ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನು ಉಪಯೋಗಿಸಿರಿ

ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನು ಉಪಯೋಗಿಸಿರಿ

ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನು ಉಪಯೋಗಿಸಿರಿ

“ಒಬ್ಬ ವ್ಯಕ್ತಿಗೆ, ತಾನು ಯಾವ ಬಂದರಿನತ್ತ ಸಾಗುತ್ತಿದ್ದೇನೆ ಎಂಬುದೇ ಗೊತ್ತಿಲ್ಲದಿದ್ದರೆ, ಗಾಳಿಯು ಯಾವ ದಿಕ್ಕಿನಲ್ಲಿ ಬೀಸಿದರೂ ಅದು ಸರಿಯಾಗಿರುವುದಿಲ್ಲ.” ಪ್ರಥಮ ಶತಮಾನದ ರೋಮನ್‌ ತತ್ತ್ವಜ್ಞಾನಿಯದ್ದೆಂದು ಹೇಳಲಾಗುವ ಈ ಮಾತುಗಳು, ಬದುಕಿಗೆ ಒಂದು ದಿಕ್ಕಿರಬೇಕಾದರೆ ಗುರಿಗಳು ಅತ್ಯಾವಶ್ಯಕ ಎಂಬ ಸತ್ಯಕ್ಕೆ ಕೈತೋರಿಸುತ್ತವೆ.

ಗುರಿಗಳನ್ನಿಡುವುದರ ಬಗ್ಗೆ ಅರಿವಿದ್ದ ವ್ಯಕ್ತಿಗಳ ಮಾದರಿಗಳನ್ನು ಬೈಬಲ್‌ ಒದಗಿಸುತ್ತದೆ. ನೋಹನು 50 ವರ್ಷಗಳ ವರೆಗೆ ಕೆಲಸಮಾಡುತ್ತಾ “ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು.” ಪ್ರವಾದಿಯಾದ ಮೋಶೆಯು “ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.” (ಇಬ್ರಿಯ 11:7, 26) ಮೋಶೆಯ ಉತ್ತರಾಧಿಕಾರಿಯಾದ ಯೆಹೋಶುವನು, ಕಾನಾನ್‌ ದೇಶವನ್ನು ಸ್ವಾಧೀನಪಡಿಸುವ ದೇವದತ್ತ ಗುರಿಯನ್ನು ಪಡೆದನು.​—⁠ಧರ್ಮೋಪದೇಶಕಾಂಡ 3:​21, 22, 28; ಯೆಹೋಶುವ 12:​7-24.

ಸಾ.ಶ. ಪ್ರಥಮ ಶತಮಾನದಲ್ಲಿ, ಅಪೊಸ್ತಲ ಪೌಲನಿಗಿದ್ದ ಆಧ್ಯಾತ್ಮಿಕ ಗುರಿಗಳು ನಿಸ್ಸಂದೇಹವಾಗಿಯೂ, “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು” ಎಂಬ ಯೇಸುವಿನ ಮಾತುಗಳಿಂದ ಬಹಳಷ್ಟು ಪ್ರಭಾವಿಸಲ್ಪಟ್ಟಿದ್ದವು. (ಮತ್ತಾಯ 24:14) ಕರ್ತನಾದ ಯೇಸುವಿನಿಂದ ಅವನಿಗೆ ವೈಯಕ್ತಿಕವಾಗಿ ಸಿಕ್ಕಿದ ಸಂದೇಶಗಳು ಮತ್ತು, ‘ಅನ್ಯಜನರಿಗೆ [ಯೇಸುವಿನ] ಹೆಸರನ್ನು ತಿಳಿಸುವ’ ನೇಮಕದ ಸಮೇತ ದರ್ಶನಗಳಿಂದಲೂ ಸ್ಫೂರ್ತಿಪಡೆದವನಾಗಿ, ಪೌಲನು ಏಷ್ಯಾ ಮೈನರ್‌ ಮತ್ತು ಯೂರೋಪ್‌ನಲ್ಲೂ ಅನೇಕ ಕ್ರೈಸ್ತ ಸಭೆಗಳನ್ನು ಸ್ಥಾಪಿಸುವುದರಲ್ಲಿ ಒಂದು ಪ್ರಧಾನ ಪಾತ್ರವನ್ನು ವಹಿಸಿದನು.​—⁠ಅ. ಕೃತ್ಯಗಳು 9:15; ಕೊಲೊಸ್ಸೆ 1:⁠23.

