ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನೇರವಾದ ಮಾರ್ಗದಲ್ಲಿ’ ನಡೆಯಿರಿ

‘ನೇರವಾದ ಮಾರ್ಗದಲ್ಲಿ’ ನಡೆಯಿರಿ

‘ನೇರವಾದ ಮಾರ್ಗದಲ್ಲಿ’ ನಡೆಯಿರಿ

“ನೀತಿವಂತರಿಗೆ ಶುಭವೇ . . . ಅವರು ತಮ್ಮ ಸುಕೃತಫಲವನ್ನು ಅನುಭವಿಸುವರಷ್ಟೆ,” ಎಂದು ಪ್ರವಾದಿ ಯೆಶಾಯನು ಪ್ರಕಟಿಸಿದನು. “ನೀತಿವಂತನ ಮಾರ್ಗವು ನೇರವಾಗಿದೆ,” ಎಂಬುದಾಗಿಯೂ ಅವನು ಹೇಳಿದನು. (ಯೆಶಾಯ 3:10; 26:​7, NW) ನಮ್ಮ ಕೃತ್ಯಗಳು ಒಳ್ಳೇ ಫಲವನ್ನು ಉತ್ಪಾದಿಸಬೇಕಾದರೆ ನಾವು ಯೆಹೋವನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಬೇಕೆಂಬುದು ಸ್ಪಷ್ಟ.

ಆದರೆ ನಾವು ನೇರವಾದ ಮಾರ್ಗದಲ್ಲಿ ಹೇಗೆ ತಾನೇ ನಡೆಯಬಹುದು? ಹಾಗೆ ಮಾಡುವುದರಿಂದ ನಾವು ಯಾವ ಆಶೀರ್ವಾದಗಳನ್ನು ನಿರೀಕ್ಷಿಸಬಹುದು? ದೇವರ ನೀತಿಯ ಮಟ್ಟಗಳಿಗೆ ನಾವು ಹೊಂದಿಕೊಂಡು ನಡೆಯುವುದರಿಂದ ಬೇರೆಯವರು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು? ಜ್ಞಾನೋಕ್ತಿ ಎಂಬ ಬೈಬಲ್‌ ಪುಸ್ತಕದ ಅಧ್ಯಾಯ 10ರಲ್ಲಿ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು, ನೀತಿವಂತರ ಮತ್ತು ದುಷ್ಟರ ನಡುವಿನ ವ್ಯತ್ಯಾಸವನ್ನು ತೋರಿಸುವ ಮೂಲಕ ಕೊಡುತ್ತಾನೆ. ಹೀಗೆ ಮಾಡುವುದಕ್ಕಾಗಿ, “ನೀತಿವಂತನ[ರ]” ಎಂಬ ಅಭಿವ್ಯಕ್ತಿಯನ್ನು ಅವನು 13 ಸಲ ಉಪಯೋಗಿಸುತ್ತಾನೆ. ಇವುಗಳಲ್ಲಿ ಒಂಬತ್ತು ಸಲ, 15ರಿಂದ 32ನೆಯ ವಚನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದುದರಿಂದ, ಜ್ಞಾನೋಕ್ತಿ 10:​15-32ನೆಯ ವಚನಗಳನ್ನು ಪರಿಗಣಿಸುವುದು ಉತ್ತೇಜನದಾಯಕವಾಗಿ ಪರಿಣಮಿಸುವುದು. *

ಶಿಸ್ತನ್ನು ಕೈಕೊಳ್ಳಿ

ಸೊಲೊಮೋನನು ನೀತಿಯ ಪ್ರಾಮುಖ್ಯತೆಯನ್ನು ಸೂಚಿಸುತ್ತಾನೆ. ಅವನು ಹೇಳುವುದು: “ಐಶ್ವರ್ಯವಂತನಿಗೆ ಐಶ್ವರ್ಯವು ಬಲವಾದ ಕೋಟೆ; ಬಡವನಿಗೆ ಬಡತನವು ಅಳಿವು. ನೀತಿವಂತನ ದುಡಿತ ಜೀವಾಸ್ಪದ; ದುಷ್ಟನ ಆದಾಯ ಪಾಪಾಸ್ಪದ.”​—ಜ್ಞಾನೋಕ್ತಿ 10:15, 16, NW.

ಪೌಳಿಗೋಡೆಯಿರುವ ಪಟ್ಟಣವು ಹೇಗೆ ಅದರಲ್ಲಿ ವಾಸಿಸುವವರಿಗೆ ಒಂದಿಷ್ಟು ಪ್ರಮಾಣದ ಭದ್ರತೆಯನ್ನು ಕೊಡುತ್ತದೋ ಹಾಗೆಯೇ, ಸಿರಿಸಂಪತ್ತುಗಳು ಜೀವನದ ಕೆಲವು ಅನಿಶ್ಚಿತತೆಗಳಿಂದ ಆಶ್ರಯವಾಗಿರಬಲ್ಲದು. ಮತ್ತು ಅನಿರೀಕ್ಷಿತ ಬದಲಾವಣೆಗಳು ಬರುವಾಗ ಬಡತನವು ವಿನಾಶಕರವಾಗಿರಬಲ್ಲದು. (ಪ್ರಸಂಗಿ 7:12) ಆದರೂ, ಸಂಪತ್ತು ಮತ್ತು ಬಡತನ ಇವೆರಡರಲ್ಲೂ ಒಳಗೂಡಿರುವ ಅಪಾಯದ ಕುರಿತಾಗಿ ಜ್ಞಾನಿಯಾದ ರಾಜನು ಸುಳಿವನ್ನೂ ನೀಡುತ್ತಿರಬಹುದು. ಒಬ್ಬ ಧನವಂತನು, ತನ್ನ ಅಮೂಲ್ಯವಾದ ವಸ್ತುಗಳು ‘ಬಲವಾದ ಕೋಟೆಯಂತಿವೆ’ ಎಂದು ಭಾವಿಸುತ್ತಾ, ತನ್ನ ಸಂಪತ್ತಿನಲ್ಲೇ ಸಂಪೂರ್ಣವಾದ ಭರವಸೆಯನ್ನು ಇಡುವ ಪ್ರವೃತ್ತಿಯುಳ್ಳವನಾಗಿರಬಹುದು. (ಜ್ಞಾನೋಕ್ತಿ 18:11) ಮತ್ತು ಒಬ್ಬ ಬಡ ವ್ಯಕ್ತಿ, ಅವನ ಬಡತನವು ಅವನ ಭವಿಷ್ಯತ್ತನ್ನು ಆಶಾಹೀನವಾದದ್ದಾಗಿ ಮಾಡುತ್ತದೆ ಎಂಬ ತಪ್ಪಾದ ಅನಿಸಿಕೆಯುಳ್ಳವನಾಗಿರಬಹುದು. ಹೀಗೆ, ಇಬ್ಬರೂ ದೇವರೊಂದಿಗೆ ಒಂದು ಒಳ್ಳೇ ಹೆಸರನ್ನು ಮಾಡುವುದರಲ್ಲಿ ತಪ್ಪಿಹೋಗುತ್ತಾರೆ.

