ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯ ದೇವರ ಕುರಿತು

ಸತ್ಯ ದೇವರ ಕುರಿತು

ಯೇಸುವಿನಿಂದ ಕಲಿಯುವುದು . . .

ಸತ್ಯ ದೇವರ ಕುರಿತು

ದೇವರಿಗೆ ಒಂದು ಹೆಸರಿದೆಯೋ?

ದೇವರಿಗೆ ಒಂದು ಹೆಸರಿದೆಯೆಂದು ಯೇಸು ಬೋಧಿಸಿದನು. ಅವನು ಹೇಳಿದ್ದು: “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:9, 10) ದೇವರ ಹೆಸರು “ಯೆಹೋವ” ಎಂದು ಬೈಬಲ್‌ ಸ್ಪಷ್ಟವಾಗಿ ತೋರಿಸಿಕೊಡುತ್ತದೆ. (ಕೀರ್ತನೆ 83:18) ಯೇಸು ತನ್ನ ಶಿಷ್ಯರ ಕುರಿತಾಗಿ ತಿಳಿಸುತ್ತಾ ತಂದೆಗೆ ಪ್ರಾರ್ಥಿಸಿದ್ದು: “ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ.”—ಯೋಹಾನ 17:26.

ಯೆಹೋವನು ಯಾರು?

ಯೆಹೋವನು ಸೃಷ್ಟಿಕರ್ತನಾಗಿರುವುದರಿಂದ ಯೇಸು ಆತನನ್ನು ‘ಒಬ್ಬನೇ ಸತ್ಯದೇವರು’ ಎಂದು ಕರೆದನು. (ಯೋಹಾನ 17:3) ಯೇಸು ಹೇಳಿದ್ದು: ‘ಮನುಷ್ಯರನ್ನು ನಿರ್ಮಾಣಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.’ (ಮತ್ತಾಯ 19:4) “ದೇವರು ಆತ್ಮಸ್ವರೂಪನು” ಎಂದು ಕೂಡ ಯೇಸು ಹೇಳಿದನು. (ಯೋಹಾನ 4:24) ಆದುದರಿಂದಲೇ, ನಾವು ದೇವರನ್ನು ನೋಡಲಾರೆವು.—ವಿಮೋಚನಕಾಂಡ 33:17-20.

ದೇವರು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ?

ಎಲ್ಲಾ ಆಜ್ಞೆಗಳಲ್ಲಿ ಪ್ರಮುಖ ಆಜ್ಞೆ ಯಾವುದೆಂದು ಒಬ್ಬ ವ್ಯಕ್ತಿ ಯೇಸುವಿಗೆ ಕೇಳಿದಾಗ, ಆತನು ಹೀಗೆ ಉತ್ತರಿಸಿದನು: “ಇಸ್ರಾಯೇಲ್‌ ಜನವೇ ಕೇಳು, ನಮ್ಮ ದೇವರಾದ ಕರ್ತನು [“ಯೆಹೋವನು,” NW] ಒಬ್ಬನೇ ದೇವರು; ನಿನ್ನ ದೇವರಾದ ಕರ್ತನನ್ನು [“ಯೆಹೋವನನ್ನು,” NW] ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೆಯ ಆಜ್ಞೆ.”—ಮಾರ್ಕ 12:28-31.

ನಾವು ದೇವರನ್ನು ಪ್ರೀತಿಸುತ್ತೇವೆಂದು ಹೇಗೆ ತೋರಿಸಸಾಧ್ಯವಿದೆ?

ಯೇಸು ಹೇಳಿದ್ದು: “ನಾನು ತಂದೆಯನ್ನು ಪ್ರೀತಿಸುತ್ತೇನೆ.” ಆತನು ಈ ಪ್ರೀತಿಯನ್ನು ಹೇಗೆ ತೋರಿಸಿದನು? ‘ತಂದೆಯು ನನಗೆ ಕೊಟ್ಟ ಆಜ್ಞೆಯ ಮೇರೆಗೆ ಮಾಡುತ್ತೇನೆ’ ಎಂದು ಆತನು ಹೇಳಿದನು. (ಯೋಹಾನ 14:31) ಯೇಸು ಇನ್ನೂ ಹೇಳಿದ್ದು: ‘ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುತ್ತೇನೆ.’ (ಯೋಹಾನ 8:29) ದೇವರ ಕುರಿತು ಕಲಿಯುವುದರ ಮೂಲಕ ನಾವಾತನನ್ನು ಸಂತೋಷಪಡಿಸಬಲ್ಲೆವು. ಶಿಷ್ಯರಿಗಾಗಿ ಪ್ರಾರ್ಥಿಸುತ್ತಿರುವಾಗ ಯೇಸು ಹೇಳಿದ್ದು: ‘ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನು ತಿಳಿಯುವದೇ ನಿತ್ಯಜೀವವು.’—ಯೋಹಾನ 17:3; 1 ತಿಮೊಥೆಯ 2:4.

