ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಾಯಿಯ ಮಮತೆಯಲ್ಲಿ ತೋರಿಬರುವ ದೇವರ ಪ್ರೀತಿ

ತಾಯಿಯ ಮಮತೆಯಲ್ಲಿ ತೋರಿಬರುವ ದೇವರ ಪ್ರೀತಿ

ತಾಯಿಯ ಮಮತೆಯಲ್ಲಿ ತೋರಿಬರುವ ದೇವರ ಪ್ರೀತಿ

“ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ.”​—⁠ಯೆಶಾಯ 49:15.

ತಾಯಿ ತನ್ನ ಪುಟ್ಟ ಮಗುವಿಗೆ ಮೊಲೆಯುಣಿಸುವಾಗ ಅದು ತಾಯಿಯನ್ನು ತಬ್ಬಿಹಿಡಿಯುತ್ತದೆ. ಇದು ಎಷ್ಟೊಂದು ಕೋಮಲತೆ ಮತ್ತು ಮಮತೆಯನ್ನು ತೋರಿಸುತ್ತದೆ. “ಮೊದಲ ಬಾರಿ ನನ್ನ ಮಗುವನ್ನು ತೋಳಲ್ಲೆತ್ತಿದಾಗ ಆ ಪುಟ್ಟ ಕಂದನಿಗಾಗಿ ನನ್ನಲ್ಲಿ ಪ್ರೀತಿ ಮತ್ತು ಜವಾಬ್ದಾರಿಯ ಭಾವಾತಿಶಯಗಳು ಉಕ್ಕಿಬಂದವು” ಎಂದು ಪ್ಯಾಮ್‌ ಎಂಬ ತಾಯಿಯು ಹೇಳುತ್ತಾಳೆ.

ಇದು ಸಹಜವಾದ ಸಂಗತಿ. ಮಾತ್ರವಲ್ಲ ತಾಯಿಯ ಪ್ರೀತಿಯು ಮಗುವಿನ ಬೆಳವಣಿಗೆಯನ್ನು ಗಾಢವಾಗಿ ಪ್ರಭಾವಿಸುತ್ತದೆ ಎಂದು ಸಂಶೋಧನೆಯು ದೃಢೀಕರಿಸಿದೆ. ಮಾನಸಿಕ ಆರೋಗ್ಯದ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾಶಿಸಿದ ಒಂದು ದಾಖಲೆ ತಿಳಿಸುವುದು: “ತಾಯಂದಿರಿಂದ ತೊರೆಯಲ್ಪಟ್ಟ ಅಥವಾ ಬೇರ್ಪಟ್ಟ ಕೂಸುಗಳು ಅಸಂತುಷ್ಟರೂ ಖಿನ್ನರೂ ಕೆಲವೊಮ್ಮೆ ಅಂಜುಬುರುಕರೂ ಆಗಿ ಬೆಳೆಯುತ್ತವೆ ಎಂದು ಅಧ್ಯಯನಗಳು ತೋರಿಸಿವೆ.” ಬಾಲ್ಯದಿಂದಲೇ ಪ್ರೀತಿ ಮತ್ತು ಆರೈಕೆಯನ್ನು ಹೊಂದಿದ ಮಕ್ಕಳು ತೊರೆಯಲ್ಪಟ್ಟ ಮಕ್ಕಳಿಗಿಂತ ಪ್ರಾಯಶಃ ಸಾಕಷ್ಟು ಹೆಚ್ಚು ಬುದ್ಧಿವಂತರಾಗಿರುತ್ತಾರೆಂದು ಅದೇ ದಾಖಲೆಯು ಹೇಳುತ್ತದೆ.

ತಾಯಿಯ ಮಮತೆಯ ಪ್ರಾಮುಖ್ಯತೆಯ ಕುರಿತು, ಅಮೆರಿಕದಲ್ಲಿರುವ UCLA ಸ್ಕೂಲ್‌ ಆಫ್‌ ಮೆಡಿಸಿನ್‌ನ ಮನೋವಿಜ್ಞಾನ ಪ್ರಾಧ್ಯಾಪಕರಾದ ಆ್ಯಲನ್‌ ಶಾರ್‌ ಹೇಳುವುದು: “ತಾಯಿಯೊಂದಿಗೆ ಮಗುವಿನ ಮೊತ್ತಮೊದಲ ಪ್ರೀತಿಯ ಬಂಧವು ಒಂದು ಮಾದರಿರೂಪವಾಗಿ ಕಾರ್ಯನಡಿಸುತ್ತದೆ. ಯಾಕಂದರೆ ಅದು ಮಗುವಿಗೆ ಅನಂತರದ ಎಲ್ಲಾ ಭಾವನಾತ್ಮಕ ಸಂಬಂಧಗಳನ್ನು ನಿರ್ವಹಿಸಲು ಸಾಮರ್ಥ್ಯವನ್ನು ಕೊಡುತ್ತದೆ.”

