ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—I

ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—I

ಯೆಹೋವನ ವಾಕ್ಯವು ಸಜೀವವಾದದ್ದು

ಆದಿಕಾಂಡ ಪುಸ್ತಕದ ಮುಖ್ಯಾಂಶಗಳು​—I

“ಆದಿಕಾಂಡ” ಅಂದರೆ “ಮೂಲ” ಅಥವಾ “ಹುಟ್ಟು” ಎಂದರ್ಥ. ಈ ವಿಶ್ವವು ಹೇಗೆ ಅಸ್ತಿತ್ವಕ್ಕೆ ಬಂತು, ಯಾವ ರೀತಿಯಲ್ಲಿ ಭೂಮಿಯು ಮಾನವ ನಿವಾಸಕ್ಕಾಗಿ ಸಿದ್ಧಗೊಳಿಸಲ್ಪಟ್ಟಿತು ಮತ್ತು ಮಾನವರು ಹೇಗೆ ಅದರ ಮೇಲೆ ವಾಸಿಸಲಾರಂಭಿಸಿದರು ಎಂಬುದನ್ನು ವಿವರವಾಗಿ ತಿಳಿಸುವಂಥ ಒಂದು ಪುಸ್ತಕಕ್ಕೆ ಇದು ಸೂಕ್ತವಾದ ಹೆಸರಾಗಿದೆ. ಮೋಶೆಯು ಈ ಪುಸ್ತಕವನ್ನು ಸೀನಾಯಿ ಅರಣ್ಯದಲ್ಲಿ ಬಹುಶಃ ಸಾ.ಶ.ಪೂ. 1513ರಲ್ಲಿ ಬರೆದು ಮುಗಿಸಿದನು.

ಆದಿಕಾಂಡ ಪುಸ್ತಕವು, ಜಲಪ್ರಳಯಕ್ಕೆ ಮುಂಚೆ ಇದ್ದ ಲೋಕದ ಕುರಿತು, ಪ್ರಳಯದ ನಂತರದ ಶಕವು ಆರಂಭಗೊಂಡಾಗ ಏನು ಸಂಭವಿಸಿತು ಎಂಬುದರ ಕುರಿತು ಮತ್ತು ಯೆಹೋವ ದೇವರು ಅಬ್ರಹಾಮ, ಇಸಾಕ, ಯಾಕೋಬ ಹಾಗೂ ಯೋಸೇಫರೊಂದಿಗೆ ಹೇಗೆ ವ್ಯವಹರಿಸಿದನು ಎಂಬುದರ ಕುರಿತು ನಮಗೆ ತಿಳಿಸುತ್ತದೆ. ಈ ಲೇಖನವು ಆದಿಕಾಂಡ 1:​1–11:9ರ ವರೆಗಿನ, ಅಂದರೆ ಪೂರ್ವಜನಾದ ಅಬ್ರಹಾಮನೊಂದಿಗೆ ಯೆಹೋವನು ವ್ಯವಹರಿಸಲು ಆರಂಭಿಸಿದ ಸಮಯದ ವರೆಗಿನ ಮುಖ್ಯಾಂಶಗಳನ್ನು ಪರಿಗಣಿಸುವುದು.

ಜಲಪ್ರಳಯಕ್ಕೆ ಮುಂಚೆ ಇದ್ದ ಲೋಕ

(ಆದಿಕಾಂಡ 1:​1–7:24)

“ಆದಿಯಲ್ಲಿ” ಎಂಬ ಆದಿಕಾಂಡ ಪುಸ್ತಕದ ಆರಂಭದ ನುಡಿಗಳು ಅಸಂಖ್ಯಾತ ಶತಕೋಟಿ ವರ್ಷಗಳಷ್ಟು ಹಿಂದಿನ ಕಾಲಾವಧಿಗೆ ಸೂಚಿತವಾಗಿವೆ. ಸೃಷ್ಟಿಯ ಆರು ‘ದಿನಗಳ’ ಘಟನೆಗಳು ಅಥವಾ ವಿಶೇಷ ಸೃಷ್ಟಿಕಾರಕ ಕೆಲಸಗಳ ಕಾಲಾವಧಿಗಳು, ಒಬ್ಬ ಮಾನವ ವೀಕ್ಷಕನು ಒಂದುವೇಳೆ ಭೂಮಿಯಲ್ಲಿ ಇದ್ದಿರುತ್ತಿದ್ದರೆ ಅವನ ಕಣ್ಣಿಗೆ ವಿಷಯಗಳು ಹೇಗೆ ಕಂಡುಬರುತ್ತಿದ್ದವೋ ಅದೇ ರೀತಿಯಲ್ಲಿ ವರ್ಣಿಸಲ್ಪಟ್ಟಿವೆ. ಆರನೆಯ ದಿನದ ಅಂತ್ಯದಷ್ಟಕ್ಕೆ ದೇವರು ಮನುಷ್ಯನನ್ನು ಸೃಷ್ಟಿಸಿದನು. ಮನುಷ್ಯನ ಅವಿಧೇಯತೆಯಿಂದಾಗಿ ಪರದೈಸವು ಬೇಗನೆ ಕಳೆದುಕೊಳ್ಳಲ್ಪಟ್ಟಿತಾದರೂ, ಯೆಹೋವನು ನಿರೀಕ್ಷೆಯನ್ನು ಕೊಡುತ್ತಾನೆ. ಬೈಬಲಿನ ಪ್ರಥಮ ಪ್ರವಾದನೆಯೇ, ಪಾಪದ ಪರಿಣಾಮಗಳನ್ನು ನಿಷ್ಫಲಗೊಳಿಸುವ ಹಾಗೂ ಸೈತಾನನ ತಲೆಯನ್ನು ಜಜ್ಜಿಬಿಡುವಂಥ ಒಂದು “ಸಂತಾನ”ದ ಕುರಿತಾಗಿ ಮಾತಾಡುತ್ತದೆ.