ಹೌದು, ಯೆಹೋವನ ಸೇವಕರು ಇತಿಹಾಸದಾದ್ಯಂತ, ಉದಾತ್ತ ಗುರಿಗಳನ್ನಿಟ್ಟಿದ್ದಾರೆ ಮತ್ತು ಅವುಗಳನ್ನು ಸಾಧಿಸಿ ದೇವರನ್ನು ಮಹಿಮೆಪಡಿಸಿದ್ದಾರೆ. ಇಂದು ನಾವು ಆಧ್ಯಾತ್ಮಿಕ ಗುರಿಗಳನ್ನು ಹೇಗೆ ಇಡಬಲ್ಲೆವು? ನಾವು ಯಾವ ಗುರಿಗಳನ್ನು ಸಾಧಿಸಲು ಯತ್ನಿಸಬಹುದು, ಮತ್ತು ಅವುಗಳನ್ನು ತಲಪಲು ಯಾವ ಪ್ರಾಯೋಗಿಕ ಹೆಜ್ಜೆಗಳನ್ನಿಡಬಲ್ಲೆವು?

ಸರಿಯಾದ ಹೇತುಗಳು ಅತ್ಯಾವಶ್ಯಕ

ಜೀವನದ ಬಹುಮಟ್ಟಿಗೆ ಯಾವುದೇ ಕ್ಷೇತ್ರದಲ್ಲಿ ಗುರಿಗಳನ್ನು ಇಡಬಹುದು, ಮತ್ತು ಈ ಲೋಕದಲ್ಲೂ ಗುರಿಗಳನ್ನಿಟ್ಟು ಅವುಗಳನ್ನು ತಲಪಿರುವ ಜನರು ಇದ್ದಾರೆ. ಆದರೆ, ದೇವಪ್ರಭುತ್ವಾತ್ಮಕ ಗುರಿಗಳು ಲೌಕಿಕ ಮಹತ್ವಾಕಾಂಕ್ಷೆಗಳಂತಿರುವುದಿಲ್ಲ. ಈ ಲೋಕದ ಅನೇಕ ಗುರಿಗಳ ಹಿಂದಿರುವ ಪ್ರಮುಖ ಹೇತುಗಳು, ಧನಕ್ಕಾಗಿರುವ ಗೀಳು ಮತ್ತು ಸ್ಥಾನ ಹಾಗೂ ಅಧಿಕಾರಕ್ಕಾಗಿರುವ ತಣಿಸಲಾಗದ ಹಸಿವೆ ಆಗಿವೆ. ಅಧಿಕಾರ ಮತ್ತು ಪ್ರತಿಷ್ಠೆಯನ್ನು ಗಳಿಸುವ ಸಲುವಾಗಿಯೇ ಗುರಿಯೊಂದನ್ನು ಬೆನ್ನಟ್ಟುವುದು ಎಷ್ಟು ತಪ್ಪಾಗಿರುವುದು! ಯೆಹೋವ ದೇವರಿಗೆ ಮಹಿಮೆಯನ್ನು ತರುವಂಥ ರೀತಿಯ ಗುರಿಗಳು, ನಮ್ಮ ಆರಾಧನೆ ಮತ್ತು ರಾಜ್ಯಾಭಿರುಚಿಗಳೊಂದಿಗೆ ನೇರವಾಗಿ ಸಂಬಂಧಿಸಿರುತ್ತವೆ. (ಮತ್ತಾಯ 6:33) ಇಂಥ ಗುರಿಗಳು ದೇವರಿಗಾಗಿಯೂ ಜೊತೆ ಮಾನವರಿಗಾಗಿಯೂ ಇರುವ ಪ್ರೀತಿಯಿಂದ ಹೊರಹೊಮ್ಮುತ್ತವೆ ಮತ್ತು ಅವುಗಳ ಲಕ್ಷ್ಯವು ದೈವಿಕ ಭಕ್ತಿಯೇ ಆಗಿರುತ್ತದೆ.​—⁠ಮತ್ತಾಯ 22:​37-39; 1 ತಿಮೊಥೆಯ 4:⁠7.

ನಾವು ಇಡುವ ಮತ್ತು ಬೆನ್ನಟ್ಟುವ ಗುರಿಗಳು, ಹೆಚ್ಚಿನ ಸೇವಾ ಸುಯೋಗಗಳನ್ನು ಪಡೆಯಲಿಕ್ಕಾಗಿರಲಿ ಇಲ್ಲವೆ ವೈಯಕ್ತಿಕವಾಗಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲಿಕ್ಕಾಗಿಯೇ ಆಗಿರಲಿ, ನಮ್ಮ ಹೇತುಗಳು ಯಾವಾಗಲೂ ಶುದ್ಧವಾಗಿರಲಿ. ಆದರೆ, ಕೆಲವೊಮ್ಮೆ ಸರಿಯಾದ ಹೇತುಗಳುಳ್ಳ ಗುರಿಗಳನ್ನೂ ಸಾಧಿಸಲಾಗುವುದಿಲ್ಲ. ನಾವು ಗುರಿಗಳನ್ನಿಟ್ಟು, ಅವುಗಳನ್ನು ತಲಪುವ ಸಾಧ್ಯತೆಯನ್ನು ಹೇಗೆ ಹೆಚ್ಚಿಸಸಾಧ್ಯವಿದೆ?

