ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಕೋಬ ಮತ್ತು ಪೇತ್ರನ ಪತ್ರಗಳ ಮುಖ್ಯಾಂಶಗಳು

ಯಾಕೋಬ ಮತ್ತು ಪೇತ್ರನ ಪತ್ರಗಳ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಯಾಕೋಬ ಮತ್ತು ಪೇತ್ರನ ಪತ್ರಗಳ ಮುಖ್ಯಾಂಶಗಳು

ಸಾ.ಶ. 33ರ ಪಂಚಾಶತ್ತಮದ ಸುಮಾರು 30 ವರ್ಷಗಳ ಬಳಿಕ, ಯೇಸುವಿನ ಮಲತಮ್ಮನಾದ ಶಿಷ್ಯ ಯಾಕೋಬನು, ಆಧ್ಯಾತ್ಮಿಕ ಇಸ್ರಾಯೇಲಿನ “ಹನ್ನೆರಡು ಕುಲದವರಿಗೆ” ಒಂದು ಪತ್ರ ಬರೆಯುತ್ತಾನೆ. (ಯಾಕೋ. 1:1) ಅವನ ಉದ್ದೇಶ, ಅವರು ನಂಬಿಕೆಯಲ್ಲಿ ಬಲಿಷ್ಠರಾಗುವಂತೆ ಮತ್ತು ಪರೀಕ್ಷೆಗಳನ್ನು ಎದುರಿಸುವಾಗ ತಾಳ್ಮೆಯನ್ನು ತೋರಿಸುವಂತೆ ಉತ್ತೇಜಿಸುವುದೇ ಆಗಿದೆ. ಸಭೆಗಳಲ್ಲಿ ಹುಟ್ಟಿರುವ ನೆಮ್ಮದಿಗೆಡಿಸುವ ಸ್ಥಿತಿಗತಿಯನ್ನು ತಿದ್ದಲು ಸಲಹೆಯನ್ನೂ ಒದಗಿಸುತ್ತಾನೆ.

ಸಾ.ಶ. 64ರಲ್ಲಿ ರೋಮನ್‌ ಸಾಮ್ರಾಟ ನೀರೋ ಕ್ರೈಸ್ತರ ವಿರುದ್ಧ ನಡೆಸಿದ ಹಿಂಸೆಯ ಕಾರ್ಯಾಚರಣೆಗೆ ಸ್ವಲ್ಪ ಮುಂಚೆ ಅಪೊಸ್ತಲ ಪೇತ್ರನು ಕ್ರೈಸ್ತರನ್ನು ಉದ್ದೇಶಿಸಿ ತನ್ನ ಪ್ರಥಮ ಪತ್ರ ಬರೆಯುತ್ತಾನೆ. ಅವರು ನಂಬಿಕೆಯಲ್ಲಿ ದೃಢರಾಗಿ ಉಳಿಯುವಂತೆ ಅವನು ಉತ್ತೇಜಿಸುತ್ತಾನೆ. ಈ ಪತ್ರ ಬರೆದ ಸ್ವಲ್ಪದರಲ್ಲೇ ಅವನ ಎರಡನೇ ಪತ್ರದಲ್ಲಿ, ತನ್ನ ಜೊತೆ ವಿಶ್ವಾಸಿಗಳು ದೇವರ ವಾಕ್ಯಕ್ಕೆ ಗಮನಕೊಡುವಂತೆ ಉತ್ತೇಜಿಸುತ್ತಾನೆ ಮತ್ತು ಯೆಹೋವನ ದಿನದ ಆಗಮನದ ಕುರಿತು ಎಚ್ಚರಿಸುತ್ತಾನೆ. ಹೌದು, ಯಾಕೋಬ ಹಾಗೂ ಪೇತ್ರನು ಬರೆದ ಪತ್ರಗಳಲ್ಲಿರುವ ಸಂದೇಶಕ್ಕೆ ಗಮನಕೊಡುವುದರಿಂದ ನಮಗೆ ಪ್ರಯೋಜನವಾಗಬಲ್ಲದು.—ಇಬ್ರಿ. 4:12.