ನಂತರದ 16 ಶತಮಾನಗಳಾದ್ಯಂತ ಸೈತಾನನು ಹೇಬೆಲ, ಹನೋಕ ಹಾಗೂ ನೋಹರಂಥ ಕೆಲವೇ ನಂಬಿಗಸ್ತ ವ್ಯಕ್ತಿಗಳನ್ನು ಬಿಟ್ಟು ಎಲ್ಲಾ ಮಾನವರನ್ನು ದೇವರಿಂದ ವಿಮುಖಗೊಳಿಸುವುದರಲ್ಲಿ ಸಫಲನಾದನು. ಉದಾಹರಣೆಗೆ, ಕಾಯಿನನು ತನ್ನ ನೀತಿವಂತ ತಮ್ಮನಾದ ಹೇಬೆಲನನ್ನು ಕೊಂದನು. “ಆ ಕಾಲದಲ್ಲಿ ಯೆಹೋವ ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುವದಕ್ಕೆ ಪ್ರಾರಂಭ”ವಾದದ್ದು ಅಗೌರವಯುತವಾದ ರೀತಿಯಲ್ಲೇ ಎಂಬುದು ಸುವ್ಯಕ್ತ. ಆ ದಿನದಲ್ಲಿದ್ದ ಹಿಂಸಾತ್ಮಕ ಮನೋಭಾವವನ್ನೇ ಪ್ರತಿಬಿಂಬಿಸುತ್ತಾ ಲೆಮೆಕನು, ತನ್ನ ಸ್ವರಕ್ಷಣೆಗೋಸ್ಕರ ಒಬ್ಬ ಮನುಷ್ಯನನ್ನು ಹೇಗೆ ಕೊಂದೆನೆಂಬುದರ ಕುರಿತು ಒಂದು ಕವಿತೆಯನ್ನು ರಚಿಸಿದನು. ದೇವರ ಅವಿಧೇಯ ದೂತಪುತ್ರರು ಸ್ತ್ರೀಯರನ್ನು ಹೆಂಡತಿಯರನ್ನಾಗಿ ಮಾಡಿಕೊಂಡು ನೆಫಿಲೀಯರೆಂಬ ಹಿಂಸಾಚಾರಿಗಳಾದ ದೈತ್ಯರನ್ನು ಉಂಟುಮಾಡಿದಾಗ ಪರಿಸ್ಥಿತಿಗಳು ಇನ್ನಷ್ಟು ಹದಗೆಟ್ಟವು. ಆದರೂ, ನಂಬಿಗಸ್ತನಾದ ನೋಹನು ನಾವೆಯನ್ನು ಕಟ್ಟಿ, ಸಮೀಪಿಸುತ್ತಿದ್ದ ಜಲಪ್ರಳಯದ ಕುರಿತು ಇತರರಿಗೆ ಧೈರ್ಯದಿಂದ ಎಚ್ಚರಿಕೆ ನೀಡಿದನು ಮತ್ತು ತನ್ನ ಕುಟುಂಬ ಸಮೇತ ಆ ವಿನಾಶದಿಂದ ಪಾರಾದನು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

1:​16​—ನಾಲ್ಕನೆಯ ದಿನದ ತನಕ ಸೂರ್ಯಚಂದ್ರರು ಸೃಷ್ಟಿಸಲ್ಪಟ್ಟಿರದಿದ್ದಲ್ಲಿ, ಮೊದಲ ದಿನವೇ ದೇವರು ಬೆಳಕನ್ನು ಹೇಗೆ ಉಂಟುಮಾಡಸಾಧ್ಯವಿತ್ತು? 16ನೇ ವಚನದಲ್ಲಿ “ಉಂಟುಮಾಡಿದನು” ಎಂದು ತರ್ಜುಮೆಮಾಡಲ್ಪಟ್ಟಿರುವ ಹೀಬ್ರು ಪದವೂ, ಆದಿಕಾಂಡ 1ನೇ ಅಧ್ಯಾಯದ 1, 21, ಮತ್ತು 27ನೆಯ ವಚನಗಳಲ್ಲಿ (ಪರಿಶುದ್ಧ ಬೈಬಲ್‌*) ಉಪಯೋಗಿಸಲ್ಪಟ್ಟಿರುವ “ಸೃಷ್ಟಿಸಿದನು” ಎಂಬುದಕ್ಕಾಗಿರುವ ಹೀಬ್ರು ಪದವೂ ಒಂದೇ ಆಗಿರುವುದಿಲ್ಲ. ಸೂರ್ಯಚಂದ್ರರನ್ನು ಒಳಗೂಡಿದ್ದ “ಆಕಾಶ”ವು, “ಮೊದಲನೆಯ ದಿನ”ವು ಆರಂಭಗೊಳ್ಳುವ ಬಹಳ ಸಮಯಕ್ಕೆ ಮುಂಚೆಯೇ ಸೃಷ್ಟಿಸಲ್ಪಟ್ಟಿತ್ತು. ಆದರೆ ಅವುಗಳ ಬೆಳಕು ಮಾತ್ರ ಇನ್ನೂ ಭೂಮಿಯ ಮೇಲ್ಮೈಯನ್ನು ತಲಪಿರಲಿಲ್ಲ. ಮೊದಲನೆಯ ದಿನದಂದು “ಬೆಳಕಾಯಿತು” ಏಕೆಂದರೆ ವಿಸೃತ ಬೆಳಕು ಮೋಡದ ಪದರಗಳ ಮೂಲಕ ತೂರಿಬಂದು ಭೂಮಿಯಲ್ಲಿ ದೃಷ್ಟಿಗೋಚರವಾಯಿತು. ಹೀಗೆ, ತನ್ನ ಪಥದ ಮೇಲೆ ಚಕ್ರಾಕಾರದಲ್ಲಿ ಸುತ್ತುತ್ತಿದ್ದ ಭೂಮಿಯ ಮೇಲೆ ಹಗಲು ಮತ್ತು ರಾತ್ರಿಗಳು ಉಂಟಾಗತೊಡಗಿದವು. (ಆದಿಕಾಂಡ 1:​1-3, 5) ಆಗಲೂ ಆ ಬೆಳಕಿನ ಮೂಲಗಳು ಮಾತ್ರ ಭೂಮಿಯಿಂದ ಅದೃಶ್ಯವಾಗಿಯೇ ಉಳಿದವು. ಆದರೆ ನಾಲ್ಕನೆಯ ಸೃಷ್ಟಿಕಾರಕ ಕಾಲಾವಧಿಯಲ್ಲಿ ಒಂದು ಗಮನಾರ್ಹ ಬದಲಾವಣೆಯು ಸಂಭವಿಸಿತು. ಆಗ ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳು ‘ಭೂಮಿಯ ಮೇಲೆ ಪ್ರಕಾಶಿಸುವಂತೆ’ ಮಾಡಲ್ಪಟ್ಟವು. (ಆದಿಕಾಂಡ 1:​17, ಪರಿಶುದ್ಧ ಬೈಬಲ್‌ *) ಈಗ ಅವು ಭೂಮಿಯಿಂದ ಕಾಣಸಾಧ್ಯವಾಗುವಂಥ ರೀತಿಯಲ್ಲಿ ‘ದೇವರು ಅವುಗಳನ್ನು ಉಂಟುಮಾಡಿದನು.’

