ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಲವು ಪ್ರಾರ್ಥನೆಗಳನ್ನು ದೇವರು ಏಕೆ ಕೇಳುವುದಿಲ್ಲ?

ಕೆಲವು ಪ್ರಾರ್ಥನೆಗಳನ್ನು ದೇವರು ಏಕೆ ಕೇಳುವುದಿಲ್ಲ?

ನಮ್ಮ ಓದುಗರ ಪ್ರಶ್ನೆ

ಕೆಲವು ಪ್ರಾರ್ಥನೆಗಳನ್ನು ದೇವರು ಏಕೆ ಕೇಳುವುದಿಲ್ಲ?

ಪ್ರಾರ್ಥನೆಯ ಮೂಲಕ ದೇವರನ್ನು ನಾವು ಸುಲಭವಾಗಿ ಸಮೀಪಿಸಬಹುದಾಗಿದೆ. ತನ್ನ ಮಕ್ಕಳು ಮನಬಿಚ್ಚಿ ಮಾತಾಡಬೇಕೆಂದು ಪ್ರೀತಿಯ ತಂದೆಯೊಬ್ಬನು ಬಯಸುವಂತೆಯೇ ಯೆಹೋವ ದೇವರು ನಾವು ಆತನೊಂದಿಗೆ ಪ್ರಾರ್ಥನೆಯ ಮೂಲಕ ಮಾತಾಡಬೇಕೆಂದು ಬಯಸುತ್ತಾನೆ. ಅದೇ ಸಮಯದಲ್ಲಿ, ವಿವೇಚನೆಯುಳ್ಳ ತಂದೆಯಂತೆ ನಮ್ಮ ಕೋರಿಕೆಗಳನ್ನು ಅನುಗ್ರಹಿಸದಿರಲು ದೇವರಿಗೆ ಸಕಾರಣಗಳೂ ಇವೆ. ಆ ಕಾರಣಗಳು ರಹಸ್ಯವಾದವುಗಳೋ ಅಥವಾ ಬೈಬಲಿನಲ್ಲಿ ಅವುಗಳ ಕುರಿತು ಏನನ್ನಾದರೂ ಆತನು ತಿಳಿಸಿರುತ್ತಾನೋ?

ಅಪೊಸ್ತಲ ಯೋಹಾನನು ತಿಳಿಸಿದ್ದು: “ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ ಭರವಸೆಯು ಆತನ ವಿಷಯವಾಗಿ ನಮಗುಂಟು.” (1 ಯೋಹಾನ 5:14) ನಾವು ಬೇಡುವ ವಿಷಯಗಳು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿರಬೇಕು. ಕೆಲವರು ದೇವರ ಚಿತ್ತಕ್ಕೆ ಸ್ವಲ್ಪವೂ ಹೊಂದಿಕೆಯಲ್ಲಿಲ್ಲದ ವಿಷಯಗಳಿಗಾಗಿ ಪ್ರಾರ್ಥಿಸುತ್ತಾರೆ. ಉದಾಹರಣೆಗೆ, ಲಾಟರಿ ಅಥವಾ ಜೂಜಾಟದಲ್ಲಿ ಗೆಲ್ಲುವಂಥ ವಿಷಯಗಳಿಗಾಗಿ. ತಪ್ಪು ಹೇತುಗಳಿಂದ ಪ್ರಾರ್ಥನೆಗಳನ್ನು ಮಾಡುವವರೂ ಇದ್ದಾರೆ. ಈ ರೀತಿಯ ಪ್ರಾರ್ಥನೆಯ ದುರುಪಯೋಗವನ್ನು ಶಿಷ್ಯ ಯಾಕೋಬನು ಖಂಡಿಸಿದನು: “ನೀವು ಬೇಡಿಕೊಳ್ಳುತ್ತೀರಾದರೂ ಪಡೆದುಕೊಳ್ಳುವುದಿಲ್ಲ, ಏಕೆಂದರೆ ನೀವು ಬೇಡಿದ್ದನ್ನು ನಿಮ್ಮ ಇಂದ್ರಿಯ ಸುಖಭೋಗದ ಹಂಬಲಿಕೆಗಳಿಗಾಗಿ ಉಪಯೋಗಿಸಬೇಕೆಂಬ ತಪ್ಪಾದ ಉದ್ದೇಶದಿಂದ ಬೇಡಿಕೊಳ್ಳುತ್ತಿದ್ದೀರಿ.”—ಯಾಕೋಬ 4:3.

