ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಲಾತ್ಯ, ಎಫೆಸ, ಫಿಲಿಪ್ಪಿ ಹಾಗೂ ಕೊಲೊಸ್ಸೆಯವರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಗಲಾತ್ಯ, ಎಫೆಸ, ಫಿಲಿಪ್ಪಿ ಹಾಗೂ ಕೊಲೊಸ್ಸೆಯವರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಗಲಾತ್ಯ, ಎಫೆಸ, ಫಿಲಿಪ್ಪಿ ಹಾಗೂ ಕೊಲೊಸ್ಸೆಯವರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಯೆಹೂದಿ ಸಂಪ್ರದಾಯವಾದಿಗಳ ಪ್ರಭಾವದಿಂದ ಕೆಲವು ಕ್ರೈಸ್ತರು ಶುದ್ಧಾರಾಧನೆಯ ಪಥದಿಂದ ದೂರಹೋಗುತ್ತಿದ್ದಾರೆಂಬ ಸಂಗತಿ ಅಪೊಸ್ತಲ ಪೌಲನ ಕಿವಿಗೆ ಬಿದ್ದಾಗ ಅವನು “ಗಲಾತ್ಯದಲ್ಲಿರುವ ಸಭೆಗಳಿಗೆ” ಬಲವತ್ತಾದ ಪತ್ರವೊಂದನ್ನು ಬರೆಯುತ್ತಾನೆ. (ಗಲಾ. 1:2) ಸಾ.ಶ. 50-52ರೊಳಗಿನ ಯಾವುದೋ ಒಂದು ಸಮಯದಲ್ಲಿ ಬರೆಯಲಾದ ಈ ಪತ್ರದಲ್ಲಿ ನೇರ ಸಲಹೆ ಹಾಗೂ ಪ್ರಬಲ ಬುದ್ಧಿವಾದವಿದೆ.

ಗಲಾತ್ಯದವರಿಗೆ ಪತ್ರ ಬರೆದು ಸುಮಾರು ಹತ್ತು ವರ್ಷಗಳ ನಂತರ, ಪೌಲನು ‘ಕ್ರಿಸ್ತ ಯೇಸುವಿನ ಸೆರೆಯವನಾಗಿ’ ರೋಮ್‌ನಲ್ಲಿದ್ದನು. ಅಲ್ಲಿಂದ ಪತ್ರ ಬರೆಯುತ್ತಾ ಅವನು ಎಫೆಸ, ಫಿಲಿಪ್ಪಿಯ ಮತ್ತು ಕೊಲೊಸ್ಸೆಯಲ್ಲಿರುವ ಸಭೆಗಳಿಗೆ ಸೂಕ್ತ ಸಲಹೆ ಹಾಗೂ ಪ್ರೀತಿಪರ ಪ್ರೋತ್ಸಾಹ ನೀಡುತ್ತಾನೆ. (ಎಫೆ. 3:1) ಗಲಾತ್ಯ, ಎಫೆಸ, ಫಿಲಿಪ್ಪಿಯ ಮತ್ತು ಕೊಲೊಸ್ಸೆ ಎಂಬ ಹೆಸರಿನ ಬೈಬಲ್‌ ಪುಸ್ತಕಗಳಲ್ಲಿರುವ ಸಂದೇಶಕ್ಕೆ ಗಮನ ಕೊಡುವುದರಿಂದ ನಾವು ಪ್ರಯೋಜನ ಪಡೆಯಬಲ್ಲೆವು.—ಇಬ್ರಿ. 4:12.

‘ನೀತಿವಂತರೆಂದು ನಿರ್ಣಯಿಸಲ್ಪಡುವುದು’ ಹೇಗೆ?

(ಗಲಾ. 1:1-6:18)

ಯೆಹೂದಿ ಸಂಪ್ರದಾಯವಾದಿಗಳು ಕುತಂತ್ರದಿಂದ ಪೌಲನ ಹೆಸರಿಗೆ ಮಸಿಬಳಿಯಲು ಯತ್ನಿಸುತ್ತಿರುವುದರಿಂದ, ಅವನು ತನ್ನ ಜೀವನದ ಕುರಿತ ಕೆಲವೊಂದು ವಿವರಗಳನ್ನು ತಿಳಿಸುವ ಮೂಲಕ ತನ್ನ ಅಪೊಸ್ತಲತ್ವವನ್ನು ಸಮರ್ಥಿಸುತ್ತಾನೆ. (ಗಲಾ. 1:11-2:14) ಅವರ ಸುಳ್ಳು ಬೋಧನೆಗಳನ್ನು ಕೆಡವಿಹಾಕುತ್ತಾ ಅವನು ಸ್ಪಷ್ಟಪಡಿಸುವುದು: “ಯಾವನಾದರೂ ಯೇಸು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ಹೊರತು ನೇಮನಿಷ್ಠೆಗಳನ್ನನುಸರಿಸಿ [“ಧರ್ಮಶಾಸ್ತ್ರದ ಕ್ರಿಯೆಗಳಿಂದ,” NIBV] ನೀತಿವಂತನೆಂದು ನಿರ್ಣಯಿಸಲ್ಪಡುವದಿಲ್ಲ.”—ಗಲಾ. 2:16.

