ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನ್ಯಾಯವಾಗಿಯೇ ತೀರ್ಪುಮಾಡುವ ನ್ಯಾಯಾಧಿಪತಿ

ನ್ಯಾಯವಾಗಿಯೇ ತೀರ್ಪುಮಾಡುವ ನ್ಯಾಯಾಧಿಪತಿ

ದೇವರ ಸಮೀಪಕ್ಕೆ ಬನ್ನಿರಿ

ನ್ಯಾಯವಾಗಿಯೇ ತೀರ್ಪುಮಾಡುವ ನ್ಯಾಯಾಧಿಪತಿ

ಆದಿಕಾಂಡ 18:22-32

ನ್ಯಾಯ, ನೀತಿ, ನಿಷ್ಪಕ್ಷಪಾತ. ಇಂಥ ಉದಾತ್ತ ಗುಣಗಳೆಡೆಗೆ ನೀವು ಆಕರ್ಷಿಸಲ್ಪಡುವುದಿಲ್ಲವೇ? ಇತರರು ನಮ್ಮನ್ನು ನ್ಯಾಯವಾಗಿ ಉಪಚರಿಸಬೇಕೆಂದು ಬಯಸುವುದು ಮಾನವರಾದ ನಮ್ಮ ಸಹಜಪ್ರವೃತ್ತಿ. ದುಃಖಕರವಾಗಿ, ಇಂದಿನ ಲೋಕದಲ್ಲಿ ನ್ಯಾಯವು ನಿಲುಕಿಗೆ ಮೀರಿದೆ, ಅನ್ಯಾಯವೇ ಹೆಚ್ಚು ತುಂಬಿರುತ್ತದೆ. ಹಾಗಿದ್ದರೂ ನಾವು ಭರವಸೆಯಿಡಬಲ್ಲ ಒಬ್ಬ ನ್ಯಾಯಾಧಿಪತಿಯಿದ್ದಾನೆ. ಆತನು ಯೆಹೋವ ದೇವರೇ. ಆತನು ಮಾಡುವ ತೀರ್ಪು ಯಾವಾಗಲೂ ನ್ಯಾಯಯುತ. ಇದು, ಯೆಹೋವ ದೇವರ ಮತ್ತು ಆತನ ಭಕ್ತ ಅಬ್ರಹಾಮನ ನಡುವಿನ ಸಂಭಾಷಣೆಯಿಂದ ಸ್ಪಷ್ಟವಾಗಿ ತೋರಿಬಂತು. ಅದರ ದಾಖಲೆ ಆದಿಕಾಂಡ 18:22-32ರಲ್ಲಿದೆ. *

ಯೆಹೋವ ದೇವರು ಸೊದೋಮ್‌ ಗೊಮೋರ ಪಟ್ಟಣಗಳ ಪರಿಸ್ಥಿತಿಯನ್ನು ಪರೀಕ್ಷಿಸಲು ನಿರ್ಧರಿಸಿದಾಗ ಅದನ್ನು ಅಬ್ರಹಾಮನಿಗೆ ತಿಳಿಸಿದನು. ಆಗ ಅಬ್ರಹಾಮನು ಅಲ್ಲಿರುವ ತನ್ನ ಸೋದರಳಿಯ ಲೋಟನೂ ಸೇರಿದಂತೆ ಇತರ ನೀತಿವಂತರಿಗೆ ಏನಾಗುವುದೋ ಎಂದು ತುಂಬ ಚಿಂತಿಸಿದನು. ಅವನು ಯೆಹೋವನಿಗೆ ಮೊರೆಯಿಟ್ಟು, ‘ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ? ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ನೀತಿವಂತರಿದ್ದಾರು; ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸುವುದಿಲ್ಲವೇ?’ ಎಂದು ಕೇಳಿದನು. (ವಚನಗಳು 23, 24) ಕೇವಲ ಐವತ್ತು ಮಂದಿ ನೀತಿವಂತರು ಸಿಕ್ಕಿದರೂ ಅವರ ನಿಮಿತ್ತ ಆ ಪಟ್ಟಣಗಳನ್ನು ಉಳಿಸುವೆನೆಂದು ದೇವರಂದನು. ಬಳಿಕ ಅಬ್ರಹಾಮನು ಇನ್ನೂ ಐದು ಬಾರಿ ಯೆಹೋವನ ಬಳಿ ಮೊರೆಯಿಟ್ಟು ಆ ಸಂಖ್ಯೆಯನ್ನು ಸ್ವಲ್ಪಸ್ವಲ್ಪ ಕಡಿಮೆಮಾಡುತ್ತಾ ಕೊನೆಗೆ ಹತ್ತು ಮಂದಿ ಸಿಕ್ಕಾರೇನೋ ಎಂದು ಕೇಳಿದನು. ಅವನು ಹೇಳಿದಷ್ಟು ಮಂದಿ ನೀತಿವಂತರಿರುವಲ್ಲಿ ಆ ಪಟ್ಟಣವನ್ನು ನಾಶಮಾಡುವುದಿಲ್ಲವೆಂದು ದೇವರು ಪ್ರತಿಬಾರಿಯೂ ಹೇಳಿದನು.

