ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಕೆ ಮತ್ತು ದೇವಭಯದ ಮೂಲಕ ಧೈರ್ಯದಿಂದಿರುವುದು

ನಂಬಿಕೆ ಮತ್ತು ದೇವಭಯದ ಮೂಲಕ ಧೈರ್ಯದಿಂದಿರುವುದು

ನಂಬಿಕೆ ಮತ್ತು ದೇವಭಯದ ಮೂಲಕ ಧೈರ್ಯದಿಂದಿರುವುದು

“ಸ್ಥಿರಚಿತ್ತನಾಗಿರು [ಬಲವಾಗಿರು], ಧೈರ್ಯದಿಂದಿರು  . . ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.”​—⁠ಯೆಹೋಶುವ 1:⁠9.

ಸಾ.ಶ. ಪೂ. 1473ರಲ್ಲಿ, ಇಸ್ರಾಯೇಲ್‌ ಜನಾಂಗವು ವಾಗ್ದತ್ತ ದೇಶವನ್ನು ಪ್ರವೇಶಿಸಲು ಸಿದ್ಧವಾಗಿತ್ತು. ಆಗ, ಮುಂದಿದ್ದ ಕಷ್ಟಕಾಲಗಳ ವಿಷಯವಾಗಿ ಮೋಶೆ ಜನರಿಗೆ ನೆನಪುಹುಟ್ಟಿಸುತ್ತಾ ಹೇಳಿದ್ದು: “ಇಸ್ರಾಯೇಲ್ಯರೇ ಕೇಳಿರಿ. ನಿಮಗಿಂತ ಮಹಾ ಬಲಿಷ್ಠಜನಾಂಗಗಳನ್ನೂ ಆಕಾಶವನ್ನು ಮುಟ್ಟುವ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನೂ ಸ್ವಾಧೀನಮಾಡಿಕೊಳ್ಳುವದಕ್ಕೆ ನೀವು ಈ ಯೊರ್ದನ್‌ ಹೊಳೆಯನ್ನು ಇಂದು ದಾಟುವವರಾಗಿದ್ದೀರಿ. ಆ ದೇಶದವರು ಅನಾಕ್ಯರೆಂಬ ಬಲಿಷ್ಠರಾದ ಉನ್ನತಪುರುಷರು. . . . ಅನಾಕ್ಯರ ಮುಂದೆ ನಿಲ್ಲಬಲ್ಲವರು ಯಾರಿದ್ದಾರೆ ಎಂಬ ಮಾತನ್ನು ಕೇಳಿದ್ದೀರಷ್ಟೆ.” (ಧರ್ಮೋಪದೇಶಕಾಂಡ 9:​1, 2) ಹೌದು, ಆ ದೇಶದಲ್ಲಿದ್ದ ದೈತ್ಯಾಕಾರದ ಭಟರು ಕುಪ್ರಸಿದ್ಧರಾಗಿದ್ದರು! ಇದಲ್ಲದೆ, ಕೆಲವು ಕಾನಾನ್ಯ ಜನಾಂಗಗಳಿಗೆ ಅಶ್ವಸೇನೆ ಮತ್ತು ಗಾಲಿಗಳ ಮೇಲೆ ಕಬ್ಬಿಣದ ಕೋಲ್ಗತ್ತಿಗಳಿದ್ದ ರಥಗಳಿಂದ ಕೂಡಿದ ಸುಸಜ್ಜಿತ ಸೈನ್ಯಗಳಿದ್ದವು.​—⁠ನ್ಯಾಯಸ್ಥಾಪಕರು 4:13.

2 ಇಸ್ರಾಯೇಲ್ಯರಾದರೊ ದಾಸತ್ವದಲ್ಲಿದ್ದ ಜನಾಂಗದವರಾಗಿದ್ದು, ಈಗಷ್ಟೇ 40 ವರುಷಗಳನ್ನು ಅರಣ್ಯದಲ್ಲಿ ಕಳೆದಿದ್ದರು. ಆದಕಾರಣ, ಮಾನವ ದೃಷ್ಟಿಕೋನದಿಂದ ನೋಡುವಾಗ, ಆ ಬಲಿಷ್ಠ ಕಾನಾನ್ಯರ ವಿರುದ್ಧ ಅವರು ಜಯಶಾಲಿಗಳಾಗುವುದು ಅಸಾಧ್ಯವೆಂಬಂತೆ ತೋರಿತು. ಆದರೆ ಮೋಶೆ ನಂಬಿಕೆಯಿಂದಿದ್ದನು ಮತ್ತು ಯೆಹೋವನು ಅವರನ್ನು ಮುನ್ನಡೆಸುತ್ತಿರುವುದನ್ನು ಅವನು ಕಣ್ಣಾರೆ ನೋಡುವವನಾಗಿದ್ದನು. (ಇಬ್ರಿಯ 11:27) “ನಿಮ್ಮ ದೇವರಾದ ಯೆಹೋವನು ತಾನೇ . . . ನಿಮ್ಮ ಮುಂದೆ ಹೋಗುತ್ತಾನೆ . . . ಆತನೇ ಅವರನ್ನು ನಾಶಮಾಡುವನು; ಆತನೇ ಅವರನ್ನು ನಿಮ್ಮ ಮುಂದೆ ಸೋತುಹೋಗುವಂತೆ ಮಾಡುವನು” ಎಂದನು ಮೋಶೆ ಇಸ್ರಾಯೇಲ್ಯರಿಗೆ. (ಧರ್ಮೋಪದೇಶಕಾಂಡ 9:3; ಕೀರ್ತನೆ 33:​16, 17) ಯೆಹೋವನು ಮೋಶೆಯ ಮರಣಾನಂತರ ಯೆಹೋಶುವನಿಗೆ ತನ್ನ ಬೆಂಬಲದ ಪುನರಾಶ್ವಾಸನೆಯನ್ನು ನೀಡಿದನು. ಆತನು ಹೇಳಿದ್ದು: “ನೀನು ಈಗ ಎದ್ದು ಸಮಸ್ತ ಪ್ರಜಾಸಹಿತವಾಗಿ ಈ ಯೊರ್ದನ್‌ ಹೊಳೆಯನ್ನು ದಾಟಿ ನಾನು ಇಸ್ರಾಯೇಲ್ಯರಿಗೆ ಕೊಡುವ ದೇಶಕ್ಕೆ ಹೋಗು. ನಿನ್ನ ಜೀವಮಾನದಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನು.”​—⁠ಯೆಹೋಶುವ 1:​2, 5.

