ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತನ್ನ ತಪ್ಪಿನಿಂದ ಪಾಠ ಕಲಿತನು

ತನ್ನ ತಪ್ಪಿನಿಂದ ಪಾಠ ಕಲಿತನು

ಅವರ ನಂಬಿಕೆಯನ್ನು ಅನುಕರಿಸಿರಿ

ತನ್ನ ತಪ್ಪಿನಿಂದ ಪಾಠ ಕಲಿತನು

ಆಭಯಂಕರ ಸದ್ದು ಒಮ್ಮೆ ನಿಂತರೆ ಸಾಕಪ್ಪಾ ಸಾಕು ಎಂದು ಹಂಬಲಿಸುತ್ತಿದ್ದನು ಯೋನ. ಅವನನ್ನು ಕಾಡಿಸುತ್ತಿದ್ದದ್ದು ಹಡಗಿನ ಕೂವೆ ಮರಗಳನ್ನು ಹೊಯ್ಲಾಡಿಸುತ್ತಾ ಬಲವಾಗಿ ಬೀಸುತ್ತಿದ್ದ ಆ ಭೀಕರ ಬಿರುಗಾಳಿಯ ಸದ್ದಲ್ಲ. ಹಡಗಿನ ಹೊರಬಾಗು ಹಲಗೆಗಳನ್ನೆಲ್ಲಾ ಕಿರ್‌ ಕಿರ್‌ ಎಂದು ಗೋಳುಗರೆಸುತ್ತಾ ಒಂದೇಸವನೆ ರಭಸದಿಂದ ಬಡಿಯುತ್ತಿದ್ದ ದೈತ್ಯಾಕಾರದ ಅಲೆಗಳ ಸದ್ದೂ ಅದಲ್ಲ. ಯೋನನಿಗೆ ಅವೆಲ್ಲಕ್ಕಿಂತಲೂ ಕರ್ಕಶವಾಗಿ ಕೇಳಿಸುತ್ತಿದ್ದ ಸದ್ದು ಕಪ್ತಾನನೂ ಕಲಾಸಿಗಳೂ ಸೇರಿದಂತೆ ಆ ಹಡಗಿನ ನಾವಿಕರ ಚೀರಾಟದ ಸದ್ದೇ. ಹಡಗು ಮುಳುಗದಂತೆ ತಡೆಯಲು ಅವರು ಒದ್ದಾಡುತ್ತಾ ಬೊಬ್ಬೆಹಾಕುತ್ತಿದ್ದರು. ಆ ಮನುಷ್ಯರೆಲ್ಲರೂ ಇನ್ನೇನು ಸಾಯಲಿಕ್ಕಿದ್ದರು​—⁠ಅದಕ್ಕೆಲ್ಲಾ ಕಾರಣ ತಾನೇ ಎಂದು ಖಾತ್ರಿಯಾಗಿತ್ತು ಯೋನನಿಗೆ!

ಯೋನನನ್ನು ಇಂಥ ಸಂಕಟಕರ ಪರಿಸ್ಥಿತಿಗೆ ನೂಕಿದ್ದು ಯಾವುದು? ತನ್ನ ದೇವರಾದ ಯೆಹೋವನ ಆಜ್ಞೆಯನ್ನು ಮೀರಿದ ಒಂದು ದೊಡ್ಡ ತಪ್ಪನ್ನು ಅವನು ಮಾಡಿದ್ದನು. ಅವನು ಮಾಡಿದ್ದಾದರೂ ಏನು? ತಪ್ಪನ್ನು ಸರಿಪಡಿಸ ಸಾಧ್ಯವಿರಲಿಲ್ಲವೋ? ಇದಕ್ಕಿರುವ ಉತ್ತರಗಳಲ್ಲಿ ನಮಗೂ ಹೆಚ್ಚಿನ ಪಾಠವಿದೆ. ನಿಜ ನಂಬಿಕೆ ಇರುವವರು ಕೂಡಾ ಹೇಗೆ ದಾರಿತಪ್ಪಬಲ್ಲರು ಹಾಗೂ ಅವರು ತಮ್ಮ ತಪ್ಪನ್ನು ಹೇಗೆ ತಿದ್ದಿಕೊಳ್ಳಬಲ್ಲರು ಎಂದು ಯೋನನ ಕಥೆ ನಮಗೆ ಕಲಿಸುತ್ತದೆ.

ಗಲಿಲಾಯದ ಪ್ರವಾದಿ

ಯೋನನ ಕುರಿತು ಹೇಳಿದಾಕ್ಷಣ ಜನರು ಅವನ ನಕಾರಾತ್ಮ ಸ್ವಭಾವಗಳ ಕುರಿತೇ ಹೆಚ್ಚಾಗಿ ಯೋಚಿಸುತ್ತಾರೆ. ಅವರ ನೆನಪಿಗೆ ಬರುವುದು ಅವನ ಅವಿಧೇಯತೆ ಅಥವಾ ಮೊಂಡುತನವೇ. ಆದರೆ ಅವನ ಬಗ್ಗೆ ತಿಳಿಯಬೇಕಾಗಿರುವುದು ಅಷ್ಟುಮಾತ್ರವೇ ಅಲ್ಲ. ಯೋನನು ಯೆಹೋವ ದೇವರ ಪ್ರವಾದಿಯಾಗಿದ್ದನೆಂದು ನೆನಪಿಸಿಕೊಳ್ಳಿ. ಅವನು ನಿಜವಾಗಿಯೂ ಅಪನಂಬಿಗಸ್ತನೂ ಅನೀತಿವಂತನೂ ಆಗಿರುತ್ತಿದ್ದಲ್ಲಿ ಒಂದು ಭಾರವಾದ ಜವಾಬ್ದಾರಿಯನ್ನು ಪೂರೈಸಲು ದೇವರು ಅವನನ್ನು ಆರಿಸುತ್ತಿರಲಿಲ್ಲ.

ಯೋನನ ಹಿನ್ನೆಲೆಯ ಕುರಿತು 2 ಅರಸುಗಳು 14:25ರಲ್ಲಿ ನಾವು ತುಸು ವಿಷಯ ಕಲಿಯುತ್ತೇವೆ. ಅವನು ಗತ್‌ಹೇಫೆರಿ ಎಂಬ ಊರಿನವನು. ಸುಮಾರು 800 ವರ್ಷಗಳ ಬಳಿಕ ಯೇಸು ಕ್ರಿಸ್ತನು ಬೆಳೆದು ದೊಡ್ಡವನಾದ ನಜರೇತ್‌ ಎಂಬ ಊರಿನಿಂದ ಅದು ಕೇವಲ ನಾಲ್ಕು ಕಿ.ಮೀ. ದೂರದಲ್ಲಿತ್ತು. * ಇಸ್ರಾಯೇಲಿನ ಹತ್ತುಕುಲಗಳ ರಾಜನಾದ 2ನೆಯ ಯಾರೋಬ್ಬಾಮನ ಆಳಿಕೆಯ ಸಮಯದಲ್ಲಿ ಯೋನನು ಪ್ರವಾದಿಯಾಗಿದ್ದನು. ಆಗ ಎಲೀಯನು ಸತ್ತು ಬಹಳ ಕಾಲವಾಗಿತ್ತು. ಅವನ ಸೇವಕ ಎಲೀಷನು ಸಹ ಯಾರೋಬ್ಬಾಮನ ತಂದೆಯ ಆಳಿಕೆಯಲ್ಲಿ ಮೃತನಾಗಿದ್ದನು. ಬಾಳನ ಆರಾಧನೆಯನ್ನು ತೊಡೆದುಹಾಕಲು ಯೆಹೋವನು ಆ ಇಬ್ಬರು ಪುರುಷರನ್ನು ಉಪಯೋಗಿಸಿದ್ದನಾದರೂ ಇಸ್ರಾಯೇಲ್‌ ಮೊಂಡತನದಿಂದ ಪುನಃ ತಪ್ಪುದಾರಿಗಿಳಿದಿತ್ತು. ಈಗ ರಾಜ್ಯವು ‘ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದ’ ರಾಜನ ಕೈಕೆಳಗಿತ್ತು. (2 ಅರಸುಗಳು 14:24) ಹಾಗಾಗಿ ಯೋನನ ಕೆಲಸವು ಸುಲಭವೂ ಹಿತಕರವೂ ಆಗಿದ್ದಿರಲಿಕ್ಕಿಲ್ಲ. ಆದರೂ ಅವನು ನಂಬಿಗಸ್ತಿಕೆಯಿಂದ ತನ್ನ ನೇಮಕವನ್ನು ಪೂರೈಸಿದ್ದನು.

