ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜವಾದ ಮೌಲ್ಯವು ಯಾವುದಕ್ಕಿದೆ?

ನಿಜವಾದ ಮೌಲ್ಯವು ಯಾವುದಕ್ಕಿದೆ?

ನಿಜವಾದ ಮೌಲ್ಯವು ಯಾವುದಕ್ಕಿದೆ?

ನಿಜವಾದ ಮೌಲ್ಯವಿರುವ ಯಾವುದೇ ವಿಷಯವನ್ನು ಹೊಂದಿರುವುದು ಉಲ್ಲಾಸವನ್ನುಂಟುಮಾಡಬಹುದು. ಆದರೆ ಅದು ಏನಾಗಿರಬಹುದು? ದೊಡ್ಡ ಮೊತ್ತದ ಹಣವೋ? ದುಬಾರಿಯಾದ ಅಥವಾ ಅಸಾಧಾರಣವಾಗಿ ಆಕರ್ಷಕವಾಗಿರುವ ಒಡವೆಗಳೋ? ಕೀರ್ತಿ ಮತ್ತು ಪ್ರತಿಷ್ಠೆಯೋ? ಅನೇಕರು ಇವುಗಳನ್ನು ಅತ್ಯಮೂಲ್ಯವುಳ್ಳವುಗಳಾಗಿ ಪರಿಗಣಿಸುತ್ತಾರೆ. ಇವುಗಳು ಜೀವಾಧಾರವನ್ನು ಒದಗಿಸಬಹುದು, ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿ ಮಾಡಬಹುದು, ಅಥವಾ ಇತರರು ನಮ್ಮನ್ನು ಗಮನಿಸಬೇಕು ಮತ್ತು ಏನನ್ನೊ ಸಾಧಿಸಬೇಕು ಎಂಬ ಆಂತರಿಕ ಅಗತ್ಯವನ್ನು ತೃಪ್ತಿಪಡಿಸಬಹುದು. ಇವುಗಳೆಲ್ಲವೂ ಭವಿಷ್ಯಕ್ಕಾಗಿರುವ ನಮ್ಮ ಗುರಿಗಳನ್ನು ಮತ್ತು ಹೆಬ್ಬಯಕೆಗಳನ್ನು ಪೂರೈಸುವವು ಎಂದು ಭಾವಿಸುತ್ತಾ ನಾವು ಅವುಗಳನ್ನು ಪಡೆದುಕೊಳ್ಳಲು ಪ್ರಯಾಸಪಡುತ್ತಿದ್ದೇವೋ?

ಜನರು ಸಾಮಾನ್ಯವಾಗಿ, ಯಾವುದೇ ವಿಷಯವು ತಮ್ಮ ಅಗತ್ಯಗಳನ್ನು ಅಥವಾ ತಮ್ಮ ವೈಯಕ್ತಿಕ ಆಶೆಗಳನ್ನು ಹೇಗೆ ಪೂರೈಸುತ್ತದೆ ಎಂಬ ಆಧಾರದ ಮೇಲೆ ಅವುಗಳಿಗೆ ಮೌಲ್ಯವನ್ನು ಕಟ್ಟುತ್ತಾರೆ. ಸುಕ್ಷೇಮದ ಅನಿಸಿಕೆಯನ್ನು ಮತ್ತು ಸುಭದ್ರ ಭವಿಷ್ಯದ ನಿರೀಕ್ಷೆಯನ್ನು ಕೊಡುವಂಥ ವಿಷಯಗಳನ್ನು ನಾವು ಮಾನ್ಯಮಾಡುತ್ತೇವೆ. ತತ್‌ಕ್ಷಣದ ಉಪಶಮನವನ್ನು, ಸಾಂತ್ವನವನ್ನು, ಅಥವಾ ಮನ್ನಣೆಯನ್ನು ತರುವಂಥ ವಿಷಯಗಳನ್ನು ನಾವು ಬೆಲೆಯುಳ್ಳದ್ದೆಂದು ಎಣಿಸುತ್ತೇವೆ. ಆದರೂ, ನಮ್ಮ ಬದಲಾಗುತ್ತಿರುವ ಆಶೆಗಳು ಅಥವಾ ಆಸಕ್ತಿಗಳ ಆಧಾರದ ಮೇರೆಗೆ ವಿಷಯಗಳಿಗೆ ಮೌಲ್ಯವನ್ನು ಕಟ್ಟುವುದು ಆಳವಿಲ್ಲದ್ದೂ, ದೂರದೃಷ್ಟಿಯ ಕೊರತೆಯುಳ್ಳದ್ದೂ ಆಗಿದೆ. ವಾಸ್ತವದಲ್ಲಿ, ನಾವು ಯಾವುದನ್ನು ನಮ್ಮ ಅತಿದೊಡ್ಡ ಅಗತ್ಯವೆಂದು ಪರಿಗಣಿಸುತ್ತೇವೋ ಅದರ ಆಧಾರದ ಮೇಲೆ ನಿಜವಾದ ಮೌಲ್ಯವು ನಿರ್ಧರಿಸಲ್ಪಡುತ್ತದೆ.

