ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಾಸ್‌ಮನೀಯರು ಮತ್ತು ಅವರ ಪರಂಪರೆ

ಹಾಸ್‌ಮನೀಯರು ಮತ್ತು ಅವರ ಪರಂಪರೆ

ಹಾಸ್‌ಮನೀಯರು ಮತ್ತು ಅವರ ಪರಂಪರೆ

ಯೇಸು ಭೂಮಿಯಲ್ಲಿದ್ದಾಗ, ಯೆಹೂದ್ಯಮತವು ಅನೇಕ ಗುಂಪುಗಳಾಗಿ ವಿಭಾಗಗೊಂಡಿತ್ತು. ಈ ಎಲ್ಲ ಗುಂಪುಗಳು ಜನರ ಮೇಲೆ ಪ್ರಭಾವ ಬೀರಲಿಕ್ಕಾಗಿ ಪರಸ್ಪರ ಪ್ರತಿಸ್ಪರ್ಧೆ ನಡೆಸುತ್ತಿದ್ದವು. ಸುವಾರ್ತಾ ವೃತ್ತಾಂತಗಳಲ್ಲಿ ಹಾಗೂ ಪ್ರಥಮ ಶತಮಾನದ ಯೆಹೂದಿ ಇತಿಹಾಸಕಾರನಾದ ಜೋಸೀಫಸನ ಬರಹಗಳಲ್ಲಿ ಚಿತ್ರಿಸಲ್ಪಟ್ಟಿರುವ ಸನ್ನಿವೇಶವು ಇದೇ ಆಗಿತ್ತು.

ಫರಿಸಾಯರು ಮತ್ತು ಸದ್ದುಕಾಯರು ಪ್ರಭಾವಶಾಲಿ ವ್ಯಕ್ತಿಗಳೋಪಾದಿ ಈ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಜನರು ಯೇಸುವನ್ನು ಮೆಸ್ಸೀಯನಾಗಿ ಸ್ವೀಕರಿಸಲು ನಿರಾಕರಿಸುವಷ್ಟರ ಮಟ್ಟಿಗೆ ಇವರು ಜನಸಾಮಾನ್ಯರ ಅಭಿಪ್ರಾಯವನ್ನು ಪ್ರಭಾವಿಸಲು ಸಮರ್ಥರಾಗಿರುತ್ತಾರೆ. (ಮತ್ತಾಯ 15:​1, 2; 16:1; ಯೋಹಾನ 11:​47, 48; 12:​42, 43) ಆದರೂ, ಹೀಬ್ರು ಶಾಸ್ತ್ರವಚನಗಳಲ್ಲಿ ಎಲ್ಲಿಯೂ ಈ ಎರಡೂ ಪ್ರಭಾವಶಾಲಿ ಗುಂಪುಗಳ ಬಗ್ಗೆ ತಿಳಿಸಲ್ಪಟ್ಟಿಲ್ಲ.

ಸಾ.ಶ.ಪೂ. ಎರಡನೆಯ ಶತಮಾನದ ಸನ್ನಿವೇಶದಲ್ಲಿ ಮಾತ್ರ ಜೋಸೀಫಸನು ಸದ್ದುಕಾಯರು ಹಾಗೂ ಫರಿಸಾಯರ ಬಗ್ಗೆ ಪ್ರಥಮ ಬಾರಿ ಉಲ್ಲೇಖಿಸುತ್ತಾನೆ. ಈ ಸಮಯಾವಧಿಯಲ್ಲಿ ಅನೇಕ ಯೆಹೂದ್ಯರು ಗ್ರೀಕ್‌ ಸಂಸ್ಕೃತಿ ಹಾಗೂ ತತ್ತ್ವಜ್ಞಾನದ ಪ್ರಭಾವಕ್ಕೆ ಒಳಗಾಗಿದ್ದರು. ಸೆಲ್ಯೂಸಿಡ್‌ ರಾಜವಂಶದ ಅರಸರು ಯೆರೂಸಲೇಮಿನಲ್ಲಿದ್ದ ದೇವಾಲಯವನ್ನು ಅಪವಿತ್ರಗೊಳಿಸಿ, ಗ್ರೀಕರ ಸ್ಯೂಸ್‌ ದೇವತೆಯನ್ನು ಆ ದೇವಾಲಯದಲ್ಲಿ ಪ್ರತಿಷ್ಠಾಪಿಸಿದಾಗ, ಗ್ರೀಕ್‌ ಸಂಸ್ಕೃತಿ ಹಾಗೂ ಯೆಹೂದ್ಯಮತದ ನಡುವಿನ ಬಿಕ್ಕಟ್ಟು ಪರಮಾವಧಿಗೇರಿತು. ಈ ಸಮಯದಲ್ಲಿ, ತುಂಬ ಹುರುಪಿನಿಂದ ಕೂಡಿದ್ದ ಒಬ್ಬ ಯೆಹೂದಿ ನಾಯಕನು ಅವರ ವಿರುದ್ಧ ದಂಗೆಯೆದ್ದನು. ಇವನ ಹೆಸರು ಜೂಡಾ ಮಕಬೀ ಎಂದಾಗಿದ್ದು, ಹಾಸ್‌ಮನೀಯರೆಂದು ಪ್ರಸಿದ್ಧವಾದ ಒಂದು ಕುಟುಂಬಕ್ಕೆ ಸೇರಿದವನಾಗಿದ್ದನು. ಇವನು ಒಂದು ದಂಗೆಕೋರ ಸೇನೆಯನ್ನು ರಚಿಸಿ ಅದರ ನಾಯಕನಾದನು; ಈ ಸೇನೆಯು ಆ ದೇವಾಲಯವನ್ನು ಗ್ರೀಕರ ವಶದಿಂದ ಸ್ವತಂತ್ರಗೊಳಿಸಿತು. *

ಮಕಬೀಯರ ದಂಗೆ ಹಾಗೂ ಗೆಲುವಿನ ನಂತರದ ವರ್ಷಗಳಲ್ಲಿ, ಯೆಹೂದ್ಯಮತದಲ್ಲಿ ಬೇರೆ ಬೇರೆ ಪಂಥಗಳು ಹುಟ್ಟಿಕೊಂಡವು. ಪ್ರತಿಯೊಂದು ಪಂಥಕ್ಕೆ ತನ್ನದೇ ಆದ ಸಿದ್ಧಾಂತಗಳಿದ್ದು, ಅವುಗಳೆಲ್ಲವೂ ದೊಡ್ಡ ಯೆಹೂದಿ ಸಮುದಾಯವನ್ನು ರಚಿಸಲಿಕ್ಕಾಗಿ ಪರಸ್ಪರ ಸ್ಪರ್ಧಿಸುತ್ತಾ ಇದ್ದವು. ಆದರೆ ಈ ಪ್ರವೃತ್ತಿ ಅವರಲ್ಲಿ ಏಕೆ ತಲೆದೋರಿತು? ಯೆಹೂದ್ಯಮತವು ಇಷ್ಟರ ಮಟ್ಟಿಗೆ ವಿಭಾಗಗೊಳ್ಳಲು ಕಾರಣವೇನು? ಈ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ, ಹಾಸ್‌ಮನೀಯರ ಇತಿಹಾಸವನ್ನು ನಾವೀಗ ಪರೀಕ್ಷಿಸೋಣ.

