ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವೇಕಯುತ ನಿರ್ಣಯಗಳನ್ನು ನೀವು ಹೇಗೆ ಮಾಡಬಲ್ಲಿರಿ?

ವಿವೇಕಯುತ ನಿರ್ಣಯಗಳನ್ನು ನೀವು ಹೇಗೆ ಮಾಡಬಲ್ಲಿರಿ?

ವಿವೇಕಯುತ ನಿರ್ಣಯಗಳನ್ನು ನೀವು ಹೇಗೆ ಮಾಡಬಲ್ಲಿರಿ?

“ಜ್ಞಾನಿಯು . . . ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು,” ಎಂದು ಪ್ರಾಚೀನ ಇಸ್ರಾಯೇಲಿನ ರಾಜ ಸೊಲೊಮೋನನು ಹೇಳಿದನು. ನಮ್ಮಲ್ಲಿ ಅನೇಕರು, ಇತರರ ಸಲಹೆಗೆ ಕಿವಿಗೊಡದೆ ಹೋದ ಕಾರಣ ಮಾತ್ರಕ್ಕೆ ಅವಿವೇಕಯುತ ನಿರ್ಣಯಗಳನ್ನು ಮಾಡಿದ ಸಮಯಗಳುಂಟು.​—ಜ್ಞಾನೋಕ್ತಿ 1:5.

ಸೊಲೊಮೋನನ ಆ ಮಾತುಗಳು, ಅವನ ಇತರ ‘ಮೂರು ಸಾವಿರ ಜ್ಞಾನೋಕ್ತಿಗಳೊಂದಿಗೆ’ ಕಾಲಾನಂತರ ಬೈಬಲಿನಲ್ಲಿ ದಾಖಲಿಸಲ್ಪಟ್ಟವು. (1 ಅರಸುಗಳು 4:32) ಅವನ ವಿವೇಕದ ನುಡಿಮುತ್ತುಗಳನ್ನು ತಿಳಿದುಕೊಂಡು, ಪಾಲಿಸುವುದರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವೋ? ಹೌದು. ಅವು, ನಾವು “ಜ್ಞಾನವನ್ನೂ ಶಿಕ್ಷೆಯನ್ನೂ ಪಡೆದು ಬುದ್ಧಿವಾದಗಳನ್ನು ಗ್ರಹಿಸಿ ವಿವೇಕಮಾರ್ಗದಲ್ಲಿ ಅಂದರೆ ನೀತಿನ್ಯಾಯಧರ್ಮಗಳಲ್ಲಿ ಶಿಕ್ಷಿತರಾಗು”ವಂತೆ ನಮಗೆ ಸಹಾಯಮಾಡಬಲ್ಲವು. (ಜ್ಞಾನೋಕ್ತಿ 1:2, 3) ವಿವೇಕಯುತ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯಮಾಡಬಲ್ಲ ಐದು ಬೈಬಲಾಧಾರಿತ ನಿರ್ದೇಶನಗಳನ್ನು ನಾವು ಚರ್ಚಿಸೋಣ.

ದೀರ್ಘಕಾಲಿಕ ಪರಿಣಾಮಗಳನ್ನು ಪರಿಗಣಿಸಿರಿ

ಕೆಲವು ನಿರ್ಣಯಗಳು ಗಮನಾರ್ಹವಾದ ಪರಿಣಾಮಗಳನ್ನು ತಂದೊಡ್ಡಸಾಧ್ಯವಿದೆ. ಆದುದರಿಂದ, ಈ ಪರಿಣಾಮಗಳು ಯಾವುವು ಎಂಬುದನ್ನು ಮುಂಚಿತವಾಗಿಯೇ ಕಂಡುಹಿಡಿಯಲು ಪ್ರಯತ್ನಿಸಿರಿ. ಅನಪೇಕ್ಷಣೀಯವಾದ ದೀರ್ಘಕಾಲಿಕ ಪರಿಣಾಮಗಳನ್ನು ನೀವು ಗ್ರಹಿಸಿಕೊಳ್ಳದಂತೆ ಅಲ್ಪಕಾಲಿಕ ಪ್ರಯೋಜನಗಳು ನಿಮ್ಮನ್ನು ಕುರುಡರನ್ನಾಗಿ ಮಾಡುವುದರ ವಿರುದ್ಧ ಎಚ್ಚರದಿಂದಿರಿ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಎಂದು ಜ್ಞಾನೋಕ್ತಿ 22:3 ಎಚ್ಚರಿಸುತ್ತದೆ.

ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಪರಿಣಾಮಗಳು ಯಾವುದಾಗಿರಬಹುದು ಎಂಬುದರ ಕುರಿತು ಒಂದು ಲಿಖಿತ ಪಟ್ಟಿಯನ್ನು ಮಾಡುವುದು ಸಹಾಯಕರವಾಗಿರಬಹುದು. ಒಂದು ನಿರ್ದಿಷ್ಟವಾದ ಉದ್ಯೋಗವನ್ನು ಆಯ್ಕೆಮಾಡುವುದರ ಅಲ್ಪಕಾಲಿಕ ಫಲಿತಾಂಶಗಳು, ಉತ್ತಮ ವೇತನ ಮತ್ತು ಸಂತೋಷನೀಡುವಂಥ ಕೆಲಸವಾಗಿರಬಹುದು. ಆದರೆ ಅದರ ದೀರ್ಘಕಾಲಿಕ ಪರಿಣಾಮಗಳಲ್ಲಿ, ಪ್ರಗತಿಪರ ಬೆಳವಣಿಗೆಯ ಯಾವುದೇ ನಿರೀಕ್ಷೆಯಿಲ್ಲದಿರುವಂಥ ಒಂದು ಉದ್ಯೋಗದಲ್ಲಿ ಸಿಲುಕಿಕೊಂಡಿರುವುದು ಒಳಗೂಡಿರಬಹುದೋ? ಅದು ಕಾಲಕ್ರಮೇಣ ನೀವು ಪ್ರಾಯಶಃ ನಿಮ್ಮ ಸ್ನೇಹಿತರನ್ನು ಅಥವಾ ಕುಟುಂಬವನ್ನು ಬಿಟ್ಟು ಬೇರೆಲ್ಲಿಗೋ ಸ್ಥಳಾಂತರಿಸುವುದನ್ನು ಆವಶ್ಯಪಡಿಸಬಹುದೋ? ಅದು ನಿಮ್ಮನ್ನು ಹಾನಿಕರವಾದ ವಾತಾವರಣಕ್ಕೆ ಒಳಪಡಿಸಬಹುದೋ ಅಥವಾ ನೀವು ಬೇಸತ್ತುಹೋಗುವಷ್ಟು ಅನಾಸಕ್ತಿಕರವಾಗಿರಬಲ್ಲದೋ? ಇದರ ಲಾಭನಷ್ಟಗಳನ್ನು ಸರಿದೂಗಿಸಿ, ನಂತರ ಯಾವುದಕ್ಕೆ ಆದ್ಯತೆ ಕೊಡಬೇಕೆಂಬುದನ್ನು ನಿರ್ಣಯಿಸಿರಿ.

ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿರಿ

ನಾವು ಅವಸರದಿಂದ ಮಾಡುವ ನಿರ್ಣಯಗಳು ಸುಲಭವಾಗಿ ಅವಿವೇಕಯುತ ನಿರ್ಣಯಗಳಾಗಿ ಪರಿಣಮಿಸಬಲ್ಲವು. ಜ್ಞಾನೋಕ್ತಿ 21:5 ಎಚ್ಚರಿಸುವುದು: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ.” ಉದಾಹರಣೆಗಾಗಿ, ಮೋಹಪರವಶಗೊಂಡಿರುವ ಹದಿಪ್ರಾಯದವರು ಹಿಂದುಮುಂದು ಯೋಚಿಸದೆ ಮದುವೆ ಮಾಡಿಕೊಳ್ಳಲು ನಿರ್ಧರಿಸಬಾರದು. ಇಲ್ಲವಾದರೆ, 18ನೇ ಶತಮಾನದ ಆಂಗ್ಲ ನಾಟಕಕಾರ ವಿಲ್ಯಂ ಕಾಂಗ್ರಿವ್‌ ಹೇಳಿದ ಮಾತುಗಳ ಸತ್ಯತೆಯನ್ನು ಅವರು ಅನುಭವಿಸಬೇಕಾದೀತು. ಅವರಂದದ್ದು: “ಅವಸರದಲ್ಲಿ ಮದುವೆಯಾದರೆ, ಪುರುಸೊತ್ತಿನಲ್ಲಿ ಚಿಂತೆಮಾಡಬೇಕಾಗಬಹುದು.”

ಆದರೂ, ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವುದೆಂಬುದು ಕಾಲವಿಳಂಬಮಾಡುವುದನ್ನು ಸೂಚಿಸುವುದಿಲ್ಲ. ಕೆಲವೊಂದು ನಿರ್ಣಯಗಳು ಎಷ್ಟು ಪ್ರಾಮುಖ್ಯವಾಗಿರುತ್ತವೆಂದರೆ, ವಿವೇಕವು ನೀವು ಅದನ್ನು ಸಾಧ್ಯವಾದಷ್ಟು ಶೀಘ್ರದಲ್ಲೇ ಮಾಡುವಂತೆ ಆವಶ್ಯಪಡಿಸಬಹುದು. ಅನಾವಶ್ಯಕವಾಗಿ ವಿಳಂಬಿಸುವುದು ನಮಗೆ ಅಥವಾ ಇತರರಿಗೆ ದುಬಾರಿಯಾಗಿರಬಲ್ಲದು. ಒಂದು ನಿರ್ಣಯ ಮಾಡುವುದನ್ನು ವಿಳಂಬಿಸುವುದು ತಾನೇ ಒಂದು ನಿರ್ಣಯವಾಗಿರಸಾಧ್ಯವಿದೆ​—ಅದು ಪ್ರಾಯಶಃ ಒಂದು ಅವಿವೇಕಯುತ ನಿರ್ಣಯವಾಗಿರಬಹುದು.

