ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಗ್ಗಿಕಾಲಕ್ಕೆ ಮುಂಚೆ ‘ಹೊಲದಲ್ಲಿ’ ಕೆಲಸಮಾಡುವುದು

ಸುಗ್ಗಿಕಾಲಕ್ಕೆ ಮುಂಚೆ ‘ಹೊಲದಲ್ಲಿ’ ಕೆಲಸಮಾಡುವುದು

ಸುಗ್ಗಿಕಾಲಕ್ಕೆ ಮುಂಚೆ ‘ಹೊಲದಲ್ಲಿ’ ಕೆಲಸಮಾಡುವುದು

ಆ ದಿನ ಮಹಾ ಬೋಧಕನು ಹಲವಾರು ಸಾಮ್ಯಗಳನ್ನು ತಿಳಿಸಿದನು. ಅವುಗಳಲ್ಲಿ ಒಂದು, ಗೋದಿ ಮತ್ತು ಹಣಜಿಯ ಕುರಿತಾದ ಚಿಕ್ಕ ಕಥೆಯಾಗಿತ್ತು. ಅದು ಮುಗಿದ ನಂತರ, ಅವನ ಸಭಿಕರಲ್ಲಿ ಹೆಚ್ಚಿನವರು ಹೊರಟು ಹೋದರು. ಆದರೆ ಅವನ ಶಿಷ್ಯರು ಗೊಂದಲಕ್ಕೀಡಾಗಿದ್ದರು. ಯೇಸು ಸುಮ್ಮನೆ ಒಳ್ಳೊಳ್ಳೆಯ ಕಥೆಗಳನ್ನು ಹೇಳುವವನಾಗಿರಲಿಲ್ಲವೆಂದು ಅವರಿಗೆ ತಿಳಿದಿತ್ತು. ಆದುದರಿಂದ, ಅವನ ಸಾಮ್ಯಗಳಿಗೆ, ವಿಶೇಷವಾಗಿ ಗೋದಿ ಮತ್ತು ಹಣಜಿಯ ಕುರಿತಾದ ಆ ಸಾಮ್ಯಕ್ಕೆ ಏನಾದರೂ ವಿಶೇಷ ಅರ್ಥವಿರಲೇಬೇಕೆಂಬುದು ಅವರಿಗೆ ತಿಳಿದಿತ್ತು.

ಹೀಗಿರುವುದರಿಂದ ಅವರು ಅವನ ಬಳಿ ಬಂದು, “ಹೊಲದಲ್ಲಿಯ ಹಣಜಿಯ ಸಾಮ್ಯದ ಅರ್ಥವನ್ನು ನಮಗೆ ಹೇಳು” ಎಂದು ಕೇಳಿದರೆಂದು ಮತ್ತಾಯನು ವರದಿಸುತ್ತಾನೆ. ಆಗ ಯೇಸು ಅವರಿಗೆ ಆ ಸಾಮ್ಯದ ಅರ್ಥವನ್ನು ವಿವರಿಸುತ್ತಾ, ತನ್ನ ಶಿಷ್ಯರೆಂದು ಹೇಳಿಕೊಳ್ಳುವವರ ನಡುವೆ ದೊಡ್ಡ ಪ್ರಮಾಣದಲ್ಲಿ ಧರ್ಮಭ್ರಷ್ಟತೆಯು ಬೆಳೆಯುವುದೆಂಬುದನ್ನು ಮುಂತಿಳಿಸಿದನು. (ಮತ್ತಾಯ 13:​24-30, 36-38, 43) ಅವನು ಮುಂತಿಳಿಸಿದಂತೆಯೇ ಆಯಿತು. ಅಪೊಸ್ತಲ ಯೋಹಾನನ ಮರಣದ ನಂತರ ಧರ್ಮಭ್ರಷ್ಟತೆಯು ಶೀಘ್ರವಾಗಿ ಹಬ್ಬಿಕೊಂಡಿತು. (ಅ. ಕೃತ್ಯಗಳು 20:​29, 30; 2 ಥೆಸಲೊನೀಕ 2:​6-12) ಅದರ ಪರಿಣಾಮಗಳು ಎಷ್ಟು ವ್ಯಾಪಕವಾಗಿರಲಿದ್ದವೆಂದರೆ, ಲೂಕ 18:8ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಪ್ರಶ್ನೆಯು ಯಥೋಚಿತವಾಗಿತ್ತು. ಅದೇನೆಂದರೆ, “ಹೀಗಿದ್ದರೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?”

ಯೇಸುವಿನ ಆಗಮನವು, ಗೋದಿಸದೃಶ ಕ್ರೈಸ್ತರನ್ನು ಒಟ್ಟುಗೂಡಿಸುವ “ಸುಗ್ಗಿಕಾಲದ” ಆರಂಭವಾಗಿರಲಿತ್ತು. ಅದು, 1914ರಲ್ಲಿ ಪ್ರಾರಂಭವಾದ “ಯುಗದ ಸಮಾಪ್ತಿ”ಯ ಆರಂಭವೂ ಆಗಿರಲಿತ್ತು. ಆದುದರಿಂದ, ಆ ಸುಗ್ಗಿಕಾಲದ ಆರಂಭಕ್ಕೆ ನಡೆಸುತ್ತಿದ್ದ ಸಮಯಾವಧಿಯಲ್ಲಿ, ಬೈಬಲ್‌ ಸತ್ಯದ ಕುರಿತಾಗಿ ಕೆಲವರು ಆಸಕ್ತಿಯನ್ನು ತೋರಿಸಲಾರಂಭಿಸಿದ್ದರೆಂಬುದು ಆಶ್ಚರ್ಯಕರ ಸಂಗತಿಯೇನಾಗಿರಲಿಲ್ಲ.​—⁠ಮತ್ತಾಯ 13:⁠39.

ವಿಶೇಷವಾಗಿ 15ನೆಯ ಶತಮಾನದಂದಿನಿಂದ ಇದು ಆರಂಭವಾಯಿತೆಂದು ಐತಿಹಾಸಿಕ ದಾಖಲೆಯು ತೋರಿಸುತ್ತದೆ. “ಹಣಜಿ”ಯಂತಿದ್ದವರು ಅಥವಾ ನಕಲಿ ಕ್ರೈಸ್ತರಾಗಿದ್ದ ಕ್ರೈಸ್ತಪ್ರಪಂಚದ ಜನರಲ್ಲೂ ಬೈಬಲ್‌ ಸತ್ಯದ ಕುರಿತು ಆಸಕ್ತಿಯು ಹೆಚ್ಚತೊಡಗಿತು. ಬೈಬಲ್‌ ಎಲ್ಲರಿಗೂ ಸುಲಭವಾಗಿ ಲಭ್ಯವಾದಂತೆ ಮತ್ತು ಬೈಬಲಿನ ಮುಖ್ಯಪದಗಳ ಅನುಕ್ರಮಣಿಕೆಗಳು ತಯಾರಿಸಲ್ಪಟ್ಟಂತೆ, ಪ್ರಾಮಾಣಿಕ ಹೃದಯದ ವ್ಯಕ್ತಿಗಳು ಶಾಸ್ತ್ರವಚನಗಳನ್ನು ಕೂಲಂಕಷವಾಗಿ ಅಭ್ಯಾಸಮಾಡಲಾರಂಭಿಸಿದರು.