3:​8​—ಯೆಹೋವ ದೇವರು ಆದಾಮನೊಂದಿಗೆ ನೇರವಾಗಿ ಮಾತಾಡಿದನೋ? ದೇವರು ಮಾನವರೊಂದಿಗೆ ಮಾತಾಡಿದಾಗ ಅನೇಕವೇಳೆ ಆತನು ಒಬ್ಬ ದೇವದೂತನ ಮೂಲಕ ಮಾತಾಡಿದನು ಎಂದು ಬೈಬಲ್‌ ತಿಳಿಸುತ್ತದೆ. (ಆದಿಕಾಂಡ 16:7-11; 18:1-3, 22-26; 19:1; ನ್ಯಾಯಸ್ಥಾಪಕರು 2:1-4; 6:11-16, 22; 13:15-22) ದೇವರ ಮುಖ್ಯ ವದನಕನು “ವಾಕ್ಯ” ಎಂದು ಕರೆಯಲಾಗುವ ಆತನ ಏಕಜಾತ ಪುತ್ರನೇ ಆಗಿದ್ದನು. (ಯೋಹಾನ 1:1) ಆದಾಮಹವ್ವರೊಂದಿಗೆ ದೇವರು ಆ “ವಾಕ್ಯ”ವಾದಾತನ ಮೂಲಕವೇ ಮಾತಾಡಿದ್ದಿರುವುದು ಸಂಭವನೀಯ.​—ಆದಿಕಾಂಡ 1:26-28; 2:16; 3:8-13.

3:​17​—ಯಾವ ವಿಧದಲ್ಲಿ ಮತ್ತು ಎಷ್ಟು ಕಾಲದ ವರೆಗೆ ಭೂಮಿಗೆ ಶಾಪವು ಕೊಡಲ್ಪಟ್ಟಿತು? ಭೂಮಿಗೆ ಕೊಡಲ್ಪಟ್ಟ ಶಾಪವು, ಈಗ ಆ ಭೂಮಿಯಲ್ಲಿ ವ್ಯವಸಾಯಮಾಡುವುದು ತುಂಬ ಕಷ್ಟಕರವಾಗಿರುವುದು ಎಂಬುದನ್ನು ಅರ್ಥೈಸಿತು. ಆದಾಮನ ಸಂತತಿಯವರಿಗೆ ಮುಳ್ಳುಗಿಡಗಳು ಮತ್ತು ಕಳೆಗಳಿಂದ ತುಂಬಿರುವ ಶಾಪಗ್ರಸ್ತ ಭೂಮಿಯ ಪರಿಣಾಮಗಳ ಅನುಭವ ಎಷ್ಟರ ಮಟ್ಟಿಗೆ ಆಯಿತೆಂದರೆ, ನೋಹನ ತಂದೆಯಾಗಿದ್ದ ಲೆಮೆಕನು ‘ಯೆಹೋವನು ಶಪಿಸಿದ ಭೂಮಿಯಿಂದ ಉಂಟಾದ ಕೈಕಷ್ಟ ಮತ್ತು ಶ್ರಮೆಯ’ ಕುರಿತಾಗಿ ಮಾತಾಡಿದನು. (ಆದಿಕಾಂಡ 5:29) ಜಲಪ್ರಳಯದ ನಂತರ ಯೆಹೋವನು ನೋಹನನ್ನೂ ಅವನ ಪುತ್ರರನ್ನೂ ಆಶೀರ್ವದಿಸಿ, ಅವರು ಬಹುಸಂತಾನವುಳ್ಳವರಾಗಿ ಹೆಚ್ಚಿ ಭೂಲೋಕದಲ್ಲೆಲ್ಲಾ ತುಂಬಿಕೊಳ್ಳುವುದೇ ತನ್ನ ಉದ್ದೇಶವಾಗಿದೆ ಎಂದು ಹೇಳಿದನು. (ಆದಿಕಾಂಡ 9:1) ದೇವರು ಭೂಮಿಗೆ ಕೊಟ್ಟಿದ್ದ ಶಾಪವು ಹಿಂದೆಗೆದುಕೊಳ್ಳಲ್ಪಟ್ಟಿತು ಎಂಬುದು ಸುವ್ಯಕ್ತ.​—ಆದಿಕಾಂಡ 13:10.

4:​15​—ಹೇಗೆ ಯೆಹೋವನು ‘ಕಾಯಿನನ ಮೇಲೆ ಒಂದು ಗುರುತಿಟ್ಟನು’? ಕಾಯಿನನ ದೇಹದ ಮೇಲೆ ಒಂದು ಸಂಕೇತ ಅಥವಾ ಗುರುತು ಮಾಡಲ್ಪಟ್ಟಿತು ಎಂದು ಬೈಬಲ್‌ ಹೇಳುವುದಿಲ್ಲ. ಇತರರಿಗೆ ಪರಿಚಯವಿದ್ದ ಮತ್ತು ಅವರು ಅನುಸರಿಸುತ್ತಿದ್ದ ಹಾಗೂ ಸೇಡಿನಿಂದ ಅವನು ಕೊಲ್ಲಲ್ಪಡದಂತೆ ತಡೆಯುವ ಉದ್ದೇಶದಿಂದ ಕೂಡಿದ್ದ ಒಂದು ವಿಧಿವತ್ತಾದ ಕಟ್ಟಳೆಯನ್ನು ಆ ಗುರುತು ಒಳಗೂಡಿದ್ದಿರಬಹುದು.

4:​17​—ಕಾಯಿನನಿಗೆ ಹೆಂಡತಿಯು ಎಲ್ಲಿಂದ ಸಿಕ್ಕಿದಳು? ಆದಾಮನು ‘ಗಂಡು ಹೆಣ್ಣು ಮಕ್ಕಳನ್ನು ಪಡೆದನು.’ (ಆದಿಕಾಂಡ 5:4) ಹೀಗೆ ಕಾಯಿನನು ತನ್ನ ತಂಗಿಯರಲ್ಲಿ ಒಬ್ಬರನ್ನು ಅಥವಾ ಬಹುಶಃ ತನ್ನ ಸೋದರ ಸೊಸೆಯರಲ್ಲಿ ಒಬ್ಬಳನ್ನು ಹೆಂಡತಿಯನ್ನಾಗಿ ತೆಗೆದುಕೊಂಡನು. ಸಮಯಾನಂತರ, ದೇವರು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ಧರ್ಮಶಾಸ್ತ್ರವು ಒಡಹುಟ್ಟಿದವರನ್ನು ಮದುವೆಯಾಗುವ ಅನುಮತಿಯನ್ನು ರದ್ದುಪಡಿಸಿತು.​—ಯಾಜಕಕಾಂಡ 18:9.

