ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ನಾವು ತಿಳಿದುಕೊಳ್ಳಲು ಅರ್ಹನಾಗಿರುವಂಥ ಒಬ್ಬ ದೇವರು

ಯೆಹೋವ ನಾವು ತಿಳಿದುಕೊಳ್ಳಲು ಅರ್ಹನಾಗಿರುವಂಥ ಒಬ್ಬ ದೇವರು

ಯೆಹೋವ ನಾವು ತಿಳಿದುಕೊಳ್ಳಲು ಅರ್ಹನಾಗಿರುವಂಥ ಒಬ್ಬ ದೇವರು

ಜೀವನದಲ್ಲಿ ಪ್ರಾಮುಖ್ಯವಾಗಿರುವ ಯಾವುದನ್ನೋ ತಿಳಿದುಕೊಂಡು, ಅದರಿಂದ ಪ್ರಯೋಜನ ಪಡೆಯುವ ಅವಕಾಶವನ್ನು ನೀವು ಕಳೆದುಕೊಳ್ಳುತ್ತಿದ್ದೀರೋ? ನಿಮಗೆ ದೇವರ ಕುರಿತು ಸ್ವಲ್ಪ ಮಾತ್ರ ತಿಳಿದಿರುವುದಾದರೆ, ನೀವು ಖಂಡಿತವಾಗಿಯೂ ಏನನ್ನೋ ಕಳೆದುಕೊಳ್ಳುತ್ತಿದ್ದೀರಿ. ಏಕೆ? ಏಕೆಂದರೆ, ಲಕ್ಷಾಂತರ ಮಂದಿ ಕಂಡುಕೊಂಡಿರುವ ಪ್ರಕಾರ, ಬೈಬಲಿನ ದೇವರ ಕುರಿತು ತಿಳಿದುಕೊಳ್ಳುವುದು ಜೀವನದಲ್ಲಿ ಹೆಚ್ಚು ಪ್ರಯೋಜನಗಳನ್ನು ತರುತ್ತದೆ. ಈ ಪ್ರಯೋಜನಗಳು ತಕ್ಷಣವೇ ಸಿಗುತ್ತವೆ ಮತ್ತು ಅನಂತಕಾಲದ ವರೆಗೆ ಉಳಿಯುತ್ತವೆ.

ಬೈಬಲಿನ ಗ್ರಂಥಕರ್ತನಾದ ಯೆಹೋವ ದೇವರು, ನಾವು ಆತನ ಕುರಿತು ತಿಳಿದುಕೊಳ್ಳಬೇಕೆಂದು ಬಯಸುತ್ತಾನೆ. ಕೀರ್ತನೆಗಾರನು ಬರೆದುದು: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು [ಜನರು] ಗ್ರಹಿಸುವರು.” ಆತನ ಕುರಿತು ತಿಳಿದುಕೊಳ್ಳುವುದರಿಂದ ನಮಗೆ ಹೆಚ್ಚಿನ ಪ್ರಯೋಜನಗಳಿವೆ ಎಂಬುದನ್ನು ಆತನು ಗ್ರಹಿಸಿದ್ದಾನೆ. “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿ”ಸುವಾತನು. ಸರ್ವೋನ್ನತನಾದ ಯೆಹೋವ ದೇವರ ಕುರಿತು ತಿಳಿದುಕೊಳ್ಳುವುದರಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?​—ಕೀರ್ತನೆ 83:18; ಯೆಶಾಯ 48:17.

ಒಂದು ನಿಜವಾದ ಪ್ರಯೋಜನವೇನೆಂದರೆ, ದಿನನಿತ್ಯದ ಸಮಸ್ಯೆಗಳ ಎದುರಿನಲ್ಲೂ ನಮಗೆ ಮಾರ್ಗದರ್ಶನ, ಭವಿಷ್ಯತ್ತಿಗಾಗಿ ದೃಢ ನಂಬಿಕೆ, ಮತ್ತು ಮನಶ್ಶಾಂತಿ ಸಿಗುತ್ತದೆ. ಅಷ್ಟುಮಾತ್ರವಲ್ಲದೆ, ಯೆಹೋವನೊಂದಿಗೆ ಚಿರಪರಿಚಿತರಾಗಿರುವುದು, ಇಂದು ಲೋಕದಾದ್ಯಂತವಿರುವ ಜನರು ಎದುರಿಸುವ ಅತಿ ಪ್ರಾಮುಖ್ಯವಾದ ವಿವಾದಗಳ ವಿಷಯದಲ್ಲಿ ತೀರ ಭಿನ್ನವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ಅವು ಯಾವ ವಿವಾದಗಳು?

ನಿಮ್ಮ ಜೀವಿತಕ್ಕೆ ಯಾವುದೇ ಉದ್ದೇಶವಿದೆಯೋ?