ಬೆಳಕು ಹೆಚ್ಚು ಪ್ರಕಾಶಮಾನವಾಗುತ್ತದೆ

ಅಂಥ ಜನರಲ್ಲಿ, 19ನೆಯ ಶತಮಾನದ ಕೊನೆಯ ಭಾಗದಲ್ಲಿ (1781-1862) ಜೀವಿಸಿದ್ದ ಹೆನ್ರಿ ಗ್ರೂ ಒಬ್ಬನಾಗಿದ್ದನು. ಅವನು ಇಂಗ್ಲೆಂಡಿನ ಬರ್ಮಿಂಗ್ಹಾಂನವನಾಗಿದ್ದನು. 13 ವರ್ಷದವನಾಗಿದ್ದಾಗ, ಅವನು ತನ್ನ ಕುಟುಂಬದೊಂದಿಗೆ ಅಟ್ಲಾಂಟಿಕ್‌ ಸಾಗರವನ್ನು ದಾಟಿ, 1795ರ ಜುಲೈ 8ರಂದು ಅಮೆರಿಕಕ್ಕೆ ಆಗಮಿಸಿದ್ದನು. ಅವರು ರೋಡ್ಸ್‌ ಐಲೆಂಡ್ಸ್‌ನ ಪ್ರಾವಿಡೆನ್ಸ್‌ ಎಂಬಲ್ಲಿ ನೆಲೆಸಿದರು. ಅವನ ಹೆತ್ತವರು ಅವನಲ್ಲಿ ಬೈಬಲಿಗಾಗಿ ಪ್ರೀತಿಯನ್ನು ಬೇರೂರಿಸಿದರು. 1807ರಲ್ಲಿ, ಅವನು 25 ವರ್ಷದವನಾಗಿದ್ದಾಗ, ಕನೆಕ್ಟಿಕಟ್‌ನ ಹಾರ್ಟ್‌ಫೊರ್ಡ್‌ನಲ್ಲಿರುವ ಬ್ಯಾಪ್ಟಿಸ್ಟ್‌ ಚರ್ಚಿನಲ್ಲಿ ಪಾಸ್ಟರ್‌ ಆಗಿ ಕೆಲಸಮಾಡಲು ಆಮಂತ್ರಿಸಲ್ಪಟ್ಟನು.

ತನಗೆ ವಹಿಸಲ್ಪಟ್ಟಿದ್ದ ಕಲಿಸುವಿಕೆಯ ಜವಾಬ್ದಾರಿಗಳನ್ನು ಅವನು ಗಂಭೀರ ರೀತಿಯಲ್ಲಿ ನಿಭಾಯಿಸಿದನು. ಅಲ್ಲದೆ, ತನ್ನ ಕೈಕೆಳಗಿರುವವರು ಶಾಸ್ತ್ರವಚನಗಳಿಗನುಗುಣವಾಗಿ ಜೀವಿಸುವಂತೆ ಸಹಾಯಮಾಡಲು ಪ್ರಯತ್ನಿಸಿದನು. ಆದರೆ, ಯಾರು ಉದ್ದೇಶಪೂರ್ವಕವಾಗಿ ಪಾಪವನ್ನು ಮಾಡುತ್ತಾ ಇದ್ದರೊ ಅಂಥವರಿಂದ ಸಭೆಯನ್ನು ಶುದ್ಧವಾಗಿರಿಸುವುದು ಪ್ರಾಮುಖ್ಯವೆಂದು ಅವನು ನಂಬಿದನು. ಜಾರತ್ವಮಾಡಿದವರನ್ನು ಅಥವಾ ಬೇರಾವುದೇ ಅಶುದ್ಧ ಕೆಲಸಗಳಲ್ಲಿ ತೊಡಗಿದ್ದವರನ್ನು, ಚರ್ಚಿನಲ್ಲಿನ ಇತರ ಜವಾಬ್ದಾರಿಯುತ ಪುರುಷರೊಂದಿಗೆ ಸೇರಿ ಅವನು ಕೆಲವೊಮ್ಮೆ ಅವರನ್ನು ಹೊರಹಾಕಬೇಕಾಗುತ್ತಿತ್ತು (ಬಹಿಷ್ಕಾರಮಾಡಬೇಕಾಗುತ್ತಿತ್ತು).

ಅವನಿಗೆ ತುಂಬ ಚಿಂತೆಯನ್ನುಂಟುಮಾಡಿದ ಇತರ ಸಮಸ್ಯೆಗಳೂ ಚರ್ಚಿನಲ್ಲಿದ್ದವು. ಉದಾಹರಣೆಗಾಗಿ, ಚರ್ಚಿನ ಸದಸ್ಯರಾಗಿರದಂತಹ ಕೆಲವರು ಚರ್ಚಿನ ವ್ಯಾಪಾರವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದರು ಮತ್ತು ಆರಾಧನೆಯ ಸಮಯಗಳಲ್ಲಿ ಗೀತೆಗಳನ್ನು ಹಾಡುವುದರಲ್ಲಿ ಮುಂದಾಳುತ್ವ ವಹಿಸುತ್ತಿದ್ದರು. ಅಷ್ಟುಮಾತ್ರವಲ್ಲ, ಅವರು ಸಭೆಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ತಮ್ಮ ಮತವನ್ನೂ ಹಾಕಬಹುದಿತ್ತು. ಈ ರೀತಿಯಲ್ಲಿ ಅವರು ಚರ್ಚಿನ ವ್ಯವಹಾರಗಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಲು ಶಕ್ತರಾಗಿದ್ದರು. ಆದರೆ ಕ್ರೈಸ್ತರು ಲೋಕದಿಂದ ಪ್ರತ್ಯೇಕರಾಗಿರಬೇಕೆಂಬ ಸಿದ್ಧಾಂತವು ಬೈಬಲಿನಲ್ಲಿರುವುದರಿಂದ, ಕೇವಲ ನಂಬಿಗಸ್ತ ಪುರುಷರು ಈ ಕೆಲಸಗಳನ್ನು ಮಾಡಬೇಕೆಂಬುದು ಗ್ರೂನ ಬಲವಾದ ಅಭಿಪ್ರಾಯವಾಗಿತ್ತು. (2 ಕೊರಿಂಥ 6:​14-18; ಯಾಕೋಬ 1:⁠27) ಅವನ ದೃಷ್ಟಿಕೋನದಲ್ಲಿ, ಅವಿಶ್ವಾಸಿಗಳ ಬಾಯಿಂದ ದೇವರಿಗೆ ಸ್ತುತಿಗೀತೆಗಳನ್ನು ಹಾಡಿಸುವುದು, ದೇವನಿಂದೆಯಾಗಿತ್ತು. ಅವನ ಈ ನಿಲುವಿನಿಂದಾಗಿ, 1811ರಲ್ಲಿ ಚರ್ಚು ಹೆನ್ರಿ ಗ್ರೂನನ್ನು ತಿರಸ್ಕರಿಸಿತು. ಅವನಿಗಿದ್ದಂತಹ ಅಭಿಪ್ರಾಯಗಳಿದ್ದ ಬೇರೆ ಸದಸ್ಯರು ಸಹ ಅದೇ ಸಮಯದಲ್ಲಿ ಚರ್ಚಿನಿಂದ ಬೇರ್ಪಟ್ಟರು.

