ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನ ಆಜ್ಞೆ” ವಿಫಲಗೊಳ್ಳದು

“ಯೆಹೋವನ ಆಜ್ಞೆ” ವಿಫಲಗೊಳ್ಳದು

“ಯೆಹೋವನ ಆಜ್ಞೆ” ವಿಫಲಗೊಳ್ಳದು

“ನಾನು ಯೆಹೋವನ ಆಜ್ಞೆಯನ್ನು ತಿಳಿಸುತ್ತೇನೆ, ಕೇಳಿರಿ; ಆತನು ನನಗೆ— ⁠ನನಗೆ ನೀನು ಮಗನು; . . . ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನ ಮಾಡುವೆನು . . . ಎಂದು ಹೇಳಿದನು.”​—⁠ಕೀರ್ತನೆ 2:7-9.

ಮಾನವಕುಲ ಮತ್ತು ಭೂಮಿಯ ವಿಷಯದಲ್ಲಿ ಯೆಹೋವ ದೇವರಿಗೆ ಒಂದು ಉದ್ದೇಶವಿದೆ. ಜನಾಂಗಗಳಿಗೂ ಒಂದು ಉದ್ದೇಶವಿದೆ. ಆದರೆ ಆ ಉದ್ದೇಶಗಳ ಮಧ್ಯೆ ಎಷ್ಟೊಂದು ವ್ಯತ್ಯಾಸವಿದೆ! ನಾವಿದನ್ನು ನಿರೀಕ್ಷಿಸಲೇಬೇಕು, ಏಕೆಂದರೆ ದೇವರನ್ನುವುದು: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.” ದೇವರ ಉದ್ದೇಶವು ಕೈಗೂಡುವುದಂತೂ ನಿಶ್ಚಯ, ಏಕೆಂದರೆ ಆತನು ಮುಂದುವರಿಸಿ ಹೇಳುವುದು: “ಮಳೆಯೂ ಹಿಮವೂ ಆಕಾಶದಿಂದ ಬಿದ್ದು ಭೂಮಿಯನ್ನು ತೋಯಿಸಿ ಹಸಿರುಗೊಳಿಸಿ ಫಲಿಸುವಂತೆ ಮಾಡಿ ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವದಿಲ್ಲವೋ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”​—⁠ಯೆಶಾಯ 55:9-11.

2 ತನ್ನ ಮೆಸ್ಸೀಯ ರಾಜನ ಸಂಬಂಧದಲ್ಲಿ ದೇವರ ಉದ್ದೇಶವು ನೆರವೇರುವುದೆಂಬುದನ್ನು ಎರಡನೆಯ ಕೀರ್ತನೆ ಸ್ಪಷ್ಟಪಡಿಸುತ್ತದೆ. ಅದರ ರಚಕನಾದ ಪುರಾತನ ಇಸ್ರಾಯೇಲಿನ ರಾಜ ದಾವೀದನು, ಜನಾಂಗಗಳು ದೊಂಬಿಮಾಡುವ ಇಲ್ಲವೆ ಕೋಲಾಹಲದಲ್ಲಿರುವ ಒಂದು ಗಮನಾರ್ಹ ಕಾಲ ಬರುವುದೆಂಬುದನ್ನು ಮುಂತಿಳಿಸುವಂತೆ ದೈವಿಕವಾಗಿ ಪ್ರೇರಿಸಲ್ಪಟ್ಟನು. ಅವುಗಳ ಪ್ರಭುಗಳು ಯೆಹೋವ ದೇವರ ಮತ್ತು ಆತನ ಅಭಿಷಿಕ್ತನ ವಿರೋಧವಾಗಿ ನಿಲ್ಲುವರು. ಆದರೆ ಕೀರ್ತನೆಗಾರನು, “ನಾನು ಯೆಹೋವನ ಆಜ್ಞೆಯನ್ನು ತಿಳಿಸುತ್ತೇನೆ, ಕೇಳಿರಿ; ಆತನು ನನಗೆ​—⁠ನನಗೆ ನೀನು ಮಗನು; . . . ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನ ಮಾಡುವೆನು; ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು . . . ಎಂದು ಹೇಳಿದನು” ಎಂಬುದಾಗಿಯೂ ಹಾಡಿದನು.​—⁠ಕೀರ್ತನೆ 2:​7-9.

3 ಈ “ಯೆಹೋವನ ಆಜ್ಞೆ” ಜನಾಂಗಗಳಿಗೆ ಯಾವ ಅರ್ಥದಲ್ಲಿರುವುದು? ಅದು ಮಾನವಕುಲವನ್ನು ಸಾಮಾನ್ಯವಾಗಿ ಹೇಗೆ ಬಾಧಿಸುತ್ತದೆ? ಮತ್ತು ಈ ಆಜ್ಞೆಯ ಫಲವಾಗಿ ಆಗುವ ವಿಕಸನಗಳು ಎರಡನೆಯ ಕೀರ್ತನೆಯ ದೇವಭಯವುಳ್ಳ ಓದುಗರಿಗೆ ಯಾವ ಅರ್ಥದಲ್ಲಿರುತ್ತವೆ?

ದೊಂಬಿಗೊಳಗಾಗಿರುವ ಜನಾಂಗಗಳು

4 ಜನಾಂಗಗಳ ಮತ್ತು ಅವುಗಳ ಅಧಿಪತಿಗಳ ಕೃತ್ಯಗಳಿಗೆ ಸೂಚಿಸುತ್ತ, ಕೀರ್ತನೆಗಾರನು ತನ್ನ ರಚನೆಯನ್ನು ಹೀಗೆ ಹಾಡುತ್ತ ಆರಂಭಿಸುತ್ತಾನೆ: “ಅನ್ಯಜನಗಳು ದೊಂಬಿಮಾಡುವದೂ ಜನಾಂಗಗಳವರು ವ್ಯರ್ಥಕಾರ್ಯಗಳನ್ನು ಯೋಚಿಸುವದೂ ಯಾಕೆ? ಯೆಹೋವನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ ಭೂಪತಿಗಳು ಸನ್ನದ್ಧರಾಗಿ ನಿಂತಿದ್ದಾರೆ, ಅಧಿಕಾರಿಗಳು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ.”​—⁠ಕೀರ್ತನೆ 2:1, 2. *

