ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯಾಹುವಿನಿಂದ ನನಗೆ ರಕ್ಷಣೆಯುಂಟಾಯಿತು’

‘ಯಾಹುವಿನಿಂದ ನನಗೆ ರಕ್ಷಣೆಯುಂಟಾಯಿತು’

‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು’

‘ಯಾಹುವಿನಿಂದ ನನಗೆ ರಕ್ಷಣೆಯುಂಟಾಯಿತು’

ಯೆಹೋವನ ಜನರ ಮುಂದೆ ಒಂದು ಆಯ್ಕೆ ಇತ್ತು. ಅವರು ಪುರಾತನ ಐಗುಪ್ತದ ದುಷ್ಟ ರಾಜನ ಬೇಡಿಕೆಗಳಿಗೆ ಮಣಿಯುವರೊ ಇಲ್ಲವೆ ಯೆಹೋವ ದೇವರಿಗೆ ವಿಧೇಯರಾಗಿ ದಾಸತ್ವದ ಆ ಸ್ಥಳವನ್ನು ಬಿಟ್ಟು ವಾಗ್ದತ್ತ ದೇಶದಲ್ಲಿ ನೆಲೆಸುವರೊ?

ಐಗುಪ್ತದ ಅಹಂಕಾರಿ ಅರಸನಾದ ಫರೋಹನು ಯೆಹೋವನ ಜನರನ್ನು ಬಿಡುಗಡೆಮಾಡಲು ನಿರಾಕರಿಸಿದ್ದರಿಂದ ದೇವರು ಆ ದೇಶದ ಮೇಲೆ ಹತ್ತು ಬಾಧೆಗಳನ್ನು ಬರಮಾಡಿದನು. ಇವು ಯೆಹೋವನಿಗಿದ್ದ ಶಕ್ತಿಯನ್ನು ಎಷ್ಟು ಚೆನ್ನಾಗಿ ಪ್ರದರ್ಶಿಸಿದವು! ಐಗುಪ್ತದವರ ದೇವದೇವತೆಗಳು ಆ ಹೊಡೆತಗಳನ್ನು ತಡೆಯಲು ಏನನ್ನೂ ಮಾಡಲು ಶಕ್ತರಾಗಲಿಲ್ಲ.

ಫರೋಹನಿಗೆ ದೇವಜನರನ್ನು ಹೋಗಲು ಬಿಡುವಂತೆ ಹೇಳಲಾದಾಗ ಅವನು, “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ ಇಸ್ರಾಯೇಲ್ಯರು ಹೊರಟುಹೋಗುವದಕ್ಕೆ ನಾನು ಒಪ್ಪುವದೇ ಇಲ್ಲ” ಎಂದು ಅವಹೇಳನಮಾಡಿದನು. (ವಿಮೋಚನಕಾಂಡ 5:2) ಇದರ ಫಲಿತಾಂಶವಾಗಿ ಐಗುಪ್ತವು ಈ ಹೊಡೆತಗಳನ್ನು ಅನುಭವಿಸಿತು: (1) ನೀರು ರಕ್ತವಾಯಿತು, (2) ಕಪ್ಪೆಗಳು, (3) ಹೇನುಗಳು, (4) ವಿಷದ ಹುಳಗಳು, (5) ಪಶುಗಳಿಗೆ ಘೋರವ್ಯಾಧಿ, (6) ಮಾನವರ ಮತ್ತು ಮೃಗಗಳ ಮೈಮೇಲೆಲ್ಲಾ ಹುಣ್ಣುಗಳು, (7) ಆನೆಕಲ್ಲಿನ ಮಳೆ, (8) ಮಿಡಿತೆಗಳು, (9) ಕಾರ್ಗತ್ತಲು (10) ಐಗುಪ್ತದವರ ಚೊಚ್ಚಲುಮಕ್ಕಳ ಮರಣ ಮತ್ತು ಇದರಲ್ಲಿ ಫರೋಹನ ಮಗನೂ ಸೇರಿದ್ದನು. ಕೊನೆಗೆ, ಫರೋಹನು ಇಬ್ರಿಯರಿಗೆ ಹೋಗುವಂತೆ ಅನುಮತಿ ಕೊಟ್ಟನು. ವಾಸ್ತವದಲ್ಲಿ, ಅವರು ಅಲ್ಲಿಂದ ಹೊರಡುವಂತೆ ಅವನು ತ್ವರೆಪಡಿಸಿದನು ಸಹ!​—⁠ವಿಮೋಚನಕಾಂಡ 12:​31, 32.

