ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 35

ಒಳ್ಳೇ ತೀರ್ಮಾನಗಳನ್ನ ಮಾಡೋದು ಹೇಗೆ?

ಒಳ್ಳೇ ತೀರ್ಮಾನಗಳನ್ನ ಮಾಡೋದು ಹೇಗೆ?

ನಾವೆಲ್ಲರೂ ತೀರ್ಮಾನಗಳನ್ನ ಮಾಡಬೇಕಾಗುತ್ತೆ. ಉದಾಹರಣೆಗೆ, ಜೀವನ ನಡೆಸೋದು ಹೇಗೆ? ಹಣ ಸಂಪಾದಿಸೋದು ಹೇಗೆ? ಅಥವಾ ಮದುವೆ ಆಗಬೇಕಾ ಬೇಡ್ವಾ? ಅನ್ನೋ ತೀರ್ಮಾನಗಳನ್ನ ಮಾಡಬೇಕಾಗುತ್ತೆ. ಕೆಲವು ತೀರ್ಮಾನಗಳಿಂದ ನಮಗೆ ಒಳ್ಳೇದಾಗುತ್ತೆ ಅಥವಾ ಕೆಟ್ಟದಾಗುತ್ತೆ. ಈ ತೀರ್ಮಾನಗಳು ಯೆಹೋವ ದೇವರ ಜೊತೆ ನಮಗಿರೋ ಸಂಬಂಧದ ಮೇಲೆ ಪರಿಣಾಮ ಬೀರುತ್ತೆ. ನಾವು ಒಳ್ಳೇ ತೀರ್ಮಾನಗಳನ್ನ ಮಾಡಿದ್ರೆ ಖುಷಿಯಾಗಿರುತ್ತೇವೆ ಮತ್ತು ಯೆಹೋವನ ಮನಸ್ಸನ್ನೂ ಖುಷಿಪಡಿಸ್ತೇವೆ.

1. ಒಳ್ಳೇ ತೀರ್ಮಾನಗಳನ್ನ ಮಾಡಲು ಬೈಬಲ್‌ ನಮಗೆ ಹೇಗೆ ಸಹಾಯ ಮಾಡುತ್ತೆ?

ಒಂದು ತೀರ್ಮಾನವನ್ನ ಮಾಡುವ ಮೊದಲು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಬೇಕು. ನಂತರ ಅದರ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ನೋಡಬೇಕು. (ಜ್ಞಾನೋಕ್ತಿ 2:3-6 ಓದಿ.) ಯೆಹೋವನು ಕೆಲವೊಂದು ವಿಷಯಗಳ ಬಗ್ಗೆ ಬೈಬಲಿನಲ್ಲಿ ನೇರವಾದ ನಿಯಮಗಳನ್ನ ಕೊಟ್ಟಿದ್ದಾನೆ. ಆ ನಿಯಮಗಳನ್ನ ಪಾಲಿಸಿದ್ರೆ ನಮಗೆ ಒಳ್ಳೇದಾಗುತ್ತೆ.

