ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಆತನು ನಿಮ್ಮ ಸಮೀಪಕ್ಕೆ ಬರುವನು”

“ಆತನು ನಿಮ್ಮ ಸಮೀಪಕ್ಕೆ ಬರುವನು”

“ಆತನು ನಿಮ್ಮ ಸಮೀಪಕ್ಕೆ ಬರುವನು”

“[ದೇವರು] ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.”​—ಅ. ಕೃತ್ಯಗಳು 17:27.

1, 2. (ಎ) ನಕ್ಷತ್ರರಂಜಿತ ಆಕಾಶವನ್ನು ನೋಡುವಾಗ ಸೃಷ್ಟಿಕರ್ತನ ವಿಷಯದಲ್ಲಿ ಯಾವ ಪ್ರಶ್ನೆಯನ್ನು ನಾವು ಕೇಳಬಹುದು? (ಬಿ) ಯೆಹೋವನ ದೃಷ್ಟಿಯಲ್ಲಿ ಮಾನವರು ಕ್ಷುಲ್ಲಕರಲ್ಲವೆಂದು ಬೈಬಲು ನಮಗೆ ಹೇಗೆ ಆಶ್ವಾಸನೆ ನೀಡುತ್ತದೆ?

ಶುಭ್ರವಾದ ರಾತ್ರಿಯಂದು ನೀವು ನಕ್ಷತ್ರರಂಜಿತ ಆಕಾಶವನ್ನು ನೋಡಿ ಬೆರಗಾದದ್ದುಂಟೊ? ನಕ್ಷತ್ರಗಳ ಸಂಖ್ಯೆ ಹಾಗೂ ಅಂತರಿಕ್ಷದ ವೈಶಾಲ್ಯವೇ ನಮ್ಮಲ್ಲಿ ವಿಸ್ಮಯವನ್ನು ಹುಟ್ಟಿಸುತ್ತದೆ. ಈ ಬೃಹತ್‌ ವಿಶ್ವದಲ್ಲಿ ನಮ್ಮ ಭೂಮಿ ಕೇವಲ ಒಂದು ಚುಕ್ಕೆಯಾಗಿದೆ. ಹಾಗಾದರೆ, “ಭೂಲೋಕದಲ್ಲೆಲ್ಲಾ ಸರ್ವೋನ್ನತ”ನಾದ ಸೃಷ್ಟಿಕರ್ತನು, ಮಾನವರ ವಿಷಯದಲ್ಲಿ ಚಿಂತಿಸಲು ತೀರ ಉನ್ನತನಾಗಿದ್ದಾನೆಂದೂ ಅವರು ಪರಿಚಯಮಾಡಿಕೊಳ್ಳಲಾಗದಷ್ಟು ದೂರದಲ್ಲಿದ್ದಾನೆಂದೂ ದುರ್ಭೇದ್ಯನೆಂದೂ ಇದರ ಅರ್ಥವೊ?​—ಕೀರ್ತನೆ 83:18.

2 ಯೆಹೋವನ ದೃಷ್ಟಿಯಲ್ಲಿ ಮಾನವರು ಕ್ಷುಲ್ಲಕರಲ್ಲವೆಂದು ಬೈಬಲು ಆಶ್ವಾಸನೆ ನೀಡುತ್ತದೆ. ವಾಸ್ತವವೇನಂದರೆ, “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂದು ಹೇಳುತ್ತಾ, ನಾವು ಆತನನ್ನು ಹುಡುಕುವಂತೆ ದೇವರ ವಾಕ್ಯವು ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಅ. ಕೃತ್ಯಗಳು 17:27; 1 ಪೂರ್ವಕಾಲವೃತ್ತಾಂತ 28:9) ಹೌದು, ನಾವು ದೇವರ ಸಮೀಪಕ್ಕೆ ಹೋಗುವ ಹೆಜ್ಜೆಗಳನ್ನು ತೆಗೆದುಕೊಳ್ಳುವಲ್ಲಿ, ಆತನು ನಮ್ಮ ಪ್ರಯತ್ನಗಳಿಗೆ ಪ್ರತಿವರ್ತನೆಯನ್ನು ತೋರಿಸುವನು. ಯಾವ ವಿಧದಲ್ಲಿ? ಇಸವಿ 2003ರ ನಮ್ಮ ವಾರ್ಷಿಕವಚನದ ಮಾತುಗಳು, ಈ ಹುರಿದುಂಬಿಸುವ ಉತ್ತರವನ್ನು ಕೊಡುತ್ತವೆ: “ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಹೀಗಿರುವುದರಿಂದ, ತನಗೆ ಸಮೀಪವಾಗಿರುವವರ ಮೇಲೆ ಯೆಹೋವನು ಸುರಿಸುವ ಕೆಲವು ಅದ್ಭುತಕರವಾದ ಆಶೀರ್ವಾದಗಳನ್ನು ನಾವೀಗ ಚರ್ಚಿಸೋಣ.

ಯೆಹೋವನು ಕೊಡುವ ವೈಯಕ್ತಿಕ ಕೊಡುಗೆ

3. ಯೆಹೋವನ ಸಮೀಪಕ್ಕೆ ಹೋಗುವವರಿಗೆ ಆತನು ಯಾವ ಕೊಡುಗೆಯನ್ನು ಕೊಡುತ್ತಾನೆ?

3 ಪ್ರಥಮವಾಗಿ, ಯೆಹೋವನು ತನ್ನ ಜನರಿಗಾಗಿ ಕಾದಿರಿಸಿರುವ ಒಂದು ಅಮೂಲ್ಯ ಕೊಡುಗೆ ಆತನ ಸೇವಕರಿಗಿದೆ. ಈ ವಿಷಯಗಳ ವ್ಯವಸ್ಥೆಯು ನೀಡುವ ಸಕಲ ಅಧಿಕಾರ, ಐಶ್ವರ್ಯ ಮತ್ತು ವಿದ್ಯೆಗಳೂ ಈ ಕೊಡುಗೆಯನ್ನು ಸಂಪಾದಿಸಲಾರವು. ಇದು ಯೆಹೋವನು ಸ್ವತಃ ತನಗೆ ಸಮೀಪವಾಗಿರುವವರಿಗೆ ಮಾತ್ರ ಕೊಡುವ ವೈಯಕ್ತಿಕ ಕೊಡುಗೆಯಾಗಿದೆ. ಅದೇನು? ದೇವರ ವಾಕ್ಯವು ಉತ್ತರ ಕೊಡುವುದು: “ವಿವೇಕಕ್ಕಾಗಿ [“ವಿವೇಚನಾಶಕ್ತಿಗಾಗಿ,” NW] ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ. ಯೆಹೋವನೇ ಜ್ಞಾನ [“ವಿವೇಕ,” NW]ವನ್ನು ಕೊಡುವಾತನು.” (ಜ್ಞಾನೋಕ್ತಿ 2:3-6) ಅಪರಿಪೂರ್ಣರಾದ ಮಾನವರು “ದೈವಜ್ಞಾನವನ್ನು” ಪಡೆದುಕೊಳ್ಳಲು ಶಕ್ತರಾಗುವ ವಿಷಯವನ್ನು ತುಸು ಊಹಿಸಿಕೊಳ್ಳಿರಿ! ಆ ಕೊಡುಗೆಯನ್ನು ಅಂದರೆ ದೇವರ ವಾಕ್ಯದಲ್ಲಿ ಕಂಡುಬರುವ ಜ್ಞಾನವನ್ನು “ನಿಕ್ಷೇಪ”ಕ್ಕೆ ಹೋಲಿಸಲಾಗಿದೆ. ಏಕೆ?

4, 5. “ದೈವಜ್ಞಾನವನ್ನು” “ನಿಕ್ಷೇಪ”ಕ್ಕೆ ಏಕೆ ಹೋಲಿಸಸಾಧ್ಯವಿದೆ? ದೃಷ್ಟಾಂತಿಸಿ.