5 ಸದ್ಯದ ದಿನದ ಜನಾಂಗಗಳವರು ಯಾವ ‘ವ್ಯರ್ಥಕಾರ್ಯಗಳನ್ನು ಯೋಚಿಸಿದ್ದಾರೆ’? ದೇವರ ಅಭಿಷಿಕ್ತನಾದ ಮೆಸ್ಸೀಯನನ್ನು ಅಥವಾ ಕ್ರಿಸ್ತನನ್ನು ಒಪ್ಪಿಕೊಳ್ಳುವ ಬದಲಿಗೆ ಜನಾಂಗಗಳು ತಮ್ಮ ಸ್ವಂತ ಅಧಿಕಾರವನ್ನು ಮುಂದುವರಿಸುವ ವಿಷಯವನ್ನೇ ‘ಯೋಚಿಸಿವೆ’ ಇಲ್ಲವೆ ಮನನಮಾಡಿವೆ. ಎರಡನೆಯ ಕೀರ್ತನೆಯ ಈ ಮಾತುಗಳು ಸಾ.ಶ. ಒಂದನೆಯ ಶತಮಾನದಲ್ಲೂ, ದೇವರ ನೇಮಿತ ಅರಸನಾದ ಯೇಸು ಕ್ರಿಸ್ತನನ್ನು ಕೊಲ್ಲಲು ಯೆಹೂದಿ ಮತ್ತು ರೋಮನ್‌ ಅಧಿಕಾರಿಗಳು ಜೊತೆಯಾಗಿ ಕೆಲಸಮಾಡಿದಾಗ ನೆರವೇರಿದವು. ಆದರೂ, ಇದರ ಪ್ರಮುಖ ನೆರವೇರಿಕೆಯು 1914ರಲ್ಲಿ ಯೇಸು ಸ್ವರ್ಗೀಯ ಅರಸನಾಗಿ ಸ್ಥಾಪಿಸಲ್ಪಟ್ಟಾಗ ಆರಂಭಗೊಂಡಿತು. ಅಂದಿನಿಂದ, ಭೂಮಿಯಲ್ಲಿರುವ ಯಾವ ರಾಜಕೀಯ ಸರಕಾರವೂ ದೇವರ ಸಿಂಹಾಸನಾರೂಢನಾದ ಅರಸನನ್ನು ಒಪ್ಪಿಕೊಂಡಿರುವುದಿಲ್ಲ.

6 ಕೀರ್ತನೆಗಾರನು, ‘ಜನಾಂಗಗಳವರು ವ್ಯರ್ಥಕಾರ್ಯಗಳನ್ನು ಯೋಚಿಸುವುದು ಯಾಕೆ’ ಎಂದು ಕೇಳಿದಾಗ ಅದರ ಅರ್ಥವೇನಾಗಿತ್ತು? ಅವರ ಉದ್ದೇಶ ವ್ಯರ್ಥವಾಗಿದೆ, ನಿರರ್ಥಕವಾಗಿದೆ, ವೈಫಲ್ಯಕ್ಕೆ ಈಡಾಗಿದೆ ಎಂದೇ. ಅವರು ಈ ಭೂಮಿಗೆ ಶಾಂತಿ ಮತ್ತು ಸಾಮರಸ್ಯವನ್ನು ತರಲಾರರು. ಆದರೂ, ಅವರು ತಮ್ಮ ಕಾರ್ಯಗಳನ್ನು ದೇವರ ಆಳಿಕೆಯನ್ನು ಧಿಕ್ಕರಿಸುವಷ್ಟರ ಮಟ್ಟಿಗೆ ಮುಂದುವರಿಸುತ್ತಾರೆ. ವಾಸ್ತವವೇನಂದರೆ, ಅವರು ಒಟ್ಟುಗೂಡಿ ಪ್ರತಿಭಟನೆಯ ನಿಲುವನ್ನು ತೆಗೆದುಕೊಂಡು ಸರ್ವೋನ್ನತನಿಗೂ ಆತನ ಅಭಿಷಿಕ್ತನಿಗೂ ವಿರುದ್ಧವಾಗಿ ಗುಂಪುಗೂಡಿದ್ದಾರೆ. ಎಂತಹ ಮೂರ್ಖತನ!

ಯೆಹೋವನ ವಿಜಯಿ ಅರಸನು

7 ಯೇಸುವಿನ ಹಿಂಬಾಲಕರು ಕೀರ್ತನೆ 2:​1, 2ನ್ನು ಯೇಸುವಿಗೆ ಅನ್ವಯಿಸಿದರು. ತಮ್ಮ ನಂಬಿಕೆಗಾಗಿ ಹಿಂಸಿಸಲ್ಪಟ್ಟಾಗ ಅವರು ಪ್ರಾರ್ಥಿಸಿದ್ದು: ‘ಒಡೆಯನೇ [ಯೆಹೋವನೇ], ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನೇ, ನೀನು ಪವಿತ್ರಾತ್ಮ ಮೂಲಕವಾಗಿ ನಿನ್ನ ಸೇವಕನಾಗಿದ್ದ ನಮ್ಮ ಪಿತೃವಾದ ದಾವೀದನ ಬಾಯಿಂದ​—⁠ಅನ್ಯಜನಗಳು ಯಾಕೆ ರೇಗಿದರು? ಜನಾಂಗಗಳವರು ವ್ಯರ್ಥಕಾರ್ಯಗಳನ್ನು ಯಾಕೆ ಯೋಚಿಸಿದರು? ಕರ್ತನಿಗೂ [“ಯೆಹೋವನಿಗೂ,” NW] ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ ಭೂಪತಿಗಳು ಸನ್ನದ್ಧರಾಗಿ ನಿಂತರು, ಆ ಮಾತಿಗೆ ಅನುಸಾರವಾಗಿಯೇ ಈ ಪಟ್ಟಣದಲ್ಲಿ ಹೆರೋದ [ಅಂತಿಪ]ನೂ ಪೊಂತ್ಯಪಿಲಾತನೂ ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಅನ್ಯಜನರ ಮತ್ತು ಇಸ್ರಾಯೇಲ್‌ ಜನರ ಸಹಿತವಾಗಿ ಕೂಡಿಕೊಂಡಿದ್ದಾರೆ.’ (ಅ. ಕೃತ್ಯಗಳು 4:24-27; ಲೂಕ 23:1-12) * ಹೌದು, ಒಂದನೆಯ ಶತಮಾನದಲ್ಲಿ ದೇವರ ಅಭಿಷಿಕ್ತ ಸೇವಕನಾಗಿದ್ದ ಯೇಸುವಿನ ವಿರುದ್ಧ ಒಂದು ಒಳಸಂಚು ನಡೆದಿತ್ತು. ಹಾಗಿದ್ದರೂ, ಈ ಕೀರ್ತನೆಗೆ ಶತಮಾನಗಳ ನಂತರವೂ ಇನ್ನೊಂದು ನೆರವೇರಿಕೆಯಿರಲಿಕ್ಕಿತ್ತು.

