ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿಯಿಂದ ಒಂದು ಪತ್ರ

ಆಡಳಿತ ಮಂಡಲಿಯಿಂದ ಒಂದು ಪತ್ರ

ಪ್ರೀತಿಯ ಸಹೋದರ ಸಹೋದರಿಯರೇ,

ನಾವು ಯೆಹೋವ ದೇವರನ್ನ ಮತ್ತು ಜನರನ್ನ ತುಂಬ ಪ್ರೀತಿಸ್ತೀವಿ. ಅದಕ್ಕೇ ‘ಎಲ್ಲ ದೇಶದ ಜನ್ರಿಗೆ ಶಿಷ್ಯರಾಗೋಕೆ ಕಲಿಸ್ತೀವಿ, ದೀಕ್ಷಾಸ್ನಾನ ಮಾಡಿಸ್ತೀವಿ.’ (ಮತ್ತಾ. 28:19, 20; ಮಾರ್ಕ 12:28-31) ಇಂಥ ನಿಸ್ವಾರ್ಥ ಪ್ರೀತಿಗೆ ತುಂಬ ಶಕ್ತಿ ಇದೆ. ಯಾಕಂದ್ರೆ “ಶಾಶ್ವತ ಜೀವ ಪಡೆಯೋ ಯೋಗ್ಯತೆ” ಇರೋ ಜನರ ಮನಸ್ಸನ್ನ ಮುಟ್ಟೋಕೆ ಇದು ಸಹಾಯ ಮಾಡುತ್ತೆ.—ಅ. ಕಾ. 13:48.

ಈ ಮುಂಚೆ ನಮ್ಮ ಗಮನ, ನಿರೂಪಣೆಗಳನ್ನ ಬಾಯಿಪಾಠ ಮಾಡಿ ಜನರಿಗೆ ಹೇಳೋದ್ರ ಮೇಲೆ, ಯಾವುದಾದ್ರೂ ಒಂದು ಪ್ರಕಾಶನ ಕೊಡೋದ್ರ ಮೇಲೆ ಇತ್ತು. ಆದ್ರೆ ಈಗ ನಾವು ಜನರ ಜೊತೆ ಚೆನ್ನಾಗಿ ಮಾತಾಡೋದು ಹೇಗೆ ಅಂತ ಕಲಿಬೇಕು. ಅವ್ರಿಗೆ ಏನ್‌ ಇಷ್ಟಾನೋ ಅದ್ರ ಬಗ್ಗೆನೇ ಮಾತಾಡ್ತಾ ನಮಗೆ ಅವರ ಮೇಲೆ ಪ್ರೀತಿ ಇದೆ ಅಂತ ತೋರಿಸ್ಕೊಡಬೇಕು. ಇದನ್ನ ಮಾಡೋಕೆ, ‘ಒಬ್ಬೊಬ್ರಿಗೂ ಏನ್‌ ಚಿಂತೆ ಇದೆ, ಅವ್ರಿಗೆ ಏನಿಷ್ಟ’ ಅಂತ ತಿಳ್ಕೊಂಡು ಅದಕ್ಕೆ ತಕ್ಕ ಹಾಗೆ ನಮ್ಮ ಮಾತನ್ನ ಹೊಂದಿಸ್ಕೊಬೇಕು. ಇದಕ್ಕೆ ಈ ಕಿರುಹೊತ್ತಗೆ ಹೇಗೆ ಸಹಾಯ ಮಾಡುತ್ತೆ?