ಮಾನವಕುಲದ ದಿಗ್ಭ್ರಮೆಗೊಳಿಸುವಂಥ ತಾಂತ್ರಿಕ ಪ್ರಗತಿಯ ಹೊರತೂ, ಜನರು ಇಂದು ಮೂಲಭೂತವಾದ ಅವೇ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ: ‘ನಾನೇಕೆ ಇಲ್ಲಿದ್ದೇನೆ? ನಾನೆಲ್ಲಿಗೆ ಹೋಗುತ್ತಿದ್ದೇನೆ? ಜೀವನದ ಉದ್ದೇಶವಾದರೂ ಏನು?’ ಒಬ್ಬ ವ್ಯಕ್ತಿಗೆ ಸಂತೃಪ್ತಿದಾಯಕ ಉತ್ತರಗಳು ಸಿಗದಿದ್ದರೆ, ಅವನ ಜೀವಿತದಲ್ಲಿ ನಿಜ ಉದ್ದೇಶವಿರುವುದಿಲ್ಲ. ಈ ಕೊರತೆಯನ್ನು ಹೆಚ್ಚಿನ ಜನರು ಗ್ರಹಿಸುತ್ತಾರೋ? 1990ಗಳ ಕೊನೆಯಲ್ಲಿ ಜರ್ಮನಿಯಲ್ಲಿ ನಡೆಸಲ್ಪಟ್ಟ ಒಂದು ಅಧ್ಯಯನವು ಬಯಲುಗೊಳಿಸಿದ ಪ್ರಕಾರ, ಪ್ರತ್ಯುತ್ತರಿಸಿದವರಲ್ಲಿ ಅರ್ಧಾಂಶ ಮಂದಿ ಅನೇಕವೇಳೆ ಅಥವಾ ಕೆಲವೊಮ್ಮೆ ತಮಗೆ ಜೀವಿತದಲ್ಲಿ ಉದ್ದೇಶವೇನೂ ಇಲ್ಲ ಎಂಬಂತೆ ತೋರಿತು ಎಂದು ಹೇಳಿದರು. ಪ್ರಾಯಶಃ ನಿಮ್ಮ ಪ್ರದೇಶದಲ್ಲೂ ಈ ಮಾತು ನಿಜವಾಗಿರಬಹುದು.

ಜೀವಿತದಲ್ಲಿ ಒಂದು ಉದ್ದೇಶವಿಲ್ಲದೆ, ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ಗುರಿಗಳನ್ನು ಕಟ್ಟಲು ಅವನಿಗೆ ಯಾವುದೇ ತಳಪಾಯವು ಇರುವುದಿಲ್ಲ. ಅನೇಕರು ಈ ಕೊರತೆಯನ್ನು ಹೋಗಲಾಡಿಸಲು ಯಶಸ್ವಿದಾಯಕ ಜೀವನೊದ್ಯೋಗಗಳನ್ನು ಬೆನ್ನಟ್ಟುತ್ತಾರೆ ಇಲ್ಲವೆ ಐಶ್ವರ್ಯವನ್ನು ಸಂಗ್ರಹಿಸುತ್ತಾರೆ. ಆಗಲೂ, ಬರಿದಾದ ಅನಿಸಿಕೆಯು ಅವರನ್ನು ಕಾಡಿಸಬಹುದು. ಜೀವನದಲ್ಲಿ ಯಾವುದೇ ಉದ್ದೇಶವಿಲ್ಲದಿರುವುದು ಕೆಲವರನ್ನು ಎಷ್ಟರ ಮಟ್ಟಿಗೆ ಕಾಡುತ್ತದೆಂದರೆ, ಅವರು ಇನ್ನು ಮುಂದೆ ಜೀವಿಸಲು ಬಯಸುವುದಿಲ್ಲ. ಇದೇ ಒಬ್ಬ ಸುಂದರ ಯುವ ಸ್ತ್ರೀಯ ಅನುಭವವಾಗಿತ್ತು. ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌ ವಾರ್ತಾಪತ್ರಿಕೆಗನುಸಾರ, ಅವಳು “ಬೆರಗುಗೊಳಿಸುವ ಐಶ್ವರ್ಯ ಮತ್ತು ಅಸೀಮಿತ ಸುಖಸೌಕರ್ಯಗಳ” ಮಧ್ಯೆ ಬೆಳೆಸಲ್ಪಟ್ಟಿದ್ದಳು. ಅವಳು ಸುಖಭೋಗದಲ್ಲಿ ಜೀವಿಸಿದಳಾದರೂ, ಅವಳು ಒಂಟಿಯಾಗಿದ್ದಳು ಮತ್ತು ಜೀವಿತದಲ್ಲಿ ಯಾವುದೇ ಗುರಿಯಿಲ್ಲವೆಂದು ಅವಳಿಗನಿಸಿತು. ಅವಳು ನಿದ್ರೆಯ ಮಾತ್ರೆಗಳನ್ನು ತೆಗೆದುಕೊಂಡು ಸತ್ತಳು. ತಮ್ಮ ಜೀವನಗಳನ್ನು ದುರಂತಕರವಾಗಿ ಕೊನೆಗೊಳಿಸಿದ ಇತರ ಒಂಟಿಭಾವದ ವ್ಯಕ್ತಿಗಳ ಕುರಿತು ನಿಮಗೂ ತಿಳಿದಿರಬಹುದು.

