ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು”

“ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು”

“ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು”

‘ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ?’ ​—⁠ಜ್ಞಾನೋಕ್ತಿ 5:18, 20.

ಲೈಂಗಿಕ ಸಂಬಂಧಗಳ ಕುರಿತು ಮಾತಾಡಲು ಬೈಬಲ್‌ ಮುಚ್ಚುಮರೆಮಾಡುವುದಿಲ್ಲ. ಜ್ಞಾನೋಕ್ತಿ 5:​18, 19ರಲ್ಲಿ ನಾವು ಹೀಗೆ ಓದುತ್ತೇವೆ: “ನಿನ್ನ ಬುಗ್ಗೆಯು [ದೇವರ] ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. ಆಕೆ ಮನೋಹರವಾದ ಜಿಂಕೆಯಂತೆಯೂ ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ; ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರ ಲೀನವಾಗಿರು.”

2 ಇಲ್ಲಿ ಬಳಸಲ್ಪಟ್ಟಿರುವ ‘ಬುಗ್ಗೆ’ ಎಂಬ ಪದವು, ಲೈಂಗಿಕ ತೃಪ್ತಿಯ ಮೂಲಕ್ಕೆ ಸೂಚಿಸುತ್ತಿದೆ. ವಿವಾಹ ಸಂಗಾತಿಗಳ ನಡುವಿನ ಪ್ರಣಯಾತ್ಮಕ ಪ್ರೀತಿಯ ಭಾವನೆ ಮತ್ತು ಭಾವೋದ್ರೇಕವು ದೇವರಿಂದ ಬಂದಿರುವ ಒಂದು ಕೊಡುಗೆ ಆಗಿರುವುದರಿಂದ ಅದು ಆಶೀರ್ವಾದವನ್ನು ಹೊಂದಿರುತ್ತದೆ. ಆದರೆ ಆ ಸಂಬಂಧವನ್ನು ಕಟ್ಟುನಿಟ್ಟಾಗಿ ವಿವಾಹದ ಏರ್ಪಾಡಿನೊಳಗೆ ಮಾತ್ರ ಅನುಭವಿಸತಕ್ಕದ್ದು. ಹೀಗಿರುವುದರಿಂದಲೇ, ಜ್ಞಾನೋಕ್ತಿಗಳನ್ನು ಬರೆದವರಲ್ಲಿ ಒಬ್ಬನಾಗಿದ್ದ, ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು ಕೇಳಿದ್ದು: ‘ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವದೇಕೆ?’​—⁠ಜ್ಞಾನೋಕ್ತಿ 5:⁠20.

3 ಮದುವೆಯ ದಿನದಂದು ಒಬ್ಬ ಪುರುಷ ಹಾಗೂ ಸ್ತ್ರೀಯು, ತಾವು ಒಬ್ಬರನ್ನೊಬ್ಬರು ಪ್ರೀತಿಸುವೆವು ಮತ್ತು ಒಬ್ಬರಿಗೊಬ್ಬರು ನಿಷ್ಠರಾಗಿ ಉಳಿಯುವೆವೆಂದು ವಚನಕೊಡುತ್ತಾರೆ. ಹೀಗಿದ್ದರೂ, ಅನೇಕ ವಿವಾಹಗಳು ಹಾದರದಿಂದಾಗಿ ಛಿದ್ರಗೊಳ್ಳುತ್ತಿವೆ. ಸುಮಾರು 25 ಸಮೀಕ್ಷೆಗಳ ವಿಶ್ಲೇಷಣೆಯ ನಂತರ ಒಬ್ಬ ಸಂಶೋಧಕಿಯು, “ಹೆಂಡತಿಯರಲ್ಲಿ 25 ಪ್ರತಿಶತ ಮತ್ತು ಗಂಡಂದಿರಲ್ಲಿ 44 ಪ್ರತಿಶತ ಮಂದಿ ವಿವಾಹಬಾಹಿರ ಲೈಂಗಿಕ ಸಂಬಂಧವನ್ನು ಇಟ್ಟಿದ್ದರು” ಎಂಬ ವಿಷಯವನ್ನು ತಿಳಿದುಕೊಂಡರು. ಅಪೊಸ್ತಲ ಪೌಲನು ಹೇಳಿದ್ದು: “ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು . . . ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:9, 10) ವ್ಯಭಿಚಾರ ಇಲ್ಲವೆ ಹಾದರವು ದೇವರ ದೃಷ್ಟಿಯಲ್ಲಿ ಒಂದು ಗಂಭೀರ ಪಾಪವಾಗಿದೆ ಎಂಬುದರ ಬಗ್ಗೆ ಯಾವುದೇ ಅನುಮಾನವಿಲ್ಲ ಮತ್ತು ಸತ್ಯಾರಾಧಕರು ದಾಂಪತ್ಯದ್ರೋಹದ ವಿರುದ್ಧ ಎಚ್ಚರದಿಂದಿರಬೇಕು. ನಾವು ‘ದಾಂಪತ್ಯವನ್ನು ಮಾನ್ಯವಾದದ್ದಾಗಿಯೂ, ಗಂಡಹೆಂಡರ ಸಂಬಂಧವನ್ನು ನಿಷ್ಕಳಂಕವಾಗಿಡುವಂತೆಯೂ’ ಯಾವುದು ಸಹಾಯಮಾಡುವುದು?​—⁠ಇಬ್ರಿಯ 13:⁠4.

ವಂಚಕ ಹೃದಯದ ಬಗ್ಗೆ ಎಚ್ಚರ

4 ಅವನತಿಹೊಂದಿರುವ ಇಂದಿನ ನೈತಿಕ ವಾತಾವರಣದಲ್ಲಿ ಅನೇಕರು “ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ . . . ಆಗಿದ್ದಾರೆ.” (2 ಪೇತ್ರ 2:14) ಅವರು ಇಚ್ಛಾಪೂರ್ವಕವಾಗಿ ವಿವಾಹೇತರ ಪ್ರಣಯ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಕೆಲವೊಂದು ದೇಶಗಳಲ್ಲಿ ಸ್ತ್ರೀಯರು ಅಧಿಕ ಸಂಖ್ಯೆಯಲ್ಲಿ ಕೆಲಸಕ್ಕೆ ಸೇರಿಕೊಂಡಿರುತ್ತಾರೆ, ಮತ್ತು ಹೀಗೆ ಸ್ತ್ರೀಪುರುಷರಿಬ್ಬರೂ ಒಂದೇ ಕಡೆಯಲ್ಲಿ ಕೆಲಸಮಾಡುವುದು ಅಯೋಗ್ಯವಾದ ಆಫೀಸ್‌ ಪ್ರಣಯಗಳು ಹುಟ್ಟಿಕೊಳ್ಳುವಂತೆ ಒಂದು ಅನುಕೂಲ ವಾತಾವರಣವನ್ನು ಸೃಷ್ಟಿಸಿದೆ. ಅಲ್ಲದೆ, ಇಂಟರ್‌ನೆಟ್‌ ಚ್ಯಾಟ್‌ ರೂಮ್‌ಗಳು ಸಹ ಇವೆ. ಇವುಗಳಿಂದಾಗಿ, ಪುಕ್ಕಲು ಸ್ವಭಾವದವರು ಸಹ ಕಂಪ್ಯೂಟರ್‌ ಮೂಲಕ ತುಂಬ ಆಪ್ತ ಸ್ನೇಹಗಳನ್ನು ಬೆಸೆಯುವುದು ಸುಲಭವಾಗಿಬಿಟ್ಟಿದೆ. ಅನೇಕ ಮಂದಿ ವಿವಾಹಿತರು ಏನಾಗುತ್ತಿದೆಯೆಂಬುದನ್ನು ಗ್ರಹಿಸುವ ಮುಂಚೆಯೇ ಅಂಥ ಪಾಶಗಳಲ್ಲಿ ಬಿದ್ದಿರುತ್ತಾರೆ.