ಈ ಕಿರುಹೊತ್ತಗೆಯಲ್ಲಿ 12 ಪಾಠಗಳಿವೆ. ಪ್ರತಿಯೊಂದು ಪಾಠನೂ ಒಂದೊಂದು ಗುಣದ ಬಗ್ಗೆ ತಿಳಿಸುತ್ತೆ. ಈ ಗುಣ ಜನ್ರನ್ನ ಪ್ರೀತಿಸೋಕೆ ಮತ್ತು ಬೈಬಲ್‌ ಸತ್ಯಗಳನ್ನ ಅವ್ರಿಗೆ ಕಲಿಸೋಕೆ ಸಹಾಯ ಮಾಡುತ್ತೆ. ಪ್ರತಿಯೊಂದು ಪಾಠದಲ್ಲೂ ಯೇಸು ಮತ್ತು ಒಂದನೇ ಶತಮಾನದ ಆತನ ಶಿಷ್ಯರು ಸೇವೆಯಲ್ಲಿ ಈ ಗುಣಗಳನ್ನ ಹೇಗೆ ತೋರಿಸಿದ್ರು ಅಂತ ಕಲಿತೀವಿ. ಈ ಕಿರುಹೊತ್ತಗೆ ನಿರೂಪಣೆಗಳನ್ನ ಬಾಯಿಪಾಠ ಮಾಡೋಕಲ್ಲ, ಬದಲಿಗೆ ಜನ್ರಿಗೆ ಪ್ರೀತಿ ತೋರಿಸಿ ಅವರ ಮನಸ್ಸು ಮುಟ್ಟೋಕೆ ಸಹಾಯ ಮಾಡುತ್ತೆ. ಬೇರೆಬೇರೆ ತರದ ಸೇವೆ ಮಾಡುವಾಗ ನಾವು ಈ ಎಲ್ಲ ಗುಣಗಳನ್ನ ತೋರಿಸಲೇಬೇಕು ನಿಜ, ಆದ್ರೆ ಸಂಭಾಷಣೆ ಶುರುಮಾಡೋಕೆ, ಮತ್ತೆ ಜನ್ರನ್ನ ಭೇಟಿ ಮಾಡೋಕೆ ಮತ್ತು ಬೈಬಲ್‌ ಅಧ್ಯಯನ ಮಾಡೋಕೆ ಕೆಲವು ಗುಣಗಳನ್ನ ತೋರಿಸೋದು ಯಾಕೆ ತುಂಬಾನೇ ಮುಖ್ಯ ಅಂತ ಇದ್ರಲ್ಲಿ ತಿಳ್ಕೊಳ್ತೀವಿ.

ಪ್ರತಿ ಪಾಠ ಓದುವಾಗ ಈ ಗುಣಗಳನ್ನ ನಮ್ಮ ಸುತ್ತಮುತ್ತ ಇರೋ ಜನರ ಹತ್ರ ಮಾತಾಡುವಾಗ ಹೇಗೆ ತೋರಿಸಬಹುದು ಅಂತ ಯೋಚ್ನೆ ಮಾಡಿ. ಯೆಹೋವ ದೇವರ ಮೇಲೆ ಮತ್ತು ಜನರ ಮೇಲೆ ಇರೋ ಪ್ರೀತಿಯನ್ನ ಜಾಸ್ತಿ ಮಾಡ್ಕೊಳ್ಳಿ. ಜನ್ರಿಗೆ ಶಿಷ್ಯರಾಗೋಕೆ ಕಲಿಸೋ ನಮ್ಮ ಗುರಿಯನ್ನ ಮುಟ್ಟೋಕೆ ಬೇರೆ ಯಾವುದೇ ಕೌಶಲಕ್ಕಿಂತ ಪ್ರೀತಿ ತೋರಿಸೋದು ತುಂಬ ಮುಖ್ಯ.

ಹೆಗಲಿಗೆ ಹೆಗಲು ಕೊಟ್ಟು ನಿಮ್ಮ ಜೊತೆ ಯೆಹೋವನ ಸೇವೆ ಮಾಡ್ತಾ ಇರೋದಕ್ಕೆ ನಮಗೆ ತುಂಬ ಖುಷಿ ಆಗ್ತಾ ಇದೆ. (ಚೆಫ. 3:9) ನೀವು ಜನ್ರನ್ನ ಪ್ರೀತಿಸೋಕೆ, ಅವ್ರಿಗೆ ಕಲಿಸೋಕೆ ತುಂಬ ಪ್ರಯತ್ನ ಹಾಕ್ತಾ ಇದ್ದೀರ. ಈ ಪ್ರಯತ್ನವನ್ನ ಯೆಹೋವ ಆಶೀರ್ವದಿಸಲಿ ಅನ್ನೋದೇ ನಮ್ಮ ಆಸೆ.

ನಿಮ್ಮ ಸಹೋದರರು,

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