ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 23

ದೀಕ್ಷಾಸ್ನಾನ: ಒಂದು ಒಳ್ಳೇ ಗುರಿ!

ದೀಕ್ಷಾಸ್ನಾನ: ಒಂದು ಒಳ್ಳೇ ಗುರಿ!

ಒಬ್ಬ ವ್ಯಕ್ತಿ ಕ್ರೈಸ್ತನಾಗಬೇಕಾದ್ರೆ ದೀಕ್ಷಾಸ್ನಾನ ಪಡೆದುಕೊಳ್ಳಬೇಕು ಅಂತ ಯೇಸು ಹೇಳಿದನು. (ಮತ್ತಾಯ 28:19, 20 ಓದಿ.) ದೀಕ್ಷಾಸ್ನಾನ ಅಂದರೆ ಏನು? ಒಬ್ಬ ವ್ಯಕ್ತಿಗೆ ದೀಕ್ಷಾಸ್ನಾನ ಆಗಬೇಕಂದ್ರೆ ಏನೆಲ್ಲಾ ಮಾಡಬೇಕು?

1. ದೀಕ್ಷಾಸ್ನಾನ ಅಂದರೆ ಏನು?

“ದೀಕ್ಷಾಸ್ನಾನ” ಅನ್ನೋ ಪದ ನೀರಿನಲ್ಲಿ “ಮುಳುಗುವುದು” ಅನ್ನೋ ಅರ್ಥವಿರುವ ಗ್ರೀಕ್‌ ಪದದಿಂದ ಬಂದಿದೆ. ಯೋರ್ದನ್‌ ನದಿಯಲ್ಲಿ ಯೋಹಾನ ಯೇಸುವನ್ನ ದೀಕ್ಷಾಸ್ನಾನ ಮಾಡಿಸಿದಾಗ ಆತನನ್ನ ನೀರಿನಲ್ಲಿ ಮುಳುಗಿಸಿದ. ಆಮೇಲೆ ‘ಯೇಸು ನೀರಿಂದ ಮೇಲೆ ಬಂದನು.’ (ಮಾರ್ಕ 1:9, 10) ನಿಜ ಕ್ರೈಸ್ತರನ್ನ ಸಹ ದೀಕ್ಷಾಸ್ನಾನದ ಸಮಯದಲ್ಲಿ ನೀರಿನಲ್ಲಿ ಪೂರ್ತಿ ಮುಳುಗಿಸಿ ಎಬ್ಬಿಸಲಾಗುತ್ತೆ.

2. ದೀಕ್ಷಾಸ್ನಾನ ಪಡೆದುಕೊಳ್ಳುವುದು ಏನನ್ನ ಸೂಚಿಸುತ್ತೆ?

ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆದುಕೊಳ್ಳುವಾಗ ಯೆಹೋವ ದೇವರಿಗೆ ಸಮರ್ಪಿಸಿಕೊಂಡಿದ್ದಾನೆ ಅಂತ ಎಲ್ಲರಿಗೆ ತೋರಿಸಿಕೊಡ್ತಾನೆ. ಹಾಗಾಗಿ ಅವನು ದೀಕ್ಷಾಸ್ನಾನ ಪಡೆದುಕೊಳ್ಳೋ ಮುಂಚೆನೇ ಸಮರ್ಪಣೆ ಮಾಡಿಕೊಂಡಿರಬೇಕು. ಸಮರ್ಪಣೆ ಅಂದ್ರೆ ಏನು? ‘ಯೆಹೋವನೇ, ಯಾವಾಗಲೂ ನಿನ್ನನ್ನ ಮಾತ್ರ ಆರಾಧಿಸುತ್ತೇನೆ, ನಿನ್ನ ಸೇವೆ ಮಾಡುತ್ತೇನೆ, ಜೀವನದಲ್ಲಿ ಬೇರೆ ಎಲ್ಲದಕ್ಕಿಂತ ಮುಖ್ಯವಾಗಿ ನಿನ್ನ ಇಷ್ಟದ ಪ್ರಕಾರ ನಡೆಯುತ್ತೇನೆ’ ಅಂತ ಆತನಿಗೆ ಪ್ರಾರ್ಥನೆಯಲ್ಲಿ ಮಾತು ಕೊಡೋದೇ ಸಮರ್ಪಣೆ. ಅಷ್ಟೇ ಅಲ್ಲ ಅವನು ‘ತನಗೋಸ್ಕರ ಜೀವಿಸದೆ’ ಯೇಸುವಿನ ಬೋಧನೆಯನ್ನ, ಮಾದರಿಯನ್ನ ಅನುಕರಿಸುತ್ತಾ ಇರೋಕೆ ನಿರ್ಣಯಿಸ್ತಾನೆ. (ಮತ್ತಾಯ 16:24) ಸಮರ್ಪಣೆ ಮತ್ತು ದೀಕ್ಷಾಸ್ನಾನ ಯೆಹೋವನ ಜೊತೆ ಮತ್ತು ಸಹೋದರ ಸಹೋದರಿಯರ ಜೊತೆ ಆಪ್ತ ಸ್ನೇಹವನ್ನ ಬೆಳೆಸಿಕೊಳ್ಳೋಕೆ ಸಹಾಯ ಮಾಡುತ್ತೆ.

