ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಕ್ಷತ್ರಗಳಲ್ಲಿ ಪ್ರಕಟವಾಗುವ ದೇವರ ಶಕ್ತಿ

ನಕ್ಷತ್ರಗಳಲ್ಲಿ ಪ್ರಕಟವಾಗುವ ದೇವರ ಶಕ್ತಿ

ನಕ್ಷತ್ರಗಳಲ್ಲಿ ಪ್ರಕಟವಾಗುವ ದೇವರ ಶಕ್ತಿ

“ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.” —ಯೆಶಾಯ 40:26.

ನಮ್ಮ ಸೂರ್ಯ ಸಾಮಾನ್ಯ ಗಾತ್ರದ ಒಂದು ನಕ್ಷತ್ರ. ಹಾಗಿದ್ದರೂ, ಇದರ ಗಾತ್ರವು ಭೂಮಿಯ ಗಾತ್ರಕ್ಕಿಂತ 3,30,000 ಪಟ್ಟು ದೊಡ್ಡದು. ಭೂಮಿಗೆ ಸಮೀಪವಿರುವ ನಕ್ಷತ್ರಗಳಲ್ಲಿ ಹೆಚ್ಚಿನವು ಸೂರ್ಯನಿಗಿಂತ ಚಿಕ್ಕದ್ದಾಗಿವೆ. ಆದರೆ, ಇತರ ನಕ್ಷತ್ರಗಳ ಗಾತ್ರವಾದರೋ ಸೂರ್ಯನಿಗಿಂತಲೂ ಕಡಿಮೆಪಕ್ಷ 27 ಪಟ್ಟು ದೊಡ್ಡದು. ಉದಾಹರಣೆಗೆ V382 ಸಿಗ್ನಿ ಎಂದು ಹೆಸರಿಸಿರುವ ನಕ್ಷತ್ರವು ಭಾರಿ ದೊಡ್ಡ ಗಾತ್ರದ್ದು.

ಸೂರ್ಯನು ಹೊರಸೂಸುವ ಶಕ್ತಿ ಎಷ್ಟು? ಉರಿಯುತ್ತಿರುವ ಬೆಂಕಿಯಿಂದ ನೀವು ಸುಮಾರು 15 ಕಿ.ಮೀ. ದೂರ ನಿಂತುಕೊಂಡಿದ್ದೀರೆಂದು ಭಾವಿಸಿ. ಆಗಲೂ ಅದರ ತಾಪ ನಿಮಗೆ ತಗಲುತ್ತಿರುವುದಾದರೆ, ಆ ಬೆಂಕಿಯ ಉರಿ ಎಷ್ಟಿರಬಹುದು? ಸೂರ್ಯನು ನಮ್ಮ ಭೂಮಿಯಿಂದ ಸುಮಾರು 15,00,00,000 ಕಿ.ಮೀ. ದೂರದಲ್ಲಿದ್ದಾನೆ. ಹಾಗಿದ್ದರೂ, ಬೇಸಿಗೆಯ ದಿನದಲ್ಲಿ ಸೂರ್ಯನ ಶಾಖ ನಮ್ಮ ಚರ್ಮವನ್ನು ಸುಡುತ್ತದೆ! ಗಮನಾರ್ಹ ವಿಷಯವೆಂದರೆ, ಸೂರ್ಯನ ಶಾಖದ ಸುಮಾರು ನೂರುಕೋಟಿಯಲ್ಲಿ ಒಂದು ಭಾಗ ಮಾತ್ರ ಭೂಮಿಯನ್ನು ತಲಪುತ್ತದೆ. ಆದರೂ, ಸೂರ್ಯನ ಶಕ್ತಿಯ ಈ ಚಿಕ್ಕ ಅಂಶ ಇಡೀ ಭೂಗ್ರಹದ ಜೀವಿಗಳನ್ನು ಪೋಷಿಸಲು ಸಾಕಾಗುವಷ್ಟಿದೆ.

