ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆ್ಯನಬ್ಯಾಪ್ಟಿಸ್ಟರು ಯಾರಾಗಿದ್ದರು?

ಆ್ಯನಬ್ಯಾಪ್ಟಿಸ್ಟರು ಯಾರಾಗಿದ್ದರು?

ಆ್ಯನಬ್ಯಾಪ್ಟಿಸ್ಟರು ಯಾರಾಗಿದ್ದರು?

ಜರ್ಮನಿಯ ವೆಸ್ಟ್‌ಫೇಲ್ಯದಲ್ಲಿರುವ ಮೂನ್‌ಸ್ಟರ್‌ ನಗರದ ಕೇಂದ್ರಭಾಗವನ್ನು ಮೊದಲಬಾರಿ ಭೇಟಿ ನೀಡುವವರು, ಅಲ್ಲಿನ ಒಂದು ಚರ್ಚ್‌ ಗೋಪುರಕ್ಕೆ ತೂಗುಹಾಕಲ್ಪಟ್ಟಿರುವ ಕಬ್ಬಿಣದ ಮೂರು ಪಂಜರಗಳನ್ನು ಖಂಡಿತವಾಗಿಯೂ ಎವೆಯಿಕ್ಕದೆ ನೋಡುತ್ತಾ ನಿಂತುಬಿಡುತ್ತಾರೆ. ಈ ಪಂಜರಗಳು, ಮಧ್ಯೆ ಕೆಲವು ಸಮಯಾವಧಿಗಳನ್ನು ಬಿಟ್ಟು ಬೇರೆಲ್ಲಾ ಸಮಯಗಳಲ್ಲಿ, ಅಂದರೆ ಸುಮಾರು 500 ವರುಷಗಳಿಂದ ಅಲ್ಲಿ ತೂಗುಹಾಕಲ್ಪಟ್ಟಿವೆ. ಆರಂಭದಲ್ಲಿ ಅವುಗಳಲ್ಲಿ ಬಹಿರಂಗವಾಗಿ ಚಿತ್ರಹಿಂಸೆಗೊಳಪಡಿಸಿ ಕೊಲ್ಲಲ್ಪಟ್ಟ ಮೂವರು ಪುರುಷರ ದೇಹಗಳಿದ್ದವು. ಆ ಪುರುಷರು ಆ್ಯನಬ್ಯಾಪ್ಟಿಸ್ಟರಾಗಿದ್ದರು, ಮತ್ತು ಆ ಪಂಜರಗಳು ಅವರ ರಾಜ್ಯದ ಅವಶೇಷಗಳಾಗಿವೆ.

ಆ್ಯನಬ್ಯಾಪ್ಟಿಸ್ಟರು ಯಾರಾಗಿದ್ದರು? ಈ ಗುಂಪು ಆರಂಭಗೊಂಡದ್ದಾದರೂ ಹೇಗೆ? ಅದರ ಮುಖ್ಯ ಬೋಧನೆಗಳಾವುವು? ಆ ಪುರುಷರು ಏಕೆ ಕೊಲ್ಲಲ್ಪಟ್ಟರು? ಮತ್ತು ಆ ಮೂರು ಪಂಜರಗಳಿಗೂ ರಾಜ್ಯಕ್ಕೂ ಯಾವ ಸಂಬಂಧವಿದೆ?

ಚರ್ಚ್‌ ಸುಧಾರಣೆ​—⁠ಆದರೆ ಹೇಗೆ?

ಹದಿನೈದನೆಯ ಶತಮಾನದ ಅಂತ್ಯದಲ್ಲಿ ಮತ್ತು ಹದಿನಾರನೆಯ ಶತಮಾನದ ಆರಂಭದಲ್ಲಿ, ರೋಮನ್‌ ಕ್ಯಾಥೊಲಿಕ್‌ ಚರ್ಚ್‌ ಮತ್ತು ಅದರ ಪಾದ್ರಿವರ್ಗದ ವಿರುದ್ಧ ಟೀಕೆಯು ಹೆಚ್ಚಾಗುತ್ತಾ ಬಂತು. ಭ್ರಷ್ಟಾಚಾರ ಮತ್ತು ಅನೈತಿಕತೆಯು ಚರ್ಚಿನ ಪ್ರತಿಯೊಂದು ಭಾಗದ ಒಳಹೊಕ್ಕಿತ್ತು; ಆದುದರಿಂದ ಬೃಹತ್ತಾದ ಬದಲಾವಣೆಗಳು ಅಗತ್ಯವೆಂದು ಅನೇಕರಿಗೆ ಅನಿಸಿತು. 1517ರಲ್ಲಿ, ಸುಧಾರಣೆಗಾಗಿ ಮಾರ್ಟಿನ್‌ ಲೂತರ್‌ ಬಹಿರಂಗವಾಗಿ ತಗಾದೆಮಾಡಿದರು, ಮತ್ತು ಈ ವಾದದಲ್ಲಿ ಅವರೊಂದಿಗೆ ಇತರರೂ ಸೇರಿಕೊಂಡದ್ದರಿಂದ, ಪ್ರಾಟೆಸ್ಟೆಂಟ್‌ ಮತಸುಧಾರಣೆಯು ಬೇಗನೆ ಆರಂಭಗೊಂಡಿತು.