ಒಂದುವೇಳೆ ಒಂದು ವಿಷಯದ ಬಗ್ಗೆ ಬೈಬಲಿನಲ್ಲಿ ನೇರವಾದ ನಿಯಮ ಇಲ್ಲ ಅಂದರೆ ಏನು ಮಾಡ್ತೀರ? ಆಗ್ಲೂ ‘ನಾವು ಯಾವ ದಾರಿಯಲ್ಲಿ ನಡೆಯಬೇಕಂತ’ ಯೆಹೋವ ದೇವರು ನಮ್ಮನ್ನ ಮಾರ್ಗದರ್ಶಿಸ್ತಾನೆ. (ಯೆಶಾಯ 48:17) ಹೇಗೆ? ಇಂಥ ಸಮಯದಲ್ಲಿ ಸರಿಯಾದ ತೀರ್ಮಾನಗಳನ್ನ ಮಾಡಲು ಬೈಬಲ್‌ ತತ್ವಗಳು ನಮಗೆ ಸಹಾಯ ಮಾಡ್ತವೆ. ತತ್ವಗಳು ಅಂದರೆ ಏನು? ದೇವರ ಯೋಚನೆ ಮತ್ತು ಭಾವನೆಗಳನ್ನ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಮೂಲಭೂತ ಸತ್ಯಗಳೇ ತತ್ವಗಳು. ಉದಾಹರಣೆಗೆ, ಒಂದು ವಿಷಯದ ಬಗ್ಗೆ ದೇವರಿಗೆ ಹೇಗನಿಸುತ್ತೆ ಅಂತ ಬೈಬಲಿನ ಒಂದು ವಚನ ಅಥವಾ ಘಟನೆಯನ್ನ ಓದಿದಾಗ ಗೊತ್ತಾಗುತ್ತೆ. ಯೆಹೋವ ದೇವರ ಅನಿಸಿಕೆ ನಮಗೆ ಗೊತ್ತಾದರೆ ನಮ್ಮ ಜೀವನದಲ್ಲಿ ಆತನಿಗೆ ಇಷ್ಟವಾಗುವ ತೀರ್ಮಾನಗಳನ್ನ ಮಾಡಲು ಆಗುತ್ತೆ.

2. ತೀರ್ಮಾನಗಳನ್ನ ತೆಗೆದುಕೊಳ್ಳುವ ಮುಂಚೆ ನೀವು ಯಾವೆಲ್ಲಾ ವಿಷಯಗಳನ್ನ ಮನಸ್ಸಿನಲ್ಲಿಡಬೇಕು?

“ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 14:15) ಇದರ ಅರ್ಥ ನಾವು ಒಂದು ತೀರ್ಮಾನವನ್ನ ಮಾಡುವುದಕ್ಕಿಂತ ಮುಂಚೆ ನಮ್ಮ ಹತ್ತಿರ ಯಾವೆಲ್ಲಾ ಆಯ್ಕೆಗಳಿವೆ ಅಂತ ಯೋಚಿಸಬೇಕು. ಪ್ರತಿಯೊಂದು ಆಯ್ಕೆಗಳ ಬಗ್ಗೆ ಯೋಚಿಸುವಾಗ ಹೀಗೆ ಕೇಳಿಕೊಳ್ಳಿ: ‘ಇದಕ್ಕೆ ಯಾವ ಬೈಬಲ್‌ ತತ್ವವನ್ನ ಅನ್ವಯಿಸಬಹುದು? ಯಾವ ಆಯ್ಕೆ ಸರಿಯಾಗಿದೆ? ನಾನು ಮಾಡುವ ಆಯ್ಕೆಯಿಂದ ಬೇರೆಯವರಿಗೆ ಒಳ್ಳೇದಾಗುತ್ತಾ ಅಥವಾ ಕೆಟ್ಟದಾಗುತ್ತಾ? ಎಲ್ಲಕ್ಕಿಂತ ಹೆಚ್ಚಾಗಿ, ನಾನು ಮಾಡುವ ಆಯ್ಕೆಯಿಂದ ಯೆಹೋವ ದೇವರಿಗೆ ಖುಷಿಯಾಗುತ್ತಾ?’—ಧರ್ಮೋಪದೇಶಕಾಂಡ 32:29.