4 ಒಂದು ವಿಷಯವೇನಂದರೆ, ದೈವಜ್ಞಾನವು ಅತಿ ಬೆಲೆಯುಳ್ಳದ್ದಾಗಿದೆ. ಅದರ ಅತ್ಯಮೂಲ್ಯ ಆಶೀರ್ವಾದಗಳಲ್ಲಿ ಒಂದು, ನಿತ್ಯಜೀವದ ಪ್ರತೀಕ್ಷೆಯಾಗಿದೆ. (ಯೋಹಾನ 17:3) ಆದರೆ ಆ ಜ್ಞಾನ ಈಗಲೂ ನಮ್ಮ ಜೀವಿತಗಳನ್ನು ಸಂಪದ್ಭರಿತವನ್ನಾಗಿ ಮಾಡುತ್ತದೆ. ದೃಷ್ಟಾಂತಕ್ಕೆ, ನಾವು ದೇವರ ವಾಕ್ಯವನ್ನು ಜಾಗರೂಕತೆಯಿಂದ ಅಧ್ಯಯನಮಾಡಿರುವ ಫಲವಾಗಿ, ದೇವರ ಹೆಸರೇನು? (ಕೀರ್ತನೆ 83:18) ಮೃತರ ನಿಜ ಸ್ಥಿತಿಯೇನು? (ಪ್ರಸಂಗಿ 9:​5, 10) ಭೂಮಿ ಮತ್ತು ಮಾನವಕುಲಕ್ಕಾಗಿ ದೇವರ ಉದ್ದೇಶವೇನು? (ಯೆಶಾಯ 45:18) ಎಂಬಂತಹ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡಿದ್ದೇವೆ. ಜೀವಿಸುವ ಅತ್ಯುತ್ತಮ ವಿಧವು ಬೈಬಲಿನ ವಿವೇಕಪೂರ್ಣ ಸಲಹೆಯನ್ನು ಅನ್ವಯಿಸಿಕೊಳ್ಳುವುದೇ ಆಗಿದೆ ಎಂಬುದನ್ನು ಸಹ ನಾವು ಕಂಡುಕೊಂಡಿದ್ದೇವೆ. (ಯೆಶಾಯ 30:​20, 21; 48:​17, 18) ಹೀಗೆ ಜೀವಿತದ ಚಿಂತೆಗಳನ್ನು ನಿಭಾಯಿಸಲು ಮತ್ತು ನಿಜ ಸಂತೋಷ ಹಾಗೂ ಸಂತೃಪ್ತಿಯನ್ನು ಪ್ರವರ್ಧಿಸುವ ಮಾರ್ಗವನ್ನು ಬೆನ್ನಟ್ಟಲು ಸಹಾಯ ನೀಡುವ ಸ್ವಸ್ಥವಾದ ಮಾರ್ಗದರ್ಶನ ನಮಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ದೇವರ ವಾಕ್ಯದ ಕುರಿತಾದ ನಮ್ಮ ಅಧ್ಯಯನವು, ನಾವು ಯೆಹೋವನ ಅದ್ಭುತಕರವಾದ ಗುಣಗಳನ್ನು ತಿಳಿದುಕೊಳ್ಳುವಂತೆಯೂ ಆತನ ಸಮೀಪಕ್ಕೆ ಬರುವಂತೆಯೂ ಮಾಡಿದೆ. ಹೀಗಿರುವಾಗ, “ದೈವಜ್ಞಾನ”ದ ಮೇಲಾಧಾರಿತವಾದ ಯೆಹೋವನೊಂದಿಗಿನ ಒಂದು ಆಪ್ತ ಸಂಬಂಧಕ್ಕಿಂತ ಹೆಚ್ಚು ಬೆಲೆಬಾಳುವ ಇನ್ನಾವ ವಿಷಯವಿದ್ದೀತು?

5 ದೈವಜ್ಞಾನವನ್ನು “ನಿಕ್ಷೇಪ”ಕ್ಕೆ ಏಕೆ ಹೋಲಿಸಸಾಧ್ಯವಿದೆಯೆಂಬುದಕ್ಕೆ ಇನ್ನೊಂದು ಕಾರಣವಿದೆ. ಅನೇಕ ನಿಕ್ಷೇಪಗಳಂತೆ, ಈ ಲೋಕದಲ್ಲಿ ಇದು ಸಂಬಂಧಸೂಚಕವಾಗಿ ವಿರಳವಾದದ್ದಾಗಿದೆ. 600 ಕೋಟಿ ಭೂನಿವಾಸಿಗಳಲ್ಲಿ, ಸುಮಾರು 60 ಲಕ್ಷ ಮಂದಿ ಯೆಹೋವನ ಆರಾಧಕರು ಅಥವಾ ಸುಮಾರು 1,000 ಮಂದಿಯಲ್ಲಿ ಒಬ್ಬರು “ದೈವಜ್ಞಾನವನ್ನು” ಕಂಡುಕೊಂಡಿದ್ದಾರೆ. ದೇವರ ವಾಕ್ಯದ ಸತ್ಯವನ್ನು ತಿಳಿದುಕೊಳ್ಳುವುದು ಎಷ್ಟೊಂದು ಅಪರೂಪದ ಸುಯೋಗವಾಗಿದೆ ಎಂಬುದನ್ನು ಚಿತ್ರಿಸಲು ಒಂದೇ ಒಂದು ಬೈಬಲ್‌ ಪ್ರಶ್ನೆಯನ್ನು ತೆಗೆದುಕೊಳ್ಳಿ: ಮನುಷ್ಯರು ಮೃತಪಟ್ಟಾಗ ಅವರಿಗೆ ಏನಾಗುತ್ತದೆ? ಪ್ರಾಣವು ಸಾಯುತ್ತದೆ ಮತ್ತು ಮೃತರು ಪ್ರಜ್ಞಾರಹಿತರೆಂದು ನಮಗೆ ತಿಳಿದಿದೆ. (ಯೆಶಾಯ 38:18) ಆದರೂ, ಒಬ್ಬ ವ್ಯಕ್ತಿಯೊಳಗಿರುವ ಯಾವುದೊ ವಸ್ತು ಮರಣಾನಂತರ ಬದುಕಿ ಉಳಿಯುತ್ತದೆಂಬ ಸುಳ್ಳು ನಂಬಿಕೆಯನ್ನು ಲೋಕದ ಧರ್ಮಗಳಲ್ಲಿ ಹೆಚ್ಚಿನವು ಅಂಗೀಕರಿಸುತ್ತವೆ. ಈ ನಂಬಿಕೆಯು ಕ್ರೈಸ್ತಪ್ರಪಂಚದ ಧರ್ಮಗಳ ಅವಿಭಾಜ್ಯ ಅಂಗವಾಗಿದೆ. ಇದು ಇಸ್ಲಾಮ್‌ಮತ, ಜೈನಮತ, ಟಾವೊಮತ, ಬೌದ್ಧಮತ, ಶಿಂಟೊಮತ, ಸಿಕ್‌ಮತ, ಯೆಹೂದಿಮತ, ಮತ್ತು ಹಿಂದೂಮತದಲ್ಲಿಯೂ ಇದೆ. ಸ್ವಲ್ಪ ಯೋಚಿಸಿ​—ಈ ಒಂದೇ ಒಂದು ಸುಳ್ಳು ತತ್ತ್ವದಿಂದ ಕೋಟ್ಯಂತರ ಜನರು ವಂಚಿಸಲ್ಪಟ್ಟಿದ್ದಾರೆ!

6, 7. (ಎ) ಯಾರು ಮಾತ್ರ “ದೈವಜ್ಞಾನವನ್ನು” ಕಂಡುಕೊಳ್ಳಬಲ್ಲರು? (ಬಿ) “ಜ್ಞಾನಿಗಳಿಗೂ ಬುದ್ಧಿವಂತರಿಗೂ” ಗೋಚರವಾಗದಿರುವ ಒಳನೋಟದಿಂದ ಯೆಹೋವನು ನಮ್ಮನ್ನು ಆಶೀರ್ವದಿಸಿದ್ದಾನೆಂಬುದನ್ನು ಯಾವ ಉದಾಹರಣೆಯು ತೋರಿಸುತ್ತದೆ?

