಬ ಗಂಭೀರವಾಗಿ ತಗೊಳ್ತೇವೆ ಅಂತ ತೋರಿಸಿಕೊಡ್ತೇವೆ. (ಮತ್ತಾ. 24:14; 28:18-20) ಜೊತೆಗೆ ಶುದ್ಧ ಆರಾಧನೆ ಮಾಡೋಕೆ ಒಳ್ಳೇ ಜನರಿಗೆ ನಾವು ಸಹಾಯನೂ ಮಾಡ್ತೇವೆ.—1 ತಿಮೊ. 4:16.

17. ನಾಶನವನ್ನ ಪಾರಾಗಬೇಕಂದ್ರೆ ಜನರು ಈಗ್ಲೇ ಏನು ಮಾಡಬೇಕು?

17 ಬರಲಿರುವ ನಾಶನವನ್ನ ಪಾರಾಗಬೇಕಂದ್ರೆ ಜನರು ನಂಬಿಗಸ್ತರಾಗಿದ್ದೇವೆ ಅಂತ ಈಗ್ಲೇ ತೋರಿಸಿಕೊಡಬೇಕು. ಯೆರೂಸಲೇಮ್‌ ನಾಶ ಆಗೋದಕ್ಕೂ ಮುಂಚೆನೇ ಯಾರು ದುಷ್ಟತನವನ್ನ ದ್ವೇಷಿಸಿ, ಶುದ್ಧ ಆರಾಧನೆಗೆ ಸಂಪೂರ್ಣ ಭಯಭಕ್ತಿ ತೋರಿಸಿದ್ರೋ ಅವ್ರು ಮಾತ್ರ ಪಾರಾದ್ರು. ಇವತ್ತು ಕೂಡ ಜನರು ಪಾರಾಗಬೇಕಂದ್ರೆ ಈ ಲೋಕದಲ್ಲಿ ನಡಿತಿರೋ ಎಲ್ಲ ಅಸಹ್ಯ ಕೆಲಸಗಳನ್ನ ನೋಡಿ ‘ದುಃಖದ ನಿಟ್ಟುಸಿರು ಬಿಡ್ತಾ ನರಳಾಡ್ಬೇಕು.’ ಅಂದರೆ ನಾಶನ ಬರೋದಕ್ಕಿಂತ ಮುಂಚೆನೇ ಅವರು ತಮ್ಮ ದುಃಖನ ವ್ಯಕ್ತಪಡಿಸಬೇಕು. ತಮಗಾಗೋ ನೋವನ್ನ ಮುಚ್ಚಿಡಬಾರದು. ಬದಲಿಗೆ ಶುದ್ಧ ಆರಾಧನೆಯ ಮೇಲೆ ತಮಗೆಷ್ಟು ಭಯಭಕ್ತಿ ಇದೆ ಅಂತ ಅವ್ರು ತಮ್ಮ ಮಾತು ಮತ್ತು ನಡತೆಯ ಮೂಲಕ ತೋರಿಸಿಕೊಡಬೇಕು. ಅದನ್ನ ಹೇಗೆ ಮಾಡಬಹುದು? ಯೆಹೋವನ ಜನರು ಸಿಹಿಸುದ್ದಿಯನ್ನ ಸಾರುವಾಗ ಅವ್ರು ಅದನ್ನ ಚೆನ್ನಾಗಿ ಕೇಳಿಸಿಕೊಳ್ಳಬೇಕು ಮತ್ತು ಯೇಸುವಿನ ಗುಣಗಳನ್ನ ತಮ್ಮ ಜೀವನದಲ್ಲಿ ಅನ್ವಯಿಸೋಕೆ ಅವರಿಂದಾಗೋದೆಲ್ಲಾ ಮಾಡ್ತಿರಬೇಕು. ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಬೇಕು ಮತ್ತು ಯೇಸು ಕ್ರಿಸ್ತನ ಸಹೋದರರಿಗೆ ನಿಷ್ಠೆಯಿಂದ ಬೆಂಬಲ ಕೊಡಬೇಕು. (ಯೆಹೆ. 9:4; ಮತ್ತಾ. 25:34-40; ಎಫೆ. 4:22-24; 1 ಪೇತ್ರ 3:21) ಈಗಲಿಂದನೇ ಯಾರು ಹೀಗೆ ಮಾಡ್ತಾ ಮುಂದುವರಿಯುತ್ತಾರೋ ಮತ್ತು ಮಹಾಸಂಕಟದ ಸಮಯದಲ್ಲಿ ಯಾರು ಶುದ್ಧ ಆರಾಧಕರಾಗಿ ಇರ್ತಾರೋ ಅವ್ರಿಗೆ ಮಾತ್ರ ಗುರುತು ಹಾಕಲಾಗುತ್ತೆ. ಅವ್ರು ಮಾತ್ರ ನಾಶನದಿಂದ ಪಾರಾಗ್ತಾರೆ.