ಸಲಹೆಗೆ ಕಿವಿಗೊಡಿರಿ

ಎರಡು ಭಿನ್ನ ಸನ್ನಿವೇಶಗಳು ಚಾಚೂತಪ್ಪದೆ ಏಕಪ್ರಕಾರದ್ದಾಗಿರಲು ಸಾಧ್ಯವಿಲ್ಲದಿರುವುದರಿಂದ, ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುವ ಇಬ್ಬರು ವ್ಯಕ್ತಿಗಳು ತದ್ರೂಪದ ನಿರ್ಣಯಗಳನ್ನು ಯಾವಾಗಲೂ ಮಾಡುವುದಿಲ್ಲ. ಹಾಗಿದ್ದರೂ, ತದ್ರೀತಿಯ ಸನ್ನಿವೇಶದಲ್ಲಿ ವಿಷಯಗಳನ್ನು ಹೇಗೆ ನಿರ್ಣಯಿಸಿದರೆಂದು ಇತರರನ್ನು ಕೇಳುವುದು ಸಹಾಯಕಾರಿಯಾಗಿದೆ. ಮತ್ತು ಅವರು ತಮ್ಮ ಆ ನಿರ್ಣಯವನ್ನು ಈಗ ಹೇಗೆ ಮೌಲ್ಯಮಾಪನ ಮಾಡುತ್ತಾರೆ ಎಂದು ಕೇಳಿರಿ. ಉದಾಹರಣೆಗೆ, ಒಂದು ಕಸಬನ್ನು ಆಯ್ದುಕೊಳ್ಳಲಿಕ್ಕಿರುವಾಗ, ಈಗಾಗಲೇ ಆ ಕಸಬಿನಲ್ಲಿ ತೊಡಗಿರುವವರ ಬಳಿ ಅದರ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಕುರಿತು ತಿಳಿಸುವಂತೆ ಕೇಳಿಕೊಳ್ಳಿರಿ. ಅವರ ಆಯ್ಕೆಯ ಪ್ರಯೋಜನಗಳೇನಾಗಿದ್ದವು, ಮತ್ತು ಅದರಿಂದುಂಟಾದ ಹಿಂದೇಟುಗಳು ಅಥವಾ ಸಂಭಾವ್ಯ ಅಪಾಯಗಳು ಏನಾಗಿದ್ದವು ಎಂದು ಅವರು ಕಂಡುಕೊಂಡಿದ್ದಾರೆ?

“ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು” ಎಂದು ನಮಗೆ ಎಚ್ಚರಿಸಲಾಗಿದೆ, ಆದರೆ “ಬಹು ಮಂದಿ ಆಲೋಚನಾಪರರಿರುವಲ್ಲಿ [“ಸಲಹೆಗಾರರಿರುವಲ್ಲಿ,” NW] [ಉದ್ದೇಶಗಳು] ಈಡೇರುವವು.” (ಜ್ಞಾನೋಕ್ತಿ 15:22) ಸಲಹೆಗಾಗಿ ಹುಡುಕುವಾಗ ಮತ್ತು ಇತರರ ಅನುಭವದಿಂದ ಕಲಿಯುವಾಗ, ಅಂತಿಮವಾಗಿ ನಿರ್ಣಯವನ್ನು ನಾವೇ ಮಾಡಬೇಕಾಗಿದೆ ಮತ್ತು ಹಾಗೆ ಮಾಡುವುದಕ್ಕಾಗಿ ಜವಾಬ್ದಾರಿಯನ್ನು ಸ್ವತಃ ನಾವೇ ಹೊತ್ತುಕೊಳ್ಳಬೇಕಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.​—ಗಲಾತ್ಯ 6:4, 5.

ಒಳ್ಳೇ ತರಬೇತಿ ಪಡೆದಿರುವ ಮನಸ್ಸಾಕ್ಷಿಗೆ ಕಿವಿಗೊಡುವುದು

ನಾವು ನಮ್ಮ ಜೀವನಗಳನ್ನು ಯಾವುದಕ್ಕೆ ಹೊಂದಿಕೆಯಲ್ಲಿ ನಡೆಸಲು ಆಯ್ದುಕೊಳ್ಳುತ್ತೇವೋ ಆ ಮೂಲಭೂತ ತತ್ತ್ವಗಳಿಗನುಸಾರವಾಗಿ ನಿರ್ಣಯಗಳನ್ನು ಮಾಡುವಂತೆ ನಮ್ಮ ಮನಸ್ಸಾಕ್ಷಿಯು ನಮಗೆ ಸಹಾಯಮಾಡಬಲ್ಲದು. ಇದು, ಕ್ರೈಸ್ತನೊಬ್ಬನು ತನ್ನ ಮನಸ್ಸಾಕ್ಷಿಯನ್ನು ದೇವರ ಯೋಚನೆಗಳನ್ನು ಪ್ರತಿಬಿಂಬಿಸುವಂಥ ರೀತಿಯಲ್ಲಿ ತರಬೇತುಗೊಳಿಸಬೇಕೆಂದು ಅರ್ಥೈಸುತ್ತದೆ. (ರೋಮಾಪುರ 2:14, 15) ದೇವರ ವಾಕ್ಯವು ನಮಗೆ ಹೇಳುವುದು: “ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:6) ಆದರೂ, ಒಳ್ಳೇ ತರಬೇತಿ ಪಡೆದಿರುವ ಮನಸ್ಸಾಕ್ಷಿಯನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು ಕೆಲವು ವಿದ್ಯಮಾನಗಳಲ್ಲಿ, ಎರಡು ಭಿನ್ನವಾದ ಪರಿಣಾಮಗಳ ಕುರಿತು ಯೋಚಿಸಬಹುದು ಮತ್ತು ಎರಡು ಭಿನ್ನವಾದ ನಿರ್ಣಯಗಳನ್ನು ಮಾಡಬಹುದು.

