ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋಪಾದಿ ದೃಢಚಿತ್ತರಾಗಿ ಉಳಿಯಿರಿ!

ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋಪಾದಿ ದೃಢಚಿತ್ತರಾಗಿ ಉಳಿಯಿರಿ!

ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋಪಾದಿ ದೃಢಚಿತ್ತರಾಗಿ ಉಳಿಯಿರಿ!

“[ಮೋಶೆ] ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.”​—ಇಬ್ರಿಯ 11:27.

1. ತನ್ನ ಪರ್ವತ ಪ್ರಸಂಗದಲ್ಲಿ ಯೇಸು, ದೇವರ ಕುರಿತಾಗಿ ಯಾವ ಗಮನಾರ್ಹ ಹೇಳಿಕೆಯನ್ನು ಮಾಡಿದನು?

ಯೆಹೋವನು ಅದೃಶ್ಯನಾದ ದೇವರಾಗಿದ್ದಾನೆ. ಆತನ ಮಹಿಮೆಯನ್ನು ನೋಡುವಂತೆ ಮೋಶೆಯು ವಿನಂತಿಸಿದಾಗ, ಯೆಹೋವನು ಉತ್ತರಿಸಿದ್ದು: “ನೀನು ನನ್ನ ಮುಖವನ್ನು ನೋಡುವದಕ್ಕಾಗದು. ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು.” (ವಿಮೋಚನಕಾಂಡ 33:20) ಅಪೊಸ್ತಲ ಯೋಹಾನನು, “ದೇವರನ್ನು ಯಾರೂ ಎಂದೂ ಕಂಡಿಲ್ಲ” ಎಂದು ಬರೆದನು. (ಯೋಹಾನ 1:18) ಯೇಸು ಒಬ್ಬ ಮನುಷ್ಯನೋಪಾದಿ ಈ ಭೂಮಿಯ ಮೇಲಿದ್ದಾಗ, ಅವನಿಗೆ ಸಹ ದೇವರನ್ನು ನೋಡಲಾಗಲಿಲ್ಲ. ಆದರೆ ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು.” (ಮತ್ತಾಯ 5:8) ಯೇಸುವಿನ ಆ ಮಾತುಗಳ ಅರ್ಥವೇನಾಗಿತ್ತು?

2. ನಮ್ಮ ಶಾರೀರಿಕ ಕಣ್ಣುಗಳಿಂದ ನಾವು ದೇವರನ್ನು ಏಕೆ ನೋಡಲಾರೆವು?

2 ಯೆಹೋವನು ಅದೃಶ್ಯ ಆತ್ಮಸ್ವರೂಪನು ಆಗಿದ್ದಾನೆಂದು ಶಾಸ್ತ್ರವಚನಗಳು ಹೇಳುತ್ತವೆ. (ಯೋಹಾನ 4:24; ಕೊಲೊಸ್ಸೆ 1:15; 1 ತಿಮೊಥೆಯ 1:17) ಆದುದರಿಂದ, ಮನುಷ್ಯರಾದ ನಾವು ಯೆಹೋವನನ್ನು ನಮ್ಮ ಶಾರೀರಿಕ ಕಣ್ಣುಗಳಿಂದ ನೋಡುವೆವೆಂದು ಯೇಸು ಹೇಳುತ್ತಿದ್ದದ್ದಲ್ಲ. ಅಭಿಷಿಕ್ತ ಕ್ರೈಸ್ತರು ಆತ್ಮ ಜೀವಿಗಳೋಪಾದಿ ಸ್ವರ್ಗೀಯ ಪುನರುತ್ಥಾನವನ್ನು ಹೊಂದುವಾಗ, ಯೆಹೋವ ದೇವರನ್ನು ನೋಡುವರೆಂಬುದು ನಿಜ. ಆದರೆ ‘ನಿರ್ಮಲಚಿತ್ತರೂ,’ ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳ ಮನುಷ್ಯರು ಸಹ ದೇವರನ್ನು ‘ನೋಡಲು’ ಶಕ್ತರಾಗಿದ್ದಾರೆ. ಇದು ಹೇಗೆ ಸಾಧ್ಯ?

3. ಮನುಷ್ಯರು ದೇವರ ಗುಣಗಳಲ್ಲಿ ಕೆಲವೊಂದನ್ನು ಹೇಗೆ ಗ್ರಹಿಸಬಹುದು?

3 ಯೆಹೋವನ ಸೃಷ್ಟಿಯನ್ನು ಜಾಗರೂಕತೆಯಿಂದ ಗಮನಿಸುವ ಮೂಲಕ ಆತನ ಕುರಿತಾಗಿ ಕೆಲವೊಂದು ಸಂಗತಿಗಳನ್ನು ಕಲಿಯುತ್ತೇವೆ. ಹೀಗೆ ನಾವು ಆತನ ಶಕ್ತಿಯನ್ನು ನೋಡಿ ಪ್ರಭಾವಿತರಾಗಬಹುದು ಮತ್ತು ಆತನನ್ನು ಸೃಷ್ಟಿಕರ್ತನಾದ ದೇವರೋಪಾದಿ ಅಂಗೀಕರಿಸುವಂತೆ ಪ್ರಚೋದಿಸಲ್ಪಡಬಹುದು. (ಇಬ್ರಿಯ 11:3; ಪ್ರಕಟನೆ 4:11) ಈ ವಿಷಯದಲ್ಲಿ ಅಪೊಸ್ತಲ ಪೌಲನು ಬರೆದುದು: “ಕಣ್ಣಿಗೆ ಕಾಣದಿರುವ ಆತನ [ದೇವರ] ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” (ರೋಮಾಪುರ 1:20) ಆದುದರಿಂದ, ದೇವರನ್ನು ನೋಡುವುದರ ಕುರಿತಾಗಿ ಯೇಸು ಹೇಳಿದಾಗ, ಯೆಹೋವನ ಗುಣಗಳನ್ನು ಗ್ರಹಿಸುವ ಶಕ್ತಿಯು ಅದರಲ್ಲಿ ಒಳಗೂಡಿದೆ. ಆ ರೀತಿಯಲ್ಲಿ ನೋಡುವುದು, ನಿಷ್ಕೃಷ್ಟ ಜ್ಞಾನದ ಮೇಲೆ ಆಧಾರಿತವಾಗಿದ್ದು, ‘ಮನೋನೇತ್ರಗಳಿಂದ’ ಆತ್ಮಿಕವಾಗಿ ಗ್ರಹಿಸಲ್ಪಡುತ್ತದೆ. (ಎಫೆಸ 1:18) ಯೇಸುವಿನ ನಡೆನುಡಿ ಸಹ ದೇವರ ಕುರಿತಾಗಿ ಅನೇಕ ವಿಷಯಗಳನ್ನು ಪ್ರಕಟಿಸುತ್ತವೆ. ಆದುದರಿಂದ ಯೇಸು ಹೇಳಿದ್ದು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾನ 14:9) ಯೇಸು ಪರಿಪೂರ್ಣವಾಗಿ ಯೆಹೋವನ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿದನು. ಈ ಕಾರಣದಿಂದಲೇ, ಯೇಸುವಿನ ಜೀವನ ಮತ್ತು ಬೋಧನೆಗಳ ಕುರಿತಾದ ಜ್ಞಾನವು, ನಾವು ದೇವರ ಗುಣಗಳಲ್ಲಿ ಕೆಲವೊಂದನ್ನು ನೋಡಲು ಅಥವಾ ಗ್ರಹಿಸಲು ಸಹಾಯಮಾಡುವುದು.