5:​24​—ಯಾವ ರೀತಿಯಲ್ಲಿ ದೇವರು ‘ಹನೋಕನನ್ನು ಕರೆದುಕೊಂಡನು’? ಹನೋಕನು ಕೊಲ್ಲಲ್ಪಡುವ ಅಪಾಯಕ್ಕೆ ಒಳಗಾಗಿದ್ದನು ಎಂಬುದು ಸುವ್ಯಕ್ತ. ಆದರೆ ಅವನ ವಿರೋಧಿಗಳ ಕೈಗೆ ಸಿಕ್ಕಿ ಕಷ್ಟಾನುಭವಿಸುವಂತೆ ದೇವರು ಅವನನ್ನು ಅನುಮತಿಸಲಿಲ್ಲ. ‘ಹನೋಕನು ಮರಣವನ್ನು ಅನುಭವಿಸದೆ ಒಯ್ಯಲ್ಪಟ್ಟನು’ ಎಂದು ಅಪೊಸ್ತಲ ಪೌಲನು ಬರೆದನು. (ಇಬ್ರಿಯ 11:5) ದೇವರು ಅವನನ್ನು ಸ್ವರ್ಗಕ್ಕೆ ಕರೆದುಕೊಂಡುಹೋದನು ಮತ್ತು ಅಲ್ಲಿ ಅವನು ಬದುಕನ್ನು ಮುಂದುವರಿಸಿದನು ಎಂಬುದು ಇದರ ಅರ್ಥವಲ್ಲ. ಏಕೆಂದರೆ ಸ್ವರ್ಗಕ್ಕೆ ಏರಿಹೋದ ಪ್ರಥಮ ವ್ಯಕ್ತಿ ಯೇಸುವೇ ಆಗಿದ್ದನು. (ಯೋಹಾನ 3:13; ಇಬ್ರಿಯ 6:19, 20) ಹನೋಕನು ‘ಮರಣವನ್ನು ಅನುಭವಿಸದೆ ಒಯ್ಯಲ್ಪಟ್ಟದ್ದು,’ ದೇವರು ಅವನನ್ನು ಒಂದು ಪ್ರವಾದನಾತ್ಮಕ ಭಾವಸಮಾಧಿಯ ಸ್ಥಿತಿಗೆ ತಂದನು ಮತ್ತು ಆ ಸ್ಥಿತಿಯಲ್ಲಿರುವಾಗಲೇ ಅವನ ಜೀವವನ್ನು ಕೊನೆಗೊಳಿಸಿದನು ಎಂಬುದನ್ನು ಅರ್ಥೈಸಬಹುದು. ಅಂಥ ಸನ್ನಿವೇಶಗಳ ಕೆಳಗೆ, ತನ್ನ ವಿರೋಧಿಗಳ ಕೈಗಳಲ್ಲಿ ಹನೋಕನು ಕಷ್ಟಾನುಭವಿಸಲಿಲ್ಲ ಅಥವಾ ‘ಮರಣವನ್ನು ಅನುಭವಿಸಲಿಲ್ಲ.’

6:​6​—ಮನುಷ್ಯರನ್ನು ಸೃಷ್ಟಿಸಿದ್ದಕ್ಕಾಗಿ ಯೆಹೋವನು ‘ದುಃಖಪಟ್ಟನು’ ಎಂದು ಯಾವ ಅರ್ಥದಲ್ಲಿ ಹೇಳಸಾಧ್ಯವಿದೆ? ಇಲ್ಲಿ ‘ದುಃಖಪಟ್ಟನು’ (ಪರಿಶುದ್ಧ ಬೈಬಲ್‌*) ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು, ಮನೋಭಾವದಲ್ಲಿ ಅಥವಾ ಉದ್ದೇಶದಲ್ಲಿ ಉಂಟಾಗುವ ಒಂದು ಬದಲಾವಣೆಯನ್ನು ಸೂಚಿಸುತ್ತದೆ. ಯೆಹೋವನು ಪರಿಪೂರ್ಣನಾಗಿರುವುದರಿಂದ, ಮನುಷ್ಯನನ್ನು ಸೃಷ್ಟಿಸಿದ್ದರಲ್ಲಿ ಆತನು ಯಾವ ತಪ್ಪನ್ನೂ ಮಾಡಲಿಲ್ಲ. ಆದರೆ, ಜಲಪ್ರಳಯಕ್ಕೆ ಮುಂಚಿನ ದುಷ್ಟ ಸಂತತಿಯ ವಿಷಯದಲ್ಲಿ ಆತನ ಮನೋಭಾವವು ಬದಲಾಗಿಹೋಯಿತು. ಜನರ ದುಷ್ಟತನದಿಂದ ದೇವರು ಬೇಸತ್ತುಹೋದ ಕಾರಣ, ಮಾನವರ ಸೃಷ್ಟಿಕರ್ತನ ಮನೋಭಾವದಿಂದ ಅವರನ್ನು ನಾಶಮಾಡುವ ಮನೋಭಾವಕ್ಕೆ ತನ್ನನ್ನು ಬದಲಾಯಿಸಿಕೊಂಡನು. ಆದರೂ ಕೆಲವು ಮಾನವರನ್ನು ಆತನು ಸಂರಕ್ಷಿಸಿದ ವಾಸ್ತವಾಂಶವು, ಯಾರು ದುಷ್ಟರಾಗಿ ಪರಿಣಮಿಸಿದ್ದರೋ ಅವರ ವಿಷಯದಲ್ಲಿ ಮಾತ್ರ ಆತನು ದುಃಖವನ್ನು ವ್ಯಕ್ತಪಡಿಸಿದನು ಎಂಬುದನ್ನು ತೋರಿಸುತ್ತದೆ.​—2 ಪೇತ್ರ 2:​5, 9.

