ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜ್ಞಾನೋಕ್ತಿಗಳು ಪುಸ್ತಕದ ಮುಖ್ಯಾಂಶಗಳು

ಜ್ಞಾನೋಕ್ತಿಗಳು ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಜ್ಞಾನೋಕ್ತಿಗಳು ಪುಸ್ತಕದ ಮುಖ್ಯಾಂಶಗಳು

ಪುರಾತನ ಇಸ್ರಾಯೇಲಿನ ರಾಜನಾದ ಸೊಲೊಮೋನನು ನುಡಿದ “ಜ್ಞಾನೋಕ್ತಿಗಳು ಮೂರು ಸಾವಿರ.” (1 ಅರಸುಗಳು 4:32) ಅವನ ವಿವೇಕದ ನುಡಿಗಳು ನಮಗೆ ಲಭ್ಯ ಇವೆಯೊ? ಹೌದು. ಸಾ.ಶ.ಪೂ. 717ರ ಸುಮಾರಿಗೆ ಪೂರ್ಣಗೊಂಡಿರುವ ಬೈಬಲಿನ ಜ್ಞಾನೋಕ್ತಿಗಳ ಪುಸ್ತಕವು, ಸೊಲೊಮೋನನ ಹಲವಾರು ಜ್ಞಾನೋಕ್ತಿಗಳನ್ನು ದಾಖಲಿಸುತ್ತದೆ. ಅದರ ಕೊನೆಯ ಎರಡು ಅಧ್ಯಾಯಗಳನ್ನು ಯಾಕೆಯ ಮಗನಾದ ಆಗೂರ ಮತ್ತು ಅರಸನಾದ ಲೆಮುವೇಲರು ಬರೆದರು. ಆದರೆ, ಲೆಮುವೇಲ ಎಂಬುದು ಸೊಲೊಮೋನನ ಇನ್ನೊಂದು ಹೆಸರಾಗಿತ್ತೆಂದು ಕೆಲವರ ಅಭಿಪ್ರಾಯ.

ಜ್ಞಾನೋಕ್ತಿಗಳ ಪುಸ್ತಕದಲ್ಲಿರುವ ಪ್ರೇರಿತ ನುಡಿಗಳ ಸಂಗ್ರಹವು, “ಜನರು ಜ್ಞಾನವನ್ನೂ ಶಿಕ್ಷೆಯನ್ನೂ” ಕೊಡುವುದರ ಎರಡು ಉದ್ದೇಶಗಳನ್ನು ಹೊಂದಿರುತ್ತದೆ. (ಜ್ಞಾನೋಕ್ತಿ 1:2) ಈ ನುಡಿಗಳು ನಮಗೆ ವಿವೇಕವನ್ನು ಪಡೆಯಲು ಸಹಾಯಮಾಡುತ್ತವೆ, ಮತ್ತು ವಿವೇಕವು ವಿಷಯಗಳನ್ನು ಸ್ಪಷ್ಟವಾಗಿ ನೋಡುವ ಹಾಗೂ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ಜ್ಞಾನವನ್ನು ಕಾರ್ಯರೂಪಕ್ಕೆ ಹಾಕುವ ಸಾಮರ್ಥ್ಯವೇ ಆಗಿದೆ. ಈ ಜ್ಞಾನೋಕ್ತಿಗಳ ಮೂಲಕ ನಾವು ಶಿಕ್ಷೆ, ಅಂದರೆ ನೈತಿಕ ತರಬೇತನ್ನೂ ಪಡೆದುಕೊಳ್ಳುತ್ತೇವೆ. ಅವುಗಳಿಗೆ ಲಕ್ಷ್ಯಕೊಡುವುದು ಮತ್ತು ಅವುಗಳ ಬುದ್ಧಿವಾದವನ್ನು ಅನುಸರಿಸುವುದು ನಮ್ಮ ಹೃದಯವನ್ನು ಪ್ರಭಾವಿಸಬಲ್ಲದು, ಸಂತೋಷವನ್ನು ವರ್ಧಿಸಬಲ್ಲದು ಮತ್ತು ಯಶಸ್ಸಿಗೆ ನಡೆಸಬಲ್ಲದು.​—⁠ಇಬ್ರಿಯ 4:12.

‘ವಿವೇಕವನ್ನು ಪಡೆದು ಸದುಪದೇಶವನ್ನು ಹಿಡಿದುಕೊ’

(ಜ್ಞಾನೋಕ್ತಿ 1:1-9:18)

“ಜ್ಞಾನ [“ವಿವೇಕ,” NW]ವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ,” ಎಂದು ಸೊಲೊಮೋನನು ಹೇಳುತ್ತಾನೆ. (ಜ್ಞಾನೋಕ್ತಿ 1:20) ವಿವೇಕದ ಗಟ್ಟಿಯಾದ ಹಾಗೂ ಸ್ಪಷ್ಟವಾದ ದನಿಗೆ ನಾವೇಕೆ ಕಿವಿಗೊಡಬೇಕು? 2ನೇ ಅಧ್ಯಾಯವು, ವಿವೇಕವನ್ನು ಪಡೆದುಕೊಳ್ಳುವುದರಿಂದ ಸಿಗುವ ಹಲವಾರು ಪ್ರಯೋಜನಗಳನ್ನು ತಿಳಿಸುತ್ತದೆ. ಯೆಹೋವನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವುದು ಹೇಗೆಂದು 3ನೇ ಅಧ್ಯಾಯವು ಚರ್ಚಿಸುತ್ತದೆ. ತರುವಾಯ ಸೊಲೊಮೋನನು ಹೇಳುವುದು: “ಜ್ಞಾನವನ್ನು [“ವಿವೇಕವನ್ನು,” NW] ಪಡೆಯಬೇಕೆಂಬದೇ ಜ್ಞಾನಬೋಧೆಯ ಪ್ರಥಮಪಾಠ; ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು [“ತಿಳುವಳಿಕೆಯನ್ನು,” NW] ಪಡೆ. ಸದುಪದೇಶವನ್ನು ಹಿಡಿ, ಸಡಿಲಬಿಡಬೇಡ.”​—⁠ಜ್ಞಾನೋಕ್ತಿ 4:7, 13.