ಮತ್ತೊಂದು ಕಡೆಯಲ್ಲಿ, ಒಬ್ಬ ನೀತಿವಂತನಿಗೆ ಆರ್ಥಿಕವಾಗಿ ಹೆಚ್ಚು ಇರಲಿ ಅಥವಾ ಕೊಂಚವೇ ಇರಲಿ, ಅವನ ಒಳ್ಳೆಯ ನಡತೆ ಜೀವಕ್ಕೆ ನಡೆಸುತ್ತದೆ. ಹೇಗೆ? ಹೇಗೆಂದರೆ, ಅವನಲ್ಲಿ ಏನಿದೆಯೋ ಅದರಲ್ಲೇ ಅವನು ಸಂತೃಪ್ತನಾಗಿರುತ್ತಾನೆ. ಅವನ ಆರ್ಥಿಕ ಸ್ಥಿತಿಯು ದೇವರೊಂದಿಗಿರುವ ಅವನ ಒಳ್ಳೇ ನಿಲುವನ್ನು ಕೆಡಿಸಲು ಅವನು ಅನುಮತಿಸುವುದಿಲ್ಲ. ಧನವಂತನಾಗಿರಲಿ ಅಥವಾ ಬಡವನಾಗಿರಲಿ, ಒಬ್ಬ ನೀತಿವಂತನ ಜೀವನ ರೀತಿಯು ಅವನಿಗೆ ಈಗ ಸಂತೋಷವನ್ನು ತರುತ್ತದೆ ಮತ್ತು ಭವಿಷ್ಯದಲ್ಲಿ ನಿತ್ಯಜೀವದ ನಂಬಿಕೆಯನ್ನು ಕೊಡುತ್ತದೆ. (ಯೋಬ 42:10-13) ಆದರೆ ದುಷ್ಟನು ಸಂಪತ್ತನ್ನು ಪಡೆದರೂ ಪ್ರಯೋಜನ ಪಡೆಯುವುದಿಲ್ಲ. ಅದರ ಸಂರಕ್ಷಣಾತ್ಮಕ ಮೌಲ್ಯವನ್ನು ಗಣ್ಯಮಾಡುತ್ತಾ ದೇವರ ಚಿತ್ತಕ್ಕನುಸಾರ ಜೀವಿಸುವ ಬದಲು, ಅವನು ತನ್ನ ಸಿರಿಸಂಪತ್ತನ್ನು ಪಾಪದ ಜೀವನವನ್ನು ಬೆನ್ನಟ್ಟಲಿಕ್ಕಾಗಿ ಉಪಯೋಗಿಸುತ್ತಾನೆ.

ಇಸ್ರಾಯೇಲಿನ ರಾಜನು ಮುಂದುವರಿಸುತ್ತಾ ಹೇಳುವುದು: “ಶಿಕ್ಷೆಯನ್ನು [“ಶಿಸ್ತನ್ನು,” NW] ಕೈಕೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು; ಗದರಿಕೆಯನ್ನು ಕೈಕೊಳ್ಳದವನು ಸನ್ಮಾರ್ಗದಿಂದ ತಪ್ಪಿಸುವನು.” (ಜ್ಞಾನೋಕ್ತಿ 10:​17, ಓರೆ ಅಕ್ಷರಗಳು ನಮ್ಮವು.) ಈ ವಚನವನ್ನು ಎರಡು ರೀತಿಗಳಲ್ಲಿ ಅರ್ಥಮಾಡಿಕೊಳ್ಳಬಹುದು ಎಂಬುದಾಗಿ ಒಬ್ಬ ಬೈಬಲ್‌ ವಿದ್ವಾಂಸನು ಹೇಳುತ್ತಾನೆ. ಒಂದು ಸಾಧ್ಯತೆಯೇನೆಂದರೆ, ಶಿಸ್ತಿಗೆ ಒಳಗಾಗುವ ಮತ್ತು ನೀತಿಯನ್ನು ಬೆನ್ನಟ್ಟುವ ವ್ಯಕ್ತಿ ಜೀವದ ಹಾದಿಯಲ್ಲಿರುತ್ತಾನೆ, ಆದರೆ ತಿದ್ದುಪಾಟನ್ನು ಕೈಕೊಳ್ಳದವನು ಆ ಹಾದಿಯಿಂದ ದೂರ ಸರಿದುಹೋಗುತ್ತಾನೆ. ಈ ವಚನವು ಇದನ್ನೂ ಅರ್ಥೈಸಬಹುದು: “ಶಿಸ್ತನ್ನು ಸ್ವೀಕರಿಸಿಕೊಳ್ಳುವವನು [ಬೇರೆಯವರಿಗೆ] ಜೀವಮಾರ್ಗವನ್ನು ತೋರಿಸುತ್ತಾನೆ [ಯಾಕೆಂದರೆ ಅವನ ಒಳ್ಳೆಯ ಮಾದರಿಯಿಂದ ಅವರಿಗೆ ಪ್ರಯೋಜನವಾಗುತ್ತದೆ]. ತಿದ್ದುಪಡಿಯನ್ನು ಅಲಕ್ಷಿಸುವವನು ಇತರರನ್ನು ದಾರಿತಪ್ಪಿಸುತ್ತಾನೆ.” (ಜ್ಞಾನೋಕ್ತಿ 10:​17, ಪರಿಶುದ್ಧ ಬೈಬಲ್‌ *) ಎರಡು ವಿಷಯದಲ್ಲೂ, ನಾವು ಶಿಸ್ತನ್ನು ಕೈಕೊಳ್ಳುವುದು ಮತ್ತು ಗದರಿಕೆಯನ್ನು ಅಲಕ್ಷಿಸದೇ ಇರುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆ!

