ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವನು ಸತ್ಯಾರಾಧನೆಯನ್ನು ಸಮರ್ಥಿಸಿದನು

ಅವನು ಸತ್ಯಾರಾಧನೆಯನ್ನು ಸಮರ್ಥಿಸಿದನು

ಅವರ ನಂಬಿಕೆಯನ್ನು ಅನುಕರಿಸಿರಿ

ಅವನು ಸತ್ಯಾರಾಧನೆಯನ್ನು ಸಮರ್ಥಿಸಿದನು

ಎಲೀಯನು ಕಾರ್ಮೆಲ್‌ ಬೆಟ್ಟದ ಇಳುಕಲಿನಲ್ಲಿ ಪ್ರಯಾಸಪಟ್ಟು ಮೇಲೇರುತ್ತಿದ್ದ ಜನಸಂದಣಿಯನ್ನು ನೋಡಿದನು. ಆ ಜನರನ್ನು ಬಾಧಿಸುತ್ತಿದ್ದ ಬಡತನ ಮತ್ತು ಆಹಾರದ ಅಭಾವವು ಹೊತ್ತಾರೆಯ ನಸುಬೆಳಕಿನಲ್ಲಿಯೂ ಸ್ಪಷ್ಟವಾಗಿ ಕಾಣುತ್ತಿತ್ತು. ಮೂರೂವರೆ ವರುಷಗಳಿಂದ ಇದ್ದ ಬರಗಾಲ ಅವರನ್ನು ಬಡಕಲು ಸ್ಥಿತಿಗೆ ತಂದಿತ್ತು.

ಆ ಜನರ ಮಧ್ಯೆ ಬಾಳನ 450 ಮಂದಿ ಪ್ರವಾದಿಗಳು ಬಿಂಕದಿಂದ, ದುರಹಂಕಾರದಿಂದ ನಡೆಯುತ್ತಿದ್ದರು. ಅವರು ಯೆಹೋವನ ಪ್ರವಾದಿಯಾದ ಎಲೀಯನ ಮೇಲೆ ತೀವ್ರ ಹಗೆಯುಳ್ಳವರಾಗಿದ್ದರು. ಏಕೆಂದರೆ, ಈಜೆಬೆಲ್‌ ರಾಣಿ ಯೆಹೋವನ ಅನೇಕ ಸೇವಕರನ್ನು ಹತಿಸಿದ್ದರೂ ಈ ಎಲೀಯನು ಬಾಳಾರಾಧನೆಯ ವಿರುದ್ಧ ಇನ್ನೂ ಸ್ಥಿರವಾಗಿ ನಿಂತಿದ್ದನು. ಆಹಾ, ಎಷ್ಟು ದಿನ? ತಮ್ಮೆಲ್ಲರ ಎದುರಾಗಿ ಏಕಾಂಗಿಯಾಗಿ ಅವನೆಂದಿಗೂ ನಿಲ್ಲಲಾರ ಎಂದು ಅವರು ಪ್ರಾಯಶಃ ತರ್ಕಿಸಿದರು. (1 ಅರಸುಗಳು 18:3, 19, 20) ಆಹಾಬ ರಾಜನು ಸಹ ತನ್ನ ಭವ್ಯ ರಥದ ಮೇಲೆ ಸವಾರಿ ಮಾಡುತ್ತ ಅಲ್ಲಿಗೆ ಬಂದಿದ್ದನು. ಅವನಿಗೂ ಎಲೀಯನೆಂದರೆ ಇಷ್ಟವಿರಲಿಲ್ಲ.

ಒಬ್ಬಂಟಿಗನಾಗಿದ್ದ ಪ್ರವಾದಿಯ ಜೀವನದಲ್ಲಿ ಹಿಂದೆಂದೂ ಸಂಭವಿಸದಿದ್ದ ಘಟನೆಗಳು ಆ ದಿನದಲ್ಲಿ ನಡೆಯಲಿಕ್ಕಿತ್ತು. ನೋಡು ನೋಡುತ್ತಿದ್ದಂತೆಯೇ ಎಲೀಯನ ಕಣ್ಮುಂದೆ, ಲೋಕವು ಆ ವರೆಗೆ ಕಂಡಿರದ ನಾಟಕೀಯ ಹೋರಾಟಕ್ಕೆ ರಂಗವೊಂದು ಸಜ್ಜಾಗುತ್ತಿತ್ತು. ಇದು, ಒಳ್ಳೆದು ಮತ್ತು ಕೆಟ್ಟದ್ದರ ಮಧ್ಯೆ ನಡೆಯಲಿದ್ದ ಹೋರಾಟವಾಗಿತ್ತು. ಆ ದಿನದಲ್ಲಿ ಬೆಳಕು ಮೂಡುತ್ತಿದ್ದಂತೆ ಅವನಿಗೆ ಹೇಗನಿಸಿತು? “ನಮ್ಮಂಥ ಸ್ವಭಾವವುಳ್ಳವನಾಗಿದ್ದ” ಅವನು ಸಹ ಭಯದಿಂದ ವಿಚಲಿತನಾಗದೆ ಇರಲಿಲ್ಲ. (ಯಾಕೋಬ 5:17) ಸುತ್ತಮುತ್ತಲೂ ಇದ್ದ ನಂಬಿಕೆಯಿಲ್ಲದ ಜನರು, ಧರ್ಮಭ್ರಷ್ಟ ರಾಜ ಮತ್ತು ಕೊಲೆಗಡುಕ ಪುರೋಹಿತರ ಮುಂದೆ ತಾನು ತೀರ ಒಂಟಿಗನೆಂದು ಎಲೀಯನು ಭಾವಿಸಿದ್ದಂತೂ ಸ್ಪಷ್ಟ.—1 ಅರಸುಗಳು 18:22.

ಇಸ್ರಾಯೇಲನ್ನು ಈ ದುರವಸ್ಥೆಗೆ ಯಾವುದು ತಂದಿತ್ತು? ಈ ವೃತ್ತಾಂತದಿಂದ ಇಂದು ನೀವೇನನ್ನು ಕಲಿಯಬಲ್ಲಿರಿ? ದೇವರ ದೃಢನಿಷ್ಠೆಯ ಸೇವಕರನ್ನು ಗಮನಿಸಿ ‘ಅವರ ನಂಬಿಕೆಯನ್ನು ಅನುಕರಿಸುವಂತೆ’ ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಇಬ್ರಿಯ 13:7) ಈಗ ಎಲೀಯನ ಮಾದರಿಯನ್ನು ಪರಿಗಣಿಸಿರಿ.