ಕ್ರೈಸ್ತಪ್ರಪಂಚದಿಂದ ಪ್ರತ್ಯೇಕಗೊಳ್ಳುವುದು

ಈ ಗುಂಪಿನವರು, ಬೈಬಲಿನ ಸಲಹೆಗಳಿಗನುಗುಣವಾಗಿ ತಮ್ಮ ಜೀವಿತಗಳನ್ನು ಮತ್ತು ಚಟುವಟಿಕೆಗಳನ್ನು ಹೊಂದಿಸಿಕೊಳ್ಳುವ ಗುರಿಯೊಂದಿಗೆ ಬೈಬಲಿನ ಅಭ್ಯಾಸಮಾಡಲು ಆರಂಭಿಸಿದರು. ಅವರ ಅಭ್ಯಾಸಗಳಿಂದಾಗಿ, ಶೀಘ್ರವಾಗಿ ಬೈಬಲ್‌ ಸತ್ಯದ ಹೆಚ್ಚಿನ ತಿಳುವಳಿಕೆಯನ್ನು ಅವರು ಪಡೆದುಕೊಂಡರು ಮತ್ತು ಇದು ಅವರು ಕ್ರೈಸ್ತಪ್ರಪಂಚದ ತಪ್ಪುಗಳನ್ನು ಬಯಲುಗೊಳಿಸುವಂತೆ ಮಾಡಿತು. ಉದಾಹರಣೆಗಾಗಿ, 1824ರಲ್ಲಿ, ತ್ರಯೈಕ್ಯವನ್ನು ತಪ್ಪೆಂದು ತೋರಿಸುತ್ತಾ ಗ್ರೂ ಒಂದು ತರ್ಕಬದ್ಧ ವಾದವನ್ನು ಬರೆದನು. ಅವನ ಬರಹಗಳಲ್ಲಿ ಈ ಭಾಗದಲ್ಲಿರುವ ತರ್ಕಬದ್ಧತೆಯನ್ನು ಗಮನಿಸಿರಿ: “‘ಆ ದಿನದ ಕುರಿತು, ಮತ್ತು ಆ ಗಳಿಗೆಯ ಕುರಿತು ಯಾವುದೇ ಮನುಷ್ಯನಿಗೆ ತಿಳಿಯದು, ಸ್ವರ್ಗದಲ್ಲಿರುವ ದೇವದೂತರಿಗೂ ತಿಳಿಯದು, ಮಗನಿಗೂ ತಿಳಿಯದು, ಕೇವಲ ತಂದೆಗೆ ಮಾತ್ರ ತಿಳಿದಿರುವುದು.’ [ಮಾರ್ಕ 13:32] ಇಲ್ಲಿ ಈ ಜೀವಿಗಳನ್ನು ಯಾವ ಶ್ರೇಣಿಯಲ್ಲಿ ಪಟ್ಟಿಮಾಡಲಾಗಿದೆ ಎಂಬುದನ್ನು ಗಮನಿಸಿರಿ. ಮನುಷ್ಯ, ದೇವದೂತರು, ಮಗನು, ತಂದೆ. . . . ಆ ದಿನದ ಬಗ್ಗೆ ಕೇವಲ ತಂದೆಗೆ ತಿಳಿದಿದೆ ಎಂದು ನಮ್ಮ ಪ್ರಭು ಕಲಿಸುತ್ತಾನೆ. ಆದರೆ ಕೆಲವರು ನಂಬುವಂತೆ, ತಂದೆ, ವಾಕ್ಯ ಮತ್ತು ಪವಿತ್ರಾತ್ಮವು ಒಬ್ಬ ದೇವರಲ್ಲಿರುವ ಮೂರು ವ್ಯಕ್ತಿಗಳಾಗಿರುವಲ್ಲಿ, ಈ ಮಾತುಗಳು ಸತ್ಯವಲ್ಲ; ಏಕೆಂದರೆ ಇದಕ್ಕನುಸಾರ [ತ್ರಯೈಕ್ಯ ಬೋಧನೆಗನುಸಾರ] . . . ತಂದೆ ಮತ್ತು ಮಗನಿಗೆ ಸಮಾನವಾದ ತಿಳುವಳಿಕೆಯಿದೆ.”

ಕ್ರಿಸ್ತನ ಸೇವೆಮಾಡುತ್ತಿದ್ದೇವೆಂಬ ಸೋಗನ್ನು ಹಾಕುತ್ತಿದ್ದ ಪಾದ್ರಿಗಳ ಮತ್ತು ಮಿಲಿಟರಿ ಕಮಾಂಡರುಗಳ ಕಪಟಾಚರಣೆಯನ್ನು ಗ್ರೂ ಬಯಲಿಗೆಳೆದನು. 1828ರಲ್ಲಿ ಅವನು ಹೀಗೆ ಘೋಷಿಸಿದನು: “ಒಬ್ಬ ಕ್ರೈಸ್ತನು ತನ್ನ ಖಾಸಗಿ ಕೋಣೆಯಲ್ಲಿ ತನ್ನ ಶತ್ರುಗಳಿಗಾಗಿ ಪ್ರಾರ್ಥನೆಮಾಡಿ, ಅನಂತರ ಹೊರಗೆ ಬಂದು ಅದೇ ಶತ್ರುಗಳ ಗುಂಡಿಗೆಗಳಲ್ಲಿ ಪೈಶಾಚಿಕ ಕೋಪದೊಂದಿಗೆ ಮೃತ್ಯುವಿನ ಶಸ್ತ್ರಗಳನ್ನು ತೂರಿಸುವಂತೆ ತನ್ನ ಸೈನಿಕರಿಗೆ ಅಪ್ಪಣೆಕೊಡುವುದಕ್ಕಿಂತಲೂ ಹೆಚ್ಚು ಅಸಂಬದ್ಧವಾದ ಬೇರೊಂದು ಸಂಗತಿಯನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೊ? ಒಂದು ಸನ್ನಿವೇಶದಲ್ಲಿ ಅವನು ಸಾಯುತ್ತಿರುವ ತನ್ನ ಧಣಿಯನ್ನು ಹೋಲುತ್ತಾನೆ; ಆದರೆ ಇನ್ನೊಂದು ಸನ್ನಿವೇಶದಲ್ಲಿ ಅವನು ಯಾರನ್ನು ಹೋಲುತ್ತಾನೆ? ಯೇಸು ತನ್ನ ಕೊಲೆಗಾರರಿಗಾಗಿ ಪ್ರಾರ್ಥಿಸಿದನು. ಆದರೆ ಕ್ರೈಸ್ತರು, ಯಾರಿಗಾಗಿ ಪ್ರಾರ್ಥಿಸುತ್ತಾರೊ ಅವರನ್ನೇ ಕೊಲೆಮಾಡುತ್ತಾರೆ.”

ಇನ್ನೂ ಹೆಚ್ಚು ಬಲವತ್ತಾಗಿ, ಗ್ರೂ ಹೀಗೆ ಬರೆದನು: “‘ತಾನು ಮೋಸ ಹೋಗಲಾರೆನು’ ಎಂದು ಸರ್ವಶಕ್ತನು ನಮಗೆ ಹೇಳಿರುವ ಮಾತುಗಳನ್ನು ನಾವು ಯಾವಾಗ ನಂಬುವೆವು? ‘ಕೆಡುಕನ್ನು ಯೋಚಿಸಲೂ’ಬಾರದೆಂದು ಹೇಳುವ ಆ ಪವಿತ್ರ ಧರ್ಮದ ಸ್ವರೂಪ, ಗುಣಲಕ್ಷಣವನ್ನು ನಾವು ಯಾವಾಗ ಅರ್ಥಮಾಡಿಕೊಳ್ಳುವೆವು? . . . ಅವನ ಧರ್ಮವು, ಒಬ್ಬ ಮನುಷ್ಯನು ಒಂದು ಸನ್ನಿವೇಶದಲ್ಲಿ ಒಬ್ಬ ದೇವದೂತನಂತೆ, ಮತ್ತು ಇನ್ನೊಂದು ಸನ್ನಿವೇಶದಲ್ಲಿ ಒಂದು ದೆವ್ವದಂತೆ ವರ್ತಿಸುವಂತೆ ಬಿಡುತ್ತದೆಂಬ ಅಭಿಪ್ರಾಯವನ್ನು ಕೊಡುವುದು, ದೇವರ ಮಗನಿಗೆ ಮಾನಹಾನಿಯನ್ನು ಮಾಡುವಂತಿಲ್ಲವೊ?”

ನಿತ್ಯಜೀವವು ಬಾಧ್ಯತೆಯಾಗಿ ಬರುವುದಿಲ್ಲ

ಆ ಕಾಲದಲ್ಲಿ ರೇಡಿಯೊ ಟೆಲಿವಿಷನ್‌ಗಳಿರಲಿಲ್ಲ. ಆದುದರಿಂದ ಒಬ್ಬ ವ್ಯಕ್ತಿಯು ತನ್ನ ಅಭಿಪ್ರಾಯಗಳನ್ನು ಕಿರುಪುಸ್ತಕಗಳಲ್ಲಿ ಮುದ್ರಿಸಿ, ವಿತರಿಸಿ ವ್ಯಕ್ತಪಡಿಸುವುದು ಒಂದು ಸಾಮಾನ್ಯ ವಿಧಾನವಾಗಿತ್ತು. ಸುಮಾರು 1835ರಷ್ಟಕ್ಕೆ ಗ್ರೂ ಒಂದು ಮಹತ್ವಪೂರ್ಣ ಕಿರುಪುಸ್ತಕವನ್ನು ಬರೆದನು. ಅದು, ಆತ್ಮದ ಅಮರತ್ವ ಮತ್ತು ನರಕಾಗ್ನಿಯಂತಹ ಬೋಧನೆಗಳು ಬೈಬಲಿನಲ್ಲಿಲ್ಲವೆಂಬುದನ್ನು ತೋರಿಸಿತು. ಈ ಬೋಧನೆಗಳು ದೇವನಿಂದಕವಾಗಿದ್ದವೆಂದು ಗ್ರೂಗೆ ಅನಿಸಿತು.