5 ನಾವು ಮೇರಿ ಎಂದು ಕರೆಯುವ ಒಬ್ಬ ಕ್ರೈಸ್ತಳು, ಲೈಂಗಿಕ ಅನೈತಿಕತೆಯನ್ನು ನಡೆಸುವ ಅಪಾಯಕಾರಿ ಹಂತಕ್ಕೆ ತಲಪಿದ ಸನ್ನಿವೇಶವೊಂದರಲ್ಲಿ ಹೇಗೆ ಸಿಕ್ಕಿಬಿದ್ದಳೆಂಬುದನ್ನು ಪರಿಗಣಿಸೋಣ. ಯೆಹೋವನ ಸಾಕ್ಷಿಯಾಗಿಲ್ಲದ ಅವಳ ಗಂಡನು ಕುಟುಂಬಕ್ಕೆ ಹೆಚ್ಚು ಪ್ರೀತಿಯನ್ನು ತೋರಿಸುತ್ತಿರಲಿಲ್ಲ. ಕೆಲವು ವರ್ಷಗಳ ಹಿಂದಿನ ಸಂಗತಿಯನ್ನು ಮೇರಿ ಜ್ಞಾಪಿಸಿಕೊಳ್ಳುತ್ತಾಳೆ. ಒಮ್ಮೆ, ತನ್ನ ಗಂಡನ ಜೊತೆಕಾರ್ಮಿಕನೊಂದಿಗೆ ಅವಳ ಭೇಟಿಯಾಯಿತು. ಆ ವ್ಯಕ್ತಿ ತುಂಬ ಸಭ್ಯನಾಗಿದ್ದನು. ಅಲ್ಲದೆ, ಬೇರೊಂದು ಸಂದರ್ಭದಲ್ಲಿ ಅವನು ಮೇರಿಯ ಧಾರ್ಮಿಕ ನಂಬಿಕೆಗಳಲ್ಲೂ ಆಸಕ್ತಿಯನ್ನು ವ್ಯಕ್ತಪಡಿಸಿದನು. “ಅವನು ತುಂಬ ಒಳ್ಳೆಯವನಾಗಿದ್ದನು, ನನ್ನ ಗಂಡನಿಗಿಂತ ತುಂಬ ಭಿನ್ನನಾಗಿದ್ದನು” ಎಂದವಳು ಹೇಳುತ್ತಾಳೆ. ಸ್ವಲ್ಪ ಸಮಯದೊಳಗೆ ಮೇರಿ ಮತ್ತು ಅವಳ ಗಂಡನ ಆ ಜೊತೆಕಾರ್ಮಿಕನ ಮಧ್ಯೆ ಪ್ರಣಯಾತ್ಮಕ ಭಾವನೆಗಳು ಹುಟ್ಟಿಕೊಂಡವು. ಅವಳು ಹೀಗೆ ತರ್ಕಿಸಿದಳು: “ನಾನು ಹಾದರವನ್ನೇನೂ ಮಾಡಿಲ್ಲ. ಅಲ್ಲದೆ ಅವನಿಗೆ ಬೈಬಲಿನಲ್ಲಿಯೂ ಆಸಕ್ತಿಯಿದೆ. ಬಹುಶಃ ನಾನವನಿಗೆ ಸಹಾಯಮಾಡಬಲ್ಲೆ.”

6 ಆದರೆ ಈ ಪ್ರಣಯಾತ್ಮಕ ಸಂಬಂಧವು ಹಾದರಕ್ಕೆ ನಡೆಸುವ ಮೊದಲೇ ಮೇರಿ ಎಚ್ಚೆತ್ತುಕೊಂಡಳು. (ಗಲಾತ್ಯ 5:​19-21; ಎಫೆಸ 4:19) ಅವಳ ಮನಸ್ಸಾಕ್ಷಿ ಚುರುಕುಗೊಂಡು ಕೆಲಸಮಾಡಲಾರಂಭಿಸಿತು, ಮತ್ತು ಅವಳು ಸನ್ನಿವೇಶವನ್ನು ಸರಿಪಡಿಸಲಾರಂಭಿಸಿದಳು. ಮೇರಿಯ ಅನುಭವವು, “ಹೃದಯವು ಎಲ್ಲಕ್ಕಿಂತಲೂ ವಂಚಕ” ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. (ಯೆರೆಮೀಯ 17:9) ಬೈಬಲ್‌ ನಮಗೆ ಈ ಬುದ್ಧಿವಾದವನ್ನು ಕೊಡುತ್ತದೆ: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ.” (ಜ್ಞಾನೋಕ್ತಿ 4:23) ನಾವಿದನ್ನು ಹೇಗೆ ಮಾಡಬಲ್ಲೆವು?

“ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು”

7 “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ” ಎಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 10:12) ಮತ್ತು ಜ್ಞಾನೋಕ್ತಿ 22:3 ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು.” ‘ನನಗೇನೂ ಆಗುವುದಿಲ್ಲ’ ಎಂದು ಅತಿಯಾದ ಆತ್ಮವಿಶ್ವಾಸದಿಂದ ನೆನಸುವ ಬದಲು, ಯಾವ ಸನ್ನಿವೇಶಗಳು ಸಮಸ್ಯೆಗಳಿಗೆ ನಡೆಸಸಾಧ್ಯವಿದೆ ಎಂಬುದರ ಬಗ್ಗೆ ಮುಂದಾಲೋಚಿಸುವುದು ವಿವೇಕದ ಸಂಗತಿ. ಉದಾಹರಣೆಗೆ, ತನ್ನ ವಿವಾಹ ಸಮಸ್ಯೆಗಳಿಂದ ದಿಕ್ಕುಗೆಟ್ಟಿರುವ ವಿರುದ್ಧಲಿಂಗದ ಒಬ್ಬ ವ್ಯಕ್ತಿಯು, ಕೇವಲ ನಿಮ್ಮಲ್ಲಿ ಮಾತ್ರ ತನ್ನ ಅಂತರಂಗವನ್ನು ತೋಡಿಕೊಳ್ಳದಂತೆ ನೋಡಿಕೊಳ್ಳಿ. (ಜ್ಞಾನೋಕ್ತಿ 11:14) ಆ ವ್ಯಕ್ತಿ ತನ್ನ ಸ್ವಂತ ಸಂಗಾತಿಯೊಂದಿಗೆ, ಅಥವಾ ಅವನ/ಅವಳ ವಿವಾಹವು ಸಫಲವಾಗಬೇಕೆಂದು ಹಾರೈಸುವ ಸಮಲಿಂಗದ ಒಬ್ಬ ಪ್ರೌಢ ಕ್ರೈಸ್ತ ವ್ಯಕ್ತಿಯೊಂದಿಗೆ, ಇಲ್ಲವೆ ಹಿರಿಯರೊಂದಿಗೆ ತನ್ನ ವೈವಾಹಿಕ ಸಮಸ್ಯೆಗಳ ಬಗ್ಗೆ ಮಾತಾಡುವುದೇ ಅತ್ಯುತ್ತಮವೆಂದು ಹೇಳಿರಿ. (ತೀತ 2:​3, 4) ಯೆಹೋವನ ಸಾಕ್ಷಿಗಳ ಸಭೆಗಳಲ್ಲಿರುವ ಹಿರಿಯರು ಈ ವಿಷಯದಲ್ಲಿ ಒಂದು ಉತ್ತಮ ಮಾದರಿಯನ್ನಿಡುತ್ತಾರೆ. ಹಿರಿಯನೊಬ್ಬನು ಒಬ್ಬ ಕ್ರೈಸ್ತ ಸಹೋದರಿಯೊಂದಿಗೆ ಖಾಸಗಿಯಾಗಿ ಮಾತಾಡಬೇಕಾಗಿರುವಲ್ಲಿ, ಅದನ್ನು ಏಕಾಂತ ಸ್ಥಳದಲ್ಲಿ ಅಲ್ಲ ಬದಲಾಗಿ ಸಾರ್ವಜನಿಕ ಸ್ಥಳದಲ್ಲಿ, ಉದಾಹರಣೆಗೆ ರಾಜ್ಯ ಸಭಾಗೃಹದಲ್ಲಿ ಮಾಡುತ್ತಾನೆ.

8 ಉದ್ಯೋಗದ ಸ್ಥಳದಲ್ಲಿ ಮತ್ತು ಬೇರೆ ಕಡೆಗಳಲ್ಲಿ, ಆಪ್ತತೆ ಬೆಳೆಯುವಂತೆ ಮಾಡಬಲ್ಲ ಸನ್ನಿವೇಶಗಳ ಕುರಿತು ಎಚ್ಚರದಿಂದಿರಿ. ಉದಾಹರಣೆಗೆ, ಕೆಲಸದ ಸಮಯಾನಂತರ ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯೊಂದಿಗೆ ನಿಕಟವಾಗಿ ಕೆಲಸಮಾಡುತ್ತಾ ಹೆಚ್ಚು ತಾಸುಗಳನ್ನು ಕಳೆಯುವುದು ಪ್ರಲೋಭನೆಗೆ ನಡೆಸಬಲ್ಲದು. ವಿವಾಹಿತ ಪುರುಷ ಅಥವಾ ಸ್ತ್ರೀಯಾಗಿರುವ ನೀವು, ಯಾವುದೇ ಪ್ರಣಯಾತ್ಮಕ ಸಂಬಂಧಕ್ಕಾಗಿ ಲಭ್ಯವಿಲ್ಲವೆಂಬುದನ್ನು ನಿಮ್ಮ ಮಾತು ಹಾಗೂ ನಡವಳಿಕೆಯಿಂದ ಸ್ಪಷ್ಟಪಡಿಸಬೇಕು. ಒಬ್ಬ ದೇವಭಕ್ತ ವ್ಯಕ್ತಿಯಾಗಿರುವ ನೀವು ಖಂಡಿತವಾಗಿಯೂ, ಚೆಲ್ಲಾಟದ ಮೂಲಕವಾಗಲಿ ಅಸಭ್ಯ ಉಡುಪುಕೇಶಾಲಂಕಾರದ ಮೂಲಕವಾಗಲಿ ಅನುಚಿತ ಗಮನವನ್ನು ಸೆಳೆಯುವವರಾಗಿರಬಾರದು. (1 ತಿಮೊಥೆಯ 4:8; 6:11; 1 ಪೇತ್ರ 3:​3, 4) ನಿಮ್ಮ ಕೆಲಸದ ಸ್ಥಳದಲ್ಲಿ, ನಿಮ್ಮ ವಿವಾಹ ಸಂಗಾತಿ ಮತ್ತು ಮಕ್ಕಳ ಚಿತ್ರಗಳನ್ನಿಡುವುದು, ನಿಮ್ಮ ಕುಟುಂಬವು ನಿಮ್ಮ ಆದ್ಯತೆಯಾಗಿದೆಯೆಂದು ನಿಮಗೂ ಇತರರಿಗೂ ದೃಶ್ಯ ಜ್ಞಾಪಕವಾಗಿರುವುದು. ಇನ್ನೊಬ್ಬ ವ್ಯಕ್ತಿಯ ಯಾವುದೇ ಪ್ರಣಯಾತ್ಮಕ ಪ್ರಸ್ತಾಪಗಳನ್ನೆಂದೂ ಉತ್ತೇಜಿಸಲೂಬೇಡಿ ಸಹಿಸಿಕೊಂಡು ಸುಮ್ಮನಿರಲೂ ಬೇಡಿ.​—⁠ಯೋಬ 31:⁠1.