ದ್ವೇಷವನ್ನು ತೆಗೆದುಹಾಕಿ ಪ್ರೀತಿಯನ್ನು ತುಂಬಿಸಿರಿ

ಒಂದೇ ರೀತಿಯ ವಿಚಾರವನ್ನು ವ್ಯಕ್ತಪಡಿಸುವ ಎರಡು ಭಾಗದ ಜ್ಞಾನೋಕ್ತಿಯನ್ನು ಸೊಲೊಮೋನನು ಪ್ರಸ್ತುತಪಡಿಸುತ್ತಾನೆ. ಇದರ ಎರಡನೆಯ ಭಾಗ ಮೊದಲ ಭಾಗಕ್ಕೆ ಒತ್ತುನೀಡುವಂತಿದೆ. ಅವನು ಹೇಳುವುದು: “ಹಗೆತನವನ್ನು ಮುಚ್ಚಿಡುವವ ಸುಳ್ಳುಗಾರ.” ಒಬ್ಬ ಮನುಷ್ಯನ ಹೃದಯದಲ್ಲಿ ಇನ್ನೊಬ್ಬನ ಮೇಲೆ ಹಗೆತನವಿದ್ದು, ಸವಿಮಾತಿನಿಂದ ಅಥವಾ ಮುಖಸ್ತುತಿಯಿಂದ ಅದನ್ನು ಮರೆಮಾಚುವುದಾದರೆ, ಅವನು ಅಪ್ರಾಮಾಣಿಕ ವ್ಯಕ್ತಿಯಾಗಿದ್ದಾನೆ​—ಅವನು “ಸುಳ್ಳುಗಾರ”ನಾಗಿದ್ದಾನೆ. ಇದಕ್ಕೆ ಕೂಡಿಸುತ್ತಾ ಜ್ಞಾನಿಯಾದ ರಾಜ ಹೇಳಿದ್ದು: “ಚಾಡಿಕೋರನು ಜ್ಞಾನಹೀನ.” (ಜ್ಞಾನೋಕ್ತಿ 10:​18, NW) ತಮ್ಮ ಹಗೆಯನ್ನು ಮರೆಮಾಚುವ ಬದಲು, ಕೆಲವು ಜನರು ತಾವು ಹಗೆಮಾಡುವಂಥವರ ಮೇಲೆ ತಪ್ಪಾರೋಪಗಳನ್ನು ಹೊರಿಸುತ್ತಾರೆ ಅಥವಾ ಅವರ ಕುರಿತಾಗಿ ಹೀನೈಸುವಂಥ ಹೇಳಿಕೆಗಳನ್ನು ಹರಡಿಸುತ್ತಾರೆ. ಇದು ಮೂರ್ಖತನವಾಗಿದೆ, ಏಕೆಂದರೆ ಈ ಚಾಡಿಯು ಆ ವ್ಯಕ್ತಿಯು ನೈಜವಾಗಿ ಏನಾಗಿದ್ದಾನೋ ಅದನ್ನು ಬದಲಾಯಿಸುವುದಿಲ್ಲ. ಗ್ರಹಣಶಕ್ತಿಯುಳ್ಳ ಒಬ್ಬ ಕೇಳುಗನು ಇದರ ಹಿಂದಿರುವ ದುಷ್ಟ ಆಲೋಚನೆಯನ್ನು ಗ್ರಹಿಸಿಕೊಳ್ಳುವನು ಮತ್ತು ಸ್ವತಃ ಆ ಚಾಡಿಕೋರನಿಗೆ ಕಡಿಮೆ ಗೌರವವನ್ನು ತೋರಿಸುವನು. ಆದುದರಿಂದ ಚಾಡಿಯನ್ನು ಹಬ್ಬಿಸುವವನು ಸ್ವತಃ ತನಗೇ ಹಾನಿಯನ್ನು ತಂದುಕೊಳ್ಳುತ್ತಾನೆ.

ವಂಚನೆ ಇಲ್ಲವೆ ಮೋಸವನ್ನು ಆಶ್ರಯಿಸದೆ ಇರುವುದೇ ನೀತಿಯ ಮಾರ್ಗವಾಗಿದೆ. ದೇವರು ಇಸ್ರಾಯೇಲ್ಯರಿಗೆ ಹೇಳಿದ್ದು: “ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು.” (ಯಾಜಕಕಾಂಡ 19:17) ಮತ್ತು ಯೇಸು ತನ್ನ ಕೇಳುಗರಿಗೆ ಬುದ್ಧಿವಾದ ನೀಡಿದ್ದು: “ನಿಮ್ಮ ವೈರಿಗಳನ್ನು [ಸಹ] ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ.” (ಮತ್ತಾಯ 5:​44, 45) ನಮ್ಮ ಹೃದಯವನ್ನು ದ್ವೇಷದ ಬದಲು ಪ್ರೀತಿಯಿಂದ ತುಂಬಿಸುವುದು ಎಷ್ಟು ಉತ್ತಮವಾಗಿರುವುದು!

‘ತುಟಿಗಳಿಗೆ ಕಡಿವಾಣ ಹಾಕಿ’

ನಾಲಿಗೆಯನ್ನು ಹತೋಟಿಯಲ್ಲಿಡಬೇಕಾದ ಅಗತ್ಯವನ್ನು ಒತ್ತಿಹೇಳುತ್ತಾ, ಜ್ಞಾನಿಯಾದ ರಾಜನು ಅಂದದ್ದು: “ಮಾತಾಳಿಗೆ ಪಾಪ ತಪ್ಪದು; ತನ್ನ ತುಟಿಗಳಿಗೆ ಕಡಿವಾಣ ಹಾಕುವವನು ವಿವೇಚನೆಯಿಂದ ವರ್ತಿಸುತ್ತಾನೆ.”​—ಜ್ಞಾನೋಕ್ತಿ 10:​19, NW.

