ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಗೆ ನಿಮ್ಮ ಬಗ್ಗೆ ನಿಜವಾಗಿಯೂ ಹಿತಚಿಂತನೆ ಇದೆ

ದೇವರಿಗೆ ನಿಮ್ಮ ಬಗ್ಗೆ ನಿಜವಾಗಿಯೂ ಹಿತಚಿಂತನೆ ಇದೆ

ದೇವರಿಗೆ ನಿಮ್ಮ ಬಗ್ಗೆ ನಿಜವಾಗಿಯೂ ಹಿತಚಿಂತನೆ ಇದೆ

ಕಷ್ಟಕಾಲದಲ್ಲಿ ನಾವು ದೇವರ ಬಳಿ ಸಹಾಯಕ್ಕಾಗಿ ಯಾಚಿಸುವುದು ಸ್ವಾಭಾವಿಕ. ಏಕೆಂದರೆ ಆತನು “ದೊಡ್ಡವನೂ ಪರಾಕ್ರಮಿಯೂ ಆಗಿದ್ದಾನೆ; ಆತನ ಜ್ಞಾನವು ಅಪರಿಮಿತವಾಗಿದೆ.” (ಕೀರ್ತನೆ 147:⁠5) ನಮ್ಮ ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ನಮಗೆ ಸಹಾಯಮಾಡಲು ಆತನೇ ಅತ್ಯುತ್ತಮ ಸ್ಥಾನದಲ್ಲಿದ್ದಾನೆ. ಅಷ್ಟುಮಾತ್ರವಲ್ಲದೆ, ‘ನಮ್ಮ ಹೃದಯವನ್ನು ಆತನ ಮುಂದೆ ಬಿಚ್ಚುವಂತೆ’ ಬೈಬಲ್‌ ನಮ್ಮನ್ನು ಆಮಂತ್ರಿಸುತ್ತದೆ. (ಕೀರ್ತನೆ 62:⁠8) ಹೀಗಿರುವಾಗ, ದೇವರು ತಮ್ಮ ಪ್ರಾರ್ಥನೆಗಳಿಗೆ ಉತ್ತರಕೊಡಲಿಲ್ಲ ಎಂಬ ಅಭಿಪ್ರಾಯ ಅನೇಕರಿಗಿರುವುದು ಏಕೆ? ಆತನಿಗೆ ನಮ್ಮ ಬಗ್ಗೆ ಹಿತಚಿಂತನೆ ಇಲ್ಲವೆಂದು ಅದರರ್ಥವೊ?

ಆದರೆ ದೇವರು ಏನೂ ಮಾಡುತ್ತಿಲ್ಲವೆಂಬಂತೆ ತೋರುತ್ತಿರುವುದರಿಂದ, ಆತನನ್ನು ದೂಷಿಸುವ ಮುಂಚೆ ಒಂದುಕ್ಷಣ ನಿಮ್ಮ ಬಾಲ್ಯದ ಕುರಿತಾಗಿ ಯೋಚಿಸಿರಿ. ನಿಮ್ಮ ಹೆತ್ತವರು ನೀವು ಕೇಳಿದ್ದೆಲ್ಲದಕ್ಕೂ ತಲೆಯಾಡಿಸದಿದ್ದಾಗ, ‘ನಿಮಗೆ ನನ್ನ ಮೇಲೆ ಪ್ರೀತಿಯಿಲ್ಲ’ ಎಂದು ನೀವು ಅವರನ್ನು ಎಂದಾದರೂ ದೂಷಿಸಿದ್ದುಂಟೊ? ಅನೇಕ ಮಕ್ಕಳು ಹಾಗೆ ಮಾಡುತ್ತಾರೆ ನಿಜ. ಆದರೆ ನೀವು ದೊಡ್ಡವರಾದಾಗ, ಪ್ರೀತಿಯನ್ನು ಅನೇಕ ವಿಧಗಳಲ್ಲಿ ತೋರಿಸಲಾಗುತ್ತದೆಂದೂ, ಒಂದು ಮಗುವು ಕೇಳಿದ್ದೆಲ್ಲದಕ್ಕೂ ತಲೆಯಾಡಿಸುವುದು ನಿಜವಾಗಿಯೂ ಪ್ರೀತಿಯ ಕೃತ್ಯವಲ್ಲವೆಂದೂ ನಿಮಗೆ ತಿಳಿದುಬಂತು.

ಅದೇ ರೀತಿಯಲ್ಲಿ, ಯೆಹೋವನು ಯಾವಾಗಲೂ ನಾವು ಇಚ್ಛಿಸುವ ರೀತಿಯಲ್ಲಿ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡದೆ ಇರುವಾಗ, ಇದರರ್ಥ ಆತನು ನಮ್ಮನ್ನು ಅಲಕ್ಷಿಸುತ್ತಿದ್ದಾನೆಂದಲ್ಲ. ವಾಸ್ತವದಲ್ಲಿ, ದೇವರಿಗೆ ನಮ್ಮ ಬಗ್ಗೆ ಹಿತಚಿಂತನೆ ಇದೆ ಎಂಬುದನ್ನು ಆತನು ಅನೇಕ ವಿಧಗಳಲ್ಲಿ ತೋರಿಸುತ್ತಾನೆ.