8 ಪುರಾತನ ಇಸ್ರಾಯೇಲಿನಲ್ಲಿ ದಾವೀದನಂಥ ಮಾನವ ಅರಸನಿದ್ದಾಗ, ವಿಧರ್ಮಿ ಜನಾಂಗಗಳೂ ಪ್ರಭುಗಳೂ ದೇವರ ಮತ್ತು ಆತನ ಸಿಂಹಾಸನಾರೂಢನಾದ ಅಭಿಷಿಕ್ತ ಅರಸನ ವಿರುದ್ಧ ಒಟ್ಟುಸೇರಿದರು. ಆದರೆ ನಮ್ಮ ದಿನಗಳ ಕುರಿತೇನು? ಇಂದಿನ ಜನಾಂಗಗಳಿಗೆ ಯೆಹೋವನ ಮತ್ತು ಆತನ ಮೆಸ್ಸೀಯನ ಆವಶ್ಯಕತೆಗಳಿಗೆ ಹೊಂದಿಕೊಳ್ಳಲು ಮನಸ್ಸಿಲ್ಲ. ಆದಕಾರಣ, “ನಮಗೆ ಅವರು ಹಾಕಿದ ಬಂಧನಗಳನ್ನು ಕಿತ್ತು ಬೇಡಿಗಳನ್ನು ಮುರಿದು ಬಿಸಾಡೋಣ” ಎಂದು ಅವರು ಹೇಳುತ್ತಿರುವಂತೆ ಚಿತ್ರಿಸಲಾಗಿದೆ. (ಕೀರ್ತನೆ 2:3) ದೇವರು ಅಥವಾ ಆತನ ಅಭಿಷಿಕ್ತನು ಹಾಕುವ ಯಾವುದೇ ನಿರ್ಬಂಧಗಳನ್ನು, ಪ್ರಭುಗಳು ಮತ್ತು ಜನಾಂಗಗಳು ವಿರೋಧಿಸುವವು. ಆದರೂ, ಇಂತಹ ಬಂಧನ ಮತ್ತು ಬೇಡಿಗಳನ್ನು ಕಿತ್ತುಹಾಕಲು ಮಾಡುವ ಯಾವುದೇ ಪ್ರಯತ್ನಗಳು ವ್ಯರ್ಥವಾಗಿರುವವು.

ಯೆಹೋವನು ಪರಿಹಾಸ್ಯಮಾಡುತ್ತಾನೆ

9 ಜನಾಂಗಗಳ ಪ್ರಭುಗಳು ತಮ್ಮ ಸ್ವಂತ ಅಧಿಕಾರವನ್ನು ಸ್ಥಾಪಿಸಲು ಮಾಡುವ ಪ್ರಯತ್ನಗಳಿಂದ ಯೆಹೋವನು ಚಿಂತಿತನಾಗುವುದಿಲ್ಲ. ಎರಡನೆಯ ಕೀರ್ತನೆಯು ಹೀಗೆ ಮುಂದುವರಿಯುತ್ತದೆ: “ಪರಲೋಕದಲ್ಲಿ ಆಸನಾರೂಢನಾಗಿರುವಾತನು ಅದಕ್ಕೆ ನಗುವನು; ಕರ್ತನು [“ಯೆಹೋವನು,” NW] ಅವರನ್ನು ಪರಿಹಾಸ್ಯಮಾಡುವನು.” (ಕೀರ್ತನೆ 2:4) ದೇವರಾದರೊ, ಈ ಪ್ರಭುಗಳು ತೀರ ಕ್ಷುಲ್ಲಕರೆಂಬಂತೆ ತನ್ನ ಉದ್ದೇಶದೊಂದಿಗೆ ಮುಂದುವರಿಯುತ್ತಾನೆ. ಆತನು ಅವರ ಉದ್ಧಟತನವನ್ನು ಕಂಡು ನಗುತ್ತಾನೆ ಮತ್ತು ಅವರನ್ನು ಪರಿಹಾಸ್ಯಮಾಡುತ್ತಾನೆ. ತಾವು ಏನು ಮಾಡಲು ಇಚ್ಛೈಸುತ್ತಾರೊ ಅದರ ಬಗ್ಗೆ ಅವರು ಜಂಬಕೊಚ್ಚಿಕೊಳ್ಳಲಿ. ಆದರೆ ಯೆಹೋವನ ದೃಷ್ಟಿಯಲ್ಲಿ ಅವರು ಹಾಸ್ಯಾಸ್ಪದರು. ಅವರ ವ್ಯರ್ಥವಾದ ವಿರೋಧಕ್ಕಾಗಿ ಆತನು ನಗುತ್ತಾನೆ.

10 ದಾವೀದನು ತನ್ನ ಕೀರ್ತನೆಯ ಬೇರೆ ಕಡೆಗಳಲ್ಲಿ ವೈರಿಗಳಿಗೂ ಜನಾಂಗಗಳಿಗೂ ಸೂಚಿಸುತ್ತಾ ಹಾಡುವುದು: “ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲ್ಯರ ದೇವರೇ, ನೀನು ಎಚ್ಚರವಾಗಿ ಎಲ್ಲಾ ಅನ್ಯಜನಾಂಗಗಳನ್ನು ದಂಡಿಸು. ದುಷ್ಟದ್ರೋಹಿಗಳಲ್ಲಿ ಒಬ್ಬನಿಗೂ ದಯತೋರಿಸಬೇಡ. ಅವರು ಪ್ರತಿಸಾಯಂಕಾಲವೂ ಬಂದು ಬಂದು ನಾಯಿಗಳಂತೆ ಗುರುಗುಟ್ಟುತ್ತಾ ಪಟ್ಟಣವನ್ನೆಲ್ಲಾ ಸುತ್ತುತ್ತಾರೆ. ಇಗೋ ಅವರ ಬಾಯಿಗಳು ಎಷ್ಟೋ ಮಾತುಗಳನ್ನು ಕಕ್ಕುತ್ತವೆ; ಅವೆಲ್ಲಾ ಕತ್ತಿಗಳೇ. ನಮ್ಮನ್ನು ಕೇಳುವವರು ಯಾರು ಅಂದುಕೊಳ್ಳುತ್ತಾರೆ. ಯೆಹೋವನೇ, ನೀನಾದರೋ ನೋಡಿ ನಗುವಿ; ಎಲ್ಲಾ ಅನ್ಯಜನಾಂಗಗಳನ್ನು ಪರಿಹಾಸ್ಯಮಾಡುವಿ.” (ಕೀರ್ತನೆ 59:5-8) ಜನಾಂಗಗಳು ತನಗೆ ವಿರುದ್ಧವಾಗಿ ತೆಗೆದುಕೊಂಡಿರುವ ಮಾರ್ಗಕ್ರಮದಲ್ಲಿ ಜಂಬಕೊಚ್ಚಿ ಗಲಿಬಿಲಿಗೊಳ್ಳುವಾಗ ಯೆಹೋವನು ನಗಾಡುತ್ತಾನೆ.

11 ಕೀರ್ತನೆ 2ರ ಮಾತುಗಳು, ದೇವರು ಯಾವುದೇ ಪಂಥಾಹ್ವಾನವನ್ನು ಎದುರಿಸಬಲ್ಲನೆಂಬ ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ. ಆತನು ಸದಾ ತನ್ನ ಚಿತ್ತವನ್ನು ನೆರವೇರಿಸುತ್ತಾನೆ ಮತ್ತು ತನ್ನ ನಿಷ್ಠಾವಂತ ಸೇವಕರನ್ನು ಎಂದಿಗೂ ತೊರೆಯುವುದಿಲ್ಲ ಎಂಬ ದೃಢಭರವಸೆ ನಮಗಿರಬಲ್ಲದು. (ಕೀರ್ತನೆ 94:14) ಹಾಗಾದರೆ, ಜನಾಂಗಗಳು ಯೆಹೋವನ ಉದ್ದೇಶಕ್ಕೆ ವಿರುದ್ಧವಾಗಿ ಕಾರ್ಯವೆಸಗುವಾಗ ಏನು ಸಂಭವಿಸುತ್ತದೆ? ಈ ಕೀರ್ತನೆಗನುಸಾರ, ದೇವರು ಭಯಂಕರವಾಗಿ ಗರ್ಜಿಸುವ ಗುಡುಗಿನ ಧ್ವನಿಯಿಂದಲೊ ಎಂಬಂತೆ “ಸಿಟ್ಟಾಗಿ” ಮಾತಾಡುವನು. ಇದಲ್ಲದೆ, “ಕೋಪಾವೇಶದಿಂದ” ಒಂದು ಮಹಾ ಮಿಂಚಿನಿಂದಲೊ ಎಂಬಂತೆ ಆತನು “ಅವರನ್ನು ಕಳವಳಗೊಳಿಸುವನು.”​—⁠ಕೀರ್ತನೆ 2:⁠5, 6.