ಅಬ್ರಹಾಮನು ದೇವರೊಂದಿಗೆ ವಾಗ್ವಾದ ಮಾಡುತ್ತಿದ್ದನೋ? ಖಂಡಿತ ಇಲ್ಲ! ಹಾಗಿದ್ದಲ್ಲಿ ಅದು ಅವನ ಅತಿ ಅಹಂಭಾವವನ್ನು ತೋರಿಸುತ್ತಿತ್ತು. ಆದರೆ ಅಬ್ರಹಾಮನ ಸ್ವರವು ದೇವರಲ್ಲಿದ್ದ ಭಯಭಕ್ತಿ ಮತ್ತು ದೈನ್ಯತೆಯನ್ನು ತೋರಿಸಿತು. ಅವನು ದೇವರನ್ನು “ಸ್ವಾಮೀ” ಎಂದು ನಾಲ್ಕು ಬಾರಿ ಸಂಬೋಧಿಸಿದನಲ್ಲದೆ ತಾನು “ಮಣ್ಣೂ ಬೂದಿಯೂ” ಆಗಿದ್ದೇನೆ ಎಂದೂ ಒಪ್ಪಿಕೊಂಡನು. (ವಚನಗಳು 27, 30-32) ಅದಲ್ಲದೆ, ಅಬ್ರಹಾಮನು ಕೇಳಿದ ಪ್ರಶ್ನೆಯು ಯೆಹೋವನ ನೀತಿ-ನ್ಯಾಯದಲ್ಲಿ ಅವನಿಗಿದ್ದ ಭರವಸೆಯನ್ನು ತೋರಿಸಿತು. ದುಷ್ಟರ ಸಂಗಡ ನೀತಿವಂತರನ್ನು ದೇವರು ಎಂದಿಗೂ ನಾಶಮಾಡನು ಎಂದು ಅವನಿಗೆ ಖಚಿತವಾಗಿ ತಿಳಿದಿತ್ತು. ಅವನು ಕೇಳಿದ್ದು: “ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ.”—ವಚನ 25.