ಆದರೆ ಈ ಸುಧಾರಣೆಗಾರರ ಮಧ್ಯೆ, ಏನು ಮಾಡಬೇಕು ಅಥವಾ ಎಷ್ಟರ ಮಟ್ಟಿಗೆ ಬದಲಾವಣೆಗಳನ್ನು ಮಾಡಬೇಕು ಎಂಬ ವಿಷಯದಲ್ಲಿ ಏಕರೀತಿಯ ಯೋಜನೆಗಳಿರಲಿಲ್ಲ. ಆರಾಧನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಬೈಬಲಿಗೆ ಅಂಟಿಕೊಳ್ಳುವ ಅಗತ್ಯವಿದೆ ಎಂಬುದನ್ನು ಅನೇಕರು ಗ್ರಹಿಸಿದರು. ಆದರೆ, ಬೈಬಲ್‌ ಬೋಧನೆಗಳ ಒಂದೇ ಅರ್ಥವಿವರಣೆಯನ್ನು ಹೊಂದುವುದರ ಬಗ್ಗೆಯೂ ಈ ಸುಧಾರಣೆಗಾರರ ನಡುವೆ ಒಮ್ಮತವಿರಲಿಲ್ಲ. ಕೆಲವರಾದರೋ ಈ ಮತಸುಧಾರಣೆಯು ತೀರಾ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಭಾವಿಸಿದರು. ಮತ್ತು ಇಂಥ ಸುಧಾರಣೆಗಾರರ ಮಧ್ಯೆ ಆ್ಯನಬ್ಯಾಪ್ಟಿಸ್ಟ್‌ ಎಂಬ ಗುಂಪು ಸ್ಥಾಪನೆಗೊಂಡಿತು.

“ನಿಜವಾಗಿಯೂ ಹೇಳಬೇಕಾದರೆ, ಅವರ ಮಧ್ಯೆ ಕೇವಲ ಒಂದು ಬ್ಯಾಪ್ಟಿಸ್ಟ್‌ ಪಂಗಡವಲ್ಲ, ಹಲವು ಪಂಗಡಗಳಿದ್ದವು,” ಎಂದು ಹಾನ್ಸ್‌ ಗೋರ್ಟ್ಸ್‌ ಎಂಬವರು ತಮ್ಮ ಡೀ ಟಯಿಫ ಗೆಶಿಕ್ಟ ಉಂಟ್‌ ಡೈಟುಂಗ್‌ ಎಂಬ ಪುಸ್ತಕದಲ್ಲಿ ಬರೆದರು. ಉದಾಹರಣೆಗೆ, 1521ರಲ್ಲಿ ಸಿಕ್ವಾವ್‌ವಿನ ಪ್ರವಾದಿಗಳೆಂದು ಪ್ರಸಿದ್ಧರಾದ ನಾಲ್ಕು ಮಂದಿ ಪುರುಷರು ಆ್ಯನಬ್ಯಾಪ್ಟಿಸ್ಟ್‌ ಬೋಧನೆಗಳನ್ನು ವಿಟೆನ್‌ಬರ್ಗ್‌ನಲ್ಲಿ ಪ್ರಚಾರಮಾಡುವ ಮೂಲಕ ಅಲ್ಲಿ ಕೋಲಾಹಲವನ್ನೆಬ್ಬಿಸಿದರು. ಮುಂದಕ್ಕೆ 1525ರಲ್ಲಿ, ಆ್ಯನಬ್ಯಾಪ್ಟಿಸ್ಟರ ಇನ್ನೊಂದು ಪ್ರತ್ಯೇಕ ಗುಂಪು ಸ್ವಿಟ್ಸರ್ಲೆಂಡ್‌ನ ಸ್ಯೂರಿಕ್‌ನಲ್ಲಿ ಸ್ಥಾಪಿಸಲ್ಪಟ್ಟಿತು. ಮೊರಾವಿಯ​—⁠ಈಗ ಚೆಕ್‌ ರಿಪಬ್ಲಿಕ್‌​—⁠ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಸಹ ಆ್ಯನಬ್ಯಾಪ್ಟಿಸ್ಟ್‌ ಸಮುದಾಯಗಳು ಹುಟ್ಟಿಕೊಂಡವು.

ದೀಕ್ಷಾಸ್ನಾನ​—⁠ಮಕ್ಕಳಿಗೊ ವಯಸ್ಕರಿಗೊ?

ಹೆಚ್ಚಿನ ಆ್ಯನಬ್ಯಾಪ್ಟಿಸ್ಟ್‌ ಸಮುದಾಯಗಳು ಚಿಕ್ಕದ್ದಾಗಿದ್ದವು, ಮತ್ತು ಅದರ ಸದಸ್ಯರು ಸಾಮಾನ್ಯವಾಗಿ ಶಾಂತಿಶೀಲರಾಗಿದ್ದರು. ಅದರ ಅನುಯಾಯಿಗಳು ತಮ್ಮ ನಂಬಿಕೆಗಳನ್ನು ಗುಪ್ತವಾಗಿಡುತ್ತಿರಲಿಲ್ಲ; ವಾಸ್ತವದಲ್ಲಿ ಅವರದನ್ನು ಇತರರಿಗೆ ಸಾರುತ್ತಿದ್ದರು. ಆ್ಯನಬ್ಯಾಪ್ಟಿಸ್ಟ್‌ ಧರ್ಮದ ಮೂಲ ನಂಬಿಕೆಗಳ ಕುರಿತು 1527ರಲ್ಲಿನ ಶೆಲೀಟ್‌ಹೈಮ್‌ನ ಪ್ರಕಟಣೆಗಳಲ್ಲಿ ವಿವರಿಸಲಾಗಿದೆ. ಆ ಮೂಲ ನಂಬಿಕೆಗಳ ಜೊತೆಯಲ್ಲಿ ಅವರು ಆಯುಧಗಳನ್ನು ಹಿಡಿಯಲು ನಿರಾಕರಿಸುತ್ತಿದ್ದರು, ತಮ್ಮನ್ನು ಲೋಕದಿಂದ ಪ್ರತ್ಯೇಕವಾಗಿಟ್ಟುಕೊಂಡರು, ಮತ್ತು ತಪ್ಪುಮಾಡಿದವರನ್ನು ಬಹಿಷ್ಕರಿಸುತ್ತಿದ್ದರು. ಆದರೆ ಆ್ಯನಬ್ಯಾಪ್ಟಿಸ್ಟ್‌ ಧರ್ಮದ ಅತ್ಯಂತ ಎದ್ದುಕಾಣುವ ವೈಶಿಷ್ಟ್ಯ ಮತ್ತು ಅದನ್ನು ಇತರ ಧರ್ಮಗಳಿಂದ ಪ್ರತ್ಯೇಕಿಸುತ್ತಿದ್ದ ವಿಷಯವು, ದೀಕ್ಷಾಸ್ನಾನವನ್ನು ಶಿಶುಗಳಿಗೆ ಮಾಡಿಸಬಾರದು, ಬದಲಾಗಿ ವಯಸ್ಕರಿಗೆ ಮಾತ್ರ ಮಾಡಿಸಬೇಕು ಎಂಬ ದೃಢವಾದ ನಿಲುವೇ ಆಗಿತ್ತು. *