3. ದೀಕ್ಷಾಸ್ನಾನ ಪಡೆದುಕೊಳ್ಳಬೇಕಾದ್ರೆ ನಾವೇನು ಮಾಡಬೇಕು?

ಯೆಹೋವ ದೇವರ ಬಗ್ಗೆ ಕಲಿಯಬೇಕು ಮತ್ತು ಆತನ ಮೇಲೆ ನಂಬಿಕೆಯನ್ನ ಬೆಳೆಸಿಕೊಳ್ಳಬೇಕು. (ಇಬ್ರಿಯ 11:6 ಓದಿ.) ನೀವು ಎಷ್ಟು ಹೆಚ್ಚು ಯೆಹೋವ ದೇವರ ಬಗ್ಗೆ ಕಲಿಯುತ್ತೀರೋ ಅಷ್ಟು ಹೆಚ್ಚು ಆತನನ್ನ ಪ್ರೀತಿಸ್ತೀರ. ಅಷ್ಟೇ ಅಲ್ಲ, ನೀವು ಕಲಿತ ವಿಷಯಗಳ ಬಗ್ಗೆ ಬೇರೆಯವರ ಹತ್ತಿರ ಹೇಳುತ್ತೀರ ಮತ್ತು ಕಲಿತ ವಿಷಯಗಳ ಪ್ರಕಾರ ಜೀವನ ಮಾಡುತ್ತೀರ. (2 ತಿಮೊತಿ 4:2; 1 ಯೋಹಾನ 5:3) ಒಬ್ಬ ವ್ಯಕ್ತಿ ಯೆಹೋವನಿಗೆ ಇಷ್ಟ ಆಗೋ ತರ ಮತ್ತು ‘ಆತನನ್ನು ಖುಷಿಪಡಿಸುವ ತರ’ ನಡೆದುಕೊಳ್ಳುತ್ತಾ ಇದ್ದರೆ ಅವನು ತನ್ನ ಜೀವನವನ್ನ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಳ್ಳುವ ನಿರ್ಧಾರ ಮಾಡಬಹುದು.—ಕೊಲೊಸ್ಸೆ 1:9, 10. a

ಹೆಚ್ಚನ್ನ ತಿಳಿಯೋಣ

ಯೇಸುವಿನ ದೀಕ್ಷಾಸ್ನಾನದಿಂದ ನಾವೇನು ಕಲಿಯಬಹುದು ಮತ್ತು ಒಬ್ಬ ವ್ಯಕ್ತಿ ಈ ಮುಖ್ಯ ಹೆಜ್ಜೆಯನ್ನ ತಗೊಳೋಕೆ ಏನೆಲ್ಲಾ ಮಾಡಬೇಕು ಅಂತ ಕಲಿಯಿರಿ.

4. ಯೇಸುವಿನ ದೀಕ್ಷಾಸ್ನಾನದಿಂದ ಕಲಿಯಿರಿ

ಯೇಸುವಿನ ದೀಕ್ಷಾಸ್ನಾನದ ಬಗ್ಗೆ ಹೆಚ್ಚನ್ನ ಕಲಿಯಲು ಮತ್ತಾಯ 3:13-17 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ದೀಕ್ಷಾಸ್ನಾನ ಆದಾಗ ಯೇಸು ಪುಟ್ಟ ಮಗುವಾಗಿದ್ದನಾ?

  • ಆತನು ಹೇಗೆ ದೀಕ್ಷಾಸ್ನಾನ ಪಡೆದುಕೊಂಡನು? ಆತನ ತಲೆ ಮೇಲೆ ಕೇವಲ ನೀರನ್ನ ಚಿಮುಕಿಸಲಾಯ್ತಾ? ನಿಮಗೇನು ಅನಿಸುತ್ತೆ?

ಯೇಸು ದೀಕ್ಷಾಸ್ನಾನ ಪಡೆದುಕೊಂಡ ನಂತರ ಯೆಹೋವ ದೇವರು ಕೊಟ್ಟ ಕೆಲಸವನ್ನ ಮಾಡೋಕೆ ಶುರು ಮಾಡಿದನು. ಲೂಕ 3:21-23 ಮತ್ತು ಯೋಹಾನ 6:38 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ದೀಕ್ಷಾಸ್ನಾನ ಆದಮೇಲೆ ಯೇಸು ಯಾವ ಕೆಲಸಕ್ಕೆ ತುಂಬ ಪ್ರಾಮುಖ್ಯತೆ ಕೊಟ್ಟನು?