ಯಾವುದು ಒಳ್ಳೇದು ಮತ್ತು ಕೆಟ್ಟದ್ದು ಅಂತ ಹೇಳುವ ಅಧಿಕಾರ ಇರೋದು ಯೆಹೋವ ದೇವರಿಗೆ ಮಾತ್ರ. ಆತನ ನಿಯಮಗಳ ಬಗ್ಗೆ, ತತ್ವಗಳ ಬಗ್ಗೆ ಚೆನ್ನಾಗಿ ಕಲಿತು ಅದರಂತೆ ನಡೆಯಲು ತೀರ್ಮಾನ ಮಾಡುವಾಗ ನಾವು ಒಳ್ಳೇ ಮನಸ್ಸಾಕ್ಷಿಯನ್ನ ಬೆಳೆಸಿಕೊಳ್ಳುತ್ತೇವೆ. ಅದು ನಮಗೆ ಯಾವುದು ಸರಿ, ಯಾವುದು ತಪ್ಪು ಅಂತ ತಿಳಿಸುತ್ತೆ. (ರೋಮನ್ನರಿಗೆ 2:14, 15) ನಮ್ಮ ಮನಸ್ಸಾಕ್ಷಿಗೆ ಒಳ್ಳೇ ತರಬೇತಿ ಕೊಟ್ಟರೆ ಅದು ನಮಗೆ ಸರಿಯಾದ ತೀರ್ಮಾನಗಳನ್ನ ಮಾಡಲು ಸಹಾಯ ಮಾಡುತ್ತೆ.

ಹೆಚ್ಚನ್ನ ತಿಳಿಯೋಣ

ಬೈಬಲ್‌ ತತ್ವಗಳು ಮತ್ತು ನಮ್ಮ ಮನಸ್ಸಾಕ್ಷಿ ಹೇಗೆ ಒಳ್ಳೇ ತೀರ್ಮಾನಗಳನ್ನ ತೆಗೆದುಕೊಳ್ಳೋಕೆ ಸಹಾಯ ಮಾಡುತ್ತೆ ಅಂತ ತಿಳಿಯಿರಿ.

3. ಬೈಬಲ್‌ ನಮಗೆ ಸಹಾಯ ಮಾಡುತ್ತೆ

ತೀರ್ಮಾನಗಳನ್ನ ತೆಗೆದುಕೊಳ್ಳಲು ಬೈಬಲ್‌ ತತ್ವಗಳು ನಮಗೆ ಹೇಗೆ ಸಹಾಯ ಮಾಡುತ್ತೆ? ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

  • ಯೆಹೋವನು ನಮಗೆ ಯಾವ ಸ್ವಾತಂತ್ರ್ಯ ಕೊಟ್ಟಿದ್ದಾನೆ?

  • ಯೆಹೋವ ದೇವರು ನಮಗೆ ಯಾಕೆ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಾನೆ?

  • ನಮ್ಮ ಇಚ್ಛಾಸ್ವಾತಂತ್ರ್ಯವನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಯೆಹೋವ ದೇವರು ಯಾವೆಲ್ಲಾ ವಿಷಯಗಳನ್ನ ಕೊಟ್ಟಿದ್ದಾನೆ?

ಉದಾಹರಣೆಗೆ, ನಾವೊಂದು ಬೈಬಲ್‌ ತತ್ವವನ್ನ ನೋಡೋಣ. ಎಫೆಸ 5:15, 16 ಓದಿ, ನಂತರ ಕೆಳಗೆ ಕೊಡಲಾಗಿರುವ ‘ಮುಖ್ಯವಾದ ವಿಷಯಗಳಿಗೆ ಹೇಗೆ ಸಮಯ ಕೊಡಬಹುದು’ ಅಂತ ಚರ್ಚಿಸಿ.

  • ಬೈಬಲನ್ನ ಪ್ರತಿದಿನ ಓದಲು

  • ಒಳ್ಳೇ ಗಂಡ/ಹೆಂಡತಿ, ಅಪ್ಪ/ಅಮ್ಮ, ಮಗ/ಮಗಳು ಆಗಲು

  • ಕೂಟಗಳಿಗೆ ಹೋಗಲು

4. ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಿ

ಒಂದು ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಬೈಬಲಿನಲ್ಲಿ ನೇರವಾದ ನಿಯಮಗಳು ಇರೋದಾದ್ರೆ ಅದನ್ನ ಮಾಡೋದು ತುಂಬ ಸುಲಭ. ಆದರೆ ನೇರವಾದ ನಿಯಮಗಳು ಇಲ್ಲದಿದ್ದರೆ ಏನು ಮಾಡಬೇಕು? ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ತನ್ನ ಮನಸ್ಸಾಕ್ಷಿಗೆ ತರಬೇತಿ ಕೊಡಲು ಮತ್ತು ಯೆಹೋವನಿಗೆ ಇಷ್ಟವಾಗುವ ತೀರ್ಮಾನಗಳನ್ನ ಮಾಡಲು ವಿಡಿಯೋದಲ್ಲಿದ್ದ ಸಹೋದರಿ ಏನೆಲ್ಲಾ ಮಾಡಿದ್ರು?