ಬಲವಾದ ಅಪೇಕ್ಷೆ ಇರಲೇಬೇಕು

ಯೆಹೋವನು ಈ ವಿಶ್ವದ ಸೃಷ್ಟಿಯನ್ನು ಹೇಗೆ ಪೂರೈಸಿದನೆಂಬದನ್ನು ಪರಿಗಣಿಸಿರಿ. ‘ಸಾಯಂಕಾಲವೂ ಪ್ರಾತಃಕಾಲವೂ ಆಯಿತು’ ಎಂಬ ಮಾತುಗಳೊಂದಿಗೆ ಯೆಹೋವನು ಸೃಷ್ಟಿಯ ಅನುಕ್ರಮದ ಅವಧಿಗಳನ್ನು ಗುರುತಿಸಿದನು. (ಆದಿಕಾಂಡ 1:5, 8, 13, 19, 23, 31) ಪ್ರತಿಯೊಂದು ಸೃಷ್ಟಿಕಾರಕ ಅವಧಿಯ ಆರಂಭದಲ್ಲಿ, ಆ ದಿನಕ್ಕಾಗಿ ಅವನ ಗುರಿ ಇಲ್ಲವೆ ಲಕ್ಷ್ಯವೇನೆಂದು ಆತನಿಗೆ ಸ್ಪಷ್ಟವಾಗಿ ತಿಳಿದಿತ್ತು. ಮತ್ತು ಅದರಂತೆಯೇ ಸೃಷ್ಟಿಮಾಡುವ ತನ್ನ ಉದ್ದೇಶವನ್ನು ದೇವರು ಪೂರೈಸಿಬಿಟ್ಟನು. (ಪ್ರಕಟನೆ 4:11) “[ಯೆಹೋವನು] ಬಯಸಿದ್ದನ್ನೇ ಮಾಡುತ್ತಾನೆ” ಎಂದು ಮೂಲಪಿತನಾದ ಯೋಬನು ಹೇಳಿದನು. (ಯೋಬ 23:13) “ತಾನು ಉಂಟುಮಾಡಿದ್ದನ್ನೆಲ್ಲಾ” ನೋಡಿ, ಅದು ‘ಬಹು ಒಳ್ಳೇದಾಗಿದೆ’ ಎಂದು ಘೋಷಿಸುವಾಗ ಯೆಹೋವನಿಗೆ ಎಷ್ಟು ತೃಪ್ತಿಯಾಗಿದ್ದಿರಬಹುದು!​—⁠ಆದಿಕಾಂಡ 1:⁠31.

ನಮ್ಮ ಗುರಿಗಳು ಕೈಗೂಡಬೇಕಾದರೆ, ಅವುಗಳನ್ನು ಸಾಧಿಸುವ ಬಲವಾದ ಅಪೇಕ್ಷೆ ನಮಗೂ ಇರಬೇಕು. ಅಂಥ ತೀವ್ರ ಅಪೇಕ್ಷೆಯನ್ನು ಬೆಳೆಸುವಂತೆ ಯಾವುದು ಸಹಾಯಮಾಡುವುದು? ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇದ್ದಾಗಲೂ, ಯೆಹೋವನು ಅದರ ಅಂತ್ಯಪರಿಣಾಮವನ್ನು, ಅಂದರೆ ಅದು ಆತನಿಗೆ ಘನಮಾನವನ್ನು ತರಲಿದ್ದಂಥ ಅಂತರಿಕ್ಷದಲ್ಲಿನ ಒಂದು ಸುಂದರ ರತ್ನಾಭರಣವಾಗುವುದನ್ನು ಮುನ್ನೋಡಶಕ್ತನಾಗಿದ್ದನು. ಅದೇ ರೀತಿಯಲ್ಲಿ, ಗುರಿಯನ್ನು ಸಾಧಿಸುವುದರ ಫಲಿತಾಂಶಗಳ ಕುರಿತು ಮತ್ತು ಪ್ರಯೋಜನಗಳ ಕುರಿತು ಧ್ಯಾನಿಸುವ ಮೂಲಕ, ನಾವೇನನ್ನು ಮಾಡಲು ಹೊರಟಿದ್ದೇವೊ ಅದನ್ನು ಮಾಡಿತೀರಿಸಬೇಕೆಂಬ ನಮ್ಮ ಅಪೇಕ್ಷೆಯನ್ನು ಬೆಳೆಸಸಾಧ್ಯವಿದೆ. ಇದು 19 ವರ್ಷ ಪ್ರಾಯದ ಟೋನಿಯ ಅನುಭವವಾಗಿತ್ತು. ಪಾಶ್ಚಾತ್ಯ ಯುರೋಪಿನ ಒಂದು ಬ್ರಾಂಚ್‌ ಆಫೀಸಿಗೆ ಅವನು ನೀಡಿದ ಭೇಟಿಯು ಅವನ ಮನಸ್ಸಿನಲ್ಲಿ ಅಚ್ಚೊತ್ತಿಸಿದ ಅಭಿಪ್ರಾಯವನ್ನು ಅವನೆಂದೂ ಮರೆಯಲಿಲ್ಲ. ‘ಇಂಥ ಸ್ಥಳದಲ್ಲಿದ್ದು ಸೇವೆಸಲ್ಲಿಸುವುದು ಹೇಗಿರಬಹುದು?’ ಎಂಬ ಪ್ರಶ್ನೆಯು ಅಂದಿನಿಂದ ಟೋನಿಯ ಮನಸ್ಸನ್ನು ಆಕ್ರಮಿಸಿತ್ತು. ಆ ಸಾಧ್ಯತೆಯ ಬಗ್ಗೆ ಯೋಚಿಸುವುದನ್ನು ಟೋನಿ ಬಿಟ್ಟುಬಿಡಲಿಲ್ಲ, ಮತ್ತು ಅದನ್ನು ತಲಪಲಿಕ್ಕಾಗಿ ಅವನು ಪ್ರಯತ್ನಮಾಡಿದನು. ವರ್ಷಗಳಾನಂತರ, ಬ್ರಾಂಚ್‌ನಲ್ಲಿ ಸೇವೆಮಾಡುವ ಅವನ ಅರ್ಜಿ ಮಂಜೂರಾದಾಗ ಅವನಿಗೆಷ್ಟು ಸಂತೋಷವಾಯಿತು!