ಲೋಕದ ಅನೈತಿಕ ಮಾರ್ಗಗಳನ್ನು ಪ್ರತಿರೋಧಿಸಲು ನಮಗೆ ಯಾವುದು ಸಹಾಯಮಾಡುವುದು? ಜ್ಞಾನೋಕ್ತಿಗಳ 5ನೇ ಅಧ್ಯಾಯವು ಉತ್ತರಿಸುವುದು: ನಾವು ಯೋಚನಾ ಸಾಮರ್ಥ್ಯವನ್ನು ಉಪಯೋಗಿಸಬೇಕು ಮತ್ತು ಲೋಕದ ವ್ಯಾಮೋಹಕ್ಕೊಳಪಡಿಸುವ ಮಾರ್ಗಗಳನ್ನು ಗುರುತಿಸಬೇಕು. ಅನೈತಿಕತೆಗಾಗಿ ತೆರಬೇಕಾದ ಭಾರಿ ಬೆಲೆಯನ್ನೂ ಪರಿಗಣಿಸಿರಿ. 6ನೇ ಅಧ್ಯಾಯವು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹಾನಿಗೊಳಪಡಿಸುವ ಅಭ್ಯಾಸಗಳ ಮತ್ತು ಮನೋಭಾವಗಳ ವಿರುದ್ಧ ಎಚ್ಚರಿಸುತ್ತದೆ. 7ನೇ ಅಧ್ಯಾಯವು, ಒಬ್ಬ ಅನೈತಿಕ ವ್ಯಕ್ತಿ ನಡೆದುಕೊಳ್ಳುವ ರೀತಿಯ ಬಗ್ಗೆ ಕೊಡುವಂಥ ವಾಸ್ತವಿಕ ವರ್ಣನೆಯು ಬೆಲೆಕಟ್ಟಲಾಗದಂಥದ್ದು. 8ನೇ ಅಧ್ಯಾಯದಲ್ಲಿ ವಿವೇಕದ ಮೌಲ್ಯ ಮತ್ತು ಅದರ ಕರೆಯನ್ನು ಮನಸೆಳೆಯುವ ಶೈಲಿಯಲ್ಲಿ ಪ್ರಸ್ತುತಪಡಿಸಲಾಗಿದೆ. 9ನೇ ಅಧ್ಯಾಯವು ಅಲ್ಲಿವರೆಗೆ ಚರ್ಚಿಸಲ್ಪಟ್ಟಿರುವ ಜ್ಞಾನೋಕ್ತಿಗಳ ಒಂದು ಉತ್ತೇಜಕ ಸಮಾಪ್ತಿಯಾಗಿದ್ದು, ನಾವು ವಿವೇಕವನ್ನು ಬೆನ್ನಟ್ಟುವಂತೆ ಪ್ರಚೋದಿಸುವ ಒಂದು ರೋಮಾಂಚಕ ದೃಷ್ಟಾಂತ ರೂಪದಲ್ಲಿದೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

1:7; 9:​10 (NW)​—⁠ಯೆಹೋವನ ಭಯವು ಯಾವ ವಿಧದಲ್ಲಿ “ಜ್ಞಾನದ ಮೂಲ” ಮತ್ತು “ವಿವೇಕದ ಆರಂಭ” ಆಗಿದೆ? ಯೆಹೋವನ ಭಯವಿಲ್ಲದಿದ್ದರೆ ಯಾವುದೇ ಜ್ಞಾನವಿರಸಾಧ್ಯವಿಲ್ಲ, ಏಕೆಂದರೆ ಸಕಲವನ್ನು ಸೃಷ್ಟಿಸಿದಾತನು ಮತ್ತು ಬೈಬಲಿನ ಗ್ರಂಥಕರ್ತನು ಆತನೇ ಆಗಿದ್ದಾನೆ. (ರೋಮಾಪುರ 1:​20; 2 ತಿಮೊಥೆಯ 3:​16, 17) ಸಕಲ ಸತ್ಯ ಜ್ಞಾನದ ಉಗಮನು ಆತನಾಗಿದ್ದಾನೆ. ಆದುದರಿಂದ, ಯೆಹೋವನೆಡೆಗಿನ ಪೂಜ್ಯಭಾವದ ಭಯವೇ ಜ್ಞಾನದ ಮೂಲವಾಗಿದೆ. ದೇವಭಯವು ವಿವೇಕದ ಆರಂಭವೂ ಆಗಿದೆ ಏಕೆಂದರೆ, ಜ್ಞಾನವಿಲ್ಲದೆ ವಿವೇಕವಿರಸಾಧ್ಯವಿಲ್ಲ. ಅಷ್ಟುಮಾತ್ರವಲ್ಲದೆ, ಯೆಹೋವನ ಭಯದ ಕೊರತೆಯುಳ್ಳ ಒಬ್ಬ ವ್ಯಕ್ತಿಯು ತನಗಿರುವ ಜ್ಞಾನವನ್ನು ಸೃಷ್ಟಿಕರ್ತನನ್ನು ಗೌರವಿಸಲು ಉಪಯೋಗಿಸದಿರುವನು.

7:​1, 2​—⁠‘ನನ್ನ ಮಾತುಗಳು’ ಮತ್ತು ‘ನನ್ನ ಆಜ್ಞೆಗಳು’ ಎಂಬವುಗಳಲ್ಲಿ ಏನು ಒಳಗೂಡಿದೆ? ಇವು ಬೈಬಲ್‌ ಬೋಧನೆಗಳನ್ನು ಮಾತ್ರವಲ್ಲದೆ ಕುಟುಂಬ ಸದಸ್ಯರ ಪ್ರಯೋಜನಕ್ಕಾಗಿ ಹೆತ್ತವರಿಂದ ರೂಪಿತವಾದ ಕೌಟುಂಬಿಕ ನಿಯಮಗಳನ್ನು ಮತ್ತು ನಿಬಂಧನೆಗಳನ್ನು ಒಳಗೂಡುತ್ತವೆ. ಎಳೆಯರು ಇವುಗಳನ್ನು ಮಾತ್ರವಲ್ಲದೆ, ತಮ್ಮ ಹೆತ್ತವರಿಂದ ಬರುವ ಶಾಸ್ತ್ರಾಧಾರಿತ ಬೋಧನೆಗಳನ್ನು ಸಹ ಅಂಗೀಕರಿಸಬೇಕು.