7:​2​—ಶುದ್ಧಪಶುಗಳ ಮತ್ತು ಅಶುದ್ಧಪಶುಗಳ ನಡುವಿನ ಭಿನ್ನತೆಯನ್ನು ಗುರುತಿಸಲಿಕ್ಕಾಗಿ ಯಾವುದನ್ನು ಆಧಾರವಾಗಿ ಉಪಯೋಗಿಸಲಾಯಿತು? ಭಿನ್ನತೆಯನ್ನು ಗುರುತಿಸುವ ಆಧಾರವು, ಆರಾಧನೆಯಲ್ಲಿ ಯಜ್ಞಾರ್ಪಣೆಗಳ ಉಪಯೋಗಕ್ಕೆ ಸೂಚಿತವಾಗಿತ್ತೇ ಹೊರತು ಯಾವುದನ್ನು ತಿನ್ನಸಾಧ್ಯವಿದೆ ಮತ್ತು ಯಾವುದನ್ನು ತಿನ್ನಬಾರದು ಎಂಬುದಕ್ಕಲ್ಲ ಎಂಬುದು ಸುವ್ಯಕ್ತ. ಜಲಪ್ರಳಯಕ್ಕೆ ಮುಂಚೆ ಪ್ರಾಣಿಗಳ ಮಾಂಸವು ಮನುಷ್ಯನ ಆಹಾರದ ಭಾಗವಾಗಿರಲಿಲ್ಲ. ಆಹಾರದ ವಿಷಯದಲ್ಲಿ “ಶುದ್ಧ” ಮತ್ತು “ಅಶುದ್ಧ” ಎಂಬ ವರ್ಣನೆಗಳು ಅಸ್ತಿತ್ವಕ್ಕೆ ಬಂದದ್ದು ಮೋಶೆಯ ಧರ್ಮಶಾಸ್ತ್ರದಲ್ಲಿಯೇ, ಮತ್ತು ಆ ಧರ್ಮಶಾಸ್ತ್ರವು ರದ್ದುಗೊಳಿಸಲ್ಪಟ್ಟಾಗ ಇವುಗಳು ಸಹ ಸಂಪೂರ್ಣವಾಗಿ ಕೊನೆಗೊಂಡವು. (ಅ. ಕೃತ್ಯಗಳು 10:9-16; ಎಫೆಸ 2:15) ಯೆಹೋವನ ಆರಾಧನೆಯಲ್ಲಿ ಯಾವುದು ಯಜ್ಞಕ್ಕೆ ಯೋಗ್ಯವಾಗಿದೆ ಎಂಬುದು ನೋಹನಿಗೆ ಖಂಡಿತವಾಗಿಯೂ ಗೊತ್ತಿತ್ತು. ಏಕೆಂದರೆ ನಾವೆಯಿಂದ ಹೊರಬಂದ ಕೂಡಲೆ ಅವನು “ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಮಾಡಿ ಅದರ ಮೇಲೆ ಶುದ್ಧವಾದ ಎಲ್ಲಾ ಪಶುಪಕ್ಷಿಜಾತಿಗಳಲ್ಲಿ ಸರ್ವಾಂಗಹೋಮ ಮಾಡಿದನು.”​—ಆದಿಕಾಂಡ 8:20.

7:​11​—ಭೂಮಿಯಾದ್ಯಂತ ಪ್ರಳಯವನ್ನು ಉಂಟುಮಾಡುವಷ್ಟು ನೀರು ಎಲ್ಲಿಂದ ಬಂತು? ಎರಡನೆಯ ಸೃಷ್ಟಿಕಾರಕ ಕಾಲಾವಧಿಯಲ್ಲಿ ಅಥವಾ “ದಿನ”ದಲ್ಲಿ ಭೂಮಿಯ ವಾಯುಮಂಡಲದ “ಗುಮಟ”ವು ರೂಪಿಸಲ್ಪಟ್ಟಾಗ, ಗುಮಟದ ‘ಕೆಳಗೂ’ ನೀರುಗಳಿದ್ದವು ಮತ್ತು ಗುಮಟದ ‘ಮೇಲೂ’ ನೀರುಗಳಿದ್ದವು. (ಆದಿಕಾಂಡ 1:​6, 7) “ಕೆಳಗಣ” ನೀರುಗಳೆಂದರೆ ಈಗಾಗಲೇ ಭೂಮಿಯ ಮೇಲಿದ್ದ ನೀರುಗಳಾಗಿದ್ದವು. “ಮೇಲಣ” ನೀರುಗಳು, ಭೂಮಿಯಿಂದ ಅತಿ ಎತ್ತರದಲ್ಲಿ ಭಾರಿ ಪ್ರಮಾಣಗಳಲ್ಲಿ ತೇಲಾಡುತ್ತಿರುವ ತೇವಾಂಶವನ್ನು ಒಳಗೂಡಿದ್ದು, ಅಪಾರ ಜಲರಾಶಿಯಿಂದ ಕೂಡಿದ “ಸೆಲೆ”ಗಳಾಗಿದ್ದವು. ನೋಹನ ದಿನದಲ್ಲಿ ಈ ನೀರುಗಳು ಭೂಮಿಯ ಮೇಲೆ ಮಳೆಯ ರೂಪದಲ್ಲಿ ಸುರಿಸಲ್ಪಟ್ಟವು.

ನಮಗಾಗಿರುವ ಪಾಠಗಳು:

1:26. ಮಾನವರು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿರುವುದರಿಂದ, ದೇವರ ಗುಣಗಳನ್ನು ಪ್ರತಿಫಲಿಸುವ ಸಾಮರ್ಥ್ಯ ಅವರಿಗಿದೆ. ನಮ್ಮನ್ನು ಉಂಟುಮಾಡಿದಾತನನ್ನು ಪ್ರತಿಬಿಂಬಿಸುತ್ತಾ, ಖಂಡಿತವಾಗಿಯೂ ನಾವು ಪ್ರೀತಿ, ಕರುಣೆ, ದಯೆ, ಒಳ್ಳೇತನ ಮತ್ತು ತಾಳ್ಮೆಯಂಥ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು.

2:​22-24. ವಿವಾಹವು ದೇವರ ಏರ್ಪಾಡಾಗಿದೆ. ವಿವಾಹ ಬಂಧವು ಶಾಶ್ವತವಾಗಿ ಬಾಳುವಂಥದ್ದಾಗಿದೆ ಮತ್ತು ಪವಿತ್ರವಾದದ್ದಾಗಿದೆ; ಗಂಡನು ಕುಟುಂಬದ ಶಿರಸ್ಸಾಗಿ ಕಾರ್ಯನಡಿಸುತ್ತಾನೆ.

3:​1-5, 16-23. ನಮ್ಮ ವೈಯಕ್ತಿಕ ಜೀವನದಲ್ಲಿ ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸುವುದರ ಮೇಲೆ ಸಂತೋಷವು ಅವಲಂಬಿಸಿದೆ.

3:​18, 19; 5:5; 6:7; 7:23. ಯೆಹೋವನ ಮಾತು ಯಾವಾಗಲೂ ಸತ್ಯವಾಗುತ್ತದೆ.