ಒಂದು ದಿನ ಯೋನನ ಜೀವನ ಗಮನಾರ್ಹವಾಗಿ ಬದಲಾಯಿತು. ಅವನೊಂದು ಗಂಭೀರ ನಿರ್ಣಯ ಮಾಡಬೇಕಾಗಿ ಬಂತು. ಅವನು ಯೆಹೋವನಿಂದ ಒಂದು ನೇಮಕವನ್ನು ಪಡೆದನು. ಅದು ಅವನಿಗೆ ಅತಿ ಕಷ್ಟಕರವಾಗಿ ಕಂಡಿತು. ಯೆಹೋವನು ಅವನಿಗೆ ಏನು ಮಾಡುವಂತೆ ಹೇಳಿದನು?

‘ನೀನೆದ್ದು ನಿನೆವೆಗೆ ಹೋಗು’

ಯೆಹೋವನು ಯೋನನಿಗೆ ಅಪ್ಪಣೆಕೊಟ್ಟದ್ದು: “ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಗಟ್ಟಿಯಾಗಿ ಕೂಗುತ್ತಾ ಅದನ್ನು ಖಂಡಿಸು; ಅದರ ನಿವಾಸಿಗಳ ದುಷ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ.” (ಯೋನ 1:⁠2) ಈ ನೇಮಕವು ಅಷ್ಟು ಕಷ್ಟಕರವಾಗಿ ಇದ್ದದ್ದೇಕೆ ಎಂದು ತಿಳಿಯುವುದು ಸುಲಭ. ನಿನೆವೆಯು ಯೊನನ ಊರಿನಿಂದ ಪೂರ್ವಕ್ಕೆ ಸುಮಾರು 800 ಕಿ.ಮೀ. ದೂರದಲ್ಲಿತ್ತು. ಕಾಲ್ನಡಿಗೆಯಲ್ಲಿ ಪಯಣಿಸುವುದಾದರೆ ಅದಕ್ಕೆ ಒಂದು ತಿಂಗಳು ಹಿಡಿಯುತ್ತಿತ್ತು. ಆದರೆ ನಿನೆವೆಯಲ್ಲಿದ್ದ ಕ್ರೂರ ಜನರಿಗೆ ಹೋಲಿಸುವಾಗ ಆ ದಾರಿಯ ಪಯಣದ ಕಷ್ಟಗಳಾದರೋ ಕಠಿಣವಲ್ಲ ಎಂದು ಹೇಳಬೇಕು. ಏಕೆಂದರೆ ನಿನೆವೆಯಲ್ಲಿದ್ದ ಅಶ್ಶೂರ್ಯ ನಿವಾಸಿಗಳಿಗೆ ಯೆಹೋವನ ತೀರ್ಪಿನ ಸಂದೇಶವನ್ನು ಯೋನನು ಸಾರಬೇಕಿತ್ತು. ಅಶ್ಶೂರ್ಯರು ಹಿಂಸಾಚಾರಕ್ಕೆ ಕುಪ್ರಸಿದ್ಧರೂ ಅತೀ ಕ್ರೂರಿಗಳೂ ಆಗಿದ್ದರು. ಯೋನನ ಸಂದೇಶಕ್ಕೆ ದೇವರ ಸ್ವಂತ ಜನರೇ ಹೆಚ್ಚೇನೂ ಪ್ರತಿಕ್ರಿಯೆ ತೋರಿಸದಿರಲಾಗಿ ಆ ವಿಧರ್ಮಿ ಜನರಿಂದ ಅವನು ಏನನ್ನು ನಿರೀಕ್ಷಿಸಾನು? “ರಕ್ತಮಯಪುರಿ” ಎಂದು ಕರೆಯಲ್ಪಟ್ಟಿರುವ ಆ ದೊಡ್ಡ ಪಟ್ಟಣ ನಿನೆವೆಯಲ್ಲಿ ಯೆಹೋವನ ಈ ಒಬ್ಬಂಟಿಗ ಸೇವಕನು ಏನು ಮಾಡಾನು?​—⁠ನಹೂಮ 3:​1, 7.

ಅಂಥಾ ವಿಚಾರಗಳು ಯೋನನ ಮನಸ್ಸಿನಲ್ಲಿ ಬಂದಿದ್ದಿರಬಹುದು ನಿಜ. ನಮಗದು ಗೊತ್ತಿಲ್ಲ. ಆದರೆ ನಮಗೆ ಗೊತ್ತಿರುವುದು ಏನೆಂದರೆ ಅವನು ದೇವರು ಕೊಟ್ಟ ನೇಮಕದಿಂದ ನುಣುಚಿಕೊಂಡು ಓಡಿಹೋಗುತ್ತಿದ್ದನು! ಯೆಹೋವನು ಅವನಿಗೆ ಹೇಳಿದ್ದು ಪೂರ್ವಕ್ಕೆ ಹೋಗು ಅಂತ, ಆದರೆ ಅವನು ಹೋದದ್ದು ಪಶ್ಚಿಮಕ್ಕೆ. ಅದೂ ಪಶ್ಚಿಮಕ್ಕೆ ತನ್ನಿಂದ ಹೋಗಸಾಧ್ಯವಾದಷ್ಟು ದೂರ. ಅವನು ಕರಾವಳಿ ಪ್ರದೇಶದ ಮಾರ್ಗವಾಗಿ ಹೋಗಿ, ಬಂದರು-ಪಟ್ಟಣ ಯೊಪ್ಪವನ್ನು ಮುಟ್ಟಿ, ಅಲ್ಲಿಂದ ತಾರ್ಷೀಷ್‌ ಎಂಬ ಊರಿಗೆ ಹೋಗುವ ಹಡಗನ್ನು ಹತ್ತಿದನು. ತಾರ್ಷೀಷ್‌ ಎಂಬ ಊರು ಸ್ಪೆಯ್ನ್‌ ದೇಶದಲ್ಲಿತ್ತೆಂದು ಕೆಲವು ಪರಿಣತರು ಹೇಳುತ್ತಾರೆ. ಹಾಗಿದ್ದರೆ, ಯೋನನು ನಿನೆವೆಯಿಂದ ಸುಮಾರು 3,500 ಕಿ.ಮೀ. ದೂರ ಓಡಿಹೋಗುತ್ತಿದ್ದನು. ಮಹಾ ಸಾಗರದ (ಮೆಡಿಟರೇನಿಯನ್‌ ಸಮುದ್ರದ) ಇನ್ನೊಂದು ತುದಿಯ ತನಕ ಮಾಡುವ ಅಂಥ ಪ್ರಯಾಣಕ್ಕೆ ಒಂದು ವರ್ಷದಷ್ಟು ಸಮಯ ತಗಲುತ್ತಿದ್ದಿರಬಹುದು! ಯೆಹೋವನು ಕೊಟ್ಟ ನೇಮಕವನ್ನು ಬಿಟ್ಟು ದೂರ ಪಲಾಯನಗೈಯಲು ಯೋನನು ಅಷ್ಟು ದೃಢಸಂಕಲ್ಪ ಮಾಡಿದ್ದನು!

ಹಾಗಾದರೆ ನಾವು ಯೋನನನ್ನು ಹೇಡಿ, ಪುಕ್ಕಲು ಎಂದು ನಿರ್ಣಯಿಸಬೇಕೋ? ಇಲ್ಲ, ಹಾಗೆಂದು ನಾವು ದುಡುಕಿ ನಿರ್ಣಯಿಸಬಾರದು. ನಾವು ನೋಡಲಿರುವಂತೆ, ಅವನೊಬ್ಬ ಧೈರ್ಯಶೀಲನಾದ ಸಮರ್ಥ ವ್ಯಕ್ತಿಯಾಗಿದ್ದನು. ಆದರೂ ನಮ್ಮೆಲ್ಲರಂತೆ ಯೋನನೂ ಅಪರಿಪೂರ್ಣ ಪಾಪಿ ಮನುಷ್ಯನಾಗಿದ್ದು ತಪ್ಪುಮಾಡುವ ಪ್ರವೃತ್ತಿಯುಳ್ಳವನಾಗಿದ್ದನು. (ಕೀರ್ತನೆ 51:⁠5) ಯಾವುದಕ್ಕಾದರೂ ಹೆದರಿ ಭಯುಪಡದವರು ನಮ್ಮಲ್ಲಿ ಯಾರಿದ್ದಾರೆ ಹೇಳಿ?

