ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೂರ್ಣ ಸಮಯದ ಸೇವೆಯ ಮೂಲಕ—ಯೆಹೋವನಿಗೆ ಉಪಕಾರ ಸಲ್ಲಿಸುವುದು

ಪೂರ್ಣ ಸಮಯದ ಸೇವೆಯ ಮೂಲಕ—ಯೆಹೋವನಿಗೆ ಉಪಕಾರ ಸಲ್ಲಿಸುವುದು

ಜೀವನ ಕಥೆ

ಪೂರ್ಣ ಸಮಯದ ಸೇವೆಯ ಮೂಲಕಯೆಹೋವನಿಗೆ ಉಪಕಾರ ಸಲ್ಲಿಸುವುದು

ಸ್ಟ್ಯಾನ್ಲಿ ಇ. ರೆನಾಲ್ಡ್‌ಸ್‌ ಅವರಿಂದ ಹೇಳಲ್ಪಟ್ಟಂತೆ

ನಾನು ಇಂಗ್ಲೆಂಡಿನ ಲಂಡನ್ನಿನಲ್ಲಿ 1910ರಲ್ಲಿ ಜನಿಸಿದೆ. ಮೊದಲ ಲೋಕ ಯುದ್ಧದ ನಂತರ, ನನ್ನ ಹೆತ್ತವರು ವೆಸ್ಟಬರಿ ಲೇ ಎಂದು ಕರೆಯಲಾಗುವ ಸಣ್ಣ ವಿಲ್ಟ್‌ಶೈರ್‌ ಹಳ್ಳಿಗೆ ಸ್ಥಳಾಂತರಿಸಿದರು. ನಾನು ಚಿಕ್ಕ ಹುಡುಗನಿದ್ದಾಗಲೇ, ‘ದೇವರು ಯಾರು?’ ಎಂದು ಅನೇಕವೇಳೆ ಯೋಚಿಸುತ್ತಿದ್ದೆ. ಆದರೆ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಯಾರಿಂದಲೂ ಕೊಡಲಿಕ್ಕಾಗುತ್ತಿರಲಿಲ್ಲ. ನಮ್ಮಂಥ ಸಣ್ಣ ಸಮುದಾಯದವರಿಗೆ ದೇವರನ್ನು ಆರಾಧಿಸಲು ಎರಡು ಪ್ರಾರ್ಥನಾ ಮಂದಿರಗಳು ಮತ್ತು ಒಂದು ಚರ್ಚಿನ ಅಗತ್ಯವು ಸಹ ಏಕಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಎಂದೂ ಸಾಧ್ಯವಾಗಲಿಲ್ಲ.

ಎರಡನೆಯ ಲೋಕ ಯುದ್ಧ ಆರಂಭವಾಗಲು ಇನ್ನೇನು ನಾಲ್ಕು ವರ್ಷಗಳಿರುವಾಗ, ಅಂದರೆ 1935ರಲ್ಲಿ ಡಿಕ್‌ ಎಂಬ ಹೆಸರಿನ ನನ್ನ ತಮ್ಮ ಮತ್ತು ನಾನು, ಇಂಗ್ಲೆಂಡಿನ ದಕ್ಷಿಣತೀರದಲ್ಲಿರುವ ವೆಮಥ್‌ ಎಂಬ ಪ್ರವಾಸಿ ಸ್ಥಳಕ್ಕೆ ರಜೆಯನ್ನು ಕಳೆಯಲು ಸೈಕಲಿನಲ್ಲಿ ಬಂದೆವು. ಅಲ್ಲಿ ನಮ್ಮ ಟೆಂಟ್‌ನಲ್ಲಿ ಕುಳಿತುಕೊಂಡು, ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಶಬ್ದವನ್ನು ಆಲಿಸುತ್ತಾ ಮುಂದೇನು ಮಾಡುವುದೆಂದು ಯೋಚಿಸುತ್ತಿದ್ದಾಗ ಒಬ್ಬ ವಯಸ್ಸಾದ ಸಭ್ಯ ವ್ಯಕ್ತಿಯು ನನ್ನೊಂದಿಗೆ ಮಾತಾಡಲು ಬಂದನು ಮತ್ತು ನನಗೆ ಬೈಬಲ್‌ ಅಭ್ಯಾಸವನ್ನು ನಡೆಸಲು ಉಪಯೋಗಿಸುವ ಮೂರು ಸಹಾಯಕಗಳನ್ನು ನೀಡಿದನು. ಅವು ಯಾವುವೆಂದರೆ ಹಾರ್ಪ್‌ ಆಫ್‌ ಗಾಡ್‌, ಲೈಟ್‌ I ಮತ್ತು ಲೈಟ್‌ II ಸಂಚಿಕೆಗಳಾಗಿದ್ದವು. ನಾನು ಅವುಗಳನ್ನು ಸ್ವೀಕರಿಸಿದೆ. ಬೇಸರವನ್ನು ಹೋಗಲಾಡಿಸಲು ಏನಾದರೊಂದು ಸಿಕ್ಕಿತಲ್ಲ ಎಂದು ಸಂತೋಷಪಟ್ಟೆ. ನಾನು ಏನನ್ನು ಓದಿದೆನೋ ಅದರ ಕಡೆಗೆ ತಕ್ಷಣವೇ ಆಕರ್ಷಿತನಾದೆ. ಆದರೆ ಆ ಮಾಹಿತಿಯು ನನ್ನ ಮತ್ತು ನನ್ನ ತಮ್ಮನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವುದೆಂದು ಆಗ ನನಗೆ ತಿಳಿದುಬರಲೇ ಇಲ್ಲ.

ನಾನು ಮನೆಗೆ ಹಿಂದಿರುಗಿದಾಗ, ನಮ್ಮ ಹಳ್ಳಿಯಲ್ಲಿಯೇ ವಾಸಿಸುತ್ತಿದ್ದ ಕ್ಯಾಟ್‌ ಪಾರ್ಸನ್ಸ್‌ ಎಂಬವರು ಸಹ, ಅದೇ ರೀತಿಯ ಬೈಬಲ್‌ ಸಾಹಿತ್ಯವನ್ನು ವಿತರಿಸುತ್ತಿದ್ದಾರೆಂಬುದನ್ನು ನನಗೆ ನನ್ನ ತಾಯಿ ಹೇಳಿದರು. ಎಲ್ಲರಿಗೂ ಅವರ ಒಳ್ಳೆಯ ಪರಿಚಯವಿತ್ತು, ಯಾಕೆಂದರೆ ಅವರಿಗೆ ಹೆಚ್ಚು ವಯಸ್ಸಾಗಿತ್ತಾದರೂ, ಅಲ್ಲಿಲ್ಲಿ ಚದುರಿಹೋಗಿದ್ದ ನಮ್ಮ ಸಮುದಾಯದ ಜನರನ್ನು ಭೇಟಿಮಾಡಲು ಒಂದು ಸಣ್ಣ ಮೋಟರ್‌ ಸೈಕಲಿನಲ್ಲಿ ಅವರು ಮನೆಯಿಂದ ಮನೆಗೆ ಹೋಗುತ್ತಿದ್ದರು. ನಾನು ಅವರನ್ನು ಭೇಟಿಯಾಗಲು ಹೋದೆ. ಅಲ್ಲಿ ಅವರು ನನಗೆ ಸಂತೋಷದಿಂದ ಕ್ರಿಯೇಷನ್‌ ಮತ್ತು ರಿಚಸ್‌ ಎಂಬ ಪುಸ್ತಕಗಳೊಂದಿಗೆ, ವಾಚ್‌ಟವರ್‌ ಸೊಸೈಟಿಯ ಇತರ ಪ್ರಕಾಶನಗಳನ್ನು ಕೊಟ್ಟರು. ಅವರು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದಾರೆಂದು ಸಹ ನನಗೆ ಹೇಳಿದರು.