ದೇವರ ಅರಸನು ಸ್ಥಾಪಿಸಲ್ಪಡುತ್ತಾನೆ

12 ಯೆಹೋವನು ಕೀರ್ತನೆಗಾರನ ಮೂಲಕ ಮುಂದೆ ಏನು ಹೇಳುತ್ತಾನೊ ಅದು ನಿಸ್ಸಂದೇಹವಾಗಿಯೂ ಜನಾಂಗಗಳನ್ನು ಕಳವಳಗೊಳಿಸುತ್ತದೆ. ದೇವರು ಪ್ರಕಟಿಸುವುದು: “ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು.” (ಕೀರ್ತನೆ 2:5) ಚೀಯೋನ್‌ ಪರ್ವತವು ಯೆರೂಸಲೇಮಿನಲ್ಲಿದ್ದ ಒಂದು ಬೆಟ್ಟವಾಗಿತ್ತು. ಅಲ್ಲಿ ದಾವೀದನನ್ನು ಇಡೀ ಇಸ್ರಾಯೇಲಿನ ಮೇಲೆ ರಾಜನಾಗಿ ಸ್ಥಾಪಿಸಲಾಗಿತ್ತು. ಆದರೆ ಮೆಸ್ಸೀಯ ಅರಸನು, ಆ ನಗರದಲ್ಲಾಗಲಿ ಭೂಮಿಯ ಮೇಲೆ ಬೇರೆಲ್ಲಿಯೇ ಆಗಲಿ ಸಿಂಹಾಸನದ ಮೇಲೆ ಕುಳಿತುಕೊಳ್ಳನು. ವಾಸ್ತವದಲ್ಲಿ, ಯೆಹೋವನು ಯೇಸು ಕ್ರಿಸ್ತನನ್ನು ಸ್ವರ್ಗೀಯ ಚೀಯೋನ್‌ ಪರ್ವತದಲ್ಲಿ ತನ್ನ ನೇಮಿತ ಮೆಸ್ಸೀಯ ರಾಜನಾಗಿ ಈಗಾಗಲೇ ಸ್ಥಾಪಿಸಿದ್ದಾನೆ.​—⁠ಪ್ರಕಟನೆ 14:⁠1.

13 ಮೆಸ್ಸೀಯ ರಾಜನು ಈಗ ಮಾತಾಡುತ್ತಾನೆ. ಅವನು ಹೇಳುವುದು: “ನಾನು ಯೆಹೋವನ [ತನ್ನ ಪುತ್ರನೊಡನೆ ರಾಜ್ಯದ ಒಡಂಬಡಿಕೆಯನ್ನು ಮಾಡಿಕೊಂಡಿರುವವನ] ಆಜ್ಞೆಯನ್ನು ತಿಳಿಸುತ್ತೇನೆ, ಕೇಳಿರಿ; ಆತನು [ಯೆಹೋವ ದೇವರು] ನನಗೆ​—⁠ನನಗೆ ನೀನು ಮಗನು; ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ . . . ಎಂದು ಹೇಳಿದನು.” (ಕೀರ್ತನೆ 2:​7-9) ಕ್ರಿಸ್ತನು ತನ್ನ ಅಪೊಸ್ತಲರಿಗೆ, “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ” ಎಂದು ಹೇಳಿದಾಗ ಈ ರಾಜ್ಯದ ಒಡಂಬಡಿಕೆಯನ್ನೇ ಸೂಚಿಸಿದನು.​—⁠ಲೂಕ 22:28, 29.

14 ಕೀರ್ತನೆ 2:7ರಲ್ಲಿ ಮುಂತಿಳಿಸಲ್ಪಟ್ಟಿರುವಂತೆ, ಯೆಹೋವನು ಯೇಸುವನ್ನು ತನ್ನ ಕುಮಾರನೆಂದು ಅವನ ದೀಕ್ಷಾಸ್ನಾನದ ಸಮಯದಲ್ಲಿ ಮತ್ತು ಅವನನ್ನು ಆತ್ಮಜೀವನಕ್ಕೆ ಪುನರುತ್ಥಾನಗೊಳಿಸುವ ಮೂಲಕವೂ ತೋರಿಸಿದನು. (ಮಾರ್ಕ 1:9-11; ರೋಮಾಪುರ 1:4; ಇಬ್ರಿಯ 1:5; 5:5) ಹೌದು, ದೇವರ ಸ್ವರ್ಗೀಯ ರಾಜ್ಯದ ಅರಸನು ದೇವರ ಏಕಜಾತ ಪುತ್ರನೇ. (ಯೋಹಾನ 3:16) ರಾಜ ದಾವೀದನ ರಾಜವಂಶಸ್ಥನೋಪಾದಿ ಯೇಸು, ವಿವಾದಾಸ್ಪದವಿಲ್ಲದೆ ರಾಜನಾಗುವ ಹಕ್ಕುಳ್ಳವನಾಗಿದ್ದಾನೆ. (2 ಸಮುವೇಲ 7:4-17; ಮತ್ತಾಯ 1:6, 16) ಈ ಕೀರ್ತನೆಗನುಸಾರ ದೇವರು ತನ್ನ ಪುತ್ರನಿಗೆ, “ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನ ಮಾಡುವೆನು; ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು” ಎಂದು ಹೇಳುತ್ತಾನೆ.​—⁠ಕೀರ್ತನೆ 2:⁠8.

15 ದೇವರ ಸ್ವಂತ ಕುಮಾರನಾದ ಈ ಅರಸನು ಯೆಹೋವನಿಗೆ ಅತಿ ನಿಕಟವಾದ ಸ್ಥಾನದಲ್ಲಿದ್ದಾನೆ. ಯೇಸು ಯೆಹೋವನ ಪರೀಕ್ಷಿತ, ನಿಷ್ಠಾವಂತ, ಮತ್ತು ಭರವಸಾರ್ಹನಾದ ವ್ಯಕ್ತಿ. ಇದಲ್ಲದೆ, ಯೇಸು ದೇವರ ಜ್ಯೇಷ್ಠ ಪುತ್ರನಾಗಿರುವ ಕಾರಣ ಬಾಧ್ಯತೆಗೂ ಅರ್ಹನು. ಹೌದು, ಯೇಸು, “ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ.” (ಕೊಲೊಸ್ಸೆ 1:15) ಆದುದರಿಂದ, ಅವನು ‘ಅನ್ಯಜನಗಳನ್ನೆಲ್ಲಾ ಅಧೀನ ಮಾಡಿ, ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನು ಸ್ವಾಸ್ತ್ಯವಾಗಿ ಕೊಡು’ ಎಂದು ದೇವರನ್ನು ಕೇಳಿಕೊಂಡರೆ ಸಾಕು, ಅದು ಅವನಿಗೆ ಕೊಡಲ್ಪಡುವುದು. ಯೇಸು ಹೀಗೆ ಕೇಳಿಕೊಳ್ಳುವ ಕಾರಣವು, ಅವನು ‘ಮಾನವಸಂತಾನದಲ್ಲಿ ಹರ್ಷಿಸುವುದರಿಂದ’ ಮತ್ತು ಭೂಮಿ ಹಾಗೂ ಮಾನವರ ಕಡೆಗೆ ತನ್ನ ಸ್ವರ್ಗೀಯ ತಂದೆಯ ಚಿತ್ತವನ್ನು ನೆರವೇರಿಸಲು ಅವನಿಗೆ ತೀವ್ರ ಅಪೇಕ್ಷೆಯು ಇರುವುದರಿಂದಲೇ.​—⁠ಜ್ಞಾನೋಕ್ತಿ 8:​30, 31.