ಆತ್ಮಿಕತೆ ಅತ್ಯಾವಶ್ಯಕ

4. ಇಂದು ಅನೇಕರು ಆತ್ಮಿಕತೆಯ ಕೊರತೆಯನ್ನು ಹೇಗೆ ತೋರಿಸುತ್ತಾರೆ?

4 ಇಂದು ನಂಬಿಕೆ ಮತ್ತು ನಿಜವಾದ ಆತ್ಮಿಕತೆಯು ತೀರ ಅಪರೂಪದ ವಿಷಯಗಳಾಗಿಬಿಟ್ಟಿವೆ. ‘ಎಲ್ಲರಲ್ಲಿ ನಂಬಿಕೆಯಿಲ್ಲ’ ಎಂದು ಪೌಲನು ಹೇಳಿದನು. (2 ಥೆಸಲೊನೀಕ 3:2) ಅನೇಕರು ತಮ್ಮ ವೈಯಕ್ತಿಕ ಬೆನ್ನಟ್ಟುವಿಕೆಗಳಲ್ಲೇ ಮುಳುಗಿಹೋಗಿದ್ದಾರೆ ಮತ್ತು ಅವರಿಗೆ ದೇವರಲ್ಲಿ ನಂಬಿಕೆಯೇ ಇಲ್ಲ. ಅವರ ಪಾಪಪೂರ್ಣ ನಡತೆ ಮತ್ತು ಆತ್ಮಿಕತೆಯ ಕೊರತೆಯು, ಅವರು ತಿಳುವಳಿಕೆಯ ಕಣ್ಣುಗಳ ಮೂಲಕ ಆತನನ್ನು ನೋಡುವುದನ್ನು ತಡೆಗಟ್ಟುತ್ತದೆ. ಯಾಕೆಂದರೆ ಅಪೊಸ್ತಲ ಯೋಹಾನನು ಬರೆದುದು: “ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ.” (3 ಯೋಹಾನ 11) ಅಂಥ ವ್ಯಕ್ತಿಗಳಿಗೆ ತಮ್ಮ ಶಾರೀರಿಕ ಕಣ್ಣುಗಳಿಂದ ದೇವರನ್ನು ನೋಡಲಾಗದಿರುವುದರಿಂದ, ಅವರೇನನ್ನು ಮಾಡುತ್ತಿದ್ದಾರೊ ಅದನ್ನು ದೇವರು ನೋಡುವುದಿಲ್ಲವೊ ಎಂಬಂತೆ ಅವರು ವರ್ತಿಸುತ್ತಾರೆ. (ಯೆಹೆಜ್ಕೇಲ 9:9) ಅವರು ಆತ್ಮಿಕ ವಿಷಯಗಳನ್ನು ತುಚ್ಛವಾಗಿ ಪರಿಗಣಿಸುವುದರಿಂದ, “ದೈವಜ್ಞಾನವನ್ನು” ಪಡೆದುಕೊಳ್ಳಲಾರರು. (ಜ್ಞಾನೋಕ್ತಿ 2:5) ಆದುದರಿಂದ ಪೌಲನು ತಕ್ಕದ್ದಾಗಿಯೇ ಹೀಗೆ ಬರೆದನು: “ಪ್ರಾಕೃತಮನುಷ್ಯನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತಾಗಿ ತೋರುತ್ತವೆ; ಅವು ಆತ್ಮವಿಚಾರದಿಂದ ತಿಳಿಯತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸಲಾರನು.”​—1 ಕೊರಿಂಥ 2:14.

5. ಆತ್ಮಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವವರಿಗೆ ಯಾವ ವಾಸ್ತವಾಂಶದ ಅರಿವಿರುತ್ತದೆ?

5 ಒಂದುವೇಳೆ ನಾವು ಆತ್ಮಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದರೆ, ನಮಗೆ ಸದಾ ಈ ಅರಿವು ಇರುವುದು: ಯೆಹೋವನು ತಪ್ಪು ಕಂಡುಹಿಡಿಯುವ ದೇವರಾಗಿರದಿದ್ದರೂ, ನಾವು ಕೆಟ್ಟ ಯೋಚನೆಗಳು ಮತ್ತು ಆಶೆಗಳಿಗನುಸಾರ ಕ್ರಿಯೆಗೈಯುವಾಗ ಆತನಿಗೆ ಅದು ಗೊತ್ತಿರುತ್ತದೆ. ಹೌದು, “ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ, ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ.” (ಜ್ಞಾನೋಕ್ತಿ 5:21) ಆದರೆ ಪಾಪವು ನಮ್ಮ ಮೇಲೆ ಜಯಸಾಧಿಸುವಲ್ಲಿ, ನಾವು ಪಶ್ಚಾತ್ತಾಪಪಟ್ಟು ಆತನ ಕ್ಷಮೆಯನ್ನು ಕೋರಲು ಪ್ರಚೋದಿಸಲ್ಪಡುವೆವು. ಏಕೆ? ಏಕೆಂದರೆ, ನಾವು ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು ಆತನನ್ನು ನೋಯಿಸಲು ಬಯಸುವುದಿಲ್ಲ.​—ಕೀರ್ತನೆ 78:41; 130:3.

ನಮ್ಮನ್ನು ಯಾವುದು ದೃಢಚಿತ್ತರನ್ನಾಗಿ ಮಾಡುತ್ತದೆ?

6. ದೃಢಚಿತ್ತರಾಗಿರುವುದರ ಅರ್ಥವೇನು?

6 ನಾವು ಯೆಹೋವನನ್ನು ನೋಡಲಾಗದಿದ್ದರೂ, ಆತನು ನಮ್ಮನ್ನು ನೋಡಬಲ್ಲನೆಂಬುದನ್ನು ಯಾವಾಗಲೂ ನೆನಪಿನಲ್ಲಿಡೋಣ. ಆತನ ಅಸ್ತಿತ್ವದ ಅರಿವು ಮತ್ತು ತನಗೆ ಮೊರೆಯಿಡುವವರೆಲ್ಲರಿಗೆ ಆತನು ಹತ್ತಿರವಾಗಿದ್ದಾನೆಂಬ ಮನಗಾಣಿಕೆಯು ನಮ್ಮನ್ನು ದೃಢಚಿತ್ತರನ್ನಾಗಿ ಮಾಡುವುದು, ಅಂದರೆ ಆತನ ಕಡೆಗಿನ ನಮ್ಮ ನಂಬಿಗಸ್ತಿಕೆಯಲ್ಲಿ ಸ್ಥಿರ ಹಾಗೂ ಅಚಲರನ್ನಾಗಿ ಮಾಡುವುದು. (ಕೀರ್ತನೆ 145:18) ನಾವು ಮೋಶೆಯಂತೆ ಇರಬಲ್ಲೆವು. ಅವನ ಕುರಿತು ಪೌಲನು ಹೀಗೆ ಬರೆದನು: “ಅವನು ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತದೇಶವನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.”​—ಇಬ್ರಿಯ 11:27.

7, 8. ಫರೋಹನ ಮುಂದೆ ನಿಲ್ಲುವ ಧೈರ್ಯ ಮೋಶೆಗೆ ಹೇಗೆ ಸಿಕ್ಕಿತು?

