ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧಿವೇಶನಗಳು—ನಮ್ಮ ಸಹೋದರತ್ವದ ಸಂತೋಷಕರವಾದ ಸ್ಥಿರೀಕರಣ

ಅಧಿವೇಶನಗಳು—ನಮ್ಮ ಸಹೋದರತ್ವದ ಸಂತೋಷಕರವಾದ ಸ್ಥಿರೀಕರಣ

ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲಿರಿ

ಅಧಿವೇಶನಗಳು​—ನಮ್ಮ ಸಹೋದರತ್ವದ ಸಂತೋಷಕರವಾದ ಸ್ಥಿರೀಕರಣ

ಐವತ್ತು ವರ್ಷ ಪ್ರಾಯದ ಜೋಸೆಫ್‌ ಎಫ್‌. ರದರ್‌ಫರ್ಡ್‌, ಸುಮಾರು ಒಂದು ವರ್ಷಕಾಲವನ್ನು ಅನ್ಯಾಯವಾಗಿ ಸೆರೆಮನೆಯಲ್ಲಿ ಕಳೆದ ನಂತರ ಅನಾರೋಗ್ಯದಿಂದಿರುವುದಾದರೂ, ಸಂತೋಷದಿಂದ ಹೋಟೆಲಿನಲ್ಲಿ ಸಾಮಾನನ್ನು ಎತ್ತಿ ಒಯ್ಯುವವರಂತೆ ಕೆಲಸಮಾಡುತ್ತಿದ್ದಾರೆ. ಅವರು ಚುರುಕಾಗಿ ಜೊತೆ ಕ್ರೈಸ್ತರ ಸೂಟ್‌ಕೇಸುಗಳನ್ನು ಅವರವರ ಹೋಟೆಲ್‌ ಕೋಣೆಗಳಿಗೆ ಒಯ್ಯಲು ಸಹಾಯಮಾಡುತ್ತಿದ್ದಾರೆ. ಅವರ ಹಿಂದಿನ ಜೊತೆ ಸೆರೆವಾಸಿಗಳಲ್ಲಿ ಇಬ್ಬರು, ಅಂದರೆ ಜೊತೆ ಬೈಬಲ್‌ ವಿದ್ಯಾರ್ಥಿಗಳು, ವಾಸಸ್ಥಳವನ್ನು ಪಡೆದುಕೊಳ್ಳಲು ಬಯಸುತ್ತಿದ್ದ ಜನಸಮೂಹಕ್ಕೆ ಕೋಣೆಗಳ ನೇಮಕಪತ್ರವನ್ನು ಕೊಡುತ್ತಿದ್ದಾರೆ. ಮಧ್ಯರಾತ್ರಿಯ ನಂತರವೂ ಕೆಲಸವು ಭರದಿಂದ ನಡೆಯುತ್ತಿದೆ. ಅವರೆಲ್ಲರನ್ನೂ ಉದ್ರೇಕಿತ ಮನೋಭಾವವು ಅಂಟುರೋಗದಂತೆ ಆವರಿಸಿದೆ. ಇದು ಯಾವ ಸಂದರ್ಭವಾಗಿದೆ?

ಇಸವಿ 1919. ಬೈಬಲ್‌ ವಿದ್ಯಾರ್ಥಿಗಳು (ಇಂದು ಯೆಹೋವನ ಸಾಕ್ಷಿಗಳೆಂದು ಕರೆಯಲ್ಪಡುತ್ತಾರೆ) ಭಯಂಕರವಾದ ಹಿಂಸೆಯ ಅವಧಿಯಿಂದ ಹೊರಬಂದು ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮನ್ನು ಪುನಃ ಬಲಪಡಿಸಿಕೊಳ್ಳಲು ಅವರು ಅಮೆರಿಕದ ಒಹಾಯೊ ರಾಜ್ಯದ ಸೀಡರ್‌ ಪಾಯಿಂಟ್‌ನಲ್ಲಿ, 1919ರ ಸೆಪ್ಟೆಂಬರ್‌ 1ರಿಂದ 8ರ ವರೆಗೆ ಒಂದು ಅಧಿವೇಶನವನ್ನು ನಡೆಸುತ್ತಿದ್ದಾರೆ. ಆ ಅಧಿವೇಶನದ ಕೊನೆಯ ದಿನದಂದು, ಅಧಿವೇಶನಕ್ಕೆ ಹಾಜರಿದ್ದ ಪ್ರತಿಯೊಬ್ಬನಿಗೆ, “ನೀವು ರಾಜರ ರಾಜನೂ ಕರ್ತರ ಕರ್ತನೂ ಆದಾತನ ರಾಯಭಾರಿಯಾಗಿದ್ದು, ನಮ್ಮ ಕರ್ತನ ಮಹಿಮಾಭರಿತ ರಾಜ್ಯವನ್ನು . . . ಜನರಿಗೆ ಪ್ರಕಟಿಸುವವರಾಗಿದ್ದೀರಿ” ಎಂಬ ಮಾತುಗಳಿಂದ ಸಹೋದರ ರದರ್‌ಫರ್ಡ್‌ ಪ್ರೋತ್ಸಾಹಿಸಿದಾಗ, ಉದ್ರೇಕಿತರಾದ 7,000 ಮಂದಿ ಅವರು ಹೇಳುವುದನ್ನು ಕಿವಿಗೊಟ್ಟು ಕೇಳುತ್ತಿದ್ದಾರೆ.

