ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಹೂಮ, ಹಬಕ್ಕೂಕ ಮತ್ತು ಚೆಫನ್ಯ ಪುಸ್ತಕಗಳ ಮುಖ್ಯಾಂಶಗಳು

ನಹೂಮ, ಹಬಕ್ಕೂಕ ಮತ್ತು ಚೆಫನ್ಯ ಪುಸ್ತಕಗಳ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ನಹೂಮ, ಹಬಕ್ಕೂಕ ಮತ್ತು ಚೆಫನ್ಯ ಪುಸ್ತಕಗಳ ಮುಖ್ಯಾಂಶಗಳು

ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದ ರಾಜಧಾನಿ ಸಮಾರ್ಯವನ್ನು ಅಶ್ಶೂರ್ಯ ಲೋಕಶಕ್ತಿ ಪಾಳುಗೆಡವಿದೆ. ಸುದೀರ್ಘ ಸಮಯದಿಂದ ಅಶ್ಶೂರ್ಯ ಯೆಹೂದಕ್ಕೆ ಬೆದರಿಕೆಯೊಡ್ಡುತ್ತಿದೆ. ಯೆಹೂದದ ಪ್ರವಾದಿ ನಹೂಮನಲ್ಲಿ ಅಶ್ಶೂರ್ಯದ ರಾಜಧಾನಿ ನಿನೆವೆಗಾಗಿ ಒಂದು ಸಂದೇಶವಿದೆ. ಆ ಸಂದೇಶ ಸಾ.ಶ.ಪೂ. 632ಕ್ಕಿಂತ ಮುಂಚೆ ಬರೆಯಲಾದ ನಹೂಮ ಎಂಬ ಬೈಬಲ್‌ ಪುಸ್ತಕದಲ್ಲಿದೆ.

ಮುಂದಿನ ಲೋಕಶಕ್ತಿ ಬಾಬೆಲ್‌ ಸಾಮ್ರಾಜ್ಯವಾಗಲಿದೆ. ಅದರಲ್ಲಿ ಕೆಲವೊಮ್ಮೆ ಕಸ್ದೀಯ ಅರಸರುಗಳು ಆಳಲಿದ್ದರು. ಹಬಕ್ಕೂಕ ಪುಸ್ತಕವನ್ನು ಪ್ರಾಯಶಃ ಸಾ.ಶ.ಪೂ. 628ರಲ್ಲಿ ಬರೆದು ಮುಗಿಸಲಾಗಿದೆ. ಅದರಲ್ಲಿ, ತೀರ್ಪು ವಿಧಿಸಲು ಯೆಹೋವನು ಭಾವೀ ಲೋಕಶಕ್ತಿಯಾಗಲಿದ್ದ ಬಾಬೆಲನ್ನು ತನ್ನ ಉಪಕರಣವಾಗಿ ಹೇಗೆ ಬಳಸುವನು ಮತ್ತು ಆ ಲೋಕಶಕ್ತಿಗೆ ಏನು ಸಂಭವಿಸುವುದೆಂಬದನ್ನು ಮುಂತಿಳಿಸಲಾಗಿದೆ.

ನಹೂಮ ಮತ್ತು ಹಬಕ್ಕೂಕರಿಗಿಂತ ಮೊದಲೇ ಯೆಹೂದದ ಪ್ರವಾದಿ ಚೆಫನ್ಯನು ಪ್ರವಾದಿಸುತ್ತಾನೆ. ಸಾ.ಶ.ಪೂ. 607ರಲ್ಲಿ ಯೆರೂಸಲೇಮ್‌ ನಾಶವಾಗುವ 40ಕ್ಕಿಂತ ಹೆಚ್ಚು ವರ್ಷಗಳ ಮುಂಚೆಯೇ, ಚೆಫನ್ಯನು ಯೆಹೂದಕ್ಕಾಗಿ ದಂಡನೆ ಮತ್ತು ನಿರೀಕ್ಷೆಯ ಸಂದೇಶವನ್ನು ಪ್ರಕಟಪಡಿಸುತ್ತಾನೆ. ಚೆಫನ್ಯ ಪುಸ್ತಕದಲ್ಲಿ ಇತರ ಜನಾಂಗಗಳ ವಿರುದ್ಧವೂ ದೈವೋಕ್ತಿಗಳಿವೆ.

“ಅಯ್ಯೋ, ರಕ್ತಮಯಪುರಿಯ ಗತಿಯನ್ನು ಏನೆಂದು ಹೇಳಲಿ!”

(ನಹೂಮ 1:1-3:19)

“ನಿನೆವೆಯ ವಿಷಯವಾದ ದೈವೋಕ್ತಿ”ಯನ್ನು ‘ದೀರ್ಘಶಾಂತನಾಗಿರುವ ಮತ್ತು ಅಪಾರ ಶಕ್ತಿಯ’ ದೇವರಾದ ಯೆಹೋವನು ಕೊಡುತ್ತಾನೆ. ತನ್ನ ಮರೆಹೊಕ್ಕುವವರಿಗೆ ಆತನು “ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗ” ಆಗಿದ್ದಾನಾದರೂ ನಿನೆವೆ ನಾಶವಾಗಲೇಬೇಕಾಗಿದೆ.—ನಹೂಮ 1:1, 3, 7.