6 ಇನ್ನೂ ಹೆಚ್ಚು ಜನರು “ದೈವಜ್ಞಾನವನ್ನು” ಏಕೆ ಕಂಡುಕೊಂಡಿಲ್ಲ? ಏಕೆಂದರೆ ಒಬ್ಬನು ದೇವರ ವಾಕ್ಯದ ಅರ್ಥವನ್ನು ಆತನ ಸಹಾಯವಿಲ್ಲದೆ ಪೂರ್ಣವಾಗಿ ಗ್ರಹಿಸಲಾರನು. ಈ ಜ್ಞಾನವು ಒಂದು ಕೊಡುಗೆಯಾಗಿದೆ ಎಂಬುದು ನಿಮಗೆ ನೆನಪಿರಲಿ. ಪ್ರಾಮಾಣಿಕತೆಯಿಂದ ಮತ್ತು ದೈನ್ಯದಿಂದ ತನ್ನ ವಾಕ್ಯವನ್ನು ಶೋಧಿಸಲು ಇಷ್ಟಪಡುವವರಿಗೆ ಮಾತ್ರ ಯೆಹೋವನು ಅದನ್ನು ಕೊಡುತ್ತಾನೆ. ಅಂಥವರು “ಲೌಕಿಕದೃಷ್ಟಿಯಲ್ಲಿ ಜ್ಞಾನಿ”ಗಳಾಗಿರಲಿಕ್ಕಿಲ್ಲ. (1 ಕೊರಿಂಥ 1:26) ಅವರಲ್ಲಿ ಅನೇಕರು ಲೋಕದ ಮಟ್ಟಗಳಿಗನುಸಾರ, “ಶಾಸ್ತ್ರಾಭ್ಯಾಸಮಾಡದ ಸಾಧಾರಣರು” ಎಂದೂ ಪರಿಗಣಿಸಲ್ಪಡಬಹುದು. (ಅ. ಕೃತ್ಯಗಳು 4:13) ಆದರೂ ಅದು ಪ್ರಾಮುಖ್ಯವಲ್ಲ. ನಮ್ಮ ಹೃದಯದಲ್ಲಿ ಯೆಹೋವನು ಕಂಡುಕೊಳ್ಳುವ ಗುಣಗಳನ್ನು ನೋಡಿ ಆತನು “ದೈವಜ್ಞಾನ”ದ ಪ್ರತಿಫಲವನ್ನು ನಮಗೆ ಕೊಡುತ್ತಾನೆ.

7 ಈ ಒಂದು ಉದಾಹರಣೆಯನ್ನು ಪರಿಗಣಿಸಿರಿ. ಕ್ರೈಸ್ತಪ್ರಪಂಚದ ಅನೇಕ ವಿದ್ವಾಂಸರು ಬೈಬಲಿನ ಕುರಿತು ಅನೇಕ ವಿಸ್ತಾರವಾದ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಅಂತಹ ಪರಾಮರ್ಶಕ ಕೃತಿಗಳು ಐತಿಹಾಸಿಕ ಹಿನ್ನೆಲೆ, ಹೀಬ್ರು ಮತ್ತು ಗ್ರೀಕ್‌ ಪದಗಳ ಅರ್ಥ, ಇತ್ಯಾದಿಗಳನ್ನು ವಿವರಿಸಬಹುದು. ಆದರೆ, ಈ ಎಲ್ಲಾ ಪಾಂಡಿತ್ಯವಿದ್ದರೂ, ಆ ವಿದ್ವಾಂಸರು “ದೈವಜ್ಞಾನವನ್ನು” ನಿಜವಾಗಿಯೂ ಕಂಡುಕೊಂಡಿದ್ದಾರೊ? ಒಳ್ಳೇದು, ತನ್ನ ಸ್ವರ್ಗೀಯ ರಾಜ್ಯದ ಮುಖಾಂತರ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ ಎಂಬ ಬೈಬಲಿನ ಮುಖ್ಯ ವಿಷಯದ ಸ್ಪಷ್ಟವಾದ ತಿಳಿವಳಿಕೆ ಅವರಿಗಿದೆಯೆ? ಯೆಹೋವ ದೇವರು ತ್ರಯೈಕ್ಯದ ಭಾಗವಾಗಿಲ್ಲವೆಂಬುದು ಅವರಿಗೆ ತಿಳಿದಿದೆಯೆ? ಅಂತಹ ವಿಷಯಗಳ ನಿಷ್ಕೃಷ್ಟ ತಿಳಿವಳಿಕೆ ನಮಗೆ ಇದೆ. ಅದೇಕೆ? ಏಕೆಂದರೆ, “ಜ್ಞಾನಿಗಳಿಗೂ ಬುದ್ಧಿವಂತರಿಗೂ” ಗೋಚರವಾಗದಿರುವ ಆತ್ಮಿಕ ಸತ್ಯಗಳ ಒಳನೋಟವನ್ನು ಕೊಟ್ಟು ಯೆಹೋವನು ನಮ್ಮನ್ನು ಆಶೀರ್ವದಿಸಿದ್ದಾನೆ. (ಮತ್ತಾಯ 11:25) ತನಗೆ ಸಮೀಪವಾಗಿರುವವರನ್ನು ಯೆಹೋವನು ಎಷ್ಟು ಉತ್ತಮವಾಗಿ ಆಶೀರ್ವದಿಸುತ್ತಾನೆ!

“ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ”

8, 9. (ಎ) ಯೆಹೋವನಿಗೆ ಸಮೀಪವಾಗಿರುವವರಿಗೆ ಸಿಗುವ ಇನ್ನೊಂದು ಆಶೀರ್ವಾದವನ್ನು ದಾವೀದನು ಹೇಗೆ ವರ್ಣಿಸಿದನು? (ಬಿ) ಸತ್ಕ್ರೈಸ್ತರಿಗೆ ದೈವಿಕ ಸಂರಕ್ಷಣೆಯ ಅಗತ್ಯವೇಕಿದೆ?

8 ಯೆಹೋವನಿಗೆ ಸಮೀಪವಾಗಿರುವವರು ಇನ್ನೊಂದು ಆಶೀರ್ವಾದವನ್ನು ಅನುಭವಿಸುತ್ತಾರೆ. ಅದು ಆತನ ಸಂರಕ್ಷಣೆಯೇ. ಬಹಳಷ್ಟು ಕಷ್ಟ ಹಾಗೂ ಸಮಸ್ಯೆಗಳನ್ನು ಸಹಿಸಿದ ಕೀರ್ತನೆಗಾರ ದಾವೀದನು ಬರೆದುದು: “ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ. ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ.” (ಕೀರ್ತನೆ 145:18-20) ಹೌದು, ಯೆಹೋವನು ತನ್ನನ್ನು ಪ್ರೀತಿಸುವವರಿಗೆ ಹತ್ತಿರವಾಗಿರುವುದರಿಂದ, ಸಹಾಯಕ್ಕಾಗಿ ಅವರು ಮೊರೆಯಿಡುವಾಗ ಆತನು ಬೇಗನೆ ಉತ್ತರ ನೀಡಬಲ್ಲನು.