ಈಗಾಗಲೇ ಒಂದು ನಿರ್ದಿಷ್ಟ ಗುರಿಯನ್ನು ತಲಪಿರುವ ಇತರರೊಂದಿಗಿನ ನಮ್ಮ ಸಹವಾಸವು ಸಹ ಆ ಗುರಿಯನ್ನು ತಲಪುವ ಅಪೇಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಬಲ್ಲದು. ಮೂವತ್ತು ವರ್ಷ ಪ್ರಾಯದ ಜೇಸನ್‌ ಎಂಬವನು, ತನ್ನ ಹದಿಹರೆಯದ ಆರಂಭದಲ್ಲಿ ಕ್ಷೇತ್ರ ಸೇವೆಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಆದರೆ ತನ್ನ ಪ್ರೌಢ ಶಾಲೆಯ ಶಿಕ್ಷಣವನ್ನು ಮುಗಿಸಿದ ನಂತರ, ಅವನು ಅತ್ಯುತ್ಸುಕತೆಯಿಂದ ಪಯನೀಯರ್‌ ಸೇವೆ ಆರಂಭಿಸಿ, ಹೀಗೆ ಪೂರ್ಣ ಸಮಯದ ರಾಜ್ಯ ಘೋಷಕನಾದನು. ಪಯನೀಯರ್‌ ಸೇವೆಮಾಡುವ ಅಪೇಕ್ಷೆಯನ್ನು ಬೆಳೆಸಿಕೊಳ್ಳುವಂತೆ ಜೇಸನ್‌ಗೆ ಯಾವುದು ಸಹಾಯಮಾಡಿತು? ಅವನು ಉತ್ತರಿಸುವುದು: “ಪಯನೀಯರ್‌ ಸೇವೆಮಾಡಿರುವವರೊಂದಿಗೆ ಮಾತಾಡುವುದು ಮತ್ತು ಶುಶ್ರೂಷೆಯಲ್ಲಿ ಅವರೊಂದಿಗೆ ಕೆಲಸಮಾಡುವುದು, ನನ್ನನ್ನು ಗಾಢವಾಗಿ ಪ್ರಭಾವಿಸಿತು.”

