ಸಮಯೋಚಿತ ಶಿಕ್ಷಣದ ಮೂಲಕ ಯುವ ಜನರಿಗೆ ಸಹಾಯಮಾಡುವುದು
ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲಿರಿ
ಸಮಯೋಚಿತ ಶಿಕ್ಷಣದ ಮೂಲಕ ಯುವ ಜನರಿಗೆ ಸಹಾಯಮಾಡುವುದು
ಎಪಫ್ರನು ಪ್ರಥಮ ಶತಮಾನದ ಒಬ್ಬ ಕ್ರೈಸ್ತನಾಗಿದ್ದು, ಒಂದು ಬಾರಿ ರೋಮ್‌ಗೆ ಪ್ರಯಾಣಮಾಡಿದ್ದನು. ಆದರೆ, ಅವನು ಏಷ್ಯಾ ಮೈನರ್‌ನ ಕೊಲೊಸ್ಸೆ ಪಟ್ಟಣದ ಕುರಿತು ಆಲೋಚಿಸುತ್ತಾ ಇದ್ದನು. ಮತ್ತು ಇದಕ್ಕೆ ಒಳ್ಳೆಯ ಕಾರಣವಿತ್ತು. ಅಲ್ಲಿ ಅವನು ಸುವಾರ್ತೆಯನ್ನು ಸಾರಿದ್ದನು ಮತ್ತು ಕೊಲೊಸ್ಸೆಯ ಕೆಲವರಿಗೆ ಯೇಸು ಕ್ರಿಸ್ತನ ಶಿಷ್ಯರಾಗಲು ಸಹಾಯಮಾಡಿದ್ದನು ಎಂಬುದರಲ್ಲಿ ಸಂಶಯವಿಲ್ಲ. (ಕೊಲೊಸ್ಸೆ 1:7) ಕೊಲೊಸ್ಸೆಯಲ್ಲಿದ್ದ ಜೊತೆ ವಿಶ್ವಾಸಿಗಳ ಕುರಿತು ಎಪಫ್ರನು ತುಂಬ ಚಿಂತಿತನಾಗಿದ್ದನು. ಆದುದರಿಂದಲೇ ಅಪೊಸ್ತಲ ಪೌಲನು ರೋಮ್‌ನಿಂದ ಅವರಿಗೆ ಬರೆದುದು: “ಎಪಫ್ರನು . . . ನಿಮಗೆ ವಂದನೆ ಹೇಳುತ್ತಾನೆ. ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ನೀವು ದೃಢನಿಶ್ಚಿತರಾಗಿದ್ದು, ಕೊನೆಯಲ್ಲಿ ನೀವು ಪೂರ್ಣರಾಗಿ ನಿಲ್ಲಬೇಕೆಂದು ಅವನು ಯಾವಾಗಲೂ ನಿಮ್ಮ ಪರವಾಗಿ ತನ್ನ ಪ್ರಾರ್ಥನೆಗಳಲ್ಲಿ ಪ್ರಯಾಸಪಡುತ್ತಾನೆ.”—ಕೊಲೊಸ್ಸೆ 4:12, NW.
ತದ್ರೀತಿಯಲ್ಲಿ, ಆಧುನಿಕ ದಿನದ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಆತ್ಮಿಕ ಕ್ಷೇಮಕ್ಕಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತಾರೆ. ತಮ್ಮ ಮಕ್ಕಳ ಹೃದಯಗಳಲ್ಲಿ ದೇವರಿಗಾಗಿ ಪ್ರೀತಿಯನ್ನು ಬೇರೂರಿಸಲು ಮತ್ತು ಮಕ್ಕಳು ನಂಬಿಕೆಯಲ್ಲಿ ದೃಢರಾಗಿ ಉಳಿಯುವಂತೆ ಮಾಡಲು ಈ ಹೆತ್ತವರು ತುಂಬ ಶ್ರಮಿಸುತ್ತಾರೆ.