“ಆತನಲ್ಲಿಯೇ ನಾವು ಜೀವಿಸುತ್ತೇವೆ”

ಮೊತ್ತಮೊದಲಾಗಿ, ದೇವರಿಂದಾಗಿಯೇ ನಾವು “ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ.” (ಅ. ಕೃತ್ಯಗಳು 17:28) ಆತನು ನಮಗೆ ಜೀವಕೊಟ್ಟಿದ್ದಾನೆಂಬ ಸಂಗತಿಯೇ, ನಮಗಾಗಿ ಆತನಿಗಿರುವ ಪ್ರೀತಿಪರ ಹಿತಚಿಂತನೆಯನ್ನು ತೋರಿಸುತ್ತದೆ!

ಅಷ್ಟುಮಾತ್ರವಲ್ಲದೆ, ನಾವು ಬದುಕಿರಲಿಕ್ಕಾಗಿ ಅಗತ್ಯವಿರುವಂಥದ್ದೆಲ್ಲವನ್ನು ಯೆಹೋವನು ಒದಗಿಸುತ್ತಾನೆ. ನಾವು ಹೀಗೆ ಓದುತ್ತೇವೆ: “ಪಶುಗಳಿಗೋಸ್ಕರ ಹುಲ್ಲನ್ನು ಮೊಳಿಸುತ್ತೀ; ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ; ಅವರು ಭೂವ್ಯವಸಾಯಮಾಡಿ ಆಹಾರ . . . ಸಂಪಾದಿಸಿಕೊಳ್ಳುತ್ತಾರೆ.” (ಕೀರ್ತನೆ 104:​14, 15) ವಾಸ್ತವದಲ್ಲಿ ನಮ್ಮ ಸೃಷ್ಟಿಕರ್ತನು, ನಮಗೆ ಬರಿಯ ಜೀವನಾವಶ್ಯಕತೆಗಳಿಗಿಂತಲೂ ಹೆಚ್ಚನ್ನು ಒದಗಿಸುತ್ತಾನೆ. ಆತನು ಉದಾರವಾಗಿ “ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು [ನಮ್ಮ] ಮನಸ್ಸುಗಳನ್ನು ಆನಂದದಿಂದ” ತುಂಬಿಸುತ್ತಾನೆ.​—⁠ಅ. ಕೃತ್ಯಗಳು 14:⁠17.

ಕೆಲವರಾದರೊ ಹೀಗೆ ಸೋಜಿಗಪಡಬಹುದು: ‘ಒಂದುವೇಳೆ ದೇವರು ನಮ್ಮನ್ನು ಅಷ್ಟೊಂದು ಪ್ರೀತಿಸುತ್ತಿರುವುದಾದರೆ, ನಮ್ಮ ಮೇಲೆ ಕಷ್ಟಗಳು ಬರುವಂತೆ ಆತನು ಏಕೆ ಬಿಡುತ್ತಾನೆ?’ ಈ ಪ್ರಶ್ನೆಗೆ ಉತ್ತರವೇನೆಂದು ನಿಮಗೆ ತಿಳಿದಿದೆಯೊ?

ದೇವರು ಕಾರಣನೊ?

ಮಾನವಕುಲಕ್ಕಿರುವ ಹೆಚ್ಚಿನ ಕಷ್ಟಗಳು, ಮನುಷ್ಯರೇ ತಮ್ಮ ಮೇಲೆ ಬರಮಾಡಿರುವಂಥವುಗಳು ಆಗಿವೆ. ಉದಾಹರಣೆಗೆ, ಅಪಾಯಸಂಭವ ಹೆಚ್ಚಾಗಿರುವ ಚಟುವಟಿಕೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೂ, ಜನರು ಲೈಂಗಿಕ ದುರಾಚಾರದಲ್ಲಿ ತೊಡಗುತ್ತಾರೆ, ಮದ್ಯ ಮತ್ತು ಇತರ ಅಮಲೌಷಧಗಳನ್ನು ದುರುಪಯೋಗಿಸುತ್ತಾರೆ, ಜೀವಘಾತಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾರೆ, ತೀರ ವೇಗವಾಗಿ ವಾಹನ ಚಲಾಯಿಸುತ್ತಾರೆ ಇತ್ಯಾದಿ. ಇಂಥ ಅಪಾಯಭರಿತ ನಡವಳಿಕೆಯು ಕಷ್ಟಗಳನ್ನು ತಂದೊಡ್ಡುವಾಗ, ಇದಕ್ಕೆ ಕಾರಣರು ಯಾರು? ದೇವರೊ ಇಲ್ಲವೆ ಮೂರ್ಖತನದಿಂದ ವರ್ತಿಸುವ ವ್ಯಕ್ತಿಯೊ? ದೇವರ ಪ್ರೇರಿತ ವಾಕ್ಯವು ಹೀಗನ್ನುತ್ತದೆ: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.”​—⁠ಗಲಾತ್ಯ 6:⁠7.