ಉದಾಹರಣೆಗೆ, ಫುಟ್‌ಬಾಲ್‌ ಆಟದ ಎರಡೂ ಪಕ್ಷದವರು ಗೆಲ್ಲಲು ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತಾರೆ ಎಂದು ನೆನಸಿ. ಆಗ ದೇವರು ಯಾರ ಪ್ರಾರ್ಥನೆಯನ್ನು ಕೇಳುವನು? ಅಂಥ ಪರಸ್ಪರ ವಿರುದ್ಧಾತ್ಮಕ ಪ್ರಾರ್ಥನೆಗಳನ್ನು ದೇವರು ಉತ್ತರಿಸುವನೆಂದು ನಿರೀಕ್ಷಿಸಸಾಧ್ಯವಿಲ್ಲ. ಅದೇ ರೀತಿ ಇಂದಿನ ಯುದ್ಧಗಳಲ್ಲಿ ಜಯಾಪಜಯಗಳಿಗಾಗಿ ಬೇಡುವ ಎರಡೂ ಪಕ್ಷದವರ ಪ್ರಾರ್ಥನೆಗಳನ್ನು ದೇವರು ಕೇಳುತ್ತಾನೆಂದು ನಿರೀಕ್ಷಿಸಸಾಧ್ಯವಿಲ್ಲ.

ದೇವರ ನೀತಿನಿಯಮಗಳನ್ನು ಕಡೆಗಣಿಸುವವರು ಮಾಡುವ ಪ್ರಾರ್ಥನೆಯೂ ವ್ಯರ್ಥವೇ. ಕಪಟ ಭಕ್ತರಿಗೆ ಒಮ್ಮೆ ಯೆಹೋವ ದೇವರು ಹೀಗೆ ಹೇಳಲೇಬೇಕಾಯಿತು: “ನೀವು [ನನ್ನ ಕಡೆಗೆ] ಕೈಯೆತ್ತುವಾಗ ನಿಮ್ಮನ್ನು ನೋಡದಂತೆ ನನ್ನ ಕಣ್ಣುಗಳನ್ನು ಮರೆಮಾಡಿಕೊಳ್ಳುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು, ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.” (ಯೆಶಾಯ 1:15) ಬೈಬಲ್‌ ಹೇಳುವುದು: “ಧರ್ಮೋಪದೇಶಕ್ಕೆ ಕಿವಿಗೊಡದವನು ಮಾಡುವ ದೇವಪ್ರಾರ್ಥನೆಯೂ ಅಸಹ್ಯ.”—ಜ್ಞಾನೋಕ್ತಿ 28:9.

ಇನ್ನೊಂದು ಕಡೆ, ತನ್ನ ಉದ್ದೇಶಕ್ಕೆ ಹೊಂದಿಕೆಯಲ್ಲಿ ತನ್ನನ್ನು ಆರಾಧಿಸಲು ಸಾಧ್ಯವಾದುದ್ದೆಲ್ಲವನ್ನು ಮಾಡುವ ತನ್ನ ಭಕ್ತರ ಯಥಾರ್ಥ ಪ್ರಾರ್ಥನೆಗಳಿಗೆ ಯೆಹೋವ ದೇವರು ಯಾವಾಗಲೂ ಕಿವಿಗೊಡುವನು. ಹಾಗೆಂದಮಾತ್ರಕ್ಕೆ ಆತನು ಅವರ ಎಲ್ಲ ಬಿನ್ನಹಗಳನ್ನು ನೆರವೇರಿಸುತ್ತಾನೆ ಎಂದರ್ಥವೋ? ಇಲ್ಲ! ಬೈಬಲಿನ ಕೆಲವು ಉದಾಹರಣೆಗಳನ್ನು ಪರಿಗಣಿಸಿ.