ಈ ಕಿರುಪುಸ್ತಕದ ಪ್ರಭಾವವು ಬಹು ದೂರದ ವರೆಗೆ ಹಬ್ಬಲಿತ್ತು. 1837ರಲ್ಲಿ, 40 ವರ್ಷ ಪ್ರಾಯದ ಜಾರ್ಜ್‌ ಸ್ಟೊರ್ಸ್‌ ಎಂಬುವವನಿಗೆ, ಒಂದು ರೈಲುಗಾಡಿಯಲ್ಲಿ ಆ ಕಿರುಪುಸ್ತಕದ ಒಂದು ಪ್ರತಿಯು ಸಿಕ್ಕಿತು. ಸ್ಟೊರ್ಸ್‌ ನ್ಯೂ ಹ್ಯಾಂಪ್‌ಶೈಯರ್‌ ಲೆಬನಾನಿನ ನಿವಾಸಿಯಾಗಿದ್ದನು. ಆದರೆ ಈ ಸಮಯದಲ್ಲಿ ಅವನು ನ್ಯೂ ಯಾರ್ಕಿನ ಯ್ಯೂಟಿಕಾದಲ್ಲಿ ವಾಸಿಸುತ್ತಿದ್ದನು.

ಮೆತೊಡಿಸ್ಟ್‌ ಎಪಿಸ್ಕೊಪಲ್‌ ಚರ್ಚಿನಲ್ಲಿ ಅವನು ತುಂಬ ಗೌರವಾನ್ವಿತ ಪಾದ್ರಿಯಾಗಿದ್ದನು. ಆ ಕಿರುಪುಸ್ತಕವನ್ನು ಓದಿದ ಬಳಿಕ, ಕ್ರೈಸ್ತಪ್ರಪಂಚದ ಈ ಮೂಲಭೂತ ಬೋಧನೆಗಳ ವಿರುದ್ಧ ಮಾಡಲಾದ ಅಂಥ ಬಲವಾದ ವಾದದಿಂದ ಅವನು ತುಂಬ ಪ್ರಭಾವಿತನಾದನು. ಯಾಕೆಂದರೆ ಆ ಬೋಧನೆಗಳನ್ನು ಅವನು ಹಿಂದೆಂದೂ ಸಂದೇಹಿಸಿರಲೇ ಇಲ್ಲ. ಆ ಕಿರುಪುಸ್ತಕದ ಲೇಖಕನು ಯಾರೆಂದು ಸಹ ಅವನಿಗೆ ತಿಳಿದಿರಲಿಲ್ಲ. ಕೆಲವು ವರ್ಷಗಳ ಬಳಿಕವೇ ಅವನಿಗೆ ಗೊತ್ತಾಯಿತು. ಅದು ಸಹ ಸುಮಾರು 1844ರಲ್ಲಿ, ಅವನು ಮತ್ತು ಹೆನ್ರಿ ಗ್ರೂ ಪೆನ್ಸಿಲ್ವೇನಿಯದ ಫಿಲಡೆಲ್ಫಿಯಾದಲ್ಲಿ ವಾಸಿಸುತ್ತಿದ್ದಾಗ ಅವರ ಭೇಟಿಯಾಯಿತು. ಹಾಗಿದ್ದರೂ, ತನ್ಮಧ್ಯೆ ಸ್ಟೊರ್ಸ್‌ ತನ್ನಷ್ಟಕ್ಕೇ ಮೂರು ವರ್ಷಗಳ ವರೆಗೆ ಆ ವಿಷಯವನ್ನು ಅಭ್ಯಾಸಮಾಡಿದನು. ಮತ್ತು ಅದರ ಕುರಿತಾಗಿ ಕೇವಲ ಬೇರೆ ಪಾದ್ರಿಗಳೊಂದಿಗೆ ಮಾತಾಡಿದನು.

ಆದರೆ ಅವನು ಕಲಿಯುತ್ತಿದ್ದ ವಿಷಯಗಳು ತಪ್ಪೆಂದು ಅವರಲ್ಲಿ ಯಾರೂ ಸಿದ್ಧಮಾಡಿತೋರಿಸಲು ಶಕ್ತರಿರಲಿಲ್ಲ. ಆದುದರಿಂದ ತಾನು ಮೆತೊಡಿಸ್ಟ್‌ ಚರ್ಚಿನಲ್ಲೇ ಉಳಿದರೆ, ದೇವರಿಗೆ ನಂಬಿಗಸ್ತನಾಗಿರಲಾರೆನೆಂಬ ತೀರ್ಮಾನಕ್ಕೆ ಜಾರ್ಜ್‌ ಸ್ಟೊರ್ಸ್‌ ಬಂದನು. 1840ರಲ್ಲಿ ಅವನು ರಾಜೀನಾಮೆ ಕೊಟ್ಟು, ನ್ಯೂ ಯಾರ್ಕಿನ ಆಲ್ಬೇನಿಗೆ ಸ್ಥಳಾಂತರಿಸಿದನು.

1842ರ ವಸಂತಕಾಲದ ಆರಂಭದಲ್ಲಿ, “ಒಂದು ವಿಚಾರಣೆ​—⁠ದುಷ್ಟರು ಅಮರರೊ?” ಎಂಬ ವಿಷಯದ ಮೇಲೆ ಸ್ಟೊರ್ಸ್‌ ಆರು ಭಾಷಣಗಳ ಸರಮಾಲೆಯನ್ನು ಆರು ವಾರಗಳಲ್ಲಿ ಪ್ರಸ್ತುತಪಡಿಸಿದನು. ಎಷ್ಟೊಂದು ಆಸಕ್ತಿಯು ತೋರಿಸಲ್ಪಟ್ಟಿತ್ತೆಂದರೆ, ಅವನು ಆ ಭಾಷಣದ ವಿಷಯದಲ್ಲಿ ತಿದ್ದುಪಡಿಗಳನ್ನು ಮಾಡಿ, ಮುದ್ರಿಸಿದನು. ಮತ್ತು ಮುಂದಿನ 40 ವರ್ಷಗಳಲ್ಲಿ, ಅದರ ಪ್ರಸಾರ ಸಂಖ್ಯೆಯು ಅಮೆರಿಕದಲ್ಲಿ ಮತ್ತು ಗ್ರೇಟ್‌ ಬ್ರಿಟನ್‌ನಲ್ಲಿ 2,00,000ದಷ್ಟಕ್ಕೆ ತಲಪಿತ್ತು. ಅಮರ ಆತ್ಮದ ಬೋಧನೆಯ ಕುರಿತಾದ ವಾಗ್ವಾದಗಳಲ್ಲಿ ಸ್ಟೊರ್ಸ್‌ ಮತ್ತು ಗ್ರೂ ಜೊತೆಗೂಡಿ ಕೆಲಸಮಾಡುತ್ತಿದ್ದರು. 1862ರ ಆಗಸ್ಟ್‌ 8ರಂದು ಫಿಲಡೆಲ್ಫಿಯದಲ್ಲಿ ಸಾಯುವ ವರೆಗೂ, ಗ್ರೂ ಹುರುಪಿನಿಂದ ಸಾರುವುದನ್ನು ಮುಂದುವರಿಸಿದನು.