ಯೆಹೋವನ ಜನರ ಅಧಿವೇಶನಗಳು ಪುರಾತನ ಇಸ್ರಾಯೇಲ್ಯರ ಕಾಲದಿಂದಲೂ ನಡೆದು ಬಂದಿವೆ. (ವಿಮೋಚನಕಾಂಡ 23:​14-17; ಲೂಕ 2:​41-43) ಇಂತಹ ಒಟ್ಟುಗೂಡುವಿಕೆಗಳು ಹರ್ಷಕರ ಸಂದರ್ಭಗಳಾಗಿದ್ದು, ನೆರೆದು ಬಂದಿದ್ದವರೆಲ್ಲರೂ ದೇವರ ವಾಕ್ಯದ ಮೇಲೆ ತಮ್ಮ ಮನಸ್ಸುಗಳನ್ನು ಕೇಂದ್ರೀಕರಿಸುವಂತೆ ಸಹಾಯಮಾಡುತ್ತಿದ್ದವು. ಅದೇ ರೀತಿಯಲ್ಲಿ ಆಧುನಿಕ ಸಮಯಗಳ ಯೆಹೋವನ ಸಾಕ್ಷಿಗಳ ಅಧಿವೇಶನಗಳು, ಆತ್ಮಿಕ ಅಭಿರುಚಿಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ. ಇಂತಹ ಹರ್ಷಕರ ಒಟ್ಟುಗೂಡುವಿಕೆಗಳು ಯಥಾರ್ಥವಂತರಾದ ಪ್ರೇಕ್ಷಕರಿಗೆ, ಸಾಕ್ಷಿಗಳು ಕ್ರೈಸ್ತ ಸಹೋದರತ್ವದ ಬಲವಾದ ಬಂಧಗಳಿಂದ ಐಕ್ಯಗೊಂಡಿದ್ದಾರೆಂಬುದಕ್ಕೆ ಅಲ್ಲಗಳೆಯಲಾಗದ ಪುರಾವೆಯನ್ನು ನೀಡುತ್ತವೆ.

ಹಾಜರಾಗಲು ಮಾಡಲ್ಪಡುವ ಪ್ರಯತ್ನಗಳು

ತಮ್ಮ ಅಧಿವೇಶನಗಳು ಆತ್ಮಿಕ ಚೈತನ್ಯ ಮತ್ತು ದೇವರ ವಾಕ್ಯದ ಶಿಕ್ಷಣದ ಸಮಯಾವಧಿಗಳಾಗಿವೆ ಎಂಬುದನ್ನು ಆಧುನಿಕ ದಿನದ ಕ್ರೈಸ್ತರು ಗ್ರಹಿಸುತ್ತಾರೆ. ಈ ದೊಡ್ಡ ಕೂಟಗಳು ತಮಗೆ “ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲುವಂತೆ” ಸಹಾಯಮಾಡಲು ಅನಿವಾರ್ಯವಾದ ಮಾಧ್ಯಮಗಳಾಗಿವೆಯೆಂದು ಅವರು ಪರಿಗಣಿಸುತ್ತಾರೆ. (ಕೊಲೊಸ್ಸೆ 4:​12, NW) ಹೀಗೆ ಸಾಕ್ಷಿಗಳು ಈ ಒಟ್ಟುಗೂಡುವಿಕೆಗಳನ್ನು ಪೂರ್ಣ ಹೃದಯದಿಂದ ಬೆಂಬಲಿಸುತ್ತ, ಅವುಗಳಲ್ಲಿ ನೆರೆದು ಬರಲು ಮಹಾ ಪ್ರಯತ್ನಗಳನ್ನು ಮಾಡುತ್ತಾರೆ.