ನಮ್ಮ ಅತಿದೊಡ್ಡ ಅಗತ್ಯವು ಏನಾಗಿದೆ? ಜೀವ ಎಂಬ ಒಂದು ಪ್ರಮುಖವಾದ ಅಂಶವಿಲ್ಲದಿರುವಲ್ಲಿ, ಯಾವುದಕ್ಕೂ ಯಾವುದೇ ಮೌಲ್ಯವಿರುವುದಿಲ್ಲ. ಜೀವವಿಲ್ಲದಿರುವಲ್ಲಿ ನಾವು ಅಸ್ತಿತ್ವದಲ್ಲಿರುವುದಿಲ್ಲ. ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು ಬರೆದದ್ದು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ . . . ಪಾತಾಳ [ಮಾನವಕುಲದ ಸಾಮಾನ್ಯ ಸಮಾಧಿ]ದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:5, 10) ನಾವು ಸತ್ತುಹೋಗುವಲ್ಲಿ, ನಮ್ಮ ಸ್ವತ್ತನ್ನೆಲ್ಲ ಬಿಟ್ಟು ಹೋಗಲೇ ಬೇಕಾಗುತ್ತದೆ. ಆದುದರಿಂದ, ನಮ್ಮ ಅತಿದೊಡ್ಡ ಅಗತ್ಯವು, ನಮ್ಮ ಜೀವವನ್ನು ಸಂರಕ್ಷಿಸಿಡುವ ಯಾವುದನ್ನೋ ಗಳಿಸುವುದೇ ಆಗಿದೆ. ನಮ್ಮ ಜೀವಗಳನ್ನು ಯಾವುದು ಸಂರಕ್ಷಿಸಿಡುವುದು?

ನಮ್ಮ ಜೀವಗಳನ್ನು ಯಾವುದು ಸಂರಕ್ಷಿಸುವುದು?

‘ಹಣವು ಆಶ್ರಯ,’ ಎಂಬುದಾಗಿ ರಾಜ ಸೊಲೊಮೋನನು ಹೇಳಿದನು. (ಪ್ರಸಂಗಿ 7:​12, NW) ಸಾಕಷ್ಟು ಹಣದೊಂದಿಗೆ ನಾವು ಆಹಾರವನ್ನು ಮತ್ತು ಒಳ್ಳೇ ಸೌಕರ್ಯಗಳುಳ್ಳ ಮನೆಯನ್ನು ಖರೀದಿಸಬಹುದು. ನಾವು ದೂರದೇಶಗಳಿಗೆ ಪ್ರಯಾಣಿಸುವ ಸುಖಾನುಭವವನ್ನು ಹಣ ಸಾಧ್ಯಗೊಳಿಸಬಹುದು. ವೃದ್ಧಾಪ್ಯ ಅಥವಾ ಅಸ್ವಸ್ಥತೆಯ ಕಾರಣದಿಂದ ಕೆಲಸಮಾಡಲು ಸಾಧ್ಯವಿಲ್ಲದಿರುವಾಗ ಅದು ನಮ್ಮ ಅಗತ್ಯಗಳನ್ನು ಪೂರೈಸಬಲ್ಲದು. ಹಣವಿರುವುದರಿಂದ ಸಿಗುವ ಪ್ರಯೋಜನಗಳು ಹಲವಾರು. ಆದರೂ, ಹಣ ನಮ್ಮ ಜೀವಗಳನ್ನು ಸಂರಕ್ಷಿಸಲಾರದು. ಅಪೊಸ್ತಲ ಪೌಲನು ತಿಮೊಥೆಯನಿಗೆ ಬುದ್ಧಿವಾದ ನೀಡಿದ್ದು: ‘ಇಹಲೋಕವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ, ದೇವರ ಮೇಲೆ ನಂಬಿಕೆಯನ್ನಿಡಬೇಕಂದು ಅವರಿಗೆ ಆಜ್ಞಾಪಿಸು.’ (1 ತಿಮೊಥೆಯ 6:17, 18) ಲೋಕದಲ್ಲಿರುವ ಎಲ್ಲಾ ಹಣ ನಮಗೆ ಜೀವವನ್ನು ಖರೀದಿಸಲಾರದು.