ಜನಾಂಗಗಳ ವಿರುದ್ಧವಾಗಿ ಯೆಹೋವನ ಆಜ್ಞೆ

16 ಎರಡನೆಯ ಕೀರ್ತನೆಯು ಈಗ, ಯೇಸು ಕ್ರಿಸ್ತನ ಅದೃಶ್ಯ ಸಾನ್ನಿಧ್ಯದ ಸಮಯದಲ್ಲಿ ನೆರವೇರುತ್ತಿರುವುದರಿಂದ, ಜನಾಂಗಗಳಿಗೆ ಏನು ಕಾದಿದೆ? ಈ ಅರಸನು ಬೇಗನೆ, “ಕಬ್ಬಿಣದ ಗದೆಯಿಂದ ಅವರನ್ನು [ಜನಾಂಗಗಳನ್ನು] ನಾಶಮಾಡುವಿ; ಮಣ್ಣಿನ ಮಡಿಕೆಗಳನ್ನೋ ಎಂಬಂತೆ ಅವರನ್ನು ಒಡೆದುಹಾಕುವಿ” ಎಂಬ ದೇವರ ಘೋಷಣೆಯನ್ನು ನೆರವೇರಿಸುವನು.​—⁠ಕೀರ್ತನೆ 2:⁠9.

17 ಪುರಾತನ ಕಾಲದ ಅರಸರ ಗದೆಗಳು ಅಥವಾ ರಾಜದಂಡಗಳು, ರಾಜಾಧಿಕಾರದ ಸಂಕೇತಗಳಾಗಿದ್ದವು. ಕೆಲವು ಗದೆಗಳನ್ನು, ಈ ಕೀರ್ತನೆಯಲ್ಲಿ ಹೇಳಲಾಗಿರುವಂತೆ ಕಬ್ಬಿಣದಿಂದ ಮಾಡಲಾಗುತ್ತಿತ್ತು. ಅರಸನಾದ ಕ್ರಿಸ್ತನು ಜನಾಂಗಗಳನ್ನು ಎಷ್ಟು ಸಲೀಸಾಗಿ ನಾಶಮಾಡುವನು ಎಂಬುದನ್ನು ಇಲ್ಲಿ ಉಪಯೋಗಿಸಲ್ಪಟ್ಟಿರುವ ಸಾಂಕೇತಿಕ ಭಾಷೆಯು ತೋರಿಸುತ್ತದೆ. ಕಬ್ಬಿಣದ ಗದೆಯ ಬಲವಾದ ಹೊಡೆತವು ಕುಂಬಾರನ ಮಡಿಕೆಯನ್ನು ಪುಡಿಪುಡಿ ಮಾಡುವುದು.

18 ಆದರೆ ಜನಾಂಗಗಳ ಪ್ರಭುಗಳು ಈ ನುಜ್ಜುಗುಜ್ಜಾಗುವಿಕೆಯನ್ನು ನೋಡಬೇಕಾಗಿದೆಯೆ? ಇಲ್ಲ, ಏಕೆಂದರೆ ಕೀರ್ತನೆಗಾರನು ಈ ಮಾತುಗಳಲ್ಲಿ ಅವರಿಗೆ ಕರೆಕೊಡುವುದು: “ಆದದರಿಂದ ಅರಸುಗಳಿರಾ, ವಿವೇಕಿಗಳಾಗಿರ್ರಿ; ದೇಶಾಧಿಪತಿಗಳಿರಾ, ಬುದ್ಧಿಮಾತುಗಳಿಗೆ ಕಿವಿಗೊಡಿರಿ.” (ಕೀರ್ತನೆ 2:10) ಅರಸರನ್ನು ಗಮನ ಕೊಡುವಂತೆಯೂ ವಿವೇಕಿಗಳಾಗುವಂತೆಯೂ ಕೇಳಲಾಗುತ್ತದೆ. ದೇವರ ರಾಜ್ಯವು ಮಾನವಕುಲದ ಪ್ರಯೋಜನಾರ್ಥವಾಗಿ ಏನು ಮಾಡಲಿದೆಯೊ ಅದಕ್ಕೆ ಹೋಲಿಸುವಾಗ ಅವರು ತಮ್ಮ ಯೋಜನೆಗಳ ವ್ಯರ್ಥತೆಯನ್ನು ಪರಿಗಣಿಸಬೇಕಾಗಿದೆ.

19 ಭೂರಾಜರು ದೇವರ ಒಪ್ಪಿಗೆಯನ್ನು ಗಳಿಸಬೇಕಾದರೆ ತಮ್ಮ ಮಾರ್ಗಗಳನ್ನು ಬದಲಾಯಿಸುವ ಅಗತ್ಯವಿದೆ. “ಯೆಹೋವನನ್ನು ಭಯಭಕ್ತಿಯಿಂದ ಸೇವಿಸಿರಿ; ನಡುಗುತ್ತಾ ಉಲ್ಲಾಸಪಡಿರಿ” ಎಂದು ಅವರಿಗೆ ಸಲಹೆ ನೀಡಲಾಗುತ್ತದೆ. (ಕೀರ್ತನೆ 2:11) ಅವರು ಹಾಗೆ ಮಾಡುವಲ್ಲಿ ಆಗೇನು? ದೊಂಬಿಯಲ್ಲಿ ತೊಡಗುವ ಬದಲು ಅಥವಾ ಮನಸ್ಸನ್ನು ಕೋಲಾಹಲದ ಸ್ಥಿತಿಯಲ್ಲಿಡುವ ಬದಲು ಮೆಸ್ಸೀಯ ರಾಜನು ಅವರ ಮುಂದಿಡುವ ಪ್ರತೀಕ್ಷೆಗಳಲ್ಲಿ ಅವರು ಸಂತೋಷಿಸಬಹುದು. ಭೂಮಿಯ ಪ್ರಭುಗಳು ತಮ್ಮ ಆಳ್ವಿಕೆಯಲ್ಲಿ ತೋರಿಸುವ ಹೆಮ್ಮೆ ಮತ್ತು ದರ್ಪಗಳನ್ನು ತ್ಯಜಿಸಬೇಕಾಗುವುದು. ಅಲ್ಲದೆ, ಅವರು ವಿಳಂಬಿಸದೆ ಮಾರ್ಪಟ್ಟು, ದೇವರ ಪರಮಾಧಿಕಾರದ ಅಸಮಾನವಾದ ಶ್ರೇಷ್ಠತೆಯ ಮತ್ತು ದೇವರ ಹಾಗೂ ಆತನ ಮೆಸ್ಸೀಯ ರಾಜನ ಎದುರಿಸಲಾಗದ ಶಕ್ತಿಯ ವಿಷಯದಲ್ಲಿ ವಿವೇಕಿಗಳಾಗಿರುವ ಅಗತ್ಯವಿದೆ.