ಅತಿಯಾದ ಸ್ವಾತಂತ್ರ್ಯ ಮತ್ತು ಅನೈಕ್ಯ

ಯೆಹೋವನ ಆಲಯದಲ್ಲಿ ಆರಾಧನೆಯನ್ನು ಪುನಸ್ಸ್ಥಾಪಿಸುವ ತನ್ನ ಧಾರ್ಮಿಕ ಗುರಿಯನ್ನು ಸಾಧಿಸಿದ ಬಳಿಕ, ಜೂಡಾ ಮಕಬೀಯು ರಾಜಕೀಯ ವಿಷಯದಲ್ಲಿ ಆಸಕ್ತಿಯನ್ನು ತೋರಿಸತೊಡಗಿದನು. ಇದರ ಪರಿಣಾಮವಾಗಿ, ಅನೇಕ ಯೆಹೂದ್ಯರು ಅವನನ್ನು ಹಿಂಬಾಲಿಸುವುದನ್ನು ನಿಲ್ಲಿಸಿಬಿಟ್ಟರು. ಆದರೂ, ಅವನು ಸೆಲ್ಯೂಸಿಡ್‌ ರಾಜವಂಶದ ಅರಸರ ವಿರುದ್ಧ ಹೋರಾಡುವುದನ್ನು ಮುಂದುವರಿಸಿದನು. ಇದಕ್ಕೋಸ್ಕರ ರೋಮ್‌ನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು ಮತ್ತು ಒಂದು ಸ್ವತಂತ್ರ ಯೆಹೂದಿ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸಿದನು. ಜೂಡಾ ಮಕಬೀಯು ಕದನದಲ್ಲಿ ಮರಣಪಟ್ಟ ಬಳಿಕ, ಅವನ ತಮ್ಮನಾದ ಜಾನತನನೂ ಅಣ್ಣನಾದ ಸೈಮನನೂ ಸೇರಿಕೊಂಡು ಹೋರಾಟವನ್ನು ಮುಂದುವರಿಸಿದರು. ಆರಂಭದಲ್ಲಿ ಸೆಲ್ಯೂಸಿಡ್‌ ಅರಸರು ಮಕಬೀಯರನ್ನು ತೀವ್ರವಾಗಿ ವಿರೋಧಿಸಿದರು. ಆದರೆ ಸಮಯ ಕಳೆದಂತೆ, ಆ ಅರಸರು ರಾಜಕೀಯ ಒಪ್ಪಂದಗಳನ್ನು ಮಾಡಿಕೊಳ್ಳಲು ಒಪ್ಪಿದರು ಮತ್ತು ಹಾಸ್‌ಮನೀಯ ಸಹೋದರರು ಸ್ವಲ್ಪ ಮಟ್ಟಿಗೆ ಸ್ವರಾಜ್ಯವನ್ನು ಪಡೆದುಕೊಳ್ಳುವಂತೆ ಅನುಮತಿಸಿದರು.

ಹಾಸ್‌ಮನೀಯರು ಯಾಜಕ ವಂಶದವರಾಗಿದ್ದರೂ, ಇಷ್ಟರ ತನಕ ಅವರಲ್ಲಿ ಯಾರೊಬ್ಬರೂ ಮಹಾಯಾಜಕನ ಸ್ಥಾನದಲ್ಲಿ ಸೇವೆ ಸಲ್ಲಿಸಿರಲಿಲ್ಲ. ಚಾದೋಕನ ಸಂತಾನದ ಯಾಜಕರು ಮಾತ್ರ ಈ ಸ್ಥಾನವನ್ನು ಪಡೆದುಕೊಳ್ಳಬೇಕೆಂಬುದು ಅನೇಕ ಯೆಹೂದ್ಯರ ಅಭಿಪ್ರಾಯವಾಗಿತ್ತು. ಏಕೆಂದರೆ ರಾಜ ಸೊಲೊಮೋನನು ಚಾದೋಕನನ್ನು ಮಹಾಯಾಜಕನನ್ನಾಗಿ ನೇಮಿಸಿದ್ದನು. (1 ಅರಸುಗಳು 2:35; ಯೆಹೆಜ್ಕೇಲ 43:19) ಸೆಲ್ಯೂಸಿಡ್‌ ಅರಸರು ತನ್ನನ್ನು ಮಹಾಯಾಜಕನಾಗಿ ನೇಮಿಸುವಂತೆ ಮಾಡಲಿಕ್ಕಾಗಿ ಜಾನತನ್‌ ಯುದ್ಧವನ್ನೂ ವ್ಯವಹಾರ ಚಾತುರ್ಯವನ್ನೂ ಉಪಯೋಗಿಸಿದನು. ಆದರೆ ಜಾನತನನು ಮರಣಪಟ್ಟ ಬಳಿಕ, ಅವನ ಅಣ್ಣನಾದ ಸೈಮನನು ಇನ್ನೂ ಹೆಚ್ಚನ್ನು ಸಾಧಿಸಿದನು. ಸಾ.ಶ.ಪೂ. 140ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ಕಂಚಿನ ಫಲಕಗಳ ಮೇಲೆ ಸಂರಕ್ಷಿಸಿಡಲಾದ ಗ್ರೀಕ್‌ ಶೈಲಿಯಲ್ಲಿ ಬರೆಯಲ್ಪಟ್ಟಿದ್ದ ಒಂದು ಪ್ರಮುಖ ಶಾಸನವು ಯೆರೂಸಲೇಮಿನಲ್ಲಿ ಜಾರಿಗೆ ತರಲ್ಪಟ್ಟಿತು: “[ಗ್ರೀಕ್‌ ಸೆಲ್ಯೂಸಿಡ್‌ ಅರಸನಾದ] ಡಮಿಟ್ರಿಯಸನು ಅವನಿಗೆ [ಸೈಮನನಿಗೆ] ಮಹಾಯಾಜಕನ ಸ್ಥಾನವನ್ನು ಕೊಟ್ಟನು, ಅವನನ್ನು ತನ್ನ ಸ್ನೇಹಿತರಲ್ಲಿ ಒಬ್ಬನನ್ನಾಗಿ ಮಾಡಿಕೊಂಡನು ಮತ್ತು ತುಂಬ ಉಚ್ಚ ರೀತಿಯಲ್ಲಿ ಅವನನ್ನು ಸನ್ಮಾನಿಸಿದನು. . . . ಸದಾಕಾಲಕ್ಕೂ ಅಂದರೆ ವಿಶ್ವಾಸಾರ್ಹನಾದ ಒಬ್ಬ ಪ್ರವಾದಿಯು ಬರುವ ತನಕವೂ, ಸೈಮನ್‌ ತಮ್ಮ ನಾಯಕನಾಗಿರಬೇಕು ಮತ್ತು ಮಹಾಯಾಜಕನಾಗಿರಬೇಕು ಎಂದು ಯೆಹೂದ್ಯರು ಹಾಗೂ ಅವರ ಯಾಜಕರು ನಿರ್ಧರಿಸಿದ್ದಾರೆ.”​—1 ಮಕಬೀಯರು 14:​38-41 (ಅಪೊಕ್ರಿಫದಲ್ಲಿ ಕಂಡುಬರುವ ಒಂದು ಐತಿಹಾಸಿಕ ಪುಸ್ತಕ).

