ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ನಾಮದ ಉಚ್ಚಾರವು ಅನಿಶ್ಚಿತವಾಗಿರುವಾಗ ಅದನ್ನೇಕೆ ಬಳಸಬೇಕು?

ದೇವರ ನಾಮದ ಉಚ್ಚಾರವು ಅನಿಶ್ಚಿತವಾಗಿರುವಾಗ ಅದನ್ನೇಕೆ ಬಳಸಬೇಕು?

ನಮ್ಮ ಓದುಗರ ಪ್ರಶ್ನೆ

ದೇವರ ನಾಮದ ಉಚ್ಚಾರವು ಅನಿಶ್ಚಿತವಾಗಿರುವಾಗ ಅದನ್ನೇಕೆ ಬಳಸಬೇಕು?

ಪುರಾತನ ಹೀಬ್ರು ಭಾಷೆಯಲ್ಲಿ ದೇವರ ನಾಮದ ಸರಿಯಾದ ಉಚ್ಚರಣೆ ಹೇಗಿತ್ತೆಂದು ಇಂದು ಯಾರಿಗೂ ತಿಳಿದಿಲ್ಲ. ಆದರೂ ಬೈಬಲಿನಲ್ಲಿ ದೇವರ ನಾಮವು ಸುಮಾರು 7,000 ಬಾರಿ ಕಂಡುಬರುವುದು ಗಮನಾರ್ಹ. ಯೇಸು ಭೂಮಿಯಲ್ಲಿದ್ದಾಗ ದೇವರ ನಾಮವನ್ನು ತಿಳಿಸಿದನು ಹಾಗೂ ಆ ನಾಮವು ಪವಿತ್ರವಾಗಬೇಕೆಂದು ಪ್ರಾರ್ಥಿಸುವಂತೆ ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾಯ 6:9, 10; ಯೋಹಾನ 17:6) ಇದರಿಂದ ಒಂದು ವಿಷಯವು ಸ್ಪಷ್ಟವಾಗುತ್ತದೆ ಏನಂದರೆ ದೇವರ ಹೆಸರನ್ನು ಉಪಯೋಗಿಸುವುದು ಕ್ರೈಸ್ತರಿಗೆ ಪ್ರಾಮುಖ್ಯ ವಿಷಯವಾಗಿದೆ. ಹಾಗಾದರೆ, ಆ ಹೆಸರಿನ ಉಚ್ಚಾರವು ಇಂದು ಅನಿಶ್ಚಿತವೇಕೆ? ಇದಕ್ಕೆ ಎರಡು ಮುಖ್ಯ ಕಾರಣಗಳಿವೆ.

ಮೊದಲನೆಯದಾಗಿ, ದೇವರ ನಾಮವನ್ನು ಉಚ್ಚರಿಸುವುದು ತಪ್ಪೆಂಬ ಮೂಢನಂಬಿಕೆಯು ಯೆಹೂದ್ಯರಲ್ಲಿ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿಕೊಂಡಿತು. ಆದ್ದರಿಂದ ಒಬ್ಬನು ಬೈಬಲ್‌ ಓದುವಾಗ ದೇವರ ಹೆಸರು ಬಂದಾಗಲೆಲ್ಲ ಅದನ್ನು “ಕರ್ತನು” ಎಂದು ಓದುತ್ತಿದ್ದನು. ಹೀಗೆ ಶತಮಾನಗಳ ವರೆಗಿನ ದುರುಪಯೋಗವು, ದೇವರ ನಾಮದ ಉಚ್ಚಾರವನ್ನು ಜನರು ಮರೆತುಬಿಡುವಂತೆ ಮಾಡಿತು.

ಎರಡನೆಯದಾಗಿ, ಪುರಾತನ ಹೀಬ್ರು ಭಾಷೆಯನ್ನು ಸ್ವರಾಕ್ಷರಗಳಿಲ್ಲದೆ ಬರೆಯಲಾಗುತ್ತಿತ್ತು. ಅಂದರೆ, ಹೆಚ್ಚುಕಡಿಮೆ ಇಂಗ್ಲಿಷ್‌ ಮತ್ತು ಇತರ ಭಾಷೆಗಳಲ್ಲಿ ಸಂಕ್ಷಿಪ್ತ ರೂಪವನ್ನು ಬಳಸಲಾಗುವಂತೆಯೇ ಹೀಬ್ರು ಬಾಷೆಯನ್ನು ಬರೆಯುತ್ತಿದ್ದರು. ಹೀಗೆ ಬರೆದದ್ದನ್ನು ಒಬ್ಬನು ಓದುವಾಗ ಸ್ವರಾಕ್ಷರಗಳನ್ನು ಸೇರಿಸಿ ಓದುತ್ತಿದ್ದನು. ಕಾಲಾನಂತರ, ಹೀಬ್ರು ಪದಗಳ ಉಚ್ಚರಣೆಯು ಸಂಪೂರ್ಣವಾಗಿ ಮರೆತುಹೋಗುವುದನ್ನು ತಡೆಯಲು ಒಂದು ಪದ್ಧತಿಯನ್ನು ರಚಿಸಲಾಯಿತು. ಅದಕ್ಕನುಸಾರ, ಹೀಬ್ರು ಬೈಬಲಿನ ಪ್ರತಿಯೊಂದು ಪದಕ್ಕೂ ಸ್ವರಾಕ್ಷರಗಳ ಚಿಹ್ನೆಗಳನ್ನು ಸೇರಿಸಲಾಯಿತು. ಆದರೆ ಓದುಗನು ಬದಲಿ ಪದವನ್ನು ಉಚ್ಚರಿಸುವಂತೆ ಮರುಜ್ಞಾಪನ ಕೊಡಲಿಕ್ಕಾಗಿ ದೇವರ ಹೆಸರಿಗೆ “ಕರ್ತನು” ಎಂಬ ಪದದ ಸ್ವರಾಕ್ಷರ ಚಿಹ್ನೆಗಳನ್ನು ಸೇರಿಸುತ್ತಿದ್ದರು ಇಲ್ಲವೇ ಸ್ವರಾಕ್ಷರಗಳನ್ನು ಸೇರಿಸುತ್ತಿರಲಿಲ್ಲ.