8:​30​—⁠ಕುಶಲ “ಶಿಲ್ಪಿ” ಯಾರು? ವ್ಯಕ್ತೀಕರಿಸಲ್ಪಟ್ಟ ವಿವೇಕವು, ತನ್ನನ್ನೇ ಕುಶಲ ಶಿಲ್ಪಿಯೆಂದು ಕರೆದುಕೊಳ್ಳುತ್ತದೆ. ವಿವೇಕದ ಗುಣಲಕ್ಷಣಗಳನ್ನು ವಿವರಿಸಲು ಕೇವಲ ಒಂದು ಸಾಹಿತ್ಯಿಕ ಉಪಕರಣವಾಗಿರುವುದಕ್ಕಿಂತಲೂ ಹೆಚ್ಚಾಗಿ ಈ ವ್ಯಕ್ತೀಕರಣವು ಸಾಂಕೇತಿಕವಾಗಿ, ದೇವರ ಜ್ಯೇಷ್ಠ ಪುತ್ರನಾದ ಯೇಸು ಕ್ರಿಸ್ತನ ಮಾನವಪೂರ್ವ ಅಸ್ತಿತ್ವಕ್ಕೆ ಸೂಚಿಸುತ್ತದೆ. ಯೇಸು ಮಾನವನಾಗಿ ಭೂಮಿಯ ಮೇಲೆ ಹುಟ್ಟುವ ಎಷ್ಟೋ ಮುಂಚೆಯೇ ಅವನನ್ನು ‘ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನಿರ್ಮಿಸಿದನು.’ (ಜ್ಞಾನೋಕ್ತಿ 8:22) ಸಮಸ್ತವನ್ನು ಸೃಷ್ಟಿಸುವ ಸಮಯದಲ್ಲಿ ಅವನು ತನ್ನ ತಂದೆಯೊಂದಿಗೆ ಒಬ್ಬ ಕುಶಲ ‘ಶಿಲ್ಪಿಯಾಗಿ’ ಕ್ರಿಯಾಶೀಲನಾಗಿ ಕೆಲಸಮಾಡಿದನು.​—⁠ಕೊಲೊಸ್ಸೆ 1:15-17.

9:​17​—⁠“ಕದ್ದ ನೀರು” ಎಂದರೇನು, ಮತ್ತು ಅದು ಏಕೆ “ಸಿಹಿಯಾಗಿದೆ”? ಬೈಬಲ್‌, ವಿವಾಹ ಬಂಧದೊಳಗಿನ ಲೈಂಗಿಕ ಸಂಬಂಧವನ್ನು ಆನಂದಿಸುವುದನ್ನು ಒಂದು ಬಾವಿಯಿಂದ ಚೇತೋಹಾರಿ ನೀರನ್ನು ಸೇದಿ ಕುಡಿಯುವುದಕ್ಕೆ ಹೋಲಿಸುವುದರಿಂದ, ಕದ್ದ ನೀರು ಗುಪ್ತವಾಗಿರುವ ಅನೈತಿಕ ಲೈಂಗಿಕ ಸಂಬಂಧಗಳಿಗೆ ಸೂಚಿಸುತ್ತದೆ. (ಜ್ಞಾನೋಕ್ತಿ 5:15-17) ಅನೈತಿಕ ಸಂಬಂಧಗಳನ್ನು ಕದ್ದುಮುಚ್ಚಿ ನಡೆಸಲಾಗುತ್ತಿದೆ ಎಂಬ ಸಂಗತಿಯಿಂದಾಗಿ ಇಂಥ ನೀರು ಸಿಹಿಯಾಗಿರುವಂತೆ ತೋರುತ್ತದೆ.

ನಮಗಾಗಿರುವ ಪಾಠಗಳು:

1:​10-14. ಐಶ್ವರ್ಯವನ್ನು ಗಳಿಸುವ ಬಗ್ಗೆ ಪಾಪಿಗಳು ಕೊಡುವ ಆಶ್ವಾಸನೆಗಳು, ನಾವು ಅವರ ಕೆಟ್ಟ ಮಾರ್ಗಗಳಿಗೆ ಇಳಿಯುವಂತೆ ನಮ್ಮನ್ನು ಮೋಸಗೊಳಿಸಬಾರದು.

3:⁠3. ಪ್ರೀತಿಪೂರ್ವಕ ದಯೆ ಮತ್ತು ಸತ್ಯತೆಯನ್ನು ನಾವು ಬಹುಮೂಲ್ಯವಾಗಿ ಎಣಿಸಿ ಅದನ್ನು ಕೊರಳಲ್ಲಿರುವ ಬೆಲೆಬಾಳುವ ಸರದಂತೆ ಎಲ್ಲರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಅಲ್ಲದೆ, ಈ ಗುಣಗಳನ್ನು ನಮ್ಮ ಹೃದಯದಲ್ಲಿ ಕೆತ್ತಬೇಕು ಅಂದರೆ ಅವುಗಳನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಯೂ ಮಾಡಬೇಕು.

4:18. ಆಧ್ಯಾತ್ಮಿಕ ಜ್ಞಾನವು ಪ್ರಗತಿಪರವಾದದ್ದಾಗಿದೆ. ಬೆಳಕಿನಲ್ಲಿ ಉಳಿಯಬೇಕಾದರೆ ನಾವು ನಮ್ರತೆ ಹಾಗೂ ದೀನತೆಯನ್ನು ಪ್ರದರ್ಶಿಸುತ್ತಾ ಇರಬೇಕು.