9 ನಮಗೆ ಏಕೆ ದೈವಿಕ ಸಂರಕ್ಷಣೆಯ ಅಗತ್ಯವಿದೆ? ಈ “ಕಠಿನಕಾಲ”ಗಳಲ್ಲಿ ಜೀವಿಸುತ್ತಿರುವುದರಿಂದ ಅನುಭವಿಸುವ ಪರಿಣಾಮಗಳಿಗೆ ಕೂಡಿಸಿ, ಸತ್ಯ ಕ್ರೈಸ್ತರು ಯೆಹೋವನ ಪ್ರಧಾನ ವಿರೋಧಿಯಾಗಿರುವ ಪಿಶಾಚನಾದ ಸೈತಾನನ ವಿಶೇಷ ಗುರಿಹಲಗೆಗಳಾಗಿದ್ದಾರೆ. (2 ತಿಮೊಥೆಯ 3:1) ಆ ಕುತಂತ್ರಿಯಾದ ವೈರಿಯು ನಮ್ಮನ್ನು ‘ನುಂಗಲು’ ಪಟ್ಟುಹಿಡಿದಿದ್ದಾನೆ. (1 ಪೇತ್ರ 5:8) ಸೈತಾನನು ನಮ್ಮನ್ನು ಹಿಂಸಿಸುತ್ತಾನೆ, ನಮ್ಮ ಮೇಲೆ ಒತ್ತಡ ಹಾಕುತ್ತಾನೆ ಮತ್ತು ನಮ್ಮನ್ನು ಶೋಧನೆಗೊಳಪಡಿಸುತ್ತಾನೆ. ತಾನು ಸ್ವಪ್ರಯೋಜನಕ್ಕಾಗಿ ಬಳಸಬಹುದಾದ ಹೃದಮನಗಳ ಮನೋಭಾವಗಳೇನಾದರೂ ನಮ್ಮಲ್ಲಿವೆಯೋ ಎಂದು ಅವನು ನೋಡುತ್ತಿರುತ್ತಾನೆ. ಅವನ ಮನಸ್ಸಿನಲ್ಲಿರುವ ಧ್ಯೇಯವು, ನಮ್ಮ ನಂಬಿಕೆಯನ್ನು ದುರ್ಬಲಗೊಳಿಸಿ, ಆಧ್ಯಾತ್ಮಿಕವಾಗಿ ನಮ್ಮನ್ನು ಸದೆಬಡಿಯುವುದೇ ಆಗಿದೆ. (ಪ್ರಕಟನೆ 12:​12, 17) ನಮಗೆದುರಾಗಿ ಹೋರಾಡುತ್ತಿರುವ ವೈರಿಯು ಅಷ್ಟು ಬಲಾಢ್ಯನಾಗಿರುವಾಗ, “ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ” ಎಂದು ತಿಳಿಯುವುದು ನಮಗೆ ಪುನರಾಶ್ವಾಸನೆಯನ್ನು ನೀಡುವುದಿಲ್ಲವೊ?

10. (ಎ) ಯೆಹೋವನು ತನ್ನ ಜನರನ್ನು ಹೇಗೆ ಕಾಯುತ್ತಾನೆ? (ಬಿ) ಅತಿ ಪ್ರಾಮುಖ್ಯ ರೀತಿಯ ಸಂರಕ್ಷಣೆಯು ಯಾವುದು, ಮತ್ತು ಏಕೆ?

10 ಆದರೆ ಯೆಹೋವನು ತನ್ನ ಜನರನ್ನು ಹೇಗೆ ಕಾಯುತ್ತಾನೆ? ಸಂರಕ್ಷಣೆಯನ್ನು ಕೊಡುವೆನೆಂಬ ಆತನ ವಾಗ್ದಾನವು, ಈ ವ್ಯವಸ್ಥೆಯಲ್ಲಿ ನಮಗೆ ಸಮಸ್ಯೆಯಿಂದ ಮುಕ್ತವಾದ ಜೀವನದ ಖಾತ್ರಿಯನ್ನು ಕೊಡುವುದೂ ಇಲ್ಲ, ಆತನು ನಮ್ಮ ಪರವಾಗಿ ಅದ್ಭುತಗಳನ್ನು ಮಾಡುವ ಹಂಗಿಗೊಳಗಾಗಿದ್ದಾನೆಂಬ ಅರ್ಥವನ್ನು ಕೊಡುವುದೂ ಇಲ್ಲ. ಆದರೂ, ಯೆಹೋವನು ತನ್ನ ಜನರಿಗೆ ಒಂದು ಗುಂಪಿನೋಪಾದಿ ಶಾರೀರಿಕ ಸಂರಕ್ಷಣೆಯನ್ನು ಒದಗಿಸುತ್ತಾನೆ. ಪಿಶಾಚನು ಸತ್ಯಾರಾಧಕರನ್ನು ಈ ಭೂಮಿಯಿಂದ ನಿರ್ಮೂಲಮಾಡಲು ಆತನು ಎಂದಿಗೂ ಬಿಡನೆಂಬುದು ನಿಶ್ಚಯ! (2 ಪೇತ್ರ 2:9) ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವನು ನಮ್ಮನ್ನು ಆತ್ಮಿಕವಾಗಿ ಸಂರಕ್ಷಿಸುತ್ತಾನೆ. ನಾವು ಪರೀಕ್ಷೆಗಳನ್ನು ಸಹಿಸಿಕೊಳ್ಳಲು ಮತ್ತು ಆತನೊಂದಿಗೆ ನಮಗಿರುವ ಸಂಬಂಧವನ್ನು ಕಾಪಾಡಿಕೊಳ್ಳಲು ನಮಗೆ ಏನು ಬೇಕೊ ಅದರೊಂದಿಗೆ ಆತನು ನಮ್ಮನ್ನು ಸಜ್ಜುಗೊಳಿಸುತ್ತಾನೆ. ಅಂತಿಮವಾಗಿ, ಆಧ್ಯಾತ್ಮಿಕ ಸಂರಕ್ಷಣೆಯೇ ಅತಿ ಪ್ರಾಮುಖ್ಯ ರೀತಿಯ ಸಂರಕ್ಷಣೆಯಾಗಿದೆ. ಏಕೆ? ಯೆಹೋವನೊಂದಿಗೆ ನಮಗೆ ಒಂದು ಸುಸಂಬಂಧವಿರುವಷ್ಟು ಕಾಲ, ಯಾವುದೂ​—ಮರಣವು ಸಹ​—ನಮಗೆ ಖಾಯಂ ಹಾನಿಯನ್ನು ಉಂಟುಮಾಡದು.​—ಮತ್ತಾಯ 10:28.

11. ತನ್ನ ಜನರ ಆಧ್ಯಾತ್ಮಿಕ ಸಂರಕ್ಷಣೆಗಾಗಿ ಯೆಹೋವನು ಯಾವ ಏರ್ಪಾಡುಗಳನ್ನು ಮಾಡಿದ್ದಾನೆ?

11 ಯೆಹೋವನು ತನಗೆ ಸಮೀಪವಾಗಿರುವವರ ಆತ್ಮಿಕ ಸಂರಕ್ಷಣೆಗಾಗಿ ಬಹಳಷ್ಟು ಏರ್ಪಾಡುಗಳನ್ನು ಮಾಡಿದ್ದಾನೆ. ಆತನು ತನ್ನ ವಾಕ್ಯವಾದ ಬೈಬಲಿನ ಮೂಲಕ, ವಿವಿಧ ಪರೀಕ್ಷೆಗಳನ್ನು ನಿಭಾಯಿಸಲು ನಮಗೆ ಬೇಕಾಗಿರುವ ವಿವೇಕವನ್ನು ದಯಪಾಲಿಸುತ್ತಾನೆ. (ಯಾಕೋಬ 1:​2-5) ಶಾಸ್ತ್ರಗಳಲ್ಲಿ ಕಂಡುಬರುವ ಪ್ರಾಯೋಗಿಕ ಸಲಹೆಯನ್ನು ಅನ್ವಯಿಸಿಕೊಳ್ಳುವುದೇ ಒಂದು ಸಂರಕ್ಷಣೆಯಾಗಿದೆ. ಇದಕ್ಕೆ ಕೂಡಿಸಿ, ಯೆಹೋವನು “ತನ್ನನ್ನು ಬೇಡಿಕೊಳ್ಳುವವರಿಗೆ . . . ಪವಿತ್ರಾತ್ಮವರವನ್ನು” ಕೊಡುತ್ತಾನೆ. (ಲೂಕ 11:13) ಆ ಆತ್ಮವು ವಿಶ್ವದಲ್ಲಿರುವ ಅತಿ ಬಲಾಢ್ಯವಾದ ಶಕ್ತಿಯಾಗಿರುವುದರಿಂದ, ನಮಗೆ ಎದುರಾಗುವ ಯಾವುದೇ ಪರೀಕ್ಷೆ ಇಲ್ಲವೆ ಶೋಧನೆಯನ್ನು ನಾವು ಯಶಸ್ವಿಕರವಾಗಿ ಎದುರಿಸುವಂತೆ ಅದು ನಮ್ಮನ್ನು ಸಜ್ಜುಗೊಳಿಸಬಲ್ಲದು. ಯೆಹೋವನು ಕ್ರಿಸ್ತನ ಮೂಲಕ “ಮನುಷ್ಯರಲ್ಲಿ ದಾನ”ಗಳನ್ನು ಒದಗಿಸುತ್ತಾನೆ. (ಎಫೆಸ 4:8, NW) ಆತ್ಮಿಕವಾಗಿ ಅರ್ಹತೆ ಪಡೆದಿರುವ ಈ ಪುರುಷರು, ಜೊತೆ ಆರಾಧಕರಿಗೆ ಸಹಾಯಮಾಡುವುದರಲ್ಲಿ ಯೆಹೋವನ ಸ್ವಂತ ಹೃತ್ಪೂರ್ವಕವಾದ ಕನಿಕರವನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತಾರೆ.​—ಯಾಕೋಬ 5:​14, 15.