5. ನೀವೂ ದೀಕ್ಷಾಸ್ನಾನ ಪಡೆದುಕೊಳ್ಳಬಹುದು

‘ಸಮರ್ಪಣೆ, ದೀಕ್ಷಾಸ್ನಾನ ಇದೆಲ್ಲಾ ನನ್ನಿಂದ ಆಗಲ್ಲ’ ಅಂತ ಮೊದಮೊದಲು ನಿಮಗೆ ಅನಿಸಬಹುದು. ಆದ್ರೆ ನೀವು ಯೆಹೋವ ದೇವರ ಬಗ್ಗೆ ಹೆಚ್ಚನ್ನ ತಿಳಿದುಕೊಳ್ಳುತ್ತಾ ಹೋದಂತೆ ಈ ನಿರ್ಣಯ ಮಾಡೋಕೆ ಸುಲಭ ಆಗುತ್ತೆ. ಈ ರೀತಿ ಮಾಡಿರೋ ಕೆಲವರ ಬಗ್ಗೆ ತಿಳಿಯಲು ವಿಡಿಯೋ ನೋಡಿ.

ಯೋಹಾನ 17:3 ಮತ್ತು ಯಾಕೋಬ 1:5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮುಂಚೆ ಏನೆಲ್ಲಾ ಮಾಡಬೇಕು?

  1. ‘ಯಾವಾಗಲೂ ನಿನ್ನ ಸೇವೆ ಮಾಡ್ತೇನೆ’ ಅಂತ ಯೆಹೋವನಿಗೆ ಮಾತು ಕೊಡುವುದೇ ಸಮರ್ಪಣೆಯಾಗಿದೆ

  2. ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ನಮ್ಮನ್ನ ಯೆಹೋವನಿಗೆ ಸಮರ್ಪಿಸಿಕೊಂಡಿದ್ದೇವೆ ಅಂತ ಎಲ್ಲರಿಗೆ ತೋರಿಸಿಕೊಡುತ್ತೇವೆ

6. ದೀಕ್ಷಾಸ್ನಾನ ಪಡೆದುಕೊಂಡಾಗ ನಾವು ಯೆಹೋವನ ಕುಟುಂಬದ ಭಾಗ ಆಗುತ್ತೇವೆ

ನಾವು ದೀಕ್ಷಾಸ್ನಾನ ಪಡೆದುಕೊಂಡಾಗ ಲೋಕವ್ಯಾಪಕವಾಗಿರುವ ಯೆಹೋವನ ಕುಟುಂಬದಲ್ಲಿ ಒಬ್ಬರಾಗುತ್ತೇವೆ. ನಮ್ಮ ಮಧ್ಯ ಪ್ರೀತಿ, ಐಕ್ಯತೆ ಇದೆ. ಬೇರೆಬೇರೆ ಕಡೆಗಳಿಂದ, ಹಿನ್ನೆಲೆಯಿಂದ ಬಂದಿದ್ರೂ ನಮ್ಮ ನಂಬಿಕೆ ಒಂದೇ ಆಗಿರುತ್ತೆ ಮತ್ತು ನಾವೆಲ್ಲರೂ ಬೈಬಲಿನಲ್ಲಿರುವ ನೀತಿನಿಯಮಗಳ ಪ್ರಕಾರ ನಡೆಯುತ್ತೇವೆ. ಕೀರ್ತನೆ 25:14 ಮತ್ತು 1 ಪೇತ್ರ 2:17 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ದೀಕ್ಷಾಸ್ನಾನ ಪಡೆದುಕೊಳ್ಳೋದ್ರಿಂದ ಯೆಹೋವನ ಜೊತೆ ಮತ್ತು ಸಹೋದರ ಸಹೋದರಿಯರ ಜೊತೆ ನಮ್ಮ ಸಂಬಂಧ ಹೇಗಿರುತ್ತೆ?

ಕೆಲವರು ಹೀಗಂತಾರೆ: “ನಾನು ದೀಕ್ಷಾಸ್ನಾನ ಪಡೆದುಕೊಳ್ಳೋಕೆ ರೆಡಿ ಇಲ್ಲ.”

  • ನಿಮಗೂ ಹಾಗೆ ಅನಿಸಿದ್ರೆ ದೀಕ್ಷಾಸ್ನಾನವನ್ನ ಒಂದು ಗುರಿಯಾಗಿ ಇಟ್ಟುಕೊಳ್ಳೋದು ಯಾಕೆ ಒಳ್ಳೇದು?