ಕೆಲವೊಮ್ಮೆ ದೇವರು ನಮ್ಮಿಂದ ಕಷ್ಟಕರ ಹಾಗೂ ಅಸಾಧ್ಯವೆಂದೂ ಕಾಣುವ ಕೆಲಸವನ್ನು ಮಾಡಲು ಹೇಳುತ್ತಾನೆಂದು ತೋರಬಹುದು. ಕ್ರೈಸ್ತರು ಮಾಡಲೇಬೇಕಾದ ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸ ಕೂಡ ಕೆಲವೊಮ್ಮೆ ನಮಗೆ ಅತಿ ಕಠಿಣವಾಗಿ ತೋರಬಹುದು. (ಮತ್ತಾಯ 24:14) “ದೇವರಿಗೆ ಎಲ್ಲವು ಸಾಧ್ಯವೇ” ಎಂದು ಯೇಸು ಹೇಳಿದ ಆ ಪರಮಸತ್ಯವನ್ನು ಮರೆತು ಬಿಡುವುದು ತೀರ ಸುಲಭ. (ಮಾರ್ಕ 10:27) ಆ ಸತ್ಯವನ್ನು ಕೆಲವೊಮ್ಮೆ ನಾವು ಮರೆತುಬಿಟ್ಟಲ್ಲಿ ಪ್ರಾಯಶಃ ಯೋನನಿಗಾದ ಕಷ್ಟವನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದರೂ ಯೋನನು ನೇಮಕವನ್ನು ಬಿಟ್ಟು ಓಡಿಹೋದುದರ ಫಲಿತಾಂಶ ಏನಾಯಿತು?

ದಾರಿತಪ್ಪಿದ ಪ್ರವಾದಿಗೆ ಯೆಹೋವನ ತಿದ್ದುಪಾಟು

ಯೋನನು ಪ್ರಾಯಶಃ ಫಿನಿಶೀಯರ ಸರಕು ನೌಕೆಯಾದ ಹಡಗನ್ನು ಹತ್ತಿ ಆರಾಮವಾಗಿ ಒರಗಿಕೊಂಡು ನಿಟ್ಟುಸಿರುಬಿಟ್ಟಿರಬೇಕು. ಕಪ್ತಾನನೂ ಅವನ ಕಲಾಸಿಗಳೂ ತಮ್ಮ ಹಡಗನ್ನು ಬಂದರಿನಿಂದ ಹೊರಗೆ ನಡಿಸಲು ಗಡಿಬಿಡಿ ಗದ್ದಲದಿಂದ ಪ್ರಯತ್ನಿಸುವುದನ್ನು ಯೋನನು ಕಂಡನು. ಹಡಗು ಮೆಲ್ಲಮೆಲ್ಲನೆ ದೂರ ಸಾಗಿ ತೀರವು ಕಣ್ಣಿಗೆ ಮರೆಯಾದಂತೆ, ಅಬ್ಬಾ ದೊಡ್ಡ ಗಂಡಾಂತರದಿಂದ ತಾನು ಪಾರಾಗುತ್ತಿದ್ದೇನಲ್ಲಾ ಎಂದು ಯೋನನು ನೆನಸಿದ್ದಿರಬೇಕು. ಆದರೆ ಇದ್ದಕ್ಕಿದ್ದಂತೆ ಹವಾಮಾನ ಬದಲಾಯಿತು!

ರೌದ್ರಾವೇಶದಿಂದ ಬಿರುಸಾಗಿ ಬೀಸಿದ ತುಫಾನು ಸಮುದ್ರವನ್ನು ನೊರೆಗರೆಸುತ್ತಾ ಅಲ್ಲಕಲ್ಲೋಲಮಾಡಿ ದೈತ್ಯಾಕಾರದ ಅಲೆಗಳನ್ನು ಎಬ್ಬಿಸಿತು. ಆ ಅಲೆಗಳ ಮುಂದೆ ಇಂದಿನ ದೊಡ್ಡ ದೊಡ್ಡ ನೌಕೆಗಳೂ ಚಿಕ್ಕ ಚಿಕ್ಕ ಆಟಿಕೆಗಳಂತೆ ಕಂಡಾವು. ಹೀಗಿರಲಾಗಿ ತೀರಾ ಬಡಕಲಾದ ಈ ಪುಟ್ಟ ಹಡಗು ಆ ಮುಗಿಲೆತ್ತರದ ಅಲೆಗಳ ದುಮುಕನ್ನು ಎದುರಿಸಿ ಹೇಗೆ ಪಾರಾದೀತು? ಅಸಂಭವವೇ ಸರಿ! ಯೋನನು ಸಮಯಾನಂತರ ‘[ಯೆಹೋವನೇ] ಬಿರುಗಾಳಿಯನ್ನು ಸಮುದ್ರದ ಮೇಲೆ ಬಲವಾಗಿ ಬೀಸಿದನು’ ಎಂದು ಬರೆದನು. ಆದರೆ ಬಿರುಗಾಳಿ ಬೀಸುತ್ತಿದ್ದ ಸಂದರ್ಭದಲ್ಲಿ ಈ ಸತ್ಯ ಯೋನನಿಗೆ ತಿಳಿದಿತ್ತೋ? ನಮಗೆ ಅದು ಗೊತ್ತಿಲ್ಲ. ಆದರೂ ನಾವಿಕರು ಹೆದರಿ ತಮ್ಮ ತಮ್ಮ ದೇವರುಗಳಿಗೆ ಮೊರೆಯಿಡುವುದನ್ನು ಅವನು ಕಂಡನು ಮತ್ತು ಅವರ ದೇವರುಗಳಿಂದ ಯಾವ ಸಹಾಯವೂ ಬರಲಾರದೆಂದು ಸಹ ಅವನಿಗೆ ತಿಳಿದಿತ್ತು. ಇನ್ನೇನು “ಹಡಗು ಒಡೆದುಹೋಗುವ ಹಾಗಾಯಿತು” ಎಂದು ಅವನ ವೃತ್ತಾಂತ ತಿಳಿಸುತ್ತದೆ. (ಯೋನ 1:4; ಯಾಜಕಕಾಂಡ 19:⁠4) ಹೀಗಿರಲಾಗಿ ತಾನು ಯಾರಿಗೆ ಕೈಗೊಟ್ಟು ಓಡಿಹೋಗುತ್ತಿದ್ದನೋ ಆ ದೇವರಿಗೆ ಯೋನನು ಹೇಗೆ ಪ್ರಾರ್ಥಿಸಾನು?

ಈ ಸಹಾಯಶೂನ್ಯ ಸ್ಥಿತಿಯಲ್ಲಿ ಯೋನನು ಹೊರಟುಹೋಗಿ ಹಡಗಿನ ಒಳಭಾಗಕ್ಕೆ ಇಳಿದು ಮಲಗಿಕೊಂಡನು. ಅವನಿಗೆ ಗಾಢನಿದ್ದೆ ಹಿಡಿಯಿತು. * ಹಡಗದ ಕಪ್ತಾನನು ಅವನ ಬಳಿಗೆ ಬಂದು ಅವನನ್ನು ಎಬ್ಬಿಸಿ ಬೇರೆಲ್ಲರಂತೆ ಯೋನನೂ ತನ್ನ ದೇವರಿಗೆ ಪ್ರಾರ್ಥಿಸುವಂತೆ ಹೇಳಿದನು. ಈ ತುಫಾನು ದೈವಮೂಲದಿಂದಲೇ ಉಂಟಾಗಿರಬೇಕೆಂದು ನಾವಿಕರು ಖಚಿತಗೊಂಡು ಈ ಕೇಡು ಸಂಭವಿಸಿದ್ದಕ್ಕೆ ಯಾರು ಕಾರಣರೆಂದು ತಿಳಿಯಲು ಚೀಟುಹಾಕಿದರು. ಚೀಟುಗಳು ಒಬ್ಬರ ನಂತರ ಒಬ್ಬರನ್ನು ಹೊರಹಾಕಿದಂತೆ ಯೋನನ ಎದೆಯು ಕುಸಿಯಿತು! ಬೇಗನೆ ಸತ್ಯ ಬೆಳಕಿಗೆ ಬಂತು. ಯೆಹೋವನು ತುಫಾನಿನ ಮೂಲಕವೂ ಚೀಟುಗಳ ಮೂಲಕವೂ ಒಬ್ಬನೆಡೆಗೇ ಕೈತೋರಿಸುತ್ತಿದ್ದನು. ಅವನೇ ಯೋನ!​—⁠ಯೋನ 1:​5-7.

