ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವುದು ಸಫಲವಾಗುವುದೋ ನಿಮಗೆ ತಿಳಿಯದು

ಯಾವುದು ಸಫಲವಾಗುವುದೋ ನಿಮಗೆ ತಿಳಿಯದು

ಯಾವುದು ಸಫಲವಾಗುವುದೋ ನಿಮಗೆ ತಿಳಿಯದು

“ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.”—ಪ್ರಸಂ. 11:6.

ರೈತನಿಗೆ ತಾಳ್ಮೆ ತುಂಬ ಅಗತ್ಯ. (ಯಾಕೋ. 5:7) ಏಕೆಂದರೆ ಬಿತ್ತಿದ ಬೀಜಗಳು ತಕ್ಷಣ ಮೊಳಕೆಯೊಡೆದು ಬೆಳೆಯುವುದಿಲ್ಲ. ಸೂಕ್ತ ಸ್ಥಿತಿಯಿರುವಲ್ಲಿ ಅವು ಮೊಳಕೆಯೊಡೆದು ನೆಲದ ಮಣ್ಣಿನಿಂದ ಹೊರ ಇಣುಕುತ್ತವೆ. ಕ್ರಮೇಣ ಅವು ಗಿಡಗಳಾಗಿ ಬೆಳೆದು ತೆನೆತುಂಬ ಕಾಳುಗಳು ಕಾಣಿಸಿಕೊಳ್ಳುತ್ತವೆ. ಕೊನೆಗೆ ಇಡೀ ಹೊಲ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಬೆಳವಣಿಗೆಯ ಈ ಚಮತ್ಕಾರವನ್ನು ಕಣ್ಣಾರೆ ನೋಡುವುದು ಎಷ್ಟು ರೋಮಾಂಚಕ! ಅಲ್ಲದೆ ಈ ಬೆಳವಣಿಗೆಗೆ ಕಾರಣನಾಗಿರುವಾತನು ಯಾರೆಂದು ತಿಳಿಯುವುದು ನಮ್ಮನ್ನು ದೀನರನ್ನಾಗಿಸುತ್ತದೆ. ನಾವು ಬೀಜವನ್ನು ಬಿತ್ತಬಲ್ಲೆವು, ಅದಕ್ಕೆ ನೀರು ಹಾಕಬಲ್ಲೆವು. ಆದರೆ ದೇವರೊಬ್ಬನೇ ಅದನ್ನು ಬೆಳೆಸಶಕ್ತನು.—1 ಕೊರಿಂಥ 3:6 ಹೋಲಿಸಿ.

2 ಹಿಂದಿನ ಲೇಖನದಲ್ಲಿ ತಿಳಿಸಲಾದಂತೆ ಯೇಸು, ರಾಜ್ಯ ಸಾರುವ ಕೆಲಸವನ್ನು ರೈತನು ಮಾಡುವ ಬೀಜ ಬಿತ್ತನೆಗೆ ಹೋಲಿಸಿದನು. ವಿವಿಧ ರೀತಿಯ ಮಣ್ಣಿನ ಕುರಿತ ಸಾಮ್ಯದಲ್ಲಿ, ರೈತನು ಒಳ್ಳೇ ಬೀಜವನ್ನೇ ಬಿತ್ತುವುದಾದರೂ ಅದು ಬೆಳೆದು ಫಲಕೊಡುವುದೋ ಇಲ್ಲವೋ ಎಂಬುದು ವ್ಯಕ್ತಿಯ ಹೃದಯದ ಸ್ಥಿತಿಯ ಮೇಲೆ ಅವಲಂಬಿಸಿದೆ ಎಂದು ಯೇಸು ಒತ್ತಿಹೇಳಿದನು. (ಮಾರ್ಕ 4:3-9) ಮಲಗುವ ಬಿತ್ತನೆಗಾರನ ಕುರಿತ ಸಾಮ್ಯದಲ್ಲಿ, ರೈತನಿಗೆ ಬೆಳವಣಿಗೆಯ ಪ್ರಕ್ರಿಯೆ ಸಂಪೂರ್ಣವಾಗಿ ಅರ್ಥವಾಗದು ಎಂದು ಯೇಸು ಎತ್ತಿಹೇಳಿದನು. ಏಕೆಂದರೆ ಬೆಳವಣಿಗೆಯಾಗುವುದು ಮಾನವ ಪ್ರಯತ್ನಗಳಿಂದಲ್ಲ ಬದಲಿಗೆ ದೇವರ ಬಲದಿಂದಲೇ. (ಮಾರ್ಕ 4:26-29) ನಾವೀಗ, ಯೇಸು ಕೊಟ್ಟ ಬೇರೆ ಮೂರು ಸಾಮ್ಯಗಳನ್ನು ಪರಿಗಣಿಸೋಣ. ಅವು ಸಾಸಿವೆಕಾಳಿನ ಸಾಮ್ಯ, ಹುಳಿಹಿಟ್ಟಿನ ಸಾಮ್ಯ ಮತ್ತು ಬಲೆಯ ಕುರಿತ ಸಾಮ್ಯವಾಗಿವೆ. *

ಸಾಸಿವೆಕಾಳಿನ ಸಾಮ್ಯ

3 ಮಾರ್ಕ ಪುಸ್ತಕದ 4ನೇ ಅಧ್ಯಾಯದಲ್ಲೇ ದಾಖಲಾಗಿರುವ ಸಾಸಿವೆಕಾಳಿನ ಸಾಮ್ಯದಲ್ಲಿ ಎದ್ದುಕಾಣುವ ಎರಡು ಅಂಶಗಳಿವೆ. ಒಂದು, ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯಿಸುವವರ ಸಂಖ್ಯೆಯಲ್ಲಿ ಶೀಘ್ರ ವೃದ್ಧಿ; ಎರಡು, ಸಂದೇಶ ಸ್ವೀಕರಿಸುವವರಿಗೆ ದೊರಕುವ ಸಂರಕ್ಷಣೆ. ಯೇಸು ತಿಳಿಸಿದ್ದು: “ದೇವರ ರಾಜ್ಯವನ್ನು ಯಾವದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ? ಅದು ಸಾಸಿವೆಕಾಳಿನಂತಿರುತ್ತದೆ. ಭೂಮಿಯಲ್ಲಿ ಬಿತ್ತುವಾಗ ಅದು ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡದೊಡ್ಡ ಕೊಂಬೆಗಳನ್ನು ಬಿಡುವದರಿಂದ ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅದರ ನೆರಳಿನಲ್ಲಿ ವಾಸಮಾಡುವದಕ್ಕಾಗುತ್ತದೆ.”—ಮಾರ್ಕ 4:30-32.