‘ಯೆಹೋವನು ಯಾಕೋಬಿನ ಅತಿಶಯವನ್ನು ಪುನರುಜ್ಜೀವನಮಾಡುವನು.’ ಆದರೆ ‘ಸಿಂಹವು ತನ್ನ ಬೇಟೆಯನ್ನು ಸೀಳುವ’ ಹಾಗೆ ಅಶ್ಶೂರ್ಯವು ದೇವ ಜನರಲ್ಲಿ ಭೀತಿ ಹುಟ್ಟಿಸಿತು. ಯೆಹೋವನು ಹೇಳುವುದು: “ನಿನ್ನ [ನಿನೆವೆಯ] ರಥಗಳನ್ನು ಸುಟ್ಟು ಹೊಗೆಹಾಯಿಸುವೆನು, ಕತ್ತಿಯು ನಿನ್ನ ಪ್ರಾಯದ ಸಿಂಹಗಳನ್ನು ನುಂಗಿಬಿಡುವದು.” (ನಹೂಮ 2:2, 12, 13) “ಅಯ್ಯೋ, ರಕ್ತಮಯಪುರಿಯ [ನಿನೆವೆಯ] ಗತಿಯನ್ನು ಏನೆಂದು ಹೇಳಲಿ!” ಅದರ ‘ಸುದ್ದಿಯನ್ನು ಕೇಳಿದವರೆಲ್ಲರೂ ಚಪ್ಪಾಳೆಹಾಕುತ್ತಾ’ ಹರ್ಷಿಸುತ್ತಾರೆ.—ನಹೂಮ 3:1, 19.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:9—ನಿನೆವೆ ‘ಪೂರಾ ಹಾಳಾಗುವುದು’ ಯೆಹೂದಕ್ಕೆ ಯಾವ ಅರ್ಥದಲ್ಲಿರುವುದು? ಅದರರ್ಥ, ‘ಅಪಾಯವು ಎರಡನೆಯ ಸಲ ಉಂಟಾಗದು’ ಇಲ್ಲವೆ ಅಶ್ಶೂರ್ಯರ ಕಾಟದಿಂದ ಶಾಶ್ವತ ಪರಿಹಾರ ಸಿಗುವುದು. ನಿನೆವೆ ಅಸ್ತಿತ್ವದಲ್ಲೇ ಇಲ್ಲವೋ ಎಂಬಂತೆ ನಹೂಮನು ಹೇಳುವುದು: “ಆಹಾ, ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಪರ್ವತಗಳ ಮೇಲೆ ತ್ವರೆಪಡುತ್ತವೆ! ಯೆಹೂದವೇ, ನಿನ್ನ ಹಬ್ಬಗಳನ್ನು ಆಚರಿಸಿಕೋ.”—ನಹೂಮ 1:15.

2:6—ತೆರೆಯಲಾದ “ನದೀದ್ವಾರಗಳು” ಯಾವುವು? ಈ ದ್ವಾರಗಳು, ಟೈಗ್ರಿಸ್‌ ನದಿ ನಿನೆವೆಯ ಗೋಡೆಯಲ್ಲಿ ಉಂಟುಮಾಡಿದ ಬಿರುಕುಗಳನ್ನು ಸೂಚಿಸುತ್ತವೆ. ಸಾ.ಶ.ಪೂ. 632ರಲ್ಲಿ ನಿನೆವೆಯ ವಿರುದ್ಧ ಬಾಬೆಲ್‌ ಮತ್ತು ಮೇದ್ಯರ ಜಂಟಿ ಪಡೆಗಳು ಎದ್ದಾಗ ನಿನೆವೆಯು ಅಷ್ಟೊಂದು ಬೆದರಲಿಲ್ಲ. ಬಲು ಎತ್ತರವಾದ ಗೋಡೆಗಳ ಮರೆಯಲ್ಲಿರುವ ತಮ್ಮ ನಗರವು ಅಬೇಧ್ಯವೆಂದು ನಿನವೆಯ ಜನರು ನಿರಾತಂಕದಿಂದಿದ್ದರು. ಆದರೆ ಭಾರಿ ಮಳೆಯಿಂದಾಗಿ ಟೈಗ್ರಿಸ್‌ ನದಿಯು ಉಕ್ಕಿ ಹರಿಯಿತು. ಇತಿಹಾಸಕಾರ ಡೈಡೋರಸ್‌ ಎಂಬವರ ಪ್ರಕಾರ ಇದರಿಂದಾಗಿ “ಪಟ್ಟಣದ ಒಂದು ಭಾಗವು ಜಲಮಯವಾಯಿತು ಮಾತ್ರವಲ್ಲ ಸುಮಾರು ಉದ್ದಕ್ಕೆ ಪಟ್ಟಣದ ಗೋಡೆ ಕುಸಿದುಬಿತ್ತು.” ಹೀಗೆ ನದೀ ದ್ವಾರಗಳು ತೆರೆದವು ಮತ್ತು ಮುಂತಿಳಿಸಿದಂತೆ, ಒಣಗಿದ ಕೂಳೆ ಬೆಂಕಿಗೆ ತುತ್ತಾಗುವಂತೆ ನಿನೆವೆ ಕ್ಷಣಮಾತ್ರದಲ್ಲೇ ಕೈವಶವಾಯಿತು.—ನಹೂಮ 1:8-10.