ದೀರ್ಘಕಾಲ ಹೋರಾಟದ ಪರಾಕಾಷ್ಠೆ

ಎಲೀಯನು ತನ್ನ ಜೀವಮಾನದ ಹೆಚ್ಚಿನ ಸಮಯವನ್ನು, ತನ್ನ ಸ್ವದೇಶ ಮತ್ತು ತನ್ನ ಜನರಿಗೆ ಪ್ರಿಯವಾಗಿದ್ದ ಯೆಹೋವನ ಆರಾಧನೆಯು ಬದಿಗೆ ತಳ್ಳಲ್ಪಟ್ಟು ತುಳಿದುಹಾಕಲ್ಪಡುವುದನ್ನು ನಿಸ್ಸಹಾಯಕತೆಯಿಂದ ನೋಡುತ್ತ ಕಳೆದಿದ್ದನು. ಏಕೆಂದರೆ ಇಸ್ರಾಯೇಲು ಒಂದು ಹೋರಾಟ, ಒಂದು ಯುದ್ಧದಲ್ಲಿ ಸಿಕ್ಕಿಕೊಂಡಿತ್ತು. ಅದು, ಶುದ್ಧ ಮತ್ತು ಸುಳ್ಳು ಧರ್ಮಗಳ ಮಧ್ಯೆ, ಯೆಹೋವ ದೇವರ ಆರಾಧನೆ ಮತ್ತು ಸುತ್ತುಮುತ್ತಲಿನ ಜನಾಂಗಗಳ ವಿಗ್ರಹಾರಾಧನೆಯ ಮಧ್ಯೆ ನಡೆಯುತ್ತಿದ್ದ ಹೋರಾಟವಾಗಿತ್ತು. ಎಲೀಯನ ದಿನಗಳಲ್ಲಿಯಾದರೊ, ಈ ಹೋರಾಟವು ಹೆಚ್ಚು ದುಸ್ಥಿತಿಗಿಳಿದಿತ್ತು.

ಆಹಾಬ ರಾಜನು ಚೀದೋನ್‌ನ ರಾಜಕುವರಿ ಈಜೆಬೆಲಳನ್ನು ಮದುವೆಯಾಗಿದ್ದನು. ಈಜೆಬೆಲಳು ಬಾಳನ ಆರಾಧನೆಯನ್ನು ಇಸ್ರಾಯೇಲಿನಲ್ಲಿ ಹಬ್ಬಿಸಿ ಯೆಹೋವನ ಆರಾಧನೆಯನ್ನು ಕಿತ್ತೊಗೆಯಲು ಪಣತೊಟ್ಟಿದ್ದಳು. ಅವಳ ಪ್ರಭಾವಕ್ಕೆ ಆಹಾಬನು ಬೇಗನೆ ಮಣಿದನು. ಅವನು ಬಾಳನಿಗೆ ಒಂದು ಗುಡಿ ಮತ್ತು ವೇದಿಯನ್ನು ಕಟ್ಟಿ, ಈ ವಿಧರ್ಮಿ ದೇವರಿಗೆ ಅಡ್ಡಬೀಳುವುದರಲ್ಲಿ ನೇತೃತ್ವ ವಹಿಸಿದನು. ಹೀಗೆ ಇವನು ಯೆಹೋವನನ್ನು ಹೆಚ್ಚು ರೇಗಿಸಿದನು.—1 ಅರಸುಗಳು 16:30-33 *

ಬಾಳನ ಆರಾಧನೆಯು ಏಕೆ ತೀರಾ ಅಸಹ್ಯವಾಗಿತ್ತು? ಅದು ಇಸ್ರಾಯೇಲನ್ನು ಪಾಪಕ್ಕೆ ಪ್ರೇರಿಸಿ, ಅನೇಕರನ್ನು ಸತ್ಯ ದೇವರಿಂದ ದೂರಕ್ಕೆ ಸೆಳೆದಿತ್ತು. ಅದು ಭ್ರಷ್ಟ ಹಾಗೂ ಕ್ರೂರ ಧರ್ಮವೂ ಆಗಿತ್ತು. ದೇವಾಲಯದಲ್ಲಿ ಸ್ತ್ರೀಪುರುಷರ ವೇಶ್ಯಾವಾಟಿಕೆ, ಲೈಂಗಿಕ ಕಾಮಕೇಳಿಗಳು ಮತ್ತು ಶಿಶುಯಜ್ಞವೂ ಅದರಲ್ಲಿ ಒಳಗೂಡಿತ್ತು. ಈ ಕಾರಣದಿಂದ ಯೆಹೋವನು ಬರಗಾಲವನ್ನು ಪ್ರಕಟಿಸಲಿಕ್ಕಾಗಿ ಎಲೀಯನನ್ನು ಕಳುಹಿಸಿದನು. ದೇವರ ಪ್ರವಾದಿಯು ಆ ಬರದ ಅಂತ್ಯವನ್ನು ಪ್ರಕಟಪಡಿಸುವ ವರೆಗೆ ಅದು ಮುಂದುವರಿಯಲಿತ್ತು. (1 ಅರಸುಗಳು 17:1) ಎಲೀಯನು ಆಹಾಬನನ್ನು ಪುನಃ ಭೇಟಿಯಾಗಿ, ಜನರು ಮತ್ತು ಬಾಳನ ಪ್ರವಾದಿಗಳು ಕಾರ್ಮೆಲ್‌ ಬೆಟ್ಟದಲ್ಲಿ ಕೂಡಿಬರಬೇಕೆಂದು ಅವನಿಗೆ ಹೇಳಿದಾಗ ಕೆಲವು ವರುಷಗಳೇ ದಾಟಿಹೋಗಿದ್ದವು.