4 ಈ ಸಾಮ್ಯದಲ್ಲಿನ ವರ್ಣನೆ ‘ದೇವರ ರಾಜ್ಯದ’ ಬೆಳವಣಿಗೆಯ ಕುರಿತಾಗಿದೆ. ಈ ಬೆಳವಣಿಗೆ, ರಾಜ್ಯ ಸಂದೇಶದ ಹಬ್ಬುವಿಕೆ ಮತ್ತು ಸಾ.ಶ. 33ರ ಪಂಚಾಶತ್ತಮದಂದಿನಿಂದ ಆದ ಕ್ರೈಸ್ತ ಸಭೆಯ ಬೆಳವಣಿಗೆಯಿಂದ ವ್ಯಕ್ತವಾಗಿದೆ. ಗಾತ್ರದಲ್ಲಿ ತುಂಬ ಚಿಕ್ಕದಾಗಿರುವ ಸಾಸಿವೆಕಾಳನ್ನು ಯಾವುದೇ ಚಿಕ್ಕ ಸಂಗತಿಯನ್ನು ಪ್ರತಿನಿಧಿಸಲು ಬಳಸಲಾಗುತ್ತಿತ್ತು. (ಲೂಕ 17:6 ಹೋಲಿಸಿ.) ಆದರೆ ಸಮಯಾನಂತರ ಸಾಸಿವೆಯ ಗಿಡವು 10ರಿಂದ 15 ಅಡಿ ಎತ್ತರಕ್ಕೆ ಬೆಳೆದು, ಗಟ್ಟಿಮುಟ್ಟಾದ ರೆಂಬೆಗಳಿದ್ದು ಒಂದು ಮರದಂತೆ ಕಾಣಬಹುದು.—ಮತ್ತಾ. 13:31, 32.

5 ಸಾ.ಶ. 33ರಲ್ಲಿ ಕ್ರೈಸ್ತ ಸಭೆಯ ಬೆಳವಣಿಗೆಯು ಚಿಕ್ಕ ಪ್ರಮಾಣದಲ್ಲಿ ಆರಂಭಗೊಂಡಿತು. ಅಂದು ಸುಮಾರು 120 ಶಿಷ್ಯರು ಪವಿತ್ರಾತ್ಮದಿಂದ ಅಭಿಷಿಕ್ತರಾದರು. ಸ್ವಲ್ಪ ಸಮಯದೊಳಗೆ ಶಿಷ್ಯರ ಈ ಸಣ್ಣ ಸಭೆಗೆ ಸಾವಿರಾರು ಮಂದಿ ವಿಶ್ವಾಸಿಗಳಾಗಿ ಸೇರಿದರು. (ಅ.ಕೃತ್ಯಗಳು 2:41; 4:4; 5:28; 6:7; 12:24; 19:20 ಓದಿ.) ಕೊಯ್ಲುಗಾರರ ಸಂಖ್ಯೆಯು ಕೇವಲ ಮೂರೇ ದಶಕಗಳೊಳಗೆ ಎಷ್ಟು ಬೆಳೆಯಿತೆಂದರೆ, ಅಷ್ಟರಲ್ಲೇ ಸುವಾರ್ತೆಯು ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಿದೆ’ ಎಂದು ಅಪೊಸ್ತಲ ಪೌಲನು ಕೊಲೊಸ್ಸೆ ಸಭೆಯವರಿಗೆ ಬರೆಯಶಕ್ತನಾದನು. (ಕೊಲೊ. 1:23) ಎಂಥ ಗಮನಾರ್ಹ ಬೆಳವಣಿಗೆ!

6 ದೇವರ ರಾಜ್ಯವು 1914ರಲ್ಲಿ ಸ್ವರ್ಗದಲ್ಲಿ ಸ್ಥಾಪನೆಗೊಂಡಾಗಿನಿಂದ, ಸಾಸಿವೆ ‘ಮರದ’ ಕೊಂಬೆಗಳು ನಿರೀಕ್ಷೆಮೀರಿ ಬೆಳೆಯುತ್ತಿವೆ. ಹೀಗೆ, ದೇವಜನರು ಯೆಶಾಯನ ಈ ಪ್ರವಾದನೆಯ ಅಕ್ಷರಾರ್ಥಕ ನೆರವೇರಿಕೆಯನ್ನು ಕಂಡಿದ್ದಾರೆ: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” (ಯೆಶಾ. 60:22) 2008ನೇ ಇಸವಿಯೊಳಗೆ 70 ಲಕ್ಷದಷ್ಟು ಸಾಕ್ಷಿಗಳು 230 ದೇಶದ್ವೀಪಗಳಲ್ಲಿ ಈ ಕೆಲಸ ಮಾಡುವರೆಂದು 20ನೇ ಶತಮಾನದ ಆರಂಭದಲ್ಲಿ ರಾಜ್ಯವನ್ನು ಸಾರುತ್ತಿದ್ದ ಅಭಿಷಿಕ್ತರ ಚಿಕ್ಕ ಗುಂಪು ಎಣಿಸಿರಲೇ ಇಲ್ಲ. ಹೌದು, ಈ ಬೆಳವಣಿಗೆಯು ಯೇಸುವಿನ ಸಾಮ್ಯದ ಸಾಸಿವೆಕಾಳಿನ ಬೆಳವಣಿಗೆಯಷ್ಟೇ ಗಮನಾರ್ಹವಾಗಿದೆ!

7 ಬೆಳವಣಿಗೆ ಇಷ್ಟಕ್ಕೇ ಸೀಮಿತವೋ? ಇಲ್ಲ. ಕ್ರಮೇಣ ಭೂಮಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ದೇವರ ರಾಜ್ಯದ ಪ್ರಜೆಯಾಗಿರುವನು. ಎಲ್ಲ ವಿರೋಧಿಗಳನ್ನು ತೆಗೆದುಹಾಕಲಾಗುವುದು. ಇದು, ಪರಮಾಧಿಕಾರಿ ಪ್ರಭುವಾಗಿರುವ ಯೆಹೋವನು ಭೂವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡುವುದರಿಂದ ಆಗುವುದೇ ಹೊರತು ಮಾನವ ಪ್ರಯತ್ನಗಳಿಂದಲ್ಲ. (ದಾನಿಯೇಲ 2:34, 35 ಓದಿ.) ಆಗ, ಯೆಶಾಯನು ದಾಖಲಿಸಿದ ಇನ್ನೊಂದು ಪ್ರವಾದನೆಯು ನೆರವೇರುವುದನ್ನು ನಾವು ನೋಡುವೆವು. ಅದು ಅನ್ನುವುದು: “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಯೆಶಾ. 11:9.

