ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 21

“ಆ ಪಟ್ಟಣದ ಹೆಸ್ರು, ‘ಯೆಹೋವ ಅಲ್ಲಿದ್ದಾನೆ’ ಅಂತ ಆಗುತ್ತೆ”

“ಆ ಪಟ್ಟಣದ ಹೆಸ್ರು, ‘ಯೆಹೋವ ಅಲ್ಲಿದ್ದಾನೆ’ ಅಂತ ಆಗುತ್ತೆ”

ಯೆಹೆಜ್ಕೇಲ 48:35

ಮುಖ್ಯ ವಿಷಯ: ಪಟ್ಟಣ ಮತ್ತು ಕಾಣಿಕೆಯಾಗಿರೋ ಪ್ರದೇಶದ ಅರ್ಥ

1, 2. (ಎ) ಒಂದು ಪ್ರದೇಶವನ್ನ ಯಾಕೆ ಪ್ರತ್ಯೇಕವಾಗಿ ಇಡಲಾಯ್ತು? (ಮುಖಪುಟ ಚಿತ್ರ ನೋಡಿ.) (ಬಿ) ಈ ದರ್ಶನದಿಂದ ಕೈದಿಗಳಿಗೆ ಯಾವ ಆಶ್ವಾಸನೆ ಸಿಕ್ತು?

 ಯೆಹೆಜ್ಕೇಲ ತನ್ನ ಕೊನೇ ದರ್ಶನದಲ್ಲಿ ಒಂದು ಜಾಗವನ್ನ ವಿಶೇಷ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ಇಟ್ಟಿದ್ದನ್ನ ನೋಡಿದನು. ಆ ಜಾಗವನ್ನ ಇಸ್ರಾಯೇಲಿನ ಕುಲಗಳಿಗೆ ಆಸ್ತಿಯಾಗಿ ಅಲ್ಲ, ಬದಲಿಗೆ ಯೆಹೋವನಿಗೆ ಕಾಣಿಕೆಯಾಗಿ ಕೊಡಲಾಗಿತ್ತು. ಯೆಹೆಜ್ಕೇಲನು ಒಂದು ವಿಶೇಷವಾದ ಪಟ್ಟಣವನ್ನೂ ನೋಡಿದನು. ಅದಕ್ಕೆ ಒಂದು ವಿಶೇಷವಾದ ಹೆಸ್ರೂ ಇತ್ತು. ಈ ದರ್ಶನದಿಂದ ಕೈದಿಗಳಿಗೆ ತಾವು ತಮ್ಮ ದೇಶಕ್ಕೆ ವಾಪಸ್‌ ಹೋದಾಗ ಯೆಹೋವನು ತಮ್ಮ ಜೊತೆ ಇರ್ತಾನೆ ಅನ್ನೋ ಭರವಸೆ ಮೂಡಿರುತ್ತೆ.

2 ಕಾಣಿಕೆಯಾಗಿ ಕೊಟ್ಟ ಆ ಪ್ರದೇಶದ ಬಗ್ಗೆ ಯೆಹೆಜ್ಕೇಲ ಕೊಟ್ಟ ಮಾಹಿತಿಯನ್ನ ನಾವೀಗ ನೋಡೋಣ. ಯೆಹೋವ ದೇವ್ರ ಶುದ್ಧ ಆರಾಧಕರಾದ ನಮ್ಮೆಲ್ಲರಿಗೂ ಅದ್ರಿಂದ ತುಂಬಾ ಪಾಠಗಳಿವೆ.

‘ಪವಿತ್ರ ಕಾಣಿಕೆಯಲ್ಲಿ ಪಟ್ಟಣನೂ ಒಳಗೂಡಿದೆ’

3. ಯೆಹೋವನಿಗಾಗಿ ಪ್ರತ್ಯೇಕವಾಗಿ ಇಡಲಾದ ಪ್ರದೇಶದ ಐದು ಭಾಗಗಳು ಯಾವುವು? ಈ ಭಾಗಗಳನ್ನ ಯಾವ ಉದ್ದೇಶಕ್ಕಾಗಿ ಉಪಯೋಗಿಸಲಾಗ್ತಿತ್ತು? (“ಕಾಣಿಕೆಯಾಗಿ ಪ್ರತ್ಯೇಕಿಸಬೇಕಾದ ಭಾಗ” ಚೌಕ ನೋಡಿ.)

3 ಕಾಣಿಕೆಗಾಗಿ ಪ್ರತ್ಯೇಕಿಸಲಾದ ಪ್ರದೇಶ ಉತ್ತರದಿಂದ ದಕ್ಷಿಣಕ್ಕೆ 25 ಸಾವಿರ ಮೊಳ (13 ಕಿ.ಮೀ.) ಮತ್ತು ಪೂರ್ವದಿಂದ ಪಶ್ಚಿಮಕ್ಕೆ 25 ಸಾವಿರ ಮೊಳ ಇತ್ತು. ಈ ಚೌಕಾಕಾರದ ಪ್ರದೇಶವನ್ನ “ಕಾಣಿಕೆಯಾಗಿರೋ ಇಡೀ ಪ್ರದೇಶ” ಅಂತ ಕರೆಯಲಾಯ್ತು. ಇದನ್ನ 3 ಭಾಗಗಳಾಗಿ ಮಾಡಲಾಯ್ತು. ಮೇಲಿನ ಭಾಗವನ್ನ ಲೇವಿಯರಿಗಾಗಿ ಮತ್ತು ಮಧ್ಯ ಭಾಗವನ್ನ ದೇವಾಲಯಕ್ಕಾಗಿ ಹಾಗೂ ಪುರೋಹಿತರಿಗಾಗಿ ಪ್ರತ್ಯೇಕಿಸಲಾಯ್ತು. ಈ ಎರಡು ಭಾಗಗಳನ್ನ ಒಟ್ಟಾಗಿ “ಪವಿತ್ರ ಕಾಣಿಕೆ” ಅಂತ ಕರೆಯಲಾಯ್ತು. ಕೆಳಗೆ ಇದ್ದ ಚಿಕ್ಕ ಭಾಗವನ್ನ ಅಥ್ವಾ “ಉಳಿದ ಪ್ರದೇಶವನ್ನ” ಪಟ್ಟಣದ “ಸಾಮಾನ್ಯ ಉಪಯೋಗಕ್ಕಾಗಿ” ಇಡಲಾಯ್ತು.—ಯೆಹೆ. 48:15, 20.

