ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಂದೆಯಿಂದ ತಪ್ಪಿಸಿಕೊಂಡವರಿಗೆ ಸಹಾಯಮಾಡಿ

ಮಂದೆಯಿಂದ ತಪ್ಪಿಸಿಕೊಂಡವರಿಗೆ ಸಹಾಯಮಾಡಿ

ಮಂದೆಯಿಂದ ತಪ್ಪಿಸಿಕೊಂಡವರಿಗೆ ಸಹಾಯಮಾಡಿ

“ಕಳೆದುಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ.”—ಲೂಕ 15:6.

ಯೆಹೋವನ ಏಕಜಾತ ಪುತ್ರನಾದ ಯೇಸು ಕ್ರಿಸ್ತನನ್ನು “ಕುರಿ ಹಿಂಡಿಗೆ ಮಹಾಕುರುಬ” ಎಂದು ಕರೆಯಲಾಗಿದೆ. (ಇಬ್ರಿ. 13:20, NIBV) ಆತನ ಬರೋಣವನ್ನು ಶಾಸ್ತ್ರವಚನಗಳು ಮುಂತಿಳಿಸಿದವು ಮತ್ತು ‘ತಪ್ಪಿಸಿಕೊಂಡ ಕುರಿಗಳಂತಿದ್ದ’ ಇಸ್ರಾಯೇಲ್‌ ಮನೆತನದವರನ್ನು ಹುಡುಕಲು ಪ್ರಯತ್ನಿಸಿದ ಅಸಾಧಾರಣ ಕುರುಬನು ಆತನಾಗಿದ್ದಾನೆಂದು ತೋರಿಸಿದವು. (ಮತ್ತಾ. 2:1-6; 15:24) ಅಲ್ಲದೇ, ತನ್ನ ಕುರಿಗಳನ್ನು ಕಾಪಾಡಲಿಕ್ಕಾಗಿ ಪ್ರಾಣ ಕೊಡಲೂ ಸಿದ್ಧನಿರುವ ಕುರುಬನಂತೆ ಯೇಸು ತನ್ನ ಯಜ್ಞದಿಂದ ಪ್ರಯೋಜನ ಪಡೆಯಲಿಚ್ಛಿಸುವ ಕುರಿಸದೃಶ ಜನರಿಗಾಗಿ ತನ್ನ ಜೀವವನ್ನು ವಿಮೋಚನಾ ಮೌಲ್ಯವಾಗಿ ಅರ್ಪಿಸಿದನು.—ಯೋಹಾ. 10:11, 14, 15; 1 ಯೋಹಾ. 2:1, 2.

2 ವಿಷಾದಕರವಾಗಿ, ಯೇಸುವಿನ ಯಜ್ಞವನ್ನು ಗಣ್ಯಮಾಡುತ್ತಿದ್ದ ಮತ್ತು ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕೆಲವರು ಈಗ ಕ್ರೈಸ್ತ ಸಭೆಯ ಭಾಗವಾಗಿ ಉಳಿದಿಲ್ಲ. ನಿರುತ್ಸಾಹ, ಆರೋಗ್ಯ ಸಮಸ್ಯೆಗಳು ಅಥವಾ ಇತರ ಸಂಗತಿಗಳು ಅವರ ಹುರುಪನ್ನು ಕುಂದಿಸಿ ಅವರನ್ನು ನಿಷ್ಕ್ರಿಯರನ್ನಾಗಿ ಮಾಡಿವೆ. ಆದರೆ ಅವರು ದೇವರ ಮಂದೆಯ ಭಾಗವಾಗಿರುವಲ್ಲಿ ಮಾತ್ರ, 23ನೇ ಕೀರ್ತನೆಯಲ್ಲಿ ದಾವೀದನು ತಿಳಿಸಿದ ಪ್ರಶಾಂತತೆ ಮತ್ತು ಸಂತೋಷವನ್ನು ಅನುಭವಿಸಬಲ್ಲರು. ದೃಷ್ಟಾಂತಕ್ಕೆ, ಅವನು ಹಾಡಿದ್ದು: “ಯೆಹೋವನು ನನಗೆ ಕುರುಬನು; ಕೊರತೆಪಡೆನು.” (ಕೀರ್ತ. 23:1) ದೇವರ ಮಂದೆಯಲ್ಲಿರುವವರಿಗೆ ಆಧ್ಯಾತ್ಮಿಕ ಅರ್ಥದಲ್ಲಿ ಏನೂ ಕೊರತೆಯಿರದು. ಆದರೆ ತಪ್ಪಿಸಿಕೊಂಡ ಕುರಿಗಳಂತಿರುವವರಿಗೆ ಈ ಮಾತು ಅನ್ವಯಿಸದು. ಅವರಿಗೆ ಯಾರು ಸಹಾಯ ಮಾಡಬಲ್ಲರು? ಅದನ್ನು ಹೇಗೆ ಮಾಡಬಲ್ಲರು? ಅವರು ಮಂದೆಗೆ ಮರಳುವಂತೆ ಏನೆಲ್ಲಾ ಮಾಡಬಹುದು?

ಯಾರು ಸಹಾಯ ಮಾಡಬಲ್ಲರು?

3 ದೇವರು ಪಾಲಿಸುವ ಹಿಂಡಿನಿಂದ ತಪ್ಪಿಹೋದ ಕುರಿಗಳನ್ನು ರಕ್ಷಿಸಲು ಶ್ರದ್ಧಾಪೂರ್ವಕ ಪ್ರಯತ್ನ ಅಗತ್ಯ. (ಕೀರ್ತ. 100:3) ಯೇಸು ಅದನ್ನು ದೃಷ್ಟಾಂತಿಸುತ್ತಾ ಹೇಳಿದ್ದು: “ಒಬ್ಬ ಮನುಷ್ಯನಿಗೆ ನೂರು ಕುರಿಗಳು ಇರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡರೆ ಅವನು ತೊಂಭತ್ತೊಂಭತ್ತು ಕುರಿಗಳನ್ನು ಬಿಟ್ಟು ಬೆಟ್ಟಕ್ಕೆ ಹೋಗಿ ತಪ್ಪಿಸಿಕೊಂಡದ್ದನ್ನು ಹುಡುಕುತ್ತಾನಲ್ಲವೇ. ಅದು ಸಿಕ್ಕಿದರೆ ತಪ್ಪಿಸಿಕೊಳ್ಳದೆ ಇರುವ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದಕ್ಕೋಸ್ಕರ ಹೆಚ್ಚಾಗಿ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.” (ಮತ್ತಾ. 18:12-14) ಮಂದೆಯಿಂದ ತಪ್ಪಿಸಿಕೊಂಡ ಕುರಿಸದೃಶ ಜನರಿಗೆ ಯಾರು ಸಹಾಯ ಮಾಡಬಲ್ಲರು?