ಶಾಲೆಯಲ್ಲಿ ಅಥವಾ ಬೇರೆ ಸ್ಥಳಗಳಲ್ಲಿ ತಾವು ಎದುರಿಸುವ ಸಮಸ್ಯೆಗಳೊಂದಿಗೆ ವ್ಯವಹರಿಸಲಿಕ್ಕಾಗಿ ಸಹಾಯ ನೀಡುವಂತೆ ಅನೇಕ ಕ್ರೈಸ್ತ ಯುವ ಜನರು ಕೇಳಿಕೊಂಡಿದ್ದಾರೆ. 15 ವರ್ಷ ಪ್ರಾಯದ ಒಬ್ಬ ಹುಡುಗಿಯು ಹೇಳಿದ್ದು: “ನಮ್ಮ ಸಮಸ್ಯೆಗಳು ದಿನೇ ದಿನೇ ಗಂಭೀರವಾಗುತ್ತಿವೆ. ಜೀವನವು ತುಂಬ ಭಯದಿಂದ ತುಂಬಿದೆ. ನಮಗೆ ಸಹಾಯದ ಅಗತ್ಯವಿದೆ!” ಇಂತಹ ಯುವ ಜನರ ಬೇಡಿಕೆಗಳು ಹಾಗೂ ದೇವಭಯವುಳ್ಳ ಹೆತ್ತವರ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿದೆಯೋ? ಖಂಡಿತವಾಗಿಯೂ ಸಿಕ್ಕಿದೆ! ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಬೈಬಲಾಧಾರಿತ ಶಿಕ್ಷಣವು ಒದಗಿಸಲ್ಪಟ್ಟಿದೆ. (ಮತ್ತಾಯ 24:45) ‘ದೃಢನಿಶ್ಚಿತರಾಗಿದ್ದು, ಪೂರ್ಣರಾಗಿ ನಿಲ್ಲಲು’ ಸಾವಿರಾರು ಯುವ ಜನರಿಗೆ ಸಹಾಯಮಾಡಿರುವ ಕೆಲವು ಸಾಹಿತ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಈ ಪುಸ್ತಕಗಳಲ್ಲಿ ಕೆಲವನ್ನು ನಾವೀಗ ಪರಿಗಣಿಸೋಣ.
“ನೋಡಿರಿ . . . 15,000 ಹೊಸ ಸಾಕ್ಷಿಗಳು!”
ಇಸವಿ 1941ರ ಆಗಸ್ಟ್ ತಿಂಗಳಿನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅತಿ ದೊಡ್ಡ ಅಧಿವೇಶನಕ್ಕಾಗಿ, ಅಮೆರಿಕದ ಮಿಸೂರಿಯ ಸೆಂಟ್ ಲೂಯಿಯಲ್ಲಿ 1,15,000 ಮಂದಿ ಸಭಿಕರು ಕೂಡಿಬಂದರು. ಆ ಅಧಿವೇಶನದ ಕೊನೆಯ ದಿನವು “ಮಕ್ಕಳ ದಿನ”ವಾಗಿತ್ತು. ಜೋಸೆಫ್ ಎಫ್. ರದರ್‌ಫರ್ಡ್ ಅವರು “ರಾಜನ ಮಕ್ಕಳು” ಎಂಬ ವಿಷಯದ ಕುರಿತು ಮಾತಾಡಿದಾಗ, ವೇದಿಕೆಯ ಬಳಿ ಕುಳಿತಿದ್ದ ಸುಮಾರು 15,000 ಮಕ್ಕಳು ಬಹಳ ಆಸಕ್ತಿಯಿಂದ ಕಿವಿಗೊಟ್ಟರು. ತಮ್ಮ ಭಾಷಣದ ಕೊನೆಯಲ್ಲಿ 71 ವರ್ಷ ಪ್ರಾಯದ ರದರ್‌ಫರ್ಡ್ ಪಿತೃಸದೃಶ ಸ್ವರದಲ್ಲಿ ಹೇಳಿದ್ದು:
“ಮಕ್ಕಳೇ . . . ನಿಮ್ಮಲ್ಲಿ ಯಾರು . . . ದೇವರಿಗೆ ಮತ್ತು ಆತನ ರಾಜನಿಗೆ ವಿಧೇಯರಾಗಲು ನಿರ್ಧರಿಸಿದ್ದೀರೋ ಅವರು ದಯವಿಟ್ಟು ಎದ್ದು ನಿಲ್ಲಿ.” ಎಲ್ಲ ಮಕ್ಕಳೂ ಒಟ್ಟಿಗೆ ಎದ್ದುನಿಂತರು. ಆಗ, “ನೋಡಿರಿ, ರಾಜ್ಯಕ್ಕೆ 15,000ಕ್ಕಿಂತಲೂ ಹೆಚ್ಚು ಹೊಸ ಸಾಕ್ಷಿಗಳು!” ಎಂದು ಸಹೋದರ ರದರ್‌ಫರ್ಡ್ ಉದ್ಗರಿಸಿದರು. ಆಗ ಅಲ್ಲಿ ಭಾರಿ ಕರತಾಡನವಿತ್ತು. ಭಾಷಣಕರ್ತರು ಕೂಡಿಸಿ ಹೇಳಿದ್ದು: “ನಿಮ್ಮೆಲ್ಲರಲ್ಲಿ ಯಾರು ದೇವರ ರಾಜ್ಯದ ಕುರಿತು ಇತರರಿಗೆ ತಿಳಿಸಲಿಕ್ಕಾಗಿ ನಿಮ್ಮಿಂದ ಸಾಧ್ಯವಿರುವುದನ್ನು ಮಾಡಲು ಸಿದ್ಧರಿದ್ದೀರೋ . . . , ದಯಮಾಡಿ ಹೌದು ಎಂದು ಹೇಳಿ.” ಮಕ್ಕಳೆಲ್ಲರೂ ಜೋರಾಗಿ “ಹೌದು!” ಎಂದು ಉತ್ತರಿಸಿದರು. ನಂತರ ಭಾಷಣಕರ್ತರು, ಮಕ್ಕಳು (ಇಂಗ್ಲಿಷ್) ಎಂಬ ಹೊಸ ಪುಸ್ತಕವನ್ನು ತೋರಿಸಿದರು ಮತ್ತು ಬಹಳ ಸಮಯದ ವರೆಗೆ ಚಪ್ಪಾಳೆ ತಟ್ಟುವ ಮೂಲಕ ಸಭಿಕರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಈ ಪ್ರಚೋದನಾತ್ಮಕ ಭಾಷಣದ ಬಳಿಕ, ಯುವ ಜನರು ಸಾಲಾಗಿ ವೇದಿಕೆಯ ಮೇಲೆ ಹೋದರು ಮತ್ತು ಸಹೋದರ ರದರ್‌ಫರ್ಡ್ ಪ್ರತಿಯೊಬ್ಬರಿಗೆ ಈ ಹೊಸ ಪುಸ್ತಕದ ಒಂದೊಂದು ಪ್ರತಿಯನ್ನು ಉಡುಗೊರೆಯಾಗಿ ಕೊಟ್ಟರು. ಈ ದೃಶ್ಯವನ್ನು ನೋಡಿ ಸಭಿಕರ ಕಣ್ಣುಗಳು ಹನಿಗೂಡಿದವು. ಈ ಘಟನೆಯನ್ನು ಕಣ್ಣಾರೆ ಕಂಡ ಒಬ್ಬ ವ್ಯಕ್ತಿಯು ಹೇಳಿದ್ದು: “ಯುವ ಜನರು ತಮ್ಮ ದೇವರಾದ ಯೆಹೋವನಲ್ಲಿ ಪೂರ್ಣ ಭರವಸೆಯನ್ನು ಹಾಗೂ ನಂಬಿಕೆಯನ್ನು [ತೋರಿಸುತ್ತಿರುವುದನ್ನು] ನೋಡಿ, ಕಲ್ಲೆದೆಯ ವ್ಯಕ್ತಿಯು ಮಾತ್ರ ತನ್ನ ಭಾವನೆಗಳನ್ನು ವ್ಯಕ್ತಪಡಿಸದಿರುವನು.”