7 ಇಸ್ರಾಯೇಲ್ಯರನ್ನು ಐಗುಪ್ತದ ಬಂದಿವಾಸದಿಂದ ಹೊರತರುವ ತನ್ನ ದೇವದತ್ತ ನೇಮಕವನ್ನು ಪೂರೈಸುತ್ತಿರುವಾಗ, ಮೋಶೆಯು ಅನೇಕ ಸಲ ಕ್ರೂರಿಯಾಗಿದ್ದ ಫರೋಹನ ಮುಂದೆ ಹೋಗಬೇಕಾಯಿತು. ಮತ್ತು ಫರೋಹನ ಆಸ್ಥಾನವು ಧಾರ್ಮಿಕ ಹಾಗೂ ಮಿಲಿಟರಿಯ ಪ್ರತಿಷ್ಠಿತ ಜನರಿಂದಲೇ ತುಂಬಿರುತ್ತಿತ್ತು. ಆ ಅರಮನೆಯ ಗೋಡೆಗಳ ಉದ್ದಕ್ಕೂ ವಿಗ್ರಹಗಳು ಇದ್ದಿರಬಹುದು. ಆದರೆ ಮೋಶೆಗೆ ಯೆಹೋವನು ಅದೃಶ್ಯನಾಗಿದ್ದರೂ, ಐಗುಪ್ತದ ನಿರ್ಜೀವ ದೇವತೆಗಳನ್ನು ಪ್ರತಿನಿಧಿಸುತ್ತಿದ್ದ ಎಲ್ಲ ವಿಗ್ರಹಗಳಂತಿರದೇ, ಆತನು ಒಬ್ಬ ನೈಜ ವ್ಯಕ್ತಿಯಾಗಿದ್ದನು. ಆದುದರಿಂದ ಮೋಶೆಯು ಫರೋಹನಿಗೆ ಹೆದರದೇ ಇದ್ದದ್ದು ಆಶ್ಚರ್ಯದ ಸಂಗತಿಯೇನಲ್ಲ!

8 ಫರೋಹನ ಮುಂದೆ ಪುನಃ ಪುನಃ ಹೋಗುವಷ್ಟು ಧೈರ್ಯ ಮೋಶೆಗೆ ಹೇಗೆ ಸಿಕ್ಕಿತು? ಏಕೆಂದರೆ “ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಆಗಿದ್ದನೆಂದು ಶಾಸ್ತ್ರವಚನಗಳು ಹೇಳುತ್ತವೆ. (ಅರಣ್ಯಕಾಂಡ 12:3) ಅವನ ಬಲವಾದ ಆತ್ಮಿಕತೆ ಮತ್ತು ದೇವರು ತನ್ನೊಂದಿಗೆ ಇದ್ದಾನೆಂಬ ದೃಢನಂಬಿಕೆಯೇ ಅವನು ಐಗುಪ್ತದ ನಿರ್ದಯಿ ರಾಜನ ಮುಂದೆ ‘ಅದೃಶ್ಯನಾಗಿರುವಾತನನ್ನು’ ಪ್ರತಿನಿಧಿಸಲು ಬೇಕಾದ ಶಕ್ತಿಯನ್ನು ಕೊಟ್ಟಿತು. ಆದರೆ ಇಂದು, ಅದೃಶ್ಯ ದೇವರನ್ನು ‘ನೋಡುವವರು’ ಆತನಲ್ಲಿನ ತಮ್ಮ ನಂಬಿಕೆಯನ್ನು ತೋರಿಸುವ ಕೆಲವು ವಿಧಗಳು ಯಾವವು?

9. ನಾವು ದೃಢಚಿತ್ತರಾಗಿ ಮುಂದುವರಿಯಬಲ್ಲ ಒಂದು ವಿಧ ಯಾವುದು?

9 ನಂಬಿಕೆಯನ್ನು ತೋರಿಸುವ ಮತ್ತು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋಪಾದಿ ದೃಢಚಿತ್ತರಾಗಿ ಮುಂದುವರಿಯುವ ಒಂದು ವಿಧವು, ಹಿಂಸೆಯ ಎದುರಿನಲ್ಲೂ ಧೈರ್ಯದಿಂದ ಸಾರುವುದೇ ಆಗಿದೆ. ಯೇಸು ತನ್ನ ಶಿಷ್ಯರನ್ನು ಎಚ್ಚರಿಸಿದ್ದು: “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.” (ಲೂಕ 21:17) ಅವನು ಹೀಗೂ ಹೇಳಿದನು: “ದಣಿಗಿಂತ ಆಳು ದೊಡ್ಡವನಲ್ಲ . . . ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು.” (ಯೋಹಾನ 15:20) ಯೇಸು ಹೇಳಿದಂತೆಯೇ, ಅವನ ಮರಣದ ಸ್ವಲ್ಪ ಸಮಯದ ನಂತರ ಅವನ ಹಿಂಬಾಲಕರು ಬೆದರಿಕೆಗಳು, ದಸ್ತಗಿರಿಗಳು, ಮತ್ತು ಹೊಡೆತಗಳ ರೂಪದಲ್ಲಿ ಹಿಂಸೆಯನ್ನು ಅನುಭವಿಸಿದರು. (ಅ. ಕೃತ್ಯಗಳು 4:​1-3, 18-21; 5:​17, 18, 40) ಹಿಂಸೆಯ ಅಲೆ ಎದ್ದರೂ, ಯೇಸುವಿನ ಅಪೊಸ್ತಲರು ಮತ್ತು ಬೇರೆ ಶಿಷ್ಯರು ಧೈರ್ಯದಿಂದ ಸುವಾರ್ತೆ ಸಾರುವುದನ್ನು ಮುಂದುವರಿಸಿದರು.​—ಅ. ಕೃತ್ಯಗಳು 4:​29-31.

10. ಯೆಹೋವನ ಸಂರಕ್ಷಣಾತ್ಮಕ ಪರಾಮರಿಕೆಯಲ್ಲಿ ನಮಗಿರುವ ಭರವಸೆಯು, ಶುಶ್ರೂಷೆಯಲ್ಲಿ ನಮಗೆ ಹೇಗೆ ಸಹಾಯಮಾಡುತ್ತದೆ?

10 ಮೋಶೆಯಂತೆ ಯೇಸುವಿನ ಆರಂಭದ ಹಿಂಬಾಲಕರು ಸಹ, ಕಣ್ಣಿಗೆ ಕಾಣುತ್ತಿದ್ದ ತಮ್ಮ ಅನೇಕ ಶತ್ರುಗಳಿಗೆ ಭಯಪಡಲಿಲ್ಲ. ಯೇಸುವಿನ ಶಿಷ್ಯರಿಗೆ ದೇವರಲ್ಲಿ ನಂಬಿಕೆಯಿತ್ತು ಮತ್ತು ಈ ಕಾರಣದಿಂದ ಅವರು ಎದುರಿಸಿದಂಥ ಅತಿ ಕಠಿನವಾದ ಹಿಂಸೆಯನ್ನು ತಾಳಿಕೊಳ್ಳಲು ಶಕ್ತರಾಗಿದ್ದರು. ಹೌದು, ಅವರು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋಪಾದಿ ದೃಢಚಿತ್ತರಾಗಿ ಮುಂದುವರಿದರು. ಯೆಹೋವನ ಸಂರಕ್ಷಣಾತ್ಮಕ ಪರಾಮರಿಕೆಯ ಕುರಿತಾದ ಸತತವಾದ ಅರಿವು ಇಂದು ನಮ್ಮನ್ನು ಹುರಿದುಂಬಿಸುತ್ತಾ, ನಮ್ಮ ರಾಜ್ಯ ಸಾರುವಿಕೆಯ ಕೆಲಸವನ್ನು ಮಾಡಲು ನಮ್ಮನ್ನು ಧೀರರನ್ನಾಗಿಯೂ, ನಿರ್ಭೀತರನ್ನಾಗಿಯೂ ಮಾಡುತ್ತದೆ. “ಮನುಷ್ಯನ ಭಯ ಉರುಲು, ಯೆಹೋವನ ಭರವಸ ಉದ್ಧಾರ” ಎಂದು ದೇವರ ವಾಕ್ಯವು ಹೇಳುತ್ತದೆ. (ಜ್ಞಾನೋಕ್ತಿ 29:25) ಹೀಗಿರುವುದರಿಂದ, ನಾವು ಹಿಂಸೆಯ ಭಯದಿಂದ ಹಿಮ್ಮೆಟ್ಟುವುದಿಲ್ಲ, ಅಥವಾ ನಾವು ನಮ್ಮ ಶುಶ್ರೂಷೆಯ ಕುರಿತಾಗಿ ನಾಚಿಕೆಪಡುವುದೂ ಇಲ್ಲ. ನಮ್ಮ ನಂಬಿಕೆಯು, ನಾವು ನೆರೆಹೊರೆಯವರಿಗೆ, ಜೊತೆಕೆಲಸಗಾರರಿಗೆ, ಶಾಲಾ ಸಹಪಾಠಿಗಳಿಗೆ ಮತ್ತು ಇತರರಿಗೆ ಧೈರ್ಯದಿಂದ ಸಾಕ್ಷಿನೀಡುವಂತೆ ಪ್ರಚೋದಿಸುತ್ತದೆ.​—ರೋಮಾಪುರ 1:​14-16.