4 ಕ್ರೈಸ್ತ ಹಿರಿಯರು ತಪ್ಪಿಸಿಕೊಂಡ ಕುರಿಗಳಿಗೆ ಸಹಾಯ ಮಾಡಲು ಬಯಸುವಲ್ಲಿ, ದೇವರ ಮಂದೆಯು ಯೆಹೋವನಿಗೆ ಸಮರ್ಪಿತರಾದ ವ್ಯಕ್ತಿಗಳ ಸಭೆ ಮತ್ತು ‘ದೇವರು ಪಾಲಿಸುವ ಮಂದೆ’ ಆಗಿದ್ದು ಆತನಿಗೆ ಅಮೂಲ್ಯವಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು. (ಕೀರ್ತ. 79:13) ಅಂತಹ ನೆಚ್ಚಿನ ಕುರಿಗಳಿಗೆ ಕೋಮಲ ಆರೈಕೆಯ ಅಗತ್ಯವಿದೆ. ಆದುದರಿಂದ ಪ್ರೀತಿಪರ ಕುರುಬರು ಅಂಥ ಕುರಿಗಳಲ್ಲಿ ವೈಯಕ್ತಿಕ ಆಸಕ್ತಿವಹಿಸಬೇಕು. ಸ್ನೇಹಪೂರ್ವಕ ಪರಿಪಾಲನೆಯ ಭೇಟಿಗಳನ್ನು ಮಾಡುವುದು ಪರಿಣಾಮಕಾರಿ ಆಗಿರಬಲ್ಲದು. ಕುರುಬನು ಕೊಡುವ ಪ್ರೀತಿಪೂರ್ವಕ ಉತ್ತೇಜನ ಅವರನ್ನು ಆಧ್ಯಾತ್ಮಿಕವಾಗಿ ಬಲಪಡಿಸಿ ಮಂದೆಗೆ ಮರಳುವ ಅವರ ಅಪೇಕ್ಷೆಯನ್ನು ಹೆಚ್ಚಿಸುವುದು.—1 ಕೊರಿಂ. 8:1.

5 ತಪ್ಪಿಸಿಕೊಂಡ ಕುರಿಗಳನ್ನು ಹುಡುಕಿ, ಬಳಿಕ ಅವುಗಳಿಗೆ ಸಹಾಯ ನೀಡುವ ಜವಾಬ್ದಾರಿ ದೇವರ ಮಂದೆಯ ಕುರುಬರಿಗಿದೆ. ಪರಿಪಾಲನೆಯ ಜವಾಬ್ದಾರಿಗಳ ಕುರಿತು ಅಪೊಸ್ತಲ ಪೌಲನು ಪ್ರಾಚೀನ ಎಫೆಸದ ಕ್ರೈಸ್ತ ಹಿರಿಯರಿಗೆ ನೆನಪುಹುಟ್ಟಿಸಿದ್ದು: “ದೇವರು ಸ್ವರಕ್ತದಿಂದ [“ಸ್ವಂತ ಮಗನ ರಕ್ತದಿಂದ,” NW] ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.” (ಅ. ಕೃ. 20:28) ಅಪೊಸ್ತಲ ಪೇತ್ರನೂ ಅಭಿಷಿಕ್ತ ಹಿರೀ ಪುರುಷರಿಗೆ ತದ್ರೀತಿಯ ಬುದ್ಧಿವಾದ ಕೊಟ್ಟದ್ದು: “ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆಮಾಡಿರಿ. ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.”—1 ಪೇತ್ರ 5:1-3.

6 ಕ್ರೈಸ್ತ ಕುರುಬರು “ಒಳ್ಳೇ ಕುರುಬ”ನಾದ ಯೇಸುವನ್ನು ಅನುಕರಿಸಬೇಕು. (ಯೋಹಾ. 10:11) ದೇವರ ಮಂದೆಯ ಕುರಿತು ಅವನಿಗೆ ಗಾಢ ಚಿಂತೆಯಿತ್ತು. “ನನ್ನ ಕುರಿಗಳನ್ನು ಕಾಯಿ” ಎಂದು ಸೀಮೋನ ಪೇತ್ರನಿಗೆ ಹೇಳಿದಾಗ ಅವುಗಳ ಆರೈಕೆ ಮಾಡುವುದರ ಮಹತ್ತ್ವವನ್ನು ಒತ್ತಿಹೇಳಿದನು. (ಯೋಹಾನ 21:15-17 ಓದಿ.) ಕುರಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಅಂಥ ಆರೈಕೆಯ ಅಗತ್ಯವಿದೆ ಏಕೆಂದರೆ ದೇವರಿಗೆ ಸಮರ್ಪಿತರಾದವರ ಸಮಗ್ರತೆ ಮುರಿಯುವ ಪ್ರಯತ್ನಗಳನ್ನು ಪಿಶಾಚನು ಇನ್ನಷ್ಟು ತೀವ್ರಗೊಳಿಸಿದ್ದಾನೆ. ಸೈತಾನನು ಶಾರೀರಿಕ ದೌರ್ಬಲ್ಯಗಳನ್ನು ಮತ್ತು ಲೋಕದ ಪ್ರಲೋಭನೆಗಳನ್ನು ಬಳಸುತ್ತಾ ಯೆಹೋವನ ಕುರಿಗಳು ತಪ್ಪು ಕೆಲಸಗಳಲ್ಲಿ ಒಳಗೂಡುವಂತೆ ಮಾಡುತ್ತಾನೆ. (1 ಯೋಹಾ. 2:15-17; 5:19) ನಿಷ್ಕ್ರಿಯ ವ್ಯಕ್ತಿಗಳು ಹೆಚ್ಚು ಅಪಾಯದಲ್ಲಿರುವುದರಿಂದ ‘ಪವಿತ್ರಾತ್ಮವನ್ನು ಅನುಸರಿಸಿ ನಡೆದುಕೊಳ್ಳಿರಿ’ ಎಂಬ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಲು ಅವರಿಗೆ ಸಹಾಯದ ಅಗತ್ಯವಿದೆ. (ಗಲಾ. 5:16-21, 25) ಅಂಥ ಕುರಿಗಳಿಗೆ ಸಹಾಯಮಾಡಲು ದೇವರ ಮಾರ್ಗದರ್ಶನ ಮತ್ತು ಪವಿತ್ರಾತ್ಮಕ್ಕಾಗಿ ಕೇಳಿಕೊಳ್ಳಬೇಕು ಹಾಗೂ ಆತನ ವಾಕ್ಯವನ್ನು ಕೌಶಲಭರಿತ ರೀತಿಯಲ್ಲಿ ಉಪಯೋಗಿಸಬೇಕು.—ಜ್ಞಾನೋ. 3:5, 6; ಲೂಕ 11:13; ಇಬ್ರಿ. 4:12.