4:​3-7. ಹೇಬೆಲನು ನಂಬಿಗಸ್ತನಾಗಿದ್ದ ನೀತಿವಂತ ಮನುಷ್ಯನಾಗಿದ್ದರಿಂದ ಯೆಹೋವನು ಅವನ ಕಾಣಿಕೆಯನ್ನು ಅಂಗೀಕರಿಸಿದನು. (ಇಬ್ರಿಯ 11:4) ಇನ್ನೊಂದು ಕಡೆಯಲ್ಲಾದರೋ, ಕಾಯಿನನ ಕೃತ್ಯಗಳೇ ಸೂಚಿಸಿದಂತೆ ಅವನಲ್ಲಿ ನಂಬಿಕೆಯ ಕೊರತೆಯಿತ್ತು. ಅವನ ಕೃತ್ಯಗಳು ಕೆಟ್ಟವುಗಳಾಗಿದ್ದು, ಅವು ಅಸೂಯೆ, ದ್ವೇಷ ಮತ್ತು ಕೊಲೆಯಿಂದ ಗುರುತಿಸಲ್ಪಟ್ಟಿದ್ದವು. (1 ಯೋಹಾನ 3:12) ಅಷ್ಟುಮಾತ್ರವಲ್ಲ, ಅವನು ತಾನು ಅರ್ಪಿಸಲಿದ್ದ ಯಜ್ಞದ ಕುರಿತು ಸ್ವಲ್ಪವೂ ಪರಿಗಣನೆ ತೋರಿಸಲಿಲ್ಲ ಮತ್ತು ಕಾಟಾಚಾರಕ್ಕಾಗಿ ಅದನ್ನು ಮಾಡಿಮುಗಿಸಿದನು. ಹೀಗಿರುವುದರಿಂದ, ಯೆಹೋವನಿಗೆ ನಾವು ಸಲ್ಲಿಸುವ ಸ್ತುತಿಯಜ್ಞಗಳು ಮನಃಪೂರ್ವಕವಾದವುಗಳೂ ಯೋಗ್ಯವಾದ ಮನೋಭಾವ ಮತ್ತು ಸರಿಯಾದ ನಡತೆಯೊಂದಿಗೆ ಜೊತೆಗೂಡಿದವುಗಳೂ ಆಗಿರಬಾರದೋ?

6:22. ನಾವೆಯನ್ನು ಕಟ್ಟಲು ಅನೇಕ ವರ್ಷಗಳು ಹಿಡಿದವಾದರೂ, ನೋಹನು ದೇವರು ಆಜ್ಞಾಪಿಸಿದಂತೆಯೇ ಮಾಡಿದನು. ಆದುದರಿಂದ, ನೋಹನೂ ಅವನ ಕುಟುಂಬವೂ ಜಲಪ್ರಳಯದಿಂದ ಸಂರಕ್ಷಿಸಲ್ಪಟ್ಟಿತು. ಈಗ ಯೆಹೋವನು ತನ್ನ ಲಿಖಿತ ವಾಕ್ಯದ ಮೂಲಕ ನಮ್ಮೊಂದಿಗೆ ಮಾತಾಡುತ್ತಾನೆ ಮತ್ತು ತನ್ನ ಸಂಸ್ಥೆಯ ಮೂಲಕ ಮಾರ್ಗದರ್ಶನವನ್ನು ನೀಡುತ್ತಾನೆ. ಅದಕ್ಕೆ ಕಿವಿಗೊಡುವುದು ಮತ್ತು ವಿಧೇಯರಾಗುವುದು ನಮಗೆ ಪ್ರಯೋಜನದಾಯಕವಾಗಿದೆ.

7:​21-24. ಯೆಹೋವನು ದುಷ್ಟರೊಂದಿಗೆ ನೀತಿವಂತರನ್ನೂ ನಾಶಮಾಡುವುದಿಲ್ಲ.

ಮಾನವಕುಲವು ಒಂದು ಹೊಸ ಯುಗವನ್ನು ಪ್ರವೇಶಿಸುತ್ತದೆ

(ಆದಿಕಾಂಡ 8:​1–11:9)

ಜಲಪ್ರಳಯಕ್ಕೆ ಮುಂಚಿನ ಲೋಕವು ಗತಿಸಿಹೋದ ಬಳಿಕ ಮಾನವಕುಲವು ಒಂದು ಹೊಸ ಯುಗವನ್ನು ಪ್ರವೇಶಿಸಿತು. ಈಗ ಮಾನವರಿಗೆ ಮಾಂಸವನ್ನು ತಿನ್ನುವ ಅನುಮತಿಯು ದೊರಕಿತಾದರೂ ರಕ್ತವನ್ನು ಮಾತ್ರ ವಿಸರ್ಜಿಸಬೇಕು ಎಂಬ ಆಜ್ಞೆಯು ಕೊಡಲ್ಪಟ್ಟಿತು. ಕೊಲೆಮಾಡುವುದಕ್ಕೆ ಶಿಕ್ಷೆಯಾಗಿ ಯೆಹೋವನು ಮರಣದಂಡನೆಯನ್ನು ವಿಧಿಸಿದನು ಮತ್ತು ಇನ್ನೆಂದಿಗೂ ಪ್ರಳಯವನ್ನು ಬರಮಾಡುವುದಿಲ್ಲ ಎಂಬುದನ್ನು ವಾಗ್ದಾನಿಸಲಿಕ್ಕಾಗಿ ಆತನು ಮುಗಿಲುಬಿಲ್ಲಿನ ಒಡಂಬಡಿಕೆಯನ್ನು ಸ್ಥಾಪಿಸಿದನು. ನೋಹನ ಮೂವರು ಗಂಡುಮಕ್ಕಳು ಇಡೀ ಮಾನವಕುಲದ ಮೂಲಜನಕರಾದರು, ಆದರೆ ಅವನ ಮರಿಮಗನಾದ ನಿಮ್ರೋದನು ಮಾತ್ರ ಯೆಹೋವನಿಗೆ ವಿರುದ್ಧವಾಗಿ “ಅತಿ ಸಾಹಸಿಯಾದ ಬೇಟೆಗಾರ”ನಾದನು. ಭೂಮಿಯನ್ನು ಜನರಿಂದ ತುಂಬಿಸಲಿಕ್ಕಾಗಿ ಎಲ್ಲಾ ಕಡೆಗಳಲ್ಲಿ ಚದರುವುದಕ್ಕೆ ಬದಲಾಗಿ, ಸ್ವತಃ ತಮಗೋಸ್ಕರ ದೊಡ್ಡ ಹೆಸರನ್ನು ಪಡೆಯಲಿಕ್ಕಾಗಿ ಜನರು ಬಾಬೆಲ್‌ ಎಂಬ ಪಟ್ಟಣವನ್ನು ಮತ್ತು ಒಂದು ಗೋಪುರವನ್ನು ಕಟ್ಟಲು ನಿರ್ಧರಿಸಿದರು. ಆದರೆ ಯೆಹೋವನು ಅವರ ಭಾಷೆಯನ್ನು ತಾರುಮಾರುಮಾಡಿ ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿದಾಗ, ಅವರ ಉದ್ದೇಶಗಳು ಸಂಪೂರ್ಣವಾಗಿ ಭಂಗಗೊಳಿಸಲ್ಪಟ್ಟವು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