ಅದೃಶ್ಯನಾಗಿರುವಾತನು ತನ್ನ ಜನರನ್ನು ನಿರ್ದೇಶಿಸುತ್ತಾನೆ

11. ಪೇತ್ರ ಮತ್ತು ಯೂದರಿಗನುಸಾರ, ಕ್ರೈಸ್ತ ಸಭೆಯೊಂದಿಗೆ ಸಹವಾಸಿಸುತ್ತಿದ್ದ ಕೆಲವರು ಆತ್ಮಿಕತೆಯ ಕೊರತೆಯನ್ನು ಹೇಗೆ ತೋರಿಸಿದರು?

11 ತನ್ನ ಭೂಸಂಸ್ಥೆಯನ್ನು ನಿರ್ದೇಶಿಸುತ್ತಿರುವಾತನು ಯೆಹೋವನಾಗಿದ್ದಾನೆ ಎಂಬುದನ್ನು ನೋಡುವಂತೆ ನಂಬಿಕೆಯು ನಮಗೆ ಸಹಾಯಮಾಡುತ್ತದೆ. ಆದುದರಿಂದ, ಸಭೆಯಲ್ಲಿ ಜವಾಬ್ದಾರಿಯ ಸ್ಥಾನದಲ್ಲಿರುವವರ ಕಡೆಗೆ ನಾವು ಟೀಕಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುವುದರಿಂದ ದೂರವಿರುತ್ತೇವೆ. ಅಪೊಸ್ತಲ ಪೇತ್ರನು ಮತ್ತು ಯೇಸುವಿನ ಮಲತಮ್ಮನಾದ ಯೂದನು ಸಹ, ನಿರ್ದಿಷ್ಟ ವ್ಯಕ್ತಿಗಳ ಕುರಿತಾಗಿ ಎಚ್ಚರಿಸಿದರು. ಈ ವ್ಯಕ್ತಿಗಳಲ್ಲಿ ಆತ್ಮಿಕತೆಯ ಕೊರತೆಯು ಎಷ್ಟಿರುವುದೆಂದರೆ, ಕ್ರೈಸ್ತರ ನಡುವೆ ಮುಂದಾಳುತ್ವ ವಹಿಸುವ ಪುರುಷರನ್ನು ಇವರು ದೂಷಿಸುತ್ತಾರೆ. (2 ಪೇತ್ರ 2:​9-12; ಯೂದ 8) ಒಂದುವೇಳೆ ಯೆಹೋವನೇ ಅವರಿಗೆ ಶಾರೀರಿಕ ರೀತಿಯಲ್ಲಿ ಕಾಣುತ್ತಿದ್ದು ಅಲ್ಲಿ ಉಪಸ್ಥಿತನಿದ್ದಲ್ಲಿ, ಯಾವಾಗಲೂ ತಪ್ಪುಹುಡುಕುತ್ತಿರುವ ಆ ವ್ಯಕ್ತಿಗಳು ಆ ರೀತಿಯಲ್ಲಿ ಮಾತಾಡುತ್ತಿದ್ದರೊ? ಖಂಡಿತವಾಗಿಯೂ ಇಲ್ಲ! ಆದರೆ ದೇವರು ಅದೃಶ್ಯನಾಗಿರುವುದರಿಂದ, ತಾವು ಆತನಿಗೆ ಲೆಕ್ಕವೊಪ್ಪಿಸಲಿಕ್ಕಿದೆ ಎಂಬ ಮಾತನ್ನು ಆ ಶರೀರಭಾವದ ಪುರುಷರು ಪರಿಗಣಿಸಲು ತಪ್ಪಿಹೋದರು.

12. ಸಭೆಯಲ್ಲಿ ಮುಂದಾಳುತ್ವ ವಹಿಸುತ್ತಿರುವವರ ಕಡೆಗೆ ನಾವು ಯಾವ ಮನೋಭಾವವನ್ನು ಪ್ರದರ್ಶಿಸಬೇಕು?

12 ಕ್ರೈಸ್ತ ಸಭೆಯಲ್ಲಿ ಅಪರಿಪೂರ್ಣ ಮನುಷ್ಯರೇ ಇದ್ದಾರೆಂಬುದು ನಿಜ. ಹಿರಿಯರೋಪಾದಿ ಕೆಲಸಮಾಡುವವರು ಸಹ ತಪ್ಪುಮಾಡುತ್ತಾರೆ ಮತ್ತು ಇವು ಕೆಲವೊಮ್ಮೆ ನಮ್ಮನ್ನು ವೈಯಕ್ತಿಕವಾಗಿ ಬಾಧಿಸಬಹುದು. ಹಾಗಿದ್ದರೂ, ತನ್ನ ಮಂದೆಯ ಕುರಿಪಾಲಕರೋಪಾದಿ ಯೆಹೋವನು ಇಂಥ ಪುರುಷರನ್ನೇ ಉಪಯೋಗಿಸುತ್ತಾನೆ. (1 ಪೇತ್ರ 5:​1, 2) ಯೆಹೋವನು ತನ್ನ ಜನರನ್ನು ನಿರ್ದೇಶಿಸುವ ಒಂದು ವಿಧ ಇದಾಗಿದೆಯೆಂದು, ಆತ್ಮಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವ ಸ್ತ್ರೀಪುರುಷರು ಅಂಗೀಕರಿಸುತ್ತಾರೆ. ಆದುದರಿಂದ ಕ್ರೈಸ್ತರೋಪಾದಿ ನಾವು ಒಂದು ಟೀಕಾತ್ಮಕ, ದೂಷಿಸುವ ಆತ್ಮದಿಂದ ದೂರವಿದ್ದು, ದೇವರು ಮಾಡಿರುವ ದೇವಪ್ರಭುತ್ವ ಏರ್ಪಾಡುಗಳಿಗಾಗಿ ಗೌರವವನ್ನು ತೋರಿಸುತ್ತೇವೆ. ನಮ್ಮ ಮಧ್ಯೆ ಮುಂದಾಳುತ್ವ ವಹಿಸುವವರಿಗೆ ವಿಧೇಯರಾಗಿರುವ ಮೂಲಕ, ನಾವು ಅದೃಶ್ಯನಾಗಿರುವಾತನನ್ನು ನೋಡುತ್ತಿದ್ದೇವೆಂಬುದನ್ನು ತೋರಿಸುತ್ತೇವೆ.​—ಇಬ್ರಿಯ 13:17.