ಯೇಸು, ‘ಧರ್ಮಶಾಸ್ತ್ರಾಧೀನರಾದವರನ್ನು ವಿಮೋಚಿಸಿ’ ಅವರಿಗೆ ಕ್ರೈಸ್ತ ಸ್ವಾತಂತ್ರ್ಯವನ್ನು ದಯಪಾಲಿಸಿದನೆಂದು ಪೌಲನು ಹೇಳುತ್ತಾನೆ. ಗಲಾತ್ಯದವರಿಗೆ ಅವನು ಈ ಬಲವತ್ತಾದ ಸಲಹೆಯನ್ನಿತ್ತನು: “ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.”—ಗಲಾ. 4:4, 5; 5:1.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

3:16-18, 28, 29—ಅಬ್ರಹಾಮನೊಂದಿಗೆ ಮಾಡಲಾದ ಒಡಂಬಡಿಕೆಯು ಈಗಲೂ ಜಾರಿಯಲ್ಲಿದೆಯೋ? ಹೌದು. ನಿಯಮದ ಒಡಂಬಡಿಕೆಯು ದೇವರು ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಗೆ ಒಂದು ಸೇರ್ಪಡೆಯಾಗಿತ್ತೇ ಹೊರತು ಬದಲಿಯಾಗಿರಲಿಲ್ಲ. ಮೋಶೆಯ ಧರ್ಮಶಾಸ್ತ್ರವು ‘ತೆಗೆದುಹಾಕಲ್ಪಟ್ಟ’ ನಂತರವೂ ಅಬ್ರಹಾಮನ ಒಡಂಬಡಿಕೆಯು ಜಾರಿಯಲ್ಲಿತ್ತು. (ಎಫೆ. 2:14, 15) ಅದರ ವಾಗ್ದಾನಗಳು ಅಬ್ರಹಾಮನ ‘ಸಂತತಿಗೆ’ ಅಂದರೆ ಅದರ ಪ್ರಮುಖ ಭಾಗವಾದ ಕ್ರಿಸ್ತ ಯೇಸುವಿಗೆ ಮತ್ತು ‘ಕ್ರಿಸ್ತನವರಾಗಿರುವವರಿಗೆ’ ದಾಟಿಸಲ್ಪಟ್ಟಿವೆ.

6:2—“ಕ್ರಿಸ್ತನ ನಿಯಮ” ಅಂದರೇನು? ಈ ನಿಯಮದಲ್ಲಿ ಯೇಸು ಕಲಿಸಿದ ಮತ್ತು ಆಜ್ಞಾಪಿಸಿದ ಸರ್ವ ಸಂಗತಿಗಳು ಸೇರಿವೆ. ವಿಶೇಷವಾಗಿ “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂಬ ಆಜ್ಞೆ ಅದರಲ್ಲಿ ಒಂದಾಗಿದೆ.—ಯೋಹಾ. 13:34.

6:8—ನಾವು ‘ಆತ್ಮವನ್ನು ಕುರಿತು ಬಿತ್ತುವುದು’ ಹೇಗೆ? ದೇವರಾತ್ಮವು ನಮ್ಮಲ್ಲಿ ಮುಕ್ತವಾಗಿ ಕಾರ್ಯನಡೆಸುವಂಥ ರೀತಿಯಲ್ಲಿ ಜೀವಿಸುವ ಮೂಲಕ ನಾವು ಹೀಗೆ ಮಾಡಸಾಧ್ಯವಿದೆ. ಆತ್ಮವನ್ನು ಕುರಿತು ಬಿತ್ತುವುದರಲ್ಲಿ, ಪವಿತ್ರಾತ್ಮವು ಸರಾಗವಾಗಿ ಹರಿಯುವಂಥ ಚಟುವಟಿಕೆಗಳಲ್ಲಿ ನಾವು ಮನಃಪೂರ್ವಕವಾಗಿ ಪಾಲ್ಗೊಳ್ಳುವುದು ಸೇರಿದೆ.

