ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಅಪೊಸ್ತಲ ಪೌಲನು ಇಬ್ರಿಯರಿಗೆ ಬರೆದ ಪತ್ರದಲ್ಲಿ “ಹಸ್ತಾರ್ಪಣಗಳ” ಕುರಿತಾಗಿ ಮಾತಾಡಿದನು. ಅಲ್ಲಿ ಅವನು ಹಿರಿಯರನ್ನು ನೇಮಿಸುವುದರ ಕುರಿತು ತಿಳಿಸುತ್ತಿದ್ದನೋ ಅಥವಾ ಬೇರಾವುದೋ ವಿಷಯ ಮಾತಾಡುತ್ತಿದ್ದನೋ?—ಇಬ್ರಿ. 6:2.

ಈ ವಿಷಯದಲ್ಲಿ ಖಚಿತವಾಗಿ ಏನನ್ನೂ ಹೇಳಲಾಗದು. ಆದರೆ, ಪೌಲನು ಪವಿತ್ರಾತ್ಮದ ವರಗಳನ್ನು ದಾಟಿಸಲಿಕ್ಕಾಗಿ ಹಸ್ತಾರ್ಪಣ ಇಲ್ಲವೇ ಕೈಗಳನ್ನಿಡುವುದಕ್ಕೆ ಸೂಚಿಸುತ್ತಿದ್ದಿರಬಹುದು.

ದೇವಪ್ರಭುತ್ವಾತ್ಮಕ ಸ್ಥಾನಗಳಿಗೆ ನೇಮಕಗಳನ್ನು ಮಾಡುವ ಸಂಬಂಧದಲ್ಲಿಯೂ ಕೈಗಳನ್ನಿಡುವುದರ ಬಗ್ಗೆ ಬೈಬಲ್‌ ತಿಳಿಸುತ್ತದೆ. ಉದಾಹರಣೆಗೆ, ಮೋಶೆಯು ಯೆಹೋಶುವನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವಾಗ ಅವನ ಮೇಲೆ ‘ಕೈಯಿಟ್ಟನು.’ (ಧರ್ಮೋ. 34:9) ಕ್ರೈಸ್ತ ಸಭೆಯಲ್ಲಿ ಕೆಲವು ಅರ್ಹ ಪುರುಷರ ಮೇಲೆ ಕೈಗಳನ್ನಿಟ್ಟು ಅವರನ್ನು ನೇಮಿಸಲಾಗಿತ್ತು. (ಅ. ಕೃ. 6:6; 1 ತಿಮೊ. 4:14) ಅವಸರದಿಂದ ಒಬ್ಬ ಪುರುಷನ ಮೇಲೆ ಹಸ್ತಗಳನ್ನಿಡದಂತೆ ಪೌಲನು ತಿಮೊಥೆಯನಿಗೆ ಬುದ್ಧಿಹೇಳಿದನು.—1 ತಿಮೊ. 5:22.

ಇಬ್ರಿಯ ಕ್ರೈಸ್ತರು ‘ನಿರ್ಜೀವಕರ್ಮಗಳ ಮೇಲಣ ನಂಬಿಕೆ, ದೇವರಲ್ಲಿ ನಂಬಿಕೆ, ಸ್ನಾನ ಹಸ್ತಾರ್ಪಣಗಳ ವಿಷಯವಾದ ಉಪದೇಶ’ ಮುಂತಾದ “ಪ್ರಥಮಬೋಧನೆಯನ್ನು” ಬಿಟ್ಟುಬಿಡಬೇಕಾದದ್ದರಿಂದ ಈಗ ‘ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ’ ಹೋಗುವಂತೆ ಅಪೊಸ್ತಲ ಪೌಲನು ಉತ್ತೇಜಿಸಿದನು. (ಇಬ್ರಿ. 6:1, 2) ಹಸ್ತಾರ್ಪಣ ಮಾಡುವುದು ಕೇವಲ ಹಿರಿಯರನ್ನು ನೇಮಿಸುವುದಕ್ಕೆ ಸೂಚಿಸುತ್ತಿರುವಲ್ಲಿ, ಅದು ಈ ವಚನಕ್ಕನುಸಾರ ಕ್ರೈಸ್ತರು ಬಿಟ್ಟುಬಿಡಬೇಕಾದ ಪ್ರಾಥಮಿಕ ವಿಷಯವಾಗುತ್ತಿತ್ತು. ಹೀಗಿರಲು ಸಾಧ್ಯವೋ? ಇಲ್ಲ. ಏಕೆಂದರೆ ಸಭೆಯಲ್ಲಿ ಹಿರಿಯರಾಗುವುದು, ಪ್ರೌಢ ಸಹೋದರರು ಇಡಬೇಕಾದ ಒಂದು ಗುರಿಯಾಗಿದ್ದು ಅದಕ್ಕಾಗಿ ಎಟಕಿಸಿಕೊಳ್ಳಬೇಕು ಮತ್ತು ನೇಮಕಗೊಂಡ ಬಳಿಕ ಅದನ್ನು ಗಣ್ಯಮಾಡಬೇಕು. ಅದನ್ನು ಒಂದು ಪ್ರಾಥಮಿಕ ವಿಷಯವಾಗಿ ದೃಷ್ಟಿಸಲು ಸಾಧ್ಯವಿಲ್ಲ.—1 ತಿಮೊ. 3:1.