“ಮಗನಿಗೆ ಮುದ್ದಿಡಿರಿ”

20 ಈಗ ಕೀರ್ತನೆ 2ನೇ ಅಧ್ಯಾಯವು, ಜನಾಂಗಗಳ ಪ್ರಭುಗಳಿಗೆ ಒಂದು ಕರುಣಾಭರಿತ ಆಮಂತ್ರಣವನ್ನು ಕೊಡುತ್ತದೆ. ವಿರೋಧವಾಗಿ ಎದ್ದು ಗುಂಪುಗೂಡುವ ಬದಲಾಗಿ ಅವರು ಈ ಬುದ್ಧಿವಾದಕ್ಕೆ ಕಿವಿಗೊಡುವಂತೆ ಕರೆಕೊಡಲಾಗಿದೆ: “ಮಗನಿಗೆ ಮುದ್ದಿಡಿರಿ; ಇಲ್ಲವಾದರೆ ಆತನ [ಯೆಹೋವ ದೇವರ] ಕೋಪವು ಬೇಗನೆ ಪ್ರಜ್ವಲಿಸಲು ನೀವು ದಾರಿಯಲ್ಲೇ ನಾಶವಾದೀರಿ.” (ಕೀರ್ತನೆ 2:12ಎ) ಪರಮಾಧಿಕಾರಿ ಪ್ರಭುವಾದ ಯೆಹೋವನು ಆಜ್ಞೆ ಕೊಡುವಾಗ ಆತನಿಗೆ ವಿಧೇಯರಾಗಬೇಕು. ದೇವರು ತನ್ನ ಕುಮಾರನನ್ನು ಪಟ್ಟಕ್ಕೇರಿಸಿದಾಗ, ಭೂರಾಜರು ‘ವ್ಯರ್ಥಕಾರ್ಯಗಳನ್ನು ಯೋಚಿಸುವುದನ್ನು’ ತ್ಯಜಿಸಬೇಕಾಗಿತ್ತು. ಅವರು ಆ ರಾಜನನ್ನು ಒಡನೆ ಒಪ್ಪಿಕೊಂಡು ಅವನಿಗೆ ಪೂರ್ಣವಾಗಿ ವಿಧೇಯರಾಗಬೇಕಾಗಿತ್ತು.

21 ‘ಮಗನಿಗೆ ಮುದ್ದಿಡುವುದು’ ಏಕೆ? ಈ ಕೀರ್ತನೆ ರಚಿಸಲ್ಪಟ್ಟ ಕಾಲದಲ್ಲಿ, ಮುದ್ದಿಡುವುದು ಸ್ನೇಹದ ಸಂಕೇತವಾಗಿದ್ದು, ಅತಿಥಿಸತ್ಕಾರಕ್ಕಾಗಿ ಅತಿಥಿಗಳನ್ನು ಮನೆಯೊಳಗೆ ಸ್ವಾಗತಿಸುವಾಗ ಇದನ್ನು ಮಾಡಲಾಗುತ್ತಿತ್ತು. ಮುದ್ದಿಡುವಿಕೆಯು ಕರ್ತವ್ಯನಿಷ್ಠೆ ಅಥವಾ ನಂಬಿಗಸ್ತಿಕೆಯ ಕೃತ್ಯವೂ ಆಗಿರಸಾಧ್ಯವಿತ್ತು. (1 ಸಮುವೇಲ 10:⁠1) ಎರಡನೆಯ ಕೀರ್ತನೆಯ ಈ ವಚನದಲ್ಲಿ, ಜನಾಂಗಗಳು ತನ್ನ ಮಗನನ್ನು ಅಭಿಷಿಕ್ತ ರಾಜನೋಪಾದಿ ಮುದ್ದಿಸಬೇಕು, ಇಲ್ಲವೆ ಸ್ವಾಗತಿಸಬೇಕು ಎಂದು ದೇವರು ಆಜ್ಞಾಪಿಸುತ್ತಿದ್ದಾನೆ.

22 ದೇವರು ಆರಿಸಿಕೊಂಡಿರುವ ಅರಸನ ಅಧಿಕಾರವನ್ನು ಒಪ್ಪಿಕೊಳ್ಳಲು ಯಾರು ನಿರಾಕರಿಸುತ್ತಾರೊ ಅವರು ಯೆಹೋವನನ್ನು ಅವಮಾನಿಸುತ್ತಿದ್ದಾರೆ. ಅವರು ಯೆಹೋವ ದೇವರ ವಿಶ್ವ ಪರಮಾಧಿಕಾರವನ್ನು, ಮತ್ತು ಮಾನವಕುಲಕ್ಕೆ ಅತ್ಯುತ್ತಮ ಪ್ರಭುವಾಗಿರುವ ಅರಸನನ್ನು ಆರಿಸಿಕೊಳ್ಳಲು ಆತನಿಗಿರುವ ಅಧಿಕಾರ ಹಾಗೂ ಸಾಮರ್ಥ್ಯವನ್ನು ಅಲ್ಲಗಳೆಯುತ್ತಿದ್ದಾರೆ. ಜನಾಂಗಗಳ ಪ್ರಭುಗಳು ತಮ್ಮ ಸ್ವಂತ ಯೋಜನೆಗಳನ್ನು ನೆರವೇರಿಸಲು ಪ್ರಯತ್ನಿಸುವಾಗ ದೇವರ ಕೋಪವು ಥಟ್ಟನೆ ಅವರ ಮೇಲೆ ಬರುವುದನ್ನು ಕಂಡುಕೊಳ್ಳುವರು. ‘ಆತನ ಕೋಪವು ಬೇಗನೆ ಪ್ರಜ್ವಲಿಸುತ್ತದೆ,’ ಅಥವಾ ಥಟ್ಟನೆ ತಡೆಯಲಾಗದಂಥ ರೀತಿಯಲ್ಲಿ ಕೆರಳುತ್ತದೆ. ಜನಾಂಗಗಳ ಪ್ರಭುಗಳು ಈ ಎಚ್ಚರಿಕೆಯನ್ನು ಕೃತಜ್ಞತೆಯಿಂದ ಅಂಗೀಕರಿಸಿ ಅದಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯಬೇಕಾಗಿದೆ. ಹಾಗೆ ಮಾಡುವುದು ಅವರಿಗೆ ಜೀವದ ಅರ್ಥದಲ್ಲಿರುತ್ತದೆ.