ಹಾಗಾಗಿ, ಟೆಟ್ರಗ್ರ್ಯಾಮಟಾನ್‌ (ಚತುರಕ್ಷರಿ) ಎಂದು ಕರೆಯಲ್ಪಡುವ ನಾಲ್ಕು ವ್ಯಂಜನಗಳು ಮಾತ್ರ ಹಾಗೇ ಉಳಿದವು. ಇದನ್ನು ಒಂದು ನಿಘಂಟು ಈ ರೀತಿ ವಿವರಿಸುತ್ತದೆ: “YHWH ಅಥವಾ JHVH ಎಂದು ಸಾಮಾನ್ಯವಾಗಿ ಲಿಪ್ಯಂತರ ಮಾಡಲಾಗಿರುವ ಹೀಬ್ರು ಅಕ್ಷರಗಳು ಬೈಬಲಿನಲ್ಲಿ ದೇವರ ಸರಿಯಾದ ನಾಮವಾಗಿ ರೂಪಿಸಲ್ಪಟ್ಟಿವೆ.” JHVH ಗೆ ಸ್ವರಾಕ್ಷರ ಚಿಹ್ನೆ ಮತ್ತು ಸ್ವರ ಧ್ವನಿಗಳನ್ನು ಕೂಡಿಸಿದಾಗ ಅದು “ಯೆಹೋವ” ಎಂದಾಗುತ್ತದೆಂದು ನಾವು ಸುಲಭವಾಗಿ ಕಾಣಸಾಧ್ಯವಿದೆ. “ಯೆಹೋವ” ಎಂಬ ಈ ಹೆಸರು ಚಿರಪರಿಚಿತವಾಗಿದ್ದು ಕನ್ನಡ ಬೈಬಲಿನಲ್ಲಿ ಬಳಕೆಯಲ್ಲಿದೆ.

ಆದರೂ ಕೆಲವು ವಿದ್ವಾಂಸರು “ಯಾಹ್ವೆ” ಎಂಬ ಉಚ್ಚಾರಣೆಯನ್ನು ಶಿಫಾರಸು ಮಾಡುತ್ತಾರೆ. ಅದು ಮೂಲ ಉಚ್ಚಾರಣೆಗೆ ಹೆಚ್ಚು ಹತ್ತಿರವೋ? ಖಚಿತವಾಗಿ ಯಾರಿಗೂ ತಿಳಿದಿಲ್ಲ. ನಿಜ ಹೇಳುವುದಾದರೆ, ಇತರ ವಿದ್ವಾಂಸರು ಈ ಉಚ್ಚಾರಣೆಯನ್ನು ಬಳಸಬಾರದೆಂಬುದಕ್ಕೆ ಕಾರಣಗಳನ್ನು ನೀಡಿದ್ದಾರೆ. ಬೈಬಲಿನಲ್ಲಿರುವ ಬೇರೆ ಹೆಸರುಗಳನ್ನು ಆಧುನಿಕ ಭಾಷೆಯಲ್ಲಿ ಬಳಸುವಾಗ ಪ್ರಾಯಶಃ ಅದು ಮೂಲ ಹೀಬ್ರುವಿನಂತೆ ಇರುವುದಿಲ್ಲ ಮತ್ತು ಅದಕ್ಕೆ ಯಾರೂ ಆಕ್ಷೇಪಿಸುವುದೂ ಇಲ್ಲ. ಏಕೆಂದರೆ ಆ ಹೆಸರುಗಳು ನಮ್ಮ ಭಾಷೆಯಲ್ಲಿ ಬಳಕೆಯಲ್ಲಿವೆ ಹಾಗೂ ಜನರಿಗೆ ಸುಲಭವಾಗಿ ಅರ್ಥವಾಗುತ್ತವೆ. ಇದನ್ನೇ ಯೆಹೋವ ಎಂಬ ಹೆಸರಿಗೂ ಹೇಳಬಹುದು.

ಒಂದನೆಯ ಶತಮಾನದ ಕ್ರೈಸ್ತರನ್ನು ದೇವರ ಹೆಸರಿಗಾಗಿರುವ ಜನರೆಂದು ಕರೆಯಲಾಯಿತು. ಅವರು ಆ ಹೆಸರನ್ನು ಇತರರಿಗೆ ಸಾರಿ ಹೇಳಿದರಲ್ಲದೆ ಅದನ್ನು ಹೇಳಿಕೊಳ್ಳುವಂತೆಯೂ ಉತ್ತೇಜಿಸಿದರು. (ಅ. ಕೃತ್ಯಗಳು 2:21; 15:14; ರೋಮಾಪುರ 10:13-15) ನಾವು ಯಾವುದೇ ಭಾಷೆಯನ್ನು ಮಾತಾಡಲಿ ದೇವರ ಹೆಸರನ್ನು ಬಳಸುತ್ತಾ, ಅದರ ಮಹತ್ವವನ್ನು ಗಣ್ಯಮಾಡುತ್ತಾ, ಅದರ ಅರ್ಥಕ್ಕನುಸಾರ ಬದುಕುವುದೇ ದೇವರಿಗೆ ಪ್ರಾಮುಖ್ಯವಾಗಿದೆ. (w08 8/1)