“ನಿನ್ನ ಪ್ರಿಯಪತ್ನಿಯೊಡನೆ ಸುಖದಿಂದ ಬದುಕು”

9 ಹೃದಯವನ್ನು ಕಾಪಾಡಿಕೊಳ್ಳಲಿಕ್ಕಾಗಿ, ಅಪಾಯಕರ ಸನ್ನಿವೇಶಗಳಿಂದ ದೂರವಿರುವುದಕ್ಕಿಂತಲೂ ಹೆಚ್ಚಿನದ್ದು ಅವಶ್ಯ. ವಿವಾಹದ ಹೊರಗಿನ ಒಬ್ಬ ವ್ಯಕ್ತಿಯ ಕಡೆಗಿನ ಪ್ರಣಯಾತ್ಮಕ ಆಕರ್ಷಣೆಯು, ಒಂದು ದಂಪತಿಯು ಪರಸ್ಪರರ ಅಗತ್ಯಗಳಿಗೆ ಗಮನಕೊಡುತ್ತಿಲ್ಲವೆಂಬುದರ ಸೂಚನೆಯಾಗಿರಬಹುದು. ಗಂಡನು ಹೆಂಡತಿಯನ್ನು ಯಾವಾಗಲೂ ಅಲಕ್ಷಿಸುತ್ತಿರಬಹುದು ಇಲ್ಲವೆ ಹೆಂಡತಿ ಗಂಡನನ್ನು ಸತತವಾಗಿ ಟೀಕಿಸುತ್ತಿರಬಹುದು. ಆಗ, ಅವನಿಗೆ/ಳಿಗೆ ತನ್ನ ಸಂಗಾತಿಯಲ್ಲಿಲ್ಲದಿರುವ ಉತ್ತಮ ಗುಣಗಳು ಇನ್ನೊಬ್ಬ ವ್ಯಕ್ತಿಯಲ್ಲಿರುವಂತೆ ತೋರಬಹುದು. ಆ ವ್ಯಕ್ತಿ ಉದ್ಯೋಗದ ಸ್ಥಳದಲ್ಲಿರಬಹುದು ಇಲ್ಲವೆ ಕ್ರೈಸ್ತ ಸಭೆಯಲ್ಲಿಯೂ ಇರಬಹುದು. ಸ್ವಲ್ಪದರಲ್ಲೇ ಒಂದು ಬಂಧವು ಬೆಸೆಯಲ್ಪಟ್ಟು, ಆ ಹೊಸ ಸಂಬಂಧವು ತಡೆಯಲಾರದಷ್ಟು ಆಕರ್ಷಕವಾಗಿರುತ್ತದೆ. ಘಟನೆಗಳ ಈ ನವಿರಾದ ಸರಮಾಲೆಯು, ಬೈಬಲಿನ ಈ ಹೇಳಿಕೆಯ ಸತ್ಯತೆಯನ್ನು ದೃಢೀಕರಿಸುತ್ತದೆ: “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ.”​—⁠ಯಾಕೋಬ 1:⁠14.

10 ವಾತ್ಸಲ್ಯ, ಸ್ನೇಹ ಇಲ್ಲವೆ ಕಷ್ಟಕರ ಸ್ಥಿತಿಯಲ್ಲಿರುವಾಗ ಆಸರೆ​—⁠ಇವುಗಳಲ್ಲಿ ಯಾವುದೇ ಆಸೆಯನ್ನು ತಣಿಸಲಿಕ್ಕಾಗಿ ಗಂಡಹೆಂಡತಿಯರು ವಿವಾಹದಾಚೆಗೆ ನೋಡುವ ಬದಲಿಗೆ ತಮ್ಮ ಸಂಗಾತಿಯೊಂದಿಗೆಯೇ ಪ್ರೀತಿಪರ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿಕ್ಕಾಗಿ ಪ್ರಯತ್ನಪಡಬೇಕು. ಆದುದರಿಂದ ಧಾರಾಳವಾಗಿ, ಒಟ್ಟಿಗೆ ಸಮಯ ಕಳೆಯಿರಿ ಮತ್ತು ಪರಸ್ಪರರಿಗೆ ಇನ್ನೂ ಹೆಚ್ಚು ಹತ್ತಿರವಾಗಿ. ನೀವು ಆರಂಭದಲ್ಲಿ ಪರಸ್ಪರರಲ್ಲಿ ಅನುರಕ್ತರಾಗುವಂತೆ ಮಾಡಿದಂಥ ವಿಷಯಗಳನ್ನು ಮರುಕಳಿಸಿರಿ. ನಿಮ್ಮ ಬಾಳಸಂಗಾತಿಯಾಗಿರುವ ವ್ಯಕ್ತಿಯ ಕಡೆಗೆ ನಿಮಗಿದ್ದ ಅನುರಾಗವನ್ನು ಪುನಃ ಅನುಭವಿಸಲು ಪ್ರಯತ್ನಿಸಿರಿ. ನೀವು ಒಟ್ಟಿಗೆ ಕಳೆದಿರುವಂಥ ಹರ್ಷತುಂಬಿದ ಸಮಯಗಳ ಬಗ್ಗೆ ಯೋಚಿಸಿರಿ. ನಿಮ್ಮ ಸಂಬಂಧವನ್ನು ಬಲಪಡಿಸುವುದರ ಬಗ್ಗೆ ದೇವರಿಗೆ ಪ್ರಾರ್ಥನೆಮಾಡಿರಿ. ಕೀರ್ತನೆಗಾರನಾದ ದಾವೀದನು ಯೆಹೋವನಿಗೆ ಭಿನ್ನೈಸಿದ್ದು: “ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.” (ಕೀರ್ತನೆ 51:10) ‘ಲೋಕದೊಳಗೆ ದೇವರು ನಿಮಗೆ ನೇಮಿಸಿರುವ ಜೀವಮಾನದ ದಿನಗಳಲ್ಲೆಲ್ಲಾ ನಿಮ್ಮ ಪ್ರಿಯಪತ್ನಿಯೊಡನೆ [ಇಲ್ಲವೇ ಪತಿಯೊಡನೆ] ಸುಖದಿಂದ ಬದುಕಲು’ ದೃಢಸಂಕಲ್ಪಮಾಡಿರಿ.​—⁠ಪ್ರಸಂಗಿ 9:⁠9.