ಯೋನನು ನಾವಿಕರ ಮುಂದೆ ವಿಷಯವನ್ನೆಲ್ಲಾ ಬಿಚ್ಚಿಟ್ಟನು. ಅವನು ಸರ್ವಶಕ್ತ ಯೆಹೋವ ದೇವರ ಸೇವಕನು. ಆ ದೇವರ ಆಜ್ಞೆಯನ್ನು ಪಾಲಿಸದೆ ಆತನ ಸನ್ನಿಧಿಯಿಂದ ದೂರ ಓಡಿಬಂದ ಕಾರಣ ಅವರೆಲ್ಲರನ್ನು ಭೀಕರ ಗಂಡಾಂತರಕ್ಕೆ ಒಳಪಡಿಸಿದ್ದನು. ಆ ನಾವಿಕರಿಗೆ ಗರಬಡಿದಂತಾಯಿತು. ಅವರ ಕಣ್ಣುಗಳು ಭಾರೀ ಗಾಬರಿಯಿಂದ ತುಂಬಿದ್ದನ್ನು ಯೋನನು ಕಂಡನು. ಹಡಗನ್ನೂ ತಮ್ಮ ಜೀವವನ್ನೂ ರಕ್ಷಿಸಲಿಕ್ಕಾಗಿ ಅವನನ್ನು ಏನು ಮಾಡಬೇಕು ಎಂದು ಅವರು ಕೇಳಿದರು. ಯೋನನು ಹೇಳಿದ್ದೇನು? ನೊರೆಕಾರುತ್ತಿದ್ದು ತಣ್ಣನೆ ಕೊರೆಯುವ ಸಮುದ್ರದಲ್ಲಿ ಮುಳುಗಿಹೋಗುವ ಯೋಚನೆ ತಾನೇ ಯೋನನಲ್ಲಿ ನಡುಕ ಹುಟ್ಟಿಸಿದ್ದಿರಬಹುದು. ಹಾಗಿದ್ದರೂ ತನ್ನಿಂದಾಗಿ ಅವರೆಲ್ಲರೂ ಜೀವಕಳಕೊಳ್ಳಸಾಧ್ಯವಿದೆ ಎಂದವನು ಅರಿತುಕೊಂಡು ಹೇಳಿದ್ದು: “ನನ್ನನ್ನೆತ್ತಿ ಸಮುದ್ರದಲ್ಲಿ ಹಾಕಿರಿ; ನಿಮ್ಮ ಮೇಲೆ ಎದ್ದಿರುವ ಸಮುದ್ರವು ಶಾಂತವಾಗುವದು; ಈ ದೊಡ್ಡ ತುಫಾನು ನಿಮಗೆ ಸಂಭವಿಸಿದ್ದು ನನ್ನ ನಿಮಿತ್ತವೇ ಎಂಬದು ನನಗೆ ಗೊತ್ತು.”​—⁠ಯೋನ 1:12.

ಇವು ಹೇಡಿಯ ಮಾತುಗಳಲ್ಲವೆಂಬುದು ನಿಶ್ಚಯ. ಆ ಸಂದಿಗ್ಧ ಸಮಯದಲ್ಲಿ ಯೋನನು ತೋರಿಸಿದ ಧೀರ, ಸ್ವತ್ಯಾಗದ ಮನೋಭಾವವು ಯೆಹೋವನ ಹೃದಯಕ್ಕೆಷ್ಟು ಆನಂದವನ್ನು ತಂದಿರಬೇಕು. ಈ ಗಳಿಗೆಯಲ್ಲಿ, ಯೋನನಲ್ಲಿದ್ದ ನಂಬಿಕೆಯ ಗುಣಮಟ್ಟವನ್ನೂ ನಾವು ನೋಡುತ್ತೇವೆ. ಇತರರ ಹಿತಕ್ಷೇಮವನ್ನು ನಮ್ಮದಕ್ಕಿಂತ ಮುಂದಿಡುವ ಮೂಲಕ ನಾವಿಂದು ಅದನ್ನು ಅನುಕರಿಸಬಲ್ಲೆವು. (ಯೋಹಾನ 13:​34, 35) ಯಾರಾದರೂ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕವಾಗಿ ಕೊರತೆಯಲ್ಲಿರುವಾಗ ನಾವೂ ಅವರಿಗೆ ಸಹಾಯವನ್ನು ಕೊಡಲು ಮುಂದೆ ಬರುತ್ತೇವೋ? ನಾವು ಹಾಗೆ ಮಾಡುವಾಗ ಯೆಹೋವನಿಗೆ ಎಷ್ಟು ಆನಂದವಾಗುವುದು!

ಪ್ರಾಯಶಃ ನಾವಿಕರು ಸಹ ಯೋನನಿಗಾಗಿ ನೊಂದುಕೊಂಡಿದ್ದರು, ಏಕೆಂದರೆ ಅವನು ಹೇಳಿದಂತೆ ಮಾಡಲು ಅವರು ಮೊದಲು ಒಪ್ಪಲಿಲ್ಲ! ಬದಲಾಗಿ ಆ ತುಫಾನಿನಿಂದ ಬಚಾವಾಗಲು ತಮ್ಮ ಕೈಯಿಂದಾದ ಎಲ್ಲವನ್ನೂ ಮಾಡಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಬಿರುಗಾಳಿಯು ಇನ್ನೂ ಹೆಚ್ಚು ತೀವ್ರಗೊಂಡಿತು. ಕೊನೆಗೆ ಅವರಿಗೆ ಬೇರೆ ದಾರಿಯೇ ಕಾಣಲಿಲ್ಲ. ಹೀಗಿರಲು ಅವರು ಯೋನನ ದೇವರಾದ ಯೆಹೋವನಿಗೆ ಮೊರೆಯಿಟ್ಟು ತಮಗೆ ಕರುಣೆ ತೋರಿಸುವಂತೆ ಪ್ರಾರ್ಥಿಸಿದರು. ಬಳಿಕ ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು.​—⁠ಯೋನ 1:​13-15.

ಯೋನನಿಗೆ ದೊರೆತ ಕರುಣೆ ಮತ್ತು ಬಿಡುಗಡೆ

ಯೋನನು ಭೋರ್ಗರೆಯುತ್ತಿದ್ದ ಅಲೆಗಳೊಳಗೆ ದಢಂ ಎಂದು ಬಿದ್ದನು. ಪ್ರಾಯಶಃ ಅವನು ಕೈಕಾಲನ್ನು ಬಡಿದು ಒದ್ದಾಡಿ ತೇಲುತ್ತಿರಲು ಪ್ರಯತ್ನಿಸಿದ್ದಿರಬೇಕು. ನೊರೆಕಾರುವ ಸಮುದ್ರದ ಮಧ್ಯೆ ಹಡಗು ಮುಂದಕ್ಕೆ ವೇಗವಾಗಿ ಚಲಿಸುತ್ತಿರುವುದನ್ನೂ ಕಂಡಿದ್ದಿರಬಹುದು. ಆಗ ಪ್ರಚಂಡ ಅಲೆಗಳು ರಭಸದಿಂದ ಅಪ್ಪಳಿಸಿ ಅವನನ್ನು ಬಲವಂತವಾಗಿ ಕೆಳಗೊಯ್ದವು. ಹೀಗೆ ಮುಳುಗುತ್ತಾ ಮುಳುಗುತ್ತಾ ಹೋದದ್ದರಿಂದ ತನ್ನ ಕಥೆ ಇಲ್ಲಿಗೇ ಮುಗಿಯಿತೆಂದು ಅವನೆಣಿಸಿದ.