ಅಲ್ಲದೆ, ಅನೇಕವೇಳೆ ಮನುಷ್ಯರೇ ಪರಸ್ಪರರನ್ನು ಘಾಸಿಗೊಳಿಸುತ್ತಾರೆ. ಒಂದು ರಾಷ್ಟ್ರವು ಯುದ್ಧವನ್ನು ಘೋಷಿಸುವಾಗ, ಆ ಯುದ್ಧದಿಂದುಂಟಾಗುವ ನರಳಾಟಕ್ಕೆ ಖಂಡಿತವಾಗಿಯೂ ದೇವರು ಕಾರಣನಲ್ಲ. ಒಬ್ಬ ಪಾತಕಿಯು ಜೊತೆ ನಾಗರಿಕನೊಬ್ಬನ ಮೇಲೆ ಹಲ್ಲೆಗೈಯುವಾಗ ಉಂಟಾಗುವ ಗಾಯ ಇಲ್ಲವೆ ಸಾವಿಗೆ ದೇವರು ಕಾರಣನೊ? ಖಂಡಿತವಾಗಿಯೂ ಇಲ್ಲ! ಒಬ್ಬ ನಿರಂಕುಶಾಧಿಕಾರಿಯು, ತನ್ನ ಕೈಕೆಳಗಿರುವವರ ಮೇಲೆ ದಬ್ಬಾಳಿಕೆ ನಡೆಸುವಾಗ, ಅವರನ್ನು ಚಿತ್ರಹಿಂಸೆಗೊಳಪಡಿಸುವಾಗ, ಮತ್ತು ಹತಿಸುವಾಗ, ತಪ್ಪನ್ನು ದೇವರ ಮೇಲೆ ಹೊರಿಸಬೇಕೊ? ಅದು ಅನ್ಯಾಯವಾಗಿರುವುದು.​—⁠ಪ್ರಸಂಗಿ 8:⁠9.

ಆದರೆ ಕಡುಬಡತನದ ಬೇಗೆಯಲ್ಲಿ ಬೇಯುತ್ತಿರುವ ಇಲ್ಲವೆ ಹೊಟ್ಟೆಗಿಲ್ಲದೆ ಪರದಾಡುತ್ತಿರುವ ಕೋಟಿಗಟ್ಟಲೆ ಜನರ ಕುರಿತಾಗಿ ಏನು? ಇದಕ್ಕೆ ದೇವರು ಕಾರಣನೊ? ಇಲ್ಲ. ಏಕೆಂದರೆ ನಮ್ಮ ಈ ಭೂಗ್ರಹವು, ಎಲ್ಲರಿಗೆ ಸಾಕಾಗುವುದಕ್ಕಿಂತಲೂ ಹೆಚ್ಚು ಆಹಾರವನ್ನು ಒದಗಿಸುತ್ತದೆ. (ಕೀರ್ತನೆ 10:​2, 3; 145:16) ಈ ದೇವದತ್ತ ಸರಬರಾಯಿಯು ಎಲ್ಲರಿಗೂ ಸಮಾನವಾಗಿ ವಿತರಿಸಲ್ಪಡದಿರುವುದೇ ಬಹುವ್ಯಾಪಕವಾದ ಹಸಿವೆ ಮತ್ತು ಬಡತನಕ್ಕೆ ನಡೆಸುತ್ತದೆ. ಮತ್ತು ಮಾನವ ಸ್ವಾರ್ಥವು, ಈ ಸಮಸ್ಯೆಯು ಬಗೆಹರಿಸಲ್ಪಡುವುದಕ್ಕೆ ತಡೆಯಾಗಿದೆ.

ಮೂಲ ಕಾರಣ

ಆದರೆ, ಒಬ್ಬ ವ್ಯಕ್ತಿಯು ಕಾಯಿಲೆಬೀಳುವಾಗ ಇಲ್ಲವೆ ವೃದ್ಧಾಪ್ಯದಿಂದಾಗಿ ಸಾಯುವಾಗ ಅದಕ್ಕೆ ಯಾರು ಕಾರಣರು? ಅದಕ್ಕೂ ದೇವರು ಕಾರಣನಲ್ಲ ಎಂದು ಹೇಳುವಾಗ ನಿಮಗೆ ಆಶ್ಚರ್ಯವಾಗುತ್ತದೊ? ಮನುಷ್ಯನು ವೃದ್ಧನಾಗಿ ಸಾಯಬೇಕೆಂದು ದೇವರು ಅವನನ್ನು ಸೃಷ್ಟಿಸಲಿಲ್ಲ.

