ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ತವರಿಗೆ ಭಯಪಡುತ್ತೀರೋ?

ಸತ್ತವರಿಗೆ ಭಯಪಡುತ್ತೀರೋ?

ಸತ್ತವರಿಗೆ ಭಯಪಡುತ್ತೀರೋ?

‘ಇಲ್ಲ, ನಾನೇಕೆ ಭಯಪಡಲಿ?’ ಎಂಬುದು ಕೆಲವರ ಸರಳ ಉತ್ತರ. ಯಾಕೆಂದರೆ ಮೃತರು ನಿಜವಾಗಿಯೂ ಸತ್ತಿದ್ದಾರೆ ಎಂದು ಅವರು ನಂಬುತ್ತಾರೆ. ಆದರೂ ಮೃತರ ಆತ್ಮ ಜೀವಿಸುತ್ತದೆ ಎಂದು ದೃಢವಾಗಿ ನಂಬುವ ಲಕ್ಷಾಂತರ ಜನರೂ ಇದ್ದಾರೆ.

ಪಶ್ಚಿಮ ಆಫ್ರಿಕಾದ ಬೆನಿನ್‌ನಲ್ಲಿ ಅನೇಕರ ನಂಬಿಕೆ ಏನೆಂದರೆ ಸತ್ತವನ ಆತ್ಮ ಪುನಃ ಹಿಂದಿರುಗಿ ಬಂದು ತನ್ನ ಕುಟುಂಬದ ಸದಸ್ಯರ ಬಲಿತೆಗೆದುಕೊಳ್ಳುತ್ತದೆ. ಆದ್ದರಿಂದ ಸಂಬಂಧಿಕರಲ್ಲಿ ಯಾರಾದರೂ ಸತ್ತಲ್ಲಿ ಅವರ ಆತ್ಮ-ಶಾಂತಿಗಾಗಿ ಜನರು ಸಾಲಮಾಡಿಯೋ ಆಸ್ತಿಪಾಸ್ತಿಗಳನ್ನು ಮಾರಿಯೋ ಪ್ರಾಣಿಬಲಿ ಮತ್ತು ಇತರ ಸಂಸ್ಕಾರಗಳನ್ನು ಮಾಡುತ್ತಾರೆ. ಸತ್ತನಂತರ ಆತ್ಮವು ಜೀವಿಸುತ್ತದೆಂದೂ ಅದು ಜೀವಂತರೊಂದಿಗೆ ಸಂವಾದಿಸಬಲ್ಲದೆಂದೂ ನೆನಸಿ ಕೆಲವರು ಭೂತಾರಾಧನೆಯನ್ನು ನಡೆಸುತ್ತಾರೆ. ಇನ್ನು ಕೆಲವರು ಮೃತರ ಆತ್ಮಗಳ ಪ್ರಭಾವದಿಂದಾಗಿ ತಾವು ಭೀಕರವಾಗಿ ಸತಾಯಿಸಲ್ಪಡುತ್ತೇವೆಂಬ ಅನುಭವಗಳನ್ನು ತಿಳಿಸುತ್ತಾರೆ.

ಅಗ್ಬೂಲ ಎಂಬವನಿಗೆ ಇಂಥ ಒಂದು ಭೀಕರ ಅನುಭವವಾಗಿತ್ತು. ಅವನು ಬೆನಿನ್‌-ನೈಜೀರಿಯ ದೇಶಗಳ ಗಡಿಪ್ರದೇಶದ ಸಮೀಪ ಜೀವಿಸುತ್ತಾನೆ. ಅವನು ಹೇಳುವುದು: “ಭೂತಾರಾಧನೆಯು ನಮ್ಮ ಊರಿನ ನಿತ್ಯದ ಆಚಾರ. ಶವಗಳನ್ನು ವಿಧಿಬದ್ಧವಾಗಿ ತೊಳೆದು ಆತ್ಮಲೋಕಕ್ಕಾಗಿ ಸಿದ್ಧಗೊಳಿಸುವುದು ಇಲ್ಲಿನ ವಾಡಿಕೆ. ಶವಗಳನ್ನು ತೊಳೆದುಳಿದ ಸಾಬೂನನ್ನು ಒಂದು ಬಗೆಯ ಎಲೆಯೊಂದಿಗೆ ಅರೆದು ಅದನ್ನು ನನ್ನ ಬಂದೂಕಿಗೆ ಹಚ್ಚಿ, ನಾನು ಗುಂಡಿಕ್ಕಲು ಇಷ್ಟಪಟ್ಟ ಪ್ರಾಣಿ ಸಿಗುವಂತೆ ಗಟ್ಟಿಯಾಗಿ ಅರಚುತ್ತಿದ್ದೆ. ಇಂಥ ಪದ್ಧತಿಗಳು ಸಾಮಾನ್ಯವೂ ಸಫಲವೂ ಆಗಿರುತ್ತಿದ್ದವು. ಪ್ರೇತಾರಾಧನೆಯ ಇನ್ನು ಕೆಲವು ಪದ್ಧತಿಗಳಾದರೋ ಅತಿ ಭಯಾನಕವಾಗಿದ್ದವು.