ನನ್ನ ಬೈಬಲಿನೊಂದಿಗೆ ಈ ಪುಸ್ತಕಗಳನ್ನು ಓದಿ ಮುಗಿಸಿದ ನಂತರ, ಯೆಹೋವನು ಸತ್ಯ ದೇವರಾಗಿದ್ದಾನೆಂಬುದನ್ನು ನಾನು ತಿಳಿದುಕೊಂಡೆ ಮತ್ತು ಆತನನ್ನು ಆರಾಧಿಸಲು ಬಯಸಿದೆ. ಆದುದರಿಂದ ನಾನು ನಮ್ಮ ಚರ್ಚಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದೆ ಮತ್ತು ಜೋನ್‌ ಹಾಗೂ ಆಲಿಸ್‌ ಮೂಡಿ ಎಂಬುವರ ಮನೆಯಲ್ಲಿ ಬೈಬಲ್‌ ಅಭ್ಯಾಸಗಳಿಗೆ ಹಾಜರಾಗಲು ಆರಂಭಿಸಿದೆ. ಇವರು ಬಹಳ ಹತ್ತಿರದಲ್ಲಿಯೇ ಇದ್ದ ವೆಸ್ಟ್‌ಬರಿ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಆ ಕೂಟಗಳಲ್ಲಿ ಕೇವಲ ಏಳು ಮಂದಿ ಹಾಜರಾಗುತ್ತಿದ್ದರು. ಕೂಟಗಳ ಮುಂಚೆ ಮತ್ತು ಕೂಟಗಳಾದ ಮೇಲೆ ಕ್ಯಾಟ್‌ ಪಾರ್ಸನ್ಸ್‌ ಹಾರ್ಮೋನಿಯಮ್‌ ಅನ್ನು ನುಡಿಸಿದಾಗ ನಾವೆಲ್ಲರೂ ಒಟ್ಟಾಗಿ ಅತ್ಯುತ್ಸಾಹದಿಂದ ಮತ್ತು ಗಟ್ಟಿಯಾದ ಸ್ವರದಲ್ಲಿ ರಾಜ್ಯ ಗೀತೆಗಳನ್ನು ಹಾಡುತ್ತಿದ್ದೆವು.

ಆರಂಭದ ದಿನಗಳು

ನಾವು ಬಹುಮುಖ್ಯವಾದ ಸಮಯಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ನಾನು ಸ್ಪಷ್ಟವಾಗಿ ತಿಳಿದುಕೊಂಡೆ ಮತ್ತು ಮತ್ತಾಯ 24:14ರಲ್ಲಿ ಪ್ರವಾದಿಸಲಾದ ಸಾರುವ ಕೆಲಸದಲ್ಲಿ ಭಾಗವಹಿಸಲು ನಾನು ಎದುರುನೋಡುತ್ತಿದ್ದೆ. ಆದುದರಿಂದ ನಾನು ಧೂಮಪಾನ ಮಾಡುವುದನ್ನು ಬಿಟ್ಟುಬಿಟ್ಟೆ. ನನಗಾಗಿ ಒಂದು ಭ್ರೀಫ್‌ಕೇಸನ್ನು ಖರೀದಿಸಿದೆ ಮತ್ತು ಮಹೋನ್ನತ ದೇವರಾಗಿರುವ ಯೆಹೋವನಿಗೆ ನಾನು ನನ್ನ ಜೀವನವನ್ನು ಸಮರ್ಪಿಸಿಕೊಂಡೆ.

ಆಗಸ್ಟ್‌ 1936ರಲ್ಲಿ, ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರಾಗಿದ್ದ ಜೋಸೆಫ್‌ ಎಫ್‌. ರದರ್‌ಫರ್ಡ್‌ ಸ್ಕಾಟ್ಲೆಂಡಿನ ಗ್ಲಾಸ್‌ಗೋವನ್ನು ಭೇಟಿಮಾಡಲಿದ್ದರು ಮತ್ತು ಅಲ್ಲಿ “ಅರ್ಮಗೆದೋನ್‌” ಎಂಬ ವಿಷಯದ ಮೇಲೆ ಭಾಷಣವನ್ನು ನೀಡಲಿದ್ದರು. ಗ್ಲಾಸ್‌ಗೋ ಪಟ್ಟಣವು ನಾನು ವಾಸಿಸುವ ಸ್ಥಳದಿಂದ ಸುಮಾರು 600 ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದರೂ ಸಹ, ಅಲ್ಲಿಗೆ ಹೋಗಲು ನಾನು ನಿರ್ಧರಿಸಿದೆ ಮತ್ತು ಆ ಅಧಿವೇಶನದಲ್ಲಿ ದೀಕ್ಷಾಸ್ನಾನವನ್ನು ಪಡೆಯಲು ಬಯಸಿದೆ. ನನ್ನ ಹತ್ತಿರ ಸ್ವಲ್ಪವೇ ಹಣವಿತ್ತು. ಈ ಕಾರಣಕ್ಕಾಗಿ ಸ್ಕಾಟ್ಲೆಂಡಿನ ಗಡಿಯಲ್ಲಿರುವ ಕಾರ್ಲಿಸ್ಲ್‌ ಎಂಬ ಪಟ್ಟಣದ ವರೆಗೆ ರೈಲಿನಲ್ಲಿ ಪ್ರಯಾಣಿಸುವಾಗ, ನನ್ನ ಜೊತೆಯಲ್ಲಿ ನನ್ನ ಸೈಕಲನ್ನು ಸಹ ತೆಗೆದುಕೊಂಡು ಹೋದೆ. ಅಲ್ಲಿಂದ ಉತ್ತರ ದಿಕ್ಕಿನ ಕಡೆಗೆ 160 ಕಿಲೋಮೀಟರುಗಳಷ್ಟು ದೂರ ಸೈಕಲ್‌ನಲ್ಲಿಯೇ ಹೋದೆ. ಹಿಂದಿರುಗುವಾಗ, ಬಹಳ ದೂರದ ವರೆಗೆ ಸೈಕಲ್‌ನಲ್ಲಿಯೇ ಬಂದದ್ದರಿಂದ ನಾನು ದೈಹಿಕವಾಗಿ ಬಳಲಿ ಹೋಗಿದ್ದರೂ ಆತ್ಮಿಕವಾಗಿ ಚೈತನ್ಯವುಳ್ಳವನಾಗಿ ಮನೆಗೆ ಬಂದು ತಲುಪಿದೆ.

ಆ ಸಮಯದಂದಿನಿಂದ, ಹತ್ತಿರದ ಹಳ್ಳಿಗಳಲ್ಲಿ ನನ್ನ ನಂಬಿಕೆಯನ್ನು ಹಂಚಲು ಹೋಗಬೇಕೆಂದಿದ್ದಾಗಲೆಲ್ಲ ನಾನು ಸೈಕಲನ್ನೇ ಉಪಯೋಗಿಸುತ್ತಿದ್ದೆ. ಆ ದಿನಗಳಲ್ಲಿ ಪ್ರತಿಯೊಬ್ಬ ಸಾಕ್ಷಿಯ ಬಳಿ ಟೆಸ್ಟಿಮನಿ ಕಾರ್ಡ್‌ ಇರುತ್ತಿತ್ತು ಮತ್ತು ಇದರಲ್ಲಿ ಮನೆಯವರಿಗೆ ಓದಲು ಶಾಸ್ತ್ರೀಯ ಸಂದೇಶವಿರುತ್ತಿತ್ತು. ಸೊಸೈಟಿಯ ಅಧ್ಯಕ್ಷರಿಂದ ನೀಡಲಾದ ಬೈಬಲ್‌ ಭಾಷಣಗಳ ರೆಕಾರ್ಡ್‌ಗಳನ್ನು ನುಡಿಸಲಿಕ್ಕಾಗಿ, ಸಾಗಿಸಲು ಸಾಧ್ಯವಿರುವ ಫೋನೋಗ್ರಾಫ್‌ಗಳನ್ನು ಸಹ ನಾವು ಉಪಯೋಗಿಸುತ್ತಿದ್ದೆವು. ನಾವು ಪತ್ರಿಕೆಯನ್ನಿಡುವ ಬ್ಯಾಗನ್ನು * ನಮ್ಮೊಂದಿಗೆ ಯಾವಾಗಲೂ ಒಯ್ಯುತ್ತಿದ್ದೆವು. ಇದು ನಮ್ಮನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸುತ್ತಿತ್ತು.