ಹೀಟೋಶೀ ಎಂಬ ಹೆಸರಿನ ಒಬ್ಬ ಮನುಷ್ಯನ ಅನುಭವವನ್ನು ಪರಿಗಣಿಸಿರಿ. ಅವನು ಬಡತನದಲ್ಲಿ ಬೆಳೆಸಲ್ಪಟ್ಟದ್ದರಿಂದ, ಸಿರಿವಂತನಾಗಬೇಕು ಎಂಬ ಕಡುಬಯಕೆ ಹೀಟೋಶೀಗಿತ್ತು. ಅವನಿಗೆ ಹಣದ ಬಲದಲ್ಲಿ ಎಷ್ಟು ಭರವಸೆಯಿತ್ತೆಂದರೆ, ಅದರಿಂದ ಮನುಷ್ಯರನ್ನೂ ಖರೀದಿಸಬಹುದು ಎಂಬುದಾಗಿ ಅವನು ನಂಬಿದನು. ನಂತರ ಒಬ್ಬ ಮನುಷ್ಯನು ಹೀಟೋಶೀಯ ಮನೆಗೆ ಬಂದು, ಯೇಸು ಕ್ರಿಸ್ತನು ಅವನಿಗಾಗಿ ಸತ್ತಿದ್ದಾನೆಂಬುದನ್ನು ಅವನು ತಿಳಿದಿದ್ದಾನೋ ಎಂಬುದಾಗಿ ಹೀಟೋಶೀಯನ್ನು ಕೇಳಿದನು. ಈ ಪ್ರಶ್ನೆ ಹೀಟೋಶೀಯನ್ನು ಚಿಂತಿಸುವಂತೆ ಮಾಡಿತು. ಏಕೆಂದರೆ ಅವನಂತಹ ಒಬ್ಬ ವ್ಯಕ್ತಿಗೆ ಯಾವನೂ ಸಾಯಲಾರನು ಎಂಬುದು ಅವನ ಅನಿಸಿಕೆಯಾಗಿತ್ತು. ಅವನು ಬೈಬಲಾಧಾರಿತವಾದ ಒಂದು ಬಹಿರಂಗ ಭಾಷಣಕ್ಕೆ ಹಾಜರಾದನು ಮತ್ತು ‘ಕಣ್ಣನ್ನು ಸರಳವಾಗಿಟ್ಟುಕೊಳ್ಳಿ’ ಎಂಬ ಉತ್ತೇಜನವನ್ನು ಕೇಳಿಸಿಕೊಂಡು ಚಕಿತನಾದನು. ದೂರದೃಷ್ಟಿಯುಳ್ಳ ಮತ್ತು ಆತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಲ್ಪಟ್ಟಿರುವ ಕಣ್ಣೇ ‘ಸರಳವಾದ’ ಕಣ್ಣಾಗಿದೆ ಎಂಬುದಾಗಿ ಭಾಷಣಕರ್ತನು ವಿವರಿಸಿದನು. (ಲೂಕ 11:​34, NW) ಹಣಕ್ಕಾಗಿ ಹೆಣಗಾಡುವ ಬದಲು, ಹೀಟೋಶೀ ತನ್ನ ಜೀವನದಲ್ಲಿ ಆತ್ಮಿಕ ಮೌಲ್ಯಗಳನ್ನು ಮೊದಲ ಸ್ಥಾನದಲ್ಲಿಡಲು ಆರಂಭಿಸಿದನು.

ಐಹಿಕ ಸ್ವತ್ತುಗಳು ಒಂದಿಷ್ಟು ಪ್ರಮಾಣದ ಸ್ಥಿರತೆ ಮತ್ತು ಭದ್ರತೆಯನ್ನು ಕೊಡಬಲ್ಲವು. ಯಥೇಷ್ಟವಾದ ಸಂಪತ್ತು ನಮ್ಮ ದಿನನಿತ್ಯದ ಆವಶ್ಯಕತೆಗಳ ಕುರಿತಾದ ಚಿಂತೆಯಿಂದ ನಮ್ಮನ್ನು ಬಿಡಿಸಬಹುದು. ಅಪೇಕ್ಷಣೀಯವಾದ ನೆರೆಹೊರೆಯಲ್ಲಿ ಒಂದು ಒಳ್ಳೆಯ ಮನೆಯಿರುವುದು ನಾವೇನನ್ನೋ ಸಾಧಿಸಿದ್ದೇವೆಂಬ ಅನಿಸಿಕೆಯನ್ನು ನಮ್ಮಲ್ಲಿ ಮೂಡಿಸಬಹುದು. ಸೊಗಸಾದ ಬಟ್ಟೆಬರೆ ಮತ್ತು ಉತ್ತಮವಾದ ಒಂದು ಗಾಡಿ ಇತರರ ಗಮನವನ್ನು ನಮ್ಮತ್ತ ಸೆಳೆಯಬಹುದು.