ಒಬ್ಬ ರಾಜ ಹಾಗೂ ಮಹಾಯಾಜಕನೋಪಾದಿ ಸೈಮನ್‌ನ ಸ್ಥಾನವು​—ಅವನಿಗೆ ಹಾಗೂ ಅವನ ವಂಶದವರಿಗೆ​—ಕೇವಲ ವಿದೇಶೀ ಸೆಲ್ಯೂಸಿಡ್‌ ಅಧಿಕಾರದಿಂದ ಮಾತ್ರವಲ್ಲ, ಅವನ ಸ್ವಂತ ಜನರಾಗಿದ್ದ ಯೆಹೂದ್ಯರ “ಮಹಾ ಸಂಘ”ದ ಒಪ್ಪಿಗೆಯಿಂದಲೂ ಕೊಡಲ್ಪಟ್ಟಿತ್ತು. ಇದು ಪ್ರಾಮುಖ್ಯವಾದ ಒಂದು ತಿರುವನ್ನು ಗುರುತಿಸಿತು. ಇತಿಹಾಸಕಾರನಾದ ಏಮೀಲ್‌ ಶ್ಯೂರರ್‌ ಬರೆದಂತೆ, ಹಾಸ್‌ಮನೀಯರು ಒಂದು ರಾಜಕೀಯ ವಂಶವನ್ನು ಸ್ಥಾಪಿಸಿದ ಬಳಿಕ, “ಟೋರಾ [ಯೆಹೂದಿ ಧರ್ಮಶಾಸ್ತ್ರ]ದ ನೆರವೇರಿಕೆಯು ಅವರ ಪ್ರಮುಖ ಚಿಂತೆಯಾಗಿರಲಿಲ್ಲ, ಬದಲಾಗಿ ತಮ್ಮ ರಾಜಕೀಯ ಅಧಿಕಾರವನ್ನು ಕಾಪಾಡಿಕೊಳ್ಳುವ ಹಾಗೂ ಅದನ್ನು ವ್ಯಾಪಕವಾಗಿ ವಿಸ್ತರಿಸುವ ಚಿಂತೆಯಲ್ಲಿ ಅವರು ಮುಳುಗಿಹೋದರು.” ಆದರೂ, ಯೆಹೂದ್ಯರ ಮನಸ್ಸಿಗೆ ಅಸಮಾಧಾನವನ್ನು ಉಂಟುಮಾಡದಂತೆ ಜಾಗರೂಕತೆ ವಹಿಸುತ್ತಾ ಸೈಮನ್‌ನು, “ಅರಸ” ಎಂಬ ಬಿರುದನ್ನು ಉಪಯೋಗಿಸುವುದಕ್ಕೆ ಬದಲಾಗಿ “ಪ್ರಾಂತದ ಆಡಳಿತಗಾರ” ಅಥವಾ “ಜನರ ಮುಖಂಡ” ಎಂಬ ಬಿರುದನ್ನು ಉಪಯೋಗಿಸಿದನು.

ಹಾಸ್‌ಮನೀಯರು ಈ ರೀತಿಯ ದುರಾಕ್ರಮಣದಿಂದ ಧಾರ್ಮಿಕ ಹಾಗೂ ರಾಜಕೀಯ ನಿಯಂತ್ರಣವನ್ನು ಸಂಪಾದಿಸಿಕೊಂಡದ್ದನ್ನು ಯೆಹೂದ್ಯರಲ್ಲಿ ಎಲ್ಲರೂ ಮೆಚ್ಚಲಿಲ್ಲ. ಅನೇಕ ವಿದ್ವಾಂಸರಿಗನುಸಾರ, ಈ ಕಾಲಾವಧಿಯಲ್ಲೇ ಕುಮ್ರಾನ್‌ ಸಮುದಾಯವು ಹುಟ್ಟಿಕೊಂಡಿತು. ಕುಮ್ರಾನ್‌ ಬರಹಗಳಲ್ಲಿ “ನೀತಿಯ ಬೋಧಕ”ನಾಗಿ ಸೂಚಿಸಲಾದವನು ಎಂದು ನಂಬಲಾಗುತ್ತಿದ್ದ ಚಾದೋಕನ ಸಂತಾನದ ಒಬ್ಬ ಯಾಜಕನು, ಯೆರೂಸಲೇಮನ್ನು ಬಿಟ್ಟುಹೋಗಿ, ಒಂದು ವಿರೋಧಿ ಗುಂಪಿನ ನಾಯಕತ್ವವನ್ನು ವಹಿಸಿ, ಆ ಗುಂಪನ್ನು ಮೃತ ಸಮುದ್ರದ ಬಳಿಯ ಯೂದಾಯದ ಮರುಭೂಮಿ ಪ್ರದೇಶಕ್ಕೆ ನಡೆಸಿದನು. ಮೃತ ಸಮುದ್ರದ ಸುರುಳಿಗಳಲ್ಲಿ ಒಂದಾದ, ಹಬಕ್ಕೂಕನ ಪುಸ್ತಕದ ಕುರಿತಾದ ಒಂದು ವ್ಯಾಖ್ಯಾನವು, “ಆರಂಭದಲ್ಲಿ ಸತ್ಯದ ಹೆಸರಿನಿಂದ ಕರೆಯಲ್ಪಟ್ಟ, ಆದರೆ ಇಸ್ರಾಯೇಲ್‌ನ ಮೇಲೆ ಆಳ್ವಿಕೆ ನಡೆಸಿದಾಗ ಹೃದಯವು ಅಹಂಕಾರದಿಂದ ಉಬ್ಬಿಹೋದ ದುಷ್ಟ ಯಾಜಕನನ್ನು” ಖಂಡಿಸುತ್ತದೆ. ಆಳುತ್ತಿರುವ “ದುಷ್ಟ ಯಾಜಕ” ಎಂಬ ವರ್ಣನೆಯು, ಜಾನತನ್‌ನಿಗೆ ಅಥವಾ ಸೈಮನ್‌ನಿಗೆ ಸರಿಯಾಗಿ ಹೊಂದಿಕೊಳ್ಳಸಾಧ್ಯವಿದೆ ಎಂದು ಅನೇಕ ವಿದ್ವಾಂಸರು ನಂಬುತ್ತಾರೆ.