3 ಯೆಹೋವನ ಬೆಂಬಲ ಮತ್ತು ಮಾರ್ಗದರ್ಶನೆಯನ್ನು ಯೆಹೋಶುವನು ಪಡೆಯಬೇಕಾದರೆ ಅವನು ದೇವರ ಧರ್ಮಶಾಸ್ತ್ರವನ್ನು ಓದಿ, ಧ್ಯಾನಿಸಿ ಅದರಂತೆ ಜೀವಿಸಬೇಕಾಗಿತ್ತು. ಯೆಹೋವನು ಹೇಳಿದ್ದು: “ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ. ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು [ಬಲವಾಗಿರು], ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.” (ಯೆಹೋಶುವ 1:​8, 9) ಯೆಹೋಶುವನು ದೇವರ ಮಾತಿಗೆ ಕಿವಿಗೊಟ್ಟ ಕಾರಣ ಅವನು ಧೈರ್ಯವಂತನೂ ಬಲಾಢ್ಯನೂ ಮತ್ತು ವಿಜಯಿಯೂ ಆಗಿ ಪರಿಣಮಿಸಿದನು. ಆದರೆ, ಅವನ ಸಮವಯಸ್ಕರಲ್ಲಿ ಹೆಚ್ಚಿನವರು ಕಿವಿಗೊಡಲಿಲ್ಲ. ಈ ಕಾರಣದಿಂದ, ಅವರು ಜಯಹೊಂದದೆ ಅರಣ್ಯದಲ್ಲಿ ಸತ್ತರು.

ಧೈರ್ಯದ ಕೊರತೆಯಿದ್ದ ನಂಬಿಕೆರಹಿತ ಜನ

4 ಇದಕ್ಕೆ ನಾಲ್ವತ್ತು ವರುಷಗಳಿಗೂ ಹಿಂದೆ, ಇಸ್ರಾಯೇಲ್ಯರು ಮೊದಲ ಬಾರಿ ಕಾನಾನ್‌ ದೇಶವನ್ನು ಸಮೀಪಿಸಿದಾಗ ಮೋಶೆ, ದೇಶವನ್ನು ಹೊಂಚುಹಾಕಿ ನೋಡಲು 12 ಮಂದಿ ಪುರುಷರನ್ನು ಕಳುಹಿಸಿದನು. ಅವರಲ್ಲಿ ಹತ್ತು ಮಂದಿ ಭಯಭೀತರಾಗಿ ಹಿಂದಿರುಗಿದರು. “ನಾವು ಅದರಲ್ಲಿ ನೋಡಿದ ಜನರೆಲ್ಲರೂ ಬಹಳ ಎತ್ತರವಾದವರು; ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಉನ್ನತಪುರುಷರನ್ನು [“ಅನಾಕನ ಪುತ್ರರನ್ನು,” NW] ನೋಡಿದೆವು. ನಾವು ಅವರ ಮುಂದೆ ಮಿಡತೆಗಳಂತೆ ಇದ್ದೇವೆಂದು ತಿಳಿದುಕೊಂಡೆವು” ಎಂದು ಅವರು ಕೂಗಿದರು. ಅನಾಕ್ಯರು ಮಾತ್ರವಲ್ಲ, “ಜನರೆಲ್ಲರೂ” ಉನ್ನತಪುರುಷರಾಗಿದ್ದರೊ? ನಿಶ್ಚಯವಾಗಿ ಇಲ್ಲ. ಅನಾಕ್ಯರು ಜಲಪ್ರಳಕ್ಕೆ ಮುಂಚೆಯಿದ್ದ ನೆಫೀಲಿಯರ ಸಂತತಿಯವರಾಗಿದ್ದರೊ? ಅದೂ ಇಲ್ಲ! ಆದರೂ, ಈ ಅತಿಶಯೋಕ್ತಿಗಳ ಕಾರಣ ಭಯವು ಪಾಳೆಯದಲ್ಲೆಲ್ಲಾ ಹರಡಿತು. ಜನರು ತಮ್ಮನ್ನು ದಾಸರಾಗಿ ಮಾಡಿದ್ದ ಐಗುಪ್ತ ದೇಶಕ್ಕೂ ಹಿಂದೆ ಹೋಗಲು ಬಯಸಿದರು.​—⁠ಅರಣ್ಯಕಾಂಡ 13:​31–14:⁠4.

5 ಆದರೆ ಯೆಹೋಶುವ ಮತ್ತು ಕಾಲೇಬ್‌ ಎಂಬ ಇಬ್ಬರು ಗೂಢಚಾರರು ವಾಗ್ದತ್ತ ದೇಶವನ್ನು ಪ್ರವೇಶಿಸಲು ಕಾತುರದಿಂದಿದ್ದರು. “ನಾವು [ಕಾನಾನ್ಯರನ್ನು] ನುಂಗಿ ಪುಷ್ಟಿಯಾಗುವೆವು ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟನು; ನಮ್ಮ ಕಡೆ ಯೆಹೋವನು ಇದ್ದಾನೆ: ಅವರಿಗೆ ಭಯಪಡಬೇಡಿರಿ” ಎಂದರವರು. (ಅರಣ್ಯಕಾಂಡ 14:⁠9) ಯೆಹೋಶುವ ಮತ್ತು ಕಾಲೇಬರಿಗಿದ್ದ ಆಶಾವಾದವು ಹುಚ್ಚುತನವಾಗಿತ್ತೋ? ಖಂಡಿತ ಇಲ್ಲ! ಏಕೆಂದರೆ ಜನಾಂಗದ ಇತರರೊಂದಿಗೆ ಅವರು, ಯೆಹೋವನು ಮಹಾ ಐಗುಪ್ತವನ್ನೂ ಅದರ ದೇವತೆಗಳನ್ನೂ ಹತ್ತು ಬಾಧೆಗಳ ಮೂಲಕ ಅವಮಾನಪಡಿಸಿದ್ದನ್ನು ಕಣ್ಣಾರೆ ನೋಡಿದ್ದರು. ಆ ಬಳಿಕ, ಯೆಹೋವನು ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಮುಳುಗಿಸಿದ್ದನ್ನು ಸಹ ಅವರು ನೋಡಿದ್ದರು. (ಕೀರ್ತನೆ 136:15) ಆದುದರಿಂದ, ಆ ಹತ್ತು ಮಂದಿ ಗೂಢಚಾರರು ಮತ್ತು ಅವರಿಂದ ಪ್ರಭಾವಿತರಾದವರು ತೋರಿಸಿದ ಭಯವು ಅಕ್ಷಮ್ಯವಾಗಿತ್ತು ಎಂಬುದು ಸ್ಪಷ್ಟ. ಯೆಹೋವನು ತೀವ್ರ ವೇದನೆಗೊಂಡು, “ನಾನು ನಡಿಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರೋ” ಎಂದು ಹೇಳುತ್ತಾ ತನ್ನ ದುಃಖವನ್ನು ವ್ಯಕ್ತಪಡಿಸಿದನು.​—⁠ಅರಣ್ಯಕಾಂಡ14:11.