ಆದರೆ ಈ ಹೋರಾಟ ನಮಗೆ ಇಂದು ಯಾವ ಅರ್ಥದಲ್ಲಿದೆ? ಬಾಳನ ಗುಡಿಯಾಗಲಿ ವೇದಿಕೆಯಾಗಲಿ ನಮ್ಮ ಸುತ್ತಮುತ್ತಲಿಲ್ಲದ ಕಾರಣ, ಬಾಳನ ಆರಾಧನೆಯ ಕುರಿತ ಕಥೆ ಇಂದು ನಮಗೆ ಸಂಬಂಧಪಟ್ಟಿಲ್ಲ ಎಂದು ಕೆಲವರು ಭಾವಿಸಬಹುದು. ಆದರೆ ಈ ವೃತ್ತಾಂತ ಕೇವಲ ಪೂರ್ವಕಾಲದ ಇತಿಹಾಸ ಆಗಿರುವುದಿಲ್ಲ. (ರೋಮಾಪುರ 15:4) ಹೀಬ್ರುವಿನಲ್ಲಿ “ಬಾಳ” ಅಂದರೆ ಅರ್ಥ “ಒಡೆಯ” ಅಥವಾ “ಯಜಮಾನ” ಎಂದಾಗಿದೆ. “ಬಾಳ” ಎಂಬುದರ ಪದರೂಪವಾಗಿ ನಮ್ಮ ಬೈಬಲಿನಲ್ಲಿ “ಪತಿ” ಎಂಬ ಪದವನ್ನು ಉಪಯೋಗಿಸಲಾಗಿದೆ. ಇದಕ್ಕನುಸಾರ ಯೆಹೋವನು ತನ್ನನ್ನೇ “ಬಾಳ” ಅಥವಾ ಪತಿಸದೃಶ ಒಡೆಯನಾಗಿ ಆರಿಸಿಕೊಳ್ಳಬೇಕೆಂದು ತನ್ನ ಜನರಿಗೆ ಹೇಳಿದನು. (ಯೆಶಾಯ 54:5) ಜನರು ಇಂದು ಸಹ ಸರ್ವಶಕ್ತನಾದ ದೇವರನ್ನು ಬಿಟ್ಟು ಇತರ ಬೇರೆ ಬೇರೆ ಯಜಮಾನರನ್ನು ಸೇವಿಸುತ್ತಾರೆಂದು ನೀವು ಒಪ್ಪುವುದಿಲ್ಲವೊ? ಹೌದು, ಜನರು ಹಣ, ಉದ್ಯೋಗ, ವಿಹಾರ, ಲೈಂಗಿಕ ಸುಖಾನುಭವದ ಬೆನ್ನಟ್ಟುವಿಕೆಯಲ್ಲಿಯೇ ಕಳೆಯಲಿ ಅಥವಾ ಯೆಹೋವನ ಬದಲಿಗೆ ಅಸಂಖ್ಯಾತ ದೇವರನ್ನು ಪೂಜಿಸಲಿ, ಅವರು ಒಬ್ಬ ಯಜಮಾನನನ್ನು ಆರಿಸಿಕೊಂಡಿರುತ್ತಾರೆ. (ಮತ್ತಾಯ 6:24; ರೋಮಾಪುರ 6:16) ಹಾಗಾದರೆ, ಒಂದರ್ಥದಲ್ಲಿ ಬಾಳನ ಆರಾಧನೆಯ ಲಕ್ಷಣವಾಗಿರುವ ಅತಿ ಪ್ರಬಲವಾದ ವೈಶಿಷ್ಟ್ಯಗಳು ಇಂದು ಎಲ್ಲೆಡೆಯಲ್ಲೂ ರಾರಾಜಿಸುತ್ತಿವೆ. ಯೆಹೋವನು ಮತ್ತು ಬಾಳನು ಇವರಲ್ಲಿ ಯಾರು ಸತ್ಯ ದೇವರು ಎಂಬುದನ್ನು ತೋರಿಸಿಕೊಡಲು ಎಲೀಯನು ಮಾಡಿದ ಪರೀಕ್ಷೆಯ ದಾಖಲೆಯು ನಾವು ಯಾರನ್ನು ಸೇವಿಸಬೇಕು ಎಂಬ ವಿಷಯದಲ್ಲಿ ವಿವೇಕಯುತ ನಿರ್ಣಯಮಾಡಲು ನಮಗೆ ಸಹಾಯ ಮಾಡಬಲ್ಲದು.

‘ಎರಡು ಮನಸ್ಸುಳ್ಳವರು’—ಹೇಗೆ?

ಗಾಳಿ ರಭಸವಾಗಿ ಬಡಿಯುವ ಕಾರ್ಮೆಲ್‌ ಬೆಟ್ಟದ ಶಿಖರದಿಂದ ಇಸ್ರಾಯೇಲು ವಿಶಾಲವಾಗಿ ಕಾಣಿಸುತ್ತಿತ್ತು. ಸಮೀಪದಲ್ಲೇ ಇದ್ದ ಮೆಡಿಟರೇನಿಯನ್‌ ಸಮುದ್ರದ ಕೆಳಭಾಗದಲ್ಲಿರುವ ಕೀಷೋನ್‌ ತೊರೆಕಣಿವೆಯಿಂದ ಹಿಡಿದು ದೂರದ ಉತ್ತರ ದಿಗಂತದಲ್ಲಿ ಕಂಡುಬರುವ ಲೆಬನೋನಿನ ಪರ್ವತಸಾಲು ಆ ಶಿಖರದಿಂದ ಕಾಣುತ್ತಿತ್ತು. * ಆದರೆ ಈ ಪರಾಕಾಷ್ಠೆಯ ದಿನದಲ್ಲಿ ಸೂರ್ಯ ಉದಯಿಸಿದಾಗ ಇಸ್ರಾಯೇಲಿನ ಭೂಭಾಗದ ದೃಶ್ಯವು ಕರಾಳವಾಗಿತ್ತು. ಅಬ್ರಹಾಮನ ಸಂತತಿಗೆ ಯೆಹೋವನು ಒಮ್ಮೆ ಕೊಟ್ಟಿದ್ದ ಫಲವತ್ತಾದ ನೆಲದ ಮೇಲೆ ವಿನಾಶವು ಆವರಿಸಿತ್ತು. ದೇವರ ಸ್ವಂತ ಜನರ ಮೂರ್ಖತನದ ಕಾರಣ ಈಗ ಸೂರ್ಯನ ಕಡುತಾಪದಿಂದ ಸುಟ್ಟು ಬರಡಾಗಿದ್ದ ನೆಲ ಅಲ್ಲಿತ್ತು! ಜನರು ನೆರೆದು ಬಂದಾಗ, ಎಲೀಯನು ಅವರನ್ನು ಸಮೀಪಿಸಿ ಹೀಗೆಂದನು: “ನೀವು ಎಷ್ಟರ ವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ.”—1 ಅರಸುಗಳು 18:21.

