ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷಮಾಯಾಚನೆ ಶಾಂತಿಯನ್ನು ಸ್ಥಾಪಿಸಲಿಕ್ಕಾಗಿರುವ ಒಂದು ಕೀಲಿ ಕೈ

ಕ್ಷಮಾಯಾಚನೆ ಶಾಂತಿಯನ್ನು ಸ್ಥಾಪಿಸಲಿಕ್ಕಾಗಿರುವ ಒಂದು ಕೀಲಿ ಕೈ

ಕ್ಷಮಾಯಾಚನೆ ಶಾಂತಿಯನ್ನು ಸ್ಥಾಪಿಸಲಿಕ್ಕಾಗಿರುವ ಒಂದು ಕೀಲಿ ಕೈ

“ಕ್ಷಮಾಯಾಚನೆಗಳು ಶಕ್ತಿಯುತವಾಗಿವೆ. ಅವು ಹೊಡೆದಾಟವಿಲ್ಲದೆ ತಿಕ್ಕಾಟಗಳನ್ನು ಪರಿಹರಿಸಿ, ಜನಾಂಗಗಳ ಮಧ್ಯೆ ಇರುವ ಒಡಕುಗಳನ್ನು ಸರಿಪಡಿಸಿ, ಸರಕಾರಗಳು ತಮ್ಮ ಪ್ರಜೆಗಳ ಕಷ್ಟಾನುಭವಗಳನ್ನು ಒಪ್ಪಿಕೊಳ್ಳುವಂತೆ ಮಾಡಿ, ವ್ಯಕ್ತಿಪರ ಸಂಬಂಧಗಳಲ್ಲಿ ಸಮಸ್ಥಿತಿಯನ್ನು ಪುನಃಸ್ಥಾಪಿಸುತ್ತವೆ.” ಹೀಗೆಂದು ವಾಷಿಂಗ್ಟನ್‌ ಡಿ.ಸಿ.ಯಲ್ಲಿರುವ ಜಾರ್ಜ್‌ಟೌನ್‌ ವಿಶ್ವವಿದ್ಯಾನಿಲಯದ ಜನಪ್ರಿಯ ಲೇಖಕಿಯೂ ಸಾಮಾಜಿಕ ಬಹುಭಾಷಾಶಾಸ್ತ್ರಜ್ಞೆಯೂ ಆದ ಡೆಬ್ರ ಟ್ಯಾನನ್‌ ಬರೆದರು.

ಮನಃಪೂರ್ವಕವಾದ ಕ್ಷಮಾಯಾಚನೆಯು ಅನೇಕವೇಳೆ, ಕಡಿದಿರುವ ಸಂಬಂಧವನ್ನು ಮತ್ತೆ ಜೋಡಿಸುವ ಒಂದು ಕಾರ್ಯಸಾಧಕ ಮಾರ್ಗವಾಗಿದೆಯೆಂದು ಬೈಬಲು ದೃಢೀಕರಿಸುತ್ತದೆ. ಉದಾಹರಣೆಗೆ, ಯೇಸು ಹೇಳಿದ ಪೋಲಿಹೋದ ಮಗನ ಸಾಮ್ಯದಲ್ಲಿ, ಮಗನು ಮನೆಗೆ ಹಿಂದಿರುಗಿ ತಂದೆಯಿಂದ ಹೃತ್ಪೂರ್ವಕವಾದ ಕ್ಷಮೆಯನ್ನು ಯಾಚಿಸಿದಾಗ, ತಂದೆ ಅವನನ್ನು ಕುಟುಂಬಕ್ಕೆ ಸೇರಿಸಿಕೊಳ್ಳಲು ಸ್ವಲ್ಪವೂ ಹಿಂಜರಿಯಲಿಲ್ಲ. (ಲೂಕ 15:​17-24) ಹೌದು, ಒಬ್ಬ ವ್ಯಕ್ತಿಯು ತನ್ನ ಅಹಂಭಾವವನ್ನು ನುಂಗಿ, ಕ್ಷಮೆಯಾಚಿಸಿ, ಅಪರಾಧವನ್ನು ಮನ್ನಿಸುವಂತೆ ಕೇಳಿಕೊಳ್ಳದಿರುವಷ್ಟು ಹೆಮ್ಮೆಯನ್ನು ಎಂದೂ ತೋರಿಸಬಾರದು. ಆದರೆ ಯಥಾರ್ಥವಾಗಿ ದೀನರಾಗಿರುವವರಿಗೆ ಕ್ಷಮೆಯಾಚಿಸುವುದು ಅಷ್ಟೊಂದು ಕಷ್ಟಕರವಾದ ಸಂಗತಿಯಾಗಿರುವುದಿಲ್ಲ.