ವಯಸ್ಕರ ದೀಕ್ಷಾಸ್ನಾನವು ಕೇವಲ ಒಂದು ಧಾರ್ಮಿಕ ಸಿದ್ಧಾಂತದ ಕುರಿತಾದ ವಿವಾದಾಂಶವಾಗಿರಲಿಲ್ಲ; ಅದು ಅಧಿಕಾರಕ್ಕೆ ಸಂಬಂಧಿಸಿದ ಒಂದು ವಿವಾದಾಂಶವೂ ಆಗಿತ್ತು. ಹೇಗೆಂದರೆ, ವಯಸ್ಕರಾಗುವ ತನಕ ದೀಕ್ಷಾಸ್ನಾನವನ್ನು ಮುಂದೂಡುವುದಾದರೆ​—⁠ಈ ಮೂಲಕ ವ್ಯಕ್ತಿಯು ತನ್ನ ನಂಬಿಕೆಯ ಮೇಲಾಧಾರಿತ ನಿರ್ಣಯವನ್ನು ಮಾಡಲು ಸಾಧ್ಯವಾಗುತ್ತದೆ​—⁠ಕೆಲವರು ದೀಕ್ಷಾಸ್ನಾನವಾಗದೆಯೇ ಉಳಿಯಬಹುದು. ಮತ್ತು ಯಾವ ವ್ಯಕ್ತಿ ದೀಕ್ಷಾಸ್ನಾನವಾಗದೆಯೇ ಉಳಿಯುತ್ತಾನೊ ಅವನು ಕಡಿಮೆಪಕ್ಷ ಸ್ವಲ್ಪಮಟ್ಟಿಗಾದರೂ ಚರ್ಚಿನ ಅಧಿಕಾರದ ಕೆಳಗೆ ಬರುವುದಿಲ್ಲ. ಆದುದರಿಂದ, ಕೆಲವು ಚರ್ಚ್‌ಗಳಿಗೆ ವಯಸ್ಕರ ದೀಕ್ಷಾಸ್ನಾನವು ಅಧಿಕಾರವನ್ನು ಕಳೆದುಕೊಳ್ಳುವುದರ ಅರ್ಥದಲ್ಲಿತ್ತು.

ಈ ಕಾರಣದಿಂದ, ಕ್ಯಾಥೊಲಿಕರು ಮತ್ತು ಲೂತರನ ಅನುಯಾಯಿಗಳು ವಯಸ್ಕರ ದೀಕ್ಷಾಸ್ನಾನದ ಪದ್ಧತಿಯನ್ನು ನಿಲ್ಲಿಸಲು ಬಯಸುತ್ತಿದ್ದರು. 1529ರ ನಂತರ, ಕಡಿಮೆಪಕ್ಷ ಕೆಲವು ಸ್ಥಳಗಳಲ್ಲಿ, ಯಾರು ವಯಸ್ಕರ ದೀಕ್ಷಾಸ್ನಾನವನ್ನು ಮಾಡಿಸುತ್ತಿದ್ದರೋ ಅಥವಾ ಅಂಥ ದೀಕ್ಷಾಸ್ನಾನವನ್ನು ಪಡೆದುಕೊಂಡರೋ ಅಂಥವರಿಗೆ ಮರಣದಂಡನೆಯು ವಿಧಿಸಲ್ಪಡುವ ಸಾಧ್ಯತೆಯಿತ್ತು. ಆದುದರಿಂದ, ಆ್ಯನಬ್ಯಾಪ್ಟಿಸ್ಟರು “ಜರ್ಮನ್‌ ರಾಷ್ಟ್ರದ ಪವಿತ್ರ ರೋಮನ್‌ ಸಾಮ್ರಾಜ್ಯದಾದ್ಯಂತ ಕಠಿನವಾಗಿ ಹಿಂಸಿಸಲ್ಪಟ್ಟರು” ಎಂದು ಪತ್ರಕರ್ತರಾದ ಥೊಮಸ್‌ ಸೈಫರ್ಟ್‌ ವಿವರಿಸಿದರು. ಮೂನ್‌ಸ್ಟರ್‌ನಲ್ಲಿ ಹಿಂಸೆಯು ಅದರ ಉತ್ತುಂಗವನ್ನು ತಲಪಿತು.