ಆದರೂ, ವಿಜ್ಞಾನವು ಜೀವನದ ಕುರಿತು ಎಲ್ಲವನ್ನೂ ಹೇಳಸಾಧ್ಯವಿದೆಯೆಂಬ ವಿವಾದವನ್ನು ನೀವು ಕೇಳಿಸಿಕೊಂಡಿದ್ದೀರೋ? ಡೀ ವೊಕ ಎಂಬ ಜರ್ಮನ್‌ ಸಾಪ್ತಾಹಿಕವು ಗುರುತಿಸುವುದು: “ವಿಜ್ಞಾನವು ಎಷ್ಟು ಸತ್ಯವಾಗಿದೆಯೋ ಆತ್ಮಿಕವಾಗಿ ಅಷ್ಟೇ ದುರ್ಬಲವಾಗಿದೆ. ವಿಕಾಸವಾದವೂ ಕೇವಲ ಅಪೂರ್ಣವಾಗಿ ಕಾಣುತ್ತದೆ ಹಾಗೂ ಕ್ವಾಂಟಂ ಸಿದ್ಧಾಂತ ಕೂಡ ಅದರ ಎಲ್ಲಾ ಪತ್ತೆಹಚ್ಚಲಾಗದ ವಿಭಿನ್ನತೆಗಳೊಂದಿಗೆ ಯಾವುದೇ ಸಾಂತ್ವನ ಮತ್ತು ಸುಭದ್ರತೆಯನ್ನು ಒದಗಿಸುವುದಿಲ್ಲ.” ವೈಜ್ಞಾನಿಕ ಆವಿಷ್ಕಾರಗಳು ಜೀವಿತವನ್ನು ಅದರ ವೈವಿಧ್ಯಮಯ ಶೈಲಿಗಳಲ್ಲಿ ವರ್ಣಿಸಲು ಮತ್ತು ಜೀವವನ್ನು ಸಂರಕ್ಷಿಸುವ ನೈಸರ್ಗಿಕ ಚಕ್ರಗಳು ಮತ್ತು ಕಾರ್ಯವಿಧಾನಗಳನ್ನು ವಿವರಿಸಲು ಹೆಚ್ಚನ್ನು ಮಾಡಿದೆ. ಆದರೂ, ನಾವೇಕೆ ಇಲ್ಲಿದ್ದೇವೆ ಮತ್ತು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದಕ್ಕೆ ಉತ್ತರವು ವಿಜ್ಞಾನದ ಬಳಿ ಇಲ್ಲ. ನಾವು ಸಂಪೂರ್ಣವಾಗಿ ವಿಜ್ಞಾನದ ಮೇಲೆ ಆತುಕೊಳ್ಳುವಲ್ಲಿ, ಜೀವಿತದ ಉದ್ದೇಶದ ಕುರಿತಾದ ನಮ್ಮ ಪ್ರಶ್ನೆಗಳು ಉತ್ತರಿಸಲ್ಪಡದೇ ಹೋಗುವವು. ಸುಎಟ್‌ಡೈಚೆ ಟ್ಸೈಟುಂಗ್‌ ಎಂಬ ವಾರ್ತಾಪತ್ರಿಕೆಯು ಹೇಳಿದ ಪ್ರಕಾರ, ಇದರ ಪರಿಣಾಮವು “ಮಾರ್ಗದರ್ಶನದ ವ್ಯಾಪಕವಾದ ಅಭಾವ”ವನ್ನು ಉಂಟುಮಾಡುವುದು.

ಈ ರೀತಿಯ ಮಾರ್ಗದರ್ಶನವನ್ನು ಸೃಷ್ಟಿಕರ್ತನೇ ಹೊರತು ಬೇರಾರು ಒದಗಿಸಬಲ್ಲರು? ಮಾನವರನ್ನು ಭೂಮಿಯ ಮೇಲೆ ಸೃಷ್ಟಿಸಿದವನು ಆತನಾಗಿರುವುದರಿಂದ, ಅವರೇಕೆ ಇಲ್ಲಿದ್ದಾರೆ ಎಂಬುದಕ್ಕಿರುವ ಪ್ರಾಥಮಿಕ ಕಾರಣವು ಆತನಿಗೆ ತಿಳಿದಿರಬೇಕು. ಯೆಹೋವನು ಮಾನವರನ್ನು ಸೃಷ್ಟಿಸಿದ್ದು, ಅವರು ಭೂಮಿಯನ್ನು ತಮ್ಮ ಸಂತಾನದಿಂದ ತುಂಬಿಸಿ ಅದರ ಮೇಲ್ವಿಚಾರಣೆ ಮಾಡುತ್ತಾ ಅದನ್ನು ನೋಡಿಕೊಳ್ಳಲಿಕ್ಕಾಗಿಯೇ ಎಂದು ಬೈಬಲು ವಿವರಿಸುತ್ತದೆ. ತಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಮಾನವರು ನ್ಯಾಯ, ವಿವೇಕ, ಪ್ರೀತಿ ಎಂಬ ಆತನ ಗುಣಗಳನ್ನು ಪ್ರದರ್ಶಿಸಬೇಕಿತ್ತು. ಯೆಹೋವನು ನಮ್ಮನ್ನು ಏಕೆ ಸೃಷ್ಟಿಸಿದನು ಎಂಬುದನ್ನು ನಾವೊಮ್ಮೆ ಅರ್ಥಮಾಡಿಕೊಳ್ಳುವುದಾದರೆ, ನಾವೇಕೆ ಇಲ್ಲಿದ್ದೇವೆ ಎಂಬುದು ನಮಗೆ ತಿಳಿದುಬರುವುದು.​—ಆದಿಕಾಂಡ 1:26-28.

ನೀವೇನು ಮಾಡಬಹುದು?

‘ನಾನೇಕೆ ಇಲ್ಲಿದ್ದೇನೆ? ನಾನೆಲ್ಲಿಗೆ ಹೋಗುತ್ತಿದ್ದೇನೆ? ಜೀವಿತದ ಉದ್ದೇಶವಾದರೂ ಏನು?’ ಎಂಬ ಪ್ರಶ್ನೆಗಳಿಗೆ ನಿಮಗೆ ಒಂದುವೇಳೆ ಈ ಮುಂಚೆ ತೃಪ್ತಿದಾಯಕ ಉತ್ತರಗಳು ದೊರಕಿರದಿದ್ದಲ್ಲಿ ಆಗೇನು? ನೀವು ಯೆಹೋವನನ್ನು ನಿಕಟವಾಗಿ ತಿಳಿದುಕೊಳ್ಳುವಂತೆ ಬೈಬಲು ಶಿಫಾರಸ್ಸು ಮಾಡುತ್ತದೆ. ವಾಸ್ತವದಲ್ಲಿ, ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” ನೀವು ಸಹ ವಿಶೇಷವಾಗಿ ಪ್ರೀತಿಯಂಥ ದೈವಿಕ ಗುಣಗಳನ್ನು ಬೆಳೆಸಿಕೊಳ್ಳುವಂತೆ, ಮತ್ತು ದೇವರ ಆಗಮಿಸುತ್ತಿರುವ ಮೆಸ್ಸೀಯ ರಾಜ್ಯದ ಕೆಳಗೆ ಜೀವಿಸುವ ವೈಯಕ್ತಿಕ ಗುರಿಯನ್ನು ಇಟ್ಟುಕೊಳ್ಳುವಂತೆ ಪ್ರೋತ್ಸಾಹಿಸಲ್ಪಡುತ್ತೀರಿ. ಆಗ ನಿಮ್ಮ ಜೀವಿತದಲ್ಲಿ ಒಂದು ಉದ್ದೇಶವಿರುವುದು ಮತ್ತು ಭವಿಷ್ಯತ್ತಿಗಾಗಿ ಒಂದು ಸುಂದರವಾದ ಸುಭದ್ರ ನಂಬಿಕೆಯಿರುವುದು. ಇದುವರೆಗೂ ನಿಮ್ಮನ್ನು ಚಿಂತೆಗೊಳಪಡಿಸಿದಂಥ ಮೂಲಭೂತ ಪ್ರಶ್ನೆಗಳು ಕೂಡ ಉತ್ತರಿಸಲ್ಪಡುವವು.​—ಯೋಹಾನ 17:3; ಪ್ರಸಂಗಿ 12:13.