8:​11​—ಜಲಪ್ರಳಯದಲ್ಲಿ ಮರಗಳು ಪೂರ್ಣವಾಗಿ ನಾಶಗೊಂಡಿರುವುದಾದರೆ, ಆ ಪಾರಿವಾಳಕ್ಕೆ ಎಣ್ಣೇಮರದ ಎಲೆಯು ಎಲ್ಲಿಂದ ಸಿಕ್ಕಿತು? ಎರಡು ಸಾಧ್ಯತೆಗಳಿವೆ. ಎಣ್ಣೇಮರವು ತುಂಬ ಗಡುಸಾದ ಮರವಾಗಿರುವುದರಿಂದ, ಪ್ರಳಯದ ಸಮಯದಲ್ಲಿ ಕೆಲವು ತಿಂಗಳುಗಳ ವರೆಗೆ ನೀರಿನ ಕೆಳಗೆ ಸಜೀವವಾಗಿಯೇ ಉಳಿದಿದ್ದಿರಬಹುದು. ಪ್ರಳಯದ ನೀರು ತಗ್ಗಿದ ಬಳಿಕ, ಇಷ್ಟರ ತನಕ ನೀರಿನಲ್ಲಿ ಮುಳುಗಿಹೋಗಿದ್ದ ಒಂದು ಎಣ್ಣೇಮರವು ಪುನಃ ಒಣನೆಲದ ಮೇಲೆ ಕಂಡುಬಂದು ಎಲೆಗಳನ್ನು ಬಿಡಸಾಧ್ಯವಿತ್ತು. ನೋಹನ ಬಳಿಗೆ ಆ ಪಾರಿವಾಳವು ಕೊಂಡೊಯ್ದ ಎಣ್ಣೇಮರದ ಎಲೆಯು, ಪ್ರಳಯದ ನೀರು ತಗ್ಗಿದ ಬಳಿಕ ಬೆಳೆದಂಥ ಎಳೆಯ ಚಿಗುರಿನಿಂದಲೇ ಕಿತ್ತುತಂದದ್ದಾಗಿದ್ದಿರಸಾಧ್ಯವಿದೆ.

9:​20-25​—ನೋಹನು ಕಾನಾನನಿಗೆ ಶಾಪ ನೀಡಿದ್ದೇಕೆ? ತನ್ನ ಅಜ್ಜನಾಗಿದ್ದ ನೋಹನ ವಿರುದ್ಧ ಕಾನಾನನು ವಿಕೃತ ಕಾಮಾಸಕ್ತಿಯನ್ನು ತೋರಿಸಿದ್ದರ ವಿಷಯದಲ್ಲಿ ದೋಷಿಯಾಗಿದ್ದಿರುವ ಸಂಭವನೀಯತೆ ಇದೆ. ಕಾನಾನನ ತಂದೆಯಾಗಿದ್ದ ಹಾಮನು ಇದನ್ನು ಕಣ್ಣಾರೆ ಕಂಡನಾದರೂ ಅವನು ಮಗನ ಕೃತ್ಯವನ್ನು ತಡೆಯಲು ಪ್ರಯತ್ನಿಸಲಿಲ್ಲ, ಅದಕ್ಕೆ ಬದಲಾಗಿ ಈ ತಪ್ಪು ಕೃತ್ಯದ ಬಗ್ಗೆ ಗಾಳಿಮಾತನ್ನು ಹಬ್ಬಿಸಿರುವಂತೆ ತೋರುತ್ತದೆ. ಆದರೂ, ನೋಹನ ಬೇರೆ ಇಬ್ಬರು ಪುತ್ರರಾಗಿದ್ದ ಶೇಮ್‌ ಮತ್ತು ಯೆಫೆತರು ತಮ್ಮ ತಂದೆಗೆ ಹೊದಿಕೆಯನ್ನು ಹೊದಿಸುವ ಮೂಲಕ ಅವನ ಮಾನವನ್ನು ಕಾಪಾಡಿದರು. ಈ ಕಾರಣದಿಂದಲೇ ಅವರು ಆಶೀರ್ವದಿಸಲ್ಪಟ್ಟರು, ಆದರೆ ಕಾನಾನನು ಶಪಿಸಲ್ಪಟ್ಟನು ಮತ್ತು ತನ್ನ ಸಂತತಿಯ ಮೇಲೆ ಬರಮಾಡಲ್ಪಟ್ಟ ಲಜ್ಜಾಸ್ಪದ ಸಂಗತಿಯ ಫಲಿತಾಂಶವಾಗಿ ಹಾಮನು ಕಷ್ಟಾನುಭವಿಸಿದನು.

10:​25​—ಪೆಲೆಗನ ದಿನಗಳಲ್ಲಿ ಭೂಮಿಯು ಹೇಗೆ ‘ವಿಂಗಡವಾಯಿತು’? ಪೆಲೆಗನು ಸಾ.ಶ.ಪೂ. 2269ರಿಂದ 2030ರ ತನಕ ಬದುಕಿದ್ದನು. “ಅವನ ಕಾಲದಲ್ಲಿ” ಯೆಹೋವನು ಬಾಬೆಲನ್ನು ಕಟ್ಟುತ್ತಿದ್ದ ಜನರ ಭಾಷೆಯನ್ನು ತಾರುಮಾರುಮಾಡಿ, ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸುವ ಮೂಲಕ ಒಂದು ದೊಡ್ಡ ವಿಂಗಡವನ್ನು ಮಾಡಿದನು. (ಆದಿಕಾಂಡ 11:9) ಹೀಗೆ, ಪೆಲೆಗನ ಕಾಲದಲ್ಲಿ “ಭೂಮಿಯ ಜನಗಳು ವಿಂಗಡವಾದವು.”