ಆಗ ಇಸ್ರಾಯೇಲ್ಯ ಗಂಡಸರು, ಹೆಂಗಸರು, ಮಕ್ಕಳು ಹಾಗೂ ಬಹು ಮಂದಿ ಅನ್ಯರು, ಹೀಗೆ ಒಟ್ಟು ಮೂವತ್ತು ಲಕ್ಷದಷ್ಟು ಜನರು ಕೂಡಲೇ ಹೊರಟರು. (ವಿಮೋಚನಕಾಂಡ 12:​37, 38) ಆದರೆ, ಬೇಗನೆ ಫರೋಹನು ತನ್ನ ಭಯಾನಕ ಸೈನ್ಯದೊಂದಿಗೆ ಅವರನ್ನು ಬೆನ್ನಟ್ಟಿಕೊಂಡು ಬಂದನು. ಇಸ್ರಾಯೇಲ್ಯರು ಈಗ ಕೆಂಪು ಸಮುದ್ರ, ಭಯಂಕರವಾದ ಮರುಭೂಮಿ ಮತ್ತು ಫರೋಹನ ಪಡೆಗಳ ಮಧ್ಯೆ ಸಿಕ್ಕಿಬಿದ್ದಂತೆ ತೋರುತ್ತಿತ್ತು. ಹಾಗಿದ್ದರೂ ಮೋಶೆಯು ಜನರಿಗೆ ಹೇಳಿದ್ದು: “ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ.”​—⁠ವಿಮೋಚನಕಾಂಡ 14:8-14.

ಇಸ್ರಾಯೇಲ್ಯರು ತಪ್ಪಿಸಿಕೊಳ್ಳಲಾಗುವಂತೆ ಯೆಹೋವನು ಅದ್ಭುತಕರವಾದ ರೀತಿಯಲ್ಲಿ ಕೆಂಪು ಸಮುದ್ರದ ನೀರನ್ನು ವಿಭಾಗಿಸಿದನು. ಆದರೆ ಐಗುಪ್ತರು ಅವರನ್ನು ಅಟ್ಟಿಕೊಂಡು ಸಮುದ್ರದೊಳಗೆ ಹೋದಾಗ, ಅದರ ನೀರು ಯಥಾಸ್ಥಿತಿಗೆ ಹಿಂದಿರುಗುವಂತೆ ದೇವರು ಮಾಡಿದನು. ‘ಐಗುಪ್ತ್ಯರನ್ನೂ ಅವರ ರಥಗಳನ್ನೂ ರಾಹುತರನ್ನೂ [ಯೆಹೋವನು] ಮುಣುಗಿಸಿದನು.’ (ವಿಮೋಚನಕಾಂಡ 14:26-28; 15:4) ಆ ಅಹಂಭಾವದ ಫರೋಹನು ಯೆಹೋವನನ್ನು ಗೌರವಿಸಲು ನಿರಾಕರಿಸಿದ್ದು ಅವನ ವಿಪತ್ಕಾರಕ ಅಂತ್ಯಕ್ಕೆ ನಡೆಸಿತು.

ಕೆಂಪು ಸಮುದ್ರದ ಬಳಿಯಲ್ಲಿ ಯೆಹೋವನು “ಯುದ್ಧಶೂರ”ನಾಗಿ ಪರಿಣಮಿಸಿದನು. (ವಿಮೋಚನಕಾಂಡ 15:⁠3) ‘ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿ ನಂಬಿಕೆಯಿಟ್ಟರು’ ಎಂದು ಆ ಪ್ರೇರಿತ ವೃತ್ತಾಂತವು ತಿಳಿಸುತ್ತದೆ. (ವಿಮೋಚನಕಾಂಡ 14:31; ಕೀರ್ತನೆ 136:10-15) ದೇವರಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲಿಕ್ಕಾಗಿ ಪುರುಷರು ಮೋಶೆಯೊಂದಿಗೆ ಜಯಗೀತೆಯಲ್ಲಿ ಜೊತೆಗೂಡಿದರು ಮತ್ತು ಸ್ತ್ರೀಯರು ಅವನ ಅಕ್ಕ ಮಿರ್ಯಾಮಳ ನೇತೃತ್ವದಲ್ಲಿ ನಾಟ್ಯವಾಡಿದರು. *

