ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇರೆ ಧರ್ಮಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದೊ?

ಬೇರೆ ಧರ್ಮಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದೊ?

ಬೇರೆ ಧರ್ಮಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದೊ?

“ಸುಮಾರು ಒಂದು ವರ್ಷದಿಂದ ನಾನು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದೆ, ಮತ್ತು ಬೇರೆಯವರಿಗೆ ದೇವರ ರಾಜ್ಯದ ಕುರಿತಾಗಿ ತಿಳಿಸುವಾಗ ನನಗೆ ತುಂಬ ಖುಷಿಯಾಗುತ್ತಿತ್ತು. ಅನಂತರ ಸ್ವಲ್ಪ ಸಮಯದೊಳಗೆ ನಾನು ರೇಡಿಯೊದಲ್ಲಿ ಬರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಕಿವಿಗೊಡಲಾರಂಭಿಸಿದೆ ಮತ್ತು ಟೆಲಿವಿಷನ್‌ನಲ್ಲೂ ಬರುವ ಬೇರೆ ಧಾರ್ಮಿಕ ಪ್ರಚಾರಕರ ಕಾರ್ಯಕ್ರಮಗಳನ್ನು ನೋಡಲಾರಂಭಿಸಿದೆ. ಈ ಕಾರ್ಯಕ್ರಮಗಳ ಮೂಲಕ ನಾನು ಬೇರೆ ಧರ್ಮದ ಜನರನ್ನು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂಬುದು ನನ್ನ ಅಭಿಪ್ರಾಯವಾಗಿತ್ತು. ಅವರ ಬೋಧನೆಗಳು ಬೈಬಲಿಗೆ ಹೊಂದಿಕೆಯಲ್ಲಿಲ್ಲ ಎಂಬುದು ನನಗೆ ತಿಳಿದಿತ್ತು. ಆದರೂ ನನಗೆ ಅವರ ಬಗ್ಗೆ ಕುತೂಹಲವಿತ್ತು” ಎಂದು ಮಿಗ್ವಾಲ್‌ ಎಂಬುವವನು ಹೇಳುತ್ತಾನೆ. ಈಗ ಅವನು ದಕ್ಷಿಣ ಅಮೆರಿಕದಲ್ಲಿ ಒಬ್ಬ ಯೆಹೋವನ ಸಾಕ್ಷಿಯಾಗಿದ್ದಾನೆ.

ಅದೇ ದೇಶದಲ್ಲಿ, ಜಾರ್ಜ್‌ ಎಂಬುವವನು, ಬೇರೆಯವರಿಗೆ ಸತ್ಯಾರಾಧನೆಯ ಕುರಿತಾಗಿ ಹುರುಪಿನಿಂದ ಕಲಿಸುತ್ತಾ ಇದ್ದನು. ಆದರೆ ಅವನು ಸಹ, ಒಂದು ಸಮಯದಲ್ಲಿ ರೇಡಿಯೊ ಮತ್ತು ಟೆಲಿವಿಷನ್‌ನಲ್ಲಿ ಬರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಕಿವಿಗೊಡಲಾರಂಭಿಸಿದನು. “ಬೇರೆಯವರ ವಿಚಾರಧಾರಣೆ ಹೇಗಿರುತ್ತದೆಂಬುದು ನಿಮಗೆ ತಿಳಿದಿರಬೇಕು” ಎಂದು ಅವನು ಹೇಳುತ್ತಿದ್ದನು. ಈ ರೀತಿಯಲ್ಲಿ ಸುಳ್ಳು ಬೋಧನೆಗಳಿಗೆ ಕಿವಿಗೊಡುವುದರಿಂದ ಅಪಾಯವಿದೆಯಲ್ಲವೊ ಎಂದು ಯಾರಾದರೂ ಹೇಳುತ್ತಿದ್ದಲ್ಲಿ, “ಬೈಬಲ್‌ ಸತ್ಯ ತಿಳಿದಿರುವವನ ನಂಬಿಕೆಯನ್ನು ಯಾವುದೇ ವಿಷಯವು ಶಿಥಿಲಗೊಳಿಸಲು ಸಾಧ್ಯವೇ ಇಲ್ಲ” ಎಂದವನು ಉತ್ತರ ಕೊಡುತ್ತಿದ್ದನು. ಆದುದರಿಂದ, ಈ ಅನುಭವಗಳು ಈ ಮಹತ್ವಪೂರ್ಣ ಪ್ರಶ್ನೆಯನ್ನು ಎಬ್ಬಿಸುತ್ತವೆ: ಬೇರೆಯವರು ಏನನ್ನು ನಂಬುತ್ತಾರೊ ಅದಕ್ಕೆ ಕಿವಿಗೊಡುವುದು ಬುದ್ಧಿವಂತಿಕೆಯಾಗಿದೆಯೊ?