23 ಈ ಕೌತುಕಕಾರಿ ಕೀರ್ತನೆಯು, “ಆತನ [ಯೆಹೋವನ] ಮರೆಹೊಕ್ಕವರೆಲ್ಲರು ಧನ್ಯರು” ಎಂದು ಹೇಳಿ ಮುಕ್ತಾಯಗೊಳ್ಳುತ್ತದೆ. (ಕೀರ್ತನೆ 2:12ಬಿ) ಒಬ್ಬೊಬ್ಬ ವ್ಯಕ್ತಿಗಳೂ ಸುರಕ್ಷೆಯನ್ನು ಕಂಡುಕೊಳ್ಳಲು ಸಮಯವು ಇನ್ನೂ ಇದೆ. ಜನಾಂಗಗಳ ಯೋಜನೆಗಳನ್ನು ಸಮರ್ಥಿಸುತ್ತಿರುವ ಒಬ್ಬೊಬ್ಬ ಪ್ರಭುಗಳ ವಿಷಯದಲ್ಲೂ ಇದು ಸತ್ಯವಾಗಿದೆ. ತನ್ನ ರಾಜ್ಯಾಡಳಿತದ ಕೆಳಗೆ ಆಶ್ರಯವನ್ನು ಒದಗಿಸುವ ಯೆಹೋವನ ಬಳಿ ಅವರು ಓಡಿಹೋಗಸಾಧ್ಯವಿದೆ. ಆದರೆ, ಅವರು ಮೆಸ್ಸೀಯನ ರಾಜ್ಯವು ವಿರೋಧಿ ಜನಾಂಗಗಳನ್ನು ಚೂರುಚೂರುಗೊಳಿಸುವುದಕ್ಕೆ ಮೊದಲೇ ಕ್ರಿಯೆಗೈಯಬೇಕು.

24 ನಾವು ಶಾಸ್ತ್ರಗಳನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿ, ಅದರ ಸಲಹೆಯನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳುವಲ್ಲಿ, ಈ ತೊಂದರೆಭರಿತ ಲೋಕದಲ್ಲಿಯೂ ನಾವು ಹೆಚ್ಚು ತೃಪ್ತಿಕರವಾಗಿ ಜೀವಿಸಬಲ್ಲೆವು. ಶಾಸ್ತ್ರೀಯ ಸಲಹೆಯನ್ನು ಅನ್ವಯಿಸಿಕೊಳ್ಳುವಾಗ ಹೆಚ್ಚು ಸಂತೋಷಭರಿತ ಕುಟುಂಬ ಜೀವನವು ಫಲಿಸುತ್ತದೆ ಹಾಗೂ ಈ ಲೋಕದಲ್ಲಿರುವ ಅನೇಕ ಚಿಂತೆ ಮತ್ತು ಭಯಗಳಿಂದ ನಾವು ಸ್ವತಂತ್ರರಾಗುತ್ತೇವೆ. ಬೈಬಲಿನ ಮಾರ್ಗದರ್ಶನವನ್ನು ಅನುಸರಿಸುವುದು ನಾವು ಸೃಷ್ಟಿಕರ್ತನನ್ನು ಮೆಚ್ಚಿಸುತ್ತಿದ್ದೇವೆಂಬ ಭರವಸೆಯನ್ನು ಕೊಡುತ್ತದೆ. ‘ಈಗಿರುವ ಜೀವನದ,’ ಮತ್ತು ದೇವರ ರಾಜ್ಯಾಳಿಕೆ ಬೇಡವೆಂದು ಹೇಳಿ ಸತ್ಯವನ್ನು ವಿರೋಧಿಸುವವರನ್ನು ಭೂಮಿಯಿಂದ ತೆಗೆದು ಹಾಕಿದ ಬಳಿಕ ‘ಬರಲಿರುವ ಜೀವನದ’ ಖಾತರಿಯನ್ನು ಈ ವಿಶ್ವದ ಪರಮಾಧಿಕಾರಿಯಲ್ಲದೆ ಬೇರಾವನೂ ಕೊಡಶಕ್ತನಲ್ಲ.​—⁠1 ತಿಮೊಥೆಯ 4:​8, NW.

25 “ಯೆಹೋವನ ಆಜ್ಞೆ” ವಿಫಲಗೊಳ್ಳದು. ನಮ್ಮ ಸೃಷ್ಟಿಕರ್ತನಾಗಿರುವುದರಿಂದ, ಮಾನವಕುಲಕ್ಕೆ ಯಾವುದು ಅತ್ಯುತ್ತಮವೆಂಬುದು ದೇವರಿಗೆ ಗೊತ್ತಿದೆ. ಮತ್ತು ಆತನು ವಿಧೇಯ ಮಾನವರನ್ನು ತನ್ನ ಪ್ರಿಯ ಕುಮಾರನ ರಾಜ್ಯದ ಕೆಳಗೆ ಶಾಂತಿ, ಸಂತೃಪ್ತಿ, ಮತ್ತು ಬಾಳಿಕೆ ಬರುವ ಭದ್ರತೆಯಿಂದ ಆಶೀರ್ವದಿಸುವ ತನ್ನ ಉದ್ದೇಶವನ್ನು ನೆರವೇರಿಸುವನು. ನಮ್ಮ ದಿನಗಳ ಕುರಿತು ಪ್ರವಾದಿ ದಾನಿಯೇಲನು ಬರೆದುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; . . . [ಅದು] ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಆದುದರಿಂದ, ‘ಮಗನಿಗೆ ಮುದ್ದಿಟ್ಟು’ ಪರಮಾಧಿಕಾರಿ ಕರ್ತನಾದ ಯೆಹೋವನನ್ನು ಸೇವಿಸಬೇಕಾದ ತುರ್ತಿನ ಸಮಯವು ಇದೇ ಎಂಬುದು ನಿಶ್ಚಯ!

[ಪಾದಟಿಪ್ಪಣಿಗಳು]

^ ಪ್ಯಾರ. 7 ಆರಂಭದಲ್ಲಿ, ರಾಜ ದಾವೀದನು ‘ಅಭಿಷೇಕಿಸಲ್ಪಟ್ಟವನು’ ಆಗಿದ್ದನು, ಮತ್ತು ಅವನ ವಿರುದ್ಧ ತಮ್ಮ ಸೈನ್ಯಗಳನ್ನು ಒಟ್ಟುಗೂಡಿಸಿದ ಫಿಲಿಷ್ಟಿಯ ಅಧಿಪತಿಗಳು ‘ಭೂಪತಿಗಳು’ ಆಗಿದ್ದರು.

^ ಪ್ಯಾರ. 11 ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿರುವ ಬೇರೆ ವಚನಗಳು ಸಹ, ಎರಡನೆಯ ಕೀರ್ತನೆಯಲ್ಲಿ ತಿಳಿಸಲಾಗಿರುವ ದೇವರ ಅಭಿಷಿಕ್ತನು ಯೇಸುವೇ ಎಂದು ತೋರಿಸುತ್ತವೆ. ಕೀರ್ತನೆ 2:7ನ್ನು ಅಪೊಸ್ತಲರ ಕೃತ್ಯಗಳು 13:​32, 33 ಮತ್ತು ಇಬ್ರಿಯ 1:5; 5:5ರೊಂದಿಗೆ ಹೋಲಿಸುವಲ್ಲಿ ಇದು ವ್ಯಕ್ತವಾಗುತ್ತದೆ. ಕೀರ್ತನೆ 2:9 ಮತ್ತು ಪ್ರಕಟನೆ 2:27ನ್ನು ಸಹ ನೋಡಿ.