‘ನಮ್ಮ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವುದು’ ಒಂದು ಆಶೀರ್ವಾದವಾಗಿದೆ. (ಪ್ರಸಂಗಿ 3:13) ಮತ್ತು ಅತ್ಯಧಿಕವನ್ನು ಹೊಂದಿರುವುದು ನಮ್ಮ ಪ್ರಿಯರನ್ನು ‘ವಿಶ್ರಮಿಸಿಕೊಳ್ಳಲು, ಊಟಮಾಡಲು, ಕುಡಿಯಲು, ಮತ್ತು ಸುಖಪಡಲು’ ಶಕ್ತಗೊಳಿಸಬಹುದು. ಆದರೆ, ಐಹಿಕ ವಸ್ತುಗಳಿಗೆ ಕೇವಲ ಅಲ್ಪಕಾಲಿಕ ಮೌಲ್ಯವಿದೆ. ದುರಾಶೆಯ ವಿರುದ್ಧ ಎಚ್ಚರಿಸುತ್ತಾ ಯೇಸು ಕ್ರಿಸ್ತನು ಹೇಳಿದ್ದು: “ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” (ಲೂಕ 12:15-21) ಸ್ವತ್ತುಗಳು, ಅವುಗಳ ಮೊತ್ತ ಅಥವಾ ಮೌಲ್ಯ ಎಷ್ಟೇ ಇರಲಿ, ನಮಗೆ ಜೀವವನ್ನಂತೂ ಕೊಡಲಾರವು.

ಉದಾಹರಣೆಗಾಗಿ, ಲಿಸ್‌ ಎಂಬವಳು, ಆರ್ಥಿಕವಾಗಿ ಸಫಲನಾಗಿದ್ದ ಒಬ್ಬ ಮನುಷ್ಯನನ್ನು ಮದುವೆಯಾಗಿದ್ದಳು. ಅವಳು ಹೇಳುವುದು: “ನಮಗೆ ಒಂದು ಸುಂದರವಾದ ಮನೆ ಮತ್ತು ಎರಡು ಕಾರುಗಳು ಇದ್ದವು. ಐಹಿಕ ವಿಷಯಗಳ ರೂಪದಲ್ಲಿ ಈ ಲೋಕವು ಏನೆಲ್ಲ ನೀಡಲಿಕ್ಕಿತ್ತೋ ಅವೆಲ್ಲವನ್ನು ಅನುಭವಿಸುವ ಸ್ವಾತಂತ್ರ್ಯವನ್ನು ನಮ್ಮ ಆರ್ಥಿಕ ಸ್ಥಿತಿ ನಮಗೆ ಒದಗಿಸಿತು . . . ವಿಚಿತ್ರವಾದ ವಿಷಯವೇನೆಂದರೆ, ನನಗೆ ಆಗಲೂ ಹಣದ ಚಿಂತೆಯಿತ್ತು.” ಅವಳು ವಿವರಿಸುವುದು: “ನಮ್ಮ ಬಳಿ ಕಳೆದುಕೊಳ್ಳಸಾಧ್ಯವಿರುವ ಎಷ್ಟೋ ವಿಷಯಗಳಿದ್ದವು. ನಿಮ್ಮ ಹತ್ತಿರ ಎಷ್ಟು ಹೆಚ್ಚು ಇದೆಯೋ, ಅಷ್ಟು ಕಡಿಮೆ ಭದ್ರತೆಯ ಅನಿಸಿಕೆಯಾಗುತ್ತದೆ ಎಂಬಂತೆ ತೋರುತ್ತದೆ.”

