ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸಾಯುವ ಗಳಿಗೆ ಇನ್ನೂ ಬಂದಿರಲಿಲ್ಲ”

“ಸಾಯುವ ಗಳಿಗೆ ಇನ್ನೂ ಬಂದಿರಲಿಲ್ಲ”

“ಸಾಯುವ ಗಳಿಗೆ ಇನ್ನೂ ಬಂದಿರಲಿಲ್ಲ”

ಕಸ ಒಯ್ಯುವ ದೊಡ್ಡ ಟ್ರಕ್‌ನ ಚಾಲಕನಿಗೆ ಅವನ ಗಾಡಿಯ ನಿಯಂತ್ರಣ ತಪ್ಪಿಹೋಯಿತು. ಅದು ಸೀದಾ ಹೋಗಿ ರಸ್ತೆಯ ಬದಿಯಲ್ಲಿ ನಡೆಯುತ್ತಿದ್ದ ದಂಪತಿಗೆ ಹಾಗೂ 23 ವರ್ಷದ ಯುವಕನಿಗೆ ಅಪ್ಪಳಿಸಿತು. ನ್ಯೂ ಯಾರ್ಕ್‌ ಸಿಟಿ ವಾರ್ತಾಪತ್ರಿಕೆಯ ವರದಿಗನುಸಾರ ದಂಪತಿ ಆ ಸ್ಥಳದಲ್ಲೇ ಮೃತಪಟ್ಟರು ಮತ್ತು ಯುವಕ ಪ್ರಜ್ಞೆತಪ್ಪಿ ಬಿದ್ದ. ಪ್ರಜ್ಞೆ ಬಂದ ಮೇಲೆ ಸಂಭವಿಸಿದ ಸಂಗತಿ ತಿಳಿದು ಅವನು, ‘ನಾನು ಬದುಕಿ ಉಳಿದಿದ್ದೇನೆಂದರೆ ನನ್ನಿಂದ ನಂಬಲಿಕ್ಕೇ ಆಗ್ತಿಲ್ಲ. ಭಗವಂತಾ, ನನ್ನನ್ನು ವಾಸಿಮಾಡಪ್ಪಾ’ ಅಂದುಕೊಂಡ. ಬಳಿಕ ಅವನಂದದ್ದು: “ನನ್ನ ಸಾಯುವ ಗಳಿಗೆ ಇನ್ನೂ ಬಂದಿರಲಿಲ್ಲ.”

ಜನರು ತದ್ರೀತಿಯಲ್ಲಿ ಮಾತಾಡುವುದನ್ನು ನೀವು ಕೇಳಿರಬಹುದು. ಒಬ್ಬನು ನೂಲೆಳೆಯ ಅಂತರದಲ್ಲಿ ದುರಂತದಿಂದ ಪಾರಾದರೆ “ಅವನಿಗಿನ್ನೂ ಟೈಮಿತ್ತು ಬದುಕಿಕೊಂಡ” ಎನ್ನುತ್ತಾರೆ. ಆದರೆ ಆಕಸ್ಮಿಕವಾಗಿ ಸತ್ತರೆ “ಅವನ ಗಳಿಗೆ ಬಂದಿತ್ತು ಹೋಗಿಬಿಟ್ಟ” ಎಂದೋ “ದೇವರು ಅಷ್ಟೇ ಅವನಿಗೆ ಆಯಸ್ಸು ಕೊಟ್ಟಿರುವುದು” ಎಂದೋ ಹೇಳುತ್ತಾರೆ. ಜನರ ಸಾವಿಗೆ ವಿಧಿ, ಅದೃಷ್ಟ, ಹಣೆಬರಹ, ಅಥವಾ ದೇವರು ಎಂದು ಯಾವುದರ ಮೇಲೆ ತಪ್ಪುಹೊರಿಸಿದರೂ ಮೂಲಭೂತ ನಂಬಿಕೆ ಒಂದೇ. ‘ತಮ್ಮ ಜೀವನದ ಘಟನೆಗಳು ಹೀಗೀಗೇ ನಡೆಯಬೇಕೆಂದು ದೇವರು ಬರೆದುಬಿಟ್ಟಿದ್ದಾನೆ, ನಮ್ಮ ಕೈಯಲ್ಲೇನೂ ಇಲ್ಲ’ ಎಂಬುದು ಅನೇಕರ ನಂಬಿಕೆ. ಈ ರೀತಿಯ ಪ್ರತಿಕ್ರಿಯೆ ಕೇವಲ ಸಾವು-ನೋವು ಅಥವಾ ಅಪಘಾತಗಳಿಗೆ ಸೀಮಿತವಲ್ಲ ಇಲ್ಲವೆ ಅವು ಇತ್ತೀಚಿಗೆ ಹುಟ್ಟಿಕೊಂಡ ಹೊಸವಿಚಾರಗಳೂ ಅಲ್ಲ.