ಮೊದಲ ಮಾನವ ದಂಪತಿಯಾದ ಆದಾಮಹವ್ವರನ್ನು ಏದೆನ್‌ ತೋಟದಲ್ಲಿ ಇರಿಸಿದಾಗ ಯೆಹೋವನು ಅವರಿಗೆ ಭೂಪರದೈಸಿನಲ್ಲಿ ನಿತ್ಯಜೀವದ ಪ್ರತೀಕ್ಷೆಯನ್ನು ಕೊಟ್ಟನು. ಆದರೆ, ತಮಗೆ ಸಿಕ್ಕಿರುವ ಆಸ್ತಿಯನ್ನು ಗಣ್ಯಮಾಡುವಂಥ ಮಾನವರಿಂದ ಭೂಮಿಯು ತುಂಬಬೇಕೆಂಬುದು ಆತನ ಸ್ಪಷ್ಟ ಇಚ್ಛೆಯಾಗಿತ್ತು. ಆದುದರಿಂದ, ಅವರ ಭಾವೀ ಜೀವನದ ಪ್ರತೀಕ್ಷೆಗಳಿಗಾಗಿ ಆತನು ಷರತ್ತನ್ನು ಇಟ್ಟನು. ಎಷ್ಟರ ತನಕ ಆದಾಮಹವ್ವರು ತಮ್ಮ ಪ್ರೀತಿಭರಿತ ಸೃಷ್ಟಿಕರ್ತನಿಗೆ ವಿಧೇಯರಾಗಿ ಉಳಿಯುತ್ತಾರೊ ಅಷ್ಟರ ತನಕ ಮಾತ್ರ ಅವರು ಪರದೈಸಿನಲ್ಲಿ ಜೀವಿಸಸಾಧ್ಯವಿತ್ತು.​—⁠ಆದಿಕಾಂಡ 2:17; 3:​2, 3, 17-23.

ದುಃಖದ ಸಂಗತಿಯೇನೆಂದರೆ, ಆದಾಮಹವ್ವರು ದೇವರ ವಿರುದ್ಧ ದಂಗೆಯೆದ್ದರು. ಹವ್ವಳು ಪಿಶಾಚನಾದ ಸೈತಾನನಿಗೆ ಕಿವಿಗೊಡಲು ನಿರ್ಣಯಿಸಿದಳು. ಸೈತಾನನು ಅವಳಿಗೆ ಸುಳ್ಳನ್ನು ಹೇಳಿ, ದೇವರು ಅವಳಿಂದ ಏನೋ ಒಳ್ಳೆಯ ಸಂಗತಿಯನ್ನು ಹಿಡಿದಿಟ್ಟಿದ್ದಾನೆಂದು ಕಾರ್ಯತಃ ಹೇಳಿದನು. ಆದುದರಿಂದ ಅವಳು ಒಂದು ಸ್ವತಂತ್ರ ಮಾರ್ಗಕ್ಕೆ ಕಾಲಿರಿಸಿ, “ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು” ಅರಿಯಲು ಪ್ರಯತ್ನಿಸಿದಳು.​—⁠ಆದಿಕಾಂಡ 3:5, 6.

ಹೀಗೆ, ಆದಾಮಹವ್ವರು ಪಾಪಮಾಡುವ ಮೂಲಕ ತಾವು ಸದಾಕಾಲ ಜೀವಿಸಲು ಅಯೋಗ್ಯರೆಂದು ತೋರಿಸಿಕೊಟ್ಟರು. ಪಾಪದ ವಿಪತ್ಕಾರಕ ಪರಿಣಾಮಗಳನ್ನು ಅವರು ಅನುಭವಿಸಿದರು. ಅವರ ಶಕ್ತಿ ಮತ್ತು ಚೈತನ್ಯವು ಬತ್ತುತ್ತಾ, ಕಟ್ಟಕಡೆಗೆ ಅವರು ಸತ್ತರು. (ಆದಿಕಾಂಡ 5:⁠5) ಆದರೆ ಅವರ ದಂಗೆಯು, ಹೆಚ್ಚು ಗಂಭೀರವಾದ ಫಲಿತಾಂಶಗಳನ್ನು ತಂದೊಡ್ಡಿತು. ನಾವೀಗಲೂ ಆದಾಮಹವ್ವರ ಪಾಪದ ಪರಿಣಾಮಗಳಿಂದ ಕಷ್ಟಪಡುತ್ತಿದ್ದೇವೆ. ಅಪೊಸ್ತಲ ಪೌಲನು ಬರೆದುದು: “ಒಬ್ಬ ಮನುಷ್ಯ [ಆದಾಮ]ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಹೌದು, ಆದಾಮಹವ್ವರ ದಂಗೆಯಿಂದಾಗಿ ಪಾಪಮರಣಗಳು, ಇಡೀ ಮಾನವಜಾತಿಯಲ್ಲಿ ಪ್ರಾಣಾಂತಕವಾಗಿರುವ ಒಂದು ರೋಗದಂತೆ ಹಬ್ಬಿಕೊಂಡಿದೆ.

