ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯಾರಾಧನೆಯು ಜನರನ್ನು ಐಕ್ಯಗೊಳಿಸುತ್ತದೆ

ಸತ್ಯಾರಾಧನೆಯು ಜನರನ್ನು ಐಕ್ಯಗೊಳಿಸುತ್ತದೆ

ಸತ್ಯಾರಾಧನೆಯು ಜನರನ್ನು ಐಕ್ಯಗೊಳಿಸುತ್ತದೆ

ಸಾಮಾನ್ಯವಾಗಿ ಧರ್ಮವು ಮಾನವಕುಲವನ್ನು ಪ್ರತ್ಯೇಕಿಸುವುದು ಸತ್ಯವಾದರೂ, ಒಬ್ಬನೇ ಸತ್ಯ ದೇವರ ಆರಾಧನೆಗೆ ಜನರನ್ನು ಐಕ್ಯಗೊಳಿಸುವ ಶಕ್ತಿಯಿದೆ. ಇಸ್ರಾಯೇಲ್‌ ಜನಾಂಗವು ದೇವರಾದುಕೊಂಡ ಜನಾಂಗವಾಗಿದ್ದಾಗ, ಯಥಾರ್ಥವಂತರಾದ ಅನೇಕ ಮಂದಿ ಅನ್ಯರು ಸತ್ಯಾರಾಧನೆಯ ಕಡೆಗೆ ಆಕರ್ಷಿಸಲ್ಪಟ್ಟರು. ಉದಾಹರಣೆಗೆ, ರೂತಳು ತನ್ನ ಸ್ವದೇಶವಾದ ಮೋವಾಬಿನ ದೇವತೆಗಳನ್ನು ತ್ಯಜಿಸಿ, “ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು” ಎಂದು ನೊವೊಮಿಗೆ ಹೇಳಿದಳು. (ರೂತಳು 1:16) ಸಾ.ಶ. ಒಂದನೆಯ ಶತಮಾನದೊಳಗೆ ಅನ್ಯರು ದೊಡ್ಡ ಸಂಖ್ಯೆಯಲ್ಲಿ ಸತ್ಯ ದೇವರ ಆರಾಧಕರಾಗಿದ್ದರು. (ಅ. ಕೃತ್ಯಗಳು 13:48; 17:4) ತರುವಾಯ, ಯೇಸುವಿನ ಅಪೊಸ್ತಲರು ಸುವಾರ್ತೆಯೊಂದಿಗೆ ದೂರದ ಸ್ಥಳಗಳಿಗೆ ಪ್ರಯಾಣಿಸಲು ಆರಂಭಿಸಿದಾಗ, ಇನ್ನಿತರ ಯಥಾರ್ಥ ಜನರು ಸತ್ಯ ದೇವರ ಆರಾಧನೆಯಲ್ಲಿ ಐಕ್ಯಗೊಂಡರು. “ನೀವು ವಿಗ್ರಹಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು” ಸೇವಿಸಿದಿರಿ ಎಂದು ಅಪೊಸ್ತಲ ಪೌಲನು ಬರೆದನು. (1 ಥೆಸಲೊನೀಕ 1:9) ಆದರೆ ಇಂದು ಸತ್ಯ ದೇವರ ಆರಾಧನೆಗೆ ಜನರನ್ನು ಐಕ್ಯಗೊಳಿಸುವ ಶಕ್ತಿಯಿದೆಯೆ?