ಆದರೂ, ದೇವರ ವಾಕ್ಯವು ನೇರವಾಗಿ ಖಂಡಿಸುವ ಕೃತ್ಯಗಳ ಬಗ್ಗೆ ನಿರ್ಣಯಿಸಲಿರುವಾಗ, ಒಳ್ಳೇ ತರಬೇತಿ ಪಡೆದಿರುವ ಮನಸ್ಸಾಕ್ಷಿಯು ಈ ಆಯ್ಕೆಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ವಿಸರ್ಜಿಸುವುದು. ಉದಾಹರಣೆಗೆ, ಬೈಬಲ್‌ ಮೂಲತತ್ತ್ವಗಳಿಂದ ತರಬೇತಿ ಪಡೆದಿರದ ಒಂದು ಮನಸ್ಸಾಕ್ಷಿಯು, ಒಬ್ಬ ಸ್ತ್ರೀ ಮತ್ತು ಪುರುಷನು ವಿವಾಹವಾಗುವುದಕ್ಕೆ ಮುಂಚೆ ತಾವು ಹೊಂದಿಕೊಂಡು ಹೋಗಲು ಸಾಧ್ಯವಿದೆಯೋ ಎಂದು ಪರೀಕ್ಷಿಸಿ ನೋಡಲು ಒಟ್ಟಿಗೆ ಜೀವಿಸುವುದನ್ನು ಅನುಮತಿಸಬಹುದು. ಒಂದು ಅವಿವೇಕಯುತ ವಿವಾಹ ಸಂಬಂಧದೊಳಕ್ಕೆ ಕಣ್ಮುಚ್ಚಿಕೊಂಡು ಕಾಲಿಡುವುದರಿಂದ ಇದು ನಮ್ಮನ್ನು ತಡೆಯುವುದೆಂದು ತರ್ಕಿಸುತ್ತಾ, ಒಂದು ವಿವೇಕಯುತ ನಿರ್ಣಯವನ್ನು ಮಾಡಿದ್ದೇವೆಂದು ಅವರು ನೆನಸಬಹುದು. ಅವರ ಮನಸ್ಸಾಕ್ಷಿಯು ಅವರನ್ನು ಖಂಡಿಸುವುದಿಲ್ಲ. ಆದರೂ, ಲೈಂಗಿಕ ಸಂಬಂಧ ಮತ್ತು ವಿವಾಹದ ಕುರಿತ ದೇವರ ದೃಷ್ಟಿಕೋನಗಳುಳ್ಳವರು ಈ ರೀತಿಯ ತಾತ್ಕಾಲಿಕ ಮತ್ತು ಅನೈತಿಕ ಏರ್ಪಾಡಿನ ವಿರುದ್ಧವಾಗಿಯೇ ನಿರ್ಣಯವನ್ನು ಮಾಡುವರು.​—1 ಕೊರಿಂಥ 6:18; 7:1, 2; ಇಬ್ರಿಯ 13:4.

ನಿಮ್ಮ ನಿರ್ಣಯಗಳು ಇತರರನ್ನು ಹೇಗೆ ಬಾಧಿಸಬಲ್ಲವು ಎಂಬುದನ್ನು ಪರಿಗಣಿಸಿರಿ

ಅನೇಕವೇಳೆ, ನಿಮ್ಮ ನಿರ್ಣಯಗಳು ಇತರರನ್ನು ಬಾಧಿಸಬಲ್ಲವು. ಆದುದರಿಂದ ಎಂದಿಗೂ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ, ಅಥವಾ ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರೊಂದಿಗಿನ ಅಮೂಲ್ಯ ಸಂಬಂಧವನ್ನು ಅಪಾಯಕ್ಕೊಡ್ಡಬಹುದಾದ ಅವಿವೇಕಯುತ​—ಅಥವಾ ಮೂರ್ಖತನದ​—ನಿರ್ಣಯಗಳನ್ನು ಗೊತ್ತಿದ್ದೂ ಮಾಡಬೇಡಿರಿ. ಜ್ಞಾನೋಕ್ತಿ 10:1 ಹೇಳುವುದು: “ಮಗನು ಜ್ಞಾನಿಯಾದರೆ ತಂದೆಗೆ ಸುಖ; ಅಜ್ಞಾನಿಯಾದರೆ ತಾಯಿಗೆ ದುಃಖ.”

ಇನ್ನೊಂದು ಬದಿಯಲ್ಲಿ, ಕೆಲವೊಮ್ಮೆ ಯಾರ ಮಿತ್ರತ್ವವನ್ನು ಇಟ್ಟುಕೊಳ್ಳುವಿರಿ ಎಂಬುದರ ಬಗ್ಗೆ ನೀವು ಆಯ್ಕೆಮಾಡಬೇಕಾದೀತು ಎಂಬುದನ್ನು ಗ್ರಹಿಸಿಕೊಳ್ಳಿರಿ. ದೃಷ್ಟಾಂತಕ್ಕಾಗಿ, ನೀವು ಈ ಹಿಂದೆ ನಂಬಿಕೆಯಿಟ್ಟಿದ್ದ ಧಾರ್ಮಿಕ ಅಭಿಪ್ರಾಯಗಳು ಶಾಸ್ತ್ರವಚನಗಳಿಗೆ ವಿರುದ್ಧವಾಗಿವೆ ಎಂದು ಈಗ ಗ್ರಹಿಸಿಕೊಂಡಿರುವಾಗ ಅವುಗಳನ್ನು ತ್ಯಜಿಸಲು ನಿರ್ಣಯಿಸಬಹುದು. ಅಥವಾ ನೀವು ಈಗ ಸ್ವೀಕರಿಸಿಕೊಂಡಿರುವ ದೈವಿಕ ಮಾರ್ಗದರ್ಶನಗಳಿಗನುಸಾರ ನಿಮ್ಮ ಜೀವನವನ್ನು ಸರಿಹೊಂದಿಸಲು ಬಯಸುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ನೀವು ದೊಡ್ಡ ಬದಲಾವಣೆಗಳನ್ನು ಮಾಡಲು ನಿರ್ಣಯಿಸಬಹುದು. ನಿಮ್ಮ ನಿರ್ಣಯವು ಕೆಲವು ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಇಷ್ಟವಾಗಲಿಕ್ಕಿಲ್ಲ, ಆದರೆ ದೇವರಿಗೆ ಮೆಚ್ಚಿಕೆಯಾಗುವ ಯಾವುದೇ ನಿರ್ಣಯವು ವಿವೇಕಯುತ ನಿರ್ಣಯವೇ ಆಗಿದೆ.