6 ಯೆಹೋವನು ಈ ಸಮಸ್ಯೆಯ ಮೂಲಕಾರಣವನ್ನು ಪತ್ತೆಹಚ್ಚಿದನು. ಜನರು ಹೇಡಿತನವನ್ನು ತೋರಿಸಿದ್ದು ಅವರಲ್ಲಿ ನಂಬಿಕೆಯ ಕೊರತೆ ಇದದ್ದರಿಂದಲೇ. ಹೌದು, ನಂಬಿಕೆಗೂ ಧೈರ್ಯಕ್ಕೂ ಎಷ್ಟು ಆಪ್ತ ಸಂಬಂಧವಿದೆಯೆಂದರೆ, ಕ್ರೈಸ್ತ ಸಭೆ ಮತ್ತು ಅದರ ಆಧ್ಯಾತ್ಮಿಕ ಯುದ್ಧದ ಕುರಿತು ಅಪೊಸ್ತಲ ಯೋಹಾನನು ಹೀಗೆ ಬರೆಯಶಕ್ತನಾದನು: “ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ.” (1 ಯೋಹಾನ 5:⁠4) ಇಂದು, ಯೆಹೋಶುವ ಮತ್ತು ಕಾಲೇಬರಿಗಿದ್ದಂಥದ್ದೇ ರೀತಿಯ ನಂಬಿಕೆಯ ಪರಿಣಾಮವಾಗಿ, ಯುವಕರೂ ವೃದ್ಧರೂ ಬಲವುಳ್ಳವರೂ ಬಲಹೀನರೂ ಸೇರಿರುವ ಅರವತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳಿಂದ ರಾಜ್ಯದ ಸುವಾರ್ತೆಯು ಲೋಕವ್ಯಾಪಕವಾಗಿ ಸಾರಲ್ಪಡುತ್ತಿದೆ. ಈ ಬಲಾಢ್ಯವಾದ ಧೀರ ಸೈನ್ಯವನ್ನು ಯಾವ ಶತ್ರುವೂ ಮೌನವಾಗಿಸಲು ಶಕ್ತನಾಗಿರುವುದಿಲ್ಲ.​—⁠ರೋಮಾಪುರ 8:31.

‘ಹಿಂದೆಗೆಯುವವರು’ ಆಗಬೇಡಿ

7 ಇಂದು ಯೆಹೋವನ ಸಾಕ್ಷಿಗಳು ಧೈರ್ಯದಿಂದ ಸುವಾರ್ತೆ ಸಾರುವುದಕ್ಕೆ ಕಾರಣ, ಅವರು ಅಪೊಸ್ತಲ ಪೌಲನಂತಹ ಮನಸ್ಸುಳ್ಳವರಾಗಿರುವುದರಿಂದಲೇ. ಅವನು ಬರೆದುದು: “ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ.” (ಇಬ್ರಿಯ 10:39) ‘ಹಿಂದೆಗೆಯುವುದು’ ಎಂದು ಪೌಲನು ಹೇಳಿದ್ದರ ಅರ್ಥವು ತಾತ್ಕಾಲಿಕ ಭಯವನ್ನು ತೋರಿಸುವುದು ಎಂದಲ್ಲ. ಏಕೆಂದರೆ ದೇವರ ಅನೇಕ ನಂಬಿಗಸ್ತ ಸೇವಕರು ಕೆಲವೊಮ್ಮೆ ಭಯಪಟ್ಟಿದ್ದಾರೆ. (1 ಸಮುವೇಲ 21:12; 1 ಅರಸುಗಳು 19:​1-4) ಆದರೆ, ಅದರ ಅರ್ಥ, “ಹಿಮ್ಮೆಟ್ಟುವುದು, ಹಿಂಜರಿಯುವುದು,” “ಸತ್ಯವನ್ನು ಹಿಡಿದುಕೊಳ್ಳಲು ಅಲಕ್ಷ್ಯ ಮಾಡುವುದು” ಆಗಿದೆಯೆಂದು ಒಂದು ಬೈಬಲ್‌ ನಿಘಂಟು ವಿವರಿಸುತ್ತದೆ. ‘ಹಿಂದೆಗೆಯುವುದು’ ಎಂಬುದು “ಹಡಗಿನ ಹಾಯಿಯನ್ನು ಸುತ್ತಿಡುವುದು, ಹೀಗೆ ವೇಗವನ್ನು ನಿಧಾನಿಸುವ” ವಿಷಯದ ಮೇಲಾಧರಿತವಾದ ಒಂದು ರೂಪಕಾಲಂಕಾರ ಆಗಿರಬಹುದು ಮತ್ತು ಇದು ದೇವರ ಸೇವೆಯ ವಿಷಯದಲ್ಲಿ ಸೂಚಿಸಬಹುದು ಎಂದು ಆ ನಿಘಂಟು ಕೂಡಿಸಿ ಹೇಳುತ್ತದೆ. ಹೌದು, ಬಲವಾದ ನಂಬಿಕೆಯುಳ್ಳವರು ಕಷ್ಟಗಳೇಳುವಾಗ ಅಂದರೆ ಹಿಂಸೆಯಾಗಲಿ, ಅನಾರೋಗ್ಯವಾಗಲಿ ಇಲ್ಲವೆ ಇನ್ನಿತರ ಯಾವುದೇ ಪರೀಕ್ಷೆಗಳು ಬರುವಾಗಲೂ “ವೇಗವನ್ನು ನಿಧಾನಿಸು”ವುದಿಲ್ಲವೆಂಬುದು ನಿಶ್ಚಯ. ಇದಕ್ಕೆ ಬದಲಾಗಿ ಅವರು, ಯೆಹೋವನು ತಮ್ಮ ಬಗ್ಗೆ ಹೆಚ್ಚಾಗಿ ಕಾಳಜಿವಹಿಸುತ್ತಾನೆ ಮತ್ತು ತಮ್ಮ ಪರಿಮಿತಿಯನ್ನು ಬಲ್ಲವನಾಗಿದ್ದಾನೆ ಎಂಬುದನ್ನು ತಿಳಿದು ಆತನನ್ನು ಸೇವಿಸುತ್ತ ಹೋಗುತ್ತಾರೆ. (ಕೀರ್ತನೆ 55:22; 103:14) ಅಂತಹ ನಂಬಿಕೆ ನಿಮಗಿದೆಯೆ?

8 ಒಮ್ಮೆ ತಮ್ಮಲ್ಲಿ ನಂಬಿಕೆಯ ಕೊರತೆಯಿದೆ ಎಂದು ಭಾವಿಸಿದ ಅಪೊಸ್ತಲರು, “ನಮ್ಮ ನಂಬಿಕೆಯನ್ನು ಹೆಚ್ಚಿಸು” ಎಂದು ಯೇಸುವಿಗೆ ಹೇಳಿದರು. (ಲೂಕ 17:⁠5) ಅವರ ಪ್ರಾಮಾಣಿಕ ಬಿನ್ನಹವು ವಿಶೇಷವಾಗಿ ಸಾ.ಶ. 33ರ ಪಂಚಾಶತ್ತಮದಂದು ಉತ್ತರಿಸಲ್ಪಟ್ಟಿತು. ವಾಗ್ದಾನಿಸಿದ್ದಂತೆಯೇ ಅಂದು ಶಿಷ್ಯರ ಮೇಲೆ ಪವಿತ್ರಾತ್ಮವು ಬಂದು ದೇವರ ವಾಕ್ಯದ ಮತ್ತು ಉದ್ದೇಶದ ಗಾಢವಾದ ಒಳನೋಟವನ್ನು ಅವರಿಗೆ ಕೊಟ್ಟಿತು. (ಯೋಹಾನ 14:26; ಅ. ಕೃತ್ಯಗಳು 2:​1-4) ಇದರಿಂದ ನಂಬಿಕೆಯಲ್ಲಿ ಬಲಗೊಂಡ ಆ ಶಿಷ್ಯರು ವಿರೋಧದ ಮಧ್ಯದಲ್ಲಿಯೂ ಸಾರುವ ಕಾರ್ಯದಲ್ಲಿ ತೊಡಗಿ, ಸುವಾರ್ತೆಯನ್ನು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಒಯ್ದರು.​—⁠ಕೊಲೊಸ್ಸೆ 1:23; ಅ. ಕೃತ್ಯಗಳು 1:8; 28:22.