ಕೇವಲ ನಮ್ಮ ಸೂರ್ಯನಿಂದ ಉಗಮಿಸುವ ಒಟ್ಟು ಶಕ್ತಿಯು ಭೂಮಿಯಂಥ 31 ಲಕ್ಷ ಕೋಟಿ ಗ್ರಹಗಳನ್ನು ಪೋಷಿಸುವಷ್ಟಿದೆ ಎಂದು ವಿಜ್ಞಾನಿಗಳು ಲೆಕ್ಕಹಾಕಿದ್ದಾರೆ. ಈ ಅಪಾರ ಶಕ್ತಿ ಎಷ್ಟೆಂದು ಇನ್ನೊಂದು ವಿಧದಲ್ಲಿ ವಿವರಿಸುವುದಾದರೆ, ಅಮೆರಿಕಾದಂಥ ಕೈಗಾರಿಕಾ ರಾಷ್ಟ್ರವು “ಇಂದು ಬಳಸುವ ಶಕ್ತಿಯ ಪ್ರಮಾಣಕ್ಕನುಸಾರ 90,00,000 ವರ್ಷ ಬಳಸುವಷ್ಟು ಶಕ್ತಿಯನ್ನು” ಸೂರ್ಯನು ಒಂದೇ ಸೆಕೆಂಡಿನಲ್ಲಿ ಉತ್ಪಾದಿಸುತ್ತಾನೆ ಎಂದು ಸ್ಪೇಸ್‌ ವೆದರ್‌ ಪ್ರಿಡಿಕ್ಷನ್‌ ಸೆಂಟರ್‌ (SWPC) ವೆಬ್‌ಸೈಟ್‌ ತಿಳಿಸುತ್ತದೆ.

ಸೂರ್ಯನ ಶಕ್ತಿಯು ಅದರ ಕೇಂದ್ರ ಭಾಗದಿಂದ ಉಗಮಿಸುತ್ತದೆ. ಅಂದರೆ ಸೂರ್ಯಗರ್ಭದಲ್ಲಿ ನಡೆಯುವ ನ್ಯೂಕ್ಲಿಯರ್‌ ಪ್ರಕ್ರಿಯೆಯು ಪರಮಾಣುಗಳನ್ನು ಡಿಕ್ಕಿಗೊಳ್ಳುವಂತೆ ಮಾಡಿ ಚಲನಶಕ್ತಿಯನ್ನು ಹೊರಚಿಮ್ಮುತ್ತದೆ. ಸೂರ್ಯನ ಗಾತ್ರ ಎಷ್ಟು ಬೃಹತ್ತೆಂದರೆ ಮತ್ತು ಅದರ ಗರ್ಭವು ಎಷ್ಟೊಂದು ಸಾಂದ್ರತೆಯುಳ್ಳದ್ದೆಂದರೆ ಅಲ್ಲಿ ಉಗಮಿಸಿದ ಶಕ್ತಿಯು ಸೂರ್ಯನ ಹೊರವಲಯವನ್ನು ತಲಪಲು ಲಕ್ಷಾಂತರ ವರ್ಷಗಳು ತಗಲುತ್ತವೆ. “ಒಂದುವೇಳೆ ಸೂರ್ಯನು ಶಕ್ತಿ ಉತ್ಪಾದನೆಯನ್ನು ಇಂದು ನಿಲ್ಲಿಸಿದರೆ, ಭೂಮಿಯ ಮೇಲೆ ಅದರ ನಿಜ ಪರಿಣಾಮವು ಗೊತ್ತಾಗುವುದು 5,00,00,000 ವರ್ಷಗಳ ನಂತರವೇ!” ಎಂದು SWPC ವೆಬ್‌ಸೈಟ್‌ ತಿಳಿಸುತ್ತದೆ.

ಈಗ ಇದನ್ನೂ ಗಮನಿಸಿ. ಒಂದು ಪ್ರಶಾಂತ ರಾತ್ರಿಯಂದು ನೀವು ಆಕಾಶದೆಡೆಗೆ ನೋಡಿದಾಗ ಮಿನುಗುತ್ತಿರುವ ಸಾವಿರಾರು ನಕ್ಷತ್ರಗಳನ್ನು ಕಾಣುವಿರಿ. ಆ ಒಂದೊಂದು ನಕ್ಷತ್ರವು ಸೂರ್ಯನಂತೆ ಅಪಾರ ಶಕ್ತಿಯನ್ನು ಉತ್ಸರ್ಜಿಸುತ್ತದೆ. ವಿಶ್ವದಲ್ಲಿ ಇಂಥ ಸಾವಿರಾರು ಕೋಟಿ ನಕ್ಷತ್ರಗಳಿವೆ ಎಂದು ವಿಜ್ಞಾನಿಗಳು ಲೆಕ್ಕಹಾಕಿದ್ದಾರೆ!