“ಅಜ್ಞಾನಿಯ ಮಾತುಗಳೋ ಬಹಳ.” (ಪ್ರಸಂಗಿ 10:14) ಅವನ ಬಾಯಿ “ಮೂರ್ಖತನವನ್ನು ಕಕ್ಕುವದು.” (ಜ್ಞಾನೋಕ್ತಿ 15:2) ಇದರರ್ಥ, ಮಾತಾಳಿಗಳೆಲ್ಲರೂ ಮೂರ್ಖರೆಂದೇನಲ್ಲ. ಆದರೆ ತುಂಬ ಮಾತನಾಡುವ ಒಬ್ಬ ವ್ಯಕ್ತಿ, ಹಾನಿಕರವಾದ ಹರಟೆಮಾತನ್ನು ಅಥವಾ ಗಾಳಿಸುದ್ದಿಯನ್ನು ಹರಡಿಸುವುದಕ್ಕೆ ಒಂದು ಮಾಧ್ಯಮವಾಗುವುದು ಎಷ್ಟು ಸುಲಭವಾಗಿರುವುದು! ಮೂರ್ಖತನದ ಮಾತುಕತೆಯಿಂದ ಹೆಸರಿಗೆ ಅಪಕೀರ್ತಿ, ನೋವಿನ ಅನಿಸಿಕೆಗಳು, ವಿಷಮವಾದ ಸಂಬಂಧಗಳು, ಮತ್ತು ಅನೇಕವೇಳೆ ಶಾರೀರಿಕ ಹಾನಿ ಕೂಡ ಪರಿಣಮಿಸಬಹುದು. “ಮಾತುಗಳ ಸಮೃದ್ಧಿಯೆಲ್ಲಿಯೋ, ಪಾಪದ ಅಸ್ತಿತ್ವವಲ್ಲಿ.” (ಜ್ಞಾನೋಕ್ತಿ 10:​19, ಆ್ಯನ್‌ ಅಮೆರಿಕನ್‌ ಟ್ರಾನ್ಸ್‌ಲೇಶನ್‌) ಮಾತ್ರವಲ್ಲದೆ, ಪ್ರತಿಯೊಂದು ವಿಷಯದ ಬಗ್ಗೆ ಏನಾದರೂ ಹೇಳಲಿಕ್ಕಿರುವ ವ್ಯಕ್ತಿಯೊಂದಿಗಿರುವುದು ಜಿಗುಪ್ಸೆಯನ್ನು ಉಂಟುಮಾಡಬಹುದು. ಆದುದರಿಂದ ನಮ್ಮ ಮಾತುಗಳು ಸಮೃದ್ಧವಾಗಿರದಿರಲಿ.

ತನ್ನ ತುಟಿಗಳಿಗೆ ಕಡಿವಾಣ ಹಾಕುವವನು, ಕೇವಲ ಅಸತ್ಯದಿಂದ ದೂರವಿರುವುದಕ್ಕಿಂತಲೂ ಹೆಚ್ಚಾಗಿ ವಿವೇಚನೆಯಿಂದ ವರ್ತಿಸುತ್ತಾನೆ. ಅವನು ಮಾತಾಡುವ ಮುನ್ನ ಯೋಚಿಸುತ್ತಾನೆ. ದೇವರ ಮಟ್ಟಗಳಿಗಾಗಿ ಪ್ರೀತಿ ಮತ್ತು ತನ್ನ ಜೊತೆಮಾನವನಿಗೆ ಸಹಾಯಮಾಡಬೇಕು ಎಂಬ ನೈಜವಾದ ಆಶೆಯೊಂದಿಗೆ ಪ್ರಚೋದಿತನಾಗಿ, ಅವನ ಮಾತುಗಳು ಬೇರೆಯವರ ಮೇಲೆ ಬೀರಬಹುದಾದ ಪರಿಣಾಮವನ್ನು ಅವನು ಪರಿಗಣನೆಗೆ ತೆಗೆದುಕೊಳ್ಳುತ್ತಾನೆ. ಅವನ ಹೇಳಿಕೆಗಳು ಪ್ರೀತಿಪರವೂ ಸ್ನೇಹಪರವೂ ಆಗಿರುತ್ತವೆ. ಅವನು ಹೇಳುವಂಥ ಮಾತುಗಳನ್ನು ಹೇಗೆ ಮನತಟ್ಟುವಂಥವುಗಳು ಮತ್ತು ಸಹಾಯಕರವಾದದ್ದಾಗಿ ಮಾಡಬೇಕು ಎಂಬುದರ ಕುರಿತು ಅವನು ಮನನಮಾಡುತ್ತಾನೆ. ಅವನ ಮಾತುಗಳು ‘ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಂತೆ,’ ಎಲ್ಲ ಸಮಯಗಳಲ್ಲಿ ಚಾತುರ್ಯವುಳ್ಳದ್ದೂ ಗೌರವವುಳ್ಳದ್ದೂ ಆಗಿರುವವು.​—ಜ್ಞಾನೋಕ್ತಿ 25:11.

‘ಬಹುಜನಪೋಷಣವಾಗಿರ್ರಿ’