12, 13. (ಎ) ಯೆಹೋವನು ಯಾವುದರ ಮೂಲಕ ನಮಗೆ ತಕ್ಕ ಸಮಯದಲ್ಲಿ ಆತ್ಮಿಕ ಆಹಾರವನ್ನು ಒದಗಿಸುತ್ತಾನೆ? (ಬಿ) ನಮ್ಮ ಆತ್ಮಿಕ ಹಿತಕ್ಷೇಮಕ್ಕಾಗಿ ಯೆಹೋವನು ಮಾಡಿರುವ ಏರ್ಪಾಡುಗಳ ವಿಷಯದಲ್ಲಿ ನಿಮಗೆ ಹೇಗನಿಸುತ್ತದೆ?

12 ಯೆಹೋವನು ನಮ್ಮನ್ನು ಕಾಪಾಡಲು ಇನ್ನೇನನ್ನೊ ಒದಗಿಸುತ್ತಾನೆ: ಹೊತ್ತುಹೊತ್ತಿಗೆ ಅಗತ್ಯವಿರುವ ಆತ್ಮಿಕ ಆಹಾರವನ್ನೇ. (ಮತ್ತಾಯ 24:45) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಸೇರಿರುವ ಮುದ್ರಿತ ಪ್ರಕಾಶನಗಳು ಹಾಗೂ ಕೂಟಗಳು, ಸಮ್ಮೇಳನಗಳು, ಅಧಿವೇಶನಗಳು​—ಇವುಗಳ ಮೂಲಕ ಯೆಹೋವನು ನಮಗೆ ಬೇಕಾಗಿರುವುದನ್ನು ತಕ್ಕ ಸಮಯದಲ್ಲಿ ಒದಗಿಸುತ್ತಾನೆ. ಕ್ರೈಸ್ತ ಕೂಟದಲ್ಲೊ, ಸಮ್ಮೇಳನದಲ್ಲೊ, ಅಧಿವೇಶನದಲ್ಲೊ, ನಿಮ್ಮ ಹೃದಯವನ್ನು ಸ್ಪರ್ಶಿಸಿ ನಿಮ್ಮನ್ನು ಬಲಪಡಿಸಿದ ಅಥವಾ ಸಾಂತ್ವನಗೊಳಿಸಿದಂಥ ಯಾವ ಸಂದರ್ಭವಾದರೂ ನಿಮ್ಮ ಜ್ಞಾಪಕಕ್ಕೆ ಬರುತ್ತದೋ? ಮೇಲೆ ತಿಳಿಸಲ್ಪಟ್ಟಿರುವ ಪತ್ರಿಕೆಗಳಲ್ಲೊಂದರಲ್ಲಿ ನೀವು ಎಂದಾದರೂ ಒಂದು ಲೇಖನವನ್ನು ಓದಿ, ಅದು ವಿಶೇಷವಾಗಿ ನಿಮಗಾಗಿಯೇ ಬರೆಯಲ್ಪಟ್ಟಿತ್ತು ಎಂಬ ಅನಿಸಿಕೆ ನಿಮಗಾಗಿದೆಯೊ?

13 ಸೈತಾನನ ಅತಿ ಉಪಯುಕ್ತ ಆಯುಧಗಳಲ್ಲಿ ಒಂದು ನಿರುತ್ತೇಜನವಾಗಿದೆ ಮತ್ತು ಅದು ತಂದೊಡ್ಡುವ ದುಷ್ಪರಿಣಾಮಗಳಿಂದ ನಮಗೆ ವಿನಾಯಿತಿ ಇರುವುದಿಲ್ಲ. ದೀರ್ಘಕಾಲದ ವರೆಗೆ ಕಾಡುವ ನಿರೀಕ್ಷಾಹೀನತೆಯ ಆಳವಾದ ಅನಿಸಿಕೆಯು ನಮ್ಮ ಶಕ್ತಿಯನ್ನು ಕುಂದಿಸಿ, ನಮ್ಮನ್ನು ಸುಲಭಭೇದ್ಯರನ್ನಾಗಿಯೂ ಮಾಡಬಲ್ಲದೆಂದು ಅವನಿಗೆ ಚೆನ್ನಾಗಿ ಗೊತ್ತಿದೆ. (ಜ್ಞಾನೋಕ್ತಿ 24:10) ಸೈತಾನನು ನಮ್ಮ ನಕಾರಾತ್ಮಕ ಭಾವನೆಗಳ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಿರುವುದರಿಂದ ನಮಗೆ ಸಹಾಯವು ಅಗತ್ಯ. ಈ ನಿರುತ್ತೇಜನದೊಂದಿಗೆ ಹೋರಾಡುವಂತೆ ನಮಗೆ ಸಹಾಯಮಾಡುವಂಥ ಲೇಖನಗಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಪ್ರಕಟಿಸಲ್ಪಡುತ್ತವೆ. ಅಂತಹ ಒಂದು ಲೇಖನದ ಕುರಿತಾಗಿ ಒಬ್ಬ ಕ್ರೈಸ್ತ ಸಹೋದರಿಯು ಬರೆದುದು: “ನಾನು ಆ ಲೇಖನವನ್ನು ಹೆಚ್ಚುಕಡಮೆ ಪ್ರತಿದಿನ ಓದುತ್ತೇನೆ ಮತ್ತು ಈಗಲೂ ನನಗೆ ಕಣ್ಣೀರು ಉಕ್ಕಿಬರುತ್ತದೆ. ನಾನು ನಿರಾಶಳಾಗುವಾಗೆಲ್ಲ ಅದನ್ನು ಓದಲಾಗುವಂತೆ ಅದನ್ನು ನನ್ನ ಮಂಚದ ಹತ್ತಿರವೇ ಇಟ್ಟುಕೊಳ್ಳುತ್ತೇನೆ. ಇವುಗಳಂತಹ ಲೇಖನಗಳ ಮುಖೇನ ಯೆಹೋವನ ಸಂರಕ್ಷಣೆಯ ತೋಳುಗಳು ನನ್ನನ್ನಾವರಿಸುವ ಅನಿಸಿಕೆ ನನಗಾಗುತ್ತದೆ.” * ಸಮಯೋಚಿತವಾದ ಆತ್ಮಿಕ ಆಹಾರವನ್ನು ಒದಗಿಸುತ್ತಿರುವುದಕ್ಕಾಗಿ ನಾವು ಯೆಹೋವನಿಗೆ ಕೃತಜ್ಞರಾಗಿರುವುದಿಲ್ಲವೊ? ನಮ್ಮ ಆತ್ಮಿಕ ಹಿತಕ್ಷೇಮಕ್ಕಾಗಿ ಆತನು ಮಾಡಿರುವ ಏರ್ಪಾಡುಗಳು, ಆತನು ನಮಗೆ ಸಮೀಪವಾಗಿದ್ದಾನೆಂಬುದಕ್ಕೆ ಮತ್ತು ತನ್ನ ಸಂರಕ್ಷಣಾ ಪಾಲನೆಯಲ್ಲಿ ಆತನು ನಮ್ಮನ್ನಿಟ್ಟಿದ್ದಾನೆಂಬುದಕ್ಕೆ ರುಜುವಾತಾಗಿದೆಯೆಂಬುದು ನೆನಪಿರಲಿ.

‘ಪ್ರಾರ್ಥನೆಯನ್ನು ಕೇಳುವಾತನನ್ನು’ ಸಮೀಪಿಸುವ ಅವಕಾಶ

14, 15. (ಎ) ತನಗೆ ಸಮೀಪವಾಗಿರುವವರಿಗೆ ಯೆಹೋವನು ಯಾವ ವೈಯಕ್ತಿಕ ಆಶೀರ್ವಾದವನ್ನು ಕೊಡುತ್ತಾನೆ? (ಬಿ) ಪ್ರಾರ್ಥನೆಯಲ್ಲಿ ಯೆಹೋವನನ್ನು ನಿರ್ಬಂಧವಿಲ್ಲದೆ ಸಮೀಪಿಸುವ ಅವಕಾಶವು ಗಮನಾರ್ಹವಾದ ಸುಯೋಗವಾಗಿದೆ ಏಕೆ?