ಯೆಹೋವನು ಈಗಲೂ ವಿಮೋಚಕನಾಗಿದ್ದಾನೆ

ಯೆಹೋವನ ಆಧುನಿಕ ದಿನದ ಸೇವಕರು, ಆ ದೈವಿಕ ವಿಮೋಚನೆಯ ಕೃತ್ಯದಿಂದ ನಂಬಿಕೆಯನ್ನು ಬಲಪಡಿಸುವಂಥ ಪಾಠಗಳನ್ನು ಕಲಿಯಸಾಧ್ಯವಿದೆ. ಒಂದು ಪಾಠವೇನೆಂದರೆ, ಯೆಹೋವನಿಗೆ ಅಪರಿಮಿತ ಶಕ್ತಿ ಇದೆ ಮತ್ತು ಆತನು ತನ್ನ ಜನರನ್ನು ಪೂರ್ಣವಾಗಿ ಬೆಂಬಲಿಸಶಕ್ತನು. ಆ ವಿಜಯಗೀತೆಯಲ್ಲಿ ಮೋಶೆ ಮತ್ತು ಇಸ್ರಾಯೇಲ್ಯರು ಜಯಘೋಷದಿಂದ ಹೀಗೆ ಹಾಡಿದರು: “ಯೆಹೋವನೇ, ನಿನ್ನ ಭುಜಬಲವು ಎಷ್ಟೋ ಘನವಾದದ್ದು; ಯೆಹೋವನೇ, ನಿನ್ನ ಭುಜಬಲವು ನಿನ್ನ ಶತ್ರುಗಳನ್ನು ಪುಡಿಪುಡಿಮಾಡುತ್ತದೆ.”​—⁠ವಿಮೋಚನಕಾಂಡ 15:⁠6.

ಇನ್ನೊಂದು ಪಾಠವೇನೆಂದರೆ, ಸರ್ವಶಕ್ತನು ತನ್ನ ಜನರನ್ನು ಸಂರಕ್ಷಿಸಲು ಬಹಳಷ್ಟು ಆಶಿಸುತ್ತಾನೆ. ಇಸ್ರಾಯೇಲ್ಯರು ಹೀಗೆ ಹಾಡಿದರು: “ನನ್ನ ಬಲವೂ ಕೀರ್ತನೆಯೂ ಯಾಹುವೇ, ಆತನಿಂದ ನನಗೆ ರಕ್ಷಣೆಯುಂಟಾಯಿತು. ನಮ್ಮ ದೇವರು ಆತನೇ, ಆತನನ್ನು ವರ್ಣಿಸುವೆವು.” ಮತ್ತೊಂದು ಪಾಠವೇನೆಂದರೆ, ಯೆಹೋವ ದೇವರ ಚಿತ್ತವನ್ನು ವಿರೋಧಿಸುವುದರಲ್ಲಿ ಯಾರೇ ಆಗಲಿ ಯಶಸ್ವಿಯಾಗಲಾರರು. ದೇವರು ವಿಮೋಚಿಸಿದಂಥ ಆ ಜನರು ತಮ್ಮ ವಿಜಯ ಘೋಷದ ಗೀತೆಯಲ್ಲಿ ಹೀಗೆ ಹಾಡಿದರು: “ಯೆಹೋವನೇ, ದೇವರುಗಳಲ್ಲಿ ನಿನ್ನ ಸಮಾನನು ಯಾವನು? ಪರಿಶುದ್ಧತ್ವದಿಂದ ಸರ್ವೋತ್ತಮನೂ ಪ್ರಖ್ಯಾತಕೃತ್ಯಗಳನ್ನು ಮಾಡಿರುವದರಿಂದ ಭಯಂಕರನೂ ಅದ್ಭುತಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನನು ಎಲ್ಲಿ?”​—⁠ವಿಮೋಚನಕಾಂಡ 15:2, 11.