ಅವರಲ್ಲಿ ಕೆಲವರಿಗೆ ಹಾಗೆ ಹಾಜರಾಗುವುದು ನಂಬಿಕೆಯನ್ನಿಡುವ ಮತ್ತು ಪರ್ವತಸದೃಶ ತಡೆಗಳನ್ನು ಜಯಿಸುವ ಅರ್ಥದಲ್ಲಿದೆ. ಉದಾಹರಣೆಗೆ, ಆಸ್ಟ್ರಿಯದ ಒಬ್ಬ ವೃದ್ಧ ಸಾಕ್ಷಿಯನ್ನು ತೆಗೆದುಕೊಳ್ಳಿರಿ. ಸಿಹಿಮೂತ್ರ ರೋಗಪೀಡಿತಳಾಗಿ ಪ್ರತಿದಿನ ಇನ್ಸುಲಿನ್‌ ಇಂಜೆಕ್ಷನ್‌ಗಳ ಅಗತ್ಯವಿರುವ ಸ್ಥಿತಿಯಲ್ಲಿದ್ದರೂ, ತನ್ನ ದೇಶದಲ್ಲಿ ನಡೆದ ಜಿಲ್ಲಾ ಅಧಿವೇಶನಕ್ಕೆ ಎಲ್ಲ ದಿನವೂ ಹಾಜರಿರುವಂತೆ ಆಕೆ ನೋಡಿಕೊಂಡಳು. ಭಾರತದಲ್ಲಿ, ಕಡುಬಡತನದಲ್ಲಿ ಜೀವಿಸುತ್ತಿದ್ದ ಸಾಕ್ಷಿಗಳ ಒಂದು ದೊಡ್ಡ ಕುಟುಂಬಕ್ಕೆ, ಅಧಿವೇಶನಕ್ಕೆ ಹಾಜರಾಗುವುದು ಅಸಾಧ್ಯವೆಂಬಂತೆ ತೋರಿತು. ಆಗ ಕುಟುಂಬದ ಒಬ್ಬ ಸದಸ್ಯೆಯು ಅವರ ಸಹಾಯಕ್ಕೆ ಬಂದಳು. ಆಕೆ ಹೇಳಿದ್ದು: “ಈ ಅಧಿವೇಶನಕ್ಕೆ ತಪ್ಪಿಸಿಕೊಳ್ಳಲು ಬಯಸದೆ ಇದ್ದುದರಿಂದ, ನಾನು ಪ್ರಯಾಣದ ಹಣಕ್ಕಾಗಿ ನನ್ನ ಕಿವಿಯೋಲೆಯನ್ನು ಮಾರಿದೆ. ಅಲ್ಲಿ ಮಾಡಿದ ಸಹವಾಸ ಮತ್ತು ಕೇಳಿಸಿಕೊಂಡ ಅನುಭವಗಳು ನಮ್ಮ ನಂಬಿಕೆಯನ್ನು ಬಲಪಡಿಸಿದ್ದರಿಂದ, ನಾನು ಮಾಡಿದ ತ್ಯಾಗವು ಸಾರ್ಥಕವಾಯಿತು.”

ಪ್ಯಾಪುವ ನ್ಯೂಗಿನೀಯಲ್ಲಿ, ಅಸ್ನಾತರಾಗಿದ್ದ ಆಸಕ್ತರ ಒಂದು ಗುಂಪು ರಾಜಧಾನಿಯಲ್ಲಿ ನಡೆಯಲಿದ್ದ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಬೇಕೆಂದು ನಿಶ್ಚಯಿಸಿತು. ಅವರು ತಮ್ಮ ಹಳ್ಳಿಯಲ್ಲಿದ್ದ ಸಾರ್ವಜನಿಕ ಮೋಟಾರು ವಾಹನದ ಒಡೆಯನ ಬಳಿಗೆ ಹೋಗಿ, ಅಧಿವೇಶಕ್ಕೆ ಹೋಗಲು ಎಷ್ಟು ಹಣ ತಗಲುತ್ತದೆಂದು ಕೇಳಿದರು. ಅವನು ಕೇಳಿದಷ್ಟು ಹಣವನ್ನು ಕೊಡಲು ಅವರಿಗೆ ಅಸಾಧ್ಯವಾಗಿದ್ದರಿಂದ, ಅವರು ಆ ಮನುಷ್ಯನ ಮನೆಯ ಅಡುಗೆಮನೆಯನ್ನು ನವೀಕರಿಸುವ ಕೆಲಸವನ್ನು ಮಾಡುವ ಏರ್ಪಾಡುಗಳನ್ನು ಮಾಡಿದರು. ಹೀಗೆ ಅವರು ಜಿಲ್ಲಾ ಅಧಿವೇಶನಕ್ಕೆ ಹೋಗಿ ಇಡೀ ಕಾರ್ಯಕ್ರಮಕ್ಕೆ ಹಾಜರಾಗುವುದರಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಯಿತು.