ನಮ್ಮ ಗುರಿಗಳನ್ನು ಬರೆದಿಡುವುದು ಸಹಾಯಮಾಡಬಲ್ಲದು

ಮನಸ್ಸಿನಲ್ಲಿರುವ ಒಂದು ಅಸ್ಪಷ್ಟವಾದ ವಿಚಾರವನ್ನು ವ್ಯಕ್ತಪಡಿಸಲಿಕ್ಕಾಗಿ ನಾವು ಮಾತುಗಳನ್ನು ಆಯ್ಕೆಮಾಡುವಾಗ, ಅದು ಸ್ಪಷ್ಟತೆ ಹಾಗೂ ಆಕಾರವನ್ನು ಪಡೆಯುತ್ತದೆ. ಸರಿಯಾದ ಮಾತುಗಳು, ಬದುಕಿನಲ್ಲಿ ನಿರ್ದೇಶನವನ್ನು ಕೊಡುವಂಥ ಮುಳ್ಳುಗೋಲುಗಳಂತೆ ಶಕ್ತಿಶಾಲಿಯಾಗಿರಬಲ್ಲವೆಂದು ಸೊಲೊಮೋನನು ಹೇಳಿದನು. (ಪ್ರಸಂಗಿ 12:11) ಆ ಮಾತುಗಳು ಬರೆಯಲ್ಪಡುವಾಗ, ಅವು ಹೃದಮನಗಳಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಈ ಕಾರಣಕ್ಕಾಗಿಯೇ ಅಲ್ಲವೇ ಇಸ್ರಾಯೇಲಿನ ರಾಜರು ಧರ್ಮಶಾಸ್ತ್ರದ ಒಂದು ವೈಯಕ್ತಿಕ ಪ್ರತಿಯನ್ನು ಬರೆಯುವಂತೆ ಯೆಹೋವನು ಆಜ್ಞೆಯನ್ನು ಕೊಟ್ಟನು? (ಧರ್ಮೋಪದೇಶಕಾಂಡ 17:18) ಆದುದರಿಂದ, ನಮ್ಮ ಗುರಿಗಳನ್ನೂ ಅವುಗಳನ್ನು ತಲಪಲು ನಾವು ಮಾಡಿರುವ ಯೋಜನೆಗಳನ್ನೂ ನಾವು ಬರೆದಿಡಬಹುದು, ಮತ್ತು ಎದುರಾಗಬಹುದಾದ ಅಡಚಣೆಗಳನ್ನು ಹಾಗೂ ಅವುಗಳನ್ನು ಜಯಿಸುವ ಮಾರ್ಗಗಳನ್ನೂ ಪಟ್ಟಿಮಾಡಬಹುದು. ನಾವು ಹೆಚ್ಚು ಜ್ಞಾನವನ್ನು ಪಡೆಯಬೇಕಾದಂಥ ವಿಷಯಗಳನ್ನು, ನಾವು ಕರಗತಗೊಳಿಸಬೇಕಾದ ಕೌಶಲಗಳನ್ನು, ಮತ್ತು ನಮಗೆ ಸಹಾಯ ಹಾಗೂ ಬೆಂಬಲವನ್ನು ಕೊಡಬಲ್ಲ ವ್ಯಕ್ತಿಗಳನ್ನು ಗುರುತಿಸುವುದು ಸಹ ಸಹಾಯಕಾರಿಯಾಗಿರಬಲ್ಲದು.

ಏಷ್ಯಾಖಂಡದ ದೇಶವೊಂದರ ಒಂದು ದೂರದ ಕ್ಷೇತ್ರದಲ್ಲಿರುವ ಬಹುಸಮಯದ ವಿಶೇಷ ಪಯನೀಯರನಾದ ಜೆಫ್ರಿಯ ಮೇಲೆ ಆಧ್ಯಾತ್ಮಿಕ ಗುರಿಗಳನ್ನಿಡುವುದು ಪ್ರಶಾಂತಗೊಳಿಸುವ ಪರಿಣಾಮವನ್ನು ಬೀರಿತು. ಅವನ ಹೆಂಡತಿಯ ಅನಿರೀಕ್ಷಿತ ಸಾವಿನಿಂದಾಗಿ ಅವನ ಮೇಲೆ ದುರಂತದ ಸಿಡಿಲೆರಗಿತು. ಈ ಪರಿಸ್ಥಿತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಂಡ ನಂತರ, ಜೆಫ್ರಿ ಗುರಿಗಳನ್ನಿಡುವ ಮೂಲಕ ತನ್ನ ಪಯನೀಯರ್‌ ಶುಶ್ರೂಷೆಯಲ್ಲಿ ತನ್ನನ್ನು ತಲ್ಲೀನನಾಗಿಸಲು ನಿರ್ಣಯಿಸಿದನು. ಅವನ ಯೋಜನೆಗಳನ್ನು ಬರೆದಿಟ್ಟ ನಂತರ, ಪ್ರಾರ್ಥನಾಪೂರ್ವಕವಾಗಿ ಅವನು ತಿಂಗಳ ಕೊನೆಯಷ್ಟರಲ್ಲಿ ಮೂರು ಹೊಸ ಬೈಬಲ್‌ ಅಧ್ಯಯನಗಳನ್ನು ಪ್ರಾರಂಭಿಸುವ ಗುರಿಯನ್ನಿಟ್ಟನು. ಪ್ರತಿದಿನವೂ ಅವನು ತನ್ನ ಚಟುವಟಿಕೆಯನ್ನು ವಿಮರ್ಶಿಸಿದನು, ಮತ್ತು ಪ್ರತಿ ಹತ್ತು ದಿನಗಳಿಗೊಮ್ಮೆ ತಾನೆಷ್ಟು ಪ್ರಗತಿಮಾಡಿದ್ದೇನೆಂದು ಪರಿಶೀಲಿಸುತ್ತಿದ್ದನು. ಅವನು ತನ್ನ ಗುರಿಯನ್ನು ಮುಟ್ಟಿದನೊ? ನಾಲ್ಕು ಹೊಸ ಬೈಬಲ್‌ ಅಧ್ಯಯನಗಳನ್ನು ವರದಿಮಾಡುತ್ತಾ ಅವನು ಸಂತೋಷದಿಂದ ಹೌದೆಂದು ಉತ್ತರಿಸುತ್ತಾನೆ!