8 ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಈ ರಾಜ್ಯದ ನೆರಳಿನಲ್ಲಿ ವಾಸಮಾಡುವವು ಎಂದು ಯೇಸು ಹೇಳಿದನು. ವಿವಿಧ ರೀತಿಯ ಮಣ್ಣಿನಲ್ಲಿ ಬೀಜ ಬಿತ್ತುವವನ ಸಾಮ್ಯದಲ್ಲಿನ ಹಕ್ಕಿಗಳಂತೆ ಈ ಹಕ್ಕಿಗಳು ಒಳ್ಳೇ ಬೀಜಗಳನ್ನು ತಿಂದುಬಿಡಲು ಯತ್ನಿಸುವ ರಾಜ್ಯದ ವೈರಿಗಳನ್ನು ಪ್ರತಿನಿಧಿಸುವುದಿಲ್ಲ. (ಮಾರ್ಕ 4:4) ಬದಲಿಗೆ ಸಂರಕ್ಷಣೆಗಾಗಿ ಕ್ರೈಸ್ತ ಸಭೆಯನ್ನು ಮರೆಹೋಗುವ ಸಹೃದಯಿಗಳನ್ನು ಪ್ರತಿನಿಧಿಸುತ್ತವೆ. ಇಂಥವರಿಗೆ ಈಗಲೂ, ಆಧ್ಯಾತ್ಮಿಕವಾಗಿ ಹೊಲೆಮಾಡುವ ರೂಢಿಗಳಿಂದ ಹಾಗೂ ಈ ದುಷ್ಟ ಲೋಕದ ಅಶುದ್ಧ ಆಚಾರಗಳಿಂದ ಸಂರಕ್ಷಣೆ ಸಿಗುತ್ತದೆ. (ಯೆಶಾಯ 32:1, 2 ಹೋಲಿಸಿ.) ಮೆಸ್ಸೀಯ ರಾಜ್ಯವನ್ನು ಯೆಹೋವನು ತದ್ರೀತಿಯಲ್ಲಿ ಒಂದು ಮರಕ್ಕೆ ಹೋಲಿಸುತ್ತಾ, ಪ್ರವಾದನಾತ್ಮಕವಾಗಿ ಹೀಗಂದನು: “ನಾನು ಅದನ್ನು ಇಸ್ರಾಯೇಲಿನ ಪರ್ವತಾಗ್ರದಲ್ಲಿ ನೆಡಲು ಅದು ಸೊಂಪಾದ ದೇವದಾರುಮರವಾಗಿ ರೆಂಬೆಗಳನ್ನು ಹರಡಿಸಿ ಫಲಕೊಡುವದು; ಅದರಲ್ಲಿ ಸಕಲವಿಧಪಕ್ಷಿಗಳು ವಾಸಿಸುತ್ತಾ ಅದರ ರೆಂಬೆಗಳ ನೆರಳನ್ನು ಆಶ್ರಯಿಸುವವು.”—ಯೆಹೆ. 17:23.

ಹುಳಿಹಿಟ್ಟಿನ ಸಾಮ್ಯ

9 ಬೆಳವಣಿಗೆಯು ಯಾವಾಗಲೂ ಮಾನವರ ಕಣ್ಣಿಗೆ ಗೋಚರವಾಗುವುದಿಲ್ಲ. ಯೇಸು ಮತ್ತೊಂದು ಸಾಮ್ಯದಲ್ಲಿ ಇದಕ್ಕೆ ಒತ್ತುಕೊಟ್ಟನು. ಅವನಂದದ್ದು: “ಪರಲೋಕರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತಕ್ಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.” (ಮತ್ತಾ. 13:33) ಈ ಹುಳಿ ಏನನ್ನು ಪ್ರತಿನಿಧಿಸುತ್ತದೆ? ಅದಕ್ಕೂ ರಾಜ್ಯದ ಬೆಳೆವಣಿಗೆಗೂ ಯಾವ ಸಂಬಂಧವಿದೆ?

10 ಬೈಬಲಿನಲ್ಲಿ ಹುಳಿಯು ಅನೇಕವೇಳೆ ಪಾಪವನ್ನು ಸಂಕೇತಿಸುತ್ತದೆ. ಉದಾಹರಣೆಗೆ ಅಪೊಸ್ತಲ ಪೌಲನು, ಪಾಪಿಯೊಬ್ಬನು ಕೊರಿಂಥ ಸಭೆಯಲ್ಲಿ ಬೀರಿದ ಕೆಟ್ಟ ಪ್ರಭಾವಕ್ಕೆ ಸೂಚಿಸಲು ಹುಳಿ ಎಂಬ ಪದವನ್ನು ಬಳಸಿದನು. (1 ಕೊರಿಂ. 5:6-8) ಹಾಗಾದರೆ ಈ ಸಾಮ್ಯದಲ್ಲಿ ಯೇಸು ಹುಳಿಯ ಬಗ್ಗೆ ಹೇಳಿದಾಗ ಯಾವುದೋ ನಕಾರಾತ್ಮಕ ವಿಷಯದ ಬೆಳವಣಿಗೆಗೆ ಸೂಚಿಸುತ್ತಿದ್ದನೋ?

11 ಈ ಪ್ರಶ್ನೆಯನ್ನು ಉತ್ತರಿಸುವ ಮುನ್ನ ನಾವು ಮೂರು ವಾಸ್ತವಾಂಶಗಳ ಕಡೆಗೆ ಗಮನಹರಿಸತಕ್ಕದ್ದು. ಮೊದಲನೆಯದಾಗಿ, ಪಸ್ಕಹಬ್ಬದ ವೇಳೆ ಹುಳಿಯ ಬಳಕೆಯನ್ನು ಯೆಹೋವನು ನಿಷೇಧಿಸಿದನಾದರೂ ಬೇರೆ ಸಮಯಗಳಲ್ಲಿ ಹುಳಿಯಂಶ ಇರುವ ಯಜ್ಞಗಳನ್ನು ಆತನು ಸ್ವೀಕರಿಸಿದನು. ಹುಳಿಯನ್ನು, ಕೃತಜ್ಞತೆ ಸೂಚಿಸುವ ಸಮಾಧಾನ ಯಜ್ಞಗಳಲ್ಲಿ ಬಳಸಲಾಗುತ್ತಿತ್ತು. ಈ ಯಜ್ಞವನ್ನು ಅರ್ಪಿಸುವ ವ್ಯಕ್ತಿಯು ಯೆಹೋವನ ಅನೇಕಾನೇಕ ಆಶೀರ್ವಾದಗಳಿಗೆ ಕೃತಜ್ಞತಾಭಾವದಿಂದ ಮತ್ತು ಸ್ವಇಚ್ಛೆಯಿಂದ ತನ್ನ ಕಾಣಿಕೆಯನ್ನು ಅರ್ಪಿಸುತ್ತಾನೆ. ಈ ಯಜ್ಞದ ಭಾಗವಾಗಿದ್ದ ಭೋಜನವು ಆನಂದದಾಯಕವಾಗಿತ್ತು.—ಯಾಜ. 7:11-15.

