ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತಿನೆಲ್ಲೆಡೆಯಿಂದ ಒಂದು ಬೇಡಿಕೆ

ಜಗತ್ತಿನೆಲ್ಲೆಡೆಯಿಂದ ಒಂದು ಬೇಡಿಕೆ

ಜಗತ್ತಿನೆಲ್ಲೆಡೆಯಿಂದ ಒಂದು ಬೇಡಿಕೆ

ಲಕ್ಷಗಟ್ಟಲೆ, ಅಷ್ಟೇಕೆ ಕೋಟಿಗಟ್ಟಲೆ ಜನರು ಒಂದೇ ವಿಷಯಕ್ಕಾಗಿ ಭಿನ್ನಹಿಸುವುದರ ಕುರಿತು ತುಸು ಕಲ್ಪಸಿಕೊಳ್ಳಿ. ವಿಶ್ವದ ಅತ್ಯುನ್ನತ ಅಧಿಕಾರಿಯ ಮುಂದೆ ಅವರೆಲ್ಲರೂ ಒಂದು ವಿಶೇಷ ಬೇಡಿಕೆಯನ್ನು ಪೂರೈಸುವಂತೆ ಕೇಳುತ್ತಿದ್ದಾರೆ. ಆದರೆ ತಾವು ಯಾವುದಕ್ಕಾಗಿ ಬೇಡುತ್ತಿದ್ದೇವೆಂದು ಅವರಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಈ ರೀತಿ ತಮಗೆ ತಿಳಿಯದ ಒಂದು ವಿಷಯಕ್ಕಾಗಿ ಬೇಡಿಕೊಳ್ಳಸಾಧ್ಯವೇ? ನಿಜ ಹೇಳಬೇಕಾದರೆ ಇದು ದಿನನಿತ್ಯದ ಕಥೆಯಾಗಿದೆ. ಈ ಎಲ್ಲ ಜನರು ಏತಕ್ಕಾಗಿ ಬೇಡುತ್ತಿದ್ದಾರೆ? ದೇವರ ರಾಜ್ಯ ಬರುವುದಕ್ಕಾಗಿಯೇ!

ಒಂದು ಅಂದಾಜಿಗನುಸಾರ, ಯೇಸು ಕ್ರಿಸ್ತನು ತಮ್ಮ ನಾಯಕನೆಂದು ಮತ್ತು ತಾವು ಕ್ರೈಸ್ತರೆಂದು ಹೇಳಿಕೊಳ್ಳುವ ಸುಮಾರು 37,000 ಧರ್ಮಗಳಿವೆ. ಆ ಧರ್ಮಗಳಿಗೆ ಸೇರಿದವರ ಸಂಖ್ಯೆಯು ಇನ್ನೂರು ಕೋಟಿಗಿಂತ ಅಧಿಕವಾಗಿದೆ. ಇವರಲ್ಲಿ ಹೆಚ್ಚಿನವರು, ‘ಪರಲೋಕದಲ್ಲಿರುವ ನಮ್ಮ ತಂದೆಯೇ’ ಎಂದು ಕರೆಯಲಾಗುವ ಪ್ರಾರ್ಥನೆಯನ್ನು ಅಥವಾ ‘ಕರ್ತನ ಪ್ರಾರ್ಥನೆಯನ್ನು’ ಮಾಡುತ್ತಾರೆ. ಯೇಸು ತನ್ನ ಶಿಷ್ಯರಿಗೆ ಕಲಿಸಿದ ಆ ಪ್ರಾರ್ಥನೆ ನಿಮಗೆ ಗೊತ್ತಿದೆಯೇ? ಅದು ಹೀಗೆ ಆರಂಭಗೊಳ್ಳುತ್ತದೆ: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:9, 10.