ಈ ಎಲ್ಲ ನಕ್ಷತ್ರಗಳು ಹೇಗೆ ಉಂಟಾದವು? ಸುಮಾರು 14 ಬಿಲಿಯ ವರ್ಷಗಳ ಹಿಂದೆ ವಿಶ್ವವು ಇದ್ದಕ್ಕಿದ್ದಂತೆ ಸ್ಪೋಟಗೊಂಡು ಅಸ್ತಿತ್ವಕ್ಕೆ ಬಂತೆಂದು ಹೆಚ್ಚಿನ ಸಂಶೋಧಕರು ಇಂದು ನಂಬುತ್ತಾರೆ. ಆದರೆ ಅದರ ಕಾರಣವನ್ನು ಅವರು ಇನ್ನೂ ತಿಳಿದಿರುವುದಿಲ್ಲ. ಬೈಬಲಾದರೋ ಸರಳವಾಗಿ ಹೇಳುವುದು: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” (ಆದಿಕಾಂಡ 1:1) ಬೃಹತ್‌ ಪ್ರಮಾಣದ ಶಕ್ತಿ ಉತ್ಪಾದಕಗಳಾದ ನಕ್ಷತ್ರಗಳನ್ನು ಉಂಟುಮಾಡಿದ ದೇವರು ‘ಮಹಾಶಕ್ತನು’ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.—ಯೆಶಾಯ 40:26.

ದೇವರು ತನ್ನ ಶಕ್ತಿಯನ್ನು ಬಳಸುವ ವಿಧ

ಯೆಹೋವ ದೇವರು ತನ್ನ ಇಚ್ಛೆ ಪೂರೈಸುವವರನ್ನು ಬಲಪಡಿಸಲು ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ. ಉದಾಹರಣೆಗೆ, ದೇವರ ಕುರಿತು ಇತರರಿಗೆ ಕಲಿಸಲು ಅಪೊಸ್ತಲ ಪೌಲನು ಬಹಳಷ್ಟು ಶ್ರಮಿಸಿದನು. ಪೌಲನು ನಮ್ಮ ಹಾಗೆ ಒಬ್ಬ ಸಾಧಾರಣ ಮನುಷ್ಯನಾಗಿದ್ದರೂ ತನ್ನ ಕೆಲಸಕ್ಕೆ ತೀವ್ರ ವಿರೋಧ ಬಂದಾಗ ಸಹ ಅನೇಕ ಸತ್ಕಾರ್ಯಗಳನ್ನು ಮಾಡಿದನು. ಇದು ಹೇಗೆ ಸಾಧ್ಯವಾಯಿತು? ದೇವರಿಂದಲೇ ‘ಬಲಾಧಿಕ್ಯವನ್ನು’ ಪಡೆದುಕೊಂಡೆನೆಂದು ಅವನು ಒಪ್ಪಿಕೊಂಡನು.—2 ಕೊರಿಂಥ 4:7-9.

ಯೆಹೋವ ದೇವರು ತನ್ನ ನೈತಿಕ ಮಟ್ಟಗಳನ್ನು ಬೇಕುಬೇಕೆಂದು ಉಲ್ಲಂಘಿಸಿದವರನ್ನು ನಾಶಮಾಡಲು ಸಹ ತನ್ನ ಶಕ್ತಿಯನ್ನು ಬಳಸಿದನು. ಇದಕ್ಕೆ ಸೊದೋಮ್‌ ಮತ್ತು ಗೊಮೋರ ಪಟ್ಟಣಗಳ ನಾಶನ ಹಾಗೂ ನೋಹನ ಸಮಯದಲ್ಲಾದ ಜಲಪ್ರಳಯವು ಉದಾಹರಣೆಗಳಾಗಿವೆಯೆಂದು ಯೇಸು ಕ್ರಿಸ್ತನು ಸೂಚಿಸಿದನು. ಬಲುಬೇಗನೆ ಯೆಹೋವ ದೇವರು, ತನ್ನ ಮಟ್ಟಗಳನ್ನು ಅಲಕ್ಷಿಸುವ ಜನರನ್ನು ನಾಶಮಾಡಲು ಮತ್ತೊಮ್ಮೆ ತನ್ನ ಶಕ್ತಿಯನ್ನು ಬಳಸುವನೆಂದು ಯೇಸು ಪ್ರವಾದಿಸಿದನು.—ಮತ್ತಾಯ 24:3, 37-39; ಲೂಕ 17:26-30.

ನೀವು ಹೇಗೆ ಪ್ರತಿಕ್ರಿಯಿಸುವಿರಿ?