ಆ ಸ್ಮರಣೀಯ ಅಧಿವೇಶನದಲ್ಲಿ, 1,300 ಮಂದಿ ಯುವ ಜನರು ಯೆಹೋವನಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಂಡರು. ಅವರಲ್ಲಿ ಅನೇಕರು ಇಂದಿನ ತನಕ ನಂಬಿಕೆಯಲ್ಲಿ ದೃಢರಾಗಿ ಉಳಿದಿದ್ದಾರೆ. ಅವರು ಸ್ಥಳಿಕ ಸಭೆಗಳಿಗೆ ಬೆಂಬಲವನ್ನು ನೀಡುತ್ತಿದ್ದಾರೆ, ಬೆತೆಲ್‌ನಲ್ಲಿ ಸ್ವಯಂ ಸೇವಕರಾಗಿ ಕೆಲಸಮಾಡುತ್ತಿದ್ದಾರೆ ಅಥವಾ ಮಿಷನೆರಿಗಳೋಪಾದಿ ವಿದೇಶಗಳಲ್ಲಿ ಸೇವೆಮಾಡುತ್ತಿದ್ದಾರೆ. ನಿಜವಾಗಿಯೂ “ಮಕ್ಕಳ ದಿನ” ಹಾಗೂ ಮಕ್ಕಳು ಎಂಬ ಪುಸ್ತಕವು, ಅನೇಕ ಯುವ ಜನರ ಮನಸ್ಸುಗಳ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿತು.
“ಅವು ಸರಿಯಾದ ಸಮಯಕ್ಕೆ ಬಿಡುಗಡೆಮಾಡಲ್ಪಡುತ್ತವೆ”
ಇಸವಿ 1970ಗಳಲ್ಲಿ ಯೆಹೋವನ ಸಾಕ್ಷಿಗಳು ಇನ್ನೂ ಮೂರು ಪುಸ್ತಕಗಳನ್ನು ಪ್ರಕಾಶಿಸಿದರು ಮತ್ತು ಅವು ಸಾವಿರಾರು ಯುವ ಜನರ ಮನಸ್ಸುಗಳ ಮೇಲೆ ಪರಿಣಾಮ ಬೀರಿದವು. ಇವು ಯಾವುವೆಂದರೆ, ಮಹಾ ಬೋಧಕನಿಗೆ ಕಿವಿಗೊಡುವುದು, ನಿಮ್ಮ ಯೌವನ—ಅದರಿಂದ ಅತ್ಯುತ್ತಮವಾದದ್ದನ್ನು ಪಡೆದುಕೊಳ್ಳುವುದು (ಇಂಗ್ಲಿಷ್), ಮತ್ತು ಬೈಬಲ್ ಕಥೆಗಳ ನನ್ನ ಪುಸ್ತಕ ಎಂಬವುಗಳೇ. 1982ರಲ್ಲಿ “ಯುವ ಜನರು ಪ್ರಶ್ನಿಸುವುದು . . .” ಎಂಬ ಲೇಖನಮಾಲೆಯು ಅವೇಕ್! ಪತ್ರಿಕೆಗಳಲ್ಲಿ ಬರಲಾರಂಭಿಸಿತು. ಈ ಲೇಖನಗಳು, ಯುವ ಜನರು ಹಾಗೂ ವೃದ್ಧರು ಉತ್ಸಾಹಭರಿತ ಪ್ರತಿವರ್ತನೆಯನ್ನು ತೋರಿಸುವಂತೆ ಪ್ರಚೋದಿಸಿವೆ. 14 ವರ್ಷ ಪ್ರಾಯದ ಒಬ್ಬ ಹುಡುಗನು
ಹೇಳಿದ್ದು: “ಅವುಗಳು ಪ್ರಕಾಶಿಸಲ್ಪಡುವಂತೆ ಮಾಡಿದುದಕ್ಕಾಗಿ ನಾನು ಪ್ರತಿ ರಾತ್ರಿ ದೇವರಿಗೆ ಉಪಕಾರ ಸಲ್ಲಿಸುತ್ತೇನೆ.” 13 ವರ್ಷ ಪ್ರಾಯದ ಒಬ್ಬಳು ಹೇಳಿದ್ದು: “ಈ ಲೇಖನಗಳನ್ನು ನಾನು ತುಂಬ ಇಷ್ಟಪಡುತ್ತೇನೆ. ಅವು ಸರಿಯಾದ ಸಮಯಕ್ಕೆ ಬಿಡುಗಡೆಮಾಡಲ್ಪಡುತ್ತವೆ.” ಈ ಲೇಖನಗಳು ಸಮಯೋಚಿತವಾಗಿವೆ ಮತ್ತು ಪ್ರಯೋಜನದಾಯಕವಾಗಿವೆ ಎಂದು, ಹೆತ್ತವರು ಹಾಗೂ ನೇಮಿತ ಕ್ರೈಸ್ತ ಹಿರಿಯರು ಒಪ್ಪಿಕೊಳ್ಳುತ್ತಾರೆ.