ಈ ಉತ್ತರಗಳನ್ನು ಪಡೆದುಕೊಳ್ಳುವುದರಿಂದ ನಿಮ್ಮ ಜೀವಿತವು ಹೇಗೆ ಬಾಧಿಸಲ್ಪಡಸಾಧ್ಯವಿದೆ? ಹಾನ್ಸ್‌ ನೀವು ತಿಳಿದುಕೊಳ್ಳಬೇಕಾದ ಒಬ್ಬ ವ್ಯಕ್ತಿಯಾಗಿದ್ದಾರೆ. * ಅನೇಕ ವರ್ಷಗಳ ಹಿಂದೆ ಅವರಿಗೆ ದೇವರಲ್ಲಿ ನಾಮಮಾತ್ರದ ನಂಬಿಕೆಯಿತ್ತು, ಆದರೆ ಹಾನ್ಸ್‌ರ ಜೀವಿತದ ಮೇಲೆ ಅವರ ನಂಬಿಕೆಯು ಯಾವುದೇ ಪ್ರಭಾವವನ್ನು ಬೀರಿರಲಿಲ್ಲ. ಹಾನ್ಸ್‌ರು ಅಮಲೌಷಧ, ಅನೈತಿಕ ಸ್ತ್ರೀಯರು, ಚಿಕ್ಕಪುಟ್ಟ ಅಪರಾಧಗಳು, ಮತ್ತು ಮೋಟರ್‌ಬೈಕ್‌ಗಳಲ್ಲಿ ಆನಂದಿಸುತ್ತಿದ್ದರು. “ಆದರೆ ಜೀವನವು ಬರಿದಾಗಿತ್ತು, ನಿಜವಾದ ಸಂತೃಪ್ತಿ ಇರಲಿಲ್ಲ,” ಎಂದು ಅವರು ವಿವರಿಸುತ್ತಾರೆ. ಹಾನ್ಸ್‌ ಸುಮಾರು 25 ವರ್ಷ ಪ್ರಾಯದವರಾಗಿದ್ದಾಗ, ಬೈಬಲನ್ನು ಜಾಗರೂಕತೆಯಿಂದ ಓದುವ ಮೂಲಕ ದೇವರ ಕುರಿತು ವೈಯಕ್ತಿಕವಾಗಿ ತಿಳಿದುಕೊಳ್ಳಲು ತೀರ್ಮಾನಿಸಿದರು. ಅವರು ಯೆಹೋವನನ್ನು ನಿಕಟವಾಗಿ ತಿಳಿದುಕೊಂಡು ಜೀವಿತದ ಉದ್ದೇಶವೇನೆಂಬುದನ್ನು ಅರ್ಥಮಾಡಿಕೊಂಡ ನಂತರ, ಹಾನ್ಸ್‌ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿದರು ಮತ್ತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ದೀಕ್ಷಾಸ್ನಾನ ಪಡೆದುಕೊಂಡರು. ಕಳೆದ ಹತ್ತು ವರ್ಷಗಳಿಂದ ಅವರು ಪೂರ್ಣ ಸಮಯದ ಶುಶ್ರೂಷೆಯಲ್ಲಿದ್ದಾರೆ. ಅವರು ಮುಚ್ಚುಮರೆಯಿಲ್ಲದೆ ಹೇಳುವುದು: “ಯೆಹೋವನನ್ನು ಸೇವಿಸುವುದೇ ಅತ್ಯುತ್ತಮವಾದ ಜೀವನ ರೀತಿಯಾಗಿದೆ. ಅದಕ್ಕೆ ಹೋಲುವಂಥದ್ದು ಬೇರೊಂದಿಲ್ಲ. ಯೆಹೋವನನ್ನು ತಿಳಿದುಕೊಳ್ಳುವುದು ನನಗೆ ಜೀವನದಲ್ಲಿ ಒಂದು ಉದ್ದೇಶವನ್ನು ಕೊಟ್ಟಿದೆ.”

ಆದರೂ, ಜೀವಿತದ ಉದ್ದೇಶವೇನೆಂಬುದು ಮಾತ್ರವೇ ಅನೇಕರಿಗೆ ಚಿಂತೆಯ ವಿಷಯವಾಗಿರುವುದಿಲ್ಲ. ಲೋಕದ ಪರಿಸ್ಥಿತಿಗಳು ಹದಗೆಡುತ್ತಿರುವಾಗ, ಹೆಚ್ಚೆಚ್ಚು ಜನರು ಬೇರೊಂದು ಮುಖ್ಯ ವಿವಾದಾಂಶದಿಂದ ಚಿಂತಿತರಾಗಿದ್ದಾರೆ.