ಕೀರ್ತಿ ಮತ್ತು ಪ್ರತಿಷ್ಠೆಗೆ ಕೂಡ ಅನೇಕರು ತುಂಬ ಮೌಲ್ಯವನ್ನು ಕೊಡುತ್ತಾರೆ, ಏಕೆಂದರೆ ಅವು ಸ್ತುತಿ ಮತ್ತು ಗೌರವವನ್ನು ತರಬಹುದು. ಇವತ್ತಿನ ಲೋಕದಲ್ಲಿ, ಯಶಸ್ವಿಕರವಾದ ಒಂದು ಜೀವನ ವೃತ್ತಿಯು, ಅನೇಕರು ತುಂಬ ಆಸೆಪಡುವ ಒಂದು ಸಾಧನೆಯಾಗಿದೆ. ಅದ್ವಿತೀಯ ಸಾಮರ್ಥ್ಯಗಳನ್ನು ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳುವುದು ನಾವು ನಮಗಾಗಿಯೇ ಒಂದು ಹೆಸರನ್ನು ಮಾಡಿಕೊಳ್ಳಲು ಸಹಾಯಮಾಡಬಹುದು. ಬೇರೆಯವರು ನಮ್ಮನ್ನು ಹೊಗಳಬಹುದು, ನಮ್ಮ ಅನಿಸಿಕೆಗಳನ್ನು ಉಚ್ಚವಾಗಿ ಗಣ್ಯಮಾಡಬಹುದು, ಮತ್ತು ನಮ್ಮ ಅನುಗ್ರಹವನ್ನು ಪಡೆದುಕೊಳ್ಳಲು ಪ್ರಯಾಸಪಡಬಹುದು. ಇವೆಲ್ಲವೂ ಉಲ್ಲಾಸವನ್ನೂ ತೃಪ್ತಿಯನ್ನೂ ತರಬಹುದು. ಆದರೆ ಕೊನೆಯಲ್ಲಿ ಇವೆಲ್ಲವೂ ಮಾಯವಾಗುತ್ತವೆ. ಸೊಲೊಮೋನನು ಒಬ್ಬ ರಾಜನಿಗಿರಬಹುದಾದ ಎಲ್ಲಾ ಮಹಿಮೆ ಮತ್ತು ಶಕ್ತಿಯನ್ನು ಹೊಂದಿದವನಾಗಿದ್ದನು, ಆದರೆ ಅವನು ಪ್ರಲಾಪಿಸಿದ್ದು: “ಮೂಢನು ಹೇಗೋ ಹಾಗೆಯೇ ಜ್ಞಾನಿಯೂ ನಿರಂತರವಾಗಿ ಮರೆತುಹೋಗುವನು. ಈಗಿನವರೆಲ್ಲಾ ಮುಂದಿನ ಕಾಲದೊಳಗಾಗಿಯೇ ಮರೆತುಹೋಗುವರಷ್ಟೆ.” (ಪ್ರಸಂಗಿ 2:16) ಕೀರ್ತಿ ಅಥವಾ ಪ್ರತಿಷ್ಠೆ ಒಬ್ಬನಿಗೆ ಜೀವವರವನ್ನು ಕೊಡುವುದಿಲ್ಲ.

ಚೆಲೊ ಎಂಬ ಒಬ್ಬ ಶಿಲ್ಪಿ, ಕೀರ್ತಿಗಿಂತ ಹೆಚ್ಚು ಮೌಲ್ಯವುಳ್ಳ ಯಾವುದನ್ನೋ ಗಣ್ಯಮಾಡಲಾರಂಭಿಸಿದನು. ಅವನು ಪ್ರತಿಭಾವಂತನಾಗಿದ್ದುದರಿಂದ, ತನ್ನ ಕೌಶಲಗಳನ್ನು ಉತ್ತಮಗೊಳಿಸುವಂಥ ತರಬೇತಿಯನ್ನು ಕೊಡುವ ಶಾಲೆಯಲ್ಲಿ ಸೇರಲು ಅರ್ಹತೆಯನ್ನು ಹೊಂದಿದನು. ಶೀಘ್ರವೇ ಅವನ ಕೌಶಲವು ವಾರ್ತಾಮಾಧ್ಯಮದ ಮತ್ತು ಕಲಾಶಾಸ್ತ್ರದ ವಿಮರ್ಶಕರಿಂದ ಹೊಗಳಲ್ಪಟ್ಟಿತು. ಅವನ ಅನೇಕ ಶಿಲ್ಪಗಳು ಯೂರೋಪಿನ ಮಹಾನಗರಗಳಲ್ಲಿ ಪ್ರದರ್ಶಿಸಲ್ಪಟ್ಟವು. ಚೆಲೊ ಹೇಳುವುದು: “ಒಂದು ಕಾಲದಲ್ಲಿ ಕಲಾಶಾಸ್ತ್ರ ನನ್ನ ಜೀವಿತದ ಅತಿ ಪ್ರಾಮುಖ್ಯ ವಿಷಯವಾಗಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳಬೇಕು. ಆದರೆ, ನನ್ನ ಜೀವನ ವೃತ್ತಿಯಲ್ಲಿಯೇ ತೊಡಗಿರುವುದು ಎರಡು ಯಜಮಾನರಿಗೆ ಸೇವೆಮಾಡುವಂತಿರುವುದು ಎಂಬುದನ್ನು ನಾನು ಗ್ರಹಿಸಿಕೊಂಡೆ. (ಮತ್ತಾಯ 6:24) ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದು ನಾನು ಮಾಡಬಹುದಾದ ಅತಿ ಪ್ರಾಮುಖ್ಯ ವಿಷಯವಾಗಿರುವುದು ಎಂಬುದನ್ನು ನಾನು ಮನಗಂಡೆ. ಆದುದರಿಂದ ಶಿಲ್ಪಿಯ ಕೆಲಸವನ್ನು ಬಿಟ್ಟುಬಿಡಬೇಕು ಎಂಬ ನನ್ನ ವೈಯಕ್ತಿಕ ತೀರ್ಮಾನವನ್ನು ನಾನು ಮಾಡಿದೆ.”

