ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಯು ಪರದೈಸಾಗುವುದೆಂದು ನೀವು ನಂಬಸಾಧ್ಯವಿದೆಯೋ?

ಭೂಮಿಯು ಪರದೈಸಾಗುವುದೆಂದು ನೀವು ನಂಬಸಾಧ್ಯವಿದೆಯೋ?

ಭೂಮಿಯು ಪರದೈಸಾಗುವುದೆಂದು ನೀವು ನಂಬಸಾಧ್ಯವಿದೆಯೋ?

ಭೂಮಿಯು ಎಂದಾದರೂ ಒಂದು ಪರದೈಸಾಗಲಿದೆ ಎಂಬುದನ್ನು ನಂಬುವ ಜನರು ಕೊಂಚವೇ. ಅನೇಕರು, ಅದು ಅಸ್ತಿತ್ವದಿಂದಲೇ ಇಲ್ಲದೆ ಹೋಗುವುದೆಂದು ನೆನಸುತ್ತಾರೆ. ಬ್ರೈಯನ್‌ ಲೀ ಮೊಲೀನೋರವರ ಪವಿತ್ರ ಭೂಮಿ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, ಈ ಭೂಗೋಳವು ಕೋಟ್ಯಂತರ ವರುಷಗಳ ಹಿಂದೆ ಸಂಭವಿಸಿದ ‘ಒಂದು ಮಹಾ ವಿಶ್ವಸ್ಪೋಟ’ದಿಂದ ಅಸ್ತಿತ್ವಕ್ಕೆ ಬಂತು. ಮತ್ತು ಮುಂದಕ್ಕೆ ಮನುಷ್ಯನು ಸ್ವತಃ ಭೂಮಿಯನ್ನು ನಾಶಮಾಡದಿದ್ದಲ್ಲಿ, ಕ್ರಮೇಣ ಅದು ಮತ್ತು ಇಡೀ ವಿಶ್ವವು “ಪುನಃ ಒಂದು ಬೆಂಕಿಯ ಚೆಂಡಿನೊಳಕ್ಕೆ ಒಳಮುಖವಾಗಿ ಕುಸಿಯ”ಬಹುದು ಎಂಬುದಾಗಿ ಅನೇಕರು ನಂಬುತ್ತಾರೆ.

ಆದರೆ ಹದಿನೇಳನೆಯ ಶತಮಾನದ ಕವಿ ಜಾನ್‌ ಮಿಲ್ಟನ್‌ಗೆ ಅಂಥ ನಿರಾಶಾವಾದಿ ಆಲೋಚನೆಗಳಿರಲಿಲ್ಲ. ಕಳೆದುಕೊಂಡ ಪರದೈಸ್‌ ಎಂಬ ತನ್ನ ಮಹಾ ಕಾವ್ಯದಲ್ಲಿ, ದೇವರು ಭೂಮಿಯನ್ನು ಮಾನವ ಕುಟುಂಬಕ್ಕಾಗಿ ಒಂದು ಪರದೈಸ್‌ ಬೀಡಾಗಿರುವಂತೆ ಸೃಷ್ಟಿಸಿದನು ಎಂದು ಅವನು ಬರೆದನು. ಆದಿಯ ಆ ಪರದೈಸ್‌ ಕಳೆದುಕೊಳ್ಳಲ್ಪಟ್ಟಿತು. ಹಾಗಿದ್ದರೂ, ಅದು ಮತ್ತೊಮ್ಮೆ ಪುನಃಸ್ಥಾಪಿಸಲ್ಪಡುವುದು​—ಯೇಸು ಕ್ರಿಸ್ತನೆಂಬ ವಿಮೋಚಕನು ಒಂದು ದಿನ “ಅವನ ನಂಬಿಗಸ್ತರಿಗೆ ಪ್ರತಿಫಲ ಕೊಡುವನು, ಮತ್ತು ಅವರನ್ನು ಸ್ವರ್ಗದಲ್ಲಿ ಅಥವಾ ಭೂಮಿಯಲ್ಲಿರುವ . . . ಆನಂದಧಾಮಕ್ಕೆ ಬರಮಾಡುವನು” ಎಂದು ಮಿಲ್ಟನ್‌ ನಂಬಿದನು. ಮಿಲ್ಟನ್‌ ದೃಢಭರವಸೆಯಿಂದ ಘೋಷಿಸಿದ್ದು: “ನಂತರ ಇಡೀ ಭೂಮಿಯು ಪರದೈಸಾಗುವುದು.”

ಪರದೈಸ್‌​—ಸ್ವರ್ಗದಲ್ಲೋ ಭೂಮಿಯಲ್ಲೋ?