3:4—ನಿನೆವೆಯು ಸೂಳೆಯಂತಿದ್ದದ್ದು ಹೇಗೆ? ನಿನೆವೆಯು ಜನಾಂಗಗಳಿಗೆ ಮಿತ್ರತ್ವ ಹಾಗೂ ಸಹಾಯದ ಮಾತುಕೊಟ್ಟಿತ್ತಾದರೂ ನಿಜಕ್ಕೂ ಆ ಜನಾಂಗಗಳ ಮೇಲೆ ದಬ್ಬಾಳಿಕೆ ನಡೆಸಿ ಅವರಿಗೆ ಮೋಸಮಾಡಿತು. ಉದಾಹರಣೆಗೆ ಅಶ್ಶೂರ್ಯವು ಯೆಹೂದದ ರಾಜ ಅಹಾಜನಿಗೆ ಸಿರಿಯ-ಇಸ್ರಾಯೇಲ್‌ ಮೈತ್ರಿಕೂಟದ ಒಳಸಂಚಿನ ವಿರುದ್ಧ ಒಂದಿಷ್ಟು ಸಹಾಯನೀಡಿತು. ಆದರೆ ಸಮಯಾನಂತರ ‘ಅಶ್ಶೂರದ ಅರಸನು ಅವನನ್ನು [ಅಹಾಜನನ್ನು] ಕುಗ್ಗಿಸಿದನು.’—2 ಪೂರ್ವಕಾಲವೃತ್ತಾಂತ 28:20.

ನಮಗಾಗಿರುವ ಪಾಠಗಳು:

1:2-6. ಯೆಹೋವನು, ತನಗೆ ಸಂಪೂರ್ಣ ಭಕ್ತಿಯನ್ನು ಕೊಡಲು ನಿರಾಕರಿಸಿದ ವೈರಿಗಳಿಗೆ ಮುಯ್ಯಿತೀರಿಸಿದನು. ಇದು, ಆತನು ತನ್ನ ಆರಾಧಕರಿಂದ “ಸಂಪೂರ್ಣ ಭಕ್ತಿಯನ್ನು” ಅಪೇಕ್ಷಿಸುತ್ತಾನೆ ಎಂಬದನ್ನು ತೋರಿಸುತ್ತದೆ.—ವಿಮೋಚನಕಾಂಡ 20:5, NW.

1:10. ನೂರಾರು ಕೋಟೆಗಳಿದ್ದು ಸುತ್ತಲೂ ಎತ್ತರವಾದ ಗೋಡೆಯಿದ್ದರೂ ಯೆಹೋವನು ನಿನೆವೆಯ ವಿರುದ್ಧ ನುಡಿದ ಮಾತುಗಳು ನಿಷ್ಫಲವಾಗಲೇ ಇಲ್ಲ. ಇಂದು ಸಹ ದೇವ ಜನರ ವೈರಿಗಳು ಯೆಹೋವನ ಪ್ರತಿಕೂಲ ತೀರ್ಪುಗಳಿಂದ ತಪ್ಪಿಸಿಕೊಳ್ಳಲಾರರು.—ಜ್ಞಾನೋಕ್ತಿ 2:22; ದಾನಿಯೇಲ 2:44.

‘ನೀತಿವಂತನೋ ಬದುಕುವನು’

(ಹಬಕ್ಕೂಕ 1:1-3:19)