ಅತಿ ಹೆಚ್ಚು ಮೌಲ್ಯ ಯಾವುದಕ್ಕಿದೆ?

ಜೀವವಿಲ್ಲದೆ ಯಾವುದಕ್ಕೂ ಏನೇ ಅರ್ಥ ಅಥವಾ ಮೌಲ್ಯವಿಲ್ಲದಿರುವುದರಿಂದ, ನಾವು ಜೀವಿಸುತ್ತಾ ಇರುವ ಖಾತರಿಯನ್ನು ಕೊಡುವ ಯಾವುದನ್ನು ನಾವು ಪಡೆದುಕೊಳ್ಳಬೇಕು? ಎಲ್ಲ ಜೀವದ ಉಗಮನು ಯೆಹೋವ ದೇವರಾಗಿದ್ದಾನೆ. (ಕೀರ್ತನೆ 36:9) ವಾಸ್ತವದಲ್ಲಿ, “ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ.” (ಅ. ಕೃತ್ಯಗಳು 17:28) ಆತನು ಯಾರನ್ನು ಪ್ರೀತಿಸುತ್ತಾನೋ ಅವರಿಗೆ ನಿತ್ಯಜೀವವನ್ನು ವರದಾನವಾಗಿ ಕೊಡುತ್ತಾನೆ. (ರೋಮಾಪುರ 6:23) ಈ ವರದಾನವನ್ನು ಪಡೆದುಕೊಳ್ಳಲಿಕ್ಕಾಗಿ ಅರ್ಹರಾಗಲು ನಾವೇನು ಮಾಡಬೇಕು?

ನಿತ್ಯಜೀವದ ವರದಾನವನ್ನು ಪಡೆದುಕೊಳ್ಳುವುದು ನಾವು ಯೆಹೋವನೊಂದಿಗೆ ನಿಕಟವಾದ ಸಂಬಂಧವನ್ನು ಹೊಂದುವುದರ ಮೇಲೆ ಆತುಕೊಂಡಿದೆ. ಆದುದರಿಂದ, ನಮ್ಮ ಬಳಿ ಇರಬಹುದಾದ ಯಾವುದೇ ವಿಷಯಕ್ಕಿಂತಲೂ ಆತನ ಅನುಗ್ರಹಕ್ಕೆ ಅತಿ ಹೆಚ್ಚಿನ ಮೌಲ್ಯವಿದೆ. ನಮಗೆ ಆತನ ಅನುಗ್ರಹವಿರುವಲ್ಲಿ, ನೈಜವಾದ ಮತ್ತು ನಿತ್ಯ ಸಂತೋಷದ ಪ್ರತೀಕ್ಷೆ ನಮಗಿರುವುದು. ಆದರೆ, ದೇವರ ಅನುಗ್ರಹವಿಲ್ಲದಿರುವಲ್ಲಿ, ನಾವು ಅನಂತಕಾಲ ನಿರ್ನಾಮವನ್ನು ಎದುರಿಸುತ್ತೇವೆ. ಆದುದರಿಂದ, ಯೆಹೋವನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಗಳಿಸುವುದರಲ್ಲಿ ನಮಗೆ ಸಹಾಯಮಾಡುವ ಯಾವುದೇ ಸಂಗತಿಯು ನಮಗೆ ಅಪಾರ ಮೌಲ್ಯವುಳ್ಳದ್ದಾಗಿದೆ.