ನಮಗಾಗಿರುವ ಪಾಠಗಳು:

9:1; 11:9. ಮಾನವರ ಯಾವುದೇ ಒಳಸಂಚು ಅಥವಾ ಪ್ರಯತ್ನವು ಯೆಹೋವನ ಉದ್ದೇಶವನ್ನು ಭಂಗಗೊಳಿಸಲಾರದು.

10:​1-32. ಜಲಪ್ರಳಯಕ್ಕೆ ಮುಂಚಿನ ಹಾಗೂ ನಂತರದ ವಂಶಾವಳಿಯ ಎರಡು ದಾಖಲೆಗಳು​—5 ಮತ್ತು 10ನೆಯ ಅಧ್ಯಾಯಗಳು​—ನೋಹನ ಮೂವರು ಪುತ್ರರ ಮೂಲಕ ಪ್ರಥಮ ಮನುಷ್ಯನಾಗಿದ್ದ ಆದಾಮನೊಂದಿಗೆ ಇಡೀ ಮಾನವಕುಲಕ್ಕಿರುವ ಸಂಬಂಧವನ್ನು ಸೂಚಿಸುತ್ತವೆ. ಅಶ್ಶೂರ್ಯರು, ಕಸ್ದೀಯರು, ಇಬ್ರಿಯರು, ಅರಾಮ್ಯರು ಮತ್ತು ಅರೇಬಿಯದ ಕೆಲವು ಬುಡಕಟ್ಟುಗಳವರು ಶೇಮನ ಸಂತಾನದವರಾಗಿದ್ದಾರೆ. ಕೂಷ್ಯರು, ಐಗುಪ್ತ್ಯರು, ಕಾನಾನ್ಯರು ಮತ್ತು ಆಫ್ರಿಕದ ಹಾಗೂ ಅರೇಬಿಯದ ಕೆಲವು ಬುಡಕಟ್ಟುಗಳವರು ಹಾಮನ ವಂಶಜರಾಗಿದ್ದಾರೆ. ಇಂಡೋ-ಯುರೋಪಿಯನ್ನರು ಯೆಫೆತನ ವಂಶದವರಾಗಿದ್ದಾರೆ. ಎಲ್ಲಾ ಮಾನವರು ಸಂಬಂಧಿಕರಾಗಿದ್ದಾರೆ, ಮತ್ತು ಎಲ್ಲರೂ ದೇವರ ಮುಂದೆ ಸಮಾನ ರೀತಿಯಲ್ಲಿ ಜನಿಸಿದವರಾಗಿದ್ದಾರೆ. (ಅ. ಕೃತ್ಯಗಳು 17:26) ಈ ಸತ್ಯವು, ನಾವು ಇತರರನ್ನು ಹೇಗೆ ಪರಿಗಣಿಸುತ್ತೇವೆ ಹಾಗೂ ಅವರನ್ನು ಹೇಗೆ ಉಪಚರಿಸುತ್ತೇವೆ ಎಂಬುದರ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ.

ದೇವರ ವಾಕ್ಯವು ಕಾರ್ಯಸಾಧಕವಾಗಿರಬಲ್ಲದು

ಆದಿಕಾಂಡ ಪುಸ್ತಕದ ಮೊದಲ ಭಾಗದಲ್ಲಿ, ಆರಂಭದ ಮಾನವ ಇತಿಹಾಸದ ಏಕಮಾತ್ರ ನಿಷ್ಕೃಷ್ಟ ದಾಖಲೆಯು ಒಳಗೂಡಿಸಲ್ಪಟ್ಟಿದೆ. ಈ ಪುಟಗಳಲ್ಲಿ ನಾವು, ಭೂಮಿಯ ಮೇಲೆ ಮಾನವರನ್ನು ಇರಿಸಿದ್ದರ ಹಿಂದಿರುವ ದೇವರ ಉದ್ದೇಶದ ಕುರಿತಾದ ಒಳನೋಟವನ್ನು ಪಡೆದುಕೊಳ್ಳುತ್ತೇವೆ. ನಿಮ್ರೋದನಂಥ ಯಾವುದೇ ಮಾನವ ಪ್ರಯತ್ನಗಳು ದೇವರ ಉದ್ದೇಶವು ಪೂರ್ಣವಾಗಿ ನೆರವೇರುವುದನ್ನು ತಡೆಗಟ್ಟಲಾರವು ಎಂಬುದನ್ನು ನೋಡುವುದು ಎಷ್ಟು ಪುನರಾಶ್ವಾಸನೆದಾಯಕವಾಗಿದೆ!

ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿರುವ ಸಿದ್ಧತೆಯಲ್ಲಿ ನೀವು ಸಾಪ್ತಾಹಿಕ ಬೈಬಲ್‌ ವಾಚನವನ್ನು ಮಾಡುವಾಗ, “ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು” ಎಂಬ ವಿಭಾಗದ ಕೆಳಗೆ ಏನು ತಿಳಿಸಲ್ಪಟ್ಟಿದೆಯೋ ಅದನ್ನು ಪರಿಗಣಿಸುವುದು, ತುಂಬ ಕಷ್ಟಕರವಾಗಿರುವ ಶಾಸ್ತ್ರೀಯ ಭಾಗಗಳಲ್ಲಿ ಕೆಲವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯಮಾಡುವವು. “ನಮಗಾಗಿರುವ ಪಾಠಗಳು” ಎಂಬ ಮೇಲ್ಬರಹದ ಕೆಳಗೆ ಕೊಡಲ್ಪಟ್ಟಿರುವ ಹೇಳಿಕೆಗಳು, ಆಯಾ ವಾರಕ್ಕಾಗಿರುವ ಬೈಬಲ್‌ ವಾಚನದಿಂದ ನೀವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ತೋರಿಸುವವು. ಸೂಕ್ತವಾಗಿರುವಾಗ ಇವು ಸೇವಾ ಕೂಟದಲ್ಲಿನ ಸ್ಥಳಿಕ ಆವಶ್ಯಕತೆಗಳ ಭಾಗಕ್ಕೂ ಆಧಾರವನ್ನು ಒದಗಿಸಬಲ್ಲವು. ಖಂಡಿತವಾಗಿಯೂ ಯೆಹೋವನ ವಾಕ್ಯವು ಸಜೀವವಾಗಿದೆ ಮತ್ತು ನಮ್ಮ ಜೀವಿತಗಳಲ್ಲಿ ತುಂಬ ಕಾರ್ಯಸಾಧಕವಾಗಿರಬಲ್ಲದು.​—ಇಬ್ರಿಯ 4:12.

[ಪಾದಟಿಪ್ಪಣಿ]

^ ಪ್ಯಾರ. 10 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.