ಆದರೆ ಇನ್ನೊಂದು ಕಾರಣಕ್ಕಾಗಿಯೂ ಹಸ್ತಾರ್ಪಣ ಮಾಡಲಾಗುತ್ತಿತ್ತು ಇಲ್ಲವೇ ಕೈಗಳನ್ನಿಡಲಾಗುತ್ತಿತ್ತು. ಪ್ರಥಮ ಶತಮಾನದಲ್ಲಿ ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ತೊರೆದು, ಆಧ್ಯಾತ್ಮಿಕ ಇಸ್ರಾಯೇಲನ್ನು ಅಂದರೆ ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಆರಿಸಿಕೊಂಡನು. (ಮತ್ತಾ. 21:43; ಅ. ಕೃ. 15:14; ಗಲಾ. 6:16) ಈ ಬದಲಾವಣೆಗೆ, ನಾನಾ ಭಾಷೆಗಳನ್ನಾಡುವುದು ಹಾಗೂ ಇತರ ಆತ್ಮದ ವರಗಳು ಸಾಕ್ಷ್ಯವಾಗಿದ್ದವು. (1 ಕೊರಿಂ. 12:4-11) ಕೊರ್ನೇಲ್ಯನೂ ಅವನ ಕುಟುಂಬದವರೂ ವಿಶ್ವಾಸಿಗಳಾದಾಗ ಹೊಸಬರಾದ ಇವರು ಪವಿತ್ರಾತ್ಮ ಪಡೆದರು ಮತ್ತು ಅವರು “ನಾನಾ ಭಾಷೆಗಳ”ನ್ನಾಡಿದಾಗ ಇದು ವ್ಯಕ್ತವಾಯಿತು.—ಅ. ಕೃ. 10:44-46.

ಕೆಲವೊಮ್ಮೆ ಈ ಅದ್ಭುತಕರ ವರಗಳನ್ನು ಕೈಗಳನ್ನಿಡುವ ಮೂಲಕ ದಾಟಿಸಲಾಗುತ್ತಿತ್ತು. ಫಿಲಿಪ್ಪನು ಸಮಾರ್ಯದಲ್ಲಿ ಸುವಾರ್ತೆ ಸಾರಿದಾಗ, ಅನೇಕರು ದೀಕ್ಷಾಸ್ನಾನಹೊಂದಿದರು. ಆಡಳಿತ ಮಂಡಳಿಯು ಅಪೊಸ್ತಲರಾದ ಪೇತ್ರಯೋಹಾನರನ್ನು ಅಲ್ಲಿಗೆ ಕಳುಹಿಸಿತು. ಏಕೆ? ನಾವು ಹೀಗೆ ಓದುತ್ತೇವೆ: “[ಆ] ಅಪೊಸ್ತಲರು ಅವರ [ದೀಕ್ಷಾಸ್ನಾನಪಡೆದ ಹೊಸಬರ] ಮೇಲೆ ಕೈಗಳನ್ನಿಡಲು ಅವರು ಪವಿತ್ರಾತ್ಮವರವನ್ನು ಹೊಂದಿದರು.” ಇದರರ್ಥ ಅವರಿಗೆ ಆತ್ಮದ ವರಗಳು ಸಿಕ್ಕಿದ್ದಿರಬೇಕು ಮತ್ತು ಇವು ಇತರರಿಗೆ ಗೋಚರವಾಗುವಂಥ ಸಾಮರ್ಥ್ಯಗಳಾಗಿದ್ದವು. ಈ ವರಗಳನ್ನು ಇತರರು ಕಾಣಸಾಧ್ಯವಿತ್ತು ಎಂಬ ಮಾತು, ಹಿಂದೆ ಮಾಟಮಂತ್ರ ಮಾಡುತ್ತಿದ್ದ ಸೀಮೋನನ ಕುರಿತ ದಾಖಲೆಯಿಂದ ತಿಳಿದುಬರುತ್ತದೆ. ಅವನು ಪವಿತ್ರಾತ್ಮದ ಈ ಕಾರ್ಯಾಚರಣೆ ನೋಡಿ, ಬೇರೆಯವರ ಮೇಲೆ ಕೈಗಳನ್ನಿಟ್ಟು ಅದ್ಭುತಗಳನ್ನು ನಡೆಸುವ ಶಕ್ತಿಯನ್ನು ಅವರಿಗೆ ದಾಟಿಸುವ ವರಕ್ಕಾಗಿ ದುರಾಸೆಪಟ್ಟು, ಅದನ್ನು ಖರೀದಿಸಲು ಪ್ರಯತ್ನಿಸಿದ್ದನು. (ಅ. ಕೃ. 8:5-20) ಕಾಲಾನಂತರ ಎಫೆಸದಲ್ಲಿ 12 ಮಂದಿ ದೀಕ್ಷಾಸ್ನಾನಪಡೆದರು. ಅವರ ಬಗ್ಗೆ ನಾವು ಹೀಗೆ ಓದುತ್ತೇವೆ: “ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮವರವು ಅವರ ಮೇಲೆ ಬಂತು; ಅವರು ನಾನಾ ಭಾಷೆಗಳನ್ನಾಡಿದರು, ಪ್ರವಾದಿಸಿದರು.”—ಅ. ಕೃ. 19:1-7; 2 ತಿಮೊಥೆಯ 1:6 ಹೋಲಿಸಿರಿ.

ಆದುದರಿಂದ ಇಬ್ರಿಯ 6:2ರಲ್ಲಿ ಪೌಲನು ಹಸ್ತಾರ್ಪಣದ ಬಗ್ಗೆ ಮಾತಾಡಿದಾಗ, ಹೊಸ ವಿಶ್ವಾಸಿಗಳಿಗೆ ಆತ್ಮದ ವರಗಳನ್ನು ದಾಟಿಸುವುದನ್ನು ಸೂಚಿಸುತ್ತಿದ್ದಿರಬೇಕೆಂದು ವ್ಯಕ್ತವಾಗುತ್ತದೆ.