11 ವಿವಾಹಬಂಧವನ್ನು ಬಲಪಡಿಸುವುದರಲ್ಲಿ, ಜ್ಞಾನ, ವಿವೇಕ ಹಾಗೂ ತಿಳುವಳಿಕೆಯ ಮೌಲ್ಯವನ್ನು ಅಲಕ್ಷಿಸಬಾರದು. ಜ್ಞಾನೋಕ್ತಿ 24:​3, 4 ತಿಳಿಸುವುದು: “ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ [“ವಿವೇಕವೇ,” NW] ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ [“ವಿವೇಚನಾಶಕ್ತಿಯೇ,” NW] ಆಧಾರ; ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬಿಸುವದಕ್ಕೆ ತಿಳುವಳಿಕೆಯೇ [“ಜ್ಞಾನವೇ,” NW] ಉಪಕರಣ.” ಒಂದು ಸಂತೋಷಭರಿತ ಮನೆತನದಲ್ಲಿ ತುಂಬಿರುವ ಅಮೂಲ್ಯವಾದ ವಿಷಯಗಳಲ್ಲಿ, ಪ್ರೀತಿ, ನಿಷ್ಠೆ, ದೇವಭಯ ಹಾಗೂ ನಂಬಿಕೆಯಂಥ ಗುಣಗಳು ಸೇರಿವೆ. ಈ ಗುಣಗಳನ್ನು ಪಡೆದುಕೊಳ್ಳುವುದಕ್ಕಾಗಿ ದೇವರ ಜ್ಞಾನವು ಅವಶ್ಯ. ಇದಕ್ಕಾಗಿ ದಂಪತಿಗಳು ಗಂಭೀರವಾದ ಬೈಬಲ್‌ ವಿದ್ಯಾರ್ಥಿಗಳಾಗಿರಬೇಕು. ವಿವೇಕ ಮತ್ತು ವಿವೇಚನಾಶಕ್ತಿಯು ಎಷ್ಟು ಪ್ರಾಮುಖ್ಯವಾಗಿವೆ? ದಿನನಿತ್ಯದ ಸಮಸ್ಯೆಗಳನ್ನು ನಿಭಾಯಿಸಲಿಕ್ಕಾಗಿ ವಿವೇಕ, ಅಂದರೆ ಶಾಸ್ತ್ರಾಧಾರಿತ ಜ್ಞಾನವನ್ನು ಅನ್ವಯಿಸಿಕೊಳ್ಳುವ ಸಾಮರ್ಥ್ಯ ಆವಶ್ಯಕ. ವಿವೇಚನಾಶಕ್ತಿಯುಳ್ಳ ವ್ಯಕ್ತಿಗೆ ತನ್ನ ಸಂಗಾತಿಯ ವಿಚಾರಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಸಾಧ್ಯವಿದೆ. (ಜ್ಞಾನೋಕ್ತಿ 20:⁠5) “ಕಂದಾ, ನನ್ನ ಜ್ಞಾನೋಪದೇಶವನ್ನು ಆಲಿಸು, ನನ್ನ ವಿವೇಕಬೋಧೆಗೆ ಕಿವಿಗೊಡು” ಎಂದು ಯೆಹೋವನು ಸೊಲೊಮೋನನ ಮೂಲಕ ಹೇಳುತ್ತಾನೆ.​—⁠ಜ್ಞಾನೋಕ್ತಿ 5:⁠1.

“ತೊಂದರೆಗಳು” ಇರುವಾಗ

12 ಯಾವುದೇ ವಿವಾಹವು ಪರಿಪೂರ್ಣವಲ್ಲ. ಗಂಡಹೆಂಡತಿಯರು “ತೊಂದರೆಗಳನ್ನು ಅನುಭವಿಸುವರು” ಎಂದು ಸಹ ಬೈಬಲ್‌ ಹೇಳುತ್ತದೆ. (1 ಕೊರಿಂಥ 7:​28, NIBV) ಚಿಂತೆಗಳು, ಅಸ್ವಸ್ಥತೆ, ಹಿಂಸೆ ಮತ್ತು ಇನ್ನಿತರ ಅಂಶಗಳು ವಿವಾಹದ ಮೇಲೆ ಒತ್ತಡವನ್ನು ಹಾಕಬಲ್ಲವು. ಆದರೆ ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುವ ನಿಷ್ಠಾವಂತ ವಿವಾಹ ಸಂಗಾತಿಗಳಾದ ನೀವು, ಸಮಸ್ಯೆಗಳೇಳುವಾಗ ಜೊತೆಗೂಡಿ ಪರಿಹಾರಗಳನ್ನು ಹುಡುಕಬೇಕು.

13 ಸಂಗಾತಿಗಳೇ ಪರಸ್ಪರರೊಂದಿಗೆ ನಡೆದುಕೊಳ್ಳುವ ರೀತಿಯು ವಿವಾಹದ ಮೇಲೆ ಒತ್ತಡಹಾಕುತ್ತಿರುವಲ್ಲಿ ಆಗೇನು? ಪರಿಹಾರವನ್ನು ಹುಡುಕಲಿಕ್ಕಾಗಿ ಪ್ರಯತ್ನ ಅವಶ್ಯ. ದೃಷ್ಟಾಂತಕ್ಕಾಗಿ, ಅವರ ವಿವಾಹಜೀವನದಲ್ಲಿ ನಿರ್ದಯ ಮಾತುಗಳು ನಿಧಾನವಾಗಿ ನುಸುಳಿ, ಈಗ ಅದರ ಭಾಗವಾಗಿಬಿಟ್ಟಿರಬಹುದು. (ಜ್ಞಾನೋಕ್ತಿ 12:18) ಹಿಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವಂತೆ ಇದರಿಂದಾಗುವ ಪರಿಣಾಮಗಳು ಧ್ವಂಸಕರವಾಗಿರಬಲ್ಲವು. ಒಂದು ಬೈಬಲ್‌ ಜ್ಞಾನೋಕ್ತಿಯು ಹೇಳುವುದು: “ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲೂ ಕಾಡಿನ ವಾಸವೇ ಲೇಸು.” (ಜ್ಞಾನೋಕ್ತಿ 21:19) ಇಂಥ ವಿವಾಹಜೀವನವಿರುವ ಒಬ್ಬ ಹೆಂಡತಿ ನೀವಾಗಿರುವಲ್ಲಿ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನ್ನ ಸ್ವಭಾವದಿಂದಾಗಿ ನನ್ನ ಗಂಡನಿಗೆ ನನ್ನೊಂದಿಗೆ ಸಮಯಕಳೆಯಲು ಕಷ್ಟವಾಗುತ್ತಿದೆಯೊ?’ ಬೈಬಲ್‌ ಗಂಡಂದಿರಿಗೆ ಹೀಗನ್ನುತ್ತದೆ: “ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರಿಗೆ ನಿಷ್ಠುರವಾಗಿರಬೇಡಿರಿ.” (ಕೊಲೊಸ್ಸೆ 3:19) ನೀವೊಬ್ಬ ಗಂಡನಾಗಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ನನ್ನ ನಡವಳಿಕೆಯು ಭಾವಶೂನ್ಯವಾಗಿದ್ದು, ನನ್ನ ಹೆಂಡತಿ ಬೇರೆಲ್ಲಿಂದಾದರೂ ಸಮಾಧಾನ ಪಡೆಯುವಂತೆ ಮಾಡುತ್ತದೊ?’ ಲೈಂಗಿಕ ಅನೈತಿಕತೆಯನ್ನು ನಡೆಸಿದಕ್ಕಾಗಿ ಯಾವುದೇ ನೆವವನ್ನು ಕೊಡಲು ಸಾಧ್ಯವಿಲ್ಲವೆಂಬುದಂತೂ ನಿಜ. ಆದರೂ, ಅಂಥ ದುರಂತವು ನಡೆಯಸಾಧ್ಯವಿದೆ ಎಂಬುದು ವಾಸ್ತವಾಂಶವಾಗಿರುವುದರಿಂದ, ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಇದೊಂದು ಉತ್ತಮ ಕಾರಣವಾಗಿದೆ.