‘ಎರಡು ಮನಸ್ಸುಳ್ಳವರು’ ಎಂದು ಎಲೀಯನು ಯಾವ ಅರ್ಥದಲ್ಲಿ ಹೇಳಿದನು? ಆ ಜನರು ತಾವು ಒಂದೋ ಯೆಹೋವನ ಆರಾಧನೆಯನ್ನು ಇಲ್ಲವೆ ಬಾಳನ ಆರಾಧನೆಯನ್ನು ಆರಿಸಿಕೊಳ್ಳಬೇಕೆಂದು ಗ್ರಹಿಸಲಿಲ್ಲ. ಎರಡೂ ಆರಾಧನೆಗಳನ್ನು ಮಾಡಬಹುದೆಂದು ಅವರೆಣಿಸಿದರು. ಅಸಹ್ಯವಾದ ಸಂಸ್ಕಾರಗಳ ಮೂಲಕ ಬಾಳನನ್ನು ತಣಿಸಿ, ಅದೇ ಸಮಯದಲ್ಲಿ ಯೆಹೋವ ದೇವರ ಅನುಗ್ರಹಕ್ಕಾಗಿ ಬೇಡಬಹುದೆಂದು ಅಭಿಪ್ರಯಿಸಿದರು. ಬಾಳನು ತಮ್ಮ ಬೆಳೆಗಳನ್ನೂ ಜಾನುವಾರುಗಳನ್ನೂ ಆಶೀರ್ವದಿಸುವಾಗ ‘ಸೇನಾಧೀಶ್ವರನಾದ’ ಯೆಹೋವನು ತಮ್ಮನ್ನು ಯುದ್ಧದಲ್ಲಿ ಕಾಪಾಡುವನೆಂದು ಅವರು ಪ್ರಾಯಶಃ ತರ್ಕಿಸಿದರು. (1 ಸಮುವೇಲ 17:45) ಯೆಹೋವನು ತನ್ನ ಆರಾಧನೆಯನ್ನು ಇನ್ನಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂಬ ಮೂಲ ಸತ್ಯವನ್ನು ಅವರು ಮರೆತುಬಿಟ್ಟಿದ್ದರು. ಆ ಸತ್ಯವನ್ನು ಇಂದು ಸಹ ಅನೇಕರು ಮನಗಾಣುವುದಿಲ್ಲ. ಯೆಹೋವನು ಸಂಪೂರ್ಣ ಭಕ್ತಿಯನ್ನು ಕೇಳಿಕೊಳ್ಳುತ್ತಾನೆ ಮತ್ತು ಅದಕ್ಕೆ ಅರ್ಹನೂ ಆಗಿದ್ದಾನೆ. ಇತರ ಆರಾಧನೆಯೊಂದಿಗೆ ಕಲಬೆರಕೆಗೊಂಡ ಯಾವ ಆರಾಧನೆಯನ್ನೂ ಆತನು ಸ್ವೀಕರಿಸುವುದಿಲ್ಲ. ಅದು ಆತನಿಗೆ ಅಸಹ್ಯ!—ವಿಮೋಚನಕಾಂಡ 20:5.

ಹೀಗೆ ಅವರು ಒಂದೇ ಸಮಯದಲ್ಲಿ ಎರಡು ದಾರಿಗಳಲ್ಲಿ ನಡೆಯಲು ಪ್ರಯತ್ನಿಸುವ ಮನುಷ್ಯನಂತೆ ‘ಎರಡು ಮನಸ್ಸುಳ್ಳವರಾಗಿದ್ದರು.’ ಜನರು ಇಂದು ಸಹ ಇಂಥ ತಪ್ಪನ್ನೇ ಮಾಡುತ್ತಾರೆ! ದೇವರ ಆರಾಧನೆಯನ್ನು ಬದಿಗೊತ್ತಿ ಬೇರೆ ‘ಬಾಳರು’ ನಿಧಾನವಾಗಿ ತಮ್ಮ ಜೀವನದೊಳಗೆ ನುಸುಳುವಂತೆ ಬಿಡುತ್ತಾರೆ. ಎರಡು ಮನಸ್ಸುಳ್ಳವರಾಗದಿರಲು ಎಲೀಯನು ಕೊಟ್ಟ ತುರ್ತು ಧ್ವನಿಯು ನಾವು ನಮ್ಮ ಆದ್ಯತೆಗಳನ್ನೂ ಆರಾಧನೆಯನ್ನೂ ಮರುಪರಿಶೀಲಿಸುವಂತೆ ಸಹಾಯ ನೀಡುತ್ತದೆ.

ಒಂದು ನಿರ್ಣಾಯಕ ಪರೀಕ್ಷೆ

ಎಲೀಯನು ಮುಂದಕ್ಕೆ ಒಂದು ಪರೀಕ್ಷೆಯ ಬಗ್ಗೆ ಪ್ರಸ್ತಾಪಿಸುತ್ತಾನೆ. ಅದು ತೀರ ಸರಳವಾದ ಪರೀಕ್ಷೆಯಾಗಿತ್ತು. ಬಾಳನ ಪುರೋಹಿತರು ಒಂದು ಯಜ್ಞವೇದಿಯನ್ನು ಕಟ್ಟಿ ಅದರ ಮೇಲೆ ಯಜ್ಞಪಶುವನ್ನು ಇಡಬೇಕಿತ್ತು. ಬಳಿಕ ಬೆಂಕಿಹಚ್ಚುವಂತೆ ತಮ್ಮ ದೇವರಿಗೆ ಪ್ರಾರ್ಥಿಸಬೇಕಾಗಿತ್ತು. ಎಲೀಯನೂ ಹಾಗೆಯೇ ಮಾಡಲಿದ್ದನು. ಅವನು ಹೇಳಿದ್ದು: “ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ [ಸತ್ಯ] ದೇವರು.” ಸತ್ಯದೇವರು ಯಾರೆಂದು ಎಲೀಯನಿಗೆ ಚೆನ್ನಾಗಿ ತಿಳಿದಿತ್ತು. ಅವನ ನಂಬಿಕೆ ಎಷ್ಟು ಬಲಾಢ್ಯವಾಗಿತ್ತೆಂದರೆ, ಬಾಳನ ಪ್ರವಾದಿಗಳು ಪ್ರಥಮವಾಗಿ ಪ್ರಾರ್ಥಿಸುವಂತೆ ಹೇಳಲು ಅವನು ಹಿಂಜರಿಯಲಿಲ್ಲ. ತನ್ನ ವಿರೋಧಿಗಳಿಗೆ ಅವನು ಪ್ರತಿಯೊಂದು ಅನುಕೂಲಕರ ಸೌಕರ್ಯವನ್ನೂ ಒದಗಿಸಿದನು. ಯಜ್ಞದ ಹೋರಿಯನ್ನು ಅವರೇ ಆರಿಸಬಹುದಾಗಿತ್ತು ಮತ್ತು ಮೊದಲು ಅವರೇ ಬಾಳನಿಗೆ ಮೊರೆಯಿಡಬಹುದಿತ್ತು. *1 ಅರಸುಗಳು 18:24, 25.