18. (ಎ) ಯೇಸು ಕ್ರಿಸ್ತನು ಹೇಗೆ ಮತ್ತು ಯಾವಾಗ ನಂಬಿಗಸ್ತರಿಗೆ ಗುರುತು ಹಾಕ್ತಾನೆ? (ಬಿ) ನಂಬಿಗಸ್ತ ಅಭಿಷಿಕ್ತರಿಗೂ ಗುರುತು ಹಾಕೋ ಅಗತ್ಯ ಇದ್ಯಾ? ವಿವರಿಸಿ.

18 ನಂಬಿಗಸ್ತ ಜನರಿಗೆ ಯೇಸು ಗುರುತು ಹಾಕ್ತಾನೆ. ಯೆಹೆಜ್ಕೇಲನ ಕಾಲದಲ್ಲಿ ದೇವದೂತರು ಈ ಕೆಲಸವನ್ನ ಮಾಡಿದ್ರು. ಆದರೆ ನಮ್ಮ ಕಾಲದಲ್ಲಿ ಕಾರ್ಯದರ್ಶಿಯ ಶಾಯಿಕೊಂಬು ಹಿಡಿದಿರೋ ವ್ಯಕ್ತಿ, ಜನಾಂಗಗಳನ್ನ ತನ್ನ “ಮಹಿಮೆಯಲ್ಲಿ” ನ್ಯಾಯತೀರಿಸಲು ಬರುವ ಯೇಸು ಕ್ರಿಸ್ತನನ್ನ ಸೂಚಿಸುತ್ತಾನೆ. (ಮತ್ತಾ. 25:31-33) ಸುಳ್ಳು ಧರ್ಮಗಳು ನಾಶ ಆದ ಮೇಲೆ ಅಂದ್ರೆ ಮಹಾಸಂಕಟದ ಸಮಯದಲ್ಲಿ ಯೇಸು ಕ್ರಿಸ್ತನು ಹೀಗೆ ಬರ್ತಾನೆ. * ಯೇಸು ಹರ್ಮಗೆದ್ದೋನಿಗೆ ಸ್ವಲ್ಪ ಮುಂಚೆ, ಕುರಿಗಳು ಯಾರು, ಆಡುಗಳು ಯಾರು ಅಂತ ತೀರ್ಪು ಮಾಡ್ತಾನೆ. ಆ ಸಮಯದಲ್ಲಿ ‘ದೊಡ್ಡ ಗುಂಪಿನವ್ರನ್ನ’ ಕುರಿಗಳು ಅಂದ್ರೆ ‘ಶಾಶ್ವತ ಜೀವಕ್ಕೆ’ ಯೋಗ್ಯರು ಅಂತ ಗುರುತು ಹಾಕ್ತಾನೆ. (ಪ್ರಕ. 7:9-14; ಮತ್ತಾ. 25:34-40, 46) ಹಾಗಾದ್ರೆ ನಂಬಿಗಸ್ತ ಅಭಿಷಿಕ್ತರಿಗೂ ಈ ರೀತಿಯ ಗುರುತನ್ನ ಹಾಕಲಾಗುತ್ತಾ? ಇಲ್ಲ. ಯಾಕಂದ್ರೆ ಅವರಿಗೆ ಅದಕ್ಕೆ ಮುಂಚೆನೇ ತಮ್ಮ ಕೊನೆಯ ಮುದ್ರೆ ಸಿಕ್ಕಿರುತ್ತೆ. ಅವ್ರ ಜೀವನದ ಕೊನೆಯಲ್ಲಿ ಅಥ್ವಾ ಮಹಾಸಂಕಟ ಶುರುವಾಗೋದಕ್ಕೆ ಸ್ವಲ್ಪ ಮುಂಚೆ ಹೀಗಾಗುತ್ತೆ. ಆಮೇಲೆ ಹರ್ಮಗೆದ್ದೋನ್‌ ಶುರುವಾಗೋ ಮುಂಚೆ ಯಾವುದೋ ಒಂದು ಸಮಯದಲ್ಲಿ ಅವರನ್ನ ಸ್ವರ್ಗಕ್ಕೆ ಕರ್ಕೊಂಡು ಹೋಗಲಾಗುತ್ತೆ.—ಪ್ರಕ. 7:1-3.