‘ನಂಬಿಕೆಯಿಟ್ಟು ಕೇಳಿಕೊಳ್ಳುವವರಿಗೆ’ ದೇವರು ವಿವೇಕ ಕೊಡುತ್ತಾನೆ

(ಯಾಕೋ. 1:1–5:20)

“ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು” ಎಂದು ಯಾಕೋಬನು ಬರೆಯುತ್ತಾನೆ. ‘ನಂಬಿಕೆಯಿಟ್ಟು ಕೇಳಿಕೊಳ್ಳುವವರಿಗೆ’ ಕಷ್ಟಪರೀಕ್ಷೆಗಳನ್ನು ತಾಳಿಕೊಳ್ಳಲು ಬೇಕಾದ ವಿವೇಕವನ್ನು ಯೆಹೋವನು ದಯಪಾಲಿಸುತ್ತಾನೆ.—ಯಾಕೋ. 1:5-8, 12.

ಸಭೆಯಲ್ಲಿ “ಬೋಧಕ”ರಾಗುವವರಿಗೂ ನಂಬಿಕೆ ಹಾಗೂ ವಿವೇಕ ಅಗತ್ಯ. ನಾಲಿಗೆಯು ‘ದೇಹವನ್ನೆಲ್ಲಾ ಕೆಡಿಸುವ’ ಸಾಮರ್ಥ್ಯವುಳ್ಳ “ಚಿಕ್ಕ ಅಂಗ” ಆಗಿದೆಯೆಂದು ಯಾಕೋಬನು ಹೇಳಿದ ನಂತರ, ಒಬ್ಬ ವ್ಯಕ್ತಿಗೆ ದೇವರೊಂದಿಗಿರುವ ಸಂಬಂಧವನ್ನು ಕೆಡಿಸಬಲ್ಲ ಲೌಕಿಕ ಪ್ರವೃತ್ತಿಗಳ ಕುರಿತು ಅವನು ಎಚ್ಚರಿಸುತ್ತಾನೆ. ಆಧ್ಯಾತ್ಮಿಕವಾಗಿ ಅಸ್ವಸ್ಥನಾದ ಯಾವುದೇ ವ್ಯಕ್ತಿ ಚೇತರಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಹೆಜ್ಜೆಗಳನ್ನೂ ಅವನು ತಿಳಿಸುತ್ತಾನೆ.—ಯಾಕೋ. 3:1, 5, 6; 5:14, 15.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

2:13—‘ಕರುಣೆಯು ನ್ಯಾಯತೀರ್ಮಾನವನ್ನು ಗೆದ್ದು ಹಿಗ್ಗುವುದು’ ಹೇಗೆ? ನಾವು ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕಾಗುವಾಗ ಆತನು, ನಾವು ಇತರರಿಗೆ ತೋರಿಸಿರುವ ಕರುಣೆಯನ್ನು ಗಣನೆಗೆ ತೆಗೆದುಕೊಂಡು, ತನ್ನ ಪುತ್ರನ ವಿಮೋಚನಾ ಮೌಲ್ಯದ ಆಧಾರದ ಮೇಲೆ ನಮ್ಮನ್ನು ಕ್ಷಮಿಸುತ್ತಾನೆ. (ರೋಮಾ. 14:12) ನಮ್ಮ ಜೀವನದಲ್ಲಿ ಕರುಣೆಯನ್ನು ಒಂದು ಪ್ರಧಾನ ಗುಣವಾಗಿ ಮಾಡಲು ಇದೊಂದು ಒಳ್ಳೇ ಕಾರಣವಲ್ಲವೋ?

4:5—ಯಾಕೋಬನು ಇಲ್ಲಿ ಯಾವ ವಚನವನ್ನು ಉಲ್ಲೇಖಿಸುತ್ತಾನೆ? ಯಾಕೋಬನು ಇಲ್ಲಿ ನಿರ್ದಿಷ್ಟವಾಗಿ ಯಾವುದೇ ಒಂದು ವಚನವನ್ನು ಉಲ್ಲೇಖಿಸುವುದಿಲ್ಲ. ಆದರೆ ಈ ದೈವಪ್ರೇರಿತ ಮಾತುಗಳು ಬಹುಶಃ, ಆದಿಕಾಂಡ 6:5; 8:21; ಜ್ಞಾನೋಕ್ತಿ 21:10 ಮತ್ತು ಗಲಾತ್ಯ 5:17ರಂಥ ವಚನಗಳಲ್ಲಿರುವ ವಿಚಾರದ ಮೇಲಾಧರಿತವಾಗಿವೆ.