5:⁠8. ಎಲ್ಲಾ ಅನೈತಿಕ ಪ್ರಭಾವಗಳಿಂದ, ಅದು ಸಂಗೀತ, ಮನೋರಂಜನೆ, ಇಂಟರ್‌ನೆಟ್‌ ಅಥವಾ ಪುಸ್ತಕಪತ್ರಿಕೆಗಳ ಮೂಲಕ ಬರುವುದಾದರೂ ಅವುಗಳಿಂದ ನಾವು ದೂರವಿರತಕ್ಕದ್ದು.

5:21. ಯೆಹೋವನನ್ನು ಪ್ರೀತಿಸುವವನೊಬ್ಬನು ಸತ್ಯದೇವರೊಂದಿಗಿನ ತನ್ನ ಒಳ್ಳೆಯ ಸಂಬಂಧವನ್ನು ಕೆಲವೇ ಕ್ಷಣಗಳ ಸುಖಕ್ಕೋಸ್ಕರ ವಿನಿಮಯಮಾಡುವನೊ? ಖಂಡಿತವಾಗಿಯೂ ಇಲ್ಲ. ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವ ಅತಿ ಪ್ರಬಲವಾದ ಪ್ರಚೋದನೆಯು, ಯೆಹೋವನು ನಮ್ಮ ಮಾರ್ಗಗಳನ್ನು ನೋಡುತ್ತಾನೆ ಮತ್ತು ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೆಂಬ ಅರಿವೇ ಆಗಿದೆ.

6:​1-5. ಈ ವಚನಗಳಲ್ಲಿ, ಬೇರೆಯವರಿಗೆ “ಹೊಣೆಯಾಗಿ” ಇರುವುದರ ಅಂದರೆ, ಅವಿವೇಕತನದಿಂದ ಇತರರಿಗಾಗಿ ನಾವು ಹಣಕಾಸಿನ ವಿಷಯದಲ್ಲಿ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದರ ವಿರುದ್ಧ ಎಂಥ ಉತ್ತಮ ಬುದ್ಧಿವಾದ ನಮಗಿದೆ! ನಾವು ತೆಗೆದುಕೊಂಡ ಹೆಜ್ಜೆಯು ಅವಿವೇಕಯುತವಾದದ್ದು ಎಂದು ಸೂಕ್ಷ್ಮ ಪರಿಶೀಲನೆಯ ನಂತರ ನಮಗೆ ತೋರುವುದಾದರೆ, ಕೂಡಲೆ ಬೆಂಬಿಡದೆ ಬಿನ್ನಹಗಳನ್ನು ಮಾಡುತ್ತಾ ಆ ‘ನೆರೆಯವನನ್ನು ಕಾಡಿ’ ವಿಷಯಗಳನ್ನು ಸರಿಪಡಿಸಲು ನಮ್ಮಿಂದಾದದ್ದೆಲ್ಲವನ್ನು ನಾವು ಮಾಡಬೇಕು.

6:​16-19. ಇದರಲ್ಲಿ, ಹೆಚ್ಚುಕಡಿಮೆ ಎಲ್ಲಾ ಬಗೆಯ ತಪ್ಪುಕೆಲಸಗಳನ್ನು ಒಳಗೂಡಿರುವ ಏಳು ಮೂಲಭೂತ ವಿಭಾಗಗಳಿವೆ. ಅವುಗಳ ಕಡೆಗೆ ನಾವು ಹಗೆಯನ್ನು ಬೆಳೆಸಬೇಕು.

6:​20-24. ಮಕ್ಕಳಿಗೆ ಬೈಬಲ್‌ ನಿಯಮಗಳಿಗನುಸಾರ ತರಬೇತನ್ನು ನೀಡುವುದು ಲೈಂಗಿಕ ಅನೈತಿಕತೆಯ ಬೋನಿಗೆ ಸಿಕ್ಕಿಬೀಳದಂತೆ ಅವರನ್ನು ಸಂರಕ್ಷಿಸಬಲ್ಲದು. ಇಂಥ ತರಬೇತಿ ಕೊಡುವುದನ್ನು ಹೆತ್ತವರು ಅಲಕ್ಷಿಸಬಾರದು.

7:⁠4. ಜ್ಞಾನ ಮತ್ತು ವಿವೇಕದ ಕಡೆಗೆ ನಾವು ಅಕ್ಕರೆಯನ್ನು ಬೆಳೆಸಿಕೊಳ್ಳಬೇಕು.

ನಮ್ಮನ್ನು ಮಾರ್ಗದರ್ಶಿಸಲು ಬಿಡಿಯಾದ ಜ್ಞಾನೋಕ್ತಿಗಳು

(ಜ್ಞಾನೋಕ್ತಿ 10:1-29:27)

ಸೊಲೊಮೋನನ ಉಳಿದ ಜ್ಞಾನೋಕ್ತಿಗಳು ಚುಟುಕಾದ ಬಿಡಿ ನುಡಿಗಳಾಗಿವೆ. ಇವುಗಳನ್ನು ಮುಖ್ಯವಾಗಿ ವೈದೃಶ್ಯಗಳು, ಸಮಾನತೆಗಳು ಮತ್ತು ಹೋಲಿಕೆಗಳಾಗಿ ಪ್ರಸ್ತುತಪಡಿಸಲಾಗಿದ್ದು, ಅವು ನಡೆ, ನುಡಿ ಹಾಗೂ ಮನೋಭಾವಗಳ ಕುರಿತು ಪ್ರಬಲ ಪಾಠಗಳನ್ನು ಒದಗಿಸುತ್ತವೆ.