ಹಬಕ್ಕೂಕ ಪುಸ್ತಕದ ಮೊದಲ ಎರಡು ಅಧ್ಯಾಯಗಳಲ್ಲಿ ಪ್ರವಾದಿ ಹಬಕ್ಕೂಕ ಮತ್ತು ಯೆಹೋವನ ಮಧ್ಯೆ ನಡೆದ ಸಂಭಾಷಣೆ ಇದೆ. ಯೆಹೂದದಲ್ಲಿ ನಡೆಯುತ್ತಿರುವ ಸಂಗತಿಗಳಿಂದ ಬೇಸತ್ತು ಹಬಕ್ಕೂಕನು ದೇವರನ್ನು ಕೇಳಿದ್ದು: “ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ?” ಅದಕ್ಕೆ ಉತ್ತರವಾಗಿ ಯೆಹೋವನಂದದ್ದು: “ಇಗೋ, ತೀಕ್ಷ್ಣವೂ ತೀವ್ರವೂ ಆದ ಕಸ್ದೀಯ ಜನಾಂಗವನ್ನು ಎಬ್ಬಿಸುತ್ತಿದ್ದೇನೆ.” ಯೆಹೋವನು “ಕೆಡುಕರನ್ನು” ಬಳಸಿ ಯೆಹೂದವನ್ನು ದಂಡಿಸಲಿದ್ದಾನೆಂದು ತಿಳಿದು ಪ್ರವಾದಿ ಆಶ್ಚರ್ಯಪಡುತ್ತಾನೆ. (ಹಬಕ್ಕೂಕ 1:3, 6, 13) ನೀತಿವಂತನು ಬದುಕುವನು ಮತ್ತು ವೈರಿಗೆ ತೀರ್ಪು ತಪ್ಪದೆಂಬ ಆಶ್ವಾಸನೆ ಹಬಕ್ಕೂಕನಿಗೆ ಸಿಗುತ್ತದೆ. ಅದಲ್ಲದೆ, ಕಸ್ದೀಯ ವೈರಿಗಳ ಮೇಲೆ ಎರಗಲಿರುವ ಐದು ವಿಪತ್ತುಗಳ ಕುರಿತು ಹಬಕ್ಕೂಕನು ದಾಖಲಿಸುತ್ತಾನೆ.—ಹಬಕ್ಕೂಕ 2:4.

ಪ್ರಲಾಪ ‘ರಾಗಗಳನ್ನು’ ಹಾಡಿ ಹಬಕ್ಕೂಕನು ಕರುಣೆಗಾಗಿ ಪ್ರಾರ್ಥಿಸುತ್ತಾ ಕೆಂಪು ಸಮುದ್ರದಲ್ಲಿ, ಅರಣ್ಯದಲ್ಲಿ ಮತ್ತು ಯೆರಿಕೋವಿನಲ್ಲಾದ ಯೆಹೋವನ ಭಯಪ್ರೇರಕ ಶಕ್ತಿಯ ಪ್ರದರ್ಶನಗಳನ್ನು ನೆನಪಿಗೆ ತರುತ್ತಾನೆ. ಅರ್ಮಗೆದ್ದೋನಿನಲ್ಲಿ ವಿನಾಶಕ ರೋಷದಿಂದ ಯೆಹೋವನು ಮುನ್ನಡೆಯುವುದರ ಕುರಿತೂ ಪ್ರವಾದಿ ಭವಿಷ್ಯನುಡಿಯುತ್ತಾನೆ. ಅವನ ಪ್ರಾರ್ಥನೆ ಈ ಮಾತುಗಳೊಂದಿಗೆ ಸಮಾಪ್ತಿಗೊಳ್ಳುತ್ತದೆ: “ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕುಮಾಡಿ ನನ್ನ ಉನ್ನತಪ್ರದೇಶಗಳಲ್ಲಿ ನನ್ನನ್ನು ನಡಿಸುತ್ತಾನೆ.”—ಹಬಕ್ಕೂಕ 3:1, 19.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:5, 6—ಕಸ್ದೀಯರು ಯೆರೂಸಲೇಮಿನ ವಿರುದ್ಧ ಏಳುವರೆಂಬದು ಯೆಹೂದ್ಯರಿಗೆ ಏಕೆ ನಂಬಲಸಾಧ್ಯವಾಗಿ ತೋರಿರಬೇಕು? ಹಬಕ್ಕೂಕನು ಪ್ರವಾದಿಸಲು ಆರಂಭಿಸುವುದರೊಳಗೇ ಯೆಹೂದವು ಐಗುಪ್ತದ ಬಲವಾದ ಪ್ರಭಾವದಡಿ ಇತ್ತು. (2 ಅರಸುಗಳು 23:29, 30, 34) ಬಾಬೆಲಿನವರು ಹೆಚ್ಚೆಚ್ಚು ಬಲಿಷ್ಠರಾಗುತ್ತಿದ್ದರಾದರೂ ಅವರು ಫರೋಹ ನೆಕೋವಿನ ಸೈನ್ಯವನ್ನು ಇನ್ನೂ ಸೋಲಿಸಿರಲಿಲ್ಲ. (ಯೆರೆಮೀಯ 46:2) ಅದಲ್ಲದೆ, ಯೆಹೋವನ ಆಲಯವು ಯೆರೂಸಲೇಮಿನಲ್ಲಿತ್ತು ಮತ್ತು ಅಲ್ಲಿಂದ ದಾವೀದನ ವಂಶದವರು ಯಾವುದೇ ಅಡ್ಡಿತಡೆಯಿಲ್ಲದೆ ಆಳುತ್ತಿದ್ದರು. ಯೆರೂಸಲೇಮನ್ನು ನಾಶಮಾಡಲು ಕಸ್ದೀಯರನ್ನು ಅನುಮತಿಸುವ ಯೆಹೋವನ ‘ಕಾರ್ಯದ’ ಕುರಿತು ಆ ಸಮಯದಲ್ಲಿದ್ದ ಯೆಹೂದ್ಯರು ಕನಸುಮನಸ್ಸಲ್ಲೂ ನೆನಸಿರಲಿಲ್ಲ. ಹಬಕ್ಕೂಕನ ಮಾತುಗಳು ಎಷ್ಟೇ ನಂಬಲಸಾಧ್ಯವಾಗಿ ತೋರಿಬಂದಿದ್ದರೂ, ಬಾಬೆಲಿನವರಿಂದ ಆಗುವ ಯೆರೂಸಲೇಮಿನ ನಾಶನದ ಕುರಿತ ದರ್ಶನವು ಸಾ.ಶ.ಪೂ. 607ರಲ್ಲಿ ‘ಬಂದೇ ಬಂತು’ ಇಲ್ಲವೇ ನೆರವೇರಿಯೇ ತೀರಿತು.—ಹಬಕ್ಕೂಕ 2:3.