5:20—“ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದವನು” ಯಾರ ಪ್ರಾಣವನ್ನು ಮರಣದಿಂದ ತಪ್ಪಿಸುವನು? ಒಬ್ಬ ತಪ್ಪಿತಸ್ಥನನ್ನು ತಪ್ಪಾದ ಮಾರ್ಗಕ್ರಮದಿಂದ ತಿರುಗಿಸುವ ಕ್ರೈಸ್ತನೊಬ್ಬನು ಆ ಪಶ್ಚಾತ್ತಾಪಿ ವ್ಯಕ್ತಿಯ ಪ್ರಾಣವನ್ನು ಆಧ್ಯಾತ್ಮಿಕ ಮರಣದಿಂದ ಮತ್ತು ಬಹುಶಃ ನಿತ್ಯ ನಾಶನದಿಂದ ತಪ್ಪಿಸುವನು. ಈ ರೀತಿಯಲ್ಲಿ ಆ ಪಾಪಿಗೆ ಸಹಾಯ ಮಾಡುವವನು ಅವನ ‘ಬಹುಪಾಪಗಳನ್ನೂ ಮುಚ್ಚಿಹಾಕುವನು.’

ನಮಗಾಗಿರುವ ಪಾಠಗಳು:

1:14, 15. ಪಾಪ ಆರಂಭವಾಗುವುದು ಕೆಟ್ಟ ಆಶೆಯಿಂದಾಗಿಯೇ. ಆದುದರಿಂದ, ಕೆಟ್ಟ ಆಶೆಗಳ ಕುರಿತು ಯೋಚಿಸುತ್ತಾ ಇರುವ ಮೂಲಕ ಅವುಗಳನ್ನು ನಾವು ಪೋಷಿಸಬಾರದು. ಅದಕ್ಕೆ ಬದಲು, ನಾವು ಭಕ್ತಿವರ್ಧಕ ವಿಷಯಗಳನ್ನು ‘ಲಕ್ಷ್ಯಕ್ಕೆ ತಂದುಕೊಳ್ಳುತ್ತಿರಬೇಕು’ ಮತ್ತು ನಮ್ಮ ಹೃದಮನಗಳಲ್ಲಿ ಅವುಗಳನ್ನು ತುಂಬಿಸಬೇಕು.—ಫಿಲಿ. 4:8.

2:8, 9. ‘ಪಕ್ಷಪಾತ ತೋರಿಸುವುದು,’ ಪ್ರೀತಿ ಎಂಬ ‘ರಾಜಾಜ್ಞೆಗೆ’ ವಿರುದ್ಧವಾಗಿದೆ. ಆದುದರಿಂದ ಸತ್ಯ ಕ್ರೈಸ್ತರು ಪಕ್ಷಪಾತ ತೋರಿಸುವುದಿಲ್ಲ.

2:14-26. ನಮ್ಮ ರಕ್ಷಣೆಯು, ‘ನಂಬಿಕೆಯ ಮೂಲಕವೇ’ ಹೊರತು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದರಿಂದ ಇಲ್ಲವೇ ಕ್ರೈಸ್ತರಾಗಿ ನಾವು ಮಾಡಿರುವ “ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ.” ಆದರೆ ನಮ್ಮ ನಂಬಿಕೆಯು ಕೇವಲ ಬಾಯಿಮಾತಿನದ್ದಾಗಿರಬಾರದು. (ಎಫೆ. 2:8, 9; ಯೋಹಾ. 3:16) ಅದು ನಮ್ಮನ್ನು ಕ್ರಿಯೆಗೆ ನಡೆಸಬೇಕು.

3:13-17. “ಮೇಲಣಿಂದ ಬರುವ ಜ್ಞಾನ” ಇಲ್ಲವೇ ವಿವೇಕವು ‘ಭೂಸಂಬಂಧವಾದ, ಪ್ರಾಕೃತಭಾವದ, ದೆವ್ವಗಳಿಗೆ ಸಂಬಂಧಪಟ್ಟ’ ವಿವೇಕಕ್ಕಿಂತ ಖಂಡಿತ ಶ್ರೇಷ್ಠವಾಗಿದೆ! ನಾವದನ್ನು ‘ನಿಕ್ಷೇಪದಂತೆ ಹುಡುಕಬೇಕು.’—ಜ್ಞಾನೋ. 2:1-5.