ನೀವು ಹೇಗೆ ಉತ್ತರ ಕೊಡುವಿರಿ?

• ಜನಾಂಗಗಳವರು ಯಾವ ‘ವ್ಯರ್ಥಕಾರ್ಯಗಳನ್ನು ಯೋಚಿಸಿದ್ದಾರೆ’?

• ಯೆಹೋವನು ಜನಾಂಗಗಳನ್ನು ಪರಿಹಾಸ್ಯಮಾಡುವುದೇಕೆ?

• ಜನಾಂಗಗಳ ವಿರುದ್ಧ ದೇವರ ಆಜ್ಞೆಯೇನು?

• “ಮಗನಿಗೆ ಮುದ್ದಿಡಿರಿ” ಎಂಬುದರ ಅರ್ಥವೇನು?

[ಅಧ್ಯಯನ ಪ್ರಶ್ನೆಗಳು]

1. ದೇವರ ಮತ್ತು ಜನಾಂಗಗಳ ಉದ್ದೇಶದ ಮಧ್ಯೆ ಯಾವ ವ್ಯತ್ಯಾಸವಿದೆ?

2, 3. ಎರಡನೆಯ ಕೀರ್ತನೆಯಲ್ಲಿ ಯಾವುದನ್ನು ಸ್ಪಷ್ಟಪಡಿಸಲಾಗಿದೆ, ಆದರೆ ಯಾವ ಪ್ರಶ್ನೆಗಳು ಏಳುತ್ತವೆ?

4. ಕೀರ್ತನೆ 2:​1, 2ರ ಮುಖ್ಯ ಅಂಶಗಳನ್ನು ನೀವು ಹೇಗೆ ಸಾರಾಂಶಿಸುವಿರಿ?

5, 6. ಜನಾಂಗಗಳವರು ಯಾವ ‘ವ್ಯರ್ಥಕಾರ್ಯಗಳನ್ನು ಯೋಚಿಸಿದ್ದಾರೆ’?

7. ಯೇಸುವಿನ ಆರಂಭದ ಹಿಂಬಾಲಕರು ಪ್ರಾರ್ಥನೆಯಲ್ಲಿ ಕೀರ್ತನೆ 2:​1, 2ನ್ನು ಹೇಗೆ ಅನ್ವಯಿಸಿದರು?

8. ಕೀರ್ತನೆ 2:3 ಇಂದಿನ ಜನಾಂಗಗಳಿಗೆ ಹೇಗೆ ಅನ್ವಯಿಸುತ್ತದೆ?

9, 10. ಯೆಹೋವನು ಜನಾಂಗಗಳನ್ನು ಪರಿಹಾಸ್ಯ ಮಾಡುವುದೇಕೆ?

11. ಜನಾಂಗಗಳು ದೇವರ ಉದ್ದೇಶಕ್ಕೆ ವಿರುದ್ಧವಾಗಿ ಕಾರ್ಯವೆಸಗಲು ಪ್ರಯತ್ನಿಸುವಾಗ ಏನಾಗುತ್ತದೆ?

12. ಕೀರ್ತನೆ 2:5 ಯಾವ ಪಟ್ಟಾಭಿಷೇಕಕ್ಕೆ ಅನ್ವಯಿಸುತ್ತದೆ?

13. ಯೆಹೋವನು ತನ್ನ ಪುತ್ರನೊಂದಿಗೆ ಯಾವ ಒಡಂಬಡಿಕೆಯನ್ನು ಮಾಡಿದನು?

14. ಯೇಸುವು ರಾಜನಾಗಲು ವಿವಾದಾಸ್ಪದವಿಲ್ಲದ ಹಕ್ಕನ್ನು ಪಡೆದಿದ್ದಾನೆಂದು ನಾವು ಏಕೆ ಹೇಳಬಲ್ಲೆವು?

15. ಯೇಸು ಜನಾಂಗಗಳನ್ನು ಸ್ವಾಸ್ತ್ಯವಾಗಿ ಕೇಳಿಕೊಳ್ಳುವುದೇಕೆ?

16, 17. ಕೀರ್ತನೆ 2:9ರಲ್ಲಿ ತಿಳಸಲ್ಪಟ್ಟಿರುವಂತೆ ಜನಾಂಗಗಳಿಗೆ ಏನನ್ನು ಕಾದಿರಿಸಲಾಗಿದೆ?

18, 19. ದೇವರ ಒಪ್ಪಿಗೆಯನ್ನು ಪಡೆಯಬೇಕಾದರೆ, ಭೂರಾಜರು ಏನು ಮಾಡುವುದು ಆವಶ್ಯಕ?

20, 21. “ಮಗನಿಗೆ ಮುದ್ದಿಡಿರಿ” ಎಂಬುದರ ಅರ್ಥವೇನು?

22. ಜನಾಂಗಗಳ ಪ್ರಭುಗಳು ಯಾವ ಎಚ್ಚರಿಕೆಗೆ ಕಿವಿಗೊಡಬೇಕು?

23. ಏನು ಮಾಡಲಿಕ್ಕಾಗಿ ಒಬ್ಬೊಬ್ಬ ವ್ಯಕ್ತಿಗಳಿಗೂ ಇನ್ನೂ ಸಮಯವಿದೆ?

24. ಈ ತೊಂದರೆಭರಿತ ಲೋಕದಲ್ಲಿಯೂ ನಾವು ಹೇಗೆ ಹೆಚ್ಚು ತೃಪ್ತಿಕರವಾದ ಜೀವನವನ್ನು ಅನುಭವಿಸಬಲ್ಲೆವು?

25. “ಯೆಹೋವನ ಆಜ್ಞೆ” ವಿಫಲಗೊಳ್ಳದಿರುವುದರಿಂದ, ನಮ್ಮ ದಿನಗಳಲ್ಲಿ ಏನು ಸಂಭವಿಸುವುದನ್ನು ನಾವು ನಿರೀಕ್ಷಿಸಬಲ್ಲೆವು?

[ಪುಟ 16ರಲ್ಲಿರುವ ಚಿತ್ರ]

ದಾವೀದನು ವಿಜಯಿಯಾದ ಮೆಸ್ಸೀಯ ರಾಜನ ಕುರಿತು ಹಾಡಿದನು

[ಪುಟ 17ರಲ್ಲಿರುವ ಚಿತ್ರ]

ಪ್ರಭುಗಳೂ ಇಸ್ರಾಯೇಲಿನ ಜನರೂ ಯೇಸು ಕ್ರಿಸ್ತನ ವಿರುದ್ಧ ಸಂಚುಹೂಡಿದರು

[ಪುಟ 18ರಲ್ಲಿರುವ ಚಿತ್ರ]

ಕ್ರಿಸ್ತನು ಸ್ವರ್ಗೀಯ ಚೀಯೋನ್‌ ಪರ್ವತದಲ್ಲಿ ಅರಸನಾಗಿ ಸ್ಥಾಪಿಸಲ್ಪಟ್ಟಿದ್ದಾನೆ