12 ಎರಡನೆಯದಾಗಿ, ಒಂದು ಕಡೆ ಬೈಬಲಿನಲ್ಲಿ ನಕಾರಾತ್ಮಕ ಅರ್ಥದಲ್ಲಿ ಬಳಸಿದ ಪದವನ್ನೇ ಬೇರೊಂದು ಕಡೆ ಸಕಾರಾತ್ಮಕವಾಗಿ ಬಳಸಲಾಗಿದೆ. ಉದಾಹರಣೆಗೆ, ಸೈತಾನನನ್ನು 1 ಪೇತ್ರ 5:8ರಲ್ಲಿ ಸಿಂಹಕ್ಕೆ ಹೋಲಿಸಲಾಗಿದೆ. ಈ ಮೂಲಕ ಸೈತಾನನ ಭಯಂಕರ ಹಾಗೂ ದುಷ್ಟ ಸ್ವಭಾವವನ್ನು ಚಿತ್ರಿಸಲಾಗಿದೆ. ಆದರೆ ಪ್ರಕಟನೆ 5:5ರಲ್ಲಿ ಯೇಸುವನ್ನು ಸಹ ಸಿಂಹಕ್ಕೆ ಹೋಲಿಸಲಾಗಿದೆ. “ಯೂದಾ ಕುಲದಲ್ಲಿ ಜನಿಸಿದ ಸಿಂಹ” ಎಂದು ಆತನನ್ನು ಗುರುತಿಸಲಾಗಿದೆ. ಈ ಮೂಲಕ ಆತನನ್ನು ಧೈರ್ಯ ಹಾಗೂ ನ್ಯಾಯದ ಪ್ರತೀಕವಾಗಿ ಚಿತ್ರಿಸಲಾಗಿದೆ.

13 ಮೂರನೆಯದಾಗಿ, ಯೇಸು ತನ್ನ ಸಾಮ್ಯದಲ್ಲಿ ಹುಳಿಯು ಹಿಟ್ಟನ್ನೆಲ್ಲಾ ಕೆಡಿಸಿ ಅದು ಉಪಯೋಗಕ್ಕೆ ಬಾರದಂತೆ ಮಾಡುತ್ತದೆ ಎಂದು ಹೇಳಲಿಲ್ಲ. ಬದಲಿಗೆ ರೊಟ್ಟಿ ತಯಾರಿಸುವ ಸಾಮಾನ್ಯ ವಿಧಾನಕ್ಕೆ ಸೂಚಿಸುತ್ತಿದ್ದನಷ್ಟೇ. ಗೃಹಿಣಿಯೊಬ್ಬಳು ಬೇಕೆಂತಲೇ ಹಿಟ್ಟಿಗೆ ಹುಳಿ ಬೆರೆಸುತ್ತಿದ್ದಳು ಮತ್ತು ಇದರಿಂದ ನಿರೀಕ್ಷಿಸಿದ ಪರಿಣಾಮ ಸಿಗುತ್ತಿತ್ತು. ಹುಳಿಯು ಹಿಟ್ಟಿನಲ್ಲಿ ಬೆರೆತು ಕಣ್ಣಿಗೆ ಮರೆಯಾಗಿತ್ತು. ಹೀಗೆ, ಹುಳಿಯಾಗುವ ಪ್ರಕ್ರಿಯೆಯು ಗೃಹಿಣಿಗೆ ಕಾಣುವುದಿಲ್ಲ. ಇದು, ಬೀಜವನ್ನು ಬಿತ್ತಿ ರಾತ್ರಿಹೊತ್ತಿನಲ್ಲಿ ಮಲಗುವ ಮನುಷ್ಯನನ್ನು ನೆನಪಿಗೆ ತರುತ್ತದೆ. ಯೇಸು ಹೇಳಿದ್ದೇನೆಂದರೆ, ಆ ಮನುಷ್ಯನಿಗೆ “ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವದು.” (ಮಾರ್ಕ 4:27) ಕಣ್ಣಿಗೆ ಕಾಣದಂಥ ರೀತಿಯಲ್ಲಾಗುವ ಆಧ್ಯಾತ್ಮಿಕ ಬೆಳವಣಿಗೆಯನ್ನು ಸೂಚಿಸಲು ಎಂಥ ಸರಳ ದೃಷ್ಟಾಂತ! ಮೊದಮೊದಲು ಬೆಳವಣಿಗೆಯು ನಮ್ಮ ಕಣ್ಣಿಗೆ ಗೋಚರವಾಗಲಿಕ್ಕಿಲ್ಲ ಆದರೆ ಕ್ರಮೇಣ ಅದರ ಫಲಿತಾಂಶಗಳು ವ್ಯಕ್ತವಾಗುತ್ತವೆ.

14 ಈ ಬೆಳವಣಿಗೆಯು ಮಾನವ ಕಣ್ಣಿಗೆ ಅಗೋಚರವಾಗಿದೆ ಮಾತ್ರವಲ್ಲ ಜಗದ್ವ್ಯಾಪಕವಾಗಿಯೂ ನಡೆಯುತ್ತದೆ. ಇದು, ಹುಳಿಹಿಟ್ಟಿನ ಸಾಮ್ಯದಲ್ಲಿ ಒತ್ತಿಹೇಳಲಾದ ಇನ್ನೊಂದು ವಿಷಯವಾಗಿದೆ. ಹುಳಿಯು, ‘ಮೂರು ಸೇರು ಹಿಟ್ಟನ್ನು’ ಅಂದರೆ ಕಣಿಕವೆಲ್ಲವನ್ನು ಹುಳಿಗೊಳಿಸುತ್ತದೆ. (ಲೂಕ 13:21) ಹುಳಿಯಂತೆ ಆಧ್ಯಾತ್ಮಿಕ ಬೆಳವಣಿಗೆಗೆ ಸ್ಫೂರ್ತಿ ಕೊಟ್ಟಿರುವ ರಾಜ್ಯ ಸಾರುವಿಕೆಯ ಕೆಲಸವು ಈಗ ಎಷ್ಟು ವಿಸ್ತಾರವಾಗಿ ವ್ಯಾಪಿಸಿದೆಯೆಂದರೆ, “ಭೂಲೋಕದ ಕಟ್ಟಕಡೆಯವರೆಗೂ” ರಾಜ್ಯದ ಸಂದೇಶ ಸಾರಲ್ಪಟ್ಟಿದೆ. (ಅ. ಕೃ. 1:8; ಮತ್ತಾ. 24:14) ರಾಜ್ಯಕ್ಕೆ ಸಂಬಂಧಪಟ್ಟ ಕೆಲಸದ ವಿಸ್ಮಯಕಾರಿ ವಿಸ್ತರಣೆಯಲ್ಲಿ ನಮಗೂ ಒಂದು ಪಾಲಿರುವುದು ಎಂಥ ಅತ್ಯಮೂಲ್ಯ ಗೌರವ!