ಅಲ್ಪಾವಧಿಯ ಗುರಿಗಳನ್ನು ಗುರುತುಗಲ್ಲಾಗಿ ಇಡಿರಿ

ಕೆಲವೊಂದು ಗುರಿಗಳು ಆರಂಭದಲ್ಲಿ ದುಸ್ಸಾಧ್ಯವಾಗಿ ತೋರಬಹುದು. ಈ ಹಿಂದೆ ತಿಳಿಸಲ್ಪಟ್ಟ ಟೋನಿಗೆ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸೊಂದರಲ್ಲಿ ಕೆಲಸಮಾಡುವುದು ನನಸಾಗದ ಕನಸಿನಂತೆ ತೋರಿತು. ಇದಕ್ಕೆ ಕಾರಣವೇನೆಂದರೆ ಅವನ ಜೀವನಶೈಲಿಯು ವಕ್ರವಾಗಿತ್ತು, ಮತ್ತು ಅವನು ಆಗ ದೇವರಿಗೆ ಸಮರ್ಪಣೆಯನ್ನೂ ಮಾಡಿರಲಿಲ್ಲ. ಆದರೆ, ಟೋನಿ ತನ್ನ ಜೀವನವನ್ನು ಯೆಹೋವನ ಮಾರ್ಗಗಳಿಗೆ ಹೊಂದಿಕೆಯಲ್ಲಿ ತರಲು ನಿರ್ಣಯಿಸಿದನು ಮತ್ತು ದೀಕ್ಷಾಸ್ನಾನಕ್ಕೆ ಅರ್ಹನಾಗಬೇಕೆಂಬ ಗುರಿಯನ್ನಿಟ್ಟನು. ಆ ಗುರಿಯನ್ನು ಮುಟ್ಟಿದ ನಂತರ, ಅವನು ಆಕ್ಸಿಲಿಯರಿ ಪಯನೀಯರ್‌ ಸೇವೆ ಮತ್ತು ರೆಗ್ಯುಲರ್‌ ಪಯನೀಯರ್‌ ಸೇವೆಯ ಗುರಿಯನ್ನಿಟ್ಟನು ಮತ್ತು ತನ್ನ ಕ್ಯಾಲೆಂಡರ್‌ನಲ್ಲಿ ಅದನ್ನು ಆರಂಭಿಸುವ ತಾರೀಖುಗಳನ್ನು ಗುರುತಿಸಿಟ್ಟನು. ಅವನು ಕೆಲಕಾಲ ಪಯನೀಯರ್‌ ಸೇವೆಮಾಡಿದ ನಂತರ, ಬ್ರಾಂಚ್‌ ಆಫೀಸ್‌ನಲ್ಲಿನ ಸೇವೆಯು ಒಂದು ಅವಾಸ್ತವಿಕ ಗುರಿಯಾಗಿ ತೋರಲಿಲ್ಲ.

ನಮ್ಮ ದೀರ್ಘಕಾಲದ ಗುರಿಗಳನ್ನು ಕೆಲವೊಂದು ಅಲ್ಪಾವಧಿಯ ಗುರಿಗಳಾಗಿ ವಿಭಾಜಿಸುವುದು ಸಹ ನಮಗೆ ಒಳ್ಳೇದಾಗಿರುವುದು. ಒಂದು ದೀರ್ಘಕಾಲದ ಗುರಿಯನ್ನು ಸಾಧಿಸುವ ಪಥದಲ್ಲಿ, ಅದಕ್ಕಿಂತ ಮುಂಚಿನ ಗುರಿಗಳು, ನಾವು ತಲಪಸಾಧ್ಯವಿರುವಂಥ ಗುರುತುಗಳಾಗಿ ಕಾರ್ಯವೆಸಗಬಲ್ಲವು. ಅಂಥ ರಸ್ತೆ ಗುರುತುಗಳ ಸಂಬಂಧದಲ್ಲಿ ನಮ್ಮ ಪ್ರಗತಿಯನ್ನು ಕ್ರಮವಾಗಿ ಅಳೆಯುವುದು, ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಹಾಯಮಾಡಬಲ್ಲದು. ನಮ್ಮ ಯೋಜನೆಗಳ ಬಗ್ಗೆ ಪದೇ ಪದೇ ಪ್ರಾರ್ಥಿಸುವುದು ಸಹ ನಾವು ಸರಿಯಾದ ಮಾರ್ಗಕ್ರಮದಲ್ಲಿ ಇರುವಂತೆ ಸಹಾಯಮಾಡಬಲ್ಲದು. “ಎಡೆಬಿಡದೆ ಪ್ರಾರ್ಥನೆಮಾಡಿರಿ” ಎಂದು ಅಪೊಸ್ತಲ ಪೌಲನು ಬುದ್ಧಿಹೇಳಿದನು.​—⁠1 ಥೆಸಲೋನಿಕ 5:⁠16.