ದೇವರ ಸೇವಕನಾದ ಮೋಶೆ ದೇವರೊಂದಿಗೆ ವಿಶೇಷ ಆಪ್ತ ಸಂಬಂಧ ಹೊಂದಿದ್ದನು. ಆದರೂ ಅವನು “[ದೇವರ] ಚಿತ್ತಕ್ಕನುಸಾರ” ಪ್ರಾರ್ಥಿಸಬೇಕಿತ್ತು. ಒಂದು ಸಂದರ್ಭದಲ್ಲಿ, ಮೋಶೆ ಮಾಡಿದ ಪಾಪಕ್ಕಾಗಿ ಅವನು ಕಾನಾನ್‌ ದೇಶವನ್ನು ಪ್ರವೇಶಿಸಬಾರದು ಎಂದು ದೇವರು ಹೇಳಿದ್ದನು. ಇದಕ್ಕೆ ವ್ಯತಿರಿಕ್ತವಾಗಿ ಮೋಶೆ ಆ ದೇಶಕ್ಕೆ ಹೋಗಲು ಅನುಮತಿಸುವಂತೆ ಅಂಗಲಾಚಿ ಬೇಡುತ್ತಾ, “ಕರ್ತನೇ, ನಾನೂ [ಯೊರ್ದನ್‌] ಹೊಳೆಯನ್ನು ದಾಟಿ ಆಚೆಯಿರುವ ಒಳ್ಳೆಯ ದೇಶವನ್ನು . . . ನೋಡುವದಕ್ಕೆ ಅಪ್ಪಣೆಯಾಗಲಿ” ಎಂದು ವಿನಂತಿಸಿದನು. ಆಗ ಯೆಹೋವನು ಅವನ ಬಿನ್ನಹವನ್ನು ಈಡೇರಿಸಿದನೋ? ಇಲ್ಲ, ಅದಕ್ಕೆ ಬದಲಾಗಿ ಆತನಂದದ್ದು: “ಸಾಕು; ಇದರ ವಿಷಯದಲ್ಲಿ ಇನ್ನು ನನ್ನ ಸಂಗಡ ಮಾತಾಡಬೇಡ.”—ಧರ್ಮೋಪದೇಶಕಾಂಡ 3:25, 26; 32:51.

ಅಪೊಸ್ತಲ ಪೌಲನು ತನ್ನ ‘ಶರೀರದಲ್ಲಿ ಮುಳ್ಳಿನಂತೆ’ ಇದ್ದ ಒಂದು ಸಮಸ್ಯೆಯನ್ನು ಹೋಗಲಾಡಿಸುವಂತೆ ದೇವರಿಗೆ ಪ್ರಾರ್ಥಿಸಿದನು. (2 ಕೊರಿಂಥ 12:7) ಆ ಸಮಸ್ಯೆ ದೀರ್ಘಕಾಲದ ಕಣ್ಣಿನ ದೋಷ ಅಥವಾ ವಿರೋಧಿಗಳಿಂದಲೂ ‘ಸುಳ್ಳು ಸಹೋದರರಿಂದಲೂ’ ಬಂದ ಸತತ ಹಿಂಸೆಯಾಗಿದ್ದಿರಬಹುದು. (2 ಕೊರಿಂಥ 11:26; ಗಲಾತ್ಯ 4:14, 15) ಪೌಲನು ಬರೆದದ್ದು: “ಇದು ನನ್ನನ್ನು ಬಿಟ್ಟುಹೋಗಬೇಕೆಂದು ನಾನು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು.” ಆದರೆ, ಪೌಲನು ಈ ಸಮಸ್ಯೆಗಳ ಮಧ್ಯೆಯೂ ಸಾರುವುದನ್ನು ಮುಂದುವರಿಸುವಲ್ಲಿ ಅದು ದೇವರ ಶಕ್ತಿಗೆ ಮತ್ತು ಆತನಲ್ಲಿ ಪೌಲನಿಗಿದ್ದ ಸಂಪೂರ್ಣ ಭರವಸೆಗೆ ಸಾಕ್ಷ್ಯವಾಗಿರುವುದೆಂದು ದೇವರಿಗೆ ತಿಳಿದಿತ್ತು. ಆದುದರಿಂದ ಪೌಲನ ಬಿನ್ನಹವನ್ನು ಪೂರೈಸುವ ಬದಲು ದೇವರಂದದ್ದು: “ನನ್ನ ಬಲವು ಬಲಹೀನತೆಯಲ್ಲಿ ಪರಿಪೂರ್ಣಗೊಳಿಸಲ್ಪಡುತ್ತದೆ.”—2 ಕೊರಿಂಥ 12:8, 9.

ಹೌದು, ಕೆಲವು ನಿರ್ದಿಷ್ಟ ಬಿನ್ನಹಗಳಿಗೆ ಉತ್ತರಿಸುವುದು ನಿಜವಾಗಿಯೂ ನಮಗೆ ಒಳಿತನ್ನು ತರುತ್ತದೋ ಇಲ್ಲವೋ ಎಂಬುದನ್ನು ನಮಗಿಂತ ಚೆನ್ನಾಗಿ ದೇವರು ಬಲ್ಲನು. ಬೈಬಲಿನಲ್ಲಿ ದಾಖಲಾಗಿರುವ ತನ್ನ ಪ್ರೀತಿಭರಿತ ಉದ್ದೇಶಗಳಿಗೆ ಹೊಂದಿಕೆಯಲ್ಲಿ ಯೆಹೋವನು ಯಾವಾಗಲೂ ನಮ್ಮ ಒಳಿತಿಗಾಗಿಯೇ ಪ್ರತಿಕ್ರಿಯಿಸುವನು. (w09 1/1)