ಒಂದು ಬಲೆ

15 ಯೇಸುವಿನ ಶಿಷ್ಯರೆಂದು ಹೇಳಿಕೊಳ್ಳುವವರ ಸಂಖ್ಯೆಗಿಂತ ಅವರ ಗುಣಮಟ್ಟ ಹೆಚ್ಚು ಮುಖ್ಯವಾಗಿದೆ. ರಾಜ್ಯದ ಬೆಳವಣಿಗೆಯ ಈ ಅಂಶಕ್ಕೆ ಸೂಚಿಸುತ್ತಾ ಯೇಸು ಒಂದು ಬಲೆಯ ಸಾಮ್ಯವನ್ನು ಕೊಟ್ಟನು. ಆತನಂದದ್ದು: “ಪರಲೋಕರಾಜ್ಯವು ಒಂದು ಬಲೆಗೆ ಹೋಲಿಕೆಯಾಗಿದೆ. ಅದನ್ನು ಸಮುದ್ರದಲ್ಲಿ ಹಾಕಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿದರು.”—ಮತ್ತಾ. 13:47.

16 ರಾಜ್ಯ ಸಾರುವಿಕೆಯ ಕೆಲಸವನ್ನು ಪ್ರತಿನಿಧಿಸುವ ಬಲೆಯು ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತದೆ. ಯೇಸು ತಿಳಿಸಿದ್ದು: “ಅದು [ಬಲೆ] ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಟುಬಿಟ್ಟರು. ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವದು. ದೇವದೂತರು ಹೊರಟುಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆಮಾಡಿ ಅವರನ್ನು ಬೆಂಕೀಕೊಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು.”—ಮತ್ತಾ. 13:48-50.

17 ಈ ಪ್ರತ್ಯೇಕಿಸುವಿಕೆಯು, ಯೇಸು ತನ್ನ ಮಹಿಮೆಯಲ್ಲಿ ಬರುವಾಗ ನಡೆಯುವ ಆಡು ಮತ್ತು ಕುರಿಗಳ ಅಂತಿಮ ನ್ಯಾಯತೀರ್ಪನ್ನು ಸೂಚಿಸುತ್ತದೋ? (ಮತ್ತಾ. 25:31-33) ಇಲ್ಲ. ಆ ಅಂತಿಮ ನ್ಯಾಯತೀರ್ಪು, ಮಹಾ ಸಂಕಟದ ಸಮಯದಲ್ಲಿ ಯೇಸುವಿನ ಬರೋಣದ ವೇಳೆ ನಡೆಯುವುದು. ಆದರೆ ಬಲೆಯ ಕುರಿತ ಸಾಮ್ಯದಲ್ಲಿ ತಿಳಿಸಲಾದ ಪ್ರತ್ಯೇಕಿಸುವಿಕೆಯು ‘ಯುಗದ’ ಇಲ್ಲವೆ ಈ ವಿಷಯ ವ್ಯವಸ್ಥೆಯ ಸಮಾಪ್ತಿಯಲ್ಲಿ ನಡೆಯುತ್ತದೆ. * ನಾವೀಗ ಯುಗದ ಸಮಾಪ್ತಿಯಲ್ಲಿ ಜೀವಿಸುತ್ತಿದ್ದೇವೆ ಮತ್ತು ಈ ದಿನಗಳೇ ಮಹಾ ಸಂಕಟಕ್ಕೆ ನಡೆಸುವವು. ಹಾಗಾದರೆ ಪ್ರತ್ಯೇಕಿಸುವ ಕೆಲಸವು ಇಂದು ಹೇಗೆ ನಡೆಯುತ್ತಿದೆ?

18 ಆಧುನಿಕ ಸಮಯಗಳಲ್ಲಿ ಮಾನವಕುಲವೆಂಬ ಸಮುದ್ರದಿಂದ ಸಾಂಕೇತಿಕವಾಗಿ ಮೀನುಗಳಂತಿರುವ ಲಕ್ಷಾಂತರ ಮಂದಿ ಯೆಹೋವನ ಸಭೆಗೆ ಆಕರ್ಷಿತರಾಗಿದ್ದಾರೆ. ಕೆಲವರು ಜ್ಞಾಪಕಾಚರಣೆಗೆ ಹಾಜರಾಗುತ್ತಾರೆ. ಇತರರು ನಮ್ಮ ಕೂಟಗಳಿಗೆ ಬರುತ್ತಾರೆ. ಇನ್ನೂ ಕೆಲವರು ಸಂತೋಷದಿಂದ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡಿದ್ದಾರೆ. ಇವರೆಲ್ಲರೂ ಮುಂದೆ ನಿಜ ಕ್ರೈಸ್ತರಾಗುತ್ತಾರೋ? ಅವರೆಲ್ಲರನ್ನು “ದಡಕ್ಕೆ ಎಳೆದು” ಹಾಕಲಾಗಿರಬಹುದು ನಿಜ, ಆದರೆ “ಒಳ್ಳೆಯ ಮೀನುಗಳನ್ನು” ಮಾತ್ರ ಪುಟ್ಟಿಗಳಲ್ಲಿ ತುಂಬಿಸಲಾಗುವುದೆಂದು ಯೇಸು ತಿಳಿಸಿದನು. ಈ ಪುಟ್ಟಿಗಳು ಕ್ರೈಸ್ತ ಸಭೆಗಳನ್ನು ಪ್ರತಿನಿಧಿಸುತ್ತವೆ. ಕೆಟ್ಟ ಮೀನುಗಳಂತಿರುವವರನ್ನು ಬಿಸಾಡಿಬಿಡಲಾಗುವುದು ಮತ್ತು ಕಟ್ಟಕಡೆಗೆ ಅಂಥವರನ್ನು ಭವಿಷ್ಯದಲ್ಲಾಗುವ ನಾಶಕ್ಕೆ ಸೂಚಿಸುವ ಸಾಂಕೇತಿಕ ಬೆಂಕೀಕೊಂಡದಲ್ಲಿ ಹಾಕಲಾಗುವುದು.