ತನ್ನ ನಿಯಂತ್ರಣದ ಕೆಳಗಿರುವ ಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಲಿಕ್ಕಾಗಿ ಸೈಮನ್‌ನು ಮಿಲಿಟರಿ ದಂಡಯಾತ್ರೆಯನ್ನು ಮುಂದುವರಿಸಿದನು. ಆದರೂ, ಅವನ ಆಳ್ವಿಕೆಯು ಇದ್ದಕ್ಕಿದ್ದಂತೆ ಕೊನೆಗೊಂಡಿತು; ಏಕೆಂದರೆ ಸೈಮನನೂ ಅವನ ಇಬ್ಬರು ಪುತ್ರರೂ ಯೆರಿಕೋದ ಬಳಿ ಔತಣಮಾಡುತ್ತಿದ್ದಾಗ, ಸೈಮನ್‌ನ ಅಳಿಯನಾಗಿದ್ದ ಟಾಲೆಮಿಯು ಅವನನ್ನೂ ಅವನ ಇಬ್ಬರು ಪುತ್ರರನ್ನೂ ಹತಿಸಿಬಿಟ್ಟನು. ಅಧಿಕಾರಕ್ಕೇರುವ ಉದ್ದೇಶದಿಂದ ಟಾಲೆಮಿಯು ಮಾಡಿದ ಈ ಪ್ರಯತ್ನವು ವಿಫಲಗೊಂಡಿತು. ಏಕೆಂದರೆ, ಸೈಮನ್‌ನ ಇನ್ನೊಬ್ಬ ಪುತ್ರನಾಗಿದ್ದ ಜಾನ್‌ ಹಿರ್‌ಕಾನಸ್‌ನಿಗೆ, ಅವನನ್ನು ಕೊಂದುಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಎಚ್ಚರಿಕೆಯನ್ನು ನೀಡಲಾಯಿತು. ಆದುದರಿಂದ, ತನ್ನನ್ನು ಹತಿಸುವುದಕ್ಕಾಗಿ ಸಂಚುಹೂಡುತ್ತಿದ್ದ ಹಂತಕರನ್ನು ಅವನು ಬಂಧಿಸಿದನು ಹಾಗೂ ತನ್ನ ತಂದೆಗೆ ಬದಲಾಗಿ ತಾನೇ ನಾಯಕತ್ವವನ್ನೂ ಮಹಾಯಾಜಕನ ಸ್ಥಾನವನ್ನೂ ವಹಿಸಿಕೊಂಡನು.

ಅಧಿಕಾರ ವಿಸ್ತರಣೆ ಹಾಗೂ ದಬ್ಬಾಳಿಕೆ

ಆರಂಭದಲ್ಲಿ, ಜಾನ್‌ ಹಿರ್‌ಕಾನಸನು ಸಿರಿಯದ ಸೇನೆಗಳಿಂದ ಗಂಭೀರವಾದ ಬೆದರಿಕೆಗಳನ್ನು ಎದುರಿಸಿದನು. ಆದರೆ ಸಾ.ಶ.ಪೂ. 129ರಲ್ಲಿ, ಸೆಲ್ಯೂಸಿಡ್‌ ರಾಜವಂಶವು ಪಾರ್ಥಿಯನರೊಂದಿಗಿನ ಯುದ್ಧದಲ್ಲಿ ಗುರುತರವಾದ ಸೋಲನ್ನು ಅನುಭವಿಸಿತು. ಈ ಯುದ್ಧವು ಸೆಲ್ಯೂಸಿಡ್‌ ರಾಜವಂಶದ ಮೇಲೆ ಬೀರಿದ ಪರಿಣಾಮದ ಕುರಿತು, ಯೆಹೂದಿ ವಿದ್ವಾಂಸನಾದ ಮೆನಕಮ್‌ ಸ್ಟರ್ನ್‌ ಬರೆದುದು: “ಆ ರಾಜ್ಯದ ಇಡೀ ಏರ್ಪಾಡೇ ಸಂಪೂರ್ಣವಾಗಿ ಕುಸಿದು ನೆಲಸಮವಾಯಿತು.” ಹೀಗೆ, ಹಿರ್‌ಕಾನಸನು “ಯೂದಾಯಕ್ಕೆ ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವನ್ನು ಪುನಃ ತಂದುಕೊಡಲು ಶಕ್ತನಾದನು ಮತ್ತು ತನ್ನ ರಾಜ್ಯವನ್ನು ಬೇರೆ ಬೇರೆ ದಿಕ್ಕುಗಳಲ್ಲಿ ವಿಸ್ತರಿಸತೊಡಗಿದನು.” ತಾನು ಆಳ್ವಿಕೆ ನಡೆಸುತ್ತಿದ್ದ ಕ್ಷೇತ್ರದಲ್ಲಿ ಖಂಡಿತವಾಗಿಯೂ ವಿಸ್ತರಣೆಯನ್ನು ಮಾಡಿದನು.

ಈಗ ಸಿರಿಯದ ಸೈನ್ಯಗಳಿಂದ ಯಾವುದೇ ರೀತಿಯ ಬೆದರಿಕೆಯಿಲ್ಲದ್ದರಿಂದ, ಯೂದಾಯದ ಹೊರಗಿನ ಕ್ಷೇತ್ರಗಳ ಮೇಲೆ ಸಹ ಹಿರ್‌ಕಾನಸನು ದಂಡೆತ್ತಿಹೋದನು ಮತ್ತು ಅವುಗಳನ್ನು ಸ್ವಾಧೀನಪಡಿಸಿಕೊಂಡನು. ಆ ಕ್ಷೇತ್ರಗಳ ನಿವಾಸಿಗಳು ಯೆಹೂದ್ಯಮತಕ್ಕೆ ಮತಾಂತರಹೊಂದಬೇಕಾಗಿತ್ತು, ಇಲ್ಲದಿದ್ದಲ್ಲಿ ಅವರ ಪಟ್ಟಣಗಳು ಸಂಪೂರ್ಣವಾಗಿ ನೆಲಸಮವಾಗಲಿದ್ದವು. ಇಡುಮೇನ್ಯರ (ಏದೋಮ್ಯರ) ವಿರುದ್ಧ ಇಂತಹ ಒಂದು ಕಾರ್ಯಾಚರಣೆಯು ನಡೆಸಲ್ಪಟ್ಟಿತು. ಈ ಕಾರ್ಯಾಚರಣೆಯ ಕುರಿತು ಸ್ಟರ್ನ್‌ ಹೇಳಿಕೆ ನೀಡಿದ್ದು: “ಏದೋಮ್ಯರನ್ನು ಮತಾಂತರಿಸಿದ ವಿಧವು ತುಂಬ ಅಸಾಮಾನ್ಯವಾದದ್ದಾಗಿತ್ತು, ಏಕೆಂದರೆ ಕೇವಲ ಕೆಲವು ಮಂದಿಯನ್ನು ಮತಾಂತರಿಸುವುದಕ್ಕೆ ಬದಲಾಗಿ ಇಡೀ ಜನಾಂಗವನ್ನೇ ಮತಾಂತರಿಸಲಾಗಿತ್ತು.” ವಶಪಡಿಸಿಕೊಳ್ಳಲ್ಪಟ್ಟ ಇನ್ನಿತರ ಕ್ಷೇತ್ರಗಳಲ್ಲಿ ಸಮಾರ್ಯವು ಸಹ ಒಳಗೂಡಿತ್ತು. ಇಲ್ಲಿ ಹಿರ್‌ಕಾನಸನು ಗೆರಿಜ್ಜೀಮ್‌ ಪರ್ವತದ ಮೇಲೆ ಕಟ್ಟಲ್ಪಟ್ಟಿದ್ದ ಸಮಾರ್ಯರ ದೇವಾಲಯವನ್ನು ಧ್ವಂಸಮಾಡಿಬಿಟ್ಟನು. ಹಾಸ್‌ಮನೀಯ ವಂಶದವರಿಂದ ಬಲವಂತವಾಗಿ ಮಾಡಲ್ಪಟ್ಟ ಈ ಮತಾಂತರದ ಧೋರಣೆಯ ಕುರಿತು ಹಾಸ್ಯವ್ಯಂಗ್ಯವನ್ನು ವ್ಯಕ್ತಪಡಿಸುತ್ತಾ, ಇತಿಹಾಸಕಾರನಾದ ಸೊಲೊಮೋನ್‌ ಗ್ರೇಸಲ್‌ ಬರೆದುದು: “ಮಟತ್ತಾಯಸ್‌ [ಜೂಡಾ ಮಕಬೀಯ ತಂದೆ]ನ ಮೊಮ್ಮಗನಾಗಿದ್ದ ಇವನು, ಹಿಂದಿನ ಸಂತತಿಯವರು ಯಾವುದಕ್ಕಾಗಿ ಶ್ರೇಷ್ಠವಾದ ಹೋರಾಟವನ್ನು ನಡೆಸಿದರೋ ಆ ಧಾರ್ಮಿಕ ಸ್ವಾತಂತ್ರ್ಯದ ಮೂಲತತ್ತ್ವವನ್ನೇ ಉಲ್ಲಂಘಿಸಿಬಿಟ್ಟನು.”