“ಸತ್ಯಾರಾಧಕರು” ಅಥವಾ “ಸತ್ಯ ದೇವರ” ಕುರಿತಾಗಿ ಮಾತಾಡುವುದು ತಪ್ಪೆಂದು ಸಂದೇಹವಾದಿಗಳು ಪಟ್ಟುಹಿಡಿದು ಹೇಳುತ್ತಾರೆ. ಸತ್ಯವನ್ನು ಕಲಿಯಸಾಧ್ಯವಿರುವ ಒಂದು ಮೂಲವಿದೆ ಎಂಬುದನ್ನು ಅರಿಯದೆ ಇರುವ ಕಾರಣ ಅವರು ಹಾಗೆ ಭಾವಿಸಬಹುದು. ಆದರೆ ಅನೇಕ ಹಿನ್ನೆಲೆಗಳಿಂದ ಬಂದಿರುವ ಸತ್ಯಾನ್ವೇಷಕರು, ಆರಾಧನೆಯು ಒಬ್ಬನ ಇಷ್ಟದ ಮೇಲೆ ಹೊಂದಿಕೊಂಡಿರುವುದಿಲ್ಲ ಎಂಬುದನ್ನು ಗ್ರಹಿಸಿದ್ದಾರೆ. ಸಕಲ ವಸ್ತುಗಳ ಸೃಷ್ಟಿಕರ್ತನಾದ ಯೆಹೋವನೊಬ್ಬನೇ ಆರಾಧನೆಗೆ ಯೋಗ್ಯನು. (ಪ್ರಕಟನೆ 4:11) ಆತನು ಸತ್ಯ ದೇವರಾಗಿರುವುದರಿಂದ, ತನ್ನನ್ನು ಹೇಗೆ ಆರಾಧಿಸಬೇಕೆಂದು ನಿರ್ಣಯಿಸುವ ಹಕ್ಕು ಆತನಿಗಿದೆ.

ನಾವು ಆತನ ಆವಶ್ಯಕತೆಗಳನ್ನು ವಿವೇಚಿಸಿ ತಿಳಿದುಕೊಳ್ಳುವಂತೆ ಸಹಾಯಮಾಡಲು, ಯೆಹೋವನು ನಮ್ಮೊಂದಿಗೆ ತನ್ನ ವಾಕ್ಯವಾದ ಬೈಬಲಿನ ಮೂಲಕ ಸಂಪರ್ಕ ಬೆಳೆಸಿದ್ದಾನೆ. ಇಡೀ ಬೈಬಲು ಅಥವಾ ಅದರ ಭಾಗಗಳು ಇಂದು ಹೆಚ್ಚುಕಡಿಮೆ ಭೂಮಿಯ ಸರ್ವರಿಗೂ ಲಭ್ಯಗೊಳಿಸಲ್ಪಟ್ಟಿವೆ. ಇದಲ್ಲದೆ, “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ . . . ಸತ್ಯವನ್ನು ತಿಳಿದುಕೊಳ್ಳುವಿರಿ” ಎಂದು ದೇವಕುಮಾರನು ಹೇಳಿದನು. (ಯೋಹಾನ 8:31, 32) ಹಾಗಾದರೆ, ಸತ್ಯವನ್ನು ಅರಿತುಕೊಳ್ಳಸಾಧ್ಯವಿದೆ. ಮತ್ತು ವಿವಿಧ ಧಾರ್ಮಿಕ ಹಿನ್ನೆಲೆಗಳಿಂದ ಬಂದಿರುವ ಲಕ್ಷಾಂತರ ಮಂದಿ ಪ್ರಾಮಾಣಿಕ ಹೃದಯಿಗಳು ಈ ಸತ್ಯವನ್ನು ಧೈರ್ಯದಿಂದ ಸ್ವೀಕರಿಸುತ್ತಿದ್ದಾರೆ ಮತ್ತು ಸತ್ಯಾರಾಧನೆಯಲ್ಲಿ ಐಕ್ಯಗೊಳ್ಳುತ್ತಿದ್ದಾರೆ.​—ಮತ್ತಾಯ 28:​19, 20; ಪ್ರಕಟನೆ 7:​9, 10.

ನಮ್ಮ ಕಾಲದಲ್ಲಿ ಲೋಕವ್ಯಾಪಕ ಐಕ್ಯ!