7 ಪುರಾತನ ಇಸ್ರಾಯೇಲಿನ ಕುರುಬರು ಮಂದೆಯನ್ನು ನಡೆಸಲು ಕೊಕ್ಕೆಕೋಲು ಅಥವಾ ದೊಣ್ಣೆಯನ್ನು ಬಳಸುತ್ತಿದ್ದರು. ಕುರಿಗಳು ಕೊಟ್ಟಿಗೆಯನ್ನು ಪ್ರವೇಶಿಸುವಾಗ ಇಲ್ಲವೇ ಅದರಿಂದ ಹೊರಹೋಗುವಾಗ ಆ ಕೋಲಿನ ಅಡಿಯಿಂದ ಹಾದುಹೋಗುತ್ತಿದ್ದವು. ಹೀಗೆ ಕುರುಬರಿಗೆ ಅವುಗಳನ್ನು ಎಣಿಸಲು ಸಾಧ್ಯವಾಗುತ್ತಿತ್ತು. (ಯಾಜ. 27:32; ಮೀಕ 2:12; 7:14) ತದ್ರೀತಿಯಲ್ಲಿ ಒಬ್ಬ ಕ್ರೈಸ್ತ ಕುರುಬನು ತನ್ನ ವಶದಲ್ಲಿಡಲಾಗಿರುವ ದೇವರ ಮಂದೆಯನ್ನು ಚೆನ್ನಾಗಿ ಅರಿತಿರಬೇಕು ಮತ್ತು ಪ್ರತಿಯೊಬ್ಬನ ಸ್ಥಿತಿಗತಿಯನ್ನು ತಿಳಿದಿರಬೇಕು. (ಜ್ಞಾನೋಕ್ತಿ 27:23 ಹೋಲಿಸಿ.) ಆದ್ದರಿಂದ ಹಿರಿಯರ ಮಂಡಲಿ ಚರ್ಚಿಸುವ ಪ್ರಾಮುಖ್ಯ ವಿಷಯಗಳಲ್ಲಿ ಪರಿಪಾಲನೆ ಮಾಡುವುದೂ ಒಂದಾಗಿದೆ. ಇಂಥ ಪರಿಪಾಲನೆಯಲ್ಲಿ, ತಪ್ಪಿಸಿಕೊಂಡ ಕುರಿಗಳಿಗೆ ಸಹಾಯ ಮಾಡಲು ಏರ್ಪಾಡುಗಳನ್ನು ಮಾಡುವುದು ಸೇರಿದೆ. ತನ್ನ ಕುರಿಗಳನ್ನು ಹುಡುಕಿ ಅವುಗಳಿಗೆ ಬೇಕಾದ ಆರೈಕೆ ಮಾಡುವೆನೆಂದು ಸ್ವತಃ ಯೆಹೋವನು ಹೇಳಿದ್ದಾನೆ. (ಯೆಹೆ. 34:11) ಅಂತೆಯೇ, ತಪ್ಪಿಸಿಕೊಂಡ ಕುರಿಗಳು ಮಂದೆಗೆ ಮರಳುವಂತೆ ಹಿರಿಯರು ಸಹಾಯಮಾಡಲು ಪ್ರಯತ್ನಿಸುವಾಗ ದೇವರಿಗೆ ಸಂತೋಷವಾಗುತ್ತದೆ.

8 ಜೊತೆ ವಿಶ್ವಾಸಿಯೊಬ್ಬನು ಶಾರೀರಿಕವಾಗಿ ಅಸ್ವಸ್ಥನಾಗಿರುವಾಗ ದೇವರ ಮಂದೆಯ ಕುರುಬನು ನೀಡುವ ಭೇಟಿಯಿಂದ ಅವನಿಗೆ ಆನಂದ ಮತ್ತು ಉತ್ತೇಜನ ಸಿಗಬಲ್ಲದು. ಆಧ್ಯಾತ್ಮಿಕವಾಗಿ ಅಸ್ವಸ್ಥವಾಗಿರುವ ಕುರಿಯ ಕಡೆಗೆ ವೈಯಕ್ತಿಕ ಗಮನಕೊಡುವಾಗಲೂ ಈ ಮಾತು ಸತ್ಯ. ನಿಷ್ಕ್ರಿಯ ವ್ಯಕ್ತಿಯೊಂದಿಗೆ ಹಿರಿಯರು ಬೈಬಲ್‌ನಿಂದ ವಚನಗಳನ್ನು ಓದಬಹುದು, ಲೇಖನವೊಂದನ್ನು ಚರ್ಚಿಸಬಹುದು, ಕೂಟದ ಮುಖ್ಯಾಂಶಗಳನ್ನು ತಿಳಿಸಬಹುದು, ಅವನೊಂದಿಗೆ ಪ್ರಾರ್ಥಿಸಬಹುದು ಅಲ್ಲದೇ ಇನ್ನೂ ಬಹಳಷ್ಟನ್ನು ಮಾಡಬಹುದು. ಅವನು ಪುನಃ ಒಮ್ಮೆ ಕೂಟಗಳಿಗೆ ಬಂದರೆ ಸಭಾಸದಸ್ಯರಿಗೆ ತುಂಬ ಸಂತೋಷವಾಗುವುದೆಂದು ಹಿರಿಯರು ಅವನಿಗೆ ತಿಳಿಸಬಹುದು. (2 ಕೊರಿಂ. 1:3-7; ಯಾಕೋ. 5:13-15) ಕೇವಲ ಒಂದು ಭೇಟಿ, ಫೋನ್‌ ಕರೆ ಇಲ್ಲವೇ ಪತ್ರದಿಂದ ಅವರಿಗೆ ಬಹಳಷ್ಟು ಸಹಾಯ ಸಿಗಬಲ್ಲದು. ಮಂದೆಯಿಂದ ತಪ್ಪಿಸಿಕೊಂಡ ಕುರಿಗೆ ವೈಯಕ್ತಿಕ ಸಹಾಯ ನೀಡುವ ಹಿರಿಯನಿಗೂ ಬಹಳ ಆನಂದ ಸಿಗುವುದು.