ಫರಿಸಾಯರು ಮತ್ತು ಸದ್ದುಕಾಯರು ಕಾಣಿಸಿಕೊಳ್ಳುತ್ತಾರೆ

ಹಿರ್‌ಕಾನಸ್‌ನ ಆಳ್ವಿಕೆಯ ಕುರಿತು ಬರೆಯುವಾಗ, ಮೊದಲ ಬಾರಿಗೆ ಜೋಸೀಫಸನು ದಿನೇ ದಿನೇ ಹೆಚ್ಚುತ್ತಿರುವ ಫರಿಸಾಯರ ಹಾಗೂ ಸದ್ದುಕಾಯರ ಪ್ರಭಾವದ ಕುರಿತು ಉಲ್ಲೇಖಿಸಿದನು. (ಜಾನತನ್‌ನ ಆಳ್ವಿಕೆಯ ಸಮಯದಲ್ಲಿ ಜೀವಿಸುತ್ತಿದ್ದ ಫರಿಸಾಯರ ಬಗ್ಗೆ ಜೋಸೀಫಸನು ತಿಳಿಸಿದ್ದನು.) ಆದರೆ ಅವನು ಅವರ ಮೂಲದ ಬಗ್ಗೆ ಏನನ್ನೂ ತಿಳಿಸಿಲ್ಲ. ಕೆಲವು ವಿದ್ವಾಂಸರ ದೃಷ್ಟಿಕೋನವೇನೆಂದರೆ, ಒಂದು ಗುಂಪಿನೋಪಾದಿ ಫರಿಸಾಯರು ಹ್ಯಾಸಿಡ್‌ ಪಂಥಕ್ಕೆ ಸೇರಿದವರಾಗಿದ್ದು, ತುಂಬ ಧರ್ಮಶ್ರದ್ಧೆಯುಳ್ಳವರಾಗಿದ್ದರು. ಜೂಡಾ ಮಕಬೀಯು ತನ್ನ ಧಾರ್ಮಿಕ ಗುರಿಗಳನ್ನು ಸಾಧಿಸಲು ಮುಂದುವರಿದಾಗ ಇವರು ಅವನಿಗೆ ಬೆಂಬಲ ನೀಡುತ್ತಿದ್ದರೂ, ಜೂಡಾ ಮಕಬೀಯ ಆಕಾಂಕ್ಷೆಗಳು ರಾಜಕೀಯದ ಕಡೆಗೆ ತಿರುಗಿದಾಗ ಇವರು ಅವನನ್ನು ತ್ಯಜಿಸಿದರು.

ಫರಿಸಾಯರು ಎಂಬ ಹೆಸರು ಸಾಮಾನ್ಯವಾಗಿ “ಪ್ರತ್ಯೇಕಿತರು” ಎಂಬ ಅರ್ಥವಿರುವ ಹೀಬ್ರು ಮೂಲಕ್ಕೆ ಸಂಬಂಧಿಸಿದ್ದಾಗಿದೆ. ಕೆಲವರು ಇದನ್ನು “ಅರ್ಥನಿರೂಪಕರು” ಎಂಬ ಶಬ್ದಕ್ಕೆ ಸಂಬಂಧಿಸಿದ್ದಾಗಿ ಪರಿಗಣಿಸುತ್ತಾರೆ. ಫರಿಸಾಯರು ಒಂದು ವಿಶೇಷ ವಂಶದಿಂದ ಬಂದವರಾಗಿರದೆ, ಜನಸಾಮಾನ್ಯರೊಳಗಿಂದ ಬಂದ ವಿದ್ವಾಂಸರಾಗಿದ್ದರು. ವಿಶೇಷ ಧರ್ಮಶ್ರದ್ಧೆಯ ತತ್ತ್ವಜ್ಞಾನದ ಮೂಲಕ, ಮತಸಂಸ್ಕಾರದ ಅಶುದ್ಧತೆಯಿಂದ ಅವರು ತಮ್ಮನ್ನು ಬೇರ್ಪಡಿಸಿಕೊಂಡರು. ಅಷ್ಟುಮಾತ್ರವಲ್ಲ, ಯಾಜಕತ್ವದ ಪಾವಿತ್ರ್ಯಕ್ಕೆ ಸಂಬಂಧಿಸಿದ ದೇವಾಲಯದ ನಿಯಮಗಳನ್ನು ದೈನಂದಿನ ಜೀವಿತದ ಸಾಮಾನ್ಯ ಸನ್ನಿವೇಶಗಳಿಗೆ ಅನ್ವಯಿಸಿಕೊಂಡರು. ಫರಿಸಾಯರು ಹೊಸ ರೀತಿಯಲ್ಲಿ ಶಾಸ್ತ್ರವಚನಗಳ ಅರ್ಥನಿರೂಪಿಸುವ ವಿಧಾನವನ್ನು ಹಾಗೂ ಸಮಯಾನಂತರ ಮೌಖಿಕ ನಿಯಮವೆಂದು ಪ್ರಸಿದ್ಧವಾದ ವಿಷಯಗಳನ್ನು ವಿಕಸಿಸಿದರು. ಸೈಮನ್‌ನ ಆಳ್ವಿಕೆಯ ಸಮಯದಲ್ಲಿ ಫರಿಸಾಯರು ಅತ್ಯಧಿಕ ಪ್ರಭಾವವನ್ನು ಪಡೆದುಕೊಂಡರು. ಆ ಸಮಯದಲ್ಲಿ ಕೆಲವರು ಯೆರೋಸೀಆ (ಹಿರೀ ಪುರುಷರ ಸಭೆ)ದಲ್ಲಿ ನೇಮಕವನ್ನು ಪಡೆದರು. ಕಾಲಕ್ರಮೇಣ ಈ ಸಭೆಯು ಸನ್ಹೇದ್ರಿನ್‌ ಎಂದು ಪ್ರಸಿದ್ಧವಾಯಿತು.

