ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭವಿಷ್ಯತ್ತು ನಮಗಾಗಿ ಏನನ್ನು ಕಾದಿರಿಸಿದೆ?

ಭವಿಷ್ಯತ್ತು ನಮಗಾಗಿ ಏನನ್ನು ಕಾದಿರಿಸಿದೆ?

ಭವಿಷ್ಯತ್ತು ನಮಗಾಗಿ ಏನನ್ನು ಕಾದಿರಿಸಿದೆ?

ಇದಕ್ಕೆ ಉತ್ತರ ಪ್ರಾಮುಖ್ಯ ಏಕೆ? ನಾಳಿನ ದಿನದ ಪ್ರತೀಕ್ಷೆಗಳು ಒಬ್ಬ ವ್ಯಕ್ತಿಯು ಇವತ್ತೇನು ಮಾಡುವನೆಂಬುದನ್ನು ಪ್ರಭಾವಿಸುತ್ತದೆ. ಉದಾಹರಣೆಗಾಗಿ, ಭವಿಷ್ಯತ್ತಿನ ಬಗ್ಗೆ ನಿರೀಕ್ಷೆಯೇ ಇಲ್ಲದವರಿಗೆ, “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂಬ ಮನೋಭಾವ ಇರುತ್ತದೆ. (1 ಕೊರಿಂಥ 15:32) ಇಂಥ ಮನೋಭಾವವು ಅನೇಕವೇಳೆ ವಿಪರೀತವಾಗಿ ತಿನ್ನುವುದಕ್ಕೂ ಕುಡಿಯುವುದಕ್ಕೂ, ಚಿಂತೆಗೂ ನಡೆಸುತ್ತದೆ ಹೊರತು ನಿಜ ನೆಮ್ಮದಿಗಲ್ಲ.

ಒಂದುವೇಳೆ ಭವಿಷ್ಯತ್ತು ಪೂರ್ಣವಾಗಿ ಮನುಷ್ಯರ ಕೈಯಲ್ಲೇ ಇರುತ್ತಿದ್ದಲ್ಲಿ, ಅದು ಆಶಾಹೀನವಾಗಿರುತ್ತಿತ್ತು. ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಪ್ರಮಾಣದಲ್ಲಿ ವಾಯು, ಜಲ ಹಾಗೂ ಭೂಮಿ ಮಲಿನವಾಗುತ್ತಿದೆ. ಅಣು ಯುದ್ಧದ ಬೆದರಿಕೆ ಹಾಗೂ ಭಯೋತ್ಪಾದಕರ ದಾಳಿಗಳು ಹೆಚ್ಚೆಚ್ಚಾಗುತ್ತಿವೆ. ಲೋಕವ್ಯಾಪಕವಾಗಿ ಕೋಟಿಗಟ್ಟಲೆ ಜನರು ರೋಗ ಹಾಗೂ ಬಡತನದ ಕಪಿಮುಷ್ಟಿಯಲ್ಲಿದ್ದಾರೆ. ಹೀಗಿದ್ದರೂ ನಿರೀಕ್ಷೆಗೆ ಸಕಾರಣಗಳಿವೆ.

ಮಾನವರು ಭವಿಷ್ಯದ ಬಗ್ಗೆ ನಿಖರವಾಗಿ ಮುಂತಿಳಿಸಲಾರರು. ಆದರೆ ಯೆಹೋವ ದೇವರು ‘ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಲು ಮತ್ತು ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಲು’ ಶಕ್ತನೆಂದು ತನ್ನ ಬಗ್ಗೆ ವರ್ಣಿಸುತ್ತಾನೆ. (ಯೆಶಾಯ 46:10) ಭವಿಷ್ಯತ್ತು ನಮಗಾಗಿ ಏನನ್ನು ಕಾದಿರಿಸಿದೆ ಎಂಬುದರ ಬಗ್ಗೆ ಯೆಹೋವನು ಏನು ಹೇಳುತ್ತಾನೆ?

ಬೈಬಲ್‌ ಏನನ್ನುತ್ತದೆ?

ಭೂಮಿಯಾಗಲಿ ಅದರಲ್ಲಿರುವ ಜೀವರಾಶಿಯಾಗಲಿ ನಾಶವಾಗುವಂತೆ ಯೆಹೋವನು ಬಿಡನು. ಬದಲಿಗೆ, ಆತನು “ಲೋಕನಾಶಕರನ್ನು ನಾಶಮಾಡು”ವನೆಂದು ಬೈಬಲ್‌ ವಾಗ್ದಾನಿಸುತ್ತದೆ. (ಪ್ರಕಟನೆ 11:18) ಯೆಹೋವನು ತನ್ನ ರಾಜ್ಯ ಅಂದರೆ ಸ್ವರ್ಗೀಯ ಸರಕಾರದ ಮೂಲಕ ದುಷ್ಟತನವನ್ನು ತೊಲಗಿಸುತ್ತಾ ಭೂಮಿಯನ್ನು ಶುದ್ಧಗೊಳಿಸಿ, ಆರಂಭದಲ್ಲಿ ಉದ್ದೇಶಿಸಿದಂಥ ಪರಿಸ್ಥಿತಿಗಳನ್ನು ಭೂಮಿಗೆ ತರುವನು. (ಆದಿಕಾಂಡ 1:26-31; 2:8, 9; ಮತ್ತಾಯ 6:9, 10) ಈ ಕೆಳಗಿನ ಬೈಬಲ್‌ ವಚನಗಳು ಭವಿಷ್ಯತ್ತಿನ ಮುನ್ನೋಟ ಕೊಡುತ್ತಾ, ಭೂಮಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಬಲುಬೇಗನೆ ಪ್ರಭಾವಿಸುವ ಘಟನೆಗಳನ್ನು ವರ್ಣಿಸುತ್ತದೆ.