ಈಗ ತಿಳಿಸಲ್ಪಟ್ಟಿರುವ ಆ ಆರು ಭಾಷಣಗಳನ್ನು ಸಾದರಪಡಿಸಿದ ನಂತರದ ಸ್ವಲ್ಪ ಸಮಯದಲ್ಲಿ, ವಿಲ್ಯಮ್‌ ಮಿಲ್ಲರ್‌ ಎಂಬ ವ್ಯಕ್ತಿಯ ಸಾರುವಿಕೆಯಲ್ಲಿ ಸ್ಟೊರ್ಸ್‌ ಆಸಕ್ತನಾದನು. ಕ್ರಿಸ್ತನು 1843ರಲ್ಲಿ ದೃಶ್ಯರೂಪದಲ್ಲಿ ಹಿಂದಿರುಗುವುದನ್ನು ಮಿಲ್ಲರ್‌ ನಿರೀಕ್ಷಿಸುತ್ತಿದ್ದನು. ಸುಮಾರು ಎರಡು ವರ್ಷಗಳ ವರೆಗೆ, ನೈರುತ್ಯ ಅಮೆರಿಕದಲ್ಲೆಲ್ಲಾ ಈ ಸಂದೇಶವನ್ನು ಸಾರುವುದರಲ್ಲಿ ಸ್ಟೊರ್ಸ್‌ ಸಕ್ರಿಯವಾಗಿ ಒಳಗೊಂಡಿದ್ದನು. ಆದರೆ 1844ರ ನಂತರ, ಕ್ರಿಸ್ತನ ಪುನರಾಗಮನಕ್ಕೆ ಒಂದು ತಾರೀಖನ್ನು ಇಡುವ ವಿಚಾರದೊಂದಿಗೆ ಮುಂದುವರಿಯಲು ಅವನಿಂದ ಸಾಧ್ಯವಾಗಲಿಲ್ಲ. ಆದರೆ ಇತರರು ಆ ತಾರೀಖನ್ನು ಕಂಡುಹಿಡಿಯಲಿಕ್ಕಾಗಿ ಕಾಲಗಣನಶಾಸ್ತ್ರವನ್ನು ಪರೀಕ್ಷಿಸಲು ಬಯಸುತ್ತಿದ್ದಲ್ಲಿ ಅವನದೇನೂ ಅಭ್ಯಂತರವಿರುತ್ತಿರಲಿಲ್ಲ. ಕ್ರಿಸ್ತನ ಆಗಮನವು ಹತ್ತಿರವಿದೆ, ಮತ್ತು ಕ್ರೈಸ್ತರು ಆ ಪರೀಕ್ಷಣೆಯ ದಿನಕ್ಕಾಗಿ ಸಿದ್ಧರಾಗಿದ್ದು, ಎಚ್ಚರವುಳ್ಳವರೂ ಆತ್ಮಿಕವಾಗಿ ಜಾಗರೂಕರೂ ಆಗಿರುವುದು ಪ್ರಾಮುಖ್ಯವೆಂದು ಸ್ಟೊರ್ಸ್‌ ನಂಬಿದನು. ಆದರೆ ಅವನು ಮಿಲ್ಲರ್‌ನ ಗುಂಪಿನಿಂದ ಬೇರ್ಪಟ್ಟನು. ಯಾಕೆಂದರೆ, ಆತ್ಮವು ಅಮರವಾಗಿದೆ, ಲೋಕವು ಸುಟ್ಟುಹೋಗಲಿದೆ, ಮತ್ತು ಅಜ್ಞಾನದಲ್ಲೇ ಸತ್ತುಹೋಗಿರುವವರಿಗಾಗಿ ನಿತ್ಯಜೀವದ ಯಾವುದೇ ನಿರೀಕ್ಷೆಯಿಲ್ಲ ಎಂಬಂತಹ ಬೈಬಲಿನಲ್ಲಿಲ್ಲದ ಬೋಧನೆಗಳನ್ನು ಅವರು ನಂಬುತ್ತಿದ್ದರು.

ದೇವರ ಪ್ರೀತಿ ಎಲ್ಲಿಗೆ ನಡೆಸುವುದು?

ದೇವರು ದುಷ್ಟ ಜನರನ್ನು ಪುನಃ ಎಬ್ಬಿಸುವ ಏಕಮಾತ್ರ ಉದ್ದೇಶವು, ಅವರನ್ನು ಪುನಃ ಮರಣಕ್ಕೊಪ್ಪಿಸುವುದಾಗಿದೆ ಎಂಬುದು ಅಡ್ವೆಂಟಿಸ್ಟ್‌ ಗುಂಪಿನವರ ಅಭಿಪ್ರಾಯವಾಗಿತ್ತು. ಈ ವಿಚಾರವು ಸ್ಟೊರ್ಸ್‌ನಲ್ಲಿ ಜುಗುಪ್ಸೆ ಹುಟ್ಟಿಸಿತು. ಯಾಕೆಂದರೆ ದೇವರು ಇಂತಹ ಒಂದು ಅರ್ಥಹೀನ ಮತ್ತು ಸೇಡಿನ ಕೆಲಸವನ್ನು ಮಾಡುವನೆಂಬುದಕ್ಕೆ ಬೈಬಲಿನಲ್ಲಿ ಅವನಿಗೆ ಯಾವುದೇ ಪುರಾವೆ ಸಿಗಲಿಲ್ಲ. ಸ್ಟೊರ್ಸ್‌ ಮತ್ತು ಅವನ ಸಂಗಡಿಗರು ಇನ್ನೊಂದು ವೈಪರೀತ್ಯಕ್ಕೆ ಹೋಗುತ್ತಾ, ದುಷ್ಟ ಜನರಿಗೆ ಪುನರುತ್ಥಾನವೇ ಇರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಆದರೆ ಅನೀತಿವಂತರ ಪುನರುತ್ಥಾನವಾಗಲಿದೆ ಎಂಬುದನ್ನು ಸೂಚಿಸುವ ವಚನಗಳಿಗಾಗಿ ಅವರಿಗೆ ವಿವರಣೆಯನ್ನು ಕೊಡುವುದು ಕಷ್ಟಕರವಾಗಿದ್ದರೂ, ದುಷ್ಟರ ಪುನರುತ್ಥಾನವಾಗುವುದೇ ಇಲ್ಲ ಎಂಬ ತಮ್ಮ ಅಭಿಪ್ರಾಯವು ದೇವರಿಗಿರುವ ಪ್ರೀತಿಗೆ ಹೆಚ್ಚು ಹೊಂದಿಕೆಯಲ್ಲಿದೆಯೆಂದು ಅವರಿಗೆ ತೋರಿತು. ಆದರೆ ದೇವರ ಉದ್ದೇಶದ ಕುರಿತಾದ ಹೆಚ್ಚು ಉತ್ತಮ ತಿಳುವಳಿಕೆಯು ಅವರಿಗೆ ಬೇಗನೆ ಸಿಗಲಿತ್ತು.

1870ರಲ್ಲಿ ಸ್ಟೊರ್ಸ್‌ ತುಂಬ ಅಸ್ವಸ್ಥನಾದನು ಮತ್ತು ತಿಂಗಳುಗಟ್ಟಲೆ ಕೆಲಸಮಾಡಲಾಗದೇ ಇದ್ದನು. ಈ ಸಮಯದಲ್ಲಿ, ತನ್ನ 74 ವರ್ಷಗಳ ಸಮಯದಲ್ಲಿ ತಾನು ಕಲಿತಿದ್ದಂತಹ ಎಲ್ಲ ಸಂಗತಿಗಳನ್ನು ಅವನು ಪುನಃ ಪರಿಶೀಲಿಸಲು ಶಕ್ತನಾದನು. ಆಗ, ಮಾನವಕುಲಕ್ಕಾಗಿರುವ ದೇವರ ಉದ್ದೇಶದ ಒಂದು ಮುಖ್ಯ ಭಾಗವನ್ನು ತಾನು ಬಿಟ್ಟುಬಿಟ್ಟಿದ್ದೇನೆಂಬುದು ಅವನ ಅರಿವಿಗೆ ಬಂತು. ಅದು ಅಬ್ರಹಾಮನ ಒಡಂಬಡಿಕೆಯಲ್ಲಿ ಸೂಚಿಸಲ್ಪಟ್ಟಿತ್ತು. ಅದೇನೆಂದರೆ, ‘ಅಬ್ರಹಾಮನು ದೇವರ ಮಾತನ್ನು ಕೇಳಿದ್ದರಿಂದ ಭೂಲೋಕದ ಎಲ್ಲ ಕುಲದವರಿಗೂ ಆಶೀರ್ವಾದವುಂಟಾಗುವದು.’​—⁠ಆದಿಕಾಂಡ 22:⁠18; ಅ. ಕೃತ್ಯಗಳು 3:25.