ದೃಢಸಂಕಲ್ಪ ಮತ್ತು ಪಟ್ಟುಹಿಡಿಯುವಿಕೆ ಅಗತ್ಯ

ನಾವು ಚೆನ್ನಾಗಿ ಯೋಜನೆಗಳನ್ನು ಮಾಡಿ, ಅವುಗಳನ್ನು ಪೂರೈಸಲು ಬಲವಾದ ಇಚ್ಛೆಯುಳ್ಳವರಾಗಿದ್ದರೂ, ಕೆಲವೊಂದು ಗುರಿಗಳನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಅಪೊಸ್ತಲ ಪೌಲನು ತನ್ನ ಎರಡನೇ ಮಿಷನೆರಿ ಸಂಚಾರದಲ್ಲಿ ಶಿಷ್ಯನಾದ ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಕೊಂಡೊಯ್ಯಲು ಬಯಸದಿದ್ದಾಗ ಆ ಶಿಷ್ಯನಿಗೆ ಎಷ್ಟು ನಿರಾಶೆಯಾಗಿದ್ದಿರಬಹುದು! (ಅ. ಕೃತ್ಯಗಳು 15:​37-40) ಆದರೆ ಈ ಅನುಭವದಿಂದ ಮಾರ್ಕನು ಒಂದು ಪಾಠವನ್ನು ಕಲಿತು, ಹೆಚ್ಚಿನ ಸೇವೆಯನ್ನು ಮಾಡುವಂತೆ ತನ್ನ ಗುರಿಯನ್ನು ಅಳವಡಿಸಬೇಕಿತ್ತು. ಅವನು ಅದನ್ನೇ ಮಾಡಿದನೆಂದು ತೋರುತ್ತದೆ. ಮುಂದಕ್ಕೆ, ಮಾರ್ಕನ ಬಗ್ಗೆ ಪೌಲನು ಮೆಚ್ಚುಗೆಯ ಮಾತುಗಳನ್ನಾಡಿದನು ಮತ್ತು ಮಾರ್ಕನು ಬಾಬೆಲಿನಲ್ಲಿ ಅಪೊಸ್ತಲ ಪೇತ್ರನೊಂದಿಗೆ ನಿಕಟ ಸಹವಾಸದಲ್ಲಿ ಆನಂದಿಸಿದನು. (2 ತಿಮೊಥೆಯ 4:11; 1 ಪೇತ್ರ 5:​13, 14) ಯೇಸುವಿನ ಜೀವನ ಹಾಗೂ ಶುಶ್ರೂಷೆಯ ಬಗ್ಗೆ ಒಂದು ಪ್ರೇರಿತ ವೃತ್ತಾಂತವನ್ನು ಬರೆಯುವುದು ಮಾರ್ಕನಿಗಿದ್ದ ಅತ್ಯಂತ ಮಹಾನ್‌ ಸುಯೋಗವಾಗಿದ್ದಿರಬಹುದು.

ಆಧ್ಯಾತ್ಮಿಕ ಗುರಿಗಳ ನಮ್ಮ ಬೆನ್ನಟ್ಟುವಿಕೆಯಲ್ಲಿ, ನಾವು ಸಹ ಹಿಮ್ಮೆಟ್ಟುವಿಕೆಗಳನ್ನು ಅನುಭವಿಸಬಹುದು. ಆದರೆ ಬಿಟ್ಟುಕೊಡುವುದರ ಬದಲು ನಾವು ಪುನರ್ವಿಮರ್ಶಿಸಬೇಕು, ಪುನರ್‌ಪರಿಶೀಲಿಸಬೇಕು, ಮತ್ತು ಪುನಃಹೊಂದಿಸಿಕೊಳ್ಳಬೇಕು. ತಡೆಗಳು ಏಳುವಾಗ, ನಾವು ದೃಢಸಂಕಲ್ಪ ಹಾಗೂ ಪಟ್ಟುಹಿಡಿಯುವಿಕೆಯೊಂದಿಗೆ ಮುನ್ನಡೆಯಬೇಕು. “ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ ನಿನ್ನ ಉದ್ದೇಶಗಳು ಸಫಲವಾಗುವವು” ಎಂದು ವಿವೇಕಿಯಾದ ರಾಜ ಸೊಲೊಮೋನನು ನಮಗೆ ಆಶ್ವಾಸನೆ ಕೊಡುತ್ತಾನೆ.​—⁠ಜ್ಞಾನೋಕ್ತಿ 16:⁠3.