14 ಮಾನವರಿಗೆ ಶಕ್ತಿ ಮತ್ತು ಅಧಿಕಾರ ಸಿಗುವಾಗ, ಅನೇಕವೇಳೆ ಅವರ ಅಧಿಕಾರದ ಕೆಳಗಿರುವವರಿಗೆ ಅವರ ಬಳಿ ಹೋಗುವುದು ಸುಲಭವಾಗಿರುವುದಿಲ್ಲ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದುಂಟೊ? ಆದರೆ ಯೆಹೋವ ದೇವರ ವಿಷಯದಲ್ಲೇನು? ಮನುಷ್ಯಮಾತ್ರರು ಮಾಡುವ ಅಭಿವ್ಯಕ್ತಿಗಳ ವಿಷಯದಲ್ಲಿ ಆತನು ಎಳ್ಳಷ್ಟೂ ಆಸಕ್ತಿ ವಹಿಸದಷ್ಟು ದೂರದಲ್ಲಿದ್ದಾನೊ? ನಿಶ್ಚಯವಾಗಿಯೂ ಹಾಗಿರುವುದಿಲ್ಲ! ಯೆಹೋವನು ತನಗೆ ಸಮೀಪವಾಗಿರುವವರಿಗೆ ಕೊಡುವ ಇನ್ನೊಂದು ಆಶೀರ್ವಾದವು ಪ್ರಾರ್ಥನೆಯ ವರದಾನವೇ. ‘ಪ್ರಾರ್ಥನೆಯನ್ನು ಕೇಳುವಾತನನ್ನು’ ಸಮೀಪಿಸಲು ಕೊಡಲ್ಪಟ್ಟಿರುವ ನಿರ್ಬಂಧವಿಲ್ಲದ ಅವಕಾಶವು ನಿಜವಾಗಿಯೂ ಗಮನಾರ್ಹವಾಗಿರುವ ಸುಯೋಗವಾಗಿದೆ. (ಕೀರ್ತನೆ 65:2) ಹಾಗೇಕೆ?

15 ದೃಷ್ಟಾಂತಕ್ಕಾಗಿ, ದೊಡ್ಡ ಕಂಪೆನಿಯೊಂದರ ಮುಖ್ಯ ಕಾರ್ಯನಿರ್ವಾಹಕನಿಗೆ ಅನೇಕ ಜವಾಬ್ದಾರಿಗಳಿರುತ್ತವೆ. ತಾನು ಖುದ್ದಾಗಿ ಯಾವ ಕೆಲಸ ಮಾಡಬೇಕು ಮತ್ತು ಇತರರು ಮಾಡುವಂತೆ ಯಾವುದನ್ನು ಹಂಚಿಕೊಡಬೇಕೆಂದು ನಿರ್ಣಯಿಸುವವನು ಅವನೇ. ತದ್ರೀತಿಯಲ್ಲಿ, ವಿಶ್ವದ ಪರಮಾಧಿಕಾರಿ ಪ್ರಭುವಿಗೂ, ತಾನು ಯಾವುದರಲ್ಲಿ ಭಾಗವಹಿಸಬೇಕು ಮತ್ತು ಯಾವುದನ್ನು ಇತರರ ವಶಕ್ಕೆ ಒಪ್ಪಿಸಿಕೊಡಬೇಕು ಎಂದು ನಿಶ್ಚಯಿಸುವ ಸ್ವಾತಂತ್ರ್ಯವಿದೆ. ಯೆಹೋವನು ತನ್ನ ಪ್ರಿಯ ಕುಮಾರನಾದ ಯೇಸುವಿಗೆ ಒಪ್ಪಿಸಿಕೊಟ್ಟ ಕೆಲಸಗಳನ್ನು ಪರಿಗಣಿಸಿರಿ. ಮಗನಿಗೆ “ತೀರ್ಪು ಮಾಡುವ ಅಧಿಕಾರ”ವು ಕೊಡಲ್ಪಟ್ಟಿದೆ. (ಯೋಹಾನ 5:27) ದೇವದೂತರು ‘ಆತನ ಸ್ವಾಧೀನವಾಗಿದ್ದಾರೆ.’ (1 ಪೇತ್ರ 3:22) ಯೇಸು ಭೂಮಿಯ ಮೇಲೆ ತನ್ನ ಶಿಷ್ಯರನ್ನು ಮಾರ್ಗದರ್ಶಿಸುವಂತೆ ಅವನಿಗೆ ಸಹಾಯಮಾಡಲಿಕ್ಕಾಗಿ, ಯೆಹೋವನ ಬಲಾಢ್ಯವಾದ ಪವಿತ್ರಾತ್ಮವನ್ನು ಅವನ ವಶಕ್ಕೆ ಕೊಡಲಾಗಿದೆ. (ಯೋಹಾನ 15:26; 16:7) ಈ ಕಾರಣದಿಂದಲೇ ಯೇಸು, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ” ಎಂದು ಹೇಳಸಾಧ್ಯವಾಯಿತು. (ಮತ್ತಾಯ 28:18) ಆದರೂ ನಮ್ಮ ಪ್ರಾರ್ಥನೆಗಳ ವಿಷಯದಲ್ಲಿ, ಯೆಹೋವನು ತಾನೇ ಖುದ್ದಾಗಿ ಅವುಗಳನ್ನು ಕೇಳುವ ಆಯ್ಕೆಮಾಡಿದ್ದಾನೆ. ಆದುದರಿಂದಲೇ ನಾವು ಯೆಹೋವನಿಗೆ ಮಾತ್ರ ಪ್ರಾರ್ಥನೆಗಳನ್ನು ಸಂಬೋಧಿಸುವಂತೆ ಮತ್ತು ಅದನ್ನು ಯೇಸುವಿನ ಹೆಸರಿನಲ್ಲಿ ಮಾಡುವಂತೆ ಬೈಬಲು ನಮ್ಮನ್ನು ನಿರ್ದೇಶಿಸುತ್ತದೆ.​—ಕೀರ್ತನೆ 69:13; ಯೋಹಾನ 14:6, 13.

16. ಯೆಹೋವನು ನಿಜವಾಗಿಯೂ ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆಂದು ನಾವು ಏಕೆ ಭರವಸೆಯಿಂದಿರಬಲ್ಲೆವು?

16 ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ನಿಜವಾಗಿಯೂ ಕಿವಿಗೊಡುತ್ತಾನೊ? ಆತನು ಉದಾಸೀನ ಮನೋಭಾವದವನೂ ಚಿಂತಿಸದವನೂ ಆಗಿರುತ್ತಿದ್ದಲ್ಲಿ, “ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ” ಎಂದಾಗಲಿ, ನಮ್ಮ ಚಿಂತಾಭಾರವನ್ನು ಆತನ ಮೇಲೆ ಹಾಕಬೇಕೆಂದಾಗಲಿ ಆತನು ಎಂದೂ ಪ್ರೋತ್ಸಾಹಿಸುತ್ತಿರಲಿಲ್ಲ. (ರೋಮಾಪುರ 12:12; ಕೀರ್ತನೆ 55:22; 1 ಪೇತ್ರ 5:7) ಬೈಬಲ್‌ ಸಮಯಗಳಲ್ಲಿದ್ದ ನಂಬಿಗಸ್ತ ಸೇವಕರಿಗೆ ಯೆಹೋವನು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆಂಬ ವಿಷಯದಲ್ಲಿ ಪೂರ್ಣ ಭರವಸೆಯಿತ್ತು. (1 ಯೋಹಾನ 5:14) ಆದುದರಿಂದಲೇ ಕೀರ್ತನೆಗಾರ ದಾವೀದನು, ‘ಯೆಹೋವನು ಹೇಗೂ ನನ್ನ ಮೊರೆಯನ್ನು ಕೇಳುವನು’ ಎಂದು ಹೇಳಿದನು. (ಕೀರ್ತನೆ 55:17) ಯೆಹೋವನು ನಮ್ಮ ಹತ್ತಿರವಿದ್ದು ನಮ್ಮ ಪ್ರತಿಯೊಂದು ವಿಚಾರ ಹಾಗೂ ಚಿಂತೆಯನ್ನು ಕೇಳಲು ಸಿದ್ಧನಾಗಿದ್ದಾನೆಂದು ಭರವಸೆಯಿಡಲು ನಮಗೂ ಸಕಾರಣವಿದೆ.