ಅನೇಕ ಧಾರ್ಮಿಕ ಜನರು, ತಾವು ಈ ಭೂಮಿಯಲ್ಲಿ ತಾಳಿಕೊಳ್ಳಬೇಕಾದ ಭಯಾನಕ ಮತ್ತು ನೋವಿನ ಪರಿಸ್ಥಿತಿಗಳಿಗಾಗಿ ಯಾವುದೋ ಒಂದು ರೀತಿಯ ಪ್ರತಿಫಲವನ್ನು ಕಟ್ಟಕಡೆಗೆ ಪಡೆದುಕೊಳ್ಳಲಿದ್ದೇವೆ ಎಂಬ ಮಿಲ್ಟನ್‌ನ ದೃಷ್ಟಿಕೋನವನ್ನೇ ಹೊಂದಿರುತ್ತಾರೆ. ಆದರೆ ಅವರು ಆ ಪ್ರತಿಫಲವನ್ನು ಎಲ್ಲಿ ಆನಂದಿಸಲಿದ್ದಾರೆ? “ಸ್ವರ್ಗದಲ್ಲೋ ಅಥವಾ ಭೂಮಿಯಲ್ಲೋ”? ಭೂಮಿಯಲ್ಲಿರಬಹುದು ಎಂಬಂಥ ಆಲೋಚನೆ ಸಹ ಕೆಲವರಲ್ಲಿ ಮೂಡುವುದಿಲ್ಲ. ಜನರು ಭೂಮಿಯನ್ನು ಬಿಟ್ಟು, ಸ್ವರ್ಗದಲ್ಲಿರುವ ಆತ್ಮ ಜಗತ್ತಿನಲ್ಲಿ ಜೀವಿಸುವಾಗ ಮಾತ್ರ “ಆನಂದಧಾಮ”ವನ್ನು ಆನಂದಿಸುವರೆಂದು ಅವರು ಹೇಳುತ್ತಾರೆ.

ಸ್ವರ್ಗ​—ಒಂದು ಇತಿಹಾಸ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಗ್ರಂಥಕರ್ತರಾದ ಸಿ. ಮ್ಯಾಕ್‌ಡಾನೆಲ್‌ ಮತ್ತು ಬಿ. ಲ್ಯಾಂಗ್‌ ತಿಳಿಸುವುದೇನೆಂದರೆ, ಪುನಃಸ್ಥಾಪಿತ ಪರದೈಸಿನಲ್ಲಿನ ಜೀವನವು “ಯಾವುದೋ ದೂರದ ಸ್ವರ್ಗೀಯ ಜಗತ್ತಿನಲ್ಲಿ ಅಲ್ಲ, ಬದಲಾಗಿ ಭೂಮಿಯ ಮೇಲೆಯೇ ಇರಲಿದೆ” ಎಂದು ಎರಡನೇ ಶತಮಾನದ ದೇವತಾ ಶಾಸ್ತ್ರಜ್ಞನಾದ ಐರೀನಿಯಸ್‌ ನಂಬಿದ್ದನು. ಆ ಪುಸ್ತಕಕ್ಕನುಸಾರ, ಜಾನ್‌ ಕ್ಯಾಲ್ವಿನ್‌ ಮತ್ತು ಮಾರ್ಟಿನ್‌ ಲೂಥರ್‌ ಮುಂತಾದ ಧಾರ್ಮಿಕ ಮುಖಂಡರು ಸ್ವರ್ಗಕ್ಕೆ ಹೋಗುವ ನಿರೀಕ್ಷೆಯನ್ನಿಟ್ಟಿದ್ದರೂ, “ದೇವರು ಭೂಮಿಯನ್ನು ನವೀಕರಿಸಲಿದ್ದಾನೆ” ಎಂಬುದನ್ನು ಸಹ ನಂಬಿದ್ದರು. ಇತರ ಧರ್ಮದ ಸದಸ್ಯರು ಸಹ ಇಂತಹದ್ದೇ ನಂಬಿಕೆಗಳನ್ನು ಹೊಂದಿದ್ದರು. ದೇವರ ನೇಮಿತ ಸಮಯದಲ್ಲಿ, ಮಾನವರ ಎಲ್ಲಾ ಕಷ್ಟಗಳು “ಅಳಿಸಲ್ಪಡುವವು ಮತ್ತು ಈ ಭೂಮಿಯಲ್ಲಿ ಒಂದು ಅರ್ಥಭರಿತವಾದ ಜೀವನವು ಜೀವಿಸಲ್ಪಡುವುದು” ಎಂಬುದಾಗಿ ಕೆಲವು ಯೆಹೂದಿ ಜನರು ನಂಬಿದ್ದರು ಎಂದು ಸಹ ಮ್ಯಾಕ್‌ಡಾನೆಲ್‌ ಮತ್ತು ಲ್ಯಾಂಗ್‌ ತಿಳಿಸಿದರು. ಪುರಾತನ ಕಾಲದ ಪಾರಸೀಯರ ನಂಬಿಕೆಗನುಸಾರ, “ಭೂಮಿಯು ತನ್ನ ಪ್ರಾರಂಭದ ಸ್ಥಿತಿಗೆ ಪುನಃಸ್ಥಾಪಿಸಲ್ಪಡುವುದು ಮತ್ತು ಜನರು ಪುನಃ ಒಮ್ಮೆ ಶಾಂತಿಯಿಂದ ಜೀವಿಸಲಿದ್ದಾರೆ,” ಎಂದು ದಿ ಎನ್‌ಸೈಕ್ಲಪೀಡೀಯ ಆಫ್‌ ಮಿಡಲ್‌ ಈಸ್ಟರ್ನ್‌ ಮಿತಾಲಜಿ ಆ್ಯಂಡ್‌ ರಿಲೀಜನ್‌ ಹೇಳುತ್ತದೆ.