ನಕ್ಷತ್ರಗಳಲ್ಲಿ ತೋರಿಬರುವ ದೇವರ ಶಕ್ತಿ ಕುರಿತು ಧ್ಯಾನಿಸುವಾಗ ನಿಮಗೂ ರಾಜ ದಾವೀದನಂತೆ ಅನಿಸಬಹುದು. ಅವನು ಹೇಳಿದ್ದು: “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?”—ಕೀರ್ತನೆ 8:3, 4.

ಹೌದು, ಈ ವಿಶ್ವದ ವಿಶಾಲತೆಗೆ ನಮ್ಮನ್ನು ಹೋಲಿಸುವಾಗ ನಾವೆಷ್ಟು ಅಲ್ಪಮಾತ್ರರು ಎಂಬುದು ನಮ್ಮನ್ನು ನಮ್ರರನ್ನಾಗಿ ಮಾಡುತ್ತದೆ. ಆದರೂ ದೇವರ ಮಹಾಶಕ್ತಿಯ ಕುರಿತು ಪರಿಗಣಿಸುವಾಗ ನಾವು ಕಂಗೆಟ್ಟುಹೋಗಬಾರದು. ಯೆಹೋವನು ಈ ಆಶ್ವಾಸನೆಯ ಮಾತುಗಳನ್ನು ದಾಖಲಿಸುವಂತೆ ಪ್ರವಾದಿ ಯೆಶಾಯನನ್ನು ಪ್ರೇರಿಸಿದನು: “ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. ಯುವಕರೂ ದಣಿದು ಬಳಲುವರು, ತರುಣರೂ ಸೊರಗಿ ಮುಗ್ಗರಿಸುವರು. ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು.”—ಯೆಶಾಯ 40:29-31.

ನೀವು ದೇವರ ಇಚ್ಛೆಯನ್ನು ಪೂರೈಸಲು ಬಯಸುವುದಾದರೆ ನಿಮ್ಮನ್ನು ಬಲಪಡಿಸಲು ಆತನು ತನ್ನ ಕ್ರಿಯಾಶೀಲ ಶಕ್ತಿಯಾಗಿರುವ ಪವಿತ್ರಾತ್ಮವನ್ನು ನೀಡುವನೆಂಬ ಭರವಸೆ ನಿಮಗಿರಸಾಧ್ಯವಿದೆ. ಆದರೆ ನೀವದಕ್ಕಾಗಿ ಕೇಳಿಕೊಳ್ಳತಕ್ಕದ್ದು. (ಲೂಕ 11:13) ದೇವರ ಬೆಂಬಲದಿಂದ ನೀವು ಯಾವುದೇ ಕಷ್ಟಪರೀಕ್ಷೆಗಳನ್ನು ಸಹಿಸಿಕೊಂಡು ಸರಿಯಾದದ್ದನ್ನು ಮಾಡಲು ಖಂಡಿತ ಬಲವನ್ನು ಪಡಕೊಳ್ಳುವಿರಿ.—ಫಿಲಿಪ್ಪಿ 4:13. (w08 5/1)

[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರ ಬೆಂಬಲದಿಂದ ನೀವು ಸರಿಯಾದದ್ದನ್ನು ಮಾಡಲು ಖಂಡಿತ ಬಲವನ್ನು ಪಡಕೊಳ್ಳುವಿರಿ

[ಪುಟ 7ರಲ್ಲಿರುವ ಚಿತ್ರಗಳು]

ಮೇಲ್ಭಾಗದ ಎಡದಿಂದ ಬಲಕ್ಕೆ: ವರ್ಲ್‌ಪೂಲ್‌ ಗ್ಯಾಲಕ್ಸಿ, ಪ್ಲೀಅಡೀಸ್‌ ನಕ್ಷತ್ರಪುಂಜ, ಅರಾಯನ್‌ ನೆಬ್ಯುಲ, ಆ್ಯಂಡ್ರಾಮಡ ಗ್ಯಾಲಕ್ಸಿ

[ಪುಟ 7ರಲ್ಲಿರುವ ಚಿತ್ರಗಳು]

ಸೂರ್ಯನ ಗಾತ್ರ ಭೂಮಿಯ ಗಾತ್ರಕ್ಕಿಂತ 3,30,000 ಪಟ್ಟು ದೊಡ್ಡದು

[ಪುಟ 7ರಲ್ಲಿರುವ ಚಿತ್ರ ಕೃಪೆ]

Pleiades: NASA, ESA and AURA/Caltech; all others above: National Optical Astronomy Observatories