ನಾವೇನು ಮಾಡಬೇಕು?

ನಮ್ಮ ಯಶಸ್ಸು ನಾವು ಜ್ಞಾನವನ್ನು ಪಡೆದುಕೊಳ್ಳುವುದರ ಮೇಲೆ ಆತುಕೊಂಡಿದೆ. ನಿಷ್ಕೃಷ್ಟ ಜ್ಞಾನದ ಮೂಲವು ಯೆಹೋವನ ವಾಕ್ಯವಾದ ಬೈಬಲಾಗಿದೆ. ದೇವರನ್ನು ಮೆಚ್ಚಿಸಲು ನಾವೇನು ಮಾಡಬೇಕೆಂಬುದನ್ನು ಅದು ಮಾತ್ರ ನಮಗೆ ತಿಳಿಸುತ್ತದೆ. ಆದುದರಿಂದ, ನಾವು ಶಾಸ್ತ್ರವಚನಗಳನ್ನು ಜಾಗರೂಕತೆಯಿಂದ ಅಭ್ಯಾಸಿಸಬೇಕು. ಯೆಹೋವ ದೇವರ ಕುರಿತು ಮತ್ತು ಯೇಸು ಕ್ರಿಸ್ತನ ಕುರಿತು ಸಾಧ್ಯವಿರುವ ಎಲ್ಲವನ್ನೂ ಕಲಿತುಕೊಳ್ಳಲು ಶ್ರದ್ಧೆಯಿಂದ ಪ್ರಯತ್ನಿಸುವುದು, ‘ನಿತ್ಯಜೀವವನ್ನು ಕೊಡುವ ತಿಳಿವಳಿಕೆಯನ್ನು’ ಫಲಿಸುತ್ತದೆ. (ಯೋಹಾನ 17:3) ಇಂತಹ ಜ್ಞಾನವು ಮಾನ್ಯಮಾಡಲ್ಪಡಬೇಕಾದ ಒಂದು ನಿಕ್ಷೇಪವಾಗಿದೆ!​—ಜ್ಞಾನೋಕ್ತಿ 2:1-5.

ದೇವರ ವಾಕ್ಯದಿಂದ ನಾವು ತೆಗೆದುಕೊಳ್ಳುವ ಜ್ಞಾನವು, ಮುಂದಿನ ಹೆಜ್ಜೆಗಾಗಿ ಅಂದರೆ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವುದಕ್ಕಾಗಿ ನಮ್ಮನ್ನು ಸಜ್ಜುಗೊಳಿಸುತ್ತದೆ. ತನ್ನ ಬಳಿಗೆ ಬರುವವರೆಲ್ಲರೂ ಯೇಸುವಿನ ಮೂಲಕವಾಗಿ ಬರಬೇಕೆಂಬುದಾಗಿ ಯೆಹೋವನು ಆಜ್ಞೆಯಿತ್ತಿದ್ದಾನೆ. (ಯೋಹಾನ 14:6) ವಾಸ್ತವದಲ್ಲಿ, “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ.” (ಅ. ಕೃತ್ಯಗಳು 4:12) ನಮ್ಮ ಅಂತಿಮ ರಕ್ಷಣೆಯು, ‘ಬೆಳ್ಳಿ ಬಂಗಾರದ ಮೇಲಲ್ಲ, ಕ್ರಿಸ್ತನ ಅಮೂಲ್ಯವಾದ ರಕ್ತದ ಮೇಲೆ’ ಅವಲಂಬಿಸಿದೆ. (1 ಪೇತ್ರ 1:18, 19) ಯೇಸುವಿನ ಬೋಧನೆಗಳನ್ನು ನಂಬುವ ಮತ್ತು ಅವನ ಮಾದರಿಯನ್ನು ಹಿಂಬಾಲಿಸುವ ಮೂಲಕ ನಾವು ನಮ್ಮ ನಂಬಿಕೆಯನ್ನು ವ್ಯಕ್ತಪಡಿಸಬೇಕು. (ಇಬ್ರಿಯ 12:1-3; 1 ಪೇತ್ರ 2:21) ಮತ್ತು ಅವನ ಯಜ್ಞವು ಅದೆಷ್ಟು ಅಮೂಲ್ಯವಾಗಿದೆ! ಅದರ ಪ್ರಯೋಜನಗಳ ಅನ್ವಯವು ಮಾನವವರ್ಗದ ನಿತ್ಯ ಭವಿಷ್ಯವನ್ನು ನಿರ್ಧರಿಸುತ್ತದೆ. ಅದು ನಮ್ಮ ಪರವಾಗಿ ಸಂಪೂರ್ಣವಾಗಿ ಅನ್ವಯಿಸಲ್ಪಟ್ಟಾಗ, ನಮಗೆ ನಿಜವಾಗಿಯೂ ಅಮೂಲ್ಯವಾಗಿರುವ ವರದಾನವಾದ ನಿತ್ಯಜೀವವು ಕೊಡಲ್ಪಡುತ್ತದೆ.​—ಯೋಹಾನ 3:16.