ದೇವರಿಗೆ ಹಿತಚಿಂತನೆ ಇದೆ ಎಂಬುದಕ್ಕೆ ಅತೀ ಬಲಾಢ್ಯ ಸಾಕ್ಷ್ಯ

ದೇವರ ಮಾನವ ಸೃಷ್ಟಿಯು ಶಾಶ್ವತವಾಗಿ ಕೆಡವಲ್ಪಟ್ಟಿತ್ತೆಂದು ಇದರರ್ಥವೊ? ಇಲ್ಲ. ಮತ್ತು ಇದು ದೇವರಿಗೆ ನಮ್ಮ ಬಗ್ಗೆ ಹಿತಚಿಂತನೆಯಿದೆ ಎಂಬುದರ ಅತಿ ಬಲಾಢ್ಯ ಸಾಕ್ಷ್ಯಕ್ಕೆ ನಡೆಸುತ್ತದೆ. ದೇವರು ಸ್ವತಃ ಭಾರೀ ವೆಚ್ಚವನ್ನು ತೆತ್ತು, ಮಾನವಕುಲವನ್ನು ಪಾಪಮರಣಗಳಿಂದ ವಿಮೋಚಿಸಲಿಕ್ಕಾಗಿ ಬೇಕಾಗಿದ್ದ ಸಾಧನವನ್ನು ಒದಗಿಸಿದನು. ಆ ವಿಮೋಚನಾ ಬೆಲೆಯು, ಯೇಸುವಿನ ಪರಿಪೂರ್ಣ ಜೀವವಾಗಿತ್ತು. ಇದನ್ನು ನಮಗೋಸ್ಕರ ಸಿದ್ಧಮನಸ್ಸಿನಿಂದ ಕೊಡಲಾಯಿತು. (ರೋಮಾಪುರ 3:⁠24) ಈ ಕಾರಣದಿಂದ ಅಪೊಸ್ತಲ ಯೋಹಾನನು ಬರೆದುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಈ ಅಸಾಧಾರಣ ಪ್ರೀತಿಯ ಕೃತ್ಯದಿಂದಾಗಿ, ನಮಗೆ ಪುನಃ ಒಮ್ಮೆ ಸದಾಕಾಲ ಜೀವಿಸುವ ಪ್ರತೀಕ್ಷೆ ದೊರಕಿದೆ. ಪೌಲನು ರೋಮಾಪುರದವರಿಗೆ ಹೀಗೆ ಬರೆದನು: “ಒಂದೇ ಸತ್ಕಾರ್ಯದಿಂದ ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವನ್ನು ಫಲಿಸುತ್ತದೆ.”​—⁠ರೋಮಾಪುರ 5:⁠18.

ದೇವರ ತಕ್ಕ ಸಮಯದಲ್ಲಿ, ಭೂಗ್ರಹದ ಮೇಲೆ ಕಷ್ಟಾನುಭವ ಅಥವಾ ಮರಣವು ಇಲ್ಲವಾಗುವುದೆಂಬ ವಿಷಯದಲ್ಲಿ ನಾವು ನಿಶ್ಚಯದಿಂದಿರಸಾಧ್ಯವಿದೆ. ಅದಕ್ಕೆ ಬದಲಾಗಿ, ಪ್ರಕಟನೆ ಪುಸ್ತಕದಲ್ಲಿ ಮುನ್ನೋಡಲಾದಂಥ ಈ ಪರಿಸ್ಥಿತಿಗಳು ರಾರಾಜಿಸುವವು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:3, 4) ‘ಇದು ಸಂಭವಿಸುವಾಗ ನಾನು ಬದುಕಿರಲಿಕ್ಕಿಲ್ಲ’ ಎಂದು ನೀವು ಹೇಳಬಹುದು. ಆದರೆ ವಾಸ್ತವಾಂಶವೇನೆಂದರೆ ನೀವು ಬದುಕಿರಲೂಬಹುದು. ಒಂದುವೇಳೆ ನೀವು ಜೀವದಿಂದಿರದಿದ್ದರೂ, ದೇವರು ನಿಮ್ಮನ್ನು ಪುನಃ ಜೀವಕ್ಕೆ ತರಬಲ್ಲನು. (ಯೋಹಾನ 5:​28, 29) ದೇವರು ನಮಗಾಗಿ ಇದೆಲ್ಲವನ್ನು ಉದ್ದೇಶಿಸಿದ್ದಾನೆ, ಮತ್ತು ಅದು ಖಂಡಿತವಾಗಿಯೂ ನೆರವೇರುವುದು. ದೇವರಿಗೆ ನಮ್ಮ ಬಗ್ಗೆ ಹಿತಚಿಂತನೆಯಿಲ್ಲ ಎಂದು ಹೇಳುವುದು ಎಷ್ಟು ಅಸತ್ಯವಾಗಿದೆ!