ವಿವೇಕಯುತವಾಗಿ ಅತಿ ದೊಡ್ಡ ನಿರ್ಣಯವನ್ನು ಮಾಡಿರಿ

ಸಾಮಾನ್ಯವಾಗಿ ಜನರು ಗ್ರಹಿಸುವುದಿಲ್ಲವಾದರೂ, ಇಂದು ಎಲ್ಲರೂ ಜೀವನ್ಮರಣಗಳ ಒಂದು ನಿರ್ಣಯವನ್ನು ಮಾಡಲಿಕ್ಕಿದೆ. ತದ್ರೀತಿಯ ಸನ್ನಿವೇಶವು, ಸಾ.ಶ.ಪೂ. 1473ರಲ್ಲಿ ವಾಗ್ದತ್ತ ದೇಶದ ಗಡಿಯಲ್ಲಿ ಪಾಳಯಹೂಡಿದ್ದ ಪ್ರಾಚೀನ ಇಸ್ರಾಯೇಲ್ಯರ ಎದುರಿಗಿತ್ತು. ದೇವರ ಪ್ರತಿನಿಧಿಯೋಪಾದಿ ಕಾರ್ಯನಡೆಸುತ್ತಾ, ಮೋಶೆ ಅವರಿಗೆ ಹೇಳಿದ್ದು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; . . . ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ. ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್‌ ಇಸಾಕ್‌ ಯಾಕೋಬರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನೀವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನೇ ಆಧಾರ.”​—ಧರ್ಮೋಪದೇಶಕಾಂಡ 30:19, 20.

ನಾವು “ಕಠಿನಕಾಲ”ಗಳಲ್ಲಿ ಜೀವಿಸುತ್ತಿದ್ದೇವೆಂದೂ “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ” ಎಂದೂ ಬೈಬಲ್‌ ಪ್ರವಾದನೆ ಮತ್ತು ಕಾಲಗಣನಶಾಸ್ತ್ರವು ತೋರಿಸುತ್ತದೆ. (2 ತಿಮೊಥೆಯ 3:1; 1 ಕೊರಿಂಥ 7:31) ಮುಂತಿಳಿಸಲ್ಪಟ್ಟಿರುವ ಬದಲಾವಣೆಯು ಸುಗುಣಶೂನ್ಯ ಮಾನವ ವ್ಯವಸ್ಥೆಯ ನಾಶನದಲ್ಲಿ ಪರಮಾವಧಿಗೇರುವುದು, ಮತ್ತು ಇದು ದೇವರ ನೀತಿಯ ಹೊಸ ಲೋಕದಿಂದ ಸ್ಥಾನಭರ್ತಿಮಾಡಲ್ಪಡುವುದು.

ನಾವು ಆ ಹೊಸ ಲೋಕದ ದ್ವಾರದ ಅಂಚಿನಲ್ಲಿ ಜೀವಿಸುತ್ತಿದ್ದೇವೆ. ದೇವರ ರಾಜ್ಯದ ಕೆಳಗೆ ಭೂಮಿಯ ಮೇಲೆ ನಿತ್ಯಜೀವವನ್ನು ಅನುಭವಿಸಲು ನೀವು ಅದರೊಳಗೆ ಪ್ರವೇಶಿಸುವಿರೋ? ಅಥವಾ ಸೈತಾನನ ಲೋಕವು ನಶಿಸಲ್ಪಡುವಾಗ ನೀವು ಭೂಮಿಯಿಂದ ತೆಗೆದುಹಾಕಲ್ಪಡುವಿರೋ? (ಕೀರ್ತನೆ 37:9-11; ಜ್ಞಾನೋಕ್ತಿ 2:21, 22) ಈಗ ಯಾವ ಮಾರ್ಗವನ್ನು ಬೆನ್ನಟ್ಟುವೆವೆಂಬುದು ನಿಮಗೆ ಬಿಡಲ್ಪಟ್ಟ ನಿರ್ಣಯವಾಗಿದೆ, ಮತ್ತು ನಿಜವಾಗಿಯೂ ಅದು ಜೀವ ಅಥವಾ ಮರಣಕ್ಕೆ ಸಂಬಂಧಪಟ್ಟ ನಿರ್ಣಯವಾಗಿದೆ. ನೀವು ಸರಿಯಾದ, ವಿವೇಕಯುತವಾದ ನಿರ್ಣಯವನ್ನು ಮಾಡುವುದರಲ್ಲಿ ಸಹಾಯವನ್ನು ಸ್ವೀಕರಿಸಲು ಬಯಸುತ್ತೀರೋ?