19 ಪುಟ್ಟಿಗೆ ಸೇರಿಸಲ್ಪಡದ ಕೆಟ್ಟ ಮೀನುಗಳಂತೆ, ಹಿಂದೊಮ್ಮೆ ಯೆಹೋವನ ಸಾಕ್ಷಿಗಳಿಂದ ಬೈಬಲನ್ನು ಕಲಿಯುತ್ತಿದ್ದ ಅನೇಕರು ಈಗ ಅಧ್ಯಯನವನ್ನು ನಿಲ್ಲಿಸಿಬಿಟ್ಟಿದ್ದಾರೆ. ಅಲ್ಲದೆ ಕ್ರೈಸ್ತ ಹೆತ್ತವರಿರುವ ಕೆಲವರು ಯೇಸುವಿನ ನಿಕಟ ಹಿಂಬಾಲಕರಾಗಲು ಇಷ್ಟಪಡದೆ ಒಂದೋ ಯೆಹೋವನನ್ನು ಸೇವಿಸಬೇಕೆಂಬ ನಿರ್ಣಯ ಮಾಡುವುದಿಲ್ಲ ಅಥವಾ ಸ್ವಲ್ಪ ಸಮಯ ಆತನನ್ನು ಸೇವಿಸಿ ನಂತರ ಬಿಟ್ಟುಬಿಡುತ್ತಾರೆ. * (ಯೆಹೆ. 33:32, 33) ಏನೇ ಆಗಲಿ, ಅಂತಿಮ ನ್ಯಾಯತೀರ್ಪಿನ ದಿನ ಬರುವ ಮುಂಚೆ ಪುಟ್ಟಿಯಂಥ ಸಭೆಗಳಲ್ಲಿ ಸೇರಿಸಲ್ಪಡುವಂತೆ ಎಲ್ಲ ಸಹೃದಯದ ಜನರು ಎಡೆಮಾಡಿಕೊಡಬೇಕು ಮತ್ತು ಸುರಕ್ಷಿತ ತಾಣದಲ್ಲೇ ಉಳಿಯಬೇಕು.

20 ಹಾಗಾದರೆ, ಬೆಳವಣಿಗೆಯ ಕುರಿತಾದ ಯೇಸುವಿನ ಸಾಮ್ಯಗಳ ಚುಟುಕಾದ ವಿಮರ್ಶೆಯಿಂದ ನಾವೇನನ್ನು ಕಲಿತೆವು? ಮೊದಲನೆಯದಾಗಿ, ಸಾಸಿವೆಕಾಳಿನ ಬೆಳವಣಿಗೆಯಂತೆ, ಭೂಮಿಯಲ್ಲಿ ರಾಜ್ಯ ಸಂದೇಶಕ್ಕೆ ಕಿವಿಗೊಡುವವರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಯೆಹೋವನ ಕೆಲಸವು ವೃದ್ಧಿಯಾಗುವುದನ್ನು ಯಾವುದೂ ತಡೆಯಲಾರದು! (ಯೆಶಾ. 54:17) ಅಲ್ಲದೆ, ‘ಮರದ ನೆರಳಿನಲ್ಲಿ ವಾಸಮಾಡುವದಕ್ಕೆ’ ಬರುವವರಿಗೆ ಆಧ್ಯಾತ್ಮಿಕ ಸಂರಕ್ಷಣೆ ದೊರಕಿದೆ. ಎರಡನೆಯದಾಗಿ, ಬೆಳೆಸುವವನು ದೇವರೇ. ಕಣ್ಣಿಗೆ ಮರೆಯಾಗಿರುವ ಹುಳಿಯು ಹೇಗೆ ಹಿಟ್ಟನ್ನೆಲ್ಲಾ ವ್ಯಾಪಿಸಿಕೊಳ್ಳುತ್ತದೋ ಹಾಗೆಯೇ ಈ ಬೆಳವಣಿಗೆ ನಮ್ಮ ಕಣ್ಣಿಗೆ ಗೋಚರವಾಗದಿದ್ದರೂ ಅಥವಾ ನಮಗೆ ಅರ್ಥವಾಗದಿದ್ದರೂ, ಅದು ಖಂಡಿತ ನಡೆಯುತ್ತಿದೆ! ಮೂರನೆಯದಾಗಿ, ಪ್ರತಿಕ್ರಿಯೆ ತೋರಿಸುವ ಎಲ್ಲರೂ ಒಳ್ಳೆಯವರಾಗಿ ಪರಿಣಮಿಸಲಿಕ್ಕಿಲ್ಲ. ಕೆಲವರು ಯೇಸುವಿನ ಸಾಮ್ಯದ ಕೆಟ್ಟ ಮೀನುಗಳಂತಿರುವರು.

21 ಹಾಗಿದ್ದರೂ ಯೆಹೋವನು ಸೆಳೆದಿರುವ ಇಷ್ಟು ದೊಡ್ಡ ಸಂಖ್ಯೆಯ ‘ಒಳ್ಳೆಯವರನ್ನು’ ನೋಡುವುದು ಎಷ್ಟು ಪ್ರೋತ್ಸಾಹಕರ! (ಯೋಹಾ. 6:44) ಯೆಹೋವನು ಜನರನ್ನು ಸೆಳೆಯುತ್ತಿರುವುದರಿಂದಲೇ ಎಲ್ಲ ದೇಶಗಳಲ್ಲಿ ಅಸಾಧಾರಣ ಅಭಿವೃದ್ಧಿಯಾಗುತ್ತಿದೆ. ಈ ಮಹತ್ತಾದ ಬೆಳವಣಿಗೆಗೆ ಮಹಿಮೆಯು ಯೆಹೋವ ದೇವರಿಗೆ ಸಲ್ಲುತ್ತದೆ. ನಾವು ಕಣ್ಣಾರೆ ನೋಡುತ್ತಿರುವ ಈ ಬೆಳವಣಿಗೆಯು, ಶತಮಾನಗಳ ಹಿಂದೆ ಬರೆಯಲಾದ ಬುದ್ಧಿಮಾತನ್ನು ಪಾಲಿಸುವಂತೆ ನಮ್ಮನ್ನು ಪ್ರಚೋದಿಸಬೇಕು. ಆ ಮಾತೇನೆಂದರೆ, “ಮುಂಜಾನೆ ಬೀಜಬಿತ್ತು, . . . ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.”—ಪ್ರಸಂ. 11:6.