ಬೈಬಲಿನ ಚೆಫನ್ಯ ಪುಸ್ತಕದಲ್ಲಿರುವ ಒಂದು ಗಮನಾರ್ಹ ಪ್ರವಾದನೆಯು, ವಿವಿಧ ಹಿನ್ನೆಲೆಗಳಿಂದ ಬರುವ ಜನರ ಒಟ್ಟುಗೂಡಿಸುವಿಕೆಯ ಕುರಿತು ಮಾತಾಡುತ್ತದೆ. ಅದು ಹೇಳುವುದು: “ಆಗ ನಾನು [ಯೆಹೋವ ದೇವರು] ಜನರಿಗೆ ಶುದ್ಧ ಭಾಷೆಯೊಂದಕ್ಕೆ ಬದಲಾವಣೆಯನ್ನು ಕೊಡುವೆನು; ಅವರೆಲ್ಲರೂ ಯೆಹೋವನ ಹೆಸರನ್ನು ಕರೆಯಲಾಗುವಂತೆ, ಭುಜಕ್ಕೆ ಭುಜ ಕೊಟ್ಟು ಆತನನ್ನು ಸೇವಿಸಲಾಗುವಂತೆ ಅದನ್ನು ಕೊಡುವೆನು.” (ಚೆಫನ್ಯ 3:​9, NW) ತಮ್ಮ ಜೀವಿತಗಳಲ್ಲಿ ಬದಲಾವಣೆಯನ್ನು ಮಾಡಿಕೊಂಡ ಜನರು ಐಕ್ಯದಿಂದ ದೇವರನ್ನು ಸೇವಿಸುವ ಎಷ್ಟು ಸೊಗಸಾದ ಚಿತ್ರಣವಿದು!

ಇದು ಯಾವಾಗ ಸಂಭವಿಸಲಿತ್ತು? ಚೆಫನ್ಯ 3:8 ಹೇಳುವುದು: “ಯೆಹೋವನು ಇಂತೆನ್ನುತ್ತಾನೆ​—ಹೀಗಿರಲು ನನ್ನನ್ನು ಕಾದುಕೊಂಡಿರ್ರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ; ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯ್ದು ಬಿಡುವದಕ್ಕಾಗಿ ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ; ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವದಷ್ಟೆ.” ಹೌದು, ಯೆಹೋವನು ಜನಾಂಗಗಳನ್ನು ಒಟ್ಟುಗೂಡಿಸುವ ಸಮಯದಲ್ಲಿ, ಆದರೆ ತನ್ನ ರೌದ್ರವನ್ನು ಅವರ ಮೇಲೆ ಸುರಿಯುವುದಕ್ಕೆ ಮೊದಲು, ಆತನು ಭೂಮಿಯ ದೀನರಿಗೆ ಶುದ್ಧ ಭಾಷೆಗೆ ಬದಲಾವಣೆಯನ್ನು ಕೊಡುತ್ತಾನೆ. ಆ ಸಮಯವು ಇದೇ ಆಗಿದೆ, ಏಕೆಂದರೆ ಅರ್ಮಗೆದೋನಿನಲ್ಲಿ ನಡೆಯುವ ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ ಜನಾಂಗಗಳನ್ನು ಒಟ್ಟುಗೂಡಿಸುವ ಕಾರ್ಯವು ಈಗಾಗಲೇ ಮುಂದುವರಿಯುತ್ತಿದೆ.​—ಪ್ರಕಟನೆ 16:​14, 16.