4. ಯೆಹೋವನಿಗೆ ಕಾಣಿಕೆಯಾಗಿ ಕೊಟ್ಟ ಪ್ರದೇಶದ ಬಗ್ಗೆ ಇರೋ ಮಾಹಿತಿಯಿಂದ ನಾವೇನು ಕಲಿಬಹುದು?

4 ಯೆಹೋವನಿಗೆ ಕಾಣಿಕೆಯಾಗಿ ಇಡಲಾದ ಜಾಗದ ವಿಷ್ಯದಿಂದ ನಾವೇನು ಕಲಿಬಹುದು? ಎಲ್ಲಕ್ಕಿಂತ ಮೊದಲು ಒಂದು ಜಾಗವನ್ನ ಕಾಣಿಕೆಯಾಗಿ ಪ್ರತ್ಯೇಕಿಸಬೇಕು ಅಂತ ಯೆಹೋವನು ಹೇಳಿದನು. ಆಮೇಲೆ ಉಳಿದ ಭಾಗವನ್ನ 12 ಕುಲಗಳಿಗೆ ಹಂಚಬೇಕು ಅಂತ ಹೇಳಿದನು. ಹೀಗೆ ಹೇಳೋ ಮೂಲಕ ದೇಶದಲ್ಲಿ ಆರಾಧನೆಗಾಗಿರೋ ಜಾಗಕ್ಕೆ ಜನ್ರು ಬೇರೆ ಎಲ್ಲದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಅಂತ ಸೂಚಿಸಿದನು. (ಯೆಹೆ. 45:1) ಇದ್ರಿಂದ ಬಂಧಿವಾಸಿಗಳಾಗಿದ್ದ ಇಸ್ರಾಯೇಲ್ಯರಿಗೆ ತಮ್ಮ ಜೀವನದಲ್ಲಿ ಯೆಹೋವ ದೇವ್ರ ಆರಾಧನೆಗೆ ಎಲ್ಲಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಅಂತ ಅರ್ಥ ಆಯ್ತು. ಅದೇ ರೀತಿಯಲ್ಲಿ ನಾವು ಕೂಡ ಯೆಹೋವ ದೇವ್ರ ಸೇವೆಗೆ ಅಂದ್ರೆ ಬೈಬಲ್‌ ಬಗ್ಗೆ ಕಲಿಯೋಕೆ, ಕೂಟಗಳಿಗೆ ಹಾಜರಾಗೋಕೆ ಮತ್ತು ಸಿಹಿಸುದ್ದಿ ಸಾರೋಕೆ ನಮ್ಮ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಮೊದಲು ಒಂದು ಜಾಗವನ್ನ ಕಾಣಿಕೆಯಾಗಿ ಪ್ರತ್ಯೇಕಿಸೋ ಮೂಲಕ ಯೆಹೋವನೇ ಇದಕ್ಕೆ ಉತ್ತಮ ಮಾದರಿ ಇಟ್ಟಿದ್ದಾನೆ.

“ಆ ಪ್ರದೇಶದ ಮಧ್ಯ ಪಟ್ಟಣ ಇರುತ್ತೆ”

5, 6. (ಎ) ಆ ಪಟ್ಟಣ ಯಾರಿಗೆ ಸೇರಿತ್ತು? (ಬಿ) ಪಟ್ಟಣ ಯಾವುದನ್ನ ಸೂಚಿಸಲ್ಲ ಮತ್ತು ಯಾಕೆ?

5 ಯೆಹೆಜ್ಕೇಲ 48:15 ಓದಿ. “ಪಟ್ಟಣ” ಮತ್ತು ಅದ್ರ ಸುತ್ತ ಇದ್ದ ಪ್ರದೇಶದ ಪ್ರಾಮುಖ್ಯತೆ ಏನಾಗಿತ್ತು? (ಯೆಹೆ. 48:16-18) ದರ್ಶನದಲ್ಲಿ ಯೆಹೋವನು ಯೆಹೆಜ್ಕೇಲನಿಗೆ “ಪಟ್ಟಣಕ್ಕೆ ಸೇರಿದ ಆಸ್ತಿ . . . ಎಲ್ಲ ಇಸ್ರಾಯೇಲ್ಯರಿಗೆ ಸ್ವಂತವಾಗುತ್ತೆ” ಅಂತ ಹೇಳಿದನು. (ಯೆಹೆ. 45:6, 7) ಪಟ್ಟಣ ಹಾಗೂ ಅದ್ರ ಸುತ್ತ ಇದ್ದ ಪ್ರದೇಶ “ಯೆಹೋವನಿಗೆ ಪ್ರತ್ಯೇಕಿಸಬೇಕಾದ” ‘ಪವಿತ್ರ ಕಾಣಿಕೆಯ’ ಭಾಗ ಆಗಿರಲಿಲ್ಲ ಅನ್ನೋದನ್ನ ಗಮನಿಸಿ. (ಯೆಹೆ. 48:9) ಈ ವಿಷ್ಯವನ್ನ ಮನಸ್ಸಿನಲ್ಲಿಟ್ಟು, ಪಟ್ಟಣದ ಏರ್ಪಾಡಿಂದ ನಾವು ಏನನ್ನ ಕಲಿಬಹುದು ಅಂತ ನೋಡೋಣ.