ಸೊಲೊಮೋನನು ಮುಂದುವರಿಸುತ್ತಾ ಹೇಳುವುದು: “ನೀತಿವಂತರ ನಾಲಿಗೆ ಚೊಕ್ಕಬೆಳ್ಳಿ; ದುಷ್ಟನ ಹೃದಯ ಹುಲ್ಕಡ್ಡಿ.” (ಜ್ಞಾನೋಕ್ತಿ 10:​20, NW) ನೀತಿವಂತರು ಏನು ಹೇಳುತ್ತಾರೋ ಅದು ಚೊಕ್ಕ, ಶೋಧಿಸಿದ, ಕಶ್ಮಲವಿಲ್ಲದ ಬೆಳ್ಳಿಯಂತೆ ನಿರ್ಮಲವಾದದ್ದಾಗಿದೆ. ಇದು, ದೇವರ ವಾಕ್ಯದ ಜೀವರಕ್ಷಕ ಜ್ಞಾನವನ್ನು ಇತರರಿಗೆ ಹಂಚುವ ಯೆಹೋವನ ಸೇವಕರ ವಿಷಯದಲ್ಲಿ ಖಂಡಿತವಾಗಿಯೂ ಸತ್ಯವಾಗಿದೆ. ಅವರ ಮಹಾನ್‌ ಉಪದೇಶಕನಾದ ಯೆಹೋವ ದೇವರು, ಅವರನ್ನು ತರಬೇತಿಗೊಳಿಸಿದ್ದಾನೆ ಮತ್ತು ‘ಬಳಲಿಹೋದವರನ್ನು ಮಾತುಗಳಿಂದ ಸುದಾರಿಸುವದಕ್ಕೆ ಬಲ್ಲವರಾಗಿರುವಂತೆ ಅವರಿಗೆ ಶಿಕ್ಷಿತರ ನಾಲಿಗೆಯನ್ನು ದಯಪಾಲಿಸಿದ್ದಾನೆ.’ (ಯೆಶಾಯ 30:​20, NW; 50:4) ಖಂಡಿತವಾಗಿಯೂ, ಅವರ ನಾಲಿಗೆಯು ಚೊಕ್ಕಬೆಳ್ಳಿಯಂತಿದೆ, ಏಕೆಂದರೆ ಅದು ಬೈಬಲ್‌ ಸತ್ಯವನ್ನು ಆಡುತ್ತದೆ. ಅವರ ನುಡಿಗಳು ಸಹೃದಯಿ ಜನರಿಗೆ ದುಷ್ಟನ ಉದ್ದೇಶಗಳಿಗಿಂತ ಎಷ್ಟು ಅಪರಿಮಿತ ಮೌಲ್ಯವುಳ್ಳದ್ದಾಗಿವೆ! ದೇವರ ರಾಜ್ಯದ ಕುರಿತು ಮತ್ತು ಆತನ ಅದ್ಭುತಕಾರ್ಯಗಳ ಕುರಿತು ಮಾತಾಡಲು ನಾವು ಅತ್ಯಾಸಕ್ತಿಯುಳ್ಳವರಾಗಿರೋಣ.

ನೀತಿವಂತನು ತನ್ನ ಸುತ್ತಲೂ ಇರುವ ಜನರಿಗೆ ಆಶೀರ್ವಾದವಾಗಿದ್ದಾನೆ. ಸೊಲೊಮೋನನು ಮುಂದುವರಿಸುವುದು: “ನೀತಿವಂತರ ಭಾಷಣ ಬಹುಜನಪೋಷಣ; ಬುದ್ಧಿಯ ಕೊರತೆ ಮೂರ್ಖರ ನಾಶನ.”​—ಜ್ಞಾನೋಕ್ತಿ 10:​21, NW.

‘ನೀತಿವಂತನ ಭಾಷಣ ಬಹುಜನಪೋಷಣ’ ಆಗಿರುವುದು ಹೇಗೆ? ಇಲ್ಲಿ ಉಪಯೋಗಿಸಲ್ಪಟ್ಟಿರುವ ಹೀಬ್ರು ಪದವು, “ಕುರಿಪಾಲನೆ”ಯ ವಿಚಾರವನ್ನು ವ್ಯಕ್ತಪಡಿಸುತ್ತದೆ. ಇದು, ಪುರಾತನ ಕಾಲಗಳಲ್ಲಿದ್ದ ಒಬ್ಬ ಕುರುಬನು ಹೇಗೆ ತನ್ನ ಮಂದೆಯ ಆರೈಕೆಮಾಡಿದನೋ, ಹೆಚ್ಚಾಗಿ ಅದೇ ರೀತಿಯಲ್ಲಿ ಮಾರ್ಗದರ್ಶಿಸುವುದನ್ನು ಮತ್ತು ಪೋಷಿಸುವುದನ್ನು ಸೂಚಿಸುತ್ತದೆ. (1 ಸಮುವೇಲ 16:11; ಕೀರ್ತನೆ 23:1-3; ಪರಮಗೀತ 1:7) ನೀತಿವಂತನು ಇತರರನ್ನು ನೀತಿಯ ಮಾರ್ಗದ ಕಡೆಗೆ ಮಾರ್ಗದರ್ಶಿಸುತ್ತಾನೆ ಅಥವಾ ನಡೆಸುತ್ತಾನೆ, ಮತ್ತು ಅವನ ಮಾತು ಅವನ ಕೇಳುಗರಿಗೆ ಪೋಷಣೆಯಂತಿರುವುದು. ಇದರ ಪರಿಣಾಮವಾಗಿ, ಅವರು ಸಂತೋಷಕರ, ಹೆಚ್ಚು ತೃಪ್ತಿದಾಯಕ ಜೀವಿತಗಳನ್ನು ಜೀವಿಸಬಹುದು ಮತ್ತು ನಿತ್ಯಜೀವವನ್ನೂ ಪಡೆದುಕೊಳ್ಳಬಹುದು.

ಆದರೆ ಮೂರ್ಖನ ಕುರಿತಾಗಿ ಏನು? ಬುದ್ಧಿಯ ಕೊರತೆಯಿರುವುದರಿಂದ, ಅವನಿಗೆ ಒಳ್ಳೆಯ ಉದ್ದೇಶವಿರುವುದಿಲ್ಲ ಅಥವಾ ತನ್ನ ಮಾರ್ಗದ ಫಲಿತಾಂಶಗಳ ಕುರಿತು ಚಿಂತೆಯಿಲ್ಲ ಎಂಬುದನ್ನು ತೋರಿಸಿಕೊಳ್ಳುತ್ತಾನೆ. ಇಂತಹ ಒಬ್ಬ ವ್ಯಕ್ತಿ, ಫಲಿತಾಂಶಗಳ ಕುರಿತು ಪರಿವೇ ಇಲ್ಲದೆ, ಏನು ಬೇಕಾದರೂ ಮಾಡುತ್ತಾನೆ. ಆದುದರಿಂದ ತನ್ನ ಕೃತ್ಯಗಳ ದಂಡನೆಯನ್ನು ಅನುಭವಿಸುತ್ತಾನೆ. ನೀತಿವಂತನು ಬೇರೆಯವರು ಜೀವದಿಂದಿರಲು ಸಹಾಯಮಾಡುವಾಗ, ಬುದ್ಧಿಯ ಕೊರತೆಯಿರುವ ವ್ಯಕ್ತಿ ತನ್ನನ್ನು ತಾನೇ ಜೀವಂತವಾಗಿಟ್ಟುಕೊಳ್ಳಲು ಸಹ ಸಾಧ್ಯವಾಗುವುದಿಲ್ಲ.