ನಿಜ ಕ್ರೈಸ್ತತ್ವವನ್ನು ಗುರುತಿಸುವುದು

ಅಪೊಸ್ತಲರೆಲ್ಲರ ಮರಣಾನಂತರ, ಕ್ರೈಸ್ತತ್ವದ ಅನೇಕ ನಕಲಿ ರೂಪಗಳು ಮೆಲ್ಲಮೆಲ್ಲನೆ ಉದಯಿಸಿದವು. ಹೀಗೆ ಸತ್ಯಾರಾಧನೆಯು ಮಲಿನಗೊಂಡಿತು. ಯೇಸು ಇದನ್ನು ಮುಂಗಂಡಿದ್ದನು. ಆದುದರಿಂದ, ನಿಜ ಕ್ರೈಸ್ತತ್ವ ಮತ್ತು ನಕಲಿ ಕ್ರೈಸ್ತತ್ವದ ನಡುವಣ ವ್ಯತ್ಯಾಸವನ್ನು ಕಂಡುಹಿಡಿಯುವ ಒಂದು ಮಾರ್ಗವನ್ನು ಅವನು ತಿಳಿಸಿದನು. ಅದಕ್ಕಿಂತ ಮುಂಚೆ ಅವನು ಈ ಎಚ್ಚರಿಕೆಯನ್ನು ಕೊಟ್ಟನು: “ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ.” ಅನಂತರ ಅವನು ಕೂಡಿಸಿ ಹೇಳಿದ್ದು: “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ.” (ಮತ್ತಾಯ 7:​15-23) ಯೇಸುವಿನ ನಿಜ ಹಿಂಬಾಲಕರು ಅವನು ಏನನ್ನು ಕಲಿಸಿದನೊ ಅದರಂತೆ ನಡೆದುಕೊಂಡರು, ಮತ್ತು ಅವರ ಉತ್ತಮ ಫಲಗಳಿಂದ ಸುಲಭವಾಗಿ ಅವರನ್ನು ಗುರುತುಹಿಡಿಯಸಾಧ್ಯವಿದೆ. ಯೇಸುವಿನಂತೆಯೇ, ಅವರು ಜನರನ್ನು ಭೇಟಿಮಾಡಿ ಶಾಸ್ತ್ರವಚನಗಳಿಂದ ದೇವರ ರಾಜ್ಯದ ಕುರಿತಾಗಿ ವಿವರಿಸುತ್ತಾರೆ. ಯೇಸುವಿನ ಮಾದರಿಗನುಸಾರ, ಅವರು ಲೋಕದ ರಾಜಕೀಯ ಮತ್ತು ಸಾಮಾಜಿಕ ವಾಗ್ವಾದಗಳಿಂದ ದೂರವಿರುತ್ತಾರೆ. ಬೈಬಲ್‌ ಮಾತ್ರ ದೇವರ ವಾಕ್ಯವಾಗಿದೆ ಎಂದು ಅವರು ಅಂಗೀಕರಿಸುತ್ತಾರೆ ಮತ್ತು ಅದೇ ಸತ್ಯವಾಗಿದೆಯೆಂದು ಅದನ್ನು ಗೌರವಿಸುತ್ತಾರೆ. ಅವರು ದೇವರ ಹೆಸರನ್ನು ಪ್ರಸಿದ್ಧಪಡಿಸುತ್ತಾರೆ. ದೇವರು ಕಲಿಸುವಂತಹ ರೀತಿಯ ಪ್ರೀತಿಯನ್ನು ಅವರು ತೋರಿಸಲು ಪ್ರಯತ್ನಿಸುತ್ತಿರುವುದರಿಂದ, ಅವರು ಯುದ್ಧಗಳಲ್ಲೂ ಭಾಗವಹಿಸುವುದಿಲ್ಲ. ಅದಕ್ಕೆ ಬದಲಾಗಿ ಅವರು ಪರಸ್ಪರರನ್ನು ಸಹೋದರರಂತೆ ಉಪಚರಿಸುತ್ತಾರೆ.​—⁠ಲೂಕ 4:43; 10:​1-9; ಯೋಹಾನ 13:​34, 35; 17:​16, 17, 26.