6 ಪಟ್ಟಣದ ಏರ್ಪಾಡಿಂದ ನಾವು ಪಾಠ ಕಲೀಬೇಕಾದ್ರೆ ಆ ಪಟ್ಟಣ ಏನಲ್ಲ ಅನ್ನೋದನ್ನ ಅರ್ಥ ಮಾಡ್ಕೊಬೇಕು. ಆ ಪಟ್ಟಣ ಪುನಃ ಕಟ್ಟಲಾದ ಯೆರೂಸಲೇಮ್‌ ಪಟ್ಟಣವನ್ನ ಸೂಚಿಸ್ತಾ ಇರಲಿಲ್ಲ. ಯಾಕಂದ್ರೆ ಯೆಹೆಜ್ಕೇಲನು ನೋಡಿದ ದರ್ಶನದಲ್ಲಿರೋ ಪಟ್ಟಣದಲ್ಲಿ ದೇವಾಲಯ ಇರಲಿಲ್ಲ. ಆದ್ರೆ ಯೆರೂಸಲೇಮಿನಲ್ಲಿ ದೇವಾಲಯ ಇತ್ತು. ಆ ಪಟ್ಟಣ ಪುನಃಸ್ಥಾಪಿಸಲಾದ ದೇಶದಲ್ಲಿರೋ ಯಾವ ಪಟ್ಟಣವನ್ನೂ ಸೂಚಿಸ್ತಿರಲಿಲ್ಲ. ಯಾಕಂದ್ರೆ ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ಪಟ್ಟಣವನ್ನ ಬಂಧಿವಾಸದಿಂದ ಬಂದ ಕೈದಿಗಳಾಗಲಿ ಅಥವಾ ಅವ್ರ ನಂತ್ರ ಬಂದ ಬೇರೆ ಯಾರೇ ಆಗಲಿ ಕಟ್ಟಲಿಲ್ಲ. ಆ ಪಟ್ಟಣ ಒಂದು ಸ್ವರ್ಗೀಯ ಪಟ್ಟಣನೂ ಆಗಿರಲಿಲ್ಲ. ಯಾಕಂದ್ರೆ ಆ ಪಟ್ಟಣವನ್ನ “ಸಾಮಾನ್ಯ ಉಪಯೋಗಕ್ಕಾಗಿ” ಪ್ರತ್ಯೇಕಿಸಲಾದ ಜಾಗದಲ್ಲಿ ಕಟ್ಟಲಾಗಿತ್ತೇ ವಿನಃ ದೇವರ ಪವಿತ್ರ ಆರಾಧನೆಗಾಗಿ ಪ್ರತ್ಯೇಕಿಸಲಾದ ಜಾಗದಲ್ಲಿ ಕಟ್ಟಲಿಲ್ಲ.—ಯೆಹೆ. 42:20.

7. ಯೆಹೆಜ್ಕೇಲನು ನೋಡಿದ ಪಟ್ಟಣ ಯಾವುದು? ಅದು ಏನನ್ನ ಸೂಚಿಸುತ್ತೆ? (ಆರಂಭದ ಚಿತ್ರ ನೋಡಿ.)

7 ಹಾಗಾದ್ರೆ ಯೆಹೆಜ್ಕೇಲ ನೋಡಿದ ಆ ಪಟ್ಟಣ ಯಾವ್ದು? ಯೆಹೆಜ್ಕೇಲ ದೇಶದ ಬಗ್ಗೆ ನೋಡಿದ ಅದೇ ದರ್ಶನದಲ್ಲಿ ಪಟ್ಟಣದ ಬಗ್ಗೆನೂ ನೋಡಿದನು ಅನ್ನೋದನ್ನ ನೆನಪಿಸಿಕೊಳ್ಳಿ. (ಯೆಹೆ. 40:2; 45:1, 6) ಆ ದೇಶ ಒಂದು ಆಧ್ಯಾತ್ಮಿಕ ದೇಶವನ್ನ ಸೂಚಿಸುತ್ತೆ ಅಂತ ಬೈಬಲ್‌ ಹೇಳುತ್ತೆ. ಹಾಗಾಗಿ ಆ ಪಟ್ಟಣ ಕೂಡ ಒಂದು ಆಧ್ಯಾತ್ಮಿಕ ಪಟ್ಟಣ ಆಗಿರಬೇಕು. “ಪಟ್ಟಣ” ಅನ್ನೋ ಪದದ ಅರ್ಥ ಏನು? ಜನ ಒಂದು ಗುಂಪಾಗಿ, ಕಾನೂನುಬದ್ಧವಾಗಿ ಮತ್ತು ಸಂಘಟಿತ ರೀತಿಯಲ್ಲಿ ವಾಸಿಸೋದಕ್ಕೆ ಪಟ್ಟಣ ಅಂತ ಹೇಳ್ತಾರೆ. ಹಾಗಾದ್ರೆ ಯೆಹೆಜ್ಕೇಲ ನೋಡಿದ ಆ ಸುಸಂಘಟಿತವಾದ ಪಟ್ಟಣ ಯಾವುದನ್ನ ಸೂಚಿಸುತ್ತೆ? ಚೌಕಾಕಾರದಲ್ಲಿರೋ ಆ ಪಟ್ಟಣ ಸುವ್ಯವಸ್ಥಿತವಾಗಿ ನಡೆಯುವ ಒಂದು ಆಳ್ವಿಕೆಯನ್ನ ಸೂಚಿಸುತ್ತಿರಬಹುದು.

8. ಈ ಪಟ್ಟಣ ಎಲ್ಲಿ ಆಳ್ವಿಕೆ ನಡೆಸುತ್ತೆ ಮತ್ತು ಅದನ್ನ ಹೇಗೆ ಹೇಳಬಹುದು?

8 ಹಾಗಾದ್ರೆ ಇದು ಎಲ್ಲಿ ಆಳ್ವಿಕೆ ನಡೆಸುತ್ತೆ? ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ಹಾಗೆ ಈ ಪಟ್ಟಣವು ಆಧ್ಯಾತ್ಮಿಕ ದೇಶದೊಳಗೆ ಇದ್ದು ದೇವಜನರಿಗೆ ನಿರ್ದೇಶನಗಳನ್ನ ಕೊಡುತ್ತೆ. ಸಾಮಾನ್ಯ ಉಪಯೋಗಕ್ಕಾಗಿರೋ ಜಾಗದಲ್ಲಿ ಇದನ್ನ ಕಟ್ಟಿದ್ರಿಂದ ನಮ್ಗೇನು ಗೊತ್ತಾಗುತ್ತೆ? ಆ ಪಟ್ಟಣ ಸ್ವರ್ಗದಲ್ಲಿ ಅಲ್ಲ, ಬದಲಿಗೆ ಭೂಮಿಯಲ್ಲಿರೋ ಒಂದು ಆಡಳಿತ ವ್ಯವಸ್ಥೆಯನ್ನ ಸೂಚಿಸುತ್ತೆ. ಇದ್ರಿಂದ ಆಧ್ಯಾತ್ಮಿಕ ಪರದೈಸಿನಲ್ಲಿರೋ ಪ್ರತಿಯೊಬ್ಬರು ಪ್ರಯೋಜ್ನ ಪಡೆಯುತ್ತಾರೆ.