ಅಬ್ರಹಾಮನು ನುಡಿದ ಆ ವಿಷಯಗಳು ಸರಿಯಾಗಿದ್ದವೋ? ಕೆಲವು ಸರಿ, ಕೆಲವು ತಪ್ಪು. ಹೇಗೆ? ಹೇಗೆಂದರೆ ಸೊದೋಮ್‌ ಮತ್ತು ಗೊಮೋರಗಳಲ್ಲಿ ಕಡಿಮೆಪಕ್ಷ ಹತ್ತು ಮಂದಿ ನೀತಿವಂತರು ಇರುವರೆಂದು ಸೂಚಿಸಿದಾಗ ಅವನೆಣಿಕೆ ತಪ್ಪಾಗಿತ್ತು. ಆದರೆ ದೇವರು ಎಂದಿಗೂ ‘ದುಷ್ಟರ ಸಂಗಡ ನೀತಿವಂತರನ್ನು ನಾಶ’ ಮಾಡುವುದಿಲ್ಲವೆಂದು ಹೇಳಿದ್ದು ಖಂಡಿತ ಸತ್ಯವಾಗಿತ್ತು. ಸಮಯಾನಂತರ ದೇವರು ಆ ದುಷ್ಟಪಟ್ಟಣಗಳನ್ನು ನಾಶಮಾಡಿದಾಗ ನೀತಿವಂತ ಲೋಟ ಮತ್ತು ಅವನ ಇಬ್ಬರು ಪುತ್ರಿಯರು ದೇವದೂತರ ಸಹಾಯದಿಂದ ಪಾರಾದರು.—2 ಪೇತ್ರ 2:7-9.

ಈ ವೃತ್ತಾಂತವು ಯೆಹೋವನ ಬಗ್ಗೆ ನಮಗೆ ಏನನ್ನು ಕಲಿಸುತ್ತದೆ? ಆ ಪಟ್ಟಣಗಳನ್ನು ಪರೀಕ್ಷಿಸಲು ಉದ್ದೇಶಿಸಿದ ವಿಷಯವನ್ನು ಯೆಹೋವನು ಅಬ್ರಹಾಮನಿಗೆ ಹೇಳಿದ ಮೂಲಕ ವಾಸ್ತವದಲ್ಲಿ ಅಬ್ರಹಾಮನು ತನ್ನ ಭಾವನೆಗಳನ್ನು ವ್ಯಕ್ತಪಡಿಸುವಂತೆ ಆತನೇ ಕೇಳಿಕೊಂಡನು. ಬಳಿಕ ತನ್ನ ಸ್ನೇಹಿತ ಅಬ್ರಹಾಮ ತನ್ನ ಹೃದಯದಲ್ಲಿದ್ದ ಚಿಂತೆಗಳನ್ನು ತೋಡಿಕೊಂಡಾಗ ಆತನು ತಾಳ್ಮೆಯಿಂದ ಕಿವಿಗೊಟ್ಟನು. (ಯೆಶಾಯ 41:8) ಯೆಹೋವನು ತನ್ನ ಭೂಸೇವಕರನ್ನು ಕಡೆಗಣಿಸದೆ ಗೌರವಿಸುವ ದೀನಭಾವದ ದೇವರೆಂದು ಇದು ಎಷ್ಟು ಸೊಗಸಾಗಿ ಕಲಿಸುತ್ತದೆ! ಹೌದು, ಸದಾ ನ್ಯಾಯವಾಗಿಯೇ ತೀರ್ಪುಮಾಡುವ ನ್ಯಾಯಾಧಿಪತಿಯಾದ ಯೆಹೋವ ದೇವರಲ್ಲಿ ಪೂರ್ಣ ಭರವಸೆಯಿಡಲು ನಮಗೆ ಸಕಲ ಕಾರಣಗಳಿವೆ. (w09 1/1)

[ಪಾದಟಿಪ್ಪಣಿ]

^ ಪ್ಯಾರ. 4 ಆ ಸಂದರ್ಭದಲ್ಲಿ ಯೆಹೋವನು ಒಬ್ಬ ದೇವದೂತನ ಮೂಲಕ ಮಾತಾಡಿದನು. ಇನ್ನೊಂದು ಉದಾಹರಣೆಯನ್ನು ಆದಿಕಾಂಡ 16:7-11, 13ರಲ್ಲಿ ನೋಡಿ.

[ಪುಟ 14ರಲ್ಲಿರುವ ಚಿತ್ರ]

ಅಬ್ರಹಾಮನು ಸೊದೋಮ್‌ ಗೊಮೋರ ಪಟ್ಟಣಗಳಿಗಾಗಿ ಯೆಹೋವನಿಗೆ ದೈನ್ಯದಿಂದ ಬೇಡಿದನು