ಈ ಸಮಯದಲ್ಲಿ ತನಗೇನು ಅನಿಸಿತ್ತು ಎಂಬುದನ್ನು ಯೋನನು ತದನಂತರ ವರ್ಣಿಸಿದನು. ಕ್ಷಣಿಕ ಚಿತ್ರಗಳು ಅವನ ಮನಸ್ಸಿನಲ್ಲಿ ಹಾದುಹೋದವು. ಯೆರೂಸಲೇಮಿನಲ್ಲಿದ್ದ ಯೆಹೋವನ ಸುಂದರ ಆಲಯವನ್ನು ತಾನಿನ್ನೆಂದೂ ಪುನಃ ಕಾಣೇನೆಂಬ ದುಃಖ ಅವನನ್ನು ಬಾಧಿಸಿತು. ಆ ಸಮುದ್ರದ ಉದರದ ಅಗಾಧ ಸ್ಥಳಕ್ಕೆ ಇಳಿಯುತ್ತಿದ್ದೇನೋ ಪರ್ವತಗಳ ಬುಡದಲ್ಲಿ ಪಾಚಿ ತನ್ನ ತಲೆಯನ್ನು ಸುತ್ತಿಕೊಂಡಿತ್ತೋ ಎಂಬ ಭಾವನೆ ಅವನಿಗಾಯಿತು. ಅದೇ ತನ್ನ ಸಮಾಧಿ, ಅಧೋಲೋಕವೋ ಎಂಬಂತೆ ಅವನಿಗೆ ತೋಚಿತು.​—⁠ಯೋನ 2:​2-6.

ಆದರೆ ತುಸು ನಿಲ್ಲಿ! ಅವನ ಸಮೀಪದಲ್ಲೇ ಒಂದು ಕರ್ರಗಿನ ಬೃಹದಾಕಾರದ ಜಲಜೀವಿಯೊಂದು ಚಲಿಸುತ್ತಿದೆ. ಅದು ತನ್ನ ದೊಡ್ಡ ಬಾಯಿ ತೆರೆದು ಯೋನನನ್ನು ಗುಳುಂ ಎಂದು ನುಂಗಿಬಿಟ್ಟಿತು!

ಅದೇ ಯೋನನ ಅಂತ್ಯವೋ? ಅಲ್ಲ, ಏನೋ ಆಶ್ಚರ್ಯಕರವಾದದ್ದು ತನಗೆ ಸಂಭವಿಸುತ್ತಿದೆ ಎಂಬ ಅನಿಸಿಕೆಯಾಯಿತು ಯೋನನಿಗೆ. ಅವನಿನ್ನೂ ಬದುಕಿದ್ದನು! ಮೀನಿನ ಹೊಟ್ಟೆಯಲ್ಲಿ ನಜ್ಜುಗುಜ್ಜಾಗಲಿಲ್ಲ. ಜೀರ್ಣಿಸಲ್ಪಡಲೂ ಇಲ್ಲ, ಉಸಿರುಕಟ್ಟಿ ಸಾಯಲೂ ಇಲ್ಲ. ಅವನ ಸಮಾಧಿಯಾಗಿರಲಿಕ್ಕಿದ್ದ ಆ ಮೀನಿನ ಹೊಟ್ಟೆಯಲ್ಲಿ ಅವನಿನ್ನೂ ಉಸಿರಾಡುತ್ತಿದ್ದನು. ಮೆಲ್ಲ ಮೆಲ್ಲನೆ ಭಯಚಕಿತ ಭಾವವು ಯೋನನನ್ನು ಆವರಿಸಿತು. ಹೌದು, ‘ಯೋನನನ್ನು ನುಂಗಲು ಒಂದು ದೊಡ್ಡ ಮೀನಿಗೆ ಅಪ್ಪಣೆಮಾಡಿದ್ದು’ ಯೋನನ ದೇವರಾದ ಯೆಹೋವನೇ ಎಂಬುದು ಸ್ಪಷ್ಟ. *​—⁠ಯೋನ 1:⁠17.

ಕ್ಷಣಗಳು ಉರುಳಿ ತಾಸುಗಳಾದವು. ಹಿಂದೆಂದೂ ಕಂಡಿರದ ಆ ಗಾಢ ಕತ್ತಲೆಯಲ್ಲಿ ಯೋನನು ಈಗ ಸಮಸ್ಥಿತಿಗೆ ಬಂದು ಯೆಹೋವ ದೇವರಿಗೆ ಪ್ರಾರ್ಥಿಸಿದನು. ಯೋನ ಪುಸ್ತಕದ ಎರಡನೇ ಅಧ್ಯಾಯದಲ್ಲಿ ದಾಖಲಾಗಿರುವ ಅವನ ಇಡೀ ಪ್ರಾರ್ಥನೆಯು ಗಮನಾರ್ಹ. ಶಾಸ್ತ್ರಗ್ರಂಥದಲ್ಲಿ ಅವನಿಗಿದ್ದ ವಿಸ್ತೃತ ಜ್ಞಾನವನ್ನೂ ಅದು ತೋರಿಸುತ್ತದೆ ಯಾಕೆಂದರೆ ಅವನು ಅನೇಕಾವರ್ತಿ ಅದರಲ್ಲಿ ಬೈಬಲ್‌ ಪುಸ್ತಕವಾದ ಕೀರ್ತನೆಗಳನ್ನು ಉಲ್ಲೇಖಿಸಿದ್ದಾನೆ. ಅಲ್ಲದೆ, ಅವನಿಗೆ ಹೃತ್ಪೂರ್ವಕವಾದ ಕೃತಜ್ಞತೆಯಿತ್ತೆಂದೂ ಅದು ತೋರಿಸುತ್ತದೆ. ಕೊನೆಗೆ ಯೋನ ಅಂದದ್ದು: “ನಾನಾದರೋ ಸ್ತೋತ್ರಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು, ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು. ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು.”​—⁠ಯೋನ 2:⁠9.

ಯೆಹೋವನು ತನ್ನ ಸೇವಕರನ್ನು ಯಾವುದೇ ಸನ್ನಿವೇಶದಲ್ಲಿ ಯಾವುದೇ ಸಮಯದಲ್ಲಿ ಕಾಪಾಡಶಕ್ತನೆಂದು ಯೋನನು ಕಲಿತನು. ಹೌದು, ತೊಂದರೆಯಲ್ಲಿ ಸಿಕ್ಕಿಬಿದ್ದಿದ್ದ ತನ್ನ ಸೇವಕನು “ಮೀನಿನ ಹೊಟ್ಟೆಯೊಳಗೆ” ಇದ್ದಾಗಲೂ ಯೆಹೋವನು ಕಾಪಾಡಿದನು. (ಯೋನ 1:17) ಒಬ್ಬ ಮನುಷ್ಯನನ್ನು ಭಾರಿ ಗಾತ್ರದ ಮೀನಿನ ಹೊಟ್ಟೆಯೊಳಗೆ ಮೂರು ದಿನ ಹಗಲೂ ರಾತ್ರಿ ಸುರಕ್ಷಿತವಾಗಿಯೂ ಜೀವಂತವಾಗಿಯೂ ಇಡಶಕ್ತನು ಯೆಹೋವನು ಮಾತ್ರವೇ. ‘ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ಆ ದೇವರು’ ಯೆಹೋವನೇ ಎಂದು ನೆನಪಿಸಿಕೊಳ್ಳುವುದು ನಮಗೆ ಇಂದು ಪ್ರಯೋಜನಕರ. (ದಾನಿಯೇಲ 5:23) ನಮ್ಮ ಜೀವಕ್ಕಾಗಿ, ಅಸ್ತಿತ್ವಕ್ಕಾಗಿ ನಾವಾತನಿಗೆ ಋಣಿಗಳು. ಅದಕ್ಕಾಗಿ ನಾವು ಕೃತಜ್ಞರಾಗಿದ್ದೇವೋ? ನಾವು ಯೆಹೋವನಿಗೆ ವಿಧೇಯತೆಯನ್ನು ತೋರಿಸುವ ಹಂಗಿನವರಲ್ಲವೇ?

