ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಣ ಬೇಕೊ, ಜೀವ ಬೇಕೊ?

ಹಣ ಬೇಕೊ, ಜೀವ ಬೇಕೊ?

ಹಣ ಬೇಕೊ, ಜೀವ ಬೇಕೊ?

ಕಳ್ಳರು, ಒಬ್ಬ ವ್ಯಕ್ತಿಯನ್ನು ಅಡ್ಡಗಟ್ಟಿ ಅವನ ಮುಂದೆ ಬಂದೂಕನ್ನು ಹಿಡಿದು, “ಹಣ ಬೇಕೊ, ಜೀವ ಬೇಕೊ?” ಎಂದು ಬಲವಂತದಿಂದ ಕೇಳುವ ಸುದ್ದಿಗಳು ನಿಮ್ಮ ಕಿವಿಗೆ ಬಿದ್ದಿರಬಹುದು. ಇಂದು, ಪ್ರಸಿದ್ಧವಾದ ಈ ಒತ್ತಾಯದ ಕೇಳಿಕೆಯು ನಮ್ಮೆಲ್ಲರ ಮುಂದಿರುವ ಕಷ್ಟಕರವಾದ ಉಭಯಸಂಕಟದಲ್ಲಿ ಪ್ರತಿಧ್ವನಿಸಲ್ಪಡುತ್ತದೆ. ಇದು ವಿಶೇಷವಾಗಿ, ನಮ್ಮಲ್ಲಿ ಶ್ರೀಮಂತ ರಾಷ್ಟ್ರಗಳಲ್ಲಿ ಜೀವಿಸುವವರ ವಿಷಯದಲ್ಲಿ ಸತ್ಯವಾಗಿದೆ. ಆದರೆ ಈಗ ಈ ಒತ್ತಾಯದ ಕೇಳಿಕೆಯನ್ನು ಒಬ್ಬ ಕಳ್ಳನು ಮಾಡುವುದರ ಬದಲು, ಹಣ ಮತ್ತು ಪ್ರಾಪಂಚಿಕ ಯಶಸ್ಸಿಗೆ ಸಮಾಜವು ಕೊಡುತ್ತಿರುವ ಹೆಚ್ಚಿನ ಮಹತ್ವವೇ ಇದನ್ನು ಮಾಡುತ್ತಿದೆ.

ಇದು, ವಿವಾದಾಂಶಗಳ ಮತ್ತು ಚಿಂತೆಗಳ ಒಂದು ಹೊಸ ಕಟ್ಟನ್ನೇ ಬಿಚ್ಚಿಹಾಕಿದೆ. ಹಣ ಮತ್ತು ಪ್ರಾಪಂಚಿಕ ವಸ್ತುಗಳನ್ನು ಎಷ್ಟರ ಮಟ್ಟಿಗೆ ಬೆನ್ನಟ್ಟಬೇಕು? ಸ್ವಲ್ಪದರಲ್ಲಿಯೇ ನಾವು ಸಂತೃಪ್ತರಾಗಿರಬಲ್ಲೆವೊ? ಪ್ರಾಪಂಚಿಕತೆಯೆಂಬ ಯಜ್ಞವೇದಿಯ ಮೇಲೆ ಜನರು ನಿಜವಾಗಿ “ವಾಸ್ತವವಾದ ಜೀವವನ್ನು” ಬಲಿಕೊಡುತ್ತಿದ್ದಾರೊ? ಸಂತೋಷಭರಿತ ಜೀವನಕ್ಕಾಗಿ, ಹಣ ಒಂದು ಟಿಕೇಟ್‌ ಆಗಿದೆಯೊ?