ದುಃಖಕರವಾಗಿ ಖಿನ್ನತೆ, ಅಸ್ವಸ್ಥತೆ ಮತ್ತು ಇತರ ಒತ್ತಡಗಳು ತಾಯಿಯೊಬ್ಬಳು ತನ್ನ ಮಗುವನ್ನು ಅಲಕ್ಷಿಸುವಂತೆ ಅಥವಾ ‘ಮರೆಯುವಂತೆ’ ಕೂಡ ಮಾಡಬಹುದು. (ಯೆಶಾಯ 49:15) ಆದರೆ ತಾಯಿಯೊಬ್ಬಳು ಹೀಗೆ ಮಾಡುವುದು ಅಪರೂಪ. ವಾಸ್ತವವಾಗಿ ತಾಯಂದಿರು ತಮ್ಮ ಮಕ್ಕಳನ್ನು ಪ್ರೀತಿಸುವುದು ಸ್ವಾಭಾವಿಕವೆಂದು ತೋರುತ್ತದೆ. ಮಗುವಿನ ಜನನದ ಸಮಯದಲ್ಲಿ ತಾಯಂದಿರ ಶರೀರದಲ್ಲಿ ಆಕ್ಸಿಟೋಸಿನ್‌ ಎಂಬ ಹಾರ್ಮೋನಿನ ಪ್ರಮಾಣ ಹೆಚ್ಚಾಗುತ್ತದೆ. ಮತ್ತು ಇದು ಹೆರಿಗೆಯ ಬೇನೆಯನ್ನು ಉಂಟುಮಾಡುತ್ತದೆ, ಮಾತ್ರವಲ್ಲ ಎದೆಹಾಲನ್ನೂ ಉತ್ಪಾದಿಸುತ್ತದೆ. ಸ್ತ್ರೀಪುರುಷರಿಬ್ಬರಲ್ಲೂ ಇರುವ ಈ ಹಾರ್ಮೋನ್‌ ಮಗುವಿಗೆ ನಿಸ್ವಾರ್ಥ ಪ್ರೀತಿಯನ್ನು ತೋರಿಸುವಂತೆ ಸಹ ಮಾಡುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

ಪ್ರೀತಿಯ ಮೂಲ?

ತಾಯಿ ಮತ್ತು ಮಗುವಿನ ನಡುವೆ ಇರುವ ನಿಸ್ವಾರ್ಥ ಪ್ರೀತಿಯು ಆಕಸ್ಮಿಕವಾಗಿ ಉಂಟಾಯಿತೆಂದೂ ಇದು ಮಾನವರಿಗೆ ಪ್ರಯೋಜನಕಾರಿಯಾದ ಕಾರಣ ನೈಸರ್ಗಿಕವಾಗಿ ಸಂರಕ್ಷಿಸಲ್ಪಟ್ಟಿತೆಂದೂ ವಿಕಾಸದಲ್ಲಿ ನಂಬಿಕೆಯಿಡುವ ಜನರು ಕಲಿಸುತ್ತಾರೆ. ಉದಾಹರಣೆಗೆ, ಮದರಿಂಗ್‌ ಮ್ಯಾಗಸಿನ್‌ ಎಂಬ ಪತ್ರಿಕೆಯು ಹೇಳುವುದು: “ಸರೀಸೃಪ ಪರಂಪರೆಯಿಂದ ವಿಕಾಸಗೊಂಡ ನಮ್ಮ ಮಿದುಳಿನ ಮೇಲಿನ ಭಾಗವು ಲಿಂಬಿಕ್‌ ಸಿಸ್ಟಮ್‌ ಅಂದರೆ ಭಾವನೆಗಳ ಮೂಲ ಆಗಿದೆ. ಈ ಭಾಗವೇ ತಾಯಿ ಮತ್ತು ಮಗುವಿನ ಆಪ್ತ ಸಂಬಂಧಕ್ಕೆ ಕಾರಣವಾಗಿದೆ.”