[ಪಾದಟಿಪ್ಪಣಿಗಳು]

^ ಪ್ಯಾರ. 4 ಕಾವಲಿನಬುರುಜು, 1992 ಸಪ್ಟೆಂಬರ್‌ 15, ಪುಟ 17-22 ಮತ್ತು 1975 ಅಕ್ಟೋಬರ್‌ 1 (ಇಂಗ್ಲಿಷ್‌) ಪುಟ 589-608ರಲ್ಲಿ ಕೊಡಲಾದ ವಿವರಣೆಯನ್ನು ಸ್ವಲ್ಪ ತಿದ್ದಿ ಈ ಮುಂದಿನ ವಿವರಣೆಗಳನ್ನು ಕೊಡಲಾಗಿದೆ.

^ ಪ್ಯಾರ. 22 ಮತ್ತಾಯ 13:39-43 ರಾಜ್ಯ ಸಾರುವ ಕೆಲಸದ ಬೇರೊಂದು ಅಂಶಕ್ಕೆ ಸೂಚಿಸುತ್ತದಾದರೂ, ಆ ಸಾಮ್ಯದ ನೆರವೇರಿಕೆಯ ಸಮಯಾವಧಿಯು ಬಲೆಯ ಕುರಿತ ಸಾಮ್ಯದ ನೆರವೇರಿಕೆಯ ಸಮಯದೊಂದಿಗೆ ತಾಳೆಬೀಳುತ್ತದೆ. ಈ ಎರಡೂ ಸಾಮ್ಯಗಳು “ಯುಗದ ಸಮಾಪ್ತಿಯ” ಸಮಯಾವಧಿಯಲ್ಲಿ ನೆರವೇರುತ್ತವೆ. ಬಿತ್ತುವ ಮತ್ತು ಕೊಯ್ಯುವ ಕೆಲಸವು ಹೇಗೆ ಈ ಸಮಯಾವಧಿಯಲ್ಲಿ ನಡೆಯುತ್ತಾ ಇರುತ್ತದೋ ಹಾಗೆಯೇ ಸಾಂಕೇತಿಕ ಮೀನುಗಳನ್ನು ಪ್ರತ್ಯೇಕಿಸುವ ಕೆಲಸವೂ ನಡೆಯುತ್ತಿರುತ್ತದೆ.—2000, ಅಕ್ಟೋಬರ್‌ 15ರ ಕಾವಲಿನಬುರುಜು, ಪುಟ 25-26; ಒಬ್ಬನೇ ಸತ್ಯದೇವರನ್ನು ಆರಾಧಿಸಿರಿ, ಪುಟ 178-181, ಪ್ಯಾರ 8-11.

^ ಪ್ಯಾರ. 24 ಇದರರ್ಥ, ಬೈಬಲ್‌ ಅಧ್ಯಯನ ನಿಲ್ಲಿಸಿರುವ ಅಥವಾ ಯೆಹೋವನ ಜನರ ಒಡನಾಟವನ್ನು ಬಿಟ್ಟುಬಿಟ್ಟಿರುವ ಎಲ್ಲರನ್ನು ಕೆಟ್ಟವರೆಂದು ದೇವದೂತರು ಈಗಾಗಲೇ ಬಿಸಾಟುಬಿಟ್ಟಿದ್ದಾರೆ ಎಂದಾಗಿದೆಯೋ? ಇಲ್ಲ! ಯೆಹೋವನ ಕಡೆಗೆ ಪುನಃ ತಿರುಗಿಕೊಳ್ಳಲು ಇಚ್ಛಿಸುವವರೆಲ್ಲರನ್ನು ಆತನು ಸ್ವಾಗತಿಸುತ್ತಾನೆ.—ಮಲಾ. 3:7.

ನೀವು ಹೇಗೆ ಉತ್ತರಿಸುವಿರಿ?

• ಸಾಸಿವೆಕಾಳಿನ ಕುರಿತ ಯೇಸುವಿನ ಸಾಮ್ಯವು, ರಾಜ್ಯದ ಬೆಳವಣಿಗೆ ಹಾಗೂ ಆಧ್ಯಾತ್ಮಿಕ ಸಂರಕ್ಷಣೆಯ ಬಗ್ಗೆ ನಮಗೇನು ಕಲಿಸುತ್ತದೆ?

• ಯೇಸುವಿನ ಸಾಮ್ಯದಲ್ಲಿ ಹುಳಿ ಯಾವುದನ್ನು ಪ್ರತಿನಿಧಿಸುತ್ತದೆ, ಮತ್ತು ರಾಜ್ಯದ ಬೆಳವಣಿಗೆಯ ಕುರಿತ ಯಾವ ಸತ್ಯಾಂಶವನ್ನು ಯೇಸು ಅಲ್ಲಿ ಒತ್ತಿಹೇಳುತ್ತಾನೆ?

• ರಾಜ್ಯದ ಬೆಳವಣಿಗೆಯ ಯಾವ ಅಂಶ ಬಲೆಯ ಕುರಿತ ಸಾಮ್ಯದಲ್ಲಿದೆ?

• ‘ಪುಟ್ಟಿಗಳಿಗೆ ತುಂಬಿಸಲಾದವರಲ್ಲಿ’ ನಾವೂ ಒಬ್ಬರಾಗಿದ್ದೇವೆಂದು ಹೇಗೆ ಖಚಿತಪಡಿಸಬಹುದು?

[ಅಧ್ಯಯನ ಪ್ರಶ್ನೆಗಳು]

1. ಬೆಳವಣಿಗೆಯ ಪ್ರಕ್ರಿಯೆಯನ್ನು ಕಣ್ಣಾರೆ ನೋಡುವುದು ನಮ್ಮನ್ನು ರೋಮಾಂಚನಗೊಳಿಸುವುದು ಮತ್ತು ದೀನರನ್ನಾಗಿಸುವುದು ಏಕೆ?

2. ಹಿಂದಿನ ಲೇಖನದಲ್ಲಿ ಪರಿಗಣಿಸಿದ ಸಾಮ್ಯಗಳಲ್ಲಿ, ಆಧ್ಯಾತ್ಮಿಕ ಬೆಳವಣಿಗೆಗೆ ಸಂಬಂಧಪಟ್ಟ ಯಾವ ಅಂಶಗಳನ್ನು ಯೇಸು ಕಲಿಸಿದನು?