ಹಣದ ಹುಚ್ಚು

ಮನುಷ್ಯನಿಗಿರುವ ಒಳ್ಳೇ ಅಥವಾ ಕೆಟ್ಟ ಆಶೆ ಮತ್ತು ಅಭಿರುಚಿಗಳಲ್ಲಿ, ಹಣದಾಸೆಯು ಎಲ್ಲದಕ್ಕಿಂತಲೂ ಮುಂದಿನ ಸ್ಥಾನದಲ್ಲಿರಲು ಸ್ಪರ್ಧಿಸುತ್ತದೆ. ಹಣಕ್ಕಾಗಿರುವ ಈ ಹುಚ್ಚು, ಕಾಮ ಮತ್ತು ಆಹಾರಕ್ಕಾಗಿರುವ ಆಶೆಯಂತಿರುವುದಿಲ್ಲ. ಅದು ನಿರಂತರವೂ, ಅಂತ್ಯವಿಲ್ಲದ್ದೂ ಆಗಿರುತ್ತದೆ. ವೃದ್ಧಾಪ್ಯವು ಸಹ ಅದನ್ನು ಕುಗ್ಗಿಸಲು ಸಾಧ್ಯವಿಲ್ಲವೆಂಬಂತೆ ತೋರುತ್ತದೆ. ಅನೇಕ ಸಂದರ್ಭಗಳಲ್ಲಿ, ವಯಸ್ಸಾಗುತ್ತಾ ಹೋದಂತೆ, ಹಣ ಮತ್ತು ಅದು ಏನೆಲ್ಲ ಖರೀದಿಸಬಹುದೊ ಅದರ ಕುರಿತಾಗಿ ಒಬ್ಬ ವ್ಯಕ್ತಿಗಿರುವ ಆಸಕ್ತಿ ಅಥವಾ ಚಿಂತೆಯು ವಾಸ್ತವದಲ್ಲಿ ಇನ್ನೂ ಹೆಚ್ಚುತ್ತಾ ಹೋಗಬಹುದು.

ಲೋಭವು ಹೆಚ್ಚೆಚ್ಚಾಗುತ್ತಾ ಇದೆಯೆಂದು ತೋರುತ್ತಿದೆ. ಜನಪ್ರಿಯ ಚಲನಚಿತ್ರವೊಂದರಲ್ಲಿನ ಒಬ್ಬ ಮುಖ್ಯ ಪಾತ್ರಧಾರಿ, “ಲೋಭವು ಕಾರ್ಯಸಾಧಕ. ಅದು ಒಳ್ಳೇದು” ಎಂದು ಹೇಳುತ್ತಾನೆ. ಅನೇಕರು 1980ಗಳ ದಶಕವನ್ನು ಲೋಭದ ಯುಗ ಎಂದು ಕರೆಯುತ್ತಾರಾದರೂ, ಆ ಅವಧಿಯ ಮುಂಚೆ ಮತ್ತು ಅನಂತರ ಏನು ನಡೆಯಿತೊ ಅದು, ಈ ಎಲ್ಲ ವರ್ಷಗಳಲ್ಲಿ ಹಣದ ವಿಷಯದಲ್ಲಿ ಮನುಷ್ಯನ ಸ್ವಭಾವವು ಒಂದಿಷ್ಟೂ ಬದಲಾಗಿಲ್ಲ ಎಂಬುದನ್ನು ತೋರಿಸುತ್ತದೆ.

ಪ್ರಾಯಶಃ ಹೊಸ ಸಂಗತಿಯೇನೆಂದರೆ, ಇನ್ನೂ ಹೆಚ್ಚನ್ನು ಪಡೆದುಕೊಳ್ಳಬೇಕೆಂಬ ಆಸೆಯನ್ನು ಕೂಡಲೇ ತೃಪ್ತಿಪಡಿಸಿಕೊಳ್ಳುವ ಅವಕಾಶಗಳು ಎಷ್ಟೋ ಜನರಿಗೆ ಸಿಗುತ್ತಿವೆ. ಲೋಕದಲ್ಲಿರುವ ಅಧಿಕಾಂಶ ಜನರು, ಹೆಚ್ಚೆಚ್ಚು ಭೌತಿಕ ವಸ್ತುಗಳನ್ನು ಉತ್ಪಾದಿಸುವುದರಲ್ಲಿ ಮತ್ತು ಪಡೆದುಕೊಳ್ಳುವುದರಲ್ಲೇ ತಮ್ಮ ಶಕ್ತಿಯನ್ನು ವಿನಿಯೋಗಿಸುತ್ತಿದ್ದಾರೆಂದು ತೋರುತ್ತದೆ. ಸ್ವತ್ತುಗಳನ್ನು ಹೊಂದುವುದು ಮತ್ತು ಹಣವನ್ನು ಖರ್ಚುಮಾಡುವುದು, ಆಧುನಿಕ ಜೀವನದಲ್ಲಿ ಒಂದು ಗಾಢವಾದ ಹಾಗೂ ಅನೇಕವೇಳೆ ಬಹಳ ಸೃಜನಶೀಲ ಅಭಿರುಚಿಯಾಗಿಬಿಟ್ಟಿದೆ ಎಂಬುದನ್ನು ನೀವು ಒಪ್ಪಿಕೊಳ್ಳಬಹುದು.