ಹೀಗಿರುವಾಗ ಭೂಮಿಯು ಪರದೈಸಾಗುವುದೆಂಬ ನಿರೀಕ್ಷೆಗೆ ಏನು ಸಂಭವಿಸಿತು? ನಮ್ಮ ಭೂಅಸ್ತಿತ್ವವು ಕೇವಲ ಒಂದು ತಾತ್ಕಾಲಿಕ ಹಂತವಾಗಿದೆಯೋ? ಮೊದಲನೆಯ ಶತಮಾನದ ಯೆಹೂದಿ ತತ್ತ್ವಜ್ಞಾನಿ ಫಿಲೋ ನಂಬಿದಂತೆ ಇದು, ಆತ್ಮ ಜಗತ್ತಿಗೆ ಹೋಗುವ ನಮ್ಮ ಪ್ರಯಾಣದಲ್ಲಿನ ಕೇವಲ “ಒಂದು ಕ್ಷಣಿಕವಾದ, ಅನೇಕವೇಳೆ ವಿಪತ್ಕಾರಕವಾದ ಘಟನೆ” ಆಗಿದೆಯೋ? ಅಥವಾ, ದೇವರು ಈ ಭೂಮಿಯನ್ನು ಸೃಷ್ಟಿಸಿ, ಅದರ ಪರದೈಸೀಯ ಪರಿಸ್ಥಿತಿಗಳಲ್ಲಿ ಮಾನವರನ್ನು ಇಟ್ಟಾಗ, ಆತನ ಮನಸ್ಸಿನಲ್ಲಿ ಬೇರೇನಾದರೂ ಉದ್ದೇಶವಿತ್ತೋ? ಈ ಭೂಮಿಯಲ್ಲಿದ್ದುಕೊಂಡೇ ಮಾನವಕುಲವು ನೈಜವಾದ ಆತ್ಮಿಕ ತೃಪ್ತಿ ಮತ್ತು ಆನಂದಧಾಮವನ್ನು ಕಂಡುಕೊಳ್ಳಸಾಧ್ಯವಿದೆಯೋ? ಈ ವಿಷಯದ ಕುರಿತು ಬೈಬಲ್‌ ಏನನ್ನುತ್ತದೆ ಎಂಬುದನ್ನು ಯಾಕೆ ಪರೀಕ್ಷಿಸಿ ನೋಡಬಾರದು? ಲಕ್ಷಾಂತರ ಜನರು ಈಗಾಗಲೇ ತೀರ್ಮಾನಕ್ಕೆ ಬಂದಿರುವಂತೆ, ಭೂಮಿಯ ಮೇಲೆ ಪರದೈಸ್‌ ಪುನಃಸ್ಥಾಪಿತವಾಗುವುದನ್ನು ನಿರೀಕ್ಷಿಸುವುದು ಖಂಡಿತವಾಗಿಯೂ ವಿವೇಕಯುತವಾಗಿದೆ ಎಂದು ನೀವೂ ನಿರ್ಣಯಿಸಬಹುದು.

[ಪುಟ 3ರಲ್ಲಿರುವ ಚಿತ್ರ]

ಪರದೈಸವು ಪುನಃಸ್ಥಾಪಿಸಲ್ಪಡುವುದು ಎಂದು ಕವಿ ಜಾನ್‌ ಮಿಲ್ಟನ್‌ ನಂಬಿದ್ದನು

[ಪುಟ 2ರಲ್ಲಿರುವ ಚಿತ್ರ ಕೃಪೆ]

ಮುಖಪುಟ: ಭೂಮಿ: U.S. Fish & Wildlife Service, Washington, D.C./NASA

[ಪುಟ 3ರಲ್ಲಿರುವ ಚಿತ್ರ ಕೃಪೆ]

ಭೂಮಿ: U.S. Fish & Wildlife Service, Washington, D.C./NASA; ಜಾನ್‌ ಮಿಲ್ಟನ್‌: Leslie’s