ಕೀರ್ತನೆ 46:8, 9. “ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ಪ್ರಳಯವನ್ನು ನಡಿಸಿದ್ದಾನೆ. ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನು ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.”

ಯೆಶಾಯ 35:5, 6. “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು; ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು.”

ಯೆಶಾಯ 65:21, 22. “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”

ದಾನಿಯೇಲ 2:44. “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”

ಯೋಹಾನ 5:28, 29. “ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”

ಪ್ರಕಟನೆ 21:3, 4. “ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”

ಬೈಬಲಿನ ಉತ್ತರದಿಂದ ಹೇಗೆ ನಿಜ ನೆಮ್ಮದಿ ಸಿಗುತ್ತದೆ?

ಈ ಪರಿಸ್ಥಿತಿಗಳು ನಿಜವಾಗಿ ಬರುವವೆಂದು ನಂಬುವುದು ಆರಂಭದಲ್ಲಿ ಕಷ್ಟಕರವಾಗಿರಬಹುದು. ಆದರೆ ಈ ವಾಗ್ದಾನಗಳನ್ನು ಮಾಡಿದವನು ಮಾನವನಲ್ಲ, ಸ್ವತಃ ಯೆಹೋವ ದೇವರೇ ಮತ್ತು ಆತನು ‘ಸುಳ್ಳಾಡನು.’—ತೀತ 1:1.

ನೀವು ದೇವರ ವಾಗ್ದಾನಗಳಲ್ಲಿ ಭರವಸೆಯಿಟ್ಟು ಜೀವಿಸಲು ಮತ್ತು ಆತನ ನಿಯಮಗಳನ್ನು ಪಾಲಿಸಲು ಕಲಿಯುವಲ್ಲಿ, ಅತ್ಯಂತ ಕಷ್ಟಕರ ಪರಿಸ್ಥಿತಿಗಳಲ್ಲೂ ನಿಮ್ಮ ನೆಮ್ಮದಿ ಕೆಡದು. ಯುದ್ಧ, ಬಡತನ, ರೋಗ, ವೃದ್ಧಾಪ್ಯದ ಕಷ್ಟಗಳು, ಸನ್ನಿಹಿತ ಸಾವು—ಇವುಗಳಲ್ಲಿ ಯಾವುದೂ ನಿಮ್ಮ ನೆಮ್ಮದಿಯನ್ನು ಶಾಶ್ವತವಾಗಿ ಕಸಿದುಕೊಳ್ಳಲಾರದು. ಯಾಕೆ? ಯಾಕಂದರೆ ಈ ಎಲ್ಲ ಕಷ್ಟಗಳನ್ನು ದೇವರ ರಾಜ್ಯವು ತೆಗೆದುಹಾಕಲಿಕ್ಕಿದೆ ಎಂಬ ಮನವರಿಕೆ ನಿಮಗಿದೆ.

ಭವಿಷ್ಯತ್ತಿಗಾಗಿ ಅಂಥ ನಿರೀಕ್ಷೆಯನ್ನು ನೀವು ಹೇಗೆ ಪಡೆದುಕೊಳ್ಳಬಲ್ಲಿರಿ? ನೀವು ‘ನಿಮ್ಮ ಮನಸ್ಸನ್ನು ಮಾರ್ಪಡಿಸಿಕೊಂಡು, ಉತ್ತಮವಾದ ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತವು ಯಾವುದು’ ಎಂಬದನ್ನು ತಿಳಿದುಕೊಳ್ಳಬೇಕು. (ರೋಮಾಪುರ 12:2, NIBV) ಬೈಬಲಿನ ವಾಗ್ದಾನಗಳು ಭರವಸಾರ್ಹವಾಗಿವೆ ಎಂಬುದಕ್ಕಾಗಿ ನಿಮಗೆ ಹೆಚ್ಚಿನ ಪುರಾವೆ ಬೇಕಾದೀತು. ಅದಕ್ಕಾಗಿ ನೀವು ಮಾಡುವ ಶೋಧನೆಯು ಸಾರ್ಥಕ. ಏಕೆಂದರೆ ಅದರಿಂದಾಗಿ ನಿಮಗೆ ಸಿಗುವಷ್ಟು ನೆಮ್ಮದಿ ನೀವು ಜೀವನದಲ್ಲಿ ಮಾಡುವ ಬೇರಾವುದೇ ಕೆಲಸದಿಂದ ಸಿಗಲಾರದು. (w08 2/1)

[ಪುಟ 8, 9ರಲ್ಲಿರುವ ಚಿತ್ರಗಳು]

ಭವಿಷ್ಯತ್ತಿನ ಕುರಿತು ದೇವರ ವಾಕ್ಯ ಏನನ್ನುತ್ತದೆ?

ಯೆಶಾಯ 35:5

ಯೆಶಾಯ 35:6

ಯೋಹಾನ 5:28, 29