ಮಧ್ಯಯುಗದ ಮೂನ್‌ಸ್ಟರ್‌ ಬದಲಾವಣೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ

ಮಧ್ಯಯುಗದ ಮೂನ್‌ಸ್ಟರ್‌ನಲ್ಲಿ ಸುಮಾರು 10,000 ನಿವಾಸಿಗಳಿದ್ದರು, ಮತ್ತು ಆ ನಗರವು ಸುಮಾರು 90 ಮೀಟರ್‌ ಅಗಲ ಹಾಗೂ 5 ಕಿಲೋಮೀಟರ್‌ ಸುತ್ತಳತೆಯ ಅಭೇದ್ಯ ಕೋಟೆಯಿಂದ ಸುತ್ತುವರಿಯಲ್ಪಟ್ಟಿತ್ತು. ಆದರೆ, ನಗರದೊಳಗಿನ ಪರಿಸ್ಥಿತಿಯು ಅದರ ರಕ್ಷಣಾ ವ್ಯವಸ್ಥೆಯಷ್ಟು ಸ್ಥಿರವಾಗಿರಲಿಲ್ಲ. ಮೂನ್‌ಸ್ಟರ್‌ ನಗರದ ವಸ್ತುಸಂಗ್ರಹಾಲಯದಿಂದ ಪ್ರಕಾಶನಮಾಡಲ್ಪಟ್ಟ ಆ್ಯನಬ್ಯಾಪ್ಟಿಸ್ಟರ ರಾಜ್ಯ (ಇಂಗ್ಲಿಷ್‌) ಎಂಬ ಪುಸ್ತಕವು, “ನಗರಸಭೆಯ ಸದಸ್ಯರ ಮತ್ತು ವೃತ್ತಿಸಂಸ್ಥೆಗಳ ಸದಸ್ಯರ ಮಧ್ಯೆ ನಡೆಯುತ್ತಿದ್ದ ಆಂತರಿಕ ರಾಜಕೀಯ ಕಲಹಗಳ” ಬಗ್ಗೆ ತಿಳಿಸುತ್ತದೆ. ಅಷ್ಟುಮಾತ್ರವಲ್ಲದೆ, ಅಲ್ಲಿನ ನಿವಾಸಿಗಳು ಪಾದ್ರಿಗಳ ನಡತೆಯಿಂದಾಗಿ ಬಹಳ ಕ್ರೋಧಿತರಾಗಿದ್ದರು. ಮೂನ್‌ಸ್ಟರ್‌ ನಗರವು ಮತಸುಧಾರಣಾ ಕಾರ್ಯವನ್ನು ಬೆಂಬಲಿಸಿತು ಮತ್ತು 1533ರಲ್ಲಿ ಅದು, ಒಂದು ಕ್ಯಾಥೊಲಿಕ್‌ ನಗರದಿಂದ ಲೂತರನ್‌ ನಗರವಾಗಿ ಪರಿಣಮಿಸಿತು.

ಮೂನ್‌ಸ್ಟರ್‌ನಲ್ಲಿ ಮತಸುಧಾರಣೆಯ ಬಗ್ಗೆ ಪ್ರಚಾರಮಾಡುತ್ತಿದ್ದ ಅಗ್ರಗಣ್ಯರಲ್ಲಿ ಬರ್ನ್‌ಹಾರ್ಟ್‌ ರಾಟ್ಮಾನ್‌ ಒಬ್ಬನಾಗಿದ್ದನು. ಅವನು ದುಡುಕು ಸ್ವಭಾವದ ವ್ಯಕ್ತಿಯಾಗಿದ್ದನು. ರಾಟ್ಮಾನ್‌ನ “ಅಭಿಪ್ರಾಯಗಳು ನಿಶ್ಚಯವಾಗಿಯೂ ಆ್ಯನಬ್ಯಾಪ್ಟಿಸ್ಟರ ಅಭಿಪ್ರಾಯಗಳಿಗೆ ಸಮಾನವಾಗಿದ್ದವು; ಅವನು ಮತ್ತು ಅವನ ಜೊತೆಗಾರರು ಶಿಶುಗಳ ದೀಕ್ಷಾಸ್ನಾನವನ್ನು ಮಾಡಲು ನಿರಾಕರಿಸಿದರು,” ಎಂದು ಗ್ರಂಥಕರ್ತರಾದ ಫ್ರೆಡ್ರಿಕ್‌ ಆನಿಂಗೆ ವಿವರಿಸಿದರು. ಕೆಲವರಿಗೆ ಅವನ ಅಮೂಲಾಗ್ರ ಅಭಿಪ್ರಾಯಗಳು ತೀರಾ ವಿಪರೀತವಾದವುಗಳಾಗಿ ಕಂಡುಬಂದರೂ, ಮೂನ್‌ಸ್ಟರ್‌ನಲ್ಲಿದ್ದ ಅನೇಕ ಜನರಿಂದ ಅವನಿಗೆ ಬೆಂಬಲ ದೊರೆಯಿತು. “ಯಾರು ಹಿಂದಿನ ಧಾರ್ಮಿಕ ಪರಿಸ್ಥಿತಿಯನ್ನು ಇಷ್ಟಪಟ್ಟಿದ್ದರೊ ಅಂಥ ಜನರು ಹೆಚ್ಚೆಚ್ಚಾಗಿ ಕಳವಳಭರಿತ ಅನಿಸಿಕೆ ಹಾಗೂ ಮುಂದಕ್ಕೆ ಏನೋ ಕೇಡು ಸಂಭವಿಸಲಿದೆ ಎಂಬ ಭಯದಿಂದ ಆ ನಗರವನ್ನೇ ಬಿಟ್ಟುಹೋದರು. ಅದೇ ಸಮಯದಲ್ಲಿ, ಇತರ ಸ್ಥಳಗಳಲ್ಲಿದ್ದ ಆ್ಯನಬ್ಯಾಪ್ಟಿಸ್ಟರು ತಮ್ಮ ಧ್ಯೇಯಗಳ ನೆರವೇರಿಕೆಯನ್ನು ನಿರೀಕ್ಷಿಸುತ್ತಾ, ಪ್ರವಾಹದೋಪಾದಿ ಮೂನ್‌ಸ್ಟರ್‌ ನಗರಕ್ಕೆ ಬಂದರು.” ಈ ರೀತಿಯಲ್ಲಿ, ಎಲ್ಲೆಡೆಯಲ್ಲಿದ್ದ ಆ್ಯನಬ್ಯಾಪ್ಟಿಸ್ಟರು ಮೂನ್‌ಸ್ಟರ್‌ನಲ್ಲಿ ಒಟ್ಟುಸೇರಿದ ಕಾರಣ ಮುಂದಕ್ಕೆ ಒಂದು ಭೀಕರ ಘಟನೆಯು ಸಂಭವಿಸಿತು.