ನಾವು ಅದ್ಭುತಗಳಾಗುವ ಯುಗದಲ್ಲಿ ಜೀವಿಸುತ್ತಿಲ್ಲ. ಆದರೂ, ಯೆಹೋವನು ಮಾರ್ಪಟ್ಟಿರುವುದಿಲ್ಲ. ಆದುದರಿಂದ, ನಾವು ಎಲೀಯನಷ್ಟೆ ಭರವಸೆಯುಳ್ಳವರಾಗಿರಬಹುದು. ಉದಾಹರಣೆಗೆ, ಬೈಬಲ್‌ ಬೋಧನೆಯನ್ನು ಇತರರು ಒಪ್ಪದಿರುವಾಗ, ಅವರಿಗೆ ಏನನ್ನು ಹೇಳಲಿಕ್ಕಿದೆಯೋ ಅದನ್ನು ಮೊದಲು ಹೇಳುವಂತೆ ಬಿಡಲು ನಾವು ಹಿಂಜರಿಯಬಾರದು. ಎಲೀಯನಂತೆ, ಸತ್ಯ ದೇವರೇ ಸಂಗತಿಯನ್ನು ಪರಿಹರಿಸುವಂತೆ ನಾವು ಆತನ ಕಡೆಗೆ ನೋಡಬಹುದು. ನಾವಿದನ್ನು, ನಮ್ಮ ಮೇಲೆ ಹೊಂದಿಕೊಳ್ಳದೆ, ‘ತಿದ್ದುಪಾಟಿಗಾಗಿ’ ರಚಿಸಲ್ಪಟ್ಟಿರುವ ಆತನ ವಾಕ್ಯದ ಮೇಲೆ ಹೊಂದಿಕೊಳ್ಳುವ ಮೂಲಕ ಮಾಡುತ್ತೇವೆ.—2 ತಿಮೊಥೆಯ 3:16.

ಬಾಳನ ಪ್ರವಾದಿಗಳು ತಮ್ಮ ಯಜ್ಞವನ್ನು ಸಿದ್ಧಪಡಿಸಿ ತಮ್ಮ ದೇವರಿಗೆ ಪ್ರಾರ್ಥಿಸತೊಡಗಿದರು. “ಬಾಳನೇ, ನಮಗೆ ಕಿವಿಗೊಡು,” ಎಂದು ಪದೇಪದೇ ಕೂಗಿದರು. ನಿಮಿಷಗಳು ಕಳೆದು ತಾಸುಗಳು ದಾಟಿದರೂ ಹಾಗೆ ಕೂಗುತ್ತಿದ್ದರು. ಆದರೂ, “ಆಕಾಶವಾಣಿಯಾಗಲಿಲ್ಲ; . . . ಯಾರೂ ಉತ್ತರದಯಪಾಲಿಸಲಿಲ್ಲ” ಎನ್ನುತ್ತದೆ ಬೈಬಲ್‌. ಮಧ್ಯಾಹ್ನವಾದಾಗ ಎಲೀಯನು ಅವರಿಗೆ ಪರಿಹಾಸ್ಯಮಾಡಿದನು. ಬಾಳನು ಉತ್ತರಕೊಡಲಾಗದಷ್ಟೂ ಕಾರ್ಯಮಗ್ನನಾಗಿರಬೇಕೆಂದು, ಯಾವುದೋ ಕೆಲಸ ಅಥವಾ ಪ್ರಯಾಣದಲ್ಲಿ ಇರಬೇಕು ಇಲ್ಲವೆ ನಿದ್ರಿಸುತ್ತಿದ್ದಾನು ಯಾವನಾದರೂ ಅವನನ್ನು ಎಚ್ಚರಿಸಬೇಕೆಂದು ಅಣಕದ ಮಾತುಗಳನ್ನಾಡಿದನು. “ಗಟ್ಟಿಯಾಗಿ ಕೂಗಿರಿ” ಎಂದನು ಎಲೀಯನು ಆ ಠಕ್ಕರಿಗೆ. ಈ ಬಾಳನ ಆರಾಧನೆಯು ಹಾಸ್ಯಾಸ್ಪದವಾದ ಸೋಗಾಗಿತ್ತು ಎಂದು ಅವನಿಗೆ ಸ್ಪಷ್ಟವಾಗಿ ತಿಳಿದಿತ್ತು ಮತ್ತು ದೇವಜನರು ಸಹ ಅದು ಸೋಗೆಂದು ಮನಗಾಣಬೇಕೆಂಬುದು ಅವನ ಬಯಕೆಯಾಗಿತ್ತು.—1 ಅರಸುಗಳು 18:26, 27.

ಇದಕ್ಕೆ ಪ್ರತಿಯಾಗಿ, ಬಾಳನ ಪುರೋಹಿತರು ಇನ್ನೂ ಹೆಚ್ಚು ಉನ್ಮಾದಾವೇಗದಿಂದ, “ಗಟ್ಟಿಯಾಗಿ ಕೂಗಿ ತಮ್ಮ ಪದ್ಧತಿಯ ಪ್ರಕಾರ ಈಟಿಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು.” ಆದರೂ ಏನೂ ನಡೆಯಲಿಲ್ಲ! “ಆಕಾಶವಾಣಿಯಾಗಲಿಲ್ಲ; ಯಾವನೂ ಅವರಿಗೆ ಉತ್ತರಕೊಡಲಿಲ್ಲ, ಅವರನ್ನು ಲಕ್ಷಿಸಲಿಲ್ಲ.” (1 ಅರಸುಗಳು 18:28, 29) ಹೌದು, ಬಾಳನೆಂಬವನೇ ಇದ್ದಿರಲಿಲ್ಲ. ಜನರನ್ನು ಯೆಹೋವನಿಂದ ದೂರಮಾಡಲು ಬಾಳನೆಂಬವನಿದ್ದಾನೆಂದು ಸೈತಾನನೇ ಕಲ್ಪಿಸಿದ್ದ ತಂತ್ರ ಅದಾಗಿತ್ತು. ಅಂದಿನಂತೆಯೇ ಇಂದು ಸಹ, ಯೆಹೋವನನ್ನು ಬಿಟ್ಟು ಇನ್ನಾವ ಯಜಮಾನನನ್ನು ಆರಿಸಿಕೊಳ್ಳುವುದು ನಿರಾಶೆಗೆ, ನಾಚಿಕೆಗೂ ನಡೆಸುತ್ತದೆ.—ಕೀರ್ತನೆ 25:3; 115:4-8.