ಕ್ಷಮಾಯಾಚನೆಯ ಶಕ್ತಿ

ಪುರಾತನ ಇಸ್ರಾಯೇಲಿನಲ್ಲಿದ್ದ ಒಬ್ಬ ವಿವೇಕಿ ಸ್ತ್ರೀಯಾಗಿದ್ದ ಅಬೀಗೈಲಳು, ತನ್ನ ಗಂಡನು ಮಾಡಿದ ಒಂದು ತಪ್ಪಿಗಾಗಿ ಕ್ಷಮೆಯಾಚಿಸಿದರೂ, ಕ್ಷಮಾಯಾಚನೆಗಿರುವ ಶಕ್ತಿಗೆ ಒಂದು ಉದಾಹರಣೆಯಾಗಿದ್ದಾಳೆ. ಅರಣ್ಯದಲ್ಲಿ ವಾಸಿಸುತ್ತಿದ್ದು, ಸಮಯಾನಂತರ ಇಸ್ರಾಯೇಲಿನ ಅರಸನಾಗಿ ಪರಿಣಮಿಸಿದ ದಾವೀದನು, ಅರಣ್ಯದಲ್ಲಿ ತನ್ನ ಹಿಂಬಾಲಕರೊಂದಿಗೆ ಅಬೀಗೈಲಳ ಗಂಡನಾದ ನಾಬಾಲನಿಗೆ ಸೇರಿದ್ದ ಮಂದೆಗಳನ್ನು ಕಾಪಾಡಿದ್ದನು. ಹೀಗಿದ್ದರೂ, ದಾವೀದನ ಯುವ ಜನರು ರೊಟ್ಟಿ ಮತ್ತು ನೀರನ್ನು ಕೇಳಿದಾಗ, ನಾಬಾಲನು ಅವರನ್ನು ತುಂಬ ಹೀಯಾಳಿಸಿ ಕಳುಹಿಸಿಬಿಟ್ಟನು. ಸಿಟ್ಟಿಗೆದ್ದ ದಾವೀದನು, ತನ್ನ ನಾಯಕತ್ವದಲ್ಲಿ ಸುಮಾರು 400 ಮಂದಿ ಪುರುಷರು ನಾಬಾಲನ ಮತ್ತು ಅವನ ಕುಟುಂಬದ ವಿರುದ್ಧ ಹೋಗುವಂತೆ ನಡೆಸಿದನು. ಇದನ್ನು ತಿಳಿದ ಅಬೀಗೈಲಳು ದಾವೀದನನ್ನು ದಾರಿಯಲ್ಲಿ ಸಂಧಿಸಲು ಹೊರಟಳು. ಆಕೆ ಅವನನ್ನು ನೋಡಿದಾಗ ಅವನ ಪಾದಗಳ ಮುಂದೆ ಸಾಷ್ಟಾಂಗವಾಗಿ ನಮಸ್ಕರಿಸಿದಳು. ನಂತರ ಆಕೆ ಹೇಳಿದ್ದು: “ಸ್ವಾಮೀ, ಅಪರಾಧವು ನನ್ನ ಮೇಲಿರಲಿ; ನಿನ್ನ ದಾಸಿಯು ಮಾತಾಡುವದಕ್ಕೆ ಅಪ್ಪಣೆಯಾಗಲಿ; ಅವಳ ಮಾತನ್ನು ಲಾಲಿಸಬೇಕು.” ಬಳಿಕ ಅಬೀಗೈಲಳು ಪರಿಸ್ಥಿತಿಯನ್ನು ವಿವರಿಸಿ, ದಾವೀದನಿಗೆ ಆಹಾರಪಾನೀಯಗಳ ಕೊಡುಗೆಯನ್ನು ಕೊಟ್ಟಳು. ಆಗ ಅವನು ಹೇಳಿದ್ದು: “ಸಮಾಧಾನದಿಂದ ಮನೆಗೆ ಹೋಗು; ನಿನ್ನನ್ನು ನೋಡಿ ನಿನ್ನ ವಿಜ್ಞಾಪನೆಯನ್ನು ಲಾಲಿಸಿದ್ದೇನೆ.”​—1 ಸಮುವೇಲ 25:2-35.

ಅಬೀಗೈಲಳ ದೀನ ಮನೋಭಾವ ಮತ್ತು ತನ್ನ ಗಂಡನ ಒರಟು ನಡತೆಯ ಪರವಾಗಿ ಆಕೆ ಕೇಳಿದ ಕ್ಷಮಾಯಾಚನೆಯು, ಆಕೆಯ ಕುಟುಂಬವನ್ನು ಉಳಿಸಿತು. ರಕ್ತಾಪರಾಧಕ್ಕೆ ಗುರಿಯಾಗದಂತೆ ತನ್ನನ್ನು ತಡೆದುದಕ್ಕಾಗಿ ದಾವೀದನು ಆಕೆಗೆ ಉಪಕಾರವನ್ನೂ ಹೇಳಿದನು. ದಾವೀದನನ್ನೂ ಅವನ ಜನರನ್ನೂ ದುರುಪಚರಿಸಿದವಳು ಆಕೆಯಲ್ಲವಾಗಿದ್ದರೂ ತನ್ನ ಕುಟುಂಬದ ಮೇಲೆ ಬಂದ ದೂರನ್ನು ಆಕೆ ಅಂಗೀಕರಿಸಿ ದಾವೀದನೊಂದಿಗೆ ಶಾಂತಿಯನ್ನು ಸ್ಥಾಪಿಸಿದಳು.