ಇದು ಯಾಕೆ ಸಂಭವಿಸಿತು?

ವಿಪತ್ತು ಬಂದೆರಗುವಾಗ, ಬಲಿಯಾದವನ ಮನಸ್ಸು ಒಂದೇ ಪ್ರಶ್ನೆಯ ಮೇಲೆ ಕೇಂದ್ರೀಕರಿಸುತ್ತದೆ: ಇದು ಯಾಕೆ ಸಂಭವಿಸಿತು? ವಿಪತ್ತು ಎದುರಾದಾಗ ನಮ್ಮ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳುವುದು, ಹೆಚ್ಚಾಗಿ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದರ ಮೇಲೆ ಆತುಕೊಂಡಿದೆ. ಯಾವುದೇ ಉತ್ತರವು ಸಿಗದೇ ಹೋದಲ್ಲಿ, ವೇದನೆಯು ನಿರಂತರವಾಗಿರುತ್ತದೆ ಮತ್ತು ವಿಪತ್ತಿಗೆ ಬಲಿಯಾದವನು ಕಹಿಮನಸ್ಸಿನವನಾಗಬಹುದು. ಉದಾಹರಣೆಗೆ, ಬ್ರೂನೀಯ ಅನುಭವವನ್ನು ತೆಗೆದುಕೊಳ್ಳಿ.

“ಕೆಲವು ವರ್ಷಗಳ ಹಿಂದೆ ನನ್ನ ಹೆಣ್ಣು ಮಗು ಸತ್ತುಹೋಯಿತು,” ಎಂದು ವಿವರಿಸುತ್ತಾಳೆ, ಈಗ ಮಧ್ಯ ಪ್ರಾಯದ ತಾಯಿಯಾಗಿರುವ ಬ್ರೂನೀ. “ನಾನು ದೇವರಲ್ಲಿ ನಂಬಿಕೆಯಿಟ್ಟಿದ್ದೆ, ಆದ್ದರಿಂದ ಸ್ಥಳಿಕ ಪಾದ್ರಿಯ ಬಳಿ ಸಾಂತ್ವನಕ್ಕಾಗಿ ಕೋರಿದೆ. ಸೂಸಾನಳನ್ನು ದೇವರು ತೆಗೆದುಕೊಂಡಿದ್ದಾನೆ ಮತ್ತು ಅಲ್ಲಿ ಅವಳು ಈಗ ಒಬ್ಬ ದೇವದೂತಳಾಗಿದ್ದಾಳೆ ಎಂದು ಅವರು ಹೇಳಿದರು. ಅವಳ ಮರಣದಿಂದ ನನ್ನ ಸರ್ವಸ್ವವೂ ಕರಾಳವಾಯಿತು ಮಾತ್ರವಲ್ಲದೆ, ದೇವರು ಅವಳನ್ನು ತೆಗೆದುಕೊಂಡದ್ದಕ್ಕಾಗಿ ನಾನು ಆತನನ್ನು ದ್ವೇಷಿಸಿದೆ.” ಬ್ರೂನೀಯ ನೋವು ಮತ್ತು ವೇದನೆ ಹಲವಾರು ವರ್ಷಗಳ ವರೆಗೂ ಮುಂದುವರಿಯಿತು. “ನಂತರ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು, ದೇವರನ್ನು ದ್ವೇಷಿಸಲು ನನಗೆ ಯಾವುದೇ ಕಾರಣವಿಲ್ಲ ಎಂದು ಬೈಬಲಿನಿಂದ ತೋರಿಸಿದರು. ಯೆಹೋವನು ಸೂಸಾನಳನ್ನು ಸ್ವರ್ಗಕ್ಕೆ ಕರೆದುಕೊಂಡಿಲ್ಲ ಮತ್ತು ಅವಳು ದೇವದೂತಳಾಗಿಲ್ಲ. ಅವಳ ಅಸ್ವಸ್ಥತೆಯು ಮಾನವ ಅಪರಿಪೂರ್ಣತೆಯ ಫಲವಾಗಿತ್ತು. ಯೆಹೋವನು ತನ್ನನ್ನು ಪುನರುತ್ಥಾನಗೊಳಿಸಲು ಕಾಯುತ್ತಾ ಸೂಸಾನ ಮರಣದಲ್ಲಿ ನಿದ್ರಿಸುತ್ತಿದ್ದಾಳೆ ಎಂದು ಅವರು ತೋರಿಸಿಕೊಟ್ಟರು. ಮತ್ತು ಆತನು ಮಾನವರನ್ನು ಪರದೈಸ ಭೂಮಿಯ ಮೇಲೆ ಸದಾ ಜೀವಿಸಲಿಕ್ಕಾಗಿ ಸೃಷ್ಟಿಸಿದ್ದನು ಹಾಗೂ ಇದು ಶೀಘ್ರವೇ ನಿಜತ್ವವಾಗುವುದು ಎಂಬುದನ್ನೂ ನಾನು ಕಲಿತುಕೊಂಡೆ. ಒಮ್ಮೆ ಯೆಹೋವನು ನಿಜವಾಗಿಯೂ ಯಾವ ರೀತಿಯ ವ್ಯಕ್ತಿಯಾಗಿದ್ದಾನೆ ಎಂಬುದನ್ನು ನಾನು ಅರ್ಥಮಾಡಿಕೊಂಡ ಮೇಲೆ, ನಾನು ಆತನಿಗೆ ನಿಕಟವಾದೆ, ಮತ್ತು ನನ್ನ ನೋವು ಶಮನಗೊಳ್ಳಲು ಆರಂಭಿಸಿತು.”​—ಕೀರ್ತನೆ 37:29; ಅ. ಕೃತ್ಯಗಳು 24:15; ರೋಮಾಪುರ 5:12.