ಇದರಿಂದಾಗಿ ಅವನಿಗೊಂದು ಹೊಸ ವಿಚಾರ ಹೊಳೆಯಿತು! ‘ಎಲ್ಲ ಕುಲದವರೂ’ ಆಶೀರ್ವದಿಸಲ್ಪಡಲಿದ್ದರೆ, ಅವರೆಲ್ಲರೂ ಸುವಾರ್ತೆಯನ್ನು ಕೇಳಿಸಿಕೊಳ್ಳಬೇಕಲ್ಲವೊ? ಅವರದನ್ನು ಹೇಗೆ ಕೇಳಿಸಿಕೊಳ್ಳುವರು? ಈಗಾಗಲೇ ಕೋಟ್ಯಾನುಕೋಟಿ ಜನರು ಸತ್ತುಹೋಗಿದ್ದಾರಲ್ಲವೇ? ಬೈಬಲಿನಲ್ಲಿ ಹೆಚ್ಚು ಶೋಧನೆಯನ್ನು ನಡೆಸುವ ಮೂಲಕ, “ದುಷ್ಟ” ವ್ಯಕ್ತಿಗಳ ಎರಡು ವರ್ಗಗಳಿವೆ ಎಂಬ ತೀರ್ಮಾನಕ್ಕೆ ಬಂದನು. ಒಂದು ವರ್ಗವು, ದೇವರ ಪ್ರೀತಿಯನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿದವರದು. ಮತ್ತು ಇನ್ನೊಂದು ವರ್ಗವು, ಅಜ್ಞಾನದಲ್ಲಿ ಸತ್ತುಹೋದವರದ್ದಾಗಿತ್ತು.

ಈ ಎರಡನೆಯ ವರ್ಗದವರು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಹೊಂದಲಿಕ್ಕಾಗಿ ಸತ್ತವರೊಳಗಿಂದ ಜೀವಕ್ಕೆ ಎಬ್ಬಿಸಲ್ಪಡಲೇಬೇಕೆಂದು ಸ್ಟೊರ್ಸ್‌ ತೀರ್ಮಾನಕ್ಕೆ ಬಂದನು. ಯೇಸುವಿನ ಯಜ್ಞವನ್ನು ಅಂಗೀಕರಿಸುವವರು ಭೂಮಿಯ ಮೇಲೆ ಸದಾಕಾಲ ಜೀವಿಸಲಿದ್ದರು. ಅದನ್ನು ತಿರಸ್ಕರಿಸುವವರು ನಾಶವಾಗಲಿದ್ದರು. ಹೌದು, ಎಬ್ಬಿಸಲ್ಪಡುವ ಪ್ರತಿಯೊಬ್ಬ ವ್ಯಕ್ತಿಯ ಮುಂದೆ ನಿರೀಕ್ಷೆಯಿರುವುದೆಂದು ಸ್ಟೊರ್ಸ್‌ ನಂಬಿದನು. ಕಟ್ಟಕಡೆಗೆ, ಆದಾಮನನ್ನು ಬಿಟ್ಟರೆ, ಬೇರೆ ಯಾರೂ ಕೇವಲ ಆದಾಮನ ಪಾಪಕ್ಕಾಗಿ ಮಾತ್ರ ಸತ್ತಿರುವವರಾಗಿರಲಿಕ್ಕಿಲ್ಲ! ಆದರೆ ಕರ್ತನಾದ ಯೇಸು ಕ್ರಿಸ್ತನ ಪುನರಾಗಮನದ ಸಮಯದಲ್ಲಿ ಜೀವಿಸುತ್ತಿರುವವರ ಕುರಿತಾಗಿ ಏನು? ಅವರನ್ನು ತಲಪಲಿಕ್ಕಾಗಿ ಒಂದು ಭೌಗೋಲಿಕ ಸಾರುವಿಕೆಯ ಕಾರ್ಯಾಚರಣೆಯು ನಡೆಸಲ್ಪಡಬೇಕೆಂದು ಸ್ಟೊರ್ಸ್‌ ಕೊನೆಯಲ್ಲಿ ಗ್ರಹಿಸಿದನು. ಆದರೆ ಇದು ಹೇಗೆ ಮಾಡಲ್ಪಡುವುದೆಂದು ಅವನಿಗೆ ಸ್ವಲ್ಪವೂ ತಿಳಿದಿರಲಿಲ್ಲ. ಆದರೆ ಅವನು ನಂಬಿಕೆಯಿಂದ ಹೀಗೆ ಬರೆದನು: “ಇದು ಹೇಗೆ ಮಾಡಲ್ಪಡುವುದೆಂಬುದನ್ನು ಅರ್ಥಮಾಡಿಕೊಳ್ಳಲಾಗದ ಅನೇಕರು ಆ ವಿಚಾರವನ್ನೇ ತಳ್ಳಿಹಾಕುತ್ತಾರೆ. ಅವರಿಗೆ ಅದು ಅರ್ಥವಾಗುವುದಿಲ್ಲ ಎಂದಮಾತ್ರಕ್ಕೆ, ಅದು ದೇವರಿಗೂ ಮಾಡಲು ಅಸಾಧ್ಯವಾಗಿದೆಯೊ ಎಂಬಂತೆ ಅವರು ಯೋಚಿಸುತ್ತಾರೆ.”

ಜಾರ್ಜ್‌ ಸ್ಟೊರ್ಸ್‌, ಡಿಸೆಂಬರ್‌ 1879ರಲ್ಲಿ ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿನ ತಮ್ಮ ಮನೆಯಲ್ಲಿ ತೀರಿಹೋದರು. ಅವರ ಮನೆಯು, ಅವರು ತುಂಬ ಕಾತುರತೆಯಿಂದ ಮುನ್ನೋಡುತ್ತಿದ್ದ ಭೌಗೋಲಿಕ ಸಾರುವ ಕಾರ್ಯಾಚರಣೆಯ ಕೇಂದ್ರವಾಗಲಿದ್ದ ನಿವೇಶನದಿಂದ ಸ್ವಲ್ಪವೇ ದೂರದಲ್ಲಿತ್ತು.