ಎಲ್ಲರೂ ಕೂಡಿ ಮಾಡುವ ಪ್ರಯತ್ನ

9 ನಾವು ಕಾರ್ಯಮಗ್ನ ಹಾಗೂ ಕಠಿನ ಸಮಯದಲ್ಲಿ ಜೀವಿಸುತ್ತಿರುವುದರಿಂದ ಜೊತೆ ವಿಶ್ವಾಸಿಯೊಬ್ಬನು ‘ದಾರಿಬಿಟ್ಟುಹೋಗುವುದು’ ಇಲ್ಲವೇ ಸಭೆಯಿಂದ ದೂರಸರಿಯುವುದು ನಮ್ಮ ಗಮನಕ್ಕೆ ಬರಲಿಕ್ಕಿಲ್ಲ. (ಇಬ್ರಿ. 2:1, NIBV) ಆದಾಗ್ಯೂ ಯೆಹೋವನಿಗೆ ತನ್ನ ಕುರಿಗಳು ಅಮೂಲ್ಯವಾಗಿವೆ. ಮಾನವ ದೇಹದ ಪ್ರತಿಯೊಂದು ಅಂಗದಂತೆ ಪ್ರತಿಯೊಂದು ಕುರಿಯೂ ಬಹುಮೂಲ್ಯವಾಗಿದೆ. ಆದ್ದರಿಂದ ನಮ್ಮ ಸಹೋದರರ ಕಡೆಗೆ ನಾವೆಲ್ಲರೂ ಪರಿಗಣನೆ ತೋರಿಸಬೇಕು ಮತ್ತು ಪ್ರತಿಯೊಬ್ಬರ ಹಿತಚಿಂತಿಸಬೇಕು. (1 ಕೊರಿಂ 12:24, 25) ತದ್ರೀತಿಯ ಮನೋಭಾವ ನಿಮಗಿದೆಯೋ?

10 ತಪ್ಪಿಸಿಕೊಂಡ ಕುರಿಗಳನ್ನು ಹುಡುಕಿ ಅವುಗಳಿಗೆ ಸಹಾಯ ನೀಡುವುದರಲ್ಲಿ ಹಿರಿಯರು ನೇತೃತ್ವವಹಿಸುತ್ತಾರಾದರೂ ಅವುಗಳ ಬಗ್ಗೆ ಚಿಂತೆ ತೋರಿಸುವ ಜವಾಬ್ದಾರಿ ಕೇವಲ ಕ್ರೈಸ್ತ ಮೇಲ್ವಿಚಾರಕರಿಗೆ ಸೀಮಿತವಾಗಿಲ್ಲ. ಅವರೊಂದಿಗೆ ಇತರರೂ ಸಹಕರಿಸಬಹುದು. ಮಂದೆಗೆ ಮರಳಲು ಸಹಾಯದ ಅಗತ್ಯವಿರುವ ನಮ್ಮ ಸಹೋದರ ಸಹೋದರಿಯರಿಗೆ ಉತ್ತೇಜನ ಮತ್ತು ಆಧ್ಯಾತ್ಮಿಕ ನೆರವನ್ನು ನಾವು ನೀಡಬಲ್ಲೆವು ಮಾತ್ರವಲ್ಲ ಅದನ್ನು ನೀಡಲೇಬೇಕು. ಅಂಥ ಸಹಾಯವನ್ನು ನಾವು ಹೇಗೆ ಕೊಡಬಲ್ಲೆವು?

11 ಸಹಾಯವನ್ನು ಕೇಳಿಕೊಳ್ಳುವ ನಿಷ್ಕ್ರಿಯ ವ್ಯಕ್ತಿಯೊಂದಿಗೆ ಬೈಬಲ್‌ ಅಧ್ಯಯನ ನಡೆಸುವಂತೆ ಹಿರಿಯರು ಕೆಲವೊಮ್ಮೆ ಅನುಭವೀ ರಾಜ್ಯ ಪ್ರಚಾರಕರನ್ನು ನೇಮಿಸಬಹುದು. ಇದರ ಉದ್ದೇಶ, ‘ಮೊದಲು ಅವರಿಗಿದ್ದ ಪ್ರೀತಿಯನ್ನು’ ಪುನಃ ಹೊತ್ತಿಸುವುದಾಗಿದೆ. (ಪ್ರಕ. 2:1, 4) ಅಂಥ ಜೊತೆ ವಿಶ್ವಾಸಿಗಳು ತಮ್ಮನ್ನು ಸಭೆಯಿಂದ ದೂರವಿರಿಸಿಕೊಂಡಾಗ ಅವರಿಗೆ ತಪ್ಪಿಹೋದ ಕೂಟಗಳ ವಿಷಯಗಳನ್ನು ಚರ್ಚಿಸುವ ಮೂಲಕ ಭಕ್ತಿವೃದ್ಧಿ ಮಾಡಬಹುದು ಮತ್ತು ಅವರನ್ನು ಆಧ್ಯಾತ್ಮಿಕವಾಗಿ ಬಲಪಡಿಸಬಹುದು.