19. ಯೇಸು ಕ್ರಿಸ್ತನು ನ್ಯಾಯತೀರ್ಪನ್ನ ಜಾರಿಗೊಳಿಸಲು ಬರುವಾಗ ಅವನ ಜೊತೆ ಯಾರೆಲ್ಲಾ ಇರ್ತಾರೆ? (“ದುಃಖದ ನಿಟ್ಟುಸಿರು ಬಿಡ್ತಾ ನರಳಾಡೋದು, ಗುರುತು ಹಾಕೋದು, ಜಜ್ಜಿ ಹಾಕೋದು ಯಾವಾಗ ಮತ್ತು ಹೇಗೆ?” ಅನ್ನೋ ಚೌಕ ನೋಡಿ.)

19 ಸ್ವರ್ಗೀಯ ರಾಜನಾಗಿರೋ ಯೇಸು ಕ್ರಿಸ್ತನು ಮತ್ತು ಆತನ ಸ್ವರ್ಗೀಯ ಸೈನ್ಯ ಈ ದುಷ್ಟ ಲೋಕದ ಮೇಲೆ ನ್ಯಾಯತೀರ್ಪನ್ನ ಜಾರಿಗೊಳಿಸ್ತಾರೆ. ಯೆಹೆಜ್ಕೇಲನ ದರ್ಶನದಲ್ಲಿದ್ದ ವ್ಯಕ್ತಿ ಗುರುತನ್ನ ಹಾಕೋ ಕೆಲಸ ಮಾಡಿ ಮುಗಿಸಿದ ನಂತ್ರನೇ ಆ ಆರು ಗಂಡಸರು ನಾಶನವನ್ನ ಶುರು ಮಾಡಿದ್ರು. (ಯೆಹೆ. 9:4-7) ಅದೇ ತರ ಯೇಸು ಎಲ್ಲಾ ದೇಶಗಳ ಜನ್ರಿಗೆ ನ್ಯಾಯ ತೀರಿಸಿ, ಕುರಿಗಳಿಗೆ ಗುರುತನ್ನ ಹಾಕಿದ ನಂತ್ರನೇ ನಾಶನ ಶುರುವಾಗುತ್ತೆ. ಆಮೇಲೆ ಹರ್ಮಗೆದ್ದೋನ್‌ ಯುದ್ಧದ ಸಮಯದಲ್ಲಿ ಯೇಸು ತನ್ನ ಸೈನ್ಯದ ಜೊತೆ ಸೇರಿ ಹೋರಾಡ್ತಾನೆ. ಈ ಸೈನ್ಯದಲ್ಲಿ ಪವಿತ್ರ ದೇವದೂತರು ಮತ್ತು 1,44,000 ಜೊತೆ ರಾಜರು ಇರ್ತಾರೆ. ಅವರೆಲ್ಲರೂ ಈ ಕೆಟ್ಟ ಲೋಕವನ್ನ ಸಂಪೂರ್ಣವಾಗಿ ನಾಶಮಾಡಿ ಶುದ್ಧ ಆರಾಧಕರನ್ನ ನೀತಿಯ ಹೊಸ ಲೋಕಕ್ಕೆ ನಡೆಸ್ತಾರೆ.—ಪ್ರಕ. 16:14-16; 19:11-21.

20. ಶಾಯಿಕೊಂಬನ್ನ ಹಿಡಿದುಕೊಂಡಿರೋ ವ್ಯಕ್ತಿಯ ದರ್ಶನದಿಂದ ನಾವು ಯಾವ ಪಾಠಗಳನ್ನ ಕಲಿತ್ವಿ?