9. (ಎ) ಭೂಮಿಯಲ್ಲಿರೋ ಆಡಳಿತದಲ್ಲಿ ಯಾರೆಲ್ಲಾ ಇದ್ದಾರೆ? (ಬಿ) ಸಾವಿರ ವರ್ಷಗಳ ಆಳ್ವಿಕೆಯಲ್ಲಿ ಯೇಸು ಕ್ರಿಸ್ತನು ಏನು ಮಾಡ್ತಾನೆ?

9 ಭೂಮಿಯಲ್ಲಿರೋ ಈ ಆಡಳಿತದಲ್ಲಿ ಯಾರೆಲ್ಲಾ ಇದ್ದಾರೆ? ಆ ಪಟ್ಟಣದ ಆಡಳಿತದ ಮೇಲ್ವಿಚಾರಣೆ ಮಾಡುವವನನ್ನ “ಪ್ರಧಾನ” ಅಂತ ಕರೆಯಲಾಗಿದೆ. (ಯೆಹೆ. 45:7) ಅವನು ಜನ್ರ ಮೇಲ್ವಿಚಾರಕನಾಗಿದ್ದನು. ಪುರೋಹಿತನೋ, ಲೇವಿಯನೋ ಆಗಿರಲಿಲ್ಲ. ಈ ಪ್ರಧಾನನ ಬಗ್ಗೆ ಯೋಚಿಸುವಾಗ ಇವತ್ತು ಸಭೆಯಲ್ಲಿರೋ ಅಭಿಷಿಕ್ತರಲ್ಲದ ಹಿರಿಯರ ನೆನಪಾಗುತ್ತೆ. ಇವ್ರು “ಬೇರೆ ಕುರಿಗಳ” ಭಾಗವಾಗಿದ್ದಾರೆ. (ಯೋಹಾ. 10:16) ಸ್ವರ್ಗದಲ್ಲಿರೋ ಯೇಸು ಕ್ರಿಸ್ತನ ಸರ್ಕಾರದ ಕೆಳಗೆ ಭೂಮಿಯಲ್ಲಿ ದೀನತೆಯಿಂದ ಕೆಲ್ಸ ಮಾಡುವ ಸೇವಕರಾಗಿದ್ದಾರೆ. ಪರದೈಸಿನಲ್ಲಿ ಯೇಸು ಕ್ರಿಸ್ತನು ಅರ್ಹ ಪುರುಷರನ್ನ “ಭೂಮಿಯಲ್ಲೆಲ್ಲ ಅಧಿಕಾರಿಗಳನ್ನಾಗಿ” ಅಂದ್ರೆ ಹಿರಿಯರನ್ನಾಗಿ ನೇಮಿಸ್ತಾನೆ. (ಕೀರ್ತ. 45:16) ಸ್ವರ್ಗೀಯ ರಾಜ್ಯದ ಕೆಳಗೆ ಅವರು ದೇವರ ಜನ್ರ ಎಲ್ಲಾ ಅಗತ್ಯಗಳನ್ನ ಪೂರೈಸ್ತಾರೆ.

“ಯೆಹೋವ ಅಲ್ಲಿದ್ದಾನೆ”

10. ಆ ಪಟ್ಟಣದ ಹೆಸರೇನು? ಮತ್ತು ಅದ್ರಿಂದ ಯಾವ ಆಶ್ವಾಸನೆ ಸಿಗ್ತಿತ್ತು?

10 ಯೆಹೆಜ್ಕೇಲ 48:35 ಓದಿ. ಆ ಪಟ್ಟಣದ ಹೆಸ್ರು “ಯೆಹೋವ ಅಲ್ಲಿದ್ದಾನೆ” ಎಂದಾಗಿತ್ತು. ಇದ್ರಿಂದ ಜನ್ರಿಗೆ ಯೆಹೋವ ದೇವ್ರು ಆ ಪಟ್ಟಣದಲ್ಲಿ ಇರ್ತಾನೆ ಅನ್ನೋ ಆಶ್ವಾಸನೆ ಸಿಕ್ತು. ದೇಶದ ಮಧ್ಯಭಾಗದಲ್ಲಿದ್ದ ಈ ಪಟ್ಟಣವನ್ನ ಯೆಹೋವನು ಯೆಹೆಜ್ಕೇಲನಿಗೆ ತೋರಿಸೋ ಮೂಲಕ ಒಂದರ್ಥದಲ್ಲಿ ಕೈದಿಗಳಿಗೆ ಹೀಗೆ ಹೇಳ್ತಿದ್ದನು: ‘ನಾನು ನಿಮ್ಮೊಂದಿಗೆ ಮತ್ತೆ ಇರ್ತೇನೆ.’ ಇದ್ರಿಂದ ಅವ್ರಿಗೆ ಎಷ್ಟು ಬಲ ಸಿಕ್ಕಿರಬಹುದಲ್ವಾ?

11. ಯೆಹೆಜ್ಕೇಲ ನೋಡಿದ ಪಟ್ಟಣದಿಂದ ಮತ್ತು ಅದರ ಹೆಸರಿನ ಅರ್ಥದಿಂದ ನಾವೇನು ಕಲಿಬಹುದು?