“ನನ್ನ ಇಬ್ಬರು ಗಂಡುಮಕ್ಕಳು ದಿಢೀರನೆ ನಿಗೂಢವಾಗಿ ಸತ್ತಾಗ ಯಾರಾದರೂ ನನ್ನ ವಿರುದ್ಧ ಮಾಟಮಂತ್ರ ನಡಿಸಿದ್ದಾರೋ ಎಂದು ನಾನು ಸಂಶಯಿಸಿದೆ. ಪ್ರೇತಾರಾಧನೆಗೆ ಕುಪ್ರಸಿದ್ಧನಾದ ಒಬ್ಬ ಮುದುಕನ ಬಳಿ ಹೋದೆ. ನನ್ನ ಸಂಶಯ ನಿಜವಾಯಿತು. ಇನ್ನೂ ಕೆಟ್ಟದ್ದೆಂದರೆ, ಸತ್ತ ನನ್ನ ಮಕ್ಕಳು ತಮ್ಮನ್ನು ಕೊಂದವನ ದಾಸರಾಗಲು ಕಾದು ನಿಂತಿದ್ದಾರೆಂದೂ ನನ್ನ ಮೂರನೆಯ ಮಗನೂ ಸಾಯಲಿದ್ದಾನೆಂದೂ ಆ ಮುದುಕ ಹೇಳಿದ. ಅವನು ಹೇಳಿದಂತೆ ಕೆಲವು ದಿನಗಳ ಬಳಿಕ ನನ್ನ ಆ ಮಗನೂ ಸತ್ತನು.”

ಅನಂತರ ಅಗ್ಬೂಲನಿಗೆ ನೆರೆಯ ನೈಜೀರಿಯದ ಜಾನ್‌ ಎಂಬ ಯೆಹೋವನ ಸಾಕ್ಷಿಯ ಪರಿಚಯವಾಯಿತು. ಸತ್ತವರ ಸ್ಥಿತಿಯ ಕುರಿತು ಜಾನ್‌ ಬೈಬಲ್‌ನ ಆಧಾರದಿಂದ ವಿವರಿಸಿದನು. ಅದು ಅಗ್ಬೂಲನ ಜೀವನಕ್ಕೆ ಒಳ್ಳೆ ತಿರುವು ನೀಡಿತು. ಅದು ನಿಮ್ಮ ಜೀವನವನ್ನೂ ಬದಲಾಯಿಸಬಲ್ಲದು.

ಸತ್ತವರಿಗೆ ಅರಿವಿದೆಯೋ?

ಈ ಪ್ರಶ್ನೆಗೆ ಯಾರು ಸರಿಯಾದ ಉತ್ತರ ಕೊಡಬಲ್ಲರು? ಯಾವ ಮನುಷ್ಯನೂ ಅವನೆಷ್ಟೇ ದೊಡ್ಡ ಪ್ರೇತಾರಾಧಕನಾಗಿರಲಿ ಈ ಪ್ರಶ್ನೆಗೆ ಉತ್ತರ ಕೊಡಸಾಧ್ಯವಿಲ್ಲ. ಆದರೆ ಸರ್ವಜೀವಿಗಳ ನಿರ್ಮಾಣಿಕನೂ ‘ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವುಗಳ’ ಸೃಷ್ಟಿಕರ್ತನಾದ ಯೆಹೋವ ದೇವರಲ್ಲಿ ಅದಕ್ಕೆ ಉತ್ತರವಿದೆ. (ಕೊಲೊಸ್ಸೆ 1:16) ಆತನು ಸ್ವರ್ಗದಲ್ಲಿ ಜೀವಿಸಲು ದೇವದೂತರನ್ನೂ ಭೂಮಿಯಲ್ಲಿ ಜೀವಿಸಲಿಕ್ಕಾಗಿ ಮಾನವರು ಮತ್ತು ಪ್ರಾಣಿಗಳನ್ನೂ ಸೃಷ್ಟಿಸಿದನು. (ಕೀರ್ತನೆ 104:​4, 23, 24) ಸಮಸ್ತ ಜೀವಿಗಳೂ ಜೀವಕ್ಕಾಗಿ ಆತನ ಮೇಲೆಯೇ ಹೊಂದಿಕೊಂಡಿವೆ. (ಪ್ರಕಟನೆ 4:11) ಹಾಗಾದರೆ, ದೇವರ ವಾಕ್ಯವಾದ ಬೈಬಲ್‌ ಸತ್ತವರ ಸ್ಥಿತಿಯ ಬಗ್ಗೆ ಏನು ಹೇಳುತ್ತದೆಂದು ಗಮನಿಸಿ.