ಕೋಟ್ಯಂತರ ಜನರು ವೈಯಕ್ತಿಕ ದುರ್ಘಟನೆ, ಯುದ್ಧ, ಕ್ಷಾಮ, ಅಥವಾ ನೈಸರ್ಗಿಕ ವಿಪತ್ತು ಇವುಗಳಲ್ಲಿ ಒಂದಲ್ಲ ಒಂದು ರೀತಿಯ ವಿಪತ್ತಿನಿಂದ ಬಾಧಿಸಲ್ಪಟ್ಟಿದ್ದಾರೆ. ಯೆಹೋವನು ವಿಪತ್ತಿಗೆ ಕಾರಣನಲ್ಲ, ಮಾನವಕುಲವು ಬಾಧೆಯನ್ನು ಅನುಭವಿಸಬೇಕೆಂದು ಉದ್ದೇಶಿರಲಿಲ್ಲ, ಮತ್ತು ಶೀಘ್ರವೇ ಆತನು ದುಷ್ಟತನಕ್ಕೆ ಅಂತ್ಯವನ್ನು ತರುವನು ಎಂಬುದನ್ನು ಬೈಬಲಿನಲ್ಲಿ ನೋಡಿದಾಗ ಬ್ರೂನೀ ಉಪಶಮನವನ್ನು ಕಂಡುಕೊಂಡಳು. ದುಷ್ಟತ್ವವು ಹೆಚ್ಚುತ್ತಾ ಇದೆ ಎಂಬ ವಾಸ್ತವಾಂಶವೇ, ನಾವು ಈಗ ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎಂಬುದರ ಸಂಕೇತವಾಗಿದೆ. ಒಳಿತನ್ನು ಮಾಡಲಿರುವ, ನಾವೆಲ್ಲರೂ ಹಂಬಲಿಸುವಂಥ ಆ ದೊಡ್ಡ ಬದಲಾವಣೆಯು ಸಮೀಪಿಸಿದೆ.​—2 ತಿಮೊಥೆಯ 3:1-5; ಮತ್ತಾಯ 24:7, 8.

ದೇವರ ಕುರಿತು ತಿಳಿದುಕೊಳ್ಳುವುದು

ಹಾನ್ಸ್‌ ಮತ್ತು ಬ್ರೂನೀಗೆ ದೇವರ ಕುರಿತು ಕೇವಲ ಒಂದು ಸಾಮಾನ್ಯ ಅಭಿಪ್ರಾಯ ಮಾತ್ರ ಇತ್ತು. ಅವರು ಆತನ ಕುರಿತು ಹೆಚ್ಚು ತಿಳಿದಿಲ್ಲದೇ ಆತನಲ್ಲಿ ನಂಬಿಕೆಯಿಟ್ಟಿದ್ದರು. ಯೆಹೋವನನ್ನು ಕೂಲಂಕಷವಾಗಿ ತಿಳಿದುಕೊಳ್ಳಲು ಅವರು ಸಮಯವನ್ನು ತೆಗೆದುಕೊಂಡಾಗ, ಅವರ ಪ್ರಯತ್ನಗಳು ಆಶೀರ್ವದಿಸಲ್ಪಟ್ಟವು. ನಮ್ಮ ದಿನಗಳ ಅತಿ ಪ್ರಾಮುಖ್ಯವಾದ ಪ್ರಶ್ನೆಗಳಿಗೆ ಅವರು ಯೋಗ್ಯವಾದ ಉತ್ತರಗಳನ್ನು ಕಂಡುಕೊಂಡರು. ಇದು ಅವರಿಗೆ ಮನಶ್ಶಾಂತಿಯನ್ನು ಮತ್ತು ಭವಿಷ್ಯತ್ತಿಗಾಗಿ ಒಂದು ಸುಭದ್ರ ನಂಬಿಕೆಯನ್ನು ಕೊಟ್ಟಿತು. ಯೆಹೋವನ ಲಕ್ಷಾಂತರ ಮಂದಿ ಸೇವಕರಿಗೆ ಇದೇ ಅನುಭವವಾಗಿದೆ.

ಯೆಹೋವನ ಕುರಿತು ತಿಳಿದುಕೊಳ್ಳುವುದು ಬೈಬಲನ್ನು ಜಾಗರೂಕತೆಯಿಂದ ಪರಿಶೀಲಿಸುವುದರಿಂದ ಆರಂಭವಾಗುತ್ತದೆ. ಅದು ಆತನ ಕುರಿತು ಮತ್ತು ಆತನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದರ ಕುರಿತು ತಿಳಿಸುತ್ತದೆ. ಪ್ರಥಮ ಶತಮಾನದಲ್ಲಿ ಇದನ್ನೇ ಕೆಲವರು ಮಾಡಿದರು. ಇತಿಹಾಸಕಾರನಾಗಿದ್ದ ಮತ್ತು ವೈದ್ಯನಾಗಿದ್ದ ಲೂಕನು, ಗ್ರೀಸ್‌ನ ಬೆರೋಯದ ಯೆಹೂದಿ ಸಭೆಯ ಸದಸ್ಯರು “[ಪೌಲ ಸೀಲರಿಂದ] ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು” ಎಂದು ವರದಿಸುತ್ತಾನೆ.​—ಅ. ಕೃತ್ಯಗಳು 17:10, 11.