ತನ್ನ ಜನರನ್ನು ಐಕ್ಯಗೊಳಿಸಲು ಯೆಹೋವನು ಅವರಿಗೊಂದು ಶುದ್ಧ ಭಾಷೆಯನ್ನು ಕೊಡುತ್ತಾನೆ. ಈ ಹೊಸ ಭಾಷೆಯಲ್ಲಿ, ದೇವರ ಮತ್ತು ಆತನ ಉದ್ದೇಶಗಳ ಕುರಿತಾದ ಬೈಬಲ್‌ ಸತ್ಯದ ಸರಿಯಾದ ತಿಳಿವಳಿಕೆ ಸೇರಿದೆ. ಶುದ್ಧ ಭಾಷೆಯನ್ನಾಡುವುದರಲ್ಲಿ ಸತ್ಯದಲ್ಲಿ ನಂಬಿಕೆಯಿಡುವುದು, ಅದನ್ನು ಇತರರಿಗೆ ಬೋಧಿಸುವುದು, ಮತ್ತು ದೇವರ ನಿಯಮಗಳು ಹಾಗೂ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ಜೀವಿಸುವುದು ಒಳಗೂಡಿದೆ. ಒಡಕನ್ನು ಉಂಟುಮಾಡುವ ರಾಜಕೀಯವನ್ನು ತ್ಯಜಿಸುವಂತೆ ಮತ್ತು ಈ ಲೋಕದ ವೈಶಿಷ್ಟ್ಯವಾಗಿರುವ ಕುಲಭೇದವನ್ನು ಮತ್ತು ವಿಭಾಗಿಸುವ ರಾಷ್ಟ್ರೀಯತೆಯಂತಹ ಸ್ವಾರ್ಥ ಮನೋಭಾವಗಳನ್ನು ಹೃದಯದಿಂದ ಕಿತ್ತುಹಾಕುವಂತೆ ಇದು ಕೇಳಿಕೊಳ್ಳುತ್ತದೆ. (ಯೋಹಾನ 17:14; ಅ. ಕೃತ್ಯಗಳು 10:​34, 35) ಸತ್ಯವನ್ನು ಪ್ರೀತಿಸುವ ಸಕಲ ಪ್ರಾಮಾಣಿಕ ಹೃದಯದ ಜನರು ಈ ಭಾಷೆಯನ್ನು ಕಲಿಯಬಲ್ಲರು. ಹಿಂದಿನ ಲೇಖನದಲ್ಲಿ ತಿಳಿಸಲ್ಪಟ್ಟ ಆ ಐವರು ಒಮ್ಮೆ ಧಾರ್ಮಿಕವಾಗಿ ತೀರ ಬೇರ್ಪಟ್ಟವರಾಗಿದ್ದರೂ, ಈಗ ಒಬ್ಬನೇ ಸತ್ಯ ದೇವರಾದ ಯೆಹೋವನ ಆರಾಧನೆಯಲ್ಲಿ ಹೇಗೆ ಐಕ್ಯರಾಗಿದ್ದಾರೆ ಎಂಬುದನ್ನು ಪರಿಗಣಿಸಿರಿ.