ಯುದ್ಧ ಸಮಯದಲ್ಲಿ ಪಯನೀಯರ್‌ ಸೇವೆ

ನನ್ನ ತಮ್ಮನು 1940ರಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡನು. ಎರಡನೆಯ ಲೋಕ ಯುದ್ಧವು 1939ರಲ್ಲಿ ಆರಂಭವಾಗಿತ್ತು ಮತ್ತು ಆ ಸಮಯದಲ್ಲಿ ಪೂರ್ಣ ಸಮಯದ ಸೌವಾರ್ತಿಕರ ತ್ವರಿತ ಅಗತ್ಯವಿರುವುದನ್ನು ನಾವಿಬ್ಬರೂ ಕಂಡುಕೊಂಡೆವು. ಆದುದರಿಂದ, ನಾವು ನಮ್ಮ ಪಯನೀಯರ್‌ ಅರ್ಜಿಗಳನ್ನು ತುಂಬಿಸಿ ಸಲ್ಲಿಸಿದೆವು. ಬ್ರಿಸ್ಟಲ್‌ ಪಯನೀಯರ್‌ ಹೋಮ್‌ನಲ್ಲಿದ್ದು ಸುತ್ತಮುತ್ತಲಿನ ಕ್ಷೇತ್ರದಲ್ಲಿ ಸೇವೆಮಾಡುವ ನೇಮಕ ಸಿಕ್ಕಿದ್ದಕ್ಕಾಗಿ ನಾವಿಬ್ಬರೂ ಸಂತೋಷಿಸಿದೆವು. ಅಲ್ಲಿ ಎಡಿತ್‌ ಪೂಲ್‌, ಬರ್ಟ್‌ ಫಾರ್ಮರ್‌, ಟಾಮ್‌ ಮತ್ತು ಡಾರಥಿ ಬ್ರಿಡ್ಜಸ್‌, ಬರ್ನಾಡ್‌ ಹಾವ್ಟ್‌ನ್‌ ಮತ್ತು ಇತರ ಪಯನೀಯರರೊಂದಿಗೆ ಕೆಲಸಮಾಡಲು ತೊಡಗಿದೆವು. ನಾವು ಇವರೆಲ್ಲರ ನಂಬಿಕೆಯನ್ನು ಬಹಳ ಸಮಯದಿಂದಲೂ ಮೆಚ್ಚುತ್ತಾ ಬಂದಿದ್ದೆವು.

“ಯೆಹೋವನ ಸಾಕ್ಷಿಗಳು” ಎಂದು ದಪ್ಪಕ್ಷರಗಳಲ್ಲಿ ಎರಡು ಕಡೆಗಳಲ್ಲಿ ಬರೆದಿದ್ದ ಒಂದು ಸಣ್ಣ ವಾಹನವು ಸ್ವಲ್ಪ ಸಮಯದೊಳಗಾಗಿ ನಮ್ಮನ್ನು ಕ್ಷೇತ್ರಸೇವೆಗೆ ಕರೆದೊಯ್ಯಲು ಬಂದಿತು. ಚಾಲಕನ ಹೆಸರು ಸ್ಟ್ಯಾನ್ಲಿ ಜೋನ್ಸ್‌ ಎಂದಾಗಿತ್ತು. ಇವರು ಕಾಲಾನಂತರ ಚೀನಾದಲ್ಲಿ ಮಿಷನೆರಿಯಾದರು ಮತ್ತು ಸಾರುವ ಕಾರ್ಯಚಟುವಟಿಕೆಯ ನಿಮಿತ್ತ ಅವರನ್ನು ಏಳು ವರ್ಷಗಳ ವರೆಗೆ ಏಕಾಂತ ಸೆರೆಮನೆಯಲ್ಲಿ ಬಂಧಿಸಿ ಇಡಲಾಯಿತು.

ಯುದ್ಧವು ತೀವ್ರವಾಗುತ್ತಿದ್ದಂತೆ, ನಾವು ರಾತ್ರಿ ವೇಳೆಯಲ್ಲಿ ಸರಿಯಾಗಿ ನಿದ್ರೆಯೇ ಮಾಡುತ್ತಿರಲಿಲ್ಲ. ನಮ್ಮ ಪಯನೀಯರ್‌ ಹೋಮ್‌ನ ಸುತ್ತಲೂ ಬಾಂಬುಗಳು ಬೀಳುತ್ತಿದ್ದವು ಮತ್ತು ಅಗ್ನಿ ಸ್ಫೋಟಕಗಳ ಭಯದಿಂದಾಗಿ ನಾವು ಯಾವಾಗಲೂ ಎಚ್ಚರವಾಗಿರಬೇಕಾಗುತ್ತಿತ್ತು. ಒಂದು ಸಂಜೆ, ಬ್ರಿಸ್ಟಲ್‌ ನಗರದ ಮಧ್ಯೆ ನಡೆದಿದ್ದ, 200 ಮಂದಿ ಕೂಡಿಬಂದಿದ್ದ ಒಂದು ಉತ್ತಮ ಸಮ್ಮೇಳನಕ್ಕೆ ಹಾಜರಾಗಿ ಮನೆಗೆ ಹಿಂದಿರುಗುತ್ತಿದ್ದಾಗ, ವಿಮಾನವನ್ನು ನಾಶಮಾಡುವ ಬಂದೂಕುಗಳಲ್ಲಿ ಉಪಯೋಗಿಸುತ್ತಿದ್ದ ಸ್ಟೀಲಿನ ಪುಡಿಗಳ ಸಿಡಿಮದ್ದುಗಳು ಮಳೆಗರೆಯುತ್ತಿದ್ದವು. ಅಂತಹ ಪರಿಸ್ಥಿತಿಯ ಮಧ್ಯೆಯೂ ನಾವು ನಮ್ಮ ಮನೆಗೆ ಸುರಕ್ಷಿತವಾಗಿ ಬಂದು ತಲುಪಿದೆವು.

ಮರುದಿನ ಬೆಳಗ್ಗೆ ಡಿಕ್‌ ಮತ್ತು ನಾನು ಸಭಾಂಗಣದಲ್ಲಿ ಬಿಟ್ಟುಬಂದಿದ್ದ ಕೆಲವು ವಸ್ತುಗಳನ್ನು ತರಲು ನಗರಕ್ಕೆ ಹೋದೆವು. ಅಲ್ಲಿ ಹೋದಾಗ ನಮಗೆ ಆಘಾತವಾಯಿತು, ಯಾಕೆಂದರೆ ಇಡೀ ಬ್ರಿಸ್ಟಲ್‌ ನಗರವು ಅಸ್ತವ್ಯಸ್ತಗೊಂಡಿತ್ತು. ಇಡೀ ನಗರದ ಮುಖ್ಯ ಕೇಂದ್ರವು ಸಂಪೂರ್ಣವಾಗಿ ಧ್ವಂಸಮಾಡಲ್ಪಟ್ಟು ಸುಡಲ್ಪಟ್ಟಿತ್ತು. ನಮ್ಮ ರಾಜ್ಯ ಸಭಾಗೃಹವು ಇದ್ದ ಪಾರ್ಕ್‌ ಸ್ಟ್ರೀಟ್‌ ಸ್ಥಳವು ಸಂಪೂರ್ಣವಾಗಿ ನಾಶವಾಗಿ, ಕಲ್ಲು, ಇಟ್ಟಿಗೆಗಳ ದೊಡ್ಡ ರಾಶಿಯಿಂದ ಹೊಗೆ ಮೇಲೇರುತ್ತಿತ್ತು. ಹೀಗಿದ್ದರೂ, ಸಾಕ್ಷಿಗಳಾರೂ ಕೊಲ್ಲಲ್ಪಟ್ಟಿರಲಿಲ್ಲ ಅಥವಾ ಗಾಯಗೊಂಡಿರಲಿಲ್ಲ. ಆದರೆ ಸಂತೋಷದ ವಿಷಯವೇನೆಂದರೆ, ನಾವು ಈಗಾಗಲೇ ನಮ್ಮ ಬೈಬಲ್‌ ಸಾಹಿತ್ಯವನ್ನು ರಾಜ್ಯ ಸಭಾಗೃಹದಿಂದ ಸಾಗಿಸಿ, ಸಭೆಯ ಸದಸ್ಯರ ಮನೆಗಳಲ್ಲಿ ಇಟ್ಟಿದ್ದೆವು. ಸಾಕ್ಷಿಗಳನ್ನು ಉಳಿಸಿದ್ದಕ್ಕೆ ಮಾತ್ರವಲ್ಲ, ನಮ್ಮಲ್ಲಿರುವ ಸಾಹಿತ್ಯವು ನಾಶವಾಗದಿದ್ದಕ್ಕೂ ನಾವು ಯೆಹೋವನಿಗೆ ಉಪಕಾರವನ್ನು ಸಲ್ಲಿಸಿದೆವು.