ಹೊಸ ಯೆರೂಸಲೇಮಿನ ಮುತ್ತಿಗೆ

ಮೂನ್‌ಸ್ಟರ್‌ ನಗರದಲ್ಲಿ ಮುಂದಕ್ಕೆ ಸಂಭವಿಸಲಿದ್ದ ಘಟನೆಗಳಲ್ಲಿ, ಆ ನಗರಕ್ಕೆ ಬಂದ ಇಬ್ಬರು ಡಚ್‌ ವಲಸೆಗಾರರು​—⁠ಹಾರ್ಲೆಮ್‌ನಲ್ಲಿ ರೊಟ್ಟಿಮಾಡುವ ಉದ್ಯೋಗದವನಾಗಿದ್ದ ಯಾನ್‌ ಮಾಟೀಸ್‌ ಮತ್ತು ಲೈಡನ್‌ನ ಜಾನ್‌ ಎಂದು ಕರೆಯಲ್ಪಡುತ್ತಿದ್ದ ಯಾನ್‌ ಬೋಕಲ್‌ಸನ್‌​—⁠ಪ್ರಾಮುಖ್ಯ ಪಾತ್ರವನ್ನು ವಹಿಸಲಿದ್ದರು. ಮಾಟೀಸನು ತಾನೊಬ್ಬ ಪ್ರವಾದಿ ಎಂದು ಹೇಳಿಕೊಳ್ಳುತ್ತಿದ್ದನು ಮತ್ತು 1534ರ ಏಪ್ರಿಲ್‌ ತಿಂಗಳನ್ನು ಕ್ರಿಸ್ತನ ಎರಡನೇ ಬರೋಣದ ಸಮಯವೆಂದು ಘೋಷಿಸಿದನು. ಅಷ್ಟುಮಾತ್ರವಲ್ಲದೆ, ಆ ನಗರವನ್ನು ಬೈಬಲಿನಲ್ಲಿ ತಿಳಿಸಲಾಗಿರುವ ಹೊಸ ಯೆರೂಸಲೇಮ್‌ ಎಂದು ಘೋಷಿಸಲಾಯಿತು, ಮತ್ತು ಅಲ್ಲಿನ ಎಲ್ಲಾ ಜನರು ಲೋಕಾಂತ್ಯವಾಗುವುದೆಂಬ ಮನೋವೃತ್ತಿಯುಳ್ಳವರಾದರು. ಯಾವುದೇ ಆಸ್ತಿಯನ್ನು ಒಬ್ಬ ವ್ಯಕ್ತಿಯು ಹೊಂದಿರಬಾರದು, ಬದಲಾಗಿ ಎಲ್ಲಾ ಆಸ್ತಿಯು ಸಾರ್ವಜನಿಕರಿಗೆ ಸೇರಿದ್ದಾಗಿರಬೇಕು ಎಂದು ರಾಟ್ಮಾನ್‌ ನಿರ್ಣಯಿಸಿದನು. ಎಲ್ಲಾ ವಯಸ್ಕ ನಿವಾಸಿಗಳು ಒಂದು ನಿರ್ಣಯವನ್ನು ಮಾಡಬೇಕಾಗಿತ್ತು: ಒಂದೇ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದು ಇಲ್ಲವೆ ನಗರವನ್ನು ಬಿಟ್ಟುಹೋಗುವುದು. ಈ ಕಾರಣ ಸಾಮೂಹಿಕ ದೀಕ್ಷಾಸ್ನಾನಗಳು ನಡೆದವು, ಮತ್ತು ಇದರಲ್ಲಿ, ತಮ್ಮ ಮನೆ ಹಾಗೂ ಸೊತ್ತನ್ನು ಬಿಟ್ಟುಹೋಗುವುದನ್ನು ತಪ್ಪಿಸುವ ಸಲುವಾಗಿ ದೀಕ್ಷಾಸ್ನಾನ ಪಡೆದುಕೊಂಡವರೂ ಸೇರಿದ್ದರು.