ದೇವರನ್ನು ನಮ್ಮ ಮಹಾ ಉಪದೇಶಕನೋಪಾದಿ ದೃಷ್ಟಿಸುವುದು

13, 14. ನೀವು ಯೆಹೋವನನ್ನು ಮಹಾ ಉಪದೇಶಕನೋಪಾದಿ ದೃಷ್ಟಿಸುವುದರಲ್ಲಿ ಏನು ಒಳಗೂಡಿದೆ?

13 ಆತ್ಮಿಕ ಗ್ರಹಣಶಕ್ತಿಯು ಆವಶ್ಯಕವಾಗಿರುವ ಇನ್ನೊಂದು ಕ್ಷೇತ್ರವಿದೆ. ಯೆಶಾಯನು ಪ್ರವಾದಿಸಿದ್ದು: “ನಿಮ್ಮ ಬೋಧಕನನ್ನು [“ಮಹಾ ಉಪದೇಶಕನನ್ನು,” NW] ಕಣ್ಣಾರೆ ಕಾಣುವಿರಿ.” (ಯೆಶಾಯ 30:20) ತನ್ನ ಭೂಸಂಸ್ಥೆಯ ಮೂಲಕ ನಮ್ಮನ್ನು ಕಲಿಸುತ್ತಿರುವವನು ಯೆಹೋವನೇ ಎಂಬುದನ್ನು ಅಂಗೀಕರಿಸಲಿಕ್ಕಾಗಿ ನಂಬಿಕೆಯು ಬೇಕು. (ಮತ್ತಾಯ 24:​45-47) ದೇವರನ್ನು ನಮ್ಮ ಮಹಾ ಉಪದೇಶಕನೋಪಾದಿ ದೃಷ್ಟಿಸುವುದರಲ್ಲಿ, ಒಳ್ಳೆಯ ಬೈಬಲ್‌ ಅಭ್ಯಾಸದ ರೂಢಿಗಳು ಮತ್ತು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ದೇವರ ಆತ್ಮಿಕ ಒದಗಿಸುವಿಕೆಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದು ಅದರಲ್ಲಿ ಸೇರಿರುತ್ತದೆ. ಉದಾಹರಣೆಗಾಗಿ, ನಾವು ಆತ್ಮಿಕವಾಗಿ ತೇಲಿಹೋಗದಂತೆ, ಯೇಸುವಿನ ಮೂಲಕ ಯೆಹೋವನು ಒದಗಿಸುವ ನಿರ್ದೇಶನಕ್ಕೆ ನಾವು ಎಂದಿಗಿಂತಲೂ ಹೆಚ್ಚಿನ ಗಮನವನ್ನು ಕೊಡುವ ಅಗತ್ಯವಿದೆ.​—ಇಬ್ರಿಯ 2:1.

14 ಕೆಲವೊಮ್ಮೆ, ಆತ್ಮಿಕ ಆಹಾರದ ಪೂರ್ಣ ಪ್ರಯೋಜನವನ್ನು ಪಡೆಯಲು ವಿಶೇಷ ಪ್ರಯತ್ನವನ್ನು ಮಾಡಬೇಕಾಗಬಹುದು. ಉದಾಹರಣೆಗಾಗಿ, ನಮಗೆ ಅರ್ಥವಾಗಲು ಕಷ್ಟವಾಗುವಂಥ ಕೆಲವು ನಿರ್ದಿಷ್ಟ ಬೈಬಲ್‌ ವೃತ್ತಾಂತಗಳನ್ನು ಮೇಲೆ ಮೇಲೆ ಓದಿಕೊಂಡು ಹೋಗುವ ಸ್ವಭಾವ ನಮಗಿರಬಹುದು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದುತ್ತಿರುವಾಗ, ಅಷ್ಟೊಂದು ಆಸಕ್ತಿಕರ ವಿಷಯವಲ್ಲವೆಂದು ನಮಗನಿಸುವಂಥ ನಿರ್ದಿಷ್ಟ ಲೇಖನಗಳನ್ನು ನಾವು ಓದದೇ ಇರಬಹುದು. ಅಥವಾ ನಾವು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿರುವುದಾದರೂ, ಅಲ್ಲಿರುವಾಗ ನಮ್ಮ ಮನಸ್ಸು ಅಲೆದಾಡುವಂತೆ ನಾವು ಬಿಡುತ್ತಿರಬಹುದು. ಆದರೆ ಚರ್ಚಿಸಲಾಗುತ್ತಿರುವ ವಿಷಯಗಳ ಕುರಿತಾಗಿ ನಾವು ಜಾಗರೂಕತೆಯಿಂದ ಮನಸ್ಸಿನಲ್ಲೇ ತರ್ಕಮಾಡುತ್ತಿರುವಲ್ಲಿ, ನಾವು ಎಚ್ಚರವಾಗಿರಬಲ್ಲೆವು. ನಮಗೆ ಸಿಗುತ್ತಿರುವ ಆತ್ಮಿಕ ಉಪದೇಶಕ್ಕಾಗಿ ಗಾಢವಾದ ಗಣ್ಯತೆಯು, ನಾವು ಯೆಹೋವನನ್ನು ನಮ್ಮ ಮಹಾ ಉಪದೇಶಕನಾಗಿ ಅಂಗೀಕರಿಸುತ್ತೇವೆಂಬುದನ್ನು ತೋರಿಸುತ್ತದೆ.

ನಾವು ಲೆಕ್ಕವೊಪ್ಪಿಸಬೇಕು

15. ತಾವು ಯೆಹೋವನಿಗೆ ಅದೃಶ್ಯವಾಗಿದ್ದೇವೊ ಎಂಬಂತೆ ಕೆಲವರು ವರ್ತಿಸಿರುವುದು ಹೇಗೆ?