ಮರಣದ ಕುರಿತು ಮೊದಲು ಪ್ರಸ್ತಾಪಿಸಿದ್ದು ಯೆಹೋವ ದೇವರೇ. ಆದಾಮ ಹವ್ವರು ತನಗೆ ಅವಿಧೇಯರಾದಲ್ಲಿ ಅವರು ಸಾಯುವರೆಂದು ಆತನು ಎಚ್ಚರಿಸಿದ್ದನು. (ಆದಿಕಾಂಡ 2:17) ಅವರು ಯಾವ ಅರ್ಥದಲ್ಲಿ ಸಾಯುವರು ಎಂದು ಯೆಹೋವನು ಹೇಳಿದನು? ದೇವರು ವಿವರಿಸಿದ್ದು: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (ಆದಿಕಾಂಡ 3:19) ಮರಣಪಟ್ಟಾಗ ಮೃತಶರೀರವು ಶಿಥಿಲಗೊಂಡು ಮಣ್ಣಿಗೆ ಸೇರುತ್ತದೆ. ಜೀವವು ಕೊನೆಗೊಳ್ಳುತ್ತದೆ.

ಆದಾಮಹವ್ವರು ಬೇಕುಬೇಕೆಂದೇ ಅವಿಧೇಯರಾದರಿಂದ ಮರಣ ಶಿಕ್ಷೆಗೆ ಒಳಗಾದರು. ಆದರೆ ಮರಣಪಟ್ಟವರಲ್ಲಿ ಅವರು ಮೊದಲಿಗರಲ್ಲ. ಅವರ ಮುಂಚೆ ಸತ್ತವನು ಅವರ ಮಗನಾದ ಹೇಬೆಲ. ಅವನ ಅಣ್ಣ ಕಾಯಿನನು ಅವನನ್ನು ಕೊಲೆಮಾಡಿದನು. (ಆದಿಕಾಂಡ 4:⁠8) ಸತ್ತ ತನ್ನ ತಮ್ಮನಾದ ಹೇಬೆಲನು ತನ್ನ ಮೇಲೆ ಸೇಡು ತೀರಿಸ್ಯಾನೆಂದು ಕಾಯಿನನು ಹೆದರಿರಲಿಲ್ಲ. ಬದುಕಿರುವವರೇ ತನಗೆ ಹಾನಿಮಾಡಾರು ಎಂಬ ಭಯವನ್ನೇ ಕಾಯಿನನು ವ್ಯಕ್ತಪಡಿಸಿದನು.​—⁠ಆದಿಕಾಂಡ 4:​10-16.

ಅನೇಕ ಶತಮಾನಗಳ ಬಳಿಕ ರಾಜ ಹೆರೋದನ ಊರಿನಲ್ಲಿ “ಯೆಹೂದ್ಯರ ಅರಸನು” ಜನಿಸಿದ್ದಾನೆಂಬ ಸುದ್ದಿಯನ್ನು ಜ್ಯೋತಿಷ್ಯರು ಹೆರೋದನಿಗೆ ತಿಳಿಸಿದಾಗ ಅವನು ತುಂಬಾ ಚಿಂತೆಗೀಡಾದನು. ಈ ಸಂಭಾವ್ಯ ಪ್ರತಿಸ್ಪರ್ಧಿಯನ್ನು ಅಡಗಿಸಿಬಿಡುವ ಪಣತೊಟ್ಟವನಾಗಿ, ಅವನು ಬೇತ್ಲೆಹೇಮಿನಲ್ಲಿದ್ದ ಎರಡು ವರ್ಷದೊಳಗಿನ ಎಲ್ಲಾ ಗಂಡು ಕೂಸುಗಳನ್ನು ಸಂಹರಿಸಿಬಿಡುವ ಸಂಚು ಮಾಡಿದನು. ಆದರೆ ದೇವದೂತನ ಎಚ್ಚರಿಕೆಯ ಮೇರೆಗೆ ಯೋಸೇಫನು ಯೇಸು ಮತ್ತು ಮರಿಯಳನ್ನು ಕರಕೊಂಡು ‘ಐಗುಪ್ತದೇಶಕ್ಕೆ ಓಡಿಹೋದನು.’​—⁠ಮತ್ತಾಯ 2:​1-16.