ನಾಚಿಕೆಗೆಟ್ಟ ನಡತೆಯನ್ನು ತ್ಯಜಿಸಿರಿ

ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಅವನ ಇಷ್ಟಾನಿಷ್ಟಗಳಿಂದ ಅನೇಕಾವರ್ತಿ ವ್ಯಕ್ತವಾಗುತ್ತದೆ. ಈ ವಾಸ್ತವಾಂಶವನ್ನು ತಿಳಿಯಪಡಿಸುತ್ತಾ ಇಸ್ರಾಯೇಲಿನ ರಾಜನು ಹೇಳುವುದು: “ಅವಿವೇಕಿಗೆ ಕುಯುಕ್ತಿ [“ನಾಚಿಕೆಗೆಟ್ಟ ನಡತೆ,” NW] ವಿನೋದ; ವಿವೇಕಿಗೆ ಜ್ಞಾನ ವಿನೋದ.”​—ಜ್ಞಾನೋಕ್ತಿ 10:​23, ಓರೆ ಅಕ್ಷರಗಳು ನಮ್ಮವು.

ಕೆಲವರು ನಾಚಿಕೆಗೆಟ್ಟ ನಡತೆಯನ್ನು ವಿನೋದವಾಗಿ, ಅಥವಾ ಒಂದು ಆಟವಾಗಿ ವೀಕ್ಷಿಸುತ್ತಾರೆ ಮತ್ತು ಅದರಲ್ಲಿ ಕೇವಲ “ತಮಾಷೆಗಾಗಿ” ಒಳಗೂಡುತ್ತಾರೆ. ಎಲ್ಲರೂ ದೇವರಿಗೆ ಲೆಕ್ಕ ಒಪ್ಪಿಸಬೇಕು ಎಂಬುದನ್ನು ಇಂತಹ ಜನರು ಅಸಡ್ಡೆಮಾಡುತ್ತಾರೆ, ಮತ್ತು ಅವರು ತಮ್ಮ ಮಾರ್ಗದ ಕೆಟ್ಟತನಕ್ಕೆ ಕಣ್ಮುಚ್ಚಿಕೊಂಡಿರುತ್ತಾರೆ. (ರೋಮಾಪುರ 14:​12, NW) ತಮ್ಮ ದುರ್ನಡತೆಯನ್ನು ದೇವರು ನೋಡುವುದಿಲ್ಲ ಎಂದು ಭಾವಿಸುವಷ್ಟರ ಮಟ್ಟಿಗೆ ಅವರು ತಮ್ಮ ಆಲೋಚನಾರೀತಿಯಲ್ಲಿ ವಕ್ರಗೊಳ್ಳುತ್ತಾರೆ. ತಮ್ಮ ಕೃತ್ಯಗಳ ಮೂಲಕವಾಗಿ ಅವರು, “[ಯೆಹೋವನಿಲ್ಲವೆಂದು] ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ.” (ಕೀರ್ತನೆ 14:1-3; ಯೆಶಾಯ 29:15, 16) ಎಂತಹ ಮೂರ್ಖತನ!

ಇನ್ನೊಂದು ಪಕ್ಕದಲ್ಲಿ, ನಾಚಿಕೆಗೆಟ್ಟ ನಡತೆಯು ವಿನೋದವಲ್ಲ ಎಂಬುದನ್ನು ವಿವೇಕಿಯಾದ ಮನುಷ್ಯನು ಪರಿಗಣಿಸುತ್ತಾನೆ. ಅದು ದೇವರನ್ನು ದುಃಖಿಸುತ್ತದೆ ಮತ್ತು ಆತನೊಂದಿಗಿರುವ ಒಬ್ಬ ವ್ಯಕ್ತಿಯ ಸಂಬಂಧವನ್ನು ಕಡಿದುಹಾಕುತ್ತದೆ ಎಂಬುದನ್ನು ಅವನು ತಿಳಿದವನಾಗಿರುತ್ತಾನೆ. ಇಂತಹ ನಡತೆಯು ಮೂರ್ಖತನವಾಗಿದೆ, ಏಕೆಂದರೆ ಅದು ಜನರಿಂದ ಸ್ವಗೌರವವನ್ನು ಕಸಿದುಕೊಳ್ಳುತ್ತದೆ, ವಿವಾಹಗಳನ್ನು ನಾಶಗೊಳಿಸುತ್ತದೆ, ಮನಸ್ಸು ಮತ್ತು ದೇಹವೆರಡಕ್ಕೂ ಹಾನಿಯನ್ನುಂಟುಮಾಡುತ್ತದೆ, ಮತ್ತು ಆತ್ಮಿಕತೆಯ ನಷ್ಟಕ್ಕೆ ನಡೆಸುತ್ತದೆ. ನಾಚಿಕೆಗೆಟ್ಟ ನಡತೆಯನ್ನು ತ್ಯಜಿಸುವಾಗ ಮತ್ತು ಒಬ್ಬ ಪ್ರೀತಿಯ ಅಕ್ಕನಿಗೆ ತೋರಿಸುವ ಒಲುಮೆಯಂತೆ ಜ್ಞಾನಕ್ಕೆ ಒಲುಮೆಯನ್ನು ಬೆಳೆಸಿಕೊಳ್ಳುವಾಗ ನಾವು ವಿವೇಕವನ್ನು ತೋರಿಸುತ್ತೇವೆ.​—ಜ್ಞಾನೋಕ್ತಿ 7:4.

ಸರಿಯಾದ ಅಸ್ತಿವಾರದ ಮೇಲೆ ಕಟ್ಟಿರಿ

ಒಂದು ಸರಿಯಾದ ಅಸ್ತಿವಾರದ ಮೇಲೆ ಒಬ್ಬನ ಜೀವಿತವನ್ನು ಕಟ್ಟುವುದರ ಮೌಲ್ಯವನ್ನು ಸೂಚಿಸುತ್ತಾ, ಸೊಲೊಮೋನನು ಹೇಳುವುದು: “ದುಷ್ಟನಿಗೆ ಭೀತಿಕರವಾಗಿರುವ ವಿಷಯ​—ಅದೇ ಅವನಿಗೆ ಸಂಭವಿಸುವದು; ನೀತಿವಂತನಿಗೆ ಇಷ್ಟವು ಲಭಿಸುವದು. ಬಿರುಗಾಳಿ ಬೀಸಿದರೆ ದುಷ್ಟನು ಎಲ್ಲೋ! ನೀತಿವಂತನು ಶಾಶ್ವತವಾದ ಅಸ್ತಿವಾರ.”​—ಜ್ಞಾನೋಕ್ತಿ 10:24, 25, NW.