‘ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಕಾಣಸಾಧ್ಯವಿದೆ’ ಎಂದು ಶಾಸ್ತ್ರವಚನಗಳು ತಿಳಿಸುತ್ತವೆ. (ಮಲಾಕಿಯ 3:18) ಪ್ರಥಮ ಶತಮಾನದ ಕ್ರೈಸ್ತರಂತೆ ಇಂದಿನ ಸತ್ಯಾರಾಧಕರು ಸಹ ತಮ್ಮ ಆಚಾರವಿಚಾರಗಳಲ್ಲಿ ಐಕ್ಯರಾಗಿದ್ದಾರೆ. (ಎಫೆಸ 4:​4-6) ಇದೆಲ್ಲವನ್ನು ಮಾಡುತ್ತಿರುವ ಸತ್ಯ ಕ್ರೈಸ್ತರ ಗುಂಪನ್ನು ನೀವು ಕಂಡುಹಿಡಿದ ನಂತರ, ಬೇರೆಯವರ ನಂಬಿಕೆಗಳ ಕುರಿತಾಗಿ ಕುತೂಹಲವನ್ನು ತೋರಿಸುವ ಅಗತ್ಯವೇನು?

ಸುಳ್ಳು ಬೋಧಕರ ಕುರಿತಾಗಿ ಜಾಗ್ರತೆವಹಿಸಿರಿ

ಬೈಬಲ್‌ ಸತ್ಯವನ್ನು ಕಲಿತುಕೊಂಡ ನಂತರವೂ, ಸುಳ್ಳು ಬೋಧನೆಗಳಿಂದ ಕಲುಷಿತರಾಗುವ ಅಪಾಯವಿದೆಯೆಂಬುದನ್ನು ಬೈಬಲ್‌ ತಿಳಿಸುತ್ತದೆ. ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು [“ಬೇಟೆಯಾಗಿ ಎತ್ತಿಕೊಂಡು ಹೋದಾರು,” NW], ಎಚ್ಚರಿಕೆಯಾಗಿರ್ರಿ.” (ಕೊಲೊಸ್ಸೆ 2:8) ಈ ವಚನವು ಕಣ್ಣಿಗೆಕಟ್ಟುವಂತಹ ಚಿತ್ರಣವನ್ನು ನಮ್ಮ ಮುಂದೆ ಇಡುತ್ತದಲ್ಲವೇ! ನಿಮ್ಮನ್ನು ಎತ್ತಿಕೊಂಡು ಹೋಗಿ ಕಬಳಿಸಿಬಿಡಬಲ್ಲ ಕಾಡುಪ್ರಾಣಿಗಳಂತೆ, ಸುಳ್ಳು ಬೋಧಕರು ನಿಜವಾಗಿಯೂ ಅಪಾಯಕಾರಿಯಾಗಿದ್ದಾರೆ.

ಬೇರೆಯವರು ಏನನ್ನು ನಂಬುತ್ತಾರೆಂಬುದಕ್ಕೆ ಪೌಲನು ಗಮನಕೊಟ್ಟನೆಂಬುದು ನಿಜ. ಆದುದರಿಂದಲೇ, ಅವನು ಒಂದು ಸಲ ಈ ರೀತಿಯಲ್ಲಿ ತನ್ನ ಭಾಷಣವನ್ನು ಆರಂಭಿಸಲು ಶಕ್ತನಾಗಿದ್ದನು: “ಅಥೇನೆಯ ಜನರೇ, ನೀವು ಎಲ್ಲಾದರಲ್ಲೂ ಅತಿ ಭಕ್ತಿವಂತರೆಂದು ನನಗೆ ತೋರುತ್ತದೆ. ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ ದೇವತಾಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ತಿಳಿಯದ ದೇವರಿಗೆ ಎಂದು ಬರೆದಿತ್ತು.” (ಅ. ಕೃತ್ಯಗಳು 17:22, 23) ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ, ಪೌಲನು ಗ್ರೀಕ್‌ ಭಾಷಣಕಾರರ ತತ್ವಜ್ಞಾನಗಳನ್ನು ನಿರಂತರವಾಗಿ ಅಭ್ಯಾಸಮಾಡಿ, ಅದನ್ನೇ ತನ್ನ ಮನಸ್ಸಿನಲ್ಲಿ ತುಂಬಿಸಿಕೊಳ್ಳಲಿಲ್ಲ.