ಜೀವವನ್ನು ಆರಿಸಿಕೊಳ್ಳಲು ನಿರ್ಣಯಿಸುವುದರಲ್ಲಿ ಮೊದಲು ದೇವರು ಅಪೇಕ್ಷಿಸುವ ವಿಷಯಗಳ ಕುರಿತು ಕಲಿತುಕೊಳ್ಳುವುದು ಒಳಗೂಡಿದೆ. ಅಪೇಕ್ಷಿಸಲ್ಪಡುವ ಈ ವಿಷಯಗಳನ್ನು ನಿಷ್ಕೃಷ್ಟವಾಗಿ ಸಾದರಪಡಿಸಲು ಚರ್ಚ್‌ಗಳು ಬಹುಮಟ್ಟಿಗೆ ತಪ್ಪಿಹೋಗಿವೆ. ಅದರ ನಾಯಕರು ಅನೇಕವೇಳೆ ತಮ್ಮ ಜನರು ಅಸತ್ಯಗಳಲ್ಲಿ ನಂಬಿಕೆಯಿಡುವಂತೆ ಮತ್ತು ದೇವರನ್ನು ಅಸಂತೋಷಪಡಿಸುವ ವಿಷಯಗಳನ್ನು ಮಾಡುವಂತೆ ತಪ್ಪಾದ ಮಾರ್ಗದಲ್ಲಿ ನಡೆಸಿದ್ದಾರೆ. ದೇವರನ್ನು ‘ಆತ್ಮದಿಂದಲೂ ಸತ್ಯದಿಂದಲೂ’ ಆರಾಧಿಸುವ ವೈಯಕ್ತಿಕ ನಿರ್ಣಯವನ್ನು ಮಾಡುವ ಅಗತ್ಯದ ಕುರಿತು ವಿವರಿಸುವುದನ್ನು ಅವರು ಅಲಕ್ಷಿಸಿದ್ದಾರೆ. (ಯೋಹಾನ 4:24) ಆದ್ದರಿಂದಲೇ ಅನೇಕರು ದೇವರನ್ನು ಹಾಗೆ ಆರಾಧಿಸುವುದಿಲ್ಲ. ಆದರೆ ಯೇಸು ಏನು ಹೇಳಿದನೆಂಬುದನ್ನು ಗಮನಿಸಿರಿ: “ನನ್ನ ಪಕ್ಷ ಹಿಡಿಯದವನು ನನಗೆ ವಿರೋಧಿ; ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ.”​—ಮತ್ತಾಯ 12:30.

ಜನರು ದೇವರ ವಾಕ್ಯದ ಉತ್ತಮವಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡುವುದರಲ್ಲಿ ಯೆಹೋವನ ಸಾಕ್ಷಿಗಳು ಸಂತೋಷಪಡುತ್ತಾರೆ. ಅವರು ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ಅನುಕೂಲವಾದ ಸಮಯ ಮತ್ತು ಸ್ಥಳದಲ್ಲಿ ಕ್ರಮವಾದ ಬೈಬಲ್‌ ಚರ್ಚೆಗಳನ್ನು ನಡೆಸುತ್ತಾರೆ. ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುವವರು ಸ್ಥಳಿಕ ಸಾಕ್ಷಿಗಳನ್ನು ಸಂಪರ್ಕಿಸಬಹುದು ಅಥವಾ ಕಾವಲಿನಬುರುಜುವಿನ ಸಂಪಾದಕರಿಗೆ ಬರೆಯಬಹುದು.

ವಾಸ್ತವದಲ್ಲಿ, ದೇವರು ಏನನ್ನು ಅಪೇಕ್ಷಿಸುತ್ತಾನೆ ಎಂಬುದರ ಕುರಿತು ಕೆಲವರಿಗೆ ಈಗಾಗಲೇ ಮೂಲಭೂತ ಜ್ಞಾನವಿರಬಹುದು. ಅವರಿಗೆ ಬೈಬಲಿನ ಸತ್ಯತೆ ಮತ್ತು ವಿಶ್ವಾಸಾರ್ಹತೆಯ ಕುರಿತು ದೃಢವಿಶ್ವಾಸವೂ ಇರಬಹುದು. ಆದರೂ, ಅನೇಕರು ದೇವರಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ನಿರ್ಣಯವನ್ನು ಮುಂದೂಡಿದ್ದಾರೆ. ಏಕೆ? ಅದಕ್ಕೆ ಅನೇಕ ಕಾರಣಗಳಿರಬಹುದು.

ಹೀಗೆ ಮಾಡುವುದರ ಪ್ರಾಮುಖ್ಯತೆಯನ್ನು ಒಂದುವೇಳೆ ಅವರು ಗ್ರಹಿಸದೆ ಇದ್ದಾರೋ? ಯೇಸು ಸ್ಪಷ್ಟವಾಗಿ ತಿಳಿಸಿದ್ದು: “ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.” (ಮತ್ತಾಯ 7:21) ಬೈಬಲ್‌ ಜ್ಞಾನವು ಮಾತ್ರವೇ ಸಾಕಾಗುವುದಿಲ್ಲ; ಕ್ರಿಯೆಯೂ ಅಗತ್ಯವಾಗಿದೆ. ಈ ವಿಷಯದಲ್ಲಿ ಆರಂಭದ ಕ್ರೈಸ್ತ ಸಭೆಯು ಮಾದರಿಯನ್ನು ಇಟ್ಟಿತು. ಪ್ರಥಮ ಶತಮಾನದಲ್ಲಿದ್ದ ಕೆಲವರ ಕುರಿತು ನಾವು ಓದುವುದು: “ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ವಿಷಯದಲ್ಲಿಯೂ ಶುಭವರ್ತಮಾನವನ್ನು ಸಾರಲು ಗಂಡಸರೂ ಹೆಂಗಸರೂ ನಂಬಿ ದೀಕ್ಷಾಸ್ನಾನಮಾಡಿಸಿಕೊಂಡರು.” (ಅ. ಕೃತ್ಯಗಳು 2:41; 8:12) ಆದುದರಿಂದ, ಒಬ್ಬ ವ್ಯಕ್ತಿಯು ದೇವರ ವಾಕ್ಯವನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿರುವುದಾದರೆ, ಅದು ಹೇಳುವುದನ್ನು ನಂಬುವುದಾದರೆ, ಮತ್ತು ತನ್ನ ಜೀವಿತವನ್ನು ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿ ತಂದಿರುವುದಾದರೆ, ತನ್ನ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಳ್ಳುವುದರಿಂದ ಅವನನ್ನು ಯಾವುದು ತಡೆಯುತ್ತದೆ? (ಅ. ಕೃತ್ಯಗಳು 8:34-38) ದೇವರಿಗೆ ಸ್ವೀಕಾರಾರ್ಹವಾಗಿರಬೇಕಾದರೆ, ಖಂಡಿತವಾಗಿಯೂ ಈ ಹೆಜ್ಜೆಯನ್ನು ಅವನು ಮನಃಪೂರ್ವಕವಾಗಿಯೂ ಸಂತೋಷದಿಂದಲೂ ತೆಗೆದುಕೊಳ್ಳುವುದು ಆವಶ್ಯಕವಾಗಿದೆ.​—2 ಕೊರಿಂಥ 9:7.