ನಮಗಾಗಿರುವ ಪಾಠಗಳು:

1:6-9. ಸಭೆಯೊಳಗೆ ಸಮಸ್ಯೆಗಳೇಳುವಾಗ ಕ್ರೈಸ್ತ ಹಿರಿಯರು ಕ್ರಮಗೈಯಲು ತಡಮಾಡಬಾರದು. ಅವರು ಶಾಸ್ತ್ರವಚನಗಳ ಮತ್ತು ಯೋಗ್ಯ ತರ್ಕಸರಣಿಯ ಸಹಾಯದಿಂದ ತಪ್ಪಾದ ತರ್ಕಗಳನ್ನು ಕೆಡವಿಹಾಕಬಲ್ಲರು.

2:20. ವಿಮೋಚನಾ ಮೌಲ್ಯದ ಯಜ್ಞವು ದೇವರು ಪ್ರತಿಯೊಬ್ಬರಿಗಾಗಿ ಕೊಟ್ಟಿರುವ ಕೊಡುಗೆಯಾಗಿದೆ. ನಾವದನ್ನು ಆತನ ವೈಯಕ್ತಿಕ ಕೊಡುಗೆಯಾಗಿ ಪರಿಗಣಿಸಲು ಕಲಿಯಬೇಕು.—ಯೋಹಾ. 3:16.

5:7-9. “ಸತ್ಯವನ್ನು ಅನುವರ್ತಿಸದಂತೆ” ಅಥವಾ ಅನುಸರಿಸದಂತೆ ದುಸ್ಸಹವಾಸವು ನಮ್ಮನ್ನು ತಡೆದೀತು. ಅಂಥ ಸಹವಾಸದಿಂದ ದೂರವಿರುವುದು ವಿವೇಕಪ್ರದ.

6:1, 2, 5. ಗೊತ್ತಿಲ್ಲದೆ ತಪ್ಪಾದ ಹೆಜ್ಜೆಯನ್ನಿಟ್ಟದ್ದರ ಫಲಿತಾಂಶವಾಗಿ ಕಷ್ಟಕರ ಸನ್ನಿವೇಶಗಳು ಎದುರಾಗಬಲ್ಲವು. ಈ ಭಾರವನ್ನು ಹೊತ್ತುಕೊಳ್ಳಲು ‘ಆತ್ಮದಿಂದ ನಡಿಸಿಕೊಳ್ಳುವವರು’ ಅಥವಾ ಆಧ್ಯಾತ್ಮಿಕ ಅರ್ಹತೆಯುಳ್ಳವರು ಸಹಾಯಮಾಡಬಲ್ಲರು. ಆದರೆ ಕ್ರೈಸ್ತ ಜವಾಬ್ದಾರಿಗಳೆಂಬ ನಮ್ಮ ಹೊರೆಯನ್ನು ಸ್ವತಃ ನಾವೇ ಹೊತ್ತುಕೊಳ್ಳಬೇಕು.

‘ಸಮಸ್ತವನ್ನು ಕ್ರಿಸ್ತನಲ್ಲಿ ಒಂದಾಗಿ ಕೂಡಿಸುವುದು’

(ಎಫೆ. 1:1-6:24)

ಎಫೆಸದವರಿಗೆ ಬರೆದ ಪತ್ರದ ಮುಖ್ಯವಿಷಯವು ಕ್ರೈಸ್ತ ಐಕ್ಯ ಆಗಿದೆ. ಇದನ್ನು ಒತ್ತಿಹೇಳುತ್ತಾ ಅಪೊಸ್ತಲ ಪೌಲನು ಹೀಗನ್ನುತ್ತಾನೆ: “ಕಾಲವು ಪರಿಪೂರ್ಣವಾದಾಗ ನಿರ್ವಹಿಸಬೇಕಾದ ಒಂದು ಕೃಪೆಯುಳ್ಳ ಸಂಕಲ್ಪವನ್ನು ಆತನು ಕ್ರಿಸ್ತನಲ್ಲಿ ಮೊದಲೇ ನಿಷ್ಕರ್ಷೆಮಾಡಿಕೊಂಡಿದ್ದನು. ಅದೇನಂದರೆ ಭೂಪರಲೋಕಗಳಲ್ಲಿ ಇರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿಸಬೇಕೆಂಬದೇ.” ‘ನಂಬಿಕೆಯಿಂದ ಉಂಟಾಗುವ ಐಕ್ಯವನ್ನು ಹೊಂದಲು’ ಕ್ರಿಸ್ತನು, “ಮನುಷ್ಯರಿಗೆ ದಾನಗಳನ್ನು ಮಾಡಿದನು.”—ಎಫೆ. 1:9, 10; 4:7, 8, 12, 13.