ಯೆಹೋವನ ಕಡೆಗೆ ಪೂಜ್ಯ ಭಯವನ್ನು ತೋರಿಸುವ ಮೌಲ್ಯವನ್ನು 10ರಿಂದ 24ನೇ ಅಧ್ಯಾಯಗಳು ಎತ್ತಿತೋರಿಸುತ್ತವೆ. 25ರಿಂದ 29ನೇ ಅಧ್ಯಾಯದ ಜ್ಞಾನೋಕ್ತಿಗಳನ್ನು “ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು . . . ಸಂಗ್ರಹಿಸಿ ಬರೆದರು.” (ಜ್ಞಾನೋಕ್ತಿ 25:1) ಈ ಜ್ಞಾನೋಕ್ತಿಗಳು ಯೆಹೋವನ ಮೇಲೆ ಆತುಕೊಳ್ಳುವುದನ್ನು ಹಾಗೂ ಇನ್ನಿತರ ಪ್ರಾಮುಖ್ಯ ಪಾಠಗಳನ್ನು ಕಲಿಸುತ್ತವೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

10:​6​—⁠“ದುಷ್ಟನ ಬಾಯಿಗೆ ಬಲಾತ್ಕಾರವೇ ಮುಚ್ಚಳ” ಆಗಿರುವುದು ಹೇಗೆ? ದುಷ್ಟರನ್ನು ಸಾಮಾನ್ಯವಾಗಿ ಇತರರು ಕಡು ದ್ವೇಷದಿಂದ ಉಪಚರಿಸುತ್ತಾರಾದ ಕಾರಣ ಇತರರಿಂದ ಅವರು ಪಡೆಯುವ ಪ್ರತಿಕೂಲ ವರ್ತನೆಯೇ ಅವರನ್ನು ಸುಮ್ಮನಾಗಿಸುತ್ತಿರಬಹುದು. ಮೂಲ ಭಾಷೆಯಾದ ಹೀಬ್ರುವಿನಲ್ಲಿ ಇದಕ್ಕೆ ಇನ್ನೊಂದು ಅರ್ಥವನ್ನೂ ಕೊಡಬಹುದು. ಅದು ಹೇಳುವುದು: “ದುಷ್ಟನ ಬಾಯಿ ಬಲಾತ್ಕಾರಕ್ಕೆ ಮುಚ್ಚಳ.” ಇದು, ಇತರರಿಗೆ ಹಾನಿಮಾಡಬೇಕೆಂದು ದುಷ್ಟರಿಗಿರುವ ಕೇಡಿನ ಗುರಿಯನ್ನು ಮರೆಮಾಡಲು ಅವರು ನಯವಾದ ಮಾತುಗಳನ್ನು ಉಪಯೋಗಿಸುವುದನ್ನು ಸೂಚಿಸುತ್ತಿರಬಹುದು.

10:​10​—⁠“ಕಣ್ಣುಮಿಟಕಿಸುವವ” ಕಷ್ಟಕರನಾಗಿರುವುದು ಅಥವಾ ನೋವನ್ನುಂಟುಮಾಡುವುದು ಹೇಗೆ? “ನೀಚನೂ ದುಷ್ಟನೂ” ಆಗಿರುವವನು ‘ಸೊಟ್ಟುಬಾಯಿಯನ್ನು’ ಬಳಸುವನು ಮಾತ್ರವಲ್ಲ ಅವನ ದೇಹ ಭಾಷೆಯ ಮೂಲಕ, ಉದಾಹರಣೆಗೆ “ಕಣ್ಣುಮಿಟಕಿಸುವ” ಮೂಲಕ, ತನ್ನ ಹೇತುಗಳನ್ನು ಮರೆಮಾಡಲು ಯತ್ನಿಸಬಹುದು. (ಜ್ಞಾನೋಕ್ತಿ 6:12, 13) ಈ ರೀತಿಯ ವಂಚನೆಯು ಬಲಿಯಾದವನಿಗೆ ಅತಿಯಾದ ಬೇಗುದಿಯನ್ನು ಉಂಟುಮಾಡಬಹುದು.

10:​29​—⁠‘ಯೆಹೋವನ ಸನ್ಮಾರ್ಗ’ ಯಾವುದಾಗಿದೆ? ಇದು, ನಾವು ಅನುಕರಿಸಬೇಕಾದ ಜೀವನ ಕ್ರಮವಾಗಿರದೆ ಯೆಹೋವನು ಮಾನವಕುಲದೊಂದಿಗೆ ವ್ಯವಹರಿಸುವ ರೀತಿಯನ್ನು ಸೂಚಿಸುತ್ತದೆ. ಮಾನವರೊಂದಿಗಿನ ದೇವರ ವ್ಯವಹಾರಗಳು, ನಿರ್ದೋಷಿಗಳಿಗೆ ಭದ್ರತೆ ಮತ್ತು ದುಷ್ಟರಿಗೆ ನಾಶನದ ಅರ್ಥದಲ್ಲಿದೆ.

11:​31​—⁠ಶಿಷ್ಟನು ಮತ್ತು ದುಷ್ಟನು ಯಾವ ಕ್ರಿಯಾಫಲವನ್ನು ಅನುಭವಿಸುತ್ತಾರೆ? ಶಿಷ್ಟನು ತಪ್ಪಿಬೀಳುವಾಗ ಅವನ ತಪ್ಪುಗಳಿಗೆ ದೊರೆಯುವ ಕ್ರಿಯಾಫಲವು ಶಿಸ್ತಾಗಿದೆ. ದುಷ್ಟನಾದರೊ ಬೇಕುಬೇಕೆಂದು ಪಾಪಮಾಡುತ್ತಾನೆ ಮತ್ತು ಒಳ್ಳೆಯದನ್ನು ಮಾಡಲಿಕ್ಕಾಗಿ ತಿರುಗಿಕೊಳ್ಳಲು ನಿರಾಕರಿಸುತ್ತಾನೆ. ಇದರಿಂದಾಗಿ ಅವನು ಕಠಿನ ಶಿಕ್ಷೆಗೆ ಅರ್ಹನಾಗಿದ್ದು ಅದನ್ನು ಪಡೆಯುತ್ತಾನೆ.