11 ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿ ತಿಳಿಸಲಾಗಿರೋ ಈ ವಿಷಯಗಳಿಂದ ನಾವೇನು ಕಲಿಬಹುದು? ಇವತ್ತು ಯೆಹೋವನು ಭೂಮಿಯಲ್ಲಿರೋ ತನ್ನ ನಂಬಿಗಸ್ತ ಸೇವಕರ ಜೊತೆ ಇದ್ದಾನೆ ಮತ್ತು ಯಾವಾಗ್ಲೂ ಇರ್ತಾನೆ ಅಂತ ಪಟ್ಟಣದ ಹೆಸ್ರಿಂದ ಆಶ್ವಾಸನೆ ಸಿಗುತ್ತೆ. ಈ ಹೆಸ್ರಿಂದ ಇನ್ನೊಂದು ಪ್ರಾಮುಖ್ಯ ಸತ್ಯ ಗೊತ್ತಾಗುತ್ತೆ. ಏನಂದ್ರೆ ಆ ಪಟ್ಟಣದ ಉದ್ದೇಶ ಮನುಷ್ಯನಿಗೆ ಅಧಿಕಾರ ಕೊಡೋದಾಗಿರಲಿಲ್ಲ ಬದಲಿಗೆ ಯೆಹೋವನ ಪ್ರೀತಿಯ ಮತ್ತು ನೀತಿಯ ನಿಯಮಗಳನ್ನ ಜಾರಿಗೊಳಿಸೋದೇ ಆಗಿತ್ತು. ಉದಾಹರಣೆಗೆ ಯೆಹೋವನು ಆ ಪಟ್ಟಣದಲ್ಲಿರೋರಿಗೆ ಅಥ್ವಾ ಆಡಳಿತದಲ್ಲಿರೋರಿಗೆ ಅವ್ರ ಇಷ್ಟಬಂದಂತೆ ದೇಶವನ್ನ ಹಂಚಿಕೊಡೋ ಅಧಿಕಾರವನ್ನ ಕೊಟ್ಟಿರ್ಲಿಲ್ಲ. ಬದಲಿಗೆ ಜಾಗವನ್ನ ಹೇಗೆ ಹಂಚಿಕೊಡಬೇಕು ಅಂತ ಯೆಹೋವನೇ ಹೇಳಿದನು. ಇವತ್ತು ಯೆಹೋವನು ತನ್ನ ಎಲ್ಲಾ ಸೇವಕರಿಗೆ ಸೇವೆ ಮಾಡೋ ಅವಕಾಶ ಕೊಟ್ಟಿದ್ದಾನೆ. “ಬಡವರಿಗೆ” ಅಂದ್ರೆ ಲೋಕ ಯಾರನ್ನ ಕೀಳು ಅಂತ ನೋಡುತ್ತೋ ಅವ್ರಿಗೆ ಸಹ ಸೇವೆ ಮಾಡೋ ಅವಕಾಶ ಕೊಡ್ತಾನೆ. ಜವಾಬ್ದಾರಿ ಸ್ಥಾನದಲ್ಲಿರೋರು ತನ್ನ ನಿರ್ಣಯವನ್ನ ಗೌರವಿಸಬೇಕು ಅಂತ ಆತನು ಬಯಸ್ತಾನೆ.—ಜ್ಞಾನೋ. 19:17; ಯೆಹೆ. 46:18; 48:29.

12. (ಎ) ಈ ಪಟ್ಟಣದ ಒಂದು ವಿಶೇಷತೆ ಏನು? ಅದು ಏನನ್ನ ಸೂಚಿಸುತ್ತೆ? (ಬಿ) ಇದು ಕ್ರೈಸ್ತ ಮೇಲ್ವಿಚಾರಕರಿಗೆ ಏನನ್ನ ನೆನಪಿಸುತ್ತೆ?

12 “ಯೆಹೋವ ಅಲ್ಲಿದ್ದಾನೆ” ಅನ್ನೋ ಪಟ್ಟಣದ ಇನ್ನೊಂದು ವಿಶೇಷತೆ ಏನು? ಸಾಮಾನ್ಯವಾಗಿ ಹಿಂದಿನ ಕಾಲದ ಪಟ್ಟಣದ ಸಂರಕ್ಷಣಾ ಗೋಡೆಗಳಿಗೆ ಕಡಿಮೆ ಬಾಗಿಲುಗಳು ಇರ್ತಿದ್ದವು. ಆದ್ರೆ ದರ್ಶನದಲ್ಲಿದ್ದ ಆ ಪಟ್ಟಣಕ್ಕೆ 12 ಬಾಗಿಲುಗಳಿದ್ವು. (ಯೆಹೆ. 48:30-34) ಚೌಕಾಕಾರದ ಆ ಪಟ್ಟಣದ ಪ್ರತಿಯೊಂದು ಕಡೆಯಲ್ಲೂ 3 ಬಾಗಿಲುಗಳಿದ್ದವು. ಇದ್ರಿಂದ ಏನ್‌ ಗೊತ್ತಾಗುತ್ತೆ ಅಂದ್ರೆ, ದೇವರ ಸೇವಕರೆಲ್ಲರೂ ಯಾವಾಗ ಬೇಕಾದ್ರೂ ಆಡಳಿತಗಾರರ ಹತ್ರ ಹೋಗಬಹುದಿತ್ತು ಮತ್ತು ಆ ಆಡಳಿತಗಾರರು ಅವ್ರಿಗೆ ಸಹಾಯ ಮಾಡೋಕೆ ಯಾವಾಗಲೂ ರೆಡಿಯಾಗಿರುತ್ತಿದ್ರು. ಅಷ್ಟೇ ಅಲ್ಲ, ಆ ಪಟ್ಟಣದ 12 ಬಾಗಿಲುಗಳು ‘ಎಲ್ಲ ಇಸ್ರಾಯೇಲ್ಯರು’ ಅದ್ರೊಳಗೆ ಹೋಗಬಹುದು ಅನ್ನೋದನ್ನ ಸೂಚಿಸ್ತಿತ್ತು. (ಯೆಹೆ. 45:6) ಪಟ್ಟಣದಲ್ಲಿದ್ದ ತುಂಬಾ ಬಾಗಿಲುಗಳು ಕ್ರೈಸ್ತ ಮೇಲ್ವಿಚಾರಕರಿಗೆ ಒಂದು ಪ್ರಾಮುಖ್ಯ ವಿಷಯವನ್ನ ನೆನಪಿಸುತ್ತೆ. ಅದೇನಂದ್ರೆ ಆಧ್ಯಾತ್ಮಿಕ ಪರದೈಸಿನಲ್ಲಿರುವ ಪ್ರತಿಯೊಬ್ಬರು ತಮ್ಮ ಹತ್ರ ಬರೋ ತರ ಹಿರಿಯರು ನಡ್ಕೊಬೇಕು, ಸಹಾಯ ಮಾಡೋಕೆ ಯಾವಾಗ್ಲೂ ರೆಡಿಯಾಗಿರಬೇಕು ಅಂತ ಯೆಹೋವನು ಬಯಸ್ತಾನೆ.