ಇಸವಿ 1989ರಷ್ಟಕ್ಕೆ, ಅವೇಕ್! ಪತ್ರಿಕೆಯಲ್ಲಿ “ಯುವ ಜನರು ಪ್ರಶ್ನಿಸುವುದು . . .” ಎಂಬ ಸುಮಾರು 200 ಲೇಖನಗಳು ಬಂದಿದ್ದವು. ಆ ವರ್ಷದ “ದೈವಿಕ ಭಕ್ತಿ” ಜಿಲ್ಲಾ ಅಧಿವೇಶನದಲ್ಲಿ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವು ಬಿಡುಗಡೆಮಾಡಲ್ಪಟ್ಟಿತು. ಯುವ ಜನರು ನಂಬಿಕೆಯಲ್ಲಿ ದೃಢರಾಗಿ ನಿಲ್ಲುವಂತೆ ಇದು ಅವರಿಗೆ ಸಹಾಯಮಾಡಿದೆಯೋ? ಮೂವರು ಯುವ ಜನರು ಬರೆದುದು: “ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಹಾಗೂ ಅಂತಹ ಸಮಸ್ಯೆಗಳೊಂದಿಗೆ ಹೇಗೆ ವ್ಯವಹರಿಸುವುದು ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ಈ ಪುಸ್ತಕವು ನಮಗೆ ಅದ್ಭುತಕರ ಸಹಾಯಕವಾಗಿದೆ. ನಮ್ಮ ಹಿತಕ್ಷೇಮದಲ್ಲಿ ನೀವು ತೋರಿಸಿರುವ ಆಸಕ್ತಿಗಾಗಿ ನಿಮಗೆ ತುಂಬ ಉಪಕಾರಗಳು.” ಲೋಕದಾದ್ಯಂತ ಇರುವ ಅನೇಕಾನೇಕ ಯುವ ಜನರು ಇದನ್ನು ಸಮ್ಮತಿಸುತ್ತಾರೆ.
“ಇದು ನಮ್ಮ ಹಸಿವನ್ನು ನೀಗಿಸಿತು”
ಇಸವಿ 1999ರಲ್ಲಿ ಯೆಹೋವನ ಸಾಕ್ಷಿಗಳು, ಯುವ ಜನರಿಗಾಗಿ ಸಮಯೋಚಿತವಾದ ಶಿಕ್ಷಣವನ್ನು ನೀಡುವ ಸಹಾಯಕವನ್ನು ಸಿದ್ಧಪಡಿಸಿದರು. ಯುವ ಜನರ ಪ್ರಶ್ನೆಗಳು—ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ? (ಇಂಗ್ಲಿಷ್) ಎಂಬ ವಿಡಿಯೋ ಕ್ಯಾಸೆಟ್ಟೇ ಆ ಸಹಾಯಕವಾಗಿತ್ತು. ಇದು ಉತ್ಸಾಹಪೂರ್ಣ ಪ್ರತಿವರ್ತನೆಯನ್ನು ಉದ್ರೇಕಿಸಿತು. “ಈ ವಿಡಿಯೋ ನನ್ನ ಮೇಲೆ ಗಂಭೀರವಾದ ಪ್ರಭಾವವನ್ನು ಬೀರಿತು” ಎಂದು 14 ವರ್ಷದ ಒಬ್ಬ ಹುಡುಗಿಯು ಹೇಳಿದಳು. “ಇದು ನಮ್ಮ ಆತ್ಮಿಕ ಆಹಾರದ ಕ್ರಮವಾದ ಭಾಗವಾಗಿದೆ” ಎಂದು ಒಬ್ಬ ಒಂಟಿಹೆತ್ತವಳು ಹೇಳಿದಳು. “ನಮ್ಮ ಆಪ್ತ ಮಿತ್ರನಾದ ಯೆಹೋವನು, ತನ್ನ ಲೋಕವ್ಯಾಪಕ ಸಂಸ್ಥೆಯಲ್ಲಿರುವ ಯುವ ಜನರನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಮತ್ತು ಅವರ ಪರಾಮರಿಕೆ ಮಾಡುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ತುಂಬ ಹೃದಯಸ್ಪರ್ಶಿಯಾಗಿದೆ” ಎಂದು ಒಬ್ಬ ಯುವತಿಯು ಹೇಳಿದಳು.