ಹೆರೋದನು ಸತ್ತಬಳಿಕ ದೇವದೂತನು ಯೋಸೇಫನಿಗೆ ಇಸ್ರಾಯೇಲ್‌ ದೇಶಕ್ಕೆ ಹಿಂತಿರುಗುವಂತೆ ಹೇಳಿದನು ಏಕೆಂದರೆ ‘ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತುಹೋಗಿದ್ದರು.’ (ಮತ್ತಾಯ 2:​19, 20) ಸ್ವತಃ ಆತ್ಮಜೀವಿಯಾಗಿದ್ದ ದೇವದೂತನಿಗೂ, ಹೆರೋದನು ಇನ್ನು ಮುಂದೆ ಯೇಸುವಿಗೆ ಯಾವ ಹಾನಿಯನ್ನೂ ಮಾಡಲಾರನೆಂದು ತಿಳಿದಿತ್ತು. ಸತ್ತಿದ್ದ ಹೆರೋದನ ಬಗ್ಗೆ ಯೋಸೇಫನಿಗೆ ಕಿಂಚಿತ್ತೂ ಭಯವಿರಲಿಲ್ಲ. ಆದರೂ ಹೆರೋದನ ಕ್ರೂರ ಪುತ್ರ ಅರ್ಖೆಲಾಯನು ಏನು ಮಾಡುವನೋ ಎಂದು ಅವನು ಹೆದರಿದ್ದನು. ಆದ್ದರಿಂದ ಯೊಸೇಫನು ಅರ್ಖೆಲಾಯನ ಆಧಿಪತ್ಯದ ಹೊರಗಣ ಪ್ರದೇಶವಾದ ಗಲಿಲಾಯದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸಿದನು.​—⁠ಮತ್ತಾಯ 2:⁠22.

ಸತ್ತವರು ಏನನ್ನು ಮಾಡಲೂ ಶಕ್ತರಲ್ಲ ಎಂದು ತಿಳಿಯಲು ಈ ವೃತ್ತಾಂತಗಳು ನಮಗೆ ನೆರವಾಗುತ್ತವೆ. ಹೀಗಿರುವಲ್ಲಿ ಅಗ್ಬೂಲ ಮತ್ತು ಇತರರಿಗಾದ ಅನುಭವಗಳನ್ನು ಹೇಗೆ ವಿವರಿಸಸಾಧ್ಯವಿದೆ?

“ದೆವ್ವಗಳು” ಅಥವಾ ಅಶುದ್ಧಾತ್ಮಗಳು

ಯೇಸು ಪ್ರಾಪ್ತವಯಸ್ಕನಾದಾಗ ಎದುರಿಸಿದ ದುಷ್ಟ ಆತ್ಮಗಳ ಕುರಿತು ತುಸು ನೋಡೋಣ. ಅವು ಯೇಸುವನ್ನು ಗುರುತಿಸಿ ಆತನನ್ನು “ದೇವರ ಮಗನೇ” ಎಂದು ಸಂಭೋದಿಸಿದವು. ಅದೇರೀತಿ ಅವುಗಳು ಯಾರೆಂದೂ ಯೇಸುವಿಗೆ ತಿಳಿದಿತ್ತು. ಅವು ಸತ್ತವರ ಆತ್ಮಗಳಾಗಿರಲಿಲ್ಲ. ಬದಲಾಗಿ ಯೇಸು ಅವರನ್ನು “ದೆವ್ವಗಳು” ಅಥವಾ ಅಶುದ್ಧಾತ್ಮಗಳು ಎಂದು ಗುರುತಿಸಿದನು.​—⁠ಮತ್ತಾಯ 8:​29-31; 10:8; ಮಾರ್ಕ 5:⁠8.