ಆದರೆ ಇದೆಲ್ಲವನ್ನು ಮಾಡುವುದರಿಂದ ಜನರು ಹಿಂದೆಂದಿಗಿಂತಲೂ ಹೆಚ್ಚು ಸಂತೋಷದಿಂದಿದ್ದಾರೊ? ಆ ಪ್ರಶ್ನೆಯನ್ನು ಉತ್ತರಿಸುತ್ತಾ, ವಿವೇಕಿ ಹಾಗೂ ತುಂಬ ಐಶ್ವರ್ಯವಂತ ರಾಜನಾದ ಸೊಲೊಮೋನನು 3,000 ವರ್ಷಗಳ ಹಿಂದೆ ಬರೆದುದು: “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು. ಇದು ಸಹ ವ್ಯರ್ಥ.” (ಪ್ರಸಂಗಿ 5:10) ಆಧುನಿಕ ಸಮಾಜದ ಕುರಿತಾದ ಅಧ್ಯಯನಗಳು ಸಹ ಅದೇ ರೀತಿಯ ಆಸಕ್ತಿಕರ ನಿರ್ಣಯಗಳನ್ನು ಕೊಡುತ್ತವೆ.

ಹಣ ಮತ್ತು ಸಂತೋಷ

ಮನುಷ್ಯನ ನಡವಳಿಕೆಯ ಕುರಿತಾಗಿ ಕಂಡುಹಿಡಿಯಲ್ಪಟ್ಟ ಅತ್ಯಾಶ್ಚರ್ಯಕರವಾದ ಒಂದು ಸಂಗತಿಯೇನೆಂದರೆ, ಹಣ ಮತ್ತು ಭೌತಿಕ ವಸ್ತುಗಳನ್ನು ಸಂಗ್ರಹಿಸಿದಷ್ಟಕ್ಕೇ ಸಂತೋಷ ಮತ್ತು ಸಂತೃಪ್ತಿಯು ಸಹ ಅದೇ ಪ್ರಮಾಣದಲ್ಲಿ ಹೆಚ್ಚುವುದಿಲ್ಲ. ಒಬ್ಬ ವ್ಯಕ್ತಿ, ಶ್ರೀಮಂತಿಕೆಯ ಒಂದು ನಿರ್ದಿಷ್ಟ ಮಟ್ಟವನ್ನು ದಾಟಿದ ನಂತರ, ಅವನ ಸಂತೋಷ ಹಾಗೂ ಸಂತೃಪ್ತಿಗೂ, ಅವನ ಬಳಿಯಿರುವ ಭೌತಿಕ ವಸ್ತುಗಳಿಗೂ ಯಾವುದೇ ಸಂಬಂಧವಿರುವುದಿಲ್ಲ.

ಹೀಗೆ, ಹಣ ಮತ್ತು ಭೌತಿಕ ವಸ್ತುಗಳನ್ನು ಸಂಪಾದಿಸಿಕೊಳ್ಳುವ ಲಗಾಮಿಲ್ಲದ ಬೆನ್ನಟ್ಟುವಿಕೆಯು, ಅನೇಕರು ಹೀಗೆ ಕುತೂಹಲಪಡುವಂತೆ ಮಾಡಿದೆ: ‘ನಾವು ಪ್ರತಿಯೊಂದು ಸಲ ಒಂದು ಹೊಸ ವಸ್ತುವನ್ನು ಖರೀದಿಸುವಾಗ ನಮಗೆ ಸಂತೋಷವಾಗುತ್ತಿರುವಂತೆ ತೋರುವುದಾದರೂ, ಈ ಎಲ್ಲ ಭೋಗವಸ್ತುಗಳು ನಮಗೆ ಇನ್ನೂ ಹೆಚ್ಚಿನ ಸಂತೃಪ್ತಿಯನ್ನು ಕೊಡುವುದಿಲ್ಲವೇಕೆ?’