3:18. ರಾಜ್ಯದ ಬೀಜವನ್ನು ‘ಸಮಾಧಾನಪಡಿಸುವವರು’ ಸಮಾಧಾನದಿಂದ ಬಿತ್ತಬೇಕು. ಆದುದರಿಂದ ನಾವು ಗರ್ವಿಷ್ಠರು, ಜಗಳಗಂಟರು ಇಲ್ಲವೇ ಗುಲ್ಲೆಬ್ಬಿಸುವವರಾಗಿರದೇ ಶಾಂತಿಮಾಡುವವರು ಆಗಿರುವುದು ಪ್ರಾಮುಖ್ಯ.

‘ನಂಬಿಕೆಯಲ್ಲಿ ದೃಢವಾಗಿರಿ’

(1 ಪೇತ್ರ 1:1–5:14)

ಪೇತ್ರನು ತನ್ನ ಜೊತೆ ವಿಶ್ವಾಸಿಗಳಿಗೆ ಸ್ವರ್ಗದಲ್ಲಿನ ಬಾಧ್ಯತೆಯ ಕುರಿತ ಅವರ “ಜೀವಕರವಾದ ನಿರೀಕ್ಷೆಯ” ಬಗ್ಗೆ ನೆನಪುಹುಟ್ಟಿಸುತ್ತಾನೆ. ‘ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ಆಗಿದ್ದೀರಿ’ ಎಂದು ಪೇತ್ರನು ಅವರಿಗೆ ಹೇಳಿದನು. ಅಧೀನತೆಯ ಬಗ್ಗೆ ನಿರ್ದಿಷ್ಟ ಸಲಹೆಯನ್ನು ಕೊಟ್ಟ ಬಳಿಕ ಆತನು ಎಲ್ಲರಿಗೂ, “ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ” ಎಂಬ ಬುದ್ಧಿವಾದ ಕೊಡುತ್ತಾನೆ.—1 ಪೇತ್ರ 1:3, 4; 2:9; 3:8.

“ಎಲ್ಲವುಗಳ [ಯೆಹೂದಿ ವ್ಯವಸ್ಥೆಯ] ಅಂತ್ಯವು ಹತ್ತಿರ”ವಾಗಿದ್ದ ಕಾರಣ, ಪೇತ್ರನು ಸಹೋದರರಿಗೆ “ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿ” ಇರುವಂತೆ ಸಲಹೆಕೊಡುತ್ತಾನೆ. ಅವನು ಹೇಳುವುದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. . . . ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು [ಸೈತಾನನನ್ನು] ಎದುರಿಸಿರಿ.”—1 ಪೇತ್ರ 4:7; 5:8, 9.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

3:20-22—ದೀಕ್ಷಾಸ್ನಾನವು ನಮ್ಮನ್ನು ಹೇಗೆ ರಕ್ಷಿಸುತ್ತದೆ? ರಕ್ಷಣೆಯನ್ನು ಪಡೆಯಲಿಚ್ಛಿಸುವವರಿಗೆ ದೀಕ್ಷಾಸ್ನಾನವು ಅಗತ್ಯ. ಆದರೆ ದೀಕ್ಷಾಸ್ನಾನವೊಂದೇ ನಮ್ಮನ್ನು ರಕ್ಷಿಸಲಾರದು. ರಕ್ಷಣೆಯು ವಾಸ್ತವದಲ್ಲಿ “ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ” ಲಭ್ಯವಾಗುತ್ತದೆ. ಯೇಸು ಯಜ್ಞಾರ್ಪಿತ ಮರಣಕ್ಕೀಡಾಗಿ, ಪುನರುತ್ಥಾನಹೊಂದಿ ಈಗ “ದೇವರ ಬಲಗಡೆಯಲ್ಲಿದ್ದಾನೆ” ಮತ್ತು ಜೀವಿತರ ಹಾಗೂ ಸತ್ತವರ ಮೇಲೆ ಅಧಿಕಾರ ಹೊಂದಿರುವುದರಿಂದ ಮಾತ್ರವೇ ನಮ್ಮ ರಕ್ಷಣೆ ಸಾಧ್ಯವೆಂಬ ನಂಬಿಕೆ ದೀಕ್ಷಾಸ್ನಾನದ ಅಭ್ಯರ್ಥಿಗಿರಬೇಕು. ಇಂಥ ನಂಬಿಕೆಯ ಮೇಲಾಧರಿತವಾದ ದೀಕ್ಷಾಸ್ನಾನವೇ, ‘ಎಂಟು ಜನರು ನೀರಿನ ಮೂಲಕ ರಕ್ಷಣೆಹೊಂದಿದ್ದಕ್ಕೆ’ ಅನುರೂಪವಾದದ್ದಾಗಿದೆ.