ನಮಗಾಗಿರುವ ಪಾಠಗಳು:

1:1-4; 1:12–2:1. ಹಬಕ್ಕೂಕನು ಯಥಾರ್ಥ ಪ್ರಶ್ನೆಗಳನ್ನು ಕೇಳಿದನು ಮತ್ತು ಯೆಹೋವನು ಉತ್ತರಿಸಿದನು. ಸತ್ಯ ದೇವರು ತನ್ನ ನಂಬಿಗಸ್ತ ಸೇವಕರ ಪ್ರಾರ್ಥನೆಗಳನ್ನು ಆಲಿಸುತ್ತಾನೆ.

2:1. ಹಬಕ್ಕೂಕನಂತೆ ನಾವು ಆಧ್ಯಾತ್ಮಿಕವಾಗಿ ಚುರುಕಾಗಿದ್ದು ಕ್ರಿಯಾಶೀಲರಾಗಿರಬೇಕು. ಅಲ್ಲದೆ ‘ಯೆಹೋವನು ಏನು ಹೇಳುತ್ತಾನೋ’ ಅದಕ್ಕೆ ತಕ್ಕಂತೆ ನಮ್ಮ ಯೋಚನಾಧಾಟಿಯನ್ನು ಹೊಂದಿಸಿಕೊಳ್ಳಲು ಸಹ ನಾವು ಸಿದ್ಧರಾಗಿರಬೇಕು.

2:3; 3:16. ಮುಂಬರುವ ಯೆಹೋವನ ದಿನಕ್ಕಾಗಿ ನಂಬಿಕೆಯಿಂದ ಕಾಯುತ್ತಿರುವಾಗ ನಮ್ಮ ತುರ್ತುಪ್ರಜ್ಞೆಯನ್ನು ನಾವು ಕಳೆದುಕೊಳ್ಳದಿರೋಣ.

2:4. ಬರಲಿರುವ ಯೆಹೋವನ ನ್ಯಾಯತೀರ್ಪಿನ ದಿನದಲ್ಲಿ ಪಾರಾಗಲು ನಾವು ನಂಬಿಗಸ್ತರಾಗಿ ತಾಳಿಕೊಳ್ಳಬೇಕು.—ಇಬ್ರಿಯ 10:36-38.

2:6, 7, 9, 12, 15, 19. ಅನ್ಯಾಯದ ಲಾಭಕ್ಕಾಗಿ ಹಾತೊರೆಯುವವನಿಗೆ, ಹಿಂಸಾಚಾರವನ್ನು ಪ್ರೀತಿಸುವವನಿಗೆ, ಅನೈತಿಕತೆಯಲ್ಲಿ ತೊಡಗಿರುವವನಿಗೆ ಅಥವಾ ವಿಗ್ರಹಾರಾಧನೆ ಮಾಡುವವನಿಗೆ ದುರ್ಗತಿಯು ಖಂಡಿತ. ಈ ಸ್ವಭಾವ ಹಾಗೂ ದುರಾಚಾರಗಳಿಂದ ದೂರವಿರಲು ನಾವು ಎಚ್ಚರವಹಿಸಬೇಕು.

2:11. ಈ ಲೋಕದ ದುಷ್ಟತನವನ್ನು ನಾವು ಬಯಲುಪಡಿಸದಿದ್ದರೆ, “ಗೋಡೆಯೊಳಗಿಂದ ಕಲ್ಲು ಕೂಗುವದು.” ರಾಜ್ಯದ ಸಂದೇಶವನ್ನು ನಾವು ಧೈರ್ಯದಿಂದ ಸಾರುತ್ತಾ ಇರುವುದು ಪ್ರಾಮುಖ್ಯ!