ಕ್ಷಮೆಯನ್ನು ಯಾವಾಗ ಯಾಚಿಸಬೇಕೆಂದು ತಿಳಿದಿರುವುದರ ಇನ್ನೊಂದು ಉದಾಹರಣೆಯು ಅಪೊಸ್ತಲ ಪೌಲನದ್ದಾಗಿದೆ. ಒಮ್ಮೆ ಯೆಹೂದಿ ಉಚ್ಚ ನ್ಯಾಯಾಲಯದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳುವ ಸಂದರ್ಭ ಪೌಲನಿಗಿತ್ತು. ಪೌಲನ ಪ್ರಾಮಾಣಿಕ ಮಾತುಗಳಿಂದ ಕೋಪೋದ್ರೇಕಗೊಂಡ ಮಹಾಯಾಜಕ ಅನನೀಯನು, ಹತ್ತಿರ ನಿಂತಿದ್ದವರು ಪೌಲನ ಬಾಯಿಯ ಮೇಲೆ ಹೊಡೆಯುವಂತೆ ಅವರಿಗೆ ಆಜ್ಞಾಪಿಸಿದನು. ಆಗ ಪೌಲನು ಅವನಿಗೆ ಹೇಳಿದ್ದು: “ಎಲೈ ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು. ನೀನು ಧರ್ಮಶಾಸ್ತ್ರಾನುಸಾರವಾಗಿ ನನ್ನ ವಿಚಾರಣೆ ಮಾಡುವದಕ್ಕೆ ಕೂತುಕೊಂಡು ಧರ್ಮಶಾಸ್ತ್ರವಿರುದ್ಧವಾಗಿ ನನ್ನನ್ನು ಹೊಡೆಯುವದಕ್ಕೆ ಅಪ್ಪಣೆಕೊಡುತ್ತೀಯೋ.” ಮಹಾಯಾಜಕನನ್ನು ನಿಂದಿಸಿದ ಅಪವಾದವನ್ನು ಪ್ರೇಕ್ಷಕರು ಪೌಲನ ಮೇಲೆ ಹೊರಿಸಿದಾಗ, ಆ ಅಪೊಸ್ತಲನು ಕೂಡಲೆ ತನ್ನ ತಪ್ಪೊಪ್ಪಿಕೊಳ್ಳುತ್ತಾ, “ಸಹೋದರರೇ, ಮಹಾಯಾಜಕನೆಂದು ನನಗೆ ತಿಳಿಯಲಿಲ್ಲ. ನಿನ್ನ ಜನರಲ್ಲಿ ಅಧಿಪತಿಯಾಗಿರುವವನ ವಿಷಯವಾಗಿ ಕೆಟ್ಟದ್ದೇನೂ ಆಡಬಾರದೆಂದು ಬರೆದದೆಯಷ್ಟೆ” ಎಂದು ಹೇಳಿದನು.​—ಅ. ಕೃತ್ಯಗಳು 23:1-5.

ಪೌಲನು ಏನು ಹೇಳಿದನೋ ಅದು, ಅಂದರೆ ನ್ಯಾಯಾಧಿಪತಿಯಾಗಿ ನೇಮಿಸಲ್ಪಟ್ಟವನು ಹಿಂಸಾಚಾರವನ್ನು ಉಪಯೋಗಿಸಬಾರದೆಂಬುದು ನ್ಯಾಯಸಮ್ಮತವಾಗಿತ್ತು. ಆದರೂ, ಗೊತ್ತಿಲ್ಲದೆ ಮಹಾಯಾಜಕನಿಗೆ ಅವಮಾನವಾಗಿ ಕಂಡುಬರುವಂತಹ ರೀತಿಯಲ್ಲಿ ಮಾತಾಡಿದ್ದಕ್ಕೆ ಪೌಲನು ಕ್ಷಮೆಯಾಚಿಸಿದನು. * ಪೌಲನ ಈ ಕ್ಷಮಾಯಾಚನೆಯು ಹಿರೀಸಭೆಯು ಅವನು ಏನು ಹೇಳಲಿದ್ದನೋ ಅದಕ್ಕೆ ಕಿವಿಗೊಡಲು ದಾರಿಯನ್ನು ತೆರೆಯಿತು. ಆ ನ್ಯಾಯಾಲಯದ ಸದಸ್ಯರ ಮಧ್ಯೆ ಇದ್ದ ವಾಗ್ವಾದದ ವಿಷಯ ಪೌಲನಿಗೆ ತಿಳಿದಿದ್ದುದರಿಂದ, ತನ್ನನ್ನು ಪುನರುತ್ಥಾನದ ನಂಬಿಕೆಯ ಸಂಬಂಧದಲ್ಲಿ ವಿಚಾರಿಸಲಾಗುತ್ತಿದೆಯೆಂದು ಅವನು ಅವರಿಗೆ ತಿಳಿಸಿದನು. ಇದರ ಫಲವಾಗಿ ಅಲ್ಲಿ ದೊಡ್ಡ ಭಿನ್ನಾಭಿಪ್ರಾಯವುಂಟಾಗಿ, ಫರಿಸಾಯರು ಪೌಲನ ಪಕ್ಷವಹಿಸಿದರು.​—ಅ. ಕೃತ್ಯಗಳು 23:​6-10.