4:6—ಯಾರಿಗೆ ‘ಸುವಾರ್ತೆಯು ತಿಳಿಸಲ್ಪಟ್ಟಿತ್ತೊ’ ಆ “ಸತ್ತಿರುವವರು” ಯಾರು? ಇವರು, ಸುವಾರ್ತೆಯನ್ನು ಕೇಳುವ ಮುಂಚೆ ತಮ್ಮ ‘ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದರು.’ (ಎಫೆ. 2:1) ಆದರೆ ಅವರು ಸುವಾರ್ತೆಯಲ್ಲಿ ನಂಬಿಕೆಯನ್ನಿಟ್ಟ ಬಳಿಕ, ಆಧ್ಯಾತ್ಮಿಕವಾಗಿ ‘ಜೀವಕ್ಕೆ’ ಬಂದರು.

ನಮಗಾಗಿರುವ ಪಾಠಗಳು:

1:7. ನಮ್ಮ ನಂಬಿಕೆಗೆ ಶ್ರೇಷ್ಠವಾದ ಮೌಲ್ಯವಿರಬೇಕಾದರೆ ಅದು ಶೋಧಿತವಾದ ಇಲ್ಲವೇ ಪರೀಕ್ಷಿಸಲ್ಪಟ್ಟಿರುವ ಗುಣಮಟ್ಟದ್ದಾಗಿರಬೇಕು. ಅಂಥ ಬಲವಾದ ನಂಬಿಕೆಯು ನಿಜವಾಗಿಯೂ “ಪ್ರಾಣರಕ್ಷಣೆಯನ್ನು” ಮಾಡುತ್ತದೆ. (ಇಬ್ರಿ. 10:39) ನಮಗೆ ಎದುರಾಗುವ ನಂಬಿಕೆಯ ಪರೀಕ್ಷೆಗಳಿಂದ ನಾವು ಹಿಂದೆ ಸರಿಯಬಾರದು.

1:10-12. ಅಭಿಷಿಕ್ತ ಕ್ರೈಸ್ತ ಸಭೆಯ ಕುರಿತು ಹಿಂದಿನಕಾಲದ ದೇವರ ಪ್ರವಾದಿಗಳು ಬರೆದ ಗಹನವಾದ ಆಧ್ಯಾತ್ಮಿಕ ಸತ್ಯಗಳನ್ನು ಲಕ್ಷ್ಯವಿಟ್ಟು ನೋಡುವ ಮತ್ತು ಅರ್ಥೈಸಿಕೊಳ್ಳುವ ಅಪೇಕ್ಷೆ ದೇವದೂತರಿಗಿತ್ತು. ಆದರೆ ಆ ಸತ್ಯಗಳು, ಯೆಹೋವನು ಆ ಸಭೆಯೊಂದಿಗೆ ವ್ಯವಹರಿಸಲು ಆರಂಭಿಸಿದಾಗಲೇ ಸ್ಪಷ್ಟವಾದವು. (ಎಫೆ. 3:10, 11) ನಾವು ಆ ದೇವದೂತರ ಮಾದರಿಯನ್ನು ಅನುಸರಿಸುತ್ತಾ, “ದೇವರ ಅಗಾಧವಾದ ವಿಷಯಗಳನ್ನು” ಪರಿಶೋಧಿಸಲು ಪ್ರಯತ್ನಿಸಬೇಕಲ್ಲವೇ?—1 ಕೊರಿಂ. 2:10.

2:21. ನಮ್ಮ ಮಾದರಿಯಾದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾ, ನಾವು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯಲಿಕ್ಕಾಗಿ ಮರಣಪರ್ಯಂತವೂ ಕಷ್ಟವನ್ನನುಭವಿಸಲು ಸಿದ್ಧರಿರಬೇಕು.

5:6, 7. ನಾಳಿನ ದಿನ ಹೇಗಿರುವುದೋ ಎಂಬುದರ ಕುರಿತು ಅನುಚಿತವಾಗಿ ಚಿಂತಿತರಾಗುವ ಬದಲು ನಮ್ಮ ಚಿಂತೆಯನ್ನು ಯೆಹೋವನ ಮೇಲೆ ಹಾಕುವಲ್ಲಿ ನಮ್ಮ ಜೀವನದಲ್ಲಿ ಸತ್ಯಾರಾಧನೆಗೆ ಆದ್ಯತೆಕೊಡುತ್ತಿರಲು ಆತನು ನಮಗೆ ಸಹಾಯಮಾಡುವನು.—ಮತ್ತಾ. 6:33, 34.