ದೇವರಿಗೆ ನಿಷ್ಠರಾಗಿರುವ ಆತ್ಮಜೀವಿಗಳ ಹಾಗೂ ಆತನ ವಿರುದ್ಧ ದಂಗೆಯೆದ್ದ ಆತ್ಮಜೀವಿಗಳ ಕುರಿತು ಬೈಬಲ್‌ ತಿಳಿಸುತ್ತದೆ. ಅವಿಧೇಯರಾದ ಆದಾಮಹವ್ವರನ್ನು ಯೆಹೋವನು ಏದೆನ್‌ ತೋಟದಿಂದ ಹೊರಗೆ ಹಾಕಿದಾಗ, ಅದನ್ನು ಯಾರೂ ಪುನಃ ಪ್ರವೇಶಿಸದಂತೆ ತಡೆಯಲು ತೋಟದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನು ಅಥವಾ ದೇವದೂತರನ್ನು ಕಾವಲಾಗಿ ಇರಿಸಿದ್ದನು ಎಂದು ಆದಿಕಾಂಡ ಪುಸ್ತಕವು ತಿಳಿಸುತ್ತದೆ. (ಆದಿಕಾಂಡ 3:24) ಆತ್ಮಜೀವಿಗಳು ಮಾನವರಿಗೆ ದೃಶ್ಯರಾಗಿ ಕಾಣಿಸಿದ್ದು ಪ್ರಾಯಶಃ ಇದೇ ಪ್ರಥಮ ಬಾರಿ.

ಸಮಯಾನಂತರ ಹಲವಾರು ದೇವದೂತರು ಮಾನವ ದೇಹವನ್ನು ಧರಿಸಿಕೊಂಡು ಭೂಮಿಗೆ ಬಂದರು. ಯೆಹೋವನು ಭೂಮಿಯ ಮೇಲೆ ಅವರಿಗೆ ಯಾವ ಕೆಲಸವನ್ನೂ ಕೊಟ್ಟಿರಲಿಲ್ಲ. ಆದರೂ ಅವರು ಆತ್ಮಲೋಕದಲ್ಲಿ ತಮಗಿದ್ದ ‘ತಕ್ಕ ವಾಸಸ್ಥಾನವನ್ನು ಬಿಟ್ಟು’ ಧರೆಗಿಳಿದು ಬಂದರು. (ಯೂದ 6) ಅದು ಸ್ವಾರ್ಥ ಉದ್ದೇಶದಿಂದಾಗಿತ್ತು. ಅವರು ಭೂಮಿಯ ಮೇಲಿದ್ದ ಸ್ತ್ರೀಯರನ್ನು ಹೆಂಡರನ್ನಾಗಿ ಮಾಡಿಕೊಂಡರು. ಆ ಸ್ತ್ರೀಯರಿಂದ ಅವರಿಗೆ ನೆಫೀಲಿಮ್‌ ಎಂಬ ಮಿಶ್ರ ಸಂತಾನ ಹುಟ್ಟಿತು. ಈ ನೆಫೀಲಿಯರು ಮತ್ತು ಅವರ ದಂಗೆಕೋರ ತಂದೆಗಳು ಭೂಮಿಯನ್ನು ತಮ್ಮ ಹಿಂಸಾಚಾರ ಮತ್ತು ಘೋರ ದುಷ್ಟತನದಿಂದ ತುಂಬಿಸಿದರು. (ಆದಿಕಾಂಡ 6:​1-5) ನೋಹನೆಂಬ ದೇವಭಕ್ತನ ದಿನದಲ್ಲಿ ಇಡೀ ಭೂಮಿಯ ಮೇಲೆ ಜಲಪ್ರಳಯವನ್ನು ತರುವ ಮೂಲಕ ದುಷ್ಟರಾದ ಸ್ತ್ರೀಪುರುಷರನ್ನೂ ಆ ಮಿಶ್ರಸಂತತಿಯನ್ನೂ ಯೆಹೋವ ದೇವರು ನಾಶಪಡಿಸಿದನು. ಆ ದೇವದೂತರಿಗೆ ಏನಾಯಿತು?