9 ನಮ್ಮ ನಂಬಿಕೆಯನ್ನು ವರ್ಧಿಸಿ ಶುಶ್ರೂಷೆಯಲ್ಲಿ ಮುಂದುವರಿಯಲು, ನಾವು ಸಹ ಶಾಸ್ತ್ರವನ್ನು ಅಧ್ಯಯನ ಮಾಡಿ, ಧ್ಯಾನಿಸಿ, ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಬೇಕು. ಯೆಹೋಶುವ, ಕಾಲೇಬ ಮತ್ತು ಆದಿ ಕ್ರೈಸ್ತ ಶಿಷ್ಯರು ಮಾಡಿದಂತೆ ನಾವು ದೇವರ ವಾಕ್ಯವನ್ನು ನಮ್ಮ ಹೃದಮನಗಳಲ್ಲಿ ಅಚ್ಚೊತ್ತುವ ಮೂಲಕ ಮಾತ್ರ, ನಮ್ಮ ಆಧ್ಯಾತ್ಮಿಕ ಯುದ್ಧೋದ್ಯಮದಲ್ಲಿ ತಾಳಿಕೊಂಡು ಜಯಶಾಲಿಗಳಾಗಲು ಅಗತ್ಯವಿರುವ ಧೈರ್ಯವನ್ನು ನೀಡುವಂಥ ನಂಬಿಕೆಯನ್ನು ಹೊಂದಿರುವೆವು.​—⁠ರೋಮಾಪುರ 10:17.

ನಂಬಿಕೆ​—⁠ಕೇವಲ ದೇವರಿದ್ದಾನೆಂದು ನಂಬುವುದಕ್ಕಿಂತ ಹೆಚ್ಚಿನದ್ದು

10 ಪುರಾತನ ಕಾಲದ ಸಮಗ್ರತೆಪಾಲಕರಿಂದ ತೋರಿಸಲ್ಪಟ್ಟಿರುವಂತೆ, ಧೈರ್ಯ ಮತ್ತು ತಾಳ್ಮೆಯನ್ನು ಫಲಿಸುವ ನಂಬಿಕೆ ಕೇವಲ ದೇವರಿದ್ದಾನೆಂದು ನಂಬುವುದಕ್ಕಿಂತ ಹೆಚ್ಚಿನದ್ದಾಗಿದೆ. (ಯಾಕೋಬ 2:19) ನಾವು ಯೆಹೋವನನ್ನು ಒಬ್ಬ ವ್ಯಕ್ತಿಯಾಗಿ ಪರಿಚಯಿಸಿಕೊಂಡು ಆತನಲ್ಲಿ ಪೂರ್ಣ ಭರವಸೆಯಿಡುವುದನ್ನು ಇದು ಅವಶ್ಯಪಡಿಸುತ್ತದೆ. (ಕೀರ್ತನೆ 78:​5-8; ಜ್ಞಾನೋಕ್ತಿ 3:​5, 6) ದೇವರ ನಿಯಮಗಳು ಮತ್ತು ಮೂಲತತ್ತ್ವಗಳಿಗೆ ಗಮನಕೊಡುವುದು ನಮಗೆ ಅತಿ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ನಮ್ಮ ಪೂರ್ಣ ಹೃದಯದಿಂದ ನಂಬುವುದೂ ಇದರಲ್ಲಿ ಒಳಗೂಡಿದೆ. (ಯೆಶಾಯ 48:​17, 18) ನಂಬಿಕೆಯಲ್ಲಿ, ಯೆಹೋವನು ತನ್ನ ಎಲ್ಲ ವಾಗ್ದಾನಗಳನ್ನು ನೆರವೇರಿಸುವನು ಮತ್ತು ‘ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುವನು’ ಎಂದು ಪೂರ್ಣ ಆಶ್ವಾಸನೆಯಿಂದಿರುವುದೂ ಸೇರಿರುತ್ತದೆ.​—⁠ಇಬ್ರಿಯ 11:​1, 6; ಯೆಶಾಯ 55:11.

11 ಇಂತಹ ನಂಬಿಕೆ ಜಡವಾದದ್ದಲ್ಲ. ಸತ್ಯಕ್ಕನುಗುಣವಾಗಿ ನಾವು ಜೀವಿಸುವಾಗ, ಅದರ ಪ್ರಯೋಜನಗಳನ್ನು ‘ಸವಿಯುವಾಗ,’ ನಮ್ಮ ಪ್ರಾರ್ಥನೆಗಳಿಗೆ ದೊರೆಯುವ ಉತ್ತರಗಳನ್ನು ‘ನೋಡುವಾಗ’ ಮತ್ತು ಇತರ ವಿಧಗಳಲ್ಲಿ, ನಮ್ಮ ಜೀವನದಲ್ಲಿ ಯೆಹೋವನ ನಿರ್ದೇಶನವನ್ನು ಅರಿಯುವಾಗ ಆ ನಂಬಿಕೆ ಬೆಳೆಯುತ್ತಾ ಹೋಗುತ್ತದೆ. (ಕೀರ್ತನೆ 34:8; 1 ಯೋಹಾನ 5:​14, 15) ಯೆಹೋಶುವ ಮತ್ತು ಕಾಲೇಬರು ಯೆಹೋವನ ಒಳ್ಳೆತನವನ್ನು ಸವಿದುನೋಡಿದಾಗ ಅವರ ನಂಬಿಕೆ ಆಳವಾಯಿತೆಂದು ನಮಗೆ ಖಾತರಿಯಿರಸಾಧ್ಯವಿದೆ. (ಯೆಹೋಶುವ 23:⁠14) ಈ ವಿಷಯಗಳನ್ನು ಪರಿಗಣಿಸಿರಿ: ದೇವರು ವಾಗ್ದಾನಿಸಿದ್ದಂತೆ, ಅವರು ಆ 40 ವರುಷಗಳ ಅರಣ್ಯ ಪ್ರಯಾಣದಲ್ಲಿ ಬದುಕಿ ಉಳಿದರು. (ಅರಣ್ಯಕಾಂಡ 14:​27-30; 32:​11, 12) ಕಾನಾನನ್ನು ಆರು ವರುಷಗಳಲ್ಲಿ ಜಯಿಸುವ ಸಮಯದಲ್ಲಿ ಅವರು ಕ್ರಿಯಾಶೀಲ ಪಾತ್ರವಹಿಸಿದರು. ಅಂತಿಮವಾಗಿ ಅವರು ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಅನುಭವಿಸಿದರು ಮಾತ್ರವಲ್ಲ, ಅವರಿಗೆ ತಮ್ಮದೇ ಆದ ಬಾಧ್ಯತೆಗಳೂ ದೊರೆತವು. ನಂಬಿಕೆ ಮತ್ತು ಧೈರ್ಯದಿಂದ ತನ್ನನ್ನು ಸೇವಿಸುವವರಿಗೆ ಯೆಹೋವನು ಎಂತಹ ಪ್ರತಿಫಲವನ್ನು ಕೊಡುತ್ತಾನೆ!​—⁠ಯೆಹೋಶುವ 14:​6, 9-14; 19:​49, 50; 24:29.