“ದೇವರ ಸಮೀಪಕ್ಕೆ ಬನ್ನಿರಿ”

ಮಾನವ ಕಷ್ಟಸಂಕಟವೆಂಬ ಸಮಸ್ಯೆಗಾಗಿ ದೇವರು ಒಂದು ದೀರ್ಘಾವಧಿಯ, ಖಾಯಂ ಪರಿಹಾರದ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದಾನೆಂಬ ಮಾತು ಸಾಂತ್ವನದಾಯಕವಾಗಿದೆ. ಆದರೆ ಈಗೇನು? ನಮ್ಮ ಪ್ರಿಯರೊಬ್ಬರು ಮರಣಕ್ಕೆ ವಶವಾಗುವಲ್ಲಿ, ಇಲ್ಲವೆ ನಮ್ಮ ಮಗು ಕಾಯಿಲೆಬೀಳುವಲ್ಲಿ ನಾವೇನು ಮಾಡಬಲ್ಲೆವು? ಕಾಯಿಲೆ ಮತ್ತು ಮರಣವನ್ನು ನಿರ್ಮೂಲಗೊಳಿಸುವ ದೇವರ ಸಮಯವು ಇನ್ನೂ ಬಂದಿಲ್ಲ. ಅದಕ್ಕಾಗಿ ನಾವಿನ್ನು ಸ್ವಲ್ಪ ಕಾಲ ಕಾಯಬೇಕಾದೀತೆಂದು ಬೈಬಲ್‌ ಸೂಚಿಸುತ್ತದೆ. ಆದರೆ ದೇವರು ನಮ್ಮ ಕೈಬಿಟ್ಟಿಲ್ಲ. ಶಿಷ್ಯನಾದ ಯಾಕೋಬನು ಹೇಳಿದ್ದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:⁠8) ಹೌದು, ನಮ್ಮ ಸೃಷ್ಟಿಕರ್ತನು ನಾವಾತನೊಂದಿಗೆ ಒಂದು ಆಪ್ತವಾದ ವೈಯಕ್ತಿಕ ಸಂಬಂಧವನ್ನಿಟ್ಟುಕೊಳ್ಳುವಂತೆ ಆಮಂತ್ರಿಸುತ್ತಾನೆ. ಅಂಥ ಆಪ್ತ ಸಂಬಂಧವನ್ನು ಹೊಂದಿರುವವರು, ಅತೀ ಕಷ್ಟಕರವಾದ ಸನ್ನಿವೇಶಗಳಲ್ಲೂ ಆತನು ಆಸರೆಯಾಗಿರುತ್ತಾನೆ ಎಂಬುದನ್ನು ಗ್ರಹಿಸುತ್ತಾರೆ.

ನಾವು ದೇವರ ಸಮೀಪಕ್ಕೆ ಹೋಗುವುದಾದರೂ ಹೇಗೆ? ಸುಮಾರು ಮೂರು ಸಹಸ್ರಮಾನಗಳ ಹಿಂದೆ ರಾಜನಾದ ದಾವೀದನು ಅದೇ ರೀತಿಯ ಪ್ರಶ್ನೆಯೊಂದನ್ನು ಕೇಳಿದನು: “ಯೆಹೋವನೇ, . . . ನಿನ್ನ ಪರಿಶುದ್ಧಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?” (ಕೀರ್ತನೆ 15:⁠1) ದಾವೀದನು ತನ್ನ ಸ್ವಂತ ಪ್ರಶ್ನೆಯನ್ನು ಉತ್ತರಿಸುತ್ತಾ ಮುಂದುವರಿಸಿದ್ದು: “ಅವನು ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ ಆಗಿರಬೇಕು. ಅವನು ಚಾಡಿಯನ್ನು ಹೇಳದವನೂ ಮತ್ತೊಬ್ಬರಿಗೆ ಅನ್ಯಾಯಮಾಡದವನೂ ಯಾರನ್ನೂ ನಿಂದಿಸದವನೂ ಆಗಿರಬೇಕು.” (ಕೀರ್ತನೆ 15:2, 3) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆದಾಮಹವ್ವರು ತಳ್ಳಿಹಾಕಿದಂಥ ಮಾರ್ಗವನ್ನು ಯಾರು ಅನುಸರಿಸುತ್ತಾರೊ ಅವರನ್ನು ಯೆಹೋವನು ಸ್ವಾಗತಿಸುತ್ತಾನೆ. ಆತನ ಚಿತ್ತವನ್ನು ಮಾಡುವವರಿಗೆ ಆತನು ಸಮೀಪವಾಗುತ್ತಾನೆ.​—⁠ಧರ್ಮೋಪದೇಶಕಾಂಡ 6:​24, 25; 1 ಯೋಹಾನ 5:⁠3.