ಆರಂಭದಲ್ಲಿ ಜಾನ್‌ ಹಿರ್‌ಕಾನಸನು ಸಹ ಫರಿಸಾಯರ ಶಿಷ್ಯನೂ ಅವರಿಗೆ ಒತ್ತಾಸೆ ನೀಡುವವನೂ ಆಗಿದ್ದನು ಎಂದು ಜೋಸೀಫಸನು ಹೇಳುತ್ತಾನೆ. ಆದರೆ, ಯಾವುದೋ ಒಂದು ಸನ್ನಿವೇಶದಲ್ಲಿ, ಅವನು ಮಹಾಯಾಜಕನ ಸ್ಥಾನವನ್ನು ಬಿಟ್ಟುಕೊಡದಿರುವುದಕ್ಕಾಗಿ ಫರಿಸಾಯರು ಅವನಿಗೆ ತಿದ್ದುಪಾಟನ್ನು ನೀಡಿದರು. ಇದರಿಂದ ಜಾನ್‌ ಹಿರ್‌ಕಾನಸ್‌ ಹಾಗೂ ಫರಿಸಾಯರ ಮಧ್ಯೆ ದೊಡ್ಡ ಬಿರುಕು ಉಂಟಾಯಿತು. ಹಿರ್‌ಕಾನಸನು ಫರಿಸಾಯರ ಧಾರ್ಮಿಕ ಕಟ್ಟಳೆಗಳಿಗೆ ನಿಷೇಧವನ್ನು ಹಾಕಿದನು. ಇನ್ನೂ ಹೆಚ್ಚಿನ ಶಿಕ್ಷೆಯೋಪಾದಿ, ಇವನು ಫರಿಸಾಯರ ಧಾರ್ಮಿಕ ವಿರೋಧಿಗಳಾಗಿದ್ದ ಸದ್ದುಕಾಯರ ಪಕ್ಷವನ್ನು ಸೇರಿಕೊಂಡನು.

ಸದ್ದುಕಾಯರು ಎಂಬ ಹೆಸರು ಮಹಾಯಾಜಕನಾದ ಚಾದೋಕನಿಗೆ ಸಂಬಂಧಿಸಿದ್ದಿರಬಹುದು. ಏಕೆಂದರೆ ಸೊಲೊಮೋನನ ಕಾಲದಿಂದಲೂ ಚಾದೋಕನ ಸಂತಾನದವರೇ ಯಾಜಕರ ಸ್ಥಾನದಲ್ಲಿ ಕಾರ್ಯನಡಿಸುತ್ತಿದ್ದರು. ಆದರೂ, ಎಲ್ಲ ಸದ್ದುಕಾಯರು ಅವನ ವಂಶದವರಾಗಿದ್ದರೆಂದು ಹೇಳಸಾಧ್ಯವಿಲ್ಲ. ಜೋಸೀಫಸನಿಗನುಸಾರ, ಸದ್ದುಕಾಯರು ಶ್ರೀಮಂತ ಮನೆತನದವರೂ, ಇಡೀ ಜನಾಂಗದಲ್ಲೇ ಅತಿ ಐಶ್ವರ್ಯವಂತರೂ ಆಗಿದ್ದರು ಮತ್ತು ಅವರಿಗೆ ಜನಸಾಮಾನ್ಯರ ಬೆಂಬಲವಿರಲಿಲ್ಲ. ಪ್ರೊಫೆಸರ್‌ ಶಿಫ್ಮನ್‌ ಹೇಳುವುದು: “ಅವರಲ್ಲಿ ಅನೇಕರು . . . ಯಾಜಕರಾಗಿದ್ದರು ಅಥವಾ ಯಾಜಕ ಮನೆತನದವರೊಂದಿಗೆ ವಿವಾಹ ಸಂಬಂಧವನ್ನು ಪಡೆದುಕೊಂಡವರಾಗಿದ್ದರು.” ಈ ರೀತಿಯಲ್ಲಿ ಅವರು ಅಧಿಕಾರದಲ್ಲಿದ್ದವರೊಂದಿಗೆ ದೀರ್ಘ ಸಮಯದಿಂದಲೂ ಆಪ್ತ ಸಂಬಂಧವನ್ನು ಇಟ್ಟುಕೊಂಡಿದ್ದರು. ಆದುದರಿಂದಲೇ, ಸಾರ್ವಜನಿಕರ ಜೀವಿತದಲ್ಲಿ ಫರಿಸಾಯರ ಹೆಚ್ಚುತ್ತಿರುವ ಪ್ರಭಾವ ಹಾಗೂ ಎಲ್ಲ ಜನರು ಯಾಜಕರು ಅನುಸರಿಸುವಂತಹ ಶುದ್ಧತೆಯನ್ನು ಅನುಸರಿಸುವಂತೆ ಮಾಡಬೇಕೆಂಬ ಫರಿಸಾಯರ ಅಭಿಪ್ರಾಯವು, ಸದ್ದುಕಾಯರ ಸ್ವಭಾವಸಿದ್ಧ ಅಧಿಕಾರಕ್ಕೆ ಬೆದರಿಕೆಯಾಗಿ ಪರಿಗಣಿಸಲ್ಪಟ್ಟಿತು. ಆದರೆ, ಹಿರ್‌ಕಾನಸ್‌ನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ, ಸದ್ದುಕಾಯರು ಪುನಃ ನಿಯಂತ್ರಣವನ್ನು ಪಡೆದುಕೊಂಡರು.

ಹೆಚ್ಚು ರಾಜಕೀಯ, ಕಡಿಮೆ ಧರ್ಮಶ್ರದ್ಧೆ

ಹಿರ್‌ಕಾನಸ್‌ನ ಹಿರಿಯ ಮಗನಾದ ಅರಿಸ್ಟಾಬ್ಯೂಲಸ್‌ನು ಸಾಯುವುದಕ್ಕೆ ಮುಂಚೆ ಒಂದೇ ಒಂದು ವರ್ಷ ರಾಜ್ಯಭಾರಮಾಡಿದನು. ಇವನು ಸಹ ಇಟ್ಸುರೀಯನ್‌ರನ್ನು ಒತ್ತಾಯಪೂರ್ವಕವಾಗಿ ಮತಾಂತರಿಸುವ ರಾಜ್ಯನೀತಿಯನ್ನು ಮುಂದುವರಿಸಿದನು ಮತ್ತು ಮೇಲ್ಗಲಿಲಾಯವನ್ನು ಹಾಸ್‌ಮನೀಯರ ನಿಯಂತ್ರಣದ ಕೆಳಗೆ ತಂದನು. ಆದರೆ ಸಾ.ಶ.ಪೂ. 103-76ರ ತನಕ ಆಳ್ವಿಕೆ ನಡೆಸಿದ ಅವನ ತಮ್ಮನಾದ ಅಲೆಕ್ಸಾಂಡರ್‌ ಜನೇಯಸನ ರಾಜ್ಯಭಾರದ ಸಮಯದಲ್ಲಿ, ಹಾಸ್‌ಮನೀಯ ರಾಜವಂಶವು ತನ್ನ ಅಧಿಕಾರದ ಉತ್ತುಂಗಕ್ಕೇರಿತು.