ಜಲಪ್ರಳಯದಿಂದಾಗಿ ನಾಶವಾಗದೆ ಇದ್ದ ದೇವದೂತರು ಹಿಂದೆ ಪುನಃ ಆತ್ಮಿಕ ಲೋಕಕ್ಕೆ ಮರಳಿದರು. ಆದರೆ ಯೆಹೋವನು ಅವರ ‘ವಾಸಸ್ಥಾನಕ್ಕೆ’ ಪ್ರವೇಶವನ್ನು ನಿಷೇಧಿಸಿದನು. (ಯೂದ 6) ಬೈಬಲ್‌ ತಿಳಿಸುವುದು: “ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರಬೇಕೆಂದು ಕತ್ತಲೇ ಗುಂಡಿಗಳಿಗೆ [ಟಾರ್ಟರಸ್‌ಗೆ] ಒಪ್ಪಿಸಿದನು.”​—⁠2 ಪೇತ್ರ 2:⁠4.

‘ಟಾರ್ಟರಸ್‌’ ಒಂದು ನಿರ್ದಿಷ್ಟ ಸ್ಥಳ ಅಥವಾ ನಿವೇಶನ ಅಲ್ಲ. ಅದು ಈ ಬಹಿಷ್ಕೃತ ದೂತರ ಚಟುವಟಿಕೆಯನ್ನು ಸೀಮಿತಗೊಳಿಸುವ ಸೆರೆವಾಸದಂಥ ಹೀನಸ್ಥಿತಿಯಾಗಿದೆ. ಈಗ ಆ ದೆವ್ವಗಳಿಗೆ ಮನುಷ್ಯ ದೇಹವನ್ನು ಧರಿಸುವ ಶಕ್ತಿಯಿಲ್ಲ. ಆದರೆ ಅವು ಮಾನವರ ಮನಸ್ಸು ಮತ್ತು ಜೀವನದ ಮೇಲೆ ಬಲವಾದ ಪ್ರಭಾವವನ್ನು ಇನ್ನೂ ಹಾಕಬಲ್ಲವು. ಅವು ಮನುಷ್ಯರನ್ನೂ ಪಶುಗಳನ್ನೂ ಹತೋಟಿಯಲ್ಲಿಡಬಲ್ಲವು. (ಮತ್ತಾಯ 12:​43-45; ಲೂಕ 8:​27-33) ಮಾತ್ರವಲ್ಲ, ಅವು ಸತ್ತವರ ಆತ್ಮಗಳಂತೆ ನಟಿಸಿ ಮಾನವರನ್ನು ಮೋಸಗೊಳಿಸುತ್ತವೆ ಸಹ. ಏಕೆ? ಯೆಹೋವನಿಗೆ ಮೆಚ್ಚಿಗೆಯಾಗುವಂಥ ರೀತಿಯಲ್ಲಿ ಜನರು ಆತನನ್ನು ಆರಾಧಿಸುವುದನ್ನು ತಡೆಯಲಿಕ್ಕಾಗಿ ಮತ್ತು ಸತ್ತವರ ನಿಜ ಸ್ಥಿತಿಯ ಬಗ್ಗೆ ಜನರನ್ನು ಗಲಿಬಿಲಿಗೊಳಿಸಲಿಕ್ಕಾಗಿಯೇ.

ಭಯದಿಂದ ಮುಕ್ತರಾಗುವ ವಿಧ

ಮರಣದ ಕುರಿತು ಹಾಗೂ ಒಳ್ಳೆಯ ಮತ್ತು ಕೆಟ್ಟ ಆತ್ಮಜೀವಿಗಳ ಕುರಿತ ಬೈಬಲಿನ ವಿವರಣೆ ತರ್ಕಬದ್ಧವೆಂದು ಅಗ್ಬೂಲನು ಕಂಡನು. ಹೆಚ್ಚನ್ನು ಕಲಿಯುವ ಅಗತ್ಯವನ್ನು ಸಹ ಅವನು ಅರಿತುಕೊಂಡನು. ಜಾನ್‌ನೊಂದಿಗೆ ಅವನು ಬೈಬಲನ್ನೂ ಬೈಬಲಾಧಾರಿತ ಸಾಹಿತ್ಯವನ್ನೂ ಓದಲಾರಂಭಿಸಿದ. ತನ್ನ ಗಂಡುಮಕ್ಕಳು ಸಮಾಧಿಯಲ್ಲಿ ಗಾಢನಿದ್ರೆಯಲ್ಲಿದ್ದಾರೆ, ಆತ್ಮಲೋಕದಲ್ಲಿ ಕೊಲೆಪಾತಕನ ಸೇವಕರಾಗಲು ಕಾಯುತ್ತಾ ಕುಳಿತಿಲ್ಲ ಎಂಬ ಜ್ಞಾನದಲ್ಲಿ ಅಗ್ಬೂಲನು ಸಾಂತ್ವನವನ್ನು ಪಡೆದನು.​—⁠ಯೋಹಾನ 11:​11-13.