ನಾವು ದೇವರ ಚಿತ್ತವನ್ನು ಹೇಗೆ ಮಾಡಬಲ್ಲೆವು? “ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ” ಇರುವಂಥದ್ದೇನೆಂಬುದನ್ನು ನಾವು ಕಲಿತು, ಅದಕ್ಕನುಸಾರ ಕ್ರಿಯೆಗೈಯಲು ಆಯ್ಕೆಮಾಡಬೇಕು. (1 ತಿಮೊಥೆಯ 2:⁠3) ಅದರಲ್ಲಿ, ದೇವರ ವಾಕ್ಯವಾದ ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದು ಸೇರಿರುತ್ತದೆ. (ಯೋಹಾನ 17:​3; 2 ತಿಮೊಥೆಯ 3:​16, 17) ಬೈಬಲನ್ನು ಮೇಲಿಂದ ಮೇಲೆ ಓದುವುದಷ್ಟೇ ಸಾಲದು, ಅದಕ್ಕಿಂತಲೂ ಹೆಚ್ಚಿನದ್ದರ ಅಗತ್ಯವಿದೆ. ಪೌಲನ ಸಾರುವಿಕೆಗೆ ಕಿವಿಗೊಟ್ಟ, ಬೆರೋಯದಲ್ಲಿನ ಪ್ರಥಮ ಶತಮಾನದ ಯೆಹೂದ್ಯರನ್ನು ನಾವು ಅನುಕರಿಸಬೇಕು. ಅವರ ಬಗ್ಗೆ ನಾವು ಹೀಗೆ ಓದುತ್ತೇವೆ: “ಆ ಸಭೆಯವರು . . . ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.”​—⁠ಅ. ಕೃತ್ಯಗಳು 17:⁠11.

ಅದೇ ರೀತಿಯಲ್ಲಿ ಇಂದು, ಬೈಬಲಿನ ಸಮಗ್ರ ಅಧ್ಯಯನವು, ದೇವರಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸಲು ಮತ್ತು ಆತನೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಸೆಯಲು ನಮಗೆ ಸಹಾಯಮಾಡುತ್ತದೆ. (ಇಬ್ರಿಯ 11:⁠6) ಯೆಹೋವನು ಮಾನವಕುಲದೊಂದಿಗೆ ನಿಖರವಾಗಿ ಹೇಗೆ ವ್ಯವಹರಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆಯೂ ಅದು ನಮಗೆ ಸಹಾಯಮಾಡುತ್ತದೆ. ಆತನು ಕೇವಲ ಅಲ್ಪಾವಧಿಯ ಪ್ರಯೋಜನಗಳನ್ನಲ್ಲ ಬದಲಾಗಿ ಸರಿಯಾದ ಮನೋವೃತ್ತಿಯಿರುವವರೆಲ್ಲರಿಗೆ ದೀರ್ಘಾವಧಿಯ ಒಳಿತನ್ನು ತರುವ ರೀತಿಯಲ್ಲಿ ವ್ಯವಹರಿಸುತ್ತಾನೆ.