ಹೆಚ್ಚಿನ ಬೆಳಕಿನ ಅಗತ್ಯವಿತ್ತು

ಹೆನ್ರಿ ಗ್ರೂ ಮತ್ತು ಜಾರ್ಜ್‌ ಸ್ಟೊರ್ಸ್‌ರಂತಹ ವ್ಯಕ್ತಿಗಳು, ಸತ್ಯವನ್ನು ಇಂದು ನಾವು ಅರ್ಥಮಾಡಿಕೊಂಡಿರುವಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದರೊ? ಇಲ್ಲ. ತಮ್ಮ ಈ ಹೋರಾಟದ ಬಗ್ಗೆ ಅವರಿಗೆ ತಿಳಿದಿತ್ತು. ಇದನ್ನು ಸ್ಟೊರ್ಸ್‌ 1847ರಲ್ಲಿ ಹೀಗೆ ತಿಳಿಸಿದ್ದರು: “ನಾವು ಈಗಷ್ಟೇ ಚರ್ಚಿನ ಅಂಧಕಾರದ ಯುಗಗಳಿಂದ ಹೊರಬಂದಿದ್ದೇವೆಂಬುದನ್ನು ನೆನಪಿನಲ್ಲಿಡುವುದು ಒಳ್ಳೇದು; ಆದುದರಿಂದ, ನಾವು ಈಗಲೂ ಕೆಲವೊಂದು ‘ಬಾಬೆಲಿನ ಬಟ್ಟೆಗಳನ್ನು’ ಸತ್ಯವೆಂದು ನೆನಸಿಕೊಂಡು ಧರಿಸಿಕೊಂಡಿರುವುದಾದರೆ, ಅದು ಆಶ್ಚರ್ಯಗೊಳಿಸುವ ಸಂಗತಿಯೇನಲ್ಲ.” ಉದಾಹರಣೆಗಾಗಿ, ಗ್ರೂ ಯೇಸುವಿನ ಪ್ರಾಯಶ್ಚಿತ್ತವನ್ನು ಗಣ್ಯಮಾಡಿದನು. ಆದರೆ ಅದು ಒಂದು “ಅನುರೂಪವಾದ ಪ್ರಾಯಶ್ಚಿತ್ತ” (NW)ವಾಗಿತ್ತು, ಅಂದರೆ ಯೇಸುವಿನ ಪರಿಪೂರ್ಣ ಮಾನವ ಜೀವವು, ಆದಾಮನು ಕಳೆದುಕೊಂಡ ಪರಿಪೂರ್ಣ ಮಾನವ ಜೀವಕ್ಕೆ ಬದಲಿಯಾಗಿ ಕೊಡಲ್ಪಟ್ಟಿತ್ತೆಂಬುದು ಅವನಿಗೆ ಅರ್ಥವಾಗಲಿಲ್ಲ. (1 ತಿಮೊಥೆಯ 2:⁠6) ಯೇಸು ಹಿಂದಿರುಗಿ ಬಂದು, ಭೂಮಿಯಲ್ಲಿ ದೃಶ್ಯರೂಪದಲ್ಲಿ ಆಳುವನೆಂದು ಸಹ ಹೆನ್ರಿ ಗ್ರೂ ತಪ್ಪಾಗಿ ನಂಬಿದನು. ಆದರೆ, ಸಾ.ಶ. ಎರಡನೆಯ ಶತಮಾನದಿಂದ ತೀರ ಕಡಿಮೆ ಜನರು ಆಸಕ್ತರಾಗಿದ್ದ ಒಂದು ವಿಷಯದ ಕುರಿತಾಗಿ, ಅಂದರೆ ಯೆಹೋವನ ನಾಮದ ಪವಿತ್ರೀಕರಣದ ಕುರಿತಾಗಿ ಗ್ರೂಗೆ ನಿಜವಾಗಿಯೂ ಚಿಂತೆಯಿತ್ತು.

ಜಾರ್ಜ್‌ ಸ್ಟೊರ್ಸ್‌ಗೆ ಸಹ, ಕೆಲವೊಂದು ಪ್ರಾಮುಖ್ಯ ಅಂಶಗಳ ಕುರಿತಾಗಿ ಸರಿಯಾದ ತಿಳುವಳಿಕೆಯಿರಲಿಲ್ಲ. ಪಾದ್ರಿಗಳು ಕಲಿಸುತ್ತಿದ್ದ ಸುಳ್ಳು ವಿಷಯಗಳನ್ನು ಅವನು ಗ್ರಹಿಸಲು ಶಕ್ತನಾಗಿದ್ದರೂ, ಕೆಲವೊಮ್ಮೆ ಅವನು ವಿರುದ್ಧ ದಿಕ್ಕಿನಲ್ಲಿ ವಿಪರೀತಕ್ಕೆ ಹೋಗುತ್ತಿದ್ದನು. ಉದಾಹರಣೆಗಾಗಿ, ಸೈತಾನನ ಕುರಿತಾಗಿ ಆರ್ತೊಡಾಕ್ಸ್‌ ಪಾದ್ರಿಗಳು ಏನನ್ನು ಕಲಿಸುತ್ತಿದ್ದರೊ ಅದಕ್ಕೆ ಸ್ಟೊರ್ಸ್‌ ತೀರ ವಿಪರೀತವಾಗಿ ಪ್ರತಿಕ್ರಿಯಿಸಿದನು. ಅಂದರೆ, ಪಿಶಾಚನು ಒಬ್ಬ ನೈಜ ವ್ಯಕ್ತಿಯಾಗಿದ್ದಾನೆಂಬುದನ್ನೇ ಅವನು ನಿರಾಕರಿಸಿದನು. ಅವನು ತ್ರಯೈಕ್ಯವನ್ನು ಸಹ ತಿರಸ್ಕರಿಸಿದ್ದನು. ಆದರೆ ತನ್ನ ಮರಣಕ್ಕೆ ಸ್ವಲ್ಪ ಸಮಯದ ಮುಂಚಿನ ವರೆಗೂ, ಪವಿತ್ರಾತ್ಮವು ಒಂದು ವ್ಯಕ್ತಿಯಾಗಿದೆಯೊ ಇಲ್ಲವೊ ಎಂಬುದರ ಬಗ್ಗೆ ಅವನು ಅನಿಶ್ಚಿತನಾಗಿದ್ದನು. ಆರಂಭದಲ್ಲಿ ಕ್ರಿಸ್ತನ ಪುನರಾಗಮನವು ಅದೃಶ್ಯವಾಗಿರುವುದೆಂದು ಜಾರ್ಜ್‌ ಸ್ಟೊರ್ಸ್‌ ನಿರೀಕ್ಷಿಸಿದನು. ಆದರೆ ಅದೇ ಸಮಯದಲ್ಲಿ, ಕಟ್ಟಕಡೆಗೆ ಯೇಸು ದೃಶ್ಯರೂಪದಲ್ಲಿ ತೋರಿಬರುವನೆಂದು ಅವನು ನೆನಸಿದನು. ಏನಿದ್ದರೂ, ಈ ಇಬ್ಬರೂ ವ್ಯಕ್ತಿಗಳು ಪ್ರಾಮಾಣಿಕಹೃದಯದವರು ಮತ್ತು ಯಥಾರ್ಥವಂತರಾಗಿದ್ದರೆಂದು ತೋರುತ್ತದೆ. ಮತ್ತು ಇವರು ಬೇರೆ ಹೆಚ್ಚಿನವರಿಗಿಂತಲೂ ಸತ್ಯಕ್ಕೆ ತುಂಬ ಹತ್ತಿರ ಬಂದು ತಲಪಿದ್ದರು.

ಗೋದಿ ಮತ್ತು ಹಣಜಿಯ ಕುರಿತಾದ ಸಾಮ್ಯದಲ್ಲಿ ಯೇಸು ವರ್ಣಿಸಿದ್ದಂತಹ “ಹೊಲವು” ಇನ್ನೂ ಕೊಯ್ಲಿಗೆ ಸಿದ್ಧವಾಗಿರಲಿಲ್ಲ. (ಮತ್ತಾಯ 13:38) ಗ್ರೂ, ಸ್ಟೊರ್ಸ್‌ ಮತ್ತು ಇನ್ನಿತರರು ಆ ಸುಗ್ಗಿಕಾಲಕ್ಕಾಗಿ ತಯಾರಿ ನಡೆಸುತ್ತಾ ‘ಹೊಲದಲ್ಲಿ’ ಕೆಲಸಮಾಡುತ್ತಿದ್ದರು.

ನೀವು ಓದುತ್ತಿರುವ ಈ ಪತ್ರಿಕೆಯ ಪ್ರಕಾಶನವನ್ನು 1879ರಲ್ಲಿ ಆರಂಭಿಸಿದ ಚಾರ್ಲ್ಸ್‌ ಟೇಸ್‌ ರಸಲ್‌ರವರು ತಮ್ಮ ಆರಂಭದ ವರ್ಷಗಳ ಕುರಿತಾಗಿ ಬರೆದುದು: “ತನ್ನ ವಾಕ್ಯವನ್ನು ಅಭ್ಯಾಸಮಾಡುವುದರಲ್ಲಿ ಕರ್ತನು ನಮಗೆ ಅನೇಕ ಸಹಾಯಕರನ್ನು ಕೊಟ್ಟನು. ಅವರಲ್ಲಿ ನಮ್ಮ ಅತಿ ಪ್ರಿಯ, ವಯಸ್ಸಾದ ಸಹೋದರ ಜಾರ್ಜ್‌ ಸ್ಟೊರ್ಸ್‌ ಪ್ರಮುಖರಾಗಿದ್ದರು. ಅವರು ತಮ್ಮ ಮಾತು ಮತ್ತು ಬರಹಗಳ ಮೂಲಕ ತುಂಬ ನೆರವನ್ನು ಕೊಟ್ಟರು; ಆದರೆ ಮನುಷ್ಯರು ಎಷ್ಟೇ ಒಳ್ಳೆಯವರಾಗಿರಲಿ ಅಥವಾ ಬುದ್ಧಿವಂತರಾಗಿರಲಿ ನಾವು ಅವರನ್ನು ಹಿಂಬಾಲಿಸಲು ಪ್ರಯತ್ನಿಸಬಾರದು. ಬದಲಾಗಿ ‘ಪ್ರಿಯ ಮಕ್ಕಳೋಪಾದಿ ದೇವರ ಹಿಂಬಾಲಕರಾಗಿರಬೇಕು.’” ಹೌದು, ನಿಜವಾದ ಬೈಬಲ್‌ ವಿದ್ಯಾರ್ಥಿಗಳು, ಗ್ರೂ ಮತ್ತು ಸ್ಟೊರ್ಸ್‌ನಂತಹ ವ್ಯಕ್ತಿಗಳ ಪ್ರಯತ್ನಗಳಿಂದ ಪ್ರಯೋಜನಪಡೆದರು. ಆದರೆ, ಸತ್ಯದ ನಿಜ ಮೂಲದೋಪಾದಿ ದೇವರ ವಾಕ್ಯವಾದ ಬೈಬಲನ್ನು ಇನ್ನೂ ಮುಂದಕ್ಕೆ ಪರಿಶೀಲಿಸುವುದು ಅತ್ಯಾವಶ್ಯಕವಾಗಿತ್ತು.​—⁠ಯೋಹಾನ 17:⁠17.