20 ಕಾರ್ಯದರ್ಶಿಯ ಶಾಯಿಕೊಂಬಿನ ದರ್ಶನದಿಂದ ಆಶ್ವಾಸನೆ ಕೊಡುವ ತುಂಬ ಪಾಠಗಳನ್ನ ಕಲಿತ್ವಿ. ಅದಕ್ಕೆ ನಾವು ತುಂಬ ಕೃತಜ್ಞತೆ ಹೇಳಬೇಕಲ್ವಾ? ಯೆಹೋವ ದೇವರು ದುಷ್ಟರನ್ನ ನಾಶಮಾಡುವಾಗ ಒಳ್ಳೆಯವರನ್ನ ನಾಶ ಮಾಡಲ್ಲ ಅನ್ನೋ ದೃಢ ಭರವಸೆ ನಮಗಿದೆ. (ಕೀರ್ತ. 97:10) ನಾಶನವನ್ನ ಪಾರಾಗಬೇಕಂದ್ರೆ ನಾವು ಈಗ ಏನು ಮಾಡಬೇಕು ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಈ ಲೋಕದಲ್ಲಿರೋ ಕೆಟ್ಟ ವಿಷ್ಯಗಳನ್ನ ನೋಡಿ ದುಃಖದ ನಿಟ್ಟುಸಿರು ಬಿಡ್ತಾ ನರಳಾಡ್ತಿರೋ ಜನರಿಗೆ ಸಿಹಿಸುದ್ದಿಯನ್ನ ಮತ್ತು ಎಚ್ಚರಿಕೆಯ ಸಂದೇಶವನ್ನ ಸಾರುತ್ತೇವೆ. ಇದನ್ನ ಮಾಡೋಕಾಗಿ ನಮ್ಮಿಂದಾದಷ್ಟು ಹೆಚ್ಚು ಪ್ರಯತ್ನಿಸುತ್ತೇವೆ. “ಶಾಶ್ವತ ಜೀವ ಪಡೆಯೋ ಯೋಗ್ಯತೆ ಇದ್ದ ಒಳ್ಳೇ ಮನಸ್ಸಿನ” ಜನರಿಗೆ ನಮ್ಮ ಜೊತೆ ಸೇರಿ ಶುದ್ಧ ಆರಾಧನೆ ಮಾಡೋಕೆ ಸಹಾಯ ಮಾಡ್ತೀವಿ. ಆಗ ಅವರು ನಾಶನದಿಂದ ಪಾರಾಗೋಕೆ ಮತ್ತು ದೇವರ ನೀತಿಯಿರೋ ಹೊಸ ಲೋಕಕ್ಕೆ ಹೋಗೋಕೆ ಸಾಧ್ಯ ಆಗುತ್ತೆ.—ಅ. ಕಾ. 13:48.

^ ಪ್ಯಾರ. 1 ದೇವಾಲಯದಲ್ಲಿ ನಡೀತಿದ್ದ ಅಸಹ್ಯ ಕೆಲಸಗಳ ಬಗ್ಗೆ ಇರೋ ಯೆಹೆಜ್ಕೇಲನ ದರ್ಶನವನ್ನ ಈ ಪುಸ್ತಕದ 5 ನೇ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

^ ಪ್ಯಾರ. 13 ಬೈಬಲಿನ ಬಗ್ಗೆ ವಿವರಿಸೋ ಒಂದು ಪುಸ್ತಕ ಹೇಳೋ ಪ್ರಕಾರ, “ಪಾಪ” ಅನ್ನೋದಕ್ಕಿರೋ ಹೀಬ್ರು ನಾಮ ಪದಕ್ಕೆ “ತುಂಬ ನೀಚ ಕೆಲಸ” ಅನ್ನೋ ಅರ್ಥ ಇದೆ. ಇನ್ನೊಂದು ಪುಸ್ತಕದ ಪ್ರಕಾರ, ಈ ಪದವನ್ನ “ಧಾರ್ಮಿಕ ವಿಷಯಗಳ ಬಗ್ಗೆ ತಿಳಿಸುವಾಗ ಬಳಸಲಾಗುತ್ತೆ. ಇದನ್ನ ಹೆಚ್ಚಾಗಿ ಅನೈತಿಕ ವಿಷಯಗಳನ್ನ ಅಥವಾ ದೇವರ ದೃಷ್ಟಿಯಲ್ಲಿ ಕೆಟ್ಟದಾಗಿರೋ ಇನ್ನಿತರ ವಿಷಯಗಳನ್ನ ಸೂಚಿಸಲು ಬಳಸಲಾಗುತ್ತೆ.”

^ ಪ್ಯಾರ. 18 ಮಹಾ ಬಾಬೆಲಿನ ನಾಶನ ಅಂದ್ರೆ ಸುಳ್ಳು ಧರ್ಮಗಳ ಎಲ್ಲಾ ಸದಸ್ಯರ ನಾಶನವನ್ನ ಸೂಚಿಸಲ್ಲ. ಆಗ ಧರ್ಮಗುರುಗಳಲ್ಲಿ ಕೆಲವ್ರು ತಮ್ಮ ಧರ್ಮಗಳನ್ನ ಬಿಟ್ಟುಬಿಡಬಹುದು ಮತ್ತು ತಾವು ಯಾವತ್ತೂ ಅದರ ಸದಸ್ಯರಾಗಿರಲಿಲ್ಲ ಅಂತ ಹೇಳಿಕೊಳ್ಳಬಹುದು.—ಜೆಕ. 13:3-6.