ಅನಿರೀಕ್ಷಿತ ಸ್ವಾತಂತ್ರ್ಯ

ನಾನು ಮಿಲಿಟರಿ ಸೇವೆಗಾಗಿ ಸೇರಬೇಕೆಂದು ಬಲವಂತಪಡಿಸುವ ಅರ್ಜಿಯನ್ನು ಪಡೆದುಕೊಳ್ಳುವ ಸಮಯದರೊಳಗಾಗಿ, ನಾನು ಅಧ್ಯಕ್ಷ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸುತ್ತಿದ್ದ ಬ್ರಿಸ್ಟಲ್‌ ಸಭೆಯಲ್ಲಿ ಶುಶ್ರೂಷಕರ ಸಂಖ್ಯೆಯು 64ರಷ್ಟಕ್ಕೆ ಬೆಳೆಯಿತು. ಇತರ ಅನೇಕ ಸಾಕ್ಷಿಗಳನ್ನು ತಮ್ಮ ತಟಸ್ಥ ನಿಲುವಿಗಾಗಿ ಸೆರೆಮನೆಗೆ ಹಾಕಲಾಗಿತ್ತು ಮತ್ತು ಅದೇ ರೀತಿಯಲ್ಲಿ ಸಾರುವ ನನ್ನ ಸ್ವಾತಂತ್ರ್ಯವು ಸಹ ಮೊಟಕುಗೊಳಿಸಲ್ಪಡುವುದು ಎಂದು ನಾನು ನಿರೀಕ್ಷಿಸಿದೆ. ಸ್ಥಳೀಯ ಬ್ರಿಸ್ಟಲ್‌ ನ್ಯಾಯಸ್ಥಾನದಲ್ಲಿ ನನ್ನ ಮೊಕದ್ದಮೆಯನ್ನು ವಿಚಾರಿಸಲಾಯಿತು ಮತ್ತು ಇಲ್ಲಿ ಸೆರೆಮನೆಯ ಹಿಂದಿನ ಅಧಿಕಾರಿಯಾಗಿದ್ದ ಸಹೋದರ ಆ್ಯಂಥನಿ ಬಕ್‌ ನನ್ನ ಪರವಾಗಿ ಮಾತಾಡಿದ್ದರು. ಅವರು ಯಾರಿಗೂ ಅಂಜದ ಧೀರ ವ್ಯಕ್ತಿಯಾಗಿದ್ದರು ಮತ್ತು ಬೈಬಲ್‌ ಸತ್ಯದ ಪ್ರಬಲ ಸಮರ್ಥಕರಾಗಿದ್ದರು. ಅವರು ನನ್ನನ್ನು ಉತ್ತಮವಾಗಿ ಪ್ರತಿನಿಧಿಸಿದ ಕಾರಣ, ನನ್ನ ಪೂರ್ಣ ಸಮಯದ ಶುಶ್ರೂಷೆಯನ್ನು ಮುಂದುವರಿಸಬೇಕೆಂಬ ಶರತ್ತಿನ ಮೇಲೆ ನನಗೆ ಮಿಲಿಟರಿ ಸೇವೆಯಿಂದ ಸಂಪೂರ್ಣವಾದ ವಿನಾಯಿತಿಯು ಸಿಕ್ಕಿತು. ಇದು ನನಗೆ ಅನಿರೀಕ್ಷಿತವಾಗಿತ್ತು.

ನಾನು ನನ್ನ ಸ್ವಾತಂತ್ರ್ಯವನ್ನು ಪುನಃ ಪಡೆದುಕೊಳ್ಳಲು ರೋಮಾಂಚಿತನಾದೆ ಮತ್ತು ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸಾರುವುದಕ್ಕೆ ನನ್ನ ಸ್ವಾತಂತ್ರ್ಯವನ್ನು ಉಪಯೋಗಿಸಲು ನಿರ್ಧರಿಸಿದೆ. ಲಂಡನ್ನಿನ ಬ್ರಾಂಚ್‌ ಆಫೀಸಿನ, ಬ್ರಾಂಚ್‌ ಮೇಲ್ವಿಚಾರಕರಾಗಿರುವ ಆಲ್ಬರ್ಟ್‌ ಶ್ರೋಡರ್‌ರವರನ್ನು ಸಂಧಿಸಬೇಕೆಂದು ಕೇಳಿಕೊಳ್ಳುವ ಪತ್ರವು ನನ್ನ ಕೈಗೆ ಸಿಕ್ಕಿತು. ಅದನ್ನು ನೋಡಿದಾಗ ನನಗೇನು ಕಾದಿದೆಯೋ ಎಂಬ ಸ್ವಾಭಾವಿಕ ಕುತೂಹಲವು ನನ್ನಲ್ಲಿ ಹುಟ್ಟಿತು. ಯಾರ್ಕ್‌ಶೈರ್‌ ಪಟ್ಟಣದಲ್ಲಿ ಸಂಚರಣ ಮೇಲ್ವಿಚಾರಕನಾಗಿ ಸೇವೆಸಲ್ಲಿಸುವ, ಅಂದರೆ ಪ್ರತಿ ವಾರ ಬೇರೆ ಬೇರೆ ಸಭೆಗಳನ್ನು ಸಂದರ್ಶಿಸಿ ಅಲ್ಲಿರುವ ಸಹೋದರರಿಗೆ ಸಹಾಯಮಾಡುವ ಮತ್ತು ಉತ್ತೇಜಿಸುವ ನೇಮಕವು ಸಿಕ್ಕಿದಾಗ ನನಗಾದ ಆಶ್ಚರ್ಯವನ್ನು ನೀವೇ ಊಹಿಸಿಕೊಳ್ಳಬಹುದು. ಇಂತಹ ಒಂದು ನೇಮಕಕ್ಕೆ ನಾನು ತಕ್ಕವನಲ್ಲವೆಂದು ನನಗೆ ಅನಿಸಿತಾದರೂ, ನನಗೆ ಮಿಲಿಟರಿ ಸೇವೆಯಿಂದ ವಿನಾಯಿತಿಯಿದ್ದದ್ದರಿಂದ ನನ್ನನ್ನು ಎಲ್ಲಿಯೇ ನೇಮಿಸಲಿ ಅಲ್ಲಿಗೆ ಹೋಗಲು ನನ್ನನ್ನು ತಡೆಯುವ ಯಾವ ನಿರ್ಬಂಧವೂ ಇರಲಿಲ್ಲ. ಆದುದರಿಂದ ನಾನು ಯೆಹೋವನ ಮಾರ್ಗದರ್ಶನವನ್ನು ಸ್ವೀಕರಿಸಿದೆ ಮತ್ತು ಸ್ವಇಚ್ಛೆಯಿಂದ ನೇಮಿಸಲ್ಪಟ್ಟ ಸ್ಥಳಕ್ಕೆ ಹೋದೆ.