3:6. ಯೆಹೋವನು ತನ್ನ ತೀರ್ಪನ್ನು ವಿಧಿಸುವಾಗ ಯಾರೂ ಆತನಿಗೆ ಅಡ್ಡಬರಲಾರರು. ಪರ್ವತ ಹಾಗೂ ಗಿರಿಗಳಂತೆ ಶಾಶ್ವತವಾಗಿ ತೋರುವ ಮಾನವ ಸಂಘಟನೆಗಳು ಸಹ ಅದನ್ನು ತಡೆಯಲಾರವು.

3:13. ಅರ್ಮಗೆದ್ದೋನಿನ ನಾಶನವು ಸಿಕ್ಕಾಬಟ್ಟೆಯಾಗಿ ನಡೆಯುವುದಿಲ್ಲ ಎಂಬ ಆಶ್ವಾಸನೆ ನಮಗಿದೆ. ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ರಕ್ಷಿಸುವನು.

3:17-19. ಕಷ್ಟಸಂಕಟಗಳು ನಮಗೆ ಈಗಲೂ ಬರಬಹುದು, ಅರ್ಮಗೆದ್ದೋನಿನ ಸಮಯದಲ್ಲೂ ಬರಬಹುದು. ಆದರೂ ಯೆಹೋವನನ್ನು ನಾವು ಸಂತೋಷದಿಂದ ಸೇವಿಸುತ್ತಿರುವಾಗ ಆತನು ನಮಗೆ “ಬಲ” ಕೊಡುತ್ತಾನೆಂಬ ಭರವಸೆ ನಮಗಿರಬಲ್ಲದು.

“ಯೆಹೋವನ ದಿನವು ಸಮೀಪಿಸಿತು”

(ಚೆಫನ್ಯ 1:1-3:20)

ಬಾಳನ ಆರಾಧನೆಯು ಯೆಹೂದದಲ್ಲಿ ಎಲ್ಲೆಡೆಯೂ ವ್ಯಾಪಕವಾಗಿತ್ತು. ಯೆಹೋವನು ತನ್ನ ಪ್ರವಾದಿ ಚೆಫನ್ಯನ ಮೂಲಕ ಹೇಳಿದ್ದು: ‘ನಾನು ಯೆಹೂದದ ಮೇಲೂ ಯೆರೂಸಲೇಮಿನವರೆಲ್ಲರ ಮೇಲೂ ಕೈಯೆತ್ತುವೆನು.’ “ಯೆಹೋವನ ದಿನವು ಸಮೀಪಿಸಿತು” ಎಂದು ಚೆಫನ್ಯನು ಎಚ್ಚರಿಸಿದ್ದನು. (ಚೆಫನ್ಯ 1:4, 7, 14) ದೇವರ ಆವಶ್ಯಕತೆಗಳನ್ನು ಪೂರೈಸುವವರು ಮಾತ್ರ ಅಂದು ‘ಮರೆಯಾಗುವರು.’—ಚೆಫನ್ಯ 2:3.

“ಅಯ್ಯೋ, . . . ಹಿಂಸಕನಗರಿಯ [ಯೆರೂಸಲೇಮಿನ] ಗತಿಯನ್ನು ಏನು ಹೇಳಲಿ!” ‘ಯೆಹೋವನು ಇಂತೆನ್ನುತ್ತಾನೆ—ಹೀಗಿರಲು ನನ್ನನ್ನು ಕಾದುಕೊಂಡಿರ್ರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ; ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯ್ದು ಬಿಡುವೆನು.’ ಆದರೆ ದೇವರು ವಾಗ್ದಾನಿಸುವುದು: “ಆ ಕಾಲದಲ್ಲಿ ನಿಮ್ಮನ್ನು ಕರತರುವೆನು, ಹೌದು, ಆ ಕಾಲದಲ್ಲಿ ನಿಮ್ಮನ್ನು ಒಟ್ಟುಗೂಡಿಸುವೆನು; ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೆ ತಪ್ಪಿಸುವಾಗ ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿಸ್ತೋತ್ರಗಳಿಗೆ ಗುರಿಮಾಡುವೆನು.”—ಚೆಫನ್ಯ 3:1, 8, 20.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

3:9—‘ತುಟಿಗಳನ್ನು ಮಾರ್ಪಡಿಸಿ ಶುದ್ಧಮಾಡುವ’ ಅರ್ಥವೇನು? ಈ ವಾಕ್ಸರಣಿಯು ಮೂಲ ಭಾಷೆಯಲ್ಲಿ ‘ಶುದ್ಧ ಭಾಷೆಗೆ ಮಾರ್ಪಡಿಸುವುದು’ ಎಂಬ ಅರ್ಥವನ್ನು ಕೊಡುತ್ತದೆ. ಈ ಶುದ್ಧ ಭಾಷೆಯು ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸತ್ಯವಾಗಿದೆ. ಇದರಲ್ಲಿ ಬೈಬಲಿನ ಎಲ್ಲ ಬೋಧನೆಗಳು ಅಡಕವಾಗಿವೆ. ಸತ್ಯವನ್ನು ನಂಬುವ, ಅದನ್ನು ಸರಿಯಾಗಿ ಇತರರಿಗೆ ಕಲಿಸುವ ಮತ್ತು ದೇವರ ಚಿತ್ತಕ್ಕನುಸಾರವಾಗಿ ಜೀವಿಸುವ ಮೂಲಕ ನಾವು ಆ ಶುದ್ಧ ಭಾಷೆಯನ್ನಾಡುತ್ತೇವೆ.