ಪರೀಕ್ಷೆಗೆ ಉತ್ತರ

ಮಧ್ಯಾಹ್ನ ಹೊತ್ತುಮೀರಿದ ಮೇಲೆ ಎಲೀಯನ ಸರದಿ ಬಂತು. ಅವನು ಯೆಹೋವನ ಹಾಳುಬಿದ್ದಿದ್ದ ವೇದಿಯನ್ನು ಸರಿಪಡಿಸಿದನು. ಇದನ್ನು ನಿಸ್ಸಂಶಯವಾಗಿ ಶುದ್ಧಾರಾಧನೆಯ ವಿರೋಧಿಗಳೇ ಕೆಡವಿಹಾಕಿದ್ದರು. ಅವನು 12 ಕಲ್ಲುಗಳನ್ನು ಉಪಯೋಗಿಸಿದನು. ಇದು ಪ್ರಾಯಶಃ, 12 ಕುಲಗಳಿಗೆ ಯೆಹೋವನು ಕೊಟ್ಟಿದ್ದ ಧರ್ಮಶಾಸ್ತ್ರಕ್ಕೆ ವಿಧೇಯತೆ ತೋರಿಸಲು ಆ 10 ಕುಲಗಳ ಇಸ್ರಾಯೇಲ್‌ ಜನಾಂಗವು ಇನ್ನೂ ಹಂಗಿಗೊಳಗಾಗಿತ್ತೆಂದು ತಿಳಿಯಪಡಿಸಲಿಕ್ಕಾಗಿತ್ತು. ಬಳಿಕ ಅವನು ತನ್ನ ಯಜ್ಞಪಶುವನ್ನು ವೇದಿಯ ಮೇಲಿಟ್ಟು, ಪ್ರಾಯಶಃ ಸಮೀಪದ ಮೆಡಿಟರೇನಿಯನ್‌ ಸಮುದ್ರದಿಂದ ತಂದ ನೀರಿನಿಂದ ಎಲ್ಲವನ್ನೂ ತೋಯಿಸಿದನು. ವೇದಿಯ ಸುತ್ತಲೂ ತೋಡನ್ನು ಅಗೆಯಿಸಿ ಅದನ್ನೂ ನೀರಿನಿಂದ ತುಂಬಿಸಿದನು. ಅವನು ಬಾಳನ ಪ್ರವಾದಿಗಳಿಗೆ ಎಷ್ಟು ಅನುಕೂಲಗಳನ್ನು ಒದಗಿಸಿದ್ದನೊ, ಅದಕ್ಕೆ ಪ್ರತಿಕೂಲವಾಗಿ ಯೆಹೋವನಿಗೆ ಅಷ್ಟೇ ಅನನುಕೂಲಗಳನ್ನು ಕೊಟ್ಟನು. ತನ್ನ ದೇವರಲ್ಲಿ ಅಷ್ಟೊಂದು ಭರವಸೆ ಅವನಿಗಿತ್ತು.—1 ಅರಸುಗಳು 18:30-35.

ಎಲ್ಲವೂ ಸಿದ್ಧವಾದಾಗ ಎಲೀಯನು ಪ್ರಾರ್ಥಿಸಿದನು. ಆ ಸರಳವಾದ ಸ್ಪಷ್ಟ ಪ್ರಾರ್ಥನೆಯು ಎಲೀಯನಿಗೆ ಯಾವುದು ಅತಿ ಪ್ರಾಮುಖ್ಯ ವಿಷಯವಾಗಿತ್ತೆಂಬುದನ್ನು ತೋರಿಸಿತು. ಮೊತ್ತಮೊದಲಾಗಿ, ‘ಇಸ್ರಾಯೇಲ್ಯರ ದೇವರು’ ಯೆಹೋವನೇ ಹೊರತು ಆ ಬಾಳನಲ್ಲ ಎಂದು ತಿಳಿಯಪಡಿಸುವುದೇ ಅವನ ಬಯಕೆಯಾಗಿತ್ತು. ಎರಡನೆಯದಾಗಿ, ಅವನು ಯೆಹೋವನ ಸೇವಕನಾಗಿದ್ದಾನೆಂದು ಮತ್ತು ಸಕಲ ಮಹಿಮೆಯೂ ಕೀರ್ತಿಯೂ ಯೆಹೋವನಿಗೆ ಸಲ್ಲಬೇಕೆಂಬುದನ್ನು ಪ್ರತಿಯೊಬ್ಬನು ತಿಳಿಯುವಂತೆ ಅವನು ಬಯಸಿದನು. ಕೊನೆಯದಾಗಿ, ತನ್ನ ಜನರ ವಿಷಯದಲ್ಲಿ ಅವನಿನ್ನೂ ಚಿಂತಿತನಾಗಿದ್ದಾನೆಂದು ತೋರಿಸಿಕೊಟ್ಟನು. ಏಕೆಂದರೆ, ಯೆಹೋವನು ‘ಇವರ ಮನಸ್ಸನ್ನು’ ತಿರುಗಿಸುವುದನ್ನು ನೋಡಲು ಅವನು ಆತುರವುಳ್ಳವನಾಗಿದ್ದನು. (1 ಅರಸುಗಳು 18:36, 37) ತಮ್ಮ ಅಪನಂಬಿಕೆಯಿಂದ ಅವರು ಅಷ್ಟೊಂದು ದುರವಸ್ಥೆಯನ್ನು ಬರಮಾಡಿದ್ದರೂ, ಎಲೀಯನು ಇನ್ನೂ ಅವರನ್ನು ಪ್ರೀತಿಸುತ್ತಿದ್ದನು. ನಾವೂ ನಮ್ಮ ಪ್ರಾರ್ಥನೆಗಳಲ್ಲಿ ಯೆಹೋವನ ನಾಮದ ಕುರಿತು ಇದೇ ರೀತಿಯ ಚಿಂತೆಯನ್ನು ವ್ಯಕ್ತಪಡಿಸುತ್ತೇವೋ? ಹಾಗೂ ನೆರವಿನ ಅಗತ್ಯವಿರುವವರ ಕಡೆಗೆ ತದ್ರೀತಿಯ ದೈನ್ಯ ಮತ್ತು ಕನಿಕರವನ್ನು ತೋರಿಸುತ್ತೇವೋ?

ಎಲೀಯನ ಪ್ರಾರ್ಥನೆಗೆ ಮೊದಲು ಅಲ್ಲಿದ್ದ ಜನರು, ಯೆಹೋವನು ಕೂಡ ಬಾಳನಂತೆ ನಿರಾಶೆಗೊಳಿಸಿ ಸುಳ್ಳಾಗಿ ಪರಿಣಮಿಸುವನೊ ಎಂದು ಯೋಚಿಸಿದ್ದಿರಬಹುದು. ಆದರೆ ಆ ಪ್ರಾರ್ಥನೆಯ ತರುವಾಯ ಹಾಗೆ ಯೋಚಿಸಲಿಕ್ಕೆ ಸಮಯವೇ ಇರಲಿಲ್ಲ. ವೃತ್ತಾಂತ ತಿಳಿಸುವುದು: “ಕೂಡಲೆ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ ಕಟ್ಟಿಗೆಕಲ್ಲುಮಣ್ಣುಗಳನ್ನೂ ದಹಿಸಿಬಿಟ್ಟು ಕಾಲಿವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು.” (1 ಅರಸುಗಳು 18:38) ಎಂತಹ ವೈಭವಪೂರ್ಣ ಉತ್ತರ! ಆಗ ಜನರ ಪ್ರತಿವರ್ತನೆ ಏನಾಗಿತ್ತು?