ದೇವರನ್ನು ಘನಪಡಿಸಲು ಮತ್ತು ಕ್ರೈಸ್ತ ಐಕ್ಯವನ್ನು ಪ್ರವರ್ಧಿಸಲು ಕ್ರೈಸ್ತರು, ‘ನೂತನ ಸ್ವಭಾವವನ್ನು ಧರಿಸಿಕೊಳ್ಳಬೇಕು’ ಮತ್ತು ‘ಕ್ರಿಸ್ತನಿಗೆ ಭಯಪಡುವವರಾಗಿದ್ದು ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಬೇಕು.’ ಅಲ್ಲದೆ, ಆಧ್ಯಾತ್ಮಿಕ ರಕ್ಷಾಕವಚವನ್ನು ಪೂರ್ತಿಯಾಗಿ ಧರಿಸುವ ಮೂಲಕ ಅವರು ‘ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲಬೇಕು.’—ಎಫೆ. 4:23, 24; 5:20, 21; 6:10, 11.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:4-7—ಅಭಿಷಿಕ್ತ ಕ್ರೈಸ್ತರು ಹುಟ್ಟುವ ಎಷ್ಟೋ ಸಮಯದ ಮುಂಚೆಯೇ ಅವರನ್ನು ‘ಸಂಕಲ್ಪಮಾಡಿದ್ದು’ ಅಥವಾ ಮುಂದಾಗಿ ನಿರ್ಧರಿಸಿದ್ದು ಹೇಗೆ? ಅಭಿಷಿಕ್ತ ಕ್ರೈಸ್ತರ ಗುಂಪಿನಲ್ಲಿ ಯಾರಾರು ಇರುವರೆಂಬುದನ್ನಲ್ಲ ಬದಲಿಗೆ ಅವರದೊಂದು ಗುಂಪು ಇರುವುದು ಎಂಬುದನ್ನಷ್ಟೇ ಮುಂದಾಗಿ ನಿರ್ಧರಿಸಲಾಗಿತ್ತು. ಪಾಪಪೂರ್ಣ ಮಾನವಕುಲವೆಂಬ ಜಗತ್ತು ಅಸ್ತಿತ್ವಕ್ಕೆ ಬರುವ ಮುಂಚೆಯೇ ಇದನ್ನು ನಿರ್ಧರಿಸಲಾಗಿತ್ತು. ಮೊದಲ ಪಾಪಿ ಮಾನವನು ಗರ್ಭದಲ್ಲಿ ಜೀವತಾಳುವ ಮುಂಚೆಯೇ ಉಚ್ಚರಿಸಲಾದ ಆದಿಕಾಂಡ 3:15ರ ಪ್ರವಾದನೆಯಲ್ಲಿ, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲು ನಿರ್ದಿಷ್ಟ ಸಂಖ್ಯೆಯ ಹಿಂಬಾಲಕರು ಇರುವರೆಂಬ ದೇವರ ಉದ್ದೇಶವೂ ಸೇರಿದೆ.—ಗಲಾ. 3:16, 29.

2:2—ಪ್ರಾಪಂಚಿಕ ಆತ್ಮವು ವಾಯುವಿನಂತೆ ಇರುವುದು ಹೇಗೆ, ಮತ್ತು ಅದು ಪ್ರಪಂಚದ ಮೇಲೆ ಅಧಿಕಾರ ನಡೆಸುವುದು ಹೇಗೆ? “ಪ್ರಾಪಂಚಿಕ ಆತ್ಮ” ಅಂದರೆ ಸ್ವತಂತ್ರ ಹಾಗೂ ಅವಿಧೇಯತೆಯ ಆತ್ಮವು, ವಾಯುವಿನಂತೆ ಎಲ್ಲೆಡೆಯೂ ಪಸರಿಸಿಕೊಂಡಿದೆ. (1 ಕೊರಿಂ. 2:12) ಅದರ ಬಲವಾದ ಮತ್ತು ಸತತ ಪ್ರಭಾವದ ಮೂಲಕ ಅದು ಲೋಕದ ಮೇಲೆ ಅಧಿಕಾರ ನಡೆಸುತ್ತದೆ.