ನಮಗಾಗಿರುವ ಪಾಠಗಳು:

1:8. ಚೆಫನ್ಯನ ದಿನದ ಕೆಲವರು ಪ್ರಾಯಶಃ ಸುತ್ತಣ ಜನಾಂಗಗಳವರ ಮೆಚ್ಚಿಕೆ ಪಡೆಯಲು ‘ವಿದೇಶವಸ್ತ್ರ ಧರಿಸುತ್ತಿದ್ದರು.’ ತದ್ರೀತಿಯ ವಿಧಾನಗಳ ಮೂಲಕ ಯೆಹೋವನ ಆರಾಧಕರು ಇಂದು ಲೋಕದೊಂದಿಗೆ ಬೆರೆಯಲು ಪ್ರಯತ್ನಿಸುವುದು ಎಂಥ ಮೂರ್ಖತನ!

1:12; 3:5, 16. ಯೆಹೋವನು ತನ್ನ ನಿರ್ಣಾಯಕ ತೀರ್ಪುಗಳ ಕುರಿತು ತನ್ನ ಜನರನ್ನು ಎಚ್ಚರಿಸಲು ಪ್ರವಾದಿಗಳನ್ನು ಕಳುಹಿಸುತ್ತಾ ಇದ್ದನು. ಅನೇಕ ಯೆಹೂದ್ಯರು ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸದಂತೆ ತಮ್ಮ ಜೀವನಕ್ರಮದಲ್ಲಿ ನೆಲೆಗೊಂಡು ಸಂದೇಶದ ಕಡೆಗೆ ಯಾವುದೇ ಪ್ರತಿಕ್ರಿಯೆಯನ್ನು ತೋರಿಸದಿದ್ದಾಗಲೂ ಯೆಹೋವನು ಪ್ರವಾದಿಗಳನ್ನು ಕಳುಹಿಸುತ್ತಿದ್ದನು. ಯೆಹೋವನ ಮಹಾ ದಿನ ಸಮೀಪಿಸುತ್ತಿದ್ದಂತೆ ಜನರು ತೋರಿಸುವ ಉದಾಸೀನ ಭಾವದಿಂದಾಗಿ ನಾವು ನಿಧಾನಗೊಂಡು ನಮ್ಮ ‘ಕೈಗಳು ಜೋಲುಬೀಳುವಂತೆ’ ಬಿಡಬಾರದು. ಬದಲಿಗೆ ರಾಜ್ಯ ಸಂದೇಶವನ್ನು ನಾವು ಎಡೆಬಿಡದೆ ಪ್ರಚುರಪಡಿಸಬೇಕು.

2:3. ಕೇವಲ ಯೆಹೋವನು ಮಾತ್ರ ತನ್ನ ಸಿಟ್ಟಿನ ದಿನದಲ್ಲಿ ನಮ್ಮನ್ನು ರಕ್ಷಿಸಬಲ್ಲನು. ಆತನ ಅನುಗ್ರಹದಲ್ಲಿ ಉಳಿಯಬೇಕಾದರೆ ಆತನ ವಾಕ್ಯವಾದ ಬೈಬಲನ್ನು ಜಾಗರೂಕತೆಯಿಂದ ಅಧ್ಯಯನಮಾಡಬೇಕು, ಪ್ರಾರ್ಥನೆಯ ಮೂಲಕ ಆತನ ಮಾರ್ಗದರ್ಶನ ಕೇಳಬೇಕು ಮತ್ತು ಆತನನ್ನು ಸಮೀಪಿಸಬೇಕು. ಈ ಮೂಲಕ ನಾವು ‘ಯೆಹೋವನನ್ನು ಆಶ್ರಯಿಸುವೆವು.’ ನೈತಿಕವಾದ ಶುದ್ಧ ಜೀವನವನ್ನು ನಡೆಸುವ ಮೂಲಕ ‘ಸದ್ಧರ್ಮವನ್ನು ಅಭ್ಯಾಸಿಸುವೆವು’. ಅಲ್ಲದೆ ‘ದೈನ್ಯವನ್ನು ಹೊಂದಲು’ ನಮ್ರ ಹಾಗೂ ಅಧೀನ ಮನೋಭಾವವನ್ನು ಬೆಳೆಸಿಕೊಳ್ಳುವೆವು.