ದೇವರೊಂದಿಗೆ ಆಪ್ತ ಸಂಬಂಧವನ್ನು ಹೊಂದಿರುವ ಕೆಲವು ಮಂದಿ ಕ್ರೈಸ್ತರ ಅಭಿವ್ಯಕ್ತಿಗಳನ್ನು ಪರಿಗಣಿಸಿರಿ. “ನಾನು ಯೆಹೋವನನ್ನು ತುಂಬ ಪ್ರೀತಿಸುತ್ತೇನೆ, ಮತ್ತು ಆತನಿಗೆ ಉಪಕಾರಹೇಳಲು ನನಗೆ ಬಹಳಷ್ಟು ಕಾರಣಗಳಿವೆ. ಆತನಿಗಾಗಿ ನಿಜವಾದ ಪ್ರೀತಿಯಿರುವ, ಮತ್ತು ಆತನ ವಾಕ್ಯಕ್ಕನುಸಾರ ನನಗೆ ಬೋಧಿಸಿರುವ ಪ್ರೀತಿಯ ಹೆತ್ತವರನ್ನು ಆತನು ನನಗೆ ಕೊಟ್ಟಿದ್ದಾನೆ,” ಎಂದು 16 ವರ್ಷ ಪ್ರಾಯದ ಡಾನ್ಯೇಲ್‌ ಹೇಳುತ್ತಾಳೆ. ಉರುಗ್ವೆಯಲ್ಲಿರುವ ಕ್ರೈಸ್ತನೊಬ್ಬನು ಬರೆಯುವುದು: “ನನ್ನ ಹೃದಯವು ಗಣ್ಯತೆಯಿಂದ ಉಕ್ಕೇರುತ್ತದೆ. ಯೆಹೋವನ ಅಪಾತ್ರ ದಯೆ ಮತ್ತು ಆತನ ಸ್ನೇಹಕ್ಕಾಗಿ ಉಪಕಾರಹೇಳಲು ನಾನು ಪ್ರಚೋದಿಸಲ್ಪಡುತ್ತೇನೆ.” ತುಂಬ ಎಳೆಯರನ್ನೂ ದೇವರು ಸ್ವಾಗತಿಸುತ್ತಾನೆ. ಏಳು ವರ್ಷದ ಗಾಬ್ರೀಯೆಲ ಹೇಳುವುದು: “ಇಡೀ ಲೋಕದಲ್ಲಿ ಎಲ್ಲದಕ್ಕಿಂತಲೂ ಹೆಚ್ಚಾಗಿ ನಾನು ದೇವರನ್ನು ಪ್ರೀತಿಸುತ್ತೇನೆ! ನನ್ನ ಬಳಿ ನನ್ನ ಸ್ವಂತ ಬೈಬಲ್‌ ಇದೆ. ನಾನು ದೇವರ ಬಗ್ಗೆ ಮತ್ತು ಆತನ ಮಗನ ಬಗ್ಗೆ ಕಲಿಯಲು ತುಂಬ ಇಷ್ಟಪಡುತ್ತೇನೆ.”

ಇಂದು ಲೋಕವ್ಯಾಪಕವಾಗಿ ಲಕ್ಷಾಂತರ ಮಂದಿ, “ನನಗಾದರೋ ದೇವರ ಸಾನಿಧ್ಯವೇ ಭಾಗ್ಯವು” ಎಂದು ಹೇಳಿದ ಕೀರ್ತನೆಗಾರನೊಂದಿಗೆ ಮನಸಾರೆ ಒಪ್ಪಿಕೊಳ್ಳುತ್ತಾರೆ. (ಕೀರ್ತನೆ 73:28) ಅವರು ಈಗ ಎದುರಿಸುತ್ತಿರುವಂಥ ಸಮಸ್ಯೆಗಳನ್ನು ನಿಭಾಯಿಸಲು ಅವರಿಗೆ ಸಹಾಯ ದೊರಕಿದೆ, ಮತ್ತು ಭೂಮಿಯ ಮೇಲೆ ಪರದೈಸಿನಲ್ಲಿ ಸದಾಕಾಲ ಜೀವಿಸುವ ದೃಢ ಭರವಸೆಯೂ ಅವರಿಗಿದೆ. (1 ತಿಮೊಥೆಯ 4:⁠8) ‘ದೇವರ ಸಮೀಪಕ್ಕೆ ಬರುವುದನ್ನು’ ನಿಮ್ಮ ಗುರಿಯನ್ನಾಗಿ ಮಾಡಬಾರದೇಕೆ? ನಮಗೆ ಈ ಆಶ್ವಾಸನೆ ಕೊಡಲ್ಪಟ್ಟಿದೆ: “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” (ಅ. ಕೃತ್ಯಗಳು 17:27) ಹೌದು, ದೇವರಿಗೆ ನಿಜವಾಗಿಯೂ ನಿಮ್ಮ ಬಗ್ಗೆ ಹಿತಚಿಂತನೆ ಇದೆ!

[ಪುಟ 5ರಲ್ಲಿರುವ ಚಿತ್ರಗಳು]

ನಮಗಾಗಿ ಯೆಹೋವನಿಗಿರುವ ಹಿತಚಿಂತನೆಯು ಅನೇಕ ವಿಧಗಳಲ್ಲಿ ತೋರಿಬರುತ್ತದೆ

[ಪುಟ 7ರಲ್ಲಿರುವ ಚಿತ್ರ]

ಎಳೆಯ ಮಕ್ಕಳು ಸಹ ದೇವರ ಸಮೀಪಕ್ಕೆ ಬರಬಲ್ಲರು

[ಪುಟ 7ರಲ್ಲಿರುವ ಚಿತ್ರಗಳು]

ಇಂದು ಯೆಹೋವನು ನಮಗೆ ತಾಳಿಕೊಳ್ಳುವಂತೆ ಸಹಾಯಮಾಡುತ್ತಾನೆ. ತಕ್ಕ ಸಮಯದಲ್ಲಿ ಆತನು ರೋಗ ಮತ್ತು ಮರಣವನ್ನು ತೆಗೆದುಹಾಕುವನು