ಮೂನ್‌ಸ್ಟರ್‌ ನಗರವು ಆ್ಯನಬ್ಯಾಪ್ಟಿಸ್ಟರು ಅತ್ಯಂತ ಬಲವಾದ ಧಾರ್ಮಿಕ ಹಾಗೂ ರಾಜಕೀಯ ಗುಂಪಾಗಿ ಪರಿಣಮಿಸಿದ್ದ ಮೊತ್ತಮೊದಲ ನಗರವಾದಾಗ ಇತರ ಸಮುದಾಯಗಳ ಜನರು ದಂಗಾಗಿಹೋದರು. ಡೀ ಟಯಿಫ ಸ್ಯೂ ಮೆನ್‌ಸ್ಟ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, ಈ ಪರಿಸ್ಥಿತಿಯು “ಸಂಪೂರ್ಣ ಜರ್ಮನ್‌ ರಾಷ್ಟ್ರದ ಪವಿತ್ರ ರೋಮನ್‌ ಸಾಮ್ರಾಜ್ಯವು ಮೂನ್‌ಸ್ಟರ್‌ನ ವಿರುದ್ಧ ಶತ್ರುತ್ವವನ್ನು” ತೋರಿಸುವಂತೆ ಮಾಡಿತು. ಒಬ್ಬ ಪ್ರಸಿದ್ಧ ಸ್ಥಳಿಕ ಗಣ್ಯ ಅಧಿಕಾರಿಯಾಗಿದ್ದ ಪ್ರಿನ್ಸ್‌-ಬಿಷಪ್‌ ಕೌಂಟ್‌ ಫ್ರಾಂಟ್ಸ್‌ ಫಾನ್‌ ವೇಲ್ಡೆಕ್‌ರವರು, ಮೂನ್‌ಸ್ಟರ್‌ ನಗರವನ್ನು ಮುತ್ತಿಗೆಹಾಕಲು ಸೈನ್ಯವನ್ನು ಒಟ್ಟುಗೂಡಿಸಿದರು. ಆ ಸೈನ್ಯದಲ್ಲಿ ಲೂತರನ ಅನುಯಾಯಿಗಳು ಮತ್ತು ಕ್ಯಾಥೊಲಿಕರು ಸೇರಿದ್ದರು. ಹಿಂದೆ ಮತಸುಧಾರಣೆಯಲ್ಲಿ ಪರಸ್ಪರ ವಿರುದ್ಧವಾಗಿದ್ದ ಈ ಎರಡು ಧರ್ಮಗಳು, ಮುಂದೆ ಬೇಗನೆ ನಡೆಯಲಿದ್ದ ಮೂವತ್ತು ವರುಷಗಳ ಯುದ್ಧದಲ್ಲಿ ಪರಸ್ಪರ ಕತ್ತು ಕತ್ತರಿಸಲಿದ್ದರೂ, ಈಗ ಒಟ್ಟುಗೂಡಿ ಆ್ಯನಬ್ಯಾಪ್ಟಿಸ್ಟರ ವಿರುದ್ಧ ಕ್ರಿಯೆಗೈದವು.

ಆ್ಯನಬ್ಯಾಪ್ಟಿಸ್ಟ್‌ ರಾಜ್ಯದ ನಾಶನ

ಮುತ್ತಿಗೆಹಾಕಿದ್ದ ಸೈನ್ಯದ ಬಲವು, ನಗರದ ಗೋಡೆಗಳ ಒಳಗೆ ಸುರಕ್ಷಿತವಾಗಿದ್ದ ಜನರಿಗೆ ಹೆದರಿಕೆಯನ್ನು ಉಂಟುಮಾಡಲಿಲ್ಲ. ಕ್ರಿಸ್ತನ ಎರಡನೆಯ ಬರೋಣವು ಸಂಭವಿಸುವುದೆಂದು ನೆನಸಲಾಗಿದ್ದ 1534ರ ಏಪ್ರಿಲ್‌ ತಿಂಗಳಿನಲ್ಲಿ, ಮಾಟೀಸನು ಒಂದು ಬಿಳಿ ಕುದುರೆಯನ್ನೇರಿ ನಗರದ ಗೋಡೆಯ ಹೊರಗೆ ಸವಾರಿಮಾಡಲು ಹೊರಟನು. ಅವನು ತನಗೆ ದೈವಿಕ ರಕ್ಷಣೆಯು ದೊರಕುತ್ತದೆಂದು ಭಾವಿಸಿದ್ದನು. ಆದರೆ, ಅವನು ಹೊರಗೆ ಹೋದೊಡನೆ ಮುತ್ತಿಗೆಹಾಕಿದ್ದ ಸೈನ್ಯವು ಅವನನ್ನು ಹಿಡಿದು, ತುಂಡು ತುಂಡಾಗಿ ಕತ್ತರಿಸಿ ಅವನ ತಲೆಯನ್ನು ಒಂದು ಕಂಬದ ಮೇಲೆ ತೂಗುಹಾಕಿತು. ನಗರದ ಗೋಡೆಯೊಳಗಿಂದ ಈ ಘಟನೆಯನ್ನು ಇಣುಕಿ ನೋಡುತ್ತಿದ್ದ ಮಾಟೀಸ್‌ನ ಬೆಂಬಲಿಗರಲ್ಲಿ ತುಂಬಿದ್ದ ಭೀತಿಯನ್ನು ಸ್ವಲ್ಪ ಊಹಿಸಿಕೊಳ್ಳಿ.