15 ಈ ‘ಅಂತ್ಯಕಾಲದಲ್ಲಿ’ ದುಷ್ಟತನವು ಎಲ್ಲೆಲ್ಲೂ ರಾರಾಜಿಸುತ್ತಿರುವುದರಿಂದ, ಅದೃಶ್ಯನಾಗಿರುವಾತನಲ್ಲಿ ನಂಬಿಕೆಯು ವಿಶೇಷವಾಗಿ ಅತ್ಯಾವಶ್ಯಕವಾಗಿದೆ. (ದಾನಿಯೇಲ 12:4) ಅಪ್ರಾಮಾಣಿಕತೆ ಮತ್ತು ಲೈಂಗಿಕ ಅನೈತಿಕತೆಯು ತೀರ ಸಾಮಾನ್ಯವಾಗಿಬಿಟ್ಟಿವೆ. ಮನುಷ್ಯರು ನಮ್ಮನ್ನು ನೋಡದಿದ್ದರೂ, ಯೆಹೋವನು ನಮ್ಮ ಕ್ರಿಯೆಗಳನ್ನು ನೋಡುತ್ತಿದ್ದಾನೆಂಬುದನ್ನು ನೆನಪಿನಲ್ಲಿಡುವುದು ವಿವೇಕಯುತ. ಕೆಲವರು ಈ ವಾಸ್ತವಾಂಶವನ್ನು ಮರೆತುಬಿಟ್ಟಿದ್ದಾರೆ. ಆದುದರಿಂದ ಬೇರೆಯವರು ಅವರನ್ನು ನೋಡದೆ ಇರುವಾಗ, ಅವರು ಅಶಾಸ್ತ್ರೀಯ ನಡತೆಯಲ್ಲಿ ಒಳಗೂಡುತ್ತಾರೆ. ದೃಷ್ಟಾಂತಕ್ಕಾಗಿ, ಕೆಲವರು ಇಂಟರ್‌ನೆಟ್‌, ಟಿವಿ ಮತ್ತು ಆಧುನಿಕ ತಂತ್ರಜ್ಞಾನದ ಇತರ ವಿಧಾನಗಳ ಮೂಲಕ ಹಾನಿಕರವಾದ ಮನೋರಂಜನೆ ಮತ್ತು ಅಶ್ಲೀಲ ಸಾಹಿತ್ಯ ಹಾಗೂ ಚಿತ್ರಗಳನ್ನು ನೋಡುವ ಶೋಧನೆಯನ್ನು ಪ್ರತಿರೋಧಿಸುವುದಿಲ್ಲ. ಇದೆಲ್ಲವನ್ನು ಏಕಾಂತದಲ್ಲಿ ಮಾಡಲು ಸಾಧ್ಯವಿರುವುದರಿಂದ, ಇಂಥವರು ತಾವೇನನ್ನು ಮಾಡುತ್ತಿದ್ದೇವೊ ಅದು ಯೆಹೋವನಿಗೆ ಅದೃಶ್ಯವಾಗಿದೆಯೊ ಎಂಬಂತೆ ವರ್ತಿಸಿದ್ದಾರೆ.

16. ಯೆಹೋವನ ಉನ್ನತ ಮಟ್ಟಗಳಿಗನುಗುಣವಾಗಿ ನಡೆಯುವಂತೆ ನಮಗೆ ಯಾವುದು ಸಹಾಯಮಾಡುವುದು?

16 ಅಪೊಸ್ತಲ ಪೌಲನ ಈ ಮಾತುಗಳನ್ನು ಮನಸ್ಸಿನಲ್ಲಿಡುವುದು ಒಳ್ಳೇದು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು [“ಲೆಕ್ಕವೊಪ್ಪಿಸಬೇಕು,” NW].” (ರೋಮಾಪುರ 14:12) ನಾವು ಪ್ರತಿ ಬಾರಿ ಪಾಪಮಾಡುವಾಗ, ನಾವು ಯೆಹೋವನ ವಿರುದ್ಧ ಪಾಪಮಾಡುತ್ತಿದ್ದೇವೆಂಬ ಅರಿವು ನಮಗಿರಬೇಕು. ಇದು ನಾವು ಆತನ ಉನ್ನತ ಮಟ್ಟಗಳಿಗನುಗುಣವಾಗಿ ನಡೆದು, ಅಶುದ್ಧವಾದ ನಡತೆಯಿಂದ ದೂರವಿರುವಂತೆ ಸಹಾಯಮಾಡಬೇಕು. ಬೈಬಲ್‌ ನಮಗೆ ಜ್ಞಾಪಕಹುಟ್ಟಿಸುವುದು: “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.” (ಇಬ್ರಿಯ 4:13) ನಾವು ದೇವರಿಗೆ ಲೆಕ್ಕವೊಪ್ಪಿಸಬೇಕೆಂಬುದು ನಿಜ. ಆದರೆ ನಾವು ಯೆಹೋವನ ಚಿತ್ತವನ್ನು ಮಾಡುವ ಮತ್ತು ಆತನ ನೀತಿಯ ಮಟ್ಟಗಳಿಗನುಸಾರ ಜೀವಿಸುವ ಮುಖ್ಯ ಕಾರಣವು, ನಾವು ಆತನನ್ನು ತುಂಬ ಪ್ರೀತಿಸುತ್ತೇವೆ. ಆದುದರಿಂದ, ಮನೋರಂಜನೆಯ ವಿಷಯದಲ್ಲಿ ನಾವು ಮಾಡುವ ಆಯ್ಕೆ ಮತ್ತು ವಿರುದ್ಧ ಲಿಂಗದವರೊಂದಿಗಿನ ನಮ್ಮ ನಡತೆಯಂಥ ವಿಷಯಗಳಲ್ಲಿ ನಾವು ವಿವೇಚನಾಶಕ್ತಿಯನ್ನು ಉಪಯೋಗಿಸೋಣ.

17. ಯೆಹೋವನು ನಮ್ಮನ್ನು ಯಾವ ರೀತಿಯ ಆಸಕ್ತಿಯೊಂದಿಗೆ ಗಮನಿಸುತ್ತಾನೆ?

17 ಯೆಹೋವನು ನಮ್ಮ ಕುರಿತಾಗಿ ತುಂಬ ಆಸಕ್ತನಾಗಿದ್ದಾನೆ. ಇದರರ್ಥ, ನಾವು ತಪ್ಪುಗಳನ್ನು ಮಾಡಿದಾಕ್ಷಣ ನಮ್ಮನ್ನು ಶಿಕ್ಷಿಸಲು ಆತನು ಕಾದುಕೊಂಡಿದ್ದಾನೆಂದಲ್ಲ. ಅದರ ಬದಲು, ತನ್ನ ವಿಧೇಯ ಮಕ್ಕಳಿಗೆ ಬಹುಮಾನವನ್ನು ಕೊಡಲು ಬಯಸುವ ಒಬ್ಬ ತಂದೆಯಂತೆ ಆತನು ಪ್ರೀತಿಪರ ಚಿಂತೆಯೊಂದಿಗೆ ನಮ್ಮನ್ನು ಗಮನಿಸುತ್ತಾನೆ. ನಮ್ಮ ಸ್ವರ್ಗೀಯ ತಂದೆಯು ನಮ್ಮ ನಂಬಿಕೆಯಿಂದ ಸಂತೋಷಗೊಂಡಿದ್ದಾನೆ ಮತ್ತು ‘ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ’ ಎಂಬುದನ್ನು ತಿಳಿಯುವುದು ನಮಗೆಷ್ಟು ಸಾಂತ್ವನದಾಯಕವಾಗಿದೆ! (ಇಬ್ರಿಯ 11:6) ನಾವು ಯೆಹೋವನಲ್ಲಿ ಸಂಪೂರ್ಣ ನಂಬಿಕೆಯನ್ನಿಟ್ಟು, ‘ಸಂಪೂರ್ಣಹೃದಯದಿಂದ ಆತನನ್ನು ಸೇವಿಸೋಣ.’​—1 ಪೂರ್ವಕಾಲವೃತ್ತಾಂತ 28:9.

18. ಯೆಹೋವನು ನಮ್ಮನ್ನು ನೋಡಿ, ನಮ್ಮ ನಂಬಿಕೆಯನ್ನು ಗಮನಿಸುತ್ತಿರುವುದರಿಂದ, ನಮಗೆ ಶಾಸ್ತ್ರವಚನಗಳಿಂದ ಯಾವ ಆಶ್ವಾಸನೆ ಸಿಗುತ್ತದೆ?