ಆದರೂ, ಕೆಲವೊಮ್ಮೆ ಪರಿಸ್ಥಿತಿಗಳು, ನಾವು ನಿರ್ದಿಷ್ಟ ಗುರಿಗಳನ್ನು ಬೆನ್ನಟ್ಟುವುದನ್ನು ಅವಾಸ್ತವಿಕವನ್ನಾಗಿ ಮಾಡುತ್ತವೆ. ಉದಾಹರಣೆಗೆ, ನ್ಯೂನ ಆರೋಗ್ಯ ಇಲ್ಲವೆ ಕುಟುಂಬ ಕರ್ತವ್ಯಗಳಿಂದಾಗಿ ಕೆಲವೊಂದು ಗುರಿಗಳನ್ನು ಮುಟ್ಟುವುದು ನಮ್ಮ ನಿಲುಕಿಗೆ ಮೀರಿದಂಥವುಗಳಾಗಿರಬಹುದು. ಆದರೆ ಕಟ್ಟಕಡೆಯ ಬಹುಮಾನವು ನಿತ್ಯಜೀವವಾಗಿದೆ​—⁠ಪರಲೋಕದಲ್ಲಾಗಲಿ, ಭೂಪರದೈಸಿನಲ್ಲಾಗಲಿ—⁠ಎಂಬುದನ್ನು ನಾವೆಂದೂ ಮರೆಯದಿರೋಣ. (ಲೂಕ 23:43; ಫಿಲಿಪ್ಪಿ 3:​13, 14) ಇದನ್ನು ಹೇಗೆ ಪಡೆಯಸಾಧ್ಯವಿದೆ? “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂದು ಬರೆದನು ಅಪೊಸ್ತಲ ಯೋಹಾನನು. (1 ಯೋಹಾನ 2:17) ನಮ್ಮ ಸನ್ನಿವೇಶದಿಂದಾಗಿ ನಾವು ಒಂದು ನಿರ್ದಿಷ್ಟ ಗುರಿಯನ್ನು ಸಾಧಿಸಲು ಆಗದೇ ಇದ್ದರೂ, ನಮಗಿನ್ನೂ “[ಸತ್ಯ] ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು”ವುದು ಸಾಧ್ಯ. (ಪ್ರಸಂಗಿ 12:13) ಆಧ್ಯಾತ್ಮಿಕ ಗುರಿಗಳು, ದೈವಿಕ ಚಿತ್ತವನ್ನು ಮಾಡುವುದರ ಮೇಲೆ ನಾವು ಗಮನವನ್ನು ಕೇಂದ್ರೀಕರಿಸುವಂತೆ ಸಹಾಯಮಾಡುತ್ತವೆ. ಆದುದರಿಂದ ಅವುಗಳನ್ನು ನಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಉಪಯೋಗಿಸೋಣ.

[ಪುಟ 22ರಲ್ಲಿರುವ ಚೌಕ]

ಪರಿಗಣಿಸಲಿಕ್ಕಾಗಿರುವ ಆಧ್ಯಾತ್ಮಿಕ ಗುರಿಗಳು

○ ದಿನಾಲೂ ಬೈಬಲ್‌ ಓದುವುದು

ಕಾವಲಿನಬುರುಜು ಮತ್ತು ಎಚ್ಚರ!ದ ಪ್ರತಿಯೊಂದು ಸಂಚಿಕೆಯನ್ನು ಓದುವುದು

○ ನಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸುವುದು

○ ಆತ್ಮದ ಫಲಗಳನ್ನು ಪ್ರದರ್ಶಿಸುವುದು

○ ಹೆಚ್ಚಿನ ಸೇವೆಗಾಗಿ ಪ್ರಯಾಸಪಡುವುದು

○ ಸಾರುವುದರಲ್ಲಿ ಮತ್ತು ಬೋಧಿಸುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗುವುದು

○ ಟೆಲಿಫೋನ್‌ ಮೂಲಕ, ಅನೌಪಚಾರಿಕವಾಗಿ, ಮತ್ತು ವ್ಯಾಪಾರಕ್ಷೇತ್ರದಲ್ಲಿ ಸಾಕ್ಷಿಕೊಡುವುದರಂಥ ಕೌಶಲಗಳನ್ನು ಬೆಳೆಸಿಕೊಳ್ಳುವುದು