ಈ ವಿಡಿಯೋದಿಂದ ಯಾವ ರೀತಿಯ ಸಹಾಯ ದೊರಕಿದೆ? ಯುವ ಜನರು ಹೇಳುವುದು: “ನನ್ನ ಸಹವಾಸದ ವಿಷಯದಲ್ಲಿ ಜಾಗರೂಕತೆಯಿಂದಿರುವಂತೆ, ಸಭೆಯಲ್ಲಿ ಹೆಚ್ಚಿನವರೊಂದಿಗೆ ಸಹವಾಸಮಾಡುವಂತೆ, ಮತ್ತು ಯೆಹೋವನನ್ನು ನನ್ನ ಸ್ನೇಹಿತನಾಗಿ ಮಾಡಿಕೊಳ್ಳುವಂತೆ ಇದು ನನಗೆ ಸಹಾಯಮಾಡಿದೆ.” “ಸಮಾನಸ್ಥರ ಒತ್ತಡವನ್ನು ಎದುರಿಸುವಂತೆ ನನಗೆ ಸಹಾಯಮಾಡಿದೆ.” “ನನ್ನಿಂದ ಸಾಧ್ಯವಿರುವಷ್ಟು ಅತ್ಯುತ್ತಮವಾದ ರೀತಿಯಲ್ಲಿ ಯೆಹೋವನ ಸೇವೆಮಾಡುವ ನನ್ನ ನಿರ್ಧಾರವನ್ನು ಇದು ಮತ್ತಷ್ಟು ಬಲಪಡಿಸಿದೆ.” ಇದಲ್ಲದೆ ಒಬ್ಬ ವಿವಾಹಿತ ದಂಪತಿಯು ಬರೆದುದು: “ಈ ‘ಆಹಾರ’ವನ್ನು ಒದಗಿಸಿರುವುದಕ್ಕಾಗಿ ನಿಮಗೆ ಹೃತ್ಪೂರ್ವಕವಾಗಿ ಉಪಕಾರ ಸಲ್ಲಿಸುತ್ತೇವೆ. ಇದು ಆತ್ಮಿಕ ಆಹಾರಕ್ಕಾಗಿರುವ ನಮ್ಮ ಹಸಿವನ್ನು ನೀಗಿಸಿದೆ.”
ಅಭಿಷಿಕ್ತ ‘ನಂಬಿಗಸ್ತನೂ ವಿವೇಕಿಯೂ ಆದ ಆಳು’ ವರ್ಗವು ತನ್ನ ದೇವದತ್ತ ನೇಮಕವನ್ನು ಪೂರೈಸುತ್ತಾ, ಸಮಯೋಚಿತವಾದ ಆತ್ಮಿಕ ಆಹಾರವನ್ನು ಎಲ್ಲರಿಗೂ ಒದಗಿಸಿದೆ. ಮತ್ತು ಅಂತಹ ಶಾಸ್ತ್ರೀಯ ಶಿಕ್ಷಣವು, ‘ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲಲು’ ಇಂದು ಯುವ ಜನರಿಗೆ ಹೇಗೆ ಸಹಾಯಮಾಡುತ್ತಿದೆ ಎಂಬುದನ್ನು ನೋಡುವುದು ಎಷ್ಟು ಆನಂದಮಯವಾದದ್ದಾಗಿದೆ!