3, 4. ಸಾಸಿವೆಕಾಳಿನ ಸಾಮ್ಯವು ರಾಜ್ಯ ಸಂದೇಶದ ಕುರಿತ ಯಾವ ಅಂಶಗಳನ್ನು ಒತ್ತಿಹೇಳುತ್ತದೆ?

5. ಮೊದಲನೇ ಶತಮಾನದ ಕ್ರೈಸ್ತ ಸಭೆಯಲ್ಲಿ ಯಾವ ಬೆಳವಣಿಗೆ ಆಯಿತು?

6, 7. (ಎ) ಇಸವಿ 1914ರಿಂದ ಯಾವ ರೀತಿಯ ಬೆಳವಣಿಗೆ ನಡೆದಿದೆ? (ಬಿ) ಯಾವ ಹೆಚ್ಚಿನ ಬೆಳವಣಿಗೆ ಆಗಲಿದೆ?

8. (ಎ) ಯೇಸುವಿನ ಸಾಮ್ಯದಲ್ಲಿ ಹಕ್ಕಿಗಳು ಯಾರನ್ನು ಪ್ರತಿನಿಧಿಸುತ್ತವೆ? (ಬಿ) ನಮಗೆ ಈಗಲೂ ಯಾವುದರಿಂದ ಸಂರಕ್ಷಣೆ ಸಿಗುತ್ತದೆ?

9, 10. (ಎ) ಹುಳಿಹಿಟ್ಟಿನ ಸಾಮ್ಯದಲ್ಲಿ ಯೇಸು ಯಾವ ಅಂಶಕ್ಕೆ ಒತ್ತುಕೊಟ್ಟನು? (ಬಿ) ಬೈಬಲಿನಲ್ಲಿ ಹುಳಿಯು ಅನೇಕವೇಳೆ ಯಾವುದನ್ನು ಪ್ರತಿನಿಧಿಸುತ್ತದೆ, ಮತ್ತು ಯೇಸು ಹುಳಿಯ ಬಗ್ಗೆ ಹೇಳಿದ್ದರಿಂದ ಯಾವ ಪ್ರಶ್ನೆ ಏಳುತ್ತದೆ?

11. ಪ್ರಾಚೀನ ಇಸ್ರಾಯೇಲಿನಲ್ಲಿ ಹುಳಿಯನ್ನು ಹೇಗೆ ಬಳಸಲಾಗುತ್ತಿತ್ತು?

12. ಬೈಬಲಿನಲ್ಲಿ ಬಳಸಲಾದ ಸಾಂಕೇತಿಕ ಭಾಷೆಯಿಂದ ನಾವೇನನ್ನು ಕಲಿಯಸಾಧ್ಯವಿದೆ?

13. ಹುಳಿಹಿಟ್ಟಿನ ಕುರಿತ ಯೇಸುವಿನ ಸಾಮ್ಯ ಆಧ್ಯಾತ್ಮಿಕ ಬೆಳವಣಿಗೆಯ ಬಗ್ಗೆ ಏನನ್ನು ತಿಳಿಸುತ್ತದೆ?

14. ಹುಳಿಯು ಹಿಟ್ಟನ್ನೆಲ್ಲಾ ಹುಳಿಯಾಗಿಸುತ್ತದೆ ಎಂಬ ವಾಸ್ತವಾಂಶದಿಂದ ಸಾರುವ ಕೆಲಸದ ಯಾವ ವಿಷಯವನ್ನು ದೃಷ್ಟಾಂತಿಸಲಾಗಿದೆ?

15, 16. (ಎ) ಬಲೆಯ ಕುರಿತ ಸಾಮ್ಯವನ್ನು ಸಾರಾಂಶಿಸಿ. (ಬಿ) ಬಲೆಯು ಯಾವುದನ್ನು ಪ್ರತಿನಿಧಿಸುತ್ತದೆ, ಮತ್ತು ಈ ಸಾಮ್ಯವು ರಾಜ್ಯದ ಬೆಳವಣಿಗೆಗೆ ಸಂಬಂಧಪಟ್ಟ ಯಾವ ಅಂಶವನ್ನು ಸೂಚಿಸುತ್ತದೆ?

17. ಬಲೆಯ ಕುರಿತ ಸಾಮ್ಯದಲ್ಲಿ ತಿಳಿಸಲಾದ ಪ್ರತ್ಯೇಕಿಸುವಿಕೆಯು ಯಾವ ಸಮಯಾವಧಿಯಲ್ಲಿ ನಡೆಯುತ್ತದೆ?

18, 19. (ಎ) ಪ್ರತ್ಯೇಕಿಸುವ ಕೆಲಸವೊಂದು ಈಗ ಹೇಗೆ ನಡೆಯುತ್ತಿದೆ? (ಬಿ) ಸಹೃದಯದ ಜನರು ಯಾವ ಹೆಜ್ಜೆಯನ್ನು ತೆಗೆದುಕೊಳ್ಳಲೇಬೇಕು? (ಪುಟ 21ರಲ್ಲಿರುವ ಪಾದಟಿಪ್ಪಣಿಯನ್ನೂ ನೋಡಿ.)

20, 21. (ಎ) ಬೆಳವಣಿಗೆಯ ಕುರಿತಾದ ಯೇಸುವಿನ ಸಾಮ್ಯಗಳ ವಿಮರ್ಶೆಯಿಂದ ನಾವೇನನ್ನು ಕಲಿತೆವು? (ಬಿ) ನೀವೇನು ಮಾಡಲು ದೃಢಮನಸ್ಸು ಮಾಡಿದ್ದೀರಿ?

[ಪುಟ 18ರಲ್ಲಿರುವ ಚಿತ್ರಗಳು]

ರಾಜ್ಯದ ಅಭಿವೃದ್ಧಿಯ ಕುರಿತು ಸಾಸಿವೆಕಾಳಿನ ಸಾಮ್ಯವು ನಮಗೇನನ್ನು ಕಲಿಸುತ್ತದೆ?

[ಪುಟ 19ರಲ್ಲಿರುವ ಚಿತ್ರ]

ಹುಳಿಹಿಟ್ಟಿನ ಸಾಮ್ಯದಿಂದ ನಾವೇನನ್ನು ಕಲಿಯುತ್ತೇವೆ?

[ಪುಟ 21ರಲ್ಲಿರುವ ಚಿತ್ರ]

ಒಳ್ಳೆಯ ಮತ್ತು ಕೆಟ್ಟ ಮೀನುಗಳನ್ನು ಪ್ರತ್ಯೇಕಿಸುವುದು ಏನನ್ನು ಚಿತ್ರಿಸುತ್ತದೆ?