[ಪುಟ 26ರಲ್ಲಿರುವ ಚೌಕ/ಚಿತ್ರ]

ಹೆನ್ರಿ ಗ್ರೂ ನಂಬಿದ ವಿಷಯಗಳು

ಯೆಹೋವನ ಹೆಸರನ್ನು ನಿಂದಿಸಲಾಗಿದೆ, ಮತ್ತು ಅದು ಪವಿತ್ರೀಕರಿಸಲ್ಪಡಬೇಕು.

ತ್ರಯೈಕ್ಯ, ಆತ್ಮದ ಅಮರತ್ವ ಮತ್ತು ನರಕಾಗ್ನಿಯ ಬೋಧನೆಗಳು ತಪ್ಪಾಗಿವೆ.

ಕ್ರೈಸ್ತ ಸಭೆಯು ಈ ಲೋಕದಿಂದ ಪ್ರತ್ಯೇಕವಾಗಿರಬೇಕು.

ಕ್ರೈಸ್ತರು ರಾಷ್ಟ್ರಗಳ ಯುದ್ಧಗಳಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸಬಾರದು.

ಕ್ರೈಸ್ತರು, ಶನಿವಾರ ಅಥವಾ ಭಾನುವಾರವನ್ನು ಸಬ್ಬತ್‌ ಆಗಿ ಆಚರಿಸುವ ನಿಯಮದ ಕೆಳಗಿಲ್ಲ.

ಕ್ರೈಸ್ತರು ಫ್ರೀಮೇಸನ್ಸ್‌ರಂತಹ ಗುಪ್ತ ಸಂಸ್ಥೆಗಳ ಭಾಗವಾಗಿರಬಾರದು.

ಕ್ರೈಸ್ತರ ನಡುವೆ ಪಾದ್ರಿ ಮತ್ತು ಸಾಮಾನ್ಯ ಜನರೆಂಬಂತಹ ವರ್ಗಬೇಧಗಳಿರಬಾರದು.

ಧಾರ್ಮಿಕ ಬಿರುದುಗಳು ಕ್ರೈಸ್ತವಿರೋಧಿಗಳಿಂದ ಬಂದವುಗಳು.

ಎಲ್ಲ ಸಭೆಗಳಿಗೆ ಹಿರಿಯರ ಮಂಡಲಿ ಇರಬೇಕು.

ಹಿರಿಯರು ತಮ್ಮ ನಡತೆಯಲ್ಲಿ ಪವಿತ್ರರಾಗಿರಬೇಕು, ನಿಂದಾರಹಿತರಾಗಿರಬೇಕು.

ಎಲ್ಲ ಕ್ರೈಸ್ತರು ಸುವಾರ್ತೆಯನ್ನು ಸಾರಬೇಕು.

ಭೂಮಿಯ ಮೇಲಿನ ಪ್ರಮೋದವನದಲ್ಲಿ ಜನರು ಸದಾಕಾಲ ಜೀವಿಸುವರು.

ಯೆಹೋವನಿಗೆ ಮತ್ತು ಕ್ರಿಸ್ತನಿಗೆ ಸ್ತುತಿಯನ್ನು ಸಲ್ಲಿಸುವಂಥ ಕ್ರೈಸ್ತ ಗೀತೆಗಳಿರಬೇಕು.

[ಕೃಪೆ]

ಫೋಟೊ: Collection of The New-York Historical Society/69288

[ಪುಟ 28ರಲ್ಲಿರುವ ಚೌಕ/ಚಿತ್ರ]

ಜಾರ್ಜ್‌ ಸ್ಟೊರ್ಸ್‌ ನಂಬಿದ ವಿಷಯಗಳು

ಯೇಸು, ಮಾನವಕುಲಕ್ಕಾಗಿ ಪ್ರಾಯಶ್ಚಿತ್ತ ಬೆಲೆಯಾಗಿ ತನ್ನ ಜೀವವನ್ನು ಕೊಟ್ಟನು.

ಸುವಾರ್ತೆಯನ್ನು ಸಾರುವ ಕೆಲಸವು ಇನ್ನೂ ಮಾಡಲ್ಪಟ್ಟಿಲ್ಲ (1871ರಲ್ಲಿ).

ಈ ಕಾರಣದಿಂದಾಗಿ, ಆ ಸಮಯದಲ್ಲಿ (1871ರಲ್ಲಿ) ಅಂತ್ಯವು ಹತ್ತಿರವಿರಲಿಲ್ಲ. ಸಾರುವ ಕೆಲಸವನ್ನು ಮಾಡಲಿಕ್ಕಾಗಿ ಖಂಡಿತವಾಗಿಯೂ ಭವಿಷ್ಯತ್ತಿನಲ್ಲಿ ಒಂದು ಯುಗವಿರುವುದು.

ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯುವ ಜನರಿರುವರು.

ಅಜ್ಞಾನದಲ್ಲೇ ಸತ್ತುಹೋಗಿರುವವರೆಲ್ಲರ ಪುನರುತ್ಥಾನವಾಗುವುದು. ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವನ್ನು ಅಂಗೀಕರಿಸುವವರೆಲ್ಲರೂ ಭೂಮಿಯ ಮೇಲೆ ನಿತ್ಯ ಜೀವವನ್ನು ಪಡೆಯುವರು. ಅದನ್ನು ತಿರಸ್ಕರಿಸುವವರು ನಾಶಗೊಳಿಸಲ್ಪಡುವರು.

ಆತ್ಮದ ಅಮರತ್ವ ಮತ್ತು ನರಕಾಗ್ನಿಯ ಬೋಧನೆಗಳು ಸುಳ್ಳಾಗಿವೆ ಮತ್ತು ಅವು ದೇವರನ್ನು ಅಗೌರವಪಡಿಸುತ್ತವೆ.

ಕರ್ತನ ಸಂಧ್ಯಾ ಭೋಜನವು, ನೈಸಾನ್‌ 14ರಂದು ನಡೆಯುವ ವಾರ್ಷಿಕ ಘಟನೆಯಾಗಿದೆ.

[ಕೃಪೆ]

ಫೋಟೊ: SIX SERMONS, by George Storrs (1855)

[ಪುಟ 29ರಲ್ಲಿರುವ ಚಿತ್ರಗಳು]

1909ರಲ್ಲಿ “ಝಯನ್ಸ್‌ ವಾಚ್‌ಟವರ್‌” ಪತ್ರಿಕೆಯ ಸಂಪಾದಕರಾದ ಸಿ.ಟಿ. ರಸಲ್‌ರು ಅಮೆರಿಕದ ನ್ಯೂ ಯಾರ್ಕಿನ ಬ್ರೂಕ್ಲಿನ್‌ಗೆ ಸ್ಥಳಾಂತರಿಸಿದರು