ಅವರೆಲ್ಲರೂ “ಯೆಹೋವನೇ ದೇವರು, ಯೆಹೋವನೇ ದೇವರು ಎಂದು ಕೂಗಿದರು.” (1 ಅರಸುಗಳು 18:39) ಕೊನೆಗಾದರೂ ಅವರು ಸತ್ಯವನ್ನು ಕಂಡರು. ಆದರೂ, ಅವರು ಇನ್ನೂ ಯಾವುದೇ ನಂಬಿಕೆಯನ್ನು ತೋರಿಸಿರಲಿಲ್ಲ. ನಿಜ ಹೇಳುವುದಾದರೆ, ಒಂದು ಪ್ರಾರ್ಥನೆಗೆ ಉತ್ತರವಾಗಿ ಆಕಾಶದಿಂದ ಬೆಂಕಿ ಬೀಳುವುದನ್ನು ನೋಡಿದ ಬಳಿಕ ಯೆಹೋವನೇ ಸತ್ಯದೇವರೆಂದು ಒಪ್ಪಿಕೊಳ್ಳುವುದು ಅಷ್ಟೇನೂ ಗಾಢ ನಂಬಿಕೆಯ ಪ್ರದರ್ಶನವಾಗಿರುವುದಿಲ್ಲ. ಆದಕಾರಣ ಎಲೀಯನು ಅವರು ಇನ್ನೊಂದು ವಿಧದಲ್ಲಿ ನಂಬಿಕೆಯನ್ನು ತೋರಿಸುವಂತೆ ಕೇಳಿಕೊಂಡನು. ಅನೇಕ ವರ್ಷಗಳಿಗೆ ಮೊದಲೇ ಅವರು ಏನು ಮಾಡಬೇಕಾಗಿತ್ತೊ ಅದನ್ನು ಮಾಡುವಂತೆ ಅಂದರೆ ಯೆಹೋವನ ಧರ್ಮಶಾಸ್ತ್ರವನ್ನು ಪಾಲಿಸುವಂತೆ ಅವನು ಕೇಳಿಕೊಂಡನು. ಸುಳ್ಳು ಪ್ರವಾದಿಗಳನ್ನು ಮತ್ತು ವಿಗ್ರಹಾರಾಧಕರನ್ನು ಹತಿಸಬೇಕೆಂದು ದೇವರ ಧರ್ಮಶಾಸ್ತ್ರ ತಿಳಿಸಿತ್ತು. (ಧರ್ಮೋಪದೇಶಕಾಂಡ 13:5-9) ಈ ಬಾಳನ ಪುರೋಹಿತರು ಯೆಹೋವನ ಕಡು ವೈರಿಗಳಾಗಿದ್ದು, ಬೇಕುಬೇಕೆಂದೇ ಆತನ ಉದ್ದೇಶಗಳಿಗೆ ವಿರುದ್ಧವಾಗಿ ಕಾರ್ಯನಡೆಸುತ್ತಿದ್ದರು. ಅವರು ಕರುಣೆಗೆ ಪಾತ್ರರಾಗಿದ್ದರೋ? ಇಲ್ಲ. ಏಕೆಂದರೆ ಬಾಳನಿಗೆ ಯಜ್ಞ ಅರ್ಪಿಸಲಿಕ್ಕಾಗಿ ಜೀವಸಹಿತ ಸುಟ್ಟ ಆ ಮುಗ್ಧ ಮಕ್ಕಳಿಗೆ ಅವರೇನಾದರೂ ಕರುಣೆ ತೋರಿಸಿದ್ದರೋ? (ಜ್ಞಾನೋಕ್ತಿ 21:13; ಯೆರೆಮೀಯ 19:5) ಇಲ್ಲ, ಅವರು ಖಂಡಿತ ಕರುಣೆಗೆ ಪಾತ್ರರಾಗಿರಲಿಲ್ಲ. ಆದಕಾರಣ, ಅವರನ್ನು ಹತಿಸುವಂತೆ ಎಲೀಯನು ಆಜ್ಞಾಪಿಸಲಾಗಿ ಇಸ್ರಾಯೇಲ್ಯರು ಅವರೆಲ್ಲರನ್ನೂ ಹತಿಸಿದರು.—1 ಅರಸುಗಳು 18:40.

ಕಾರ್ಮೆಲ್‌ ಬೆಟ್ಟದ ಮೇಲೆ ಈ ಪರೀಕ್ಷೆಯ ಕೊನೆಯಲ್ಲಿ ನಡೆದ ಘಟನೆಗಳನ್ನು ಕೆಲವು ಆಧುನಿಕ ವಿಮರ್ಶಕರು ಹೀಯಾಳಿಸುತ್ತಾರೆ. ಧಾರ್ಮಿಕ ಹಠೋತ್ಸಾಹಿಗಳು ತಮ್ಮ ಧಾರ್ಮಿಕ ಅಸಹನೆಯ ಹಿಂಸಾತ್ಮಕ ಕೃತ್ಯಗಳನ್ನು ಸರಿಯೆಂದು ಸಮರ್ಥಿಸಲು ಇದನ್ನು ಉಪಯೋಗಿಸಬಹುದೆಂದು ಕೆಲವರು ನೆನಸಬಹುದು. ವಿಷಾದಕರವಾಗಿ, ಇಂದು ಇಂಥ ಹಿಂಸಾತ್ಮಕ ಮತಾಭಿಮಾನಿಗಳು ಹೇರಳವಾಗಿದ್ದಾರೆ. ಆದರೆ ಎಲೀಯನು ಮತಭ್ರಾಂತನಾಗಿರಲಿಲ್ಲ. ಅವನು ನೀತಿಯ ವಧೆಯಲ್ಲಿ ಯೆಹೋವನ ಪರವಾಗಿ ಕಾರ್ಯನಡೆಸುತ್ತಿದ್ದನು. ಇದಲ್ಲದೆ, ಎಲೀಯನು ಕೊಂದಂತೆ ದುಷ್ಟರನ್ನು ಕೊಲ್ಲುವುದು ಸಲ್ಲದೆಂದು ನಿಜಕ್ರೈಸ್ತರಿಗೆ ತಿಳಿದದೆ. ಮೆಸ್ಸೀಯನು ಬಂದ ಬಳಿಕ, ಯೇಸು ಕ್ರಿಸ್ತನ ಸಕಲ ಶಿಷ್ಯರಿಗೆ ಇರುವ ಮಟ್ಟವು ಪೇತ್ರನಿಗೆ ಅವನು ಹೇಳಿದ ಮಾತುಗಳಲ್ಲಿ ಕಂಡುಬರುತ್ತದೆ: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” (ಮತ್ತಾಯ 26:52) ಭವಿಷ್ಯತ್ತಿನಲ್ಲಿ ದೈವಿಕ ನ್ಯಾಯವನ್ನು ತೀರಿಸಲು ಯೆಹೋವನು ತನ್ನ ಪುತ್ರನನ್ನು ಉಪಯೋಗಿಸುವನು.