ನಾವೇನು ಕಲಿತ್ವಿ

ಕ್ರೈಸ್ತರೆಲ್ಲರೂ ದೀಕ್ಷಾಸ್ನಾನ ಪಡೆದುಕೊಳ್ಳಬೇಕು ಅಂತ ಯೇಸು ಹೇಳಿದನು. ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆದುಕೊಳ್ಳಬೇಕಾದ್ರೆ ಯೆಹೋವನ ಮೇಲೆ ಬಲವಾದ ನಂಬಿಕೆಯನ್ನ ಬೆಳೆಸಿಕೊಳ್ಳಬೇಕು ಮತ್ತು ಆತನ ನೀತಿನಿಯಮಗಳ ಪ್ರಕಾರ ಜೀವನ ಮಾಡಬೇಕು. ಅಷ್ಟೇ ಅಲ್ಲ, ಆತನಿಗೆ ಸಮರ್ಪಣೆ ಮಾಡಿಕೊಳ್ಳಬೇಕು.

ನೆನಪಿದೆಯಾ

  • ದೀಕ್ಷಾಸ್ನಾನ ಅಂದರೆ ಏನು? ಅದು ಯಾಕೆ ತುಂಬ ಮುಖ್ಯ?

  • ದೀಕ್ಷಾಸ್ನಾನಕ್ಕೆ ಮುಂಚೆ ಯಾಕೆ ಸಮರ್ಪಣೆ ಮಾಡಿಕೊಳ್ಳಬೇಕು?

  • ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ಮುಂಚೆ ಏನೆಲ್ಲಾ ಮಾಡಬೇಕು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ದೀಕ್ಷಾಸ್ನಾನ ಅಂದರೆ ಏನು ಮತ್ತು ಏನಲ್ಲ ಅಂತ ತಿಳಿಯಿರಿ.

“ದೀಕ್ಷಾಸ್ನಾನ (ಬ್ಯಾಪ್ಟಿಸಮ್‌) ಅಂದರೆ ಏನು?” (jw.org ಲೇಖನ)

ದೀಕ್ಷಾಸ್ನಾನಕ್ಕೆ ತಯಾರಾಗಲು ಏನೆಲ್ಲಾ ಮಾಡಬೇಕು ಅಂತ ತಿಳಿಯಿರಿ.

“ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಿ, ದೀಕ್ಷಾಸ್ನಾನ ಪಡ್ಕೊಳ್ಳಿ” (ಕಾವಲಿನಬುರುಜು, ಮಾರ್ಚ್‌ 2020)

ದೀಕ್ಷಾಸ್ನಾನ ಪಡೆದುಕೊಳ್ಳೋಕೆ ಒಬ್ಬ ವ್ಯಕ್ತಿಗೆ ಯಾವುದು ಸಹಾಯ ಮಾಡಿತು ಅಂತ ತಿಳಿಯಿರಿ.

“ಸತ್ಯ ಏನಂತ ನಾನೇ ಕಂಡುಹಿಡಿಯೋಕೆ ಅವರು ಪ್ರೋತ್ಸಾಹ ಮಾಡಿದರು” (ಕಾವಲಿನಬುರುಜು ಲೇಖನ)

ದೀಕ್ಷಾಸ್ನಾನ ಒಂದು ಒಳ್ಳೇ ಗುರಿಯಾಗಿದೆ ಯಾಕೆ, ಮತ್ತು ಅದಕ್ಕಾಗಿ ಹೇಗೆ ತಯಾರಿ ಮಾಡಬಹುದು ಅಂತ ತಿಳಿಯಿರಿ.

“ನಾನು ದೀಕ್ಷಾಸ್ನಾನ ತಗೊಬೇಕಾ?” (jw.org ಲೇಖನ)

a ಒಬ್ಬ ವ್ಯಕ್ತಿ ಬೇರೆ ಧರ್ಮದಲ್ಲಿ ದೀಕ್ಷಾಸ್ನಾನ ಪಡೆದಿದ್ರೂ ಅವನು ಮತ್ತೆ ದೀಕ್ಷಾಸ್ನಾನ ಪಡೆದುಕೊಳ್ಳಬೇಕು. ಯಾಕಂದ್ರೆ ಆ ಧರ್ಮಗಳು ಬೈಬಲಿನಲ್ಲಿರುವ ಸತ್ಯಗಳನ್ನ ಕಲಿಸಿರಲ್ಲ.—ಅಪೊಸ್ತಲರ ಕಾರ್ಯ 19:1-5 ಮತ್ತು ಪಾಠ 13 ನೋಡಿ.