18ಜ್ಞಾನೋಕ್ತಿ 15:3 ಹೇಳುವುದು: “ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು.” ಹೌದು, ದೇವರು ಕೆಟ್ಟ ಜನರನ್ನೂ ನೋಡುತ್ತಾನೆ, ಮತ್ತು ಅವರ ನಡತೆಗನುಸಾರ ಅವರೊಂದಿಗೆ ವ್ಯವಹರಿಸುತ್ತಾನೆ. ಆದರೆ ನಾವು ‘ಒಳ್ಳೆಯವರಲ್ಲಿ’ ಒಬ್ಬರಾಗಿರುವಲ್ಲಿ, ಆತನು ನಮ್ಮ ನಂಬಿಗಸ್ತಿಕೆಯ ಕೃತ್ಯಗಳನ್ನು ಗಮನಿಸುತ್ತಾನೆಂಬ ವಿಷಯದಲ್ಲಿ ನಿಶ್ಚಿತರಾಗಿರಬಲ್ಲೆವು. ನಾವು ‘ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವುದಿಲ್ಲ’ ಮತ್ತು ಅದೃಶ್ಯನಾಗಿರುವಾತನು ‘ನಮ್ಮ ಕೆಲಸವನ್ನೂ ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಮರೆಯುವುದಿಲ್ಲ’ ಎಂಬ ಅರಿವು ನಮ್ಮ ನಂಬಿಕೆಯನ್ನು ಎಷ್ಟೊಂದು ಬಲಪಡಿಸುತ್ತದೆ!​—1 ಕೊರಿಂಥ 15:58; ಇಬ್ರಿಯ 6:10.

ಯೆಹೋವನು ನಮ್ಮನ್ನು ಪರೀಕ್ಷಿಸುವಂತೆ ಆಮಂತ್ರಿಸುವುದು

19. ಯೆಹೋವನಲ್ಲಿ ಬಲವಾದ ನಂಬಿಕೆಯಿರುವುದರಿಂದ ಸಿಗುವ ಕೆಲವೊಂದು ಪ್ರಯೋಜನಗಳು ಯಾವುವು?

19 ಯೆಹೋವನ ನಂಬಿಗಸ್ತ ಸೇವಕರೋಪಾದಿ ನಾವು ಆತನಿಗೆ ಅಮೂಲ್ಯರಾಗಿದ್ದೇವೆ. (ಮತ್ತಾಯ 10:​29-31) ಆತನು ನಮಗೆ ಅದೃಶ್ಯನಾಗಿದ್ದರೂ, ಆತನು ನಮಗೆ ಒಬ್ಬ ನೈಜ ವ್ಯಕ್ತಿಯಾಗಿರಬಲ್ಲನು. ಮತ್ತು ಆತನೊಂದಿಗೆ ನಮಗಿರುವ ಅಮೂಲ್ಯವಾದ ಸಂಬಂಧವನ್ನು ನಾವು ಬೆಲೆಯುಳ್ಳದ್ದಾಗಿ ಕಾಣಬಹುದು. ನಮ್ಮ ಸ್ವರ್ಗೀಯ ತಂದೆಯ ಕಡೆಗೆ ಅಂಥ ಮನೋಭಾವವುಳ್ಳವರಾಗಿರುವುದು ನಮಗೆ ಅನೇಕ ಪ್ರಯೋಜನಗಳನ್ನು ತರುವುದು. ನಮ್ಮ ಬಲವಾದ ನಂಬಿಕೆಯಿಂದಾಗಿ, ನಾವು ಒಂದು ಶುದ್ಧವಾದ ಹೃದಯವನ್ನು ಮತ್ತು ಯೆಹೋವನ ಮುಂದೆ ಒಂದು ಶುದ್ಧ ಮನಸ್ಸಾಕ್ಷಿಯನ್ನು ಇಟ್ಟುಕೊಳ್ಳಲು ಸಹಾಯವಾಗುತ್ತದೆ. ನಿಷ್ಕಪಟವಾದ ನಂಬಿಕೆಯು, ದ್ವಿಮುಖ ಜೀವನವನ್ನು ನಡೆಸುವುದರಿಂದಲೂ ನಮ್ಮನ್ನು ತಡೆಯುತ್ತದೆ. (1 ತಿಮೊಥೆಯ 1:​5, 18, 19) ದೇವರಲ್ಲಿ ನಮಗಿರುವ ಅಚಲವಾದ ನಂಬಿಕೆಯು ಒಂದು ಒಳ್ಳೆಯ ಮಾದರಿಯಾಗಿದ್ದು, ನಮ್ಮ ಸುತ್ತಲಿರುವವರ ಮೇಲೆ ಸಕಾರಾತ್ಮಕವಾದ ಪ್ರಭಾವವನ್ನು ಬೀರಬಲ್ಲದು. (1 ತಿಮೊಥೆಯ 4:12) ಅಷ್ಟುಮಾತ್ರವಲ್ಲದೆ, ಅಂಥ ನಂಬಿಕೆಯು ದೈವಿಕ ನಡತೆಯನ್ನು ಪ್ರೋತ್ಸಾಹಿಸುತ್ತಾ, ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತದೆ.​—ಜ್ಞಾನೋಕ್ತಿ 27:11.

20, 21. (ಎ) ಯೆಹೋವನ ಎಚ್ಚರಿಕೆಯ ದೃಷ್ಟಿಯು ನಮ್ಮ ಮೇಲೆ ಇರುವುದು ಏಕೆ ಪ್ರಯೋಜನಕಾರಿಯಾಗಿದೆ? (ಬಿ) ನಾವು ಕೀರ್ತನೆ 139:​23, 24ನ್ನು ನಮಗೇ ಹೇಗೆ ಅನ್ವಯಿಸಿಕೊಳ್ಳಬಹುದು?

20 ನಾವು ನಿಜವಾಗಿಯೂ ವಿವೇಕಿಗಳಾಗಿರುವಲ್ಲಿ, ಯೆಹೋವನು ನಮ್ಮನ್ನು ಗಮನಿಸುತ್ತಿರುವುದಕ್ಕಾಗಿ ನಾವು ಸಂತೋಷಿಸುವೆವು. ಆತನು ಕೇವಲ ನಮ್ಮನ್ನು ನೋಡದೆ, ನಮ್ಮ ವಿಚಾರಗಳನ್ನೂ, ಕೃತ್ಯಗಳನ್ನೂ ಪೂರ್ಣವಾಗಿ ಪರೀಕ್ಷಿಸುವಂತೆಯೂ ಆಶಿಸುವೆವು. ಯೆಹೋವನು ನಮ್ಮನ್ನು ಪರೀಕ್ಷಿಸಿ, ನಮ್ಮಲ್ಲಿ ಯಾವುದಾದರೂ ಅಯೋಗ್ಯವಾದ ಪ್ರವೃತ್ತಿಗಳಿವೆಯೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳುವಂತೆ ನಾವು ಪ್ರಾರ್ಥನೆಯಲ್ಲಿ ಯೆಹೋವನನ್ನು ಬೇಡಿಕೊಳ್ಳುವುದು ಒಳ್ಳೆಯದು. ನಮ್ಮ ಸಮಸ್ಯೆಗಳನ್ನು ನಿಭಾಯಿಸುವಂತೆ ಮತ್ತು ಬೇಕಾಗಿರುವ ಯಾವುದೇ ಬದಲಾವಣೆಗಳನ್ನು ಮಾಡುವಂತೆ ಆತನು ಖಂಡಿತವಾಗಿಯೂ ನಮಗೆ ಸಹಾಯಮಾಡುವನು. ಸೂಕ್ತವಾಗಿಯೇ, ಕೀರ್ತನೆಗಾರನಾದ ದಾವೀದನು ಹೀಗೆ ಹಾಡಿದನು: “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು.”​—ಕೀರ್ತನೆ 139:23, 24.