ಭೂತಾರಾಧನೆಯಿಂದ ಪೂರ್ಣವಾಗಿ ಮುಕ್ತನಾಗುವ ಅಗತ್ಯವನ್ನು ಅಗ್ಬೂಲನು ಕಂಡುಕೊಂಡನು. ಭೂತವಿದ್ಯೆಗೆ ಸಂಬಂಧಿಸಿದ ತನ್ನೆಲ್ಲಾ ಸ್ವತ್ತುಗಳನ್ನು ಅವನು ಸುಟ್ಟುಬಿಟ್ಟನು. (ಅ. ಕೃತ್ಯಗಳು 19:19) ದೆವ್ವಗಳು ಕೋಪಗೊಂಡು ಅವನಿಗೆ ಹಾನಿಮಾಡಬಹುದು ಎಂದು ಅವನ ಸಮಾಜದ ಕೆಲವರು ಎಚ್ಚರಿಕೆಯನ್ನಿತ್ತರು. ಆದರೆ ಅಗ್ಬೂಲನು ಭಯಪಡಲಿಲ್ಲ. ಅವನು ಎಫೆಸ 6:​11, 12ರಲ್ಲಿರುವ ಬೈಬಲಿನ ಸಲಹೆಯನ್ನು ಪಾಲಿಸಿದನು. ಅದು ತಿಳಿಸುವುದು: “ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. . . . ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; . . . ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.” ಈ ಆಧ್ಯಾತ್ಮಿಕ ಸರ್ವಾಯುಧಗಳಲ್ಲಿ ಸತ್ಯ, ನೀತಿ, ಸಮಾಧಾನದ ವಿಷಯವಾದ ಸುವಾರ್ತೆ, ನಂಬಿಕೆ ಮತ್ತು ಪವಿತ್ರಾತ್ಮ ಕೊಡುವ ದೇವರ ವಾಕ್ಯವೆಂಬ ಕತ್ತಿ ಒಳಗೊಂಡಿದೆ. ಈ ಸರ್ವಾಯುಧಗಳು ದೇವರಿಂದ ಬಂದದ್ದೂ ಶಕ್ತಿಶಾಲಿಯೂ ಆಗಿವೆ!

ಪ್ರೇತಾರಾಧನೆಯ ಪದ್ಧತಿಗಳನ್ನು ತೊರೆದುಬಿಟ್ಟಾಗ ಅಗ್ಬೂಲನ ಬಂಧುಮಿತ್ರರು ಅವನಿಗೆ ಬಹಿಷ್ಕಾರ ಹಾಕಿದರು. ಆದರೆ ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಅವನಿಗೆ ಬೈಬಲ್‌ ಬೋಧನೆಗಳನ್ನು ನಂಬುವಂಥ ಹೊಸ ಮಿತ್ರರು ದೊರೆತರು.

ಯೆಹೋವನು ಬೇಗನೆ ಭೂಮಿಯ ದುಷ್ಟತನವನ್ನು ತೆಗೆದುಹಾಕುವನೆಂದು ಮತ್ತು ದೆವ್ವಗಳನ್ನು ಪೂರ್ಣವಾಗಿ ನಿಷ್ಕ್ರಿಯಗೊಳಿಸಿ, ಕಟ್ಟಕಡೆಗೆ ನಾಶಗೊಳಿಸುವನೆಂದು ಅಗ್ಬೂಲನಿಗೆ ಈಗ ಗೊತ್ತಾಗಿದೆ. (ಪ್ರಕಟನೆ 20:​1, 2, 10) ಸ್ಮಾರಕ “ಸಮಾಧಿಗಳಲ್ಲಿರುವ” ಎಲ್ಲರನ್ನೂ ದೇವರು ಪುನರುತ್ಥಾನಗೊಳಿಸುವನು. (ಯೋಹಾನ 5:​28, 29) ಅದರಲ್ಲಿ ಹೇಬೆಲನು, ಹೆರೋದನು ಸಂಹರಿಸಿದ ಮುಗ್ಧ ಮಕ್ಕಳು ಹಾಗೂ ಇತರ ಲಕ್ಷಾಂತರ ಜನರು ಸೇರಿರುವರು. ಅಗ್ಬೂಲನಿಗೆ ತನ್ನ ಮೂವರು ಗಂಡು ಮಕ್ಕಳು ಕೂಡ ಅದರಲ್ಲಿರುವರು ಎಂಬ ನಂಬಿಕೆಯಿದೆ. ಮೃತರಾಗಿರುವ ನಿಮ್ಮ ಪ್ರಿಯ ಜನರು ಕೂಡ ಅದರಲ್ಲಿರಬಹುದು. ಪುನರುತ್ಥಾನಗೊಂಡ ಅವರೆಲ್ಲರೂ, ತಮ್ಮ ಮರಣದಿಂದ ಹಿಡಿದು ಪುನರುತ್ಥಾನಗೊಳ್ಳುವ ವರೆಗೆ ಪೂರಾ ರೀತಿಯಲ್ಲಿ ಪ್ರಜ್ಞಾಹೀನರಾಗಿದ್ದರೆಂದೂ ತಮಗೋಸ್ಕರ ಮಾಡಲಾದ ಯಾವುದೇ ಸಂಸ್ಕಾರಗಳ ಅರಿವಿಲ್ಲದವರಾಗಿದ್ದರೆಂದೂ ಖಚಿತವಾಗಿ ಹೇಳುವರು.