ನೂರಾರು ವರ್ಷಗಳಿಂದ ಚರ್ಚುಗಳಲ್ಲಿ ಭಕ್ತಾದಿಗಳು ಈ ಪ್ರಾರ್ಥನೆಯ ಸಾಲುಗಳನ್ನು ಶ್ರದ್ಧೆಯಿಂದ ಪಠಿಸುತ್ತಿದ್ದಾರೆ. ಅದನ್ನು ಒಳ್ಳೆಯ ಹಾಗೂ ಕೆಟ್ಟ ಸಂದರ್ಭಗಳಲ್ಲಿ, ಕುಟುಂಬಗಳಾಗಿ ಮತ್ತು ವ್ಯಕ್ತಿಗತವಾಗಿ ಜಪಿಸುತ್ತಾರೆ. ಕೆಲವರು ಆ ಪ್ರಾರ್ಥನೆಯನ್ನು ಶ್ರದ್ಧೆ-ಭಕ್ತಿಯಿಂದ ಮನಸಾರೆ ಹೇಳಿದರೆ, ಇನ್ನಿತರರು ಕಂಠಪಾಠಮಾಡಿ ಅದರ ಅರ್ಥಕ್ಕೆ ಹೆಚ್ಚೇನು ಗಮನಕೊಡದೆ ಉಚ್ಚರಿಸುತ್ತಾರೆ. ಹೀಗೆ, ದೇವರ ರಾಜ್ಯ ಬರಲಿ ಎಂದು ಹರಸಿ ಬೇಡುವವರು ಕೇವಲ ಕ್ರೈಸ್ತರೆಂದು ಹೇಳಿಕೊಳ್ಳುವವರು ಮಾತ್ರವೇ ಅಲ್ಲ.

ಎಲ್ಲ ಎಲ್ಲೆಗಳನ್ನು ದಾಟುವ ಬೇಡಿಕೆ

‘ಕ್ಯಾಡಿಷ್‌ ಪ್ರಾರ್ಥನಾ ಗೀತೆ’ಯು ಯೆಹೂದ್ಯರ ಪ್ರಸಿದ್ಧ ಪ್ರಾರ್ಥನೆಯಾಗಿದೆ. ಅವರದನ್ನು ಪ್ರತಿದಿನ ದೇವಾಲಯದಲ್ಲಾಗಲಿ ಆಪ್ತಸಂಬಂಧಿಯ ಮರಣದ ಸಮಯದಲ್ಲಾಗಲಿ ಹೇಳುತ್ತಾರೆ. ಅದು ನಿರ್ದಿಷ್ಟವಾಗಿ ದುಃಖ-ಮರಣದ ಕುರಿತಾಗಿರದಿದ್ದರೂ ಸಾಮಾನ್ಯವಾಗಿ ಶೋಕದ ಸಂದರ್ಭಗಳಲ್ಲಿ ಅವರದನ್ನು ಹೇಳುತ್ತಾರೆ. ಆ ಪ್ರಾರ್ಥನೆಯ ವಿನಂತಿಯು ಹೀಗಿದೆ: “ಆತನು [ದೇವರು] ತನ್ನ ರಾಜ್ಯವನ್ನು ನಿಮ್ಮ ಜೀವಮಾನದಲ್ಲೇ ತರಲಿ, . . . ಬಲುಬೇಗನೆ ತರಲಿ.” * ಇನ್ನೊಂದು ಪ್ರಾಚೀನ ಯೆಹೂದಿ ದೇವಾಲಯದ ಪ್ರಾರ್ಥನೆಯು, ದಾವೀದನ ಮನೆತನದಿಂದ ಬರುವ ಮೆಸ್ಸೀಯ ರಾಜ್ಯದ ನಿರೀಕ್ಷೆಯ ಕುರಿತಾಗಿದೆ.

ಕ್ರೈಸ್ತರಲ್ಲದವರಿಗೂ ದೇವರ ರಾಜ್ಯದ ವಿಚಾರವು ಆಕರ್ಷಕವಾಗಿದೆ. ದ ಟೈಮ್ಸ್‌ ಆಫ್‌ ಇಂಡಿಯಾ ವರದಿಸಿದ ಪ್ರಕಾರ ಹಿಂದೂ, ಮುಸಲ್ಮಾನ್‌ ಮತ್ತು ಕ್ರೈಸ್ತರ ನಂಬಿಕೆಗಳ ಅಂತರವನ್ನು ತೆಗೆದುಹಾಕಲು ಪ್ರಯತ್ನಿಸಿದ 19ನೇ ಶತಮಾನದ ಭಾರತದ ಧಾರ್ಮಿಕ ಮುಖಂಡನು ಹೇಳಿದ್ದು: “ಪೂರ್ವ ಮತ್ತು ಪಶ್ಚಿಮ ಒಂದಾಗುವ ತನಕ ದೇವರ ರಾಜ್ಯವು ಬಾರದು.” ಆಸ್ಟ್ರೇಲಿಯದ ಸ್ಟ್ರ್ಯಾತ್‌ಫೀಲ್ಡ್‌ನಲ್ಲಿರುವ ಇಸ್ಲಾಮಿಕ ಕಾಲೇಜಿನ ಮುಖ್ಯೋಪಾಧ್ಯಾಯಿನಿಯು ಇತ್ತೀಚೆಗೆ ಒಂದು ವಾರ್ತಾಪತ್ರಿಕೆಗೆ ತಿಳಿಸಿದ್ದು: “ಎಲ್ಲ ಮುಸಲ್ಮಾನರಂತೆ ನಾನು ಸಹ ಯೇಸು ಪುನಃ ಬಂದು ದೇವರ ರಾಜ್ಯವನ್ನು ಸ್ಥಾಪಿಸುವನೆಂಬುದನ್ನು ನಂಬುತ್ತೇನೆ.”