ದೇವರಿಗೆ ತಮ್ಮ ಜೀವನವನ್ನು ಸಮರ್ಪಿಸಿಕೊಳ್ಳಲು ಸಾಕಾಗುವಷ್ಟು ಜ್ಞಾನ ತಮಗಿಲ್ಲ, ಅದು ತೀರ ಸೀಮಿತವಾಗಿದೆ ಎಂದು ಕೆಲವರಿಗೆ ಅನಿಸಬಹುದು. ಆದರೆ ಜೀವನದಲ್ಲಿ ಯಾವುದೇ ಹೊಸ ಮಾರ್ಗದಲ್ಲಿ ತೊಡಗುವವರಿಗೆ ಜ್ಞಾನವು ಸೀಮಿತವಾಗಿಯೇ ಇರುತ್ತದೆ. ಯಾವ ವೃತ್ತಿಪರ ವ್ಯಕ್ತಿ, ಇಂದು ತನಗೆ ತನ್ನ ಉದ್ಯೋಗದ ಕುರಿತು ಏನು ತಿಳಿದಿದೆಯೋ ಅದು ಆರಂಭದಲ್ಲೇ ತಿಳಿದಿತ್ತು ಎಂದು ಹೇಳಬಲ್ಲನು? ದೇವರ ಸೇವೆ ಮಾಡಲು ನಿರ್ಣಯಿಸಲಿಕ್ಕಾಗಿ, ಮೂಲಭೂತ ಬೈಬಲ್‌ ಬೋಧನೆಗಳ ಹಾಗೂ ಮೂಲತತ್ತ್ವಗಳ ಜ್ಞಾನ ಮತ್ತು ಅದರಂತೆಯೇ ಜೀವಿಸುವ ಬಯಕೆಯು ಮಾತ್ರವೇ ಅಗತ್ಯ.

ತಮ್ಮ ಸಮರ್ಪಣೆಗೆ ತಕ್ಕ ಹಾಗೆ ಜೀವಿಸಲಿಕ್ಕೆ ತಪ್ಪುವೆವು ಎಂದು ಹೆದರುತ್ತಾ ಕೆಲವರು ಇನ್ನೂ ನಿರ್ಣಯ ಮಾಡುವುದನ್ನು ಮುಂದೂಡುತ್ತಾರೋ? ಮಾನವನು ಮಾಡುವ ಯಾವುದೇ ಬದ್ಧತೆಯಲ್ಲಿ ತಪ್ಪಿಹೋಗುವುದರ ಚಿಂತೆಯು ಸಮಂಜಸವಾಗಿರುತ್ತದೆ. ಮದುವೆಮಾಡಿಕೊಂಡು ಒಂದು ಕುಟುಂಬವನ್ನು ಬೆಳೆಸಲು ನಿರ್ಣಯಿಸುವ ಒಬ್ಬ ವ್ಯಕ್ತಿಯು ತಾನು ಅಷ್ಟೊಂದು ಸಮರ್ಥನಲ್ಲವೆಂದು ಭಾವಿಸಬಹುದು, ಆದರೆ ಒಂದು ಬದ್ಧತೆಯನ್ನು ಮಾಡಿಕೊಳ್ಳುವುದು ಅವನಿಂದ ಸಾಧ್ಯವಿರುವುದೆಲ್ಲವನ್ನು ಮಾಡುವ ಪ್ರೇರಣೆಯನ್ನು ಕೊಡುತ್ತದೆ. ತದ್ರೀತಿಯಲ್ಲಿ, ಒಂದು ಹೊಸ ಡ್ರೈವಿಂಗ್‌ ಲೈಸನ್ಸ್‌ ಅನ್ನು ಹೊಂದಿರುವ ಒಬ್ಬ ಯುವ ವ್ಯಕ್ತಿಗೆ ಒಂದು ರಸ್ತೆ ಅಪಘಾತವಾಗುವುದರ ಬಗ್ಗೆ ಸ್ವಲ್ಪ ಭಯ ಇರಬಹುದು. ಅದರಲ್ಲೂ ವೃದ್ಧರಿಗಿಂತ ಹೆಚ್ಚಾಗಿ ಯುವ ಡ್ರೈವರ್‌ಗಳೇ ಹೆಚ್ಚು ಅಪಘಾತಕ್ಕೀಡಾಗುತ್ತಾರೆ ಎಂಬ ಸಮೀಕ್ಷೆಯ ಕುರಿತು ಅವನಿಗೆ ತಿಳಿದಿರುವುದಾದರೆ ಇದು ವಿಶೇಷವಾಗಿ ಸತ್ಯವಾಗಿರುತ್ತದೆ. ಆದರೂ, ಈ ಪರಿಜ್ಞಾನವು ಪ್ರಯೋಜನಕಾರಿಯಾಗಿರಸಾಧ್ಯವಿದೆ, ಏಕೆಂದರೆ ಇದು ಅವನು ಹೆಚ್ಚು ಜಾಗ್ರತೆಯಿಂದ ವಾಹನ ಚಲಾಯಿಸುವಂತೆ ಪ್ರೇರಿಸಬಹುದು. ಒಂದು ಲೈಸನ್ಸ್‌ ಅನ್ನು ಪಡೆದುಕೊಳ್ಳದೇ ಇದ್ದುಬಿಡುವುದು ಖಂಡಿತವಾಗಿಯೂ ಇದಕ್ಕೆ ಸೂಕ್ತ ಪರಿಹಾರವಲ್ಲ!