ಅಲೆಕ್ಸಾಂಡರ್‌ ಜನೇಯಸನು ಹಿಂದಿನ ರಾಜ್ಯನೀತಿಯನ್ನು ರದ್ದುಪಡಿಸಿ, ಬಹಿರಂಗವಾಗಿ ತನ್ನನ್ನು ಮಹಾಯಾಜಕನಾಗಿಯೂ ರಾಜನಾಗಿಯೂ ಘೋಷಿಸಿಕೊಂಡನು. ತದನಂತರ ಹಾಸ್‌ಮನೀಯರು ಹಾಗೂ ಫರಿಸಾಯರ ನಡುವಿನ ಹೋರಾಟವು ಇನ್ನೂ ತೀವ್ರಗೊಂಡಿತು. ಇದು ಒಂದು ಅಂತರ್ಯುದ್ಧಕ್ಕೆ ಕಾರಣವಾಯಿತು ಮತ್ತು ಇದರಲ್ಲಿ 50,000 ಮಂದಿ ಯೆಹೂದ್ಯರು ಹತರಾದರು. ದಂಗೆಯು ಅಡಗಿಸಲ್ಪಟ್ಟ ಬಳಿಕ, ವಿಧರ್ಮಿ ಅರಸರು ಮಾಡುತ್ತಿದ್ದಂತೆ, ಜನೇಯಸನು 800 ಮಂದಿ ದಂಗೆಕೋರರನ್ನು ಶೂಲಕ್ಕೇರಿಸಿದನು. ಅವರು ಸಾಯುತ್ತಿದ್ದ ಕ್ಷಣಗಳಲ್ಲಿ, ಅವರ ಕಣ್ಣುಗಳ ಮುಂದೆಯೇ ಅವರ ಹೆಂಡತಿಮಕ್ಕಳು ವಧಿಸಲ್ಪಟ್ಟರು. ಈ ಸಮಯದಲ್ಲಿ ಜನೇಯಸನು ತನ್ನ ಉಪಪತ್ನಿಯರೊಡನೆ ಬಹಿರಂಗವಾಗಿ ಸಂತೋಷಸಮಾರಂಭವನ್ನು ಆಚರಿಸಿದನು. *

ಜನೇಯಸನಿಗೂ ಫರಿಸಾಯರಿಗೂ ಶತ್ರುತ್ವವಿತ್ತಾದರೂ, ಜನೇಯಸನು ವ್ಯಾವಹಾರಿಕ ದೃಷ್ಟಿಯುಳ್ಳ ಒಬ್ಬ ರಾಜಕಾರಣಿಯಾಗಿದ್ದನು. ಫರಿಸಾಯರಿಗೆ ಜನಸಾಮಾನ್ಯರಿಂದ ಅತ್ಯಧಿಕ ಬೆಂಬಲವಿತ್ತು ಎಂಬುದನ್ನು ಅವನು ಮನಗಂಡನು. ಆದುದರಿಂದ, ತನ್ನ ಮರಣಕಾಲದಲ್ಲಿ ಅವನು, ಫರಿಸಾಯರೊಂದಿಗೆ ಸೇರಿಕೊಂಡು ಅಧಿಕಾರ ನಡೆಸುವಂತೆ ತನ್ನ ಪತ್ನಿಯಾದ ಸಲೊಮಿ ಅಲೆಕ್ಸಾಂಡ್ರಳಿಗೆ ಹೇಳಿದನು. ತನ್ನ ಪುತ್ರರಿಗೆ ಬದಲಾಗಿ ಇವಳನ್ನು ಜನೇಯಸನು ತನ್ನ ರಾಜ್ಯದ ಉತ್ತರಾಧಿಕಾರಿಯನ್ನಾಗಿ ಆಯ್ಕೆಮಾಡಿದನು. ಇವಳು ಸಮರ್ಥ ರೀತಿಯಲ್ಲಿ ಆಳ್ವಿಕೆ ನಡೆಸಿದಳು, ಮತ್ತು ಹಾಸ್‌ಮನೀಯರ ಆಳ್ವಿಕೆಯಲ್ಲೇ (ಸಾ.ಶ.ಪೂ. 76-67) ಜನರು ಅತಿ ಹೆಚ್ಚು ಶಾಂತಿಭರಿತ ಕಾಲಾವಧಿಯನ್ನು ಅನುಭವಿಸುವಂತೆ ಮಾಡಿದಳು. ಫರಿಸಾಯರಿಗೆ ಪುನಃ ಅಧಿಕಾರದ ಸ್ಥಾನಗಳು ಸಿಕ್ಕಿದವು ಮತ್ತು ಅವರ ಧಾರ್ಮಿಕ ಕಟ್ಟಳೆಗಳ ವಿರುದ್ಧ ಜಾರಿಗೆ ತರಲ್ಪಟ್ಟಿದ್ದ ನಿಯಮಗಳು ರದ್ದುಪಡಿಸಲ್ಪಟ್ಟವು.

ಸಲೊಮಿಯ ಮರಣಾನಂತರ, ಅವಳ ಪುತ್ರರಾದ IIನೆಯ ಹಿರ್‌ಕಾನಸ್‌​—ಇವನು ಮಹಾಯಾಜಕನಾಗಿ ಸೇವೆಮಾಡುತ್ತಿದ್ದನು​—ಮತ್ತು IIನೆಯ ಅರಿಸ್ಟಾಬ್ಯೂಲಸರು ಅಧಿಕಾರಕ್ಕಾಗಿ ಪರಸ್ಪರ ಹೋರಾಟವನ್ನು ಆರಂಭಿಸಿದರು. ರಾಜಕೀಯ ಹಾಗೂ ಮಿಲಿಟರಿ ವಿಷಯಗಳಲ್ಲಿ ಇವರ ಪೂರ್ವಜರಿಗಿದ್ದ ಒಳನೋಟವು ಈ ಇಬ್ಬರಿಗೂ ಇರಲಿಲ್ಲ. ಮತ್ತು ಸೆಲ್ಯೂಸಿಡ್‌ ರಾಜವಂಶದವರ ಸಂಪೂರ್ಣ ಪತನದ ಬಳಿಕ, ಆ ಕ್ಷೇತ್ರದಲ್ಲಿ ರೋಮನ್‌ ಅಧಿಕಾರವು ಹೆಚ್ಚುತ್ತಾ ಹೋಗುತ್ತಿದೆ ಎಂಬುದರ ಮಹತ್ವವನ್ನು ಇವರಿಬ್ಬರಲ್ಲಿ ಯಾರೊಬ್ಬರೂ ಅರ್ಥಮಾಡಿಕೊಳ್ಳಲಿಲ್ಲವೋ ಎಂಬಂತೆ ತೋರುತ್ತದೆ. ಸಾ.ಶ.ಪೂ. 63ರಲ್ಲಿ, ಈ ಇಬ್ಬರೂ ಸಹೋದರರು ದಮಸ್ಕದಲ್ಲಿದ್ದ ರೋಮನ್‌ ಅಧಿಕಾರಿ ಪಾಂಪೆಯ ಬಳಿಗೆ ಹೋದರು ಮತ್ತು ತಮ್ಮ ವ್ಯಾಜ್ಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಅವನನ್ನು ಕೇಳಿಕೊಂಡರು. ಅದೇ ವರ್ಷ, ಪಾಂಪೆ ಹಾಗೂ ಅವನ ಸೈನಿಕರು ಯೆರೂಸಲೇಮಿಗೆ ಮುತ್ತಿಗೆ ಹಾಕಿದರು ಮತ್ತು ಅದನ್ನು ಸ್ವಾಧೀನಪಡಿಸಿಕೊಂಡರು. ಇದು, ಹಾಸ್‌ಮನೀಯ ರಾಜವಂಶದ ಆಳ್ವಿಕೆಯು ಕೊನೆಗೊಳ್ಳುವ ಸೂಚನೆಯಾಗಿತ್ತು. ಸಾ.ಶ.ಪೂ. 37ರಲ್ಲಿ, ಇಡುಮೇನ್ಯ ಅರಸನಾದ ಮಹಾ ಹೆರೋದನು ಯೆರೂಸಲೇಮನ್ನು ವಶಪಡಿಸಿಕೊಂಡನು. ರೋಮನ್‌ ಶಾಸನಸಭೆಯು ಇವನನ್ನು “ಯೂದಾಯದ ಅರಸ”ನಾಗಿಯೂ “ರೋಮನ್‌ ಜನತೆಯ ಸಹಕಾರಿ ಹಾಗೂ ಮಿತ್ರ”ನಾಗಿಯೂ ಅಂಗೀಕರಿಸಿತು. ಹೀಗೆ, ಹಾಸ್‌ಮನೀಯರ ಆಳ್ವಿಕೆಯು ಇನ್ನಿಲ್ಲವಾಯಿತು.