12 ಆಧ್ಯಾತ್ಮಿಕ ನೆರವಿನ ಅಗತ್ಯವಿರುವ ಜೊತೆ ವಿಶ್ವಾಸಿಯೊಬ್ಬನೊಂದಿಗೆ ಅಧ್ಯಯನ ನಡೆಸುವಂತೆ ಒಂದುವೇಳೆ ಹಿರಿಯರು ನಿಮ್ಮನ್ನು ಕೇಳಿಕೊಳ್ಳುವಲ್ಲಿ ನಿಮ್ಮ ಪ್ರಯತ್ನಗಳನ್ನು ನಿರ್ದೇಶಿಸಿ ಆಶೀರ್ವದಿಸುವಂತೆ ಯೆಹೋವನಿಗೆ ಪ್ರಾರ್ಥಿಸಿರಿ. “ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ ನಿನ್ನ ಉದ್ದೇಶಗಳು ಸಫಲವಾಗುವವು” ಖಂಡಿತ. (ಜ್ಞಾನೋ. 16:3) ಆಧ್ಯಾತ್ಮಿಕ ಸಹಾಯದ ಅಗತ್ಯವಿರುವವನೊಂದಿಗಿನ ಚರ್ಚೆಗಳಲ್ಲಿ ಬಳಸಬಹುದಾದ ಬೈಬಲ್‌ ವಚನಗಳು ಮತ್ತು ನಂಬಿಕೆವರ್ಧಕ ಅಂಶಗಳನ್ನು ಕುರಿತು ಧ್ಯಾನಿಸಿರಿ. ಅಪೊಸ್ತಲ ಪೌಲನ ಅತ್ಯುತ್ತಮ ಮಾದರಿಯನ್ನು ಕುರಿತು ಯೋಚಿಸಿ. (ರೋಮಾಪುರ 1:11, 12 ಓದಿ.) ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಆಧ್ಯಾತ್ಮಿಕ ವರವನ್ನು ಕೊಟ್ಟು ದೃಢಪಡಿಸುವುದಕ್ಕೋಸ್ಕರ ಪೌಲನು ಅವರನ್ನು ಕಾಣಲು ಮತ್ತು ಪರಸ್ಪರ ಪ್ರೋತ್ಸಾಹದ ವಿನಿಮಯಕ್ಕಾಗಿ ಎದುರುನೋಡುತ್ತಿದ್ದನು. ದೇವರ ಮಂದೆಯಿಂದ ತಪ್ಪಿಸಿಕೊಂಡ ಕುರಿಗಳಿಗೆ ಸಹಾಯ ನೀಡುವಾಗ ನಮಗೂ ಅದೇ ರೀತಿಯ ಮನೋಭಾವ ಇರಬೇಕಲ್ಲವೇ?

13 ಅಧ್ಯಯನದ ಸಮಯದಲ್ಲಿ, “ನಿಮಗೆ ಸತ್ಯ ಹೇಗೆ ಸಿಕ್ಕಿತು?” ಎಂದು ನೀವು ಅವರಿಗೆ ಕೇಳಬಹುದು. ಕೂಟಗಳ, ಸಾರುವ ಕೆಲಸದ ಮತ್ತು ಅಧಿವೇಶನಗಳ ಕುರಿತ ಸವಿನೆನಪುಗಳನ್ನು ಹಂಚಿಕೊಳ್ಳುವಂತೆ ನಿಷ್ಕ್ರಿಯ ವ್ಯಕ್ತಿಯನ್ನು ಪ್ರೋತ್ಸಾಹಿಸುವ ಮೂಲಕ ಅವನು ಹಿಂದೆ ಯೆಹೋವನ ಸೇವೆಯಲ್ಲಿ ಅನುಭವಿಸಿದ ಸಂತಸಕರ ಕ್ಷಣಗಳನ್ನು ನೆನಪಿಸಿಕೊಳ್ಳುವಂತೆ ಮಾಡಿರಿ. ಅಲ್ಲದೇ, ಯೆಹೋವನ ಸೇವೆಯಲ್ಲಿ ನೀವು ಸಹ ಆನಂದಿಸಿರುವ ಹರುಷದ ಕ್ಷಣಗಳ ಕುರಿತು ಅವರೊಂದಿಗೆ ಮಾತಾಡಿರಿ. ಯೆಹೋವನಿಗೆ ಸಮೀಪವಾಗುವುದರಿಂದ ನೀವು ಪಡಕೊಂಡ ಆನಂದವನ್ನು ಹಂಚಿಕೊಳ್ಳಿ. (ಯಾಕೋ. 4:8) ದೇವರು ತನ್ನ ಜನರ ಆರೈಕೆ ಮಾಡುತ್ತಿರುವ ರೀತಿಗಾಗಿ ಅದರಲ್ಲೂ ವಿಶೇಷವಾಗಿ ನಮ್ಮ ಸಂಕಟಗಳಲ್ಲಿ ಆದರಣೆಯನ್ನೂ ನಿರೀಕ್ಷೆಯನ್ನೂ ಕೊಡುತ್ತಿರುವುದಕ್ಕಾಗಿ ಗಣ್ಯತೆ ವ್ಯಕ್ತಪಡಿಸಿ.—ರೋಮಾ. 15:4; 2 ಕೊರಿಂ. 1:3, 4.