12 ಯೆಹೋಶುವ ಮತ್ತು ಕಾಲೇಬರಿಗೆ ದೇವರು ತೋರಿಸಿದ ಪ್ರೀತಿಪೂರ್ವಕ ದಯೆಯು ನಮಗೆ ಕೀರ್ತನೆಗಾರನ ಈ ಮಾತುಗಳನ್ನು ಜ್ಞಾಪಕಹುಟ್ಟಿಸುತ್ತವೆ: “ನಿನ್ನ ವಾಕ್ಯವನ್ನು ನಿನ್ನ ಎಲ್ಲಾ ಹೆಸರಿಗಿಂತಲೂ ಮಿಗಿಲಾಗಿ ಘನ ಪಡಿಸಿದ್ದೀ.” (ಕೀರ್ತನೆ 138:​2, NIBV) ಯೆಹೋವನು ತನ್ನ ಹೆಸರಿನಲ್ಲಿ ಒಂದು ವಾಗ್ದಾನವನ್ನು ಮಾಡುವಾಗ, ಅದು ನಮ್ಮ ಎಲ್ಲ ನಿರೀಕ್ಷೆಗಳನ್ನು ಮೀರಿ ಮಹತ್ತರವಾದ ವಿಧದಲ್ಲಿ ನೆರವೇರುವ ಮೂಲಕ ‘ಘನಪಡಿಸಲ್ಪಡುತ್ತದೆ.’ (ಎಫೆಸ 3:20) ಹೌದು, ಯೆಹೋವನು ತನ್ನಲ್ಲಿ ಹೆಚ್ಚಾಗಿ “ಸಂತೋಷಿಸು”ವವರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ.​—⁠ಕೀರ್ತನೆ 37:​3, 4.

‘ದೇವರನ್ನು ಮೆಚ್ಚಿಸಿದ’ ಮನುಷ್ಯನು

13 ಕ್ರಿಸ್ತಶಕ ಪೂರ್ವದಲ್ಲಿದ್ದ ಇನ್ನೊಬ್ಬ ಸಾಕ್ಷಿಯ ಮಾದರಿಯನ್ನು ಪರಿಗಣಿಸುವುದರಿಂದ ನಾವು ನಂಬಿಕೆ ಮತ್ತು ಧೈರ್ಯದ ಬಗ್ಗೆ ಹೆಚ್ಚನ್ನು ಕಲಿಯಬಲ್ಲೆವು. ಅವನು ಹನೋಕನಾಗಿದ್ದಾನೆ. ಹನೋಕನು ಪ್ರವಾದಿಸತೊಡಗುವುದಕ್ಕೆ ಮೊದಲೇ, ಅವನಿಗೆ ತನ್ನ ನಂಬಿಕೆ ಮತ್ತು ಧೈರ್ಯವು ಪರೀಕ್ಷೆಗೊಳಗಾಗುವುದೆಂದು ಗೊತ್ತಿತ್ತು ಎಂಬುದು ಸಂಭವನೀಯ. ಅದು ಹೇಗೆ? ಹೇಗೆಂದರೆ, ದೇವರನ್ನು ಮತ್ತು ಪಿಶಾಚನಾದ ಸೈತಾನನನ್ನು ಸೇವಿಸುವವರ ಮಧ್ಯೆ ಹಗೆತನ ಅಥವಾ ದ್ವೇಷವಿರುವುದೆಂದು ಯೆಹೋವನು ಏದೆನಿನಲ್ಲಿಯೇ ಹೇಳಿದ್ದನು. (ಆದಿಕಾಂಡ 3:15) ಈ ಹಗೆತನವು ಮಾನವ ಇತಿಹಾಸದ ಆರಂಭದಲ್ಲಿ, ಕಾಯಿನನು ತನ್ನ ತಮ್ಮನಾದ ಹೇಬೆಲನನ್ನು ಕೊಂದಾಗ ಸಿಡಿಯಿತೆಂದೂ ಹನೋಕನಿಗೆ ತಿಳಿದಿತ್ತು. ವಾಸ್ತವದಲ್ಲಿ, ಕಾಯಿನ ಮತ್ತು ಹೇಬೆಲರ ತಂದೆ ಆದಾಮನು ಹನೋಕನ ಜನನಾನಂತರ ಸುಮಾರು 310 ವರುಷ ಬದುಕಿದ್ದನು.​—⁠ಆದಿಕಾಂಡ 5:​3-18.

14 ಆದರೆ ಈ ನಿಜತ್ವಗಳ ಹೊರತೂ, ಹನೋಕನು ಧೈರ್ಯದಿಂದ “ದೇವರ ಅನ್ಯೋನ್ಯತೆಯಲ್ಲಿ” ನಡೆದು, ಜನರು ಯೆಹೋವನಿಗೆ ವಿರುದ್ಧವಾಗಿ ಹೇಳುತ್ತಿದ್ದ “ಕಠಿನವಾದ ಮಾತು”ಗಳನ್ನು ಖಂಡಿಸುತ್ತಿದ್ದನು. (ಆದಿಕಾಂಡ 5:22; ಯೂದ 14, 15) ಸತ್ಯಾರಾಧನೆಯ ವಿಷಯದಲ್ಲಿ ಅವನ ಈ ಭಯರಹಿತ ನಿಲುವು, ಅವನಿಗೆ ವಿರೋಧವಾಗಿ ಅನೇಕ ವೈರಿಗಳು ಏಳುವಂತೆ ಮಾಡಿ, ಅವನ ಜೀವವನ್ನು ಅಪಾಯಕ್ಕೊಡ್ಡಿತು. ಆದರೆ ಈ ಸಂದರ್ಭದಲ್ಲಿ, ಯೆಹೋವನು ತನ್ನ ಪ್ರವಾದಿಯನ್ನು ಬರಲಿದ್ದ ಯಾತನಾಮಯ ಮರಣದಿಂದ ತಪ್ಪಿಸಿದನು. ಹನೋಕನಿಗೆ, ಅವನು ‘ದೇವರನ್ನು ಮೆಚ್ಚಿಸಿದ್ದಾನೆ’ ಎಂದು ತಿಳಿಯಪಡಿಸಿದ ಬಳಿಕ, ಯೆಹೋವನು ಅವನನ್ನು, ಪ್ರಾಯಶಃ ಒಂದು ಪ್ರವಾದನಾತ್ಮಕ ಸುಪ್ತಾವಸ್ಥೆಯ ಸಮಯದಲ್ಲಿ ಜೀವದಿಂದ ಮರಣಕ್ಕೆ ‘ಕರೆದುಕೊಂಡನು.’​—⁠ಇಬ್ರಿಯ 11:​5, 13; ಆದಿಕಾಂಡ 5:24.