ಸಂತೋಷಭರಿತ ಜನರು (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಲೇಖಕ ಜಾನತನ್‌ ಫ್ರೀಡ್‌ಮ್ಯಾನ್‌ ಗಮನಿಸಿದ್ದು: “ಕನಿಷ್ಠಮೊತ್ತದ ಒಂದು ವರಮಾನವನ್ನು ಸಂಪಾದಿಸಿದ ನಂತರ, ನಿಮ್ಮ ಬಳಿ ಇರುವ ಹಣ ನಿಮಗೆ ಸಂತೋಷವನ್ನು ತರುವುದರಲ್ಲಿ ವಹಿಸುವ ಪಾತ್ರವು ಅಮುಖ್ಯ. ಬಡತನದ ರೇಖೆಯಾಚೆ, ವರಮಾನ ಹಾಗೂ ಸಂತೋಷದ ನಡುವಿನ ಸಂಬಂಧವು ತೀರ ಚಿಕ್ಕದ್ದು.” ವ್ಯಕ್ತಿಗತವಾದ ಸಂತೋಷಕ್ಕಾಗಿ, ಒಬ್ಬ ವ್ಯಕ್ತಿಯ ಬಳಿ ಆತ್ಮಿಕ ಆಸ್ತಿ, ಜೀವಿತದಲ್ಲಿ ಅರ್ಥಪೂರ್ಣ ಕಾರ್ಯಗಳು ಮತ್ತು ನೈತಿಕ ಮೌಲ್ಯಗಳಿರುವುದು ನಿಜವಾಗಿಯೂ ಪ್ರಾಮುಖ್ಯ ಎಂಬುದು ಅನೇಕರಿಗೆ ಮನದಟ್ಟಾಗಿದೆ. ಬೇರೆ ಜನರೊಂದಿಗೆ ಒಳ್ಳೇ ಸಂಬಂಧಗಳನ್ನಿಡುವುದು, ಮತ್ತು ನಮ್ಮ ಬಳಿ ಈಗಾಗಲೇ ಏನಿದೆಯೊ ಅದರಲ್ಲಿ ಆನಂದಿಸುವುದನ್ನು ತಡೆಯಬಹುದಾದ ಘರ್ಷಣೆಗಳು ಅಥವಾ ಇತಿಮಿತಿಗಳಿಂದ ಮುಕ್ತರಾಗಿರುವುದು ಸಹ ಅಷ್ಟೇ ಪ್ರಾಮುಖ್ಯವಾಗಿದೆ.