14 ಅಂತೆಯೇ, ಆ ನಿಷ್ಕ್ರಿಯ ವ್ಯಕ್ತಿ ಹಿಂದೆ ಸಭೆಯೊಂದಿಗೆ ಸಕ್ರಿಯವಾಗಿ ಸಹವಸಿಸುತ್ತಿದ್ದಾಗ ಆನಂದಿಸಿದ ಆಶೀರ್ವಾದಗಳನ್ನು ಅವನ ನೆನಪಿಗೆ ತರುವುದು ಪ್ರಯೋಜನಕರ. ಉದಾಹರಣೆಗೆ, ಅವನು ಆ ಸಮಯದಲ್ಲಿ ದೇವರ ವಾಕ್ಯ ಮತ್ತು ಆತನ ಉದ್ದೇಶಗಳ ಕುರಿತ ಜ್ಞಾನದಲ್ಲಿ ಅಭಿವೃದ್ಧಿಹೊಂದುತ್ತಿದ್ದನು. (ಜ್ಞಾನೋ. 4:18) ಅವನು ‘ಆತ್ಮವನ್ನನುಸರಿಸಿ ನಡೆಯುತ್ತಿದ್ದ’ ಸಮಯದಲ್ಲಿ, ಪಾಪಗೈಯಲು ಎದುರಾಗುತ್ತಿದ್ದ ಶೋಧನೆಗಳನ್ನು ಪ್ರತಿರೋಧಿಸುವುದು ಹೆಚ್ಚು ಸುಲಭವಾಗಿತ್ತು. (ಗಲಾ. 5:22-26) ಫಲಿತಾಂಶವಾಗಿ ಶುದ್ಧ ಮನಸ್ಸಾಕ್ಷಿಯಿಂದ ಯೆಹೋವನಿಗೆ ಪ್ರಾರ್ಥಿಸಲು ಹಾಗೂ ‘ಎಲ್ಲಾ ಗ್ರಹಿಕೆಯನ್ನು ಮೀರುವ ಮತ್ತು ಹೃದಯಗಳನ್ನೂ ಯೋಚನೆಗಳನ್ನೂ ಕಾಯುವ ದೇವಶಾಂತಿಯನ್ನು’ ಹೊಂದಲು ಸಾಧ್ಯವಾಯಿತು. (ಫಿಲಿ. 4:6, 7) ಇಂಥ ಅಂಶಗಳನ್ನು ಮನಸ್ಸಿನಲ್ಲಿಡಿರಿ, ಯಥಾರ್ಥ ಆಸಕ್ತಿ ತೋರಿಸಿರಿ ಮತ್ತು ನಿಮ್ಮ ಕ್ರೈಸ್ತ ಸಹೋದರ ಅಥವಾ ಸಹೋದರಿ ಮಂದೆಗೆ ಮರಳುವಂತೆ ಸಾಧ್ಯವಿರುವ ಎಲ್ಲಾ ವಿಧಗಳಲ್ಲಿ ಪ್ರೀತಿಪೂರ್ವಕವಾಗಿ ಉತ್ತೇಜಿಸಿ.—ಫಿಲಿಪ್ಪಿ 2:4 ಓದಿ.

15 ನೀವೊಬ್ಬ ಹಿರಿಯರಾಗಿದ್ದು ಪರಿಪಾಲನೆಯ ಭೇಟಿ ಮಾಡಲಿದ್ದೀರಿ ಎಂದಿಟ್ಟುಕೊಳ್ಳಿ. ನಿಷ್ಕ್ರಿಯರಾದ ಒಂದು ದಂಪತಿಯನ್ನು ಉತ್ತೇಜಿಸಲಿಕ್ಕಾಗಿ ಅವರು ದೇವರ ವಾಕ್ಯದಿಂದ ಸತ್ಯವನ್ನು ಕಲಿಯಲಾರಂಭಿಸಿದ ಸಂದರ್ಭವನ್ನು ಅವರ ನೆನಪಿಗೆ ತರಬಹುದು. ಆಗ ಅವರಿಗೆ ಸತ್ಯವು ಎಷ್ಟು ಅತ್ಯದ್ಭುತವೂ, ತರ್ಕಸಮ್ಮತವೂ, ಸಂತೃಪ್ತಿಕರವೂ, ಆಧ್ಯಾತ್ಮಿಕವಾಗಿ ಬಿಡುಗಡೆಗೊಳಿಸುವಂಥದ್ದೂ ಆಗಿತ್ತು! (ಯೋಹಾ. 8:32) ಯೆಹೋವ, ಆತನ ಪ್ರೀತಿ ಮತ್ತು ಆತನ ಮಹಾನ್‌ ಉದ್ದೇಶಗಳ ಬಗ್ಗೆ ಅವರೇನನ್ನು ಕಲಿಯುತ್ತಿದ್ದರೋ ಅದಕ್ಕಾಗಿ ಅವರೆಷ್ಟು ಕೃತಜ್ಞರಾಗಿದ್ದರು! (ಲೂಕ 24:32 ಹೋಲಿಸಿ.) ಸಮರ್ಪಿತ ಕ್ರೈಸ್ತರಿಗಿರುವ ಯೆಹೋವನೊಂದಿಗಿನ ಆಪ್ತ ಸಂಬಂಧ ಮತ್ತು ಪ್ರಾರ್ಥನೆಯೆಂಬ ಅಮೂಲ್ಯ ಸದವಕಾಶದ ಕುರಿತು ಅವರಿಗೆ ನೆನಪಿಸಿ. “ಭಾಗ್ಯವಂತನಾದ ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ” ಪುನಃ ಒಮ್ಮೆ ಪ್ರತಿಕ್ರಿಯಿಸುವಂತೆ ನಿಷ್ಕ್ರಿಯ ವ್ಯಕ್ತಿಗಳನ್ನು ಮನಸಾರೆ ಉತ್ತೇಜಿಸಿ.—1 ತಿಮೊ. 1:11.

ಅವರಿಗೆ ಪ್ರೀತಿ ತೋರಿಸುತ್ತಾ ಇರ್ರಿ

16 ಈ ಲೇಖನದಲ್ಲಿರುವ ಸಲಹೆಗಳಿಂದ ನಿಜವಾಗಿ ಏನಾದರೂ ಪ್ರಯೋಜನವಿದೆಯೋ? ಹೌದು. ಉದಾಹರಣೆಗೆ, ತನ್ನ 12ನೇ ವಯಸ್ಸಿನಲ್ಲಿ ರಾಜ್ಯ ಪ್ರಚಾರಕನಾದ ಯುವಕನೊಬ್ಬನು 15ರ ಪ್ರಾಯದಲ್ಲಿ ನಿಷ್ಕ್ರಿಯನಾದನು. ಆದರೆ ತದನಂತರ ಅವನು ಸಕ್ರಿಯ ಪ್ರಚಾರಕನಾದನು ಮತ್ತು ಈಗ 30ಕ್ಕಿಂತ ಹೆಚ್ಚು ವರ್ಷಗಳಿಂದ ಪೂರ್ಣ ಸಮಯದ ಸೇವೆ ಮಾಡುತ್ತಿದ್ದಾನೆ. ಮುಖ್ಯವಾಗಿ ಕ್ರೈಸ್ತ ಹಿರಿಯನೊಬ್ಬನು ಕೊಟ್ಟ ಸಹಾಯದಿಂದಲೇ ಅವನು ಆಧ್ಯಾತ್ಮಿಕವಾಗಿ ಗುಣಮುಖನಾದನು. ಆ ಆಧ್ಯಾತ್ಮಿಕ ಸಹಾಯಕ್ಕಾಗಿ ಅವನೆಷ್ಟು ಕೃತಜ್ಞನಾಗಿದ್ದನು!