ಯೋನನ ಕುರಿತೇನು? ಯೆಹೋವನಿಗೆ ವಿಧೇಯನಾಗುವ ಮೂಲಕ ಕೃತಜ್ಞತೆಯನ್ನು ಅವನು ವ್ಯಕ್ತಪಡಿಸಿದನೋ? ಹೌದು. ಮೂರು ದಿನ ಹಗಲು-ರಾತ್ರಿ ಕಳೆದ ಬಳಿಕ ಆ ಮೀನು ದಡಕ್ಕೆ ಬಂದು “ಯೋನನನ್ನು ಒಣನೆಲದಲ್ಲಿ ಕಾರಿಬಿಟ್ಟಿತು.” (ಯೋನ 2:10) ನೆನಸಿರಿ​—⁠ಇಷ್ಟೆಲ್ಲಾ ಅವಾಂತರದ ಬಳಿಕ ಯೋನನಿಗೆ ದಡಕ್ಕೆ ಈಜಿಕೊಂಡು ಬರುವ ಅಗತ್ಯವೂ ಇದ್ದಿರಲಿಲ್ಲ! ಈಗಲಾದರೋ ಆ ತೀರವು ಎಲ್ಲಿತ್ತೋ ಅಲ್ಲಿಂದ ಅವನು ತನ್ನ ದಾರಿಯನ್ನು ತಾನೇ ಹುಡುಕಿಕೊಂಡು ಹೋಗಬೇಕಿತ್ತು ನಿಶ್ಚಯ. ಸ್ವಲ್ಪದರಲ್ಲೇ ಅವನ ಕೃತಜ್ಞತಾಭಾವವು ಪರೀಕ್ಷೆಗೆ ಒಳಗಾಯಿತು. ಯೋನ 3:​1, 2 ಹೇಳುವುದು: “ಅನಂತರ ಯೆಹೋವನು ಯೋನನಿಗೆ​—⁠ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಪ್ರಕಟಿಸುವದನ್ನು ಅಲ್ಲಿ ಸಾರು ಎಂದು ಎರಡನೆಯ ಸಲ ಅಪ್ಪಣೆಮಾಡಿದನು.” ಈಗ ಯೋನ ಏನು ಮಾಡಲಿದ್ದನು?

ಯೋನನು ಹಿಮ್ಮೆಟ್ಟಲಿಲ್ಲ. ನಾವು ಓದುವುದು: “ಆಗ ಯೋನನು ಎದ್ದು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು.” (ಯೋನ 3:⁠3) ಹೌದು, ಅವನು ವಿಧೇಯನಾದನು. ತನ್ನ ತಪ್ಪಿನಿಂದ ಪಾಠಕಲಿತನು ಎಂಬುದು ಸ್ಪಷ್ಟ. ಈ ವಿಷಯದಲ್ಲೂ ಯೋನನ ನಂಬಿಕೆಯನ್ನು ನಾವು ಅನುಸರಿಸುವ ಆವಶ್ಯಕತೆ ಇದೆ. ನಾವೆಲ್ಲರೂ ಪಾಪಿಗಳು. ಆದ್ದರಿಂದ ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. (ರೋಮಾಪುರ 3:23) ಆದರೆ ತಪ್ಪುಗೈದಲ್ಲಿ ನಾವು ಸೋತು ಹಿಂಜರಿಯುವೆವೋ? ಅಥವಾ ನಮ್ಮ ತಪ್ಪುಗಳಿಂದಲೇ ಪಾಠಕಲಿತು ವಿಧೇಯತೆಯಿಂದ ದೇವರ ಸೇವೆ ಮಾಡುವೆವೋ?

ಯೋನನ ವಿಧೇಯತೆಗೆ ಯೆಹೋವ ದೇವರು ಪ್ರತಿಫಲ ಕೊಟ್ಟನೋ? ಕೊಟ್ಟೇಕೊಟ್ಟನು. ಒಂದು ಪ್ರತಿಫಲವೇನಂದರೆ, ಅವನ ಹಡಗದ ನಾವಿಕರು ಪಾರಾಗಿ ಉಳಿದದ್ದು ಕಟ್ಟಕಡೆಗೆ ಯೋನನಿಗೆ ತಿಳಿದುಬಂತು. ಯೋನನ ಸ್ವತ್ಯಾಗದ ನಂತರ ಕೂಡಲೇ ತುಫಾನು ನಿಂತುಬಿಟ್ಟಿತ್ತು ಮತ್ತು ಬಳಿಕ ಆ ನಾವಿಕರು ‘ಯೆಹೋವನಿಗೆ ಬಹಳ ಭಯಪಟ್ಟರು.’ ಮಾತ್ರವಲ್ಲ ತಮ್ಮ ಸುಳ್ಳು ದೇವರುಗಳ ಬದಲಾಗಿ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸತೊಡಗಿದ್ದರು.​—⁠ಯೋನ 1:​15, 16.

ಅದಕ್ಕಿಂತಲೂ ಹೆಚ್ಚಿನ ಪ್ರತಿಫಲ ತುಂಬಾ ಸಮಯದ ನಂತರ ಬಂತು. ಅವನೊಂದು ಪ್ರವಾದನಾ ಚಿತ್ರರೂಪವಾದನು. ಯೋನನು ಆ ದೊಡ್ಡ ಮೀನಿನ ಹೊಟ್ಟೆಯಲ್ಲಿದ್ದ ಸಮಯವನ್ನು ಯೇಸು ತಾನು ಸಮಾಧಿ ಅಥವಾ ಷೀಓಲ್‌ನಲ್ಲಿ ಇರಲಿಕ್ಕಿದ್ದ ಸಮಯಕ್ಕೆ ಪ್ರವಾದನಾ ರೂಪವಾಗಿ ಸೂಚಿಸಿ ಮಾತಾಡಿದನು. (ಮತ್ತಾಯ 12:​38-40) ಭೂಮಿಯ ಮೇಲಿನ ಜೀವನಕ್ಕೆ ಪುನರುತ್ಥಾನವಾಗುವಾಗ ಆ ಆಶೀರ್ವಾದದ ಕುರಿತು ತಿಳಿಯಲು ಯೋನನು ಎಷ್ಟು ಪುಳಕಿತಗೊಳ್ಳಲಿರುವನು! (ಯೋಹಾನ 5:​28, 29) ಯೆಹೋವನು ನಿಮ್ಮನ್ನು ಸಹ ಆಶೀರ್ವದಿಸಲು ಬಯಸುತ್ತಾನೆ. ಯೋನನಂತೆ ನೀವು ನಿಮ್ಮ ತಪ್ಪುಗಳಿಂದ ಪಾಠಕಲಿತು ವಿಧೇಯತೆಯನ್ನೂ ನಿಸ್ವಾರ್ಥ ಭಾವವನ್ನೂ ತೋರಿಸುವಿರೋ? (w09 1/1)

[ಪಾದಟಿಪ್ಪಣಿಗಳು]

^ ಪ್ಯಾರ. 7 ಯೋನನು ಗಲಿಲಾಯ ಪ್ರಾಂತಕ್ಕೆ ಸೇರಿದ ಊರಿನವನಾಗಿದ್ದದ್ದು ಗಮನಾರ್ಹ. ಏಕೆಂದರೆ ಫರಿಸಾಯರು ದರ್ಪದಿಂದ ಯೇಸುವಿನ ಕುರಿತು ಅಂದದ್ದು: “ಗಲಿಲಾಯದಲ್ಲಿ ಪ್ರವಾದಿ ಹುಟ್ಟುವದೇ ಇಲ್ಲ, ವಿಚಾರಿಸಿ ನೋಡು.” (ಯೋಹಾನ 7:52) ಆ ಚಿಕ್ಕ ಊರಾದ ಗಲಿಲಾಯದಿಂದ ಯಾವ ಪ್ರವಾದಿಯೂ ಬಾರನು ಅಥವಾ ಮುಂದಕ್ಕೂ ಬರಲಾರನು ಎಂಬ ಫರಿಸಾಯರ ಹೇಳಿಕೆ ವಿವೇಚನೆಯಿಲ್ಲದ ಮಾತೆಂದು ಅನೇಕ ಬೈಬಲ್‌ ಅನುವಾದಕರು ಮತ್ತು ಸಂಶೋಧಕರು ಸೂಚಿಸುತ್ತಾರೆ. ಆದ್ದರಿಂದ ಆ ಫರಿಸಾಯರು ಇತಿಹಾಸವನ್ನೂ ಪ್ರವಾದನೆಯನ್ನೂ ಅಲಕ್ಷಿಸುತ್ತಿದ್ದರೆಂಬುದು ಸ್ಪಷ್ಟ.​—⁠ಯೆಶಾಯ 9:​1, 2.

^ ಪ್ಯಾರ. 17 ಯೋನನು ನಿದ್ದೆಯಲ್ಲಿದ್ದಾಗ ಗೊರಕೆಹೊಡೆಯುತ್ತಿದ್ದನು ಎಂದು ಕೂಡಿಸುವ ಮೂಲಕ ಅವನ ನಿದ್ರೆಯ ಆಳವನ್ನು ಸೆಪ್ಟ್ಯುಅಜಿಂಟ್‌ ಭಾಷಾಂತರ ಒತ್ತಿಹೇಳುತ್ತದೆ. ಆದರೆ ಯೋನನ ಆ ನಿದ್ದೆಯನ್ನು ಅವನ ದುರ್ಲಕ್ಷ್ಯದ ಚಿಹ್ನೆಯಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಕೆಲವೊಮ್ಮೆ ತೀರಾ ಮನಗುಂದಿದವರನ್ನು ನಿದ್ದೆಯ ಮಬ್ಬು ಆವರಿಸುತ್ತದೆ ಎಂಬುದನ್ನು ನಾವು ನೆನಪಿಸಬಹುದು. ಗೆತ್ಸೇಮನೆ ತೋಟದಲ್ಲಿ ಯೇಸು ಅತೀ ವೇದನೆಯಲ್ಲಿದ್ದ ಸಮಯದಲ್ಲಿ ಪೇತ್ರ, ಯಾಕೋಬ, ಯೋಹಾನರಿಗೆ ‘ದುಃಖಭಾರದಿಂದ ನಿದ್ರೆಹತ್ತಿತ್ತು.’​—⁠ಲೂಕ 22:⁠45.