ಯೇಸು ಹೇಳಿದ್ದು: “ನಿನ್ನ ದೇವರಾಗಿರುವ [ಯೆಹೋವನನ್ನು] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:37) ಯೆಹೋವನನ್ನು ಪ್ರೀತಿಸುವುದು ಅಂದರೆ, “ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ” ಆಗಿದೆ. (1 ಯೋಹಾನ 5:3) ಆತನ ಆಜ್ಞೆಗಳು, ನಾವು ಲೋಕದಿಂದ ಪ್ರತ್ಯೇಕರಾಗಿರುವುದನ್ನು, ಒಳ್ಳೇ ನಡತೆಯನ್ನು ಕಾಪಾಡಿಕೊಳ್ಳುವುದನ್ನು ಮತ್ತು ನಿಷ್ಠೆಯಿಂದ ರಾಜ್ಯವನ್ನು ಬೆಂಬಲಿಸುವುದನ್ನು ಅವಶ್ಯಪಡಿಸುತ್ತದೆ. ಈ ರೀತಿಯಲ್ಲಿ ನಾವು ಮರಣವನ್ನಲ್ಲ ಬದಲಾಗಿ ‘ಜೀವವನ್ನು ಆದುಕೊಳ್ಳುತ್ತೇವೆ.’ (ಧರ್ಮೋಪದೇಶಕಾಂಡ 30:19) ನಾವು ‘ದೇವರ ಸಮೀಪಕ್ಕೆ ಬರುವುದಾದರೆ, ಆತನು ನಮ್ಮ ಸಮೀಪಕ್ಕೆ ಬರುವನು.’​—ಯಾಕೋಬ 4:8.

ದೇವರ ಅನುಗ್ರಹದ ಆಶ್ವಾಸನೆಯು, ಈ ಲೋಕದ ಎಲ್ಲಾ ಐಶ್ವರ್ಯಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿದೆ. ಅದನ್ನು ಹೊಂದಿರುವವರು ಭೂಮಿಯ ಮೇಲಿರುವ ಅತಿ ಧನವಂತ ಜನರಾಗಿದ್ದಾರೆ! ಆದ್ದರಿಂದ ನಾವು ನಿಜವಾದ ಮೌಲ್ಯವಿರುವ ಐಶ್ವರ್ಯವನ್ನು ಅಂದರೆ ಯೆಹೋವನ ಸಮ್ಮತಿಯನ್ನು ಪಡೆದುಕೊಳ್ಳಲು ಪ್ರಯಾಸಪಡೋಣ. ಅಪೊಸ್ತಲ ಪೌಲನ ಬುದ್ಧಿವಾದವನ್ನು ಖಂಡಿತವಾಗಿಯೂ ನಾವು ನಮ್ಮ ಮನಸ್ಸಿಗೆ ತೆಗೆದುಕೊಳ್ಳೋಣ: “ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು. ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ.”​—1 ತಿಮೊಥೆಯ 6:11, 12.

[ಪುಟ 21ರಲ್ಲಿರುವ ಚಿತ್ರಗಳು]

ನೀವು ಯಾವುದನ್ನು ಉಚ್ಚ ಮೌಲ್ಯವುಳ್ಳದ್ದಾಗಿ ಪರಿಗಣಿಸುತ್ತೀರಿ? ಹಣವನ್ನೋ, ಐಹಿಕ ಸ್ವತ್ತುಗಳನ್ನೋ, ಕೀರ್ತಿಯನ್ನೋ, ಅಥವಾ ಬೇರೆ ಯಾವುದನ್ನೋ?

[ಪುಟ 23ರಲ್ಲಿರುವ ಚಿತ್ರ]

ನಾವು ಶಾಸ್ತ್ರವಚನಗಳನ್ನು ಜಾಗರೂಕತೆಯಿಂದ ಅಭ್ಯಾಸಿಸಬೇಕು