15 ಪೌಲನು ಹನೋಕನ ಈ ಸ್ಥಾನಾಂತರವನ್ನು ತಿಳಿಸಿದೊಡನೆ, ಪುನಃ ನಂಬಿಕೆಯ ಮಹತ್ವವನ್ನು ಒತ್ತಿಹೇಳುತ್ತಾ, “ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ” ಎಂದು ತಿಳಿಸಿದನು. (ಇಬ್ರಿಯ 11:⁠6) ಹೌದು, ನಂಬಿಕೆಯು ಹನೋಕನಿಗೆ, ಯೆಹೋವನೊಂದಿಗೆ ನಡೆಯಲು ಮತ್ತು ಆತನ ತೀರ್ಪಿನ ಸಂದೇಶವನ್ನು ಭಕ್ತಿರಹಿತ ಲೋಕಕ್ಕೆ ಸಾರಿಹೇಳಲು ಧೈರ್ಯವನ್ನು ಕೊಟ್ಟಿತು. ಹೀಗೆ, ಹನೋಕನು ನಮಗಾಗಿ ಒಂದು ಉತ್ತಮ ಮಾದರಿಯನ್ನಿಟ್ಟನು. ಸತ್ಯಾರಾಧನೆಯನ್ನು ವಿರೋಧಿಸುವ ಮತ್ತು ಸಕಲ ವಿಧವಾದ ದುಷ್ಟತೆಯಿರುವ ಲೋಕವೊಂದರಲ್ಲಿ ನಮಗೆ ಸಹ ಮಾಡಲು ತದ್ರೀತಿಯ ಕೆಲಸವೊಂದಿದೆ.​—⁠ಕೀರ್ತನೆ 92:7; ಮತ್ತಾಯ 24:14; ಪ್ರಕಟನೆ 12:17.

ದೇವಭಯದಿಂದಾಗಿ ಬರುವ ಧೈರ್ಯ

16 ನಂಬಿಕೆಯಲ್ಲದೆ, ಧೈರ್ಯಕ್ಕೆ ಇಂಬುಕೊಡುವ ಇನ್ನೊಂದು ಗುಣವಿದೆ. ಅದು ದೇವರಿಗೆ ತೋರಿಸುವ ಪೂಜ್ಯಭಯವೇ ಆಗಿದೆ. ದೇವಭಯವಿದ್ದ ಒಬ್ಬನ ಗಮನಾರ್ಹ ಮಾದರಿಯನ್ನು ನಾವೀಗ ಪರಿಗಣಿಸೋಣ. ಅವನು ಪ್ರವಾದಿ ಎಲೀಯನ ಮತ್ತು ಇಸ್ರಾಯೇಲಿನ ಉತ್ತರ ರಾಜ್ಯವನ್ನು ಆಳುತ್ತಿದ್ದ ರಾಜ ಆಹಾಬನ ಕಾಲದಲ್ಲಿ ಜೀವಿಸುತ್ತಿದ್ದನು. ಆಹಾಬನ ರಾಜ್ಯಭಾರದ ಸಮಯದಲ್ಲಿ ಬಾಳನ ಆರಾಧನೆಯು ಉತ್ತರ ರಾಜ್ಯವನ್ನು ಹೆಚ್ಚು ವ್ಯಾಪಕವಾಗಿ ಭ್ರಷ್ಟಗೊಳಿಸಿತ್ತು. ವಾಸ್ತವದಲ್ಲಿ, ಬಾಳನ 450 ಪ್ರವಾದಿಗಳು ಮತ್ತು ಲಿಂಗಚಿಹ್ನೆಯ ಅಶೇರದೇವತೆಯ 400 ಪ್ರವಾದಿಗಳು ಆಹಾಬನ ಪತ್ನಿ “ಈಜೆಬೆಲಳಿಂದ ಪೋಷಣೆ” ಹೊಂದುತ್ತಿದ್ದರು.​—⁠1 ಅರಸುಗಳು 16:​30-33; 18:19.

17 ಯೆಹೋವನ ಕ್ರೂರ ವೈರಿಯಾಗಿದ್ದ ಈಜೆಬೆಲಳು, ಆ ದೇಶದಿಂದ ಸತ್ಯಾರಾಧನೆಯನ್ನು ತೆಗೆದುಹಾಕಲು ಪ್ರಯತ್ನಿಸಿದಳು. ಆಕೆ ಯೆಹೋವನ ಪ್ರವಾದಿಗಳಲ್ಲಿ ಕೆಲವರನ್ನು ಕೊಲ್ಲಿಸಿ, ಎಲೀಯನನ್ನೂ ಕೊಲ್ಲಲು ಪ್ರಯತ್ನಿಸಿದಾಗ, ಅವನು ದೇವರ ನಿರ್ದೇಶನದ ಮೇರೆಗೆ ಯೊರ್ದನಿನಾಚೆ ಓಡಿಹೋದನು. (1 ಅರಸುಗಳು 17:​1-3; 18:13) ಆ ಕಾಲದಲ್ಲಿ ಉತ್ತರ ರಾಜ್ಯದಲ್ಲಿ ಶುದ್ಧಾರಾಧನೆಯನ್ನು ಎತ್ತಿಹಿಡಿಯುವುದು ಎಷ್ಟು ಕಷ್ಟಕರವಾಗಿದ್ದಿರಬಹುದೆಂದು ನೀವು ಊಹಿಸಬಲ್ಲಿರೊ? ಅದಕ್ಕಿಂತಲೂ ಕಠಿನವಾಗಿ, ಆ ಸಮಯದಲ್ಲಿ ಅರಮನೆಯಲ್ಲಿಯೇ ಕೆಲಸ ಮಾಡುವುದು ಹೇಗಿದ್ದಿರಬಹುದು? ಇಂಥಾ ಸನ್ನಿವೇಶದಲ್ಲಿಯೇ ಆಹಾಬನ ಮನೆವಾರ್ತೆಯ ಸೇವಕನಾದ, ದೇವಭಯವಿದ್ದ ಓಬದ್ಯನು * ಇದ್ದನು.​—⁠1 ಅರಸುಗಳು 18:⁠3.