ದೇವರ ಕುರಿತು ನಾವು ಹೇಗೆ ಕಲಿಯಸಾಧ್ಯವಿದೆ?

ದೇವರನ್ನು ತಿಳಿದುಕೊಳ್ಳುವ ಒಂದು ಮಾರ್ಗವು ಆತನ ಸೃಷ್ಟಿಯನ್ನು ಗಮನಿಸುವುದೇ ಆಗಿದೆ. ಉದಾಹರಣೆಗೆ, ಯೇಸು ಹೇಳಿದ್ದು: “ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?” ನಾವು ಹಕ್ಕಿಗಳನ್ನು ಗಮನಿಸುವ ಮೂಲಕ ಯಾವ ಪಾಠ ಕಲಿಯಬೇಕೆಂದು ಯೇಸು ಬಯಸುತ್ತಿದ್ದನು? ಭೌತಿಕ ಅಗತ್ಯಗಳಿಗಾಗಿರುವ ಚಿಂತೆಯು ಯೆಹೋವನನ್ನು ಸೇವಿಸುವುದರಿಂದ ನಮ್ಮನ್ನು ತಡೆಯಬಾರದು ಎಂಬದೇ.—ಮತ್ತಾಯ 6:26-33.

ಯೆಹೋವನ ಕುರಿತು ಕಲಿಯಲು ಅತ್ಯುತ್ತಮ ಮಾರ್ಗವು ಆತನ ವಾಕ್ಯವಾಗಿರುವ ಬೈಬಲನ್ನು ಅಧ್ಯಯನ ಮಾಡುವುದೇ ಆಗಿದೆ. ಯೇಸು ಈ ಪವಿತ್ರ ಶಾಸ್ತ್ರಗಳನ್ನು “ದೇವರ ವಾಕ್ಯ” ಎಂದು ಕರೆದನು. (ಲೂಕ 8:21) ಆತನು ದೇವರಿಗೆ ಹೇಳಿದ್ದು: “ನಿನ್ನ ವಾಕ್ಯವೇ ಸತ್ಯವು.”—ಯೋಹಾನ 17:17; 2 ಪೇತ್ರ 1:20, 21.

ಯೆಹೋವನ ಕುರಿತಾದ ಸತ್ಯವನ್ನು ಕಲಿಯಲು ಯೇಸು ಜನರಿಗೆ ಸಹಾಯ ಮಾಡಿದನು. ಆತನ ಶಿಷ್ಯರಲ್ಲೊಬ್ಬನು ಯೇಸುವಿನ ಕುರಿತು ಹೇಳಿದ್ದು: “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗಲೂ ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ.” (ಲೂಕ 24:32) ದೇವರ ಕುರಿತು ಕಲಿಯಲಿಕ್ಕಾಗಿ ನಾವು ದೀನರೂ, ಕಲಿಯುವ ಮನಸ್ಸುಳ್ಳವರೂ ಆಗಿರಬೇಕು. ಯೇಸು ಹೇಳಿದ್ದು: “ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕರಾಜ್ಯದಲ್ಲಿ ಸೇರುವದೇ ಇಲ್ಲ.”—ಮತ್ತಾಯ 18:3.

ದೇವರ ಜ್ಞಾನವು ಏಕೆ ಸಂತೋಷ ತರುತ್ತದೆ?

ಜೀವನದ ಉದ್ದೇಶವನ್ನು ಅರಿಯುವ ಅವಶ್ಯಕತೆ ನಮಗಿದೆ ಮತ್ತು ಅದು ಏನೆಂದು ತಿಳಿದುಕೊಳ್ಳುವಂತೆ ದೇವರು ಸಹಾಯ ಮಾಡುತ್ತಾನೆ. ಯೇಸು ಹೇಳಿದ್ದು: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.” (ಮತ್ತಾಯ 5:3, NW) ಅತ್ಯುತ್ತಮವಾದ ಜೀವನಮಾರ್ಗವನ್ನು ಯೆಹೋವನು ನಮಗೆ ಕಲಿಸುತ್ತಾನೆ. “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು” ಅಥವಾ ಸಂತೋಷಿತರು ಎಂದು ಯೇಸು ಹೇಳಿದನು.—ಲೂಕ 11:28; ಯೆಶಾಯ 11:9. (w08 2/1)

ಹೆಚ್ಚಿನ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 1ನ್ನು ನೋಡಿ *

[ಪಾದಟಿಪ್ಪಣಿ]

^ ಪ್ಯಾರ. 17 ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.

[ಪುಟ 12ರಲ್ಲಿರುವ ಚಿತ್ರ]

“ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ.”—ಯೋಹಾನ 17:26

[ಪುಟ 12, 13ರಲ್ಲಿರುವ ಚಿತ್ರಗಳು]

ಸೃಷ್ಟಿಯ ಮೂಲಕ ಮತ್ತು ಬೈಬಲ್‌ನಿಂದ ನಾವು ಯೆಹೋವನ ಕುರಿತು ಕಲಿಯಬಹುದು