ಸತ್ತವರಿಗೆ ಭಯಪಡುವ ಯಾವ ಕಾರಣವೂ ನಿಮಗಿಲ್ಲ. ಬದಲಿಗೆ ಮೃತರಾದ ನಿಮ್ಮ ಪ್ರಿಯ ಜನರೊಂದಿಗೆ ಪುನರ್‌ಮಿಲನಕ್ಕಾಗಿ ನೀವು ಮುನ್ನೋಡಸಾಧ್ಯವಿದೆ. ಈ ಮಧ್ಯೆ ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಬೈಬಲ್‌ ಅಧ್ಯಯನವನ್ನು ಮಾಡಿರಿ. ಬೈಬಲ್‌ ಬೋಧಿಸುವ ವಿಷಯವನ್ನು ನಂಬುವ ಜನರೊಂದಿಗೆ ಸಹವಾಸಿಸಿರಿ. ನೀವು ಭೂತಾರಾಧನೆಯಲ್ಲಿ ತೊಡಗಿದ್ದರೆ ಈ ಕೂಡಲೇ ಅದನ್ನು ನಿಲ್ಲಿಸಿ. ‘ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳುವ’ ಮೂಲಕ ನಿಮ್ಮನ್ನು ದೆವ್ವಗಳ ಪ್ರಭಾವದಿಂದ ಸಂರಕ್ಷಿಸಿಕೊಳ್ಳಿರಿ. (ಎಫೆಸ 6:11) ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?  * ಎಂಬ ಪುಸ್ತಕವನ್ನು ಉಪಯೋಗಿಸುವ ಮೂಲಕ ಯೆಹೋವನ ಸಾಕ್ಷಿಗಳು ನಿಮ್ಮೊಂದಿಗೆ ಉಚಿತ ಮನೆ-ಬೈಬಲ್‌ ಅಧ್ಯಯನ ನಡೆಸಿ ನಿಮಗೆ ಸಹಾಯಮಾಡಲು ಸಂತೋಷಿಸುತ್ತಾರೆ.

ಅಗ್ಬೂಲನಿಗೆ ಈಗ ಸತ್ತವರ ಭಯವೇ ಇಲ್ಲ. ದೆವ್ವಗಳನ್ನು ಎದುರಿಸುವುದು ಹೇಗೆಂದು ಅವನಿಗೆ ತಿಳಿದಿದೆ. ಅವನು ಹೇಳುವುದು: “ನನ್ನ ಮೂರು ಗಂಡುಮಕ್ಕಳನ್ನು ಕೊಂದದ್ದು ಯಾರೆಂದು ನನಗೆ ಗೊತ್ತಿಲ್ಲ. ಆದರೆ ಯೆಹೋವನನ್ನು ಆರಾಧಿಸಲು ತೊಡಗಿದಂದಿನಿಂದ ನನಗೆ ಏಳು ಮಕ್ಕಳಾಗಿವೆ. ಇವರಿಗೆ ದುಷ್ಟಾತ್ಮಗಳು ಎಂದೂ ಹಾನಿಮಾಡಿಲ್ಲ.” (w09 1/1)

[ಪಾದಟಿಪ್ಪಣಿ]

^ ಪ್ಯಾರ. 25 ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.