12:​23​—⁠ಒಬ್ಬನು “ತಿಳಿದದ್ದನ್ನು ಗುಪ್ತಪಡಿಸುವುದು” ಹೇಗೆ? ತಿಳಿದದ್ದನ್ನು ಗುಪ್ತಪಡಿಸುವುದು ಅಥವಾ “ಜ್ಞಾನವನ್ನು ಮುಚ್ಚಿಡುವುದು” (NW), ಒಬ್ಬ ವ್ಯಕ್ತಿಯು ಅದನ್ನು ಎಂದಿಗೂ ತೋರಿಸಿಕೊಡುವುದಿಲ್ಲ ಎಂದರ್ಥವಲ್ಲ. ಇದು, ಕೊಚ್ಚಿಕೊಳ್ಳುವ ಮೂಲಕ ಜ್ಞಾನದ ಆಡಂಬರದ ಪ್ರದರ್ಶನಮಾಡುವುದರ ಬದಲಿಗೆ ಅದನ್ನು ಎದ್ದುಕಾಣದ ರೀತಿಯಲ್ಲಿ ಪ್ರದರ್ಶಿಸುವುದನ್ನು ಸೂಚಿಸುತ್ತದೆ.

18:​19​—⁠“ಅನ್ಯಾಯಹೊಂದಿದ ಸಹೋದರನು ಬಲವಾದ ಪಟ್ಟಣಕ್ಕಿಂತಲೂ ಅಸಾಧ್ಯ”ನಾಗಿರುವುದು ಹೇಗೆ? ಮುತ್ತಿಗೆಹಾಕಲ್ಪಟ್ಟ ಒಂದು ಬಲವಾದ ಕೋಟೆಯಂತೆ ಇಂಥ ವ್ಯಕ್ತಿಯು ಆದಂಥ ತಪ್ಪನ್ನು ಕ್ಷಮಿಸಲು ಗಡುಸಾಗಿ ನಿರಾಕರಿಸಬಹುದು. ಅವನ ಮತ್ತು ತಪ್ಪಿತಸ್ಥನ ನಡುವಿನ ವ್ಯಾಜ್ಯಗಳು “ಕೋಟೆಯ ಅಗುಳಿಗಳಂತೆ” ಒಂದು ತಡೆಯಾಗಿರಬಲ್ಲವು.

ನಮಗಾಗಿರುವ ಪಾಠಗಳು:

10:​11-14. ನಮ್ಮ ಮಾತುಗಳು ಕಟ್ಟುವಂಥವುಗಳಾಗಬೇಕಾದರೆ ನಮ್ಮ ಮನಸ್ಸು ನಿಷ್ಕೃಷ್ಟ ಜ್ಞಾನದಿಂದ ತುಂಬಿರಬೇಕು, ನಮ್ಮ ಹೃದಯವು ಪ್ರೀತಿಯಿಂದ ಪ್ರಚೋದಿಸಲ್ಪಡಬೇಕು ಮತ್ತು ನಾವೇನನ್ನು ಮಾತಾಡಬೇಕೆಂಬುದನ್ನು ವಿವೇಕವು ನಿರ್ಧರಿಸಬೇಕು.

10:19; 12:18; 13:3; 15:28; 17:28. ನಾವು ಮಾತಾಡುವ ಮುನ್ನ ಯೋಚಿಸಬೇಕು ಮತ್ತು ಹೆಚ್ಚು ಮಾತಾಡಬಾರದು.

11:1; 16:11; 20:​10, 23. ವ್ಯಾಪಾರ ವ್ಯವಹಾರಗಳಲ್ಲಿ ನಾವು ಪ್ರಾಮಾಣಿಕರಾಗಿರಬೇಕೆಂದು ಯೆಹೋವನು ಬಯಸುತ್ತಾನೆ.

11:⁠4. ವೈಯಕ್ತಿಕ ಬೈಬಲ್‌ ಅಧ್ಯಯನ, ಕೂಟಗಳ ಹಾಜರಿ, ಪ್ರಾರ್ಥನೆ ಮತ್ತು ಕ್ಷೇತ್ರಸೇವೆಯನ್ನು ನಿರ್ಲಕ್ಷಿಸಿ ಪ್ರಾಪಂಚಿಕ ಐಶ್ವರ್ಯವನ್ನು ಬೆನ್ನಟ್ಟುವುದು ಹುಚ್ಚುತನವಾಗಿದೆ.

13:⁠4. ಸಭೆಯಲ್ಲಿನ ಜವಾಬ್ದಾರಿಯ ಸ್ಥಾನಕ್ಕಾಗಿ ಅಥವಾ ನೂತನ ಲೋಕದಲ್ಲಿನ ಜೀವನಕ್ಕಾಗಿ ‘ಆಶೆಪಡುವುದು’ ಮಾತ್ರ ಸಾಲದು. ನಾವು ಉದ್ಯೋಗಶೀಲರೂ ಆಗಿರಬೇಕು ಮತ್ತು ಅರ್ಹತೆಗಳನ್ನು ಮುಟ್ಟಲು ಶ್ರದ್ಧಾಪೂರ್ವಕವಾಗಿ ಶ್ರಮಿಸಲೂಬೇಕು.

13:24; 29:​15, 21. ಪ್ರೀತಿಯ ಹೆತ್ತವರು ತಮ್ಮ ಮಕ್ಕಳಿಗೆ ಅತಿ ಮುದ್ದುಮಾಡುವುದಿಲ್ಲ ಅಥವಾ ಅವರ ತಪ್ಪುಗಳನ್ನು ಅಲಕ್ಷಿಸುವುದಿಲ್ಲ. ಅದರ ಬದಲಿಗೆ, ಅಂಥ ತಪ್ಪುಗಳು ಆಳವಾಗಿ ಬೇರೂರುವ ಮೊದಲೇ ಅವುಗಳನ್ನು ಬೇರುಸಹಿತ ಕಿತ್ತುಹಾಕಲು ತಂದೆ ಅಥವಾ ತಾಯಿಯು ತಿದ್ದುವ ಕ್ರಮಗಳನ್ನು ಕೈಗೊಳ್ಳುತ್ತಾರೆ.