ಅಧಿವೇಶನಕ್ಕೆ ಹಾಜರಾಗುವ ಉದ್ದೇಶವಿರುವ ಯೆಹೋವನ ಸಾಕ್ಷಿಗಳಿಗೆ ದೂರವು ದಾಟಲಾಗದ ಸಮಸ್ಯೆಯಾಗಿರುವುದಿಲ್ಲ. 1978ರಲ್ಲಿ, ಫ್ರಾನ್ಸ್‌ ದೇಶದ ಲೀಅಲ್‌ನಲ್ಲಿ ನಡೆದ ಅಧಿವೇಶನಕ್ಕೆ ಹಾಜರಾಗಲು, ಒಬ್ಬ ಯುವ ಪ್ರತಿನಿಧಿಯು ಆರು ದಿನಗಳ ವರೆಗೆ ಪೋಲೆಂಡ್‌ನಿಂದ 1,200 ಕಿಲೊಮೀಟರ್‌ಗಳಷ್ಟು ದೂರ ಸೈಕಲ್‌ ಪ್ರಯಾಣವನ್ನು ಮಾಡಿದನು. 1997ರ ಬೇಸಗೆಯಲ್ಲಿ, ಮಂಗೋಲಿಯದ ಇಬ್ಬರು ಸಾಕ್ಷಿಗಳು, ರಷ್ಯಾದ ಇರ್ಕೂಟ್‌ಸ್ಕ್‌ನಲ್ಲಿ ನಡೆದ ಒಂದು ಕ್ರೈಸ್ತ ಒಟ್ಟುಗೂಡುವಿಕೆಗೆ ಹಾಜರಾಗಲಿಕ್ಕಾಗಿ 1,200 ಕಿಲೊಮೀಟರ್‌ಗಳಷ್ಟು ದೂರ ಪ್ರಯಾಣಿಸಿದರು.

ನಿಜ ಸಹೋದರತ್ವ ಕಾರ್ಯದಲ್ಲಿ

ಸಾಕ್ಷಿಗಳು ತಮ್ಮ ಅಧಿವೇಶನಗಳಲ್ಲಿ ತೋರಿಸುವ ಐಕ್ಯಭಾವ ಮತ್ತು ಸಹೋದರತ್ವವು, ನ್ಯಾಯದೃಷ್ಟಿಯುಳ್ಳ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಂಡುಬರುತ್ತದೆ. ಅಧಿವೇಶನಕಾರರಲ್ಲಿ ಪಕ್ಷಪಾತವಿಲ್ಲ ಮತ್ತು ಪ್ರಥಮ ಬಾರಿ ಭೇಟಿಯಾಗುವವರ ಮಧ್ಯೆಯೂ ನಿಜವಾದ ಸ್ನೇಹಭಾವವಿದೆ ಎಂಬುದನ್ನು ನೋಡಿರುವ ಅನೇಕರು ಅದರಿಂದ ಪ್ರಭಾವಿತರಾಗಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ನಡೆದ ಅಧಿವೇಶನವೊಂದರಲ್ಲಿ, ಅಧಿವೇಶನದ ಪ್ರತಿನಿಧಿಗಳೊಂದಿಗೆ ಒಂದು ವಾರ ಕಳೆದ ಒಬ್ಬ ಟೂರ್‌ ಗೈಡ್‌, ಅವರ ಸಹವಾಸದಲ್ಲಿ ಆನಂದಿಸಲಿಕ್ಕಾಗಿ ಇನ್ನೂ ಸ್ವಲ್ಪ ಸಮಯವನ್ನು ಕಳೆಯಬೇಕೆಂದು ಇಷ್ಟಪಟ್ಟನು. ಅವರ ಪ್ರೀತಿ ಮತ್ತು ಐಕ್ಯದಿಂದ ಪ್ರಭಾವಿತನಾದ ಅವನಿಗೆ, ಅವರಲ್ಲಿ ಹೆಚ್ಚಿನವರು ಅಪರಿಚಿತರಾಗಿದ್ದರೂ ಅವರು ಪರಸ್ಪರ ಚೆನ್ನಾಗಿ ಹೊಂದಿಕೊಂಡುಹೋಗುತ್ತಿರುವುದನ್ನು ನೋಡಿ ನಂಬಲಾಗಲಿಲ್ಲ. ಅವನು ಅವರನ್ನು ಬಿಟ್ಟುಹೋಗುವ ಸಮಯ ಬಂದಾಗ, ಗಟ್ಟಿಯಾದ ಧ್ವನಿಯಿಂದ ಅವರೊಂದಿಗೆ ಮಾತಾಡಿದನು. ಅವನು ಅವರನ್ನು “ಸಹೋದರ ಸಹೋದರಿಯರೇ” ಎಂದು ಸಂಬೋಧಿಸಿ, ಅವರಿಗೆ ಉಪಕಾರ ಹೇಳತೊಡಗಿದನು. ಆದರೆ ಭಾವಾವೇಶದಿಂದ ಕೊರಳು ಬಿಗಿದವನಾಗಿ ಅವನು ಅತ್ತುಬಿಟ್ಟನು.