ದುಷ್ಟನು ಇತರರಿಗೆ ಹೆಚ್ಚಿನ ಭೀತಿಯನ್ನು ಉಂಟುಮಾಡಬಹುದು. ಆದರೆ ಅಂತ್ಯದಲ್ಲಿ, ಅವನು ಏನನ್ನು ಭಯಪಡುತ್ತಾನೋ ಅದೇ ಅವನ ಮೇಲೆ ಬರುವುದು. ಅವನು ನೀತಿಯ ನಿಯಮಗಳಲ್ಲಿ ಅಸ್ತಿವಾರವಿಲ್ಲದವನಾಗಿ, ಒಂದು ಪ್ರಚಂಡವಾದ ಚಂಡಮಾರುತದಲ್ಲಿ ಕುಸಿದುಬೀಳುವ ಅಸ್ಥಿರವಾದ ಕಟ್ಟಡದಂತಿದ್ದಾನೆ. ಅವನು ಒತ್ತಡಕ್ಕೆ ಮಣಿದುಹೋಗುತ್ತಾನೆ. ಇನ್ನೊಂದು ಬದಿಯಲ್ಲಿ, ನೀತಿವಂತನು, ಯೇಸುವಿನ ಹೇಳಿಕೆಗಳಿಗೆ ಅನುಸಾರವಾಗಿ ನಡೆಯುವ ಮನುಷ್ಯನಂತಿದ್ದಾನೆ. ಅವನು “ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯ”ನಾಗಿದ್ದಾನೆ. ಯೇಸು ಹೇಳಿದ್ದು: “ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲಿದ್ದದರಿಂದ ಅದು ಬೀಳಲಿಲ್ಲ.” (ಮತ್ತಾಯ 7:24, 25) ಇಂತಹ ವ್ಯಕ್ತಿಯು ಸ್ಥಿರವಾಗಿದ್ದಾನೆ​—ಅವನ ಆಲೋಚನೆ ಮತ್ತು ಕೃತ್ಯಗಳು ದೈವಿಕ ನಿಯಮಗಳ ಮೇಲೆ ಸ್ಥಿರವಾಗಿ ನೆಲೆಗೊಂಡಿವೆ.

ದುಷ್ಟರ ಮತ್ತು ನೀತಿವಂತರ ಮಧ್ಯೆಯಿರುವ ವ್ಯತ್ಯಾಸವನ್ನು ತೋರಿಸುತ್ತಾ ಮುಂದುವರಿಯುವ ಮುನ್ನ, ಸಂಕ್ಷಿಪ್ತವಾದ ಆದರೆ ಪ್ರಾಮುಖ್ಯವಾದ ಒಂದು ಎಚ್ಚರಿಕೆಯನ್ನು ಜ್ಞಾನಿಯಾದ ರಾಜನು ಪ್ರಸ್ತುತಪಡಿಸತ್ತಾನೆ. ಅವನು ಹೇಳುವುದು: “ಹಲ್ಲುಗಳಿಗೆ ಹುಳಿಯೂ ಕಣ್ಣುಗಳಿಗೆ ಹೊಗೆಯೂ ಹೇಗೋ ಯಜಮಾನನಿಗೆ ಸೋಮಾರಿಯು ಹಾಗೆ.” (ಜ್ಞಾನೋಕ್ತಿ 10:​26, ಓರೆ ಅಕ್ಷರಗಳು ನಮ್ಮವು.) ಹುಳಿ ಹಲ್ಲುಗಳಿಗೆ ಜಿಗುಪ್ಸೆಯನ್ನು ಉಂಟುಮಾಡುತ್ತದೆ. ಅದರಲ್ಲಿರುವ ಅಸೀಟಿಕ್‌ ಆಮ್ಲ ಬಾಯಿಯಲ್ಲಿ ಹುಳಿಯಾದ ರುಚಿಯನ್ನು ಉಂಟುಮಾಡುತ್ತದೆ ಮತ್ತು ಒಬ್ಬನ ಹಲ್ಲುಗಳನ್ನು ಜುಮ್ಮೆನ್ನಿಸುತ್ತದೆ. ಹೊಗೆ ಕಣ್ಣಿಗೆ ಉರಿಯನ್ನು ಮತ್ತು ಯಾತನೆಯನ್ನು ತರುತ್ತದೆ. ತದ್ರೀತಿಯಲ್ಲೇ, ಒಬ್ಬ ಸೋಮಾರಿಯನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಅಥವಾ ಒಬ್ಬ ಪ್ರತಿನಿಧಿಯೋಪಾದಿ ಅವನನ್ನು ಉಪಯೋಗಿಸುವ ಯಾವನೇ ಒಬ್ಬನು ಕಿರುಕುಳವನ್ನು ಎದುರಿಸುವನು ಮತ್ತು ನಷ್ಟವನ್ನು ಅನುಭವಿಸುವನು.

“ಯೆಹೋವನ ಮಾರ್ಗವು ಸನ್ಮಾರ್ಗಿಗೆ ಆಶ್ರಯ”

ಇಸ್ರಾಯೇಲಿನ ರಾಜನು ಮುಂದುವರಿಸುವುದು: “ಯೆಹೋವನಿಗೆ ಭಯಪಡುವವರ ದಿನಗಳಿಗೆ ವೃದ್ಧಿ; ದುಷ್ಟರ ವರುಷಗಳಿಗೆ ಕ್ಷಯ. ನೀತಿವಂತನ ನಂಬಿಕೆಗೆ ಆನಂದವು ಫಲ; ದುಷ್ಟನ ನಿರೀಕ್ಷೆ ನಿಷ್ಫಲ.”​—ಜ್ಞಾನೋಕ್ತಿ 10:27, 28, NW.