17 ನಿಷ್ಕ್ರಿಯ ವ್ಯಕ್ತಿಗಳು ಸಭೆಗೆ ಮರಳುವಂತೆ ಸಹಾಯ ಮಾಡಲು ಕ್ರೈಸ್ತರನ್ನು ಪ್ರಚೋದಿಸುವಂಥದ್ದು ಪ್ರೀತಿಯೇ. ಯೇಸು ತನ್ನ ಶಿಷ್ಯರಿಗಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾ. 13:34, 35) ಹೌದು, ಪ್ರೀತಿಯೇ ನಿಜ ಕ್ರೈಸ್ತರ ಗುರುತುಚಿಹ್ನೆಯಾಗಿದೆ. ನಾವು ಅದೇ ಪ್ರೀತಿಯನ್ನು, ದೀಕ್ಷಾಸ್ನಾನಿತ ಕ್ರೈಸ್ತರು ನಿಷ್ಕ್ರಿಯರಾಗುವಾಗ ಅವರಿಗೂ ತೋರಿಸಬಾರದೇ? ಖಂಡಿತ ತೋರಿಸಬೇಕು! ಆದರೆ ಅಗತ್ಯವಿರುವ ಸಹಾಯವನ್ನು ಒದಗಿಸಲಿಕ್ಕಾಗಿ ನಾವು ಇನ್ನೂ ಅನೇಕ ದೈವಿಕ ಗುಣಗಳನ್ನು ತೋರಿಸಬೇಕಾದೀತು.

18 ದೇವರ ಮಂದೆಯನ್ನು ಬಿಟ್ಟುಹೋದ ವ್ಯಕ್ತಿಗೆ ನೀವು ಸಹಾಯ ಮಾಡಬಯಸುವಲ್ಲಿ ನಿಮ್ಮಲ್ಲಿ ಯಾವ ಗುಣಗಳಿರಬೇಕು? ಪ್ರೀತಿಯಲ್ಲದೇ ಕನಿಕರ, ದಯೆ, ಸಾತ್ವಿಕತ್ವ ಮತ್ತು ದೀರ್ಘಶಾಂತಿ ತೋರಿಸಬೇಕು. ಅಲ್ಲದೇ, ಸನ್ನಿವೇಶಕ್ಕನುಗುಣವಾಗಿ ನೀವು ಕ್ಷಮಿಸುವವರೂ ಆಗಿರಬೇಕು. ಪೌಲನು ಬರೆದದ್ದು: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”—ಕೊಲೊ. 3:12-14.

19 ಮುಂದಿನ ಲೇಖನವು, ಕೆಲವರು ದೇವರ ಮಂದೆಯನ್ನು ಬಿಟ್ಟುಹೋಗಲು ಕಾರಣಗಳೇನೆಂಬುದನ್ನು ಪರಿಗಣಿಸುವುದು. ಅಲ್ಲದೇ, ಮಂದೆಗೆ ಮರಳುವಾಗ ತಮ್ಮನ್ನು ಹೇಗೆ ಬರಮಾಡಲಾಗುವುದು ಎಂಬುದರ ಬಗ್ಗೆ ನಿಷ್ಕ್ರಿಯ ವ್ಯಕ್ತಿಗಳು ಯಾವ ನಿರೀಕ್ಷೆಯನ್ನಿಡಬಹುದು ಎಂಬುದನ್ನೂ ತೋರಿಸಲಿರುವುದು. ಆ ಲೇಖನವನ್ನು ಅಧ್ಯಯನ ಮಾಡುತ್ತಿರುವಾಗ ಮತ್ತು ಈ ಲೇಖನದ ಅಂಶಗಳ ಕುರಿತು ಮನನ ಮಾಡುತ್ತಿರುವಾಗ, ಕ್ರೈಸ್ತ ಮಂದೆಗೆ ಮರಳುವಂತೆ ಕುರಿಸದೃಶ ಜನರಿಗೆ ನೆರವು ನೀಡಲು ನೀವು ಪಡುವ ಶ್ರಮ ನಿಷ್ಫಲವಾಗದು ಎಂಬ ಖಾತ್ರಿಯಿಂದಿರಿ. ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಅನೇಕರು ಪ್ರಾಪಂಚಿಕ ಸಂಪತ್ತನ್ನು ಕೂಡಿಸಿಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಡುತ್ತಾರೆ. ಆದರೆ ಲೋಕದಲ್ಲಿರುವ ಎಲ್ಲಾ ಹಣಕ್ಕಿಂತ ಒಬ್ಬನ ಜೀವ ಎಷ್ಟೋ ಹೆಚ್ಚು ಅಮೂಲ್ಯವಾಗಿದೆ. ತಪ್ಪಿಸಿಕೊಂಡ ಕುರಿಯ ಬಗೆಗಿನ ದೃಷ್ಟಾಂತದಲ್ಲಿ ಯೇಸು ಇದನ್ನೇ ಒತ್ತಿ ಹೇಳಿದನು. (ಮತ್ತಾ. 18:12-14) ಈ ಅಂಶವನ್ನು, ತಪ್ಪಿಸಿಕೊಂಡುಹೋದ ಯೆಹೋವನ ಪ್ರಿಯ ಕುರಿಸದೃಶ ಜನರು ಮಂದೆಗೆ ಮರಳುವಂತೆ ಸಹಾಯ ಮಾಡಲು ನೀವು ಮನಃಪೂರ್ವಕವಾಗಿ ಮತ್ತು ತುರ್ತಿನಿಂದ ಪ್ರಯತ್ನಿಸುತ್ತಿರುವಾಗ ಸದಾ ನೆನಪಿನಲ್ಲಿಡಿ.