ನಾವು ಮಾಡಬೇಕಾದ ತೀರ್ಮಾನಗಳನ್ನ ಬೇರೆಯವರು ನಮಗಾಗಿ ಮಾಡುವಂತೆ ಕೇಳಿಕೊಳ್ಳಬಾರದು ಯಾಕೆ? ಇಬ್ರಿಯ 5:14 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನಮಗಾಗಿ ತೀರ್ಮಾನವನ್ನ ತೆಗೆದುಕೊಳ್ಳುವಂತೆ ಬೇರೆಯವರನ್ನ ಕೇಳೋದು ತುಂಬನೇ ಸುಲಭ. ಆದರೆ ತೀರ್ಮಾನ ತೆಗೆದುಕೊಳ್ಳುವ ಪ್ರೌಢತೆಯನ್ನ (ಸಾಮರ್ಥ್ಯ) ನಾವೇ ಬೆಳೆಸಿಕೊಳ್ಳಬೇಕು ಯಾಕೆ?

  • ವಿಡಿಯೋದಲ್ಲಿ ನೋಡಿದ ಹಾಗೆ ಒಳ್ಳೇ ತೀರ್ಮಾನ ತೆಗೆದುಕೊಳ್ಳೋಕೆ ನಮಗೆ ಯಾವೆಲ್ಲಾ ವಿಷಯಗಳು ಸಹಾಯ ಮಾಡುತ್ತೆ?

ನಮ್ಮ ಮನಸ್ಸಾಕ್ಷಿ ಒಂದು ಮ್ಯಾಪ್‌ ಇದ್ದಂತೆ, ಒಂದು ಒಳ್ಳೇ ತೀರ್ಮಾನವನ್ನ ತೆಗೆದುಕೊಳ್ಳಲು ಅದು ನಮಗೆ ಸಹಾಯ ಮಾಡುತ್ತೆ

5. ಬೇರೆಯವರ ಮನಸ್ಸಾಕ್ಷಿಯನ್ನ ಗೌರವಿಸಿ

ಜನರು ತಮಗೆ ಇಷ್ಟವಾಗುವ ತೀರ್ಮಾನಗಳನ್ನ ಮಾಡುತ್ತಾರೆ. ಎಲ್ಲರು ಮಾಡುವ ತೀರ್ಮಾನಗಳು ಒಂದೇ ತರ ಇರಲ್ಲ. ನಾವು ಬೇರೆಯವರ ನಿರ್ಧಾರಗಳನ್ನ ಗೌರವಿಸುತ್ತೇವೆ ಅಂತ ಹೇಗೆ ತೋರಿಸಬಹುದು? ಎರಡು ಸನ್ನಿವೇಶಗಳನ್ನ ನೋಡೋಣ:

ಸನ್ನಿವೇಶ 1: ಒಬ್ಬ ಸಹೋದರಿಗೆ ಮೇಕಪ್‌ ಮಾಡಿಕೊಳ್ಳೋದು ಅಂದ್ರೆ ತುಂಬ ಇಷ್ಟ. ಈಗ ಅವರ ಸಭೆ ಬದಲಾಗಿದೆ. ಅಲ್ಲಿರುವ ಹೆಚ್ಚಿನ ಸಹೋದರಿಯರಿಗೆ ಮೇಕಪ್‌ ಮಾಡಿಕೊಳ್ಳೋದು ಇಷ್ಟ ಆಗಲ್ಲ.