ಆಲ್ಬರ್ಟ್‌ ಶ್ರೋಡರ್‌ ಹಡರ್ಸ್‌ಫಿಲ್ಡ್‌ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ನನ್ನನ್ನು ಅಲ್ಲಿರುವ ಸಹೋದರರಿಗೆ ಪರಿಚಯಮಾಡಿಸಿಕೊಟ್ಟರು ಮತ್ತು ಏಪ್ರಿಲ್‌ 1941ರಂದು ನಾನು ನನ್ನ ಹೊಸ ನೇಮಕವನ್ನು ಪಡೆದುಕೊಂಡೆ. ಅಲ್ಲಿರುವ ಪ್ರಿಯ ಸಹೋದರರನ್ನು ನಿಕಟವಾಗಿ ತಿಳಿದುಕೊಳ್ಳುವುದು ಬಹಳಷ್ಟು ಆನಂದವನ್ನು ತಂದಿತು! ಒಬ್ಬರನ್ನೊಬ್ಬರು ಪ್ರೀತಿಸುವ ಮತ್ತು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ಜನರು ಯೆಹೋವನಿಗಿದ್ದಾರೆಂಬುದನ್ನು ಇನ್ನೂ ಹೆಚ್ಚಾಗಿ ಗಣ್ಯಮಾಡುವಂತೆ ಅವರ ಪ್ರೀತಿ ಮತ್ತು ಕರುಣೆಯು ನನಗೆ ಸಾಧ್ಯಮಾಡಿತು.—ಯೋಹಾನ 13:35.

ಇನ್ನೂ ಹೆಚ್ಚಿನ ಸೇವಾಸುಯೋಗಗಳು

ಮರೆಯಲಾಗದ ಐದು ದಿನದ ರಾಷ್ಟ್ರೀಯ ಅಧಿವೇಶನವು ಲೆಸ್ಟರ್‌ ನಗರದ ಡೀ ಮೌಂಟ್‌ಫೋರ್ಟ್‌ ಸಭಾಂಗಣದಲ್ಲಿ ನಡೆಸಲ್ಪಟ್ಟಿತು. ಆಹಾರವನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತಿದ್ದರೂ ಮತ್ತು ರಾಷ್ಟ್ರೀಯ ಸಂಚಾರ ವ್ಯವಸ್ಥೆಯು ನಿರ್ಬಂಧಿಸಲ್ಪಟ್ಟಿದ್ದರೂ ಸಹ, ಭಾನುವಾರದಂದು ಹಾಜರಿಯು 12,000ಕ್ಕಿಂತಲೂ ಹೆಚ್ಚಿತ್ತು. ಆದರೂ ಆ ಸಮಯದಲ್ಲಿ ದೇಶದಲ್ಲಿ ಕೇವಲ 11,000 ಸಾಕ್ಷಿಗಳಷ್ಟೇ ಇದ್ದರು. ಸೊಸೈಟಿಯ ಅಧ್ಯಕ್ಷರ ರೆಕಾರ್ಡ್‌ ಮಾಡಲ್ಪಟ್ಟಿರುವ ಭಾಷಣಗಳು ನುಡಿಸಲ್ಪಟ್ಟವು ಮತ್ತು ಚಿಲ್ಡ್ರನ್‌ ಎಂಬ ಪುಸ್ತಕವು ಬಿಡುಗಡೆಗೊಳಿಸಲ್ಪಟ್ಟಿತು. ಎರಡನೆಯ ಲೋಕ ಯುದ್ಧವು ನಡೆಯುತ್ತಿರುವ ಸಮಯದಲ್ಲಿ ಬ್ರಿಟನ್‌ನಲ್ಲಿ ನಡೆದ ಆ ಅಧಿವೇಶನವು ಯೆಹೋವನ ಸಾಕ್ಷಿಗಳ ದೇವಪ್ರಭುತ್ವ ಇತಿಹಾಸದಲ್ಲಿಯೇ ನಿಶ್ಚಯವಾಗಿಯೂ ಒಂದು ಮೈಲಿಗಲ್ಲಾಗಿತ್ತು.

ಈ ಅಧಿವೇಶನವು ಮುಗಿದ ಸ್ವಲ್ಪ ಸಮಯದರಲ್ಲೇ, ಲಂಡನ್ನಿನ ಬೆತೆಲ್‌ ಕುಟುಂಬದವರೊಂದಿಗೆ ಸೇವೆ ಸಲ್ಲಿಸುವ ಆಮಂತ್ರಣವು ನನಗೆ ಸಿಕ್ಕಿತು. ಇಲ್ಲಿ ನಾನು ಶಿಪ್ಪಿಂಗ್‌ ಮತ್ತು ಪ್ಯಾಕಿಂಗ್‌ ಡಿಪಾರ್ಟ್‌ಮೆಂಟ್‌ಗಳಲ್ಲಿ ಕೆಲಸಮಾಡಿದೆ ಮತ್ತು ನಂತರ, ಸಭೆಗಳಿಗೆ ಸಂಬಂಧಪಟ್ಟಿರುವ ವಿಷಯಗಳನ್ನು ನೋಡಿಕೊಳ್ಳುವ ಆಫೀಸಿನಲ್ಲಿ ಕೆಲಸಮಾಡಿದೆ.

ಬೆತೆಲ್‌ ಕುಟುಂಬವು ಲಂಡನ್ನಿನಲ್ಲಿ ಹಗಲೂ ರಾತ್ರಿ ನಡೆಯುತ್ತಿದ್ದ ವಿಮಾನದ ದಾಳಿಯನ್ನು ಎದುರಿಸಬೇಕಾಗಿತ್ತು ಮಾತ್ರವಲ್ಲ, ಅಲ್ಲಿ ಕೆಲಸಮಾಡುತ್ತಿದ್ದ ಜವಾಬ್ದಾರಿಯುತ ಸಹೋದರರನ್ನು ಅಧಿಕಾರಿಗಳು ಪದೇ ಪದೇ ಪರಿಶೀಲಿಸುತ್ತಿದ್ದರು. ಪ್ರೈಸ್‌ ಹ್ಯೂಸ್‌, ಯುವರ್ಟ್‌ ಚಿಟ್ಟಿ ಮತ್ತು ಫ್ರಾಂಕ್‌ ಪ್ಲಾಟ್‌ ಎಂಬುವವರೆಲ್ಲರೂ ತಮ್ಮ ತಟಸ್ಥ ನಿಲುವಿಗಾಗಿ ಸೆರೆಮನೆಗೆ ಹಾಕಲ್ಪಟ್ಟರು ಮತ್ತು ಸ್ವಲ್ಪ ಸಮಯದ ನಂತರ ಆಲ್ಬರ್ಟ್‌ ಶ್ರೋಡರ್‌ ಅವರನ್ನು ಅಮೆರಿಕಕ್ಕೆ ಗಡೀಪಾರುಮಾಡಲಾಯಿತು. ಈ ಒತ್ತಡಗಳ ಮಧ್ಯೆಯೂ, ಸಭೆಗಳನ್ನು ಮತ್ತು ರಾಜ್ಯದ ಅಭಿರುಚಿಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿತ್ತು.