14 ವಿವಾಹಬಂಧದ ಹೊರಗಿನ ಪ್ರಣಯದಿಂದ ನೆಮ್ಮದಿ ಪಡೆಯಲು ಪ್ರಯತ್ನಿಸುವುದು, ವೈವಾಹಿಕ ಸಮಸ್ಯೆಗಳಿಗೆ ಪರಿಹಾರವಲ್ಲ. ಅಂಥ ಸಂಬಂಧವು ಎಲ್ಲಿಗೆ ನಡೆಸಬಲ್ಲದು? ಇನ್ನೊಂದು ಹೊಸ, ಉತ್ತಮ ವಿವಾಹಕ್ಕೊ? ಹೌದೆಂದು ಕೆಲವರು ನೆನಸಬಹುದು. ‘ಒಬ್ಬ ಸಂಗಾತಿಯಲ್ಲಿರಬೇಕೆಂದು ನಾನು ಇಷ್ಟಪಡುವ ಗುಣಗಳೇ ಈ ವ್ಯಕ್ತಿಯಲ್ಲಿದೆ’ ಎಂದವರು ತರ್ಕಿಸುತ್ತಾರೆ. ಆದರೆ ಈ ರೀತಿಯ ತರ್ಕವು ತಪ್ಪು. ಏಕೆಂದರೆ, ತನ್ನ ಸಂಗಾತಿಯನ್ನು ತೊರೆಯುವ​—⁠ಅಥವಾ ನೀವು ನಿಮ್ಮ ಸಂಗಾತಿಯನ್ನು ಬಿಡುವಂತೆ ಉತ್ತೇಜಿಸುವ​—⁠ಯಾವುದೇ ವ್ಯಕ್ತಿಗೆ ವಿವಾಹದ ಪಾವಿತ್ರ್ಯತೆಯ ಬಗ್ಗೆ ಗಂಭೀರವಾದ ತಾತ್ಸಾರಭಾವವಿದೆ. ಹೀಗಿರುವುದರಿಂದ ಅಂಥ ಸಂಬಂಧದಿಂದಾಗಿ ಹೆಚ್ಚು ಉತ್ತಮವಾದ ವಿವಾಹಜೀವನವು ಲಭಿಸುವುದೆಂದು ನಿರೀಕ್ಷಿಸುವುದು ಅಸಮಂಜಸವೇ ಸರಿ.

15 ಈ ಹಿಂದೆ ತಿಳಿಸಲಾಗಿರುವ ಮೇರಿ, ತನ್ನ ನಡತೆಯ ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚಿಸಿದಳು. ಈ ಪರಿಣಾಮಗಳಲ್ಲಿ, ಅವಳು ಮತ್ತು ಬೇರೊಬ್ಬ ವ್ಯಕ್ತಿಯು ದೇವರ ಅನುಗ್ರಹವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಸೇರಿತ್ತು. (ಗಲಾತ್ಯ 6:⁠7) “ನನ್ನ ಗಂಡನ ಜೊತೆಕಾರ್ಮಿಕನ ಬಗ್ಗೆ ನನ್ನಲ್ಲಿದ್ದ ಭಾವನೆಗಳನ್ನು ನಾನು ಪರೀಕ್ಷಿಸಲಾರಂಭಿಸಿದಾಗ ನಾನು ಗ್ರಹಿಸಿದ ಸಂಗತಿಯೇನೆಂದರೆ, ಒಂದುವೇಳೆ ಈ ವ್ಯಕ್ತಿಯು ಸತ್ಯಕ್ಕೆ ಬರುವ ಸಾಧ್ಯತೆಯೇನಾದರೂ ಇದ್ದರೆ, ನಾನೇ ಇದಕ್ಕೆ ತಡೆಯಾಗಿರುವೆ. ಯಾವುದೇ ತಪ್ಪು ಕೃತ್ಯವನ್ನು ಮಾಡುವುದು, ಒಳಗೂಡಿದ್ದವರೆಲ್ಲರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿತ್ತು ಮತ್ತು ಇತರರನ್ನು ಎಡವಿಹಾಕಲಿತ್ತು!”​—⁠2 ಕೊರಿಂಥ 6:⁠3.

ಅತಿ ಬಲವಾದ ಉತ್ತೇಜಕ

16 ಬೈಬಲ್‌ ಎಚ್ಚರಿಸುವುದು: “ಜಾರಸ್ತ್ರೀಯ ತುಟಿಗಳಲ್ಲಾದರೋ ಜೇನುಗರೆಯುವದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ. ಅವಳು ಕಡೆಯಲ್ಲಿ ವಿಷದಂತೆ ಕಹಿಯೂ ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು.” (ಜ್ಞಾನೋಕ್ತಿ 5:3, 4) ನೈತಿಕ ಅಶುದ್ಧತೆಯ ಪರಿಣಾಮಗಳು ನೋಯಿಸುವಂಥದ್ದಾಗಿವೆ ಮತ್ತು ಮಾರಕವಾದದ್ದಾಗಿರಬಲ್ಲವು. ಈ ಪರಿಣಾಮಗಳಲ್ಲಿ, ಪೀಡಿತ ಮನಸ್ಸಾಕ್ಷಿ, ರತಿರವಾನಿತ ರೋಗಗಳು ಮತ್ತು ನಿಷ್ಠಾಹೀನನಾಗಿದ್ದ ವ್ಯಕ್ತಿಯ ಸಂಗಾತಿಗಾಗುವ ಭಾವನಾತ್ಮಕ ಧ್ವಂಸವು ಸೇರಿದೆ. ಇದು, ದಾಂಪತ್ಯದ್ರೋಹಕ್ಕೆ ನಡೆಸುವ ದಾರಿಗಿಳಿಯದಿರಲು ಖಂಡಿತವಾಗಿಯೂ ಒಂದು ಒಳ್ಳೇ ಕಾರಣವಾಗಿದೆ.