ಈ ಎರಡು ಬೈಬಲ್‌ ಉದಾಹರಣೆಗಳಿಂದ ನಾವೇನು ಕಲಿಯುತ್ತೇವೆ? ಎರಡೂ ಸಂದರ್ಭಗಳಲ್ಲಿ, ಪ್ರಾಮಾಣಿಕವಾದ ವಿಷಾದಸೂಚಕ ಮಾತುಗಳು ಹೆಚ್ಚಿನ ಮಾತುಸಂಪರ್ಕಕ್ಕೆ ದಾರಿ ತೆರೆದವು. ಹೀಗೆ ಕ್ಷಮಾಯಾಚನೆಯು ಶಾಂತಿಯನ್ನು ಸ್ಥಾಪಿಸಲು ನಮಗೆ ಸಹಾಯಮಾಡಬಲ್ಲದು. ಹೌದು, ನಮ್ಮ ತಪ್ಪುಗಳನ್ನು ಒಪ್ಪಿಕೊಂಡು ಆದ ಹಾನಿಗೆ ಕ್ಷಮೆಯಾಚಿಸುವುದು, ರಚನಾತ್ಮಕ ಚರ್ಚೆಗಳಿಗೆ ದಾರಿಯನ್ನು ತೆರೆಯಬಲ್ಲದು.

‘ಆದರೆ ನಾನೇನೂ ತಪ್ಪು ಮಾಡಿಲ್ಲವಲ್ಲ’

ನಾವು ಹೇಳಿರುವ ಅಥವಾ ಮಾಡಿರುವ ಯಾವುದೋ ಒಂದು ಸಂಗತಿಯಿಂದ ಒಬ್ಬನಿಗೆ ಬೇಸರವಾಗಿದೆಯೆಂದು ನಮಗೆ ತಿಳಿದುಬರುವಾಗ, ಆ ವ್ಯಕ್ತಿ ವಿವೇಚನೆಯಿಲ್ಲದವನು ಅಥವಾ ತೀರ ಸೂಕ್ಷ್ಮಮತಿಯೆಂದು ನಾವು ನೆನಸಬಹುದು. ಆದರೂ, ಯೇಸು ತನ್ನ ಶಿಷ್ಯರಿಗೆ ಸಲಹೆ ನೀಡಿದ್ದು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.”​—ಮತ್ತಾಯ 5:23, 24.

ಉದಾಹರಣೆಗೆ, ಒಬ್ಬ ಸಹೋದರನಿಗೆ ನೀವು ಅವನ ವಿರುದ್ಧ ಪಾಪ ಮಾಡಿದ್ದೀರಿ ಎಂದು ಅನಿಸಬಹುದು. ಇಂತಹ ಸನ್ನಿವೇಶದಲ್ಲಿ, ನೀವು ತಪ್ಪು ಮಾಡಿದ್ದೀರೆಂದು ನಿಮಗೆ ಅನಿಸಲಿ ಅನಿಸದೇ ಇರಲಿ, “ನಿನ್ನ ಸಹೋದರನ ಸಂಗಡ ಒಂದಾಗು” ಎಂದು ಯೇಸು ಹೇಳುತ್ತಾನೆ. ಗ್ರೀಕ್‌ ಗ್ರಂಥಪಾಠಕ್ಕನುಸಾರ, ಯೇಸು ಇಲ್ಲಿ ಉಪಯೋಗಿಸಿದ ಪದವು, ‘ಪರಸ್ಪರ ಹಗೆತನದ ತರುವಾಯ ಪರಸ್ಪರ ರಾಜಿಮಾಡಿಕೊಳ್ಳುವಿಕೆಯನ್ನು ಸೂಚಿಸುತ್ತದೆ.’ (ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ಓಲ್ಡ್‌ ಆ್ಯಂಡ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌) ಹೌದು, ಇಬ್ಬರು ಮನುಷ್ಯರ ನಡುವೆ ತಿಕ್ಕಾಟವಿರುವಾಗ, ಇಬ್ಬರೂ ಅಪರಿಪೂರ್ಣರೂ ತಪ್ಪುಮಾಡುವ ಪ್ರವೃತ್ತಿಯುಳ್ಳವರೂ ಆಗಿರುವುದರಿಂದ, ಎರಡೂ ಪಕ್ಷಗಳಿಂದ ಸ್ವಲ್ಪ ಮಟ್ಟಿಗಿನ ದೋಷವಿರಬಹುದು. ಇದು ಸಾಮಾನ್ಯವಾಗಿ, ಎರಡೂ ಪಕ್ಷಗಳಿಂದ ಪರಸ್ಪರ ರಾಜಿಮಾಡಿಕೊಳ್ಳುವಿಕೆಯನ್ನು ಕೇಳಿಕೊಳ್ಳುತ್ತದೆ.