ಕ್ರೈಸ್ತ ಮೇಲ್ವಿಚಾರಕರು ಸಹಾಯ ಮಾಡೋಕೆ ಯಾವಾಗ್ಲೂ ಸಿದ್ಧರಾಗಿರುತ್ತಾರೆ; ಅವರ ಹತ್ರ ಯಾರು ಬೇಕಾದ್ರೂ ಹಿಂಜರಿಕೆ ಇಲ್ಲದೆ ಹೋಗಬಹುದು (ಪ್ಯಾರ 12 ನೋಡಿ)

‘ದೇವಜನರು ಆರಾಧಿಸೋಕೆ ಒಳಗೆ ಬರ್ತಾರೆ ಮತ್ತು ಪಟ್ಟಣಕ್ಕಾಗಿ ಕೆಲಸಮಾಡ್ತಾರೆ’

13. ಜನರು ಮಾಡೋ ಯಾವೆಲ್ಲಾ ಸೇವೆಗಳ ಬಗ್ಗೆ ಯೆಹೋವನು ಹೇಳಿದನು?

13 ನಾವೀಗ ಯೆಹೆಜ್ಕೇಲನ ದಿನಕ್ಕೆ ಹೋಗೋಣ. ದೇಶವನ್ನ ಹಂಚಿ ಕೊಡೋದ್ರ ಬಗ್ಗೆ ಇರೋ ಆ ದರ್ಶನದಲ್ಲಿ ಬೇರೆ ಯಾವೆಲ್ಲಾ ವಿಷ್ಯಗಳನ್ನ ಯೆಹೆಜ್ಕೇಲ ತಿಳಿಸಿದ್ದಾನೆ ಅನ್ನೋದನ್ನ ನೋಡೋಣ. ಅಲ್ಲಿ ಬೇರೆಬೇರೆ ರೀತಿಯ ಸೇವೆಗಳನ್ನ ಮಾಡ್ತಿರೋ ಗುಂಪುಗಳ ಬಗ್ಗೆ ಯೆಹೋವ ದೇವರು ತಿಳಿಸಿದ್ದಾನೆ. ಒಂದು ಗುಂಪಿನಲ್ಲಿ “ಆರಾಧನಾ ಸ್ಥಳದ ಸೇವಕರಾಗಿರೋ” ಪುರೋಹಿತರಿದ್ರು. ಇವ್ರು ಬಲಿಗಳನ್ನ ಅರ್ಪಿಸಿ ಯೆಹೋವ ದೇವ್ರ ಮುಂದೆ ಸೇವೆ ಮಾಡುವವರಾಗಿದ್ದರು. ಇನ್ನೊಂದು ಗುಂಪಿನಲ್ಲಿ ದೇವಾಲಯದಲ್ಲಿ ಸೇವೆ ಮಾಡೋ ಲೇವಿಯರಿದ್ರು. ದೇವಾಲಯದಲ್ಲಿ ‘ನಡಿಬೇಕಾಗಿದ್ದ ಸೇವೆ ಮತ್ತು ಎಲ್ಲಾ ಕೆಲ್ಸಗಳನ್ನ ಅವ್ರು ನೋಡ್ಕೊಬೇಕಾಗಿತ್ತು.’ (ಯೆಹೆ. 44:14-16; 45:4, 5) ಈ ಎರಡು ಗುಂಪಿನವ್ರನ್ನ ಬಿಟ್ಟು ಪಟ್ಟಣದ ಹತ್ರ ಇನ್ನೊಂದು ಗುಂಪಿನವ್ರು ಹುರುಪಿನಿಂದ ಕೆಲಸ ಮಾಡ್ತಿದ್ರು. ಅವ್ರು ಯಾರು?

14. ಪಟ್ಟಣದ ಹತ್ತಿರ ಕೆಲಸ ಮಾಡುವವರ ತರ ಇವತ್ತು ಯಾರಿದ್ದಾರೆ?

14 ಪಟ್ಟಣದ ಹತ್ರ ಕೆಲ್ಸ ಮಾಡೋರು “ಇಸ್ರಾಯೇಲಿನ ಎಲ್ಲಾ ಕುಲಗಳವರಾಗಿದ್ದರು.” ಅವ್ರು ‘ಪಟ್ಟಣಕ್ಕಾಗಿ ಕೆಲ್ಸ ಮಾಡುವವರ’ ಆಹಾರಕ್ಕಾಗಿ ಬೆಳೆ ಬೆಳೀತಿದ್ರು. ಹೀಗೆ ಅವ್ರಿಗೆ ಬೆಂಬಲ ಕೊಡ್ತಿದ್ರು. (ಯೆಹೆ. 48:18, 19) ಇಂಥದ್ದೇ ಒಂದು ಏರ್ಪಾಡು ಇವತ್ತೂ ಇದೆ. ಆಧ್ಯಾತ್ಮಿಕ ಪರದೈಸಿನಲ್ಲಿ ಇರೋ ನಮ್ಮೆಲ್ಲರಿಗೂ ಕ್ರಿಸ್ತನ ಅಭಿಷಿಕ್ತ ಸಹೋದರರಿಗೆ ಮತ್ತು ‘ದೊಡ್ಡ ಗುಂಪಿನ’ ಭಾಗವಾಗಿರೋ ಮೇಲ್ವಿಚಾರಕರಿಗೆ ಬೆಂಬಲ ಕೊಡೋ ಅವಕಾಶ ಇದೆ. ಈ ಮೇಲ್ವಿಚಾರಕರನ್ನ ಯೆಹೋವನೇ ನೇಮಿಸಿದ್ದಾನೆ. (ಪ್ರಕ. 7:9, 10) ಇವ್ರಿಗೆ ಬೆಂಬಲ ಕೊಡೋ ಮುಖ್ಯ ವಿಧಾನ ನಂಬಿಗಸ್ತ ಆಳು ಕೊಡೋ ಮಾರ್ಗದರ್ಶನವನ್ನ ಸಂತೋಷದಿಂದ ಪಾಲಿಸೋದೇ ಆಗಿದೆ.

15, 16. (ಎ) ಯೆಹೆಜ್ಕೇಲನ ದರ್ಶನದಲ್ಲಿ ಇನ್ನೂ ಯಾವ ವಿಷಯವನ್ನ ತಿಳಿಸಲಾಗಿದೆ? (ಬಿ) ಯಾವ ರೀತಿಯ ಸೇವೆಗಳನ್ನ ಮಾಡೋ ಅವಕಾಶ ನಮಗಿದೆ?