18 ಓಬದ್ಯನು ಯೆಹೋವನ ಆರಾಧನೆಯ ವಿಷಯದಲ್ಲಿ ಮುಂಜಾಗ್ರತೆ ವಹಿಸುವವನೂ ವಿವೇಚನೆಯುಳ್ಳವನೂ ಆಗಿದ್ದನೆಂಬುದರಲ್ಲಿ ಸಂದೇಹವಿಲ್ಲ. ಆದರೂ ಯಾವುದೇ ರೀತಿಯಲ್ಲಿ ಅವನು ಸಂಧಾನ ಮಾಡಿಕೊಳ್ಳುವವನಾಗಿರಲಿಲ್ಲ. ವಾಸ್ತವದಲ್ಲಿ, ಓಬದ್ಯನು ‘ಯೆಹೋವನಲ್ಲಿ ಬಹುಭಯವುಳ್ಳವನಾಗಿದ್ದನು’ ಎಂದು 1 ಅರಸುಗಳು 18:4 ನಮಗೆ ತಿಳಿಸುತ್ತದೆ. ಹೌದು, ಓಬದ್ಯನಿಗಿದ್ದ ದೇವಭಯವು ಅಸಾಧಾರಣವಾಗಿತ್ತು! ಈ ಹಿತಕರವಾದ ಭಯವು, ಅವನಿಗೆ ಗಮನಾರ್ಹವಾದ ಧೈರ್ಯವನ್ನು ಕೊಟ್ಟಿತು. ಇದು, ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಕೊಂದ ಸಮಯದಲ್ಲಿ ಸುವ್ಯಕ್ತವಾಯಿತು.

19 ನಾವು ಓದುವುದು: “ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ . . . ಓಬದ್ಯನು ನೂರುಮಂದಿ ಪ್ರವಾದಿಗಳನ್ನು ತೆಗೆದುಕೊಂಡು ಅವರನ್ನು ಐವತ್ತೈವತ್ತು ಮಂದಿಯನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು ಅವರಿಗೆ ಅನ್ನಪಾನಗಳನ್ನು ಕೊಟ್ಟು ಸಾಕುತ್ತಿದ್ದನು.” (1 ಅರಸುಗಳು 18:⁠4) ನಿಮಗೆ ಭಾವಿಸಸಾಧ್ಯವಿರುವಂತೆ, ನೂರು ಮಂದಿ ಪುರುಷರಿಗೆ ಗುಪ್ತವಾಗಿ ಉಣಿಸುವುದು ಭಾರೀ ಅಪಾಯಕರವಾದ ಕೆಲಸವಾಗಿತ್ತು. ಓಬದ್ಯನು ಆಹಾಬ ಮತ್ತು ಈಜೆಬೆಲಳ ಕೈಗೆ ಸಿಕ್ಕಿಬೀಳುವುದರಿಂದ ತಪ್ಪಿಸಿಕೊಳ್ಳಬೇಕಾಗಿತ್ತು ಮಾತ್ರವಲ್ಲ, ಅರಮನೆಗೆ ಯಾವಾಗಲೂ ಹೋಗಿಬರುತ್ತಿದ್ದ ಆ 850 ಮಂದಿ ಸುಳ್ಳುಪ್ರವಾದಿಗಳು ಇದನ್ನು ಪತ್ತೆಹಚ್ಚದಂತೆಯೂ ನೋಡಿಕೊಳ್ಳಬೇಕಾಗಿತ್ತು. ಅದಲ್ಲದೆ, ಸಾಮಾನ್ಯ ಜನರಿಂದ ಹಿಡಿದು ಪ್ರಭುಗಳ ವರೆಗೆ, ದೇಶದಲ್ಲಿದ್ದ ಇತರ ಅನೇಕ ಮಿಥ್ಯಾರಾಧಕರು ರಾಜರಾಣಿಯರಿಂದ ಮೆಚ್ಚುಗೆಯನ್ನು ಗಳಿಸಲಿಕ್ಕಾಗಿ ಓಬದ್ಯನನ್ನು ಬಯಲಿಗೆಳೆಯಲು ಯಾವುದೇ ಅವಕಾಶವನ್ನು ಬಳಸುತ್ತಿದ್ದರೆಂಬುದರಲ್ಲಿ ಸಂಶಯವಿಲ್ಲ. ಇಂತಹ ಭ್ರಷ್ಟ ವಿಗ್ರಹಾರಾಧಕರ ಮಧ್ಯೆಯಲ್ಲಿದ್ದುಕೊಂಡೇ ಓಬದ್ಯನು ಧೈರ್ಯದಿಂದ ಯೆಹೋವನ ಪ್ರವಾದಿಗಳ ಅಗತ್ಯಗಳನ್ನು ಪೂರೈಸಿದನು. ದೇವಭಯವು ಎಷ್ಟು ಶಕ್ತಿಯುತವಾಗಿರಬಲ್ಲದು!

20 ದೇವಭಯದ ಮೂಲಕ ಧೈರ್ಯವನ್ನು ಪ್ರದರ್ಶಿಸಿದ ಕಾರಣ, ಯೆಹೋವನು ಓಬದ್ಯನನ್ನು ವೈರಿಗಳಿಂದ ಸಂರಕ್ಷಿಸಿದನೆಂಬುದು ವ್ಯಕ್ತ. “ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ” ಎನ್ನುತ್ತದೆ ಜ್ಞಾನೋಕ್ತಿ 29:25. ಓಬದ್ಯನು ಅತಿಮಾನುಷ ವ್ಯಕ್ತಿಯಾಗಿರಲಿಲ್ಲ; ನಮ್ಮಂತೆಯೇ ಅವನಿಗೂ ಸಿಕ್ಕಿಬಿದ್ದು ಕೊಲ್ಲಲ್ಪಡುವ ಭಯವಿತ್ತು. (1 ಅರಸುಗಳು 18:​7-9, 12) ಆದರೂ, ಯಾವುದೇ ಮಾನವಭಯವನ್ನು ಜಯಿಸುವ ಧೈರ್ಯವನ್ನು ದೇವಭಯವು ಅವನಿಗೆ ಕೊಟ್ಟಿತು. ಓಬದ್ಯನು ನಮಗೆ, ವಿಶೇಷವಾಗಿ, ತಮ್ಮ ಸ್ವಾತಂತ್ರ್ಯಕ್ಕೆ ಇಲ್ಲವೆ ಜೀವಕ್ಕೆ ಅಪಾಯವಿದ್ದರೂ ಯೆಹೋವನನ್ನು ಆರಾಧಿಸುತ್ತಿರುವವರೆಲ್ಲರಿಗೆ ಒಂದು ಉತ್ತಮ ಮಾದರಿಯಾಗಿದ್ದಾನೆ. (ಮತ್ತಾಯ 24:⁠9) ನಾವೆಲ್ಲರೂ ಸಹ “ಭಕ್ತಿಯಿಂದಲೂ ಭಯದಿಂದಲೂ” ಯೆಹೋವನನ್ನು ಸೇವಿಸಲು ಪ್ರಯತ್ನಿಸೋಣ.​—⁠ಇಬ್ರಿಯ 12:28.

21 ನಂಬಿಕೆ ಮತ್ತು ದೇವಭಯ​—⁠ಈ ಗುಣಗಳು ಮಾತ್ರ ಧೈರ್ಯವರ್ಧಕಗಳಲ್ಲ; ಪ್ರೀತಿ ಅದಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿರಬಲ್ಲದು. “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ [“ಸ್ವಸ್ಥಚಿತ್ತದ,” NW] ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ” ಎಂದು ಪೌಲನು ಬರೆದನು. (2 ತಿಮೊಥೆಯ 1:⁠7) ಈ ಕಠಿನವಾದ ಕೊನೆಯ ದಿನಗಳಲ್ಲಿ ನಾವು ಯೆಹೋವನನ್ನು ಧೈರ್ಯದಿಂದ ಸೇವಿಸಲು ಪ್ರೀತಿ ನಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ನಾವು ಮುಂದಿನ ಲೇಖನದಲ್ಲಿ ನೋಡುವೆವು.​—⁠2 ತಿಮೊಥೆಯ 3:⁠1. (w06 10/1)

[ಪಾದಟಿಪ್ಪಣಿ]

^ ಪ್ಯಾರ. 24 ಇವನು ಪ್ರವಾದಿ ಓಬದ್ಯನಲ್ಲ.