ನಿಮ್ಮ ಉತ್ತರವೇನು?

• ಮಂದೆಯಿಂದ ತಪ್ಪಿಸಿಕೊಂಡ ಕುರಿಸದೃಶ ಜನರ ಕಡೆಗೆ ಕ್ರೈಸ್ತ ಕುರುಬರಿಗೆ ಯಾವ ಜವಾಬ್ದಾರಿಯಿದೆ?

• ಈಗ ಸಭೆಯೊಂದಿಗೆ ಸಹವಾಸ ಮಾಡದವರಿಗೆ ನೀವು ಹೇಗೆ ಸಹಾಯ ಮಾಡಬಲ್ಲಿರಿ?

• ಮಂದೆಯಿಂದ ತಪ್ಪಿಸಿಕೊಂಡವರಿಗೆ ಸಹಾಯ ಮಾಡಲು ನಿಮ್ಮಲ್ಲಿ ಯಾವ ಗುಣಗಳಿರಬೇಕು?

[ಅಧ್ಯಯನ ಪ್ರಶ್ನೆಗಳು]

1. ಯೇಸು ತಾನೊಬ್ಬ ಪ್ರೀತಿಪರ ಕುರುಬನೆಂದು ಹೇಗೆ ತೋರಿಸಿಕೊಟ್ಟಿದ್ದಾನೆ?

2. ಕೆಲವು ಕ್ರೈಸ್ತರು ನಿಷ್ಕ್ರಿಯರಾಗಲು ಕಾರಣಗಳೇನಿರಬಹುದು?

3. ದೇವರು ಪಾಲಿಸುವ ಹಿಂಡಿನಿಂದ ತಪ್ಪಿಸಿಕೊಂಡ ಕುರಿಗಳನ್ನು ರಕ್ಷಿಸಲು ಏನು ಅಗತ್ಯ ಎಂಬುದನ್ನು ಯೇಸು ದೃಷ್ಟಾಂತಿಸಿದನು?

4, 5. ದೇವರ ಮಂದೆಯ ಕಡೆಗೆ ಹಿರಿಯರಿಗೆ ಯಾವ ಮನೋಭಾವವಿರಬೇಕು?

6. ದೇವರ ಕುರಿಗಳಿಗೆ ಕುರುಬರ ಆರೈಕೆ ವಿಶೇಷವಾಗಿ ಇಂದು ಹೆಚ್ಚು ಅಗತ್ಯವಿದೆ ಏಕೆ?

7. ಹಿರಿಯರು ತಮ್ಮ ವಶದಲ್ಲಿಡಲಾಗಿರುವ ಕುರಿಸದೃಶ ಜನರ ಪರಿಪಾಲನೆ ಮಾಡುವುದು ಎಷ್ಟು ಪ್ರಾಮುಖ್ಯ?

8. ಹಿರಿಯರು ಯಾವ ವಿಧಗಳಲ್ಲಿ ಕುರಿಗಳಿಗೆ ವೈಯಕ್ತಿಕ ಗಮನಕೊಡಬಲ್ಲರು?

9, 10. ತಪ್ಪಿಸಿಕೊಂಡ ಕುರಿಗಳ ಬಗ್ಗೆ ಚಿಂತೆ ತೋರಿಸುವ ಜವಾಬ್ದಾರಿ ಕೇವಲ ಕ್ರೈಸ್ತ ಮೇಲ್ವಿಚಾರಕರಿಗೆ ಸೀಮಿತವಾಗಿಲ್ಲ ಎಂದು ಏಕೆ ಹೇಳಬಹುದು?

11, 12. ನಿಷ್ಕ್ರಿಯನಾದ ಜೊತೆ ವಿಶ್ವಾಸಿಗೆ ನೆರವು ನೀಡುವ ಯಾವ ವಿಶೇಷ ಅವಕಾಶ ನಿಮಗೆ ಸಿಗಬಹುದು?

13. ನಿಷ್ಕ್ರಿಯ ವ್ಯಕ್ತಿಯೊಂದಿಗೆ ನೀವೇನನ್ನು ಮಾತಾಡಬಹುದು?

14, 15. ನಿಷ್ಕ್ರಿಯ ವ್ಯಕ್ತಿಗಳು ಹಿಂದೆ ಅನುಭವಿಸಿದ ಯಾವ ಆಶೀರ್ವಾದಗಳನ್ನು ನಾವು ಅವರ ಜ್ಞಾಪಕಕ್ಕೆ ತರಬಹುದು?

16. ಆಧ್ಯಾತ್ಮಿಕ ಸಹಾಯ ನೀಡಲು ಮಾಡಲಾಗುವ ಪ್ರಯತ್ನ ನಿಜಕ್ಕೂ ಪರಿಣಾಮಕಾರಿ ಎಂಬದಕ್ಕೆ ಒಂದು ಉದಾಹರಣೆ ಕೊಡಿ.

17, 18. ದೇವರ ಮಂದೆಯನ್ನು ಬಿಟ್ಟುಹೋದವರಿಗೆ ಸಹಾಯ ಮಾಡಲು ನಿಮ್ಮಲ್ಲಿ ಯಾವ ಗುಣಗಳಿರಬೇಕು?

19. ಕ್ರೈಸ್ತ ಮಂದೆಗೆ ಮರಳುವಂತೆ ಕುರಿಸದೃಶ ಜನರಿಗೆ ನೆರವು ನೀಡಲು ನೀವು ಪಡುವ ಶ್ರಮ ನಿಷ್ಫಲವಲ್ಲವೇಕೆ?

[ಪುಟ 10ರಲ್ಲಿರುವ ಚಿತ್ರ]

ದೇವರ ಮಂದೆಯಿಂದ ತಪ್ಪಿಸಿಕೊಂಡವರಿಗೆ ಸಹಾಯ ಮಾಡಲು ಕ್ರೈಸ್ತ ಕುರುಬರು ಪ್ರೀತಿಪೂರ್ವಕವಾಗಿ ಪ್ರಯತ್ನಿಸುತ್ತಾರೆ