ದೇವರ ರಾಜ್ಯವನ್ನು ನಂಬಿ ಅದಕ್ಕಾಗಿ ಬೇಡುವ ಜನರು ಕೋಟಿಗಟ್ಟಲೆ ಇದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಒಂದು ಆಸಕ್ತಿಯ ವಾಸ್ತವಾಂಶವನ್ನು ಪರಿಗಣಿಸಿರಿ.

ಈ ಪತ್ರಿಕೆಯನ್ನು ಪ್ರಕಾಶಿಸುತ್ತಿರುವ ಯೆಹೋವನ ಸಾಕ್ಷಿಗಳಾದ ನಾವು ನಿಮ್ಮ ವಠಾರದಲ್ಲಿರುವ ಮನೆಮನೆಗಳಿಗೆ ಹೋಗಿ ಜನರೊಂದಿಗೆ ಬೈಬಲಿನ ಕುರಿತು ಮಾತಾಡುತ್ತೇವೆ ಎಂಬುದು ಬಹುಶಃ ನಿಮಗೆ ತಿಳಿದಿರಬಹುದು. ಈ ಕೆಲಸವನ್ನು ನಾವು ಲೋಕದಾದ್ಯಂತ ಪ್ರಸ್ತುತವಾಗಿ 236 ದೇಶಗಳಲ್ಲಿ, 400ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಮಾಡುತ್ತಿದ್ದೇವೆ. ನಮ್ಮ ಸಾರುವಿಕೆಯ ಮುಖ್ಯವಿಷಯ ದೇವರ ರಾಜ್ಯವಾಗಿದೆ. ಅಲ್ಲದೆ ಈ ಪತ್ರಿಕೆಯ ಪೂರ್ಣ ಹೆಸರು ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬುದನ್ನು ಗಮನಿಸಿರಿ. ಆ ರಾಜ್ಯಕ್ಕಾಗಿ ನೀವು ಪ್ರಾರ್ಥಿಸುತ್ತಿದ್ದೀರೋ ಎಂದು ನಾವು ಅನೇಕವೇಳೆ ಜನರನ್ನು ಕೇಳುತ್ತೇವೆ. ಹೆಚ್ಚಿನವರು ಹೌದೆನ್ನುತ್ತಾರೆ. ಆದರೆ ಆ ರಾಜ್ಯ ಏನಾಗಿದೆ ಎಂದು ಕೇಳುವಾಗ ಅನೇಕರು, “ನನಗೆ ಗೊತ್ತಿಲ್ಲ” ಎಂದು ಹೇಳಿಬಿಡುತ್ತಾರೆ. ಇಲ್ಲವೆ, ಅವರ ಉತ್ತರ ಅಸ್ಪಷ್ಟವಾಗಿದ್ದು ಅನಿಶ್ಚಿತವಾಗಿರುತ್ತದೆ.