ವಾಸ್ತವದಲ್ಲಿ ಯಾವುದು ಆಂತರಿಕ ಸಮಸ್ಯೆಗಳಾಗಿವೆಯೋ ಅವುಗಳನ್ನು ಬಗೆಹರಿಸಲಿಕ್ಕಾಗಿ ಭೌತಿಕ ಸಮೃದ್ಧಿಯನ್ನು ಉಪಯೋಗಿಸುವ ಪ್ರವೃತ್ತಿಯೇ ಇಂದಿನ ಸಮಾಜದಲ್ಲಿರುವ ಹೆಚ್ಚಿನ ಅನಿಷ್ಠಗಳ ಮೂಲಕಾರಣ ಎಂಬುದನ್ನು ಅನೇಕರು ಅಂಗೀಕರಿಸುತ್ತಾರೆ. ಸಾಮಾನ್ಯವಾಗಿ, ಜನರಲ್ಲಿ ನಿರಾಶಾವಾದ ಮತ್ತು ಅಸಂತೃಪ್ತಿಯ ಮನೋಭಾವವಿದೆಯೆಂದು ಕೆಲವು ಸಾಮಾಜಿಕ ವ್ಯಾಖ್ಯಾನಕಾರರು ಹೇಳುತ್ತಾರೆ. ಹೆಚ್ಚೆಚ್ಚು ಶ್ರೀಮಂತರು, ಚಿಕಿತ್ಸಕರ ಬಳಿ ಹೋಗುವ ಅಥವಾ ಜೀವಿತದ ಉದ್ದೇಶ ಮತ್ತು ಮನಶ್ಶಾಂತಿಯನ್ನು ಕಂಡುಕೊಳ್ಳಲು ಗುರುಗಳು, ಪಂಥಗಳು ಮತ್ತು ಚಿಕಿತ್ಸೆಯನ್ನು ಕೊಡುವೆವೆಂದು ಹೇಳಿಕೊಳ್ಳುವ ಗುಂಪುಗಳ ಬಳಿ ಹೋಗುವ ಪ್ರವೃತ್ತಿಯು ಹೆಚ್ಚಾಗುತ್ತಿದೆ ಎಂಬುದನ್ನು ಸಹ ಅವರು ಗಮನಿಸಿದ್ದಾರೆ. ಇವೆಲ್ಲವೂ, ಭೌತಿಕ ವಸ್ತುಗಳು ಜೀವನಕ್ಕೆ ನಿಜವಾದ ಉದ್ದೇಶವನ್ನು ಕೊಡಬಲ್ಲವೆಂಬ ಮಾತು ಸುಳ್ಳಾಗಿದೆಯೆಂಬ ರುಜುವಾತನ್ನು ಕೊಡುತ್ತದೆ.

ಹಣದ ಸಾಮರ್ಥ್ಯ ಮತ್ತು ಅಸಾಮರ್ಥ್ಯತೆ

ಹಣಕ್ಕೆ ಬಹಳಷ್ಟು ಸಾಮರ್ಥ್ಯವಿದೆಯೆಂಬುದು ಒಪ್ಪತಕ್ಕ ಮಾತು. ಹಣವಿದ್ದರೆ, ದೊಡ್ಡ ದೊಡ್ಡ ಮನೆಗಳು, ಅಂದಚೆಂದದ ಉಡುಗೆತೊಡುಗೆಗಳು, ಮತ್ತು ಕಣ್ಣುಕೋರೈಸುವಂಥ ರೀತಿಯ ಪೀಠೋಪಕರಣಗಳನ್ನು ಖರೀದಿಸಸಾಧ್ಯವಿದೆ. ಬೇರೆಯವರ ಹೊಗಳಿಕೆ, ಅಡಿಯಾಳುತನ ಅಥವಾ ಮುಖಸ್ತುತಿಯನ್ನೂ ಹಣ ಖರೀದಿಸಬಹುದು. ತಾತ್ಕಾಲಿಕ ಹಾಗೂ ಉಪಕಾರಮಾಡಲು ಸಿದ್ಧರಾಗಿರುವ ಒಂದಿಷ್ಟು ಸ್ನೇಹಿತರೂ ಸಿಗಬಹುದು. ಆದರೆ ಹಣದ ಸಾಮರ್ಥ್ಯವು ಅಷ್ಟೇ. ನಮಗೆ ನಿಜವಾಗಿ ತೀರ ಅಗತ್ಯವಿರುವಂಥದ್ದನ್ನು, ಅಂದರೆ ಒಬ್ಬ ನಿಜವಾದ ಸ್ನೇಹಿತನ ಪ್ರೀತಿ, ಮನಶ್ಶಾಂತಿ, ಸಾಯುವ ಗಳಿಗೆಯಲ್ಲಿ ಹೃತ್ಪೂರ್ವಕವಾದ ಸ್ವಲ್ಪ ಸಂತೈಸುವಿಕೆ ಮುಂತಾದವುಗಳನ್ನು ಅದು ಖರೀದಿಸಲಾರದು. ಅಷ್ಟುಮಾತ್ರವಲ್ಲದೆ, ಯಾರಿಗೆ ಸೃಷ್ಟಿಕರ್ತನೊಂದಿಗಿನ ಸಂಬಂಧವು ತುಂಬ ಅಮೂಲ್ಯವಾದದ್ದಾಗಿದೆಯೊ ಅಂಥವರಿಗೆ, ಹಣವು ದೇವರ ಮೆಚ್ಚುಗೆಯನ್ನು ಖರೀದಿಸಲಾರದು.