ಲೈಡನ್‌ನ ಜಾನ್‌, ಮಾಟೀಸ್‌ನ ಉತ್ತರಾಧಿಕಾರಿಯಾದನು ಮತ್ತು ಮೂನ್‌ಸ್ಟರ್‌ನಲ್ಲಿನ ಆ್ಯನಬ್ಯಾಪ್ಟಿಸ್ಟರ ರಾಜ ಯಾನ್‌ ಎಂಬುದಾಗಿ ಕರೆಯಲ್ಪಟ್ಟನು. ನಗರದಲ್ಲಿ ಸ್ತ್ರೀಯರ ಸಂಖ್ಯೆಯು ಪುರುಷರದ್ದಕ್ಕಿಂತ ಹೆಚ್ಚಾಗಿದ್ದ ಕಾರಣ, ಪುರುಷರು ತಮಗೆ ಬೇಕಾದಷ್ಟು ಸ್ತ್ರೀಯರನ್ನು ಮದುವೆಮಾಡಿಕೊಳ್ಳುವಂತೆ ಉತ್ತೇಜಿಸುವ ಮೂಲಕ ಅವನು ಆ ಅಸಮತೋಲನವನ್ನು ಸರಿಪಡಿಸಲು ಪ್ರಯತ್ನಿಸಿದನು. ಹಾದರ ಮತ್ತು ವ್ಯಭಿಚಾರಕ್ಕೆ ಮರಣದಂಡನೆಯನ್ನು ವಿಧಿಸಲಾಗುತ್ತಿತ್ತಾದರೂ ಬಹುಪತ್ನೀತ್ವವನ್ನು ಅನುಮತಿಸಲಾಗುತ್ತಿತ್ತು ಮಾತ್ರವಲ್ಲ ಅದನ್ನು ಉತ್ತೇಜಿಸಲಾಗುತ್ತಿತ್ತು ಎಂಬುದು ಆ್ಯನಬ್ಯಾಪ್ಟಿಸ್ಟ್‌ ರಾಜ್ಯದಲ್ಲಿನ ವೈಪರೀತ್ಯಗಳಿಗೆ ಒಂದು ಉದಾಹರಣೆಯಾಗಿದೆ. ಸ್ವತಃ ರಾಜ ಯಾನ್‌ ತನಗಾಗಿ 16 ಮಂದಿ ಹೆಂಡತಿಯರನ್ನು ಮಾಡಿಕೊಂಡನು. ಅವರಲ್ಲಿ ಒಬ್ಬಳಾದ ಏಲೀಜಬೇತ್‌ ವೇನ್ಟ್‌ಶೇರಳು ನಗರವನ್ನು ಬಿಟ್ಟುಹೋಗಲು ಅನುಮತಿಯನ್ನು ಕೇಳಿದಾಗ, ಅವಳಿಗೆ ಬಹಿರಂಗವಾಗಿ ಶಿರಚ್ಛೇದನ ಮಾಡಲಾಯಿತು.

ಆ ಮುತ್ತಿಗೆಯು 14 ತಿಂಗಳುಗಳ ವರೆಗೆ ಮುಂದುವರಿದು, ಕೊನೆಗೆ 1535ರ ಜೂನ್‌ ತಿಂಗಳಿನಲ್ಲಿ ನಗರವು ಸಂಪೂರ್ಣವಾಗಿ ವಶಪಡಿಸಿಕೊಳ್ಳಲ್ಪಟ್ಟಿತು. ಮೂನ್‌ಸ್ಟರ್‌ ನಗರವು ಎಂಥ ಭೀಕರ ನಾಶನವನ್ನು ಅನುಭವಿಸಿತ್ತೆಂದರೆ, ಅದು ಪುನಃ ಎರಡನೇ ಲೋಕ ಯುದ್ಧದ ತನಕ ಅಂಥ ನಾಶನವನ್ನು ನೋಡಲಿಲ್ಲ. ರಾಟ್ಮಾನ್‌ ಪರಾರಿಯಾದರೂ, ರಾಜ ಯಾನ್‌ ಮತ್ತು ಇನ್ನಿಬ್ಬರು ಆ್ಯನಬ್ಯಾಪ್ಟಿಸ್ಟ್‌ ನಾಯಕರು ಹಿಡಿಯಲ್ಪಟ್ಟರು. ಅವರಿಗೆ ಚಿತ್ರಹಿಂಸೆಯನ್ನು ನೀಡಿ ಕೊಲ್ಲಲಾಯಿತು. ಅವರ ಮೃತದೇಹಗಳನ್ನು ಪಂಜರಗಳಲ್ಲಿ ಹಾಕಿ, ಆ ಪಂಜರಗಳನ್ನು ಸೈಂಟ್‌ ಲ್ಯಾಮ್‌ಬರ್ಟ್‌ ಚರ್ಚಿನ ಗೋಪುರಕ್ಕೆ ತೂಗುಹಾಕಲಾಯಿತು. ಇದು, “ಮುಂದಕ್ಕೆ ಸಮಸ್ಯೆಯನ್ನು ಉಂಟುಮಾಡಬಲ್ಲ ಎಲ್ಲರಿಗೂ ಒಂದು ಭಯಂಕರ ಎಚ್ಚರಿಕೆಯಾಗಿರಲಿತ್ತು” ಎಂದು ಸೈಫರ್ಟ್‌ ವಿವರಿಸುತ್ತಾರೆ. ಹೌದು, ರಾಜಕೀಯದಲ್ಲಿ ತಲೆಹಾಕಲು ಹೋದ ಕಾರಣ ಇಂಥ ದುರಂತಮಯ ಪರಿಣಾಮಗಳನ್ನು ಅನುಭವಿಸಬೇಕಾಯಿತು.