^ ಪ್ಯಾರ. 25 ‘ಮೀನು’ ಎಂಬುದಕ್ಕಿರುವ ಹೀಬ್ರು ಪದವನ್ನು ಗ್ರೀಕ್‌ ಭಾಷೆಯಲ್ಲಿ “ತಿಮಿಂಗಿಲ” ಅಥವಾ “ದೈತ್ಯಾಕಾರದ ಮೀನು” ಎಂದು ಅನುವಾದಿಸಲಾಗಿದೆ. ಅದು ಯಾವ ಸಮುದ್ರಜೀವಿ ಎಂದು ನಿಷ್ಕೃಷ್ಟವಾಗಿ ಹೇಳಸಾಧ್ಯವಿಲ್ಲವಾದರೂ, ಒಬ್ಬ ಮನುಷ್ಯನನ್ನು ಇಡೀಯಾಗಿ ನುಂಗಿಬಿಡುವಷ್ಟು ಭಾರಿ ಗಾತ್ರದ ಷಾರ್ಕ್‌ ಮೀನುಗಳು ಮೆಡಿಟರೇನಿಯನ್‌ ಸಮುದ್ರದಲ್ಲಿವೆಯೆಂದು ಕಂಡುಕೊಳ್ಳಲಾಗಿದೆ. ಬೇರೆ ಸಮುದ್ರಗಳಲ್ಲಿ ಅದಕ್ಕಿಂತಲೂ ದೊಡ್ಡದಾದ ಷಾರ್ಕ್‌ ಮೀನುಗಳಿವೆ; ವೇಲ್‌ ಷಾರ್ಕ್‌ ಎಂಬ ಮೀನಿನ ಉದ್ದ 15 ಮೀ. ಅಥವಾ ಅದಕ್ಕಿಂತಲೂ ಹೆಚ್ಚು ಇರಬಲ್ಲದು!

[ಪುಟ 31ರಲ್ಲಿರುವ ಚೌಕ/ಚಿತ್ರ]

ವಿಮರ್ಶಕರಿಗೆ ಯೋನನ ಉತ್ತರ

▪ ಬೈಬಲ್‌ನ ಯೋನ ಎಂಬ ಪುಸ್ತಕದಲ್ಲಿ ದಾಖಲೆಯಾದ ಘಟನೆಗಳು ನಿಜವಾಗಿಯೂ ಸಂಭವಿಸಿದ್ದವೋ? ಪುರಾತನ ಕಾಲದಿಂದಲೂ ಈ ಪುಸ್ತಕಕ್ಕೆ ವಿಮರ್ಶಕರು ಇದ್ದರು. ಆಧುನಿಕ ಯುಗದ ವಿಮರ್ಶಕರಾದರೋ ಈ ಪುಸ್ತಕವನ್ನು ಕಟ್ಟುಕಥೆ, ದಂತಕಥೆ, ಪುರಾಣ ಅಥವಾ ಕಲ್ಪನಾಕಥೆಯೋ ಎಂಬಂತೆ ತಳ್ಳಿಬಿಡುತ್ತಾರೆ. ಯೋನ ಮತ್ತು ಆ ದೊಡ್ಡ ಮೀನಿನ ವೃತ್ತಾಂತವನ್ನು ಪಾದ್ರಿಯೊಬ್ಬನು ವಿಚಿತ್ರ ಕಥೆಯಾಗಿ ವಿವರಿಸಿದ ಬಗ್ಗೆ 19ನೇ ಶತಕದ ಒಬ್ಬ ಗ್ರಂಥಕರ್ತನು ಹೀಗಂದನು: ‘ತಿಮಿಂಗಿಲದ ಗುರುತು’ ಎಂಬ ಹೆಸರಿನ ಯೊಪ್ಪದ ಹೊಟೇಲ್‌ ಒಂದರಲ್ಲಿ ಯೋನನು ಉಳುಕೊಂಡಿದ್ದನಂತೆ. ತನ್ನ ಬಿಲ್‌ ಪಾವತಿಮಾಡಲು ಯೋನನಲ್ಲಿ ಸಾಕಷ್ಟು ಹಣ ಇಲ್ಲದ್ದರಿಂದ ಮಾಲೀಕನು ಅವನನ್ನು ಹೊಟೇಲ್‌ನಿಂದ ಹೊರದೊಬ್ಬಿದನು. ಹೀಗೆ ಯೋನನನ್ನು ತಿಮಿಂಗಿಲವು ‘ನುಂಗಿಬಿಟ್ಟಿತು’ ಮತ್ತು ನಂತರ ‘ಕಾರಿಬಿಟ್ಟಿತು’ ಎಂಬುದು ಪಾದ್ರಿಯ ವಿಚಿತ್ರ ಹೇಳಿಕೆ. ನಿಜವಾಗಿಯೂ ಬೈಬಲ್‌ ವಿಮರ್ಶಕರು ಆ ಮೀನಿಗಿಂತಲೂ ಹೆಚ್ಚು ಆತುರದಿಂದ ಯೋನನನ್ನು ನುಂಗಿಹಾಕಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ!

ಈ ಬೈಬಲ್‌ ಪುಸ್ತಕದ ಭರವಸಾರ್ಹತೆಯ ಕುರಿತು ಅಷ್ಟೊಂದು ಅನುಮಾನಗಳು ಇರುವುದೇಕೆ? ಅದ್ಭುತಗಳು ಅದರಲ್ಲಿ ದಾಖಲಾಗಿವೆ ನಿಜ. ಹೆಚ್ಚಿನ ವಿಮರ್ಶಕರಿಗೆ ಅದ್ಭುತಗಳ ವಿಷಯದಲ್ಲಿ ಈ ಗಡುಸಾದ ಪೂರ್ವಕಲ್ಪನೆ ಇದೆ, ಏನೆಂದರೆ ಇಂಥ ಚಮತ್ಕಾರಗಳು ಅಸಂಭವವೇ ಸರಿ ಎಂದನ್ನುತ್ತಾರೆ ಅವರು. ಆದರೆ ಹೀಗೆ ತರ್ಕಿಸುವುದು ಸರಿಯೋ? ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಬೈಬಲಿನ ಮೊತ್ತಮೊದಲ ವಾಕ್ಯವನ್ನು ನಾನು ನಂಬುತ್ತೇನೋ?’ ಅದನ್ನುವುದು: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” (ಆದಿಕಾಂಡ 1:⁠1) ಭೂಸುತ್ತಲಿರುವ ವಿವೇಚನೆಯುಳ್ಳ ಲಕ್ಷಾಂತರ ಜನರು ಆ ಸರಳ ಸತ್ಯವನ್ನು ವಿವೇಕದಿಂದ ಒಪ್ಪಿಕೊಳ್ಳುತ್ತಾರೆ. ಒಂದು ರೀತಿಯಲ್ಲಾದರೋ ಆ ಸರಳವಾದ ಸತ್ಯ ಹೇಳಿಕೆಯು, ಅನಂತರ ಬೈಬಲಿನಲ್ಲಿ ತಿಳಿಸಲಾದ ಬೇರೆಲ್ಲಾ ಅದ್ಭುತಗಳಿಗಿಂತ ಎಷ್ಟೋ ಅಧಿಕ ಚಮತ್ಕಾರಗಳನ್ನು ಒಳಗೊಂಡಿರುವ ವಾಕ್ಯವಾಗಿದೆ.