ಅವರು ಸತ್ಯಾರಾಧನೆಯಲ್ಲಿ ಐಕ್ಯರು

ದೇವಭಕ್ತಿಯುಳ್ಳ ರೋಮನ್‌ ಕ್ಯಾಥೊಲಿಕಳಾಗಿದ್ದ ಫಿಡೇಲ್ಯಳು ತನ್ನ ಮಗಳ ಶಾಲಾಕೆಲಸಕ್ಕಾಗಿ ಒಂದು ಬೈಬಲನ್ನು ಕೊಂಡುಕೊಂಡಾಗ, ಸತ್ತಿರುವ ತನ್ನ ಐದು ಶಿಶುಗಳಿಗೆ ಏನು ಸಂಭವಿಸಿದೆಯೆಂದು ಬೈಬಲಿನಿಂದ ಹೇಳುವಂತೆ ತನ್ನ ಪಾದ್ರಿಯನ್ನು ಕೇಳಿಕೊಂಡಳು. “ಎಂತಹ ನಿರಾಶಾಜನಕ ಸ್ಥಿತಿ!” ಎನ್ನುತ್ತಾಳೆ ಅವಳು. ಹೀಗಿರುವಾಗ, ಯೆಹೋವನ ಸಾಕ್ಷಿಗಳು ಆಕೆಗೆ ಭೇಟಿ ನೀಡಿದರು ಮತ್ತು ಆಕೆ ಅವರಿಗೂ ತದ್ರೀತಿಯ ಪ್ರಶ್ನೆಯನ್ನೇ ಕೇಳಿದಳು. ಸತ್ತವರ ಸ್ಥಿತಿಯ ಕುರಿತಾದ ಸತ್ಯವನ್ನು ತನ್ನ ಸ್ವಂತ ಬೈಬಲಿನಲ್ಲಿ ಓದಿದಾಗ, ಚರ್ಚು ತನ್ನನ್ನು ಹೇಗೆ ವಂಚಿಸಿದೆಯೆಂಬುದನ್ನು ಆಕೆ ಮನಗಂಡಳು. ಮೃತರಿಗೆ ಯಾವ ಪ್ರಜ್ಞೆಯೂ ಇಲ್ಲದಿರುವುದರಿಂದ ಅವರು ಲಿಂಬೋವಿನಲ್ಲಾಗಲಿ ಬೇರೆ ಯಾವ ಕಡೆಯಲ್ಲಾಗಲಿ ಕಷ್ಟಾನುಭವಿಸುತ್ತಿಲ್ಲವೆಂದು ಆಕೆ ಕಲಿತುಕೊಂಡಳು. (ಕೀರ್ತನೆ 146:4; ಪ್ರಸಂಗಿ 9:5) ಫಿಡೇಲ್ಯ ತನ್ನ ಧಾರ್ಮಿಕ ಮೂರ್ತಿಗಳನ್ನೆಲ್ಲ ತ್ಯಜಿಸಿ, ಚರ್ಚನ್ನು ಬಿಟ್ಟು, ಬೈಬಲಿನ ಅಧ್ಯಯನಮಾಡತೊಡಗಿದಳು. (1 ಯೋಹಾನ 5:21) ಕಳೆದ ಹತ್ತು ವರ್ಷಗಳಿಂದ ಆಕೆ ಶಾಸ್ತ್ರೀಯ ಸತ್ಯವನ್ನು ಇತರರಿಗೆ ಬೋಧಿಸುವುದರಲ್ಲಿ ಸಂತೋಷವನ್ನು ಅನುಭವಿಸಿದ್ದಾಳೆ.

ಕಾಟ್ಮಂಡುವಿನ ತಾರಾ, ಕೇವಲ ಕೆಲವೇ ಹಿಂದೂ ದೇವಸ್ಥಾನಗಳಿದ್ದ ದೇಶಕ್ಕೆ ಸ್ಥಳಾಂತರಿಸಿದಳು. ಆದಕಾರಣ ತನ್ನ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸಲಿಕ್ಕಾಗಿ ಆಕೆ ಒಂದು ಮೆಥೊಡಿಸ್ಟ್‌ ಚರ್ಚಿಗೆ ಹೋದಳು. ಆದರೆ ಮಾನವ ಕಷ್ಟಾನುಭವದ ಕುರಿತಾದ ಆಕೆಯ ಪ್ರಶ್ನೆಗೆ ಅಲ್ಲಿ ಉತ್ತರ ದೊರೆಯಲಿಲ್ಲ. ಆ ಬಳಿಕ ಯೆಹೋವನ ಸಾಕ್ಷಿಗಳು ಆಕೆಯನ್ನು ಸಂಪರ್ಕಿಸಿ, ಬೈಬಲ್‌ ಅಧ್ಯಯನವನ್ನು ಮಾಡುವಂತೆ ಆಕೆಯನ್ನು ಕೇಳಿಕೊಂಡರು. ತಾರಾ ಹೇಳುವುದು: “ಪ್ರೀತಿಯ ದೇವರು ಲೋಕದ ಕಷ್ಟಾನುಭವಗಳಿಗೆ ಕಾರಣನಾಗಿರಲು ಸಾಧ್ಯವಿಲ್ಲವೆಂದು ಆಗ ನಾನು ತಿಳಿದುಕೊಂಡೆ . . . ಶಾಂತಿ ಮತ್ತು ಸಾಮರಸ್ಯವಿರುವ ನೂತನ ಲೋಕದ ಪ್ರತೀಕ್ಷೆಯಲ್ಲಿ ನಾನು ಸಂತೋಷಿಸಿದೆ.” (ಪ್ರಕಟನೆ 21:​3, 4) ತಾರಾಳು ತನ್ನ ಹಿಂದೂ ಮೂರ್ತಿಗಳನ್ನು ತ್ಯಜಿಸಿ, ತನ್ನ ಸ್ವದೇಶದ ಧಾರ್ಮಿಕ ಪದ್ಧತಿಗಳನ್ನು ತೊರೆದು, ಯೆಹೋವನ ಸಾಕ್ಷಿಯಾಗಿ ಇತರರ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸಲು ಸಹಾಯಮಾಡುವುದರಲ್ಲಿ ನಿಜ ಸಂತೋಷವನ್ನು ಕಂಡುಕೊಂಡಳು.