ಸುಳ್ಳು ಧರ್ಮಗಳು ಎಲ್ಲಿಂದ ಆರಂಭವಾದವು ಮತ್ತು ಅವರ ನಂಬಿಕೆಗಳೇನು ಎಂಬುದರ ಮಾಹಿತಿಯನ್ನು ಪಡೆದುಕೊಳ್ಳುವುದರಲ್ಲಿ ಏನೂ ತಪ್ಪಿಲ್ಲ. ಆದರೆ ನಿರಂತರವಾಗಿ ಅಂತಹ ವಿಷಯಗಳನ್ನು ಕೇಳಿಸಿಕೊಳ್ಳುವ ಅಥವಾ ಓದುವ ಮೂಲಕ ಅವುಗಳನ್ನು ಮನಸ್ಸಿನಲ್ಲಿ ತುಂಬಿಸಿಕೊಳ್ಳುವುದು ಗಂಭೀರವಾದ ವಿಷಯವಾಗಿದೆ. * ಯೆಹೋವನು ತನ್ನ ವಾಕ್ಯದ ಮೇಲೆ ಆಧಾರಿಸಲ್ಪಟ್ಟಿರುವ ಬೋಧನೆಯನ್ನು ಒದಗಿಸಲಿಕ್ಕಾಗಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು” ನೇಮಿಸಿದ್ದಾನೆ. (ಮತ್ತಾಯ 4:4; 24:45) ಸ್ವತಃ ಪೌಲನು ಹೀಗೆ ಬರೆದನು: “ಕರ್ತನ [“ಯೆಹೋವನ,” NW] ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟಮಾಡಲಾರಿರಿ. ಕರ್ತನನ್ನು ರೇಗಿಸಬೇಕೆಂದಿದ್ದೇವೋ?”​—⁠1 ಕೊರಿಂಥ 10:​20-22.

ಕೆಲವು ಸುಳ್ಳು ಬೋಧಕರು ಹಿಂದೆ ಸತ್ಯ ಕ್ರೈಸ್ತರಾಗಿದ್ದರು, ಆದರೆ ಅವರು ಒಂದು ಹಂತದಲ್ಲಿ ಸತ್ಯದಿಂದ ಹಿಮ್ಮೆಟ್ಟಿ ಸುಳ್ಳನ್ನು ಅವಲಂಬಿಸಿದರು. (ಯೂದ 4, 11) ಇದರಿಂದ ನಮಗೆ ಆಶ್ಚರ್ಯವಾಗಬಾರದು. ಯಾಕೆಂದರೆ ಯೇಸು ಇಂತಹವರ ಕುರಿತಾಗಿ ತಿಳಿಸಿದ್ದನು. ಅಭಿಷಿಕ್ತ ಕ್ರೈಸ್ತರ ಮಂಡಳಿಯನ್ನು ಪ್ರತಿನಿಧಿಸುವ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಕುರಿತಾಗಿ ಮಾತಾಡಿದ ನಂತರ, ಯೇಸು ಒಬ್ಬ ‘ಕೆಟ್ಟ ಆಳಿನ’ ಕುರಿತಾಗಿ ಮಾತಾಡಿದನು. ಈ ಆಳು, “ಯಜಮಾನನು ತಡಮಾಡುತ್ತಾನೆ” ಎಂದು ದೂಷಿಸುವ ಒಂದು ವರ್ಗವಾಗಿದ್ದು, ತನ್ನ ಜೊತೆ ಆಳುಗಳನ್ನು ಹೊಡೆಯಲು ಆರಂಭಿಸುತ್ತದೆಂದು ಯೇಸು ಹೇಳಿದನು. (ಮತ್ತಾಯ 24:​48, 49) ಅನೇಕವೇಳೆ, ಈ ಕೆಟ್ಟ ಆಳು ವರ್ಗದಲ್ಲಿರುವ ವ್ಯಕ್ತಿಗಳಿಗೆ ಮತ್ತು ಅವರ ಹಿಂಬಾಲಕರಿಗೆ ತಮ್ಮದೇ ಆದ ಯಾವುದೇ ಬೋಧನೆಗಳಿರುವುದಿಲ್ಲ. ಬೇರೆಯವರ ನಂಬಿಕೆಯನ್ನು ನಾಶಗೊಳಿಸುವುದೇ ಅವರ ಕೆಲಸವಾಗಿರುತ್ತದೆ. ಅಂಥವರ ಕುರಿತಾಗಿ ಅಪೊಸ್ತಲ ಯೋಹಾನನು ಬರೆದುದು: “ಈ ಉಪದೇಶಕ್ಕೆ ಒಪ್ಪದಿರುವ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ, ಅವನಿಗೆ ಶುಭವಾಗಲಿ ಎಂದು ಹೇಳಬೇಡಿರಿ.”—⁠2 ಯೋಹಾನ 10; 2 ಕೊರಿಂಥ 11:​3, 4, 13-15.