ಇಲ್ಲಿರುವ ಮುಖ್ಯ ವಿವಾದಾಂಶವು ಯಾರು ಸರಿ, ಯಾರು ತಪ್ಪು ಎಂದಾಗಿರದೆ, ಶಾಂತಿಯನ್ನು ಸ್ಥಾಪಿಸಲು ಯಾರು ಆರಂಭದ ಹೆಜ್ಜೆಯನ್ನಿಡುತ್ತಾರೆ ಎಂಬುದಾಗಿದೆ. ಕೊರಿಂಥದ ಕ್ರೈಸ್ತರು ದೇವರ ಸೇವೆಮಾಡುತ್ತಿರುವ ತಮ್ಮ ಜೊತೆ ಸೇವಕರನ್ನು, ಹಣಕಾಸಿನ ಕುರಿತಾದ ಭಿನ್ನಾಭಿಪ್ರಾಯಗಳಂಥ ವಿಷಯಗಳ ವೈಯಕ್ತಿಕ ಮನಸ್ತಾಪಗಳಿಗಾಗಿ ಲೌಕಿಕ ಕೋರ್ಟುಗಳ ಕಟಕಟೆಯಲ್ಲಿ ನಿಲ್ಲಿಸುತ್ತಿರುವುದನ್ನು ಅಪೊಸ್ತಲ ಪೌಲನು ಗಮನಿಸಿದಾಗ, ಅವನು ಅವರನ್ನು ಹೀಗೆ ತಿದ್ದಿದನು: “ಅದಕ್ಕಿಂತ ಅನ್ಯಾಯವನ್ನು ಯಾಕೆ ಸಹಿಸಬಾರದು? ಆಸ್ತಿಯ ನಷ್ಟವನ್ನು ಯಾಕೆ ತಾಳಬಾರದು”? (1 ಕೊರಿಂಥ 6:7) ಅವರ ವೈಯಕ್ತಿಕ ಮನಸ್ತಾಪಗಳನ್ನು ಲೌಕಿಕ ಕೋರ್ಟುಗಳಲ್ಲಿ ಸಾರಿ ಹೇಳುವುದರಿಂದ ಅವರನ್ನು ನಿರುತ್ತೇಜಿಸಲು ಪೌಲನು ಹಾಗೆ ಹೇಳಿದನಾದರೂ, ಈ ಮೂಲತತ್ತ್ವವು ಸ್ಪಷ್ಟವಾಗುತ್ತದೆ: ಯಾರು ಸರಿ, ಯಾರು ತಪ್ಪು ಎಂಬುದನ್ನು ರುಜುಪಡಿಸುವುದಕ್ಕಿಂತ ಜೊತೆ ವಿಶ್ವಾಸಿಗಳ ಮಧ್ಯೆ ಶಾಂತಿಯು ಹೆಚ್ಚು ಪ್ರಾಮುಖ್ಯ. ಈ ಮೂಲತತ್ತ್ವವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ನಾವು ಒಬ್ಬ ವ್ಯಕ್ತಿಯ ವಿರುದ್ಧ ಮಾಡಿದ್ದೇವೆಂದು ಅವನು ಇಲ್ಲವೆ ಅವಳು ನೆನಸುತ್ತಿರುವ ಅನ್ಯಾಯಕ್ಕಾಗಿ ಕ್ಷಮೆಯಾಚಿಸುವುದನ್ನು ಹೆಚ್ಚು ಸುಲಭವಾಗಿಸುತ್ತದೆ.

ಮನಃಪೂರ್ವಕತೆಯು ಅಗತ್ಯ

ಆದರೆ ಕೆಲವರು ಕ್ಷಮೆಯನ್ನು ಯಾಚಿಸಲಿಕ್ಕಾಗಿರುವ ಮಾತುಗಳನ್ನು ವಿಪರೀತವಾಗಿ ಬಳಸುತ್ತಾರೆ. ಉದಾಹರಣೆಗೆ, ಜಪಾನಿನಲ್ಲಿ ಕ್ಷಮಾಯಾಚನೆಯಲ್ಲಿ ಉಪಯೋಗಿಸಲ್ಪಡುವ ಸಾಮಾನ್ಯ ಪದವಾದ ಸೂಮೀಮಾಸೆನ್‌ ಎಂಬುದು ಸಾವಿರಾರು ಬಾರಿ ಕೇಳಿಬರುತ್ತದೆ. ತಮಗೆ ತೋರಿಸಲ್ಪಟ್ಟಿರುವ ದಯೆಯನ್ನು ಪ್ರತಿಯಾಗಿ ತೋರಿಸಲು ಅಶಕ್ತರಾಗಿರುವುದರ ಕುರಿತು ಕಳವಳದ ಅನಿಸಿಕೆಯನ್ನು ಅರ್ಥೈಸುತ್ತಾ, ಅದನ್ನು ಕೃತಜ್ಞತೆ ಸೂಚಿಸುವಾಗಲೂ ಉಪಯೋಗಿಸಲಾಗುತ್ತದೆ. ಅದರ ಬಹುಮುಖ ಸಾಮರ್ಥ್ಯದ ಕಾರಣ, ಅದನ್ನು ತೀರ ಹೆಚ್ಚು ಬಾರಿ ಉಪಯೋಗಿಸಲಾಗುತ್ತದೆಂದು ಕೆಲವರು ಭಾವಿಸಿ, ಅದನ್ನು ಹೇಳುವವರು ನಿಜವಾಗಿಯೂ ಮನಃಪೂರ್ವಕವಾಗಿ ಹೇಳುತ್ತಾರೋ ಎಂದು ಅವರು ಯೋಚಿಸಬಹುದು. ವಿವಿಧ ರೀತಿಯ ಕ್ಷಮಾಯಾಚನೆಗಳನ್ನು ಬೇರೆ ಸಂಸ್ಕೃತಿಗಳಲ್ಲೂ ಅತಿಶಯವಾಗಿ ಉಪಯೋಗಿಸಲಾಗುತ್ತಿರುವಂತೆ ಕಂಡುಬರಬಹುದು.