15 ಯೆಹೆಜ್ಕೇಲನ ದರ್ಶನದಲ್ಲಿರೋ ಇನ್ನೊಂದು ವಿಷ್ಯದಿಂದ ನಾವು ನಮ್ಮ ಸೇವೆ ಬಗ್ಗೆ ಒಂದು ಪಾಠವನ್ನ ಕಲಿತೇವೆ. ಅದು ಯಾವುದು? ಇಸ್ರಾಯೇಲಿನ 12 ಕುಲಗಳವ್ರು ಎರಡು ಸ್ಥಳಗಳಲ್ಲಿ ಸೇವೆ ಮಾಡೋದ್ರ ಬಗ್ಗೆ ಯೆಹೋವನು ತಿಳಿಸಿದನು. ಒಂದು, ದೇವಾಲಯದ ಅಂಗಳದಲ್ಲಿ. ಇನ್ನೊಂದು ಪಟ್ಟಣದ ಹುಲ್ಲುಗಾವಲಿನಲ್ಲಿ. ದೇವಾಲಯದ ಅಂಗಳದಲ್ಲಿ ಎಲ್ಲಾ ಕುಲಗಳವ್ರು ಯೆಹೋವನಿಗೆ ಬಲಿಗಳನ್ನ ಅರ್ಪಿಸೋ ಮೂಲಕ ಆತನನ್ನ ‘ಆರಾಧಿಸೋಕೆ ಒಳಗೆ ಬರ್ತಿದ್ರು.’ (ಯೆಹೆ. 46:9, 24) ಪಟ್ಟಣಕ್ಕೆ ಸೇರಿದ್ದ ಪ್ರದೇಶದಲ್ಲಿ 12 ಕುಲಗಳವ್ರು ಬೆಳೆಗಳನ್ನ ಬೆಳೆಯೋ ಮೂಲಕ ಪಟ್ಟಣಕ್ಕೆ ಬೆಂಬಲ ಕೊಡ್ತಿದ್ರು. ಈ ಕೆಲ್ಸಗಾರರ ಉದಾಹರಣೆಯಿಂದ ನಾವೇನು ಕಲಿಬಹುದು?

16 ಯೆಹೆಜ್ಕೇಲನ ದರ್ಶನದಲ್ಲಿ ನೋಡಿದ ಹಾಗೆ ಇವತ್ತು ದೊಡ್ಡ ಗುಂಪಿನವ್ರಿಗೂ ಯೆಹೋವ ದೇವರ ಸೇವೆ ಮಾಡೋಕೆ ಅನೇಕ ಅವಕಾಶಗಳಿವೆ. ಅವರು ಯೆಹೋವ “ದೇವರ ಆಲಯದಲ್ಲಿ” ಸ್ತುತಿಗಳೆಂಬ ಬಲಿಯನ್ನು ಅರ್ಪಿಸೋ ಮೂಲಕ ಆತನನ್ನ ಆರಾಧಿಸ್ತಾರೆ. (ಪ್ರಕ. 7:9-15) ಸಾರೋದು, ಕೂಟಗಳಲ್ಲಿ ಉತ್ರ ಕೊಡೋದು ಈ ಸ್ತುತಿಯಲ್ಲಿ ಸೇರಿದೆ. ಯೆಹೋವ ದೇವರ ಆರಾಧನೆ ಮಾಡೋದೇ ತಮ್ಮ ಮುಖ್ಯ ಜವಾಬ್ದಾರಿ ಅಂತ ಅವ್ರು ನಂಬ್ತಾರೆ. (1 ಪೂರ್ವ. 16:29) ದೇವಜನ್ರಲ್ಲಿ ಕೆಲವ್ರು ಇನ್ನೂ ಅನೇಕ ರೀತಿಲಿ ದೇವ್ರ ಸಂಘಟನೆಯನ್ನ ಬೆಂಬಲಿಸ್ತಾ ಇದ್ದಾರೆ. ಉದಾಹರಣೆಗೆ, ರಾಜ್ಯ ಸಭಾಗೃಹ ಮತ್ತು ಬ್ರಾಂಚ್‌ ಆಫೀಸಿನ ನಿರ್ಮಾಣ ಮತ್ತು ರಿಪೇರಿ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಂಘಟನೆಯ ಬೇರೆ ಪ್ರಾಜೆಕ್ಟ್‌ಗಳಲ್ಲೂ ಇವ್ರು ಕೈಜೋಡಿಸ್ತಾರೆ. ಇನ್ನು ಕೆಲವ್ರು ಕಾಣಿಕೆಗಳನ್ನ ಕೊಡೋ ಮೂಲಕ ಈ ಕೆಲಸಗಳಿಗೆ ಬೆಂಬಲ ಕೊಡ್ತಿದ್ದಾರೆ. ಹೀಗೆ ಅವ್ರು ‘ದೇವರಿಗೆ ಗೌರವ ತರಲಿಕ್ಕಾಗಿ’ ಆಧ್ಯಾತ್ಮಿಕ ದೇಶದಲ್ಲಿ ಬೆಳೆಯನ್ನ ಬೆಳೆಸ್ತಾ ಇದ್ದಾರೆ. (1 ಕೊರಿಂ. 10:31) ತಾವು ಮಾಡೋ ಈ ಕೆಲ್ಸದಿಂದ “ದೇವರಿಗೆ ತುಂಬಾ ಖುಷಿ ಆಗುತ್ತೆ” ಅಂತ ಅವ್ರಿಗೆ ಗೊತ್ತಿರೋದ್ರಿಂದ ಇದನ್ನ ಹುರುಪು, ಹುಮ್ಮಸ್ಸು ಮತ್ತು ಹರುಷದಿಂದ ಮಾಡ್ತಿದ್ದಾರೆ. (ಇಬ್ರಿ. 13:16) ನೀವು ಸಹ ಇಂಥಾ ಸೇವೆಯನ್ನ ಸಂತೋಷದಿಂದ ಮಾಡ್ತಿದ್ದೀರಾ?