ಉತ್ತರಿಸಬಲ್ಲಿರಾ?

• ಯೆಹೋಶುವ ಮತ್ತು ಕಾಲೇಬರ ಧೈರ್ಯಕ್ಕೆ ಯಾವುದು ನೆರವು ನೀಡಿತು?

• ನಿಜ ನಂಬಿಕೆಯಲ್ಲಿ ಏನು ಒಳಗೂಡಿದೆ?

• ದೇವರ ನ್ಯಾಯತೀರ್ಪಿನ ಸಂದೇಶವನ್ನು ಸಾರಲು ಹನೋಕನು ಭಯಪಡಲಿಲ್ಲವೇಕೆ?

• ದೇವಭಯವು ಧೈರ್ಯಕ್ಕೆ ಇಂಬುಕೊಡುವುದು ಹೇಗೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಮಾನವ ದೃಷ್ಟಿಕೋನದಿಂದ ನೋಡುವಾಗ, ಇಸ್ರಾಯೇಲ್ಯರು ಕಾನಾನ್ಯರ ವಿರುದ್ಧ ಜಯಗಳಿಸುವ ಸಾಧ್ಯತೆಯ ಬಗ್ಗೆ ಏನು ಹೇಳಸಾಧ್ಯವಿದೆ? (ಬಿ) ಯೆಹೋಶುವನಿಗೆ ಯಾವ ಪುನರಾಶ್ವಾಸನೆ ದೊರಕಿತು?

3. ಯೆಹೋಶುವನ ನಂಬಿಕೆ ಮತ್ತು ಧೈರ್ಯಕ್ಕೆ ಯಾವುದು ನೆರವು ನೀಡಿತು?

4, 5. (ಎ) ಆ ಹತ್ತು ಮಂದಿ ಗೂಢಚಾರರ ಮನೋಭಾವವು, ಯೆಹೋಶುವ ಮತ್ತು ಕಾಲೇಬರದ್ದಕ್ಕೆ ಹೇಗೆ ಪ್ರತಿಕೂಲವಾಗಿತ್ತು? (ಬಿ) ಜನರ ನಂಬಿಕೆಯ ಕೊರತೆಗೆ ಯೆಹೋವನ ಪ್ರತಿವರ್ತನೆ ಏನಾಗಿತ್ತು?

6. ಧೈರ್ಯವು ನಂಬಿಕೆಗೆ ಯಾವ ವಿಧದಲ್ಲಿ ಸಂಬಂಧಿಸಿದೆ, ಮತ್ತು ಇದನ್ನು ಆಧುನಿಕ ಸಮಯಗಳಲ್ಲಿ ಹೇಗೆ ನೋಡಸಾಧ್ಯವಿದೆ?

7. ‘ಹಿಂದೆಗೆಯುವುದು’ ಎಂಬುದರ ಅರ್ಥವೇನು?

8, 9. (ಎ) ಆದಿ ಕ್ರೈಸ್ತರ ನಂಬಿಕೆಯನ್ನು ಯೆಹೋವನು ಹೇಗೆ ಬಲಪಡಿಸಿದನು? (ಬಿ) ನಮ್ಮ ನಂಬಿಕೆಯನ್ನು ವರ್ಧಿಸಲು ನಾವೇನು ಮಾಡಬಲ್ಲೆವು?

10. ನಿಜ ನಂಬಿಕೆಯಲ್ಲಿ ಏನೆಲ್ಲ ಒಳಗೂಡಿದೆ?

11. ಯೆಹೋಶುವ ಮತ್ತು ಕಾಲೇಬರು ತಮ್ಮ ನಂಬಿಕೆ ಮತ್ತು ಧೈರ್ಯಕ್ಕಾಗಿ ಯಾವ ವಿಧದಲ್ಲಿ ಆಶೀರ್ವದಿಸಲ್ಪಟ್ಟರು?

12. ಯೆಹೋವನು ತನ್ನ ‘ವಾಕ್ಯವನ್ನು ಘನಪಡಿಸುವುದು’ ಹೇಗೆ?

13, 14. ಹನೋಕನಿಗೆ ನಂಬಿಕೆ ಮತ್ತು ಧೈರ್ಯದ ಆವಶ್ಯಕತೆ ಏಕಿತ್ತು?

15. ಇಂದಿನ ಯೆಹೋವನ ಸೇವಕರಿಗೆ ಹನೋಕನು ಯಾವ ಉತ್ತಮ ಮಾದರಿಯನ್ನಿಟ್ಟನು?

16, 17. ಓಬದ್ಯನು ಯಾರು, ಮತ್ತು ಅವನು ಯಾವ ಸನ್ನಿವೇಶದಲ್ಲಿ ಜೀವಿಸುತ್ತಿದ್ದನು?

18. ಓಬದ್ಯನನ್ನು ಯಾವುದು ಯೆಹೋವನ ಅಸಾಧಾರಣ ಆರಾಧಕನಾಗಿ ಮಾಡಿತು?

19. ಓಬದ್ಯನ ಯಾವ ಕೃತ್ಯವು ಅವನ ಧೈರ್ಯವನ್ನು ವ್ಯಕ್ತಪಡಿಸಿತು?

20. ಓಬದ್ಯನಲ್ಲಿದ್ದ ದೇವಭಯವು ಅವನಿಗೆ ಹೇಗೆ ಸಹಾಯ ನೀಡಿತು, ಮತ್ತು ಅವನ ಮಾದರಿ ನಿಮಗೆ ಹೇಗೆ ಸಹಾಯಮಾಡುತ್ತದೆ?

21. ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

[ಪುಟ 19ರಲ್ಲಿರುವ ಚಿತ್ರ]

‘ಸ್ಥಿರಚಿತ್ತನಾಗಿರು [ಬಲವಾಗಿರು], ಧೈರ್ಯದಿಂದಿರು’ ಎಂದು ಯೆಹೋವನು ಯೆಹೋಶುವನಿಗೆ ಆಜ್ಞಾಪಿಸಿದನು

[ಪುಟ 20ರಲ್ಲಿರುವ ಚಿತ್ರ]

ಓಬದ್ಯನು ದೇವರ ಪ್ರವಾದಿಗಳನ್ನು ಪರಾಮರಿಸಿ ಕಾಪಾಡಿದನು

[ಪುಟ 21ರಲ್ಲಿರುವ ಚಿತ್ರ]

ಹನೋಕನು ದೇವರ ವಾಕ್ಯವನ್ನು ಧೈರ್ಯದಿಂದ ಸಾರಿಹೇಳಿದನು