ಪ್ರಾಚೀನ ಐಗುಪ್ತದ ಫರೋಹನಂತೆ, ಇಂದಿನ ಲೋಕದ ಧುರೀಣರು ಯೆಹೋವನ ಜನರನ್ನು ಹಿಂಸಿಸುತ್ತಾರೆ. ಗರ್ವಿಷ್ಠ ನಾಯಕರು, ‘ಪರಾತ್ಪರನಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನ ಭಕ್ತರನ್ನು ಸವೆಯಿಸಬಹುದು.’ (ದಾನಿಯೇಲ 7:25; 11:36) ಆದರೆ ಯೆಹೋವನು ತನ್ನ ಜನರಿಗೆ ಆಶ್ವಾಸನೆ ನೀಡುವುದು: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯ.”​—⁠ಯೆಶಾಯ 54:⁠17.

ಫರೋಹನು ಮತ್ತು ಅವನ ಸೈನ್ಯವು ಸೋಲುಂಡಂತೆಯೇ, ದೇವರ ವಿರೋಧಿಗಳು ನಿಶ್ಚಯವಾಗಿಯೂ ಸೋಲುವರು. ಐಗುಪ್ತದಿಂದ ಇಸ್ರಾಯೇಲ್ಯರ ಬಿಡುಗಡೆಯಂಥ ಯೆಹೋವನ ವಿಮೋಚನಾ ಕೃತ್ಯಗಳು ಯೇಸುವಿನ ಅಪೊಸ್ತಲರು ತಿಳಿಸಿದ ಈ ಮೂಲತತ್ತ್ವವನ್ನು ಪಾಲಿಸುವುದು ಸರಿಯೆಂದು ಸಾಕ್ಷ್ಯಕೊಡುತ್ತವೆ. ಅವರು ಹೇಳಿದ್ದು: ‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು.’​—⁠ಅ. ಕೃತ್ಯಗಳು 5:⁠29.

[ಪಾದಟಿಪ್ಪಣಿ]

^ ಪ್ಯಾರ. 8 ಯೆಹೋವನ ಸಾಕ್ಷಿಗಳ 2006ರ ಕ್ಯಾಲೆಂಡರ್‌ನ (ಇಂಗ್ಲಿಷ್‌) ಜನವರಿ/ಫೆಬ್ರವರಿ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಚೌಕ/ಚಿತ್ರ]

ನಿಮಗೆ ಗೊತ್ತಿದೆಯೊ?

• ಇಸ್ರಾಯೇಲ್ಯರು ಒಣ ನೆಲದ ಮೇಲೆ ನಡೆಯುತ್ತಾ ಕೆಂಪು ಸಮುದ್ರವನ್ನು ದಾಟಿಕೊಂಡು ಹೋಗಲಿಕ್ಕಾಗಿ ಇಡೀ ರಾತ್ರಿ ಬಲವಾದ ಗಾಳಿಯು ಬೀಸುವಂತೆ ಯೆಹೋವನು ಮಾಡಿದನು.​—⁠ವಿಮೋಚನಕಾಂಡ 14:​21, 22.

• ಲಕ್ಷಗಟ್ಟಲೆ ಇಸ್ರಾಯೇಲ್ಯರು ತೀರ ಅಲ್ಪಾವಧಿಯಲ್ಲಿ ಕೆಂಪು ಸಮುದ್ರವನ್ನು ದಾಟಲಿಕ್ಕಾಗಿ ಆ ದಾರಿಯು 1.5 ಕಿಲೊಮೀಟರ್‌ ಅಥವಾ ಅದಕ್ಕಿಂತ ಹೆಚ್ಚು ಅಗಲವಾಗಿರಬೇಕಿತ್ತು.

[ಪುಟ 9ರಲ್ಲಿರುವ ಚಿತ್ರಗಳು]

ಐಗುಪ್ತದ ಸುಳ್ಳು ದೇವದೇವತೆಗಳು, ಯೆಹೋವನಿಂದ ಬಂದ ಹತ್ತು ಬಾಧೆಗಳನ್ನು ತಡೆಯಲು ಅಶಕ್ತವಾಗಿದ್ದವು

[ಕೃಪೆ]

ಮೂರೂ ಪ್ರತಿಮೆಗಳು: Photograph taken by courtesy of the British Museum