ನಿಜತ್ವವೇನೆಂದರೆ, ಈ ಲಿಂಬಿಕ್‌ ಸಿಸ್ಟಮ್‌ ನಮ್ಮ ಮನೋಭಾವಗಳಿಗೆ ನೆರವು ನೀಡುತ್ತದೆಂದು ಸಂಶೋಧನೆಯು ಕಂಡುಕೊಂಡಿದೆ. ಆದರೆ ಮಗುವಿಗಾಗಿ ತಾಯಿಗಿರುವ ಪ್ರೀತಿಯು ಸರೀಸೃಪ ಮಿದುಳಿನಲ್ಲಾದ ಆ ಆಕಸ್ಮಿಕ ಬೆಳವಣಿಗೆಯಿಂದಾಯಿತೆಂದು ಹೇಳುವುದು ತರ್ಕಸಮ್ಮತವೋ?

ಇನ್ನೊಂದು ಸಾಧ್ಯತೆಯನ್ನು ಪರಿಗಣಿಸಿರಿ. ಮಾನವರು ದೇವರ ಸ್ವರೂಪದಲ್ಲಿ ಅಂದರೆ ದೇವರಲ್ಲಿರುವ ಗುಣಗಳನ್ನು ತೋರಿಸುವ ಸಾಮರ್ಥ್ಯದೊಂದಿಗೆ ಸೃಷ್ಟಿಸಲ್ಪಟ್ಟರೆಂದು ಬೈಬಲ್‌ ತಿಳಿಸುತ್ತದೆ. (ಆದಿಕಾಂಡ 1:27) ಪ್ರೀತಿಯು ದೇವರ ಪ್ರಮುಖ ಗುಣವಾಗಿದೆ. ಅಪೊಸ್ತಲ ಯೋಹಾನನು ಬರೆದದ್ದು: “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ.” ಯಾಕೆ? “ಯಾಕಂದರೆ ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:8) ಗಮನಿಸಿ, ಈ ವಚನವು ದೇವರಲ್ಲಿ ಪ್ರೀತಿ ಇದೆಯೆಂದು ಹೇಳುವುದಿಲ್ಲ. ಬದಲಿಗೆ ದೇವರು ಪ್ರೀತಿಸ್ವರೂಪಿ ಎಂದು ಹೇಳುತ್ತದೆ. ಹೌದು, ಆತನೇ ಪ್ರೀತಿಯ ಮೂಲನು.

ಪ್ರೀತಿಯನ್ನು ಬೈಬಲ್‌ ಈ ರೀತಿಯಾಗಿ ವರ್ಣಿಸುತ್ತದೆ: “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು. ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ, ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ; ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ; ಅನ್ಯಾಯವನ್ನು ನೋಡಿ ಸಂತೋಷಪಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ; ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” (1 ಕೊರಿಂಥ 13:4-8) ಹೀಗಿರುವಾಗ ಈ ಅತ್ಯಂತ ಉದಾತ್ತ ಗುಣವು ಬರೇ ಆಕಸ್ಮಿಕವಾಗಿ ಬಂತೆಂದು ನಂಬುವುದು ನ್ಯಾಯಸಮ್ಮತವೋ?

ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಹಿಂದಿನ ಪ್ಯಾರದಲ್ಲಿ ಪ್ರೀತಿಯ ಕುರಿತಾದ ವರ್ಣನೆಯನ್ನು ನೀವು ಓದಿದಾಗ ನಿಮಗೂ ಯಾರಾದರೂ ಆ ರೀತಿಯ ಪ್ರೀತಿಯನ್ನು ತೋರಿಸಬೇಕೆಂದು ನಿಮ್ಮ ಹೃದಯವು ಹಂಬಲಿಸಿತೋ? ಅಂತಹ ಹಂಬಲಿಕೆ ನಿಮ್ಮಲ್ಲಾಗುವುದು ಸ್ವಾಭಾವಿಕವೇ. ಏಕೆ? ಏಕೆಂದರೆ ‘ನಾವು ದೇವರ ಸಂತಾನವಾಗಿದ್ದೇವೆ.’ (ಅ. ಕೃತ್ಯಗಳು 17:29) ನಾವು, ಇತರರು ನಮ್ಮನ್ನು ಪ್ರೀತಿಸುವಂತೆ ಹಾಗೂ ನಾವು ಇತರರನ್ನು ಪ್ರೀತಿಸುವಂತೆ ರೂಪಿಸಲ್ಪಟ್ಟಿದ್ದೇವೆ. ದೇವರು ನಮ್ಮನ್ನು ಆಳವಾಗಿ ಪ್ರೀತಿಸುತ್ತಾನೆ ಎಂಬ ಭರವಸೆ ನಮಗಿದೆ. (ಯೋಹಾನ 3:16; 1 ಪೇತ್ರ 5:6, 7) ಈ ಲೇಖನದ ಆರಂಭದಲ್ಲಿ ಕೊಡಲಾದ ವಚನವು ತಿಳಿಸುವ ಪ್ರಕಾರ ಮಗುವಿನ ಮೇಲೆ ತಾಯಿಗಿರುವ ಪ್ರೀತಿಗಿಂತ ದೇವರಿಗೆ ನಮ್ಮ ಮೇಲಿರುವ ಪ್ರೀತಿಯು ಹೆಚ್ಚು ಬಲವಾದದ್ದೂ ನಿರಂತರವಾದದ್ದೂ ಆಗಿದೆ.

‘ದೇವರು ವಿವೇಕಿಯೂ ಬಲಾಢ್ಯನೂ ಪ್ರೀತಿಸ್ವರೂಪಿಯೂ ಆಗಿರುವಲ್ಲಿ ಕಷ್ಟಗಳನ್ನು ಆತನು ಯಾಕೆ ಕೊನೆಗೊಳಿಸುತ್ತಿಲ್ಲ? ಮಕ್ಕಳು ಸಾಯುವಂತೆ, ದಬ್ಬಾಳಿಕೆಯು ಮುಂದುವರಿಯುವಂತೆ, ದುರಾಡಳಿತ ಮತ್ತು ಅತ್ಯಾಶೆಯ ಕಾರಣದಿಂದ ಭೂಮಿಯು ಹಾಳುಗೆಡವುವಂತೆ ಆತನು ಬಿಟ್ಟಿರುವುದೇಕೆ?’ ಎಂದು ನೀವು ಯೋಚಿಸಬಹುದು. ಇವು ಸೂಕ್ತ ಪ್ರಶ್ನೆಗಳಾಗಿವೆ. ಇವಕ್ಕೆ ತರ್ಕಬದ್ಧವಾದ ಉತ್ತರಗಳು ಬೇಕು.

ಸೃಷ್ಟಿಕರ್ತನಿಲ್ಲವೆನ್ನುವವರು ಏನೇ ಹೇಳಲಿ ಈ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ನೂರಾರು ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡುವ ಮೂಲಕ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿದ್ದಾರೆ. ಈ ಪತ್ರಿಕೆಯ ಪ್ರಕಾಶಕರು ಇದನ್ನೇ ಮಾಡುವಂತೆ ನಿಮ್ಮನ್ನು ಆಮಂತ್ರಿಸುತ್ತಾರೆ. ದೇವರ ವಾಕ್ಯ ಮತ್ತು ಆತನ ಸೃಷ್ಟಿಯ ಅಧ್ಯಯನದ ಮೂಲಕ ದೇವರ ಕುರಿತಾದ ನಿಮ್ಮ ಜ್ಞಾನವು ಬೆಳೆದಂತೆ ಆತನು ನಮ್ಮ ಸಮೀಪಕ್ಕೆ ಬರುವಾತನು ಮತ್ತು ಆತನನ್ನು ತಿಳಿಯಸಾಧ್ಯವಿದೆ ಎಂಬುದನ್ನು ನೀವು ಗ್ರಹಿಸುವಿರಿ. ವಾಸ್ತವದಲ್ಲಿ ದೇವರು “ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂಬ ವಿಷಯದಲ್ಲಿ ನೀವು ಭರವಸೆಯಿಂದಿರಬಲ್ಲಿರಿ.—ಅ. ಕೃತ್ಯಗಳು 17:27. (w08 5/1)

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರಿಗೆ ನಮ್ಮ ಮೇಲಿರುವ ಪ್ರೀತಿಯು ತಾಯಿಗೆ ಮಗುವಿನ ಮೇಲಿರುವ ಪ್ರೀತಿಗಿಂತ ನಿರಂತರ