ದೇವರ ರಾಜ್ಯವು ಏನಾಗಿದೆ ಎಂದು ತಿಳಿಯದೆ ಅದು ಬರಲಿ ಎಂದು ಇಷ್ಟೊಂದು ಜನರು ಬೇಡುತ್ತಿರುವುದೇಕೆ? ಅದು ಜಟಿಲವಾದ ಅಸ್ಪಷ್ಟ ಕಲ್ಪನೆಯಾದ ಮಾತ್ರಕ್ಕೋ? ಇಲ್ಲ. ಬೈಬಲಿನಲ್ಲಿ ಈ ರಾಜ್ಯದ ಕುರಿತ ಸಂಪೂರ್ಣ ವಿವರಣೆಯನ್ನು ಸ್ಪಷ್ಟವಾಗಿ ಕೊಡಲಾಗಿದೆ. ಇನ್ನೂ ಹೆಚ್ಚಾಗಿ, ಈ ರಾಜ್ಯದ ಕುರಿತಾಗಿ ಬೈಬಲ್‌ ತಿಳಿಸುವ ಸಂದೇಶವು ಈ ಕರಾಳ ಸಮಯಗಳಲ್ಲಿ ನಿಮಗೆ ನಿರೀಕ್ಷೆಯ ಹೊಂಗಿರಣವಾಗಿರಬಲ್ಲದು. ಆ ನಿರೀಕ್ಷೆಯನ್ನು ಬೈಬಲ್‌ ಹೇಗೆ ವಿವರಿಸುತ್ತದೆ ಎಂಬದನ್ನು ನಾವು ಮುಂದಿನ ಲೇಖನದಲ್ಲಿ ನೋಡೋಣ. ತದನಂತರದ ಲೇಖನದಲ್ಲಿ, ರಾಜ್ಯವು ಬರಲಿ ಎಂದು ಯೇಸು ಮಾಡಿದ ಪ್ರಾರ್ಥನೆಗೆ ಉತ್ತರ ಯಾವಾಗ ಸಿಗುವುದು ಎಂಬದನ್ನು ನೋಡೋಣ. (w08 1/1)

[ಪಾದಟಿಪ್ಪಣಿ]

^ ಪ್ಯಾರ. 6 ಯೇಸು ಕಲಿಸಿದ ಕರ್ತನ ಪ್ರಾರ್ಥನೆಯಲ್ಲಿರುವಂತೆಯೇ ಕ್ಯಾಡಿಷ್‌ ಪ್ರಾರ್ಥನಾ ಗೀತೆಯಲ್ಲೂ ದೇವರ ನಾಮವು ಪವಿತ್ರವಾಗಲಿ ಎಂಬ ಬೇಡಿಕೆಯಿದೆ. ಕ್ಯಾಡಿಷ್‌ ಪ್ರಾರ್ಥನೆಯು ಕ್ರಿಸ್ತನ ಕಾಲದ್ದೋ ಅದಕ್ಕಿಂತ ಹಳೆಯದ್ದೋ ಎಂಬ ವಿಷಯದಲ್ಲಿ ವಾಗ್ವಾದ ನಡೆಯುತ್ತಿದೆ. ಹಾಗಿದ್ದರೂ ಕ್ಯಾಡಿಷ್‌ ಪ್ರಾರ್ಥನೆಗೆ ಕರ್ತನ ಪ್ರಾರ್ಥನೆಯೊಂದಿಗಿರುವ ಹೋಲಿಕೆಯು ನಮ್ಮನ್ನು ಅಚ್ಚರಿಗೊಳಿಸಬಾರದು. ಯೇಸು ಪ್ರಾರ್ಥನೆಯನ್ನು ಹೇಳಿಕೊಟ್ಟಾಗ ಅದು ವಿನೂತನವಾದದ್ದಾಗಿರಬೇಕೆಂದು ಉದ್ದೇಶಿಸಲಿಲ್ಲ. ಅದರ ಒಂದೊಂದು ಬೇಡಿಕೆಯೂ ಆಗಿನ ಎಲ್ಲ ಯೆಹೂದ್ಯರಿಗೆ ಲಭ್ಯವಾಗಿದ್ದ ಗ್ರಂಥದ ಮೇಲೆ ಪೂರ್ಣವಾಗಿ ಆಧರಿತವಾಗಿತ್ತು. ತನ್ನ ಜೊತೆಗಿದ್ದ ಯೆಹೂದ್ಯರು ತಾವು ಮುಂಚಿನಿಂದ ಪ್ರಾರ್ಥಿಸುತ್ತಿರಬೇಕಾಗಿದ್ದ ವಿಷಯಗಳಿಗಾಗಿ ಪ್ರಾರ್ಥಿಸಬೇಕೆಂದು ಯೇಸು ಪ್ರೋತ್ಸಾಹಿಸಿದನು.