ನೀತಿವಂತನು ದೈವಿಕ ಭಯದಿಂದ ಮಾರ್ಗದರ್ಶಿಸಲ್ಪಡುತ್ತಾನೆ ಮತ್ತು ಅವನು ತನ್ನ ಯೋಚನೆಗಳು, ಮಾತುಗಳು, ಹಾಗೂ ಕೃತ್ಯಗಳಿಂದ ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುತ್ತಾನೆ. ದೇವರು ಅವನನ್ನು ಪರಾಮರಿಸಿ ಅವನ ನೀತಿಯುಳ್ಳ ಅಪೇಕ್ಷೆಗಳನ್ನು ಪೂರೈಸುತ್ತಾನೆ. ಆದರೆ, ದುಷ್ಟನು ದೈವಭಕ್ತಿಯಿಲ್ಲದ ಜೀವನವನ್ನು ನಡೆಸುತ್ತಾನೆ. ಅವನ ನಿರೀಕ್ಷೆಗಳು ಕೆಲವೊಮ್ಮೆ ಪೂರೈಸಲ್ಪಟ್ಟಂತೆ ತೋರಬಹುದು, ಆದರೆ ಅವು ಕೇವಲ ತಾತ್ಕಾಲಿಕವಾಗಿರುವವು, ಏಕೆಂದರೆ ಅವನ ದಿನಗಳು ಅನೇಕವೇಳೆ ಹಿಂಸಾತ್ಮಕ ಮರಣದಿಂದ ಅಥವಾ ಅವನ ಜೀವನರೀತಿಯ ಫಲಿತಾಂಶದಿಂದಾದ ಒಂದು ಅಸ್ವಸ್ಥತೆಯಿಂದಾಗಿ ಕಡಿದುಹಾಕಲ್ಪಡುವುವು. ಅವನು ಸಾಯುವ ದಿನದಲ್ಲಿ ಅವನ ನಿರೀಕ್ಷೆಗಳು ಚೂರುಚೂರಾಗುತ್ತವೆ.​—ಜ್ಞಾನೋಕ್ತಿ 11:7.

ಸೊಲೊಮೋನನು ಹೇಳುವುದು: “ಯೆಹೋವನ ಮಾರ್ಗವು ಸನ್ಮಾರ್ಗಿಗೆ ಆಶ್ರಯ, ಕೆಡುಕನಿಗೆ ನಾಶನ.” (ಜ್ಞಾನೋಕ್ತಿ 10:​29, NW) ಇಲ್ಲಿ ಯೆಹೋವನ ಮಾರ್ಗವು, ನಾವು ನಡೆಯಬೇಕಾದ ಜೀವನ ಮಾರ್ಗವನ್ನು ಸೂಚಿಸುವುದಿಲ್ಲ, ಬದಲಾಗಿ ಮಾನವವರ್ಗದೊಂದಿಗೆ ಯೆಹೋವನು ವ್ಯವಹರಿಸುವ ರೀತಿಯನ್ನು ಸೂಚಿಸುತ್ತದೆ. “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ,” ಎಂದು ಮೋಶೆ ಹೇಳಿದನು. (ಧರ್ಮೋಪದೇಶಕಾಂಡ 32:4) ಯೆಹೋವನ ನೀತಿಯ ಮಾರ್ಗಗಳು ನೀತಿವಂತನಿಗೆ ಭದ್ರತೆ ಮತ್ತು ದುಷ್ಟನಿಗೆ ನಾಶನವಾಗಿದೆ.

ಯೆಹೋವನು ತನ್ನ ಜನರಿಗೆ ಎಂತಹ ಆಶ್ರಯವಾಗಿ ಪರಿಣಮಿಸುತ್ತಾನೆ! “ನೀತಿವಂತರು ಎಂದಿಗೂ ಕದಲರು; ದುಷ್ಟರು ದೇಶದಲ್ಲಿ ನಿಲ್ಲರು. ನೀತಿವಂತನ ಬಾಯಲ್ಲಿ ಜ್ಞಾನವು ಮೊಳೆಯುವದು; ನೀಚನ ನಾಲಿಗೆ ಕತ್ತರಿಸಲ್ಪಡುವದು. ನೀತಿವಂತನ ತುಟಿಯಲ್ಲಿ ಉಚಿತವಚನ; ದುಷ್ಟನ ಬಾಯಲ್ಲಿ ನೀಚವಚನ.”​—ಜ್ಞಾನೋಕ್ತಿ 10:30-32, NW.

ನೀತಿವಂತರು ನೇರವಾದ ಮಾರ್ಗದಲ್ಲಿ ನಡೆಯುವ ಕಾರಣ, ಖಂಡಿತವಾಗಿಯೂ ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತಾರೆ ಮತ್ತು ಆಶೀರ್ವದಿಸಲ್ಪಡುತ್ತಾರೆ. “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು,” ಎಂಬುದು ನಿಜವೇ. (ಜ್ಞಾನೋಕ್ತಿ 10:​22, ಓರೆ ಅಕ್ಷರಗಳು ನಮ್ಮವು.) ಹಾಗಾದರೆ, ನಾವು ದೈವಿಕ ನಿಯಮಗಳಿಗೆ ಹೊಂದಿಕೆಯಲ್ಲಿ ನಡೆಯುತ್ತೇವೆಂಬುದನ್ನು ಯಾವಾಗಲೂ ಪೂರ್ಣವಾಗಿ ಖಚಿತಪಡಿಸಿಕೊಳ್ಳೋಣ. ನಾವು ನಮ್ಮ ತುಟಿಗಳಿಗೆ ಯಾವಾಗಲೂ ಕಡಿವಾಣವನ್ನು ಹಾಕಿಡೋಣ ಮತ್ತು ನಮ್ಮ ನಾಲಿಗೆಯನ್ನು ದೇವರ ವಾಕ್ಯದ ಜೀವರಕ್ಷಕ ಸತ್ಯದಿಂದ ಇತರರನ್ನು ಪೋಷಿಸಿ, ಅವರನ್ನು ನೀತಿಯ ಮಾರ್ಗದೆಡೆಗೆ ಮಾರ್ಗದರ್ಶಿಸಲು ಉಪಯೋಗಿಸೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 8 Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.

[ಪುಟ 26ರಲ್ಲಿರುವ ಚಿತ್ರ]

ನಾಲಿಗೆಯು “ಚೊಕ್ಕಬೆಳ್ಳಿ”ಯಂತಿರಬಲ್ಲದು