ಇತರ ಆ್ಯನಬ್ಯಾಪ್ಟಿಸ್ಟ್‌ ಸಮುದಾಯಗಳಿಗೆ ಏನು ಸಂಭವಿಸಿತು? ಯೂರೋಪಿನಾದ್ಯಂತ ಅನೇಕ ವರುಷಗಳ ತನಕ ಹಿಂಸೆಯು ಮುಂದುವರಿಯಿತು. ಆ್ಯನಬ್ಯಾಪ್ಟಿಸ್ಟರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೂ, ಅವರಲ್ಲಿ ಹೆಚ್ಚಿನವರು ಮಿಲಿಟರಿ ಸೇವೆಯನ್ನು ನಿರಾಕರಿಸುವ ತಮ್ಮ ನಿರ್ಣಯಕ್ಕೆ ಬಲವಾಗಿ ಅಂಟಿಕೊಂಡರು. ಸಮಯಾನಂತರ, ಹಿಂದೆ ಒಬ್ಬ ಪಾದ್ರಿಯಾಗಿದ್ದ ಮೆನೊ ಸೈಮನ್ಸ್‌ ಎಂಬವನು ಆ್ಯನಬ್ಯಾಪ್ಟಿಸ್ಟರ ಮುಖಂಡನಾದನು, ಮತ್ತು ಕ್ರಮೇಣ ಈ ಪಂಗಡದವರು ಮೆನೊನೈಟರೆಂಬ ಅಥವಾ ಇತರ ಹೆಸರುಗಳಿಂದ ಗುರುತಿಸಲ್ಪಟ್ಟರು.

ಮೂರು ಪಂಜರಗಳು

ಆ್ಯನಬ್ಯಾಪ್ಟಿಸ್ಟರು ಮೂಲತಃ ಬೈಬಲ್‌ ಮೂಲತತ್ತ್ವಗಳಿಗೆ ಅಂಟಿಕೊಳ್ಳಲು ಪ್ರಯತ್ನಿಸಿದ ಧಾರ್ಮಿಕ ಜನರಾಗಿದ್ದರು. ಆದರೆ ಮೂನ್‌ಸ್ಟರ್‌ನಲ್ಲಿದ್ದ ತೀವ್ರಗಾಮಿಗಳು, ಈ ಆ್ಯನಬ್ಯಾಪ್ಟಿಸ್ಟರು ತಮ್ಮ ಮೂಲ ಗುರಿಯನ್ನು ತೊರೆದು, ರಾಜಕೀಯದಲ್ಲಿ ಒಳಗೂಡುವಂತೆ ನಡಿಸಿದ್ದರು. ಒಮ್ಮೆ ಇದು ಸಂಭವಿಸಿದ ನಂತರ, ಈ ಪಂಗಡವು ಕ್ರಾಂತಿಕಾರಿ ಪಂಗಡವಾಗಿ ಬದಲಾಯಿತು. ಇದು ತಾನೇ ಆ್ಯನಬ್ಯಾಪ್ಟಿಸ್ಟ್‌ ಗುಂಪಿಗೆ ಮತ್ತು ಮಧ್ಯಯುಗದ ಮೂನ್‌ಸ್ಟರ್‌ ನಗರಕ್ಕೆ ಗಂಡಾಂತರವಾಗಿ ಪರಿಣಮಿಸಿತ್ತು.

ಹೆಚ್ಚುಕಡಿಮೆ 500 ವರುಷಗಳ ಹಿಂದೆ ಸಂಭವಿಸಿದ್ದ ಈ ಎಲ್ಲಾ ಭೀಕರ ಘಟನೆಗಳು, ಮೂನ್‌ಸ್ಟರ್‌ ನಗರದ ಕೇಂದ್ರಭಾಗಕ್ಕೆ ಈಗ ಭೇಟಿ ನೀಡುವ ಪ್ರತಿಯೊಬ್ಬ ಸಂದರ್ಶಕನ ಜ್ಞಾಪಕಕ್ಕೆ ತರಲ್ಪಡುತ್ತವೆ. ಅದು ಹೇಗೆ? ಚರ್ಚ್‌ ಗೋಪುರಕ್ಕೆ ತೂಗುಹಾಕಲ್ಪಟ್ಟಿರುವ ಆ ಕಬ್ಬಿಣದ ಮೂರು ಪಂಜರಗಳ ಮೂಲಕವೇ.

[ಪಾದಟಿಪ್ಪಣಿ]

^ ಪ್ಯಾರ. 9 ಈ ಲೇಖನವು, ಶಿಶುಗಳಿಗೆ ಮಾಡಿಸುವ ದೀಕ್ಷಾಸ್ನಾನದ ಪರವಾಗಿ ಇಲ್ಲವೆ ವಿರುದ್ಧವಾಗಿ ಮಾಡಲಾಗುವ ವಾದಗಳ ಕುರಿತು ಚರ್ಚಿಸುವುದಿಲ್ಲ. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಯು ಬೇಕಾಗಿರುವಲ್ಲಿ, 1986, ಮಾರ್ಚ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯಲ್ಲಿರುವ “ಶಿಶುಗಳಿಗೆ ದೀಕ್ಷಾಸ್ನಾನ ಮಾಡಿಸಬೇಕೋ?” ಎಂಬ ಲೇಖನವನ್ನು ನೋಡಿರಿ.

[ಪುಟ 13ರಲ್ಲಿರುವ ಚಿತ್ರಗಳು]

ರಾಜ ಯಾನ್‌ನನ್ನು ಚಿತ್ರಹಿಂಸೆಗೊಳಪಡಿಸಿ ಕೊಲ್ಲಲಾಯಿತು, ಮತ್ತು ಅವನ ಮೃತದೇಹವನ್ನು ಸೈಂಟ್‌ ಲ್ಯಾಮ್‌ಬರ್ಟ್‌ ಚರ್ಚಿನ ಗೋಪುರಕ್ಕೆ ತೂಗುಹಾಕಲಾಯಿತು