‘ಯೆಹೋವನ ದಿನವು ಬರುತ್ತದೆ’

(2 ಪೇತ್ರ 1:1–3:18)

ಪೇತ್ರನು ಬರೆಯುವುದು: “ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” ಪ್ರವಾದನಾ ವಾಕ್ಯಕ್ಕೆ ಲಕ್ಷ್ಯಕೊಡುವುದರಿಂದ ನಾವು ನಮ್ಮನ್ನೇ “ಸುಳ್ಳುಬೋಧಕರು” ಹಾಗೂ ಇತರ ಭ್ರಷ್ಟ ವ್ಯಕ್ತಿಗಳಿಂದ ಸಂರಕ್ಷಿಸಬಹುದು.—2 ಪೇತ್ರ 1:21; 2:1-3.

‘ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬರುವರೆಂದು’ ಪೇತ್ರನು ಎಚ್ಚರಿಸುತ್ತಾನೆ. ಆದರೆ ‘ಯೆಹೋವನ ದಿನವು ಕಳ್ಳನು ಬರುವಂತೆ ಬರುವುದು.’ ಆ “ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ” ಇರುವವರಿಗೆ ಸ್ವಸ್ಥವಾದ ಬುದ್ಧಿವಾದ ಕೊಡುತ್ತಾ ಪೇತ್ರನು ತನ್ನ ಪತ್ರವನ್ನು ಕೊನೆಗೊಳಿಸುತ್ತಾನೆ.—2 ಪೇತ್ರ 3:3, 10-12.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:19—“ಬೆಳ್ಳಿ” ಅಂದರೆ ಯಾರು, ಅವನು ಯಾವಾಗ ಉದಯಿಸುತ್ತಾನೆ, ಮತ್ತು ಅದು ಉದಯಿಸಿದೆಯೆಂದು ನಮಗೆ ಹೇಗೆ ಗೊತ್ತು? “ಬೆಳ್ಳಿಯು,” ರಾಜ್ಯಾಧಿಕಾರವಿರುವ ಯೇಸು ಕ್ರಿಸ್ತನಾಗಿದ್ದಾನೆ. (ಪ್ರಕ. 22:16) 1914ರಲ್ಲಿ ಯೇಸು, ಮೆಸ್ಸೀಯ ರಾಜನಾಗಿ ಇಡೀ ಸೃಷ್ಟಿಯ ಮುಂದೆ ಉದಯಿಸುತ್ತಾ, ಹೊಸ ದಿನವೊಂದರ ಆಗಮನವನ್ನು ಸೂಚಿಸಿದನು. ರೂಪಾಂತರ ದರ್ಶನವು, ಯೇಸುವಿನ ಮಹಿಮೆ ಹಾಗೂ ರಾಜ್ಯಾಧಿಕಾರದ ಕುರಿತು ಮುನ್ನೋಟವನ್ನು ಕೊಟ್ಟಿತ್ತು ಮತ್ತು ದೇವರ ಪ್ರವಾದನಾ ವಾಕ್ಯದ ನಿಶ್ಚಿತತೆಯನ್ನು ಒತ್ತಿಹೇಳಿತು. ಆ ವಾಕ್ಯಕ್ಕೆ ಲಕ್ಷ್ಯಕೊಡುವುದು ನಮ್ಮ ಹೃದಯಗಳನ್ನು ಬೆಳಗಿಸುತ್ತದೆ, ಮತ್ತು ಹೀಗೆ ಆ ಬೆಳ್ಳಿ ಉದಯಿಸಿದೆಯೆಂದು ನಮಗೆ ತಿಳಿದುಬರುತ್ತದೆ.