2:6, 7—ಅಭಿಷಿಕ್ತ ಕ್ರೈಸ್ತರು ಭೂಮಿಯಲ್ಲಿರುವಾಗ ಅವರು “ಪರಲೋಕದಲ್ಲಿ” ಇದ್ದಾರೆಂದು ಹೇಗೆ ಹೇಳಸಾಧ್ಯ? ಇಲ್ಲಿ “ಪರಲೋಕದಲ್ಲಿ” ಎಂದು ಹೇಳುವಾಗ ಅವರಿಗೆ ವಾಗ್ದಾನಿಸಲಾಗಿರುವ ಪರಲೋಕದ ಸ್ವಾಸ್ಥ್ಯವನ್ನು ಸೂಚಿಸಲಾಗಿಲ್ಲ. ಬದಲಿಗೆ, ‘ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮವೆಂಬ ಮುದ್ರೆಯನ್ನು ಹೊಂದುವುದರಿಂದ’ ದೇವರ ಮುಂದೆ ಅವರಿಗಿರುವ ಉನ್ನತ ನಿಲುವನ್ನು ಸೂಚಿಸಲಾಗಿದೆ.—ಎಫೆ. 1:13, 14.

ನಮಗಾಗಿರುವ ಪಾಠಗಳು:

4:8, 11-15. ಯೇಸು ‘ಬಹುಜನರನ್ನು ಸೆರೆಹಿಡುಕೊಂಡು ಹೋದನು’ ಅಂದರೆ ಅವರನ್ನು ಸೈತಾನನ ವಶದಿಂದ ಬಿಡಿಸಿ ಕ್ರೈಸ್ತ ಸಭೆಯನ್ನು ಬಲಪಡಿಸಲಿಕ್ಕಾಗಿ ಮನುಷ್ಯರಿಗೆ ದಾನಗಳಾಗಿ ಉಪಯೋಗಿಸಿದನು. ನಾವು ಸಭೆಯಲ್ಲಿ ಮುಂದಾಳುತ್ವ ವಹಿಸುವವರಿಗೆ ವಿಧೇಯರೂ ಅಧೀನರೂ ಆಗಿದ್ದು ಸಭಾ ಏರ್ಪಾಡುಗಳೊಂದಿಗೆ ಸಹಕರಿಸುವ ಮೂಲಕ ಕ್ರಿಸ್ತನ ‘ಪ್ರೀತಿಯಲ್ಲಿ ಬೆಳೆಯಬಲ್ಲೆವು.’—ಇಬ್ರಿ. 13:7, 17.

5:22-24, 33. ಹೆಂಡತಿಯು ತನ್ನ ಗಂಡನಿಗೆ ಅಧೀನಳಾಗಿರಬೇಕು ಮಾತ್ರವಲ್ಲ ಆತನನ್ನು ಗೌರವಿಸಲೂಬೇಕು. ಇದನ್ನು ಆಕೆ ‘ಸಾತ್ವಿಕವಾದ ಶಾಂತಮನಸ್ಸನ್ನು’ ತೋರಿಸುವ ಮೂಲಕ ವ್ಯಕ್ತಪಡಿಸುತ್ತಾಳೆ. ಅಲ್ಲದೆ ತನ್ನ ಗಂಡನ ಕುರಿತು ಇತರರೊಡನೆ ಒಳ್ಳೇದನ್ನೇ ಮಾತಾಡುತ್ತಾಳೆ ಮತ್ತು ಅವನು ತೆಗೆದುಕೊಂಡ ನಿರ್ಣಯಗಳು ಯಶಸ್ಸು ಕಾಣುವಂತೆ ಪ್ರಯತ್ನಿಸುತ್ತಾಳೆ.—1 ಪೇತ್ರ 3:3, 4; ತೀತ 2:3-5.

5:25, 28, 29. ಗಂಡನು ತನ್ನನ್ನು ‘ಪೋಷಿಸುವಂತೆಯೇ’ ತನ್ನ ಹೆಂಡತಿಯ ಶಾರೀರಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಚೆನ್ನಾಗಿ ಪೂರೈಸಬೇಕು. ಆಕೆಯೊಂದಿಗೆ ಸಾಕಷ್ಟು ಸಮಯ ಕಳೆಯುವ ಮೂಲಕ ಮತ್ತು ಮಾತಿನಲ್ಲೂ ಕಾರ್ಯಗಳಲ್ಲೂ ಕೋಮಲಭಾವ ತೋರಿಸುವ ಮೂಲಕ ಆಕೆಯನ್ನು ಪ್ರೀತಿಸಬೇಕು.