ಹಾಸ್‌ಮನೀಯರ ಪರಂಪರೆ

ಜೂಡಾ ಮಕಬೀಯಿಂದ ಆರಂಭಿಸಿ IIನೆಯ ಅರಿಸ್ಟಾಬ್ಯೂಲಸ್‌ನ ವರೆಗಿನ ಹಾಸ್‌ಮನೀಯರ ಆಳ್ವಿಕೆಯ ಕಾಲಾವಧಿಯು, ಯೇಸು ಭೂಮಿಯಲ್ಲಿದ್ದಾಗ ಅಸ್ತಿತ್ವದಲ್ಲಿದ್ದ ವಿಭಾಗಿತ ಧಾರ್ಮಿಕ ದೃಶ್ಯಕ್ಕೆ ತಳಪಾಯವನ್ನು ಹಾಕಿತು. ಆರಂಭದಲ್ಲಿ ಹಾಸ್‌ಮನೀಯರು ದೇವರ ಆರಾಧನೆಗಾಗಿ ತಮ್ಮ ಹುರುಪನ್ನು ತೋರಿಸಿದರಾದರೂ, ಕಾಲಕ್ರಮೇಣ ಇದೇ ಹುರುಪು ಸ್ವಾರ್ಥಾಭಿಲಾಷೆಯಾಗಿ ಪರಿಣಮಿಸಿತು. ದೇವರ ಧರ್ಮಶಾಸ್ತ್ರವನ್ನು ಅನುಸರಿಸುವುದರಲ್ಲಿ ಜನರನ್ನು ಒಂದುಗೂಡಿಸುವ ಸದವಕಾಶವನ್ನು ಪಡೆದಿದ್ದ ಅವರ ಯಾಜಕರು, ಆ ಜನಾಂಗವನ್ನು ರಾಜಕೀಯ ಕಾಳಗದ ಕೂಪಕ್ಕೆ ತಳ್ಳಿದರು. ಈ ಸನ್ನಿವೇಶದಲ್ಲಿ ಬೇರೆ ಬೇರೆ ಧಾರ್ಮಿಕ ದೃಷ್ಟಿಕೋನಗಳು ಸಮೃದ್ಧವಾಗಿ ಹಬ್ಬಿಕೊಂಡವು. ಹಾಸ್‌ಮನೀಯರು ಇನ್ನಿಲ್ಲವಾದರು; ಆದರೆ ಸದ್ದುಕಾಯರು, ಫರಿಸಾಯರು ಮತ್ತು ಇನ್ನಿತರರ ನಡುವೆ ಧಾರ್ಮಿಕ ಅಧಿಕಾರಕ್ಕಾಗಿ ನಡೆಯುತ್ತಿದ್ದ ಹೋರಾಟವು, ಈಗ ಹೆರೋದನ ಹಾಗೂ ರೋಮ್‌ನ ನಿಯಂತ್ರಣದ ಕೆಳಗಿರುವ ಜನಾಂಗದ ವಿಶೇಷ ಗುರುತಾಗಿ ಪರಿಣಮಿಸಿತು.

[ಪಾದಟಿಪ್ಪಣಿಗಳು]

^ ಪ್ಯಾರ. 4 ನವೆಂಬರ್‌ 15, 1998ರ ಕಾವಲಿನಬುರುಜು ಪತ್ರಿಕೆಯಲ್ಲಿರುವ “ಮಕಬೀಯರು ಯಾರು?” ಎಂಬ ಲೇಖನವನ್ನು ನೋಡಿರಿ.

^ ಪ್ಯಾರ. 22 “ನಹೂಮನ ಕುರಿತಾದ ವ್ಯಾಖ್ಯಾನ” ಎಂಬ ಮೃತ ಸಮುದ್ರದ ಸುರುಳಿಯು, “ಪುರುಷರನ್ನು ಸಜೀವವಾಗಿಯೇ ಗಲ್ಲಿಗೇರಿ”ಸಿದಂತಹ “ಉಗ್ರ ಸಿಂಹ”ದ ಕುರಿತು ತಿಳಿಸುತ್ತದೆ. ಇದು ಈ ಮೇಲೆ ತಿಳಿಸಲ್ಪಟ್ಟಿರುವ ಘಟನೆಗೇ ಸೂಚಿತವಾಗಿರಬಹುದು.

[ಪುಟ 30ರಲ್ಲಿರುವ ಚಾರ್ಟು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಹಾಸ್‌ಮನೀಯರ ರಾಜಪರಂಪರೆ

ಜೂಡಾ ಮಕಬೀ ಜಾನತನ್‌ ಮಕಬೀ ಸೈಮನ್‌ ಮಕಬೀ

ಜಾನ್‌ ಹಿರ್‌ಕಾನಸ್‌

↓ ↓

ಸಲೊಮಿ ಅಲೆಕ್ಸಾಂಡ್ರ—ಮದುವೆಯಾದದ್ದು—ಅಲೆಕ್ಸಾಂಡರ್‌ ಜನೇಯಸ್‌ ಅರಿಸ್ಟಾಬ್ಯೂಲಸ್‌

↓ ↓

IIನೆಯ ಹಿರ್‌ಕಾನಸ್‌ IIನೆಯ ಅರಿಸ್ಟಾಬ್ಯೂಲಸ್‌

[ಪುಟ 27ರಲ್ಲಿರುವ ಚಿತ್ರ]

ಜೂಡಾ ಮಕಬೀಯು ಯೆಹೂದ್ಯರಿಗೆ ಸ್ವಾತಂತ್ರ್ಯವನ್ನು ತಂದುಕೊಡಲು ಪ್ರಯತ್ನಿಸಿದನು

[ಕೃಪೆ]

The Doré Bible Illustrations/Dover Publications, Inc.

[ಪುಟ 29ರಲ್ಲಿರುವ ಚಿತ್ರ]

ಹಾಸ್‌ಮನೀಯರು ಯೆಹೂದ್ಯೇತರ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೋರಾಟವನ್ನು ನಡೆಸಿದರು

[ಕೃಪೆ]

The Doré Bible Illustrations/Dover Publications, Inc.