ಪ್ರಥಮ ಶತಮಾನದ ಕ್ರೈಸ್ತರು ಸಹ ಸಭೆಗಳಲ್ಲಿ ಕೂಡಿಬಂದರು. (ಅ. ಕೃತ್ಯಗಳು 2:41, 42, 46; 1 ಕೊರಿಂಥ 1:1, 2; ಗಲಾತ್ಯ 1:1, 2; 2 ಥೆಸಲೊನೀಕ 1:1) ಇಂದು ಸಹ ಇದು ಸತ್ಯವಾಗಿದೆ. ಯೆಹೋವನ ಸಾಕ್ಷಿಗಳ ಸಭೆಗಳು, ವೈಯಕ್ತಿಕವಾಗಿ ಪ್ರತಿಯೊಬ್ಬರು ಯೆಹೋವನ ಸಮೀಪಕ್ಕೆ ಬರಲು ಮತ್ತು ಆತನನ್ನು ಸೇವಿಸುವುದರಲ್ಲಿ ಆನಂದವನ್ನು ಕಂಡುಕೊಳ್ಳಲು ಸಹಾಯಮಾಡಲಿಕ್ಕಾಗಿ, ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿರುವ ಕೂಟಗಳಿಗೆ ಕೂಡಿಬರುತ್ತವೆ. ಸ್ಥಳಿಕ ಸಾಕ್ಷಿಗಳೊಂದಿಗೆ ಕೂಡಿಬರುವುದರಿಂದ ಮತ್ತೊಂದು ಪ್ರಯೋಜನವೂ ಇದೆ. ಮಾನವರು ಕ್ರಮೇಣ ತಾವು ಆರಾಧಿಸುವಂಥ ದೇವರಂತೆಯೇ ಆಗುವುದರಿಂದ, ಯೆಹೋವನ ಸಾಕ್ಷಿಗಳು ಸೀಮಿತ ಪ್ರಮಾಣದಲ್ಲಿಯಾಗಿದ್ದರೂ, ಯೆಹೋವನಲ್ಲಿ ಕಂಡುಬರುವ ಗುಣಗಳನ್ನೇ ಪ್ರದರ್ಶಿಸುತ್ತಾರೆ. ಆದುದರಿಂದ, ಸಾಕ್ಷಿಗಳೊಂದಿಗೆ ಕೂಡಿಬರುವುದು ಯೆಹೋವನನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ನಮಗೆ ಸಹಾಯಮಾಡುತ್ತದೆ.​—ಇಬ್ರಿಯ 10:24, 25.

ಕೇವಲ ಒಬ್ಬ “ವ್ಯಕ್ತಿಯನ್ನು” ತಿಳಿದುಕೊಳ್ಳುವುದರಲ್ಲಿ ಇಷ್ಟೆಲ್ಲಾ ಪ್ರಯತ್ನವನ್ನು ಮಾಡುವುದು ತೀರ ಹೆಚ್ಚು ಎಂದು ನಿಮಗನಿಸುತ್ತದೋ? ಪ್ರಯತ್ನವೇನೋ ಅವಶ್ಯ. ಆದರೆ ನೀವು ಜೀವನದಲ್ಲಿ ಸಾಧಿಸಲು ಬಯಸುವ ಅನೇಕ ಸಂಗತಿಗಳ ವಿಷಯದಲ್ಲಿಯೂ ಇದು ನಿಜವಾಗಿಲ್ಲವೋ? ಪ್ರಖ್ಯಾತಿಯನ್ನು ಪಡೆದಿರುವಂಥ ಕ್ರೀಡಾಪಟುವೊಬ್ಬನು ತನ್ನ ತರಬೇತಿಯಲ್ಲಿ ಎಷ್ಟು ಪ್ರಯತ್ನವನ್ನು ಹಾಕುತ್ತಾನೆ ಎಂಬುದನ್ನು ಯೋಚಿಸಿ. ಉದಾಹರಣೆಗೆ, ಫ್ರಾನ್ಸ್‌ನ ಒಲಿಂಪಿಕ್‌ ಸ್ಕೀಇಂಗ್‌ ಸ್ವರ್ಣ ಪದಕವನ್ನು ಗೆದ್ದ ಸಾನ್‌-ಕ್ಲೋಡ್‌ ಕೀಲೀ, ಒಬ್ಬ ಅಂತಾರಾಷ್ಟ್ರೀಯ ಆಟೋಟ ಸ್ಪರ್ಧಾಳುವಾಗಿರುವುದರಲ್ಲಿ ಏನೆಲ್ಲಾ ಒಳಗೂಡಿದೆ ಎಂದು ಹೇಳುವುದನ್ನು ಕೇಳಿರಿ: “ನೀವು ಒಲಿಂಪಿಕ್‌ ಆರಂಭವಾಗುವ 10 ವರ್ಷಗಳಿಗೆ ಮುಂಚೆ ಪ್ರಾರಂಭಿಸಬೇಕು ಮತ್ತು ಅದಕ್ಕಾಗಿ ಪ್ರತಿ ವರ್ಷ ಯೋಜಿಸಬೇಕು, ಪ್ರತಿ ದಿನ ಅದರ ಕುರಿತು ಯೋಚಿಸಬೇಕು . . . ಅದು ಮಾನಸಿಕವಾಗಿಯೂ ಶಾರೀರಿಕವಾಗಿಯೂ ವರ್ಷದ 365 ದಿನಗಳ ಕೆಲಸವಾಗಿದೆ.” ಅದೆಲ್ಲಾ ಸಮಯ ಮತ್ತು ಪ್ರಯತ್ನ ಕೇವಲ ಹತ್ತು ನಿಮಿಷದಲ್ಲಿ ಕೊನೆಗೊಳ್ಳುವ ಒಂದು ಓಟದಲ್ಲಿ ಸ್ಪರ್ಧಿಸಲಿಕ್ಕಾಗಿ! ಹಾಗಾದರೆ ನಾವು ಯೆಹೋವನ ಕುರಿತು ತಿಳಿದುಕೊಳ್ಳುವುದರಿಂದ ಎಷ್ಟು ಹೆಚ್ಚನ್ನು ಮತ್ತು ಎಷ್ಟರ ಮಟ್ಟಿಗೆ ಬಾಳುವಂಥದ್ದನ್ನು ಸಾಧಿಸಿಕೊಳ್ಳಬಲ್ಲೆವು.