ನಂಬಿಕೆಯ ಜೀವನವನ್ನು ನಡೆಸುವುದು ನಿಜ ಕ್ರೈಸ್ತನೊಬ್ಬನ ಜವಾಬ್ದಾರಿಯಾಗಿದೆ. (ಯೋಹಾನ 3:16) ಇದನ್ನು ಮಾಡುವ ಒಂದು ವಿಧವು ಎಲೀಯನಂತಹ ನಂಬಿಗಸ್ತರನ್ನು ಅನುಕರಿಸುವುದೇ ಆಗಿದೆ. ಅವನು ಯೆಹೋವನನ್ನು ಮಾತ್ರ ಆರಾಧಿಸಿದನು ಮತ್ತು ಇತರರನ್ನು ಸಹ ಆತನನ್ನೇ ಆರಾಧಿಸುವಂತೆ ಪ್ರೋತ್ಸಾಹಿಸಿದನು. ಜನರನ್ನು ಯೆಹೋವನಿಂದ ದೂರಸೆಳೆಯಲು ಸೈತಾನನು ಉಪಯೋಗಿಸಿದ ಧರ್ಮವು ವಂಚಕವೆಂಬುದನ್ನು ಅವನು ಧೈರ್ಯದಿಂದ ಬಯಲುಪಡಿಸಿದನು. ವಿಷಯಗಳನ್ನು ಇತ್ಯರ್ಥ ಮಾಡಲು ಅವನು ತನ್ನ ಸ್ವಂತ ಸಾಮರ್ಥ್ಯ ಮತ್ತು ಇಚ್ಛೆಯ ಮೇಲೆ ಹೊಂದಿಕೊಳ್ಳದೆ, ಯೆಹೋವನ ಮೇಲೆ ಭರವಸೆಯಿಟ್ಟನು. ಹೌದು, ಎಲೀಯನು ಶುದ್ಧಾರಾಧನೆಯ ಪರವಾಗಿ ಸ್ಥಿರವಾಗಿ ನಿಂತು ಅದನ್ನು ಸಮರ್ಥಿಸಿದನು. ಅವನ ನಂಬಿಕೆಯನ್ನು ನಮ್ಮಲ್ಲಿ ಪ್ರತಿಯೊಬ್ಬರು ಅನುಕರಿಸುವಂತಾಗಲಿ! (w08 1/1)

[ಪಾದಟಿಪ್ಪಣಿಗಳು]

^ ಪ್ಯಾರ. 9 ಆಹಾಬನೊಂದಿಗೆ ಎಲೀಯನ ಹಿಂದಿನ ವ್ಯವಹಾರಗಳ ಹೆಚ್ಚಿನ ಮಾಹಿತಿಗಾಗಿ 1992, ಜುಲೈ 1ರ ಕಾವಲಿನಬುರುಜು ಪತ್ರಿಕೆಯಲ್ಲಿನ “ಎಲೀಯನಂಥ ನಂಬಿಕೆ ನಿಮಗಿದೆಯೇ?” ಎಂಬ ಲೇಖನವನ್ನು ನೋಡಿ.

^ ಪ್ಯಾರ. 13 ಸಾಮಾನ್ಯವಾಗಿ ಕಾರ್ಮೆಲ್‌ ಹುಲುಸಾದ ಹಸಿರು ಪ್ರದೇಶವಾಗಿದೆ. ಸಮುದ್ರದ ತೇವಭರಿತ ಗಾಳಿ ಅದರ ಇಳಕಲುಗಳಲ್ಲಿ ಮೇಲೇರುವಾಗ ಪದೇ ಪದೇ ಮಳೆ ಮತ್ತು ಧಾರಾಳ ಮಂಜನ್ನು ತರುತ್ತದೆ. ಮಳೆ ಬರುವಂತೆ ಮಾಡುವ ಕೀರ್ತಿ ಬಾಳನಿಗಿದೆಯೆಂದು ಜನರು ನಂಬುತ್ತಿದ್ದುದರಿಂದ ಈ ಬೆಟ್ಟವು ಬಾಳನ ಆರಾಧನೆಯ ಪ್ರಮುಖ ಸ್ಥಳವಾಗಿತ್ತೆಂಬುದು ವ್ಯಕ್ತ. ಈ ಕಾರಣದಿಂದ, ಬಾಳನ ಆರಾಧನೆ ಒಂದು ವಂಚನೆಯೆಂಬುದನ್ನು ಬಯಲುಪಡಿಸಲು ಕಾರ್ಮೆಲ್‌ ಯೋಗ್ಯ ಸ್ಥಳವಾಗಿತ್ತು.

^ ಪ್ಯಾರ. 17 ಗಮನಾರ್ಹವಾಗಿ ಎಲೀಯನು ಅವರಿಗಂದದ್ದು: ‘ಆದರೆ [ಯಜ್ಞಕ್ಕೆ] ಬೆಂಕಿಹೊತ್ತಿಸಬಾರದು.’ ಕೆಲವು ಬಾರಿ ಇಂಥ ವಿಗ್ರಹಾರಾಧಕರು ಬೆಂಕಿಯು ಪವಾಡವಾಗಿ ಹಚ್ಚಿತೆಂದು ತೋರಿಬರುವಂತೆ ಮಾಡಲು ಕೆಳಗೆ ಗುಪ್ತ ಕುಹರವಿರುವ ವೇದಿಗಳನ್ನು ಉಪಯೋಗಿಸುತ್ತಿದ್ದರೆಂದು ಕೆಲವು ವಿದ್ವಾಂಸರು ತಿಳಿಸುತ್ತಾರೆ.

[ಪುಟ 20ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವನನ್ನು ಬಿಟ್ಟು ಇನ್ನಾವ ಯಜಮಾನನನ್ನು ಆರಿಸಿಕೊಳ್ಳುವುದು ನಿರಾಶೆಗೆ ನಡೆಸುತ್ತದೆ

[ಪುಟ 21ರಲ್ಲಿರುವ ಚಿತ್ರ]

‘ಯೆಹೋವನೇ ಸತ್ಯ ದೇವರು’