ಭಾಷೆಯು ಯಾವುದೇ ಆಗಿರಲಿ, ಕ್ಷಮೆಯನ್ನು ಕೇಳುವಾಗ ಮನಃಪೂರ್ವಕತೆಯು ಪ್ರಾಮುಖ್ಯ. ಬಳಸಲ್ಪಡುವ ಪದಗಳು ಮತ್ತು ಸ್ವರದ ನಾದವು ನಿಜವಾದ ಪರಿತಾಪವನ್ನು ವ್ಯಕ್ತಪಡಿಸಬೇಕು. ಪರ್ವತ ಪ್ರಸಂಗದಲ್ಲಿ ಯೇಸು ತನ್ನ ಶಿಷ್ಯರಿಗೆ ಕಲಿಸಿದ್ದು: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ; ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು.” (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 5:37) ನೀವು ಕ್ಷಮೆಯನ್ನು ಕೇಳುವುದಾದರೆ ಮನಃಪೂರ್ವಕವಾಗಿ ಕೇಳಿರಿ! ದೃಷ್ಟಾಂತಕ್ಕೆ: ಒಬ್ಬ ಪ್ರಯಾಣಿಕನು ವಿಮಾನ ನಿಲ್ದಾಣದಲ್ಲಿ ತನ್ನ ಸಾಮಾನನ್ನು ಒಳಸೇರಿಸುವ ಲೈನಿನಲ್ಲಿ ಹೋಗುತ್ತಿದ್ದಾಗ, ತನ್ನ ಹಿಂದಿದ್ದ ಸ್ತ್ರೀಗೆ ಅದು ತಗಲಿದ್ದಕ್ಕಾಗಿ ಅವಳ ಬಳಿ ಕ್ಷಮೆ ಕೇಳಿದನು. ಕೆಲವು ನಿಮಿಷಗಳ ಬಳಿಕ, ಲೈನು ಮುಂದುವರಿದಾಗ ಆ ಪೆಟ್ಟಿಗೆ ಪುನಃ ಅದೇ ಸ್ತ್ರೀಗೆ ತಗಲಿತು. ಆ ಮನುಷ್ಯನು ಪುನಃ ಸಭ್ಯತೆಯಿಂದ ಕ್ಷಮೆ ಕೇಳಿದನು. ಆದರೆ ಇನ್ನೊಂದು ಬಾರಿ ಹಾಗೆ ಸಂಭವಿಸಿದಾಗ, ಆ ಸ್ತ್ರೀಯ ಪ್ರಯಾಣ ಸಂಗಾತಿಯು ಅವನಿಗೆ, ನೀನು ನಿಜವಾದ ಮನಃಪೂರ್ವಕತೆಯಿಂದ ಕ್ಷಮೆಯಾಚಿಸುತ್ತಿರುವುದಾದರೆ, ಅದು ಇನ್ನೊಮ್ಮೆ ಆಕೆಗೆ ತಗಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದನು. ಹೌದು, ಮನಃಪೂರ್ವಕವಾದ ಕ್ಷಮಾಯಾಚನೆಯ ಜೊತೆಯಲ್ಲಿ ಮುಂದೆ ಅಂಥ ತಪ್ಪನ್ನು ಮಾಡಬಾರದೆಂಬ ದೃಢನಿರ್ಧಾರವೂ ಇರಬೇಕು.