6:10-13. ದೆವ್ವಪಡೆಗಳನ್ನು ಪ್ರತಿರೋಧಿಸಲು ನಾವು ದೇವರು ದಯಪಾಲಿಸುವ ಆಧ್ಯಾತ್ಮಿಕ ರಕ್ಷಾಕವಚವನ್ನು ಅರೆಮನಸ್ಸಿನಿಂದಲ್ಲ ಬದಲಿಗೆ ಪೂರ್ತಿಯಾಗಿ ಧರಿಸಿಕೊಳ್ಳಬೇಕು.

“ಅದನ್ನೇ ಅನುಸರಿಸಿ ನಡೆಯೋಣ”

(ಫಿಲಿ 1:1-4:23)

ಫಿಲಿಪ್ಪಿಯವರಿಗೆ ಬರೆದ ಪತ್ರದಲ್ಲಿ ಪೌಲನು ಪ್ರೀತಿಗೆ ಹೆಚ್ಚಿನ ಒತ್ತುಕೊಡುತ್ತಾನೆ. ಅವನು ಹೇಳುವುದು: ‘ನಾನು ದೇವರನ್ನು ಪ್ರಾರ್ಥಿಸಿ—ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಪೂರ್ಣ ಜ್ಞಾನವಿವೇಕಗಳಿಂದ ಕೂಡಿರಬೇಕೆಂದು ಬೇಡಿಕೊಳ್ಳುತ್ತೇನೆ.’ ಅತಿಯಾದ ಆತ್ಮವಿಶ್ವಾಸ ಎಂಬ ಪಾಶದಿಂದ ತಪ್ಪಿಸಿಕೊಳ್ಳಲು ಸಹಾಯಮಾಡುತ್ತಾ ಪೌಲನು ಅವರಿಗೆ ಹೀಗೆ ಬುದ್ಧಿಹೇಳುತ್ತಾನೆ: “ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.”—ಫಿಲಿ. 1:9-11; 2:12.

‘ದೇವರು ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡೋಣ’ ಎಂದು ಪೌಲನು ಸಭೆಯಲ್ಲಿರುವ ಪ್ರೌಢ ಕ್ರೈಸ್ತರನ್ನು ಪ್ರೋತ್ಸಾಹಿಸಿದನು. ಅವನಂದದ್ದು: “ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.”—ಫಿಲಿ. 3:14-16.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:23—ಪೌಲನು ಯಾವ “ಎರಡರ” ನಡುವೆ ಸಿಕ್ಕಿಕೊಂಡಿದ್ದನು, ಮತ್ತು ಅವನಿಗೆ ಯಾವ “ಅಭಿಲಾಷೆ” ಇತ್ತು? ಪೌಲನಿದ್ದ ಸನ್ನಿವೇಶದಲ್ಲಿ ಅವನ ಮುಂದೆ ಎರಡು ಸಂಭವಗಳಿದ್ದವು: ಜೀವ ಅಥವಾ ಮರಣ. (ಫಿಲಿ. 1:21) ತಾನು ಯಾವುದನ್ನು ಆರಿಸಲಿದ್ದೇನೆ ಎಂದು ಹೇಳದಿದ್ದರೂ “ಇಲ್ಲಿಂದ ಹೋಗಿಬಿಟ್ಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬದೇ” ತನ್ನ ಅಭಿಲಾಷೆ ಎಂದವನು ವ್ಯಕ್ತಪಡಿಸುತ್ತಾನೆ. (ಫಿಲಿ. 3:20, 21; 1 ಥೆಸ. 4:16) ಯೆಹೋವನು ಪೌಲನಿಗಾಗಿ ಸಿದ್ಧಪಡಿಸಿದ ಬಹುಮಾನವು ಕ್ರಿಸ್ತನ ಸಾನ್ನಿಧ್ಯದಲ್ಲಿ ಅವನಿಗೆ ಸಿಗುವಾಗ ಅವನ “ಅಭಿಲಾಷೆ” ಕೈಗೂಡಲಿತ್ತು.—ಮತ್ತಾ. 24:3.

2:12, 13—ಯೆಹೋವನು ನಮ್ಮಲ್ಲಿ “ಉದ್ದೇಶವನ್ನೂ ಪ್ರಯತ್ನವನ್ನೂ” ಉಂಟುಮಾಡುವುದು ಹೇಗೆ? ಯೆಹೋವನ ಪವಿತ್ರಾತ್ಮವು ನಮ್ಮ ಹೃದಮನಗಳನ್ನು ಪ್ರಚೋದಿಸಿ ಆತನ ಸೇವೆಯನ್ನು ನಮ್ಮಿಂದಾದಷ್ಟು ಅತ್ಯುತ್ತಮ ರೀತಿಯಲ್ಲಿ ಮಾಡುವ ಹಂಬಲವು ಹೆಚ್ಚುವಂತೆ ಮಾಡಬಲ್ಲದು. ಹೀಗೆ, ‘ನಮ್ಮ ನಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳುವಾಗ’ ನಾವು ಒಂಟಿಯಾಗಿರುವುದಿಲ್ಲ, ಯೆಹೋವನು ನಮಗೆ ಸಹಾಯ ಮಾಡುತ್ತಾನೆ.