2:4—ಇಲ್ಲಿ “ನರಕ” ಎಂದರೇನು, ಮತ್ತು ದಂಗೆಕೋರ ದೇವದೂತರನ್ನು ಯಾವಾಗ ಅದರಲ್ಲಿ ಎಸೆಯಲಾಯಿತು? ಇಲ್ಲಿ ‘ನರಕ’ ಎಂದು ಭಾಷಾಂತರಿಸಲಾಗಿರುವ ಮೂಲಭಾಷೆಯ ಪದವು “ಟಾರ್ಟರಸ್‌” ಆಗಿದೆ. ಇದು ಒಂದು ಬಂಧಿವಾಸದಂಥ ಸ್ಥಿತಿಯಾಗಿದೆ. ಮಾನವರನ್ನಲ್ಲ ಬದಲಾಗಿ ಕೇವಲ ಆತ್ಮಜೀವಿಗಳನ್ನು ಆ ಸ್ಥಿತಿಗೆ ದೊಬ್ಬಲಾಗುತ್ತದೆ. ದೇವರ ಉಜ್ವಲ ಉದ್ದೇಶಗಳ ಕುರಿತ ಮಾನಸಿಕ ಗಾಢ ಅಂಧಕಾರದ ಸ್ಥಿತಿ ಅದಾಗಿದೆ. ಅಲ್ಲಿರುವವರಿಗೆ ಭವಿಷ್ಯತ್ತಿಗಾಗಿ ಯಾವುದೇ ನಿರೀಕ್ಷೆಯಿಲ್ಲ. ನೋಹನ ದಿನಗಳಲ್ಲಿ ದೇವರು ಅವಿಧೇಯ ದೂತರನ್ನು ಟಾರ್ಟರಸ್‌ಗೆ ದೊಬ್ಬಿದನು. ಅವರ ನಾಶನವಾಗುವ ವರೆಗೂ ಅವರು ಆ ಕೀಳಾದ ಸ್ಥಿತಿಯಲ್ಲಿ ಉಳಿಯುವರು.

3:17—ಪೇತ್ರನು ಹೇಳಿದ ‘ಮುಂದಾಗಿ ತಿಳಿದುಕೊಂಡಿರುವ ಸಂಗತಿಗಳು’ ಅಂದರೇನು? ಭವಿಷ್ಯದಲ್ಲಿ ನಡೆಯುವ ಘಟನೆಗಳ ಕುರಿತು ತನಗೂ ಇತರ ಬೈಬಲ್‌ ಬರಹಗಾರರಿಗೂ ದೈವಪ್ರೇರಣೆಯಿಂದ ಸಿಕ್ಕಿರುವ ಪೂರ್ವಜ್ಞಾನ ಇಲ್ಲವೇ ಮುನ್ನರಿವಿಗೆ ಪೇತ್ರನು ಸೂಚಿಸುತ್ತಿದ್ದನು. ಇದು ಅಪರಿಮಿತವಾದ ಜ್ಞಾನವಾಗಿರದಿದ್ದ ಕಾರಣ, ಆದಿ ಕ್ರೈಸ್ತರಿಗೆ ಭವಿಷ್ಯದಲ್ಲಿನ ಘಟನೆಗಳ ಕುರಿತು ಎಲ್ಲ ವಿವರಗಳು ತಿಳಿದಿರಲಿಲ್ಲ. ಅವರೇನನ್ನು ನಿರೀಕ್ಷಿಸಬಹುದೆಂಬುದರ ಕುರಿತು ಅವರಿಗೆ ಒಂದು ಸಾಮಾನ್ಯ ರೂಪುರೇಷೆ ಸಿಕ್ಕಿತಷ್ಟೇ.

ನಮಗಾಗಿರುವ ಪಾಠಗಳು:

1:2, 5-7. ನಂಬಿಕೆ, ತಾಳ್ಮೆ ಮತ್ತು ಭಕ್ತಿಯಂಥ ಗುಣಗಳನ್ನು ಬೆಳೆಸಿಕೊಳ್ಳಲಿಕ್ಕಾಗಿ ನಾವು ಪೂರ್ಣಾಸಕ್ತಿಯಿಂದ ಪ್ರಯತ್ನಮಾಡುವುದು, “ದೇವರ ವಿಷಯವಾಗಿಯೂ ನಮ್ಮ ಕರ್ತನಾದ ಯೇಸುವಿನ ವಿಷಯವಾಗಿಯೂ ಪರಿಜ್ಞಾನ”ವನ್ನು ಹೆಚ್ಚಿಸಲು ಸಹಾಯಮಾಡುವುದಲ್ಲದೆ, ನಾವು ಆ ಜ್ಞಾನದ ಸಂಬಂಧದಲ್ಲಿ “ಆಲಸ್ಯಗಾರರೂ ನಿಷ್ಫಲರೂ ಆಗದಂತೆ ಮಾಡು”ವುದು.—2 ಪೇತ್ರ 1:8.