21 ತನ್ನಲ್ಲಿ ಯಾವುದೇ “ಕೇಡಿನ ಮಾರ್ಗ” ಇದೆಯೊ ಎಂಬುದನ್ನು ತಿಳಿದುಕೊಳ್ಳುವಂತೆ ದಾವೀದನು ಯೆಹೋವನನ್ನು ಬೇಡಿಕೊಂಡನು. ದೇವರು ನಮ್ಮ ಹೃದಯಗಳನ್ನು ಶೋಧಿಸಿ, ನಮ್ಮಲ್ಲಿ ಯಾವುದೇ ಅಯೋಗ್ಯವಾದ ಉದ್ದೇಶಗಳಿವೆಯೊ ಎಂಬುದನ್ನು ನೋಡುವಂತೆ ನಾವು ಸಹ ಕೀರ್ತನೆಗಾರನಂತೆ ಹಂಬಲಿಸುತ್ತೇವಲ್ಲವೇ? ಆದುದರಿಂದ ಯೆಹೋವನು ನಮ್ಮನ್ನು ಪರೀಕ್ಷಿಸುವಂತೆ ನಾವು ನಂಬಿಕೆಯಿಂದ ಕೇಳೋಣ. ಆದರೆ ಯಾವುದೊ ತಪ್ಪಿನ ಕುರಿತಾದ ಚಿಂತೆಯಿಂದಾಗಿ ನಾವು ಕಳವಳಗೊಂಡಿರುವಲ್ಲಿ ಅಥವಾ ನಮ್ಮನ್ನು ನೋಯಿಸಿರುವ ಯಾವುದೊ ಸಂಗತಿಯಿರುವಲ್ಲಿ ಆಗೇನು? ನಮ್ಮ ಪ್ರೀತಿಯ ದೇವರಾದ ಯೆಹೋವನಿಗೆ ಶ್ರದ್ಧೆಯಿಂದ ಪ್ರಾರ್ಥಿಸುವುದನ್ನು ಮುಂದುವರಿಸೋಣ ಮತ್ತು ಆತನ ಪವಿತ್ರಾತ್ಮದ ನಿರ್ದೇಶನ ಹಾಗೂ ಆತನ ವಾಕ್ಯದ ಸಲಹೆಗೆ ನಾವು ನಮ್ರತೆಯಿಂದ ಅಧೀನರಾಗೋಣ. ಆಗ ಆತನು ನಮ್ಮ ನೆರವಿಗೆ ಬರುವನು ಮತ್ತು ನಿತ್ಯಜೀವಕ್ಕೆ ನಡೆಸುವ ಮಾರ್ಗಕ್ರಮವನ್ನು ಬೆನ್ನಟ್ಟುವಂತೆ ಸಹಾಯಮಾಡುವನು ಎಂಬ ಭರವಸೆ ನಮಗಿರಬಲ್ಲದು.​—ಕೀರ್ತನೆ 40:​11-13.

22. ಅದೃಶ್ಯನಾಗಿರುವಾತನ ಸಂಬಂಧದಲ್ಲಿ ನಮ್ಮ ನಿರ್ಧಾರವು ಏನಾಗಿರಬೇಕು?

22 ಹೌದು, ನಾವು ಯೆಹೋವನ ಆವಶ್ಯಕತೆಗಳನ್ನು ಪೂರೈಸುವುದಾದರೆ, ಯೆಹೋವನು ನಮಗೆ ನಿತ್ಯಜೀವದ ಆಶೀರ್ವಾದವನ್ನು ಕೊಡುವನು. ಆದರೆ ನಾವು ಆತನ ಶಕ್ತಿ ಮತ್ತು ಅಧಿಕಾರವನ್ನು ಅಂಗೀಕರಿಸಬೇಕೆಂಬುದು ನಿಶ್ಚಯ. ಅಪೊಸ್ತಲ ಪೌಲನು ಸಹ ಹೀಗೆ ಬರೆದಾಗ ಇದನ್ನು ಮಾಡಿದನು: “ಸರ್ವಯುಗಗಳ ಅರಸನೂ ನಿರ್ಲಯನೂ ಅದೃಶ್ಯನೂ ಆಗಿರುವ ಏಕದೇವರಿಗೆ ಯುಗಯುಗಾಂತರಗಳಲ್ಲಿಯೂ ಮಾನಪ್ರಭಾವಗಳಿರಲಿ. ಆಮೆನ್‌.” (1 ತಿಮೊಥೆಯ 1:17) ನಾವು ಯೆಹೋವನಿಗಾಗಿ ಯಾವಾಗಲೂ ಅಂಥ ಹೃತ್ಪೂರ್ವಕ ಪೂಜ್ಯಭಕ್ತಿಯನ್ನು ತೋರಿಸೋಣ. ಮತ್ತು ಏನೇ ಆಗಲಿ, ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋಪಾದಿ ದೃಢಚಿತ್ತದಿಂದ ಮುಂದುವರಿಯುವ ನಮ್ಮ ನಿರ್ಧಾರದಿಂದ ಎಂದಿಗೂ ಕದಲದಿರೋಣ.

ನೀವು ಹೇಗೆ ಉತ್ತರಿಸುವಿರಿ?

• ಮನುಷ್ಯರು ದೇವರನ್ನು ಹೇಗೆ ನೋಡಸಾಧ್ಯವಿದೆ?

• ಯೆಹೋವನು ನಮಗೆ ಒಬ್ಬ ನೈಜ ವ್ಯಕ್ತಿಯಾಗಿರುವುದಾದರೆ, ಹಿಂಸಿಸಲ್ಪಟ್ಟಾಗ ನಾವು ಹೇಗೆ ವರ್ತಿಸುವೆವು?

• ಯೆಹೋವನನ್ನು ನಮ್ಮ ಮಹಾ ಉಪದೇಶಕನೋಪಾದಿ ದೃಷ್ಟಿಸುವುದರಲ್ಲಿ ಏನು ಒಳಗೂಡಿದೆ?

• ಯೆಹೋವನು ನಮ್ಮನ್ನು ಪರೀಕ್ಷಿಸುವಂತೆ ನಾವು ಏಕೆ ಅಪೇಕ್ಷಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರ]

ಫರೋಹನಿಗೆ ಹೆದರದಿದ್ದ ಮೋಶೆಯು, ಅದೃಶ್ಯ ದೇವರಾಗಿರುವ ಯೆಹೋವನನ್ನು ನೋಡಸಾಧ್ಯವಿದೆಯೋ ಎಂಬಂತೆ ವರ್ತಿಸಿದನು

[ಪುಟ 21ರಲ್ಲಿರುವ ಚಿತ್ರ]

ನಾವೇನನ್ನು ಮಾಡುತ್ತಿದ್ದೇವೊ ಅದನ್ನು ಯೆಹೋವನು ನೋಡಲಾರನು ಎಂಬಂತೆ ನಾವೆಂದಿಗೂ ವರ್ತಿಸದಿರೋಣ

[ಪುಟ 23ರಲ್ಲಿರುವ ಚಿತ್ರ]

ದೇವರು ನಮ್ಮ ಮಹಾ ಉಪದೇಶಕನೆಂದು ನಾವು ದೃಷ್ಟಿಸುತ್ತಿರುವುದರಿಂದ ನಾವು ಆತನ ಜ್ಞಾನವನ್ನು ಶ್ರದ್ಧೆಯಿಂದ ಹುಡುಕುತ್ತೇವೆ