ನಮಗಾಗಿರುವ ಪಾಠಗಳು:

1:3-5. ಫಿಲಿಪ್ಪಿಯವರು ಬಡವರಾಗಿದ್ದರೂ ಔದಾರ್ಯ ತೋರಿಸುವುದರಲ್ಲಿ ನಮಗೆ ಉತ್ತಮ ಮಾದರಿಯನ್ನಿಟ್ಟರು.—2 ಕೊರಿಂ. 8:1-6.

2:5-11. ಯೇಸುವಿನ ಮಾದರಿಯು ತೋರಿಸುವಂತೆ ದೀನತೆಯು ಒಂದು ಬಲಹೀನತೆಯಲ್ಲ ಬದಲಿಗೆ ಒಬ್ಬ ವ್ಯಕ್ತಿಯ ನೈತಿಕ ಬಲವನ್ನು ತೋರಿಸುತ್ತದೆ. ಅಲ್ಲದೆ ಯೆಹೋವನು ದೀನರನ್ನು ಉನ್ನತಕ್ಕೇರಿಸುತ್ತಾನೆ.—ಜ್ಞಾನೋ. 22:4.

3:13. ‘ಹಿಂದಿನ ಸಂಗತಿಗಳಲ್ಲಿ’ ಲಾಭದಾಯಕ ವೃತ್ತಿ, ಧನಿಕ ಕುಟುಂಬದ ಸದಸ್ಯರಾಗಿರುವುದರಿಂದ ಸಿಗುವ ಭದ್ರತೆಯಂಥ ವಿಷಯಗಳು ಅಥವಾ ನಾವು ಹಿಂದೆ ಮಾಡಿದಂಥ ಆದರೆ ಈಗ ಪಶ್ಚಾತ್ತಾಪಪಟ್ಟು ಯಾವುದರಿಂದ ‘ಶುದ್ಧೀಕರಿಸಲ್ಪಟ್ಟಿದ್ದೇವೋ’ ಆ ಗಂಭೀರ ಪಾಪಗಳೂ ಸೇರಿರಬಹುದು. (1 ಕೊರಿಂ. 6:11, NIBV) ಇಂಥ ವಿಷಯಗಳನ್ನು ನಾವು ಮರೆತುಬಿಡಬೇಕು ಅಂದರೆ ಅದರ ಕುರಿತೇ ಚಿಂತಿಸುತ್ತಾ ಇರದೆ ‘ಮುಂದಿನವುಗಳನ್ನು ಹಿಡಿದುಕೊಳ್ಳುವುದಕ್ಕೆ ಎದೆಬೊಗ್ಗಿಸಬೇಕು.’

‘ನಂಬಿಕೆಯಲ್ಲಿ ನೆಲೆಗೊಂಡವರಾಗಿರ್ರಿ’

(ಕೊಲೊ. 1:1-4:18)

ಕೊಲೊಸ್ಸೆಯವರಿಗೆ ಬರೆದ ಪತ್ರದಲ್ಲಿ ಪೌಲನು ಸುಳ್ಳು ಬೋಧಕರ ದೃಷ್ಟಿಕೋನಗಳು ತಪ್ಪೆಂದು ಬಯಲುಪಡಿಸುತ್ತಾನೆ. ಧರ್ಮಶಾಸ್ತ್ರದ ವಿಧಿಗಳನ್ನು ಪಾಲಿಸುವುದರಿಂದ ಅಲ್ಲ ಬದಲಾಗಿ, ‘ನಂಬಿಕೆಯಲ್ಲಿ ನೆಲೆಗೊಳ್ಳುವುದರಿಂದ’ ರಕ್ಷಣೆ ಸಿಗುವುದೆಂದು ಅವನು ತರ್ಕಿಸುತ್ತಾನೆ. ಪೌಲನು ಕೊಲೊಸ್ಸೆಯವರನ್ನು ಉತ್ತೇಜಿಸುವುದು: ‘ಕ್ರಿಸ್ತನಲ್ಲಿದ್ದವರಾಗಿ ನಡೆದುಕೊಳ್ಳಿರಿ. ಆತನಲ್ಲಿ ಬೇರೂರಿಕೊಂಡು ಭಕ್ತಿವೃದ್ಧಿಯನ್ನು ಹೊಂದಿರಿ, ಕ್ರಿಸ್ತನಂಬಿಕೆಯಲ್ಲಿ ನೆಲೆಗೊಳ್ಳಿರಿ.’ ಹೀಗೆ ನೆಲೆಗೊಳ್ಳುವುದು ಅವರ ಮೇಲೆ ಯಾವ ಪರಿಣಾಮ ಬೀರಲಿತ್ತು?—ಕೊಲೊ. 1:23; 2:6, 7.