ಗಿಲ್ಯಡ್‌ಗೆ ಹೋಗುವುದು

ಯುದ್ಧವು 1945ರಲ್ಲಿ ಕೊನೆಗೊಂಡಾಗ, ನಾನು ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಲ್ಲಿ ಮಿಷನೆರಿ ತರಬೇತಿಗಾಗಿ ಅರ್ಜಿ ಹಾಕಿದೆ ಮತ್ತು ನನ್ನನ್ನು 1946ರಲ್ಲಿ ನಡೆಯಲಿರುವ ಎಂಟನೆಯ ತರಗತಿಗೆ ಕರೆಯಲಾಯಿತು. ಟೋನಿ ಆ್ಯಟ್‌ವುಡ್‌, ಸ್ಟ್ಯಾನ್ಲಿ ಜೋನ್ಸ್‌, ಹೆರಾಲ್ಡ್‌ ಕಿಂಗ್‌, ಡಾನ್‌ ರೆನ್ಡಲ್‌ ಮತ್ತು ಸ್ಟ್ಯಾನ್ಲಿ ವುಡ್ಬರ್ನ್‌ ಎಂಬ ಹಲವು ಸಹೋದರರನ್ನು ಸೇರಿಸಿ, ಹೆಚ್ಚಿನವರನ್ನು ಫೋವೆಯ ಕಾರ್ನಿಷ್‌ ಎಂಬ ಮೀನುಗಾರಿಕೆಯ ಬಂದರಿನಿಂದ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಸೊಸೈಟಿಯು ಮಾಡಿತು. ಒಬ್ಬ ಸ್ಥಳೀಯ ಸಾಕ್ಷಿಯು, ಚೀನಾ ದೇಶದ ಕೆಯೊಲಿನ್‌ ಎಂಬ ಬಿಳಿಜೇಡಿಮಣ್ಣನ್ನು ಸಾಗಿಸುತ್ತಿದ್ದ ಸಣ್ಣ ಹಡಗಿನಲ್ಲಿ ಪ್ರಯಾಣಕ್ಕಾಗಿ ನಮಗೆ ಸ್ಥಳವನ್ನು ಕಾದಿರಿಸಿದ್ದನು. ನಮ್ಮ ಕೋಣೆಗಳು ತುಂಬ ಚಿಕ್ಕದಾಗಿದ್ದವು. ಮತ್ತು ಹಡಗಿನ ಅಟ್ಟವು ಸಾಮಾನ್ಯವಾಗಿ ನೀರಿನಿಂದ ತುಂಬಿರುತ್ತಿತ್ತು. ನಾವು ಇಳಿಯಲಿಕ್ಕಿದ್ದ ಬಂದರು ಸ್ಥಳವಾದ ಫಿಲಿಡೆಲ್ಫಿಯವನ್ನು ಕೊನೆಗೂ ತಲುಪಿದಾಗ ನಮಗೆಂಥ ಬಿಡುಗಡೆಯಾಗಿತ್ತು!

ನ್ಯೂ ಯಾರ್ಕ್‌ನ ಉತ್ತರಕ್ಕಿರುವ ಗ್ರಾಮೀಣ ಪ್ರದೇಶವಾಗಿರುವ ಸೌತ್‌ ಲ್ಯಾನ್ಸಿಂಗ್‌ನ ಸುಂದರವಾದ ಸ್ಥಳದಲ್ಲಿ ಗಿಲ್ಯಡ್‌ನ ತರಬೇತಿ ಶಾಲೆಯಿತ್ತು. ನಾನು ಪಡೆದುಕೊಂಡ ತರಬೇತಿಯು ನನಗೆ ಬಹಳಷ್ಟು ವಿಷಯಗಳನ್ನು ಕಲಿಸಿತು. ನಮ್ಮ ಶಾಲೆಯ ವಿದ್ಯಾರ್ಥಿಗಳು 18 ದೇಶಗಳಿಂದ ಬಂದಿದ್ದರು. ವಿದೇಶಗಳಿಂದ ಇಷ್ಟೊಂದು ಸಂಖ್ಯೆಯಲ್ಲಿ ಶುಶ್ರೂಷಕರನ್ನು ಸೊಸೈಟಿಯು ನೋಂದಾಯಿಸಿರುವುದು ಇದೇ ಮೊದಲ ಬಾರಿಯಾಗಿತ್ತು. ಈ ಎಲ್ಲ ಸಹೋದರರೊಂದಿಗೆ ನಿಕಟವಾದ ಸ್ನೇಹವನ್ನು ಬೆಳೆಸಿಕೊಂಡೆವು. ನನ್ನ ಕೋಣೆವಾಸಿಯಾಗಿದ್ದ ಫಿನ್‌ಲ್ಯಾಂಡ್‌ನ ನಿವಾಸಿ ಕಾಲೀ ಸ್ಯಾಲವಾರಾನ ಸಹವಾಸದಲ್ಲಿ ನಾನು ಬಹಳವಾಗಿ ಆನಂದಿಸಿದೆ.

ಸಮಯವು ಎಷ್ಟು ಬೇಗನೇ ಕಳೆಯಿತೆಂದರೆ ಐದು ತಿಂಗಳ ತರಬೇತಿಯ ನಂತರ ಸೊಸೈಟಿಯ ಅಧ್ಯಕ್ಷರಾಗಿದ್ದ ನೇತನ್‌ ಎಚ್‌. ನಾರ್‌, ಬ್ರೂಕ್ಲಿನ್‌ ಮುಖ್ಯಕಾರ್ಯಲಯದಿಂದ ಬಂದು ನಮಗೆ ಪ್ರಶಸ್ತಿಪತ್ರಗಳನ್ನು ಕೊಡುವ ಸಮಯವು ಬಂದದ್ದು ನಮಗೆ ಗೊತ್ತಾಗಲೇ ಇಲ್ಲ. ಇವರು ಪ್ರಶಸ್ತಿಪತ್ರಗಳನ್ನು ನಮಗೆ ಕೊಟ್ಟರು ಮತ್ತು ನಮ್ಮ ನೇಮಕಗಳು ಎಲ್ಲಿರುವವು ಎಂಬುದನ್ನು ಸಹ ಹೇಳಿದರು. ಆ ದಿನಗಳಲ್ಲಿ, ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ವೇದಿಕೆಯಿಂದ ಪ್ರಕಟಿಸಲ್ಪಡುವವರೆಗೂ, ವಿದ್ಯಾರ್ಥಿಗಳು ಯಾವ ಸ್ಥಳಗಳಿಗೆ ನೇಮಕವನ್ನು ಪಡೆದುಕೊಳ್ಳಲಿರುವರೆಂಬುದು ಅವರಿಗೆ ತಿಳಿಯುತ್ತಿರಲಿಲ್ಲ. ನನ್ನ ನೇಮಕವು ಲಂಡನ್‌ ಬೆತೆಲಿಗೆ ಹಿಂದಿರುಗಿ ಹೋಗಿ ಅಲ್ಲಿ ಕೆಲಸವನ್ನು ಮುಂದುವರಿಸುವುದಾಗಿತ್ತು.

ಲಂಡನ್‌ಗೆ ಹಿಂತಿರುಗಿದ್ದು

ಬ್ರಿಟನ್‌ನಲ್ಲಿ ಯುದ್ಧದ ನಂತರದ ವರ್ಷಗಳು ಕಠಿನ ಸಮಯಗಳಾಗಿದ್ದವು. ಆಹಾರ ಮತ್ತು ಅನೇಕ ಇತರ ಆವಶ್ಯಕ ವಸ್ತುಗಳೊಂದಿಗೆ ಪೇಪರನ್ನು ಸಹ ಪಡಿತರ ವ್ಯವಸ್ಥೆಯಲ್ಲಿ ಕೊಡುವುದನ್ನು ಮುಂದುವರಿಸಿದರು. ಆದರೆ ಈ ಸಂಕಷ್ಟ ಪರಿಸ್ಥಿತಿಯಿಂದ ನಾವು ಪಾರಾದೆವು ಮತ್ತು ಯೆಹೋವನ ರಾಜ್ಯಾಭಿರುಚಿಗಳು ಅಭಿವೃದ್ಧಿಯನ್ನು ಹೊಂದಿದವು. ಬೆತೆಲಿನಲ್ಲಿ ಕೆಲಸಮಾಡುವುದರ ಜೊತೆಗೆ, ನಾನು ಜಿಲ್ಲಾ ಮತ್ತು ಸರ್ಕಿಟ್‌ ಸಮ್ಮೇಳನಗಳಲ್ಲಿ ಸೇವೆ ಸಲ್ಲಿಸಿದೆ ಮತ್ತು ಸಭೆಗಳನ್ನು ಭೇಟಿಮಾಡಿದೆ. ಐರ್‌ಲ್ಯಾಂಡ್‌ನ ಸಭೆಯನ್ನು ಸಹ ಭೇಟಿಮಾಡಿದೆ. ಎರಿಕ್‌ ಫ್ರಾಸ್ಟ್‌ ಮತ್ತು ಯೂರೋಪಿನ ಇತರ ಸಹೋದರ ಸಹೋದರಿಯರನ್ನು ಭೇಟಿಯಾಗುವ ಸುಯೋಗವು ಸಹ ನನಗೆ ಸಿಕ್ಕಿತು. ಇದರ ಜೊತೆಗೆ ನಾಜೀ ಕೂಟ ಶಿಬಿರಗಳ ಭಯಾನಕ ಪರಿಸ್ಥಿತಿಗಳನ್ನು ಎದುರಿಸಿದ ಜೊತೆ ಸಾಕ್ಷಿಗಳ ನಿಷ್ಠೆಯ ಕುರಿತು ಕಲಿತುಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಬೆತೆಲ್‌ ಸೇವೆಯು ನಿಜವಾಗಿಯೂ ಒಂದು ಆಶೀರ್ವಾದಿತ ಸುಯೋಗವಾಗಿತ್ತು.