ಪರಿಗಣಿಸಿರಿ: ತಾರಾರಂಜಿತ ವಿಶಾಲಾಕಾಶವನ್ನೂ ಭೂಮಿಯ ಮೇಲಿನ ಜೀವರಾಶಿಯ ಜಟಿಲ ಕೌತುಕಗಳನ್ನೂ ನಿರ್ಮಿಸಿದವನಿಗೆ ಯೋನ ಪುಸ್ತಕದಲ್ಲಿರುವ ಯಾವ ಚಮತ್ಕಾರಗಳು ಅಸಾಧ್ಯ ಹೇಳಿ? ತುಫಾನನ್ನು ಉಂಟುಮಾಡುವುದೋ? ಮನುಷ್ಯನೊಬ್ಬನನ್ನು ನುಂಗುವಂತೆ ತಿಮಿಂಗಿಲಕ್ಕೆ ಅಪ್ಪಣೆಕೊಡುವುದೋ? ಅಥವಾ ಅದೇ ದೊಡ್ಡ ಮೀನು ಮನುಷ್ಯನನ್ನು ಪುನಃ ಕಾರಿಬಿಡುವಂತೆ ಮಾಡುವುದೋ? ಅಪರಿಮಿತ ಶಕ್ತಿಯಿರುವಾತನಿಗೆ ಮಾತ್ರ ಅಂಥ ವಿಷಯಗಳನ್ನು ಮಾಡಲು ಎಂದಿಗೂ ಕಷ್ಟವಾಗದು.​—⁠ಯೆಶಾಯ 40:⁠26.

ದೈವಿಕ ಶಕ್ತಿಯ ಹಸ್ತಕ್ಷೇಪದ ಹೊರತೂ ಕೆಲವೊಮ್ಮೆ ವಿಸ್ಮಯಕರ ಸಂಗತಿಗಳು ಸಂಭವಿಸುತ್ತವೆ. ಅಂದಹಾಗೆ, 1758ರಲ್ಲಿ ಒಬ್ಬ ನಾವಿಕನು ತನ್ನ ಹಡಗದಿಂದ ಮೆಡಿಟರೇನಿಯನ್‌ ಸಮುದ್ರದೊಳಗೆ ಜಾರಿಬಿದ್ದನು. ಆಗ ಷಾರ್ಕ್‌ ಮೀನು ಅವನನ್ನು ನುಂಗಿಬಿಟ್ಟಿತು. ಆದರೆ ಷಾರ್ಕ್‌ಗೆ ಗುಂಡುಹೊಡೆದಾಗ ಅದು ಗಾಯಗೊಂಡು ನಾವಿಕನನ್ನು ಕಕ್ಕಿಬಿಟ್ಟಿತು. ತುಸುವೇ ಗಾಸಿಗೊಂಡ ನಾವಿಕನನ್ನು ಸುರಕ್ಷಿತವಾಗಿ ದಡಕ್ಕೆ ಎಳೆಯಲಾಯಿತು. ಇದು ಸತ್ಯವಾಗಿದ್ದಲ್ಲಿ, ಇದನ್ನು ಗಮನಾರ್ಹವೆಂದೂ ಅಚ್ಚರಿಯೆಂದೂ ಕರೆಯಬಹುದು​—⁠ಆದರೆ ಅದ್ಭುತವೆಂದಲ್ಲ. ದೇವರು ತನ್ನ ಶಕ್ತಿಯನ್ನು ಇದಕ್ಕಿಂತಲೂ ಎಷ್ಟೊ ಹೆಚ್ಚಾಗಿ ಬಳಸಶಕ್ತನಲ್ಲವೇ?

ಯಾರೊಬ್ಬನಾದರೂ ಒಂದು ಮೀನಿನ ಹೊಟ್ಟೆಯೊಳಗೆ ಮೂರುದಿನ ಉಸಿರುಗಟ್ಟದೇ ಜೀವಂತವಾಗಿ ಉಳಿಯಲಾರನು ಎಂದೂ ವಿಮರ್ಶಕರು ಪಟ್ಟುಹಿಡಿಯುತ್ತಾರೆ. ಆದರೂ, ಈಗ ಜನರು ಸಮುದ್ರದಡಿಯಲ್ಲಿ ಉಸಿರಾಡಲಿಕ್ಕಾಗಿ ಒತ್ತುಗಾಳಿಯನ್ನು ಟ್ಯಾಂಕಲ್ಲಿ ತುಂಬಿಸುತ್ತಾರೆ ಮತ್ತು ಅದನ್ನು ಬಳಸುವುದು ಹೇಗೆಂದು ಅವರು ಚೆನ್ನಾಗಿ ತಿಳಿದಿರುತ್ತಾರೆ. ಹೀಗಿರಲಾಗಿ ಯೋನನನ್ನು ಮೂರುದಿನ ಉಸಿರುಗಟ್ಟದೆ ಜೀವಂತವಾಗಿಡಲು ದೇವರು ತನ್ನ ಅಪರಿಮಿತ ಶಕ್ತಿ ಮತ್ತು ವಿವೇಕವನ್ನು ಬಳಸಿದ್ದಿರಲಾರನೇ? ಖಂಡಿತ ಬಳಸಿದ್ದಿರಬೇಕು. ಯೇಸುವಿನ ತಾಯಿಯಾದ ಮರಿಯಳಿಗೆ ಯೆಹೋವನ ದೂತನೊಬ್ಬನು ಒಮ್ಮೆ ಹೇಳಿದಂತೆ, “ದೇವರಿಂದ ಬರುವ ಯಾವ ಮಾತಾದರೂ ನಿಷ್ಫಲವಾಗುವದಿಲ್ಲ.”​—⁠ಲೂಕ 1:⁠37.

ಬೇರೆ ಯಾವ ವಿಷಯಗಳು ಯೋನನ ಪುಸ್ತಕವನ್ನು ನಿಷ್ಕೃಷ್ಟ ವೃತ್ತಾಂತವಾಗಿ ಮಾಡುತ್ತದೆ? ಹಡಗು ಮತ್ತು ನಾವಿಕರ ಕುರಿತು ಯೋನನು ಕೊಟ್ಟಿರುವ ವರ್ಣನೆಯು ಸವಿವರವೂ ವಾಸ್ತವಿಕವೂ ಆಗಿದೆ. ಬಿರುಗಾಳಿಯ ಸಮಯದಲ್ಲಿ ಹಡಗನ್ನು ಹಗುರಗೊಳಿಸಲು ನಾವಿಕರು ಸಾಮಾನುಗಳನ್ನು ಸಮುದ್ರಕ್ಕೆ ಬಿಸಾಡುವುದನ್ನು ಯೋನ 1:5ರಲ್ಲಿ ನಾವು ಕಾಣುತ್ತೇವೆ. ಕೆಟ್ಟ ಹವಾಮಾನದ ಸಮಯದಲ್ಲಿ ಈ ಪದ್ಧತಿಯು ಸರ್ವಸಾಮಾನ್ಯವೆಂದು ಪುರಾತನ ಇತಿಹಾಸಕಾರರು ಮತ್ತು ರಬ್ಬಿಗಳ ನಿಯಮವು ಸಹ ತಿಳಿಸುತ್ತದೆ. ನಿನೆವೆಯ ಕುರಿತು ಯೋನನ ನಂತರದ ವರ್ಣನೆಯು ಸಹ ಐತಿಹಾಸಿಕ ಮತ್ತು ಪ್ರಾಕ್ತನಶಾಸ್ತ್ರದ ಪುರಾವೆಗೆ ಹೊಂದಿಕೆಯಾಗಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಯೋನನು ದೊಡ್ಡ ಮೀನಿನ ಹೊಟ್ಟೆಯೊಳಗೆ ಮೂರುದಿನ ಇದ್ದದನ್ನು ಯೇಸು ಕ್ರಿಸ್ತನು ತಾನು ಸಮಾಧಿಯೊಳಗಿರಲಿದ್ದ ಸಮಯಕ್ಕೆ ಪ್ರವಾದನಾತ್ಮಕವಾಗಿ ಸೂಚಿಸಿದ್ದೇ. (ಮತ್ತಾಯ 12:​38-40) ಯೇಸುವಿನ ಸಾಕ್ಷ್ಯವು ಯೋನನ ವೃತ್ತಾಂತವನ್ನು ಸತ್ಯವೆಂದು ದೃಢಪಡಿಸುತ್ತದೆ. (w09 1/1)

[ಪುಟ 31ರಲ್ಲಿರುವ ಚಿತ್ರ]

“ದೇವರಿಂದ ಬರುವ ಯಾವ ಮಾತಾದರೂ ನಿಷ್ಫಲವಾಗುವದಿಲ್ಲ.”​—⁠ಲೂಕ 1:37