ಜೀವಕ್ಕಾಗಿ ನಿರ್ಣಯಿಸಿರಿ!

ಸದ್ಯದ ರಾಜಕೀಯ, ಆರ್ಥಿಕ, ಮತ್ತು ಧಾರ್ಮಿಕ ಭೌಗೋಳಿಕ ವ್ಯವಸ್ಥೆಯು ಮತ್ತು ಅದನ್ನು ಬೆಂಬಲಿಸುವವರು ಬೇಗನೆ ಲೋಕದಿಂದ ಗತಿಸಿಹೋಗುವರು ಎಂದು ಬೈಬಲು ತೋರಿಸುತ್ತದೆ. ಆದರೂ, ವಿವೇಕಯುತವಾಗಿ ಜೀವಕ್ಕಾಗಿ ನಿರ್ಣಯಿಸಿರುವವರು ಮತ್ತು ಅದಕ್ಕೆ ಹೊಂದಿಕೆಯಲ್ಲಿ ಜೀವಿಸುತ್ತಿರುವವರು ಪಾರಾಗಿ ಉಳಿಯುವರು. ಒಂದು ಹೊಸ ಲೋಕ ಸಮಾಜದ ಕೇಂದ್ರಬಿಂದುವಾಗಿ, ದೇವರು ಆದಿಯಲ್ಲಿ ಉದ್ದೇಶಿಸಿದಂತೆ ಭೂಮಿಯನ್ನು ಪರದೈಸನ್ನಾಗಿ ಮಾಡುವುದರಲ್ಲಿ ಅವರು ಪಾಲ್ಗೊಳ್ಳುವರು. ದೇವರ ಮಾರ್ಗದರ್ಶನದ ಕೆಳಗೆ, ನೀವು ಈ ಸಂತೋಷಕರವಾದ ಕೆಲಸದಲ್ಲಿ ಪಾಲ್ಗೊಳ್ಳಲು ಬಯಸುವಿರೋ?

ಹೌದಾದರೆ, ದೇವರ ವಾಕ್ಯವನ್ನು ಅಧ್ಯಯನ ಮಾಡಲು ನಿರ್ಣಯಿಸಿರಿ. ದೇವರನ್ನು ಮೆಚ್ಚಿಸಲಿಕ್ಕಾಗಿರುವ ದೈವಿಕ ಆವಶ್ಯಕತೆಗಳನ್ನು ಕಲಿತುಕೊಳ್ಳಲು ನಿರ್ಣಯಿಸಿರಿ. ಅವುಗಳನ್ನು ಪೂರೈಸಲು ನಿರ್ಣಯಿಸಿರಿ. ಎಲ್ಲಕ್ಕಿಂತಲೂ ಮಿಗಿಲಾಗಿ, ನಿಮ್ಮ ನಿರ್ಣಯಕ್ಕೆ ಕೊನೆಯ ತನಕ ಅಂಟಿಕೊಂಡಿರಲು ನಿರ್ಣಯಿಸಿರಿ. ಚುಟುಕಾಗಿ ಹೇಳುವುದಾದರೆ, ಜೀವಕ್ಕಾಗಿ ನಿರ್ಣಯಿಸಿರಿ!

[ಪುಟ 4ರಲ್ಲಿರುವ ಚಿತ್ರಗಳು]

ಗಂಭೀರವಾದ ನಿರ್ಣಯಗಳಿಗಾಗಿ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿರಿ

[ಪುಟ 5ರಲ್ಲಿರುವ ಚಿತ್ರ]

ಒಂದು ಜೀವನವೃತ್ತಿಯನ್ನು ಆರಿಸಿಕೊಳ್ಳುವಾಗ ಸಲಹೆಸೂಚನೆಗೆ ಕಿವಿಗೊಡಿರಿ

[ಪುಟ 7ರಲ್ಲಿರುವ ಚಿತ್ರಗಳು]

ಈಗಲೇ ದೇವರನ್ನು ಸೇವಿಸಲು ನಿರ್ಣಯಿಸುವವರು ಭೂಮಿಯನ್ನು ಪರದೈಸನ್ನಾಗಿ ಮಾಡುವುದರಲ್ಲಿ ಪಾಲ್ಗೊಳ್ಳುವರು