ಯೆಹೋವನು ತನ್ನ ಸೇವಕರಿಗೆ ಪ್ರತಿಫಲ ಕೊಡುತ್ತಾನೆ

17, 18. (ಎ) ಬುದ್ಧಿಶಕ್ತಿಯುಳ್ಳ ತನ್ನ ಸೃಷ್ಟಿಜೀವಿಗಳ ನಂಬಿಗಸ್ತ ಸೇವೆಯ ಕುರಿತು ಯೆಹೋವನಿಗೆ ಹೇಗನಿಸುತ್ತದೆ? (ಬಿ) ನಮ್ಮ ಕೃಪಾಕೃತ್ಯಗಳನ್ನು ಯೆಹೋವನು ಗಮನಿಸದೆ ಹೋಗುವುದಿಲ್ಲವೆಂಬ ಸಂಗತಿಯನ್ನು ಜ್ಞಾನೋಕ್ತಿ 19:17 ಹೇಗೆ ತೋರಿಸುತ್ತದೆಂಬುದನ್ನು ವಿವರಿಸಿರಿ.

17 ಮನುಷ್ಯರು ಏನೇ ಮಾಡಲಿ ಇಲ್ಲವೆ ಮಾಡಲು ನಿರಾಕರಿಸಲಿ, ಇದು ವಿಶ್ವದ ಪರಮಾಧಿಕಾರಿಯೋಪಾದಿ ಯೆಹೋವನ ಸ್ಥಾನದ ಮೇಲೆ ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ. ಆದರೂ, ಯೆಹೋವನು ಕೃತಜ್ಞತೆಯನ್ನು ಸೂಚಿಸುವ ದೇವರಾಗಿದ್ದಾನೆ. ತನ್ನ ಬದ್ಧಿಶಕ್ತಿಯ ಜೀವಿಗಳ ನಂಬಿಗಸ್ತಿಕೆಯ ಸೇವೆಯನ್ನು ಆತನು ಬೆಲೆಯುಳ್ಳದ್ದೆಂದು ಎಣಿಸುತ್ತಾನೆ, ಪ್ರೀತಿಯಿಂದ ಕಾಣುತ್ತಾನೆ ಕೂಡ. (ಕೀರ್ತನೆ 147:11) ಹಾಗಾದರೆ ಯೆಹೋವನಿಗೆ ಸಮೀಪವಾಗಿರುವವರು ಅನುಭವಿಸುವ ಇನ್ನೊಂದು ಪ್ರಯೋಜನವು ಇದೇ: ಆತನು ತನ್ನ ಸೇವಕರಿಗೆ ಪ್ರತಿಫಲವನ್ನು ಕೊಡುತ್ತಾನೆ.​—ಇಬ್ರಿಯ 11:6.

18 ತನ್ನ ಆರಾಧಕರು ಏನನ್ನು ಮಾಡುತ್ತಾರೊ ಅದಕ್ಕೆ ಯೆಹೋವನು ನಿಜವಾಗಿಯೂ ಬೆಲೆಕೊಡುತ್ತಾನೆಂದು ಬೈಬಲು ಸ್ಪಷ್ಟವಾಗಿ ತೋರಿಸುತ್ತದೆ. ಉದಾಹರಣೆಗೆ, “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರಮಾಡುವನು” ಎಂದು ನಾವು ಓದುತ್ತೇವೆ. (ಜ್ಞಾನೋಕ್ತಿ 19:17) ಬಡವರಿಗೆ ಯೆಹೋವನು ತೋರಿಸುವ ಕರುಣಾಭರಿತ ಪರಿಗಣನೆಯು ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರತಿಬಿಂಬಿಸಲ್ಪಟ್ಟಿತ್ತು. (ಯಾಜಕಕಾಂಡ 14:21; 19:15) ನಾವು ಬಡವರೊಂದಿಗೆ ವ್ಯವಹರಿಸುವಾಗ ಆತನ ಕರುಣೆಯನ್ನು ಅನುಕರಿಸುವಲ್ಲಿ ಯೆಹೋವನಿಗೆ ಹೇಗನಿಸುತ್ತದೆ? ನಾವು ಬಡವರಿಂದ ಏನನ್ನೂ ನಿರೀಕ್ಷಿಸದೆ, ಅವರಿಗೆ ಸಹಾಯಮಾಡುವಲ್ಲಿ ಅದನ್ನು ಯೆಹೋವನು ನಾವು ಆತನಿಗೆ ಕೊಟ್ಟಿರುವ ಸಾಲದಂತೆ ವೀಕ್ಷಿಸುತ್ತಾನೆ. ಅನುಗ್ರಹ ಹಾಗೂ ಆಶೀರ್ವಾದಗಳನ್ನು ಕೊಡುವ ಮೂಲಕ ತಾನು ಆ ಸಾಲವನ್ನು ತೀರಿಸುವೆನೆಂದು ಯೆಹೋವನು ವಾಗ್ದಾನಿಸುತ್ತಾನೆ. (ಜ್ಞಾನೋಕ್ತಿ 10:22; ಮತ್ತಾಯ 6:3, 4; ಲೂಕ 14:12-14) ಹೌದು, ನಾವು ಕೊರತೆಯಲ್ಲಿರುವ ಜೊತೆ ಆರಾಧಕನೊಬ್ಬನಿಗೆ ಕನಿಕರವನ್ನು ತೋರಿಸುವಾಗ ಅದು ಯೆಹೋವನ ಹೃದಯವನ್ನು ಸ್ಪರ್ಶಿಸುತ್ತದೆ. ನಮ್ಮ ಕೃಪಾಕೃತ್ಯಗಳನ್ನು ನಮ್ಮ ಸ್ವರ್ಗೀಯ ತಂದೆಯು ಗಮನಿಸದೆ ಹೋಗುವುದಿಲ್ಲವೆಂಬುದನ್ನು ತಿಳಿದುಕೊಳ್ಳಲು ನಾವೆಷ್ಟು ಕೃತಜ್ಞರು!​—ಮತ್ತಾಯ 5:7.

19. (ಎ) ನಾವು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಏನು ಮಾಡುತ್ತೇವೊ ಅದನ್ನು ಯೆಹೋವನು ಗಣ್ಯಮಾಡುತ್ತಾನೆಂಬ ಆಶ್ವಾಸನೆ ನಮಗೇಕೆ ಇರಬಲ್ಲದು? (ಬಿ) ತನ್ನ ರಾಜ್ಯದ ಬೆಂಬಲಾರ್ಥವಾಗಿ ಮಾಡುವ ಸೇವೆಗೆ ಯೆಹೋವನು ಹೇಗೆ ಪ್ರತಿಫಲ ಕೊಡುತ್ತಾನೆ?