ಸತ್ಯಕ್ಕಾಗಿ ಹುಡುಕುತ್ತಿರುವ ಪ್ರಾಮಾಣಿಕ ಹೃದಯದ ಜನರು, ಬೇರೆ ಬೇರೆ ಧರ್ಮಗಳ ಕುರಿತಾಗಿ ತಾವು ಕೇಳಿಸಿಕೊಳ್ಳುವಂತಹ ಸಂಗತಿಗಳನ್ನು ಜಾಗರೂಕತೆಯಿಂದ ಪರೀಕ್ಷಿಸುವುದು ಒಳ್ಳೇದು. ಸರಿಯಾದ ಸಮಯದಲ್ಲಿ ದೇವರು, ಸತ್ಯಕ್ಕಾಗಿ ಹುಡುಕುವಂತಹ ಪ್ರಾಮಾಣಿಕ ಹೃದಯದ ವ್ಯಕ್ತಿಗಳನ್ನು ಆಶೀರ್ವದಿಸುವನು. ದೈವಿಕ ವಿವೇಕದ ಕುರಿತಾಗಿ ಬೈಬಲ್‌ ಹೀಗನ್ನುತ್ತದೆ: “ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ.” (ಜ್ಞಾನೋಕ್ತಿ 2:4, 5) ಆದರೆ ಈಗಾಗಲೇ ಈ ದೈವಜ್ಞಾನವನ್ನು ಬೈಬಲಿನ ಮೂಲಕ ಮತ್ತು ಕ್ರೈಸ್ತ ಸಭೆಯ ಮೂಲಕ ಕಂಡುಕೊಂಡಿರುವ ಮತ್ತು ಆ ಜ್ಞಾನದ ಪ್ರಕಾರ ನಡೆಯುವವರನ್ನು ಯೆಹೋವನು ಆಶೀರ್ವದಿಸುವ ರೀತಿಯನ್ನು ನೋಡಿರುವ ನಿಜ ಕ್ರೈಸ್ತರು, ಸುಳ್ಳು ಧಾರ್ಮಿಕ ಬೋಧನೆಗಳಿಗೆ ಕಿವಿಗೊಡುವುದನ್ನು ನಿಲ್ಲಿಸುತ್ತಾರೆ.​—⁠2 ತಿಮೊಥೆಯ 3:⁠14.

[ಪಾದಟಿಪ್ಪಣಿ]

^ ಪ್ಯಾರ. 10 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯು ಪ್ರಕಾಶಿಸಿರುವ, ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್‌) ಎಂಬ ಪುಸ್ತಕವು, ಲೋಕದ ಅನೇಕ ಧರ್ಮಗಳ ಹಿನ್ನೆಲೆ ಮತ್ತು ಬೋಧನೆಗಳ ಕುರಿತಾದ ಮುಖ್ಯವಾದ ಮಾಹಿತಿಯನ್ನು ಕೊಡುತ್ತದೆ.