ಯೆಹೋವನ ಸಾಕ್ಷಿಗಳು ಬೌದ್ಧ ಮತೀಯನಾದ ಪಾನ್ಯನನ್ನು ಬ್ಯಾಂಕಾಕ್‌ನಲ್ಲಿ ಪ್ರಥಮವಾಗಿ ಭೇಟಿಮಾಡಿದಾಗ, ಅವನು ಭವಿಷ್ಯ ನುಡಿಯುವವನಾಗಿದ್ದನು. ಆದುದರಿಂದ ಬೈಬಲಿನ ಭವಿಷ್ಯನುಡಿಗಳು ಅವನನ್ನು ಆಕರ್ಷಿಸಿದವು. ಪಾನ್ಯ ಹೇಳಿದ್ದು: “ಸೃಷ್ಟಿಕರ್ತನ ಆದಿ ಉದ್ದೇಶಕ್ಕಿಂತ ಈಗಿನ ಪರಿಸ್ಥಿತಿಗಳು ಏಕೆ ಭಿನ್ನವಾಗಿವೆ ಮತ್ತು ದೇವರನ್ನೂ ಆತನ ಪರಮಾಧಿಕಾರವನ್ನೂ ತಳ್ಳಿಹಾಕಿರುವವರು ಮಾಡಿರುವ ಹಾನಿಯನ್ನು ಸರಿಪಡಿಸಲು ಆತನು ಹೇಗೆ ಏರ್ಪಾಡನ್ನು ಮಾಡಿದ್ದಾನೆ ಎಂಬುದನ್ನು ನಾನು ಕಲಿತಾಗ, ನನ್ನ ಕಣ್ಣುಗಳನ್ನು ಕುರುಡುಮಾಡಿದ್ದ ಪೊರೆಯು ತೆಗೆದುಹಾಕಲ್ಪಟ್ಟಂತೆ ನನಗನಿಸಿತು. ಬೈಬಲಿನ ಸಂದೇಶದ ಪ್ರತಿಯೊಂದು ಭಾಗವೂ ಒಂದಕ್ಕೊಂದು ಹೊಂದಿಕೆಯಾಗಿತ್ತು. ನಾನು ಯೆಹೋವನನ್ನು ಒಬ್ಬ ವ್ಯಕ್ತಿಯೋಪಾದಿ ಪ್ರೀತಿಸತೊಡಗಿದೆ. ಯಾವುದು ಸರಿಯೆಂದು ನನಗೆ ತಿಳಿದಿತ್ತೊ ಅದನ್ನು ಅನುಸರಿಸಲು ಇದು ಪ್ರಚೋದನೆಯನ್ನು ನೀಡಿತು. ಮಾನವ ವಿವೇಕ ಮತ್ತು ದೈವಿಕ ವಿವೇಕದ ಮಧ್ಯೆ ಇರುವ ವ್ಯತ್ಯಾಸವನ್ನು ನೋಡುವಂತೆ ಇತರರಿಗೆ ಸಹಾಯಮಾಡಲು ನಾನು ಹಾತೊರೆದೆ. ನಿಜ ವಿವೇಕವು ನನ್ನ ಜೀವನವನ್ನು ನಿಜವಾಗಿಯೂ ಬದಲಾಯಿಸಿದೆ.”