ಹತ್ತು ವರ್ಷಗಳಿಂದ ಲಂಡನ್ನಿನ ಉತ್ತರಭಾಗದಲ್ಲಿರುವ ವಾಟ್‌ಫೋರ್ಡ್‌ನ ಪಟ್ಟಣದಲ್ಲಿ ಸೇವೆಸಲ್ಲಿಸುತ್ತಿದ್ದ ಒಬ್ಬ ವಿಶೇಷ ಪಯನೀಯರ್‌ ಆಗಿದ್ದ ಜೋನ್‌ ವೆಬ್‌ರ ಪರಿಚಯವು ನನಗಿತ್ತು. 1952ರಲ್ಲಿ ನಾವಿಬ್ಬರೂ ಮದುವೆಯಾದೆವು. ನಾವಿಬ್ಬರೂ ಪೂರ್ಣ ಸಮಯದ ಶುಶ್ರೂಷೆಯನ್ನು ಮುಂದುವರಿಸಲು ಬಯಸಿದ್ದೆವು. ಆದುದರಿಂದ, ನಾನು ಬೆತೆಲ್‌ ಸೇವೆಯನ್ನು ಬಿಟ್ಟ ನಂತರ, ಸರ್ಕಿಟ್‌ ಮೇಲ್ವಿಚಾರಕನಾಗಿ ನೇಮಕಪಡೆದುಕೊಳ್ಳಲು ರೋಮಾಂಚಿತನಾದೆ. ನಮ್ಮ ಮೊದಲ ಸರ್ಕಿಟ್‌, ಇಂಗ್ಲೆಂಡಿನ ದಕ್ಷಿಣ ಸಮುದ್ರತೀರದಲ್ಲಿರುವ ಸುಸೆಕ್ಸ್‌ ಮತ್ತು ಹ್ಯಾಂಪ್‌ಶೇರ್‌ ಪ್ರಾಂತಗಳಾಗಿದ್ದವು. ಸರ್ಕಿಟ್‌ ಕೆಲಸವು ಆ ದಿನಗಳಲ್ಲಿ ಸುಲಭವಾಗಿರಲಿಲ್ಲ. ನಾವು ಮುಖ್ಯವಾಗಿ ಬಸ್ಸಿನಲ್ಲಿ, ಸೈಕಲಿನಲ್ಲಿ ಮತ್ತು ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಿದೆವು. ಅನೇಕ ಸಭೆಗಳಿಗೆ ದೊಡ್ಡ ಮತ್ತು ಹಳ್ಳಿಗಾಡಿನ ಟೆರಿಟೊರಿಗಳು ಇದ್ದವು ಮತ್ತು ಇವುಗಳನ್ನು ಆವರಿಸುವುದು ಅನೇಕ ವೇಳೆ ಕಷ್ಟಕರವಾಗಿತ್ತು. ಆದರೂ ಸಾಕ್ಷಿಗಳ ಸಂಖ್ಯೆಯು ಬೆಳೆಯುತ್ತಲೇ ಹೋಯಿತು.

1958ರಲ್ಲಿ ನ್ಯೂ ಯಾರ್ಕ್‌ ನಗರ

ಇಸವಿ 1957ರಲ್ಲಿ, ಲಂಡನ್ನಿನ ಬೆತೆಲಿನಿಂದ ನನಗೆ ಇನ್ನೊಂದು ಆಮಂತ್ರಣವು ಸಿಕ್ಕಿತು: “ನಮ್ಮ ಆಫೀಸಿಗೆ ಬಂದು, 1958ರಲ್ಲಿ ಯಾಂಕಿ ಸ್ಟೇಡಿಯಮ್‌ ಮತ್ತು ನ್ಯೂ ಯಾರ್ಕ್‌ ನಗರದ ಪೋಲೋ ಗ್ರೌಂಡ್ಸ್‌ನಲ್ಲಿ ನಡೆಯಲಿರುವ ಮುಂದಿನ ಅಂತಾರಾಷ್ಟ್ರೀಯ ಸಮ್ಮೇಳನದ ಪ್ರಯಾಣ ಏರ್ಪಾಡುಗಳನ್ನು ಮಾಡುವುದಕ್ಕಾಗಿ ಸಹಾಯಮಾಡುವೆಯೋ?” ಸೊಸೈಟಿಯು ಬಾಡಿಗೆಗೆ ತೆಗೆದುಕೊಂಡ ವಿಮಾನಗಳಲ್ಲಿ ಮತ್ತು ಹಡಗುಗಳಲ್ಲಿ ಪ್ರಯಾಣಮಾಡಲು ಸಹೋದರರಿಂದ ಬರುವ ಅರ್ಜಿಗಳನ್ನು ಪರಿಶೀಲಿಸುವುದರಲ್ಲಿ ಜೋನ್‌ ಮತ್ತು ನಾನು ಬೇಗನೆ ಕಾರ್ಯಮಗ್ನರಾದೆವು. ದೈವಿಕ ಚಿತ್ತ ಎಂಬ ಅಂತಾರಾಷ್ಟ್ರೀಯ ಸಮ್ಮೇಳನಕ್ಕಾಗಿ 2,53,922ರಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಹಾಜರಿದ್ದರು ಮಾತ್ರವಲ್ಲ ಈ ಅಧಿವೇಶನದಲ್ಲಿ, 7,136 ಮಂದಿ ನೀರಿನ ದೀಕ್ಷಾಸ್ನಾನದ ಮೂಲಕ ತಮ್ಮ ಸಮರ್ಪಣೆಯನ್ನು ಸಂಕೇತಿಸಿಕೊಂಡರು, ಮತ್ತು ಇದು ಬೈಬಲಿನಲ್ಲಿ ದಾಖಲಿಸಲ್ಪಟ್ಟ ಸಾ. ಶ. 33ರ ಪಂಚಾಶತ್ತಮದ ಐತಿಹಾಸಿಕ ಸಂದರ್ಭದಲ್ಲಿ ದೀಕ್ಷಾಸ್ನಾನಪಡೆದುಕೊಂಡ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಈ ಕಾರಣದಿಂದ ಈ ಅಧಿವೇಶನವು ಸುಪ್ರಸಿದ್ಧವಾಯಿತು.—ಅ. ಕೃತ್ಯಗಳು 2:41.

ಸುಮಾರು 123 ದೇಶಗಳಿಂದ ನ್ಯೂ ಯಾರ್ಕ್‌ ನಗರಕ್ಕೆ ಬರಲಿರುವ ಪ್ರತಿನಿಧಿಗಳ ಅಗತ್ಯಗಳನ್ನು ನೋಡಿಕೊಳ್ಳುವುದಕ್ಕಾಗಿ ಸಮ್ಮೇಳನಕ್ಕೆ ಹಾಜರಾಗಲು ಸಹೋದರ ನಾರ್‌ ನಮ್ಮನ್ನು ವೈಯಕ್ತಿಕವಾಗಿ ಆಮಂತ್ರಿಸಿದಾಗ, ಅವರು ತೋರಿಸಿದ ದಯೆಯನ್ನು ಜೋನ್‌ ಮತ್ತು ನಾನು ಎಂದಿಗೂ ಮರೆಯಲಾರೆವು. ಅದು ನಮಗಿಬ್ಬರಿಗೂ ಒಂದು ಸಂತೋಷದ ಮತ್ತು ತೃಪ್ತಿಕರ ಅನುಭವವಾಗಿತ್ತು.