ರೋಮನ್ನರಿಗೆ 15:1 ಮತ್ತು 1 ಕೊರಿಂಥ 10:23, 24 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಈ ವಚನಗಳ ಆಧಾರದ ಮೇಲೆ ಆ ಸಹೋದರಿ ಯಾವ ತೀರ್ಮಾನವನ್ನ ತೆಗೆದುಕೊಳ್ಳಬಹುದು? ನಿಮ್ಮ ಮನಸ್ಸಾಕ್ಷಿ ಒಪ್ಪುವ ಕೆಲವು ವಿಷಯಗಳನ್ನ ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿ ಒಪ್ಪಲ್ಲ ಅಂತ ನೆನಸಿ. ಅಂಥವರ ಜೊತೆ ಇದ್ದಾಗ ನೀವೇನು ಮಾಡ್ತೀರಾ?

ಸನ್ನಿವೇಶ 2: ಮಿತವಾದ ಮದ್ಯಪಾನ ತಪ್ಪಲ್ಲ ಅಂತ ಒಬ್ಬ ಸಹೋದರನಿಗೆ ಗೊತ್ತು. ಆದರೂ ಅವನು ಕುಡಿಯಲ್ಲ ಅಂತ ತೀರ್ಮಾನ ಮಾಡ್ತಾನೆ. ಒಬ್ಬ ಸಹೋದರ ಅವನನ್ನ ಊಟಕ್ಕೆ ಕರೆಯುತ್ತಾನೆ. ಅಲ್ಲಿ ಕೆಲವು ಸಹೋದರರು ಮದ್ಯ ಕುಡಿಯೋದನ್ನ ಅವನು ನೋಡ್ತಾನೆ.

ಪ್ರಸಂಗಿ 7:16 ಮತ್ತು ರೋಮನ್ನರಿಗೆ 14:1, 10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಈ ವಚನಗಳ ಆಧಾರದ ಮೇಲೆ ಆ ಸಹೋದರ ಯಾವ ತೀರ್ಮಾನವನ್ನ ತೆಗೆದುಕೊಳ್ಳಬಹುದು? ನಿಮ್ಮ ಮನಸ್ಸಾಕ್ಷಿ ಮಾಡಬಾರದು ಅಂತ ಹೇಳುವ ವಿಷಯಗಳನ್ನ ಒಬ್ಬ ವ್ಯಕ್ತಿ ಮಾಡೋದನ್ನ ನೋಡಿದ್ರೆ ಏನು ಮಾಡ್ತೀರಾ?

 ಒಳ್ಳೇ ತೀರ್ಮಾನಗಳನ್ನ ಮಾಡಲು ಸಲಹೆಗಳು:

1. ಸಹಾಯಕ್ಕಾಗಿ ಯೆಹೋವನ ಹತ್ತಿರ ಕೇಳಿ.ಯಾಕೋಬ 1:5.

2. ಸಂಶೋಧನೆ ಮಾಡಿ ತತ್ವಗಳನ್ನ ಹುಡುಕಲು ಬೈಬಲ್‌ ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನ ನೋಡಿ. ಜೊತೆಗೆ ಅನುಭವ ಇರುವ ಸಹೋದರ ಸಹೋದರಿಯರ ಸಲಹೆಗಳನ್ನ ಕೇಳಿ.

3. ಪರಿಣಾಮದ ಬಗ್ಗೆ ಯೋಚಿಸಿ ‘ನಾನು ತೆಗೆದುಕೊಳ್ಳುವ ನಿರ್ಧಾರದಿಂದ ನನ್ನ ಮತ್ತು ಬೇರೆಯವರ ಮನಸ್ಸಾಕ್ಷಿಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ’ ಅಂತ ಯೋಚಿಸಿ.

ಕೆಲವರು ಹೀಗಂತಾರೆ: “ನಿಮಗೆ ಏನು ಇಷ್ಟನೋ ಅದನ್ನೇ ಮಾಡಿ, ಬೇರೆಯವರು ಏನು ಅಂದುಕೊಳ್ಳುತ್ತಾರೆ ಅಂತ ತಲೆಕೆಡಿಸಿಕೊಳ್ಳಬೇಡಿ.”