1:12-15. “ಸತ್ಯದಲ್ಲಿ ಸ್ಥಿರವಾಗಿ” ಇರಲಿಕ್ಕಾಗಿ ನಮಗೆ ಮರುಜ್ಞಾಪನಗಳು ಸತತವಾಗಿ ಬೇಕಾಗುತ್ತವೆ. ಇವುಗಳನ್ನು ನಮ್ಮ ಸಭಾ ಕೂಟಗಳಲ್ಲಿ, ವೈಯಕ್ತಿಕ ಅಧ್ಯಯನದಲ್ಲಿ ಮತ್ತು ಬೈಬಲ್‌ ವಾಚನದಲ್ಲಿ ಪಡೆಯುತ್ತೇವೆ.

2:2. ನಮ್ಮ ನಡತೆಯು ಯೆಹೋವನಿಗಾಗಲಿ ಆತನ ಸಂಘಟನೆಗಾಗಲಿ ನಿಂದೆ ತರದಂತೆ ನಾವು ಜಾಗರೂಕರಾಗಿರಬೇಕು.—ರೋಮಾ. 2:24.

2:4-9. ಗತಕಾಲದಲ್ಲಿ ಯೆಹೋವನು ಏನು ಮಾಡಿದ್ದಾನೋ ಅದನ್ನು ಮನಸ್ಸಿನಲ್ಲಿಟ್ಟ ನಮಗೆ, ಆತನು ತನ್ನ “ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ” ಎಂಬ ನಿಶ್ಚಯವಿರಬಲ್ಲದು.

2:10-13. ‘ಮಹಾಪದವಿಯವರು’ ಅಂದರೆ ಕ್ರೈಸ್ತ ಹಿರಿಯರು ದೋಷಪೂರ್ಣರೂ, ಆಗಾಗ್ಗೆ ತಪ್ಪಿಬೀಳುವವರೂ ಆಗಿರುತ್ತಾರೆ. ಹಾಗಿದ್ದರೂ ನಾವು ಅವರ ಬಗ್ಗೆ ದೂಷಿಸಿ ಮಾತಾಡಬಾರದು.—ಇಬ್ರಿ. 13:7, 17.

3:2-4, 12. ‘ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳಿಗೆ ಮತ್ತು ಕರ್ತನಾದ ರಕ್ಷಕನು ಕೊಟ್ಟ ಅಪ್ಪಣೆಗೆ’ ನಿಕಟ ಗಮನಕೊಡುವುದು, ನಾವು ಯೆಹೋವನ ದಿನದ ನಿಕಟತೆಯನ್ನು ಗಮನದಲ್ಲಿಡುವಂತೆ ಸಹಾಯಮಾಡುವುದು.

3:11-14. “ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ” ನಾವು (1) ದೈಹಿಕ, ಮಾನಸಿಕ, ನೈತಿಕ ಹಾಗೂ ಆಧ್ಯಾತ್ಮಿಕ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತಾ ‘ಪರಿಶುದ್ಧವಾದ ನಡವಳಿಕೆ’ಯುಳ್ಳವರಾಗಿರಬೇಕು; (2) ‘ಭಕ್ತಿಯ’ ಕ್ರಿಯೆಗಳಲ್ಲಿ, ಉದಾಹರಣೆಗೆ ರಾಜ್ಯ ಸಾರುವಿಕೆ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ತಲ್ಲೀನರಾಗಿರಬೇಕು; (3) ಲೋಕದ ಯಾವುದೇ ಕಳಂಕಹತ್ತಿಸಿಕೊಳ್ಳದೇ ನಮ್ಮ ನಡತೆ ಹಾಗೂ ವ್ಯಕ್ತಿತ್ವದಲ್ಲಿ “ನಿರ್ಮಲರಾಗಿ” ಇರಬೇಕು; (4) ಎಲ್ಲವನ್ನೂ ನಿಷ್ಕಲ್ಮಷ ಇರಾದೆಯಿಂದ ಮಾಡುತ್ತಾ, “ನಿರ್ದೋಷಿಗಳಾಗಿ” ಇರಬೇಕು; ಮತ್ತು (5) ‘ಶಾಂತರಾಗಿರಬೇಕು’ ಅಂದರೆ ದೇವರೊಂದಿಗೆ, ನಮ್ಮ ಕ್ರೈಸ್ತ ಸಹೋದರರೊಂದಿಗೆ ಮತ್ತು ಜೊತೆ ಮಾನವರೊಂದಿಗೆ ಸಮಾಧಾನದಿಂದಿರಬೇಕು.