2:4-15; 3:1-5. ಯೆಹೋವನು ನ್ಯಾಯತೀರ್ಪನ್ನು ವಿಧಿಸುವ ದಿನದಂದು ಪ್ರಾಚೀನ ಯೆರೂಸಲೇಮ್‌ ಮತ್ತು ಸುತ್ತಣ ಜನಾಂಗದವರು ಅನುಭವಿಸಿದ ಪಾಡನ್ನೇ ದೇವಜನರ ಮೇಲೆ ದಬ್ಬಾಳಿಕೆ ನಡೆಸಿದ ಕ್ರೈಸ್ತಪ್ರಪಂಚದವರು ಮತ್ತು ಎಲ್ಲ ರಾಷ್ಟ್ರಗಳವರು ಅನುಭವಿಸುವರು. (ಪ್ರಕಟನೆ 16:14, 16; 18:4-8) ದೇವರ ತೀರ್ಪುಗಳನ್ನು ನಾವು ನಿರ್ಭೀತಿಯಿಂದ ಪ್ರಚುರಪಡಿಸುತ್ತಾ ಇರಬೇಕು.

3:8, 9. ಯೆಹೋವನ ದಿನವನ್ನು ಎದುರುನೋಡುತ್ತಿರುವಾಗ ಶುದ್ಧ ಭಾಷೆಯನ್ನಾಡಲು ಕಲಿಯುವ ಮೂಲಕ ಮತ್ತು ದೇವರಿಗೆ ವೈಯಕ್ತಿಕ ಸಮರ್ಪಣೆ ಮಾಡಿ ‘ಆತನ ಹೆಸರನ್ನೆತ್ತುವ’ ಮೂಲಕ ನಾವು ಪಾರಾಗಲು ಸಿದ್ಧತೆಗಳನ್ನು ಮಾಡುತ್ತೇವೆ. ಮತ್ತು ಯೆಹೋವನ ಸೇವೆಯನ್ನು ಆತನ ಜನರೊಂದಿಗೆ “ಏಕಮನಸ್ಸಿನಿಂದ” ಮಾಡಿ ಆತನಿಗೆ “ಸ್ತೋತ್ರಯಜ್ಞವನ್ನು” ಕೊಡುಗೆಯಾಗಿ ಅರ್ಪಿಸುತ್ತೇವೆ.—ಇಬ್ರಿಯ 13:15.

“ಬಹು ತ್ವರೆಯಾಗಿ ಬರುತ್ತಿದೆ”

ಕೀರ್ತನೆಗಾರನು ಹಾಡಿದ್ದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.” (ಕೀರ್ತನೆ 37:10) ನಹೂಮ ಪುಸ್ತಕದಲ್ಲಿ ನಿನೆವೆಯ ಮತ್ತು ಹಬಕ್ಕೂಕ ಪುಸ್ತಕದಲ್ಲಿ ಬಾಬೆಲ್‌ ಹಾಗೂ ಧರ್ಮಭ್ರಷ್ಟ ಯೆಹೂದದ ಕುರಿತು ಮುಂತಿಳಿಸಲಾದ ವಿಚಾರಗಳನ್ನು ನಾವು ಪರ್ಯಾಲೋಚಿಸುವಾಗ, ಕೀರ್ತನೆಗಾರನ ಮಾತುಗಳು ಖಂಡಿತವಾಗಿಯೂ ಸುಳ್ಳಾಗುವುದಿಲ್ಲ ಎಂಬುದು ನಮಗೆ ಸ್ಪಷ್ಟವಾಗುತ್ತದೆ. ಹಾಗಿದ್ದರೂ ನಾವು ಇನ್ನೆಷ್ಟು ಕಾಲ ಕಾದಿರಬೇಕು?

ಚೆಫನ್ಯ 1:14 ಹೇಳುವುದು: “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.” ಆ ದಿನದಂದು ನಾವು ಹೇಗೆ ಮರೆಯಾಗಸಾಧ್ಯವಿದೆ ಮತ್ತು ಪಾರಾಗುವಿಕೆಗಾಗಿ ಸಿದ್ಧರಾಗಲು ನಾವು ಈಗ ಏನು ಮಾಡಬೇಕು ಎಂಬುದನ್ನು ಸಹ ಚೆಫನ್ಯನ ಪುಸ್ತಕವು ತೋರಿಸುತ್ತದೆ. ಹೌದು, ‘ದೇವರ ವಾಕ್ಯವು ಸಜೀವವಾಗಿದ್ದು, ಕಾರ್ಯಸಾಧಕವಾಗಿದೆ.’—ಇಬ್ರಿಯ 4:12. (w07 11/15)

[ಪುಟ 8ರಲ್ಲಿರುವ ಚಿತ್ರಗಳು]

ನಿನೆವೆಯ ಬೃಹತ್‌ ಗೋಡೆಗಳು ನಹೂಮನ ಪ್ರವಾದನೆಯ ನೆರವೇರಿಕೆಯನ್ನು ತಡೆಯಶಕ್ತವಾಗಲಿಲ್ಲ

[ಕೃಪೆ]

Randy Olson/National Geographic Image Collection