17 ವೈವಾಹಿಕ ಅಪನಂಬಿಗಸ್ತಿಕೆ ತಪ್ಪಾಗಿರಲು ಮೂಲಭೂತ ಕಾರಣವೇನೆಂದರೆ, ವಿವಾಹದ ಮೂಲಕರ್ತನು ಮತ್ತು ಲೈಂಗಿಕ ಸಾಮರ್ಥ್ಯದ ವರವನ್ನು ಕೊಟ್ಟ ಯೆಹೋವನು ಅದನ್ನು ಖಂಡಿಸುತ್ತಾನೆ. ಪ್ರವಾದಿಯಾದ ಮಲಾಕಿಯನ ಮುಖಾಂತರ ಅವನು ಹೇಳುವುದು: ‘ವ್ಯಭಿಚಾರಿಗಳಿಗೆ ವಿರೋಧವಾಗಿ ಶೀಘ್ರವಾದ ನ್ಯಾಯತೀರಿಸಿ ಸಾಕ್ಷಿಗಾರನಾಗಿರುವೆನು.’ (ಮಲಾಕಿಯ 3:​5, NIBV) ಯೆಹೋವನು ಏನನ್ನು ನೋಡುತ್ತಾನೊ ಅದರ ಬಗ್ಗೆ ಜ್ಞಾನೋಕ್ತಿ 5:21 ತಿಳಿಸುವುದು: “ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ, ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ.” ಹೌದು, “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ.” (ಇಬ್ರಿಯ 4:13) ಹಾಗಾದರೆ, ದಾಂಪತ್ಯದ್ರೋಹವು ಎಷ್ಟೇ ಗುಟ್ಟಾಗಿ ನಡೆಯುತ್ತಿರುವಂತೆ ತೋರಲಿ ಮತ್ತು ಅದರಿಂದುಂಟಾಗುವ ಶಾರೀರಿಕ ಇಲ್ಲವೆ ಸಾಮಾಜಿಕ ಪರಿಣಾಮಗಳು ಎಷ್ಟೇ ಅಲ್ಪವೆಂದು ತೋರಲಿ, ಲೈಂಗಿಕ ಅಶುದ್ಧತೆಯ ಯಾವುದೇ ಕೃತ್ಯವು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡುತ್ತದೆಂಬ ಅರಿವೇ, ದಾಂಪತ್ಯನಿಷ್ಠೆಯನ್ನು ಕಾಪಾಡಿಕೊಳ್ಳಲಿಕ್ಕಾಗಿರುವ ಅತಿ ಬಲವಾದ ಉತ್ತೇಜಕವಾಗಿದೆ.

18 ಮೂಲಪಿತನಾದ ಯಾಕೋಬನ ಮಗನಾದ ಯೋಸೇಫನ ಮಾದರಿಯು ತೋರಿಸುವುದೇನೆಂದರೆ, ದೇವರೊಂದಿಗೆ ಸಮಾಧಾನದ ಸಂಬಂಧವನ್ನು ಇಟ್ಟುಕೊಳ್ಳುವ ಆಸೆಯು, ಒಂದು ಬಲವಾದ ಉತ್ತೇಜಕವಾಗಿದೆ. ಫರೋಹನ ಆಸ್ಥಾನಾಧಿಕಾರಿಯಾಗಿದ್ದ ಫೋಟೀಫರನ ಮೆಚ್ಚುಗೆಗೆ ಪಾತ್ರನಾದ ಯೋಸೇಫನಿಗೆ, ಫೋಟೀಫರನ ಮನೆತನದಲ್ಲಿ ಒಂದು ಉನ್ನತ ಸ್ಥಾನವಿತ್ತು. ಅಲ್ಲದೆ, ಯೋಸೇಫನು “ರೂಪದಲ್ಲಿಯೂ ಮುಖಭಾವದಲ್ಲಿಯೂ ಸುಂದರನಾಗಿದ್ದನು” ಮತ್ತು ಇದು ಫೋಟೀಫರನ ಹೆಂಡತಿಯ ಗಮನಸೆಳೆಯಿತು. ಪ್ರತಿದಿನ ಅವಳು ಯೋಸೇಫನನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನಿಸಿದಳು, ಆದರೆ ಅದರಿಂದೇನೂ ಪ್ರಯೋಜನವಾಗಲಿಲ್ಲ. ಅವಳ ಈ ಎಲ್ಲ ಪ್ರಯತ್ನಗಳನ್ನು ಪ್ರತಿರೋಧಿಸುವಂತೆ ಯೋಸೇಫನಿಗೆ ಯಾವುದು ಸಹಾಯಮಾಡಿತು? ಬೈಬಲ್‌ ನಮಗನ್ನುವುದು: “ಅವನು ಒಪ್ಪದೆ​—⁠ನನ್ನ ದಣಿಯು ತನ್ನ ಆಸ್ತಿಯನ್ನೆಲ್ಲಾ ನನ್ನ ವಶಕ್ಕೆ ಒಪ್ಪಿಸಿ . . . ಅವನ ಧರ್ಮಪತ್ನಿಯಾದದರಿಂದ ನಿನ್ನನ್ನು ಮಾತ್ರ ನನಗೆ ಅಧೀನ ಮಾಡಲಿಲ್ಲ; ಹೀಗಿರುವಲ್ಲಿ ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ ಎಂದು ತನ್ನ ದಣಿಯ ಹೆಂಡತಿಗೆ ಉತ್ತರಕೊಟ್ಟನು.”​—⁠ಆದಿಕಾಂಡ 39:​1-12.

19 ಅವಿವಾಹಿತನಾದ ಯೋಸೇಫನು, ಇನ್ನೊಬ್ಬ ಪುರುಷನ ಸ್ತ್ರೀಯೊಂದಿಗೆ ಸಂಬಂಧವನ್ನಿಡಲು ನಿರಾಕರಿಸುತ್ತಾ ನೈತಿಕ ಶುದ್ಧತೆಯನ್ನು ಕಾಪಾಡಿಕೊಂಡನು. ಜ್ಞಾನೋಕ್ತಿ 5:15 ವಿವಾಹಿತ ಪುರುಷರಿಗೆ ಹೀಗನ್ನುತ್ತದೆ: “ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ.” ವಿವಾಹಬಂಧದ ಹೊರಗೆ ಅರಿವಿಲ್ಲದೆಯೂ ಪ್ರಣಯಾತ್ಮಕ ಸಂಬಂಧಗಳನ್ನು ಜೋಡಿಸದಿರುವಂತೆ ಎಚ್ಚರವಾಗಿರಿ. ಅದಕ್ಕೆ ಬದಲು, ನಿಮ್ಮ ಸ್ವಂತ ವಿವಾಹದಲ್ಲಿ ಪ್ರೀತಿಯ ಬಂಧವನ್ನು ಬಲಪಡಿಸಲು ಪ್ರಯತ್ನಮಾಡಿರಿ ಮತ್ತು ಎದುರಾಗುವ ಯಾವುದೇ ವೈವಾಹಿಕ ತೊಂದರೆಗಳನ್ನು ಇತ್ಯರ್ಥಗೊಳಿಸಲು ಶ್ರಮಪಡಿರಿ. ನಿಶ್ಚಯವಾಗಿಯೂ ‘ನಿಮ್ಮ ಯೌವನಕಾಲದ ಪತ್ನಿಯಲ್ಲಿ [ಇಲ್ಲವೇ ಪತಿಯಲ್ಲಿ] ಆನಂದಿಸಿರಿ.’​—⁠ಜ್ಞಾನೋಕ್ತಿ 5:⁠18. (w06 9/15)

ನೀವೇನು ಕಲಿತಿರಿ?