ಪೂರ್ಣ ಸಮಯದ ಸೇವೆಯ ಆಶೀರ್ವಾದಗಳು

ನಾವು ಹಿಂತಿರುಗಿದ ಮೇಲೆ, ಸಂಚರಣ ಕೆಲಸದಲ್ಲಿ ಮುಂದುವರಿದೆವು ಮತ್ತು ಆರೋಗ್ಯ ಸಮಸ್ಯೆಗಳೇಳುವ ವರೆಗೂ ನಾವು ಇದೇ ಕೆಲಸದಲ್ಲಿ ಇದ್ದೆವು. ಜೋನ್‌ಳನ್ನು ಆಸ್ಪತ್ರೆಗೆ ಸೇರಿಸಲಾಯಿತು ಮತ್ತು ನನಗೆ ಅಷ್ಟೇನು ಗಂಭೀರವಾಗಿರದ ಲಕ್ವ ಹೊಡೆಯಿತು. ವಿಶೇಷ ಪಯನೀಯರ್‌ ಸೇವೆಯನ್ನು ಮಾಡುವವರ ದರ್ಜೆಗೆ ನಾವು ಸೇರಿದೆವು ಮತ್ತು ಇದಾದ ನಂತರ ಪುನಃ ಒಮ್ಮೆ ಸರ್ಕಿಟ್‌ ಕೆಲಸದಲ್ಲಿ ತಾತ್ಕಾಲಿಕವಾಗಿ ಸೇವೆಸಲ್ಲಿಸುವ ಸುಯೋಗವನ್ನು ನಾವು ಪಡೆದುಕೊಂಡೆವು. ಕಾಲಕ್ರಮೇಣ, ನಾವು ಬ್ರಿಸ್ಟಲ್‌ಗೆ ಹಿಂತಿರುಗಿದೆವು ಮತ್ತು ಇಲ್ಲಿ ಪೂರ್ಣ ಸಮಯದ ಸೇವೆಯನ್ನು ಮಾಡುತ್ತಿದ್ದೇವೆ. ನನ್ನ ತಮ್ಮನಾದ ಡಿಕ್‌ ಸಹ ತನ್ನ ಕುಟುಂಬದೊಂದಿಗೆ ನಮ್ಮ ಹತ್ತಿರದಲ್ಲಿಯೇ ವಾಸಿಸುತ್ತಾನೆ ಮತ್ತು ನಾವು ಅನೇಕ ವೇಳೆ ಹಿಂದಿನ ವಿಷಯಗಳನ್ನು ನೆನಪಿಸಿಕೊಳ್ಳುತ್ತೇವೆ.

ಇಸವಿ 1971ರಲ್ಲಿ ನನ್ನ ಅಕ್ಷಿಪಟಲದ ಪದರಗಳು ಬೇರ್ಪಟ್ಟಿರುವುದರಿಂದ ನನ್ನ ದೃಷ್ಟಿಯು ಮತ್ತೆ ಸರಿಪಡಿಸಲಾಗದಷ್ಟು ನಷ್ಟಗೊಂಡಿವೆ. ಅಂದಿನಿಂದ ನನಗೆ ಓದುವುದಕ್ಕೆ ಬಹಳ ಕಷ್ಟವಾಗುತ್ತದೆ, ಆದುದರಿಂದಲೇ, ಬೈಬಲ್‌ ಸಾಹಿತ್ಯದ ಕ್ಯಾಸೆಟ್‌ ರೆಕಾರ್ಡಿಂಗ್‌ಗಳು ಯೆಹೋವನಿಂದ ಬಂದಿರುವ ಅದ್ಭುತಕರವಾದ ಒದಗಿಸುವಿಕೆಯಾಗಿ ಕಂಡುಕೊಂಡಿದ್ದೇನೆ. ಜೋನ್‌ ಮತ್ತು ನಾನು ಈಗಲೂ ಮನೆ ಬೈಬಲ್‌ ಅಭ್ಯಾಸಗಳನ್ನು ನಡೆಸುತ್ತಿದ್ದೇವೆ ಮತ್ತು ಈ ಎಲ್ಲ ವರ್ಷಗಳಲ್ಲಿ ಸತ್ಯದ ಜ್ಞಾನಕ್ಕೆ ಬರುವಂತೆ, ಸುಮಾರು 40 ವ್ಯಕ್ತಿಗಳಿಗೆ—ಇದರಲ್ಲಿ ಏಳು ಮಂದಿಯ ಒಂದು ಕುಟುಂಬವು ಸೇರಿದೆ—ಸಹಾಯಮಾಡುವ ಸುಯೋಗವು ನಮಗೆ ದೊರಕಿತು.

ಸುಮಾರು 60 ವರ್ಷಗಳ ಹಿಂದೆ ನಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿದಾಗ, ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸುವ ಮತ್ತು ಅದರಲ್ಲಿಯೇ ಉಳಿಯುವ ಬಯಕೆ ನಮಗೆ ಇತ್ತು. ಈಗಲೂ ಆ ಮಹೋನ್ನತ ದೇವರಾದ ಯೆಹೋವನನ್ನು ಸೇವಿಸಲು ಶಕ್ತರಾಗಿರುವುದಕ್ಕೆ ನಾವೆಷ್ಟು ಕೃತಜ್ಞರಾಗಿದ್ದೇವೆ! ಹೌದು, ಯೆಹೋವನು ನಮಗಾಗಿ ಮಾಡಿರುವ ಎಲ್ಲ ಒಳ್ಳೆಯ ವಿಷಯಗಳಿಗಾಗಿ ಮತ್ತು ನಾವಿಬ್ಬರೂ ಒಟ್ಟಾಗಿ ಅನುಭವಿಸಿದ ಸಂತೋಷಕ್ಕಾಗಿ ಉಪಕಾರವನ್ನು ಸಲ್ಲಿಸುವ ಏಕೈಕ ಮಾರ್ಗವು ಈ ಪಯನೀಯರ್‌ ಸೇವೆಯಾಗಿದೆ.

[ಪಾದಟಿಪ್ಪಣಿ]

^ ಪ್ಯಾರ. 11 ಹೆಗಲಿನ ಮೇಲೆ ತೂಗುಹಾಕಬಹುದಾಗಿದ್ದ ಒಂದು ಬಟ್ಟೆಯ ಬ್ಯಾಗ್‌ ಇದಾಗಿತ್ತು ಮತ್ತು ವಾಚ್‌ಟವರ್‌ ಹಾಗೂ ಕಾನ್ಸಲೇಷನ್‌ (ನಂತರ ಅವೇಕ್‌!)ನ ಪ್ರತಿಗಳನ್ನು ಒಯ್ಯುವುದಕ್ಕಾಗಿ ಇದನ್ನು ಹೊಲಿಸಲಾಗಿತ್ತು.

[ಪುಟ 25ರಲ್ಲಿರುವ ಚಿತ್ರ]

ನಾನು ನನ್ನ ತಮ್ಮನಾದ ಡಿಕ್‌ನೊಂದಿಗೆ (ತೀರ ಎಡಕ್ಕೆ; ಡಿಕ್‌ ನಿಂತುಕೊಂಡಿದ್ದಾನೆ) ಮತ್ತು ಇತರ ಪಯನೀಯರರೊಂದಿಗೆ ಬ್ರಿಸ್ಟಲ್‌ ಪಯನೀಯರ್‌ ಹೋಮ್‌ನ ಮುಂದುಗಡೆ

[ಪುಟ 25ರಲ್ಲಿರುವ ಚಿತ್ರ]

1940ರಲ್ಲಿ ಬ್ರಿಸ್ಟಲ್‌ ಪಯನೀಯರ್‌ ಹೋಮ್‌

[ಪುಟ 26ರಲ್ಲಿರುವ ಚಿತ್ರಗಳು]

ಜನವರಿ 12, 1952, ಸ್ಟ್ಯಾನ್ಲಿ ಮತ್ತು ಜೋನ್‌ ರೆನಾಲ್ಡ್ಸ್‌ ಅವರ ಮದುವೆಯ ದಿನ ಮತ್ತು ಇಂದು