14:10. ಎಲ್ಲ ಸಮಯಗಳಲ್ಲಿ, ನಾವು ನಮ್ಮ ಅಂತರಂಗದ ಭಾವನೆಗಳನ್ನು ಇದ್ದ ಹಾಗೆ ವ್ಯಕ್ತಪಡಿಸಲಾರೆವು ಅಥವಾ ಇತರರು ಅದನ್ನು ಯಾವಾಗಲೂ ಅರ್ಥಮಾಡಿಕೊಳ್ಳಲಾರರು. ಆದುದರಿಂದ ಇತರರು ನೀಡುವ ಭಾವನಾತ್ಮಕ ಸಾಂತ್ವನವು ಸೀಮಿತವಾಗಿರಬಹುದು. ಕೆಲವು ತೊಂದರೆಗಳನ್ನು ತಾಳಿಕೊಳ್ಳಲು ನಾವು ಕೇವಲ ಯೆಹೋವನ ಮೇಲೆಯೇ ಆತುಕೊಳ್ಳಬೇಕಾದೀತು.

15:7. ಒಬ್ಬ ರೈತನು ಎಲ್ಲ ಬೀಜಗಳನ್ನು ಒಂದೇ ಕಡೆಯಲ್ಲಿ ಹೇಗೆ ಚೆಲ್ಲುವುದಿಲ್ಲವೊ ಹಾಗೆಯೇ ನಮಗೆ ತಿಳಿದಿರುವುದೆಲ್ಲವನ್ನು ಒಬ್ಬ ವ್ಯಕ್ತಿಗೆ ಒಮ್ಮೆಲೆ ಹೇಳಬಾರದು. ವಿವೇಕಿಯು ತನ್ನ ತಿಳುವಳಿಕೆಯನ್ನು ಸ್ವಲ್ಪ ಸ್ವಲ್ಪವಾಗಿ, ಅಗತ್ಯವಿದ್ದಂತೆ ಬಿತ್ತರಿಸುವನು.

15:15; 18:14. ಸಕಾರಾತ್ಮಕ ಹೊರನೋಟವನ್ನು ಇಟ್ಟುಕೊಳ್ಳುವುದು, ನಾವು ಸಂಕಟದ ಸನ್ನಿವೇಶಗಳಲ್ಲೂ ಆನಂದವನ್ನು ಕಂಡುಕೊಳ್ಳುವಂತೆ ಸಹಾಯಮಾಡುವುದು.

17:24. “ಮೂಢನ” ಕಣ್ಣು ಹಾಗೂ ಮನಸ್ಸು ಪ್ರಾಮುಖ್ಯ ವಿಷಯಗಳ ಮೇಲೆ ನೆಟ್ಟಿರುವ ಬದಲು ಅತ್ತಿತ್ತ ಅಲೆಯುತ್ತದೆ. ನಾವು ಹಾಗಿರದೆ, ವಿವೇಕದಿಂದ ಕ್ರಿಯೆಗೈಯಲು ಸಾಧ್ಯವಾಗುವಂತೆ ತಿಳಿವಳಿಕೆಯನ್ನು ಹುಡುಕುವವರಾಗಿರಬೇಕು.

23:​6-8. ಅತಿಥಿಸತ್ಕಾರವನ್ನು ಕಪಟಾಚಾರದಿಂದ ಮಾಡದಿರುವಂತೆ ನಾವು ಜಾಗರೂಕರಾಗಿರಬೇಕು.

27:21. ಹೊಗಳಿಕೆ ನಮ್ಮ ನಿಜರೂಪವನ್ನು ಬಯಲಿಗೆಳೆಯಬಲ್ಲದು. ನಾವು ದೇವರಿಗೆ ಚಿರಋಣಿಗಳಾಗಿದ್ದೇವೆ ಎಂದು ಒಪ್ಪಿಕೊಳ್ಳಲು ಮತ್ತು ಆತನನ್ನು ಸೇವಿಸುತ್ತಾ ಮುಂದುವರಿಯಲು ಈ ಹೊಗಳಿಕೆ ನಮ್ಮನ್ನು ಪ್ರಚೋದಿಸುವುದಾದರೆ ನಮ್ಮ ನಮ್ರತೆ ತೋರಿಬರುವುದು. ಆದರೆ ಹೊಗಳಿಕೆಯು ನಮ್ಮಲ್ಲಿ ಶ್ರೇಷ್ಠತೆಯ ಮನೋಭಾವವನ್ನು ಪ್ರವರ್ಧಿಸುವುದಾದರೆ ನಮ್ರತೆಯ ಕೊರತೆಯು ಬಯಲಾಗುವುದು.

27:​23-27. ಕುರುಬರಿಗೆ ಸಂಬಂಧಿಸಿದ ಹಿನ್ನಲೆಯನ್ನು ಬಳಸುತ್ತಾ, ಶ್ರದ್ಧಾಪೂರ್ವಕ ಕೆಲಸವನ್ನು ಮಾಡಿ ಸರಳ ಜೀವನ ನಡೆಸುವುದರಲ್ಲಿ ಸಂತೃಪ್ತರಾಗಿರುವುದರ ಮಹತ್ವವನ್ನು ಈ ಜ್ಞಾನೋಕ್ತಿಗಳು ಒತ್ತಿಹೇಳುತ್ತಿವೆ. ದೇವರ ಮೇಲೆ ಆತುಕೊಳ್ಳುವುದರ ಅಗತ್ಯವನ್ನು ಈ ಜ್ಞಾನೋಕ್ತಿಗಳು ನಮ್ಮ ಮೇಲೆ ವಿಶೇಷವಾಗಿ ಅಚ್ಚೊತ್ತಿಸಬೇಕು. *

28:⁠5. ನಾವು ಪ್ರಾರ್ಥನೆ ಮತ್ತು ದೇವರ ವಾಕ್ಯದ ಅಧ್ಯಯನದ ಮೂಲಕ ‘ಯೆಹೋವನನ್ನು ಹುಡುಕುವುದಾದರೆ,’ (NIBV) ಆತನನ್ನು ಅಂಗೀಕಾರಾರ್ಹ ರೀತಿಯಲ್ಲಿ ಸೇವಿಸಲು ಅಗತ್ಯವಿರುವ ‘ಸಮಸ್ತವನ್ನು ಗ್ರಹಿಸಲು’ ಸಾಧ್ಯವಾಗುವುದು.