ರಾಜನಾದ ಸೊಲೊಮೋನನ ಬಳಿ, ತನ್ನ ದಿನದಲ್ಲಿ ಹಣಕೊಟ್ಟು ಖರೀದಿಸಬಹುದಾದ ಎಲ್ಲ ಒಳ್ಳೊಳ್ಳೆಯ ವಸ್ತುಗಳಿದ್ದವು. ಆದರೆ ಭೌತಿಕ ಸ್ವತ್ತುಗಳಲ್ಲಿ ಭರವಸೆಯಿಡುವುದು ಶಾಶ್ವತವಾದ ಸಂತೋಷವನ್ನು ತರುವುದಿಲ್ಲವೆಂದು ಅವನು ಸಹ ಅಂಗೀಕರಿಸಿದನು. (ಪ್ರಸಂಗಿ 5:​12-15) ಬ್ಯಾಂಕ್‌ ದಿವಾಳಿಯಾಗುವುದರಿಂದ ಅಥವಾ ಹಣದುಬ್ಬರದಿಂದಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆಸ್ತಿಪಾಸ್ತಿಯಿರುವಲ್ಲಿ, ವಿಪರೀತ ಬಿರುಗಾಳಿಮಳೆಯ ಮೂಲಕ ಅದು ನಾಶವಾಗಿಹೋಗಬಲ್ಲದು. ವಿಮಾ ಯೋಜನೆಗಳಿರುವಲ್ಲಿ, ಅವು ಆಂಶಿಕವಾಗಿ ಹಣದ ನಷ್ಟವನ್ನು ತುಂಬಿಸಬಹುದಾದರೂ, ಭಾವನಾತ್ಮಕ ನಷ್ಟವನ್ನು ತುಂಬಿಸಲಾರವು. ಒಮ್ಮಿಂದೊಮ್ಮೆಲೇ ಆಗುವ ಆರ್ಥಿಕ ಕುಸಿತದಿಂದಾಗಿ, ಸ್ಟಾಕ್ಸ್‌ ಮತ್ತು ಬಾಂಡ್‌ಗಳು ನಿಷ್ಪ್ರಯೋಜಕವಾಗಬಲ್ಲವು. ಈ ದಿನ ಒಳ್ಳೆಯ ಸಂಬಳವಿರುವ ಉದ್ಯೋಗವು ಸಹ ನಾಳೆಯ ದಿನ ಇಲ್ಲದೇ ಹೋಗಬಹುದು.

ಹೀಗಿರುವಾಗ, ನಾವು ಹಣವನ್ನು ಅದರ ತಕ್ಕ ಸ್ಥಾನದಲ್ಲಿ ಹೇಗೆ ಇಡಬಹುದು? ಹಣ ಅಥವಾ ಸ್ವತ್ತುಗಳು ನಮ್ಮ ಜೀವಿತದಲ್ಲಿ ಯಾವ ಪಾತ್ರವನ್ನು ವಹಿಸಬೇಕು? ನಿಜವಾಗಿಯೂ ಅಮೂಲ್ಯವಾಗಿರುವ “ವಾಸ್ತವವಾದ ಜೀವವನ್ನು” ನೀವು ಹೇಗೆ ನಿಮ್ಮದಾಗಿಸಬಹುದು ಎಂಬುದನ್ನು ಕಂಡುಹಿಡಿಯಲು ಈ ವಿಷಯವನ್ನು ದಯವಿಟ್ಟು ಇನ್ನೂ ಮುಂದಕ್ಕೆ ಪರಿಶೀಲಿಸಿರಿ.

[ಪುಟ 4ರಲ್ಲಿರುವ ಚಿತ್ರಗಳು]

ಭೌತಿಕ ಸ್ವತ್ತುಗಳು ಶಾಶ್ವತವಾದ ಸಂತೋಷವನ್ನು ಕೊಡುವುದಿಲ್ಲ