ಹೆಚ್ಚೆಚ್ಚು ನಿಕಟವಾಗುತ್ತಿರುವ ಒಂದು ಸಂಬಂಧ

ಜೀವನದಲ್ಲಿ ಪ್ರಾಮುಖ್ಯವಾಗಿರುವ ವಿಷಯವನ್ನು ತಿಳಿದುಕೊಂಡು ಅದರಿಂದ ಪ್ರಯೋಜನ ಪಡೆಯುವುದನ್ನು ಯಾರು ಕಳೆದುಕೊಳ್ಳಲು ಬಯಸುತ್ತಾರೆ? ಯಾರೂ ಇಲ್ಲ. ಆದುದರಿಂದ, ನಿಮ್ಮ ಜೀವನದಲ್ಲಿ ನಿಜ ಉದ್ದೇಶದ ಕೊರತೆಯಿದೆ ಎಂದು ನಿಮಗನಿಸುವುದಾದರೆ ಅಥವಾ ವಿಪತ್ತು ಏಕೆ ಸಂಭವಿಸುತ್ತದೆ ಎಂಬ ವಿವರಣೆಯನ್ನು ಪಡೆದುಕೊಳ್ಳಲು ನೀವು ಹಂಬಲಿಸುವುದಾದರೆ, ಬೈಬಲಿನ ದೇವರಾಗಿರುವ ಯೆಹೋವನ ಕುರಿತು ತಿಳಿದುಕೊಳ್ಳಲು ದೃಢಮನಸ್ಸು ಮಾಡಿರಿ. ಆತನ ಕುರಿತು ಕಲಿತುಕೊಳ್ಳುವುದು ನಿಮ್ಮ ಜೀವನವನ್ನು ನಿತ್ಯಕ್ಕೂ ಒಳ್ಳೇದಕ್ಕಾಗಿ ಬದಲಾಯಿಸುವುದು.

ನಾವು ಯೆಹೋವನ ಕುರಿತು ಕಲಿಯುವುದನ್ನು ಎಂದಾದರೂ ನಿಲ್ಲಿಸುವೆವೋ? ಆತನನ್ನು ಹಲವಾರು ದಶಕಗಳಿಂದ ಸೇವಿಸುತ್ತಿರುವವರು, ತಾವು ಆತನ ಕುರಿತು ಕಲಿತಿರುವುದರ ಮತ್ತು ಹೆಚ್ಚಿನ ಹೊಸ ವಿಷಯಗಳನ್ನು ಕಲಿಯುತ್ತಾ ಹೋಗುವುದರ ಕುರಿತು ಈಗಲೂ ಪುಳಕಿತಗೊಳ್ಳುತ್ತಾರೆ. ಇಂತಹ ವಿಷಯಗಳನ್ನು ಕಲಿತುಕೊಳ್ಳುವುದು ನಮ್ಮನ್ನು ಸಂತೋಷಪಡಿಸುತ್ತದೆ ಮತ್ತು ನಮ್ಮನ್ನು ಆತನ ಇನ್ನೂ ಸಮೀಪಕ್ಕೆ ತರುತ್ತದೆ. ನಾವು ಅಪೊಸ್ತಲ ಪೌಲನ ಮಾತುಗಳನ್ನು ಪ್ರತಿಧ್ವನಿಸೋಣ; ಅವನು ಬರೆದುದು: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವದಕ್ಕೆ ಎಷ್ಟೋ ಅಸಾಧ್ಯ! ಕರ್ತನ [“ಯೆಹೋವನ,” NW] ಮನಸ್ಸನ್ನು ತಿಳುಕೊಂಡವನಾರು? ಆತನಿಗೆ ಆಲೋಚನಾ ಕರ್ತನು ಯಾರು?”​—ರೋಮಾಪುರ 11:33, 34.

[ಪಾದಟಿಪ್ಪಣಿ]

^ ಪ್ಯಾರ. 12 ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಜನರು ಈಗಲೂ ಮೂಲಭೂತವಾದ ಅವೇ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ: ‘ನಾನೇಕೆ ಇಲ್ಲಿದ್ದೇನೆ? ನಾನೆಲ್ಲಿಗೆ ಹೋಗುತ್ತಿದ್ದೇನೆ? ಜೀವನದ ಉದ್ದೇಶವಾದರೂ ಏನು?’

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಒಮ್ಮೆ ಯೆಹೋವನು ನಿಜವಾಗಿಯೂ ಯಾವ ರೀತಿಯ ವ್ಯಕ್ತಿಯಾಗಿದ್ದಾನೆ ಎಂಬುದನ್ನು ನಾನು ಅರ್ಥಮಾಡಿಕೊಂಡ ಮೇಲೆ, ನಾನು ಆತನಿಗೆ ನಿಕಟವಾದೆ”

[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಯೆಹೋವನನ್ನು ಸೇವಿಸುವುದೇ ಅತ್ಯುತ್ತಮವಾದ ಜೀವನ ರೀತಿಯಾಗಿದೆ. ಅದಕ್ಕೆ ಹೋಲುವಂಥದ್ದು ಬೇರೊಂದಿಲ್ಲ. ಯೆಹೋವನನ್ನು ತಿಳಿದುಕೊಳ್ಳುವುದು ನನಗೆ ಜೀವನದಲ್ಲಿ ಒಂದು ಉದ್ದೇಶವನ್ನು ಕೊಟ್ಟಿದೆ”