• ಒಬ್ಬ ಕ್ರೈಸ್ತ ವ್ಯಕ್ತಿಯು ಒಂದು ಪ್ರಣಯಾತ್ಮಕ ಸಂಬಂಧದಲ್ಲಿ ಅರಿವಿಲ್ಲದೆ ಹೇಗೆ ಸಿಕ್ಕಿಬೀಳಬಹುದು?

• ವಿವಾಹಬಂಧದ ಹೊರಗೆ ಪ್ರಣಯಾತ್ಮಕ ಸಂಬಂಧವನ್ನು ಜೋಡಿಸದಂತೆ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸಹಾಯಕರ?

• ಒಂದು ದಂಪತಿಯು ಸಮಸ್ಯೆಗಳನ್ನು ಅನುಭವಿಸುತ್ತಿರುವಾಗ ಏನು ಮಾಡಬೇಕು?

• ದಾಂಪತ್ಯನಿಷ್ಠೆಯನ್ನು ಕಾಪಾಡಿಕೊಳ್ಳಲಿಕ್ಕಾಗಿರುವ ಅತಿ ಬಲವಾದ ಉತ್ತೇಜಕ ಯಾವುದು?

[ಅಧ್ಯಯನ ಪ್ರಶ್ನೆಗಳು]

1, 2. ಗಂಡಹೆಂಡತಿಯ ನಡುವಿನ ಪ್ರಣಯಾತ್ಮಕ ಪ್ರೀತಿಯು ಆಶೀರ್ವಾದ ಹೊಂದಿದೆಯೆಂದು ಏಕೆ ಹೇಳಬಹುದು?

3. (ಎ) ಅನೇಕ ವಿವಾಹಗಳ ಕುರಿತಾದ ವಿಷಾದನೀಯ ವಾಸ್ತವಿಕತೆ ಏನಾಗಿದೆ? (ಬಿ) ವ್ಯಭಿಚಾರದ ಬಗ್ಗೆ ದೇವರ ದೃಷ್ಟಿಕೋನವೇನು?

4. ಒಬ್ಬ ವಿವಾಹಿತ ಕ್ರೈಸ್ತ ವ್ಯಕ್ತಿಯು, ವಿವಾಹೇತರ ಪ್ರಣಯಾತ್ಮಕ ಸಂಬಂಧದಲ್ಲಿ ಅರಿವಿಲ್ಲದೇ ಸಿಕ್ಕಿಕೊಳ್ಳಬಹುದಾದ ಕೆಲವೊಂದು ವಿಧಗಳಾವವು?

5, 6. ಕ್ರೈಸ್ತ ಸ್ತ್ರೀಯೊಬ್ಬಳು ಒಂದು ಅಪಾಯಕಾರಿ ಸನ್ನಿವೇಶದಲ್ಲಿ ಹೇಗೆ ಸಿಕ್ಕಿಬಿದ್ದಳು, ಮತ್ತು ಇದರಿಂದ ನಾವೇನು ಕಲಿಯಬಹುದು?

7. ವಿವಾಹ ಸಮಸ್ಯೆಗಳಿರುವ ಒಬ್ಬ ವ್ಯಕ್ತಿಗೆ ಸಹಾಯಮಾಡುತ್ತಿರುವಾಗ ಯಾವ ಶಾಸ್ತ್ರಾಧಾರಿತ ಬುದ್ಧಿವಾದವನ್ನು ಪಾಲಿಸುವುದು ಒಂದು ರಕ್ಷಣೆಯಾಗಿರುವುದು?

8. ಉದ್ಯೋಗದ ಸ್ಥಳದಲ್ಲಿ ಯಾವ ಎಚ್ಚರಿಕೆವಹಿಸುವುದು ಅತ್ಯಾವಶ್ಯಕ?

9. ಘಟನೆಗಳ ಯಾವ ಸರಮಾಲೆಯು, ಒಂದು ಹೊಸ ಪ್ರಣಯಾತ್ಮಕ ಸಂಬಂಧವನ್ನು ಆಕರ್ಷಕವಾಗಿ ಮಾಡಬಲ್ಲದು?

10. ಗಂಡಹೆಂಡತಿಯರು ತಮ್ಮ ಸಂಬಂಧವನ್ನು ಹೇಗೆ ಬಲಪಡಿಸಬಲ್ಲರು?

11. ವಿವಾಹಬಂಧವನ್ನು ಬಲಪಡಿಸುವುದರಲ್ಲಿ ಜ್ಞಾನ, ವಿವೇಕ ಹಾಗೂ ವಿವೇಚನಾಶಕ್ತಿಯ ಪಾತ್ರವೇನು?

12. ದಂಪತಿಗಳಿಗೆ ಸಮಸ್ಯೆಗಳಿರುವುದು ಆಶ್ಚರ್ಯದ ಸಂಗತಿಯಲ್ಲವೇಕೆ?

13. ಗಂಡಹೆಂಡತಿಯರು ತಮ್ಮ ಬಗ್ಗೆ ಯಾವ ವಿಶ್ಲೇಷಣೆಮಾಡಬಹುದು?

14, 15. ವಿವಾಹಬಂಧದ ಹೊರಗೆ ಸಂಬಂಧವನ್ನಿಡುವುದು ವೈವಾಹಿಕ ಸಮಸ್ಯೆಗಳಿಗೆ ಪರಿಹಾರವಲ್ಲವೇಕೆ?

16. ನೈತಿಕ ಅಶುದ್ಧತೆಯ ಕೆಲವೊಂದು ಪರಿಣಾಮಗಳೇನು?

17. ದಾಂಪತ್ಯನಿಷ್ಠೆಯನ್ನು ಕಾಪಾಡಿಕೊಳ್ಳಲಿಕ್ಕಾಗಿರುವ ಅತಿ ಬಲವಾದ ಕಾರಣ ಯಾವುದು?

18, 19. ಫೋಟೀಫರನ ಹೆಂಡತಿಯೊಂದಿಗಿನ ಯೋಸೇಫನ ಅನುಭವದಿಂದ ನಾವೇನನ್ನು ಕಲಿಯುತ್ತೇವೆ?

[ಪುಟ 14ರಲ್ಲಿರುವ ಚಿತ್ರ]

ವಿಷಾದಕರವಾಗಿ, ಉದ್ಯೋಗದ ಸ್ಥಳವು ಅಯೋಗ್ಯವಾದ ಆಫೀಸ್‌ ಪ್ರಣಯಕ್ಕಾಗಿ ಒಂದು ಅನುಕೂಲ ವಾತಾವರಣವಾಗಬಲ್ಲದು

[ಪುಟ 15ರಲ್ಲಿರುವ ಚಿತ್ರ]

‘ಕೋಣೆಗಳನ್ನು ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬಿಸುವದಕ್ಕೆ ಜ್ಞಾನವೇ ಉಪಕರಣ’