  • ಒಂದು ತೀರ್ಮಾನ ತೆಗೆದುಕೊಳ್ಳುವಾಗ ದೇವರಿಗೆ ಮತ್ತು ಬೇರೆಯವರಿಗೆ ಹೇಗನಿಸುತ್ತೆ ಅಂತ ಯಾಕೆ ಯೋಚನೆ ಮಾಡಬೇಕು?

ನಾವೇನು ಕಲಿತ್ವಿ

ಒಂದು ವಿಷಯದ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಮತ್ತು ಬೇರೆಯವರ ಭಾವನೆಗಳ ಮೇಲೆ ಯಾವ ಪರಿಣಾಮ ಬೀರುತ್ತೆ ಅಂತ ಯೋಚಿಸುವಾಗ ನಾವು ಒಳ್ಳೇ ತೀರ್ಮಾನಗಳನ್ನ ಮಾಡುತ್ತೇವೆ.

ನೆನಪಿದೆಯಾ

  • ಯೆಹೋವ ದೇವರಿಗೆ ಇಷ್ಟವಾಗುವ ತೀರ್ಮಾನಗಳನ್ನ ಹೇಗೆ ತೆಗೆದುಕೊಳ್ಳಬಹುದು?

  • ನಿಮ್ಮ ಮನಸ್ಸಾಕ್ಷಿಗೆ ಹೇಗೆ ತರಬೇತಿ ಕೊಡಬಹುದು?

  • ಬೇರೆಯವರ ಮನಸ್ಸಾಕ್ಷಿಯನ್ನ ಗೌರವಿಸುತ್ತೇವೆ ಅಂತ ಹೇಗೆ ತೋರಿಸಬಹುದು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಯೆಹೋವನ ಜೊತೆ ನಿಮ್ಮ ಸ್ನೇಹವನ್ನ ಬಲಪಡಿಸುವ ತೀರ್ಮಾನಗಳನ್ನ ನೀವು ಹೇಗೆ ಮಾಡಬಹುದು?

“ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ” (ಕಾವಲಿನಬುರುಜು, ಏಪ್ರಿಲ್‌ 15, 2011)

ಯೆಹೋವ ದೇವರು ನಮಗೆ ಹೇಗೆಲ್ಲಾ ಸಲಹೆಗಳನ್ನ ಕೊಡುತ್ತಾನೆ ಅನ್ನೋದರ ಬಗ್ಗೆ ಹೆಚ್ಚು ಕಲಿಯಿರಿ.

ಯೆಹೋವನು ತನ್ನ ಜನರನ್ನ ಮಾರ್ಗದರ್ಶಿಸುತ್ತಾನೆ (9:50)

ಒಬ್ಬ ವ್ಯಕ್ತಿಗೆ ಕಷ್ಟಕರವಾದ ತೀರ್ಮಾನಗಳನ್ನ ತೆಗೆದುಕೊಳ್ಳಲು ಯಾವುದೆಲ್ಲಾ ಸಹಾಯ ಮಾಡಿತು ಅಂತ ನೋಡಿ.

ಯೆಹೋವ ಆಶೀರ್ವಾದಗಳನ್ನ ಕೊಡೋದು ಗ್ಯಾರಂಟಿ (5:46)

ನೇರವಾದ ನಿಯಮ ಇಲ್ಲದಿದ್ದಾಗ ಯೆಹೋವನು ಮೆಚ್ಚುವ ಒಂದು ತೀರ್ಮಾನವನ್ನ ತೆಗೆದುಕೊಳ್ಳಲು ಏನು ಮಾಡಬೇಕು ಅಂತ ನೋಡಿ.

“ನಿಮಗೆ ಯಾವಾಗಲೂ ಒಂದು ಬೈಬಲ್‌ ಆಜ್ಞೆಯ ಅಗತ್ಯವಿದೆಯೋ?” (ಕಾವಲಿನಬುರುಜು, ಡಿಸೆಂಬರ್‌ 1, 2003)