ನಾವು ಮನಃಪೂರ್ವಕವಾಗಿ ಕ್ಷಮೆಯಾಚಿಸುತ್ತಿರುವಲ್ಲಿ, ನಮ್ಮ ಕ್ಷಮಾಯಾಚನೆಯಲ್ಲಿ ತಪ್ಪೊಪ್ಪಿಕೊಳ್ಳುವಿಕೆ, ಕ್ಷಮೆ ಕೇಳುವಿಕೆ ಮತ್ತು ಆಗಿರುವ ನಷ್ಟವನ್ನು ಸಾಧ್ಯವಿರುವಷ್ಟರ ಮಟ್ಟಿಗೆ ತೊಡೆದುಹಾಕುವುದು ಸೇರಿರುವುದು. ಇದಕ್ಕೆ ಪ್ರತಿಯಾಗಿ, ತಪ್ಪಿಗೆ ಬಲಿಯಾಗಿರುವವನು ಆ ಪಶ್ಚಾತ್ತಾಪಿ ತಪ್ಪಿತಸ್ಥನನ್ನು ಸಿದ್ಧಮನಸ್ಸಿನಿಂದ ಕ್ಷಮಿಸಬೇಕು. (ಮತ್ತಾಯ 18:21, 22; ಮಾರ್ಕ 11:25; ಎಫೆಸ 4:32; ಕೊಲೊಸ್ಸೆ 3:13) ಎರಡೂ ಪಕ್ಷದವರು ಅಪರಿಪೂರ್ಣರಾಗಿರುವುದರಿಂದ, ಶಾಂತಿಯನ್ನು ಸ್ಥಾಪಿಸುವ ಕಾರ್ಯವು ಸದಾ ಸುಗಮವಾಗಿ ಸಾಗಲಿಕ್ಕಿಲ್ಲ. ಹಾಗಿದ್ದರೂ, ಕ್ಷಮಾಯಾಚನೆಯ ಮಾತುಗಳು ಶಾಂತಿಯನ್ನು ಸ್ಥಾಪಿಸಲಿಕ್ಕಾಗಿ ಬಲವತ್ತಾದ ಪ್ರಭಾವವನ್ನು ಹಾಕುತ್ತವೆ.

ಕ್ಷಮಾಯಾಚನೆಯು ಸೂಕ್ತವಾಗಿರದ ಸಮಯ

ವಿಷಾದ ಮತ್ತು ದುಃಖಸೂಚಕ ಮಾತುಗಳಿಗೆ ಶಮನಗೊಳಿಸುವ ಗುಣವಿದ್ದು, ಅವು ಶಾಂತಿಗೆ ಸಹಾಯಮಾಡುವುದಾದರೂ, ಅಂತಹ ಮಾತುಗಳು ಸೂಕ್ತವಾಗಿರದ ಸಂದರ್ಭಗಳಲ್ಲಿ ವಿವೇಕಿಯು ಅಂಥ ಅಭಿವ್ಯಕ್ತಿಗಳನ್ನು ಉಪಯೋಗಿಸುವುದರಿಂದ ದೂರವಿರುತ್ತಾನೆ. ಉದಾಹರಣೆಗೆ, ದೇವರಿಗೆ ಸಮಗ್ರತೆ ತೋರಿಸುವ ವಿಷಯವು ಆ ವಿವಾದದಲ್ಲಿ ಒಳಗೂಡಿದೆಯೆಂದು ಎಣಿಸೋಣ. ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಅವನು “ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಹಿಂಸಾ ಕಂಬದ ಮೇಲೆ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” (ಫಿಲಿಪ್ಪಿ 2:8, NW) ಆದರೆ ತನ್ನ ಯಾತನೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಅವನು ತನ್ನ ನಂಬಿಕೆಗಳ ವಿಷಯದಲ್ಲಿ ಕ್ಷಮೆಯಾಚಿಸಲಿಲ್ಲ. ಮಹಾಯಾಜಕನು, “ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು” ಎಂದು ಕೇಳಿದಾಗ, ಯೇಸು ಅವನ ಬಳಿ ಕ್ಷಮೆಯಾಚಿಸಲಿಲ್ಲ. ಆಗ ಯೇಸು ಅಂಜಿ ಕ್ಷಮೆಯಾಚಿಸದೆ, ಧೈರ್ಯದಿಂದ ಹೇಳಿದ್ದು: “ನೀನೇ ಹೇಳಿದ್ದೀ; ಇದಲ್ಲದೆ ಇನ್ನುಮೇಲೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳ ಮೇಲೆ ಕುಳಿತು ಬರುವದನ್ನೂ ಕಾಣುವಿರಿ ಎಂದು ನಿಮಗೆ ಹೇಳುತ್ತೇನೆ.” (ಮತ್ತಾಯ 26:63, 64) ತನ್ನ ತಂದೆಯಾದ ಯೆಹೋವ ದೇವರಿಗೆ ತೋರಿಸಬೇಕಾದ ಸಮಗ್ರತೆಯನ್ನು ಪಣಕ್ಕಿಟ್ಟು, ಮಹಾಯಾಜಕನೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ಯೇಸು ಯೋಚಿಸಲೇ ಇಲ್ಲ.

ಕ್ರೈಸ್ತರು ಅಧಿಕಾರ ಸ್ಥಾನದಲ್ಲಿರುವವರಿಗೆ ಮಾನಮರ್ಯಾದೆಯನ್ನು ಕೊಡುತ್ತಾರಾದರೂ, ತಾವು ದೇವರಿಗೆ ತೋರಿಸುವ ವಿಧೇಯತೆಗಾಗಿಯೂ ತಮ್ಮ ಸಹೋದರರಿಗಾಗಿ ಅವರಿಗಿರುವ ಪ್ರೀತಿಗಾಗಿಯೂ ಅವರು ಕ್ಷಮೆಯಾಚಿಸುವ ಅಗತ್ಯವಿರುವುದಿಲ್ಲ.​—ಮತ್ತಾಯ 28:19, 20; ರೋಮಾಪುರ 13:5-7.