ಸಮಯ ಕಳೆದಂತೆ, ವರ್ಜಿಲ್‌ಗೆ ತನ್ನ ಧಾರ್ಮಿಕ ನಂಬಿಕೆಗಳ ಮೇಲೆ ತುಂಬ ಅನುಮಾನ ಹುಟ್ಟಿತು. ಕರಿಯರಿಗೆ ಸಹಾಯಮಾಡಲು ದಾರಿತೋರಿಸುವಂತೆ ದೇವರಿಗೆ ಪ್ರಾರ್ಥಿಸುವ ಬದಲು ಮತ್ತು ಬಿಳಿಯರ ಮೇಲೆ ದ್ವೇಷ ಹುಟ್ಟಿಸುವ ವರ್ಣಭೇದವಾದಿಗಳ ಸಂಸ್ಥೆಯೆಂದು ತಾನು ಕಂಡುಕೊಂಡ ಸಂಸ್ಥೆಯ ಪರವಾಗಿ ಪ್ರಾರ್ಥಿಸುವ ಬದಲು, ಅವನು ಸತ್ಯಕ್ಕಾಗಿ, ಅಂದರೆ ಅದು ಏನಾಗಿದ್ದರೂ, ಎಲ್ಲಿದ್ದರೂ ಆ ಸತ್ಯಕ್ಕಾಗಿ ಪ್ರಾರ್ಥಿಸಿದನು. ವರ್ಜಿಲ್‌ ನೆನಪಿಸಿಕೊಳ್ಳುವುದು: “ದೇವರಿಗೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದ ಬಳಿಕ ಮರುದಿನ ನಾನು ಎಚ್ಚೆತ್ತಾಗ, ಮನೆಯೊಳಗೆ ಒಂದು ಕಾವಲಿನಬುರುಜು ಪತ್ರಿಕೆ ನನಗೆ ಸಿಕ್ಕಿತು. . . . ಅದನ್ನು ಯಾರೋ ಬಾಗಿಲಡಿಯಿಂದ ಒಳಗೆ ಸರಿಸಿದ್ದಿರಬೇಕು.” ಬೇಗನೆ ಯೆಹೋವನ ಸಾಕ್ಷಿಗಳೊಂದಿಗೆ ಅವನು ಬೈಬಲನ್ನು ತೀವ್ರಾಸಕ್ತಿಯಿಂದ ಅಧ್ಯಯನ ಮಾಡತೊಡಗಿದನು. ಅವನು ಮುಂದುವರಿಸುವುದು: “ನನ್ನ ಜೀವಮಾನದಲ್ಲಿ ನನಗೆ ಪ್ರಥಮ ಬಾರಿ ಸಂತೃಪ್ತ ಅನಿಸಿಕೆಯಾಯಿತು . . . ಆಶಾಕಿರಣವೊಂದು ನನ್ನೊಳಗೆ ಮೂಡಿಬಂತು.” ವರ್ಜಿಲ್‌ ಬೇಗನೆ ದೇವರ ವಾಕ್ಯವಾದ ಬೈಬಲಿನಲ್ಲಿ ಕೊಡಲ್ಪಟ್ಟಿರುವ ಏಕಮಾತ್ರ ನಿಜ ನಿರೀಕ್ಷೆಯನ್ನು ನೀಡುವ ಜನರೊಂದಿಗೆ ಜೊತೆಗೂಡಿದನು.