ಮಹತ್ವವುಳ್ಳ ‘ದೈವೋಕ್ತಿಗಳು’

(ಜ್ಞಾನೋಕ್ತಿಗಳು 30:​1–31:31)

ಜ್ಞಾನೋಕ್ತಿಗಳ ಪುಸ್ತಕವು ಎರಡು ಮಹತ್ವವುಳ್ಳ ‘ದೈವೋಕ್ತಿಗಳೊಂದಿಗೆ’ ಸಮಾಪ್ತಿಗೊಳ್ಳುತ್ತದೆ. (ಜ್ಞಾನೋಕ್ತಿ 30:1; 31:1) ವಿಚಾರಪ್ರೇರಕ ಹೋಲಿಕೆಗಳ ಮೂಲಕ ಆಗೂರನ ದೈವೋಕ್ತಿಯು ಲೋಭದ ತಣಿಸಲಾಗದ ಆಸೆಯನ್ನು ದೃಷ್ಟಾಂತಿಸುತ್ತದೆ ಮತ್ತು ನೀಚನು ಕನ್ಯೆಯನ್ನು ಒಲಿಸುವಂಥ ವಿಧಾನಗಳು ಹೇಗೆ ಪತ್ತೆಹಚ್ಚಲಾರದವು ಆಗಿರಬಲ್ಲವೆಂಬುದನ್ನು ತೋರಿಸುತ್ತದೆ. * ನಮ್ಮನ್ನೇ ನಾವು ಹೆಚ್ಚಿಸಿಕೊಳ್ಳುವುದರ ಬಗ್ಗೆ ಮತ್ತು ಕೋಪದ ನುಡಿಗಳ ಬಗ್ಗೆಯೂ ಇದು ಎಚ್ಚರಿಸುತ್ತದೆ.

ಲೆಮೂವೇಲನಿಗೆ ತನ್ನ ತಾಯಿಯಿಂದ ದೊರೆತ ಮಹತ್ವವುಳ್ಳ ದೈವೋಕ್ತಿಯಲ್ಲಿ, ದ್ರಾಕ್ಷಾರಸ ಮತ್ತು ಮದ್ಯಸಾರದ ಸೇವನೆಯ ಬಗ್ಗೆ ಹಾಗೂ ನೀತಿಯಿಂದ ನ್ಯಾಯತೀರ್ಪು ಮಾಡುವುದರ ಕುರಿತೂ ಉತ್ತಮ ಬುದ್ಧಿವಾದವಿದೆ. ಒಬ್ಬ ಗುಣವತಿಯಾದ ಪತ್ನಿಯ ಕುರಿತಾದ ವರ್ಣನೆಯು ಈ ಹೇಳಿಕೆಯಲ್ಲಿ ಕೊನೆಗೊಳ್ಳುತ್ತದೆ: “ಆಕೆಯ ಕೈಗೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ; ಆಕೆಯ ಕಾರ್ಯಗಳೇ . . . ಆಕೆಯನ್ನು ಪ್ರಶಂಸಿಸಲಿ.”​—⁠ಜ್ಞಾನೋಕ್ತಿ 31:31.

ವಿವೇಕವನ್ನು ಸಂಪಾದಿಸಿರಿ, ಸುಶಿಕ್ಷೆಯನ್ನು ಅಂಗೀಕರಿಸಿರಿ, ದೇವಭಯವನ್ನು ಬೆಳೆಸಿರಿ, ಯೆಹೋವನ ಮೇಲೆ ಆತುಕೊಳ್ಳಿರಿ. ಪ್ರೇರಿತ ಜ್ಞಾನೋಕ್ತಿಗಳು ನಮಗೆ ಕಲಿಸುವ ಈ ಪಾಠಗಳು ಎಷ್ಟು ಅಮೂಲ್ಯವಾಗಿವೆ! ಹಾಗಾದರೆ ನಾವು ಅವುಗಳ ಬುದ್ಧಿವಾದವನ್ನು ಅನ್ವಯಿಸಿ, ಈ ಮೂಲಕ “ಯೆಹೋವನಲ್ಲಿ ಭಯಭಕ್ತಿಯುಳ್ಳ”ವನಿಗಿರುವ ಸಂತೋಷವನ್ನು ಅನುಭವಿಸೋಣ.​—⁠ಕೀರ್ತನೆ 112:⁠1. (w06 9/15)

[ಪಾದಟಿಪ್ಪಣಿಗಳು]

^ ಪ್ಯಾರ. 48 ಇಸವಿ 1991, ಅಗಸ್ಟ್‌ 1ರ ಕಾವಲಿನಬುರುಜುವಿನ (ಇಂಗ್ಲಿಷ್‌) ಪುಟ 31ನ್ನು ನೋಡಿ.

^ ಪ್ಯಾರ. 52 ಇಸವಿ 1992, ಅಕ್ಟೋಬರ್‌ 1ರ ಕಾವಲಿನಬುರುಜುವಿನ ಪುಟ 31ನ್ನು ನೋಡಿ.

[ಪುಟ 4ರಲ್ಲಿರುವ ಚಿತ್ರಗಳು]

ಸಕಲ ಸತ್ಯ ಜ್ಞಾನದ ಉಗಮನು ಯೆಹೋವನಾಗಿದ್ದಾನೆ

[ಪುಟ 6ರಲ್ಲಿರುವ ಚಿತ್ರ]

‘ತಿಳುವಳಿಕೆಯನ್ನು ಬಿತ್ತುವುದರ’ ಅರ್ಥವೇನು?