ಶ್ರೀ ಲಂಕವು ತನ್ನ ಪ್ರಥಮ ತ್ರಿಭಾಷೀಯ ಜಿಲ್ಲಾ ಅಧಿವೇಶನವನ್ನು 1997ರಲ್ಲಿ ಒಂದು ದೊಡ್ಡ ಕ್ರೀಡಾಂಗಣದಲ್ಲಿ ನಡೆಸಿತು. ಇಡೀ ಕಾರ್ಯಕ್ರಮವನ್ನು ಏಕಕಾಲಿಕವಾಗಿ ಇಂಗ್ಲಿಷ್‌, ಸಿಂಹಳೀಯ ಭಾಷೆ ಮತ್ತು ತಮಿಳು ಭಾಷೆಯಲ್ಲಿ ನೀಡಲಾಗಿತ್ತು. ಹೆಚ್ಚುತ್ತಿರುವ ಕುಲಭೇದ ಘರ್ಷಣೆಗಳಿರುವ ಲೋಕದಲ್ಲಿ ಇಂತಹ ಒಟ್ಟುಗೂಡುವಿಕೆಯು ಗಮನಿಸಲ್ಪಡದೆ ಹೋಗಲಿಲ್ಲ. ಒಬ್ಬ ಪೊಲೀಸನು ಸಹೋದರನನ್ನು ಹೀಗೆ ಪ್ರಶ್ನಿಸಿದನು: “ಈ ಅಧಿವೇಶನವನ್ನು ಯಾರು ನಡೆಸುತ್ತಿದ್ದಾರೆ, ಸಿಂಹಳೀಯರೊ, ತಮಿಳರೊ, ಇಂಗ್ಲಿಷರೊ?” ಆಗ ಸಹೋದರನು, “ಇದನ್ನು ಯಾವುದೇ ಒಂದು ಗುಂಪು ನಡೆಸುತ್ತಿಲ್ಲ; ನಾವೆಲ್ಲ ಕೂಡಿ ನಡೆಸುತ್ತಿದ್ದೇವೆ” ಎಂದು ಉತ್ತರ ಕೊಟ್ಟಾಗ, ಆ ಪೊಲೀಸನು ಅದನ್ನು ನಂಬಲಿಲ್ಲ. ಈ ಮೂರು ಭಾಷಾಗುಂಪುಗಳು ಅಂತಿಮ ಪ್ರಾರ್ಥನೆಯನ್ನು ಮಾಡಿ ಐಕ್ಯದಿಂದ ಹೇಳಿದ “ಆಮೆನ್‌” ಆ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿದಾಗ, ಅಧಿವೇಶನಕಾರರು ಒಟ್ಟಿಗೆ ಚಪ್ಪಾಳೆ ತಟ್ಟಿದರು. ಆಗ ಆ ಸಭಿಕರ ಮಧ್ಯೆ ಕಣ್ಣೀರು ಸುರಿಸದವರೇ ಇರಲಿಲ್ಲ. ಹೌದು, ಅಧಿವೇಶನಗಳು ನಮ್ಮ ಸಹೋದರತ್ವದ ಹರ್ಷಕರವಾದ ಸ್ಥಿರೀಕರಣವೆಂಬುದು ಖಂಡಿತ.​—ಕೀರ್ತನೆ 133:1. *

[ಪಾದಟಿಪ್ಪಣಿ]