ತನ್ನ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಲ್ಯಾಟಿನ್‌ ಅಮೆರಿಕದ ಚಾರೊ ಪಡುತ್ತಿದ್ದ ಕಷ್ಟವನ್ನು, ಗ್ಲ್ಯಾಡಿಸ್‌ ಎಂಬ ಹೆಸರಿನ ಸಾಕ್ಷಿಯೊಬ್ಬಳು ನೋಡಿ, ಆಕೆಯನ್ನು ಮಾರ್ಕೆಟಿಗೆ ಜೊತೆಯಲ್ಲಿ ಕರೆದೊಯ್ಯಲು ಸಹಾಯಮಾಡತೊಡಗಿದ್ದನ್ನು ನೋಡಿದಾಗ ಚಾರೊ ತುಂಬ ಪ್ರಭಾವಿತಳಾದಳು. ಸಕಾಲದಲ್ಲಿ, ಉಚಿತ ಬೈಬಲ್‌ ಅಧ್ಯಯನವನ್ನು ಮಾಡುವಂತೆ ಗ್ಲ್ಯಾಡಿಸ್‌ ಕೇಳಿಕೊಂಡಾಗ, ಚಾರೊ ಅದಕ್ಕೆ ಒಪ್ಪಿದಳು. ಒಳ್ಳೆಯವರೆಲ್ಲ ಸ್ವರ್ಗಕ್ಕೆ ಹೋಗುವುದಿಲ್ಲವಾದರೂ, ಯೆಹೋವನು ಭೂಮಿಯ ಮೇಲೆ ಜನರಿಗೆ ನಿತ್ಯಜೀವವನ್ನು ಕೊಟ್ಟು ಅವರನ್ನು ಆಶೀರ್ವದಿಸುವನು ಎಂಬುದನ್ನು ಚಾರೊ ತನ್ನ ಸ್ವಂತ ಬೈಬಲಿನಿಂದ ಕಲಿತಾಗ ಅವಳಿಗೆ ಅತ್ಯಾಶ್ಚರ್ಯವಾಯಿತು. (ಕೀರ್ತನೆ 37:​11, 29) ಈಗ ಕಳೆದ 15 ವರುಷಗಳಿಂದ ಸ್ವತಃ ಚಾರೊ ಈ ನಿರೀಕ್ಷೆಯನ್ನು ಇತರರಿಗೆ ಹಂಚುವುದರಲ್ಲಿ ಪಾಲಿಗಳಾಗುತ್ತಿದ್ದಾಳೆ.

ಯಥಾರ್ಥವಂತರಾದ ಜನರು ಒಬ್ಬನೇ ಸತ್ಯ ದೇವರಾದ ಯೆಹೋವನ ಆರಾಧನೆಯಲ್ಲಿ ಐಕ್ಯರಾಗಿದ್ದು, ಇಡೀ ಭೂಮಿಯನ್ನು ತುಂಬಿಕೊಳ್ಳುವುದನ್ನು ತುಸು ಊಹಿಸಿಕೊಳ್ಳಿ! ಇದು ಹಗಲುಗನಸಲ್ಲ. ಯೆಹೋವನೇ ವಾಗ್ದಾನ ಮಾಡಿರುವ ವಿಷಯವಾಗಿದೆ. ತನ್ನ ಪ್ರವಾದಿಯಾಗಿದ್ದ ಚೆಫನ್ಯನ ಮೂಲಕ ದೇವರು ಹೇಳಿದ್ದು: “ದೀನದರಿದ್ರಜನವನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು. . . . ಸುಳ್ಳಾಡರು; ಅವರ ಬಾಯಲ್ಲಿ ಮೋಸದ ನಾಲಿಗೆಯು ಇರದು; . . . ಅವರನ್ನು ಯಾರೂ ಹೆದರಿಸರು.” (ಚೆಫನ್ಯ 3:12, 13) ಈ ವಾಗ್ದಾನವು ನಿಮಗೆ ಹಿಡಿಸುವಲ್ಲಿ, ಬೈಬಲಿನ ಈ ಸಲಹೆಯನ್ನು ಮನಸ್ಸಿಗೆ ತೆಗೆದುಕೊಳ್ಳಿ: “ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.”​—ಚೆಫನ್ಯ 2:3.