19 ತನ್ನ ರಾಜ್ಯದ ಪರವಾಗಿ ನಾವು ಏನು ಮಾಡುತ್ತೇವೊ ಅದನ್ನು ಯೆಹೋವನು ವಿಶೇಷವಾಗಿ ಗಣ್ಯಮಾಡುತ್ತಾನೆ. ನಾವು ಯೆಹೋವನ ಸಮೀಪಕ್ಕೆ ಹೋದಂತೆ, ಸ್ವಾಭಾವಿಕವಾಗಿಯೇ ನಾವು ನಮ್ಮ ಸಮಯ, ಶಕ್ತಿ ಮತ್ತು ಧನವನ್ನು ರಾಜ್ಯದ ಸಾರುವಿಕೆ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಆದಷ್ಟು ಹೆಚ್ಚು ಕೊಡಲು ಬಯಸುವೆವು. (ಮತ್ತಾಯ 28:​19, 20) ಕೆಲವೊಮ್ಮೆ, ನಾವು ಸಾಧಿಸುವಂಥ ಕೆಲಸವು ತೀರ ಅಲ್ಪವಾದದ್ದಾಗಿದೆ ಎಂಬ ಅನಿಸಿಕೆ ನಮಗಾಗುತ್ತದೆ. ನಮ್ಮ ಅಪರಿಪೂರ್ಣ ಹೃದಯವು, ಯೆಹೋವನು ನಮ್ಮ ಪ್ರಯತ್ನಗಳನ್ನು ಮೆಚ್ಚುತ್ತಾನೊ ಇಲ್ಲವೊ ಎಂದು ನಾವು ಯೋಚಿಸುವಂತೆಯೂ ಮಾಡಬಹುದು. (1 ಯೋಹಾನ 3:​19, 20) ಆದರೆ ನಾವು ಕೊಡುವ ಪ್ರತಿಯೊಂದು ಕೊಡುಗೆಯು ಎಷ್ಟೇ ಚಿಕ್ಕದಾಗಿರಲಿ, ಅದು ಪ್ರೀತಿಯಿಂದ ಪ್ರಚೋದಿತವಾದ ಹೃದಯದಿಂದ ಬರುವಲ್ಲಿ, ಯೆಹೋವನು ಅದನ್ನು ಅಮೂಲ್ಯವೆಂದೆಣಿಸುತ್ತಾನೆ. (ಮಾರ್ಕ 12:​41-44) “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ” ಎಂಬ ಆಶ್ವಾಸನೆಯನ್ನು ಬೈಬಲು ನಮಗೆ ನೀಡುತ್ತದೆ. (ಇಬ್ರಿಯ 6:10) ಹೌದು, ಯೆಹೋವನು ತನ್ನ ರಾಜ್ಯದ ಬೆಂಬಲಾರ್ಥವಾಗಿ ಜನರು ಮಾಡುವ ಅತಿ ಚಿಕ್ಕದಾದ ಸೇವಾ ಕೃತ್ಯವನ್ನೂ ನೆನಪಿಸಿಕೊಂಡು ಅದಕ್ಕೆ ಪ್ರತಿಫಲವನ್ನು ಕೊಡುತ್ತಾನೆ. ಈಗ ದೊರೆಯುವ ಹೇರಳವಾದ ಆತ್ಮಿಕ ಆಶೀರ್ವಾದಗಳಿಗೆ ಕೂಡಿಸಿ, ನಾವು ಬರಲಿರುವ ನೂತನ ಲೋಕದಲ್ಲಿ ಜೀವನದ ಸುಖಗಳನ್ನೂ ಎದುರುನೋಡಬಲ್ಲೆವು. ಆ ಲೋಕದಲ್ಲಿ ಯೆಹೋವನು ಉದಾರವಾಗಿ ತನ್ನ ಕೈದೆರೆದು ತನಗೆ ಸಮೀಪವಾಗಿರುವವರೆಲ್ಲರ ನೀತಿಭರಿತ ಇಷ್ಟಗಳನ್ನು ನೆರವೇರಿಸುವನು!​—ಕೀರ್ತನೆ 145:16; 2 ಪೇತ್ರ 3:13.

20. ಇಸವಿ 2003ರಾದ್ಯಂತ, ನಾವು ನಮ್ಮ ವಾರ್ಷಿಕವಚನದ ಮಾತುಗಳನ್ನು ಹೇಗೆ ಮನಸ್ಸಿನಲ್ಲಿಟ್ಟುಕೊಳ್ಳಬಹುದು, ಮತ್ತು ಇದರ ಫಲಿತಾಂಶವೇನಾಗಿರುವುದು?

20 ಇಸವಿ 2003ರಾದ್ಯಂತ, ನಮ್ಮ ಸ್ವರ್ಗೀಯ ಪಿತನ ಸಮೀಪಕ್ಕೆ ಹೋಗಲು ನಾವು ನಿರಂತರ ಪ್ರಯತ್ನವನ್ನು ಮಾಡುತ್ತಿದ್ದೇವೊ ಎಂದು ಸ್ವತಃ ಕೇಳಿಕೊಳ್ಳುತ್ತಿರೋಣ. ಹಾಗೆ ಮಾಡುವಲ್ಲಿ, ಆತನು ವಾಗ್ದಾನಿಸಿರುವಂತೆಯೇ ಮಾಡುವನೆಂದು ನಿಶ್ಚಯದಿಂದಿರಬಲ್ಲೆವು. ಏಕೆಂದರೆ, ‘ದೇವರು ಸುಳ್ಳಾಡನು.’ (ತೀತ 1:1) ನೀವು ಆತನ ಸಮೀಪಕ್ಕೆ ಬರುವಲ್ಲಿ ಆತನು ನಿಮ್ಮ ಸಮೀಪಕ್ಕೆ ಬರುವನು. (ಯಾಕೋಬ 4:8) ಫಲಿತಾಂಶವೇನು? ಈಗಲೂ ಸಮೃದ್ಧವಾದ ಆಶೀರ್ವಾದಗಳು ಮತ್ತು ಅನಂತಕಾಲಕ್ಕೂ ಯೆಹೋವನ ಸಮೀಪಕ್ಕೆ ಹೋಗುತ್ತಾ ಇರುವ ಪ್ರತೀಕ್ಷೆ!

[ಪಾದಟಿಪ್ಪಣಿ]

^ ಪ್ಯಾರ. 13 ಇದು, 2000, ಮೇ 1ರ ಕಾವಲಿನಬುರುಜು ಪತ್ರಿಕೆಯ 28-31ನೆಯ ಪುಟಗಳಲ್ಲಿರುವ “ಯೆಹೋವನು ನಮ್ಮ ಹೃದಯಕ್ಕಿಂತ ದೊಡ್ಡವನು” ಎಂಬ ಲೇಖನಕ್ಕಾಗಿರುವ ಒಂದು ಪ್ರತಿವರ್ತನೆ.

ನಿಮಗೆ ಜ್ಞಾಪಕವಿದೆಯೆ?

• ಯೆಹೋವನ ಸಮೀಪಕ್ಕೆ ಹೋಗುವವರಿಗೆ ಆತನು ಯಾವ ಕೊಡುಗೆಯನ್ನು ಕೊಡುತ್ತಾನೆ?

• ತನ್ನ ಜನರ ಆತ್ಮಿಕ ಸಂರಕ್ಷಣೆಗಾಗಿ ಯೆಹೋವನು ಯಾವ ಏರ್ಪಾಡುಗಳನ್ನು ಮಾಡುತ್ತಾನೆ?

• ಯೆಹೋವನಿಗೆ ಪ್ರಾರ್ಥಿಸುವ ಅನಿರ್ಬಂಧಿತ ಅವಕಾಶವು ನಮಗೆ ಕೊಡಲ್ಪಟ್ಟಿರುವುದು ಗಮನಾರ್ಹವಾದ ಸುಯೋಗವಾಗಿರುವುದೇಕೆ?

• ಬುದ್ಧಿಶಕ್ತಿಯುಳ್ಳ ತನ್ನ ಸೃಷ್ಟಿಜೀವಿಗಳ ನಂಬಿಗಸ್ತ ಸೇವೆಯನ್ನು ಯೆಹೋವನು ಗಣ್ಯಮಾಡುತ್ತಾನೆಂದು ಬೈಬಲು ಹೇಗೆ ತೋರಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಯೆಹೋವನು ನಮಗೆ ಆತ್ಮಿಕ ಸತ್ಯಗಳ ಒಳನೋಟವನ್ನು ಕೊಟ್ಟು ಆಶೀರ್ವದಿಸಿದ್ದಾನೆ

[ಪುಟ 16, 17ರಲ್ಲಿರುವ ಚಿತ್ರಗಳು]

ಯೆಹೋವನು ಆತ್ಮಿಕ ಸಂರಕ್ಷಣೆಯನ್ನು ಒದಗಿಸುತ್ತಾನೆ

[ಪುಟ 18ರಲ್ಲಿರುವ ಚಿತ್ರ]

ಯೆಹೋವನು ಸಮೀಪದಲ್ಲಿದ್ದು, ನಮ್ಮ ಪ್ರತಿಯೊಂದು ಪ್ರಾರ್ಥನೆಗೂ ಕಿವಿಗೊಡಲು ಸಿದ್ಧನಾಗಿದ್ದಾನೆ