ಶಾಂತಿಗೆ ಯಾವ ತಡೆಯೂ ಇಲ್ಲದಿರುವುದು

ನಮ್ಮ ಮೂಲಪಿತನಾದ ಆದಾಮನಿಂದ ನಾವು ಅಪರಿಪೂರ್ಣತೆ ಮತ್ತು ಪಾಪವನ್ನು ಬಾಧ್ಯತೆಯಾಗಿ ಪಡೆದಿರುವುದರಿಂದ, ಇಂದು ನಾವು ತಪ್ಪುಗಳನ್ನು ಮಾಡುತ್ತೇವೆ. (ರೋಮಾಪುರ 5:12; 1 ಯೋಹಾನ 1:10) ಆದಾಮನ ಪಾಪಕರ ಸ್ಥಿತಿಯು ಸೃಷ್ಟಿಕರ್ತನ ವಿರುದ್ಧ ಅವನು ದಂಗೆಯೆದ್ದದ್ದರ ಫಲವಾಗಿತ್ತು. ಆದರೆ ಆದಿಯಲ್ಲಿ ಆದಾಮಹವ್ವರು ಪರಿಪೂರ್ಣರೂ ಪಾಪರಹಿತರೂ ಆಗಿದ್ದರು ಮತ್ತು ದೇವರು ಮನುಷ್ಯರನ್ನು ಪುನಃ ಆ ಪರಿಪೂರ್ಣ ಸ್ಥಿತಿಗೆ ಪುನಸ್ಸ್ಥಾಪಿಸುವ ವಾಗ್ದಾನವನ್ನು ಮಾಡಿದ್ದಾನೆ. ಆತನು ಪಾಪವನ್ನೂ ಅದರ ಎಲ್ಲ ದುಷ್ಪರಿಣಾಮಗಳನ್ನೂ ನಿರ್ಮೂಲಮಾಡುವನು.​—1 ಕೊರಿಂಥ 15:​56, 57.

ಅದರ ಅರ್ಥವೇನಾಗಿರಬಹುದು ಎಂಬುದನ್ನು ತುಸು ಯೋಚಿಸಿ! ನಾಲಿಗೆಯ ಉಪಯೋಗದ ವಿಷಯವಾಗಿ ಸಲಹೆ ನೀಡುವಾಗ ಯೇಸುವಿನ ಮಲತಮ್ಮನಾಗಿದ್ದ ಯಾಕೋಬನು ಹೇಳಿದ್ದು: “ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ [“ಪರಿಪೂರ್ಣನೂ,” NW] ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” (ಯಾಕೋಬ 3:2) ಒಬ್ಬ ಪರಿಪೂರ್ಣ ವ್ಯಕ್ತಿಯು ತನ್ನ ನಾಲಿಗೆಯನ್ನು ನಿಯಂತ್ರಿಸಬಲ್ಲವನಾಗಿರುವುದರಿಂದ, ಅದನ್ನು ದುರುಪಯೋಗಿಸಿದ್ದಕ್ಕಾಗಿ ಅವನು ಕ್ಷಮೆಯಾಚಿಸುವ ಅಗತ್ಯವಿರುವುದಿಲ್ಲ. ಅವನು ತನ್ನ ಇಡೀ ಶರೀರವನ್ನು ‘ಸ್ವಾಧೀನಪಡಿಸಿಕೊಳ್ಳಬಲ್ಲನು.’ ನಾವು ಪರಿಪೂರ್ಣರಾಗುವಾಗ ಅದೆಷ್ಟು ಸೋಜಿಗದ ವಿಷಯವಾಗಿರುವುದು! ಆಗ ಇನ್ನೆಂದೂ ಜನರ ಮಧ್ಯೆ ಶಾಂತಿಗೆ ಯಾವ ತಡೆಯೂ ಇರದು. ಆದರೆ ಅಷ್ಟರತನಕ, ಮಾಡಿರುವ ತಪ್ಪಿಗೆ ಮನಃಪೂರ್ವಕವಾದ ಮತ್ತು ಸಮಂಜಸವಾದ ಕ್ಷಮಾಯಾಚನೆಯು ಶಾಂತಿಯನ್ನು ಸ್ಥಾಪಿಸಲು ಅತ್ಯಂತ ಸಹಾಯಕರವಾಗಿರುವುದು.

[ಪಾದಟಿಪ್ಪಣಿ]

^ ಮಹಾಯಾಜಕನನ್ನು ಪೌಲನು ಗುರುತಿಸದಿದ್ದ ಕಾರಣವು, ಅವನ ಮಂದದೃಷ್ಟಿಯಾಗಿರುವುದು ಸಂಭವನೀಯ.

[ಪುಟ 5ರಲ್ಲಿರುವ ಚಿತ್ರ]

ನಾವು ಪೌಲನ ಉದಾಹರಣೆಯಿಂದ ಏನನ್ನು ಕಲಿತುಕೊಳ್ಳಬಲ್ಲೆವು?

[ಪುಟ 7ರಲ್ಲಿರುವ ಚಿತ್ರ]

ಸಕಲರೂ ಪರಿಪೂರ್ಣರಾಗಿರುವಾಗ ಶಾಂತಿಗೆ ಯಾವುದೇ ತಡೆಗಳಿರುವುದಿಲ್ಲ