ಪೌಲನು ಬರೆಯುವುದು: “ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ. ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪುಹೇಳಲಿ.” ಆತನು ಇನ್ನೂ ಹೇಳುವುದು: “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.” ಹೊರಗಿನವರೊಂದಿಗೆ “ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ” ಎಂದು ಆತನು ಹೇಳಿದನು.—ಕೊಲೊ. 3:14, 15, 23; 4:5.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

2:8ಪೌಲನು ಯಾವುದರ ಕುರಿತು ಎಚ್ಚರಿಸಿದ್ದನೋ ಆ “ಪ್ರಾಪಂಚಿಕ ಬಾಲಬೋಧೆ” ಯಾವುದು? ಇವು ಸೈತಾನನ ಲೋಕದ ಘಟಕಗಳಾಗಿವೆ. ಇವುಗಳಲ್ಲಿ ಈ ಲೋಕವನ್ನು ನಿರ್ದೇಶಿಸುವ ಅಥವಾ ಮುನ್ನಡೆಸುವ ಮೂಲವಿಷಯಗಳು ಇಲ್ಲವೇ ಮೂಲತತ್ತ್ವಗಳು ಸೇರಿವೆ. (1 ಯೋಹಾ. 2:16) ಈ ಲೋಕದ ತತ್ತ್ವಜ್ಞಾನ, ಪ್ರಾಪಂಚಿಕತೆ ಮತ್ತು ಸುಳ್ಳು ಧರ್ಮಗಳೂ ಇದರ ಭಾಗವಾಗಿವೆ.

4:16ಲವೊದಿಕೀಯದವರಿಗೆ ಬರೆದ ಪತ್ರವು ಏಕೆ ಬೈಬಲಿನ ಭಾಗವಾಗಿಲ್ಲ? ಆ ಪತ್ರದಲ್ಲಿ ನಮ್ಮ ದಿನಕ್ಕೆ ಬೇಕಾಗುವ ಮಾಹಿತಿ ಇದ್ದಿರಲಿಕ್ಕಿಲ್ಲ. ಅಥವಾ, ಬೈಬಲ್‌ ಪುಸ್ತಕಗಳ ಅಂಗೀಕೃತ ಪಟ್ಟಿಯಲ್ಲಿನ ಬೇರೆ ಪತ್ರಗಳಲ್ಲಿದ್ದ ಮಾಹಿತಿಯೇ ಆ ಪತ್ರದಲ್ಲಿದ್ದಿರಬೇಕು.

ನಮಗಾಗಿರುವ ಪಾಠಗಳು:

1:2, 20. ದೇವರ ಅಪಾತ್ರ ದಯೆಯ ಒದಗಿಸುವಿಕೆಯಾದ ವಿಮೋಚನಾ ಮೌಲ್ಯದ ಯಜ್ಞವು ನಮ್ಮ ತಪ್ಪಿತಸ್ಥ ಮನಸ್ಸಾಕ್ಷಿಯನ್ನು ಸರಿಪಡಿಸಿ ನಮಗೆ ಮನಶ್ಶಾಂತಿ ಕೊಡಬಲ್ಲದು.

2:18, 19, 23. “ಅತಿವಿನಯ” ಎಂಬುದರ ಅರ್ಥ ಭೌತಿಕ ಸಂಪತ್ತನ್ನು ತ್ಯಜಿಸುವ ಅಥವಾ ದೇಹದಂಡನೆ ಮಾಡುವ ಮೂಲಕ ಇತರರ ಮೆಚ್ಚಿಕೆ ಗಳಿಸಲು ದೀನತೆಯ ಸೋಗನ್ನು ಹಾಕಿಕೊಳ್ಳುವುದಾಗಿದೆ. ಇದು ‘ಪ್ರಾಪಂಚಿಕ ಬುದ್ಧಿಯಿಂದ ಉಬ್ಬಿಕೊಂಡಿರುವವರ’ ಸಂಕೇತವಾಗಿದೆ.