ಉದಾಹರಣೆಗೆ, ಪ್ರಾಚೀನ ಬ್ಯಾಬಿಲೋನ್ಯರಲ್ಲಿ ಮಾನವರ ಕಾರ್ಯಾಧಿಗಳ ಮೇಲೆ ನಕ್ಷತ್ರಗಳು ಮತ್ತು ಅವುಗಳ ಚಲನೆಗಳು ಪ್ರಭಾವಬೀರುತ್ತವೆಂಬ ನಂಬಿಕೆ ಹಾಸುಹೊಕ್ಕಾಗಿತ್ತು. ಆದ್ದರಿಂದ ಅವರು ಶುಭ-ಅಶುಭ ಶಕುನಗಳನ್ನು ತಿಳಿಯಲು ನಕ್ಷತ್ರಗಳನ್ನು ನೋಡುತ್ತಿದ್ದರು. ಗ್ರೀಕರು, ರೋಮನರು ಒಳ್ಳೆಯ ಮತ್ತು ಕೆಟ್ಟ ಭವಿಷ್ಯವನ್ನು ನಿರ್ಧರಿಸುವ ಅದೃಷ್ಟ ದೇವತೆಗಳನ್ನು ಆರಾಧಿಸುತ್ತಿದ್ದರು. ಪ್ರಧಾನ ದೇವತೆಗಳಾದ ಸೂಸ್‌ ಮತ್ತು ಜೂಪಿಟರ್‌ಗಳ ಇಚ್ಛೆಯನ್ನು ಸಹ ಕೆಲವೊಮ್ಮೆ ಆ ಅದೃಷ್ಟ ದೇವತೆಗಳು ಭಗ್ನಮಾಡಶಕ್ತವೆಂದು ಅವರೆಣಿಕೆಯಾಗಿತ್ತು.

ಪೌರಸ್ತ್ಯ ದೇಶಗಳಲ್ಲಿ ಹಿಂದುಗಳು ಮತ್ತು ಬೌದ್ಧರು ತಾವು ಹಿಂದಿನ ಜನ್ಮದ ಕರ್ಮಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತೇವೆ ಮತ್ತು ಈ ಜನ್ಮದಲ್ಲಿ ಮಾಡುವ ಪಾಪ-ಪುಣ್ಯಗಳು ಮುಂದಿನ ಜನ್ಮದ ಬಾಳ್ವೆಯನ್ನು ನಿರ್ಣಯಿಸುತ್ತವೆಂದು ನಂಬುತ್ತಾರೆ. ಅನೇಕ ಚರ್ಚುಗಳೂ ಸೇರಿದಂತೆ ಇನ್ನಿತರ ಧರ್ಮಗಳು ಸಹ ದೈವಸಂಕಲ್ಪ ಎಂಬ ಬೋಧನೆಯ ಮೂಲಕ ವಿಧಿಲಿಖಿತ ನಂಬಿಕೆಗಳನ್ನು ಅಂಗೀಕರಿಸುತ್ತಾರೆ.

ಆದುದರಿಂದ, ತಿಳಿವಳಿಕೆಯುಳ್ಳ ಹಾಗೂ ವಾಸ್ತವಿಕತೆಯನ್ನೇ ನಂಬುತ್ತೇವೆಂದು ಹೇಳುವ ಈ ನವಯುಗದಲ್ಲೂ ಅನೇಕರು ತಮ್ಮ ಜೀವನದ ಸ್ಥಿತಿಗತಿ, ದೈನಂದಿನ ಕೆಲಸಕಾರ್ಯಗಳ ಫಲಿತಾಂಶ ಮತ್ತು ತಮ್ಮ ಭವಿಷ್ಯ ಎಲ್ಲವೂ ವಿಧಿನಿರ್ಣಯ ಮತ್ತು ಅದನ್ನು ಬದಲಾಯಿಸಲು ತಮ್ಮಿಂದ ಸಾಧ್ಯವಿಲ್ಲವೆಂದು ನಂಬುವುದರಲ್ಲಿ ಆಶ್ಚರ್ಯವೇನಿಲ್ಲ. ಜೀವಿತದ ಕುರಿತ ನಿಮ್ಮ ಅಭಿಪ್ರಾಯವೂ ಇದೇ ಆಗಿದೆಯೋ? ಜೀವನದ ಒಳ್ಳೇದು-ಕೆಟ್ಟದು, ಸೋಲು-ಗೆಲುವು, ಹುಟ್ಟು-ಸಾವು ನಿಜವಾಗಿಯೂ ವಿಧಿಲಿಖಿತವೋ? ನಿಮ್ಮ ಬದುಕು ಹಣೆಬರಹದಿಂದ ನಿಯಂತ್ರಿಸಲ್ಪಟ್ಟಿದೆಯೋ? ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಬೈಬಲ್‌ ಹೇಗೆ ಸಹಾಯ ಮಾಡುತ್ತದೆಂದು ನಾವು ನೋಡೋಣ. (w09 3/1)

[ಪುಟ 3ರಲ್ಲಿರುವ ಚಿತ್ರ ಕೃಪೆ]

Ken Murray/New York Daily News