ಪಟ್ಟಣದಲ್ಲಿ ಮತ್ತು ಪಟ್ಟಣದ ಸುತ್ತಮುತ್ತ ನಡಿತಿದ್ದ ಕೆಲಸಗಳ ಬಗ್ಗೆ ಯೆಹೆಜ್ಕೇಲ ಕೊಟ್ಟ ವಿವರಣೆಯಿಂದ ನಾವೇನು ಕಲಿಬಹುದು? (ಪ್ಯಾರ 14-16 ನೋಡಿ)

“ನಾವು ಹೊಸ ಆಕಾಶಕ್ಕಾಗಿ, ಹೊಸ ಭೂಮಿಗಾಗಿ ಕಾಯ್ತಾ ಇದ್ದೀವಿ”

17. (ಎ) ಬಲುಬೇಗನೆ ಯೆಹೆಜ್ಕೇಲನ ದರ್ಶನ ಹೇಗೆ ಮಹತ್ತಾದ ರೀತಿಯಲ್ಲಿ ನೆರವೇರಲಿದೆ? (ಬಿ) ಸಾವಿರ ವರ್ಷದ ಆಳ್ವಿಕೆಯಲ್ಲಿ ಪಟ್ಟಣ ಅಥವಾ ಆಡಳಿತ ಮಾಡುವವರು ಯಾರಿಗೆ ಸಹಾಯ ಮಾಡ್ತಾರೆ?

17 ಬಲು ಬೇಗನೆ ಕಾಣಿಕೆ ಬಗ್ಗೆ ಯೆಹೆಜ್ಕೇಲನು ನೋಡಿದ ದರ್ಶನ ಮಹತ್ತಾದ ರೀತಿಯಲ್ಲಿ ನೆರವೇರೋದನ್ನ ನೋಡ್ತೇವೆ. ಇದನ್ನ ಗಮನಿಸಿ: “ಪವಿತ್ರ ಕಾಣಿಕೆ” ಅನ್ನೋ ಹೆಸ್ರಿರೋ ಭೂಭಾಗ ದೇಶದ ಮಧ್ಯದಲ್ಲಿ ಇರೋದನ್ನ ಯೆಹೆಜ್ಕೇಲ ನೋಡಿದನು. (ಯೆಹೆ. 48:10) ಅದೇ ರೀತಿ ಹರ್ಮಗೆದ್ದೋನಿನ ನಂತ್ರ ನಾವು ಭೂಮಿಯಲ್ಲಿ ಎಲ್ಲೇ ಜೀವಿಸಲಿ ಯೆಹೋವನು ನಮ್ಮ ಜೊತೆ ಇರ್ತಾನೆ. (ಪ್ರಕ. 21:3) ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಆ ಪಟ್ಟಣ, ಅಂದ್ರೆ ಆಡಳಿತ ಮಾಡೋರು ಇಡೀ ಭೂಮಿ ಮೇಲೆ ಕೆಲ್ಸ ಮಾಡ್ತಾರೆ. ಇವ್ರು ದೇವಜನರನ್ನ ನೋಡಿಕೊಳ್ಳೋಕೆ ಭೂಮಿಯಲ್ಲಿರೋ ಮೇಲ್ವಿಚಾರಕರಾಗಿದ್ದಾರೆ. ಅವ್ರು ‘ಹೊಸ ಭೂಮಿಗೆ’ ಅಂದ್ರೆ ಯೆಹೋವನಿಗೆ ಮೆಚ್ಚಿಕೆಯಾಗಿರೋ ಜನ್ರಿಗೆ ಪ್ರೀತಿಯಿಂದ ನಿರ್ದೇಶನಗಳನ್ನ ಕೊಟ್ಟು ಸಹಾಯ ಮಾಡ್ತಾರೆ.—2 ಪೇತ್ರ 3:13.

18. (ಎ) ಪಟ್ಟಣ ಅಥವಾ ಭೂಮಿಯಲ್ಲಿ ಆಡಳಿತ ಮಾಡುವವರು ದೇವರ ಸರ್ಕಾರದ ನಿರ್ದೇಶನಗಳನ್ನ ಪಾಲಿಸ್ತಾರೆ ಅಂತ ಹೇಗೆ ಹೇಳಬಹುದು? (ಬಿ) ಪಟ್ಟಣದ ಹೆಸರಿನಿಂದ ನಮಗೆ ಯಾವ ಭರವಸೆ ಸಿಗುತ್ತೆ?

18 ಪಟ್ಟಣ ಅಥವಾ ಆಡಳಿತಗಾರರು ದೇವರ ಸಂಘಟನೆಯಿಂದ ಬರೋ ಎಲ್ಲಾ ನಿರ್ದೇಶನಗಳನ್ನ ಪಾಲಿಸ್ತಾರೆ ಅಂತ ಹೇಗೆ ಹೇಳಬಹುದು? ಹೇಗಂದ್ರೆ ಭೂಮಿಯಲ್ಲಿರೋ 12 ಬಾಗಿಲುಗಳಿರೋ ಪಟ್ಟಣ, ಸ್ವರ್ಗದಲ್ಲಿರೋ 12 ಬಾಗಿಲುಗಳಿರೋ ಹೊಸ ಯೆರೂಸಲೇಮನ್ನ ಹೋಲುತ್ತೆ ಅಂತ ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತೆ. ಈ ‘ಹೊಸ ಯೆರೂಸಲೇಮಿನಲ್ಲಿ’ ಯೇಸು ಕ್ರಿಸ್ತನ 1,44,000 ಮಂದಿ ಒಳಗೂಡಿದ್ದಾರೆ. (ಪ್ರಕ. 21:2, 12, 21-27) ಭೂಮಿಯಲ್ಲಿ ಆಡಳಿತ ಮಾಡುವವರು ಸ್ವರ್ಗದಲ್ಲಿರೋ ಈ ಸರ್ಕಾರದ ನಿರ್ದೇಶನಗಳ ಹೊಂದಿಕೆಯಲ್ಲಿ ಕೆಲ್ಸ ಮಾಡುತ್ತಾರೆ ಮತ್ತು ಅದರ ನಿರ್ದೇಶನಗಳನ್ನ ಚಾಚೂತಪ್ಪದೇ ಪಾಲಿಸುತ್ತಾರೆ ಅಂತ ಈ ಹೋಲಿಕೆಯಿಂದ ಗೊತ್ತಾಗುತ್ತೆ. “ಯೆಹೋವ ಅಲ್ಲಿದ್ದಾನೆ” ಅನ್ನೋ ಪಟ್ಟಣದ ಹೆಸ್ರಿಂದ ಪರದೈಸಿನಲ್ಲಿ ಶುದ್ಧ ಆರಾಧನೆ ಎಂದೆಂದೂ ನಡೆಯುತ್ತಿರುತ್ತೆ ಅನ್ನೋ ಭರವಸೆ ನಮ್ಮಲ್ಲಿ ಮೂಡುತ್ತೆ.